ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, March 16, 2010

ವಿಕೃತಿಯ ಅಹವಾಲು



ದಕ್ಷಿಣೋತ್ತರ ಕನ್ನಡ, ಉಡುಪಿ, ಮಲೆನಾಡು ಜಿಲ್ಲೆಗಳ ಗಂಡು ಮೆಟ್ಟಿನ ಕಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿ, ತನ್ನ ಸಮಗ್ರತನದ ವೈಶಿಷ್ಟ್ಯದಿಂದ ವಿದೇಶಗಳವರೆಗೆ ವ್ಯಾಪಿಸಿ ಜಗನ್ಮಾನ್ಯವಾದ ಪ್ರಸಿದ್ಧ ಕಲೆ ಯಕ್ಷಗಾನ. ಬಲ್ಲವರಿಗೆ ಆ ಬಣ್ಣದ ವೇಷವಷ್ಟೇ ಅಲ್ಲದೇ ಅದರಲ್ಲಿ ಸಂಪೂರ್ಣ ಸಾಹಿತ್ಯ-ಸಂಗೀತ-ನೃತ್ಯವೇ ಮೊದಲಾದ ನವರಸಗಳೂ ಮೇಳೈಸಿ ಷಡ್ರಸೋಪೇತವಾದ ಪಂಚಭಕ್ಷ್ಯ ಪರಮಾನ್ನವಾಗಿ ಪರಿಣಮಿಸಿದ ಈ ಕಲೆಯ ಬಡಗುತಿಟ್ಟಿನ ಶೈಲಿಯಲ್ಲಿ ವಿಕೃತಿಯ ಆದಿಯಲ್ಲಿ ನಮ್ಮ ಆದಿಪೂಜಿತ ಇಡಗುಂಜಿ ಮಹಾಗಣಪತಿಯಲ್ಲಿ ಪ್ರಾರ್ಥಿಸುವ ರೀತಿಯಲ್ಲಿ, ಒಂದೇ ಒಂದು ರಾಗವನ್ನು ಬಳಸಿಕೊಂಡು ಪ್ರಯತ್ನಿಸಿ ಬರೆದ, ಬರೇ ಮದ್ದಲೆ-ತಾಳಗಳೊಂದಿಗೆ ಹಾಡಿಕೊಳ್ಳಬಹುದಾದ ಈ ಹಾಡು- ಇದು ಇಂದಿನ ನೈವೇದ್ಯ -- ಮೊದಲಾಗಿ ಮಹಾಗಣಪತಿಗೆ ತನ್ಮೂಲಕ ನಿಮಗೆ----



[ಯಕ್ಷಗಾನದ ದಿಗ್ಗಜ ರಾಷ್ಟ್ರಪ್ರಶಸ್ತಿ ವಿಜೇತ ದಿ| ಶಂಭು ಹೆಗಡೆ ಕೆರೆಮನೆಯವರ ಚಿತ್ರ]

ವಿಕೃತಿಯ ಅಹವಾಲು

ಹೆಸರುಂಡೆ ಕಾಯ್ಗಡುಬು ಮೊಸರು ಪಂಚಖಾದ್ಯ ಹೊಸಹೊಸ ಬಕ್ಷ್ಯಂಗಳು |
ನಸುನಕ್ಕು ಇಡಗುಂಜಿ ಗಣರಾಯ ಮೆಲ್ಲುತಾ ಖುಷಿಯಿಂದ ತಾ ಕುಣಿದನು ||

ಸಕಲಗ್ರಹ ಬಲ ನೀನೆ ನೆರೆನಂಬಿಹೆನು ನಿನ್ನ ವಿಕೃತಿ ಬಂದೆರಗಿಹುದು |
ಭಕುತಿಯೋಳ್ ನಿನ್ನಯ ಅಡಿದಾವರೆಗೆರಗಿ ಯುಕುತಿಪಾಲಿಸು ಎಂಬೆನು ||



ಇಳೆಯೊಳು ನೂರೆಂಟು ರಾಜಕೀಯದ ಕೆಲಸ ಭರದಿಂದ ಸಾಗಿಹುದು |
ಹೊಳೆವ ದಿರಿಸಿನಲ್ಲಿ ಹಗಲಿರುಳು ಮೆರೆಯುತ್ತಾ ಕೊಳೆಯತುಂಬುತಲಿಹರು ||

ಗಣಿ ಧಣಿಗಳು ಸೇರಿ ಗುಣವತಿ ಭೂತಾಯ ಹಣಕಾಗಿ ಹಾಳ್ಗರೆವರೂ |
ಎಣಿಸದೇ ಲೋಕದ ಮುಂದಿನ ಬದುಕನ್ನು ಬಣಬಣಮಾಡುವರೂ ||

ಸಿರಿವಂತ ಮಿತ್ತಲ ಮೊದಲಾದ ಜನರೆಲ್ಲಾ ಹೊತ್ತಲೇ ಮಾತನಾಡಿ |
ದೊರೆವಂತ ಅದಿರಿನ ನಿಕ್ಷೇಪಗಳನೆಲ್ಲ ಪಡೆವರೂ ಸಂಚುಮಾಡಿ ||

ಗೇಣಿ ಕಾಲವು ಹೋಗಿ ಖೇಣಿ ಕಾಲವು ಬಂದು ನೈಸು ರಸ್ತೆಯ ಮಾಳ್ಪರು |
ಗಾಣದೆತ್ತಿನ ರೀತಿ ಬದುಕನು ಬದುಕುತ್ತ ಕಾಣದಾದರು ರೈತರು ||

ಪರಮಾರ್ಥದೊಳು ನಿನ್ನ ಪರಿರ್ಪೂರ್ಣರೂಪವ ಶರಣೆಂದು ತಾವ್ ಪಡೆಯಲು
ದರುಮಾರ್ಥದೊಳು ತಮ್ಮ ಸುಖದ ಜೀವನ ತ್ಯಜಿಸಿ ಸಕಲರ ಮುನ್ನಡೆಸಲು |

ಕಾವಿಯ ತಾವ್ ತೊಟ್ಟು ನೇಮನಿಷ್ಠೆಯ ಬಿಡದೆ ಭೂಮಿಯ ಸುಖ ತೊರೆದರು
ಕಾವಿವೇಷವ ತೊಟ್ಟು ಬಿಟ್ಟೂ ಬಿಡದೆ ಸುಖಿಸಿ ಮಸಿಬಳಿಯೇ ಹಲವರಿಹರು ||

ಇಂತಿಪ್ಪ ಕನ್ನಡ ರಾಜ್ಯದ ವರದಿಯ ಪರಿತಪಿಸುತ ತಂದೆನು |
ಬಂತಪ್ಪ ಹೊಸ ವತ್ಸರವದು ತಿಳಿಯದು ಕಂತುಪಿತನೆ ನೆನೆದೆನು ||

ಹೊಸವರ್ಷದಲಿ ನಮಗೆ ಕಸುವಿತ್ತು ಕಾಪಾಡು ನೊಸಲ ನೇವರಿಸೆನ್ನಲು |
ಬಿಸುಸುಯ್ದು ಅಳಲೇಕೆ ಭುವಿಯಲ್ಲೇ ಇರ್ಪೆನು ಹೆಸರಿಟ್ಟು ನಡೆಯೆಂದನು ||