ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, July 7, 2011

ದಂ-ಪತಿ




ದಂ-ಪತಿ

ಈ ಜ್ವರ ಶುರುವಾಗಿದ್ದು " ದಂ ಲಗಾಕೆ ಐಸ್ಸಾ " ಎಂದು ಬರೋಬ್ಬರಿ ಮಾಲು ತುಂಬಿದ ಕೈಗಾಡಿಯನ್ನು ಕುಮಟಾಪ್ಯಾಟೆಯಲ್ಲಿ ತಳ್ಳುವವರು ಕೂಗಿದಾಗ. ಇನ್ನೂ ಹಲವಾರು ಪಟ್ಟಣ ಮತ್ತು ಶಹರಗಳಲ್ಲಿ ಅಲ್ಲಲ್ಲಿ ಕಾಣಸಿಗುವ ದಿನನಿತ್ಯದ ಸಾಮಾನು ಸಾಗಾಟ ವೈಖರಿಯಲ್ಲಿ ಇದೂ ಒಂದು ರೀತಿ. ಆದರೆ ಈ ದಂ ಗೂ ನಮ್ಮ ದಂಪತಿಗೂ ಏನಾದರೂ ಸಂಬಂಧವಿರಬಹುದೇ ಎನ್ನುವ ಪ್ರಶ್ನೆ ಅಕಸ್ಮಾತ್ ಕಾಡತೊಡಗಿದ್ದು ನಿಜ. ಆ ಪೀಡನೆಗೆ ಯಾವ ಮಾಂತ್ರಿಕನಲ್ಲೂ ಪರಿಹಾರ ಸಿಗುವಂತಿರಲಿಲ್ಲ! ಹಾಗಾಗಿ ನಾನೇ ಹುಡುಕಿ ನಡೆಯುವ ಪರಿಸ್ಥಿತಿ ಎದುರಾಗಿ ಆ ದಂ-ಪತಿಯನ್ನು ಹುಡುಕಿದೆ!

ಛೆ ಛೆ ಛೆ ಛೆ, ನೀವಂದುಕೊಂಡಹಾಗೇ ಯಾವುದೋ ದಂಪತಿಯನ್ನು ನಾನು ಹುಡುಕಿ ಹೊರಟಿರಲಿಲ್ಲ. ಅದು ದಂ-ಪತಿ ಶಬ್ದದ ಕುರಿತಾದ ಒಂದು ಸಂಶೋಧನೆಯಾಗಿತ್ತು. ಸಂಶೋಧನೆ ಮಾಡುವಾಗ ಟಾಟಾ ಇನ್ಸ್‍ಟಿಟ್ಯೂಟ್‍ನವರಾಗಲೀ ಬಾಬಾ ಅಟೊಮಿಕ್ ರಿಸರ್ಚ ಸೆಂಟರ್ ನವರಾಗಲೀ ಜಾಗಕೊಡಲಿಲ್ಲ. ಹೋಗಲಿ ಬಿಡಿ ಏನು ಇಡೀ ಜಗತ್ತೆಲ್ಲಾ ಅವರೇ ವ್ಯಾಪಿಸಿಕೊಂಡಿದ್ದಾರೆಯೇ? ಅಷ್ಟಕ್ಕೂ ನಾನು ಮಾಡುವ ಸಂಶೋಧನೆಯ ಮಹತ್ವವನ್ನೇ ಅರಿಯದ ಮಹಾನುಭಾವರುಗಳು ಅಲ್ಲಿದ್ದಾರೆ; ಅದಕ್ಕೇ ಹಾಗೆ ಎಂದುಕೊಂಡು ನನ್ನ ಸಂಶೋಧನೆ ಮುಂದುವರಿಯಿತು. ತಿನ್ನಲಾರದ ದ್ರಾಕ್ಷಿ ಎತ್ತರದ ಬಳ್ಳಿಯಲ್ಲಿದ್ದುದರಿಂದ ಹುಳಿ ಎಂದ ನರಿಯಹಾಗೇ ಎಂದು ನೀವು ಮೂದಲಿಸಿದರೂ ಅಡ್ಡಿಯಿಲ್ಲ-ನಾನು ಮಾಡುವ ಕೆಲಸ ನನಗೆ ಗೊತ್ತಿದೆಯಲ್ಲಾ ಅದೇ ಸಂತೃಪ್ತಿ ಸಾಕು ಬಿಡಿ. ದಾಸರೂ ಹೇಳಿದ್ದಾರೆ ’ನಿಂದಕರಿರಬೇಕು ಜಗದಲಿ ’! ಅಂತಹ ದಾಸರಂತಹ ದಾಸರೇ ನನ್ನ ಪರವಾಗಿರುವಾಗ ಇನ್ನು ಯಾರಿದ್ದರೇನು ಇರದಿದ್ದರೇನು ಅಲ್ಲವೇ? ಹೋಗ್ಲಿ ಬಿಡಿ, ಸಂಶೋಧನೆ ಮುಂದೇನಾಯ್ತು ತಿಳಿಯೋಣ.

ನಾವು ಮದುವೆಯಾದ ಹೊಸದರಲ್ಲಿ " ನೀವು ದಂಪತಿ ಸಮೇತ ಬನ್ನಿ " ಎಂದು ಕರೆದವರು ನೂರಾರು ಜನ. ಇಲ್ಲಿ ಸುಳ್ಳು ಸಂಖ್ಯೆಯೇನೂ ಕೊಡುತ್ತಿಲ್ಲ, ಇರೋ ಹಕೀಕತ್ತು ಇರೋಹಾಗೇ ಹೇಳೊದೇ ನನ್ನ ಅಭ್ಯಾಸ. ಅಂದಾಜಿಗೆ ಸಂಖ್ಯೆ ಗುಜರಾಯಿಸಲು ಅದೇನು ಹುಲಿ-ಸಿಂಹಗಳ ಗಣತಿಯೇ? ಅದೂ ಕಷ್ಟ ಅನ್ನಿ ಪಾಪ ಅವರಾದರೂ ಏನುಮಾಡುತ್ತಾರೆ? ಒಂದೊಮ್ಮೆ ಹುಲಿ ಲೆಕ್ಕ ಮಾಡಲಿಕ್ಕೆ ಹೋಗಿ ಅದಕ್ಕೆ ಕಂಡುಬಿಟ್ಟರೆ ಅಧಿಕಾರಿಗಳನ್ನು ಮನೆಗೆ ವಾಪಸ್ ಕಳಿಸದೇ ಇರುವ ಜವಾಬ್ದಾರಿಗಳನ್ನು ಹುಲಿ-ಸಿಂಹ-ಆನೆಗಳೂ ಹೊತ್ತಹಾಗಿವೆ. ಅದ್ಕೇ ಇರಬೇಕು ಅವು ಇತ್ತೀಚೆಗೆ ಅರಣ್ಯಾಧಿಕಾರಿಗಳನ್ನೂ ಅರಣ್ಯಪಾಲಕರನ್ನೂ ಹುಡುಕಿಕೊಂಡು ಊರೂರು ಅಲೀತಾ ಇವೆ! ಮೇಲ್ಗಡೆ ಇರೋ ಅಧಿಕಾರಿಗಳು ಕಚೇರಿಯಲ್ಲಿ ಕುಳಿತು " ಹೋಗ್ರೋ " ಅಂತಾರೆ, ಕಡಿತಗೊಂಡ ಬೋಳುಕಾಡಲ್ಲಿ ಕುಳಿತ ಹಿಂಸ್ರ ಪಶುಗಳು " ಬನ್ರೋ " ಅಂತವೆ! ಕೃಷಿಕರು ಇಲ್ಲದ ಆರೋಪ ಮಾಡ್ತಾರೆ. ಪಾಪ ಅರಣ್ಯಾಧಿಕಾರಿಗಳು-ಅರಣ್ಯಪಾಲಕರ ಫಜೀತಿ ನಾಯಿ-ನರಿಗೆ ಕೊಟ್ರೂ ಬೇಡ! ಮುಂದಿನ ಸಲದಿಂದ ಮಿಲಿಟ್ರಿಗಾದ್ರೂ ಸೇರ್ಕಂಬುಡ್ತಾರ್ಯೇ ಹೊರ್ತು ಅರಣ್ಯ ಇಲಾಖೆಗೆ ಮಾತ್ರ ಸೇರುವುದು ಡೌಟು.

ದಂಪತಿ ಸಮೇತ ಬನ್ನಿ ಅಂದಿದ್ರು ಅಂದ್ನಲ್ಲಾ ದಂ-ಪತಿ ಅಂದ್ರೇನೂ ಅಂತ ಮತ್ತೆ ಕೆದಕಲು ಕುಳಿತೆ. ’ಪತಿ’ ಅಂದರೆ ಗಂಡ, ಯಜಮಾನ ಇತ್ಯೇತ್ಯಾದಿ ವರ್ಣನೆ ಸಿಕ್ಕಿತು. ’ದಂ’ ಎಂದರೆ ಹೆಂಡತಿ ಆಗಿರಲೇಬೇಕಲ್ಲವೇ? ಹೆಂಡತಿ ಇರದ ಪತಿಗೆ ದಂ ಇರದ ಪತಿ ಅಂತ ಬರೆಯುವುದು ಸರಿಯೇ? ಅಥವಾ ಯಾರಾದ್ರೂ ಹೆಂಡತಿ ಮಾತ್ರ ಬಂದರೆ ದೂರದಿಂದಲೇ ಅವರನ್ನು ಕಂಡು ಇಂಥವರ ’ದಂ’ ಮಾತ್ರ ಬಂದ್ರು ಎನ್ನುವುದು ಸರಿಯೇ? ಕೆಲವರು ದಂಪತಿಗಳು ಎಂತ್ಲೂ ಕರೀತಾರಲ್ಲ ಅದ್ಯಾಕೆ ಹಾಗೆ? ದಂಪತಿ ಎನ್ನುವುದೇ ಜೋಡಿ ಸೂಚಕ ಶಬ್ದ ಎಂದಮೇಲೆ ಅನೇಕ ದಂಪತಿ ಜೋಡಿಗಳಿದ್ದರೆ ಮಾತ್ರ ’ದಂಪತಿಗಳು’ ಎನ್ನುವುದು ಸಮಂಜಸವೇನೋ ಅನಿಸುತ್ತದಪ್ಪ. ಸಮಸ್ಯೆ ಇಲ್ಲೂ ಅದೇ ಇದೆ! ಎಲ್ಲರ ’ದಂ’ ಗಳೂ ಬಂದಿದ್ದರೆ ’ಪತಿ’ಗಳು ಇನ್ನೂ ಬರುವವರಿದ್ದರೆ " ಹಾಂ ... ಎಲ್ಲರ ದಂ ಗಳೂ ಬಂದ್ರು ಇನ್ನು ಪತಿಗಳು ಬರ್ತಾ ಇದ್ದಾರೆ ಎಂದು ಹೇಳುವ ಹಾಗೂ ಇಲ್ಲ ಅಲ್ಲವೇ? ಯಾಕೋ ಸಮಸ್ಯೆ ಸುಲಭಕ್ಕೆ ಬಗೆಹರಿಯಲಿಲ್ಲ. ಬೀಜಗಣಿತವೂ ಅಲ್ಲ, ರೇಖಾಗಣಿತವೂ ಅಲ್ಲ, ದೃಗ್ಗಣಿತವೂ ಅಲ್ಲ; ದಂಗಣಿತ ! ಯಾವ ಫಾರ್ಮ್ಯುಲಾವೂ ನಾಟುವ ಸ್ಥಿತಿಯಲ್ಲಿರಲಿಲ್ಲ ಬಿಡಿ.

ಕೆಲವೊಮ್ಮೆ
ಹೀಗೂ ಯೋಚನೆ ಬಂದಿದ್ದಿದೆ. ’ದಮ್ಮು’ ಇರುವ ಪತಿಗೆ ದಂಪತಿ ಎಂದರೆ ಹೇಗೆ ? ಮಳೆಗಾಲ ಚಳಿಗಾಲದಲ್ಲಿ ದಮ್ಮು ಇರುವವರಿಗೆ ಸ್ವಲ್ಪ ಅಡಚಣೆ ಜಾಸ್ತಿ. ಶ್ವಾಸ ಮೇಲೆತ್ತುವಾಗ ಹಂದಿಯಹಾಗೇ ಹೂಂಕರಿಸುವವರು ಗೂಳಿಯಹಾಗೇ ಗುಟುರುವವರು ನಂಗಂತೂ ಕಾಣಸಿಗುತ್ತಾರೆ. ಅಮಿತಾಭನಿಗೆ ಉಬ್ಬಸರೋಗವಿದೆ ಎಂಬುದು ಅವರಿಗೆಲ್ಲಾ ತಿಳಿದಿರೋ ಹಾಗಿದೆ. ಹೀಗಾಗಿ ಇಂತಹ ’ದಮ್‍ಪತಿ’ಗಳ ಸಂಘದ ಬಲವರ್ಧನೆಯಾದ ಹಾಗಾಗಿದೆ. ಜಯವರ್ಧನೆಗೂ ಬಲವರ್ಧನೆಗೂ ಏನೂ ಸಂಬಂಧವಿಲ್ಲ-ಸದ್ಯ ಅದನ್ನು ಮಧ್ಯೆ ತರುವುದು ಬೇಡ-ಯಾಕೆಂದರೆ ಸಂಶೋಧನೆಯ ಫಾರ್ಮ್ಯುಲಾ ಕೆಟ್ಟುಹೋಗುವ ಸಂಭವವಿದೆ, ಗೊತ್ತಾಯಿತಲ್ಲ? ಅಂತೂ ಮಳೆಚಳಿಗಾಲಗಳಲ್ಲಿ ಕೆಲವಾರು ಕಾರ್ಯಕ್ರಮಗಳಿಗೆ ಬರೇ ಮಡದಿಯರೇ ಹೋಗಿಬರಬೇಕಾಗಬಹುದು. ಆಗ ಅವರು "ನಮ್ಮ ದಮ್‍ಪತಿ" ಬರಲಿಲ್ಲ ಎನ್ನಬಹುದಲ್ಲವೇ?

’ದಂ ಮಾರೋ ದಂ’ ಹಾಡುಕೇಳಿದಾಗಲಂತೂ ಹಲವು ನನ್ನಂಥಾ ಪಡ್ಡೆಗಳಿಗೆ ಚಡ್ಡಿಹಾಕಿ ಕುಣಿಯುವ ಹುಚ್ಚು ಬರುತ್ತದೆ. ’ದಂ’ ಎಳೆಯುವುದರಲ್ಲೂ ಅದೆಷ್ಟು ಸುಖಾಂತೀರಿ ಕೆಲವರಿಗೆ. ಒಂದೇ ಒಂದು ದಂ ತಮ್ಮ ದಿನದ ರಿಧಮ್ಮನ್ನೇ ಬದಲಾಯಿಸುತ್ತದೆ ಅಂತಾರೆ ಇನ್ಕೆಲ್ವು ಜನ. ಇಲ್ಲೂ ಅದೆಂಥದೋ ’ದಂ’ ಕರಾಮತ್ತು. ಯೇ ಕ್ಯಾ ಹೈ ದುನಿಯಾ ? ಅನಂತನಾಗರು [ನಾಗರ ಹಾವಲ್ಲ!] ನಾರದನಾಗಿ ಅಭಿನಯಿಸಿದ ’ಇದು ಎಂಥಾ ಲೋಕವಯ್ಯಾ ? ’ ಹಾಡು ನೆನಪಾಗುತ್ತದೆ. ದಂ ಎನ್ನುವ ಆ ಒಂದೇ ಅನುನಾಸಿಕ ಅಕ್ಷರಕ್ಕೆ ಅಷ್ಟೆಲ್ಲಾ ಆನೆಗಾತ್ರದ ಕಿಮ್ಮತ್ತಿದ್ದಮೇಲೆ ದಂ ಇಲ್ಲದ ಪತಿ ಎಂದರೆ " ಛೆ ಅವನಾ ಅವನಿಗೆ ದಮ್ಮೇ ಇಲ್ಲ " ಅಂತಾರಲ್ಲಾ ಅದೂ ನೆನಪಾಗುತ್ತದೆ. "ದಂ ಇದ್ರೆ ಮುಂದೆ ಬಾ ನೋಡೋಣ " ಎಂದ ಕುಡುಕನ ನೆನಪೂ ಆಯ್ತು ಸ್ವಾಮೀ. ಎಷ್ಟೋಸಲ ನಮ್ಮಲ್ಲಿ ಇರುವ ದಂ ಎಲ್ಲಾ ಮಾಯವಾಗಿ ನಮ್ಮ ಜಂಘಾಬಲವೇ ಉಡುಗಿಹೋಗಿ ಅಡಗಿಕೂತು ತಪ್ಪಿಸಿಕೊಳ್ಳುವ ಪರಿಯೂ ಇರುತ್ತದೆ. ಬಾಲ್ಯದಲ್ಲಿ ಶಾಲೆಯ ಮಾಸ್ತರು ಬಂದರೆ ಹಾಗಾಗುತ್ತಿತ್ತು. ಬರ್ತಾ ಬರ್ತಾ ಯಾರದ್ರೂ ಸುಂದರ ಹುಡುಗೀರು ಅತೀ ಹತ್ತಿರ ಬಂದರೆ ಒಂಥರಾ ಹಾಗಾಗೋಕ್ಹಿಡೀತು! ಈಗೀಗ ಮನೇಲಿರೋ ’ದಂ’ ದಬಾಯಿಸಿದ್ರೂ ಮರುದಬಾಯಿಸಲು ದಂ ಇರದ ಸ್ಥಿತಿ ನಮ್ದು! ಇನ್ನು ಕಾಲೇಜಿಗೆ ಹೋಗುವ ನಮ್ಮ ಮಕ್ಳೇನಾದ್ರೂ ತಿರುಗಿನಿಂತುಬಿಟ್ಟರೆ ದೇವ್ರೇಗತಿ! ಇಷ್ಟಿದ್ದೂ ಆ ’ದಂ’ ಶರೀರದ ಯಾವ ಮೂಲೆಯಲ್ಲಿ ಹುದುಗಿ ಕೂತಿದೆ ಎನ್ನುವುದು ಅರ್ಥವಾಗಲಿಲ್ಲ.

ದಂ-ಪತಿಯೊಳಗೆ ಇರುವ ’ದಂ’ ಗೂ ನಮ್ಮೊಳಗೇ ಆಳದಲ್ಲೆಲ್ಲೋ ಇರುವ ’ದಂ’ಗೂ ಹಾಗೂ ಮಳೆಚಳಿಗಾಲದಲ್ಲಿ ಏಕಾಏಕೀ ಅಟ್ಯಾಕ್ ಮಾಡಿ ’ಇನ್ನೇನು ಈ ಸರ್ತಿ ಉಳಿಯೊಲ್ಲ’ ಅಂತನ್ನಿಸಿಬಿಡುವ ಈ ದಮ್ಮಿಗೂ ಏನಾದರೂ ಸಂಪರ್ಕ-ಸಂಬಂಧವಿರಲೇಬೇಕಲ್ಲಾ ? ಇವುಗಳ ಹಿಂದಿನ ಕಾಮನ್ ಬೇಸ್ ಯಾವುದು ಎಂಬುದನ್ನು ಪ್ರಥಮವಾಗಿ ಕಂಡುಹಿಡಿಯಬೇಕಾಯಿತು. ಜಾಗದ ಅನಿವಾರ್ಯತೆಯನ್ನು ಮನೆಯ ಧೂಳು ತುಂಬಿ ದಮ್ಮು ಕಟ್ಟುವ ಗ್ಯಾರೇಜು ನಿವಾರಿಸಿತು. ಅಲ್ಲೂ ಕೂಡ ಮನೆಯವರೆಲ್ಲರ ಆಕ್ಷೇಪಣೆ ಸಹಿಸುತ್ತಲೇ ಸಂಶೋಧಿಸಬೇಕಾದ ಅನಿವಾರ್ಯತೆ ಇತ್ತು. ಸಂಶೋಧನೆಯ ಸಮಯದಲ್ಲಿ ಕುಟುಂಬ ನಿರ್ವಹಣೆಗೆ ಸರಕಾರವಾಗಲೀ ಯಾ ಯಾವುದೇ ದೊಡ್ಡ ಸಂಘ-ಸಂಸ್ಥೆಯಾಗಲೀ ಧನಸಹಾಯ/ಮಾಶಾಸನ ನೀಡುತ್ತಿರಲಿಲ್ಲ. ಮಾಶಾಸನದಲ್ಲಿ ಬಹಳಪಾಲು ಬೇಡದ ಜನಗಳಿಗೇ ಸಲ್ಲುವುದು ಯಾರಿಗೂ ತಿಳಿಯದ್ದೇನಲ್ಲವಲ್ಲ ! ಸಂಶೋಧನೆ ಫಲಕಾರಿಯಾದರೆ ಮುಂದೆ ಹಾರತುರಾಯಿ ಮೆರವಣಿಗೆ ! ಅಂದುಕೊಂಡಹಾಗೇ ಆಗದೇ ಹೊದರೆ ಮುಂದಿರುವ ಮಾರೀ ಹಬ್ಬದ ನೆನಪು ಆಗಾಗ ಮರುಕಳಿಸಿ ಕೆಲಸಮಾಡಲು ದಮ್ಮೇ ಇರುತ್ತಿರಲಿಲ್ಲ.

ಆರೇಳು ತಿಂಗ್ಳೇ ಕಳೆದು ಹೋಯ್ತು. ಇನ್ನೂ ಸರಿಯಾದ ಫಾರ್ಮ್ಯುಲಾ ಸಿಗಲಿಲ್ಲ. ನನ್ನನ್ನೇ ನಾನು ಸರಿಯಾಗಿ ನೋಡಿಕೊಂಡರೆ ಏನಾದ್ರೂ ಉತ್ತರ ಹೊಳೆಯಬಹುದು ಎಂದು ನಮಗೆ ಯಾರೋ ಉಡುಗೊರೆಯಾಗಿ ಕೊಟ್ಟ ನಾಕಡಿ ಉದ್ದದ ಕನ್ನಡಿಯಲ್ಲಿ ತಿರುಗಿ ಮುರುಗಿ ನೋಡಿಕೊಳ್ಳುತ್ತಿದ್ದೆ. ಜೋರಾಗಿ ಬಂದ ಗುಡುಗಿಗೆ ಒಮ್ಮೆ ಎದೆಯೊಳಗೆ ದಮ್ಮೇ ಇಲ್ಲದಂತಾಗಿ ಹಿಡಿದಿದ್ದ ಕನ್ನಡಿ ಕೈತಪ್ಪಿ ವಾಲಿತು. ಹೆಚ್ಚೇನೂ ಬೀಳಲಿಲ್ಲ ಆದ್ರೂ ನನ್ನ ಫಿಗರನ್ನು ಸರಿಯಾಗಿ ತೋರುತ್ತಿದ್ದ ಕನ್ನಡಿ ಮುಖ ಸಿಂಡರಿಸಿಕೊಂಡ ಹಾಗಿದೆಯಲ್ಲಾ ಎಂದು ಎತ್ತಲು ಹೋದ್ರೆ " ಅದೇನ್ರೀ ಬಿದ್ದಿದ್ದು ಕನ್ನಡೀನಾ ಅಯ್ಯೋ ದೇವ್ರೇ ನಮ್ ಬಾವ ಬಾಂಬೆಯಿಂದ ತಂದಿದ್ದು......" ಎಂದು ಮಂತ್ರಪಠಿಸುತ್ತಾ ಬಂದ ’ದಂ’ ನೋಡುತ್ತಿದ್ದಂತೇ ಕೈಕಾಲೆಲ್ಲಾ ತರತರ ಎದೆಯಲಿ ಡವಡವ, ಮತ್ತೆ ಕರೆಂಟು ಹೋದ ಹಾಗೇ ’ದಂ’ ಉಡುಗೇ ಹೋಯಿತು. ಸಂಶೋಧನೆ ಅಷ್ಟಕ್ಕೇ ನಿಂತಿದೆ. ರಿಸರ್ಚ್ ಮಾಡಲಿಚ್ಛಿಸುವ ಹುಡುಗಿಯರಿಗೆ/ಹೆಂಗಸರಿಗೆ ಹೆಚ್ಚಿನ ಆದ್ಯತೆ! ವಿಶ್ವವಿದ್ಯಾಲಯಗಳ ಇತ್ತೀಚಿನ ಗೈಡ್‍ಗಳಿಗೂ ಮೀರಿ ಎಲ್ಲಾರೀತಿಯ ಸಹಕಾರ ನೀಡಲಾಗುವುದು! ಕ್ಯಾನ್ ಸಂಬಡಿ ಟೇಕ್ ಓವರ್ ಪ್ಲೀಸ್ ?