ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, July 28, 2012

ಇದ್ದುದನ್ನು ಹೇಳಿದರೆ ಎದ್ದು ಬಂದು ಎದೆಗೆ ಒದೆಯುತ್ತಾರೆ !


ಇದ್ದುದನ್ನು ಹೇಳಿದರೆ ಎದ್ದು ಬಂದು ಎದೆಗೆ ಒದೆಯುತ್ತಾರೆ !

"ಈ ವಯಸ್ಸಿನಲ್ಲೂ ನಿಮ್ಮನ್ನು ನೋಡಿದರೆ ಇನ್ನು ಪ್ರಾಯದಲ್ಲಿ ಹೇಗಿದ್ದಿರಬಹುದು ಅನ್ನಿಸುತ್ತದೆ, ಅಬ್ಬಬ್ಬಾ ತುಂಬಾ ಚೆನ್ನಾಗಿದೀರ ಬಿಡ್ರಿ" ಎಂದುಬಿಟ್ಟರೆ ಇಂದಿನ ಮಹಿಳೆಯರಿಗೆ ಆಕಾಶಕ್ಕೆ ಮೂರೇ ಗೇಣು! ಸಂತೂರ್ ಸೋಪಿನ ಜಾಹೀರಾತು ಹೇಳುತ್ತದೆ: ಮಮ್ಮಿಯಾಗಿ ಬಹಳಕಾಲವಾದರೂ ಅಷ್ಟೆಲ್ಲಾ ದೊಡ್ಡ ಮಗಳಿದ್ದಾಗಲೂ ಆ ಮಹಿಳೆ ಹುಡುಗಿಯಂತೆಯೇ ಇದ್ದಾಳೆ ಎಂದು! ಜಾಹೀರಾತಿನಲ್ಲಿ ಕಾಣುವ ಮಹಿಳೆ ಇನ್ನೂ ಮಮ್ಮಿಯಾಗಿರದ ಹುಡುಗಿಯೇ ಆಗಿರುತ್ತಾಳೆ ಎಂಬ ಕಲ್ಪನೆ ನೋಡುಗ ಸ್ತ್ರೀಯರಲ್ಲಿರುವುದಿಲ್ಲ. ಶಿಲ್ಪಾಶೆಟ್ಟಿಯ ಕೃತ್ರಿಮ ನಗೆ, ಕರೀನಾ ಕಪೂರಳ ಝೀರೋ ಸೈಜು, ಹೇಮಾಮಾಲಿನಿ ೬೦ ವರ್ಷದವರೆಗೂ ’ಡ್ರೀಮ್ ಗರ್ಲ್’ ಎಂದು ಎಲ್ಲರಮೇಲೆ ಹೇರುತ್ತಲೇ ಬಂದ ಗುಟ್ಟು, ಜ್ಯೂಹಿ ಚಾವ್ಲಾಳ ಕೆನ್ನೆಗುಳಿ, ಮಾಧುರಿ ದೀಕ್ಷಿತಳ ನರ್ತನ ಶೈಲಿ, ಸೋನಾಕ್ಷಿ ಸಿನ್ಹಾಳ ಹಸಿಹಸಿ ನಗೆ, ಕತ್ರಿನಾ ಕೈಫಳ ನಾಜೂಕು ಶರೀರ...ಇವೆಲ್ಲಾ ತಮ್ಮದಾಗಿರಲಿ ಅಂತಲೋ ಅಥವಾ ತಾವೂ ಹೆಚ್ಚುಕಮ್ಮಿ ಹಾಗೇ ಇದ್ದೇವೆ ಎಂತಲೋ ಭ್ರಮಿಸಿಕೊಳ್ಳುವ ಅನೇಕ ಮಹಿಳೆಯರ ದಿನದ ಬಹಳ ಸಮಯ ಸೌಂದರ್ಯ ವರ್ಧನೆಗೆ, ಕುಂದಣದಲ್ಲಿ ಸೌಂದರ್ಯದ ಸ್ವಪರಿವೀಕ್ಷಣೆಗೆ ಮತ್ತು ’ತಾನು ಸುಂದರಿ’ ಎಂಬುದನ್ನು ಬಹಳ ನೋಡಿ-ಒಪ್ಪಿ-ಹೊಗಳಿ ಜಗತ್ತಿಗೇ ತಿಳಿಸಲಿ ಎಂಬ ಹೆಬ್ಬಾಶೆಯಿಂದ ಮಾಡುವ ಪ್ರಚಾರಕ್ಕೆ ವ್ಯಯವಾಗುತ್ತದೆ! ಈ ಜಗತ್ತಿನ ಯಾವ ಹುಡುಗಿಯೂ ತಾನು ಚೆನ್ನಾಗಿಲ್ಲ ಎಂದು ಒಪ್ಪಿಕೊಳ್ಳುವುದೇ ಇಲ್ಲವೇನೋ; ಗುಟ್ಟೊಂದು ಹೇಳಿಬಿಡುತ್ತೇನೆ-ನೋಡಲು ಚೆನ್ನಾಗಿರುವವರೆಲ್ಲಾ ಚೆನ್ನಾಗಿದ್ದಾರೆ ಎಂಬುದರಲ್ಲಿ ಅರ್ಥವಿಲ್ಲ; ಚೆನ್ನಾಗಿರದವರೆಲ್ಲಾ ಚೆನ್ನಾಗಿಲ್ಲ ಎಂಬುದರಲ್ಲೂ ಹುರುಳಿಲ್ಲ.    

ಬ್ಯೂಟಿ ಈಸ್ ಬಟ್ ಸ್ಕಿನ್ ಡೀಪ್ -ಎಂಬುದೊಂದು ಆಂಗ್ಲ ಗಾದೆ. ಪ್ರಾಯದಲ್ಲಿ ಕತ್ತೆಯೂ ಸುಂದರವಾಗಿ ಕಾಣುತ್ತದಂತೆ! ಹಾಗೆಯೇ ವ್ಯಕ್ತಿಯ ಬಾಹ್ಯ ಸೌಂದರ್ಯ  ಜೀವನದ ಒಂದು ಕಾಲಘಟ್ಟಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಸೌಂದರ್ಯವೇ ಬಹುದೊಡ್ಡ ಆಸ್ತಿ ಎಂಬಂತೇ ತಿಳಿದುಕೊಂಡವರಿಗೆ ವಯಸ್ಸು ಸರಿದು ಚರ್ಮ ಸುಕ್ಕುಗಟ್ಟಲೋ ಹಣೆ ನಿರಿಗೆಗಟ್ಟಲೋ ಆರಂಭಿಸಿದಾಗ ಈ ಭೂಮಿಯಮೇಲೆ ಜೀವಸಹಿತ ಇದ್ದುದಾದರೂ ಯಾಕೆ ಅನ್ನಿಸಬಹುದು! ಆದರೂ, ವಯಸ್ಸಿನ ಸಹಜವಾದ ಪ್ರಕ್ರಿಯೆಯನ್ನು ಒಪ್ಪಿಕೊಳ್ಳಲೇಬೇಕಲ್ಲಾ? ವಯಸ್ಸನ್ನು ಮರೆಮಾಚಲು ಇಲ್ಲದ ಬಣ್ಣ-ಸುಣ್ಣ ಎಲ್ಲಾ ಸೃಷ್ಟಿಸಿಕೊಂಡಿದ್ದೇವೆ. ಸುರಿವ ಹಣವನ್ನವಲಂಬಿಸಿ ಹೆಚ್ಚಿನ ಕಾಲ ವಯಸ್ಸನ್ನು ಮರೆಮಾಚುವ ಸೌಲಭ್ಯಗಳು ಲಭ್ಯವಿವೆ; ಆದರೂ ಹೊರಗಿನ ತೆರೆಯನ್ನು ಸರಿಸಿ ಬೆಳಿಗ್ಗೆ ಎದ್ದು ಕನ್ನಡಿಯಲ್ಲಿ ಪ್ರತಿಬಿಂಬ ನೋಡಿಕೊಳ್ಳುವಾಗ ನಿಜರೂಪ ದರ್ಶನ ಆಗೇ ಆಗುತ್ತದೆ!ಬಟಕ್ಸ್ ಪಟಕ್ಸ್ ಮಿಟುಕ್ಸ್ ಎಲ್ಲಾ ತಟಕ್ಕನೆ ತಟಸ್ತವಾಗಿ ನಿಜದ ಅರಿವಿಗೆ ಮನ ಬಯಸುತ್ತದೆ. ಮತ್ತೆ ಬಿಸಿಲೇರಿದಂತೇ ಏನೋ ಹುಮ್ಮಸ್ಸು; ತಾನೂ ಬಿಪಾಶಾ ಬಸುವಿಗಿಂತ ಸೆಕ್ಸಿ ಎನ್ನಿಸಬೇಕು, ತಾನೂ ಮಲ್ಲಿಕಾ ಶೇರಾವತ್ ಗಿಂತಾ ದೊಡ್ಡ ಫಿಗರ್ ಎನ್ನಿಸಬೇಕು, ತಾನೂ ಐಶ್ವರ್ಯ ರೈಗಿಂತ ಬೋಲ್ಡ್ ಆಗಬೇಕು ! ಒಳಗೊಳಗೇ ಹೀಗೆಲ್ಲಾ ಅಂದುಕೊಳ್ಳುವ ಮಹಿಳೆಯರೇ ಬಹಳ!    

ನೀವು ಯಾವುದೇ ಬಟ್ಟೆ ಅಂಗಡಿಗೆ ಹೋಗಿ ಗಂಡಸಿಗೆ ಸಿಗುವ ವೆರೈಟಿ ದಿರಿಸುಗಳಿಗೂ ಹೆಂಗಸರಿಗೆ ಸಿಗುವ ವರೈಟಿಗಳಿಗೂ ಸಂಖ್ಯೆಯಲ್ಲಿ ಯಾರು ಮುಂದೆ ಹೋಗುತ್ತಾರೆ ಗೊತ್ತೇ? ಇದು ಕೇವಲ ಬಟ್ಟೆಗೆ ಮಾತ್ರ ಸೀಮಿತವಲ್ಲ, ಆಭರಣ, ಕಾಸ್ಮೆಟಿಕ್ಸ್, ಚಪ್ಪಲಿಗಳು, ಬ್ಯಾಗ್ ಗಳು, ವಾಚುಗಳು, ಬಿಂದಿ[ಕ್ಷಮಿಸಿ: ಇಟ್ಟುಕೊಳ್ಳುವವರಿಗೆ ಮಾತ್ರ]-ಸೆಂಟು, ಬಣ್ಣದ ಛತ್ರಿ ....ಹೀಗೇ ಇದು ಮುಗಿಯದ ಕಥೆಯೇ ಸರಿ. ಈ ಪ್ರಪಂಚದ ಒಬ್ಬಳೇರ್ ಒಬ್ಬ ಮಹಿಳೆಗೂ ಸಂತೃಪ್ತಿ ಎಂಬುದು ಇಲ್ಲವೇ ಇಲ್ಲವೇನೋ[ ಸಾಧು-ಸನ್ಯಾಸಿಗಳೆನಿಸಿದವರ ಅಪವಾದ ಹೊರತುಪಡಿಸಿ]. ತನ್ನಲ್ಲಿರುವುದು ಇನ್ಯಾರಲ್ಲೂ ಇರಬಾರದು ತನ್ನಲ್ಲಿರುವುದು ಇನ್ಯಾರಿಗೂ ಸಿಗಕೊಡದು, ಅವರಲ್ಲಿರುವ ಎಲ್ಲವೂ ತನ್ನಲ್ಲಿ ಇರಲೇಬೇಕು ಎಂಬ ಪೈಪೋಟಿ- ಮತ್ಸರಗಳ ಮೇಲಾಟ ಸದಾ ನಡೆಯುತ್ತಲೇ ಇರುತ್ತದೆ.  ಪ್ರತಿಯೊಬ್ಬ ಮಹಿಳೆಗೂ ತನ್ನ ವಾರ್ಡ್ ರೋಬ್ ಬಗ್ಗೆ ಕೊಚ್ಚಿಕೊಳ್ಳುವ ಹಂಬಲ ಬಹುಶಃ ಹುಟ್ಟಿದಾಗಲೇ ಆರಂಭವಾಗಿಬಿಟ್ಟಿರುತ್ತದೆ. ಈ ವಿಷಯದಲ್ಲಿ ವರ್ಕಿಂಗ್ ವೂಮನ್ ಹೌಸ ವೈಫ್ [ಅಥವಾ ಬೆಟರ್]ಹೋಮ್ ಮೇಕರ್ ಕಾಲೇಜ್ ಗರ್ಲ್ ಇಂತಹ ಯಾವುದೇ ವಿನಾಯಿತಿ ಇರುವುದಿಲ್ಲ! ಇರುವುದಕ್ಕಿಂತಾ ಹೆಚ್ಚು ತೆರೆದು ತೋರುವ ಹುಚ್ಚು ಹಂಬಲ ಹೆಚ್ಚಾಗುತ್ತಲೇ ನಡೆದಿದೆ; ಇದು ವಿಷಾದಕ್ಕೂ ಕಾರಣವಾಗಿದೆ.  

ಮನುಸ್ಮೃತಿಯಲ್ಲಿ ಇರುವ ಕೆಲವು ವಿಷಯಗಳು ಮೌಢ್ಯ ತುಂಬಿದ್ದರೂ ಹಲವು ವಿಷಯಗಳು ಭಾರತೀಯ ಸಂಸ್ಕೃತಿಯನ್ನು ಕಾಪಿಡುವುದಕ್ಕೆ ಪೂರಕವಾಗಿರುತ್ತವೆ. 

ಪಿತಾ ರಕ್ಷತಿ ಕೌಮಾರೇ ಭರ್ತಾ ರಕ್ಷತಿ ಯೌವನೇ |
ಪುತ್ರಾ ರಕ್ಷತಿ ವಾರ್ಧಕ್ಯೇನ ಸ್ತ್ರೀ ಸ್ವಾತಂತ್ರ್ಯಮರ್ಹತಿ ||

ಎಂದು ಯಾಕೆ ಹೇಳಿದರು ಎಂಬುದರ ಬಗ್ಗೆ ನಾವು ಬಹಳ ಆಳವಾಗಿ ಚಿಂತಿಸಿದರೆ ಅದರ ಹೊಳಲು ನಮ್ಮರಿವಿಗೆ ಬರುತ್ತದೆ. ಸ್ತ್ರೀ ಎಂಬುದನ್ನು ಹೂವಿಗೂ ಪುರುಷ ಎಂಬುದನ್ನು ದುಂಬಿಗೂ ಹೋಲಿಸಿದರೆ ಸ್ತ್ರೀ ಸ್ವೀಕರಿಸುವ ಪಾತ್ರ ನಿರ್ವಹಿಸುತ್ತಾಳೆ. ಪುರುಷ ಬೀರುವ ಪಾತ್ರ ನಿರ್ವಹಿಸುತ್ತಾನೆ. ದುಂಬಿ ನಿಂತೆಡೆ ನಿಲ್ಲುವುದಿಲ್ಲ ಎಂಬುದು ಎಲ್ಲರಿಗೂ ತಿಳಿದೇ ಇದೆಯಾದರೂ ಈ ಜಮಾನದಲ್ಲೂ ಭಾರತೀಯ ಪುರುಷರಲ್ಲಿ ಅನೇಕರು ಏಕಪತ್ನೀ ವೃತಸ್ಥರಾಗಿದ್ದಾರೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು! ಸ್ವೀಕರಿಸುವ ಸಹಜಗುಣಧರ್ಮದ ಹೂವು ಸ್ವೀಕರಿಸಿದ ನಂತರ ಮರ/ಗಿಡ ಫಲಭರಿತವಾಗುತ್ತದೆ ಹೇಗೋ ಹಾಗೆಯೇ ಸ್ವೀಕರಿಸಿದ ನಂತರ ಸ್ತ್ರೀಯ ಶರೀರ ಇಂದಿನ ಕಾಲದಲ್ಲಿ ಎಲ್ಲಾಸರ್ತಿಯೂ ಫಲಭರಿತ ವಾಗದೇ ಇದ್ದರೂ ಸಹಿತ ಮನಸ್ಸು ಮಾತ್ರ ಫಲಭರಿತವಾಗುತ್ತಲೇ ಇರುತ್ತದೆ. ಮನಸ್ಸು ಹಲವು ದುಂಬಿಗಳ ರೇತಸ್ಸುಗಳನ್ನು ಪಡೆಯುವುದರಿಂದ ಕಲ್ಮಶವಾಗುತ್ತದೆ ಎಂಬುದು ತಾತ್ಪರ್ಯ. ’ಗಂಡು ಕುಳಿತು ಕೆಡ್ತು ಹೆಣ್ಣು ತಿರುಗಿ ಕೆಡ್ತು’ ಎಂದು ನಮ್ಮ ಹಿಂದಿನವರು ಹೇಳಿತ್ತಿದ್ದರು. ತಿರುಗಾಟಕ್ಕೆ ತೊಡಗುವ ಹೆಣ್ಣಿನಮೇಲೆ ಹಲವು ಗಂಡುದುಂಬಿಗಳ ಕಣ್ಣು ಬಿದ್ದೇ ಬೀಳುತ್ತದೆ; ಮುಂದೆ ಅಗಬಹುದಾದದ್ದೆಲ್ಲಾ ನಿಮಗೂ ವಿದಿತವೇ.  

ಸ್ತ್ರೀಗೆ ಸೌಂದರ್ಯ ಎಂಬುದು ದೇವರು ಕೊಟ್ಟ ಅಥವಾ ಪ್ರಕೃತಿ ಸಹಜ ವರ. ಸುಂದರಿಗೆ ಶೀಲವೂ ಅಷ್ಟೇ ಮುಖ್ಯ. ಕಾಮಾತುರರಾದ ಗಂಡಸರ ಬಳಗದ ನಡುವೆ ಸ್ತ್ರೀಯೋರ್ವಳೇ ಸಿಕ್ಕರೆ ಏನಾಗಭುದೆಂಬುದಕ್ಕೆ ಚಲಿಸುವ ರೈಲಿನಿಂದ ಕೆಳಗೆ ದೂಡಿದ ಮಂಡ್ಯದ ಉದಾಹರಣೆಯೇ ಸಾಕು; ಇನ್ನೂ ಲಕ್ಷೋಪಲಕ್ಷ ಘಟನೆಗಳು ಯಾರಿಗೂ ವರದಿಯಾಗದ ರೀತಿಯಲ್ಲಿ ಕರಗಿಹೋಗುತ್ತವೆ ಬಿಡಿ! ಅಬಲೆಯಾದ ಸುಂದರಿಗೆ ಬಾಲ್ಯದಲ್ಲಿ ಅವಳ ತಂದೆ ರಕ್ಷಣೆಕೊಡಬೇಕು, ಹರೆಯದಲ್ಲಿ ಅವಳ ಗಂಡ ರಕ್ಷಣೆ ಕೊಡಬೇಕು ಮತ್ತು ಮುಪ್ಪಿನಕಾಲದಲ್ಲಿ ಅವಳ ಮಕ್ಕಳು ಅವಳಿಗೆ ರಕ್ಷಣೆ ಕೊಡಬೇಕು ಎಂಬುದು ಮೇಲಿನ ಸಂಸ್ಕೃತದ ಹೇಳಿಕೆಯ ಸಾರ. ಅಪ್ಪ ಎಂಬಾತನೇ ಅತ್ಯಾಚಾರವೆಸಗುವ, ಗಂಡ ಎನಿಸಿಕೊಳ್ಳುವ ಪುರುಷ ತನ್ನ ಕಾಮವಾಂಛೆ ತೀರಿದಮೇಲೆ ಹೊರಗಟ್ಟುವ, ತನ್ನ ಹೊಟ್ಟೆಬಟ್ಟೆಕಟ್ಟಿಕೊಂಡು ಪ್ರೀತಿಯಿಂದ ಬೆಳೆಸಿದ ಮಕ್ಕಳೇ ವೃದ್ಧೆಯಾದಾಗ ತನ್ನನ್ನು ವೃದ್ಧಾಶ್ರಮಕ್ಕೆ ಕರೆದೊಯ್ದುಬಿಟ್ಟುಬರುವ ಅಪವಾದಗಳು ಇಂದು ಜಾಸ್ತಿಯಾಗಿ ವಿಶೇಷವೇ ಅಲ್ಲವೆಂಬತಾಗಿಬಿಟ್ಟಿದೆ; ಯಾಕೆಂದರೆ ಜನತೆಗೆ ಯಾರಮೇಲೂ ಹಿಡಿತವಿಲ್ಲ. ಸಮಾಜದಲ್ಲಿ ಕೆಟ್ಟಕೆಲಸ ಮಾಡಿದವರಿಗೆ ಅನ್ಯಾಯಮಾಡಿದವರಿಗೆ ಕೊಲೆಸುಲಿಗೆ ಮಾಡಿದವರಿಗೆ ಸಿಗುವಷ್ಟು ಸುಲಭವಾಗಿ ಜಾಮೀನು ಎಂಬುದು ಮುಗ್ಧಜೀವಿಗಳಾಗಿ ಬಲಿಪಶುಗಳಾದವರಿಗೆ ಸಿಗುವುದಿಲ್ಲ! ಟಿಪ್ಪೂ ಸುಲ್ತಾನ ತಪ್ಪಿತಸ್ಥರನ್ನು ನಂದಿಬೆಟ್ಟದ ಟಿಪ್ಪು ಡ್ರಾಪ್ನಿಂದ ಉರುಳಿಬಿಡುತ್ತಿದ್ದನಂತೆ! ಹಿಂದಕ್ಕೆ ರಾಜಮಹಾರಾಜರುಗಳ ಕಾಲದಲ್ಲಿ ತಪ್ಪಿತಸ್ಥರಿಗೆ ಶೀಘ್ರವಾಗಿ ತಕ್ಕ ಶಿಕ್ಷೆಯಾಗುತ್ತಿತ್ತು; ಜನ ತಪ್ಪು ಮಾಡಲು ಹೆದರುತ್ತಿದ್ದರು; ಸಮಾಜ ಒಳ್ಳೆಯತನಕ್ಕೆ ಬೆಲೆಕೊಡುತ್ತಿತ್ತು. ತನ್ನಪ್ಪ ವರದಕ್ಷಿಣೆ ತೆರುವಾಗ ಅನುಭವಿಸಿದ ನೋವನ್ನು ಮರೆಯುವ ಮಹಿಳೆ ತನಗೆ ಸೊಸೆಯಾಗಿ ಬರುವವಳನ್ನು ಕಾಡುವಾಗ ತಾನು ಹಿಂದೆ ಅನುಭವಿಸಿದ್ದಕ್ಕೆ ಹಾಗೆ ಸೇಡುತೀರಿಸಿಕೊಳ್ಳುತ್ತಾಳೋ ಎಂದು ಭಾಸವಾಗುತ್ತದೆ. ಈ ನಮ್ಮ ಕರ್ನಾಟಕದಲ್ಲಿ ವರದಕ್ಷಿಣೆಯ ಕಿರುಕುಳದಿಂದ ಸಾಯುವ ಅದೆಷ್ಟು ಮಂದಿ ಮಹಿಳೆಯರಿಲ್ಲ? 

ಇಂತಹ ಸಮಸ್ಯೆಯನ್ನು ನಿವಾರಿಸಿಕೊಳ್ಳುವ ಸಲುವಾಗಿ ಹೆಣ್ಣುಹೆತ್ತವರು ತಮ್ಮ ಹೆಣ್ಣುಮಕ್ಕಳನ್ನು ಶಾಲೆ-ಕಾಲೇಜು ಎಂದು ಹೆಚ್ಚಿನ ವಿದ್ಯೆಯನ್ನು ಕೊಡಿಸಿದ್ದಾರೆ, ಕೊಡಿಸುತ್ತಿದ್ದಾರೆ, ಕೊಡಿಸುತ್ತಾರೆ. ಆದರೆ ಓದಿದ ಹೆಣ್ಣುಮಕ್ಕಳು ಓದುವ ಹಂತದಲ್ಲೇ ತನ್ನತನವನ್ನು ಕಳೆದುಕೊಳ್ಳಲೂ ಬಹುದು, ಓದಿದ ನಂತರ ಉದ್ಯೋಗಕ್ಕೆ ಸೇರಿಕೊಂಡು ಸಾಫ್ಟ್ ವೇರು,ಕಾಲ್ ಸೆಂಟರು ಹಾಳೂ ಮೂಳೂ ಅಂತ ಇರುವ ಹಲವು ಉದ್ಯೋಗಾವಕಾಶಗಳನ್ನು ಬಳಸಿಕೊಂಡು ಅಲ್ಲಿಗೆ ಹೋದಾಗ, ಸಹೋದ್ಯೋಗಿಯೋ ಅಥವಾ ಸೀನಿಯರೋ ಇನ್ಯಾರೋ ಆಗಿರುವ ಗಂಡಸಿನ ತೃಷೆಯನ್ನು ತೀರಿಸಬೇಕಾದ ಅನಿವಾರ್ಯತೆ ಒದಗುತ್ತದೆ; ಇದನ್ನು ಬಹುತೇಕ ಜನ ಒಪ್ಪಿಕೊಳ್ಳದಿದ್ದರೂ ಇದು ತೆಗೆದುಹಾಕುವ ಮಾತಲ್ಲ ಎಂಬುದನ್ನು ಗಮನಿಸಿ. ಹಾಗಾಗಿಯೇ ಇಂದು ’ಲಿವ್-ಇನ್’, ’ಜಸ್ಟ್ ಫ್ರೆಂಡ್ ಶಿಪ್’, ’ಡೇಟಿಂಗ್’ ಹೀಗೇ ಇವೆಲ್ಲಾ ಆಟಗಳು ಆರಂಭವಾಗಿವೆ. ’ನೋ ಸ್ಟ್ರಿಂಗ್ಸ್ ಅಟಾಚ್ಡ್’ ಎಂಬ ಹೆಸರಲ್ಲಿ ಪರಸ್ಪರ ಯಂತ್ರಗಳಂತೇ ಕೂಡಿಸುಖಿಸುವುದಕ್ಕೆ ಬಯಸುವ ಗಂಡಸರು ಹೇರಳ ಸಂಖ್ಯೆಯಲ್ಲಿದ್ದಾರೆ. ಪಕ್ಕದ ಮನೆಯ ಅಂಕಲ್ಲು ಎಷ್ಟೇ ಒಳ್ಳೆಯವನಾಗಿದ್ದರೂ ಅಪ್ಪ ಮನೆಯಲ್ಲಿಲ್ಲದಾಗ ಆತ ನೋಡುವ ನೋಟ ಬೇರೆಯೇ ರೀತಿ ಇರುತ್ತದೆಯಾದರೂ ಮಗಳಿಗೆ ಅಪ್ಪನಲ್ಲೋ ಅಮ್ಮನಲ್ಲೋ ಹೇಳಿಕೊಳ್ಳಲು ಸಾಧ್ಯವಾಗುತ್ತಿಲ್ಲ!" ನೀನು ಕರೀನಾ ಥರ ಇದ್ದೀಯಾ ಕಣೆ... ಆಯ್ ಲೈಕ್ ಯೂ ವೆರಿ ಮಚ್" ಎಂದೆಲ್ಲಾ ಹೇಳುವ ಆತ ಸಮಯಸಾಧಿಸಿ ಆಕೆಯ ಮನ ಗೆಲ್ಲಲು ಪಣತೊಟ್ಟುಬಿಡುತ್ತಾನೆ.  ತನ್ನಪ್ಪ ಎಷ್ಟು ಒಳ್ಳೆಯವನು ಎಂದುಕೊಂಡ ಯಾವುದೋ ಮಗಳಿಗೆ ಅಪ್ಪನನ್ನು ಇನ್ಯಾವುದೋ ಮಹಿಳೆ ಹಿಡಿದು ಥಳಿಸಿದಾಗಲೇ ಅಪ್ಪನ ’ರೂಪ’ ಬಹಿರಂಗಕ್ಕೆ ಬರುತ್ತದೆ! ಕ್ಷಮಿಸಿ ಇದು ಎಲ್ಲಾ ಗಂಡಸರಿಗೂ ಅಪ್ಲೈ ಆಗುವುದಿಲ್ಲ, ಆದರೆ ಯಾರಿಗೆ ಅಪ್ಲೈ ಆಗುತ್ತದೆ ಎಂಬುದನ್ನು ಹೇಳಲಿಕ್ಕೂ ಬರುವುದಿಲ್ಲ! ಜನ್ಮದಾತ ಅಪ್ಪ ಬಹುತೇಕ ಕೇಸುಗಳಲ್ಲಿ ಉತ್ತಮನ್ರ್ಏ ಆಗಿರುತ್ತಾನೆ, ಕೈಹಿಡಿವ ಗಂಡ ಹೆಚ್ಚುಪಕ್ಷ ಒಳ್ಳೆಯವನೇ ಆಗಿರುತ್ತಾನೆ, ಹುಟ್ಟುವ ಮಕ್ಕಳು ಸಾಮಾನ್ಯವಾಗಿ ವೃದ್ಧಾಶ್ರಮಕ್ಕೆ ನೂಕದ  ತಿಳುವಳಿಕೆಯುಳ್ಳವರಾಗಿರುತ್ತಾರೆ ಎಂಬ ಅತಿಸಾಮಾನ್ಯ ಫಾರ್ಮ್ಯುಲಾ ’ಪಿತಾ ರಕ್ಷತು .....’ ಬರೆದಿದ್ದಾರೆ. 

ಗಂಡು ಪ್ರಕೃತಿಯ ಪುತ್ರ. ಆತನಿಗೆ ಹೆಣ್ಣನ್ನು ಕಂಡರೆ ಬಹುಬೇಗ ಅಕರ್ಷಣೆಯಾಗುತ್ತದೆ, ಇದು ಆತನ ತಪ್ಪಲ್ಲ-ಸಹಜ ದೈಹಿಕ ಪ್ರತಿಕ್ರಿಯೆ. ಇದನ್ನು ಎಲ್ಲರಿಂದಲೂ ನಿಗ್ರಹಿಸಲು ಸಾಧ್ಯವಿಲ್ಲ. ಜಿತೇಂದ್ರ ಅಥವಾ ಜಿತೇಂದ್ರಿಯ ಎಂದು ಹೆಸರಿಟ್ಟುಕೊಂಡಮಾತ್ರಕ್ಕೆ ಇಂದ್ರಿಯಗಳನ್ನು ಜಯಿಸುವ ತಾಕತ್ತು ಇರುತ್ತದೆ ಎಂದುಕೊಳ್ಳಲಾಗದಲ್ಲಾ? ಯುಗಮಹಿಮೆಯಿಂದ ಕಾವಿದಿರಿಸಿನಲ್ಲಿರುವ ಎಂತೆಂತೆಹ ಕಾಮಿಗಳನ್ನು ನೋಡುತ್ತೇವೆ; ಅರ್ಜುನ ಸನ್ಯಾಸಿಯ ಕಥೆ ಭಾರತಕಥೆಯಲ್ಲೇ ಬಂದಿದ್ದರೂ ಅದನ್ನು ನಾವು ತೀರಾ ಒಪ್ಪುತ್ತಿರಲಿಲ್ಲ ಅಲ್ಲವೇ? ಈ ಭವ್ಯ ಭಾರತದ ಎರಡು ರೂಪಕಗಳಾದ ರಾಮಾಯಣ ಮತ್ತು ಮಹಾಭಾರತಗಳು ಪೂರ್ವಜರು  ತಮ್ಮ ಅನುಭವದಿಂದ ನಮಗೆ ಅನುಗ್ರಹಿಸಿದ ದಾರಿದೀವಿಗೆಗಳಾಗಿವೆ. ಅಲ್ಲಿ ಬರೆದಿರುವ ಎಲ್ಲವೂ ಸತ್ಯವೇ. ರಂಜನೆಯ ನೆಪದಲ್ಲಿ ಕಾಮದ ತೆವಲಿಗೆ ಪೂರಕವಾಗುವ/ಉತ್ತೇಜಕವಾಗುವ ವಸ್ತುವಿಷಯಗಳನ್ನು-ದೃಶ್ಯಗಳನ್ನು ಸಮೀಕರಿಸಿ ಉಣಬಡಿಸುವ ಸಿನಿಮಾ ಮತ್ತು ಇನ್ನುಳಿದ ಮಾಧ್ಯಮಗಳು ಗಂಡಿನಲ್ಲಿ ಅಡಗಿರುವ ಕಾಮವ್ಯಾಘ್ರವನ್ನು ಕೂಗಿ ಎಬ್ಬಿಸುತ್ತವೆ. ಹಾವಾಡಿಗನ ಬುಟ್ಟಿಯಲ್ಲಿ ಹೆಡೆಮುದುರಿ ಮಲಗಿದ್ದ ಹಾವು ತೂತು ಕೊರೆದ ಬುಟ್ಟಿಯಿಂದ ಸುಯ್ಯನೆ ಹೊರಹೊರಟು ನುಗ್ಗಿಸಾಗುತ್ತದೆ! ಇಲ್ಲಿ ಹಾವಾಡಿಗನನ್ನು ವ್ಯಕ್ತಿಯ ಮನಸ್ಸಿಗೆ ಹೋಲಿಸಿದ್ದೇನೆ ಮತ್ತೊಂದನ್ನು ನೀವೇ ಊಹಿಸಿಕೊಳ್ಳಿ! 

ಆಕರ್ಷಣೆಗೆ ಬಲಿಬೀಳುವ ಗಂಡಿನ ಕಣ್ಣಿಗೆ ರೂಪವೇ ಮುಖ್ಯವಾಗುತ್ತದೆ. ತೆರೆದುತೋರುವ ಹುಚ್ಚಿನ ಹೆಂಗಳೆಯರು ಧರಿಸುವ ದಿರಿಸುಗಳಲ್ಲಿ ’ಕಿಟಕಿ’, ’ದ್ವಾರ’ ಇತ್ಯಾದಿಗಳು ಜಾಸ್ತಿಯಾಗಿ ಕೆಲವಂತೂ ಇನ್ನೇನು ತುಸುವೇ ಅಂಟಿಕೊಂಡಿರುವಷ್ಟು ಕಮ್ಮಿ ಬಟ್ಟೆಗೆ ಬರುತ್ತಿವೆ. ಸುಧಾರಿಸಿದ ಸಮಾಜದ ಸೋಗಿನಲ್ಲಿ ಒಬ್ಬರಿಗಿಂತಾ ಒಬ್ಬರು ಈ ವಿಷಯದಲ್ಲಿ ಮುನ್ನಡೆಯುತ್ತಾ ’ವಸ್ತ್ರ ಪರಿತ್ಯಾಗ’ವನ್ನೇ  ನಡೆಸುವುದಕ್ಕೆ ಮುಂದಾದ ಹಾಗಿದೆ. ಹಿಂದಕ್ಕೆಲ್ಲಾ ಸೀರೆಯ ಸೆರಗು ಹಾರಿ ಬಿದ್ದರೆ ಮಾನವೇ ಹೋಯ್ತು ಎನ್ನುವ ಹಾಗೇ ಥಂಡು ಹೊಡೆಯುತ್ತಿದ್ದ ಮಹಿಳೆಯರಿಗೆ ಈ ದಿನಗಳಲ್ಲಿ ಅದು ಏನೇನೂ ಅಲ್ಲವೇ ಅಲ್ಲ! ಸೆರಗೇ ಇಲ್ಲದ ದಿರಿಸುಗಳು ಬಂದು ಎಲ್ಲವೂ ಬಟಾಬಯಲಾಗಿರುವಾಗ ಸೆರಗಿನ ಪ್ರಶ್ನೆಹೇಗೆ ಬರುತ್ತದೆ ಅಲ್ಲವೇ?  ಮೈಗಂಟಿಕೊಳ್ಳುವ ದಿಸಿರುಗಳೂ ಬಂದವು, ಒಂದಷ್ಟು ಕಾಲ ಇದ್ದವು, ಈಗ ಅವೂ ಒಂಥರಾ ಮೂಲೆಗುಂಪಾದ ಹಾಗೇ ಮೈಗಂಟಿಕೊಳ್ಳುವುದರ ಜೊತೆಜೊತೆಗೇ ಸಾಧ್ಯವಾದಷ್ಟೂ ಮೈಪ್ರದರ್ಶಿಸುವ ಬಟ್ಟೆಗಳು ಸದ್ಯಕೆ ಚಾಲ್ತಿಯಲ್ಲಿವೆ. ಯಾರು ಯಾವ ಬಟ್ಟೆಯನ್ನು ಧರಿಸಬೇಕು ಯಾವುದನ್ನು ಕೂಡದು ಎಂಬ ಬಗ್ಗೆ ಯಾರೂ ನಿರ್ಣಯಕೈಗೊಳ್ಳುವ ಹಾಗಿಲ್ಲ; ಯಾಕೆಂದರೆ ಇದು ಸರ್ವತಂತ್ರ ಸ್ವತಂತ್ರ ಪ್ರಜಾರಾಜ್ಯ! ತಾಯಿ ತನ್ನ ಮಗಳ ಜೊತೆಗೇ ಅಥವಾ ಮಗಳಿಗಿಂತಲೂ ಅಧಿಕವಾಗಿ ಪ್ರದರ್ಶನ ನೀಡಲು ಇಷ್ಟಪಡುತ್ತಾಳೆ. ತನ್ನ ಪ್ರಾಯದ ಕಾಲದಲ್ಲಿ ನಡೆಸಲಾಗದ ಅಂಧಾದರ್ಬಾರನ್ನು ಮುದುಕು ವಯಸ್ಸಿಗೆ ಇನ್ನೇನು ಹತ್ತಿರವಿರುವ ಮಹಿಳೆಯರು ನಡೆಸುತ್ತಾರೆ. ಪಕ್ಷ-ಪಾರ್ಟಿ-ಅಲ್ಲಿ ಅವರುಗಳ ದಿರಿಸು, ಹೈಟೆಕ್ ಕುಡಿತ-ಕುಣಿತ, ಪರಪುರುಷ ಗಮನ ಇವುಗಳನ್ನೆಲ್ಲಾ ನೋಡಿದರೆ ಇವತ್ತಿನ ಹೆಂಗಳೆಯರ ಮೇಲೆ ಮಾಧ್ಯಮಗಳ ಪರಿಣಾಮ ತೀರಾ ಜಾಸ್ತಿಯಾಗಿದೆ. ಓಹೊಹೊಹೊ ಎಲ್ಲರೂ ಸೆಲೆಬ್ರಿಟಿಗಳೇ ಆಗಿದ್ದಾರೆ; ಏನೂ ಇಲ್ಲದ ದಿನದಂದು ಬೆಕ್ಕಿನ ಪಕ್ಕ ನಿಂತು ಫೋಟೋ ತೆಗೆಸಿಕೊಂಡು ಫೇಸ್ ಬುಕ್ಕಿಗೆ ಹಾಕದಿದ್ದರೆ ಕೇಳಿ!!    

ಅಷ್ಟಕ್ಕೂ ಮಹಿಳೆಗೆ ತನ್ನತನದ ಅರಿವಿದ್ದರೆ ತೀರಾ ಹೀಗಾಗುತ್ತಿತ್ತೇ? ಈ ಲೇಖನವನ್ನು ಓದುವ ಬಹುತೇಕರಲ್ಲಿ ಫೇಸ್ ಬುಕ್ ನಿಂದ ಬಂದವರೂ ಇರುತ್ತೀರಿ; ಅಲ್ಲಿ ಕಾಣುವ ಮಹಿಳಾಮಣಿಗಳನೇಕರ ಚಿತ್ರಮಂಜರಿಗಳನ್ನು ನೋಡಿ! ಕೆಲವರು ಸಿನಿಮಾ ನಟಿಯರ ಜೊತೆಗೆ ನಿಂತಿದ್ದು, ಇನ್ನು ಕೆಲವರು ತಾವು ಮತ್ತೆಲ್ಲೋ ಡ್ಯಾನ್ಸ್ ಹೊಡೆದಿದ್ದು, ಇನ್ನೂ ಕೆಲವರು ಎಲ್ಲೆಲ್ಲಿಗೋ ಔಟಿಂಗ್ ಹೋಗಿ ಮಜಾ ಉಡಾಯಿಸಿದ್ದು, ಇನ್ನೂ ಕೆಲವರು ದೂರ ಪ್ರವಾಸಕ್ಕೆ ಹೋಗಿ ಅಲ್ಲಿ ಹೇರ್ಗೆಲ್ಲಾ ಕುಣಿದೆವು-ಕುಂತೆವು-ನಿಂತೆವು ಎಂಬುದು!! ಅಲ್ಲೂ ಮತ್ತದೇ ದಿರಿಸುಗಳ ಪೈಪೋಟಿ. ಅಮ್ಮನದು ಮಿಡಿ, "ಅಮ್ಮಾ ಶೀ ನಿಂಗೆ ಇದು ಬೇಡಾಗಿತ್ತು" ಎಂದ ಹರೆಯದ ಮಗಳ ಥ್ರೀ ಫೋರ್ತು, ಅಮ್ಮನ ಒತ್ತಾಯದ ಮೇರೆಗೆ ಚಡ್ಡಿಯಲ್ಲಿ ಅಪ್ಪ, ನೂರಾರು ಫೋಟೋಗಳಲ್ಲಿ ನಾನಾ ಥರದ ’ಅಪಾರ’ದರ್ಶಕ ದಿರಿಸುಗಳಲ್ಲಿ ಆ ಅಮ್ಮ! ಅಯ್ಯಯ್ಯೋ ಅಯ್ಯಯ್ಯೋ ಸುಧಾರಿಸಿಕೊಳ್ಳಲು ವಾರಗಳಕಾಲ ಬೇಕು!ಇಂಥದ್ದನ್ನೆಲ್ಲಾ ಎಲ್ಲರಿಗೂ ತೋರಿಸಿಕೊಂಡು ಪ್ರಚಾರಗಿಟ್ಟಿಸುವ ತಮ್ಮ ಮನೋಭೂಮಿಕೆಯಿಂದ ಫೇಸ್ ಬುಕ್ಕಿಗೆ ಅಪ್ ಲೋಡ್ ಮಾಡುವ ಹೆಂಗಳೆಯರು ಎಲ್ಲೋ ಯಾರದೋ ಕಣ್ಣಿಗೆ ಬಲಿಯಾಗುತ್ತಿದ್ದೇವೆ ಎಂದು ಚಿಂತಿಸುವುದಿಲ್ಲವೇ? ಅಂತಹ ಚಿತ್ರಗಳಿಗೆ ಕಾಮೆಂಟು ಹಾಕುವ ಕಾಮಣ್ಣಗಳಂತೂ ಹೇರಳ ಸಂಖ್ಯೆಯಲ್ಲಿ ಫೇಸ್ ಬುಕ್ ತುಂಬಾ ಅಡ್ಡಾಡುತ್ತಿರುತ್ತಾರೆ; ಅವರ ಅಸಲಿ ಮತ್ತು ನಕಲಿ ಅಕೌಂಟುಗಳೆಷ್ಟೋ ದೇವರೇ ಬಲ್ಲ. ಅಂತಹ  ಕಾಮಣ್ಣಗಳ ಬಿಡಿಬಿಡಿಯಾದ ’ತೆರೆದಮನ’ದ ಕಾಮೆಂಟುಗಳು ಚಿತ್ರಪ್ರದರ್ಶಿಸಿದ ಮಹಿಳೆಯರ ಮನಕ್ಕೆ ಬಹಳ ತಂಪೆರೆಯುತ್ತವೆ ಎನಿಸುತ್ತದೆ. 

ಫೇಸ್ ಬುಕ್ ಎಂಬ ಜಾಲತಾಣದ ದುರುಪಯೋಗದಿಂದ ಅದೆಷ್ಟು ಸಂಸಾರಗಳು ಹಾಳಾಗಿವೆಯೋ ವಿಚ್ಛೀದನದ ಹಂತಕ್ಕೆ ಹೋಗಿವೆಯೋ ತಿಳಿಯದಲ್ಲಾ?ಆಗಾಗ ಅಲ್ಲಿಲ್ಲಿ ಒಂದೊಂದು ಸುದ್ದಿ ಬರುತ್ತದೆ- ಹಾಗಂತೆ ಹೀಗಂತೆ ಅಂತೆಲ್ಲಾ. ಈ ಕಿವಿಯಲ್ಲಿ ಕೇಳಿದನ್ನು ಆ ಕಿವಿಯಲ್ಲಿ ಹಾಗೇ ಪಾಸ್ ಮಾಡಿ ಹೊರದಬ್ಬುವ ನನ್ನಂಥವರಿಗೆ ಅವು ಮೋಜುಕೊಡುವ ಸುದ್ದಿಗಳಲ್ಲ. ಸಾಲದ್ದಕ್ಕೆ ಪ್ರಮುಖ ಆಂಗ್ಲ ದೈನಿಕಗಳು ’ಪೇಜ್ ಥ್ರೀ’ಯಲ್ಲಿ ಪ್ರಕಟಿಸುವ ಚಿತ್ರಗಳು ಭಾರತೀಯ ಕೌಟುಂಬಿಕ ಜೀವನಕ್ಕೆ ಹೇಳಿಸಿದ್ದಲ್ಲ. ಮನುಷ್ಯ ತಿನ್ನುವುದಕ್ಕೆ-ಕುಡಿಯುವುದಕ್ಕೆ ಎಂದೇ ಬದುಕುವುದಲ್ಲ ; ಬದಲಾಗಿ ಬದುಕುವುದಕ್ಕಾಗಿ ಮಾತ್ರ ಅವುಗಳ ಆಚರಣೆ-ಆಡಂಬರ ಸಾಕು. ಆ ಪೇಜ್ ಥ್ರೀ ಯಲ್ಲಿ ಕಾಣಿಸಿಕೊಳ್ಳುವ ಸಲುವಾಗೈ ಹಾತೊರೆಯುವ ಮಂದಿಗೇನೂ ಕಮ್ಮಿ ಇಲ್ಲ. ಕಾಣಿಸಿಕೊಂಡರೆ ಎಲ್ಲಿ ಮದುವೆಯಾಗುವ ಹುಡುಗ/ಹುಡುಗಿ ಬೇಡಾ ಎಂದುಬಿಡುತ್ತಾರೋ ಎಂಬ ಅನಿಸಿಕೆಯಿಂದ ರೇವು ಪಾರ್ಟಿಗಳಲ್ಲಿ ಕದ್ದು-ಮುಚ್ಚಿ ಬೇಕಾದಷ್ಟ್ ಮಜಾ ಪಡೆಯುವ ಮಂದಿಗೂ ಕಮ್ಮಿ ಇಲ್ಲ. ಪಾರ್ಟಿ ವೇರ್ ಗಳನ್ನು ಧರಿಸಿ ಬೆಳಗಿನ ಜಾವದ ತನಕ ಪಾರ್ಟಿ ಮಾಡಿ ಮಜಾ ಪಡೆದು, ಕುಡಿದು ತೂರಾಡುತ್ತಾ ’ತನ್ನನ್ನು  ಅವರು ಹಿಂಬಾಲಿಸಿದರು, ತನಗೆ ಇವರು ಕಿರುಕುಳ ಕೊಟ್ಟರು’ ಎಂಬ ಹುಡುಗಿಯರೂ ಇದ್ದಾರೆ. ಪಾರ್ಟಿಗೇ ಹೋಗದಿದ್ದರೆ ಆ ಬವಣೆ ಬರುತ್ತಿತ್ತೇ?  ಎಲ್ಲಾ ತೀಟೆಗಳೂ ತೀರಿದಮೇಲೆ ಇಂತಹ ಲಲನೆಯರಿಗೆ ಭಾರತೀಯ ಕೌಟುಂಬಿಕ ವ್ಯವಸ್ಥೆಯಲ್ಲಿ ವಿಶ್ವಾಸವಾಗಲೀ ಆಸಕ್ತಿಯಾಗಲೀ ಆಸ್ಥೆಯಾಗಲೀ ಉಳಿಯುವುದೇ? 

ಎಸ್.ಎಸ್.ಎಲ್.ಸಿ ಮುಗಿಸಿ ಕಾಲೇಜಿಗೆ ಹೊರಟ ಹೆಣ್ಣುಮಕ್ಕಳಿಗೆ ’ಕಾಲೇಜು’ ಎಂಬುದೇ ಒಂದು ಅಡ್ಡೆ. ಅಲ್ಲಿ ಹಲವಾರು ಅತಿ ಮಾಡ್ ದಿರಿಸುಗಳನ್ನು ಧರಿಸಿ ಎಲ್ಲರಿಗಿಂತಲೂ ತಾನೇ ಸುಂದರಿ ಎನಿಸಿಕೊಳ್ಳಬೇಕು, ಹಲವು ಹುಡುಗರು ತನ್ನ ಬೆನ್ನಹಿಂದೆ ಬೀಳುವ ಬಕರಾಗಳಾಗಬೇಕು, ಕಲಿಸುವ ಗಂಡು ಲೆಕ್ಚರರ್ ತನ್ನ ಸೌಂದರ್ಯಕ್ಕೆ ಜೊಲ್ಲುಸುರಿಸುವವನಾಗಬೇಕು, ಎಲ್ಲರ ಸಮ್ಮುಖದಲ್ಲಿ  ಪ್ರಾಂಶುಪಾಲರನ್ನೇ ಆಡಿಕೊಂಡು ಜಯಗಳಿಸಬೇಕು ....ಹೀಗೆಲ್ಲಾ ಕನಸು. ಅಪ್ಪ-ಅಮ್ಮನ ಕಣ್ಣುತಪ್ಪಿಸಿ ಎಲೆಲ್ಲೋ ಅಲೆಯುವ ಅವರುಗಳ ಕನೆಕ್ಷನ್ ಎಲ್ಲಿಂದ ಎಲ್ಲೀವರೆಗೆ ಎಂದು ಯಾರಿಗೂ ಅರಿವಿಲ್ಲ. ಕೆಲವು ಮನೆಗಳಲ್ಲೂ "ಏನೋ ಹದಿಹರೆಯ ಅಲ್ವಾ ಮಡ್ಕೊಳ್ಲಿ ಬಿಡು ಒಂದಷ್ಟ್ ದಿನ ಆಮೇಲೆ ಎಲ್ಲಾ ಸರಿ ಹೋಗುತ್ತೆ" ಎಂಬ ಧೋರಣೆಯಲ್ಲಿ ಮಗಳು ತೊಡುವ ಕಡಮೆ ಸೈಜಿನ/ಪ್ರದರ್ಶಕ ದಿರಿಸುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಇಲ್ಲ. ಹದಿಹರೆಯದಲ್ಲೇ ಹೆಣ್ಣುಮಕ್ಕಳ ಇಂತಹ ಚೆಲ್ಲಾಟಗಳನ್ನು ನೋಡಿ ಹಾದಿತಪ್ಪುವ ಹುಡುಗರು ಮತ್ತೆಂದೂ ರಿಪೇರಿಯಾಗದ ಯಂತ್ರಗಳಂತಾಗಿ ಹಡೆದ ಅಪ್ಪ-ಅಮ್ಮನನ್ನು ಕಂಗೆಡಿಸುವುದೂ ಕಂಡುಬರುವುದು ಒಂದೆಡೆಗಾದರೆ ಉಪೇಂದ್ರನ ಹುಚ್ಚು ಸಿನಿಮಾಗಳಲ್ಲಿ ತೋರಿಸಿದಂತೇ ’ತನಗೆ ಸಿಗಲಾರದ್ದು ಇನ್ಯಾರಿಗೂ ಸಿಗಬಾರ್ದು’ ಎಂದುಕೊಂಡು ಆಸಿಡ್ ಎರಚುವ ವಿಕೃತ ಮನೋಸ್ಥಿತಿ. ಕಳೆದೆರಡು ವರ್ಷಗಳ ಹಿಂದೆ ಕೆಲವು ಕಾಲೇಜುಗಳವರು ಬೆಕ್ಕಿಗೆ ಗಂಟೆ ಕಟ್ಟುವ ಧೈರ್ಯಮಾಡಿ ಹೆಣ್ಣುಮಕ್ಕಳಿಗೆ ಡ್ರೆಸ್ ಕೋಡ್ ಜಾರಿಗೆ ತಂದಿದ್ದಾರೆ, ಆದಾಗ್ಯೂ ಈಗಲೂ ಕೆಲವು ಕಾಲೇಜುಗಳಲ್ಲಿ ನೀವು ನೋಡಬೇಕು. ಇನ್ನು ದೇವಸ್ಥಾನಗಳಿಗೆ, ಮಠಗಳಿಗೆ ಬರುವಾಗ ಯಾವ ರೀತಿಯ ಬಟ್ಟೆ ಧರಿಸಬೇಕೆಂಬ ಕಾಮನ್ ಸೆನ್ಸ್ ಇಲ್ಲದ ಹುಡುಗಿಯರೂ ಅಮ್ಮಗಳೂ ಇದ್ದಾವೆ!  

ಕೆಲವೊಮ್ಮೆ ಕಚೇರಿಯಲ್ಲೋ  ಪಿಕ್ನಿಕ್ ನಲ್ಲೋ ಮತ್ತಿನ್ನೆಲ್ಲೋ ಮಹಿಳೆಯರಿಗೆ ಪರ ಪುರುಷರ ಕೈ ತಾಗಿದ ಅನುಭವವಾಗುತ್ತದೆ, ಅದೇ ಕಾರಣವಾಗಿ ಆತ ಸಾರಿ ಕೇಳುವುದರಿಂದ ಮೊದಲಾಗುವ ಮಾತುಕತೆ ಅಮೇಲಾಮೇರ್ಲೆ ದಿನಗಳೆಯುತ್ತಾ "ಛೆ..ಫೋಟೊಗಾಗಿ ಅಪ್ಪಿನಿಂತುಕೊಂಡಾಕ್ಷಣ ನಾವೇನ್ ತಪ್ ಮಾಡಿದೀವಿ?ನೀವು ಬಿಡಿ ಎಲ್ಲಾದ್ರಲ್ಲೂ ತಪ್ಪು ಹುಡ್ಕೋರು" ಎಂದು ಎಗರಿಬೀಳುವ ಮಹಿಳೆ ತಿಂಗಳೊಪ್ಪತ್ತಿನಲ್ಲೇ ಆ ಸಂಬಂಧವನ್ನು ಒಪ್ಪಿಕೊಳ್ಳುವ ಸ್ಥಿತಿಗೆ ತಲುಪುತ್ತಾಳೆ. ಟಿವಿ ಸಂದರ್ಶನದಲ್ಲಿ "ನಾವು ಮೇಡ್ ಫಾರ್ ಈಚ್ ಅದರ್" ಎಂದು ಹೇಳಿಕೊಂಡ ಸೀರಿಯಲ್ ಅಥವಾ ಸಿನಿಮಾ ಕಲಾವಿದ ದಂಪತಿಗಳಲ್ಲಿ ಅನೇಕರು ವಿಚ್ಛೇದನ ಪಡೆದುಕೊಂಡು ಬೇರೇ ಜನರ ಜೊತೆ ಹೋಗಿದ್ದಾರೆ, ಹೋಗುತ್ತಿದ್ದಾರೆ, ಹೋಗುತ್ತಾರೆ-ಇದು ನಡೆದೇ ಇದೆ. ಕಲಾವಿದರಿಗೆ ಅಪ್ಪಿಕೊಳ್ಳುವುದು-ಮುದ್ದಾಡುವುದು ಇದೆಲ್ಲಾ ಅನಿವಾರ್ಯ ಎಂದು ಹೇಳಿಕೊಳ್ಳುತ್ತಲೇ ಹಲವರ ಸಂಸರ್ಗಕ್ಕೆ ಒಳಗಾಗುವ ಮಹಿಳೆಯರಿಗೆ   ಪತಿಯ ಅಗತ್ಯತೆ ಕಂಡುಬರುವುದಿಲ್ಲ. ನಟಿಯರನ್ನು ಅನುಕರಿಸಲು ತೊಡಗಿರುವ ಮಹಿಳೆಯರಿಗೆ ಅವರ ಬದುಕು ಕೇವಲ ’ಬಣ್ಣದ್ದು’ ನಿಜವಾಗಿ ಹಾಗಿಲ್ಲ ಎಂಬ ಸತ್ಯದ ಅರಿವಿಲ್ಲ. ತಾವೂ ನಟಿಯರಂತೇ, ಅಪ್ಪಿ-ತಪ್ಪಿ ಯಾರೋ ಮುಟ್ಟಿದಾಕ್ಷಣಕ್ಕೆ ಹಾಳಾಗಿಬಿಡುತ್ತೇವೆ ಎಂಬುದು ಸುಳ್ಳು ಎನ್ನುವ ಧೋರಣೆ ಅನೇಕ ಮಹಿಳೆಯರಲ್ಲಿದೆ. ಯಾವುದೋ ಮೂಲೆಯಲ್ಲಿದ ಮಹಿಳೆಯೊಬ್ಬಳು ನೌಕರಿಗೆ ಸೇರಿದ ಕೆಲಕಾಲದಲ್ಲಿ ತನ್ನೆರಡು ಮಕ್ಕಳನ್ನು ತೊರೆದು ಇನ್ಯಾರೋ ಪುರುಷನ ಜೊತೆಗೆ ಓಡಿಹೋಗುವುದು ಕಾಣುತ್ತದೆ, ಫೇಸ್ ಬುಕ್ ನಲ್ಲಿ ಪಡೆದ ಸಂಪರ್ಕದಿಂದ  ಶಾಸಕಿಯೊಬ್ಬಳು ತನ್ನ ಪತಿ ಮತ್ತು ಮಗುವನ್ನು ತೊರೆದು ಮುಸ್ಲಿಂ ಹುಡುಗನ ತೆಕ್ಕೆಗೆ ಬಿದ್ದಿರುವುದು ಮತ್ತು ಅದಕ್ಕಾಗಿಯೇ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿರುವುದು ಮೊನ್ನೆ ಮೊನ್ನೆ ನಡೆದ ವಿಷಯ!     

ಅರೆತೆರೆದು ತೋರುವ ಪ್ರವೃತ್ತಿ ಪೂರ್ತಿತೆರೆದು ತೋರುವುದಕ್ಕಿಂತಾ ಅಪಾಯಕಾರಿ ಎಂಬುದು ನನ್ನ ಅಭಿಮತ. ಮನುಷ್ಯನಿಗೆ ಬಹಳ ಕುತೂಹಲ; ಸ್ವಲ್ಪ ಸಿಕ್ಕರೆ ಪೂರ್ತಿ ತಿಳಿಯುವ ಹಂಬಲ. ಯಾವ್ಯಾವುದೋ ಅಕ್ಷರಗಳನ್ನೂ ಪದಗಳನ್ನೂ ಮುದ್ರಿಸಿದ ಟೀ ಶರ್ಟ್ ಮತ್ತು ಲೋ ಜೀನ್ಸ್ ತೊಟ್ಟ ಮಹಿಳೆಯರನ್ನು ಕಂಡಾಗ ’ಪುರುಷಸಿಂಹ’ ಘರ್ಜಿಸಲೂ ಬಹುದು, ಮೈಮೇಲೆ ಹಾರಿಬೀಳಲೂ ಬಹುದು. ಇಂತಹ ಸನ್ನಿವೇಶಗಳನ್ನು ಕಮ್ಮಿ ಮಾಡಲೋಸುಗ ಮಹಿಳೆಯರು ತಮ್ಮ ವೇಷಭೂಷಣಗಳಲ್ಲಿ ಹಿತಮಿತವನ್ನು ಸಾಧಿಸಲಿ ಎಂಬುದನ್ನು ಯರೋ ಒಬ್ಬ ರಾಜಕಾರಣಿ ಹೇಳಿದ್ದರು; ಅವರು ಹೇಳಿದ್ದಕ್ಕೆ ನನ್ನ ಅನುಮೋದನೆ ಇದೆ. ಹಾಗಾದರೆ ಹೆಣ್ಣು ತನ್ನ ಸೌಂದರ್ಯವನ್ನು ತೋರಿಸುವುದೇ ಬೇಡವೇ? ಬೇಕು-ಅದು ನಿಮಗೆ ಸಂಬಂಧಪಟ್ಟವರಿಗೆ ಮಾತ್ರ ಸೀಮಿತವಾಗಿರಲಿ. ಎಲ್ಲಾ ಮಹಿಳೆಯರೂ ನಟೀಮಣಿಗಳಾಗಬೇಕಿಲ್ಲ, ಎಲ್ಲರೂ ಸೆಲೆಬ್ರಿಟಿಗಳೆನಿಸಬೇಕಿಲ್ಲ, ನೀವು ತೋರಿಸಿಕೊಳ್ಳುವುದರಿಂದ ನಿಮ್ಮ ಅಂದ ಹೆಚ್ಚುವುದಿಲ್ಲ, ಅದು ಇದ್ದಹಾಗೇ ಇರುತ್ತದೆ ಮತ್ತು ವಯಸ್ಸಿಗನುಗುಣವಾಗಿ ಕ್ಷೀಣಿಸುತ್ತದೆ. ನಿಮ್ಮ ಬಹಿರಂಗದ ಪ್ರಚಾರ ಪ್ರಕ್ರಿಯೆ ಹಲವು ಗಂಡಸರನ್ನು ನಿಮ್ಮೆಡೆಗೆ ಆಕರ್ಷಿಸಲು ಕಾರಣವಾಗುತ್ತದೆ, ಆಗ ಅಲ್ಲಿ ಮುಂದೆ ಆಗಬಾರದ್ದೂ ಆಗಬಹುದು ಎಂಬುದು ನಮ್ಮಂತಹ ಹಲವರ ಸಲಹೆಯಾಗಿದೆ. "ಛೆ ಛೆ ಹೋಗಯ್ಯ ನೀನೆಲ್ಲೋ ದಾಸಯ್ಯ ದಿರಿಸು ಹಾಕಿಕೊಂಡ ಮಾತ್ರಕ್ಕೆ ನಾವೆಲ್ಲಾ ಏನ್ ಕೆಟ್ಹೋಗ್ಬುಡ್ತೀವೇ ? ನೀನಿನ್ನೂ ಹಳೇಕಾಲ್ದಲ್ಲೇ ಇದ್ದೀಯ" ಎಂಬ ಮಹಿಳೆಯರಿಗೆ ನಾನು ಉತ್ತರಿಸಿ ಪ್ರಯೋಜನವಿಲ್ಲ; ಕಾಲ ಎಲ್ಲದಕ್ಕೂ ಉತ್ತರಿಸುವಷ್ಟು ಸಶಕ್ತವಾಗಿದೆ, ಕಾಲವೇ ಉತ್ತರಹೇಳುತ್ತದೆ.