ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, November 8, 2010

ಶಾಲಿನಿ


ಶಾಲಿನಿ

[ಸಹೃದಯೀ ಓದುಗ ಮಿತ್ರರೇ, ಇಲ್ಲೊಂದು ಹೊಸಬಗೆಯ ಕಥೆಯನ್ನು ಬರೆಯಲು ಪ್ರಯತ್ನಿಸಿದ್ದೇನೆ. ಕಥೆಯುದ್ದಕ್ಕೂ ಕವನವೊಂದು ಹಾದುಹೋಗುತ್ತಾ ತಮಗೆ ಕಥೆಯನ್ನೂ ಕವನವನ್ನೂ ಒಟ್ಟಾಗಿ ಕೊಡುವ ಒಂದು ವಿಭಿನ್ನ ಹೆಜ್ಜೆ ಇದು. ಪೂರಕ ಪ್ರಯತ್ನಗಳಿಲ್ಲದೇ ಕುಳಿತಾಗೊಮ್ಮೆ ಸಹಜವಾಗಿ ಮನಸ್ಸನ್ನಾವರಿಸಿದ ಭಾವಗಳಿಗೆ ಭಾಷ್ಯಬರೆಯಲು ಹೊರಟಾಗ ಕಥೆಯೂ ಕವನವೂ ಒಟ್ಟೊಟ್ಟಿಗೇ ಬಂದವು. ಸಮ್ಮಿಶ್ರ ಸರಕಾರವನ್ನು ನೋಡಿದ ನಿಮಗೆ ಅಂತಹ ಅಸಹ್ಯಕರ ಸನ್ನಿವೇಶವಂತೂ ಇದಾಗಲಾರದು ಎಂಬ ಅನಿಸಿಕೆಯಿಂದ ಬಿಸಿಬಿಸಿಯಿರುವಾಗಲೇ ಬಾಳೆಲೆಗೆ ಬಡಿಸಿದ್ದೇನೆ. ಮನೆಮಂದಿಯಾದ ನಿಮ್ಮಲ್ಲಿ ಹೇಳದ್ದೇನಿದೆ? ಹೀಗಾಗಿ ಇದನ್ನೂ ಹೇಳಿಕೊಂಡಿದ್ದೇನೆ. ಶುಭವಾದರೆ ಶುಭವೆನ್ನಿ, ಹಿತವಾದರೆ ಹಿತವೆನ್ನಿ, ಉಪ್ಪು-ಖಾರ ಜಾಸ್ತಿಯಾಗಿದ್ದರೆ ಅದನ್ನೂ ಹೇಳಿ ಆಗದೇ? ಮತ್ತೆ ಸಿಗೋಣ, ನಮಸ್ಕಾರ.]


ಕಾವೂರ ಶಾಲೆಯ ಸುತ್ತಾ ಮುತ್ತಾ ಬಹಳ ಮಂದಿ ಊರವರು ಸೇರಿದ್ದರು. ಅವರೆಲ್ಲರ ಮುಖದಲ್ಲಿ ಅವ್ಯಕ್ತವಾದ ನೋವೊಂದು ಕಾಣುತ್ತಿತ್ತು. ಕೆಲವರ ಕಣ್ಣಂಚಿನಿಂದ ಜಾರುತ್ತಿವೆ ಹನಿಗಳು. ನೀರವ ಮೌನದ ನಡುವೆ ಶಾಲೆಯ ಒಳಗೆ ನಡೆಯುತ್ತಿದ್ದ ಸಮಾರಂಭದಲ್ಲಿ ಯಾರೋ ಹುಡುಗಿ ಹಾಡಿದ ಹಾಡು ಕೇಳಿಬರುತ್ತಿತ್ತು.


ಋಣಿಯಾಗಿಹೆವು ನಿಮಗೆ
ಗಣಿತ ಇತಿಹಾಸ ಪುರಾಣದಾ ಜ್ಞಾನಗಳ
ಹಣತೆ ಬೆಳಗಿದ ಗುರುವೇ ನಿಮಗಿದೋ ವಂದನೆ ......
ಪಾದಾಭಿವಂದನೆ

ವೀರವನಿತೆಯಾಗಬೇಕೆಂಬ ಕನಸು ನನಸಾಗದಿದ್ದರೂ ಬೇಸರವಿಲ್ಲ, ಶಿಕ್ಷಕಿಯಾಗಿ ನಾಲ್ಕುಮಕ್ಕಳಿಗೆ ವೀರರ ಕಥೆಯನ್ನು ಬೋಧಿಸಿ ಅವರನ್ನು ನಾಳಿನ ಜಗತ್ತಿಗೆ ಅಣಿಗೊಳಿಸುವ ಕೆಲಸ ದೊರೆತದ್ದು ಪುಣ್ಯ ಎಂದುಕೊಂಡ ಶಾಲಿನಿಗೆ ಜೀವನವೇ ಒಂದು ನೋವಿನ ಯಾತ್ರೆಯಾಗುತ್ತದೆಂದು ಅನಿಸಿರಲೇ ಇಲ್ಲ. ಮೂರು ನಾಲ್ಕನೇ ತರಗತಿಗಳಲ್ಲಿ ಓದುವ ಚಿಕ್ಕ ಮಕ್ಕಳಿಗೆ ಇತಿಹಾಸ ಮತ್ತು ಪುರಾಣಗಳ ಕಥೆಯನ್ನು ಹೇಳುತ್ತಾ ತನ್ನನ್ನೇ ಮೈಮರೆತು ಆ ಕಥೆಗಳ ಭಾಗವೇ ಆಗಿಹೋಗುವ ಶಾಲಿನಿ ನಡೆದು ಬಂದ ದಾರಿ ಬಲುದೂರ!

ಪುಸ್ತಕವೊಂದನ್ನು ಹುಡುಕುವಾಗ ಆಕೆಗೆ ಸಿಕ್ಕಿದ್ದು ಒಂದು ಶುಭಾಶಯ ಪತ್ರ. ಆ ಪತ್ರದಲ್ಲಿ ಅಡಗಿದ ಭಾವಕ್ಕೆ ಮಾರುಹೋಗಿದ್ದಳು ಶಾಲಿನಿ. ಬೇರೇ ಬರಹಗಳು ತಿಳಿಸದ, ಮಾತುಗಳು ಧ್ವನಿಸದ, ಸಂಜ್ಞೆಗಳು ಸೂಚಿಸದ ಹಲವು ಭಾವನೆಗಳನ್ನು ಹೊತ್ತು ಬಂದ ಪತ್ರ ಅದಾಗಿತ್ತು. ಅಂದು ಅದೊಂದೇ ಪತ್ರ ತನ್ನ ಹೊಸಬಾಳಿಗೆ ಬುನಾದಿಯನ್ನು ಹಾಕಿತ್ತು! ದೂರದ ಸಂಬಂಧಿಕರ ಮಗ ರಮೇಶ್ ತನಗೆ ಯಾಕೋ ಒಳಗೊಳಗೇ ಹತ್ತಿರವಾಗತೊಡಗಿದ್ದ. ಹೇಳಬೇಕಿದ್ದ ಅನಿಸಿಕೆಗಳು ಹಲವು, ಆದರೆ ಅನಿಸಿದ್ದನ್ನೆಲ್ಲಾ ಹೇಳುವ ಸ್ವಾತಂತ್ರ್ಯವಾಗಲೀ ಧೈರ್ಯವಾಗಲೀ ಇಲ್ಲದ್ದು ಆ ಕಾಲ. ಕೈಲಿ ಮೊಬೈಲಿಲ್ಲ ಇನ್ನಾವುದೇ ಸಂಪರ್ಕ ಸಾಧನವಿರಲಿಲ್ಲ. ಹೀಗಾಗಿ ಕೇವಲ ಪತ್ರಮಾಧ್ಯಮವೊಂದೇ ಪ್ರೇಮನಿವೇದನೆಗೆ ದಾರಿಯಾಗಿತ್ತು.

ಬೈಲಾರದಲ್ಲಿ ಮದುವೆಯೊಂದಕ್ಕೆ ಹೋದಾಗ ಛಂಗನೆ ಚಿಗರೆಯಂತೇ ಜಿಗಿಯುತ್ತಿದ್ದ ಶಾಲಿನಿಗೆ ದೂರದಲ್ಲಿ ಗಂಡಿನ ದಿಬ್ಬಣದ ಕಡೆಗಿನ ಜನರ ನಡುವೆ ಕಾಣಿಸಿದ್ದ ರಮೇಶ. ಅತ್ಯಂತ ಸ್ಪುರದ್ರೂಪಿ ಹುಡುಗ, ಬಹಳ ಚಾಲಾಕಿ, ಯಾರಜೊತೆಗೋ ಹರಟುತ್ತಾ ನಗುತ್ತಾ ಇದ್ದ. ಹದಿವಯದ ಆ ಕಾಲ ಹೊಸಜಗವನ್ನು ಅನಾವರಣಗೊಳಿಸುತ್ತಿತ್ತು. ಪ್ರಕೃತಿಮಾತೆಯ ಚಪ್ಪರದಲ್ಲಿ ಭೂಮಿಗೆ ಬಾನಿನೊಡನೆ ಸಂಪರ್ಕಿಸುವ ಆಸೆ! ಬಾನಿಗೆ ಭೂಮಿಯನ್ನು ಸೇರುವ ಬಯಕೆ. ಈ ಬಯಕೆಗಳ ತಾಕಲಾಟದಲ್ಲೇ ತೇಲಾಡುತ್ತಾ ಒಳಗೊಳಗೇ ಆಗಾಗ ಆಗಾಗ ಸಿಗಬಹುದಾದ ಚಿಕ್ಕ ಪುಟ್ಟ ದರ್ಶನ ಸ್ಪರ್ಶನಗಳಿಗೆ ಪುಳಕಗೊಳ್ಳುವ ಮೈಮನ ಹದಿಹರೆಯದ ಹೆಣ್ಣು-ಗಂಡುಗಳದು. ಅವನಿಗೆ ಅವಳೆಂದರೆ ಆಯಿತು.....ಏಷ್ಟೇ ಹೊತ್ತಾದರೂ ಪರವಾಗಿಲ್ಲ ಕಾಯುವ ತವಕ...ಒಟ್ಟಾರೆ ಅವಳೊಟ್ಟಿಗೆ ಮಾತನಾಡಬೇಕು, ಹರಟಬೇಕು......ಅವಳ ಕಿವಿಯಲ್ಲಿ ಏನನ್ನಾದರೂ ಪಿಸುಗುಡುತ್ತಾ ನಗಬೇಕು....ನಕ್ಕಿ ಕಚಗುಳಿಯಿಡಬೇಕು.....ಸೋತ ಆಕೆ ಕೊನೆಗೊಮ್ಮೆ ತನ್ನ ತೋಳಿನಲ್ಲಿ ಬಂಧಿಯಾಗಿ ಬಹಳಹೊತ್ತು ತನ್ನನ್ನೇ ಮರೆಯಬೇಕು. ಅವಳಿಗೆ ಅವನೆಂದರೆ ಎಲ್ಲಿಲ್ಲದ ಆಸೆ...ಆತ ಬೇರೆಯವರ ಜೊತೆ ಹರಟುವುದನ್ನು ನೋಡುವಾಗ ತಾನೂ ಏನಾದರೂ ಮಾತನಾಡಬೇಕೆಂಬ ಚಪಲ.....ಹತ್ತಿರ ಕುಳಿತುಕೊಳ್ಳುವ ಬಯಕೆ......ಒರಗಿ ಕುಳಿತು ಛೇಡಿಸುವ ಇಚ್ಛೆ......ಜಗದ ಎಲ್ಲಾ ಸ್ಪರ್ಧೆಗಳಲ್ಲಿ ಆತನೇ ಗೆದ್ದುಬರಲೆಂಬ ಬೆಟ್ಟದೆತ್ತರದ ಆಕಾಂಕ್ಷೆ....ಆತ ತನ್ನನ್ನೇ ಪ್ರೀತಿಸಲಿ ಎಂಬ ಅಪೇಕ್ಷೆ. ಆ ದಿನಗಳೇ ಹಾಗಲ್ಲವೇ ? ಅವುಗಳನ್ನು ಪ್ರತ್ಯೇಕವಾಗಿ ಬಣ್ಣಿಸಲೇ ಬೇಕಿಲ್ಲವಷ್ಟೇ ?

ಹೀಗೇ ಮದುವೆಯ ಸಂಭ್ರಮದಲ್ಲಿ ದಕ್ಕಿದ ಮೊದಲನೋಟದಲ್ಲಿ ರಾಜಾ ವಿಷ್ಣುವರ್ಧನ ಶಾಂತಲೆಯನ್ನು ಬಂಧಿಸಿದಂತೇ, ದುಷ್ಯಂತ ಶಕುಂತಲೆಯ ಮನಕದ್ದಂತೇ ಶಾಲಿನಿಯ ಹೃದಯಚೋರನಾಗಿದ್ದ ರಮೇಶ. ಅಲ್ಲಿಂದ ಮುಂದೆ ಅನೇಕ ತಿಂಗಳುಗಳು ಪರಸ್ಪರರ ಕಾಣಬೇಕೆಂಬ ತಹತಹದಲ್ಲೇ ಕಳೆದುಹೋದವು. ಇಬ್ಬರಿಗೂ ಏನೋ ದೂರದ ನೆಂಟರು ಎಂಬುದಷ್ಟೇ ಗೊತ್ತು ವಿನಃ ಆ ಮನೆಗಳಲ್ಲಿ ಅತೀ ಹತ್ತಿರದ ಬಾಂಧವ್ಯವಿರಲಿಲ್ಲ. ಏನಾದರಾಗಲಿ ಇನ್ನು ತಾಳಲಾರೆ ಎಂದುಕೊಂಡ ರಮೇಶ ಒಂದು ಶುಭಾಶಯ ಪತ್ರವನ್ನು ಬರೆದ. ಹೇಗೋ ಏನೋ ಅವಳ ವಿಳಾಸವನ್ನು ಪತ್ತೆಹಚ್ಚಿ ಕಳಿಸೇಬಿಟ್ಟ!

ಪತ್ರ ಬಂದಿರುವ ವೇಳೆಯಲ್ಲಿ ಶಾಲಿನಿಯ ತಂದೆ ಪೇಟೆಗೆ ಹೋಗಿದ್ದರು. ತಾಯಿ ದೇವಸ್ಥಾನಕ್ಕೆ " ಏನೋ ಪೂಜೆಯಂತೆ ಕಮಲಮ್ಮ ಕರ್ದಿದಾರೆ ಹೋಗ್ಬರ್ತೀನಿ " ಎನ್ನುತ್ತಾ ಹೋಗಿದ್ದರು. ಶಾಲಿನಿಗೆ ಕಾಲೇಜಿನ ಪರೀಕ್ಷೆ ಹತ್ತಿರ ಬಂದಿದ್ದರಿಂದ ಮನೆಯಲ್ಲೇ ಕುಳಿತು ಓದುತ್ತಿದ್ದಳು. ಅನಿರೀಕ್ಷಿತವಾಗಿ ಹಳ್ಳಿಯ ಅಂಚೆಯಣ್ಣ ಕೂಗಿ ಕರೆದ. ಹೊರಗೆ ಬಂದಾಗ ಕೈಗೆ ಪತ್ರಕೊಟ್ಟು ಇದು ನಿಮ್ಮದೇ ಹೌದೋ ಎಂದ. ಗೋಣುಹಾಕಿತ್ತಾ ಅವಸರದಲ್ಲಿ ಅದನ್ನು ಹಿಡಿದವಳೇ ಅಂಚೆಯಣ್ಣನಿಗೆ ಬಾಯಾರಿಕೆಗೆ ಕೊಡಲೋ ಎಂದು ಕೇಳುವುದನ್ನೂ ಮರೆತು ಒಳಸೇರಿದ್ದಳು ಶಾಲಿನಿ. ಪತ್ರವನ್ನು ಓದಿದಳು. ಇದ್ದುದು ಮೂರ್ನಾಲ್ಕು ಸಾಲು :

ಪ್ರೀತಿಯ ಶಾಲಿನಿ,

ಬಹಳದಿನಗಳ ಹಿಂದೆ ನಾವು ಮದುವೆಯಲ್ಲಿ ಭೇಟಿಯಾಗಿದ್ದೆವು ನೆನಪಿದೆಯಲ್ಲವೇ ? ನಾನು ರಮೇಶ್, ಒಮ್ಮೆ ನಿಮ್ಮನ್ನು ಕಾಣುವ ತವಕದಿಂದ ನನ್ನ ವಿಳಾಸವನ್ನು ತಿಳಿಸುವ ಸಲುವಾಗಿ ಬರೆದೆ, ಬರೆಯಲು ಆಗದಷ್ಟು ಮಾತಾಡುವುದಿದೆ, ನಾನು ಬರೆದಿದ್ದು ಇಷ್ಟವಾದರೆ ನನಗೊಮ್ಮೆ ಉತ್ತರಿಸಿ, ಹೃದಯಾಂತರಾಳದಿಂದ ಶುಭಾಶಯಗಳು.

ಇತಿ ನಿಮ್ಮವ,
ರಮೇಶ್


ಪತ್ರ ಓದಿದ ಶಾಲಿನಿಗೆ ಬಾನು ಬಾಗಿ ಭೂಮಿಗೆ ತಲ್ಪಿದ ಅನುಭವ. ಪತ್ರವನ್ನು ಯಾರಿಗೂ ಸಿಗದಂತೇ ಅಟ್ಟದಲ್ಲಿರುವ ಹಳೆಯ ಯಾವಾಗಲೂ ತೆರೆಯದ ಪೆಟ್ಟಿಗೆಯೊಂದರಲ್ಲಿ ಬಚ್ಚಿಟ್ಟು ಜೋಪಾನಮಾಡಿದಳು. ಅಪ್ಪ-ಅಮ್ಮ ಹೊರಗೆ ಹೋದವರು ಬಂದರೂ ಅವಳಿಗೆ ತಲೆಯಲ್ಲಿ ರಮೇಶನದ್ದೇ ಗುಂಗು, ಆತನದೇ ಧ್ಯಾನ. ಪತ್ರವನ್ನು ಸದಾ ಕೈಲಿ ಹಿಡಿದೇ ಇರುವ ಆಸೆ. ಆ ಪತ್ರವನ್ನೊಮ್ಮೆ ಮೂಸಿ ಅದಕ್ಕಿರುವ ಲಘು ಆಹ್ಲಾದಕರ ಪರಿಮಳವನ್ನು ಆಘ್ರಾಣಿಸಿದ್ದಳು. ಈಗ ಎಲ್ಲರ ಎದುರಿನಲ್ಲಿ ಮತ್ತೆ ಹೊರತೆಗೆಯಲು ಸಾಧ್ಯವೇ ? ಪತ್ರವನ್ನು ಮುಟ್ಟಿದ್ದ ತನ್ನ ಕೈಯ್ಯನ್ನೇ ಮತ್ತೊಮ್ಮೆ ಆಘ್ರಾಣಿಸಿದಳು. ಮೂಡಿದ ದೇವರು ಮುಳುಗುವ ಹೊತ್ತಿಗೆ ಮನದ ತುಂಬಾ ರಮೇಶನೇ ತುಂಬಿ ಉಸಿರುಸಿರಿನಲ್ಲೂ ಅವನೇ ಉಸಿರಾಡುತ್ತಿದ್ದ. ರಾತ್ರಿಯಾವಾಗ ಬಂತೋ ತಿಳಿಯಲೇ ಇಲ್ಲ ಆಕೆಗೆ. ಮೈಯ್ಯೆಲ್ಲಾ ಬಿಸಿಬಿಸಿ ಬಿಸಿಬಿಸಿ. ರಮೇಶನನ್ನು ಹೇಗಾದರೂ ಮಾಡಿ ಕಾಣಬೇಕೆನ್ನುವ ತವಕ, ಆತನಿಗೆ ಈ ಕೂಡಲೇ ಪತ್ರವನ್ನು ಬರೆಯಬೇಕೆಂಬ ಅದಮ್ಯ ಬಯಕೆ.

ಮಾರ್ದನಿಸಿ ಎಲ್ಲೆಲ್ಲೂ ನಿಮ್ಮ ದನಿ ಮನದೊಳಗೆ
ಆರ್ದ್ರತೆಯ ಅನುಕಂಪ ಪೂಸುತಿರೆ ಮೈಗೆ
ನಿರ್ದೇಶಿಸುತ ನಿತ್ಯ ಸನ್ಮಾರ್ಗ ಕಾರ್ಯಗಳ
ಗರ್ದಭಗಳನೆಲ್ಲ ಹಯವಮಾಡಿದಿರಿ

..............ಹುಡುಗಿಯ ಇಂಪಾದ ಅಮೋಘ ಕಂಠಸಿರಿಯಲ್ಲಿ ಹಾಡು ಹೊರಳುತ್ತಿದ್ದಂತೇ ಶಾಲಿನಿಯ ಮನಸ್ಸಿನ ಬಂಡಿ ಮುಂದೆ ಚಲಿಸುತ್ತಲೇ ಇತ್ತು.

ಕೆಲವೇ ದಿನಗಳಲ್ಲಿ ಕದ್ದೂ ಮುಚ್ಚಿ ಅಂತೂ ಉದ್ದನೆಯ ಪತ್ರ ಬರೆದು ರಮೇಶ್ ತಿಳಿಸಿದ್ದ ಆ ವಿಳಾಸಕ್ಕೆ ಕಳಿಸಿದ್ದಳು ಶಾಲಿನಿ.

ಉತ್ತರಕ್ಕಾಗಿ ಕಾದ ರಮೇಶ ತಡವಾದುದರಿಂದ ನಿರಾಸೆಗೊಂಡಿದ್ದ. ಆದರೂ ಉಮ್ಮಳಿಸಿ ಬರುವ ಮನೋಗತವನ್ನು ಯಾರಲ್ಲೂ ಬಹಿರಂಗಗೊಳಿಸಲಾರ. ಕೊನೆಗೂ ಪತ್ರ ಬಂದೇ ಬಿಟ್ಟಿತ್ತು ! ಪರಮ ಸಂತೋಷದಿಂದ ಕುಣಿದಾಡಿದ ರಮೇಶನಿಗೆ ಅಂದು ಆಕಾಶ ಕೈಗೆಟುಕುವ ಹತ್ತಿರಕ್ಕೆ ಕಂಡಿತು. ಹಾಗೂ ಹೀಗೂ ಈರ್ವರ ನಡುವೆ ತರಾವರಿ ಪತ್ರಗಳ ವಿಲೇವಾರಿ ನಡೆದು ಪರಸ್ಪರ ಬಿಟ್ಟಿರಲಾರದ ಪ್ರೇಮಪಾಶದಲ್ಲಿ ಬಂಧಿಯಾಗಿದ್ದರು. ಆಗಾಗ ಕಾಲೇಜಿನ ಹೊರಾವರಣದಲ್ಲಿ ಸಿಗುತ್ತಿದ್ದರು. ಆತನ ಪಟ್ಟಣವೇ ಬೇರೆಯಾದುದರಿಂದ ಆತ ಆಕೆಯನ್ನು ನೋಡಲೆಂದೇ ದೂರದ ಅವಳ ಕಾಲೇಜಿನ ಹತ್ತಿರಕ್ಕೆ ಬಂದು ನಿಲ್ಲುತ್ತಿದ್ದ. ಎಲ್ಲವೂ ಪತ್ರಗಳ ಮೂಲಕ ಮೊದಲೇ ಹೇಳಲ್ಪಡುವ ಕಾರ್ಯಕ್ರಮಗಳಾಗುತ್ತಿದ್ದವು.

ಡಿಗ್ರೀ ಮುಗಿಸಿ ನೌಕರಿ ಹಿಡಿದ ರಮೇಶ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿದ. ನಂತರ ಶೀಘ್ರದಲ್ಲಿ ಆತನಿಗೆ ಶಾಲಿನಿಯನ್ನು ಮದುವೆಯಾಗಿಬಿಡುವ ಬಯಕೆ ಜಾಸ್ತಿಯಾಗಿ ತಿಳಿಸಿದ್ದ. ಹೇಗೂ ಇಬ್ಬರ ಇಚ್ಛೆಯೂ ಒಂದೇ ಆಗಿದ್ದರಿಂದ ರೋಗಿ ಬಯಸಿದ್ದೂ ವೈದ್ಯರು ಹೇಳಿದ್ದೂ ಒಂದೇ ಎಂಬಂತೇ ಆಗಿತ್ತು. ಶಾಲಿನಿಯ ಪಾಲಕರಿಗೆ ಪತ್ರದ ಮೂಲಕ ವಿನಂತಿಸಿದ್ದ ರಮೇಶ. ಮೊದ ಮೊದಲು ವಿವಾದಗಳು ವಾಗ್ವಾದಗಳು ನಡೆದವು. ಅಪ್ಪನ ಕೋಪ ಅಮ್ಮನ ಅಸಡ್ಡೆ ಎಲ್ಲವನ್ನೂ ರಮೇಶನಿಗಾಗಿ ಅನುಭವಿಸಿದ್ದಳು ಶಾಲಿನಿ. ಆದರೂ ರಮೇಶನ್ನು ಮಾತ್ರ ತೊರೆಯಲು ಸಿದ್ಧಳಿರಲಿಲ್ಲ. ಹಿತೈಷಿಗಳನೇಕರು ತಿಳಿಹೇಳಿ ಎರಡೂ ಕಡೆಯ ಬೀಗರನ್ನು ಒಪ್ಪಿಸಿದರು. ಮದುವೆ ಬಹಳ ವಿಜೃಂಭಣೆಯಿಂದ ಶಿವಮೊಗ್ಗೆಯ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ನೆಂಟರಿಷ್ಟರು, ಸ್ನೇಹಿತರು, ಬಂಧುಬಳಗ ಅಂತೇಳಿ ಸುಮಾರು ೧೫೦೦ ಜನ ಸೇರಿದ್ದರು. ಊಟೋಪಚಾರ ವಗೈರೆಯೆಲ್ಲಾ ಪೊಗದಸ್ತಾಗಿತ್ತು ಎಂದು ಬಂದವರೆಲ್ಲಾ ಖುಷಿಯಾಗಿ ಎಲೆಯಡಿಕೆ ಮೆದ್ದು ಬಾಯಾಡಿಸುತ್ತಾ ಹರಸಿ ಹೋಗಿದ್ದರು.

ಗಂಡನಮನೆ ಸೇರಿದ ಶಾಲಿನಿಗೆ ಅತೀವ ಸಂತೋಷವಾಗಿತ್ತು. ಅಕ್ಕರೆಯ ಕಕ್ಕುಲಾತಿಯಲ್ಲಿ ರಮಿಸುವ ಪ್ರೀತಿಯ ಗಂಡ, ದೇವರಂಥಾ ಅತ್ತೆ-ಮಾವ, ಒಡಹುಟ್ಟಿದವರ ಪ್ರೀತಿ ತೋರುವ ನಾದಿನಿಯರು, ಉಂಡುಟ್ಟು ಸುಖವಾಗಿದ್ದ ಸಂಸಾರ......ಇನ್ನೇನು ಬೇಕು ಬದುಕಲು?

ಸೋಲುಗಳ ಬದಿಗಿರಿಸಿ ಗೆಲುವುಗಳನರಸುತ್ತ
ಆಲದಾ ಮರದಂತೆ ನಿಂತು ಶೋಭಿಸುತಾ
ಗಾಲಿಗಳ ಸಮಗೊಳಿಸಿ ನಡೆಸಿ ಜೀವನರಥವ
ಗೇಲಿಮಾಡುವ ಜಗಕೆ ಪಥವ ತೋರಿದಿರಿ

............ಮತ್ತದೇ ಇಂಪಾದ ಕಂಠ ಮುಂದುವರಿಸಿತ್ತು ಆ ಹಾಡನ್ನು....ಎಂತಹ ಆಪ್ತತೆ ತುಂಬಿದ ಹಾಡದು, ಅಬ್ಬಾ!

ಮದುವೆಯಾಗುವ ಮುನ್ನ ನೂರಾರು ಕನಸುಗಳ ಒಡತಿಯಾಗಿದ್ದಳು ಶಾಲಿನಿ. ಭರತನಾಟ್ಯವನ್ನು ಬಹುವಾಗಿ ಪ್ರೀತಿಸುತ್ತಿದ್ದ ಆಕೆ ಬಹಳ ಸುಂದರವಾಗಿ ನರ್ತಿಸುತ್ತಿದ್ದಳು. ತಾನೊಬ್ಬ ನರ್ತಕಿಯಾಗಿಯೂ ಜನಮನ ಗೆಲ್ಲುವ ಇರಾದೆ ಅವಳಿಗಿತ್ತು. ಕಿತ್ತೂರು ಚೆನ್ನಮ್ಮನೆಂದರೆ ಆಕೆಗೆ ಎಲ್ಲಿಲ್ಲದ ಪ್ರೀತಿ. ಅವಳನ್ನು ನೆನೆದಾಗಲೆಲ್ಲಾ ಆಕೆಗೆ ದೇಶಭಕ್ತಿ ಉಕ್ಕಿ ಹರಿಯುತ್ತಿತ್ತು. ಅನೇಕದಿನ ತನ್ನೊಳಗೇ ರಾಣಿ ಚೆನ್ನಮ್ಮಾಜಿಯನ್ನು ಆಹ್ವಾನಿಸಿಕೊಂಡು ಆವೇಶಭರಿತಳಾಗಿ ಬ್ರಿಟಿಷರನ್ನು ಕಂಡು ಬುಸುಗುಟ್ಟುವ ಸನ್ನಿವೇಶಕ್ಕೆ ಇಳಿದುಬಿಡುತ್ತಿದ್ದಳು. ಒಂದಲ್ಲಾ ಒಂದು ದಿನ ತಾನು ವೀರವನಿತೆಯಾಗಿ ದೇಶಪ್ರೇಮವನ್ನು ಮೆರೆಯಬೇಕೆಂಬ ಹಂಬಲ ಅವಳದಾಗಿತ್ತು. ಆದರೆ ಹರೆಯದ ಕರೆಯ ಹೊರಗಿನ ಎಲ್ಲಾ ಕರೆಯನ್ನೂ ಮೀರಿಸಿ ಪ್ರೇಮದ ಸೆಳೆತದಲ್ಲಿ ಬಿದ್ದಿದ್ದಳು, ಬಿದ್ದು ಮದುವೆಯಾಗಿ ಬಂದಿದ್ದಳು ಶಾಲಿನಿ.

ಮದುವೆಯಾಗಿ ೫-೬ ವರ್ಷಗಳು ಬಹಳ ಸುಖವಾಗಿ ನಡೆಯಿತು ಸಂಸಾರ. ಆಗಲೇ ಇಬ್ಬರು ಮಕ್ಕಳು ! ಮಕ್ಕಳ ಜತೆಯಲ್ಲಿ ಆಟವಾಡುತ್ತಾ ಸಮಯ ಕಳೆದಿದ್ದೇ ಗೊತ್ತಾಗುತ್ತಿರಲಿಲ್ಲ ಶಾಲಿನಿಗೆ. ಒಂದಿನ ಇದ್ದಕ್ಕಿದ್ದಂತೇ ಆಫೀಸಿನಿಂದ ಬರುವಾಗ ರಮೇಶ ನಡೆಯಲು ಕಾಲಲ್ಲಿ ಸತುವೇ ಇಲ್ಲ ಎನ್ನುತ್ತಾ ಮನೆಗೆ ಬಂದ. ಬಂದ ಮಾರನೇ ದಿನದಿಂದ ಆತ ಮೇಲೇಳುವುದೇ ಕಷ್ಟವಾಯಿತು. ಗರಬಡಿದವಳಂತೇ ಆದ ಶಾಲಿನಿ ಕಂಡ ಕಂಡ ವೈದ್ಯರನ್ನೂ ದವಾಖಾನೆಯನ್ನೂ ಸಂಪರ್ಕಿಸಿ ಕಾರಣವೇನೆಂದು ತಿಳಿಯ ಬಯಸಿದಳು. ಹಲವು ಸಾವಿರ ಹಣ ಖರ್ಚಾದ ಮೇಲೆ ಒಬ್ಬರೇ ಒಬ್ಬ ವೈದ್ಯರು " ಅಮ್ಮಾ, ನೀವು ಭಯಪಡುವ ಅಗತ್ಯವಿಲ್ಲ, ನೀವು ಧೈರ್ಯ ತೆಗೆದುಕೊಳ್ಳಬೇಕು, ಮನುಷ್ಯನಿಗೆ ಬರದೇ ಮಂಗನಿಗೆ ಬರುತ್ಯೇ, ಇದು ಸಾವಿರದಲ್ಲೊಬ್ಬರಿಗೆ ಬರಬಹುದಾದ ಪಾರ್ಕಿನ್ಸನ್ ಕಾಯಿಲೆ ಅಂದರೆ ಒಂದು ರೀತಿಯ ನರದೌರ್ಬಲ್ಯ. ಇದಕ್ಕೆ ಇನ್ನೂ ಸಮರ್ಪಕವಾದ ಔಷಧಗಳು ಇಲ್ಲವಾದರೂ ಜೀವಕ್ಕೆ ಏನೂ ಅಪಾಯವಿಲ್ಲ. ನೀವೇ ಆದಷ್ಟೂ ತಾಳ್ಮೆಯಿಂದ ಅವರನ್ನು ನೋಡಿಕೊಳ್ಳಬೇಕು"

ಬಿಳಿಯಬಣ್ಣವೊಂದರ ಮಧ್ಯೆ ಕಪ್ಪು ಬಳಿದಂತೇ, ಹಾಲಿನ ಪಾತ್ರೆಯಲ್ಲಿ ಹಾಲಾಹಲದ ಹನಿ ಬಿದ್ದಂತೇ ಆಗಿಬಿಟ್ಟಿತ್ತು ಆ ಸಂಸಾರದಲ್ಲಿ. ಹತ್ತಾರು ಬರಸಿಡಿಲು ಒಮ್ಮೆಲೇ ಅಪ್ಪಳಿಸಿದಂತೇ ಆಗಿ ಶಾಲಿನಿಗೆ ದಿಕ್ಕೇ ತೋಚದಂತಾಗಿತ್ತು. ಮಕ್ಕಳು ಬೇರೇ ಚಿಕ್ಕವರು. ಅವರನ್ನು ಸಂಭಾಳಿಸಿ ಓದಿಸಬೇಕು, ಮನೆವಾರ್ತೆ ಕೆಲಸವಾಗಬೇಕು, ಏಳಲಾರದ ಗಂಡನಿಗೆ ಉಪಚರಿಸಬೇಕು ....ಇದೆಲ್ಲಕ್ಕಿಂತ ಮಿಗಿಲಾಗಿ ದುಡಿಮೆಗೆ ಒಂದು ದಾರಿ ಬೇಕು. ಅವಡುಗಚ್ಚಿ ಬಂದ ಪರಿಸ್ಥಿತಿಯನ್ನು ತನ್ನ ಹಸ್ತದಲ್ಲೇ ಬಂಧಿಸಿ ಓದನ್ನು ಭಾಗಶಃ ಅಂಚೆತೆರಪಿನ ವಿಶ್ವವಿದ್ಯಾಲಯದ ಮೂಲಕ ಮುಗಿಸಿದಳು. ಹಾಗೆ ಮುಗಿಸುವ ಸಮಯ ತನ್ನಲ್ಲಿ ಇದ್ದ ಬಂಗಾರದ ವಡವೆಗಳನ್ನೂ ಮಾರಬೇಕಾಗಿ ಬಂತು. ಅವರಿವರ ಕಚೇರಿಯಲ್ಲಿ ಪಾರ್ಟ್ ಟೈಮ್ ನೌಕರಿ ನಿಭಾಯಿಸಿ ದುಡಿಯುತ್ತಿದ್ದಳು. ಅದೂ ಸಾಲದಾಗ ಸಿರಿವಂತರ ಮನೆಗಳಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸಮಾಡಿ ಅಂತೂ ತನ್ನ ವಿದ್ಯಾಭ್ಯಾಸ ಒಂದು ಹಂತಕ್ಕೆ ಬಂದಾಗ ದಿನಪತ್ರಿಕೆಯ ಜಾಹೀರಾತು ನೋಡಿ, ಅರ್ಜಿಹಾಕಿಕೊಂಡು ಶಾಲೆಯ ಅಧ್ಯಾಪಕಿಯಾಗಿ ಸೇರಿಕೊಂಡಳು. ಅಲ್ಲಿಂದಾಚೆಗೆ ಅವಳ ದಿನಚರಿಯೇ ಬದಲಾಯಿತು.

ಸರಕಾರೀ ನೌಕರಿಯೊಂದು ಸಿಕ್ಕಿತ್ತು. ಊಟಕ್ಕೆ ತೊಂದರೆಯಿರಲಿಲ್ಲ. ಆದರೆ ಹರೆಯದ ಕೂಗು ಆ ಬಯಕೆಗಳು, ಆ ಹಲವು ಕನಸುಗಳು ಅವೆಲ್ಲಾ ಹಾಗೇ ಮುರುಟಿಹೋದವು. ಆಗಾಗ ಆಗಾಗ ಸಹೋದ್ಯೋಗೀ ಗಂಡಸರ ಕಿರುಕುಳ ತಪ್ಪಲಿಲ್ಲ. ಸಮಾಜದ ಅವಹೇಳನಕಾರೀ ಮಾತುಗಳನ್ನೂ ಸಹಿಸಿದಳು ಶಾಲಿನಿ. ಮಕ್ಕಳನ್ನೂ ಓದಿಸುತ್ತಾ, ಗಂಡನನ್ನೂ ಪ್ರೀತಿಯಿಂದ ಸೇವೆಗೈಯ್ಯುತ್ತಾ ಊರಿಂದೂರಿಗೆ ಆಗಾಗ ವರ್ಗವಾಗಿ ಹೋಗುತ್ತಾ ಕಾವೂರಿಗೆ ಬಂದು ಹತ್ತು ವರುಷಗಳೇ ಕಳೆದಿದ್ದವು. ಅಲ್ಲಿಗೆ ಅವಳ ಕೆಲಸದ ವರ್ಷಗಳ ಮುಕ್ತಾಯ ಇನ್ನೇನು ಹತ್ತೇ ವರ್ಷವಿದ್ದುದರಿಂದ ಊರ ಸಹೃದಯರು ಅವಳನ್ನು ಅಲ್ಲೇ ಇರಿಸಿಕೊಳ್ಳುವ ಪ್ರಯತ್ನಮಾಡಿದ್ದರು. ಕಾವೂರ ಜನರಿಗೆ ದೈವಾಂಶ ಸಂಭೂತಳಂತೇ ಕಾಣಿಸಿದ ಉಚ್ಚಕುಲಪ್ರಸೂತ ಶಾಲಿನಿ ಮಕ್ಕಳಿಗೆಲ್ಲಾ ಅಮ್ಮ, ಅಕ್ಕ, ಚಿಕ್ಕಮ್ಮ ಹೀಗೆಲ್ಲಾ ಇದ್ದಂತೇ ಭಾಸವಾಗುತ್ತಿತ್ತು. ತನ್ನ ಜೀವನದಲ್ಲಿ ತಾನೇನೂ ಸಾಧಿಸಲಾಗದಿದ್ದರೂ ತನ್ನಿಂದ ಅಕ್ಷರ ಕಲಿತ ಮಕ್ಕಳಾದರೂ ಉನ್ನತ ಮಟ್ಟದಲ್ಲಿ ಬೆಳಗಲಿ ಎಂಬ ಇಚ್ಛೆ ಶಾಲಿನಿಯದ್ದಾಗಿತ್ತು.

ಬಂಧಿಯಾದರೂ ಜಗದಿ ಬಂಧನವ ಕಿತ್ತೆಸೆದು
ನಿಂದನೆಗಳನೇಕವನು ಹಿಂದೆ ದೂಡುತಲೀ
ನಂದಿಹೋಗದ ನಂದಾದೀಪವನು ತಾ ಬೆಳಗಿ
ಇಂದು ಹೊರಟಿರಿ ನಿಮಗೆ ಶುಭದಾ ವಿದಾಯ

----ಹುಡುಗಿ ಹಾಡುತ್ತಾ ಹಾಡಿನ ಕೊನೆಯ ಚರಣಕ್ಕೆ ಬರುವ ವೇಳೆಗೆ ಶಾಲಿನಿಗೆ ತನ್ನ ಇಲ್ಲಿಯವರೆಗಿನ ಬದುಕಿನ ಸಿಂಹಾವಲೋಕನವಾಗಿತ್ತು. ಸರಕಾರೀ ನಿರ್ದೇಶನದಂತೇ ವಯಸ್ಸಿನ ಮಿತಿ ದಾಟಿದ್ದರಿಂದ ಮುಪ್ಪಿನಾವಸ್ಥೆಗೆ ಕಾಲಿಡುವ ಶಾಲಿನಿಗೆ ನಿವೃತ್ತಿ ಅನಿವಾರ್ಯವಾಗಿತ್ತು. ಮಕ್ಕಳ ಪ್ರೀತಿಯನ್ನು ಮರೆತು ತಾನೆಂದೂ ದೂರಹೋಗಲಾಅದ ಸ್ಥಿತಿ ಅವಳದಾದರೂ, ಗ್ರಾಮಸ್ಥರಿಗೆ ಅವಳು ಇನ್ನೂ ತಮ್ಮ ಮಕ್ಕಳಿಗೆ ಬೋಧಿಸಲಿ ಎಂಬ ಹತ್ತಿಕ್ಕಲಾರದ ಅನನ್ಯ ಅನಿಸಿಕೆ ಇದ್ದರೂ ನಿರ್ವಾಹವಿಲ್ಲದ ದಿನ ಬಂದೇಬಿಟ್ಟಿತ್ತು. ಊರ ಜನರೆಲ್ಲಾ ಸುಮಾರು ಸಾವಿರಾರು ಮಂದಿ ಸೇರಿದ್ದರು. ಎಲ್ಲರ ಸಮ್ಮುಖದಲ್ಲಿ ಅಂದು ಶಾಲಿನಿಗೆ ಸನ್ಮಾನ ನಡೆಸಲ್ಪಟ್ಟಿತು. ಊರ ಜನ ಮೈಯ್ಯೆಲ್ಲಾ ಕಿವಿಯಾಗಿ ಶಾಲಿನಿಯ ಜೀವನಗಾಥೆಯನ್ನು ಅವಳ ಬಾಯಿಂದಲೇ ಕೇಳಿ ಣ್ಣೀರ್ಗರೆದರು. ಸರಕಾರ ಸೇವೆ ನಿಲ್ಲಿಸುವಂತೇ ತಿಳಿಸಿದರೂ ಸಾರ್ವಜನಿಕರು ಅವಳ ಸೇವೆಯನ್ನು ಇನ್ನೂ ಹಲವು ವರ್ಷ ನಡೆಸಿಕೊಡುವಂತೆಯೂ ಅದಕ್ಕೆ ಪ್ರತಿಫಲವಾಗಿ ಊರವರೇ ಅವಳ ಸಂಬಳವನ್ನು ಭರಿಸುತ್ತೇವೆಂದೂ ವಿನಂತಿಸಿದರು. ಜನರ ಪ್ರೀತಿವಿಶ್ವಾಸಗಳಿಗೆ ಮರುಗಿದ ಶಾಲಿನಿ ತನ್ನಿಂದಾಗುವಷ್ಟು ಕಾಲ ಊರವರಿಂದ ಚಿಕ್ಕಾಸನ್ನೂ ಪಡೆಯದೇ ಪ್ರೀತಿಯಿಂದ ಇನ್ನೂ ಹಲವು ಕಿತ್ತೂರು ರಾಣಿಯರನ್ನು ಸೃಜಿಸಿದಳು.