ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, June 18, 2010

ಐಲವಾಯು!


ಐಲವಾಯು!

ಪ್ರಾಣವಾಯು, ಅಪಾನವಾಯು, ಉದಾನವಾಯು ಇವುಗಳ ಬಗ್ಗೆಲ್ಲ ತಿಳಿದಿರುವುದು ಸಹಜ. ಯಾಕೆಂದರೆ ಅವೆಲ್ಲ ಶರೀರದ ವ್ಯವಸ್ಥೆಗೆ ಸಂಬಂಧಿಸಿದ್ದಾಗಿರುವುದರಿಂದ ಅವು ಜೀವನದ ಹಲವು ಘಟ್ಟಗಳಲ್ಲಿ ಸುದ್ದಿಗೆ ಬರುವಂತ ವಿಷಯಕ್ಕೆ ವಸ್ತುಗಳು. ಆದರೆ ಐಲವಾಯು ಎಂಬುದೊಂದಿದೆ ಎಂದರೆ ನೀವು ಆಶ್ಚರ್ಯಪಡಬೇಕು! ವಸ್ತುಶಃ ನಿಜ ಇದು! ಹೌದಾ ಹಾಗಾದ್ರೆ ಎಷ್ಟೆಲ್ಲಾ ವಿಜ್ಞಾನ ತತ್ವಜ್ಞಾನ ಪುಸ್ತಕಗಳನ್ನು ಮತ್ತು ವೇದ ಪುರಾಣಗಳನ್ನೂ ಓದಿದ್ದೇವೆ, ಅನೇಕ ಕವಿ-ಸಾಹಿತಿಗಳ ಕೃತಿಗಳನ್ನೊ ಓದಿದ್ದೇವೆ. ಇದುವರೆಗೆ ನಾವು ಈ ವಾಯುವಿನ ಬಗ್ಗೆ ಕೇಳಲೇ ಇಲ್ಲವಲ್ಲ ಎಂದು ಕಾತುರಾಗುವುದು ಸಹಜ. ಈ ವಾಯುವಿನ ಸಂಶೋಧನೆ ಸುಮಾರು ೨೦-೨೧ ವರ್ಷಗಳ ಹಿಂದೆ ನಡೆಯಿತು. ಇದರ ಸಂಶೋಧನೆಗೆ ಬಹಳ ಕಾಲ ಹಿಡಿಯಲಿಲ್ಲವಾದರೂ ಇದರ ಪರಿಶೋಧನೆಗೆ ಪರಿತಪಿಸಬೇಕಾಗಿತ್ತು! ಹೀಗಾಗಿ ಈ ವಾಯುವಿಗಿರುವ ಮೌಲ್ಯ ಜಗತ್ತಿನಲ್ಲಿ ಇಂದಿಗೂ ಬೇರಾವ ವಾಯುವಿಗೂ ಇಲ್ಲ!

ಸರಿಸುಮಾರು ೨೦-೨೧ ವರ್ಷಗಳ ಹಿಂದೆ ನಮ್ಮ ಕರಾವಳಿಯ ಹಳ್ಳಿಯ ರಸ್ತೆಗಳಲ್ಲಿ ಸೈಕಲ್ ಗಳದೇ ಕಾರುಬಾರು! ಯಾಕೆಂದರೆ ಸೈಕಲ್ ಬಡವರ-ಜನಸಮಾನ್ಯರ ಬದುಕಿನ ಜೀವನಾಡಿ ಅಲ್ಲವೇ? ಹೀಗಾಗಿ ತುಂಬಾ ಮಂದಿ ಉಪಯೋಗಿಸುವ ಅಗ್ಗದ ವಾಹನವೆಂದರೆ ಸೈಕಲ್. ಎಷ್ಟೋ ಮನೆಗಳಲ್ಲಿ ಕಾರು, ಜೀಪುಗಳಿದ್ದರೂ ಅರ್ಜೆಂಟಿಗೆ ಅಂತ ಒಂದು ಸೈಕಲ್ ಇದ್ದೇ ಇರುತ್ತಿತ್ತು. ಯಾವುದೇ ಇಂಧನವನ್ನು ಬೇಡದ ನಾವು ತುಳಿದಂತೆ ನಡೆಯುವ ಬಡಪಾಯಿ ಸಂಗಾತಿ ಇದು. ಇಂತಹ ಸೈಕಲ್ ಗಳನ್ನು ಒಬ್ಬೊಬ್ಬರು ಒಂದೊಂದು ರೀತಿ ಇಟ್ಟುಕೊಳ್ಳುತ್ತಿದ್ದರು.

ಕೆಲವರು ಮಳೆಗಾಲ ಪ್ರಾರಂಭವಯಿತೆಂದರೆ ಅದಕ್ಕೆ ತುಕ್ಕು ಹಿಡಿಯದಿರಲೆಂದು ರಿಮ್ಮು, ಜಿಮ್ಮು ಹೊಳೆಯುವ ಭಾಗಗಳುಗಳಿಗೆಲ್ಲ ಚಿನ್ನದ ಬಣ್ಣದ ಯಾವುದೋ ದ್ರವ್ಯವನ್ನು ಲೇಪಿಸುತ್ತಿದ್ದರು. ಇನ್ನು ಕೆಲವರು ಸೈಕಲ್ಲಿಗೆ ಅಲಂಕಾರವನ್ನು ಬಹಳ ಕಾಳಜಿಯಿಂದ ಮಾಡುತ್ತಿದ್ದರು. ಅದಕ್ಕೆ ಹಿಡಿಕೆ[ಹ್ಯಾಂಡಲ್]ಗೆ ಮೆತ್ತಗಿನ ರಬ್ಬರಿನ ಕವಚ, ಸೀಟಿಗೆ ಬಹುಬಣ್ಣದ ಲೇಟೆಸ್ಟ್ ಕವರು, ಸೀಟಿನ ಮುಂದಿನ ಹಾರೆಗೆ ಲೇಸು ಹಚ್ಚಿದ ಪ್ಲಾಸ್ಟೀಕು ಕವರು, ಮಡ್ ಗಾರ್ಡ್ ಕೊನೆಗೆ ಬಲೂನು ಆಕೃತಿಯ ರಬ್ಬರ್ ಹಾಳೆ, ಚಕ್ರಗಳ ನಡುವೆ ಸುತ್ತುವ ಬಣ್ಣ ಬಣ್ಣಗಳುಳ್ಳ ಗೊಂಡೆಯ ದಂಡೆ, ಬ್ರೇಕಿನ ಹಿಡಿಕೆಗೆ ಯಾವುದಾದರೂ ಬಣ್ಣದ ಪ್ಲಾಸ್ಟಿಕ್ ಕವರು ಹೀಗೆ ಸರ್ವರೀತಿಯಲ್ಲಿ ಒಳ್ಳೇ ಮದುಮಗಳು ಸಜ್ಜುಗೊಂಡಂತೆ ರೆಡಿಯಾಗುತ್ತಿತ್ತು ಸೈಕಲ್ಲು. ಕೆಲವರು ಹಳ್ಳಿಗಳಲ್ಲಿ ದಿನಾಲೂ ಎಮ್ಮೆ ಮೀಸಿದಂತೆ ಸೈಕಲ್ಲನ್ನೂ ಮೀಸುತ್ತಿದ್ದರು. ಹಳ್ಳಿಗಳ ಮಣ್ಣು ರಸ್ತೆಗಳಲ್ಲಿ ಓಡಾಡಿ ಕೊಳೆ ಹಿಡಿದ ಸೈಕಲ್ಲಿನ ಗಾಲಿಗಳು ತೊಳೆದು ನಿಲ್ಲಿಸಿದಾಗ ಹೊಸದೇನೋ ಎನ್ನಿಸುವಷ್ಟು ಮಿರಿಮಿರಿ ಮಿಂಚುತ್ತಿದ್ದವು. ಬಹುಶಃ ಜೀವವಿದ್ದರೆ ಆ ಸೈಕಲ್ಲಿಗೆ ಸ್ನಾನಮಾಡಿಸಿ ಮೈಯ್ಯುಜ್ಜಿಕೊಟ್ಟಾಗ ತುಂಬಾ ಹಾಯೆನಿಸುತ್ತಿತ್ತೋ ಏನೋ! ಅಂತೂ ಸೈಕಲ್ಲುಗಳು ದಿನಾಲೂ ತಯಾರಿಗೊಳ್ಳುವ ಸುಂದರ ವಧುಗಳಾಗಿದ್ದವು! ಆದರೆ ಈ ವಧುಗಳಿಗೆ ಗಂಡು ಬೇಕಾಗಿರಲಿಲ್ಲ ಅಷ್ಟೇ!

ಆ ಕಾಲದಲ್ಲಿ ಇವತ್ತಿನ ರೀತಿಯಲ್ಲಿ ಮನೆಮನೆಯಲ್ಲಿ ಟಿವಿಗಳಿರಲಿಲ್ಲ. ಅಸಲಿಗೆ ಬಾಂಬೆ ಯಿಂದ ಬಂದ ನಮ್ಮ ಪಕ್ಕದ ಮನೆಯ ಚಿಕ್ಕಪ್ಪ ಟಿವಿ ಸುದ್ದಿ ಹೇಳುತ್ತಿದ್ದರೆ ನಾವೆಲ್ಲಾ ಕಣ್ಣನ್ನು ಹಿಗ್ಗಿಸಲಾಗುವಷ್ಟೂ ಹಿಗ್ಗಿಸಿ, ಕತ್ತು ಉದ್ದಮಾಡಿ, ಶಿಸ್ತಾಗಿ ಕೂತು ಕೇಳುವ ಅತಿಕೌತುಕದ ವಿಷಯ ಅದಾಗಿತ್ತು! ಟಿವಿ ಹೇಗಿರುತ್ತದೆ ಅದರಲ್ಲಿ ಹೊರಗಿನ ಜನ ಯಾರಿಗೂ ತಿಳಿಯದಂತೆ ಒಳಗೆ ಬಂದು ಹೇಗೆ ಕುಣಿಯುತ್ತಾರೆ ಎಂಬುದು ಅರ್ಥವಾಗುತ್ತಿರಲಿಲ್ಲ. ಅದರ ಪ್ರಸಾರ ಹೇಗೆ ಎಂಬುದು ಪ್ರಾಯಶಃ ಆ ನಮ್ಮ ಚಿಕ್ಕಪ್ಪನಿಗೂ ಆಗ ತಿಳಿದಿರಲಿಲ್ಲ. ಕಪ್ಪು-ಬಿಳುಪು ಬಣ್ಣದಲ್ಲಿ ಕಾಣಿಸುತ್ತಿತ್ತಂತೆ. ಅಪರೂಪಕ್ಕೆ ವರುಷಕ್ಕೊಮ್ಮೆ ಬರುವ ಆ ಚಿಕ್ಕಪ್ಪ ಬರುವ ದಾರಿಯಲ್ಲಿ ಧಾರವಾಡದ ಪೇಡಾವನ್ನು ತರುತ್ತಿದ್ದರು. ಅವರ ಮನೆಯ ಸಹೋದರರ ಮಕ್ಕಳಿಗೂ ಸೇರಿದಂತೆ ನಮಗೂ ಅದರಲ್ಲಿ ಪಾಲು ಕೊಡುತ್ತಿದ್ದರು. ಅದರ ಅದ್ಬುತ ರುಚಿ ಮರೆಯಲಾರದ ’ಸ್ವಾಹಾನುಭವ’! ಅವರು ಊರಿಗೆ ಬಂದಾಗ ಆಗೀಗ ಕಾರಣಮಾಡಿಕೊಂಡು ಅವರನ್ನು ಮಾತಾಡಿಸಲು ಹೋಗುವುದಿತ್ತು. ನಮಗೆ ಬರಬಹುದಾದ ಸಂಭಾವನೆ ಬರಲಿ ಎಂಬ ’ಮಾಮೂಲೀ’ ಕೇಳುವ ವಿಸಿಟ್ ಅದಾಗಿರುತ್ತಿತ್ತು. ಪಾಪ ಆ ಚಿಕ್ಕಪ್ಪ ಬರಿಗೈಲಿ ಎಂದಿಗೂ ವಾಪಸ್ಸು ಕಳಿಸುತ್ತಿರಲಿಲ್ಲ. ಅವರಿಗೆ ಬಾಂಬೆಯ ಜೀವನ ಅಭ್ಯಾಸವಾಗಿಹೋದಂತಿತ್ತು. ಊಟಕ್ಕೆ ಚಪಾತಿಯೇ ಇರಬೇಕಾಗುತ್ತಿತ್ತು. ದಿನಾಲೂ ದಾಡಿಮಾಡಿಕೊಳ್ಳಬೇಕಾಗುತ್ತಿತ್ತು. ಆಗಾಗ ಅವರು ತಮ್ಮ ಮಕ್ಕಳು ಅತ್ತರೆ ಸುಮ್ಮನಿರಿಸಲು ಶುಶ್ರಾವ್ಯವಾಗಿ ಓಂ ಜೈ ಜಗದೀಶಹರೇ ಹಾಡನ್ನು ಹಾಡುತ್ತಿದ್ದರು. ಹೀಗಾಗಿ ನಮಗೆಲ್ಲರಿಗೆ ಏನಾದರೊಂದು ಹೊಸತನ್ನು ವರುಷಕ್ಕೊಮ್ಮೆ ತರುವ ಕ್ರಿಸ್ ಮಸ್ ತಾತನಂತೆ ಅವರಾಗಿದ್ದರು!

ಚಿಕ್ಕವರಿರುವಾಗ ನಾವು ಅಷ್ಟಾಗಿ ಸಿನಿಮಾ ನೋಡಿರಲಿಲ್ಲ. ಒಮ್ಮೆ ನಮ್ಮ ಬಾಂಬೇ ಚಿಕ್ಕಪ್ಪ ಬಂದಾಗ ನಾವೆರಡು-ಮೂರು ಮನೆಯವರು ಸೇರಿ ಬಾಡಿಗೆ ಕಾರು ಹಿಡಿದು ಸಿನಿಮಾ ನೋಡಬೇಕೆಂದು ತೀರ್ಮಾನವಾಯಿತು. ಅದು ಯಾವುದೋ ನಮ್ಮ ಅಣ್ಣಾವ್ರ ಸಿನಿಮಾ. ಅಂಬಾಸಿಡರ್ ಕಾರಿನಲ್ಲಿ ಕಮ್ಮೀ ಕಮ್ಮೀ ಅಂದರೂ ಹದಿನಾಲ್ಕು ಜನ ಹಿಡಿಸುತ್ತಿದ್ದರು! ಆ ಕಮ್ಪನಿಯ ಕಾರು ಇವತ್ತಿಗೂ ಅದೇ ತನ್ನತನ ಉಳಿಸಿಕೊಂಡಿದೆ-ಆದರೆ ಸೀಟು ಅಷ್ಟೊಂದು ಹಿಡಿಸುವುದಿಲ್ಲ ಈಗ! ಹಾಳಾದ ಜ್ವರ ನನಗೆ ಅದೇದಿನ ಒಕ್ಕರಿಸಬೇಕೆ? ನಾನು ಹೋಗಲು ನಮ್ಮ ಮನೆಯ ಹಿರಿಯರು ಅಪ್ಪಣೆಕೊಡಲಿಲ್ಲ. ಮ್ಯಾಟನಿ ಬಿಟ್ಟು ಮಿಕ್ಕುಳಿದ ಶೋ ಗೆ ಹೋದರೆ ನಟನಟಿಯರಿಗೆ ಸುಸ್ತಾಗಿಬಿಟ್ಟಿರುತ್ತದೆ ಅವರು ಚೆನ್ನಾಗಿ ಆಕ್ಟ್ ಮಾಡುವುದಿಲ್ಲ ಹೀಗಾಗಿ ಇನ್ನೊಮ್ಮೆ ಮುಂದಿನವಾರ ಇನ್ನಷ್ಟು ಜನ ಸೇರಿ ಹೋಗೋಣ ಎಂದಿದ್ದರು ನಮ್ಮ ಚಿಕ್ಕಪ್ಪ. ಹೇಗಾದರೂ ಮಾಡಿ ಸಿನಿಮಾಗೆ ಅವರೊಟ್ಟಿಗೆ ಹೋಗುವ ಆಸೆ. ಆಂತೂ ಕೂಗಿ ಕಬ್ಬರಿದು ಹಠಮಾಡಿದ ಮೇಲೆ ಬ್ರಿಟಿಷರು ಸ್ವಾತಂತ್ರ್ಯ ಕೊಟ್ಟ ಹಾಗೇ ಅನುಮತಿ ಸಿಕ್ಕಿತು. ನನಗೆ ಆಗಾದ ಸಂತೋಷ ಬಹುತೇಕರಿಗೆ ದೇಶಕ್ಕೆ ಸ್ವಾತಂತ್ರ್ಯಬಂದಾಗಲೂ ಆಗಿರಲಿಕ್ಕಿಲ್ಲ!

ಅಂತೂ ನಾನೂ ಸೇರಿದಂತೆ ನಾವು ಸಿನಿಮಾ ನೋಡಲು ಹೊರಟೆವು. ಕಿರ್ರನೆ ಕಿರುಚಿದ ಬೆಲ್ಲು ನಮಗೆ ಹೊಸದು. ಒಮ್ಮೆ ನಾವೆಲ್ಲಾ ಬೆಚ್ಚಿದೆವು-ಕಾಡಿನಿಂದ ನಾಡಿಗೆ[ಊರಿಗೆ]ಬಂದ ಜಿಂಕೆಮರಿಗಳ ಸ್ಥಿತಿ ನಮ್ಮದಾಗಿತ್ತು. ಸಿನಿಮಾ ಶುರುವಿಟ್ಟಿತು. ಅದೇನೋ ಬಾಲ್ಕನಿಯಂತೆ ಅದರಲ್ಲಿ ಕುಳಿತುಕೊಂಡಿದ್ದೆವು. ಜನ್ಮದಲ್ಲಿಯೇ ನೋಡಿರದ ಮೆತ್ತನ ಸೀಟುಗಳನ್ನು ಬಹಳಸಲ ಮುಟ್ಟಿ ಮುಟ್ಟಿ ನೋಡಿದೆವು. ಓ ಬದುಕೇ ನೀನೆಂಥ ಸುಂದರ! ಸ್ವರ್ಗದಲ್ಲಿರುವಷ್ಟು ಸುಖಪಟ್ಟೆವು! ಸಿನಿಮಾದಲ್ಲಿ ಅನೇಕ ಪಾತ್ರಧಾರಿಗಳು ಬಂದು ಹೋಗುತ್ತಿದ್ದರು.ನಡು ನಡುವೆ ಅಂದಿನ ಸಿನಿಮಾಗಳಲ್ಲಿ ಸ್ಲೋ ಮೋಶನ್ ಇರುತ್ತಿತ್ತು. ಆಗೆಲ್ಲ ನಾನಂದುಕೊಳ್ಳುವುದು ಅಜ್ಜ ಹೇಳಿದ್ದು ನಿಜ-ಪಾತ್ರಧಾರಿಗಳಿಗೆ ಕುಣಿದೂ ಕುಣಿದೂ ಸುಸ್ತಾಗಿಬಿಟ್ಟಿದೆ ಪಾಪ! ಪಾತ್ರಧಾರಿಗಳು ಎಲ್ಲಿರುತ್ತಾರೆ ಮತ್ತು ಹೇಗೆ ವೇದಿಕೆಯ ಮೇಲೆ ಬರುತ್ತಾರೆ ಎಂಬುದು ತಿಳಿದಿರಲಿಲ್ಲ. ನಮ್ಮ ಮೇಲ್ಗಡೆ ಇರುವ ಮಹಡಿಯಿಂದ ಪರದೆಯ ಹಿಂದುಗಡೆಗೇ ನೇರ ಇಳಿಯಲು ವ್ಯವಸ್ಥೆ ಇದೆ ಎಂದುಕೊಂಡಿದ್ದೆ ನಾನು. ಬಾಯಿತೆಗೆದರೆ ಸಿನಿಮಾನೋಡುವಾಗ ಮಾತನಾಡಬೇಡ ಎನ್ನುತ್ತಿದ್ದರು ನಮ್ಮ ಗುಂಪಿನವರು. ಅವರಿಗೆಲ್ಲ ಸಿನಿಮಾ ಅರ್ಥವಾಗುತ್ತಿತ್ತು. ನನಗೆ ವಯಸ್ಸು ೮-೯ ಇರುವುದರಿಂದ ಅಷ್ಟೊಂದು ಅರ್ಥಮಾಡಿಕೊಳ್ಳುವ ಮನೋ ಬೆಳವಣಿಗೆ ಅಂದಿಗೆ ಆಗಿರಲಿಲ್ಲ. ಹೀಗಾಗಿ ನನ್ನ ಕುತೂಹಲವಿರುವುದು ನಟ-ನಟಿಯರು ಎಲ್ಲಿರುತ್ತಾರೆ ಮತ್ತು ಹೇಗೆ ಅಷ್ಟು ಬೇಗ ದಿರಿಸುಗಳನ್ನು ಮತ್ತು ಇನ್ನಿತರ ಚಪ್ಪಲಿ ಮುಂತಾದವಸ್ತುಗಳನ್ನು ಬದಲಿಸಿಕೊಂಡು ಬರುತ್ತಾರೆ ಎಂಬುದರ ಮೇಲಿತ್ತು. ಅರ್ಥವಾಗಿರಲಿಲ್ಲ-ಅರ್ಥ ಮಾಡಿಸಿದವರೂ ಇಲ್ಲ. ಜ್ವರ ಬಂದಿದೆಯೆಂಬ ಕಾರಣಕ್ಕೆ ಹೋಗದಂತೆ ತಡೆಯಲು ಚಿಕ್ಕಪ್ಪ ಆರೋಗ್ಯದ ಹಿತಾರ್ಥ ಹೇಳಬೇಕಾಗಿ ಬಂದು ಹೇಳಿದ ಆ ಸುಳ್ಳು ಬಹುವರ್ಷಗಳವರೆಗೆ [೩-೪ ವರ್ಷಗಳವರೆಗೆ] ಹಾಗೇ ಅಚ್ಚೊತ್ತಿ ಬೇರೇ ನನ್ನ ಸಹಪಾಠಿಗಳಿಗೆಲ್ಲ ನನಗೆ ಸಿನಿಮಾ ಬಗ್ಗೆ ಬಹಳಗೊತ್ತಿರುವವನಂತೆ ಅದನ್ನೇ ಮನದಟ್ಟು ಮಾಡಿಸಿದ್ದೆ! ಅಂತೂ ಕೆಲವರುಷ ನಮ್ಮಲ್ಲಿಯ ಯಾವ ಮಕ್ಕಳೂ ಮ್ಯಾಟನಿ ಶೋ ಬಿಟ್ಟು ಮಿಕ್ಕುಳಿದ ಶೋ ಗಳಿಗೆ ಹೋಗುತ್ತಿರಲಿಲ್ಲ. ಇದೊಂಥರ ಕೂಗುಮಾರಿಯ ಹಬ್ಬುರೋಗದಂತೆ ಮಕ್ಕಳಲ್ಲೇ ಸುತ್ತುಹಾಕುತ್ತಿತ್ತು!

ಆ ಕಾಲದಲ್ಲಿ ಶಹರಗಳಲ್ಲಿ ಸಿನಿಮಾಗಳು ಬಿಡುಗಡೆಯಾದ ನಂತರ ಅವುಗಳ ಹೆಸರಿನಲ್ಲಿ ಅನೇಕ ವಸ್ತುಗಳು ಬರುತ್ತಿದ್ದವು. ಅಥವಾ ಅನೇಕ ವಸ್ತುಗಳ ಮೇಲೆ ಸಿನಿಮಾ ಹೆಸರೋ, ನಟ-ನಟಿಯರ ಹೆಸರೋ, ಯಾವುದೋ ಸಣ್ಣ ಡೈಲಾಗೋ ಅಚ್ಚಿಸಲ್ಪಟ್ಟು ಮಾರಾಟ ಜಾಸ್ತಿಮಾಡಿಸಿಕೊಳ್ಳುತ್ತಿತ್ತು! ಹೀಗಿರುವಾಗ ನಮ್ಮ ಮಿತ್ರ ಸೈಕಲ್ಲಿನ ಅನೇಕ ಕವರುಗಳ ಮೇಲೆ ಕೂಡ ಅಂತಹ ಅಕ್ಷರಗಳು ಬಣ್ಣ ಬಣ್ಣಗಳಲ್ಲಿ ಪ್ರಿಂಟ್ ಆಗಿರುತ್ತಿದ್ದವು. ಅವುಗಳನ್ನೆಲ್ಲ ಕೈಯ್ಯಲ್ಲಿ ಮುಟ್ಟಿನೋಡಿ ಹೇಗೆ ಮುದ್ರಿಸಿರಬಹುದು ಎಂಬುದನ್ನು ತಿಳಿದುಕೊಳ್ಳುವ ಆಸೆಯಾಗುತ್ತಿತ್ತು. ಹಲವ್ಯ್ ಸೈಕಲ್ ಓನರ್ ಗಳಿಗೆ ಬಗೆಬಗೆಯ ಚಿತ್ತಾರ-ಹೆಸರು ಮುದ್ರಿಸಿದ ಕವರುಗಳನ್ನು -ಲೇಟೆಸ್ಟ್ ಆಗಿ ಬಂದವುಗಳನ್ನು ಹಾಕಿಕೊಳ್ಳುವುದು ಘನತೆಯ ಪ್ರಶ್ನೆಯಾಗಿತ್ತು! ಹೀಗೇ ಹಲವಾರು ಮುದ್ರಿತ ಅಕ್ಷರಗಳ ಸೀಟ್ ಕವರ್ ಗಳಲ್ಲಿ ಒಂದರಮೇಲೆ ನನ್ನ ಸ್ನೇಹಿತನೊಬ್ಬ ಓದಿದ್ದು ’ ಐಲವಾಯು’! ಓದಿದ್ದೇ ಓದಿದ್ದು ಅವನಿಗೆ ಅದರ ಅರ್ಥ ತಿಳಿಯಲಿಲ್ಲ, ಅರ್ಥ ತಿಳಿಯುವ ಕುತೂಹಲವಾಯಿತು. ಆ ಕ್ಷಣದಿಂದ ನಮ್ಮಿಬ್ಬರದೂ ಅದರ ಅರ್ಥವೇನು, ಅದು ಯಾವ ಭಾಷೆಯ ಶಬ್ಧ, ಅದು ಯಾವ ಸಿನಿಮಾ ಹೆಸರು ಎಂಬುದನ್ನು ತಿಳಿಯುವ ಬೇಟೆಗೆ ಚಾಲನೆ ನೀಡಲಾಯಿತು.

ಹೀಗೆ ಪ್ರಾರಂಭವಾದ ಬೇಟೆಯಲ್ಲಿ ಯಾರೂ ನಮಗೆ ಅದರ ಅರ್ಥ ಹೇಳುವವರಿರಲಿಲ್ಲ! ಮುದುಕರಿಗೆ ಅದರಬಗ್ಗೆ ಗೊತ್ತಿಲ್ಲ-ಗಂಧಗಾಳಿ ಇಲ್ಲ, ಯುವಕರಿಗೆ ಬಹಳ ಅಧೀಕ್ಷಣಿ-ಅವರು ಹೇಳುವುದಿಲ್ಲ! ಯಾರನ್ನು ಹಿಡಿಯುವುದು. ಚಿಂತಿಸಿ ಕೊನೆಗೊಮ್ಮೆ ಕಾಲೇಜಿಗೆ ಹೋಗುವ ಕೆಲವು ಹೆಣ್ಣುಮಕ್ಕಳ ಹತ್ತಿರ ಕೇಳಿದೆವು- ಅವರೆಲ್ಲ ಪಿಸಪಿಸನೇ ನಕ್ಕು ಸುಮ್ಮನಾದರು. ಪಾಪ ನಮ್ಮ ಪಾಡು ಬೇಡ! ಧೈರ್ಯಗೆಡಲಿಲ್ಲ! ಧೈರ್ಯಂ ಸರ್ವತ್ರ ಸಾಧನಂ!--ಮೇಷ್ಟ್ರು ಹೇಳಿದ್ದರು. ಒಂದು ವಿಷೇಶವೆಂದರೆ ನಮ್ಮ ಊರಲ್ಲಿ ನಾವು ಗಂಡು ಟೀಚರ್ ಗಳನ್ನಲ್ಲದೇ ಹೆಣ್ಣು ಟೀಚರ್ ಗಳನ್ನೂ ’ಸರ್’ ಎಂದೇ ಸಂಬೋಧಿಸುತ್ತಿದ್ದೆವು! ನಮಗೆ ಪಾರಿಭಾಷಿಕ ಶಬ್ಢದ ಅರ್ಥ ಗೊತ್ತಿರದೆ ಆ ವಿಪರ್ಯಾಸ ನಡೆಯುತ್ತಿತ್ತು. ಆದರೂ ಚಿಕ್ಕಮಕ್ಕಳೆಂಬ ಕಾರಣಕ್ಕೋ ಅಥವಾ ಅವರಲ್ಲಿಯೂ ಹಲವರಿಗೆ ಆಂಗ್ಲ ಭಾಷೆ ಬರದೇ ಇದ್ದುದಕ್ಕೋ ಯಾರೂ ನಮಗೆ ಹಾಗೆ ಹೇಳಬಾರದು ಎಂದು ಹೇಳಿಕೊಟ್ಟಿದ್ದಾಗಲೀ ತಾಕೀತುಮಾಡಿದ್ದಾಗಲೀ ಇರಲಿಲ್ಲ! ’ಸರ್’ ಎಂಬುದು ಲಿಂಗಭೇದವನ್ನು ಅವಲಂಬಿಸಿದ್ದು ಎಂಬುದು ನಮಗಂದಿ ತಿಳಿದಿರಲಿಲ್ಲ. ’ಸರ್’ ಎಂಬುದೊಂದು ದೊಡ್ಡ ಗೌರವವಾಚಕ ಶಬ್ಧ ಎಂದೇ ತಿಳಿದ ಮೂರ್ಖ ವಿದ್ಯಾರ್ಥಿಗಳು ನಾವಾಗಿದ್ದೆವು. ಇರಲಿ.

ಅಂತೂ ಮೋದಲೇ ಹೇಳಿದಂತೆ ಧೈರ್ಯದಿಂದ ನಮ್ಮ ಬೇಟೆ ಮುಂದುವರಿಯಿತು. ನಮ್ಮಲ್ಲಿರುವ ಸರ್ವಶಕ್ತಿಯನ್ನೂ ಉಪಯೋಗಿಸಿ ಸುತ್ತುತ್ತ ಕೇಳುತ್ತಿದ್ದೆವು. ಒಂದುದಿನ ಯಾವುದೋ ಪಕ್ಕದ ಹಳ್ಳಿಯ ಕಾಲೇಜು ಕನ್ಯೆಯೊಬ್ಬಳು ದಾರಿಯಲ್ಲಿ ಸಿಕ್ಕಳು. ಅವಳಲ್ಲಿ ಕೇಳಿ ನೋಡೊಣ ಎಂದುಕೊಂಡು ಹತ್ತಿರಹೋಗಿ ನಮ್ಮ ಸಮಸ್ಯೆಯನ್ನು ಹೇಳಿಕೊಂಡರೆ ನನ್ನನ್ನು ದುರುಗುಟ್ಟಿ ನೋಡಿದ ಆ ಹುಡುಗಿ ನನ್ನ ಸ್ನೇಹಿತನಿಗೆ ಕಪಾಳಮೊಕ್ಷ ಕಾಣಿಸಿದಳು. ನಮ್ಮ ಪ್ರಸಾದವೆಲ್ಲ ಒಣಗಿಹೋಗಿ ಅ ದಿನದಿಂದ ಬಹಳಕಾಲದವರೆಗೆ ’ ದೈರ್ಯಂ ಸರ್ವತ್ರ ಸಾಧನಂ ’ ಹೇಳಿಕೆಯನ್ನು ಹೇಳಿಕೊಟ್ಟವರಿಗೆ ಮನಸ್ಸಿನಲ್ಲೇ ಗೊತ್ತಿರುವ ಶಾಪ ಹಾಕುತ್ತ ಆ ಹೇಳಿಕೆಯನ್ನು ಹಾಗೇ ಪಕ್ಕಕ್ಕೆ ತಳ್ಳಿದ್ದೆವು.

ಕಾಲಾನಂತರದಲ್ಲಿ ಯಾವುದೋ ಒಂದುದಿನ ಇನ್ನೊಂದು ಸೈಕಲ್ ಮೇಲೆ ಅದೇ ಬರಹ ಕಂಡಿತು. ಅದು 'ಐ ಲವ್ ಯೂ' ಎಂಬುದು ನಮಗೆ ಗೊತ್ತಾಗಿದ್ದು ಆ ದಿನ. ಅದರ ಅರ್ಥವನ್ನು ಸ್ವಲ್ಪ ಸ್ವಲ್ಪ ಸಹಜವಾಗಿ ತಿಳಿದುಕೊಳ್ಳುವ ಮಟ್ಟಿಗೆ ನಾವು ಬೆಳೆದಿದ್ದೆವು. ಆದರೆ ಆ ಪದದ ಬಳಕೆಯನ್ನು ಮಾತ್ರ ಇನ್ನೆಂದೂ ಮಾಡಬಾರದಷ್ಟು ನಿಶ್ಚೇಷ್ಟಿತಗೊಂಡ ಮನಸ್ಸು ನಮ್ಮದಾಗಿತ್ತು! ಹೀಗೆ ಜೀವನದಲ್ಲಿ ಇದುವರೆಗೂ ಕೂಡ ಈ ಐಲವಾಯುವನ್ನು ಉಪಯೋಗಿಸುವಾಗ ಬಹಳ ಜಾಗರೂಕರಾಗಿರುತ್ತಿದ್ದೇವೆ. ಯಾವುದು ಜಗತ್ತಿನಲ್ಲಿ ಪ್ರಾಮುಖ್ಯವೋ ಅದರ ಅರ್ಥಗೊತ್ತಿರದೇ ಅಪಾತ್ರರಿಗೆ ಅದನ್ನು ಹೇಳಿಕೊಂಡಾಗ ಆದ ಅಪಘಾತ, ಈಗಲೂ ಆತಂಕ ಒಡ್ಡುತ್ತದೆ. ಐಲವಾಯು ವಿನ ಮಹಾತ್ಮೆಯೇ ಹಾಗೆ. ಎಲ್ಲಸ್ನೇಹಿತರಮೇಲೂ ಪ್ರೀತಿಯಿಂದ, ಸ್ನೇಹದಿಂದ, ಅಕ್ಕರೆಯಿಂದ, ಮಮತೆಯಿಂದ, ವಾತ್ಸಲ್ಯದಿಂದ ’ಐಲವಾಯು’ ಶಬ್ಧ ಪ್ರಯೋಗಿಸಲೇ ? ಯಾಕೆಂದರೆ ಅದರ ವಿಸ್ತಾರ ಬಹುದೊಡ್ಡದು ಅಲ್ಲವೇ?