ಚಿತ್ರಋಣ :ಅಂತರ್ಜಾಲ
ತಟ್ಟಿಸಿಕೊಳ್ಳದವರ ಮಧ್ಯೆ ಅನಂತ್ ರಾಮ್ ಭಿನ್ನವಾಗಿ ಕಾಣುತ್ತಾರೆ !
ತಟ್ಟಿಸಿಕೊಳ್ಳದವರ ಮಧ್ಯೆ ಅನಂತ್ ರಾಮ್ ಭಿನ್ನವಾಗಿ ಕಾಣುತ್ತಾರೆ !
ಮೂರ್ನಾಲ್ಕುದಶಕಗಳ ಹಿಂದೆ ಅಂಚೆಗೆ ಇದ್ದ ಮಹತ್ವ ಇವತ್ತಿನ ದಿನ ಇಲ್ಲ. ಅದಕ್ಕೂ ಮುಂಚಿನದಂತೂ ನಮ್ಮ ಕನ್ನಡದ ಮೇರು ಕವಿ-ಸಾಹಿತಿಗಳ ಕಾಲ; ಆ ಕಾಲದಲ್ಲಿ ಅಂಚೆಯೇ ಪ್ರಮುಖ ಸಂವಹನ ಮಾಧ್ಯಮವಾಗಿತ್ತು. ದೂರವಾಣಿ ಬಂದಿದ್ದೇ ತಡವಾಗಿ ಎಂದು ಹೇಳಬಹುದು. ದೂರವಾಣಿ ದುಬಾರಿಯಾದುದರಿಂದಲೂ ಅಂಚೆ ’ಬಡವರ ಬಾದಾಮಿ’ ಎನಿಸಿದ್ದರಿಂದಲೂ ಅಂಚೆಯನ್ನೇ ಮಧ್ಯಮ ವರ್ಗದ ಜನ ಹೆಚ್ಚಾಗಿ ನೆಚ್ಚಿಕೊಂಡಿದ್ದರು. ಮೇಲಾಗಿ ಅಂಚೆಯಲ್ಲಿ ಬೇಕುಬೇಕಾದ್ದನ್ನು ಬರೆಯಬಹುದಿತ್ತು;ಕುಳಿತು ನಿಧಾನವಾಗಿ ನೆನಪಿನಾಳದಿಂದ ತೆಗೆದು ತೆಗೆದು ತೋಡಿಬಡಿಸುವ ಸಾಧ್ಯತೆ ಹೆಚ್ಚಿತ್ತು. ಒಲವಿರಲಿ- ಗೆಲುವಿರಲಿ, ಸುಖವಿರಲಿ-ದುಃಖವಿರಲಿ, ಕಷ್ಟಕಾರ್ಪಣ್ಯದ ದಿನಗಳೇ ಇರಲಿ ಯಾವುದನ್ನು ಯಾರ್ಯಾರಲ್ಲಿ ಹೇಳಿಕೊಳ್ಳಬೇಕೋ ಹಾಗೆ ಹೇಳಿಕೊಳ್ಳಬಹುದಾಗಿತ್ತು. ಜೀವನಕ್ಕೆ ಅಂಥಾ ಧಾವಂತ ಸ್ಥಿತಿ ಇರಲಿಲ್ಲ. ಉಣ್ಣುವ ಊಟದ ಅಗಳಗುಳನ್ನೂ ಪ್ರತ್ಯೇಕ ಪ್ರತ್ಯೇಕವಾಗಿ ಜಗಿದು ರುಚಿಯ ಆಮೋದವನ್ನು ಪಡೆದಂತೇ ಜನ ಜೀವನದ ಕಷ್ಟ-ಸುಖಗಳ ಮಜಲುಗಳನ್ನು ಸಹಜಗತಿಯಲ್ಲಿ ಸ್ವೀಕರಿಸುತ್ತಿದ್ದರು; ಅಂದಿನ ಜೀವನದಲ್ಲಿ ಪರಸ್ಪರರಿಗಾಗಿ ತುಡಿಯುವ ಅಂಥಾ ಜನವಿದ್ದರು. ಜೀವನ ಮೌಲ್ಯಾಧಾರಿತವಾಗಿತ್ತು. ಸನಾತನ ಜೀವನ ಮೌಲ್ಯಗಳಿಗೆ ಮೌಲ್ಯವಿತ್ತು, ಗೌರವವಿತ್ತು. ದುಶ್ಚಟಗಳ ಬೆನ್ನತ್ತಿಹೋದವರನ್ನು, ಸಮಾಜ ಘಾತುಕ ಕೆಲಸ ಮಾಡುವವರನ್ನು, ನೀತಿ ತಪ್ಪಿ ನಡೆದವರನ್ನು ಜನ ದಂಡಿಸುತ್ತಿದ್ದರು. ಇಷ್ಟೇ ಏಕೆ ಇನ್ನೂ ಆಳಕ್ಕೆ ಇಳಿದರೆ ಸಮಾಜದಲ್ಲಿ ಇರುವ ವರ್ಗಗಳಲ್ಲಿ ದ್ವೇಷ-ವೈಷಮ್ಯಗಳು ಇರಲಿಲ್ಲ.
ನರಸಿಂಹ ಸ್ವಾಮಿಯವರ ಮಲ್ಲಿಗೆ ಸಂಕಲನದಲ್ಲಿ ಬಳೆಗಾರ ಚೆನ್ನಯ್ಯನನ್ನು ನೋಡಿದ್ದೀರಿ.
ಬಳೆಗಾರ ಚೆನ್ನಯ್ಯ ಬಾಗಿಲಿಗೆ ಬಂದಿಹೆನು
ಒಳಗೆ ಬರಲಪ್ಪಣೆಯೆ ದೊರೆಯೇ?
ನವಿಲೂರ ಮನೆಯಿಂದ ನುಡಿಯೊಂದ ತಂದಿಹೆನು
ಬಳೆಯ ತೊಡಿಸುವುದಿಲ್ಲ ನಿಮಗೆ
ಅಂಥಾ ಚೆನ್ನಯ್ಯಂದಿರು ಅದೆಷ್ಟೋ ಜನರಿದ್ದರು! ವ್ಯಾಪಾರಕ್ಕೂ ಮೀರಿದ ಸಂಪರ್ಕ-ಸಂಬಂಧದ ತುಡಿತ ಅವರಲ್ಲಿತ್ತು. [ಸಂವಹನಕ್ಕಾಗಿ ಈ ಮಾರ್ಗವನ್ನು ಸ್ವಾತಂತ್ರ್ಯ ಯೋಧರೂ ಬಳಸಿಕೊಂಡರು ಎಂಬುದು ತಿಳಿಯುತ್ತದೆ] ನಾನು ಚಿಕ್ಕವನಿರುವಾಗ ನನ್ನ ಅಜ್ಜಿ ಒಮ್ಮೆ ಭಿಕ್ಷುಕರಲ್ಲಿ ಪ್ರೀತಿಯಿಂದ ಮಾತನಾಡುತ್ತಿರುವುದನ್ನು ನೋಡಿದ್ದೆ. ಆ ಭಿಕ್ಷುಕ ದಂಪತಿ ಆಗಾಗ ಬರುತ್ತಿದ್ದರು; ಅವರು ಗ್ರಾಮ ಗ್ರಾಮಗಳನ್ನು ಸುತ್ತುವವರು, ಇಂದಿಲ್ಲಿ ನಾಳೆ ಮುಂದಿನಗ್ರಾಮ, ನಾಡಿದ್ದು ಮತ್ತೊಂದು ಹೀಗೇ. "ಅಮ್ಮಾ ಅಬ್ಳಿಮನೆಯಲ್ಲಿ ಎಲ್ಲಾ ಅರಾಂ ಅವ್ರೆ ಹದಿನೈದಿಪ್ಪತ್ತು ದಿನದ ಹಿಂದೆ ನಾವು ಹೋಗಿ ಬಂದೀವಿ" ಎಂದು ಅವರೆಂದಾಗ ಅಜ್ಜಿಯ ಮುಖದಲ್ಲಿ ಮಲ್ಲಿಗೆಯರಳಿದ್ದನ್ನು ಕಂಡಿದ್ದೆ! ಭಿಕ್ಷುಕರಲ್ಲೂ ವಿಷಯವನ್ನು ನಿವೇದಿಸಿದ ತೃಪ್ತಭಾವ ಕಾಣುತ್ತಿತ್ತು!! ಅಬ್ಳಿಮನೆ [ಮನೆಯ ಹಿಂಭಾಗದಲ್ಲಿ ಗುಡ್ಡದಿಂದ ಬಂದು ಗುದುಕುವ ಕುಡಿಯುವ ನೀರಿನ ಅಬ್ಬಿ ಇತ್ತಾದ್ದರಿಂದ ಆ ಮನೆಗೆ ಅಬ್ಳಿಮನೆ ಎಂದು ಹೆಸರಿತ್ತು] ನನ್ನಜ್ಜಿಯ ತವರುಮನೆ. ತವರೆಂದರೆ ಹೆಣ್ಣುಮಕ್ಕಳಿಗೆ ಅದೆಷ್ಟು ಪ್ರೀತಿಯಲ್ಲವೇ? ಹೌದು ಪಾಪ, ಹೆಣ್ಣಿನ ಜೀವನಗತಿಯೇ ಹಾಗೆ, ಹುಟ್ಟುವುದೊಂದೆಡೆ, ಬಾಳುವುದಿನ್ನೊಂದೆಡೆ. ಬಾಲ್ಯವನ್ನು ಕಳೆದ ತವರನ್ನು ತೊರೆದು ಯೌವ್ವನಾವಸ್ಥೆಯಲ್ಲಿ ಗಂಡನಮನೆಗೆ ಸೇರುವುದು ಅನಿವಾರ್ಯ ಅಲ್ಲವೇ? ಎರಡೂ ಕಡೆಯ ಕುಟುಂಬಗಳ ಕ್ಷೇಮವನ್ನು ಸದಾ ದೇವರಲ್ಲಿ ಸಂಪ್ರಾರ್ಥಿಸುತ್ತಾ ಅದನ್ನೇ ಅನವರತ ಹಾರೈಸುತ್ತಾ ಬದುಕುವ ಜೀವ ಹೆಣ್ಣು. ಕೇವಲ ಹತ್ತು ಹರದಾರಿ ದೂರವಿದ್ದರೂ ತವರನ್ನು ಬಹುದೂರ ಇದೆಯೆಂಬ ರೀತಿ ಅಗಲಿರಲಾರದ ಭಾವನೆಗಳನ್ನು ಒಲವನ್ನು ಮನದ ತುಂಬಾ ತುಂಬಿಕೊಂಡು, ಎಂದು ನಾನು ತವರಿಗೆ ಹೋದೇನು ಎಂಬುದನ್ನೇ ಕನವರಿಸಿಕೊಳ್ಳುತ್ತಾ ಬದುಕುವವಳು ಆ ಸಾಧ್ವಿ.
ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೆ ಒರೆಯ ನಿಟ್ಟು
ನಿಮ್ಮ ನೆನಪೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು
ದಾಂಪತ್ಯ ಜೀವನದ ಭಾವನೆಗಳ ತಾಕಲಾಟವನ್ನು ಕಾವ್ಯದಲ್ಲಿ ಹೆಣ್ಣು-ಗಂಡು ಎರಡೂ ಪಾತ್ರಪೋಷಣೆಮಾಡುತ್ತಾ ಅನುಭವಿಸಿದವರು ನರಸಿಂಹಸ್ವಾಮಿಯವರು. ವಾರದಕಾಲ ಗಂಡನಮನೆ ಅಥವಾ ತನ್ನಮನೆಯನ್ನು ಬಿಟ್ಟು ತವರಲ್ಲುಳಿದ ಹೆಂಡತಿ, ತನ್ನ ಅನುಪಸ್ಥಿತಿಯಲ್ಲಿ ಇರಬಹುದಾದ ಗಂಡನ ಬೇಸರದ ದಿನಗಳನ್ನು ಗಣಿಸುತ್ತಾ ಹೇಳುವ ಕವನ ಈ ಮೇಲಿನದು. ಬಳೆಗಾರರು, ಬಣಸಾಲಿಗಳು ಯಾನೇ ಪಡಸಾಲಿಗಳು [ಕೆಂಪುದಾರ, ಕಾಶೀದಾರ, ಅರಿಶಿನ-ಕುಂಕುಮ, ಪಿನ್ನು, ಕನ್ನಡಿಕರಡಿಗೆ, ದೇವರಪಟ ವಗೈರೆಗಳನ್ನು ಮಾರುವಾತ], ಕುಂಬಾರರು, ಕೌದಿ ಹೊಲಿಯುವವರು, ಕುಲಾವಿ ಕಟ್ಟಿಕೊಡುವವರು ಹೀಗೇ ತರಾವರಿ ಹಳ್ಳಿವರ್ತಕರು ಅಂದಿನದಿನಮಾನದಲ್ಲಿ ಕಾಣಸಿಗುತ್ತಿದ್ದರು; ಇಂಥವರು ಮಾಧ್ಯಮವಾಗಿ ಇಕ್ಕೆಲಗಳ ಕುಟುಂಬಗಳ ಸಂಬಂಧಗಳನ್ನು ಅರಿತು ಸಂದೇಶಗಳನ್ನು ಹಂಚುತ್ತಿದ್ದರು. ಇದರಿಂದ ವ್ಯಾಪಾರಿಗಳಿಗೆ ವ್ಯಾಪಾರವೂ ಹೆಚ್ಚುತ್ತಿತ್ತು ಮತ್ತು ಗಿರಾಕಿಗಳ ಜೊತೆ ಆತ್ಮೀಯತೆಯೂ ಬೆಳೆದು ಅದೊಂಥರಾ ಅವಿನಾಭಾವ ಸಾಂಗತ್ಯ ಏರ್ಪಡುತ್ತಿತ್ತು! ಇಂಥಾ ವ್ಯಾಪಾರಿಗಳನ್ನು ಯಾರೂ ಬರಬೇಡವೆಂದು ಕಳಿಸುತ್ತಿರಲಿಲ್ಲ; ಬದಲಾಗಿ ಬರಲಿ ಎಂದೇ ಬಯಸುತ್ತಿದ್ದರು. ಬಂದ ಇಂಥಾ ವ್ಯಾಪಾರಿಗಳಿಗೆ ಹಸಿವು-ನೀರಡಿಕೆಗಳಿಗೆ ಕೊಟ್ಟು ಕಳಿಸುವುದೂ ಕೂಡ ಇತ್ತು! ಎಷ್ಟು ಚೆನ್ನಾಗಿತ್ತು ನೋಡಿ ಈ ಅಲಿಖಿತ ಒಡಂಬಡಿಕೆ!!
ನಂತರದಲ್ಲಿ ಆರಂಭಗೊಂಡಿದ್ದೇ ಅಂಚೆಸೇವೆ. ಹಳ್ಳಿಗರಲ್ಲಿ ಅನೇಕರಿಗೆ ಅಕ್ಷರ ಬರುತ್ತಿರಲಿಲ್ಲ. ಅಂಚೆಯಾತನಿಗೆ ಅಕ್ಷರ ಬರಲೇಬೇಕಿತ್ತು, ಆತ ಮನೆಮನೆಗೆ ಬಂದು ಕಾಗದಗಳನ್ನು ಕೊಟ್ಟೋ ತೆಗೆದುಕೊಂಡೋ ಹೋಗಬೇಕಿತ್ತು. ಬಂದಿರುವ ಅಂಚೆಯನ್ನು ಓದಿ ಹೇಳುವುದು ಮತ್ತು ಹೋಗುವ ಅಂಚೆಗಳನ್ನು ಬರೆದು-ಓದಿತಿಳಿಸಿ ಅನುಮತಿ ಪಡೆದು ರವಾನಿಸುವುದು ಅಂಚೆಯಣ್ಣನ ಕೆಲಸವಾಗಿತ್ತು. ಜೀವನದ ಭಾವನೆಗಳನ್ನು ಹಂಚಿಕೊಳ್ಳುವ ಅಂಚೆಯಣ್ಣನೆಂದರೆ ಎಲ್ಲರಿಗೂ ಮಿತ್ರನೆಂಬುದೇ ಸರಿ. ದೂರದಿಂದ ನಡೆಯುತ್ತಲೋ ಸೈಕಲ್ ತುಳಿಯುತ್ತಲೋ ದಣಿದು ಬರುವ ಆತನಿಗೆ, ಬೇಸಿಗೆಯಲ್ಲಿ ಮಜ್ಜಿಗೆ, ಮಳೆ-ಚಳಿಗಾಲದಲ್ಲಿ ಚಾ-ಕಾಫಿ ಇಂತಹ ಉಪಚಾರ ನಡೆಯುತ್ತಿತ್ತು. ಬಂದಿರುವ ಕಾಗದವನ್ನೋದುವ ಅಂಚೆಯಣ್ಣ ಅದರಲ್ಲಿ ದುಃಖಕರ ಸಂದೇಶವಿದ್ದರೆ ನಿಧಾನವಾಗಿ, ಬಹುನಿಧಾನವಾಗಿ ತಿಳಿಸುವ ಪರಿಪಾಟವಿತ್ತು; ಶುಭ ಸಮಾಚಾರವಿದ್ದರೆ ಆತ ಆತುರಾತುರವಾಗಿ ಹೇಳಿ ಸಂಭ್ರಮಕ್ಕೆ ಕಾರಣನಾಗುತ್ತಿದ್ದ. ಅಂಚೆಯವ ಸರಕಾರೀ ನೌಕರ ಎಂಬುದನ್ನೇ ಮರೆತ ಆತ್ಮೀಯತೆ ಅಲ್ಲಿರುತ್ತಿತ್ತು. ಇಂಥಾ ಕಾಲದಲ್ಲಿ ನಗರಗಳಲ್ಲಿ-ಪಟ್ಟಣಗಳಲ್ಲಿ ನೆಲೆಸಿದ ಕನ್ನಡ ಸಾರಸ್ವತರು ತಮ್ಮದೇ ಆದ ರೀತಿಯಲ್ಲಿ ಉದ್ದದ ಪತ್ರಗಳನ್ನು ಬರೆದುಕೊಳ್ಳುತ್ತಿದ್ದರು. ರಸಗವಳಗಳಂತಿರುವ ಅಂಥಾ ಪತ್ರಗಳ ನಿರೀಕ್ಷಣೆಯಲ್ಲೇ ಪರಸ್ಪರರಲ್ಲಿ ಕಾತರವಿರುತ್ತಿತ್ತು. ದುಶ್ಯಂತನಿಗೆ ಶಕುಂತಲೆ ಕಮಲಪತ್ರದಲ್ಲಿ ಸಂದೇಶ ಬರೆದಳು ಎಂಬಲ್ಲಿಂದ ’ಪತ್ರ’ ಎಂಬ ಪದ ಹುಟ್ಟಿತು ಎಂಬ ವಾದ ಕೆಲವರದು; ಅಂಥಾ ದುಶ್ಯಂತ -ಶಕುಂತಲೆಯರೂ ವಿರಳವಾಗಿ ಅಲ್ಲಲ್ಲಿ ಇರುತ್ತಿದ್ದು ಅವರು ಮದುವೆಯಾದ ಬಳಿಕದ ವಿರಹವನ್ನು ತೋಡಿಕೊಳ್ಳುವ ದುಶ್ಯಂತ-ಶಕುಂತಲೆಯರಾಗಿರುತ್ತಿದ್ದರು. ಅಂತಹ ದಂಪತಿಯ ಚಿತ್ರಣವನ್ನೇ ಕಾವ್ಯವಾಗಿಸಿದವರು ನರಸಿಂಹಸ್ವಾಮಿಗಳು. ಕೆಲವೊಮ್ಮೆ ಪತ್ರದ ನಿರೀಕ್ಷಣೆಯಲ್ಲಿದ್ದಾಗ ಅದು ಸಮಯಕ್ಕೆ ಬಾರದೇ ಹೋದರೆ ಹೇಳಿಕೊಳ್ಳಲಾಗದ ಬೇಗುದಿ ಮನವನ್ನಾವರಿಸುತ್ತಿತ್ತು-ಆದರೂ ಅದೊಂಥರಾ ಸುಖವೇ ಆಗಿರುತ್ತಿತ್ತು. ಕಾದು- ಸೋತು-ಸುಣ್ಣವಾದ ದಿನಗಳಲ್ಲಿ ದೂರದಲ್ಲಿ ಅಂಚೆಯವ ಬಂದನೆಂದರೆ ಆತ ಬಂದು ತಲ್ಪುವವರೆಗೆ ತಡೆಯಲಾರದ ತಳಮಳ, ಹೋಗಿ ತಾವೇ ಪಡೆದು ಓದಿಕೊಳ್ಳುವ ಆತುರ. ವಿರಹದ ದಿನಗಳನ್ನು ಪತ್ರಿಸಿದ ದಂಪತಿಗಳ ರಸಾನುಭವವನ್ನು ಅವರ ಬಾಯ್ಮಾತುಗಳಲ್ಲೇ ಕೇಳಿದರೆ ಅರ್ಥವಾದೀತು!
ರಾಜು ಎಂಬಾತ ನನ್ನ ಪರಿಚಿತರೊಬ್ಬರ ಮಗ. ಆತ ಐದನೇ ತರಗತಿಯಲ್ಲಿ ಓದುತ್ತಿದ್ದಾಗಿನಿಂದ ನೋಡುತ್ತಿದ್ದೆ; ಸದ್ಗುಣಗಳುಳ್ಳ ಸಂಭಾವಿತ ಹುಡುಗ. ಪ್ರೌಢಶಾಲೆ ಮುಗಿಸಿ ದ್ವಿತೀಯ ಪದವಿಪೂರ್ವ ತರಗತಿ ಮುಗಿಯುವವರೆಗೂ ಕೆಲವು ತಾಂತ್ರಿಕ ಸಲಹೆಗಳನ್ನು ಪಡೆಯಲು ಫೋನು ಮಾಡುತ್ತಿದ್ದ. ಇದೀಗ ಕಳೆದ ಸಾಲಿನಲ್ಲಿ ಎಂಜಿನೀಯರಿಂಗ್ ಮುಗಿಸಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಸೇರಿಕೊಂಡಿದ್ದಾನಂತೆ ಅಂತ ಯಾರೋ ಅಂದರು. ಇತ್ತೀಚೆಗೆ ಆತನ ದೂರವಾಣಿಯಾಗಲೀ ಮಿಂಚಂಚೆಯಾಗಲೀ ಬಂದಿರಲಿಲ್ಲ ಹಾಗಾಗಿ ಆತ ಸಹಜವಾಗಿ ಕಲಿಕೆಯ ಕರ್ತವ್ಯಗಳ ಒತ್ತಡದಲ್ಲಿರಬೇಕೆಂದುಕೊಂಡಿದ್ದೆ. ಮೊನ್ನೆ ಮೊನ್ನೆ ಅರಮನೆ ಮೈದಾನದಲ್ಲಿ ನಡೆದ ರಾಮಕಥೆಗೆ ರಾಜು ಬಂದಿದ್ದ. ಅಗಲದಲ್ಲಿ ಮತ್ತು ಎತ್ತರದಲ್ಲಿ ಬೆಳೆದುನಿಂತ ಅವನ ಗುರುತು ಕೇವಲ ಮುಖದಿಂದ ಮಾತ್ರ ತಿಳಿಯುತ್ತಿತ್ತು. ರಾಜುವನ್ನು ಕಂಡೆ; ಆತ ಯಾವತ್ತಿನ ಹಾಗೆ ನಗಲಿಲ್ಲ, ಮಾತನಾಡಲಿಲ್ಲ, ಬದಲಾಗಿ ಕೈಯ್ಯಲ್ಲಿ ಹಿಡಿದಿದ್ದ ಸುಟ್ಟ ಜೋಳದ ಕುಂಡಿಗೆಯನ್ನು ತಿರುತಿರುವಿ ತಿನ್ನುತ್ತಿದ್ದ. ಜೀನ್ಸ್ ಮತ್ತು ಟೀ ಶರ್ಟ್ ಧರಿಸಿದ್ದ, ತಲೆಯಮೇಲೆ ಆನಿಸಿಟ್ಟ ಕನ್ನಡಕ ಕಂಡಿತು. ಪ್ರಾಯಶಃ ಆತನಿಗೆ ನನ್ನ ಗುರುತು ನೆನಪಿಗೆ ಬರುತ್ತಿಲ್ಲವೇನೋ ಎಂದುಕೊಂಡೆ ಮತ್ತು ರಾಜುವೇ ಹೌದೋ ಅಲ್ಲವೋ ನೋಡಿಬರೋಣವೆಂದು ಹತ್ತಿರ ಹೋಗಿ ನೋಡಿದೆ..ಉಹುಂ ರಾಜುವಿನ ಮುಖದಲ್ಲಿ ಬದಲಾವಣೆ ಇರಲಿಲ್ಲ. ರಾಜುವಿನ ಮನಸ್ಸು ಮಾತ್ರ ಭರ್ತಿ "ನಾನ್ಯಾಕೆ ಮಾತನಾಡಲಿ ನಾನೊಬ್ಬ ಸಾಫ್ಟ್ ವೇರ್ ಎಂಜಿನೀಯರು" ಎನ್ನುತ್ತಿರುವುದು ನನ್ನ ಅನುಭವಕ್ಕೆ ನಿಲುಕುತ್ತಿತ್ತು. ಪಕ್ಕದಲ್ಲಿ ಹುಡುಗಿಯೊಬ್ಬಳು ನಿಂತಿದ್ದಳು-ಅವರಲ್ಲೇ ಏನೋ ಹೇಳಿಕೊಂಡು ನಕ್ಕರು-ನನ್ನೆಡೆಗೆ ದೃಷ್ಟಿ ಹರಿಯದಂತೇ ಇದ್ದರು. ಅರ್ಥವಾಗಿತ್ತು ನನಗೆ: ರಾಜು ಬದಲಾಗಿದ್ದಾನೆ, ಬೇರೇ ಲೋಕದವರಂತೇ ಆಡುತ್ತಾನೆ; ತಿಂಗಳಿಗೆ ಐದಂಕೆಯ ಸಂಬಳ ಪಡೆಯುತ್ತಿರುವ ಆತನಿಗೆ ನಾವೆಲ್ಲಾ ಯಾರೋ ಆಗಿಬಿಟ್ಟಿದ್ದೇವೆ, ಅಪರಿಚಿತರಾಗಿಬಿಟ್ಟಿದ್ದೇವೆ. ರಾಜು ಬದಲಾಗಿರಬಹುದು [ಆತ ಗಣಕ-ತಾಂತ್ರಿಕ ವಿದ್ಯೆ ಕಲಿತಿದ್ದಾನಲ್ಲಾ?] ಆದರೆ ಅನಂತ್ ರಾಮ್ ಎಂಬ ತುಂಬಿದಕೊಡದ ಸ್ವಭಾವದಲ್ಲಿ ಬದಲಾವಣೆ ಕಾಣಲಿಲ್ಲ! ರಾಜುವಿನ ತಂದೆ-ತಾಯಿಗಳೂ ಬದಲಾಗಿಲ್ಲ!!
ಹದಿನಾರು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನನಗೆ ಅನಿರೀಕ್ಷಿತವಾಗಿ ಪರಿಚಯವಾದವರು ಅನಂತ್ ರಾಮ್. ಅವರೊಬ್ಬ ಸರಳ ಸಾತ್ವಿಕ ಸರಕಾರೀ ನೌಕರ. ಎದುರುಬದುರು ಬಾಡಿಗೆಮನೆಗಳಲ್ಲಿ ವಾಸಿಸುತ್ತಿದ್ದ ನಾವು ಎದುರಾದಾಗ, ಮನೆಗಳ ಹೊರಗೆ ಗಾಡಿ ತೊಳೆಯುವಾಗ ಸಿಕ್ಕಾಗ ಮುಖದಲ್ಲಿ ಮುಗುಳು ನಗುವಿನ ಹೊರತು ಹೆಚ್ಚಿಗೆ ಪರಿಚಯವಿರಲಿಲ್ಲ. ತಿಂಗಳುಗಳ ನಂತರ ಅವರ ಕೆಲಸಕಾರ್ಯಗಳು ನನಗೆ ಗೋಚರಿಸತೊಡಗಿದವು. ಕುಡಿಯುವ ನೀರು ಸರಬರಾಜಿನಲ್ಲಿ ದೀರ್ಘ ವ್ಯತ್ಯಯವಿದ್ದರೆ,ಬೀದಿ ದೀಪಗಳು ಬಹುದಿನಗಳ ಕಾಲ ಉರಿಯದೇ ಇದ್ದರೆ ಅಥವಾ ಹಗಲಲ್ಲೂ ಉರಿಯುತ್ತಲ್ರ್ಏ ಇದ್ದರೆ, ಮ್ಯಾನ್ ಹೋಲ್ ಹಾದಿಹೋಕರ ಅವಘಡಕ್ಕೆ ಕಾರಣವಾಗುತ್ತಿದ್ದರೆ, ಬೀದೀನಾಯಿಗಳ ಉಪಟಳ ತೀರಾ ಮಿತಿಮೀರಿದರೆ, ಪೂಟ್ ಪಾತ್ ನಲ್ಲಿ ಹಾಸುಗಲ್ಲುಗಳು ಜಾರುತ್ತಿದ್ದರೆ, ರಸ್ತೆಯಲ್ಲಿ ಯಾರೋ ಅಪರಿಚಿತರು ಕುಡಿದು ಬಿದ್ದಿದ್ದರೆ[ಇಂಥದ್ದಕ್ಕೆ ದೂರವಾಣಿಯೇ] ಸಂಬಂಧಿಸಿದ ಇಲಾಖೆಗಳಿಗೆ ಅಂಚೆ/ದೂರವಾಣಿ ಮೂಲಕ ಅವರು ಸಂವಹಿಸುತ್ತಿದ್ದರು. ವಾಸಿಸುವ ಪ್ರದೇಶದ ನಾಗರಿಕರ ಕೊರತೆಗಳನ್ನು ಕೇಳಿತಿಳಿದು, ಸಹಿ ಸಂಗ್ರಹಿಸಿ ಅಹವಾಲನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಖುದ್ದಾಗಿ ತಲ್ಪಿಸುತ್ತಿದ್ದರು. ಎಂದಿಗೂ ಯಾರಲ್ಲೂ ಚಿಕ್ಕಾಸನ್ನೂ ಪಡೆದವರಲ್ಲ; ಯಾವುದೇ ಚುನಾವಣೆಗಾಗಲೀ ರಾಜಕೀಯದ ಅನುಕೂಲತೆಗಾಗಲೀ ಈ ಕೆಲಸವನ್ನವರು ಕೈಗೊಂಡವರಲ್ಲ. ನಮ್ಮಲ್ಲಿ ನಾವು ಪಡಾಬಿದ್ದ ಕೆಲಸಗಳೆಂದು ಕರೆಯುವ ಇಂಥಾ ಸಾರ್ವಜನಿಕ ಹಿತಾಸಕ್ತಿಯ ಕೆಲಸಗಳಿಗೆ ಮಹತ್ವ ನೀಡಿದ ವ್ಯಕ್ತಿಯನ್ನು ನಾನು ಅನಂತ್ ರಾಮ್ ಅವರಲ್ಲಿ ಕಂಡಿದ್ದೆ. ಸಾರ್ವಜನಿಕರ ಹಿತಾಸಕ್ತಿಯನ್ನು ಸ್ವಂತ ಹಿತಾಸಕ್ತಿಯಷ್ಟೇ ಅಥವಾ ಅದಕ್ಕಿಂತಾ ಹೆಚ್ಚಿಗೆ ಎಂಬ ರೀತಿಯಲ್ಲಿ ಪರಿಗಣಿದವರು ಅವರು. ತಟ್ಟಿಸಿಕೊಳ್ಳುವವರು ಮತ್ತು ತಟ್ಟಿಸಿಕೊಳ್ಳದವರು ಎಂಬೆರಡು ವರ್ಗ ಗೊತ್ತಲ್ಲಾ ತನ್ನಂತೇ ಪರರು ಎಂದು ಬಗೆದು, ಅನೇಕರಿಗೆ ಬೇಕಾಗುವ ಉಪಕೃತ ಜೀವನವನ್ನು ನಡೆಸುವವರಿಗೆ ತಟ್ಟಿಸಿಕೊಳ್ಳುವವರು ಎನ್ನುತ್ತೇವಲ್ಲವೇ? ಅನಂತ್ ರಾಮ್ ಬಹಳ ತಟ್ಟಿಸಿಕೊಳ್ಳುವ[ಹಚ್ಚಿಕೊಳ್ಳುವ] ಜನ; ಹಾಗಂತ ಬೆನ್ನು ತಟ್ಟಿಸಿಕೊಳ್ಳುವ ಬೂಟಾಟಿಕೆಯ ಜನ ಅಲ್ಲ!
ವಿಶೇಷವೆಂದರೆ ಮಧುಮೇಹದಂತಹ ತೊಂದರೆ ಬಾಧಿಸುತ್ತಿದ್ದರೂ ತಮ್ಮ ಕಷ್ಟಗಳ ಮಧ್ಯೆಯೂ ಅವರು ಸಾರ್ವಜನಿಕರ ಸೇವೆಯನ್ನು ನಿಲ್ಲಿಸಲಿಲ್ಲ. ಅಜಮಾಸು ನನ್ನ ಅಪ್ಪನ ವಯಸ್ಸಿನ ಅವರೊಡನೆ ಸ್ನೇಹ ಬೆಳೆಯಿತು; ಸಾರ್ವಜನಿಕ ಜೀವನದ ಕರ್ತವ್ಯಗಳ ಬಗೆಗೂ ಗಮನ ಹರಿಯಿತು. ಅಂದಿನಿಂದ ಇಂದಿನವರೆಗೂ ಅವರ ಒಡನಾಟ ಹಾಗೇ ಇದೆ. ಅವರ ಮಕ್ಕಳು ವಿದ್ಯಾಭ್ಯಾಸ ಮುಗಿಸಿ, ವೃತ್ತಿನಿರತ ಸಾಫ್ಟ್ ವೇರ್ ತಂತ್ರಜ್ಞರಾದರು. ಅನಂತ್ ರಾಮ್ ನಿವೃತ್ತರಾದರೂ ಅವರ ಸಾರ್ವಜನಿಕಸೇವೆ ಮಾತ್ರ ನಿಂತಿಲ್ಲ. ತಮ್ಮ ಮನೆಯ ಎಲ್ಲಾ ಕಾರ್ಯಕ್ರಮಗಳಿಗೂ ನಮ್ಮನ್ನು ಕರೆಯುತ್ತಾರೆ; ನಾವೂ ಹಾಗೇನೆ. ಗಂಡ-ಹೆಂಡತಿ ಇಬ್ಬರೂ ದುಡಿದಿದ್ದರಲ್ಲಿ ಹಿಂದೆಯೇ ಎರಡು ನಿವೇಶನ ಖರೀದಿಸಿದ್ದರು-ಎರಡು ಮನೆಗಳನ್ನು ಕಟ್ಟಿ ಪ್ರವೇಶ ಸಮಾರಂಭಕ್ಕೆ ಕರೆದಿದ್ದರು, ಮಗಳ ಮದುವೆಗೆ ಕರೆದಿದ್ದರು. ಜಾತಿ-ಮತ-ಗೋತ್ರಗಳನ್ನು ಕೇಳುವ ಅಲ್ಪಮತಿ ನನ್ನದಲ್ಲ. ಇಂದು ನಾವು[ನಾನು ಇದ್ದವನು ಈಗ ಸಂಸಾರಿಯಾಗಿ ನಾವು ಎಂದಾಗಿದೆ!] ಅವರು ಬೇರೇ ಬೇರೇ ಪ್ರದೇಶಗಳಲ್ಲಿ ವಾಸಿಸುತ್ತಿದ್ದೇವೆ. ಹೀಗಾಗಿ ಮೊನ್ನೆ ಕೂಡಾ ಸಂಕ್ರಾಂತಿಗೆ ಪೂರ್ವಭಾವಿಯಾಗಿ ಅವರ ಪತ್ರವೊಂದು ಬಂತು; ಹಾಗೆ ಪ್ರತೀವರ್ಷ ಅವರು ಬರೆಯುತ್ತಾರೆ. ಪತ್ರ ತಂದ ಸಂತೋಷವನ್ನು ಹೇಗೆ ಹೇಳಲಿ? ಅದಕ್ಕುತ್ತರವಾಗಿ ನಾನೊಂದು ಪತ್ರ ಬರೆದೆ, ಎಂದಿನ ನನ್ನ ಸಾಹಿತ್ಯಕ-ಕಾವ್ಯಾತ್ಮಕ ಬರಹ ಅದಾಗಿತ್ತು-ಹೆಚ್ಚಿಲ್ಲ: ಒಂದೇ ಪುಟದಷ್ಟು, ಅದನ್ನು ಓದಿದವರೇ ಮತ್ತೆ ಅವರು ಮರುತ್ತರ-ಮಾರುತ್ತರ ಬರೆದಿದ್ದಾರೆ-"ಜೀವನದಲ್ಲಿ ಇದುವರೆಗೆ ಇಂಥಾ ಉತ್ತಮ ಬರವಣಿಗೆಯನ್ನು ಆಸ್ವಾದಿಸಿರಲಿಲ್ಲ, ಪತ್ರದ ಅಕ್ಷರಕ್ಷರವೂ ಭಾವನೆಗಳನ್ನು ಮೀಟುತ್ತವೆ, ಕಟ್ಟುಹಾಕಿಸಿ ಗೋಡೆಗೆ ಹಚ್ಚಿಟ್ಟುಕೊಳ್ಳುವಾ ಎನಿಸುತ್ತದೆ" ಎಂದು ಅಭಿನಂದನೆ ತಿಳಿಸಿದ್ದಾರೆ.
ಹೀಗೇ ಪತ್ರಗಳು ತರಬಹುದಾದ ಭಾವನೆಗಳು ಮಿಂಚಂಚೆಯಲ್ಲಿ ಕಾಣುವುದಿಲ್ಲ. ವಿದ್ಯುನ್ಮಾನದ ನಾನಾ ಅವಿಷ್ಕಾರಗಳಿಂದ ಜಗತ್ತು ಕಿರಿದಾಗಿದೆಯೇನೋ ಸರಿ, ಆದರೆ ಮನುಷ್ಯ ಮನುಷ್ಯರ ನಡುವಿನ ದೂರ ಜಾಸ್ತಿಯಾಗಿದೆ! ಜೀವನ ಅಧಿಕ ಧಾವಂತದ್ದಾಗಿದೆ. ಉಂಡ ಮಂದಿಗೆ ಊಟಮಾಡಿದಮೇಲೆ ಏನು ಊಟಮಾಡಿದೆ ಎಂಬುದು ಗೊತ್ತಿರುವುದಿಲ್ಲ; ನಿಂತಲ್ಲೇ ತಿನ್ನುವ-ಉಣ್ಣುವ ಹೊಸ ಪರಂಪರೆ ಕಾಣುತ್ತಿದೆ. ಆಯುರ್ವೇದದಲ್ಲಿ ಹೇಳಿದ ನಿಷಿದ್ಧ ಕ್ರಿಯೆಗಳೆಲ್ಲಾ ಆಚರಣೆಯಲ್ಲಿವೆ! ಜೀವನದ ಬಹುಭಾಗ ಮಾಧ್ಯಮಗಳ ಮುಂದೆ ಕಳೆದುಹೋಗುತ್ತಿದೆ. ಯಾರೂ ತೀರಾ ಆಪ್ತರೆನಿಸುವುದಿಲ್ಲ; ಆಪ್ತರೆನಿಸಿಕೊಳ್ಳುವ ಮನೋಭಾವ ಯಾರಲ್ಲೂ ಇಲ್ಲ, ಕೇವಲ ಢಾಂಬಿಕವಾಗಿ ’ಹ್ಯಾಪಿ ಬರ್ತಡೆ ಟೂ ಯೂ ಅಥವಾ ಮೆನಿ ಹ್ಯಾಪಿ ರಿಟರ್ನ್ಸ್ ಆಫ್ ದಿ ಡೇ’ ಎನ್ನುತ್ತೇವೆ. ಎಲ್ಲೆಲ್ಲೂ ಕ್ರತ್ರಿಮ ನಗು, ಕೆಲಸಗಳ್ಳತನ, ಮೈಗಳ್ಳತನ, ತೋರಿಕೆಯ ಶ್ರೀಮಂತಿಕೆ[ಫಾಲ್ಸ್ ಪ್ರೆಷ್ಟೀಜ್], ತನಗೇನು ಕಮ್ಮಿ ಎಂದುಕೊಳ್ಳುವ ಏನೂಗೊತ್ತಿಲ್ಲದ ಜನ, ಪರರನ್ನು ಪೀಡಿಸಿ ಪಡೆದ ಹಣದಲ್ಲಿ ಮೋಜು-ಮಜಾ ಪಡೆಯುವ ಮಂದಿ ಹೀಗೇ ಪಟ್ಟಿ ಬೆಳೆಯುತ್ತದೆ, ಪುಟಗಳನೇಕ ತುಂಬುತ್ತವೆ. ಇಂದು ಬರುವ ಅಂಚೆಯಣ್ಣನಿಗೆ ಆ ಮನ್ನಣೆಯಿಲ್ಲ; ನಾವೆಲ್ಲಾ ವಿದ್ಯಾವಂತರಾಗಿದ್ದೇವಲ್ಲಾ?-ಅವನ ಸಹಕಾರ ಬೇಕಾಗಿಲ್ಲ, ಅಂಚೆಯಣ್ಣನಲ್ಲೂ ಆ ಮುಗ್ಧ-ಸ್ನಿಗ್ಧ ಭಾವವಿಲ್ಲ ಎಂದರೆ ತಪ್ಪಲ್ಲ. ಬದಲಾದ ಕಾಲಘಟ್ಟದಲ್ಲಿ ಅಂಚೆ ಇಲಾಖೆ ಬಸವಳಿದಿದೆ-ಸೇವೆಗೆ ಸಲ್ಲುವ ಸಂಬಳ ಮೊದಲಾದ ಖರ್ಚಿಗೆ ಸರಕಾರಕ್ಕೆ ಅಂಚೆ ಇಲಾಖೆಯಿಂದ ಬರುವ ಆದಾಯ ಎಲ್ಲೂ ಸಾಲುತ್ತಿಲ್ಲ! ಆದರೂ ಅಂಚೆ ಹಾಗೇ ಕುಂಟುತ್ತಾ ನಡೆದಿದೆ; ಇನ್ನೂ ನಿಂತಿಲ್ಲ, ನಿಲ್ಲಬಾರದು. ಇಂದು ಹಳ್ಳಿಗಳೆಲ್ಲಾ ಸಣ್ಣ ಸಣ್ಣ ಪಟ್ಟಣಗಳಂತಾಗಿಬಿಟ್ಟಿವೆ, ಅಲ್ಲಿ ಹಳ್ಳೀ ವ್ಯಾಪಾರಿಗಳಾದ ಬಳೆಗಾರ ಚೆನ್ನಯ್ಯ, ಪಡಸಾಲಿ ಕನ್ನಯ್ಯ, ಕುಂಬಾರ ರಾಮಯ್ಯ ಬರುವುದಿಲ್ಲ; ಯಾಕೆಂದರೆ ಮನೆಯಂಗಳದಲ್ಲಿ ವ್ಯಾಪಾರ ಕುದುರುವುದಿಲ್ಲ. ಹಾಗಾಗಿ ಹಿಂದೊಮ್ಮೆ ಬಳಕೆಯಲ್ಲಿದ್ದ ’ಮಂದಿ-ಮಾಧ್ಯಮ’ ನಿಂತು ಬಹಳಕಾಲ ಸಂದಿದೆ. ಮಿಂಚಂಚೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಗ್ರಾಮ ಗ್ರಾಮಗಳಲ್ಲೂ ತಳವೂರಿದೆ; ವ್ಯಾಪಾರ-ವಹಿವಾಟಿಗೇನೋ ತ್ವರಿತ ಮಾಹಿತಿ ರವಾನೆಗೆ ಉತ್ತಮವಾಗೇ ಇದೆ; ಆದರೆ ಇಲ್ಲಿ ಭಾವನೆಗಳಿಲ್ಲ ಅಥವಾ ಅಷ್ಟಾಗಿ ಭಾವನೆಗಳು ತುಂಬಿದ ಪತ್ರಗಳು ಇಲ್ಲಿರುವುದಿಲ್ಲ. ಕಾಯುವ ಕಾತರ, ಪಡೆಯುವ ಆತುರ ಇಲ್ಲವೇ ಇಲ್ಲ ಎನ್ನಬಹುದು. ಸಂವಹನ ಕ್ರಿಯೆಯಲ್ಲಿ ಸಂಬೋಧನಾ ಪದಗಳ ಲಾಲಿತ್ಯವೂ ಕಾಣಬರುವುದಿಲ್ಲ. ಯಾಂತ್ರೀಕೃತ ದೋಣಿಯಲ್ಲಿ ಅಂಬಿಗನಿಗೆ ಕೆಲಸವಿಲ್ಲ. ಬರಡಾದ ಬದುಕಿನ ಬದಲು ಕುಲಕಸುಬು ತೊರೆದು ಜನ ಇನ್ನಾವುದೋ ವೃತ್ತಿ ಆತುಕೊಂಡು ಕಷ್ಟಪಡುತ್ತಿದ್ದಾರೆ. ಇಷ್ಟೆಲ್ಲಾ ಬದಲಾವಣೆಗಳ ನಡುವೆಯೂ, ಮಹಾನಗರವಾಸಿಗಳ ಮಧ್ಯೆಯೂ, ಅಲ್ಲಲ್ಲಿ ಅನಂತ್ ರಾಮ್ ಥರದವರು ಕಾಣುತ್ತಾರೆ-ಭಿನ್ನವಾಗಿಕಾಣುತ್ತಾರೆ; ಮೈಮನದ ತುಂಬಾ ಮೃದುಮಧುರ ಸ್ನೇಹಲ ಭಾವವನ್ನು ತುಂಬಿಸುತ್ತಾರೆ, ಶುಭಶುಭ್ರ ಅಕ್ಷರಳ ಮಂಗಲ ಸೇಸೆಯನ್ನು ಎರಚುತ್ತಾರೆ. ಅನಂತ್ ರಾಮ್ ಥರದವರಿಗೆ ಅನಂತ ಕೃತಜ್ಞ, ಹೊಸಬಾಟಲಿಯಲ್ಲಿ ಹಳೆಯ ಹೆಂಡವನ್ನು ತುಂಬಿಸಿಕೊಟ್ಟ ಎಂದು ಅಸಡ್ಡೆಮಾಡದೇ ಓದಿ ಮನ್ನಿಸಿದ ನಿಮಗೂ ಕೂಡ ಸದಾ ಕೃತಜ್ಞ, ನಮಸ್ಕಾರ.