ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, June 8, 2011

’ಬ್ರಹ್ಮಪುರಿಯ ಭಿಕ್ಷುಕ’ ನನ್ನು ಕಂಡೆ




’ಬ್ರಹ್ಮಪುರಿಯ ಭಿಕ್ಷುಕ’ ನನ್ನು ಕಂಡೆ

ಹೆಸರೇ ವಿಚಿತ್ರ ಎನಿಸುವುದಿಲ್ಲವೇ ? ಇದು ನಮ್ಮ ಆದ್ಯ ದಿವಂಗತ ಶ್ರೀ ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ ಅರ್ಥಾತ್ ಡಿ.ವಿ.ಗುಂಡಪ್ಪನವರ ಬದುಕಿನ ಹಲವು ಪಲುಕುಗಳ ಸಂಗ್ರಹ. ಸೆರೆಹಿಡಿದವರು ಹಲವರು, ಪೋಣಿಸಿದವರು ಹಿರಿಯ ಮಿತ್ರರಾದ ಶತಾವಧಾನಿ ರಾ. ಗಣೇಶ್ ಅವರು. ಪುಸ್ತಕಗಳೆನೋ ಸಾವಿರಾರು ಆದರೆ ಓದುವ ಗುಣಮಟ್ಟ ಮತ್ತು ಓದಿಸುವ ತಾಕತ್ತುಳ್ಳ ಅಂಥಾ ಪುಸ್ತಕಗಳು ಕೇವಲ ಕೆಲವು. ನಾನು ಹೀಗೆ ನೇರಾನೇರ ಹೇಳುತ್ತಿರುವುದಕ್ಕೆ ಬರೆಯುವ ಯಾರೂ ಬೇಸರಿಸಬೇಕಿಲ್ಲ. ಇದರಲ್ಲಿ ನಾವು ಕಲಿತುಕೊಳ್ಳುವ ಔಚಿತ್ಯವಿದೆ. ತಪ್ಪನ್ನು ತಪ್ಪು ಎನ್ನದೇ ಮುಚ್ಚಿಕೊಂಡರೆ ಬೆಳವಣಿಗೆ ಸಾಧ್ಯವಿಲ್ಲ. ಬಸಿರಾಗಿದ್ದು ತಿಳಿಯದೇ ಹೋದರೂ ಮಗುವಾಗಿದ್ದು ಬಹಿರಂಗವಾಗಿಬಿಡುತ್ತದೆ. ಹೆತ್ತಮಗುವನ್ನು ತಿಪ್ಪೆಗೆ ಎಸೆಯುವ ತಾಯಂದಿರಂತಾಗದೇ ಜೋಗುಳಹಾಡಿ ಅನವರತ ಆ ಮಗುವಿನ ಆರೈಕೆ ಮಾಡಿ, ಆದ್ಯತೆನೋಡಿ ಸಲಹುವುದು ಉತ್ತಮ ತಾಯಂದಿರಂತಾಗುವುದು ಒಳ್ಳೆಯದು ಎಂಬುದು ನನ್ನ ಅಭಿಪ್ರಾಯ. ಭಗವತ್ಪಾದ ಶಂಕರರು ಹುಟ್ಟುವ ಮುನ್ನ ಕನಸಲ್ಲಿ ಅವರ ತಂದೆ-ತಾಯಿಗೆ ಕಾಣಿಸಿಕೊಂಡ ದೇವರು ಕೇಳಿದನಂತೆ " ನಿಮಗೆ ನೂರಾರು ವರ್ಷ ಬದುಕುವ ಸಾದಾ ಸೀದಾ ಮಕ್ಕಳು ಬೇಕೋ ಅಥವಾ ಅಪ್ರತಿಮ ಪ್ರತಿಭಾವಂತನಾಗಿ ಅಲ್ಪಾಯುಷಿಯಾಗಿ ಲೋಕವನ್ನೇ ಬೆಳಗುವ ಒಬ್ಬನೇ ಮಗು ಸಾಕೋ ? " ಆಗ ಪುಣ್ಯಾತ್ಮರಾದ ಆ ತಂದೆ-ತಾಯಿ ಕೋರಿಕೊಂಡಿದ್ದು ಲೋಕೋತ್ತರ ಪ್ರತಿಭಾವಂತ ಅಲ್ಪಾಯುಷಿ ಒಬ್ಬನೇ ಮಗುವಿಗಾಗಿ. ಆ ಮಗುವಿನ ಬಗ್ಗೆ ಮತ್ತೆ ಈಗ ಹೊಸದಾಗಿ ಹೇಳಬೇಕಿಲ್ಲ; ಯಾಕೆಂದರೆ ಅದು ಜಗತ್ತೇ ಮೂಕವಿಸ್ಮಿತವಾಗಿ ಕಂಡ ಬೆಳಕು! ಹಲವು ಎಂತೆಂಥದೋ ಕೃತಿಗಳನ್ನು ಬರೆದೆ ಎನ್ನುವುದಕ್ಕಿಂತಾ ಕೆಲವೇ ಉತ್ತಮ ಕೃತಿಗಳನ್ನು ಬರೆದರೆ ಸಾಕು ಎನಿಸುತ್ತದೆ.

ಇತ್ತೀಚೆಗೆ ನಾವು ದಿನವಹಿ ನೋಡುವ, ಅನಿವಾರ್ಯುವಾಗಿ ಓದುವ ಹಲವು ಕೃತಿಗಳು ನಿಜಕ್ಕೂ ಅವಶ್ಯಕವೇ ಎಂಬುದು ಕಾಡುವ ಪ್ರಶ್ನೆಯಾಗುತ್ತದೆ. ಹುಡುಗಿಯಮೇಲೆ, ಅವಳ ಸೊಂಟದಮೇಲೆ, ಅವಳು ಉದ್ಯಾನದಲ್ಲೋ ಇನ್ನೆಲ್ಲೋ ಕುಳಿತ ಭಂಗಿಯಮೇಲೆ ವಾಕರಿಕೆ ಬರುವಷ್ಟು-ತಲೆಚಿಟ್ಟು ಹಿಡಿಸುವಷ್ಟು ಕವನಗಳು ಬರೆಯಲ್ಪಟ್ಟಿವೆ. ಇದನ್ನು ಬಿಟ್ಟು ಹೊರ ಜಗತ್ತೇ ಇಲ್ಲ ಎನ್ನುವ ಮನೋಭಾವದ ತರುಣ ಲೇಖಕರೂ ಇದ್ದಾರೆ. ಇಲ್ಲಿ ಹೀಗೊಂದು ತಮಾಷೆಯ ಉದಾಹರಣೆ ತೆಗೆದುಕೊಳ್ಳುತ್ತೇನೆ. ಒಮ್ಮೆ ಹಳ್ಳಿಯೊಂದರ ಯಾರದೋ ಮನೆಗೆ ಹೋದಾಗ ಅವರು ಬಹಳ ತಮಾಷೆಯಾಗಿ ಮಾತನಾಡುತ್ತಿದ್ದರು. ನಾನೂ ಹಾಗೆ ಲೋಕಾಭಿರಾಮವಾಗಿ ಮಾತನಾಡುತ್ತಾ " ನಿಮ್ಮನೆಯ ಮುಂದೆ ಮಲಗಿರುವ ದಪ್ಪದ ನಾಯಿ ನೋಡಿ ಹೆದರಿಬಿಟ್ಟೆ ಆದರೆ ಏನೂಮಾಡದ ಬಡಪಾಯಿ" ಎಂದೆ. ಅದಕ್ಕವರು " ಹಾಂ ಅದು ನಾಯಿ ಜಾತಿ " ಎಂದು ಗೊಳ್ಳನೆ ನಕ್ಕರು! ನಂಗೆ ಅರ್ಥವಾಗಲಿಲ್ಲ. ಆಗ ಬಿಡಿಸಿ ಹೇಳಿದರು " ನಾಯಿ ಜಾತಿ ಮತ್ತು ಜಾತಿ ನಾಯಿ ಹೀಗೆ ಎರಡು ರೀತಿ ಇರುತ್ತದೆ, ನಾಯಿ ಜಾತಿ ಎಂದರೆ ನಾಯಿಗಳ ವರ್ಗಕ್ಕೆ ಸೇರಿದ್ದು ಅದೇ ಜಾತಿ ನಾಯಿ ಎಂದರೆ ನಾಯಿಗಳ ವರ್ಗದಲ್ಲಿ ವಿಶಿಷ್ಟ ತಳಿಯ ನಾಯಿ " ಎನ್ನುತ್ತಾ ಮತ್ತೆ ನಕ್ಕರು. ಇಅದೇ ಫಾರ್ಮ್ಯುಲಾವನ್ನು ನಾನು ಎಲ್ಲಾರಂಗಗಳಲ್ಲೂ ಉಪಯೋಗಿಸಲು ಕಲಿತುಬಿಟ್ಟೆ! ಅದೇ ರೀತಿ ಲೇಖಕರಲ್ಲೂ ಲೇಖಕರ ಜಾತಿ ಮಾತು ಜಾತಿ ಲೇಖಕರು ಎಂದು ಬಣ್ಣಿಸಬಹುದಾಗಿದೆ. ಜಾತಿ ಲೇಖಕರು ಬರೆದ ಕೃತಿಗಳು ನಿಜವಾಗಿಯೂ ಓದಲೇಬೇಕಾದ ಮತ್ತು ಓದುವುದರಿಂದ ನಮ್ಮ ಜ್ಞಾನವನ್ನು ವೃದ್ಧಿಸುವ ರೀತಿಯಲ್ಲಿದ್ದರೆ ಲೇಖಕರ ಜಾತಿಗೆ ಸೇರಿದವರು ಬರೆದ ಕೃತಿಗಳನ್ನು ಅವರಿಗೆ ಬೇಸರವಾಗಬಾರದು ಎಂಬ ಕಾರಣಕ್ಕೆ ನಮ್ಮ ಸಮಯವನ್ನು ವಿನಾಕಾರಣ ವ್ಯರ್ಥಮಾಡಿಕೊಳ್ಳುತ್ತಾ ಓದಬೇಕಾಗುತ್ತದೆ. ಹೀಗಾಗಿ ಬರೆಯುವಾಗ ತಾನು ಏನು ಬರೆಯುತ್ತಿದ್ದೇನೆ ಮತ್ತು ಆ ಬರಹದಿಂದ ಆಗಬಹುದಾದ ಫಲಶೃತಿ ಏನು ಎಂಬುದನ್ನು ಪರಿಗಣಿಸಿ ಸಾಮಾಜಿಕವಾಗಿ ಎಳ್ಳಷ್ಟಾದರೂ ಉಪಯೋಗಕ್ಕೆ ಬರಬಹುದಾದ ವಿಷಯಗಳನ್ನು ಇಟ್ಟು ಬರೆಯಬೇಕಾಗುತ್ತದೆ. ಇಲ್ಲದೇ

ಜೀವನ ನೂರುದಿನ
ಕಾಲೇಜು ಆರುದಿನ
ಕೂಡಿಬಾಳೋಣ ಬಾರೇ ಮೂರು ದಿನ

-ಎಂದರೂ ಅದು ಕವನ ಎಂದುಕೊಂಡು ಬೀಗುವ ಮಹಾಕವಿಗಳಿಗೆ ನನ್ನ ದೊಡ್ಡ ನಮಸ್ಕಾರ! ಬೇಕಾದರೆ ಇದನ್ನೂ ಸೇರಿಸಿಕೊಳ್ಳಿ :

ಆಮೇಲೆ ನಡೆಯುವುದೇ ಇನ್ನೂರೆಪ್ಪತ್ತು ದಿನ !
ನಾ ಕೈಕೊಟ್ಟಾಗ ನಿನ್ನ ಜೀವನ ಡಂಡಣಾ ಡಣ !

ಆಗಾಗ ಇದನ್ನೇ ಹೇಳುತ್ತಲೇ ಇದ್ದೇನೆ. ಹೌದೌದು ಅವರವರು ಅವರವರಿಗೆ ತೋಚಿದ್ದನ್ನು ಗೀಚುತ್ತಾರೆ-ಅದು ಅವರಿಷ್ಟ: ಕೇಳುವುದಕ್ಕೆ ನೀವ್ಯಾರು ಎನ್ನುವವರಿಗೆ ಉತ್ತರಿಸಲಾರೆ. ಅದಕ್ಕೆಂತಲೇ ಹಿಂದೆ ಹಲವು ಸಾರಿ.. ಸಾರಿ ಹೇಳಿದ್ದೇನೆ ಬರೆಯುವುದೆಲ್ಲಾ ಸಾಹಿತ್ಯವಾಗುವುದಿಲ್ಲಾ ಅಂತ. ಕಥೆಗಾರರಾದ ಶ್ರೀಯುತ ಎಸ್. ದಿವಾಕರರ ಕೂಡ ಮಾತನಾಡುತ್ತಾ ಇರುವಾಗ ಒಮ್ಮೆ ಕೇಳಿದ್ದೆ "ಯುವಪೀಳಿಗೆ ಎತ್ತೆತ್ತಲೋ ಸಾಗುತ್ತಿದೆ, ಈ ಬರಹಗಳು ಎಷ್ಟರಮಟ್ಟಿಗೆ ಬಾಳುತ್ತವೆ ? " ಎಂದು. ಅದಕ್ಕವರು ಹೇಳಿದರು " ಕಾರಂತ, ಬೇಂದ್ರೆ, ಕುವೆಂಪು, ಡಿವೀಜಿ ಇವರೆಲ್ಲಾ ಹೋಗಿ ಶತಮಾನಗಳೇ ಕಳೆದರೂ ಅವರುಗಳ ಕೃತಿಗಳು ಅವರನ್ನು ಇನ್ನೂ ಜೀವಂತವಾಗಿ ಇಡುತ್ತಿವೆ;ಇಡುತ್ತವೆ, ಆದರೆ ಸಮಕಾಲೀನರಾದ ಇನ್ನೂ ಹಲವರ ಹೆಸರುಗಳೇ ಯಾರಿಗೂ ಗೊತ್ತಾಗಿಲ್ಲ ಅದೇ ರೀತಿ ಉತ್ತಮ ಕೃತಿಗಳ ಜನಕರು ಸತ್ತರೂ ಬದುಕುತ್ತಾರೆ, ಕೆಟ್ಟ ಕೃತಿಗಳ ಲೇಖಕರು ಬದುಕಿದ್ದರೂ ಸತ್ತಿರುತ್ತಾರೆ" --ಅವರ ಈ ಮಾತು ನನಗೆ ಬಹಳ ಹಿಡಿಸಿತು. ಅಂತಹ ಉತ್ತಮ ಕೃತಿಗಳನ್ನು ಸಮಾಜಕ್ಕೆ ಕೊಟ್ಟ ಮಹಾನ್ ಮೇಧಾವಿಗಳಲ್ಲಿ ಡೀವೀಜಿ ಒಬ್ಬರಾಗಿದ್ದಾರೆ.

’ಮಂಕು ತಿಮ್ಮನ ಕಗ್ಗ’ ಮರುಳು ಮುನಿಯನ ಕಗ್ಗ’ ಕನ್ನಡ ಸಾಹಿತ್ಯಲೋಕದಲ್ಲಿ ಎಬ್ಬಿಸಿದ ಸಾತ್ವಿಕ ಸಾರಸ್ವತ ಅಲೆಗಳು ಇನ್ನೂ ಮತ್ತೂ ಆಗಾಗ ಎದ್ದೆದ್ದು ಬರುತ್ತಲೇ ಇರುತ್ತವೆ; ನರ್ತಿಸುತ್ತವೆ. ಕಾರಣವಿಷ್ಟೇ : ಬದುಕಿನ ಮೌಲ್ಯಗಳಿಗೆ ಅವು ಕೊಡಮಾಡುವ ಸಂದೇಶಗಳು ಅಪ್ರತಿಮವಾಗಿವೆ. ಸಾಸಿವೆಯಲ್ಲಿ ಸಾಗರದೋಪಾದಿಯ ಜ್ಞಾನವನ್ನು ತುಂಬಿಕೊಡಬಲ್ಲ ಶಕ್ತಿ ಅವುಗಳಿಗಿತ್ತು-ಇದೆ-ಇರುತ್ತದೆ. ಸಮಾಜದಲ್ಲಿ ಯಾರೇ ನೀತಿಬಾಹಿರ ಚಟುವಟಿಕೆಗಳಲ್ಲಿ ನಿರತರಾದಾಗ, ಬ್ರಷ್ಟಾಚಾರಿಗಳಾದಾಗ, ಅನ್ಯಾಯಿಗಳಾದಾಗ ಅವರುಗಳನ್ನು ತನ್ನ ಕೃತಿಗಳಿಂದ ತರಾಟೆಗೆ ತೆಗೆದುಕೊಂಡು ತಿದ್ದುವ ಜವಾಬ್ದಾರಿ ಲೇಖಕನದ್ದಾಗಿರುತ್ತದೆ. ಹರಿತವಾದ ಒಂದು ಖಡ್ಗಕ್ಕಿಂತ ಮೊನಚಾದ ಲೆಕ್ಕಣಿಕೆಯ ಬರಹ ಹೆಚ್ಚಿಗೆ ಘಾಸಿಗೊಳಿಸಬಲ್ಲ ಸಾಮರ್ಥ್ಯವುಳ್ಳದ್ದೆಂದು ಪ್ರಾಜ್ಞರು ತಿಳಿಸುತ್ತಾರೆ. ಸಮಾಜದ ಒಂದು ಮುಖವಾದ ಸ್ವೇಚ್ಛಾಚಾರ ಮತ್ತು ದುರಾಚಾರಗಳಲ್ಲಿ ನಿರತರಾದ ವ್ಯಕ್ತಿಗಳಿಗೆ ಪರೋಕ್ಷ ಸಂದೇಶ ರವಾನಿಸಿ ಸಮಾಜವನ್ನು ತಿದ್ದುವ ಘನಕಾರ್ಯವನ್ನು ಸಾಹಿತಿಗಳು ಮಾಡಿದರೆ ಅದು ಸಾರ್ಥಕವಾಗಿರುತ್ತದೆ. ಬರಿದೇ ಬಂಡಾಯ ಸಾಹಿತಿ, ಬುದ್ಧಿಜೀವಿ ಸಾಹಿತಿ ಎಂದೆಲ್ಲಾ ಕರೆಸಿಕೊಳ್ಳುವ ಅನೇಕರು ಲೇಖಕರ ಜಾತಿಯೇನೋ ಹೌದು; ಆದರೆ ಅವರುಗಳಿಂದ ಸಮಾಜಕ್ಕೆ ಆಘಾತವೇ ಹೊರತು ಪೈಸೆ ಉಪಕಾರವೂ ಆಗುವುದಿಲ್ಲ. ಸಾಹಿತಿಯೊಬ್ಬ ನಿಷ್ಪಕ್ಷಪಾತಿಯಾಗಿದ್ದು ಯಾವುದೇ ಸಕ್ರಿಯ ರಾಜಕಾರಣದಲ್ಲಿ ಭಾಗಿಯಾಗಿರಬಾರದು. ಹಿಂದಿನಕಾಲದಲ್ಲಿ ನ್ಯಾಯಾಧೀಶರು ಹೇಗೆ ಜನಸಾಮಾನ್ಯರೊಟ್ಟಿಗಾಗಲೀ ರಾಜಕಾರಣಿಗಳೊಟ್ಟಿಗಾಗಲೀ ಬೆರೆಯದೇ ಸನ್ಯಾಸಿಗಳ ಥರಾ ಸರ್ವಸಂಗ ಪರಿತ್ಯಾಗಿಯಾಗಿ ದೂರದಲ್ಲಿದ್ದು ನ್ಯಾಯಸ್ಥಾನಕ್ಕೆ ಆಗಮಿಸಿ ನ್ಯಾಯ ತೀರ್ಪನ್ನು ನೀಡುತ್ತಿದ್ದರೋ ಹಾಗೇ ಸಾಹಿತಿಯೂ ಕೂಡ ಸರ್ವಸಂಗ ಪರಿತ್ಯಾಗಿಯಾಗಿರಬೇಕು. ಇದನ್ನು ಸಾಧಿಸಿದವರು ನಮ್ಮ ಡೀವೀಜಿ.

ಅವರ ಕೃತಿಗಳು ಸ್ವಾನುಭವದಿಂದಲೂ ಲೋಕವನ್ನು ಗಮನಿಸಿ ತಿಳಿದ ಜ್ಞಾನದಿಂದಲೂ ಹೊರಹೊಮ್ಮಿದವಾಗಿವೆ. ಮುಳಬಾಗಿಲು ಕಡೆಯಿಂದ ಬೆಂಗಳೂರಿಗೆ ಓದುವ ಉದ್ದೇಶದಿಂದ ಬಂದ ಡೀವಿಜಿಗೆ ಯಾರ ಸಹಾಯವೂ ಇರಲಿಲ್ಲ. ಉದರಂಭರಣೆಗಾಗಿ ಅವರು ಮಾಡಿದ್ದು ಒಂದೇ ವೃತ್ತಿಯಲ್ಲ. ಕೇವಲ ಅಲ್ಪಕಾಲ ಅವರು ಅಧ್ಯಾಪನ ಮಾಡಿದ್ದು ಬಿಟ್ಟರೆ ಅವರ ಮುಕ್ಕಾಲು ಭಾಗದ ’ಲೋಕಧ್ಯಾಪನ’ ನಡೆದಿದ್ದು ಅವರ ಕೃತಿಗಳಿಂದಲೇ. ಬದುಕುಬಂಡಿಯನ್ನು ದೂಡುವ ಕೆಲವು ಕಾಲ ಅವರು ಕುದುರೆ ಜಟಕಾಬಂಡಿಗಳಿಗೆ ಬಣ್ಣ ಬಡಿಯುವ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದರು. ಆ ಅನುಭವದಲ್ಲೇ ಅವರು ಹೇಳಿದರು " ಬದುಕು ಜಟಕಾಬಂಡಿ ವಿಧಿಯದರ ಸಾಹೇಬ ......" ಎಂತಹ ಮಾತು ನೋಡಿ! ಬಡತನದಲ್ಲಿ ಹುಟ್ಟಿ, ಕಷ್ಟದಲ್ಲೇ ಬೆಳೆದು, ಹೇಗೆ ಹೇಗೋ ಡಿಪ್ಲೊಮಾ ಮುಗಿಸಿದ ಡೀವೀಜಿಯವರ ಅಗಾಧ ಪಾಂಡಿತ್ಯ ಎಲ್ಲರನ್ನೂ ನಿಬ್ಬೆರಗಾಗಿಸಿತ್ತು. ಸಂಸ್ಕೃತದಲ್ಲೂ ಸ್ವಯಂಭುವಾಗಿ ಮೇಲೆದ್ದ ಅವರು ಸ್ವಂತ ಓದಿನಿಂದ ಕಲಿತ ಪಾಠ ಲೋಕದ ಯಾವ ಪದವಿಗಳಿಗಿಂತ ದೊಡ್ಡದಾಗಿದೆ.

ನಂಗಂತೂ ಚಾರಣ, ಪರ್ವತಾರೋಹಣ, ಕವಿ-ಸಾಹಿತಿಗಳ ಒಡನಾಟ, ಅವರುಗಳ ಬದುಕಿನ ದಿನಚರಿ-ಕಾಲಘಟ್ಟಗಳಲ್ಲಿ ನಡೆದ ಘಟನೆಗಳು ಓದಲು ತುಂಬಾ ಹಿತಕರವಾಗಿರುತ್ತವೆ. ’ಶಿಖರಗಾಮಿಗಳು’ ಎಂಬ ಪುಸ್ತಕವೊಂದನ್ನು ಓದುವಾಗ ಮೈಯ್ಯೆಲ್ಲಾ ಮನಸ್ಸಾಗಿ ಒಂದೆರಡೇ ದಿನಗಳಲ್ಲಿ ಓದಿದ್ದೆ. ಆ ನಂತರ ಹಿಮಾಲಯದ ಪರ್ವತ ಶ್ರೇಣಿಗಳನ್ನೂ ಮೌಂಟ್ ಎವರೆಸ್ಟನ್ನೂ ನೋಡುವ ಆಸೆ ಬಹಳವಾಗಿತ್ತು,ಅದು ಈಗಲೂ ಹಾಗೇ ಇದೆ, ಹಾಗೇ ಕಾದಿರಿಸಿ ಸಮಯಕ್ಕಾಗಿ ಕಾದಿದ್ದೇನೆ; ದೇವರು ನಡೆಸಿದರೆ ಹೋಗಿ ಸ್ವಲ್ಪವಾದರೂ ನೋಡಿಬರೋಣ ಎಂದುಕೊಂಡಿದ್ದೇನೆ. ದಿವಂಗತ ತೇನಸಿಂಗ್‍ಗೆ ನಾವು ಕೆಲವರು ಪತ್ರ ಬರೆದಿದ್ದೆವು. ಅವರು ಪ್ರೀತಿಯಿಂದ ಅವರ ಛಾಯಾಚಿತ್ರವನ್ನು ಕಳುಹಿಸಿದ್ದರು. ಅದೇ ರೀತಿ ಉತ್ತಮ ಕವಿ೦-ಸಾಹಿತಿಗಳೂ ಕೂಡ ಸಾರಸ್ವತ ಶಿಖರಗಾಮಿಗಳಾಗಿರುತ್ತಾರೆ. ಅವರ ಜೀವನದ ಕೆಲವು ರಸಮಯ ಸನ್ನಿವೇಶಗಳನ್ನು. ಹಾಸ್ಯಪೂರಿತ ಮಾತಿನ ಚಟಾಕಿಗಳನ್ನು, ಜ್ವಲಂತ ಸಮಸ್ಯೆಗಳನ್ನು ಲಘುವಾಗಿ ಸ್ವೀಕರಿಸಿ ನಿವಾರಿಸಿಕೊಳ್ಳುವ ಜಾಣ್ಮೆಯನ್ನು, ಕೃತಿಗಳ ಮೂಲಕ ಭಗವಂತನನ್ನು ಕಾಣುವ ಹಪಾಹಪಿಯನ್ನು ತಿಳಿದುಕೊಳ್ಳುವ ಕುತೂಹಲ ಸಹಜವಾಗಿ ದ್ರವಿಸುತ್ತದೆ; ಕೆಲವೊಮ್ಮೆ ಚಿಕ್ಕ ಚಿಲುಮೆಯಾಗಿ, ಹಲವೊಮ್ಮೆ ಹರಿವ ತೊರೆಯಾಗಿ, ನದಿಯಾಗಿ, ಶರಧಿಯಾಗಿ ವಾಮನಗಾತ್ರಕ್ಕೆ ಬೆಳೆದು ನಿಲ್ಲುತ್ತದೆ! ಇಂತಹ ಆಸೆಗಳನ್ನು ಡೀವಿಜಿಯವರ ಕುರಿತು ಸಂಗ್ರಹಗೊಂಡ " ಬ್ರಹ್ಮಪುರಿಯ ಭಿಕ್ಷುಕ’ ತಣಿಸುತ್ತದೆ ಎಂಬುದರಲ್ಲಿ ಎರಡುಮಾತಿಲ್ಲ.

ಸ್ವತಃ ಕೋವಿದರೂ, ಶತಾವಧಾನ ಕಲಾವಿದರೂ ಆಗಿ ವಿದ್ವನ್ಮಣಿಗಳಾದ ಗಣೇಶ್ ಅವರ ಈ ಪ್ರಯತ್ನಕ್ಕೆ ನನ್ನದೊಂದು ಸಲಾಮು ಸಲ್ಲುತ್ತದೆ. ಈ ಲೋಕ ಬ್ರಹ್ಮನ ಸೃಷ್ಟಿ-ಬ್ರಹ್ಮಪುರಿ, ಇಲ್ಲಿರುವ ದಿನಪಡಿಯ ಜೀವಿ ಭಿಕ್ಷುಕ-ಬಹಳ ಗಹನವಾದ ಅರ್ಥದಲ್ಲಿ ಈ ಹೆಸರನ್ನು ಡೀವೀಜಿ ತಮಗೇ ಹೇಳಿಕೊಳ್ಳುತ್ತಿದ್ದರಂತೆ. ಸಾಹಿತಿಗಳಾದ ಹಾಮಾ ನಾಯಕರು ಒಮ್ಮೆ ಹೋದಾಗ ಅಂಗಡಿಯಿಂದ ಬಿಸಿಬಿಸಿ ಜಿಲೇಬಿ ತರಿಸಿ ತಿನ್ನುತ್ತಿದ್ದರಂತೆ ಡೀವೀಜಿ. " ಯಾಕೆ ಸಾರ್ ? ಡಾಕ್ಟರು ನಿಮಗೆ ಪಥ್ಯವನ್ನು ಹೇಳಿದ್ದಾರಲ್ಲವೇ ? " ಎಂದು ನಾಯಕರು ಕೇಳಿದರೆ " ನನ್ನ ದೇಹದಲ್ಲಿ ಎರಡು ಚಾನೆಲ್ ಇವೆಯಪ್ಪಾ. ಒಂದು ಕಾಯಿಲೆಗೆ ಮಾತ್ರೆ, ಕಹಿ ಔಷಧಿ, ನೋವಿನ ಚುಚ್ಚುಮದ್ದು ಇವನ್ನೆಲ್ಲಾ ತೆಗೆದುಕೊಳ್ಳುವಂಥದ್ದು, ಇನ್ನೊಂದು ಬಯಸಿದಾಗ ಬಿಸಿಬಿಸಿ ಬೋಂಡ, ಪಕೋಡ, ಬಜ್ಜಿ, ಸಿಹಿತಿನಿಸು ಸ್ವೀಕರಿಸುವಂಥದ್ದು. ಈ ಎರಡೂ ಬೇರೆ ಬೇರೆ ಅವುಗಳನ್ನು ಒಟ್ಟಿಗೆ ಸೇರಿಸಿಲಾಗದು " ಎಂದು ನಗುತ್ತಾ ನಾಯಕರಿಗೂ ಜಿಲೇಬಿ ತರಿಸಿಕೊಟ್ಟರಂತೆ. ಇನ್ನೊಮ್ಮೆ ವಿದ್ವಾನ್ ರಂಗನಾಥ ಶರ್ಮರು ಅವರ ಮನೆಗೆ ಹೋದಾಗ ಡೀವೀಜಿಯವರ ತಮ್ಮನ ಹೆಂಡತಿ ಬಿಸಿಬಿಸಿಯಾಗಿ ಹೀರೇಕಾಯಿ ಬೋಂಡ ಮಾಡಿ ತಟ್ಟೆಯಲ್ಲಿ ಹಾಕಿ ತಂದುಕೊಟ್ಟರಂತೆ, ಇನ್ನೊಂದು ತಟ್ಟೆಯಲ್ಲಿ ತರಹೇಳಿ ಅದನ್ನು ಡೀವೀಜಿ ಶರ್ಮರಿಗೆ ಕೊಟ್ಟರಂತೆ. ಮಿತಾಹಾರಿಗಳಾದ ಶರ್ಮರು ಒಂದೇ ಬೋಂಡ ತಿಂದು ಸಾಕು ಎಂದರಂತೆ. " ಪಂಡಿತರೇ ನಂಗೆ ಈವಿಷಯದಲ್ಲಿ ಸಂಕೋಚವಿಲ್ಲಾ " ಎಂದ ಡೀವಿಜಿ ಶರ್ಮರ ತಟ್ಟೆಯಲ್ಲಿರುವ ಬೋಂಡಗಳನ್ನೂ ತಾವೇ ತಿಂದರಂತೆ.

ಉತ್ತರ ಕರ್ನಾಟಕದ ಕಡೆ ಆದಿ ಕವಿಗಳ ಊರುಗಳನ್ನು ನೋಡಲು ತೆರಳಿದ್ದ ಡೀವೀಜಿ, ರನ್ನನ ಮುದುವೊಳಲು ಬಂದಾಗ ವಾಹನದಿಂದ ಕೆಳಗಿಳಿದು ಅಲ್ಲಿನ ಮಣ್ಣನ್ನು ತುಸು ತಲೆಯಮೇಲೆ ಹಾಕಿಕೊಂಡರಂತೆ. " ಯಾಕೆ ಸಾರ್ ? " ಎಂದು ಜೊತೆಗಾರರು ಕೇಳಿದಾಗ " ಇದು ರನ್ನನ ಜನ್ಮಸ್ಥಳ..ಅವನು ನಡೆದಾಡಿದ ಪುಣ್ಯಭೂಮಿ, ಈ ನೆಲದ ಮಣ್ಣೇ ನಮಗೆ ಮಂಗಳ ಸೇಸೆ "ಎಂದರಂತೆ. ಕವಿ ಕಲ್ಷ್ಮೀಶನ ಊರಿಗೆ ಹೋಗಿಬಂದ ಡೀವೀಜಿ ಮರಳುವಾಗ ಅಲ್ಲಿಂದ ಮುಷ್ಠಿಗಾತ್ರದ ಮೂರು ಕಲ್ಲುಗಳನ್ನು ತಂದು ತನ್ನ ಬರೆಯುವ ಮೇಜಿನಮೇಲೆ ಇಟ್ಟುಕೊಂಡಿದ್ದು ಪ್ರಾಜ್ಞರಾದ ಬೆಳಗೆರೆ ಕೃಷ್ಣಶಾಸ್ತ್ರಿಗಳು ಅವರಮನೆಗೆ ಬಂದಾಗ " ಲಕ್ಷ್ಮೀಶ ಈ ಕಲ್ಲುಗಳಲ್ಲಿ ಇನ್ನೂ ಜೀವಂತವಾಗಿ ಇದ್ದಾನೆ " ಎಂದು ತೋರಿಸಿದ್ದರಂತೆ!

ಹೀಗೇ ಅನೇಕ ಸ್ವಾರಸ್ಯಕರ ಘಟನೆಗಳ ಹಂದರ ’ಬ್ರಹ್ಮಪುರಿಯ ಭಿಕ್ಷುಕ.’ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಇದನ್ನು ಪ್ರಕಟಿಸಿ ಪುಣ್ಯ ಕಟ್ಟಿಕೊಂಡಿದೆ. ಆ ಪ್ರಕಾಶನದವರಿಗೂ ನನ್ನ ನಮನಗಳು. ಇಂತಹ ಪುಸ್ತಕಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬರಲಿ. ಕನ್ನಡ ಸಾರಸ್ವತಲೋಕ ತನ್ನ ಖಜಾನೆಯೊಳಗಿನ ವಜ್ರಗಳನ್ನು ಆಗಾಗ ಪ್ರದರ್ಶಿಸುತ್ತಲೇ ಇರಲಿ ಎಂದು ಹಾರೈಸುತ್ತಾ ನಿಮ್ಮಿಂದ ಬೀಳ್ಕೊಂಡು ಮತ್ತೆ ಬರೆಯುತ್ತೇನೆ ಎನ್ನುತ್ತಿದ್ದೇನೆ, ನಮಸ್ಕಾರ.

[ ಚಿತ್ರ ಕೃಪೆ : ಟುಡೇಸ್ ಕಗ್ಗ.ಬ್ಲಾಗ್ ಸ್ಪಾಟ್. ಕಾಂ ]