ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, April 19, 2010

ಗುರು ತತ್ವಹಿಂದೊಮ್ಮೆ ಗುರುವಿನ ಬಗ್ಗೆ ಬರೆದಿದ್ದೆ, ಇಂದು ಜಗದಮಿತ್ರ ಮತ್ತೊಮ್ಮೆ ತನ್ನ ಶೈಲಿಯಲ್ಲಿ ಸದ್ಗುರುವಿನ ವರ್ಣನೆ ಮಾಡಹೊರಟಿದ್ದಾನೆ. ಗುರುವಿನ ಬಗ್ಗೆ ಬರೆದಷ್ಟೂ ಕಮ್ಮಿಯೇ ಯಾಕೆಂದರೆ ಆ ತತ್ವವೇ ಹಾಗೆ;ಆ ಪದವೇ ಒಂದು ಬ್ರಹ್ಮ ಬೋಧ ಪದ. ಗುರು ಅಂದರೆ ಯಾರು ಎಂತ ತಿಳಿಯ ಹೊರಟರೆ ಅದು ಮೂಲ ಪರಬ್ರಹ್ಮನನ್ನು ತಲುಪುತ್ತದೆ, ಆ ಪರಬ್ರಹ್ಮನೇ ಗುರು! ಹಾಗಾದರೆ ನಾವು ನೋಡುವ ಗುರುಗಳೆನಿಸಿದವರೆಲ್ಲ ಪರಬ್ರಹ್ಮರೇ ? ಅವರೆಲ್ಲ ಪರಬ್ರಹ್ಮನ ಅವತರಣಿಕೆ ಕಂಡುಕೊಳ್ಳ ಹೊರಟ ಅವನ ಸಂಪೂರ್ಣ ಅನುಯಾಯಿಗಳು.

ಒಂದು ಶ್ಲೋಕ ನೋಡಿ --

ಆದಿನಾರಾಯಣಂ ವಿಷ್ಣುಂ ಬ್ರಹ್ಮಾಣಂಚ ವಶಿಷ್ಠಕಂ |
ಶ್ರೀರಾಮಂ ಮಾರುತಿಂ ವಂದೇ ರಾಮದಾಸಂಚ ಶ್ರೀಧರಂ ||

ಆದಿನಾರಾಯಣನಿಂದ ಪ್ರಾರಂಭವಾಗಿ ಬ್ರಹ್ಮಾಣ ಮತ್ತು ವಶಿಷ್ಠರಿಂದ ಮುಂದುವರಿಸಲ್ಪಟ್ಟು ಶ್ರೀರಾಮ ಮತ್ತು ಮಾರುತಿಯಿಂದಲೂ ಆಚರಿಸಲ್ಪಟ್ಟು ಸಮರ್ಥ ರಾಮದಾಸರಿಂದಲೂ ಮತ್ತು ಶ್ರೀಧರ ಸ್ವಾಮಿಗಳಿಂದಲೂ ಹಾಗೇ ಮುಂದುವರಿಯಿತು. ಇದು ಒಂದು ಪರಂಪರೆ.

ಇನ್ನೊಂದು ನೋಡಿ --

ಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||

ಗುರು ತತ್ವ

ಇಹದ ಬದುಕಿನ ಬವಣೆ ಕಿತ್ತೊಗೆಯ ಬಯಸುತ್ತ
ಗಹನವಾಗಿಹ ನಿರ್ವಿಷಯ ಧ್ಯಾನಿಸುತ
ಸಹನ ಮೂರುತಿಯಾಗಿ ಅರಿಗಳಂ ನಿಗ್ರಹಿಸಿ
ಬಹಳ ತ್ಯಾಗವ ಗೈವ | ಜಗದಮಿತ್ರ

ತನ್ನಾಪ್ತರಂ ತಂದೆ-ತಾಯ್ಗಳಂ ತೊರೆಯುತ್ತ
ಮುನ್ನ ಎಲ್ಲರನೊಮ್ಮೆ ಮನದಿ ಧ್ಯಾನಿಸುತ
ಘನ್ನ ಮಹಿಮನ ನೋಳ್ಪ ಹೊಸದಾದ ಒಸಗೆಯಲಿ
ತನ್ನತನವನು ತೊರೆವ | ಜಗದಮಿತ್ರ

ಆಟಪಾಠದ ದಿನವ ಬದಿಗಿರಿಸಿ ನೋಂಪಿಯಲಿ
ಕಾಟಕಾಂಬರನ ರೂಪವ ನಿಲಿಸಿ ಮನದಿ
ಕೋಟಿ ಹಲವನು ಮೀರಿ ತನ್ನಾತ್ಮ ವೀಣೆಯಂ

ಮೀಟಿ ತಂತಿಯ ಮೆರೆವ | ಜಗದಮಿತ್ರ


ಬಣ್ಣ ದಿರಿಸುಗಳೆಲ್ಲ ಬದಿಗಿರಿಸಿ ಸಣ್ಣನೆಯ
ಚಣ್ಣ ಕೌಪೀನ ಕಾವಿಯ ಶಾಟಿ ಧರಿಸಿ

ಕಣ್ಣನೀರನು ಒರೆಸೆ ಜಗದಿ ಹಲವರಿಗಾಗಿ

ಅಣ್ಣ ತೆರೆದನು ಶಾಲೆ | ಜಗದಮಿತ್ರ


ಸತತ ಓಂಕಾರವನು ಹೃದಯಕಮಲದಿ ಹುದುಗಿ
ಪತಿತ ಪಾವನ ಪದವ ನಿತ್ಯ ನೋಡುತಲಿ

ಕಥಿತ ದೃಷ್ಟಾಂತಗಳ ಸಾಕಾರತೋರ್ಪಡಿಸಿ

ಮಥಿತ ಮೊಸರಿನ ತೆರದಿ | ಜಗದಮಿತ್ರ


ನಿಜದ ನೆಲೆ ಅರಿವೆಡೆಗೆ ಸುಜನಹೃದಯದಿ ಯತ್ನ
ರಜ ಸತ್ವ ತಾಮಸದ ಗಡಿಯ ಮೀರುತಲಿ
ಅಜ ಹರಿ ಹರರನ್ನು ಭಜಿಸಿ ಒಂದೇ ಪದದಿ

ಸಜೆಯ ಬಿಡಿಸುವ ನೋಡ | ಜಗದಮಿತ್ರ


ಗುರುವು ತನದೇ ಅರಿವು ನಿರ್ವಿಣ್ಣ ರೂಪದಲಿ
ಧರೆಯ ಹಂಗನು ತೊರೆವ ಭವದ ಬದುಕಿನಲಿ
ಪರಮಹಂಸ ಎಂಬ ಸ್ಥಿತಿಯ ಭುಂಜಿಸತೊಡಗಿ

ಹರಸಿ ಎಲ್ಲರ ಪೊರೆವ | ಜಗದಮಿತ್ರ