ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, August 2, 2011

ಜಯಸಿಂಹಾ ಬಂದಾ ಜಯಸಿಂಹಾ ......


ಜಯಸಿಂಹಾ ಬಂದಾ ಜಯಸಿಂಹಾ ......ಹಾಡು ಕೇಳಿದಾಗ ಮೈಮನ ತುಂಬಿಕೊಳ್ಳುವ ದಿ| ವಿಷ್ಣುವರ್ಧನ್ ಅಭಿನಯದ ’ಜಯಸಿಂಹ’ದ ಜಯಸಿಂಹನ ಪಾತ್ರ ದೃಶ್ಯಮಾಧ್ಯಮದಲ್ಲಿ ಅದನ್ನು ವೀಕ್ಷಿಸುವಾಗ ಕಾಡಿನ ಅಗಾಧ ಅನುಭೂತಿ ಭಾವುಕರಿಗೆ ಭಾಸವಾಗುತ್ತದೆ. ಮುಂದೊಂದು ದಿನ ಕೇವಲ ಕಥೆಗಳಲ್ಲಷ್ಟೇ ಅಸ್ತಿತ್ವದಲ್ಲಿರುವ ಕಾಡುಗಳು ನಿಸರ್ಗದ ರಮಣೀಯತೆಯ ಅವಿಭಾಜ್ಯ ಅಂಗಗಳು. ಹಲವು ನದಿ ತೊರೆಗಳು ಜೀವಜಂತುಗಳಿಗೆ ಪಶು-ಪಕ್ಷಿಗಳಿಗೆ ಆಶ್ರಯತಾಣಗಳಾಗಿರುವ ಅಂತಹ ಕಾಡುಗಳಲ್ಲಿ ವಿಭಿನ್ನ ಜೀವಸಂಕುಲಗಳು ಮನೆಮಾಡಿ ತಂತಮ್ಮ ಆಹಾರಗಳನ್ನೂ ಅಲ್ಲಲ್ಲೇ ಕಂಡುಕೊಂಡು ಹಾಯಾಗಿರುವುದು ಈ ಸೃಷ್ಟಿಯ ಔಚಿತ್ಯಗಳಲ್ಲೂ ಅದ್ಭುತಗಳಲ್ಲೂ ಒಂದು. ಆಹಾರ ಸರಪಳಿಯ ಮೂಲಕ ವೇದಾಂಗಗಳಲ್ಲಿ ಹೇಳಿದ | ಜೀವೋ ಜೀವಸ್ಯ ಜೀವನಂ | ಎಂಬ ಅಂಶವನ್ನು ಸ್ವಲ್ಪ ಕ್ರೌರ್ಯವೇ ಅನಿಸಿದರೂ ವಿಚಿತ್ರಗತಿಯಲ್ಲಿ ಸಮತೋಲನದಲ್ಲಿರಿಸಿದ್ದ ಸೃಷ್ಟಿಯ ಚಮತ್ಕಾರ ಯಾವುದೇ ವೈಜ್ಞಾನಿಕ ವಿಶ್ಲೇಷಣೆಗೆ ನಿಲುಕುವ ಸೂತ್ರವಲ್ಲ !

ಬೆಟ್ಟದ ತುಂಬ ಹಸಿರು ಕಾಡು ಬೆಳೆದಿದ್ದರೆ, ಅಲ್ಲಿ ಅಸಂಖ್ಯ ಮರಮಟ್ಟುಗಳು ಹಲವು ಪ್ರಭೇದಗಳನ್ನು ತೋರುತ್ತಾ ನಿಂತಿದ್ದರೆ, ವಿಧವಿಧದ ಹೂವು-ಕಾಯಿ-ಹಣ್ಣು-ಹಂಪಲು ತುಂಬಿ ಗಿಡಬಳ್ಳಿಗಳು ಆ ಭಾರಕ್ಕೆ ಬಾಗಿ ತೊನೆಯುತ್ತಿದ್ದರೆ, ಬಹುವಿಧದ ಹಕ್ಕಿಗಳ ಕಲರವ ಅಲ್ಲಿನ ಕ್ಷೇತ್ರದಲ್ಲಿ ಇಂಪಾದ ಗಂಧರ್ವಲೋಕವನ್ನು ಸೃಜಿಸಿದ್ದರೆ, ಹರಿವ ನದಿತೊರೆಗಳ ಜುಳುಜುಳು ನಿನಾದ ತಮ್ಮತನವನ್ನು ಮೆರೆದಿದ್ದರೆ, ಹಾರುತ್ತಾ ಜಿಗಿಯುತ್ತಾ ಮೇಯುವ ಜಿಂಕೆ,ಕಡವೆ, ಸಾರಂಗ, ಕೃಷ್ಣಮೃಗ, ಮೊಲ ಮೊದಲಾದ ಸಸ್ಯಾಹಾರೀ ಸಾತ್ವಿಕ ಪಶುಗಳು ಅಲ್ಲಲ್ಲಿ ನಿಂತು ಮೇಯುತ್ತಾ ಕಿವಿನಿಮಿರಿಸಿ ಎತ್ತೆತ್ತಲೋ ತಮ್ಮ ಚಂಚಲ ಕಣ್ಣುಗಳಿಂದ ನೋಡುತ್ತಾ ಇದ್ದರೆ ಆ ದೃಶ್ಯಕಾವ್ಯಕ್ಕಿಂತಾ ಬೇರೆ ಮಹಾಕಾವ್ಯ ಲೋಕದಲ್ಲೇ ಇಲ್ಲವೇನೋ ಅನಿಸಿಬಿಡುತ್ತದೆ !

ಮಳೆಗಾಲದಲ್ಲಿ ಮೋಡಗಳನ್ನು ನೋಡಿ ಹೆಮ್ಮೆಯಿಂದ ಗರಿಬಿಚ್ಚಿ ಕುಣಿಯುವ ನವಿಲುಗಳು-ಅವುಗಳ ನರ್ತನದ ಜೊತೆಗಿನ ಕೂಗು, ಹಸಿರು, ತಿಳಿಹಸಿರು, ನೀಲಿ, ತಿಳಿಹಳದಿ ಬಣ್ಣಗಳಲ್ಲಿ ನಾನಾ ಗಾತ್ರ ವೈವಿಧ್ಯಗಳಲ್ಲಿ ಕಾಣುವ ಗಿಳಿಗಳು, ಅಲ್ಲಲ್ಲಿ ಕಾಣುವ ಚಕೋರ ಪಕ್ಷಿಗಳು, ಕ್ರೌಂಚಪಕ್ಷಿಗಳು, ಮಂಗಟ್ಟೆ ಹಕ್ಕಿಗಳು, ಯಾರದೋ ಭೇಟಿಗೆ ತಡವಾಯಿತೆಂಬಂತೇ ಸರಸರನೇ ಜಿಗಿಯುತ್ತಾ ಸರಿದಾಡುತ್ತಾ ಓಡಾಡುವ ಅಳಿಲುಗಳು, ಚಂಪ್ ಚಂಪ್ ಚಂಪ್ ಚಂಪ್ ಎಂದು ವಿಶಿಷ್ಟ ದನಿಯಲ್ಲಿ ಕೂಗುವ ಕೆಂಚಳಿಲುಗಳು[ ಕ್ಯಾಸಾಳಗಳು], ನಿಧಾನವಾಗಿ ನಡೆಯುತ್ತಾ ಹಾರುತ್ತಾ ಸಾಗುವಾ ಮೈನಾ ಹಕ್ಕಿಗಳು-ಹುರ್ಸಾನ್ಹಕ್ಕಿಗಳು, ಬುಲ್‍ಬುಲ್‍ಗಳು, ಕವಿಯು ಬರೆದಿದ್ದನ್ನು ಬಾಯಿಪಾಠಮಾಡಿ ಹಾಡುವ ಗಾಯಕಿಯರಂತೇ ಹಾಡುವ ಕೋಗಿಲೆಗಳು ಒಂದೇ ಎರಡೇ ಮುಂದಿನ ಹಲವು ವರ್ಷಗಳು ಇರಬೇಕಾದ ಮುಂದಿನ ಮಾನವ ಸಂಕುಲಕ್ಕೆ ಮುದನೀಡಬೇಕಾದ ಅವುಗಳ ಮನೆಗಳು ಕುಲಗಳು, ವಂಶಗಳು ವಿನಾಶದ ಅಂಚಿನಲ್ಲಿರುವುದು ನಿಸರ್ಗ ಪ್ರಿಯರಿಗೆ ವಿಷಾದನೀಯ ಸಂಗತಿ.

ಪ್ರಾಣಿವರ್ಗದಲ್ಲೇ ಬರುವ ಮಾನವ ಮೂಲಭೂತವಾಗಿ ಹಸಿರುಪ್ರಿಯನಂತೆ. ಹಾಗಂತ ಮನೋವೈಜ್ಞಾನಿಕ ಸಂಶೋಧನೆಗಳೇ ಹೇಳಿವೆ. ದುಡ್ಡು ಕೋಟಿಗಟ್ಟಲೇ ಇದ್ದರೂ ಕಾಡುಗಳಿಲ್ಲದ ಬೋಳುಗುಡ್ಡಗಳ ಜೊತೆಗೆ ವಾಸ ಸಾಧ್ಯವೇ ಇಲ್ಲದ ಮಾತು. ಹಿಂದೆಲ್ಲಾ ನಾವು ಓದುತ್ತಿದ್ದೆವು--ಮರಗಳು ನಮಗೆ ಯಾವೆಲ್ಲಾ ರೀತಿಯಲ್ಲಿ ಉಪಕಾರಿಗಳು ಎಂಬಬಗ್ಗೆ. ಮರಗಳು ಯಾವ ರೀತಿಯಲ್ಲಿ ಉಪಯೋಗಕ್ಕೆ ಬರುವುದಿಲ್ಲಾ ಎಂಬುದನ್ನು ಪಟ್ಟಿಮಾಡಿದರೆ ಆ ಪಟ್ಟಿ ಪ್ರಾಯಶಃ ಖಾಲಿಯೇ ಇರುತ್ತದೆ. ಹುಟ್ಟಿದಾರಭ್ಯ ಸಾಯುವವರೆಗೆ ಜಾತಿ-ಮತಗಳ ಭೇದವಿಲ್ಲದೇ ಎಲ್ಲರ ಮನೆಗಳ ಭಾಗವಾಗುವ ಮರಮಟ್ಟುಗಳ ಭಾಗಗಳು ಸತ್ತಮೇಲೂ ಸುಡಲಿಕ್ಕೋ ಶವಪೆಟ್ಟಿಗೆಗೋ ಬಳಸಲ್ಪಡುವುದು ಕಂಡುಬರುತ್ತದೆ. ಇಂದು ಅಧುನಿಕೀಕರಣದಲ್ಲಿ ಸತ್ತನಂತರ ಪರ್ಯಾಯ ಪರಿಕರಗಳನ್ನು ಬಳಸಿದರೂ ಕೊನೇಪಕ್ಷ ಅಲ್ಲೀವರೆಗಾದರೂ ಮರಗಳ ಸಾಂಗತ್ಯ ನಮಗೆ ಬೇಕೇ ಬೇಕಾಗುತ್ತದೆ ಎಂಬುದನ್ನು ಒಮ್ಮೆ ಅವಲೋಕಿಸಿ!

ಜಗತ್ತು ಎಷ್ಟೇ ಮುಂದುವರಿದರೂ ಉಪಜೀವನಕ್ಕೆ ಯಾವ್ಯಾವುದೋ ನೌಕರಿಯೋ ದಂಧೆಯೋ ವಹಿವಾಟೋ ಇದ್ದರೂ, ಹಲವರಿಗೆ ಕೃಷಿ-ವ್ಯವಸಾಯವಿದ್ದರೂ, ಕೈಗಾರಿಕಾ ವಸಾಹತುಗಳು ಕಾಡುಗಳನ್ನು ಮೀರಿಸುವ ಮಟ್ಟದಲ್ಲಿ ಬೆಳೆದಿದ್ದರೂ ಕೇವಲ ಆ ಮೂಲಗಳಿಂದ ಮಾನವ ಜೀವನ ಪರಿಪೂರ್ಣವಾಗುವುದಿಲ್ಲ. ಇವತ್ತಿಗೆ ನಾವು ಮರದ ಪೀಠೋಪಕರಣಗಳಿಗೆ ಬದಲಾಗಿ ಉಪಭೋಗಿಸುತ್ತಿರುವ ಪ್ಲಾಸ್ಟಿಕ್ ಮತ್ತು ಕಬ್ಬಿಣದ ಅಥವಾ ಗಾಜಿನ ಪೀಠೋಪಕರಣಗಳು ಮರದ ತುಂಡುಗಳು ನೀಡುವ ಸರ್ವಋತು ಸ್ಪಂದನಾ ಗುಣಮಟ್ಟವನ್ನು ತೋರುವುದಿಲ್ಲ. ಉದಾಹರಣೆಗೆ ಮಳೆ/ಚಳಿಗಾಲದಲ್ಲಿ ಬೆಚ್ಚಗಾಗಿಯೂ ಬೇಸಿಗೆಯಲ್ಲಿ ತಂಪಾಗಿಯೂ ಭಾಸವಾಗುವ ಮರದ ಪೀಠೋಪಕರಣಗಳು ನಮ್ಮ ಚರ್ಮಕ್ಕೆ ಅತ್ಯಂತ ಅನುಕೂಲಕರ ಆಯಾಮಗಳನ್ನು ಕೊಡುವಂಥವು. ಅಲಂಕಾರದಲ್ಲಿಯೂ ಮರಗಳು ನೀಡುವ ’ಫಿನಿಶಿಂಗ್ ಟಚ್’ ಬೇರೇ ಯಾವ ಮೂಲದ ಪರಿಕರಗಳೂ ನೀಡಲು ಸಾಧ್ಯವೇ ಇಲ್ಲ. ಅಂತರವಿಷ್ಟೇ ಮೈಗೆ ಎಣ್ಣೆಹಚ್ಚಿಕೊಳ್ಳುವುದಕ್ಕೂ ನೀರುಹಚ್ಚಿಕೊಳ್ಳುವುದಕ್ಕೂ ಇರುವಂಥದ್ದು. ಎಣ್ಣೆಯಿಂದ ಚರ್ಮ ಸುಕ್ಕುಗಟ್ಟುವುದಿಲ್ಲ; ನೀರು ಬೇಗ ಆರಿಹೋಗುವುದರಿಂದ ಚರ್ಮಕ್ಕೆ ಆರ್ದ್ರತೆಯನ್ನು ಬಹಳಕಾಲ ಕೊಡುವುದಿಲ್ಲ.

ಕಾಡುಗಳು ಅದು ಹೇಗೆ ಸೃಷ್ಟಿಯಾದವೋ ಸಹಸ್ರಾರು ಜೀವಸಂಕುಲಗಳು ಅಲ್ಲಿ ಹೇಗೆ ಮೈದಳೆದವೋ ಸೃಷ್ಟಿಕರ್ತನಿಗೆ ಮಾತ್ರ ಗೊತ್ತು! ಅಂತಹ ಕಾಡುಗಳನ್ನು ಮನುಷ್ಯ ಪುನಃ ಸೃಷ್ಟಿಸಲು ಸಾಧ್ಯವಾಗುವುದಿಲ್ಲ. ಇರುವ ಪ್ರಾಣಿ-ಪಕ್ಷಿ ಪ್ರಭೇದಗಳನ್ನು ಕಲೆಹಾಕಿ ಅವುಗಳ ಸಂತಾನೋತ್ಫತ್ತಿಯಲ್ಲಿ ತೊಡಗುತ್ತೇನೆನ್ನುವ ಮನುಷ್ಯನ ಕೈಯ್ಯಲ್ಲಿ ಅವುಗಳ ಅಭ್ಯುದಯವಿಲ್ಲ. ಅವು ಹೇಗೋ ಹುಟ್ಟಿದವು, ತೊಂದರೆಕೊಡದಿದ್ದರೆ ಬೆಳೆಯುತ್ತಿದ್ದವು, ಬಾಳುತ್ತಿದ್ದವು, ತೊಂದರೆಯುಂಟುಮಾಡಿ ಈಗ ರಕ್ಷಿಸುತ್ತೇನೆ ಎಂದರೆ ಅವು ಮರಳಿ ಬರಲಾರವು! ನಾನು ಚಿಕ್ಕವನಿರುವಾಗ ಒಂದಷ್ಟು ದೂರದ ಕಾಡೊಳಗೆ ನಡೆದರೆ ಕಾಣುವ ವನ್ಯಜೀವಿಗಳು-ಕಾಡುಹಕ್ಕಿಗಳು ಇವತ್ತು ಕಾಣುತ್ತಿಲ್ಲ! ಅಂದರೆ ಅರ್ಥಮಾಡಿಕೊಳ್ಳಿ ವರ್ಷಾ ವರ್ಷಾ ಅವುಗಳ ಸಂತತಿ ಕ್ಷೀಣಿಸುತ್ತಲೇ ಇದೆ.

ಮಂಡ್ಯ-ಮೈಸೂರು, ಹಾಸನ-ಸಕಲೇಶಪುರ-ಕೊಡಗಿನ ಕಾಡುಗಳ ಸುತ್ತಮುತ್ತ ಆನೆಗಳ ಹಾವಳಿ ತೀವ್ರವಾಗಿದೆ ಎಂಬುದು ನಮಗೆ ನಿತ್ಯವೂ ಕೇಳಿಬರುವ ಸುದ್ದಿ. ವಾಸ್ತವಿಕತೆಯೆಂದರೆ ಅವುಗಳ ಮೂಲ ಆಹಾರವಾದ ಬಿದಿರಿನ ಬೊಂಬುಗಳು ಹೂ ಬಿಟ್ಟು ಕಾಡಿನಲ್ಲಿ ಬಿದಿರು ಸಂತತಿ ಒಮ್ಮಿಂದೊಮ್ಮೆಲೇ ನಾಶವಾಗುತ್ತಿದೆ. ಅದು ಕೆಲವಾರು ವರ್ಷಗಳಿಗೊಮ್ಮೆ ನಡೆಯುವ ನೈಸರ್ಗಿಕ ಪ್ರಕ್ರಿಯೆ. ನಾಶವಾದ ಬಿದಿರು ಪುನಃ ಚಿಗಿತು ಮೇಲೇಳಲು ಒಂದೆರಡು ವರ್ಷಗಳಾದರೂ ಬೇಕು! ಅಲ್ಲೀವರೆಗೆ ದೈತ್ಯದೇಹೀ ಪ್ರಾಣಿಗಳಿಗೆ ಉದರ ನಿಮಿತ್ತಂ ....ಊಹುಂ ! ಹಿಂದೆಲ್ಲಾ ಹೀಗಾದಾಗ ಪ್ರದೇಶದಿಂದ ಪ್ರದೇಶಕ್ಕೆ ಓಡಾಡುತ್ತಾ ಪರ್ಯಾಯವಾಗಿ ಸಿಗಬಹುದಾದ ಬೈನೆ ಮರಗಳ ತಿರುಳನ್ನೋ ಮತ್ಯಾವುದೋ ಸೊಪ್ಪನ್ನೋ ತಿಂದು ಹೊಟ್ಟೆಹೊರೆದುಕೊಳ್ಳುತ್ತಿದ್ದವು. ಒಂದು ಆನೆಗೆ ಸರಾಸರಿ ೨೫೦ ಕೆಜಿ ಆಹಾರ ಪ್ರತಿನಿತ್ಯ ಬೇಕಾಗುತ್ತದೆ ಎಂದರೆ ಇರುವ ಎಲ್ಲಾ ಆನೆಗಳಿಗೆ ಎಲ್ಲಿ ಆಹಾರವಿದೆ ? ಹಾಗಾದರೆ ಮೊದಲು ಎಲ್ಲಿತ್ತು ?

ಇತ್ತು ಸ್ವಾಮೀ ! ಮೊದಲು ಕಾಡುಗಳೇ ಹೇರಳವಾಗಿದ್ದವು. ಅವುಗಳು ತಿರುಗಾಡಲು ಅವುಗಳದ್ದೇ ರಹದಾರಿಗಳಿದ್ದವು. ವಾಡಿಕೆಯಲ್ಲಿ ನಮ್ಮಲ್ಲಿ ’ಹಾವಸಾಲು’ ಅನ್ನೋ ಪದ ಬಳಕೇಲಿದೆ. ಹಾವಸಾಲು ಎಂದರೆ ಅವು ತಿರುಗಾಡಿ ತಿರುಗಾಡಿ ಸದಾ ಹಾಗೇ ತಿರುಗಾಡುವ ಕೆಲವು ಮಾರ್ಗಗಳು ಅವಕ್ಕೆ ಗುರುತಾಗಿರುತ್ತವೆ. ವೈಜ್ಞಾನಿಕವಾಗಿ ನೋಡಿದರೆ ಅವುಗಳ ಶಾರೀರಿಕ ರಕ್ಷಣೆಗೆ ಒಗ್ಗಬಹುದಾದ ತಗ್ಗು-ದಿಣ್ಣೆ ಜಾಗಗಳನ್ನು ಅವಲೋಕಿಸಿ ಪರಂಪರೆಯಿಂದ ಅವುಗಳು ಆ ಮಾರ್ಗವಾಗಿಯೇ ನಡೆದಾಡುತ್ತಿವೆ. ಅನಾದಿಯಲ್ಲಿ ಅವುಗಳ ಪೂರ್ವಜರು ಹಾಕಿದ ಅಂತಹ ಮಾರ್ಗಗಳ ಮಧ್ಯೆ ಇಂದು ಅಕ್ರಮ-ಸಕ್ರಮಗಳೆಂಬ ಹಲವಾರು ನಾಟಕಗಳಿಂದ ಕಾಡುಗಳು ಕೃಷಿಕರ, ಮಾನವರ ವಶವಾಗಿ ಅಲ್ಲೆಲ್ಲಾ ಮಾನವ ವಸಾಹತು ತಲೆಯೆತ್ತಿದೆ. ತಮ್ಮದಾದ ಜಾಗದಲ್ಲಿ ಇನ್ಯಾರೋ ಬಂದರೆ ನಾವಾದ್ರೆ ಏನುಮಾಡುತ್ತೇವೆ ಎಂಬುದು ನಿಮಗೆಲ್ಲಾ ತಿಳಿದೇ ಇದೆ! ನಿರುಪದ್ರವಿ ಆನೆಗಳು, ಕಾಡುಪ್ರಾಣಿಗಳು ತಮ್ಮ ದಾರಿ, ತಮ್ಮ ಆಹಾರದ ಕಸಿತಕ್ಕೆ ಒಳಗಾಗಿ ಪರೋಕ್ಷ ದೌರ್ಜನ್ಯಕ್ಕೊಳಗಾಗಿ ಬದುಕುವ ಹಂಬಲದಲ್ಲಿ ಹಸಿದ ಹೊಟ್ಟೆಹೊತ್ತು ಮರಿಗಳೊಂದಿಗೆ ಹಳೆಯ ಜಾಗಗಳನ್ನರಸಿ ಹೊರಡುತ್ತವೆ.

ಅವುಗಳ ಹಳೆಯ ಜಾಡು ಇಂದು ಇಟ್ಟಿಗೆ-ಸಿಮೆಂಟುಗಳು ಗೂಡು ! ಅಥವಾ ಕೃಷಿಕರ ಕೆಲಸದ ಒಳಗೂಡು. ಹೀಗಾಗಿ ಒಂದುಕಾಲಕ್ಕೆ ತಾವು ತಮ್ಮ ವಂಶಸ್ಥರು ಉಪಭೋಗಿಸಿದ್ದ ಜಾಗ ತಮಗೆ ದಕ್ಕದೇ ಇರುವುದರಿಂದಲೂ ಆ ಮಾರ್ಗಗಳನ್ನು ಬಿಟ್ಟು ಪರ್ಯಾಯ ಮಾರ್ಗಗಳು ತಿಳಿಯದೇ ಇರುವುದರಿಂದಲೂ ಅವು ನೇರವಾಗಿ ಆ ಮಾರ್ಗಗಳಲ್ಲೇ ಬರುತ್ತವೆ! ಅದರಲ್ಲೇನಿದೆ ತಪ್ಪು ? ಚಿಂತಿಸಿನೋಡಿ-ಅವುಗಳ ಆಹಾರಕ್ಕೆ ಅವು ಈಗ ಏನುಮಾಡಬೇಕು ? ವಿಧಾನಸೌಧದ ಎದುರು ಸೊಂಡಿಲಲ್ಲಿ ಪತಾಕೆ ಹಿಡಿದು ಧರಣಿನಿಲ್ಲಬೇಕೇ? ಕಬಳಿಸುತ್ತಾ ಬರುವ ಗಣಿಧಣಿಗಳ ಯಂತ್ರಗಳಿಗೆ ತಮ್ಮ ಸಂತಾನವೂ ಸೇರಿದಂತೇ ತಾವು ಬಲಿಯಾಗಬೇಕೇ? ಅಥವಾ ವೀರಪ್ಪನ್ ರೀತಿಯ ಇನ್ನೂ ಅವಿತಿರುವ ಹಲವು ಕಾಡುಗಳ್ಳರ ಗುಂಡಿಗೆ ಬಲಿಯಾಗಬೇಕೆ ? ಅವುಗಳಿಗೂ ಸಾಮಾಜಿಕ ನ್ಯಾಯಬೇಡವೇ? ಮೀಸಲಾತಿ ಬೇಡವೇ ? ಅವುಗಳಿಗೆ ರೇಷನ್ ಕಾರ್ಡ್ ಕೊಡುತ್ತೀರೇ ? ಅನಾರೋಗ್ಯ ಪೀಡಿತವಾದಾಗ ನೈಸರ್ಗಿಕವಾಗಿ ಸಿಗುತ್ತಿದ್ದ ಗಿಡಮೂಲಿಕೆಗಳು ನಾಶವಾಗಿ ಅನಾರೋಗ್ಯ ಉಲ್ಬಣಿಸುತ್ತಿದ್ದರೆ ನಿಮ್ಮ ಯಾವುದೋ ಲಸಿಕೆಗಳು ಅವುಗಳ ಆರೋಗ್ಯವನ್ನು ಕಾಪಿಡಲು ಸಾಧ್ಯವೇ ? ಮರಿಗಳಿಗೆ ಓಡಾಡಲು ಆಟವಾಡಲು ಸ್ವಲ್ಪವಾದರೂ ಕಾಡುಬೇಡವೇ ? ಉತ್ತರ ಇದ್ದರೆ ಮಾತನಾಡಿ!

ರಾಜಕಾರಣದ ಅರಾಜಕತೆಯಲ್ಲಿ ಹೇಳಕೇಳುವವರಿಲ್ಲದ ಕಾಡುಮೇಡುಗಳಲ್ಲಿ ಹಗಲೂರಾತ್ರಿ ತಾವೇ ನೇಮಿಸಿದ ಅರಣ್ಯಾಧಿಕಾರಿಗಳನ್ನೂ ಅರಣ್ಯಪಾಲಕರನ್ನೂ ಬೆದರಿಸಿ ಸುಮ್ಮನಿರುವಂತೇ ಮಾಡಿ ಗಿಡಮರಗಳ, ಪಶುಪಕ್ಷಿಗಳ ಮಾರಣಹೋಮ ಮಾಡಿ ಅವುಗಳಿಂದ ಸಿಗಬಹುದಾದ ಏಕಕಾಲದ ದೊಡ್ಡ ಲಾಭದ ’ಲಾಬಿ’ಗೆ ಮುಂದಾದ ಇಂದಿನ ರಾಜಕಾರಣಿಗಳಿಗೆ ಕಿಂಚಿತ್ತಾದರೂ ಆ ಬಗ್ಗೆ ಆಸಕ್ತಿಯಿದೆಯೇ ? ಕಾಡುಗಳನ್ನು ಉಳಿಸುವ ತನ್ಮೂಲಕ ವನ್ಯಜೀವಿಗಳನ್ನೂ ಕಾಪಾಡುವ ಜವಾಬ್ದಾರಿಯನ್ನು ಯಾರಾದರೂ ಒಬ್ಬನೇ ಒಬ್ಬ ಕಂಕಣಬದ್ಧನಾಗಿ ನಡೆಸಿದ ದಾಖಲೆ ಇದೆಯೇ ? ಪುಸ್ತಕಗಳಲ್ಲಿ [ತೆನ್ನಾಲಿ ರಾಮನೋ ಬೀರ್ಬಲ್ಲನೋ ಹೇಳಿದಂತೇ ]ಮರದಮೇಲೆ ಕುಳಿತ ಹಕ್ಕಿಗಳ, ಅಲೆದಾಡುವ ಆನೆ-ಹುಲಿಗಳ ಲೆಕ್ಕವನ್ನು ಇವರು ಬರೆಯಲು ಹೇಳುತ್ತಾರೆಯೇ ಹೊರತು ನಿಜವಾಗಿಯೂ ಬರೆದಷ್ಟಾದರೂ ಇವತ್ತು ಇವೆಯೇ ? ನಿಜಕ್ಕೂ ಈ ಸಂಖ್ಯೆ ಪ್ರಶ್ನಾರ್ಹವಾಗಿದೆ.

ಡಾರ್ವಿನ್ ವಿಕಾಸವಾದದಂತೇ ಪ್ರತಿಯೊಂದೂ ಜೀವಿ ತನ್ನ ಉಳಿವಿಗೆ ಹೋರಾಡುವ ಸನ್ನಿವೇಶದ ಒಂದು ಪರಿ ಆನೆಗಳ ಚಿರತೆಗಳ ಅಥವಾ ಕಾಡುಪ್ರಾಣಿಗಳ ಪುರಪ್ರವೇಶ! ನಾವೇನಾದರೂ ಅವುಗಳ ಮನೆಗಳನ್ನು ಹೊಕ್ಕದೇ ಇದ್ದಿದ್ದರೆ, ಅವುಗಳ ವಸಾಹತುಗಳನ್ನು ಬಲಿತೆಗೆದುಕೊಳ್ಳದೇ ಇದ್ದಿದ್ದರೆ ಸರ್ವಥಾ ಅವು ನಮ್ಮ ಪುರಗಳಿಗೆ ಪ್ರವೇಶಿಸುತ್ತಿರಲಿಲ್ಲ. ಒಂದು ಹಕ್ಕಿ ತನ್ನ ಗೂಡಿನಿಂದ ಕೆಳಗೆ ಬಿದ್ದ ರೆಕ್ಕೆ ಬಲಿಯದ ಮರಿಯನ್ನು ಮಾನವ ತನ್ನ ಕೈಯ್ಯಿಂದ ಮುಟ್ಟಿ ಗೂಡಿಗೆ ಮರಳಿಸಿದಾಗ ಪುನಃ ಸೇರಿಸಿಕೊಳ್ಳದಷ್ಟು ತಮ್ಮದೇ ನೀತಿಯುಕ್ತ ಕಟ್ಟುಪಾಡುಗಳಿರುವ ಮರ್ಯಾದಿತ ಕಾಡುಸಮಾಜ ತಮ್ಮ ಮರ್ಯಾದೆ ಹಾಳಾದರೂ ಚಿಂತೆಯಿಲ್ಲಾ ಬದುಕಲು ಆಹಾರ ಸಿಕ್ಕರೆ ಸಾಕು ಎಂದುಕೊಂಡು ಹಾಗೆ ಮರ್ಯಾದೆಗೆಡಕ ಕಾರ್ಯಕ್ಕೆ ಮುನ್ನುಗ್ಗಿವೆ ! ತಮ್ಮದೇ ಆದ ರೀತಿ-ರಿವಾಜುಗಳನ್ನು ಗಾಳಿಗೆ ತೂರಿ ತಾವು ಬದುಕಲು ಪ್ರಯತ್ನಿಸುವ ಜೀವವಿಕಾಸವಾದ ಸರಿಯೆನ್ನುತ್ತೀರಷ್ಟೇ?

ಮೈಸೂರು ಪೇಟಾ ತೊಡುವ ಮಂದಿಗೆ ಕಾಳಜಿ ಇರದಿದ್ದರೆ ಹಾಳಾಗಿ ಹೋಗಲಿ ನಮ್ನಮ್ಮಲ್ಲಿ ನಮನಮಗೆ ಎಷ್ಟು ಅವುಗಳ ಬಗ್ಗೆ ಕಾಳಜಿ ಇದೆ? ಯಾರದರೂ ಆನೆ ಸಾಕಲು ಒಪ್ಪುವಿರೇ ಸಾಧ್ಯವೇ ? ನಾಣ್ನುಡಿಗಾದರೂ ಹೇಳುತ್ತೇವೆ --ಅದನ್ನು ಸಾಕುವುದು ಆನೆಸಾಕಿದಂತೇ ಅಂತ ಅಲ್ಲವೇ ? ಅಂದಮೇಲೆ ತಪ್ಪು ಪ್ರಾಣಿಗಳದಲ್ಲಾ ಮಾನವರದು ಎಂಬುದು ನಿರ್ಣಯಿಸಬೇಕಾದ ವಿಷಯವಷ್ಟೇ ? ಪ್ರತ್ಯಕ್ಷವೋ ಪರೋಕ್ಷವೋ ಸಂಭಾವನೆಯಿಲ್ಲದೇ ಯಾ ಉಪಜೀವನಕ್ಕೆ ಅನುಕೂಲವಿಲ್ಲದೇ ಯಾವ ಸಂಗೀತಗಾರನೂ ಹಾಡಲಾರ, ಯಾವಕಲಾವಿದನೂ ಚಿತ್ರಿಸಲಾರ, ಯಾವ ಸಾಹಿತ್ಯಕಾರನೂ ಬಹಳಕಾಲ ಬರೆಯಲಾರ, ಯಾವುದೇ ವೃತ್ತಿಯವನೂ ಆ ವೃತ್ತಿಯನ್ನು ನಡೆಸಲಾರ ಅಲ್ಲವೇ ? ಅಂದಮೇಲೆ ಹೊಟ್ಟೆಗೆ ಹಿಟ್ಟೇ ಸಿಗದ ಬೋಳಾದ ಕಾಡಿನ ಕಲ್ಲು[ಅದೂ ಇದ್ದರೆ!]ಗಳ ಮೇಲೆ ನಿಂತು ನವಿಲು ನರ್ತಿಸೀತೇ? ಗಿಳಿ ಕಿಚ್ಪಿಚ್ ಕಿಚ್ಪಿಚ್ ಉಲಿದೀತೇ ? ಕೋಗಿಲೆ ಇಂಪಾಗಿ ಹಾಡೀತೇ ? ಇಂತಹ ಜೀವಸಂಕುಲಗಳ ಅಳಿವು ಉಳಿವಿನ ಪ್ರಶ್ನೆ ಈಗೀಗ ಜಾಸ್ತಿ ಎದುರಿಗೆ ಬರುತ್ತಿದೆ.

ಮನಸ್ಸು ಈ ಬೇಗುದಿಯಲ್ಲಿ ಹಾಗೊಮ್ಮೆ ಹುಡುಕುತ್ತಾ ಜಯಸಿಂಹನ ಹಾಡನ್ನು ನೆನಪಿಸಿಕೊಳ್ಳುತ್ತದೆ. ನೋವುಂಡ ಮನ ನಲಿವು ಪಡೆಯಲು, ಬೇಸರಗೊಂಡ ಜೀವನದ ಏಕತಾನತೆಯಿಂದ ಕೆಲಕಾಲ ಹೊರಹೋಗಿ ನೋಡಿ ಆನಂದಿಸಲು [ಕೊನೇಪಕ್ಷ ಆ ಮಟ್ಟಕ್ಕಾದರೂ] ಕಾಡುಗಳೂ ಕಾಡಿನ ಸಮಾಜವೂ ಬೇಕಲ್ಲವೇ ? ಇದನ್ನು ನೀವೇ ನಿರ್ಧರಿಸಿ, ಕಾಡಿಗೆ/ಪ್ರಾಣಿಗಳಿಗೆ ಆಗಬಹುದಾದ ಅನ್ಯಾಯವನ್ನು ನಿಮ್ಮ ಕೈಲಾದ ಮಟ್ಟಿಗೆ ನಿಯಂತ್ರಿಸಿ, ಸಾಮೂಹಿಕವಾಗಿಯೋ ವೈಯ್ಯಕ್ತಿಕವಾಗಿಯೋ ಅಂತೂ ಹಾಗೊಂದಷ್ಟು ಕಾರ್ಯ ನಡೆಯುತ್ತಾ ಹೋದರೆ ಎಲ್ಲೋ ಒಂದೆರಡು ದೇವರಕಾಡುಗಳಾದರೂ ಉಳಿದುಕೊಂಡಾವು, ಬೆರಳೆಣಿಕೆಯ ಹಕ್ಕಿಗಳಾದರೂ ಬದುಕಿಕೊಂಡಾವು, ನಮಸ್ಕಾರ.