ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, October 31, 2013

ಮಂಗಳಮಯ ದೀಪವನ್ನು ಬೆಳಗುವ ಕಥೆ

ಮಂಗಳಮಯ ದೀಪವನ್ನು ಬೆಳಗುವ ಕಥೆ

ದೀಪಮೂಲೇ ತತೋ ಬ್ರಹ್ಮಾ ದೀಪಮಧ್ಯೆ ತತೋ ಹರಿಃ |
ದೀಪಾಗ್ರೇ ಶಂಕರಂ ಪ್ರೋಕ್ತ ದೀಪರಾಜಾಯತೇ ನಮಃ ||

ದೀಪವನ್ನು ಬೆಳಗುವುದು ಸನಾತನ ಜೀವನಧರ್ಮದಲ್ಲಿ ಎಲ್ಲಾ ಧಾರ್ಮಿಕ ವಿಧಿಗಳಲ್ಲೂ ನಡೆಯಬೇಕಾದ ಪ್ರಥಮ ಕಾರ್ಯ. ಕತ್ತಲೆಯ ವೈರಿ ಬೆಳಕು. ಬೆಳಕನ್ನು ದೃಷ್ಟಿಸುವುದರಿಂದ ನಮ್ಮ ಮನಸ್ಸು ಅರಳುತ್ತದೆ, ಪ್ರಪುಲ್ಲವಾಗುತ್ತದೆ. ಕತ್ತಲೆಗೆ ತಮಸ್ಸು ಎಂತಲೂ ಹೆಸರು. ದೀಪವೊಂದು ಉರಿಯುತ್ತಿದ್ದರೆ ಉರಿವ ದೀಪದ ಮೂಲದಲ್ಲಿ ಬ್ರಹ್ಮನೂ ಮಧ್ಯದಲ್ಲಿ ವಿಷ್ಣುವೂ ಮತ್ತು ತುದಿಯಲ್ಲಿ ಶಿವನೂ ಸನ್ನಿಹಿತರಾಗಿತ್ತಾರೆ ಎಂಬುದು ಶ್ಲೋಕದ ಹೇಳಿಕೆ. ಒಟ್ಟಂದದಲ್ಲಿ ದೇವರೆಲ್ಲಾ ಒಬ್ಬನೇ ಆದರೂ ನಾವು ಬಯಸುವ ರೂಪಗಳಲ್ಲಿ ನಮಗೆ ತೋರ್ಪಡಿಸಿಕೊಳ್ಳುವುದು ಅಥವಾ ನಾವು ಆತನನ್ನು ಆರಾಧಿಸುವುದು ನಡೆಯುತ್ತದೆ.

ಮಂಗಳಚಿಹ್ನೆಗಳಲ್ಲಿ ಪ್ರಥಮವಾಗಿ ಮಂಗಳದೀಪವನ್ನೇ ಹೇಳಲಾಗುತ್ತದೆ. ನಂತರ ಇತರ ಎಲ್ಲವೂ ಬರುತ್ತವೆ. ದೇವತೆಗಳ ಪೂಜೆಗೆ ಅವರನ್ನು ಆಹ್ವಾನಿಸುವಾಗ ಏನೆಲ್ಲಾ ಮಾಡಬೇಕೆಂಬುದೇ ಸಾಮಾನ್ಯವಾಗಿ ಇಲ್ಲಿ ಅರಿಯಬೇಕಾದ ಅಂಶ. ಯಾಕೆ ವಿವಿಧ ಪರಿಕರಗಳು ಉಪಯೋಗಿಸಲ್ಪಡುತ್ತವೆ, ಅವುಗಳ ಬಳಕೆಯ ಮಹತ್ವವನ್ನೂ ಸ್ಥೂಲವಾಗಿ ಅರಿಯಬಹುದಾಗಿದೆ. ಹಿಂದಕ್ಕೆ ನಮ್ಮ ಪೂರ್ವರ್ಜರೆಲ್ಲ ಗೋಮಯದಿಂದ ನೆಲವನ್ನು ಸಾರಿಸುತ್ತಿದ್ದರು. ಗೋಮಯವನ್ನು ಆಯ್ದುಕೊಳ್ಳುವಾಗ ಸಹ ವಿಶಿಷ್ಟ ನಿಯಮಗಳಿದ್ದವು. ಕರುಹಾಕಿರುವ ಹಸುವಿನ ತಾಜಾ ಸಗಣಿಯೇ ಗೋಮಯವಾಗುತ್ತಿತ್ತು; ಸೂರ್ಯನ ಕಿರಣದಡಿಯಲ್ಲಿ ಗೋಮಾಳಗಳಲ್ಲಿ ಮೇದುಬರುವ ದೇಸೀ ದನದಗಳ ತಾಜಾ ಸಗಣಿಯಲ್ಲಿ ಕ್ರಿಮಿನಾಶಕ ಅಂಶಗಳಿವೆ ಎಂಬುದು ವೈಜ್ಞಾನಿಕ. ನಮ್ಮ ಕಾರ್ಯಗಳಿಗೆ ಅಡಚಣೆ ಉಂಟುಮಾಡದಂತೇ ಉಪದ್ರವಕಾರೀ ಕೀಟಾಣುಗಳನ್ನು ದೂರವಿಡುವುದು ಅನಿವಾರ್ಯ; ಅವುಗಳ ಹನನವೇ ನಮ್ಮ ಉದ್ದೇಶವಲ್ಲ, ಆದರೆ ನಮಗರಿವಿಲ್ಲದೇ ಅವು ಹತವಾದರೆ ಅದಕ್ಕಾಗಿ ಸೃಷ್ಟಿಕರ್ತನನ್ನೇ ಸ್ಮರಿಸುವುದು ಸಂಪ್ರದಾಯ.

ಗೋಮಯದಿಂದ ಶುದ್ಧಿಗೊಂಡ ನೆಲದ ಮೇಲೆ ರಂಗೋಲಿ ಇಡುವುದು ಮಂಗಳದ ಇನ್ನೊಂದು ಚಿಹ್ನೆ. ನಿತ್ಯವೂ ನಾವು ವಾಸಿಸುವ ಸ್ಥಳಗಳ ಎದುರುಭಾಗದಲ್ಲಿ, ಸೂರ್ಯೋದಯಕ್ಕೂ ಮುಂಚೆ ನೀರು-ಗೋಮಯ ಹಾಕಿ ಸಾರಿಸಿ, ರಂಗೋಲಿ ಇಡುವುದು ನಡೆಯಬೇಕಾದ ಕೆಲಸ. ವಿಶೇಷ ದಿನಗಳಲ್ಲಿ ಮಾವಿನ ಎಲೆಗಳಿಂದ ಮತ್ತು ಬಾಳೆಯ ಗಿಡಗಳಿಂದ ಬಾಗಿಲನ್ನು ಅಲಂಕರಿಸಿ ದೇವತೆಗಳ ಆಹ್ವಾನಕ್ಕೆ ತಯಾರಿ ನಡೆಸಿಕೊಳ್ಳುವುದು ಮಂಗಳದ ಚಿಹ್ನೆ. ಮಂಗಳದ ಚಿಹ್ನೆಗಳನ್ನು ಅಪರ ಕಾರ್ಯಕ್ರಮಗಳಲ್ಲಿ ಬಳಸುವುದಿಲ್ಲ. ಪರ ಅಂದರೆ ದೇವಲೋಕವೆಂದರ್ಥ, ಅಪರ ಎಂದರೆ ಐಹಿಕ, ಲೌಕಿಕ ಎಂದರ್ಥ. ಸಾಮಾನ್ಯವಾಗಿ ಯಾರಾದರೂ ಮರಣಿಸಿದರೆ, ಅಥವಾ ಹಳೆಯಜನರ ಪುಣ್ಯತಿಥಿಯ ಆಚರಣೆಯಿದ್ದರೆ ಅಂತಹ ದಿನಗಳಲ್ಲಿ ಆ ಕಾರ್ಯಕ್ರಮಗಳಲ್ಲಿ ದೀಪವನ್ನುಳಿದು ಉಳಿದ ಮಂಗಳಚಿಹ್ನೆಗಳನ್ನು ಹೆಚ್ಚಾಗಿ ಬಳಸಲಾಗುವುದಿಲ್ಲ. ದೀಪವನ್ನೂ ಸಹ ದೇವರೆದುರು ಮಾತ್ರ ಹಚ್ಚಿ ಇಡಲಾಗುತ್ತದೆಯೇ ವಿನಃ ಶ್ರಾದ್ಧಾದಿಗಳು ನಡೆಯುವಲ್ಲಿ ದೀಪದ ಅಗತ್ಯತೆ ಇರುವುದಿಲ್ಲ ಅಥವಾ ನಿಷೇಧ.

 ಶಿವಂ/ಶುಭಂ  ಕರೋತಿ ಕಲ್ಯಾಣ ಆರೋಗ್ಯಂ ಧನಸಂಪದಂ |
ಮಮಶತ್ರು ಹತಾರ್ಥಾಯ ಸಂಧ್ಯಾಜ್ಯೋತಿರ್ನಮೋಸ್ತುತೇ ||

ಸಂಜೆಯಾಯ್ತೆಂದರೆ ಭಾರತೀಯ ನಾರಿಯರು ಹಿಂದೆಲ್ಲ ಮನೆಯೊಳಗಡೆ ದೀಪವನ್ನು ಮುಡಿಸಿ ಈ ಶ್ಲೋಕವನ್ನು ಹೇಳುತ್ತಿದ್ದರು. ಈ ಶ್ಲೋಕದಲ್ಲಿ ’ಮಮ ಶತ್ರು ಹತಾರ್ಥಾಯ’ ಎಂದರೆ ನಮ್ಮ ಶತ್ರು ಕತ್ತಲೆ ಎಂದರ್ಥ. ಈ ಜನ್ಮದಲ್ಲಿ ವ್ಯಾವಹಾರಿಕವಾಗಿ ನಮಗೆ ಆಗದ ಜನರನ್ನು ಶತ್ರುಗಳೆಂದು ಭಾವಿಸಬಾರದು, ಹಾಗೆ ಭಾವಿಸುವುದು ನಮ್ಮ ದುಷ್ಟತನವೆನಿಸಿಕೊಳ್ಳುತ್ತದೆ. ನಮಗೂ ಅವರಿಗೂ ಯಾವುದೋ ಕಾರ್ಯಕಾರಣದಿಂದ ಉಂಟಾದ ರಾಗದ್ವೇಷ ಆ ಕಾರಣಕ್ಕಾಗಿ ಮಾತ್ರ ಮೀಸಲಾಗಿರಲಿ; ಅಲ್ಲಿಂದಾಚೆಗೆ ಎಲ್ಲಾ ವಿಷಯಗಳಲ್ಲೂ ಅವರು ನಮ್ಮ ದ್ವೇಷಿಗಳೆಂದು ಭಾವಿಸದಿರುವುದು ಸನಾತನ ನೀತಿ. ಮಹಾಭಾರತದಲ್ಲಿ ರಣರಂಗದಲ್ಲಿ ತೊಡೆಮುರಿದು ಬಿದ್ದ ಧುರ್ಯೋಧನನನ್ನು ಭೀಮ ಕೃಷ್ಣನ ಅನುಜ್ಞೆಯ ಮೇರೆಗೆ ಕೊಂದುಹಾಕಿದ. ಸತ್ತ ಸುಯೋಧನನ ಶಿರವನ್ನು ಭೀಮ ಕಾಲಿನಿಂದ ತುಳಿದ. ಆಕ ಕೃಷ್ಣ ಒಂದು ಮಾತನ್ನು ಹೇಳಿದ್ದಾನೆ: "ಜೀವಿಗೆ ಶಿರದ ಭಾಗವೇ ಪ್ರಮುಖ. ಅದನ್ನು ತುಳಿದು ಅಪಮಾನಿಸಬಾರದು. ಜೀವವಿರಲಿ, ಇಲ್ಲದಿರಲಿ ಪ್ರತ್ಯಕ್ಷವಾಗಿ ಜೀವಿಯ ಭೌತಿಕ ಶರೀರ ಎದುರು ಕಂಡಾಗ, ಕಾಲಿನಿಂದ ತಲೆಯನ್ನು ತುಳಿಯಬಾರದು. ಹಿಂದೊಂದು ಜಾವದಲ್ಲಿ ಜೀವದಲ್ಲಿದ್ದ ಆ ಜೀವಿಗೆ ತಲೆಯೇ ಕೇಂದ್ರ ಸ್ಥಾನವಾಗಿತ್ತು. ತಲೆಯಿಲ್ಲದಿದ್ದರೆ ಜೀವಿ ಅಪೂರ್ಣ. ತಲೆಯಲ್ಲಿರುವ ಮೆದುಳಿನಿಂದ ಮನಸ್ಸಿನ ಚಟುವಟಿಕೆಗಳು ನಡೆಸಲ್ಪಡುತ್ತವೆ. ಹೀಗಾಗಿ ಭೀಮ ನೀನು ಸುಯೋಧನನ ಪಾರ್ಥಿವ ಶರೀರದ ಶಿರವನ್ನು ತಾಲಿನಿಂದ ತುಳಿದದ್ದು ತಪ್ಪು." ಇದು ಕೃಷ್ಣನ ಧರ್ಮಪಾಲನೆಯನ್ನು ತಿಳಿಸುತ್ತದೆ.

ಇಂದು ಎಣ್ಣೆಯ ದೀಪಗಳ ಹಂಗಿಲ್ಲ, ದೇವರಿಗೂ ದೀಪವನ್ನು ಹಚ್ಚುವ ಪರಿಪಾಟ ಅನೇಕ ಮನೆಗಳಲ್ಲಿ ಇಲ್ಲ! ಹೀಗಾಗಿ ದೀಪಗಳ ಮಹತ್ವದ ಅರಿವಿಲ್ಲ. ದೀಪಗಳನ್ನು ಉರಿಸುವಾಗ ಅವುಗಳಿಂದ ಉತ್ಪತ್ತಿಯಾದ ಹೊಗೆ ವಾಯುವನ್ನು ಸೇರುತ್ತದೆ. ಹೀಗಾಗಿ ವಾಯುವನ್ನು ಮಲಿನಗೊಳಿಸುವ ಹೊಗೆ ಆದಷ್ಟೂ ಆಗದರೀತಿಯಲ್ಲಿ ದೀಪಗಳನ್ನು ಉರಿಸುತ್ತಿದ್ದರು. ಉದಾಹರಣೆಗೆ ಎಳ್ಳೆಣ್ಣೆಯ ದೀಪವನ್ನು ಉರಿಸುವುದರಿಂದ ಅದರ ಹೊಗೆ ಸುತ್ತಲಿನ ವಾತಾರಣವನ್ನು ಸೇರಿ-ಉಸಿರಾಟದ ಮೂಲಕ ನಮ್ಮೊಳಗೆ ಸೇರಿ, ಮನದ ಕ್ಲೇಶನಾಶಕ್ಕೆ ಕಾರಣವಾಗುತ್ತದೆ. ತುಪ್ಪದ ದೀಪ ಕೂಡ ಹಾಗೇ. ಸೀಮೆ ಎಣ್ಣೆ ದೀಪವನ್ನು ದೇವರಮುಂದೆ ಬೆಳಗುವುದಿಲ್ಲ ಏಕೆಂದರೆ ಕಲ್ಲೆಣ್ಣೆಯ ಹೊಗೆ ಆರೋಗ್ಯಕ್ಕೆ ಹಾನಿಕರ. ಮನುಷ್ಯ ಪರಿಶ್ರಮದಿಂದ ತಯಾರಿಸಿಕೊಂಡ ಕಡಲೆಕಾಯಿ ಎಣ್ಣೆ[ಶೇಂಗಾ ಎಣ್ಣೆ], ಹರಳೆಣ್ಣೆ, ಎಳ್ಳೆಣ್ಣೆ, ಕೊಬ್ಬರಿ ಎಣ್ಣೆ ಇಂತಹ ಎಣ್ಣೆಗಳನ್ನು ಮಾತ್ರ ದೀಪಗಳಿಗೆ ಬಳಸಲಾಗುತ್ತದೆ.

ಕಾಲೇಜೊಂದರ ಉಪನ್ಯಾಸಕರೊಬ್ಬರಿಗೆ ವೇದಿಕೆಯ ಕಾರ್ಯಕ್ರಮಗಳಲ್ಲಿ ದೀಪವನ್ನು ಬೆಳಗುವುದು ಬಹಳ ಕೋಪವನ್ನು ತರಿಸುತ್ತಿತ್ತಂತೆ. ಸದರೀ ಉಪನ್ಯಾಸಕರು ತಮ್ಮ ಉಪನ್ಯಾಸಗಳಲ್ಲಿ ದೀಪಗಳನ್ನು ಬೆಳಗುವವರ ಕುರಿತು ವೈದಿಕ ಧರ್ಮದವರು, ಮೂಢನಂಬಿಕೆಯುಳ್ಳವರು ಎಂದೆಲ್ಲಾ ಗಂಟೆಗಟ್ಟಲೆ ಉಪನ್ಯಾಸ ಬಿಗಿಯುತ್ತಿದ್ದರಂತೆ. ಒಂದು ದಿನ ವಿಶೇಷ ಸಮಾರಂಭವೊಂದಕ್ಕೆ ವಿದೇಶೀ ವಿಶ್ವವಿದ್ಯಾನಿಲಯದ ಮುಖ್ಯಸ್ಥರೊಬ್ಬರು ಅತಿಥಿಗಳಾಗಿ ಬರುವವರಿದ್ದರು. ಆ ದಿನದ ಕಾರ್ಯಕ್ರಮದ ವೇದಿಕೆ-ವ್ಯವಸ್ಥೆಯನ್ನು ಕಾಲೇಜಿನ ಪ್ರಾಚಹಾರ್ಯರು ತಾವೇ ಸ್ವತಃ ನಿಂತು ಮಾಡಿಸಿದ್ದರಂತೆ. ದೀಪಬೆಳಗುವ ಕಾರ್ಯಕ್ರಮದಿಂದ ಉದ್ಘಾಟನೆಗೊಳ್ಳುವ ಕಾರ್ಯಕ್ರಮದಲ್ಲಿ ದೀಪ ಬೆಳಗುತ್ತಿರುವಾಗ ಹಿನ್ನೆಲೆಯಲ್ಲಿ ಕಾಲೇಜು ವಿದ್ಯಾರ್ಥಿನಿಯರು ಭಕ್ತಿಗೀತೆಯೊಂದನ್ನು ಹಾಡಿದರಂತೆ. ತಾವೇ ಹಚ್ಚಿದ ದೀಪವನ್ನು ಮತ್ತೆ ಮತ್ತೆ ನಿಂತು ನೋಡಿದ ವಿದೇಶೀ ಗಣ್ಯರು ಅದರ ಫೋಟೊಗಳನ್ನು ತೆಗೆದು ಕೊಡುವಂತೇ ಎದುರಿದ್ದ ಛಾಯಾಗ್ರಾಹಕನಲ್ಲಿ ವಿನಂತಿಸಿದರಂತೆ, ಜೊತೆಗೆ ತಮ್ಮ ಉಪನ್ಯಾಸದಲ್ಲಿ ದೀಪದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿ How Beautiful..! ಎಂದು ಕೊನೆಯವರೆಗೂ ಉದ್ಗರಿಸುತ್ತಲೇ ಇದ್ದರಂತೆ. ದೀಪದಲ್ಲಿರುವ ದೈವತ್ವದ ಅರಿವು ಅವರಿಗಾಯ್ತೋ ಇಲ್ಲವೋ ಗೊತ್ತಿಲ್ಲ ಆದರೆ ದೀಪವೆಷ್ಟು ಸುಂದರ, ಮನಮೋಹಕ ಮತ್ತು ಎಷ್ಟು ಸಂತೋಷದಾಯಕ ಎಂಬುದನ್ನು ಅವರು ಅರಿತಿದ್ದರು. ಸಭಾಂಗಣದಲ್ಲಿ ಕುಳಿತು ಅವರ ಉಪನ್ಯಾಸವನ್ನು ಕೇಳುತ್ತಿದ್ದ ದೀಪ ವಿರೋಧಿ-ಉಪನ್ಯಾಸಕರಿಗೆ ತನ್ನ ಬಗೆಗೇ ಕೀಳರಿಮೆ ಹುಟ್ಟಲು ಆರಂಭವಾಯ್ತಂತೆ; ಮಾರನೇ ದಿನದಿಂದ ದೀಪ ಹಚ್ಚುವುದು ಮೂಢನಂಬಿಕೆ ಎಂದು ಭಾಷಣಬಿಗಿಯುವುದನ್ನು ನಿಲ್ಲಿಸಿದರಂತೆ.

ಅಮೇರಿಕಾದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬರಾಕ್ ಓಬಾಮಾ ತಮ್ಮ ಕಚೇರಿಯಲ್ಲಿ ಭಾರತೀಯ ಪುರೋಹಿತರಿಂದ ದೀಪವನ್ನು ಹಚ್ಚಿಸಿ "ಅಗ್ನಿ ಮೀಳೇ ಪುರೋಹಿತಂ....." ಎಂಬ ವೇದಮಂತ್ರವನ್ನು ಹೇಳಿಸಿ, ಕೇಳಿ ಖುಷಿಪಟ್ಟ ವಿಚಾರ ಜಗತ್ತಿನಾದ್ಯಂತ ಅನೇಕರಿಗೆ ತಿಳಿದಿದೆ. ಎಂದಾಗ ದೀಪದ ಮಹತ್ವ ಎಂಥದ್ದು ಎಂಬುದನ್ನು ನಾವು ಅರಿಯಬೇಕು.   

ದೀಪಗಳಲ್ಲಿ ವೈವಿಧ್ಯವಿದೆ, ಜ್ಯೋತಿಗೆ ನಿಗದಿತ ಆಕರವಿಲ್ಲದಿದ್ದರೂ ದೀಪವನ್ನು ಹಚ್ಚುವ ಹಣತೆಗಳಲ್ಲಿ, ದೀಪದ ಕಾಲು-ಕಂಬಗಳಲ್ಲಿ ವೈವಿಧ್ಯಗಳನ್ನು ಕಾಣಬಹುದು. ದೀಪದ ಕಾಲು-ಕಂಬದಮೇಲೆ ಮರದ ಟೊಂಗೆಗಳಂತೇ ಟಿಸಿಲಾಗುವ ಅಕಾರಗಳಿದ್ದು ಹತ್ತಾರು ಹಣತೆಗಳು ಅಲ್ಲಿರಬಹುದು. ರಥದ ಆಕಾರದಲ್ಲಿ ಸುತ್ತಮುತ್ತ ಹಣತೆಗಳಿರುವ ದೀಪದಕಂಬವಿರಬಹುದು. ಸಾಲಾಗಿ ಹಚ್ಚುವ ದೀಪಗಳನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಅದಕ್ಕೆಂತಲೇ ’ದೀಪಾವಳಿ’ ಎಂದೇ ಒಂದು ಹಬ್ಬವನ್ನು ಹೆಸರಿಸಿದರು.

ಮಿಥಿಲೆಯ ಜನಕನನ್ನು ಒಮ್ಮೆ ಒಂದು ಸಂದೇಹ ಬಲವಾಗಿ ಕಾಡಿತು. ರಾಜಗುರುಗಳಾದ ಯಾಜ್ಞವಲ್ಕ್ಯರನ್ನು ಕರೆಸಿದ ಆತ ಅವರಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ. ಪುರುಷನಿಗೆ ನಿಜವಾದ ಜ್ಯೋತಿ ಯಾವುದು ಎಂಬುದೇ ಆತನ ಸಮಸ್ಯೆ. ಯಾಜ್ಞವಲ್ಕ್ಯರು ಉತ್ತರಿಸುತ್ತಲೇ ಹೋದರು: ಮೊದಲು ಆದಿತ್ಯನೆಂದರು, ಜನಕ ಕೇಳಿದ: ಹಗಲಲ್ಲಿ ಸೂರ್ಯನಿರುತ್ತಾನೆ, ರಾತ್ರಿಯಲ್ಲಿ? ಜನಕರು ಹೇಳಿದರು: "ಚಂದ್ರ."  "ಇಬ್ಬರೂ ಇಲ್ಲದಾಗ ಗುರುಗಳೇ?" -ಅರಸ ಮತ್ತೆ ಕೇಳಿದ. "ಅಗ್ನಿಯೇ ಜ್ಯೋತಿ" ಎಂದರು ಗುರು ಯಾಜ್ಞವಲ್ಕ್ಯರು. "ಗ್ನಿಯೂ ಶಾಂತವಾದಾಗ ಯಾವುದು?" ಎಂಬ ಜನಕನ ಪ್ರಶ್ನೆಗೆ "ವಾಕ್, ಕತ್ತಲೆಯಲ್ಲಿ ಯಾವ ದಿಕ್ಕಿನಿಂದ ಪರಿಚಿತ ಧ್ವನಿ ಕೇಳಿಬರುವುದೋ ಆ ಕಡೆಗೆ ಮನುಷ್ಯ ಗಮನಕೊಡುತ್ತಾನಲ್ಲಾ, ಆಗ ಅದೇ ಜ್ಯೋತಿ."  ಅಷ್ಟಕ್ಕೇ ಜನಕನಿಗೆ ಸಮಾಧಾನವಾಗಲಿಲ್ಲ, ಆತ ಮತ್ತೆ ಕೇಳಿದ: "ಒಂದೊಮ್ಮೆ ಸೂರ್ಯ, ಚಂದ್ರ, ಅಗ್ನಿ, ವಾಕ್ ಯಾವುದೂ ಇಲ್ಲವಾದರೆ, ಪುರುಷ ಮಲಗಿ ನಿದ್ರಿಸುತ್ತಿದ್ದರೆ ಅಥವಾ ಕನಸು ಕಾಣುತ್ತಿದ್ದರೆ ಆಗ ಯಾವುದು ಜ್ಯೋತಿ?" ಯಾಜ್ಞವಲ್ಕ್ಯರು ಉತ್ತರಿಸಿದರು: "ಆಗ ಪುರುಷನಿಗೆ ಒಳಗಿನ ಆತ್ಮವೇ ಜ್ಯೋತಿ."  ಜನಕ ಸುಮ್ಮನಿರುವನೇ ಆತ್ಮನ ಬಗ್ಗೆ ಕೇಳಿತಿಳಿದುಕೊಳ್ಳಲು ಆರಂಭಿಸಿದ: "ಆತ್ಮನಾದರೂ ಯಾರು? ಆತ ಹೇಗಿದ್ದಾನೆ?"

ಆತ್ಮನ ಸ್ವರೂಪವನ್ನು ಪದಗಳಲ್ಲಿ ವರ್ಣಿಸುವುದು ಬಹಳ ಕಷ್ಟ; ಅದು ಅನುಭವಕ್ಕೆ ನಿಲುಕುವ ವಿಷಯವೇ ಹೊರತು ಹೇಳಲು ಬರುವಂಥದ್ದಲ್ಲ. ಆದರೂ ಕ್ಲಿಷ್ಟವಾದ ವಿಷಯವನ್ನು ಸರಳವಾಗಿ ಸ್ವಲ್ಪದರಲ್ಲಿ ಹೋಲಿಕೆಯ ಮೂಲಕ ಯಾಜ್ಞವಲ್ಕ್ಯರು ತಿಳಿಸಿಕೊಟ್ಟರು. ಹೊರಗಿನ ವ್ಯವಹಾರಗಳಿಗೇ ಆಗಲಿ ಅಥವಾ ಮಾನಸಿಕ ಕ್ರಿಯೆಗಳಿಗಾಗಲೀ ಬೆಳಕೆಂಬುದು ಬೇಕೇ ಬೇಕು. ಬೆಳಕು ಸ್ವಯಂಪ್ರಕಾಶಗೊಳ್ಳುವಂಥದ್ದಿರಬೇಕು. ಅಂತಹ ಬೆಳಕೇ ಪರಬ್ರಹ್ಮ, ಆತನೇ ಪರಂಜ್ಯೋತಿ. ಸೂರ್ಯ, ಚಂದ್ರ, ನಕ್ಷತ್ರ, ಬೆಂಕಿ, ವಿದ್ಯುತ್[ಮಿಂಚು], ದೀಪ ಇವುಗಳೆಲ್ಲಾ ಪ್ರಾಕೃತಿಕವಾಗಿರುವ ಜ್ಯೋತಿಗಳು. ನಾವು ಮನೆಗಳಲ್ಲಿ ಹಚ್ಚುವ ದೀಪಗಳು ಆ ಪರಂಜ್ಯೋತಿಯ ಪ್ರತೀಕಗಳು. ಅವುಗಳನ್ನು ಪೂಜಿಸುವುದು, ಗೌರವಿಸುವುದು ಪರಂಜ್ಯೋತಿಗೆ ನಾವು ಸಲ್ಲಿಸ ಬಹುದಾದ ಪ್ರಾಥಮಿಕ ಪೂಜೆ. ಪ್ರತಿಯೊಂದು ಮಂಗಳ ಕಾರ್ಯದಲ್ಲಿ ಸ್ವಸ್ತಿಕ ಬರೆಯುವುದರಿಂದ ಭೂತತ್ತ್ವವೂ ಮತ್ತು ಕಲಶ ಸ್ಥಾಪನೆಯಿಂದ ಜಲತತ್ತ್ವವೂ ಅರ್ಚಿಸಲ್ಪಡುತ್ತದೆ. ನಂದಾದೀಪಗಳ ಬೆಳಗುವಿಕೆಯಿಂದ ಜ್ಯೋತಿ ತತ್ತ್ವವು ಪೂಜೆಗೊಳ್ಳುತ್ತದೆ.

ಸಾಜ್ಯಂ  ತ್ರಿವರ್ತಿ ಸಂಯುಕ್ತಂ ವಹ್ನಿನಾಯೋಜಿತಂ ಮಯಾ |
ದೀಪಂ ಗ್ರಹಾಣ ದೇವೇಶ ತ್ರೈಲೋಕ ತ್ರಿಮಿರಾಪಃ ||

ತುಪ್ಪದೊಂದಿಗೆ ಮೂರು ಬತ್ತಿಗಳನ್ನಿಟ್ಟು, ಅಗ್ನಿಯಿಂದ ಅದನ್ನು ಹಚ್ಚಿ, ನಿನಗಾಗಿ ದೀಪವೊಂದನ್ನು ಕೊಡುತ್ತಿದ್ದೇನೆ ದೇವಾ, ಮೂರುಲೋಕವನ್ನೂ ಬೆಳಗುವ ನಿನಗಿದೋ ಅರ್ಪಣೆ ಎಂಬರ್ಥದಲ್ಲಿ ನಾವು ಆರತಿಯನ್ನು ಆರಂಭಿಸುತ್ತೇವೆ. ದೀಪಗಳ ಪೈಕಿ ಮಂಗಲಾರತಿಯೂ ಸಹ ಒಂದು. ಮಂಗಲಾರತಿ ನಡೆಯುವುದನ್ನು ನೋಡಿ ಕಣ್ದುಂಬಿಕೊಂಡು ನಮಸ್ಕರಿಸಿದರೆ ಸ್ವತಃ ಪೂಜೆಮಾಡಿದಷ್ಟೇ ಪುಣ್ಯ ಪ್ರಾಪ್ತವಾಗುತ್ತದೆ ಎಂಬುದು ಪ್ರಾಜ್ಞರ ಅಭಿಮತ. ದೇವರಿಗೆ ಗುಡಿಯೊಂದನ್ನು ಕಟ್ಟಿಕೊಡುತ್ತೇನೆ, ದೀಪವನ್ನು ಹಚ್ಚಿ ಬೆಳಕು ತೋರಿಸುತ್ತೇನೆ, ಹಸಿವು ನಿವಾರಿಸಿಕೊಳ್ಳಲು ನೈವೇದ್ಯ ನೀಡುತ್ತೇನೆ, ತೃಷೆಗಾಗಿ ಮಧುರ ರಸಭರಿತ ಪಾನೀಯಗಳನ್ನು ನೀಡುತ್ತೇನೆ ಎಂಬುದೆಲ್ಲಾ ಕೇವಲ ನಮ್ಮ ವಿನಮ್ರ ಭಾವನೆಯಷ್ಟೆ. ಧನಿಕನೊಬ್ಬನಿಗೆ ಏನನ್ನೋ ಉಡುಗೊರೆಕೊಟ್ಟಂತೆ, ಬ್ರಹ್ಮಾಂಡಕ್ಕೇ ನಾಯಕನಾದವನಿಗೆ ಆ ಧನಿಕನಿಗೆ ಅವುಗಳನ್ನೆಲ್ಲಾ ನಾವು ಕೊಟ್ಟು ಪೂರೈಸಲಾದೀತೇ? ಅಷ್ಟಕ್ಕೂ ಅವೆಲ್ಲಾ ಅವನ ಕೊಡುಗೆಗಳೇ. ಇಲ್ಲಿ ಮತ್ತೆ ’ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ತತ್ತ್ವ ಅಡಗಿರುವುದನ್ನು ನಾವು ಗಮನಿಸಬೇಕು. ಭಗವಂತನಿಗೆ ನಮ್ಮಿಂದ ಏನೂ ಬೇಕಾಗಿಲ್ಲ, ಆದರೆ ನಾವು ಭಕ್ತಿ, ಶ್ರದ್ಧೆ ಮತ್ತು ಶರಣಾಗತಿಯಿಂದ ಕೊಡುವ ಅಲ್ಪವನ್ನೂ ಸಹ ಆತ ಗಮನಿಸಬಲ್ಲ! ಅಲ್ಪವನ್ನೇ ಬೃಹತ್ ಎಂದು ಪರಿಗಣಿಸುವುದು ಆತನ ಔದಾರ್ಯ ಮತ್ತು ಸೌಜನ್ಯ. ನಮ್ಮಿಂದ ಸಲ್ಲಿಸಲ್ಪಟ್ಟ ಗೌರವಕ್ಕೆ ಆತ ನಮ್ಮ ಮೇಲೆ ಅನುಕಂಪಿತನಾಗುತ್ತಾನೆ. "ಪರವಾಗಿಲ್ಲಪ್ಪಾ, ನನ್ನನ್ನು ನೆನಪಿನಲ್ಲಿಟ್ಟುಕೊಂಡಿದ್ದಾನೆ" ಎಂದುಕೊಳ್ಳುತ್ತಾನೆ! ಹಾಗೆ ಚಿಕ್ಕದೀಪವನ್ನಾದರೂ ಹಚ್ಚಿ ಪರಂಜ್ಯೋತಿಗೆ ಅದನ್ನು ಅರ್ಪಿಸುವುದರ ಮೂಲಕ ಆತನ ಅನುಗ್ರಹಕ್ಕೆ ಪಾತ್ರರಾಗುವುದು ಸಾಧ್ಯ; ಹಾಗೆ ಮಾಡುವುದು ಸುಸಂಸ್ಕೃತರ ಕರ್ತವ್ಯ. ’ತಮಸೋಮಾ ಜ್ಯೋತಿರ್ಗಮಯ’-ಕತ್ತಲೆಯಿಂದ ಬೆಳಕಿನೆಡೆಗೆ ನಡೆಸು ಎಂಬುದು ಇಂದು ನಿನ್ನೆಯ ಪ್ರಾರ್ಥನೆಯಲ್ಲ, ಸಹಸ್ರಾರು ವರ್ಷಗಳಿಂದ ಸಾಗಿಬಂದ ಪ್ರಾರ್ಥನೆ. ಇಷ್ಟನ್ನು ಶೋಧಿಸಿದ ಮಹನೀಯ ಮಹರ್ಷಿಗಳ ಮಹತ್ಕಾರ್ಯ ನಿಜಕ್ಕೂ ನಿತ್ಯ ಸ್ಮರಣೀಯ, ನಿತ್ಯ ಮನನೀಯ, ನಿತ್ಯ ರಮಣೀಯವೂ ಕೂಡಾ.    ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಹಾರ್ದಿಕ ಶುಭಾಶಯಗಳು.