ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, November 9, 2013

ಅವಧೂತರಿವರು ಕೇಳ-ಇರುತೈತಿ ವಿಷಯ ಬಹಳ

 
ಚಿತ್ರಕೃಪೆ: ಅಂತರ್ಜಾಲ
ಅವಧೂತರಿವರು ಕೇಳ-ಇರುತೈತಿ ವಿಷಯ ಬಹಳ

ಜಗನ್ನಿಯಾಮಕನಾದ ಪರಬ್ರಹ್ಮನ ಒಂದು ರೂಪವಾದ ಮಹಾವಿಷ್ಣು ವೈಕುಂಠದಲ್ಲಿ ಶೇಷಶಾಯಿಯಾಗಿದ್ದಾನೆ. ಅವನ ಸಂದರ್ಶನಕ್ಕೆ ದೇವತೆಗಳೆಲ್ಲ ಆಗಾಗ ಬಂದುಹೋಗುತ್ತಿರುತ್ತಾರೆ ಎಂಬುದು ಮಹಾತ್ಮರು ಹೇಳಿದ ವಿಷಯ. ಅಂತಹ ಮಹಾವಿಷ್ಣುವಿನ ನಿರಂತರ ಅನುಸಂಧಾನದಲ್ಲಿ ನಿರತರಾಗಿ ನಿವೃತ್ತಿಮಾರ್ಗದಲ್ಲಿ ಸದಾ ತೊಡಗಿಕೊಂಡು ನಿವೃತ್ತಿ ಬಯಸುವವರಿಗೆ ಪ್ರೇರಕರಾದವರು ಸನಕಾದಿ ಮುನಿಗಳು. ಸನಕ, ಸನಂದನ, ಸನಾತನ, ಸನತ್ಸುಜಾತ ಮತ್ತು ಸನತ್ಕುಮಾರ ಎಂಬ ಐವರು ಪ್ರಮುಖರು, [ಇನ್ನು ಈ ಪಂಕ್ತಿಗೆ ಆಗಾಗ ಅನಿರುದ್ಧ, ಸನ, ಕಪಿಲ ಎಂಬವರೂ ಸೇರಿಕೊಳ್ಳುತ್ತಿರುತ್ತಾರೆ.] ಸನಕಾದಿ ಋಷಿಗಳು ಬ್ರಹ್ಮಮಾನಸ ಕುಮಾರರು ಮತ್ತು ಚಿರನೂತನರು-ಅಂದರೆ ಅವರು ಸದಾ ಬಾಲ್ಯಾವಸ್ಥೆಯಲ್ಲಿರುವಂತೆಯೇ ಕಾಣುತ್ತಾರೆ. ದಿಗಂಬರರಾದ ಈ ಐವರಿಗೆ ಸದಾ ಭಗವಂತನ ಧ್ಯಾನವೇ ವೃತ್ತಿ-ಪ್ರವೃತ್ತಿ ಎಲ್ಲಾ. ಇವರೆಲ್ಲಾ ಅವಧೂತರು. ಅವಧೂತರೆಂದರೆ ಭಗವಂತನಿಂದ ನೇರವಾಗಿ ಜ್ಞಾನವನ್ನು ಪಡೆದವರು ಎಂದರ್ಥ. ಯಾವ ವೇದ-ಶಾಸ್ತ್ರ ಏನನ್ನೂ ಓದದೆಯೂ ಎಲ್ಲವನ್ನೂ ಅರಿತ ಅಪರೋಕ್ಷ ಜ್ಞಾನಿಗಳು ಅವಧೂತರು. ಐಹಿಕ ಬದುಕಿನಲ್ಲಿ ಅವರಿಗೆ ನಿರಾಸಕ್ತಿ, ಅವರು ತಮ್ಮೊಳಗೇ ಆನಂದಲೋಕದಲ್ಲಿ ವಿಹರಿಸುವವರು.

ಇಂತಹ ಸನಕಾದಿ ಅವಧೂತರು ಕೃತಯುಗಕ್ಕೂ ಮುನ್ನ ಒಮ್ಮೆ ವೈಕುಂಠದತ್ತ ನಡೆದರು. ವೈಕುಂಠದ ದ್ವಾರಪಾಲಕರಾದ ಜಯ-ವಿಜಯ ಎಂಬವರು ಇವರನ್ನು ಯಾವುದೋ ಬಾಲಕರ ಗುಂಪು ಎಂದು ತಿಳಿದು ಅಡ್ಡಗಟ್ಟಿದರು. ಸನಕಾದಿಗಳು ತಮ್ಮ ಗುರುತನ್ನು ಹೇಳಿಕೊಂಡರೂ ಸಹ ಅವರು ಪರಮಾತ್ಮನ ಸನ್ನಿಧಿಗೆ ಹೋಗಲು ಬಿಡಲಿಲ್ಲ. ಇದರಿಂದ ಕುಪಿತರಾದ ಸನಕಾದಿಗಳು ಜಯ-ವಿಜಯರನ್ನು "ಭೂ ಲೋಕದಲ್ಲಿ ನೂರು ಜನ್ಮಗಳಕಾಲ ಮಾನವರಾಗಿ ಬಿದ್ದಿರಿ" ಎಂದು ಶಪಿಸಿಬಿಟ್ಟರು. ತಮ್ಮ ತಪ್ಪನ್ನು ಅರಿಯುವ ಹೊತ್ತಿಗೆ ಜಯ-ವಿಜಯರು ಶಾಪಗ್ರಸ್ತರಾಗಿಬಿಟ್ಟಿದ್ದರು. ಇನ್ನೇನು ಮಾನವರಾಗಿ ಭೂಮಿಗೆ ಬರುವ ಮೊದಲು ಮಹಾವಿಷ್ಣುವಿನಲ್ಲಿ ಕ್ಷಮಿಸುವಂತೇ ಬೇಡಿದರು. ದೇವದೇವ ಮಹಾವಿಷ್ಣು ಅವರಿಗೆ ಎರಡು ಆಯ್ಕೆಗಳನ್ನು  ನೀಡಿದ:"ಜಯ-ವಿಜಯರೇ, ನೋಡುವುದಕ್ಕೆ ನನ್ನದೇ ರೂಪವನ್ನು ಧರಿಸಿ ನನ್ನ ಬಾಗಿಲಭಟರಾಗಿ ಸೇವೆ ಸಲ್ಲಿಸುತ್ತಿದ್ದೀರಿ. ಆದರೆ ಸನಕಾದಿಗಳನ್ನು ಯಾರೆಂದು ತಿಳಿಯದೇ ಅವರಿಗೆ ನನ್ನ ದರ್ಶನಕ್ಕೆ ಅಡ್ಡಿಪಡಿಸಿಬಿಟ್ಟಿರಿ. ಸನಕಾದಿಗಳು ನನ್ನ ಪರಮಾಪ್ತರು, ಏಕಾಂತ ಭಕ್ತರು. ಅವರಿಗೆ ನನ್ನೊಡನೆ ಸಂವಹಿಸುವ ಮುಕ್ತ ಅವಕಾಶವಿದೆ. ಅವರು ಎಂದು ಬೇಕಾದರೂ, ಯಾವಾಗ ಬೇಕಾದರೂ ಬರಬಹುದು, ಇಚ್ಛೆಬಂದಾಗ ಮರಳಿಹೋಗಬಹುದು. ಸದಾ ಪರಬ್ರಹ್ಮನ ಅನುಸಂಧಾನದಲ್ಲಿರುವ ಅವರಿಗೆ ವೈಕುಂಠಕ್ಕೆ ಮುಕ್ತ ಪ್ರವೇಶ. ಅದನ್ನರಿಯದೇ ನೀವು ತಪ್ಪುಮಾಡಿದಿರಿ, ಅವರು ತಿಳಿಸಿ ಹೇಳಿದರೂ ಅರಿಯದೇ ಬಾಗಿಲು ತೆರೆಯದಾದಿರಿ. ಅವರು ಕೊಟ್ಟ ಶಾಪವನ್ನು ನೀವು ಅನುಭವಿಸಲೇಬೇಕು. ಆದರೆ ನಿಮಗೆ ಆಯ್ಕೆಗಳನ್ನು ಕೊಡುತ್ತೇನೆ--ಶಿಷ್ಟರಾಗಿ ನೂರು ಮಾನವ ಜನ್ಮಗಳಲ್ಲಿ ನನ್ನನ್ನು ಆರಾಧಿಸಿ ನಂತರ ವೈಕುಂಠಕ್ಕೆ ಮರಳಬಹುದು ಅಥವಾ ದುಷ್ಟರಾಗಿ, ನನ್ನ ವಿರೋಧಿಗಳಾಗಿ ಮೂರು ಜನ್ಮಗಳನ್ನು ಕಳೆದು ಮತ್ತೆ ವೈಕುಂಠವನ್ನು ಸೇರಿಕೊಳ್ಳಬಹುದು. ಯಾವುದು ನಿಮ್ಮ ಆಯ್ಕೆಯೆಂದು ತಿಳಿಸಿ" ಎಂದು ನುಡಿದ.

"ಭಗವಂತ, ನಿನ್ನನ್ನು ಬಹುಕಾಲ ಬಿಟ್ಟಿರಲು ನಮ್ಮಿಂದ ಸಾಧ್ಯವಿಲ್ಲ. ಹೀಗಾಗಿ ದುಷ್ಟರಾಗಿ ಮೂರು ಜನ್ಮಗಳಲ್ಲಿ ನಿನ್ನನ್ನು ವಿರೋಧಿಸಿಯಾದರೂ ಸರಿ, ಬಹುಬೇಗ ಮತ್ತೆ ವೈಕುಂಠಕ್ಕೆ ಮರಳುವ ಅವಕಾಶ ಲಭಿಸಲಿ" ಎಂದು ವಿನಂತಿಸಿದರು. ಭಗವಂತ "ತಥಾಸ್ತು" ಎಂದ. ಜಯ-ವಿಜಯರು ದುಷ್ಟರಾಗಿ ಭೂಮಿಯಲ್ಲಿ ಜನಿಸಿದರು. ಕೃತಯುಗದಲ್ಲಿ ದಕ್ಷನ ಮಗಳು ದಿತಿ ಮತ್ತು ಕಷ್ಯಪರ ಮಕ್ಕಳಾಗಿ ಹಿರಣ್ಯಾಕ್ಷ ಮತ್ತು ಹಿರಣ್ಯಕಶಿಪು ಎಂಬ ಹೆಸರಿನ ಅಣ್ಣತಮ್ಮಂದಿರಾಗಿ ಜನಿಸಿದರು. ಮಹಾವಿಷ್ಣು ವರಾಹ ಮತ್ತು ನಾರಸಿಂಹ ಅವತಾರಗಳಿಂದ ಅವರನ್ನು ವಧಿಸಿದ. ತ್ರೇತಾಯುಗದಲ್ಲಿ ವೈಶ್ರವ[ಬಹುದೊಡ್ಡ ಋಷಿ] ಮತ್ತು ದೈತ್ಯರಾಜಕುಮಾರಿ ಕೈಕಸಿಯರ ಮಕ್ಕಳಾಗಿ ಜನಿಸಿ ರಾವಣ-ಕುಂಭಕರ್ಣ ಎಂಬ ಹೆಸರು ಪಡೆದರು. ಮಹಾವಿಷ್ಣು ಶ್ರೀರಾಮನಾಗಿ ಅವರನ್ನು ವಧಿಸಿದ. ದ್ವಾಪರಯುಗದಲ್ಲಿ ವಸುದೇವನ ಸಹೋದರಿಯಾದ ಶ್ರುತದೇವಿ ಮತ್ತು ಚೇದಿಯ ರಾಜ ದಮಘೋಷ-ಈ ದಂಪತಿಯ ಮಕ್ಕಳಾಗಿ ಶಿಶುಪಾಲ ಮತ್ತು ದಂತವಕ್ರರೆಂಬ ಹೆಸರನ್ನು ಪಡೆದರು. ಭಗವಂತ ಶ್ರೀಕೃಷ್ಣನಾಗಿ ಅವರನ್ನು ವಧಿಸಿದ. ಹೀಗೆ ಮೂರು ಪಾಪಜನ್ಮಗಳಲ್ಲಿ ತಮ್ಮ ಪಾಪವನ್ನು ಪರಿಹರಿಸಿಕೊಂಡು ಶಾಪವಿಮೋಚನೆಯಾದ ಮೇಲೆ ಮರಳಿ ವೈಕುಂಠದಲ್ಲಿ ಜಯ-ವಿಜಯರಾಗಿ ಸ್ಥಾಪಿತರಾದರು ಎನ್ನುತ್ತದೆ ಭಾಗವತ ಮಹಾಪುರಾಣ.

ಬ್ರಹ್ಮಾಂಡವನ್ನು ಧರಿಸಿಯೂ ಅದರೊಳಗೇ ಹೊಕ್ಕೂ ಇರುವ ಪರಾಶಕ್ತಿಗೆ ಆಗಾಗ ಹಲವನ್ನು ಕೆದಕುವ ಅಪೇಕ್ಷೆ. ಯಾರ್ಯಾರನ್ನು ಎಲ್ಲೆಲ್ಲಿ ಹೇಗೆ ಹೇಗೆ ಪರೀಕ್ಷಿಸಲಿ ಎಂಬುದನ್ನು ಸದಾ ಪರಿಗಣಿಸುವ ಈ ಶಕ್ತಿ ಮಾಹಾವಿಷ್ಣುವಾಗಿ ದಶಾವತಾರ ತಾಳಿಯೂ, ಮಹಾಗಣಪತಿಯಾಗಿ ೧೭ ಅವತಾರತಾಳಿಯೂ, ಮಹಾಶಕ್ತಿಯಾಗಿ ಎಣಿಕೆಯಿಲ್ಲದಷ್ಟು ಅವತಾರತಾಳಿಯೂ ಭುವಿಯಲ್ಲಿ ವಿರಾಜಿಸಿದರೆ ಅವತಾರಗಳಲ್ಲೂ ವೈವಿಧ್ಯತೆ ಮೆರೆಯುವ ಪರಿ ಬಹಳ ಖುಷಿಗೊಳಿಸುವಂಥದು. ತಾನು ಹಲವು ರೂಪಗಳಲ್ಲಿದ್ದರೂ ಎಲ್ಲರೂಪಗಳ ಮೂಲ ರೂಪ ಒಂದೇ ಎಂಬ ತತ್ವವನ್ನು ಸಾರುವ ಈ ಶಕ್ತಿಯೇ ರಾಮನೂ ಆಗುತ್ತದೆ, ಹನುಮನೂ ಆಗುತ್ತದೆ. ತನ್ನಿಂದಲೇ ತನ್ನನ್ನು ಸೃಜಿಸಿ, ಸೇವಿಸಿ ವಿಸ್ಮಯವನ್ನುಂಟುಮಾಡುವ ಈ ಶಕ್ತಿಗೆ ಹಿಂದೊಮ್ಮೆ ಅತ್ರಿ ಮಹರ್ಷಿಯ ಕಾಲದಲ್ಲಿ ಅವರ ಮಗನಾಗಿ ಆಡುವ ಆಸೆ ಬಂತಂತೆ. ಆಗ ಹುಟ್ಟಿದ ಮಗುವೇ ದತ್ತಾತ್ರೇಯ.

ಅತ್ರಿ ಮಹರ್ಷಿಯ ಪತ್ನಿ ಅನಸೂಯಾ. ಮಹಾ ಪತಿವೃತೆಯಾದ ಅನಸೂಯೆ ಯಾವ ಅಸೂಯೆಯೂ ಇಲ್ಲದ ಸಾಧ್ವಿಮಣಿ. ಮುನಿಗೆ ತಕ್ಕ ಮಡದಿ, ರೂಪವತಿಯೂ ಗುಣಾಢ್ಯಳೂ ಆಗಿರುತ್ತಾಳೆ. ಕಾರ್ಯನಿಮಿತ್ತ ಅತ್ರಿ ಹೊರಗೆ ಹೋಗಿರುವ ಒಂದುದಿನ ಮೂರುಜನ ಅಭ್ಯಾಗತರು ಆಗಮಿಸುತ್ತಾರೆ. ಬಂದ ಜನರನ್ನು ಆದರಿಸುವ ಸಂಸ್ಕೃತಿ ಮುನಿಜನರದ್ದು. ಅದರಂತೇ ಬಂದ ಮೂರುಜನ ಗಂಡಸರಿಗೆ ಉಪಚರಿಸ ಬೇಕಲ್ಲ ? ಗಂಡ ಬರುವವರೆಗೆ ಬಹಳ ಸಮಯವಾಗಬಹುದೇನೋ, ಅಲ್ಲಿಯವರೆಗೂ ಅವರಿಗೆ ತೃಷೆಗೋ ಹಸಿವಿಗೋ ಏನನ್ನೂ ಕೊಡದೇ ಹಾಗೇ ಕೂರಿಸುವುದು ಸರಿಯೇ ಎಂದುಕೊಳ್ಳುತ್ತಾ ಅವರನ್ನು ಮಾತನಾಡಿಸುತ್ತಾಳೆ ಅನಸೂಯಾ. ಬಂದ ಗಂಡಸರು ಬಹಳ ಕಿಲಾಡಿ ಬುದ್ಧಿಯವರೇ ಆಗಿದ್ದು ತಮ್ಮ ತೃಷೆಗೆ ಅನಸೂಯೆಯ ಎದೆಯಹಾಲೊಂದೇ ಬೇಕಾದದ್ದೆಂದೂ ಅದನ್ನು ಬಿಟ್ಟು ಬೇರೇನನ್ನೂ ತಾವು ಬಯಸೆವೆಂದೂ ವಿವಸ್ತ್ರಳಾಗಿ ತಮಗೆ ಎದೆಯೂಡಿಸಬೇಕೆಂದೂ ಬೇಡಿಕೆಯಿಡುತ್ತಾರೆ. ಬೇಡಿಕೆಯನ್ನು ನೆರವೇರಿಸದಿದ್ದಲ್ಲಿ ಅತಿಥಿ ಸೇವೆಯನ್ನು ಭಂಗಗೊಳಿಸಿದ ಪಾಪವನ್ನು ಅನುಭವಿಸಬೇಕಾಗುತ್ತದೆಂದೂ ಸಾರುತ್ತಾರೆ.

ಕ್ಷಣಕಾಲ ಯೋಚಿಸಿದ ಅನಸೂಯೆ ಮೂವರನ್ನೂ ಒಂದೇ ಕಡೆ ಸಾಲಾಗಿ ಕುಳಿತುಕೊಳ್ಳಿರೆಂದೂ ತಾನು ಹಾಲೂಡಿಸಲು ಒಪ್ಪಿರುವೆನೆಂದೂ ತಿಳಿಸುತ್ತಾಳೆ. ಬಂದ ಮೂರೂ ಗಂಡಸರು ಒಂದೆಡೆ ಕುಳಿತು ಕಾಯುತ್ತಿರುವಾಗ ತನ್ನ ಕಮಂಡಲುವಿನಿಂದ ನೀರನ್ನು ತೆಗೆದು ಪರಾಶಕ್ತಿಯನ್ನು ಧ್ಯಾನಿಸಿ ಇವತ್ತು ತನ್ನ ಪತಿವೃತಾ ಧರ್ಮಕ್ಕೆ ಕಳಂಕ ತಟ್ಟುವ ಸಮಯ ಬಂದಿದೆಯೆಂದೂ ಅನಿವಾರ್ಯವಾಗಿ ಬಂದ ಅತಿಥಿಗಳನ್ನು ತಾನು ಸೇವಿಸಬೇಕಾಗಿದೆಯೆಂದೂ ಅಂದುಕೊಳ್ಳುತ್ತಾ ಎದುರಲ್ಲಿ ಕುಳಿತಿದ್ದ ಮೂರೂಜನ ಗಂಡಸರಿಗೆ ಪ್ರೋಕ್ಷಿಸಿಬಿಡುತ್ತಾಳೆ. ಕ್ಷಣಮಾತ್ರದಲ್ಲಿ ಮೂರೂಜನ ಗಂಡಸರು ಮೂರು ಸುಂದರ ಗಂಡು ಶಿಶುಗಳಾಗಿ ಮಲಗುತ್ತವೆ. ಅಮ್ಮನ ಅಕ್ಕರೆ ತುಂಬಿದ ಅನಸೂಯೆ ಆ ಶಿಶುಗಳಿಗೆ ಎದೆ ಹಾಲನ್ನು ನೀಡುತ್ತಾಳೆ ಮಾತ್ರವಲ್ಲ ಮೂವರನ್ನೂ ಒಂದೇ ತೊಟ್ಟಿಲೊಳಿಟ್ಟು ಜೋಗುಳಹಾಡಿ ರಮಿಸುತ್ತಾಳೆ. ಅವಳ ಭಕ್ತಿ,ಶ್ರದ್ಧೆಗೆ ಒಲಿದ ಪರಾಶಕ್ತಿಯ ಮೂರು ರೂಪಗಳಾದ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರು ತಾವೆಂದೂ, ಪೂರ್ವದಲ್ಲಿ ಅನುಗ್ರಹಿಸಿದಂತೇ ಅತ್ರಿ ದಂಪತಿಯ ಮಗನಾಗಿ ಅಯೋನಿಜರಾಗಿ ಜನಿಸಲು ಬಂದಿದ್ದಾಗಿಯೂ ಅನಸೂಯೆಗೆ ತಿಳಿಸಿ ದೇಹವೊಂದರಲ್ಲೇ ಮೂರು ತಲೆ, ಆರು ಕೈಗಳು ಉಳ್ಳ ಒಂದೇ ಶಿಶುವಾಗಿ ಇನ್ನುಮುಂದೆ ಇದೇ ರೂಪದಲ್ಲಿ ಇರುವುದಾಗಿ ತಿಳಿಸುತ್ತಾರೆ. ಅತ್ರಿ ಮುನಿಗೆ ದತ್ತವಾಗಿ ಬಂದ ಈ ಮಗುವನ್ನು ಮುನಿದಂಪತಿ ದತ್ತಾತ್ರೇಯನೆಂದು ನಾಮಕರಣಗೈದು ಬೆಳೆಸುತ್ತಾರೆ.

ಸಹಜವಾಗಿ ಪರಾಶಕ್ತಿಯಾದ ಪರಬ್ರಹ್ಮನ ಒಂದು ಆವಿಷ್ಕಾರವಾದ ದತ್ತಾತ್ರೇಯ ಮುನಿಯ ಸುತ್ತ ಗೋವುಗಳು, ನಾಯಿಗಳು ಇನ್ನೂ ಹಲವು ಪಶು-ಪಕ್ಷಿಗಳು ಆಗಾಗ ಸುತ್ತುವರಿಯುತ್ತವೆ. ಆತನ ಸನ್ನಿಧಾನದಲ್ಲಿ ಸಿಗುವ ಅಪರಿಮಿತ ಆನಂದಾನುಭೂತಿಯಿಂದ ಆತನ ಪಕ್ಕವೇ ನಿಲ್ಲಲು ಇಷ್ಟಪಡುತ್ತವೆ. ಆ ಯಾ ಜನ್ಮಗಳಲ್ಲಿರುವ ತನ್ನದೇ ಹಲವು ಛೇದಿತ ಅಂಶಗಳಾದ ಅವೆಲ್ಲವುಗಳಲ್ಲೂ ಪ್ರೀತಿಯನ್ನು ತೋರುವ, ಅವುಗಳ ಐಹಿಕ ಸಂಕಷ್ಟಗಳನ್ನು ನಿವಾರಿಸುವ ಮನಸ್ಸು ದತ್ತಾತ್ರೇಯನದ್ದಾಗಿರುತ್ತದೆ. ಅನೇಕ ಋಷಿಗಳೂ, ಋಷಿಕುವರರೂ ಸೇರಿದಂತೇ ಹಲವರು ದತ್ತನ ಸಾಮೀಪ್ಯವನ್ನು ಬಯಸುವಷ್ಟು ಪೂರ್ಣಕಳಾ ರೂಪಿ ದತ್ತಾತ್ರೇಯನಾಗಿರುತ್ತಾನೆ. ಶಾಂತಸರೋವರದಲ್ಲಿ ನಿಂತ ನೀರಿನಂತೇ ಪ್ರಶಾಂತ ಮನಸ್ಸುಳ್ಳ ಆಜಾನುಬಾಹು ದತ್ತಾತ್ರೇಯ ಭುವಿಯ ಬಹುತೇಕರ ಕಣ್ಮಣಿಯಾಗುತ್ತಾನೆ. ಹಲವರ ಸಂಕಷ್ಟಗಳಲ್ಲಿ ಅವರ ಕಣ್ಣೀರೊರೆಸುವ ಪರಾಶಕ್ತಿಯ ಈ ರೂಪವನ್ನು ಜನ ಶಾಶ್ವತವಾಗಿ ಇಟ್ಟುಕೊಳ್ಳಲು ಅಪೇಕ್ಷಿಸುತ್ತಾರೆ. ಸಂತಾನಹೀನರಿಗೆ ಸಂತಾನವನ್ನು ಕರುಣಿಸುವ, ವಿವಿಧ ಕಾಯಿಲೆಗಳಲ್ಲಿ ತೊಳಲುವವರಿಗೆ ಅವುಗಳಿಂದ ನಿವೃತ್ತಿನೀಡುವ, ಶುದ್ಧಹಸ್ತರಿಗೆ ಅಲೌಕಿಕ ಸಹಾಯವನ್ನು ಉಣಬಡಿಸುವ ದತ್ತಾತ್ರೇಯ ತಂದೆ-ತಾಯಿಯ ಅಪೇಕ್ಷೆಯಂತೇ ವಿವಿಧ ಸನ್ಯಾಸಿಗಳ ರೂಪದಲ್ಲಿ ಪುನರಪಿ ಜನಿಸುವೆನೆಂದು ತಿಳಿಸುತ್ತಾನೆ.

ದತ್ತಾತ್ರೇಯನ ಜಾಗೃತ ಸ್ಥಳಗಳಲ್ಲಿ ಕರ್ನಾಟಕದ ಗುಲ್ಬರ್ಗ ಜಿಲ್ಲೆಯಲ್ಲಿರುವ ಗಾಣಗಾಪುರ ಬಹಳ ಪ್ರಸಿದ್ಧವಾಗಿದೆ. ಶ್ರೀಪಾದ ವಲ್ಲಭರು ಮತ್ತು ನರಸಿಂಹ ಸರಸ್ವತಿಗಳು ಎಂಬ ಈರ್ವರು ಸನ್ಯಾಸಿಗಳು ಒಬ್ಬರಾದಮೇಲೆ ಒಬ್ಬರಂತೇ ಇದೇ ಸ್ಥಳದಲ್ಲಿ ನೆಲೆನಿಂತು ಹಲವುಕಾಲ ತಪಸ್ಸನ್ನಾಚರಿಸ್ದೂ ಅಲ್ಲದೇ ಜಗತ್ತಿಗೇ ಒಳಿತನ್ನು ಬಯಸಿ ಹಲವು ಕಾರ್ಯಗಳನ್ನು ನಡೆಸಿದ್ದಾರೆ. ಇಂದಿಗೂ ಗಾಣಗಾಪುರದಲ್ಲಿ ನಿರ್ಗುಣಪಾದುಕೆಗಳೆಂಬ ಮಾನವ ಪಾದವನ್ನೇ ಮುಟ್ಟಿದಂತೆನಿಸುವ ಪಾದುಕೆ ಪೂಜಿತವಾಗುತ್ತಿರುವುದು ನರಸಿಂಹ ಸರಸ್ವತಿಗಳ ದಿವ್ಯ ಅನುಗ್ರಹದಿಂದ. ಭೀಮಾ-ಅಮರಜಾ ನದಿಗಳು ಸೇರುವ ಜಾಗ ಇದಾದ್ದರಿಂದ ಸಂಗಮದಲ್ಲಿ ಸ್ನಾತರಾಗಿ ದತ್ತನ ಸೇವೆ ನಡೆಸಿದರೆ ಶ್ರೇಯಸ್ಕರವೆಂಬುದು ಶತಶತಮಾನಗಳ ಇತಿಹಾಸದಿಂದ ಅನಾವರಣಗೊಂಡ ಸತ್ಯ ವಿಷಯ. ಆಗರ್ಭ ಶ್ರೀಮಂತನೂ ಕೂಡ ಇಲ್ಲಿಗೆ ಬಂದಾಗ ತನ್ನ ಅಹಂಕಾರ ನಿವೃತ್ತಿಗಾಗಿ ಮಧುಕರೀ ಭಿಕ್ಷಾನ್ನವನ್ನು ಬೇಡುವುದು ಇಲ್ಲಿನ ಸಂಪ್ರದಾಯ!

ಸಖರಾಯ ಪಟ್ಟಣದ ಅವಧೂತರು

ಸ್ವಾಮಿ ದತ್ತಾತ್ರೇಯ ಕೂಡ ಅವಧೂತನೇ ಆಗಿದ್ದನೆನ್ನುವಾಗ ನಾವು ಅವಧೂತ ಯಾರೆಂದು ಸ್ಥೂಲವಾಗಿ ತಿಳಿದುಕೊಳ್ಳಬಹುದು. ಅವಧೂತರಲ್ಲಿ ಪರಬ್ರಹ್ಮನ ಅಂಶಾಂಶ ರೂಪ ಜಾಗೃತವಾಗಿರುತ್ತದೆ ಎಂಬುದು ತಾತ್ಪರ್ಯ. ಇಂತಹ ಅವಧೂತ ಪರಂಪರೆಯಲ್ಲಿ ಬಂದ ಅಕ್ಕಲಕೋಟ ನರಸಿಂಹ ಸರಸ್ವತೀ ಮಹಾರಾಜರನ್ನು ಸಮರ್ಥರು ಎಂದೇ ಕರೆಯುತ್ತಿದ್ದರು. ಇದೇ ಪರಂಪರೆಗೆ ಸೇರಿದ ಮತ್ತೊಬ್ಬ ಐತಿಹಾಸಿಕ ಅವಧೂತರೆಂದರೆ ಸಮರ್ಥ ರಾಮದಾಸರು. ಸಮರ್ಥ ರಾಮದಾಸರ ಶಿಷ್ಯರಾಗಿ ಅವಧೂತ ಪರಂಪರೆಯಲ್ಲಿ ಮುನ್ನಡೆದವರು ಭಗವಾನ್ ಸದ್ಗುರು ಶ್ರೀಧರ ಸ್ವಾಮಿಗಳು.[ವರದಹಳ್ಳಿ] ಅದಕ್ಕೆಂದೇ ಈ ಪರಂಪರೆಯ ಆರಾಧನಾ ಕ್ರಮದಲ್ಲಿ,


ಆದಿನಾರಾಯಣಂ ವಿಷ್ಣುಂ ಬ್ರಹ್ಮಾಣ ಚ ವಶಿಷ್ಠಕಂ |
ಶ್ರೀರಾಮಂ ಮಾರುತಿಂ ವಂದೇ ರಾಮದಾಸಂ ಚ ಶ್ರೀಧರಂ || 

ಎಂದು ಪ್ರಾರ್ಥಿಸುತ್ತೇವೆ. ಅವಧೂತರು ಪರಂಪರೆಯಿಲ್ಲದೆಯೂ ಅವರ ಮನಸ್ಸಿಗೆ ಬಂದಲ್ಲಿ ಜನಿಸಬಹುದು. ಆದರೆ ಅವಧೂತರಾದವರಿಗೆ ಈ ಲೋಕದ ಆಗುಹೋಗುಗಳ ಸಮಗ್ರ ಮಾಹಿತಿ ಗೊತ್ತಾಗುತ್ತಿರುತ್ತದೆ. ಆದರೂ ಅವರು ಅದನ್ನೆಲ್ಲ ಹೊರಗೆಡಹುವುದಿಲ್ಲ. ಅವಧೂತರ ಸಂಪ್ರದಾಯವೇ ಹಾಗಿದೆ. ಜಗತ್ತಿನ ರಹಸ್ಯಗಳನ್ನು ಸಂಪೂರ್ಣ ಅರಿತ ಅವಧೂತರು ಲೋಕಕಲ್ಯಾಣಾರ್ಥವಾಗಿ ಆಗಾಗ ಮಾನವ ರೂಪದಲ್ಲಿ ಜನ್ಮತಳೆಯುತ್ತಾರೆ. ಬಾಲ್ಯದಿಂದಲೇ ಅವರು ಲೌಕಿಕ ಜೀವನಕ್ಕೆ ವಿಮುಖವಾದ ಲಕ್ಷಣಗಳನ್ನು ತೋರುತ್ತಾರೆ. ಜನಸಾಮಾನ್ಯರಿಗೆ, ಉಳಿದ ಸಂನ್ಯಾಸಿಗಳಿಗೆ ಹೇಳಲ್ಪಟ್ಟ ಯಾವುದೇ ನಿಯಮಗಳು ಅವರಿಗೆ ಅನ್ವಯಿಸುವುದಿಲ್ಲ. ಲೌಕಿಕ ಬದುಕಿನಲ್ಲಿ ಒಂಚೂರೂ ಆಸಕ್ತಿಯಿರದಂತೇ ಅವರ ಪರಿಸರ ಕೂಡ ಅದನ್ನೇ ಅನುಮೋದಿಸುತ್ತದೆ. ಶ್ರೀಧರ ಭಗವಾನರು ಅವಧೂತರಾದರೂ ಸಹ ಕ್ರಮಾಗತ ಸಂನ್ಯಾಸವನ್ನು ಸ್ವೀಕರಿಸಿದರು. ಅವಧೂತರು ಕ್ರಮಾಗತ ಸಂನ್ಯಾಸವನ್ನು ಸ್ವೀಕರಿಸಬಾರದು ಎಂದೇನಿಲ್ಲ. [ಹಿಂದಕ್ಕೆ ನರಸಿಂಹ ಸರಸ್ವತಿ ಮಹಾಸ್ವಾಮಿಗಳೂ ಕೂಡ ಕ್ರಮಾಗತ ಸಂನ್ಯಾಸವನ್ನು ಪಡೆದಿದ್ದರು.] ಕ್ರಮಾಗತ ಸಂನ್ಯಾಸ ದೀಕ್ಷೆಯನ್ನು ಪಡೆಯದಿದ್ದರೂ ಅವಧೂತರ ಆಚರಣೆಗಳೆಲ್ಲ ಭಿನ್ನವಾಗಿದ್ದು, ಸಂನ್ಯಾಸಿಗಳ ಆಚರಣೆಗಳಿಗಿಂತ ಉತ್ಕೃಷ್ಟವಾಗಿರುತ್ತವೆ. ಸಂನ್ಯಾಸಿಗಳು ಎಷ್ಟೋ ಜನ್ಮಗಳಲ್ಲಿ ಸಂನ್ಯಾಸಿಗಳಾಗಿ ಪಡೆಯಲಾರದ ಪಾರಮಾರ್ಥಿಕ ಶಕ್ತಿಯನ್ನು ಅವಧೂತರು ಜನ್ಮದಾರಭ್ಯ ಪಡೆದಿರುತ್ತಾರೆ! 

ಅವಧೂತರ ಕಥೆ ಇನ್ನೂ ವಿಸ್ತಾರಕ್ಕೆ ವ್ಯಾಪಿಸುತ್ತಲೇ ಹೋಗುತ್ತದೆ. ಭಾರತದಾದ್ಯಂತ ಅಲಲ್ಲಿ ಅವಧೂತರು ಜನಿಸಿ ಮರೆಯಾಗುವುದನ್ನು ನಾವು ಇಂದಿಗೂ ಕಾಣಬಹುದು! ಅಂತಹ ಅವಧೂತರೆಲ್ಲರಿಗೂ ಸಾಷ್ಟಾಂಗ ನಮಸ್ಕಾರಗಳು. ಶುಭದಿನ.