ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, January 23, 2012

ಖಾಲೀ ಕೊಡವಾದರೂ ಪರವಾಗಿಲ್ಲ ಭಾಗಶಃ ತುಂಬಿದ ಕೊಡವಾಗಬೇಡಿ!


ಖಾಲೀ ಕೊಡವಾದರೂ ಪರವಾಗಿಲ್ಲ ಭಾಗಶಃ ತುಂಬಿದ ಕೊಡವಾಗಬೇಡಿ!

ಲಜ್ಜೆಗೇಡಿಗಳಿಗೆ ಮತ್ತೊಂದು ಹೆಸರು ಮಹಾತ್ಮರನ್ನು ದೂಷಿಸುವವರು ಎಂದೂ ಆಗಬಹುದು. ಈಗಿನ ಪತ್ರಿಕೆಗಳನ್ನು ನೋಡಿದರೆ ಮತ್ತು ಅದರಲ್ಲಿ ಬರೆಯುವ ಕೆಲವರನ್ನು ನೋಡಿದರೆ ವಿಷಯದ ವಿವೇಚನೆ ಇಲ್ಲದೇ ಕೇವಲ ಏಕಮುಖದಿಂದ ಬರೆಯುವುದು ಕಾಣುತ್ತದೆ. ಆಳವಾದ ಅಧ್ಯಯನದ ಕೊರತೆ ಒಂದು ಕಡೆಗಾದರೆ ವಿವಾದದಿಂದ ಓದುಗರನ್ನು ತನ್ನತ್ತ ಸೆಳೆಯುವ ತಂತ್ರಕೂಡ ಇದಾಗಿದೆ ಎಂಬುದು ಯಾರಿಗಾದರೂ ತೋರಿಬರುವ ಸಂಗತಿ. ಹಿಂದಕ್ಕೆ ಪತ್ರಿಕೆಗಳ ಮತ್ತು ಮಾಧ್ಯಮ ವಾಹಿನಿಗಳ ಸಂಖ್ಯೆ ಕಮ್ಮಿ ಇದ್ದಾಗ ವರದಿಗಾರರು ಅಲ್ಲಿಲ್ಲಿ ಏನನ್ನಾದರೂ ಹೆಕ್ಕಿ ತರುತ್ತಿದ್ದರು. ಇವತ್ತು ಅವುಗಳ ಸಂಖ್ಯೆ ಜಾಸ್ತಿಯಾಗಿ ’ಹುಲ್ಲುಗಾವಲು’ ಬರಿದಾಗಿದೆ, ಬಾವಿಯಲ್ಲಿ ನೀರಿನ ಸೆಲೆ ಕಮ್ಮಿ ಇದೆ-ಮೊದಲು ಹೋದವರಿಗೆ ಆದ್ಯತೆ ಇರುತ್ತದೆ. ಆದಗ್ಯೂ ಬಡಿದಾಡಿಕೊಂಡು ತಮ್ಮದೇ ಎಕ್ಸ್‍ಕ್ಲೂಸಿವ್ ವರದಿ ಎಂದು ಬೋರ್ಡು ಹಾಕಿಕೊಂಡು ಬಿತ್ತರಿಸುವ ಪತ್ರಿಕೆಗಳು/ವಾಹಿನಿಗಳು ಇನ್ನೊಂಡೆಡೆ ಅದೇ ವಿಷಯ ಪ್ರಸ್ತಾಪವಾಗುತ್ತಿರುವುದನ್ನು ಓದುಗರು/ವೀಕ್ಷಕರು ತಿಳಿದಿಲ್ಲ/ಕಂಡಿಲ್ಲ ಎಂದು ಹೀಗೆ ಗೂಬೆ ಕೂರಿಸುವ ಕೆಲಸ ತಪ್ಪು. ಕೆಲವು ಕಾಯಂ ಬರಹಗಾರರಿಗೆ ಕೆಲವು ವಾರಗಳಲ್ಲಿ ವಿಷಯವೇ ಇರುವುದಿಲ್ಲ! ಆಗೇನು ಮಾಡುವುದು? ಮಹಾತ್ಮರ ಚರಿತ್ರೆಗಳನ್ನೂ ಕೆದಕಿ ಅಲ್ಲಿನ ಚಿಕ್ಕ ವಿಷಯಗಳನ್ನು ’ಇಲಿ’ ಬದಲಿಗೆ ’ಹುಲಿ’ ಮಾಡಿ ಹೇಳುವುದು ಅವರ ಕರ್ಮ! ಸಸಾರ ನೋಡಿ ಕೇವಲ ಒಂದಕ್ಷರದ ಬದಲಾವಣೆ-ಅಲ್ಲೂ ಕೂಡ ಅಷ್ಟೇ ಕೇವಲ ದೂಷಣೆ, ಜನರಿಗೆ ಗೊತ್ತಿಲ್ಲದ ವಿಷಯಗಳನ್ನು ತಾನು ಆಕರಗಳ ಆಳದಿಂದ ಎತ್ತಿ ಹೇಳುತ್ತಿದ್ದೇನೆ ಎಂಬ ಹಮ್ಮು-ಬಿಮ್ಮು.

ದಿನಪತ್ರಿಕೆಯೊಂದರಲ್ಲಿ ಕೆಲದಿನಗಳ ಹಿಂದೆ ವಿವೇಕಾನಂದರ ಬಗ್ಗೆ ಒಬ್ಬರು ಬರೆದಿದ್ದಾರೆ. ಪಾಪ ಅವರಿಗೆ ಅಷ್ಟಾಗಿ ವಿವೇಕ ಜಾಗ್ರತಗೊಳ್ಳಲಿಲ್ಲ ಎನಿಸುತ್ತದೆ. ನನ್ನ ಗೆಳೆಯರ ಬಳಗದಲ್ಲಿ ಅವರೂ ಇದ್ದಾರೆ, ಹಾಗಂತ ಸ್ನೇಹಿತರೋ ಮನೆಯವರೋ ತಪ್ಪು ಮಾಡಿದರೆ ಅದನ್ನು ಒಪ್ಪುವ ಜಾಯಮಾನ ನನ್ನದಲ್ಲವಲ್ಲಾ! ನದೀಮೂಲ ಋಷಿ ಮೂಲ ಮತ್ತು ಸ್ತ್ರೀ ಮೂಲಗಳನ್ನು ಕೆದಕಬಾರದು ಎಂದು ಹಿಂದೆಯೇ ಶಾಸ್ತ್ರಕಾರರು ಬರೆದಿದ್ದಾರೆ. ಅಲ್ಲಿ ನಮಗೆ ಬೇಡದ ವಿಷಯಗಳೂ ಇರಬಹುದು. ಹಂಸಕ್ಷೀರ ನ್ಯಾಯದಂತೇ ಕೇವಲ ಬೇಕಾದ್ದನ್ನು ಪಡೆದು ಬೇಡದ್ದನ್ನು ಬಿಡುವ ಚಾಕಚಕ್ಯತೆ ನಮ್ಮಲ್ಲಿರಬೇಕು. ಅದಕ್ಕೆಂತಲೇ ಭಗವಂತ ನಮಗೆ ’ತಲೆ’ ಕೊಟ್ಟಿದ್ದಾನೆ. ನಾವೆಲ್ಲಾ ಶಾಲೆಗೆ ಹೋಗುವಾಗ ಓದಿದ್ದನ್ನು ಮರೆತು ಏನೇನೋ ತಪ್ಪು ಉತ್ತರಗಳನ್ನು ಹೇಳಿದರೆ ಮಾಸ್ತರು " ತಲೆಯಲ್ಲಿ ಏನಿದೆಯಪ್ಪಾ ಕೊಳೆತ ಬಟಾಟೆ ಇದ್ಯೋ ಅಥವಾ ಕೊಳೆತ ಉಳ್ಳಾಗಡ್ಡೆ[ಈರುಳ್ಳಿ]ನೋ ? " ಎನ್ನುತ್ತಿದ್ದರು. ಬರಹಗಾರರ ತಲೆಯಲ್ಲಿ ಇವತ್ತು ಏನಿದೆ ಎಂದು ಅವರೇ ಕೇಳಿಕೊಳ್ಳಬೇಕಾಗಿದೆ. ನಿನ್ನೆ ಒಬ್ಬರು ರಾಂಟ್ RANT ಶಬ್ದ ಬಳಸಿದ್ದರು. ಹಾಗೆಂದರೆ ನಾವೆಲ್ ಎಂದೂ ಅಥವಾ ವಾಂತಿಯೆಂದೂ ಅರ್ಥವಾಗುತ್ತದೆ. ನಿಮಗೆ ಹೇಗೇ ಬೇಕೋ ಹಾಗೆ ಅರ್ಥಮಾಡಿಕೊಳ್ಳಬಹುದು! ಚೆನ್ನಾಗಿದ್ದರೆ ನಾವೆಲ್ ಎನಿಸಿ ಮರು ಮರು ಮುದ್ರಣ ಕಾಣಬಹುದಾದ ಕೃತಿ ಓದಲಾಗದ ರೀತಿ ಇದ್ದರೆ ಅದನು ರಾಂಟ್ ಎನ್ನಬಹುದಾಗಿದೆ. ಅಂತಹ ರಾಂಟ್‍ಗಳ ಸಾಲಿಗೆ ತನ್ನ ಬರಹ ಇನ್ನೊಂದು ಸೇರ್ಪಡೆಯೇ ಎಂಬ ತಜ್ಜನಿತ[ಅಲ್ಲಲ್ಲೇ ಹುಟ್ಟಿದ] ಆತ್ಮಾವಲೋಕನ ಕ್ರಿಯೆ ಬರಹಗಾರನಿಗೆ ಇದ್ದರೆ ಬರಹಗಾರ ಗೆಲ್ಲಬಹುದು, ಅಥವಾ ಆಕ್ಷಣಕ್ಕೆ ಬರಹಗಾರ ಕಿಸೆ ಭರ್ತಿಮಾಡಿಕೊಳ್ಳಬಹುದೇ ಹೊರತು ಅದು ಪರೋಕ್ಷ ಸಮಾಜದ ದಾರಿತಪ್ಪಿಸಿದ ನಯವಂಚಕ ಮಾರ್ಗದಿಂದ ಬಂದ ಹಣ ಎನಿಸಿಕೊಳ್ಳುತ್ತದೆ!

ಯಾವುದೇ ವಿಷಯವಸ್ತುವನ್ನು ವಿಶ್ಲೇಷಿಸುವಾಗ ನಮಗೆ ಅದರಲ್ಲಿ ಪ್ರೌಢಿಮೆ ಇದೆಯೇ ಎಂಬುದು ಪ್ರಮುಖವಾಗಿ ನೋಡಬೇಕಾದ ಅಂಶ. ವಿವೇಕಾನಂದರ ಒಂದು ಪುಸ್ತಕವನ್ನೂ ಸರಿಯಾಗಿ ಓದದ ವ್ಯಕ್ತಿ ವಿವೇಕಾನಂದರ ಕುರಿತು ಬರೆಯುವುದು ಹೇಗೆ? ಹಿರಿಯ ಮಿತ್ರರಾದ ಶ್ರೀ ಆರ್. ಗಣೇಶರ ಪುಸ್ತಕವೊಂದರ ಕುರಿತು ನಾನು ಬರೆಯುವಾಗ ಅವರು ನನಗೆ ಹೇಳಿದ್ದಿಷ್ಟು : " ಭಟ್ಟರೇ, ಪುಸ್ತಕವನ್ನು ಓದದೇ ಅದರ ಬಗ್ಗೆ ವಿಶ್ಲೇಷಿಸುವುದು ಸರ್ವದಾ ತಪ್ಪು. ಅದು ನಾನೇ ಬರೆದದ್ದಿರಲಿ ಮತ್ತೊಬ್ಬ ಬರೆದಿದ್ದಿರಲಿ." ಎಂತಹ ಔಚಿತ್ಯಪೂರ್ಣ ಮಾತು. ಹಾಗಂತ ನಾನೊಬ್ಬ ವಿಮರ್ಶಕನೆಂಬ ಬೋರ್ಡು ಹಾಕಿಕೊಂಡವನಲ್ಲ. ಮಾಧ್ಯಮಗಳ ಕಛೇರಿಯಲ್ಲಿ ಕುರ್ಚಿ ಅಲಂಕರಿಸಿಲ್ಲ. ಆದರೂ ಅವರು ನನ್ನಲ್ಲಿ ಹೇಳಿದ್ದು ಹಾಗೆ. ಪ್ರಾಯಶಃ ’ತುಂಬಿದ ಕೊಡ ತುಳುಕಿವುದಿಲ್ಲ’ ಎಂದಿದ್ದು ಗಣೇಶ್ ರಂಥವರನ್ನು ನೋಡಿಯೇ ಇರಬೇಕು. ತುಂಬಿದ ಕೊಡವೊಂದೇ ಅಲ್ಲ, ಖಾಲೀ ಕೊಡವೂ ತುಳುಕುವುದಿಲ್ಲ ಎಂಬ ಇಂದಿನ ಹುಡುಗಾಟಿಕೆಯ ಉತ್ತರವನ್ನು ಮೊದಲಾಗಿಯೇ ಪರಿವೀಕ್ಷಿಸಿ ಅದಕ್ಕೂ ಹೇಳಿಬಿಡುತ್ತಿದ್ದೇನೆ: ಖಾಲೀ ಕೊಡವಾದರೂ ಪರವಾಗಿಲ್ಲ, ಭಾಗಶಃ ತುಂಬಿದ ಕೊಡ ಮಾತ್ರ ಆಗಬೇಡಿ! ಗೊತ್ತಿಲ್ಲದ ವಿಷಯಗಳಲ್ಲಿ ಮೂಗು ತೂರಿಸಿ ಬರೆಯಬೇಡಿ ಎಂಬುದು ಆ ಮಿತ್ರರಿಗೆ ನನ್ನ ಸಲಹೆ. ಈಗ ನೀವೆಲ್ಲಾ ಓದುತ್ತಿರುವಂತೇಯೇ ಅವರೂ ಇದನ್ನು ಓದುತ್ತಿರಬಹುದು, ಅವರ ಪಾಡಿಗೆ ಅವರಿಗೆ ಜ್ಞಾನೋದಯವಾಗಬಹುದು ಎಂದುಕೊಳ್ಳುತ್ತೇನೆ.

ವಿವೇಕಾನಂದರು ಹುಟ್ಟಾ ಬ್ರಾಹ್ಮಣ ಜಾತಿಯವರಲ್ಲ. ಹಿಂದೂ ಸಂಪ್ರದಾಯವನ್ನು ಮುರಿದು ಸನ್ಯಾಸ ಸ್ವೀಕರಿಸಿದರು, ಅವರಿಗೆ ಒಂದಲ್ಲಾ ಎರಡಲ್ಲಾ ಮೂವತ್ತೊಂದು ಕಾಯಿಲೆಗಳಿದ್ದವು, ಅವರು ಮಾಂಸಾಹಾರಿಯಾಗಿದ್ದರು, ಅವರಿಗೆ ಎಳವೆಯಲ್ಲೇ ಮುಪ್ಪು ಆವರಿಸಿತ್ತು, ಯಾರಾದರೂ ಮೈಯ್ಯನ್ನು ಮುಟ್ಟಿದರೂ ನೋವು ಎನ್ನುತ್ತಿದ್ದರು, ಕೂದಲು ಪ್ರಾಯದಲ್ಲೇ ಹಣ್ಣಾಗಿತ್ತು. ಸನ್ಯಾಸಿಯಾಗಿಯೂ ಅವರು ಮ್ಲೇಚ್ಛರ ಮನೆಯಲ್ಲಿ ಊಟಮಾಡುತ್ತಿದ್ದರು, ಏಸು ಬದುಕಿದ್ದರೆ ಅವನ ಪಾದವನ್ನು ಕಣ್ಣಹನಿಯಿಂದಲ್ಲ ಹೃದಯದ ರಕ್ತದಿಂದ ತೊಳೆಯುತ್ತಿದ್ದೆ ಎಂದ ಹಿಂದೂ ವಿರೋಧಿಗಳು -ಮುಂತಾಗಿ ಸಿಕ್ಕ ಸಿಕ್ಕ ಹಾಗೇ ಹಲುಬಿದ್ದಾರೆ ಅವರ ಅಂಕಣದಲ್ಲಿ. ಸ್ವಾಮೀ ವಿವೇಕಾನಂದರು ಅವರ ಶರೀರಧರ್ಮಕ್ಕೆ ತಕ್ಕಂತೇ ಏನನ್ನೋ ಮಾಡಿರಲಿ ಆದರೆ ಅವರು ಕೊಟ್ಟ ಸುದೀರ್ಘ ಪ್ರಬಂಧಗಳಲ್ಲಿ ಒಂದನ್ನಾದರೂ ನೀವು ಓದಿ ಅರ್ಥೈಸಿಕೊಂಡಿರೇ? ಖಂಡಿತಾ ಇಲ್ಲ! ನೀವು ಓದಿದ್ದು ಎರಡೇ ವಾಕ್ಯ. ಮೊದಲನೆಯದು " ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖನ ಸಂಖ್ಯೆ ಕಡಿಮೆಯಾದೀತು" ಇನ್ನೊಂದು " ಎದ್ದೇಳಿ ಯುವಕರೇ ಭಾರತದ ಕಲಿಗಳೇ ಏಳಿ ಎಚ್ಚರಗೊಳ್ಳಿ" ಇವೆರಡು ವಾಕ್ಯಗಳಲ್ಲೇ ಮೊದಲನೇ ವಾಕ್ಯ ನಿಮಗೆ ರುಚಿಸಲಿಲ್ಲ, ಎರಡನೆಯದು ಜೀರ್ಣವಾಗಲಿಲ್ಲ! ಹೀಗಿರುವಾಗ ವಿವೇಕಾನಂದರ ಬಗ್ಗೆ ಯಾರೋ ವಿದೇಶೀ ಮಹಿಳೆ ಬರೆದಿದ್ದಳು ಎಂದೆಲ್ಲಾ ಆಧಾರ ಕೊಡುತ್ತಾ ಇಲ್ಲಸಲ್ಲದ್ದನ್ನು ನೀವು ಬರೆದಿದ್ದು ನೋಡಿದರೆ ನೀವು ’ಜ್ಞಾನದ ಆಗರ’ ಎಂಬುದು ಸಾಬೀತಾದ ವಿಷಯದಂತೇ ಕಾಣುತ್ತದೆ! ಸಂಶಯವಿಲ್ಲ.

ಬಹಳ ಹಿಂದೆಯೇ ನಾನು ಬರೆದಿದ್ದೆ, ಬರಹಗಾರರಲ್ಲಿ ಎರಡು ವಿಧ. ಹೊಟ್ಟೆಪಾಡಿನ ಬರಹಗಾರರು ಮತ್ತು ಉತ್ತಮ ಬರಹಗಾರರು ಎಂದು ಮೊದಲನೆಯವರು ಪತ್ರಿಕೆಗಳಲ್ಲೋ ಮಾಧ್ಯಮಗಳಲ್ಲೋ ಕೂತು ’ಜಾಗ ತುಂಬಿಸುವ’ ಕೆಲಸ ಮಾಡಿಕೊಡುತ್ತಾರೆ. ಎರಡನೇ ವರ್ಗದವರು ಸಮಾಜಮುಖಿಗಳಾಗಿ ಅಲ್ಲಲ್ಲಿ ಅಲ್ಲಲ್ಲಿ ತಮ್ಮ ಬರಹಗಳನ್ನು ಪ್ರಕಟಿಸುತ್ತಾ ಆಗಬೇಕಾದ ಕೆಲಸಕ್ಕೆ ಸಂದೇಶ ರವಾನೆ ಮಾಡುತ್ತಿರುತ್ತಾರೆ. ಸದ್ರೀ ಲೇಖಕರು ಮೊದಲನೆಯ ಗುಂಪಿಗೆ ಸೇರಿದವರಾಗಿದ್ದು ಈ ಲೇಖನವನ್ನೋದುತ್ತಿದ್ದಂತೆಯೇ ಅವರ ಚೇಲಾಗಳು ಫ್ಯಾನುಗಳು ವಿಚಿತ್ರ ಕಾಮೆಂಟುಗಳನ್ನು ಹಾಕುವುದು ನಿರೀಕ್ಷಿತವೇ. ಅದಕ್ಕೆಲ್ಲಾ ಹೆದರಿ ಬರೆಯದೇ ಇರುವ ವ್ಯಕಿ ನಾನಂತೂ ಅಲ್ಲ. ’ದಿನೇಶ’ನ ಕಿರಣ ಮೈಮೇಲೆ ಬಿದ್ದಾಗಿನಿಂದ ಆ ಸೂರ್ಯನ ಹೆಸರನ್ನು ಹಾಳುಗೆಡಹುವ ಜನರನ್ನು ಕಂಡರೆ ನನಗೆ ಎಲ್ಲಿಲ್ಲದ ಕೋಪ ಬರುತ್ತದೆ.

ಕಸದಿಂದ ರಸ ಎಂಬುದಕ್ಕೆ ಗೋವು ಸಾಕ್ಷಾತ್ ಉದಾಹರಣೆ. ಕಸವನ್ನೇ ತಿಂದು ಅಮೃತತುಲ್ಯ ’ಹಾಲು’ ಎಂಬ ರಸವನ್ನು ಅದು ಕೊಡುವುದರಿಂದ ಹೀಗೆ ಹೇಳುತ್ತಿದ್ದೇನೆ. ಗೋವಿನ ಕೆಚ್ಚಲಲ್ಲಿ ರಕ್ತವನ್ನು ಬಯಸುವ ಕೆಲಜನ ಅದು ಹಾಲು ಕೊಡುತ್ತಿರುವುದಕ್ಕೆ ಅದನ್ನೇ ಬೈಯ್ಯುತ್ತಾರೆ. ಸಂತ-ಮಹಂತರು ಗೋವಿನ ಹಾಗೇ ಇರುತ್ತಾರೆ. ವಿವೇಕಾನಂದರೂ ಇದಕ್ಕೆ ಹೊರತಾಗಿರಲಿಲ್ಲ. ತಮ್ಮಲ್ಲಿನ ದೌರ್ಬಲ್ಯಗಳನ್ನು ಅವರು ರಾಮಕೃಷ್ಣರಲ್ಲಿ ಹೇಳಿಕೊಂಡರು. ಆಹಾರ ಅವರ ಜನ್ಮಮೂಲದಿಂದ ಬಂದಿದ್ದಾದ್ದರಿಂದ ಕೆಲ ಮಟ್ಟಿಗೆ ಅವರು ಮಾಂಸಾಹಾರವನ್ನು ಭುಂಜಿಸಿರಬಹುದು. ನಮ್ಮ ಅವತಾರಗಳಲ್ಲಿ ರಾಮ, ಕೃಷ್ಣ ಇವರೆಲ್ಲಾ ಮಾಂಸಾಹಾರಿಗಳೇ ಆಗಿದ್ದರು ಸ್ವಾಮೀ. ಆದರೆ ನಾವು ಅವರನ್ನು ದೇವರೆಂದು ಪೂಜಿಸುತ್ತಿಲ್ಲವೇ? ಭಗವಂತ ಅವರಾಗಿ ಅವತಾರ ಎತ್ತಲಿಲ್ಲವೇ? ಇನ್ನು ನನಗೆ ಪರೋಕ್ಷವಾಗಿ ವೇದವನ್ನು ಓದಲು ಪ್ರೇರೇಪಿಸಿದವರು ಮಹರ್ಷಿ ಮಹೇಶ್ ಯೋಗಿ ! ಅವರ ಪಾಠಶಾಲೆಯಲ್ಲೇ ನಾನು ಪ್ರಥಮವಾಗಿ ಕಲಿತಿದ್ದು. ತಿಂಗಳಿಗೆ ಹನ್ನೊಂದು ರೂಪಾಯಿ ಕೊಟ್ಟು ಕಲಿಸಿದರು ಆ ಮಹಾತ್ಮ! ಜನ್ಮ ಮೂಲದಿಂದ ಮಹೇಶ್ ಯೋಗಿ ಬ್ರಾಹ್ಮಣ ಕುಲದವರಲ್ಲಾ ಸ್ವಾಮೀ! ಅವರು ಯಾರು ಎಂಬುದು ಮುಖ್ಯವಲ್ಲ- ಅವರ ಕೊಡುಗೆ ಮುಖ್ಯ. ವಿರಾಗಿಯಾಗಿ, ಸನ್ಯಾಸಿಯಾಗಿ ಮಹೇಶ್ ಯೋಗಿ ಸಾಧನೆಮಾಡಿ ಸ್ವಿಟ್ಜರ್ಲ್ಯಾಂಡ್ ನಲ್ಲಿ ಅನೇಕವರ್ಷಗಳ ಕಾಲ ಧರ್ಮದ ಪುನರುತ್ಥಾನ ಕ್ರಿಯೆಯನ್ನು ನಡೆಸಿದರು. ಇವತ್ತಿಗೂ ಅವರು ಗುರುವೆಂಬ ಭಾವ ನನ್ನಲ್ಲಿದೆ. ಮಹರ್ಷಿ ವಾಲ್ಮೀಕಿ ಒಬ್ಬ ಬೇಡನಾಗಿದ್ದರು. ಮಹರ್ಷಿ ವಿಶ್ವಾಮಿತ್ರರು ಮೊದಲು ಕ್ಷತ್ರಿಯರಾಗಿದ್ದರು. ಇಲ್ಲೆಲ್ಲಾ ನಾವು ಋಷಿ ಮೂಲವನ್ನು ಕೆದಕಲಿಲ್ಲ, ಅವೇ ಕಾಣಿಸಿದವು. ಸ್ವಾಮಿ ವಿವೇಕಾನಂದರ ಮೂಲ ಕೂಡ ಹುದುಗಿಸಿಟ್ಟ ಗೌಪ್ಯದ ವಿಷಯವೇನಲ್ಲ. ಅದನ್ನು ಮೊದಲು ಮನಗಾಣಬೇಕಾದ್ದು ನೀವು.

ಸನ್ಯಾಸಿಯಾದ ಮಾತ್ರಕ್ಕೆ ಈ ಜನ್ಮಕ್ಕೆ ಅಂಟಿದ ಕಾಯಿಲೆಗಳು ವಿನಾಶವಾಗಿಬಿಡುವುದಿಲ್ಲ. ಹಿಂದಿನ ಕರ್ಮಫಲಗಳನ್ನು ಆತ ಅನುಭವಿಸಲೇ ಬೇಕಾಗುತ್ತದೆ. ದೃಷ್ಟಾಂತವೊಂದನ್ನು ಹೇಳುತ್ತಿದ್ದೇನೆ: ಒಮ್ಮೆ ಭಗವಾನ್ ಶ್ರೀಧರರು ಕಾಶಿಯಲ್ಲಿರುವಾಗ ಅವರಿಗೆ ರಕ್ತಬೇಧಿ ಆರಂಭವಾಗಿತ್ತು. ಹತ್ತಿರ ಇದ್ದ ಶಿಷ್ಯರು ಏನೇ ಉಪಚರಿಸಿದರೂ ಅದು ಕಮ್ಮಿಯೇ ಆಗಿರಲಿಲ್ಲ. ಇನ್ನೇನು ಕೃಶಕಾಯರಾಗಿ ಗುರುಗಳು ದೇಹವನ್ನೇ ವಿಸರ್ಜಿಸುವರೋ ಎಂಬ ಹಂತ ತಲ್ಪಿತ್ತು. ಶಿಷ್ಯರ ಒತ್ತಾಯದ ಮೇರೆಗೆ ಲೋಟವೊಂದರಲ್ಲಿ ನೀರನ್ನು ತರಿಸಿದ ಶ್ರೀಧರರು, ಶಿಷ್ಯನ ಕೈಲೇ ಆ ಲೋಟವನ್ನಿರಿಸಿ ಅವರೇ ರಚಿಸಿದ " ನಮಃ ಶಾಂತಾಯ ದಿವ್ಯಾಯ....." ಎಂಬ ಮಂತ್ರವನ್ನು ನೂರೆಂಟಾವರ್ತಿ ಪಠಿಸಲು ಹೇಳಿದರು. ಪ್ರತೀ ಹೊತ್ತಿಗೂ ನೂರೆಂಟಾವರ್ತಿ ಹಾಗೆ ಪಠಿಸುತ್ತಾ ನೀರನ್ನು ಕುಡಿಸುತ್ತಾ ಇದ್ದ ಅಲ್ಲಿದ್ದ ಶಿಷ್ಯ. ವಾರದಲ್ಲಿ ಕ್ರಮೇಣ ಹಂತಹಂತವಾಗಿ ರಕ್ತಬೇಧಿ ನಿಲ್ಲುತ್ತಾ ಬಂತು! ನಾನು ನೋಡಿದ ಅನೇಕ ಸನ್ಯಾಸಿಗಳೂ ಮಹಾನ್ ತಪಸ್ವಿಗಳೂ ತಮ್ಮ ಶರೀರಕ್ಕೆ ಒದಗಿದ ಕಾಯಿಲೆಯನ್ನು ಹಾಗೆ ಇದ್ದಕ್ಕಿದ್ದಲ್ಲೇ ಮಂಗಮಾಯ ಮಾಡುವುದಿಲ್ಲ, ಬದಲಾಗಿ ಎಲ್ಲರಂತೇಯೇ ಅನುಭವಿಸೇ ಹಿಂದಿನ ಋಣವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ ರಮಣ ಮಹರ್ಷಿಗಳೂ ಶಿರಡೀ ಸಾಯಿಬಾಬರೂ ಉದಾಹರಣೆಗಳಾಗುತ್ತಾರೆ. ರಮಣ ಮಹರ್ಷಿಗಳಿಗೆ ಹುಣ್ಣಾಗಿ ಹುಣ್ಣಿನಲ್ಲಿ ಹುಳಗಳೂ ಓಡಾಡುತ್ತಿದ್ದವು! ಹುಣ್ಣಿನ ಹುಳಗಳನ್ನು ಅವರು ನಾಶಪಡಿಸುತ್ತಿರಲಿಲ್ಲ, ಬದಲಿಗೆ ಅವು ಋಣದಿಂದ ಮುಕ್ತಿ ಕೊಡುತ್ತಿವೆ ಎನ್ನುತ್ತಿದ್ದರು!

ಅನೇಕಾವರ್ತಿ ಹೇಳುತ್ತಲೇ ಬಂದಿದ್ದೇನೆ. ವಿವೇಕಾನಂದರಂತಹ ಕುಲೀನ ಕ್ಷತ್ರಿಯ ಸನ್ಯಾಸಿಯನ್ನು ಸಮಾಜ ಒಪ್ಪಿಕೊಂಡಿದ್ದು ಯಾಕೆಂದರೆ ಅವರ ಆಳವಾದ ಅಧ್ಯಯನ ಮತ್ತು ಅಧ್ಯಾಪನಕ್ಕಾಗಿ. ರಾಮಕೃಷ್ಣರು ಮಗುವಿನಲ್ಲಿನ ಸಾಮಾಜಿಕ ಕಳಕಳಿಯನ್ನು ನೋಡಿ ಸನ್ಯಾಸವನ್ನು ನೀಡಿದರು; ಶಕ್ತೀಪಾತ ಯೋಗವೆಂಬ ಸಿದ್ಧಿಯಿಂದ ತಾವು ಪಡೆದಿದ್ದ ಪರಿಪೂರ್ಣ ಜ್ಞಾನವನ್ನು ವಿವೇಕಾನಂದರಿಗೆ ಅನುಗ್ರಹಿಸಿದರು. ವಿವೇಕಾನಂದರ ಬಾಳಿನ ಆ ತಿರುವಿನ ನಂತರ ವಿವೇಕಾನಂದರು ಇಡೀ ವಿಶ್ವಕ್ಕೇ ಅಧ್ಯಾಪನ ನಡೆಸಿದರು! ವಿಶ್ವವಂದ್ಯರಾದರು. ಕಮಲದ ಹುಟ್ಟು ಕೆಸರಲ್ಲೇ ಹೊರತು ಸಾಮಾನ್ಯ ನೀರಿನಲ್ಲಿ ಆಗುವುದಿಲ್ಲ. ಕೆಸರಲ್ಲಿ ಹುಟ್ಟಿತೆಂದು ದೇವರಿಗೆ ಅದನ್ನು ಅರ್ಪಿಸುವುದಿಲ್ಲವೇ? ದೇವರು ಅದನ್ನೇ ತನ್ನ ಕುಳಿತುಕೊಳ್ಳುವಿಕೆಗೂ ತನ್ನ ಹೊಕ್ಕಳಿನಿಂದ ಹೊರಹೊರಡಿಸಿ ಅದರಲ್ಲಿ ಬ್ರಹ್ಮನ ಕೂತುಕೊಳ್ಳುವಿಕೆಗೂ ಕಾರಣನಾದನಲ್ಲವೇ? ಸ್ವಾರಸ್ಯ ಹೀಗಿದೆ: ಮನೆಗಳಲ್ಲಿ ನಾವು ಚಪ್ಪಲಿ ಇಡುವಲ್ಲಿ ದೇವರ ಚಿತ್ರಪಟಗಳನ್ನು ಇಡುವುದಿಲ್ಲ. ಆದರೆ ಚಮ್ಮಾರನೊಬ್ಬ ತನ್ನ ಅಂಗಡಿಯಲ್ಲಿ ಚಪ್ಪಲಿಗಳ ಪಕ್ಕದಲ್ಲೇ ಚಿಕ್ಕ ಜಾಗದಲ್ಲಿ ದೇವರ ಪಟ ಇಟ್ಟು ಪೂಜಿಸುತ್ತಾನೆ. ಅದರಂತೇ ಆ ಯಾ ವೃತ್ತಿಯವರು ತಮಗಿರುವ ಜಾಗದಲ್ಲೇ ಭಗವಂತನಿಗೂ ಒಂದು ಪುಟ್ಟ ಜಾಗ ಕೊಡುತ್ತಾರಲ್ಲಾ ಆ ಮನದ ಭಕ್ತಿಯನ್ನು ಭಗವಂತ್ ಅಪೇಕ್ಷಿಸುತ್ತಾನೆ, ನಿರೀಕ್ಷಿಸುತ್ತಾನೆ. ಸಪ್ತರ್ಷಿಗಳ ಅಂಶವೊಂದು ಜಾರಿ ನರೇಂದ್ರನಾಥ[ವಿವೇಕಾನಂದರ ಪೂರ್ವಾಶ್ರಮದ ಹೆಸರು]ನ ಜನನವಾಯಿತೆಂಬ ಹೇಳಿಕೆಯಿದೆ. ಮಹಾತ್ಮರು ಮಿಕ್ಕವರ ಹಾಗೇ ಬಹಳಕಾಲ ಇಲ್ಲೇ ಉಳಿಯುವುದಿಲ್ಲ. ಬಂದ ಸಂಕಲ್ಪ ಸಿದ್ಧಿಯಾದಮೇಲೆ ಅವರು ಹೊರಟುಹೋಗುತ್ತಾರೆ.

೩೯ ವರ್ಷ ೫ ತಿಂಗಳು ೨೪ ದಿನ ಬದುಕಿದ್ದೂ ಆ ಕಾಲದಲ್ಲೇ ಇಷ್ಟೆಲ್ಲಾ ಹೆಸರುಗಳಿಸಲು ಕಾರಣ ಅವರ ಆಂಗ್ಲ ಭಾಷಾ ಪ್ರೌಢಿಮೆ ಎನ್ನುವ ಈ ಲೇಖಕ ವಿವೇಕಾನಂದರು ತರಗತಿಯಲ್ಲಿ ಶತ ದಡ್ಡರಾಗಿದ್ದರು ಎನ್ನುತ್ತಾನೆ. ಖೇತ್ರಿ ಮಹಾರಾಜರ ಮಾಸಿಕ ವೇತನದಿಂದ ವಿವೇಕಾನಂದರ ಅಮ್ಮ ಬದುಕು ನಡೆಸಿದರು ಎನ್ನುತ್ತಾನೆ. ಸನ್ಯಾಸಿಗೆ ಸಂಸಾರದ ಬಂಧವಿಲ್ಲ. ಅಷ್ಟಕ್ಕೂ ವಿವೇಕಾನಂದರು ಅವರಮ್ಮನಿಗೆ ಏಕಮಾತ್ರ ಸಂತಾನ ಎಂದೇನೂ ಇರಲಿಲ್ಲ. ಉಳಿದ ಹತ್ತು ಮಕ್ಕಳು ಏನು ಮಾಡಿದರು ಸರ್ ? ಅಮ್ಮನನ್ನು ಮರೆತುಹೋದರೇ? ವಿವೇಕಾನಂದರು ನಿರುದ್ಯೋಗಿಯಾಗಿದ್ದು ಹರಕಲು ಬಟ್ಟೆ ತೊಟ್ಟು ಕಲ್ಕತ್ತಾದ ಬೀದಿಗಳಲ್ಲಿ ಸುತ್ತುತ್ತಿದ್ದರಂತೆ ಎಂದಿರಲ್ಲಾ ಸನ್ಯಾಸಿಗಳಿಗೆ ತಪಸ್ಸು, ಅಧ್ಯಯನ ಮತ್ತು ಸನ್ಮಾರ್ಗ ಬೋಧನೆ ಬಿಟ್ಟು ಬೇರೇನು ಉದ್ಯೋಗ ಇರುತ್ತದೆ ?

ವಿವೇಕಾನಂದರ ವಿವೇಕ, ಅವರ ಅಗಾಧ ಜ್ಞಾನ, ಧರ್ಮಾಂಧತೆಯ ವಿರುದ್ಧದ ಅವರ ಧೋರಣೆ, ಘನತರ ವಿಷಯಗಳನ್ನೂ ಸುಲಭವಾಗಿ ಎಲ್ಲರಿಗೂ ಅರಿವಾಗುವಂತೇ ತಿಳಿಸಿಕೊಡುವ ಜಾಣ್ಮೆ, ಇತಿಹಾಸದ ಅರಿವು, ಪ್ರಸಕ್ತ ವಿದ್ಯಮಾನಗಳ ಅರಿವು ಇದೆಲ್ಲಾ ಇದ್ದು ಅವರು ಬರೆದ ಬೃಹತ್ ಸಂಹಿತೆಗಳನ್ನು ಅರ್ಥಮಾಡಿಕೊಳ್ಳಲಾಗದವರು ಆಗಲೂ ಇದ್ದರು, ಈಗಲೂ ಇದ್ದಾರೆ. ಹೇಗೆ ಮೂಲ ಭಗವದ್ಗೀತೆ ಎಲ್ಲರಿಗೂ ಅರ್ಥವಾಗುವುದು ಕಷ್ಟಸಾಧ್ಯವೋ ಹಾಗೆಯೇ ವಿವೇಕ ವಾಣಿ ಎಲ್ಲರಿಗೂ ರುಚಿಸುವುದಿಲ್ಲ, ಅರ್ಥವಾಗುವುದಿಲ್ಲ. ದೇಹ ದಾರ್ಡ್ಯತೆಯ ಬಗ್ಗೆ ಹಾಗೆ ತೊಂದರೆಯಿತ್ತು ಹೀಗೆ ಕೊಸರೊಂದಿತ್ತು ಎಂದು ಸರ್ಟಿಫಿಕೇಟ್ ಕೊಟ್ಟಿದ್ದೀರಲ್ಲ ಅವರ ನಿಲುವನ್ನು ಚಿತ್ರದಲ್ಲಾದರೂ ಸರಿಯಾಗಿ ಒಮ್ಮೆ ನೋಡಿದ್ದೀರೇ ? ವಾರಗಳ ಕಾಲ ಸ್ನಾನ ಮಾಡದ ವ್ಯಕ್ತಿ ಕುಂತಲ್ಲೇ ನಾರುವ ಹಾಗೇ ನಿಮ್ಮಂಥಾ ’ಮಹಾಜ್ಞಾನಿಗಳು’ವಾಸನೆ ಹೊಡೆಯುತ್ತಿರುವುದು ಸುತ್ತಲ ಜನರಿಗೆ ಕೂತುಕೊಳ್ಳಲಿಕ್ಕೆ ಆಗುತ್ತಿಲ್ಲ! ಇನ್ನು ಮೇಲಾದರೂ ತಾನೇ ಪಂಡಿತ, ತನ್ನ ಶಂಖದಿಂದ ಬಂದಿದ್ದೇ ತೀರ್ಥ ಎಂಬ ನಿಮ್ಮ ಲಹರಿಯನ್ನು ಕೈಬಿಟ್ಟು ಲೋಕಮುಖರಾಗಿ ವಿವೇಚಿಸಿ ಬರೆಯಿರಿ ಎಂದು ಉನ್ನತ ಶಬ್ದಗಳಲ್ಲಿ ಗೌರವಿಸಿ ಬರೆದಿದ್ದೇನೆ. ಅರ್ಧ ತುಂಬಿದ ಅಥವಾ ಭಾಗಶಃ ತುಂಬಿದ ಕೊಡವಾದರೆ ಬಹಳ ಕಷ್ಟ; ಜನ ಹಿಡಿದು ಬಡಿದೂಬಿಡಬಹುದು! |ಅಲ್ಪವಿದ್ಯಾ ಮಹಾಗರ್ವೀ .....ಕೇಳಿದ್ದೀರಲ್ಲಾ ?

[ಮಾಹಿತಿಗೆ ೧೬.೧.೨೦೧೨ ರ ಕನ್ನಡ ದಿನಪತ್ರಿಕೆಯೊಂದನ್ನು ನೀವು ಬಳಸಿಕೊಳ್ಳಬಹುದು; ಲೇಖನ ಯಾವುದಕ್ಕೆ ಉತ್ತರ ಎಂಬುದು ತಮಗೂ ಸರಿಯಾಗಿ ತಿಳಿಯುತ್ತದೆ]