ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, June 3, 2012

ಗುರಿಯನ್ನೇ ತಪಸ್ಸನ್ನಾಗಿ ಸ್ವೀಕರಿಸಿ ಸಾಧಿಸಿದ ಕೆಲವರು


ಚಿತ್ರಋಣ: ಅಂತರ್ಜಾಲ
ಗುರಿಯನ್ನೇ ತಪಸ್ಸನ್ನಾಗಿ ಸ್ವೀಕರಿಸಿ ಸಾಧಿಸಿದ ಕೆಲವರು

ಮನುಜ ಜೀವನಕ್ಕೆ ಗುರಿ ಬೇಕು ಎಂಬುದು ಬಹಳ ಜನರಿಗೆ ಗೊತ್ತು; ಗೊತ್ತಿಲ್ಲದೇ ಗುರಿಯನ್ನು ಸಾಧಿಸಿದವರೂ ಇದ್ದಾರೆ ಎಂದಿಟ್ಟುಕೊಳ್ಳೋಣ, ಆದರೂ ಗುರಿ ಇರಬೇಕಾದುದು ಕ್ರಮ. ಸರಿಯಾದ ಗುರಿ ಸಮರ್ಪಕ ಗುರು ಇದ್ದರೆ ಜೀವನ ಸುಲಭವೆನಿಸುತ್ತದೆ. ನಿಶ್ಚಿತ ಗುರಿಯನ್ನು ತಲುಪಲು ಹಲವು ಮಾರ್ಗಗಳಿದ್ದಾವೆ ಎಂದಿಟ್ಟುಕೊಂಡರೆ, ಯಾವ ಮಾರ್ಗ ಅತ್ಯಂತ ಸಮಂಜಸ ಎಂಬುದನ್ನು ನಿರ್ಧರಿಸುವುದು ಗುರಿ ಸಾಧನೆಯಲ್ಲಿ ತೊಡಗಿಸಿಕೊಳ್ಳುವವನ ಜಾಣ್ಮೆಯನ್ನವಲಂಬಿಸಿರುತ್ತದೆ; ಇದು ಯಾರೋ ಹೇಳಿಕೊಟ್ಟು ಬರುವ ಜ್ಞಾನವಲ್ಲ. ’ಬರ್ನಿಂಗ್ ಡಿಸಾಯರ್’ ಎಂಬ ಮನದೊಳಗಿನ ’ಬರ್ನಿಂಗ್ ಛೇಂಬರ್’ನಲ್ಲಿ ಸದಾ ಉರಿಯುವ ಗುರಿಯೆಂಬ ಅಗ್ನಿ ತನ್ನ ಕಸುವನ್ನು ಕಳೆದುಕೊಳ್ಳದೇ ಇದ್ದರೆ ಸಾಧನೆ ಸಾಧ್ಯವಾಗುತ್ತದೆ. ಗುರಿ ಸಾಧನೆಯ ಮಾರ್ಗದರ್ಶಕ  ವೆನಿಸಿದ,  ’ಥಿಂಕ್ ಅಂಡ್ ಗ್ರೋ ರಿಚ್’ ಶಿರೋನಾಮೆಯಲ್ಲಿ ನೆಪೋಲಿಯನ್ ಹಿಲ್ ಬರೆದ ಪುಸ್ತಕದಲ್ಲಿ ಒಂದೆಡೆ ಮಗುವೊಂದು ಚಿಕ್ಕ ಬಿಲ್ಲಿ ಕಾಸನ್ನು ಪಡೆಯಲೇಬೇಕೆಂಬ ಅನಿವಾರ್ಯತೆಯಿಂದ ಹೇಗೆ ನಡೆದುಕೊಂಡಿತು ಎಂಬುದರ ಬಗ್ಗೆ ತಿಳಿಸಿದ್ದಾನೆ. ’ಹೌ ಟು ವಿನ್ ಫ್ರೆಂಡ್ಸ್’ ಮೊದಲಾದ ಪುಸ್ತಕಗಳನ್ನು ಅನೇಕರು ಓದಿರುತ್ತೀರಿ. ಇಂತಹ ಪುಸ್ತಕಗಳನ್ನು ಓದುವವರು ಓದುತ್ತಲೇ ಇದ್ದಾರೆಯೇ ಹೊರತು ಅದನ್ನು ಪ್ರಯೋಗವಾಗಿ ಅಳವಡಿಸಿಕೊಳ್ಳಲಿಲ್ಲ. ರಿಚರ್ಡ್ ಬ್ರಾನ್ಸನ್  ಬಗ್ಗೆ ಓದಿ ಅದನ್ನೇ ಬಹಳಕಾಲ ಪತ್ರಿಕೆಗಳಲ್ಲಿ ಬರೆದ ಪತ್ರಕರ್ತರೂ ಇದ್ದಾರೆ. ಆದರೆ ಓದಿದ ಘಟನೆಗಳಲ್ಲಿನ ತತ್ವಗಳನ್ನು ಅಳವಡಿಸಿಕೊಂಡವರ ಪೈಕಿ ಕೆಲವರನ್ನು ನೆನಪಿಸಿಕೊಳ್ಳುವ ಒಂದು ಪ್ರಯತ್ನ ಮಾಡುತ್ತಿದ್ದೇನೆ.

ಸುಹಾಸ್ ಗೋಪಿನಾಥ್ ಎಂಬ ಹುಡುಗ ಸೈಬರ್ ಕೆಫೆಯಲ್ಲೇ ತನ್ನ ಕಂಪನಿಯನ್ನು ಹುಟ್ಟುಹಾಕಿದ ಕಥೆಯ ಬಗ್ಗೆ ತಾವು ಟಿವಿಗಳಲ್ಲಿ ಸುದ್ದಿ ಕೇಳಿದ್ದೀರಿ. ಕ್ಯಾಪ್ಟನ್ ಗೋಪಿನಾಥ್ ಅವರ ಸಾಧನೆಯನ್ನೂ ಅದಾಗಲೇ ಕಂಡಿದ್ದೀರಿ. ಇವರುಗಳ ಬಗ್ಗೆ ಜಾಸ್ತಿ ಹೇಳುವುದು ಬೇಡವೇನೋ ಅನ್ನಿಸುತ್ತದೆ. ಓದುವುದಕ್ಕೂ ಅವಕಾಶವಿಲ್ಲದ ಹಿನ್ನೆಲೆಯಲ್ಲಿ ಬಂದ ಈ ಇಬ್ಬರೂ ತಮ್ಮ ಅವಿರತ ಪ್ರಯತ್ನದ ಫಲವಾಗಿ ತಮ್ಮ ಕನಸುಗಳನ್ನು ನನಸಾಗಿಸಿಕೊಂಡಿದ್ದಾರೆ. ಉತ್ತಮ ಪ್ರಯತ್ನಕ್ಕೆ ಉತ್ತಮ ಫಲ ದೊರೆಯುವುದು ಪ್ರಕೃತಿ ಧರ್ಮ! ಪ್ರತಿಯೊಬ್ಬ ಸಾಧಕನ ಹಿಂದೆಯೂ ಆ ರಂಗದಲ್ಲಿ ಅವನ ಅಗ್ರ ತಪಸ್ಸು ಅಡಗಿದೆ ಎಂಬುದನ್ನು ಮರೆಯುವ ಹಾಗಿಲ್ಲ;ಕೈ ಕೆಸರಾಗದ ಹೊರತು ಬಾಯಿಗೆ ಮೊಸರು ಸಿಗುವುದಿಲ್ಲ. ಕೈಯ್ಯನ್ನು ಕೆಸರುಮಾಡಿಕೊಳ್ಳುವುದು ಮೇಟಿವಿದ್ಯೆಯ ಯೋಗಿಯ ಕೆಲಸವಾದರೆ ಮನಸಾ ತನ್ನ ಅಂಗಾಂಗಗಳನ್ನು ದುಡಿಮೆಯಲ್ಲಿ ಹರಿಬಿಟ್ಟು, ಅವಿಶ್ರಾಂತವಾಗಿ ಪ್ರಯತ್ನಿಸುವುದೂ ಕೂಡ ಪರೋಕ್ಷ ಕೈಕೆಸರು ಮಾಡಿಕೊಂಡಂತೆಯೇ ಸರಿ. ಲೋಕದಲ್ಲಿ ಎಲ್ಲರೂ ರೈತರಾಗಲು ಸಾಧ್ಯವಿಲ್ಲ, ವ್ಯವಹಾರಕ್ಕೊಂದಷ್ಟು, ಆಡಳಿತಕ್ಕೊಂದಷ್ಟು, ಕಲೆ-ಸಾಹಿತ್ಯ-ಸಂಗೀತಕ್ಕೊಂದಷ್ಟು ಹೀಗೆಲ್ಲಾ ಬೇರೇ ಬೇರೇ ರಂಗಗಳಲ್ಲಿ ಜನ ತೊಡಗಿಕೊಂಡಾಗಲೇ ಈ ಜಗನ್ನಾಟಕ ನಡೆಯುತ್ತದೆ.


ಜೇಂಟ್ ವ್ಹೀಲ್ ಸುತ್ತುತ್ತಿರುವಾಗ, ಅದರಲ್ಲಿರುವ ಕೆಲವರು ಕೂಗಿಕೊಳ್ಳುವಾಗ ಕೆಳಗಡೆ ನಿಂತು ನೋಡುವ ನಾವು "ಅಯ್ಯೋ ಅದ್ಯಾಕೆ ಆ ಥರಾ ಹುಯ್ಕೋತೀರಪ್ಪಾ ? ಏನೂ ಆಗಲ್ಲ" ಎಂದು ಅನುಭವದಿಂದ ಹೇಳುವಂತೇ ಹೇಳುವುದಾಗಲೀ, ನೋಡಿ ನಗುವುದಾಗಲೀ ಸುಲಭ; ಅದೇ ಜೇಂಟ್ ವ್ಹೀಲ್ನಲ್ಲಿ ನಾವೇ ಕೂತಾಗ ಆಗುವ ಸ್ವಾನುಭವ ಬೇರೆಯೇ ಆಗಿರುತ್ತದೆ. ತೊಟ್ಟಿಲ ಜೋಡಿಕೆಗಳು ಅಕಸ್ಮಾತ್ ತುಂಡಾಗಿ ಕೆಳಗೆ ಬಿದ್ದುಬಿಟ್ಟರೆ? ನಾವು ಏಟುತಿಂದು ಕೆಲಸಮಾಡದಂತಾದರೆ ನಮ್ಮನ್ನೇ ನಂಬಿರುವ ನಮ್ಮ ಸಂಸಾರಕ್ಕೆ? ತೊಟ್ಟಿಲಿನಿಂದ ಬಿದ್ದು ಸತ್ತುಹೋದರೆ? ಕೈಯ್ಯೋ ಕಾಲೋ ಮುರಿದು ಮತ್ತೆ ಪುನಃ ಸರಿಪಡಿಸಲಾಗದ ಸ್ಥಿತಿಗೆ ತಲ್ಪಿದರೆ? ---ಎಂಬೀ ಹಲವು ರೀತಿಯ ಪ್ರಶ್ನೆಗಳು ನಮ್ಮಲ್ಲಿ ಉದ್ಭವವಾಗುತ್ತವೆ. ನಮ್ಮ ಪಕ್ಕದಲ್ಲೇ ನಿರಾಳವಾಗಿ ಜಗತ್ತನ್ನೇ ಮರೆತು ಕೂತಂತೇ ಕೂತ, ಮಜಾ ಅನಿಭವಿಸಿದ ಜನರೂ ಇರುತ್ತಾರೆ. ತೂಗುವ ಅದೇ ತೊಟ್ಟಿಲಲ್ಲಿ ಕೂತು ಮತ್ತಿನ್ಯಾವುದೋ ಮ್ಯಾನೇಜ್ಮೆಂಟ್ ಪ್ಲಾನ್ ಮಾಡಿಕೊಳ್ಳುವ ಜನರೂ ಇದ್ದಾರೆ! ಮನುಷ್ಯನ ಮೆದುಳಿಗೆ ಅಂತಹ ಅಪರಿಮಿತ ತಾಕತ್ತಿದೆ; ಅದು ಒಬ್ಬೊಬ್ಬರಲ್ಲಿ ಒಂದೊಂದು ತೆರನಾಗಿದೆ. ಮೆದುಳಿಗಿರುವ ಅಂತಹ ಅದ್ಭುತ ಶಕ್ತಿ ಜಗನ್ನಿಯಾಮಕನ ಕೊಡುಗೆಯಾಗಿದೆ. ಇರುವ ಶಕ್ತಿಯನ್ನು ಉದ್ದೀಪಿಸಬಹುದೇ ಹೊರತು ಹೊಸದಾಗಿ ಮೆದುಳಿಗೆ ಅದನ್ನು ತುಂಬಲು ಸಾಧ್ಯವಿಲ್ಲ.


ನಮ್ಮ ನೆರೆಕೆರೆಯ ಸದಾನಂದ ಮಯ್ಯ ಆಹಾರೋದ್ಯಮದಲ್ಲಿ ತೊಡಗಿಕೊಂಡವರು. ಎಂಜಿನೀಯರಿಂಗ್ ಮಾಡಿದ ನಂತರ ತನ್ನ ಅಪ್ಪ ಸ್ಥಾಪಿಸಿದ್ದ ’ಮಾವಳ್ಳಿ ಟಿಫಿನ್ ರೂಮ್’ ಗೆ ಹೊಸ ರೂಪ ಕೊಡಲು ಮುಂದಾದರು. ನಾನು ಅವರನ್ನೊಮ್ಮೆ ಪ್ರತ್ಯಕ್ಷವಾಗಿ ಭೇಟಿಯಾಗಿದ್ದೆ. ಬರೇ ಹೋಟೆಲ್ ಒಂದೇ ರೂಪ ಸಾಲದು, ತಾವು ತಯಾರಿಸುವ ಆಹಾರ ಪರಿಕರಗಳು ದೇಶವ್ಯಾಪಿ ಅಷ್ಟೇ ಏಕೆ ವಿದೇಶಗಳಲ್ಲೂ ಸಿಗುವಂತಾಗಬೇಕು ಎಂಬುದು ಅವರ ಕನಸಾಗಿತ್ತು. ಹಾಗಾದರೆ ಆಹಾರವನ್ನು ಸಿದ್ಧಪಡಿಸುವುದು ಹೇಗೆ? ಸಿದ್ಧ ಆಹಾರ ಕೆಡದಂತೇ ರಕ್ಷಿಸಿ ಮಾರುಕಟ್ಟೆ ಪಡೆಯುವುದು ಹೇಗೆ? ಗಿರಾಕಿಗಳನ್ನು ತಮ್ಮ ತಯಾರಿಕೆಯ ಹೆಸರಿನಲ್ಲಿ ಕೊಳ್ಳಲು ಒಪ್ಪಿಸಿವುದು ಹೇಗೆ? ಇಂತಹ ಹಲವು ಸಮಸ್ಯೆಗಳು ಮೊದಲಾಗಿ ಅವರನ್ನು ಬಾಧಿಸಿದ್ದವು. ಎಂ.ಟಿ.ಆರ್ ಗೆ ತೆರಳಿ ೭೫ರೂ ಕೊಟ್ಟು, ಶುಚಿರುಚಿಯಾದ ಪುಷ್ಕಳ ಭೋಜನವನ್ನು ಸವಿದವರಲ್ಲಿ ನಾನೂ ಒಬ್ಬ. ಅದೇ ಎಂ.ಟಿ.ಆರ್ ತನ್ನದಾದ ಬ್ರಾಂಡ್ ನಲ್ಲಿ ಹೊಸ ಹೊಸ ಸಿದ್ಧ ಆಹಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತು. ಆರಂಭಿಕ ಹಂತದಲ್ಲಿ ಕೆಲವು ಸರಕುಗಳು ಮಾರಾಟವಾಗದೇ ಉಳಿದಿದ್ದೂ ದಾಖಲೆ ಇದೆ! ಆದರೆ ಮಯ್ಯ ತಮ್ಮ ಪ್ರಯತ್ನವನ್ನು ನಿಲ್ಲಿಸಲಿಲ್ಲ; ಎಂ.ಟಿ.ಆರ್ ಫುಡ್ಸ್-ಲಿಮಿಟೆಡ್ ಕಂಪನಿಯಾಗಿ ಬೆಳೆಯಿತು. ಮಯ್ಯ ಅವರ ಕನಸು ನನಸಾಯ್ತು. ಶುದ್ಧ ಸಿದ್ಧ ಆಹಾರವಸ್ತುಗಳು ಬೇಕೆಂದರೆ ಇಂದಿಗೂ ಜನ ಎಂ.ಟಿ.ಆರ್ ಬ್ರಾಂಡ್ ಹುಡುಕುತ್ತಾರೆ. ಯಾವುದೋ ಹಂತದಲ್ಲಿ ಮಯ್ಯ ಸಂಸ್ಥೆಯನ್ನು ವಿದೇಶೀ ಮೂಲದ ಕಂಪನಿಗೆ ಮಾರಿದರು. ನಂತರ ಈಗ ’ಮಯ್ಯಾಸ್’ ಎಂಬ ಹೆಸರಿನಲ್ಲಿ ಮತ್ತೆ ಅಂಥದ್ದೇ ಇನ್ನೊಂದು ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದಾರೆ. ಇದು ಮತ್ತೊಂದು ಸಾಧನೆ. ಮಾಮೂಲೀ ಹೋಟೆಲಿಗರಂತೇ ಚಿಂತಿಸದೇ ತಾರ್ಕಿಕವಾಗಿ ಹಲವು ವಿಚಾರಗಳನ್ನು ಮಥಿಸಿದ ಮಯ್ಯರಿಗೆ ಕಂಡ ಗುರಿಗಳೆಷ್ಟು? ಗುರಿಗಳ ಈಡೇರಿಕೆಯ ಹಿಂದಿರುವ ಅವರ ಶ್ರಮವೆಷ್ಟು? ಸಾಧನೆಯ ನಂತರ ಅವರಿಗೆ ಸಿಕ್ಕ ಮಾನಸಿಕ ಸಂತೋಷವೆಷ್ಟು? -ಇವನ್ನು ನಾವು ತಿಳಿದುಕೊಳ್ಳಬೇಕಾಗುತ್ತದೆ.


ಆದಿತ್ಯ ಘೋಷ್ ಒಬ್ಬ ಸಾಮಾನ್ಯ ನ್ಯಾಯವಾದಿಯಾಗಿ ವೃತ್ತಿ ಜೀವನ ಆರಂಭಿಸಿದ್ದು ತನ್ನ ೨೨ನೇ ವಯಸ್ಸಿನಲ್ಲಿ. ತಮ್ಮದೇ ಕಚೇರಿಯೊಂದನ್ನು ತೆರೆದು ಕೆಲಸನಿರ್ವಹಿಸುತ್ತಿದ್ದ ಅವರು ನಂತರ ಜ್ಯೋತಿ ಸಾಗರ್ ಎಂಬ ಹಿರಿಯ ನ್ಯಾಯವಾದಿಗಳ ಸಹಾಯಕ ನ್ಯಾಯವಾದಿಗಳಾಗಿ ’ಜ್ಯೋತಿ ಸಾಗರ್ ಅಸ್ಸೋಸಿಯೇಟ್ಸ್’ ನಲ್ಲಿ ಕೆಲಸ ನಿರ್ವಹಿಸಿದರು. ಎಳವೆಯಲ್ಲಿ ತಮ್ಮ ಮಗ ಯಾವುದಕ್ಕೂ ಅರ್ಹನಲ್ಲ ಎಂಬ ಭಾವನೆ ಅವರ ಅಮ್ಮನಲ್ಲಿತ್ತಂತೆ! ಆದರೆ ತಾನು ಏನಾಗಬೇಕು ಎಂಬುದನ್ನು ಅವರ ಮನಸ್ಸು ನಿರ್ಧರಿಸಿತ್ತು. ’ಜ್ಯೋತಿ ಸಾಗರ್ ಆಸ್ಸೋಸಿಯೇಟ್ಸ್’ ಗೆ ಭಾಟಿಯಾ ಎಂಬೊಬ್ಬರು ಕಕ್ಷಿದಾರರಿದ್ದರು. ಉತ್ತಮ ವಾಣಿಜ್ಯವ್ಯವಹಾರಗಳನ್ನು ನಡೆಸುತ್ತಿದ್ದ ಭಾಟಿಯಾ ಅವರ ಸಂಸ್ಥೆಯ ಕಾನೂನು ಸಲಹೆಗಾರರಾಗಿ ಜ್ಯೋತಿ ಅವರು ಕೆಲಸಮಾಡುತ್ತಿದ್ದರು. ಭಾಟಿಯಾ ಅವರು ಇನ್ನೊಬ್ಬರೊಡನೆ ಭಾಗೀದಾರರಾಗಿ ’ಇಂಡಿಗೋ ಏರ್ಲೈನ್ಸ್’ ಸಂಸ್ಥೆಯನ್ನು ಸ್ಥಾಪಿಸಿದರು. ಸಂಸ್ಥೆಗೆ ನಾಲ್ಕುವರ್ಷ ತುಂಬಿದರೂ ಅಷ್ಟಾಗಿ ಬೆಳವಣಿಗೆ ಕಂಡಿರಲಿಲ್ಲ. ಅನಿರೀಕ್ಷಿತವಾಗಿ ಭಾಟಿಯಾ, ಆದಿತ್ಯ ಘೋಷ್ ಅವರನ್ನು ತಮ್ಮ ಸಂಸ್ಥೆಯಲ್ಲಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುವಂತೇ ಕೋರಿದರು. ಆದಿತ್ಯ ಅವರೂ ಒಪ್ಪಿದರು.


ಆದಿತ್ಯ ಘೋಷ್ ’ಅಧಕ್ಷ’ರೆನಿಸಿ ಇಂಡಿಗೋ ಸೇರಿದಾಗ ಅವರಿಗೆ ೩೨ ವಯಸ್ಸಾಗಿತ್ತಷ್ಟೇ! ಇಂಡಿಗೋದ ಆಡಳಿತ ಮಂಡಳಿಯಲ್ಲಿರುವ ಎಲ್ಲರೂ ಆದಿತ್ಯರಿಗಿಂತ ಹಿರಿಯರಾಗಿದ್ದರು. ಮೇಲಾಗಿ ಆದಿತ್ಯ ಓದಿಕೊಂಡ ವಿಷಯಕ್ಕೂ ಅವರು ಆಯ್ದುಕೊಂಡ ರಂಗಕ್ಕೂ ಸಂಬಂಧವೇ ಇರಲಿಲ್ಲ. ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಆದಿತ್ಯ ಚಿಂತಿಸಿದ ರೀತಿ ಬೇರೆಯಾಗಿತ್ತು: ಏರ್ಲೈನ್ಸ್ ವ್ಯವಹಾರಕ್ಕೆ ಬೇರೇ ಯಾವ್ಯಾವ ಉದ್ಯಮಗಳ ಸಹಕಾರ ಅಗತ್ಯ? ಎಲ್ಲೆಲ್ಲಿ ಯಾವ ಯಾವ್ ರೀತಿಯ ಸಮಸ್ಯೆಗಳು ಎದುರಾಗುತ್ತವೆ? ಅನವಶ್ಯಕ ಖರ್ಚುವೆಚ್ಚಗಳೆಷ್ಟು? ಖರ್ಚುವೆಚ್ಚಗಳನ್ನು ತಹಬಂದಿಯಲ್ಲಿಟ್ಟು ಪ್ರಯಾಣಿಕರಿಗೆ ಆದಷ್ಟೂ ಕಮ್ಮಿ ದರದಲ್ಲಿ ಪ್ರಯಾಣಕ್ಕೆ ಅನುಕೂಲ ಕಲ್ಪಿಸಬಹುದೇ?--ಇಂತಹ ಹಲವಾರು ಪ್ರಶ್ನೆಗಳಿಗೆ ಅವರು ಉತ್ತರ ಹುಡುಕಿದರು. ವಿಮಾನ ತಯಾರಕರೊಡನೆ, ಬಿಡಿಭಾಗಗಳ ತಯಾರಕರೊಡನೆ ಕಂತ್ರಾಟು ನಡೆಸಿದರು. ಸಿಬ್ಬಂದಿಯನ್ನು ಕರೆದು ಗಿರಾಕಿಗಳನ್ನು ಸಂತುಷ್ಟಗೊಳಿಸುವ ಬಗೆಯನ್ನು ಚರ್ಚಿಸಿದರು. ಪ್ರಥಮವಾಗಿ ಡೆಲ್ಲಿಯಿಂದ ಗೌಹಾಟಿಗೆ ಪ್ರಯಾಣಿಸಿದ ವಿಮಾನಕ್ಕೆ ಬಳಸಲಾಗುವ ಏಣಿ ಮತ್ತು ಟ್ರಾಕ್ಟರ್ ಬಂದು ತಲ್ಪುವುದು ತಡವಾಗಿ, ಅವುಗಳಿಗೆ ಇಂಡಿಗೋ ಕಂಪನಿಯು ಬಳಸುವ ಬಣ್ಣವನ್ನು ಹಚ್ಚಲಾಗಿರಲಿಲ್ಲ; ರಾತ್ರೋರಾತ್ರಿ ಆದಿತ್ಯ ಅವರ ಟೀಮ್ ಅವುಗಳಿಗೆ ಇಂಡಿಗೋ ಸಂಸ್ಥೆಯ ಬಣ್ಣವನ್ನು ಬಳಿಯಿತು!


ಡೆಲ್ಲಿಯಲ್ಲಿ ಇತ್ತೀಚೆಗೆ ನಡೆಸಿದ ಏರ್ಲೈನ್ಸ್ಗಳು ಮತ್ತು ಸರಕಾರದ ನಡುವಿನ ಮೀಟಿಂಗ್ ಒಂದಕ್ಕೆ ಆದಿತ್ಯ ಪ್ರಯಾಣಿಸಿದ್ದು ವ್ಯಾಗನ್ ಆರ್ ಕಾರಿನಲ್ಲಿ-ಸ್ವತಃ ಚಾಲನೆಮಾಡಿಕೊಂಡು. ಮಿಕ್ಕಿದ ಏರ್ಲೈನ್ಸ್ ಸಂಸ್ಥೆಗಳವರು ವಿದೇಶೀ ಕಾರುಗಳಲ್ಲೋ ಜೆಟ್ ಗಳಲ್ಲೋ ಬಂದಿಳಿದರು. ಪ್ರಯಾಣಿಕ ಪ್ರಯಾಣಿಸುವಾಗ ಅಧ್ಯಕ್ಷ ಯಾರೆಂದು ನೋಡುವುದಿಲ್ಲ ಬದಲಾಗಿ ತನ್ನ ಅನುಕೂಲತೆಗಳನ್ನು ನೋಡುತ್ತಾನೆ ಎಂಬುದು ಆದಿತ್ಯರ ಹೇಳಿಕೆ. ಇಂಡಿಗೋ ಸಂಸ್ಥೆಗೆ ಪೈಪೋಟಿ ನೀಡುತ್ತಿರುವ ಬೇರೇ ಸಂಸ್ಥೆಗಳು ಜಾಸ್ತಿ ಸಂಭಾವನೆ ನೀಡುವುದಾದರೆ ಹೋಗಲು ಸಿದ್ಧರಿದ್ದೀರಾ ? --ಎಂಬ ಪ್ರಶ್ನೆಯನ್ನು ಕೇಳಿದಾಗ, ಆದಿತ್ಯ ಹೇಳಿದ್ದು " ನನ್ನಿಂದ ಇಂಡಿಗೋ ಬೆಳೆದಿದೆ ಎಂದು ನಾನು ತಿಳಿದಿಲ್ಲ, ಇಂಡಿಗೋ ಬೆಳೆದಿರುವುದರ ಹಿಂದೆ ನಮ್ಮ ಟೀಮ್ನ ಪರಿಶ್ರಮ ಅಡಗಿದೆ. ಇಂಡಿಗೋ ನನಗೂ ಬೆಳೆಯುವ ಉತ್ತಮ ಅವಕಾಶ ಒದಗಿಸಿದೆ. ಹೀಗಾಗಿ ನನ್ನಿಂದಲೇ ಇಂಡಿಗೋ ಬೆಳೆದಿದೆ ಎಂದು ತಿಳಿದುಕೊಂಡು ನಾನು ಬೇರೇ ಸಂಸ್ಥೆಗೆ ಜಿಗಿದರೆ ಅಂತಹ ಮೂರ್ಖತನ ಬೇರೊಂದಿಲ್ಲ."೩೬ ವರ್ಷ ವಯಸ್ಸಿನ ಆದಿತ್ಯ ಅಧ್ಯಕ್ಷರಾಗಿರುವ ’ಇಂಡಿಗೋ ಏರ್ಲೈನ್ಸ್’ ಸಂಸ್ಥೆ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಪಡೆಯಲು ಮುಂದಾಗಿದೆ, ದೇಶದಲ್ಲಿ ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ಸೇವೆ ಒದಗಿಸುವಲ್ಲಿ ನಂಬರ್ ಒನ್ ಎನಿಸಿದೆ.


ಗ್ರಾಂಡ್ ಮಾಸ್ಟರ್ ಎಂದ ತಕ್ಷಣವೇ ನೆನಪಾಗುವುದು ವಿಶ್ವನಾಥನ್ ಆನಂದ್. ಚೆಸ್ ಲೋಕದ ಮಾಂತ್ರಿಕ ಅವರು. ಭಾರತಕ್ಕೆ ೫ನೇ ಬಾರಿ ವಿಶ್ವಮಟ್ಟದ ಚಾಂಪಿಯನ್ ಆಗಿ ಕೀರ್ತಿ ತಂದುಕೊಟ್ಟಿದ್ದಾರೆ. ಗಣಕಯಂತ್ರಗಳಲ್ಲೂ ಚೆಸ್ ಆಟವಿರುತ್ತದೆ. ಅಲ್ಲೆಲ್ಲಾ ಸಾಮಾನ್ಯವಾಗಿ ಬಳಸುವುದು ಸರ್ಚ್ ಅಲ್ಗೊರಿದಮ್ ಪದ್ಧತಿಯನ್ನು. ಸಾಮಾನ್ಯವಾಗಿ ಆಟಗಾರರು ಆಡುವಾಗಲೂ ಇಂತಹ ಅಲ್ಗೊರಿದಮ್ ಅವರ ಮನದಲ್ಲಿ ಉದ್ಭವವಾಗಿರುತ್ತದೆ! ಚಿಂತನೆಯ ಮಟ್ಟದಲ್ಲಿ ಸಾಂಪ್ರದಾಯಿಕವಾಗಿ ಮೂಡುವ ಇಂತಹ ಅಲ್ಗೊರಿದಮ್ ಮೀರಿ ಬೆಳೆದವರು ವಿಶ್ವನಾಥನ್ ಆನಂದ್. ಕಾಯಿಗಳನ್ನು ಚಲಿಸುವಾಗ ಯಾವ ರೀತಿಯಲ್ಲಿ ಚಲಿಸಿದರೆ ತಾನು ಮುಂದೆಸಾಗಬಹುದು ಎಂಬುದರ ಜೊತೆಗೆ ಎದುರಾಳಿಗಳ ಮುಂದಿನ ನಡೆ ಹೇಗಿರಬಹುದೆಂಬುದನ್ನೂ ಅವಲೋಕಿಸಿ ನಡೆಯುವ ಜಾಣ್ಮೆಯದು. ಕಾಯಿ ಉರುಳಿಸುವುದು ಅಥವಾ ಮುಂದೆ ಹೆಜ್ಜೆ ಇಡುವುದು ಎಲ್ಲರಿಗೂ ಗೊತ್ತಿರುವ ಪ್ರಯತ್ನ; ಅದನ್ನೇ ಭಿನ್ನವಾಗಿ ಚಿಂತಿಸಿ ಎದುರಾಳಿ ಮತ್ತೆ ಮುಂದೆಸಾಗದಂತೇ ಮಂತ್ರಹಾಕುವುದು ಯಾವುದೇ ಪುಸ್ತಕದಲ್ಲಿ ಹೇಳಿಕೊಟ್ಟ ನಿಯಮವಲ್ಲ! ಅದು ಅವರ ಮಾನಸಿಕ ಸಿದ್ಧತೆ!


ನಮ್ಮಲ್ಲಿ ’ದ್ರಾವಿಡ ಪ್ರಾಣಾಯಾಮ’ ಎಂಬ ಒಂದು ಗಾಂವ್ಟಿ ಶಬ್ದ ಬಳಕೆಯಲ್ಲಿದೆ! ನೇರವಾಗಿ ಸಿಗುವ ಮೂಗನ್ನು ಬಲಗೈಯಲ್ಲಿ ಹಿಡಿದುಕೊಳ್ಳುವ ಬದಲು, ಅದೇ ಬಲಗೈಯ್ಯಿಂದ ತಲೆಯನ್ನು ಸುತ್ತಿಬಂದು ಮೂಗು ತಲ್ಪುವುದು ದ್ರಾವಿಡ ಪ್ರಾಣಾಯಾಮದ ಕ್ರಮವಾಗಿತ್ತಂತೆ. ದಯವಿಟ್ಟು ದ್ರಾವಿಡರು ಕ್ಷಮಿಸಿ! ಇದು ಚಿಂತನೆಗೆ ಸಕಾಲ. ಧುಮ್ಮಿಕ್ಕಿ ಹರಿಯುವ ಶರಾವತಿಯ ದಬದಬೆಯನ್ನು ಕಂಡು ಸಾವಿರಾರು ಜನ ಸಂತಸ ವ್ಯಕ್ತಪಡಿಸುತ್ತಿದ್ದರೆ ಅದನ್ನು ನೋಡಿದ ಘಳಿಗೆಯಲ್ಲೇ "ವ್ಹಾಟ್ ಎ ವೇಸ್ಟ್?" ಎಂದು ಉದ್ಗರಿಸಿದವರು ಸರ್ ಎಂ. ವಿಶ್ವೇಶ್ವರಯ್ಯ! ಅವರು ಕಂಡ ಕನಸೇ ಇವತ್ತು ಕಾರ್ಯನಿರ್ವಹಿಸುತ್ತಿರುವ, ರಾಜ್ಯದ ಹೆಗ್ಗಳಿಕೆಯ, ಮಹಾತ್ಮಾಗಾಂಧಿ ಜಲವಿದ್ಯುದಾಗಾರ. ಕೃಷ್ಣರಾಜ ಸಾಗರ ನಿರ್ಮಾಣದ ವೇಳೆ, ಗುರಿ ಸಾಧನೆಗೆ ಅವರು ಬಳಸಿದ ವಿಶಿಷ್ಟ ಮಾರ್ಗಗಳನ್ನು ಹಿಂದೊಮ್ಮೆ ಬರೆದಿದ್ದೆ. ಸಾಧಕರಿಗೆ ಬಾಧಕಗಳು ಹಲವು; ಮತ್ತು ಅದು ಸಹಜವೇ. ಅದನ್ನರಿತುಕೊಂಡೇ, ಗುರಿ ಸಾಧನೆಗೆ ಇರಬಹುದಾದ ಮಾರ್ಗಗಗಳಲ್ಲಿ ಉತ್ತಮವಾದ ಮಾರ್ಗ ಯಾವುದು ಎಂಬುದನ್ನು ತಿಳಿದು ಮುನ್ನಡೆದರೆ ವ್ಯಕ್ತಿ ವಿಶಿಷ್ಟನಾಗುತ್ತಾನೆ; ವಿಶೇಷನಾಗುತ್ತಾನೆ. ಸಾಧಕರಿಗೆ ಅಭಿನಂದನೆಗಳು, ಸಾಧಿಸ ಬಯಸುವ ಯುವಜನತೆಗೆ ಹಾರ್ದಿಕ ಶುಭಾಶಯಗಳು.