ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, July 17, 2010

ನಿನ್ನಯ ಬಲು ಹೇಳು ಮಾರುತಿಯನ್ನು ನಿರೀಕ್ಷಿಪೆನು.....ನಿನ್ನಯ ಬಲು ಹೇಳು ಮಾರುತಿಯನ್ನು ನಿರೀಕ್ಷಿಪೆನು.....

ಹೀಗಿರಬೇಕು ಜೀವನದಲ್ಲಿ ಉತ್ಸಾಹ ಎಂದರೆ, ಹೀಗಿರಬೇಕು ಲವಲವಿಕೆಯೆಂದರೆ ಹೀಗಿರಬೇಕು ಸ್ಪಿರಿಟ್ ಎಂದರೆ! ಇದು ಉತ್ಪ್ರೇಕ್ಷೆಯಲ್ಲ ಬದಲಾಗಿ ವಾಸ್ತವಿಕತೆ. ಬೇರೆ ಯಾವುದೇ ರಂಗದಲ್ಲಾದರೂ ೭೭ ವರ್ಷ ವಯಸ್ಸಾಗಿಬಿಟ್ಟರೆ ಆತ ಅತಿ ಮುದುಕನೆಂದು ಗುರುತಿಸಿ ಗೌರವಿಸಿ ನಿಧಾನಕ್ಕೆ ನಡೆತಂದು ವೇದಿಕೆಯಮೇಲೆ ಕುಳ್ಳಿರಿಸಿ, ಹಾರ ತುರಾಯಿ ಅರ್ಪಿಸಿ ಮತ್ತೆ ಹಾಗೇ ಕೈಹಿಡಿದುಕೊಂಡು ವೇದಿಕೆಯಿಂದ ಅವರ ಆಸನಕ್ಕೆ ಕರೆದೊಯ್ಯುವ ’ನಿಧಾನ ನಿಧಾನ ವಯಸ್ಸಾಯ್ತು’ ಎನ್ನುವ ಪ್ರಶ್ನೆ. ಆದರೆ ೭೭ ವಯಸ್ಸಿನ ವ್ಯಕ್ತಿಯೊಬ್ಬ ತೀರಾ ೨೦ರ ಎಳೆಯ ಹುಡುಗನನ್ನೂ ನಾಚಿಸುವಷ್ಟು ತಾಳಹಾಕಿ ಕುಣಿಯುತ್ತಾನೆಂದರೆ ಇದನ್ನು ನಂಬಬೇಕೋ ಬಿಡಬೇಕೋ ಹಲವರಿಗೆ ಇದೇ ಒಂದು ಸಮಸ್ಯೆ! ಪ್ರಾಯಶಃ ಯಾರ ಮನೆಯಲ್ಲೇ ಆಗಲಿ ನೋವಿಗೋ ಉಳುಕಿಗೋ ತೈಲವನ್ನು ಲೇಪಿಸಿ ಉಜ್ಜಿಕೊಳ್ಳುತ್ತ ಮಲಗಿ ಕಾಲಕಳೆಯುವ ಈ ಮುಪ್ಪಿನ ವಯಸ್ಸು ಈ ವ್ಯಕ್ತಿಗೆ ಮಾತ್ರ ಹೊಸ ಪ್ರಾಯವನ್ನು ಮರಲಿ ಕೊಟ್ಟಿದೆ, ಹೊಸ ಜೀವಕಳೆಯನ್ನು ಹೊರಹೊಮ್ಮಿಸಿದೆ-ಈ ಮೂಲಕ ಆಳಸಿಗಳಾಗಿ ಕುಳಿತ ಯುವಕರನೇಕರನ್ನು ಕರೆದು ಕುಣಿಸಿದೆ. ತನ್ನ ಹಾವ-ಭಾವ, ಅತಿ ವಿಷಿಷ್ಟ ಕುಣಿತ, ಕೊನೆಯ ಪ್ರೇಕ್ಷಕನೂ ನೋಡಬಹುದಾದ ಕಣ್ಣಿನ ಕಸರತ್ತು, ಒಂದೊಂದು ಹಾಡಿಗೂ ಹಲವು ಬಗೆಯ ಭಾವ-ಭಂಗಿಗಳ ಮಸಲತ್ತು, ಬಾಲ್ಯ-ಶೈಶವ-ಯೌವ್ವನ-ಮುಪ್ಪು-ಮರಣ ಎಲ್ಲವನ್ನೂ ಕಥೆಯ ಹಂದರಕ್ಕನುಗುಣವಾಗಿ ಕೇವಲ ಅಭಿನಯದಲ್ಲೇ ಹೇಳುವ ಅನೂಹ್ಯ ಹೊಸತನ, ವೇದಿಕೆಗೆ ಪ್ರವೇಶಿಸುತ್ತಿದ್ದಂತೆಯೇ ತರುವ ಮಿಂಚಿನ ಸಂಚಾರ- ಇವನ್ನೆಲ್ಲ ಹೇಳುತ್ತಿರುವುದು ಕರ್ನಾಟಕದ ಅಪ್ಪಟ ಹಾಗೂ ಸಮಗ್ರ ಕಲೆಯಾದ ಯಕ್ಷಗಾನದ ಅನಭಿಷಿಕ್ತ ಸಾಮ್ರಾಟ ಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬಗ್ಗೆ. ಒಮ್ಮೆ ನೋಡಿದರೆ ಮಗುದೊಮ್ಮೆ ನೋಡುವ, ಇನ್ನೊಮ್ಮೆ ಮತ್ತೊಮ್ಮೆ ಹಲವೊಮ್ಮೆ ನೋಡಬೇಕೆಂದು ಮನಸ್ಸು ಕಾಡುವ ಶ್ರೇಷ್ಠ ಅಭಿನಯ ಚಾತುರ್ಯ ನಮ್ಮ ಚಿಟ್ಟಾಣಿ ಅಜ್ಜನವರದು, ಛೆ ಛೆ ಹೀಗೆಂದರೆ ಅವರಿಗೆ ಕೋಪಬಂದೀತು ! ನಮ್ಮ ಚಿಟ್ಟಾಣಿಯವರದ್ದು.ಒಂದುಕಾಲದಲ್ಲಿ ಉತ್ತರಕನ್ನಡದ ಹೊನ್ನಾವರ ತಾಲೂಕಿನ ಭಾಸ್ಕೇರಿ ಎಂಬ ಊರಿನ ಭಾಗವಾದ ಚಿಟ್ಟಾಣಿ ಎಂಬ ಸಣ್ಣ ಕಿಷ್ಕಿಂಧೆಯಲ್ಲಿ ಜನಸಿ, ಯಕ್ಷಗಾನದ ಹಿಂದಿನ ತಲೆಮಾರಿನ ಅತಿರಥ ಮಹಾರಥರ ಪಾತ್ರಗಳನ್ನು ನೋಡಿ ಪ್ರಭಾವಿತನಾಗಿ, ಓದನ್ನು ತೊರೆದು ಗುಡ್ಡಗಳಲ್ಲಿ-ಬಯಲುಗಳಲ್ಲಿ ತಾನೇ ತಯಾರಿಸಿಕೊಂಡ ಹಳದಿ,ಕೆಂಪು,ಮಸಿ[ಅರಿಶಿನ,ಕುಂಕುಮ,ಕಪ್ಪು] ಬಣ್ಣಗಳನ್ನು ಬರೆದುಕೊಂಡು, ಹಿರಿಯರ ಕಣ್ತಪ್ಪಿಸಿ, ತನ್ನ ಹಾಗೂ ತನ್ನ ಓರಗೆಯ ಮಿತ್ರರ ಸಂತೋಷಕ್ಕಾಗಿ ಮನದಣಿಯೇ ಕುಣಿದ ಪೋರನೊಬ್ಬ ಈ ಮಟ್ಟಕ್ಕೆ ಬೆಳೆಯಬಲ್ಲ ಎಂದು ಯಾರೂ ಎಣಿಸಿರಲಿಲ್ಲ! ಹಿನ್ನೆಯಲ್ಲಿ ಅನುವಂಶಿಕವಾಗಿ ಯಾರೂ ಕಲಾರಂಗದಲ್ಲಿ ಇರದ, ಈ ಕಲೆಗೆ ಪೂರಕ ಪ್ರತಿಕ್ರಿಯೆ ಮನೆಯ ಸದಸ್ಯರಿಂದ ಸಿಗದ ಆ ಕಾಲದಲ್ಲಿ, ಮನೆಯ ಕಿತ್ತುತಿನ್ನುವ ಬಡತನ ಎಲ್ಲರನ್ನೂ ಆರ್ಥಿಕವಾಗಿ ದಿನಂಪ್ರತಿ ಬಡಿದುಕೂರಿಸುವ ಉತ್ಸಾಹರಹಿತ ಬದುಕಿನ ಆ ಕಾಲಘಟ್ಟದಲ್ಲಿ ಈ ಮಗು ಇದನ್ನು ಸಾಧಿಸಿದ್ದು, ಅದೇ ಮಗು ಈಗ ಅಜ್ಜನ ಸ್ಥಾನಕ್ಕೆ ಬಂದುನಿಂತಿದ್ದು, ಕನ್ನಡ ಸಿನಿಮಾ ರಂಗದ ರಾಜಕುಮಾರ್ ಇದ್ದಹಾಗೇ ಯಕ್ಷರಂಗದಲ್ಲಿ ತನ್ನನ್ನು ಮೀರಿಸದ ಸಾಧನೆಯನ್ನು ಗೈದಿದ್ದು, ಯಕ್ಷಗಾನವನ್ನು ನೋಡುವ,ಕೇಳುವ ಹುಚ್ಚಿದ್ದವರಿಗೆಲ್ಲ ಹೆಚ್ಚಿನ-ಮೆಚ್ಚಿನ ದೊಡ್ಡ ದೀಪಾವಳಿ ಹಬ್ಬ ಕೊಟ್ಟಿದ್ದು ಶ್ರೀಯುತರು ಪಡೆದ ಪುಣ್ಯ, ಯಕ್ಷರಂಗದ ಪ್ರೇಕ್ಷಕರೂ ಪಡೆದ ಭಾಗ್ಯ!

ಒಬ್ಬ ವ್ಯಕ್ತಿ ಶಕ್ತಿಯಾಗಿ ಬೆಳೆದರೆ, ಗುರುತರ ಪಾತ್ರ ನಿರ್ವಹಿಸಿದರೆ ಬಹುಶಃ ಅವನ ಶಕೆಯಿಂದ ಸುತ್ತಲ ಅನೇಕ ಜನ ಪ್ರಭಾವಿತರಾಗುವುದರೊಂದಿಗೆ ಹುಟ್ಟಿದ ಊರಿಗೂ ಕ್ಷೇತ್ರಕ್ಕೂ ಹೆಸರು ಸಿಗುತ್ತದೆ ಎಂಬುದು ಸುಳ್ಳಲ್ಲ-ಯಾಕೆಂದರೆ ಯಾರಿಗೂ ಅಷ್ಟಾಗಿ ಗೊತ್ತಿರದ ’ಚಿಟ್ಟಾಣಿ’ ಎಂಬ ಮಜರೆ [ಅತಿ ಚಿಕ್ಕ ಭೂ ಪ್ರದೇಶ] ಕೇವಲ ಈ ನಟನ ಹೆಸರ ಜೊತೆ ಪ್ರಾರಂಭದಲ್ಲಿ ಥಳುಕುಹಾಕಿಕೊಂಡು ಇಂದು ಚಿಟ್ಟಾಣಿ ಎಂದರೆ ಸಾಕು ಅದು ರಾಮಚಂದ್ರ ಹೆಗಡೆ ಎಂದೇ ಅರ್ಥಕೊಡುವಷ್ಟು ನಾಣ್ಯದ ಎರಡು ಮುಖವಾಗಿ ಬಿಟ್ಟಿವೆ ಈ ಹೆಸರುಗಳು.


ಯಕ್ಷಗಾನದ ಗಾಳಿ ಇಲ್ಲದವರಿಗೂ ಅವರ ಒಂದೇ ಕುಣಿತವನ್ನು ಒಮ್ಮೆ ತೋರಿಸಿದರೆ ಸಾಕು ಮತ್ತೆ ಅದನ್ನೇ ತೋರಿಸುವಂತೆ ಅಥವಾ ಎಲ್ಲಾದರೂ ಅವರ ಕಾರ್ಯಕ್ರಮವಿದ್ದರೆ ಮುಂಚಿತವಾಗಿ ತಿಳಿಸುವಂತೆ ಬುಲಾವುಬರುತ್ತದೆ!ಎಂತಹ ಗಾರುಡೀ ವಿದ್ಯೆ ನೋಡಿ! ಎಂತಹ ಮಾಂತ್ರಿಕತೆ ಅನ್ನಿ, ಆದರೂ ಇಂದಿನ ಈ ಸ್ಥಾನಕ್ಕೆ ಅವರೇರುವ ಹಿಂದಿನ ಆವರ ಅವಿರತ ಪ್ರಯತ್ನ, ಅವಿಶ್ರಾಂತ ದುಡಿಮೆ, ಒಳ್ಳೆಯ ನಟನಾಗಬೇಕೆಂಬ ಆ ಛಲ ಇಂದಿನ ನಮ್ಮೆಲ್ಲಾ ಗುರಿಸಾಧಕರಿಗೊಂದು ಬಲ-ಆದರ್ಶ.

ವಿದ್ಯೆ ಕಲಿಯಲಿಲ್ಲ, ಮಾತಿನ ಭಂಡವಾಳವಿಲ್ಲ, ಆರ್ಥಿಕ ಸಾಮರ್ಥ್ಯ ಅಂದಿಗಿರಲಿಲ್ಲ, ಆಟ ಮುಗಿಸಿ ಮನಗೆ ಮರಳುವಾಗ ಬೆಳೆಯುತ್ತಿರುವ ಸಂಸಾರಕ್ಕೆ ಬೇಕಲ್ಲ? ಅವರದೇ ಭಾಷೆಯಲ್ಲಿ ಹೇಳುವುದಾದರೆ .....ಹೂಹುಂ ? ಹೂಹುಂ ? ಎಲ್ಲಿದೆ ಬಹುಕಿನ ಬಂಡಿ ಎಳೆಯಲು ಬೇಕಾದ ಹಣ;ಆರ್ಥಿಕತೆ? ಆದರೂ ಇದನ್ನೇ ನಂಬಿಕೊಂಡು ಕೇವಲ ತನಗೆ ಮುಂದೊಂದು ದಿನ ಒಳ್ಳೆಯದಾದೀತೆಂಬ ಧೋರಣೆಯಿಂದ ಆ ಅಪ್ರತಿಮ ವಿಶ್ವಾಸದಿಂದ ಛಲದಂಕಮಲ್ಲನಾಗಿ ಎಡಬಿಡದೇ ಪಾತ್ರಗಳನ್ನು ಮಾಡಿದರು;ಅಷ್ಟಿಷ್ಟು ಲಭಿಸಿದ ಸಂಭಾವನೆಯನ್ನು ಉದರಂಭರಣೆಗೆ ಹೇಗೋ ಸಾಕಾಗುವಂತೆ ತೂಗಿಸಿಕೊಂಡರು.

ಕಾಲವೊಂದು ಬಂತು. ಅಲ್ಲಿ ಪ್ರದರ್ಶನ ಇದ್ದಲ್ಲಿ ಚಿಟ್ಟಾಣಿ ಇದ್ದರೆ ಮಾತ್ರ ಕಂತ್ರಾಟುದಾರರಿಗೆ ಗಂಟಿಗೆ ತೊಂದರೆಯಿಲ್ಲ ಎಂದೆನಿಸಿತು. ಅದು ಖಂಡಿತವೂ ಹೌದು. ಚಿಟ್ಟಾಣಿ ಮಾಡದ ಪಾತ್ರಗಳಿಲ್ಲ; ಕುಣಿಯದ ನೃತ್ಯ ಶೈಲಿಯಿಲ್ಲ! ಕೆಲವು ಯಕ್ಷಗಾನ ಪಾತ್ರಧಾರಿಗಳು ಯಾರು ಕುಣಿಯುತ್ತಾರೆ ಎಂಬ ದೃಷ್ಟಿಯಿಂದ ಅಲ್ಲಲ್ಲೇ ’ಕಳ್ಳಬೀಳುವ’ [ಕುಣಿತವನ್ನು ಸ್ವಲ್ಪವಷ್ಟೇ ಶಾಸ್ತ್ರಕ್ಕೆ ಮಾಡಿ ಮುಗಿಸುವ]ತರಗತಿಯವರಿದ್ದರು! ಆದರೆ ಆರೋಗ್ಯ ಸರಿಯಿರದಿದ್ದರೂ ಬಂದು ಕೊಟ್ಟಮಾತಿಗೆ ಕಟ್ಟುಬಿದ್ದು ತನ್ನನ್ನು ನಂಬಿ ಬಂದ ಅಭಿಮಾನೀ ಪ್ರೇಕ್ಷಕರನ್ನು ದಂಗುಬಡಿಸುವ ಚಾಕಚಕ್ಯತೆ ಮತ್ತು ಕುಣಿತದ ಹುಮ್ಮಸ್ಸು ಚಿಟ್ಟಾಣಿಯವರಲ್ಲಿತ್ತು;ಇದೆ. ಈ ಒಂದು ಗುಣವೇ ಅವರನ್ನು ಈ ರಂಗದಲ್ಲಿ ಮೇರುವ್ಯಕ್ತಿಯನ್ನಾಗಿ ಬೆಳೆಸಿತು ಅಂದರೆ ತಪ್ಪಲ್ಲ. ಮಾಗಧ, ಕಾರ್ತವೀರ್ಯ, ಕೌರವ, ದುಷ್ಟಬುದ್ಧಿ, ಕೀಚಕ, ಭಸ್ಮಾಸುರ ಹೀಗೆ ಹಲವು ಪ್ರಮುಖ ದುಷ್ಟಪಾತ್ರಗಳೂ ಸೇರಿದಂತೆ ಇನ್ನೂ ಅನೇಕ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ-ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದೊಂದು ಕಾಲ ಯಕ್ಷಲೋಕದ ಗಂಧರ್ವ ದಿ| ಕಾಳಿಂಗನಾವುಡರ ಭಾಗವತಿಕೆ ಮತ್ತು ದಿ| ದುರ್ಗಪ್ಪ ಗುಡಿಗಾರರ ಮದ್ದಳೆಗಳೊಂದಿಗೆ ಚಿಟ್ಟಾಣಿಯ ಪಾತ್ರ-ಅದೊಂದು ಧರೆಗಿಳಿದ ಇಂದ್ರನ ನಂದನವನ! ’ನೀಲಗಗನದೊಳು ಮೇಘಗಳಾ...ಕಂಡಾಗಲೆ......ನವಿಲು ಗೈಯ್ಯುತಿದೆ ಎಂಬ ಶೃಂಗಾರ ರಸದ ಹಾಡಿಗೆ ಸಖಿಯರೋಮ್ದಿಗೆ ವನವಿಹಾರದ ಸಂಭ್ರಮದಲ್ಲಿ ಮೆರೆಯುವ ಯಾವುದೇ ರಾಜಪಾತ್ರವಾಗಿರಲಿ ಅಲ್ಲಿ ಪ್ರೇಕ್ಷಕ ತನ್ನನ್ನೇ ಆ ಪಾತ್ರದಲ್ಲಿ ಸಮ್ಮಿಳಿಸಿಕೊಂಡು ಅನುಭವಿಸಿದ ಪರಿ ಇಂದಿಗೂ ಕಣ್ಕಟ್ಟುತ್ತದೆ! ಇಂದು ಆ ಕಂಚಿನ ಕಂಠದ ಕೋಗಿಲೆ ಮರದಿಂದ ಹಾರಿಹೋಗಿದೆಯಲ್ಲದೇ ಮೃದುಮಧುರ ಭಾವಗಳಿಗೆ ಜೀವಕೊಡುತ್ತಿದ್ದ ಮೃದಂಗ ಮಾಂತ್ರಿಕ ಗುಡಿಗಾರರೂ ದಿವಂಗತರಾಗಿದ್ದಾರೆ. ಈಗೇನಿದ್ದರೂ ಹೊಸ ಪೀಳಿಗೆಯ ಹಿಮ್ಮೇಳ ಕಲಾವಿದರು. ತನ್ನ ಕಲಾಜೀವನದಲ್ಲಿ ಅದೆಷ್ಟು ಭಾಗವತರನ್ನು, ಉಳಿದ ಹಿಮ್ಮೆಳ ಕಲಾವಿದರನ್ನು, ಸಹಕಲಾವಿದರನ್ನು ಕಂಡರೋ ಹೆಗಡೆಯವರನ್ನೇ ಕೇಳಬೇಕು. ಸರಿಸುಮಾರು ಮೂರು ತಲೆಮಾರಿನ ಕಲಾವಿದರು ಇವರೊಂದಿಗೆ ಪಾತ್ರಮಾಡಿದ್ದಾರೆ.

ನವರಸಗಳನ್ನೂ ತನ್ನ ಭಾವಾಭಿವ್ಯಕ್ತಿಯಿಂದ ಎದುರುಗಡೆ ಕೂತಿರುವ ಅತಿ ದಡ್ಡ ಪ್ರೇಕ್ಷಕನಿಗೂ ಗೊತ್ತಾಗುವಹಾಗೆ ಅಭಿನಯಿಸಿ ಮಿತ ಅರ್ಥದೊಂದಿಗೆ ಎಲ್ಲೂ ಏನೂ ಕಮ್ಮಿಯಾಗಿಲ್ಲ ಅನ್ನುವ ಹಾಗೇ ನಡೆಸಿಕೊಂಡುಹೋಗಬಲ್ಲ ಸ್ವಸಾಮರ್ಥ್ಯ ಶ್ರೀ ಚಿಟ್ಟಾಣಿಯವರಿಗೆ ಮಾತ್ರ ಇದೆ ಎಂದರೆ ತಪ್ಪಲ್ಲ. ರಾಜ್ಯಪ್ರಶಸ್ತಿಯೊಂದಿಗೆ ಅಸಂಖ್ಯ ಪ್ರಶಸ್ತಿ-ಫಲಕಗಳನ್ನು ತನ್ನದಾಗಿಸಿಕೊಂಡ ಚಿಟ್ಟಾಣಿಗೆ ಪ್ರಶಸ್ತಿಯ-ಗೌರವದ ಬೆನ್ನುಹತ್ತಿ ಹಿಡಿವ ಚಟವಿಲ್ಲ. ನವಿಲಿಗೆ ನರ್ತನ ಕೋಗಿಲೆಗೆ ಗಾಯನ ಹೇಗೆ ಸಹಜ ಪ್ರಕ್ರಿಯೆಯೋ ಚಿಟ್ಟಾಣಿಗೆ ಕುಣಿತವೇ ಸಹಜ ಪ್ರಕ್ರಿಯೆ. ಅಂತೆಯೇ ನವಿಲಿಗೆ ನಿನ್ನ ನರ್ತನ ಚೆನ್ನಾಗಿಲ್ಲವೆಂದೂ ಕೋಗಿಲೆಯಲ್ಲಿ ನಿನ್ನ ಗಾಯನ ಚೆನ್ನಾಗಿಲ್ಲವೆಂದೂ ಹೇಳಲು ಸಾಧ್ಯವೇ? ಹೀಗಾಗಿ ಬಹುಸಂಖ್ಯಾಕ ಪುರಸ್ಕಾರಗಳು ಅವರನ್ನು ಹುಡುಕಿ ಬಂದವು. ಈಗಲೇ ನೀವು ಸನ್ಮಾನ ಮಾಡಿ-ಮರುಕ್ಷಣ ಅದೇ ವೇದಿಕೆಯಲ್ಲಿ ತನ್ನೆಲ್ಲಾ ಕಸುವಿನಿಂದ ಯಾವುದೇ ಅಹಂಕಾರವಿಲ್ಲದೇ ಕುಣಿವ ನವಿಲು ಈ ಚಿಟ್ಟಾಣಿ!

ಈ ಕೆಳಗಿನ ಯೂಟ್ಯೂಬ್ ಕೊಂಡಿಯಲ್ಲಿ ಅದು ಒಮ್ಮೆ ಬಿಟ್ಟು ಬಿಟ್ಟು ಬಂದ ನಂತರ ರೀಪ್ಲೇ ಮಾಡಿ [ಪುನರ್ವೀಕ್ಷಿಸಿ] ಚಿಟ್ಟಾಣಿಯ ಕುಣಿತದ ಒಂದು ಝಲಕ್ ಅನುಭವಿಸಿ-
ಚಿಟ್ಟಾಣಿಯವರಿಗೂ ಹಿಮ್ಮೇಳದವರಿಗೂ ಹಾಗೂ ಯೂಟ್ಯೂಬ್ ಮೂಲಕ ನಮಗಿದನುಣಬಡಿಸಿದ ಗಜಾನನ ಎನ್ನುವವರಿಗೂ ಚಪ್ಪಾಳೆಯ ಬದಲಾಗಿ ಧನ್ಯವಾದಸಮರ್ಪಿಸೋಣವೇ?

ಮೂರು ಗಂಡು ಮಕ್ಕಳಲ್ಲಿ ಇಬ್ಬರು ಯಕ್ಷಗಾನ ಕಲಿತಿದ್ದಾರೆ. ಹಿರಿಯ ಮಗ ಸುಬ್ರಹ್ಮಣ್ಯ ಚಿಟ್ಟಾಣಿ ಕುಣಿತ ಮತ್ತು ಅರ್ಥಗಾರಿಕೆ ಎರಡನ್ನೂ ಮೇಳೈಸಿಕೊಂಡು ಹೊಸತನವನ್ನು ಮೆರೆದಿದ್ದರೆ, ಇನ್ನೊಬ್ಬ ಮಗ ನರಸಿಂಹ ಚಿಟ್ಟಾಣಿ ಅಪ್ಪನ ರೀತಿಯಲ್ಲೇ ಕುಣಿತವನ್ನಷ್ಟೇ ಮಾಡುತ್ತಾರೆ. ಮಗಳೊಬ್ಬಳಿದ್ದು ಮದುವೆಯಾಗಿ ಸುಖದಿಂದಿದ್ದಾರೆ. ಹೀಗೇ ಈಗ ಸುಖೀಕುಟುಂಬದ ಸಾಹಸಸಿಂಹ ಚಿಟ್ಟಾಣಿ ಎಂದರೆ ಅದು ಸಮಂಜಸವೇ ಸರಿ. ಗೇರುಸೊಪ್ಪೆಯ ಹತ್ತಿರದಲ್ಲಿ ಜಮೀನು ಖರೀದಿಸಿ ಅಲ್ಲಿ ಮನೆಮಾಡಿ ನೆಲೆನಿಂತ ಚಿಟ್ಟಾಣಿ ಶತಾಯುಷ್ಯವನ್ನೂ ಮೀರಿ ಬದುಕಿಬಾಳಿ ಇನ್ನೂ ಹಲವುಕಾಲ ಇದೇ ಉತ್ಸಾಹದಲ್ಲಿ ಯುವ ಪೀಳಿಗೆಗೆ ತನ್ನ ಪಾತ್ರ ಪ್ರದರ್ಶಿಸಲಿ ಎಂದು ನಾವೆಲ್ಲ ಹಾರೈಸೋಣವೇ?