ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, April 19, 2010

ಗುರು ತತ್ವ



ಹಿಂದೊಮ್ಮೆ ಗುರುವಿನ ಬಗ್ಗೆ ಬರೆದಿದ್ದೆ, ಇಂದು ಜಗದಮಿತ್ರ ಮತ್ತೊಮ್ಮೆ ತನ್ನ ಶೈಲಿಯಲ್ಲಿ ಸದ್ಗುರುವಿನ ವರ್ಣನೆ ಮಾಡಹೊರಟಿದ್ದಾನೆ. ಗುರುವಿನ ಬಗ್ಗೆ ಬರೆದಷ್ಟೂ ಕಮ್ಮಿಯೇ ಯಾಕೆಂದರೆ ಆ ತತ್ವವೇ ಹಾಗೆ;ಆ ಪದವೇ ಒಂದು ಬ್ರಹ್ಮ ಬೋಧ ಪದ. ಗುರು ಅಂದರೆ ಯಾರು ಎಂತ ತಿಳಿಯ ಹೊರಟರೆ ಅದು ಮೂಲ ಪರಬ್ರಹ್ಮನನ್ನು ತಲುಪುತ್ತದೆ, ಆ ಪರಬ್ರಹ್ಮನೇ ಗುರು! ಹಾಗಾದರೆ ನಾವು ನೋಡುವ ಗುರುಗಳೆನಿಸಿದವರೆಲ್ಲ ಪರಬ್ರಹ್ಮರೇ ? ಅವರೆಲ್ಲ ಪರಬ್ರಹ್ಮನ ಅವತರಣಿಕೆ ಕಂಡುಕೊಳ್ಳ ಹೊರಟ ಅವನ ಸಂಪೂರ್ಣ ಅನುಯಾಯಿಗಳು.

ಒಂದು ಶ್ಲೋಕ ನೋಡಿ --

ಆದಿನಾರಾಯಣಂ ವಿಷ್ಣುಂ ಬ್ರಹ್ಮಾಣಂಚ ವಶಿಷ್ಠಕಂ |
ಶ್ರೀರಾಮಂ ಮಾರುತಿಂ ವಂದೇ ರಾಮದಾಸಂಚ ಶ್ರೀಧರಂ ||

ಆದಿನಾರಾಯಣನಿಂದ ಪ್ರಾರಂಭವಾಗಿ ಬ್ರಹ್ಮಾಣ ಮತ್ತು ವಶಿಷ್ಠರಿಂದ ಮುಂದುವರಿಸಲ್ಪಟ್ಟು ಶ್ರೀರಾಮ ಮತ್ತು ಮಾರುತಿಯಿಂದಲೂ ಆಚರಿಸಲ್ಪಟ್ಟು ಸಮರ್ಥ ರಾಮದಾಸರಿಂದಲೂ ಮತ್ತು ಶ್ರೀಧರ ಸ್ವಾಮಿಗಳಿಂದಲೂ ಹಾಗೇ ಮುಂದುವರಿಯಿತು. ಇದು ಒಂದು ಪರಂಪರೆ.

ಇನ್ನೊಂದು ನೋಡಿ --

ಸದಾಶಿವಸಮಾರಂಭಾಂ ಶಂಕರಾಚಾರ್ಯ ಮಧ್ಯಮಾಂ |
ಅಸ್ಮದಾಚಾರ್ಯಪರ್ಯಂತಾಂ ವಂದೇ ಗುರು ಪರಂಪರಾಮ್ ||





ಗುರು ತತ್ವ

ಇಹದ ಬದುಕಿನ ಬವಣೆ ಕಿತ್ತೊಗೆಯ ಬಯಸುತ್ತ
ಗಹನವಾಗಿಹ ನಿರ್ವಿಷಯ ಧ್ಯಾನಿಸುತ
ಸಹನ ಮೂರುತಿಯಾಗಿ ಅರಿಗಳಂ ನಿಗ್ರಹಿಸಿ
ಬಹಳ ತ್ಯಾಗವ ಗೈವ | ಜಗದಮಿತ್ರ

ತನ್ನಾಪ್ತರಂ ತಂದೆ-ತಾಯ್ಗಳಂ ತೊರೆಯುತ್ತ
ಮುನ್ನ ಎಲ್ಲರನೊಮ್ಮೆ ಮನದಿ ಧ್ಯಾನಿಸುತ
ಘನ್ನ ಮಹಿಮನ ನೋಳ್ಪ ಹೊಸದಾದ ಒಸಗೆಯಲಿ
ತನ್ನತನವನು ತೊರೆವ | ಜಗದಮಿತ್ರ

ಆಟಪಾಠದ ದಿನವ ಬದಿಗಿರಿಸಿ ನೋಂಪಿಯಲಿ
ಕಾಟಕಾಂಬರನ ರೂಪವ ನಿಲಿಸಿ ಮನದಿ
ಕೋಟಿ ಹಲವನು ಮೀರಿ ತನ್ನಾತ್ಮ ವೀಣೆಯಂ

ಮೀಟಿ ತಂತಿಯ ಮೆರೆವ | ಜಗದಮಿತ್ರ


ಬಣ್ಣ ದಿರಿಸುಗಳೆಲ್ಲ ಬದಿಗಿರಿಸಿ ಸಣ್ಣನೆಯ
ಚಣ್ಣ ಕೌಪೀನ ಕಾವಿಯ ಶಾಟಿ ಧರಿಸಿ

ಕಣ್ಣನೀರನು ಒರೆಸೆ ಜಗದಿ ಹಲವರಿಗಾಗಿ

ಅಣ್ಣ ತೆರೆದನು ಶಾಲೆ | ಜಗದಮಿತ್ರ


ಸತತ ಓಂಕಾರವನು ಹೃದಯಕಮಲದಿ ಹುದುಗಿ
ಪತಿತ ಪಾವನ ಪದವ ನಿತ್ಯ ನೋಡುತಲಿ

ಕಥಿತ ದೃಷ್ಟಾಂತಗಳ ಸಾಕಾರತೋರ್ಪಡಿಸಿ

ಮಥಿತ ಮೊಸರಿನ ತೆರದಿ | ಜಗದಮಿತ್ರ


ನಿಜದ ನೆಲೆ ಅರಿವೆಡೆಗೆ ಸುಜನಹೃದಯದಿ ಯತ್ನ
ರಜ ಸತ್ವ ತಾಮಸದ ಗಡಿಯ ಮೀರುತಲಿ
ಅಜ ಹರಿ ಹರರನ್ನು ಭಜಿಸಿ ಒಂದೇ ಪದದಿ

ಸಜೆಯ ಬಿಡಿಸುವ ನೋಡ | ಜಗದಮಿತ್ರ


ಗುರುವು ತನದೇ ಅರಿವು ನಿರ್ವಿಣ್ಣ ರೂಪದಲಿ
ಧರೆಯ ಹಂಗನು ತೊರೆವ ಭವದ ಬದುಕಿನಲಿ
ಪರಮಹಂಸ ಎಂಬ ಸ್ಥಿತಿಯ ಭುಂಜಿಸತೊಡಗಿ

ಹರಸಿ ಎಲ್ಲರ ಪೊರೆವ | ಜಗದಮಿತ್ರ


7 comments:

  1. [ಇಹದ ನಡೆಗೆ ವಿದಾಯ ಹೇಳಿ ಪರದ ಪದವನ್ನು,ಪರಮ ಪದವನ್ನು ಬಯಸುವಾತನೇ ಗುರು]

    ಆತ್ಮೀಯರೇ,
    ಬೆಳಿಗ್ಗೆ ಪ್ರಾಣಾಯಾಮ-ಧ್ಯಾನ ಮುಗಿಸಿ ಕಣ್ತೆರೆದರೆ ಗುರುವಿನ ದರ್ಶನಭಾಗ್ಯ ಒದಗಿಸಿದಿರಿ.ಆನಂದವಾಯ್ತು.ನನ್ನ ಬ್ಯಾಟರಿಗೆ ಇಡೀ ದಿನಕ್ಕೆ ಬೇಕಾದಷ್ಟು ಛಾರ್ಜ್ ಸಿಕ್ಕಿದೆ.ನಿಮಗೆ ಧನ್ಯವಾದಗಳು.
    shreedhar

    ReplyDelete
  2. ಗುರು ತತ್ವದ ಬಗ್ಗೆ ಅರಿವು ಮೂಡಿಸಿದ್ದಕ್ಕೆ ಧನ್ಯವಾದಗಳು.

    ReplyDelete
  3. ಮತ್ತೊಮ್ಮೆ ಜಗದಮಿತ್ರ ಹಾಡಿದ್ದು, ಅರಿವೆನೆಡೆಗೆ ಸಾಗಲು ಹೇಳಿದ್ದು ..ಮನಮುಟ್ಟಿತು.
    ಧನ್ಯವಾದಗಳು.

    ReplyDelete
  4. ಜಗದಮಿತ್ರನ ಗುರುವಿನ ಬಗೆಗಿನ ಕವನ ಸು೦ದರವಾಗಿದೆ

    ReplyDelete
  5. ಗುರುವಿನ ಅರಿವಿರುವ ಅನೇಕರು ನನಗೆ ದೂರವಾಣಿಯ ಮೂಲಕ ಸಂಪರ್ಕಿಸಿ ಅನಿಸಿಕೆ ಹಂಚಿಕೊಂಡಿದ್ದೀರಿ. ಸದ್ಗುರುವೇ ಹಾಗೆ. ಪ್ರತಿಕ್ರಿಯಿಸಿದ ಸರ್ವಶ್ರೀ ಶ್ರೀಧರ್ ,ಡಾ|ಕೃಷ್ಣಮೂರ್ತಿ,ಸುಬ್ರಹ್ಮಣ್ಯ, ಸೀತಾರಾಮ್ ತಮಗೆಲ್ಲರಿಗೂ ಮತ್ತು ಓದಿದ,ಓದುವ,ಓದದ ಎಲ್ಲಾ ಮಿತ್ರರಿಗೂ ಧನ್ಯವಾದಗಳು

    ReplyDelete
  6. ಭಟ್ ಸರ್,
    ತುಂಬಾ ಧನ್ಯವಾದ.... ನಮಗೆ ನಮ್ಮ ಗುರು ತತ್ವಗಳ ನೆನಪು ಮಾಡಿಕೊಟ್ಟಿದ್ದಕ್ಕೆ....

    ReplyDelete
  7. ಧನ್ಯವಾದಗಳು ದಿನಕರ್ ತಮಗೆ, ಗುರುವಿನ ಬಾಂಧವ್ಯ ಹೊಂದಿರುವಿರೆಂದು ಕೇಳಿ ಸಂತಸವಾಯ್ತು, ಆ ಭಯರಹಿತ ಭಕ್ತಿ, ಗುರುವನ್ನು ಅನುಸರಿಸುವ ಶಕ್ತಿ ನೂರ್ಮಡಿಸಲಿ, ಬದುಕು ನಂದನವಾಗಲಿ.

    ReplyDelete