ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 13, 2013

ಹೊಸ ತಾಳಿಗರಿಯ ಘಮಲಿನ ಗೂಡಲ್ಲಿ ಹಚ್ಚಗೆ ಬೆಚ್ಚಗೆ ಮಲಗಿದ್ದ ನೆನಪು!

 ಚಿತ್ರಋಣ: ಅಂತರ್ಜಾಲ 
ಹೊಸ ತಾಳಿಗರಿಯ ಘಮಲಿನ ಗೂಡಲ್ಲಿ ಹಚ್ಚಗೆ ಬೆಚ್ಚಗೆ ಮಲಗಿದ್ದ ನೆನಪು!

ಧರ್ಮಸ್ಥಳದಲ್ಲಿ, ದೇವಳದ ಎದುರಿನ ದೂರದ ಜಾಗಗಳಲ್ಲಿ, ಇರುವ ತೆಂಗಿನಮರಗಳಿಗೆ ಮುಳ್ಳು ಕಟ್ಟುಹಾಕಿದ್ದಾರೆ!! ಸಕಲವನ್ನೂ ಕಾಯುತ್ತಾನೆ-ಕೇಳುತ್ತಾನೆ ಮತ್ತು ಪರಾಂಬರಿಸಿ ನೋಡಿಕೊಳ್ಳುತ್ತಾನೆ ಎಂಬ ಮಂಜುನಾಥನ ಸನ್ನಿಧಿಯಲ್ಲೇ ಕಳ್ಳರೂ ಇದ್ದಾರೆ ಎಂಬುದಕ್ಕೆ ಇದು ಉದಾಹರಣೆಯಾಗುತ್ತದೆ.[ಕಳ್ಳರ ಕರ್ಮಫಲವನ್ನು ಅವರು ಆಮೇಲೆ ಅನುಭವಿಸುತ್ತಾರೆ, ಆದರೆ ನಮ್ಮ ಕರ್ತವ್ಯವನ್ನು ನಾವು ಮಾಡಲೇಬೇಕು.] ಇದು ನನ್ನ ಚಿಕ್ಕಂದಿನಲ್ಲಿ ನಾನು ಅಲ್ಲಿ ಕಂಡಿದ್ದು; ಈಗ ಅಷ್ಟಾಗಿ ದೃಷ್ಟಿ ಹಾಯಿಸಲಿಲ್ಲ. ಹಾಗಾದರೆ ಕೋಟ್ಯಂತರ ಜನ ನೆರೆನಂಬಿದ ದೇವಳದ ಅಸ್ಥಿತ್ವವೇ ಸುಳ್ಳೇ? ಅಲ್ಲ. ದೇವರ ಸಾನ್ನಿಧ್ಯವಂತೂ ಇದ್ದೇ ಇದೆ. ದೇವರ ಸಾನ್ನಿಧ್ಯವಿರದ ಜಾಗ ಯಾವುದು ಈ ಜಗದಲ್ಲಿ? ಎಲ್ಲೆಡೆಗೂ ಇದ್ದೇ ಇದೆ. ನಾವು ಕಣ್ಮುಚ್ಚಿ ಹಾಲು ಕುಡಿದರೂ, ಕದದ ಮರೆಯ ಮೂಲೆಯಲ್ಲಿ ಕದ್ದುನಿಂತು ಬಾಳೇಹಣ್ಣು ತಿಂದರೂ ಅದು ಜಗನ್ನಿಯಾಮಕನ ಆವಗಾಹನೆಗೆ ಬರದೇ ಹೋಗುವುದಿಲ್ಲ. ಅಂದಮೇಲೆ ಕಾಶಿ, ಕಾಂಚಿ, ತಿರುಪತಿ, ಧರ್ಮಸ್ಥಳ ಇಂತಹ ಕ್ಷೇತ್ರಗಳ ಅಗತ್ಯತೆ ಎಷ್ಟು? ಇದಕ್ಕೆ ಉತ್ತರಿಸುವುದು ಸಾಮಾನ್ಯರಿಗೆ ಆಗುವ ಕೆಲಸವಲ್ಲ! ಹಿಂದಿನ ತಪೋವನಗಳಲ್ಲಿನ ಸಾಧಕ ಶ್ರೇಷ್ಠರು, ತಮ್ಮ ತಪಸ್ಸಾಧನೆಯಿಂದ ಪಡೆದ ಸಿದ್ಧಿಗಳಿಂದ, ತಾವು ತಂಗಿದ್ದ ಭೂಪ್ರದೇಶಗಳಲ್ಲಿ ವಿಶ್ವಂಭರನನ್ನು ಒಂದೊಂದು ರೂಪದಲ್ಲಿ ಆರಾಧಿಸಿದರು; ಶಿವನೋ ಕೇಶವನೋ, ಗಣಪನೋ ಸ್ಕಂದನೋ ರೂಪ ಯಾವುದೇ ಆದರೂ ಮೂಲ ಒಂದೇ-ಅದು ಅಮೂರ್ತರೂಪ ಎಂಬುದು ಸರ್ವಸಮ್ಮತ ಅಭಿಪ್ರಾಯವಾಗಿದೆ; ಇದನ್ನೇ ಆಧ್ಯಾತ್ಮ ಶಿಖರದ ಉತ್ತುಂಗಕ್ಕೇರಿದವರೂ ನಮಗೆ ತಿಳಿಸಿದ್ದಾರೆ. ಹೀಗಾಗಿ ಹಿಂದೆ ಕಾಲಕಾಲಕ್ಕೆ, ಕಾರಣಾಂತರಗಳಿಂದ ಕೆಲವು ಭೂಭಾಗಗಳು ದೈವತ್ವದ ಪ್ರಖರತೆಯನ್ನು ಪಡೆದವು. ಅಂತಹ ಕ್ಷೇತ್ರಗಳು ಜನಸಾಮಾನ್ಯರ ದುಃಖ-ದುಮ್ಮಾನಗಳಿಗೂ ಅಹವಾಲುಗಳಿಗೂ ಸ್ಪಂದಿಸುವ, ಇಳೆಯಲ್ಲಿನ ’ಕೌಂಟರ್’ ಗಳಾಗಿ ಕೆಲಸಮಾಡಿವೆ-ಮಾಡುತ್ತಿವೆ.   

ಚಿಕ್ಕವರಿರುವಾಗ ನಾವು, ಅಜ್ಜ ಹೊಸದಾಗಿ ಖರೀದಿಸಿದ ಜಮೀನಿಗೆ ಹೋಗುತ್ತಿದ್ದೆವು. ಅದನ್ನು ನೋಡಿಕೊಳ್ಳುವುದಕ್ಕೆ ಅತ್ತೆ-ಮಾವ ಮನೆಮಾಡಿಕೊಂಡಿದ್ದರು. [ಈಗ ಆ ಜಮೀನಿನ ಅರ್ಧಕ್ಕಿಂತ ಹೆಚ್ಚಿನಭಾಗ ಅವರಿಗೂ ಸಂದಿದೆ ಬಿಡಿ.]ನಮಗೋ ರಜಾದಿನಗಳಲ್ಲಿ ಅತ್ತೆಯ ಮನೆಗೆ ಹೋದ ಹಾಗೂ ಆಯ್ತು ಮತ್ತು ಜಮೀನಿಗೂ ಹೋದ ಹಾಗೂ ಆಯ್ತು ಎಂಬ ಅನಿಸಿಕೆ; ಮೇಲಾಗಿ ಅಲ್ಲಿ ಆಗ ಅದು ಕಗ್ಗಾಡು-ರಸ್ತೆಗಿಸ್ತೆ ಎಲ್ಲ ಇರಲೇ ಇಲ್ಲ. ಮುಖ್ಯರಸ್ತೆಯಿಂದ ೪ ಕಿ.ಮೀ. ಕಾಡಿನ ದಾರಿಯಲ್ಲಿ ಸಾಗಬೇಕಿತ್ತು. ದಾರಿಯಲ್ಲಿ ಅಲ್ಲಲ್ಲಿ ಸಿಗುವ ಎತ್ತಿನಗಾಡಿಗಳು[ಯಾರೋ ನಮ್ಮಂತೇ ಹಳ್ಳಿಗರವು-ಭಾರದ ಸಾಮಾನುಗಳನ್ನು ಸಾಗಿಸಲು ಬೇಕಲ್ಲಾ?]ಎತ್ತುಗಳ ಕೊರಳ ಗಂಟೆಗಳ ನಿನಾದ ಸಾಕಷ್ಟು ದೂರ ಕೇಳಿಸುತ್ತಿತ್ತು. ಕಲ್ಲುಗಳನ್ನು ಎಡವುತ್ತಾ, ಅಡ್ಡಡ್ಡ ಸಿಗುವ ಚಿಕ್ಕ-ಪುಟ್ಟ ಹರಿವ ತೊರೆಗಳನ್ನು ನೋಡುತ್ತಾ, ನೀರಿಗೆ ಕಲ್ಲೆಸೆದು ಕೆಲಕಾಲ ಆಟವಾಡುತ್ತಾ, ಕಾಡಿನ ಮಹಾಮಹಾ ಮರಗಳ ಟೊಂಗೆಗಳಮೇಲೆ ಕುಳಿತು-ಜೋತು ಆಟವಾಡುವ ವಿವಿಧ ಹಕ್ಕಿ-ಪಕ್ಷಿ-ಅಳಿಲು-ಕೇಶಳಿಲುಗಳನ್ನು ನಮ್ಮಷ್ಟಕ್ಕೇ ಅಣಕಿಸುತ್ತಾ-ಕರೆಯುತ್ತಾ, ಆ ದಾರಿಯಲ್ಲಿ ನಡೆದು ಹೋಗುವುದು ಅಭ್ಯಾಸವಾಗಿತ್ತು. ತಲೆಯಮೇಲೆ ೧೨-೧೫ ಕೆಜಿ ಭಾರದ ಆಹಾರ ಧಾನ್ಯಗಳ ಮೂಟೆಗಳನ್ನು ಹೊತ್ತಿದ್ದರೂ ನಮಗದರ ಪರಿವೆಯೇ ಇರದಷ್ಟು  ನಿಸರ್ಗ ಸುಖವನ್ನು ಉಣ್ಣುತ್ತಿದ್ದೆವು! ನಮ್ಮ ದಾರಿಯಲ್ಲಿ ಅಲ್ಲಲ್ಲಿ ಜಿಂಕೆಗಳು, ಕಾಡುಹಂದಿಗಳು, ಕಾಡುಕುರಿಗಳು, ಕಡವೆ-ಸಾರಂಗಗಳು, ನವಿಲು-ಕೆಂಬೂತಗಳು ಎಲ್ಲವೂ ಸಿಗುತ್ತಿದ್ದವು; ಮನುಷ್ಯರನ್ನು ಕಂಡತಕ್ಷಣ ಭಯವಿಹ್ವಲವಾಗಿ ಓಡುತ್ತಿದ್ದವು, ಪೊದೆಗಳ ನಡುವೆ ನುಸುಳಿ ಕಣ್ಮರೆಯಾಗುತ್ತಿದ್ದವು!  

ಮಣ್ಣಿನ ಗೋಡೆಗಳ ಪುಟ್ಟ ಮನೆಯಲ್ಲಿ ಕೋಣೆಗಳ ಪ್ರತ್ಯೇಕತೆ ತೀರಾ ಇರಲಿಲ್ಲ. ಲೆಕ್ಕಕ್ಕೆ ಒಂದಿದ್ದ ನೆನಪು-ಅದು ಹೆಂಗಸರಿಗೆ ಬಟ್ಟೆ ಇಟ್ಟುಕೊಳ್ಳಲಿಕ್ಕೆ ಮತ್ತು ತೊಟ್ಟುಕೊಳ್ಳಲಿಕ್ಕೆ ಬೇಕಾಗಿ ಮಾಡಿದ್ದಿರಬೇಕು. ಮಣ್ಣಿನ ಗೋಡೆಗಳ ಮನೆಗೆ ಕಾಡಿನ ವಾಟೆ ಮರಗಳ ಉದ್ದದ ಗೂಟಗಳನ್ನು ಕಡಿದು ಅದನ್ನು ಛಾವಣಿಗೆ ಆಧಾರವಾಗಿ ಕಟ್ಟಿದ್ದರು. ಜೊತೆಗೆ ಬಿದಿರಿನ ಗಳಗಳೂ ಮೇಳೈಸಿದ್ದವು. ವರ್ಷಕ್ಕೊಮ್ಮೆ ಬೇಸಿಗೆಯ ಕೊನೆಯೊಳಗೆ ’ಮನೆ ಹೊದಿಕೆ’ ಎಂಬ, ಛಾವಣಿಯ ಮುಖ್ಯವಸ್ತುವನ್ನು ಬದಲಾಯಿಸುವ ಕ್ರಮ; ವರ್ಷವಿಡೀ ಮಳೆ-ಚಳಿ-ಬಿಸಿಲುಗಳಿಗೆ ಮೈಯ್ಯೊಡ್ಡಿ, ತೂತುಬಿದ್ದು ಸೊರಗಿ ಸೋರುತ್ತಿರುವ ಹಳೆಯದಾದ ತಾಳಿಮಡಲು[ತಾಳಿಗರಿ]ಗಳನ್ನು ಬದಲಿಸಿ ಹೊಸ ತಾಳಿಮಡಲುಗಳನ್ನು ಹೊದೆಸುವುದಕ್ಕೆ ಆ ಹೆಸರು. ಪೂರ್ವಭಾವಿಯಾಗಿ: ಹಿಂದಿನದಿನವೇ ಕಟ್ಟುಮಸ್ತಾದ ಗಂಡು ಕೆಲಸಿಗರು ಬೆಳಗಿನಜಾವದಲ್ಲೇ ಎದ್ದುಹೋಗಿ, ಚೆನ್ನಾಗಿ ಬಲಿತ ತಾಳಿಮಡಲುಗಳನ್ನು ಕಡಿದು ಹೊರೆ ಕಟ್ಟಿಕೊಂಡು ತಂದು ಮನೆಯ ಅಂಗಳದಲ್ಲಿ ಇಟ್ಟಿರುತ್ತಿದ್ದರು. ಹೊಸದಾಗಿ ತಂದ ತಾಳಿಮಡಲುಗಳ ಕಸರನ್ನು ತೆಗೆದು ಒಪ್ಪಗೊಳಿಸಿ ಛಾವಣಿಯ ಮೇಲ್ಗಟ್ಟನ್ನೇರಿದವರಿಗೆ ಕೆಳಗೆ ನಿಂತು ಕೆಲವರು ಕೊಟ್ಟರೆ, ಮೇಲೆ ನಿಂತವರು ಅದನ್ನು ವ್ಯವಸ್ಥಿತಕ್ರಮದಲ್ಲಿ ಹರಡಿ, ಬೆತ್ತದ ದಾರಗಳಿಂದ ಭದ್ರಪಡಿಸುತ್ತಿದ್ದರು. ಮನೆಹೊದಿಕೆ ಮುಗಿದ ಮೇಲೆ ಆ ದಿನ ಮನೆಹೊದಿಕೆಯಲ್ಲಿ ತೊಡಗಿದ ಎಲ್ಲರಿಗೂ ಪಾಯಸದ ಔತಣ!

ಹೊಸದಾಗಿ ಸಿಂಗರಿಸಿಕೊಂಡು ಮದುಮಗಳಂತೇ ಕಾಣುವ ಮನೆಯಲ್ಲಿ, ಆ ಕೆಲವು ರಾತ್ರಿಗಳಲ್ಲಿ ಹೊಸ ತಾಳಿಗರಿಯ ನವಿರಾದ ಘಮಲು ಮೂಗಿಗೆ ಬಡಿಯುತ್ತಿತ್ತು. ಬಿರುಬೇಸಿಗೆಯಲ್ಲೂ ಅಲ್ಲಿ ಕಾಡಿನ ತಂಪಾದ ವಾತಾವರಣವಿರುತ್ತಿದ್ದ ಆ ಕಾಲಮಾನದಲ್ಲಿ, ಹೊಸ ತಾಳಿಗರಿಯ ಘಮಲಿನ ಗೂಡಿನಲ್ಲಿ ಹಚ್ಚಗೆ ಬೆಚ್ಚಗೆ ಮಲಗಿದ್ದ ನೆನಪು ಈಗಲೂ ಆಗುತ್ತದೆ. ರಾತ್ರಿ ಹೆಚ್ಚುತ್ತಿದ್ದಂತೇ ವನ್ಯಮೃಗಗಳ ಕೂಗುಗಳೂ, ನಿಶಾಚರಿ ಹಕ್ಕಿಗಳ ಕೂಗುಗಳೂ ಕೇಳಿಬರುತ್ತಿದ್ದವು. ಅಕ್ಕ-ಪಕ್ಕದ ಹೊಲ-ಗದ್ದೆಗಳಲ್ಲಿ, ಬೆಳೆಗಳನ್ನು ಕಾಯಲು ಹಾಕಿದ್ದ ಮಾಳಗಳಲ್ಲಿ ಮಲಗಿದ ರೈತರು, ಬೆಳೆ ತಿನ್ನಲು ಬರುವ ಹಂದಿ-ಕಡವೆ ಮೊದಲಾದ ಪ್ರಾಣಿಗಳನ್ನು ಓಡಿಸಲು ಆಗಾಗ ಖಾಲಿ ಡಬ್ಬಗಳನ್ನೋ, ಒಣಮರದ [ಕತ್ತರಿಸಿದ] ಪೊಳ್ಳು ಬೊಡ್ಡೆಗಳನ್ನೋ ಬಡಿಯುತ್ತಾ ’ಹುಯ್ಕೋ’ ಹಾಕುತ್ತಿದ್ದರು. ಆ ಸದ್ದಿಗೇ ಜಮೀನಿಗೆ ಬರುವ ಕಾಡಾಡಿ ಪಶು-ಪಕ್ಷಿಗಳು ಮರಳಿ ಹೋಗಿಬಿಡುತ್ತಿದ್ದವು! ಇಪ್ಪತ್ತೈದು ವರ್ಷಗಳ ನಂತರದಲ್ಲಿ ಈಗ ನೋಡಿದರೆ ನನ್ನ ಬಾಲ್ಯವೇ ಒಂದು ಕಥೆ! ನನ್ನ ಬಾಲ್ಯದ ದಿನಗಳನ್ನು ನೆನೆನೆನೆದು ಅದೆಷ್ಟೋ ಲೇಖನಗಳನ್ನು ಬರೆದು ಮೆಲುಕುಹೊಡೆದಿದ್ದೇನೆ. ಆಗ ಕಾಡಿದ್ದಲ್ಲಿ ಈಗ ಕಾಡಿಲ್ಲ!! ಕಾಡೆಲ್ಲಾ ನಾಡಾದ ಪರಿಸರದಲ್ಲಿ ಗಿಳಿ-ಗೊರವಂಕ-ಕೋಗಿಲೆ-ನವಿಲು-ಅಳಿಲು-ಕೇಶಳಿಲು[ಅತಿ ಅಪರೂಪದ ಕರ್ನಾಟಕದ ಪಶ್ಚಿಮ ಘಟ್ಟದ ತಳಿ]ಗಳಿಲ್ಲ! ಜಿಂಕೆ-ಕಡವೆ-ಸಾರಂಗ ಇವೆಲ್ಲಾ ದೂರ ಬಹುದೂರವಿರುವ ಅಳಿದುಳಿದ ಕಾಡಿನಲ್ಲೆಲ್ಲೋ ಮರೆಯಾಗಿವೆ! ನಾವು ಕಾಲ್ನಡಿಗೆಯಲ್ಲಿ ನಡೆದ, ಕಾನನದ ದಟ್ಟ ಪೊದೆಗಳ ಬೆಟ್ಟಗಳ ನಡುವಿನ ಕಾಲುಹಾದಿಯಲ್ಲಿ ಹರಿವ ತೊರೆಗಳಿಲ್ಲ! ಹೇಳೆಬೇಕೇ? ಕಾಲುಹಾದಿಯೇ ಈಗ ದಾಮರು ರಸ್ತೆಯಾಗಿದೆ-ಮನೆಗಳಿಗೆ ಹಂಚುಗಳು ಹೊದೆಸಲ್ಪಟ್ಟಿವೆ, ಅಲ್ಲಲ್ಲಿ ತಾರಸಿ ಮನೆಗಳೂ ತಲೆ ಎತ್ತುತ್ತಿವೆ!!

ಕೇವಲ ಇಪ್ಪತ್ತೈದು ವರ್ಷಗಳ ಅಂತರದಲ್ಲಿ ಕಾಡಿನ ಭಾಗವೊಂದು ಇತಿಹಾಸದ ಭಾಗವಾಗಿ ಅಳಿದುಹೋಗಿದ್ದರೆ, ಅದಕ್ಕೆ ಮನುಷ್ಯರಾದ ನಮ್ಮೆಲ್ಲರ ’ಕೊಡುಗೆ’ಗಳೇ ಕಾರಣವೆಂದರೆ ತಪ್ಪೇ? ಹೀಗಿರುವಾಗ  ವೇದಗಳ ಕಾಲದಿಂದಾರಭ್ಯ ಇಲ್ಲೀವರೆಗೂ ಪ್ರತಿನಿತ್ಯ ಲಕ್ಷಾಂತರ ಜನರಿಗೆ ತೆರೆದುಕೊಳ್ಳುವ ಕಾಶಿ, ಕಾಲದ ಗತಿಯ ಸಹಜತೆಯಲ್ಲಿ ತನ್ನ ಮೂಲಸ್ವರೂಪದಲ್ಲಿ ಅನೇಕ ಅಳವಡಿಕೆಗಳನ್ನು ಮಾಡಿಕೊಳ್ಳುತ್ತಾ ಬಂದು ಇಂದಿಗೂ ಸ್ಥಿರವಾಗಿದೆ! ಬರುವ ಜನರೆಲ್ಲಾ ತಮ್ಮ ತಮ್ಮ ಕೆಲಸಕ್ಕಷ್ಟೇ ಬರುವಾಗ ಅಲ್ಲಿನ ಮೂಲಸೌಕರ್ಯಗಳ ಬಗ್ಗೆ ಚಿಂತಿಸಲು ಜನರಿಗೆ ಪುರ್ಸೊತ್ತಾದರೂ ಸಿಗುತ್ತದೆಯೇ? ಇಲ್ಲ! ಕರ್ನಾಟಕದ ನಮ್ಮ ಗೋಕರ್ಣದಲ್ಲೇ ಮಾಲಿನ್ಯವನ್ನು ನಿಯಂತ್ರಿಸುವುದು ಕಷ್ಟವಾದಾಗ, ಶ್ರೀಮದ್ ರಾಮಚಂದ್ರಾಪುರಮಠದವರು [ಹಿಂದೆ ರಾಜಶಾಸನ ಬದ್ಧವಾಗಿ ಗೋಕರ್ಣ ಅವರದ್ದೇ ಆಗಿತ್ತು ಎಂಬುದು ಗಮನಿಸಬೇಕಾದ ಅಂಶ!]ಅದನ್ನೀಗ ವಹಿಸಿಕೊಂಡು ಸುಸ್ಥಿತಿಗೆ ತರುವತ್ತ ಶ್ರಮಿಸುತ್ತಿದ್ದಾರೆ. ಕಾಶಿಯಾದರೆ ಹಾಗಲ್ಲ; ಅದು ಕೇವಲ ಕರ್ನಾಟಕದ್ದಲ್ಲ, ಇಡೀ ದೇಶದ ಜನರನ್ನು ಸೂಜಿಗಲ್ಲಿನಂತೇ ಆಕರ್ಷಿಸುವ ಪ್ರದೇಶ. ಅಲ್ಲಿ ಕೈಂಕರ್ಯವಿಲ್ಲದ ದಿನವೇ ಇಲ್ಲ!  ಯಾರೋ ಬರುತ್ತಿರುತ್ತಾರೆ-ಯಾರೋ ಹೋಗುತ್ತಿರುತ್ತಾರೆ. ಅತ್ಯಂತ ಪುರಾತನವಾದ ವಿಶ್ವವಿದ್ಯಾನಿಲಯ ಅಲ್ಲಿನ ಹೆಗ್ಗುರುತು. ಅಂದಿನ ಕಾಲದಲ್ಲಿ ಪಾಂಡಿತ್ಯ ಸಂಪಾದನೆಗೆ ಕಾಶಿಗೇ ಜನ ತೆರಳುತ್ತಿದ್ದರು. ದೊಡ್ಡ ದೊಡ್ಡ ಪಂಡಿತರೂ ವಿದ್ವಜ್ಜನರೂ ಬದುಕಿ-ಬಾಳಿ, ಕಾಲಗರ್ಭದಲ್ಲಿ ಲೀನವಾಗಿ ಹೋದ ಜಾಗ ಕಾಶಿಯೆಂಬ ಪ್ರದೇಶ. 

ಅಂದಿನ ಕಾಲಮಾನದಲ್ಲಿ ಕಾಶಿಯೊಂದು ಸಮೃದ್ಧ ನಗರವಾಗಿತ್ತು. ವಾರಣಾ ಮತ್ತು ಅಸಿ ಎರಡೂ ನದಿಗಳು ತುಂಬಿ ಹರಿಯುತ್ತಿದ್ದ ಮಧ್ಯದ ಭೂಭಾಗ ವಾರಣಾಸಿ ಅಥವಾ ಕಾಶಿ. ಇನ್ನೊಂದೆಡೆ ಗಂಗೆಯೂ ಹರಿದು ಬಂದು ಸಿಗುತ್ತಿರುವುದರಿಂದಲೂ, ಕಾಶಿ ಅನೇಕ ತಪೋಧನರಿಗೆ ಹೇಳಿಮಾಡಿಸದಂತಿತ್ತು. ಕಾಶಿ ಪಟ್ಟಣವಾಗುವುದಕ್ಕಿಂತಲೂ ಮುಂಚೆ ಅಲ್ಲಿಯೂ ಕಾಡುಗಳಿದ್ದವು-ದಂಡಕಾರಣ್ಯಗಳಿದ್ದವು. ಕಾಡಿನ ಮಧ್ಯೆ ಹರಿಯುವ ಭಾಗೀರಥಿಯಲ್ಲಿ, ಋಷಿಪುಂಗವರು ಗಂಟೆಗಟ್ಟಲೆ ನಿಂತು ತಮ್ಮ ಸ್ನಾನ-ಧ್ಯಾನ-ಅರ್ಘ್ಯ-ಆಹ್ನಿಕಾದಿಗಳನ್ನು ನಡೆಸುತ್ತಿದ್ದರು. ಯುಗಯುಗಗಳಿಂದ ನಡೆದ ಪುಣ್ಯಕಾರ್ಯಗಳ ಫಲಶ್ರುತಿಯಾಗಿ ಕಾಶಿ ವಿಶೇಷ ದಿವ್ಯಶಕ್ತಿಯ ಪ್ರಭಾವಳಿಯಿಂದ ಶೋಭಿಸಿತು. ಮಾನವನ ಶರೀರದ ಸುತ್ತಲೂ ಒಂದು ಅಗೋಚರ ಪ್ರಭಾವಳಿಯಿದೆ ಎಂಬುದನ್ನು ಈಗೀಗ ವಿಜ್ಞಾನ ಒಪ್ಪಿಕೊಂಡಿದೆ; ಅದು ವ್ಯಕ್ತಿಯಿಂದ ವ್ಯಕ್ತಿಗೆ ಪ್ರತಿಶತ ಪರಿಮಾಣದಲ್ಲಿ ಹೆಚ್ಚುಕಮ್ಮಿ ಇರುತ್ತದೆ. ಪಾಪ-ಎಂಬುದನ್ನೇ ಮಾಡದ ಋಷಿಗಳ ಸುತ್ತ ಇದ್ದ ಪ್ರಭಾವಳಿಯನ್ನು ಯಾರೂ ಲೆಕ್ಕಹಾಕಲು ಸಾಧ್ಯವಿಲ್ಲವಿಲ್ಲಾ ಅಂಥಾ ಸಹಸ್ರ ಸಹಸ್ರ ಸಹಸ್ರ ಋಷಿಗಳು ತಮ್ಮ ಜೀವನದ ಬಹುಭಾಗವನ್ನು ಕಾಶಿಯೆಂಬ ಪ್ರದೇಶದಲ್ಲೇ ಕಳೆದರು. ಅಲ್ಲಿ ನಿತ್ಯವೂ ಸಜ್ಜನರ/ಮುನಿಜನರ ಸಂವಹನ ಸಮಿತಿ ಸಭೆ ಸೇರುತ್ತಿತ್ತು; ಮಾನವ ಜೀವನವನ್ನು ಉತ್ತಮ ಪಡಿಸುವ ಬಗ್ಗೆ ವೇದಗಳ ಅಳವಡಿಕೆಯನ್ನು ತರುವ ಕುರಿತು ಮಾತುಕತೆಗಳು ನಡೆಯುತ್ತಿದ್ದವು. ನಿಸ್ಪೃಹರಾದ ಮುನಿಜನರು ತಮ್ಮ ಮುಂದಿನ ಪೀಳಿಗೆಗಳ ಬಗ್ಗೆ ದೂರಾಲೋಚನೆಯಿಟ್ಟುಕೊಂಡು, ತಮ್ಮ ತಪಸ್ಸಿನಿಂದ ಗಳಿಸಿದ-ತಾವು ಸಲ್ಲಿಸಬಹುದಾದ ಅನರ್ಘ್ಯರತ್ನಗಳನ್ನು ವರ್ಗಾಯಿಸಿಕೊಡುವುದಕ್ಕಾಗಿ ಮಾರ್ಗೋಪಾಯಗಳನ್ನು ಕಂಡುಕೊಂಡು ಕಾಶಿಯನ್ನೇ ಕೇಂದ್ರವನ್ನಾಗಿ ಮಾಡಿಕೊಂಡರು; ಅದಕ್ಕೆ ಇನ್ನೂ ಹೆಚ್ಚಿನ ಕಾರಣಗಳಿವೆ ಬಿಡಿ.

ಕಾಶಿಯೇ ಮೋಕ್ಷಪ್ರದವೆಂದು ಅನುಭವವೇದ್ಯವಾದ ಅಂಶವನ್ನು ಅಂಥಾ ಮಹನೀಯರು ತಿಳಿಸಿಹೋದರು. ಅದು ಬಾಯಿಂದ ಬಾಯಿಗೆ ಹಬ್ಬುತ್ತಾ ನಿತ್ಯವೂ ದಾಖಲೆಯ ಜನಸಂದೋಹವೇ ಕಾಣತೊಡಗಿತು. ಮೇಲಾಗಿ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಕಾಶಿ ವಿಶ್ವನಾಥನ ನೆಲೆಯಾಗಿರುವುದರಿಂದ ಶಿವ-ಶಿವೆ-ಗಂಗೆಯರ ಸಂಪೂರ್ಣ ವಸತಿಯೇ ಅಲ್ಲಿದೆಯೆಂಬ ಭಾವನೆ ಜನರಲ್ಲಿ ಮನೆಮಾಡಿದೆ. ಕಾಶಿಯ ಬೀದಿಗಳುದ್ದಕ್ಕೂ ಅಲ್ಲಲ್ಲಿ ಆಯಾ ಕಾಲಘಟ್ಟದಲ್ಲಿ ಋಷಿಮುನಿಗಳು ದೇವಳಗಳನ್ನು ಸ್ಥಾಪಿಸಿದ್ದಾರೆ. ಬೀದೀ ಅಗಲೀಕರಣ, ನವನಾಗರಿಕತೆಯ ಅನುಸಂಧಾನ ಅಲ್ಲಿ ನಡೆದರೆ ಅಲ್ಲಿರುವ ದೇವಾಲಯಗಳನ್ನೇನು ಮಾಡುತ್ತೀರಿ? ಹೇಳಿಕೇಳಿ ದೇವಾಲಯಗಳ ನಗರಿ ಎಂದೇ ಕಾಶಿಯನ್ನು ಉಲ್ಲೇಖಿಸಿದ್ದಾರಲ್ಲಾ? ಕಾಶಿಯ ಅನೇಕ ದೇವಾಲಯಗಳಿಗೆ ಹೊಂದಿಕೊಂಡಂತೆಯೇ ಮನೆಗಳ ಸಮುಚ್ಛಯಗಳೂ ಇವೆ. ಕೆಲವು ಮನೆಗಳಂತೂ ಹಲವಾರು ಶತಮಾನಗಳದ್ದೇನೋ ಎಂಬಷ್ಟು ಹಳೆಯ ಮನೆಗಳು! ಅವರನ್ನೆಲ್ಲಾ ಎಲ್ಲಿಗೆ ಕಳಿಸೋಣ? ಇನ್ನು ಅಂಗಡಿ-ಮುಂಗಟ್ಟುಗಳು ಅಲ್ಲಿ ಹಾದಿಬೀದಿಗಳಲ್ಲಿ ಹುಟ್ಟುತ್ತಲೇ ಸಾಯುತ್ತಲೇ ಇರುತ್ತವೆ. ಬೀದಿಗಳಲ್ಲೇ ವಾಸಮಾಡುವ ಜನವೂ ಇದ್ದಾರೆ![ಬೆಂಗಳೂರಿನಲ್ಲಿಲ್ಲವೇ? ಮುಂಬೈಯ್ಯಲ್ಲಿಲ್ಲವೇ? ಕೊಲ್ಕತಾದಲ್ಲಿಲ್ಲವೇ? ದೆಹಲಿಯಲ್ಲಿಲ್ಲವೇ? ಚೆನ್ನೈಯಲ್ಲಿಲ್ಲವೇ? ಹಾಗೇ!] ಎಲ್ಲವೂ ಅಡ್ಜಸ್ಟೇಬಲ್. ಅಲ್ಲಿ ಅಂಗಡಿಗಳಲ್ಲೇ ತೂರಿಕೊಂಡು ಸಾಗಿಹೋಗಬೇಕಾಗುವುದು ನಮಗೆ ಮುಜುಗರವಾದರೂ ಅದು ಅಲ್ಲಿನ ಸಹಜ ಪದ್ಧತಿ. ಯಾರೂ ಯಾಕೆಂದು ಪ್ರಶ್ನಿಸುವುದಿಲ್ಲ, ಬೇಡಾ ಎನ್ನುವುದಿಲ್ಲ.  

’ಸುಲಿಗೆ’ ಎಂಬ ಮಾತನ್ನು ಕೇಳಿದೆ. ನಮ್ಮ ಮಹಾನಗರಗಳಲ್ಲಿ ತಲೆ ಎತ್ತಿರುವ ಅದೆಷ್ಟೋ ಬಹುಮಹಡಿ ಆಸ್ಪತ್ರೆಗಳಲ್ಲಿ, ಎಂಜಿನೀಯರಿಂಗ್-ಮೆಡಿಕಲ್ ಕಾಲೇಜುಗಳಲ್ಲಿ, ಇರುವಷ್ಟು ಹೆಚ್ಚಿನ ಪ್ರಮಾಣದ ಸುಲಿಗೆ ಅಲ್ಲಿಲ್ಲವೆಂಬುದನ್ನು ನಾಗರಿಕರಾದ ನಾವು ಕಣ್ಮುಚ್ಚಿ ಒಪ್ಪಬೇಕಾಗುತ್ತದೆ! ಅಲ್ಲಿ ಎಲ್ಲಾ ವೃತ್ತಿಯವರದೂ ಹಾಗೇನೆ; ಬರೇ ಫಂಡ-ಪುರೋಹಿತರಷ್ಟೇ ಅಲ್ಲ, ಅಲ್ಲಿನ ಕ್ಷೌರಿಕರಿಂದ ಹಿಡಿದು ನದಿಯಲ್ಲಿ ನಾವೆ ನಡೆಸುವ ಜನರೂ ಕೂಡ ಒಂದಕ್ಕೆ ಹತ್ತು ಕೇಳುವವರೇ. ೧೯೪೩ನೇ ಇಸವಿಯಲ್ಲಿ ಅಲ್ಲಿಗೆ ಯಾತ್ರೆ ಹೋಗಿದ್ದ ನನ್ನ ಪರಿಚಿತರೊಬ್ಬರಿಗೆ ಈಗ ೯೦ನೇ ವಯಸ್ಸು. ಅವರು ಹೇಳಿದರು: "ನಾವು ದೋಣಿಯಲ್ಲಿ ಹೋಗಬೇಕೆಂದರೆ ಆತ ೧೧ ರೂಪಾಯಿ ಕೊಡಿ ಎಂದ. ನಾವು ಮರಳಿ ಹೊರಟೆವು. ನಾಲ್ಕೇ ಜನ ಇದ್ದೆವು. ನಾವು ಹೊರಟಮೇಲೆ ನಮ್ಮನ್ನು ಪುನಃ ಕರೆದು ತಲಾ ಒಂದೊಂದು ರೂಪಾಯಿ ಕೊಡಿ ಎಂದ. ತೆಗೆದುಕೊಂಡು ಹೋಗಿ ಅಲ್ಲಿನ ಕೆಲಸಮುಗಿದಮೇಲೆ ಮರಳಿ ತಂದುಬಿಟ್ಟು ನಾಲ್ಕು ರೂಪಾಯಿ ತೆಗೆದುಕೊಂಡ. ಹೀಗೇ ಅಲ್ಲಿ ಬಾರ್ಗೇನ್ ಮಾಡಬಹುದು, ಪುರೋಹಿತರ ದಕ್ಷಿಣೆಯಲ್ಲೂ ಬಾರ್ಗೇನ್ ಮಾಡಬಹುದು" ಎಂದರು. ಬಾರ್ಗೇನ್ ವ್ಯವಹಾರ ನಡಾವಳಿ ಇದ್ದ ಕಡೆಗೆಲ್ಲಾ ಹಾಗೇ. ನಾನು ಮಲ್ಲೇಶ್ವರದ ಮಾರುಕಟ್ಟೆಯಲ್ಲಿ ಮಡದಿಗಾಗಿ ಬ್ಯಾಗ್ ಖರೀದಿಸುತ್ತಿದ್ದೆ-ಆತ ಹೇಳಿದ್ದು ಆರುನೂರು; ನಾನು ಮುನ್ನೂರಕ್ಕೆ ಕೇಳಿದೆ, ಮುನ್ನೂರೈವತ್ತು ಅವನ ಕೈಗೆ ತುರುಕಿ "ಕೊಡುವುದಾದರೆ ಕೊಡು" ಎಂದೆ, ಆತ ಕೊಟ್ಟುಬಿಟ್ಟ! ನನ್ನೆದುರೇ ಅಂಥಾದ್ದೇ ಬ್ಯಾಗನ್ನು ಐನೂರಕ್ಕೂ ಮಾರಿದ್ದಾನೆ ಭೂಪ! ಮಾರುವೇಷದಲ್ಲಿ ಹಲವು ರೀತಿಯ ಡೊನೇಶನ್ ಮತ್ತು ಖರ್ಚುಗಳ ಲೆಕ್ಕದಲ್ಲಿ ನವನಾಗರಿಕ ಸಂಸ್ಥೆಗಳು ವಿಧಿಸುವ ಅನಿಯಮಿತ ಶುಲ್ಕಗಳ ಪದ್ಧತಿ ನಿಯಮಿತ ರೀತಿಗೆ ಬರುವವರೆಗೆ ’ಸುಲಿಗೆ’ ಎಂಬ ಪದ ಊರ್ಜಿತವಾಗುವುದಿಲ್ಲ; ಬದುಕಿಗಾಗಿ ಎಲ್ಲರದೂ ಸುಲಿಗೆಯೇ!!

’ರಾಮ್ ತೇರಿ ಗಂಗಾಮೈಲಿ ಹೋಗಯೀ’ ಎಂಬ ಸಿನಿಮಾವನ್ನು ರಾಜ್ ಕಪೂರ್ ತಯಾರಿಸಿದರಲ್ಲಾ ಆ ಕಾಲಕ್ಕೇ ಕಾಶಿಯಲ್ಲಿ ಗಂಗೆ ಮಲಿನವಾಗಿದ್ದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ. ಕೋಟ್ಯಂತರ ಜನ ತಮ್ಮ ಅಪರ ಕರ್ಮಗಳನ್ನು ನಡೆಸಿಕೊಳ್ಳುತ್ತಾ, ಸತ್ತವರನ್ನು ಅರ್ಧ ಸುಟ್ಟು ನದಿಗೆ ಬಿಸಾಡಿದರೆ, ನಗರದ ಮಲಿನ ನೀರು ನದಿಯನ್ನು ಬಹುದೊಡ್ಡ ಪ್ರಮಾಣದಲ್ಲಿ ಸೇರಿದರೆ, ಗಂಗೆಯಲ್ಲ ಯಾವ ನದಿಯಾದರೂ ಮಲಿನವಾಗದೇ ಇರುವುದಿಲ್ಲ. ಅಷ್ಟಾಗಿಯೂ ಗಂಗೆ ಇನ್ನೂ ತನ್ನತನವನ್ನು ಪೂರ್ತಿ ಕಳೆದುಕೊಳ್ಳದೇ ಇರುವುದು ತನ್ನಲ್ಲಿನ ಆ ದಿವ್ಯತೆಯಿಂದಲೇ. ಆದರೆ ಒಂದು ಮಾತು ಸತ್ಯ: ಗಂಗೆಯ ಶುದ್ಧೀಕರಣ ಮತ್ತು ಅಂತ್ಯಸಂಸ್ಕಾರ-ತದನಂತರದ ಅಸ್ಥಿವಿಸರ್ಜನೆ ಈ ಕೆಲಸಗಳಿಗೆಲ್ಲಾ ಒಂದು ರೀತಿ-ರಿವಾಜು ಜಾರಿಗೆ ತರಬೇಕು. ನಗರದ ಕೊಳಚೆನೀರು ನದಿಗೆ ಬರದಂತೇ ತಡೆಯಬೇಕು. ಹೀಗಾದಲ್ಲಿ ಗಂಗೆಯ ಪಾವಿತ್ರ್ಯತೆ ಸ್ಥಾನಿಕವಾಗಿ ಕಾಶಿಯಲ್ಲಿ ಹದಗೆಡುವುದಿಲ್ಲ. ಇದನ್ನು ಪ್ರತಿಯೊಬ್ಬ ಸನಾತನಿಯೂ ಅರಿಯುವಷ್ಟರ ಮಟ್ಟಿಗೆ ಈ ಬಗ್ಗೆ ಆಂದೋಲನ ನಡೆಯಬೇಕಾಗಿದೆ. ಹರಿದ್ವಾರದಿಂದ ಹಿಡಿದು ಗಂಗೆಯ ಹರಿವಿನುದ್ದಕ್ಕೂ ಗಂಗೆಗೆ ಸೇರುವ ಕಲ್ಮಷಗಳನ್ನು ತಡೆಯಬೇಕಾದುದು ನಮ್ಮ ಜೀವನಧರ್ಮದ ನೈತಿಕ ಹೊಣೆಯಾಗಿದೆ!      

ಪ್ರತಿನಿತ್ಯ ದೇವರ ವಿಗ್ರಹಗಳನ್ನು ಪೂಜಿಸುವ ಮಂದಿಗೆ ’ಮಲಾಪಕರ್ಷಣ ಸ್ನಾನ’ ಮಾಡಿಸುವ ಬಗ್ಗೆ ತಿಳಿದಿರುತ್ತದೆ. ನಿನ್ನೆ ಹಾಕಿದ ಹೂ-ಹಾರ ಮತ್ತಿನ್ನೇನೋ ಅಲಂಕಾರ, ಗಂಧ ವಗೈರೆ ಇಂದು ಬೆಳಗಿನ ಜಾವವೇ ಮಲವೆನಿಸಿಕೊಳ್ಳುತ್ತದೆ. ಅದನ್ನೆಲ್ಲಾ ತೆಗೆದು ಸ್ವಚ್ಛಗೊಳಿಸಿ ಅಭಿಷೇಚಿಸುವ ಮೊದಲನೆಯ ಅಭಿಷೇಕಕ್ಕೆ ಶಾಸ್ತ್ರಕಾರರು ’ಮಲಾಪಕರ್ಷಣ ಸ್ನಾನ’ ಎಂದಿದ್ದಾರೆ. ಹೊಸ ಹೂ-ಹಾರ, ಗಂಧ-ಚಂದನಗಳಿಂದ ಅಲಂಕೃತಗೊಂಡ ವಿಗ್ರಹ ನಮ್ಮ ಮನಸ್ಸನ್ನು ಪ್ರಸನ್ನೀಕರಿಸುತ್ತದೆ. ದೂರದಿಂದ ಕ್ಷೇತ್ರಗಳಿಗೆ ತೆರಳುವ ಭಕ್ತರಿಗೆ ಗುಡಿಗಳಲ್ಲಿನ ವಿಗ್ರಹಗಳ ದರ್ಶನವೇ ಪರಮಭಾಗ್ಯ. ದೇವರ ವಿಗ್ರಹಗಳ ಪಾಣಿಪೀಠಗಳ ಹಿಂದೆಲ್ಲೋ ಅಡಗಿರುವ ಜಿರಲೆಗಳಿಗೆ ಮಲಾಪಕರ್ಷಣ ಸ್ನಾನಕ್ಕಿಂತಾ ಮೊದಲಿನ ವಿಗ್ರಹಗಳ ಸ್ಥಿತಿಯೇ ಪರಮಭಾಗ್ಯ; ಇಲ್ಲಿ ಭಕ್ತರಿಗೆ ಭಾವನೆಗಳಿವೆ-ಜಿರಲೆಗಳಿಗೆ ಕೇವಲ ಹೊಟ್ಟೆಗಳಿವೆ! ತೀರ್ಥಕ್ಷೇತ್ರಗಳಿಗೆ ಹೋಗುವ ಭಕ್ತರಲ್ಲಿನ ಭಾವನೆಗಳು ಹಾಗೆ ಪವಿತ್ರವಾಗಿರುತ್ತವೆ; ಗಂಗೆ ಮಲಿನವೇ ಆಗಿದ್ದರೂ ಅದರಲ್ಲಿ ಕೋಟ್ಯಂತರ ಜನ ಮಿಂದೇಳುತ್ತಾರೆ ಎಂಬುದಕ್ಕೆ ಮೊನ್ನೆಯ ತನಕ ಪ್ರಯಾಗದಲ್ಲಿ ನಡೆದ ಮಹಾಕುಂಭಮೇಳವೇ ಸಾಕ್ಷಿ! ಅನ್ಯಮತೀಯರ ಪೂಜಾ ವಿಧಿ-ವಿಧಾನಗಳಿಗೂ ನಮ್ಮಲ್ಲಿನ ವಿಧಿವಿಧಾನಗಳಿಗೂ ಅಜಗಜಾಂತರವಿರುವುದರಿಂದ ಇನ್ನೆಲ್ಲಿನದೋ ಕ್ಷೇತ್ರವನ್ನು ಕಾಶಿಗೆ ಹೋಲಿಸುವುದು ಸರಿಯಲ್ಲ. ಕಾಶಿಯ ಪಾವೀತ್ರ್ಯತೆ ನಮ್ಮ ಸಂಕುಚಿತತೆಯಿಂದ ನಾಶವಾಗಬಾರದು! ಮಾನಸಿಕವಾಗಿ ಕಾಶಿಯನ್ನು ನಾವು ಶ್ರೇಷ್ಠವೆಂದೇ ನಂಬಿದ ಜನ, ಆ ಮೌಲ್ಯಕ್ಕೆ ಅಧುನಿಕತೆಯ ಸೊಬಗಿಲ್ಲವೆಂಬ ಕಾರಣದಿಂದ ಚ್ಯುತಿಯುಂಟುಮಾಡಬಾರದು; ತನ್ನ ಬಡತನಕ್ಕೆ ಹಳೆಯ-ಹರುಕಲು ಸೀರೆಯನ್ನುಟ್ಟ ಅಮ್ಮನನ್ನು "ಅಮ್ಮಾ" ಎನ್ನದೇ, ನವನಾಗರಿಕತೆಯ ಸುಂದರಿಯ ಎದುರು "ಕೆಲಸದವಳೇ" ಎನ್ನಬೇಕೇ? ಕಾಶಿ ಪುಣ್ಯಧಾಮವೇ ಹೊರತು ಅದು ರಿಸಾರ್ಟ್ ಅಲ್ಲ ಎಂಬುದನ್ನು ನಾವಿಲ್ಲಿ ಗಮನಿಸಬೇಕು!

ಇನ್ನು ಕಾಶಿಯಲ್ಲಿ ಯಾವುದು ಪ್ರಧಾನ ದೈವ ಎಂಬ ಬಗ್ಗೆ ಒಂದು ಚಿಕ್ಕ ವಿವರ: ಎಷ್ಟೇ ಇತಿಹಾಸ, ಪ್ರಾಗೈತಿಹಾಸ ಪುರಾಣಗಳನ್ನು ತೆಗೆದರೂ ಕಾಶಿಗೆ ವಿಶ್ವನಾಥನೇ ಅಧಿದೈವ. ವಿಶ್ವನಾಥನ ಗಣಗಳಲ್ಲಿ ವೀರಭದ್ರ, ಕಾಲಭೈರವ, ಕಪಾಲಭೈರವ ಇತ್ಯಾದಿ ಹಲವು ಪರಿವಾರ ದೇವತೆಗಳು ಬರುತ್ತವೆ. ವಿಶ್ವಕ್ಕೇ ನಾಥನಾದವನು ವಿಶ್ವನಾಥ; ಅದು ಕೇವಲ ಸಾಂಕೇತಿಕವೇ ಹೊರತು ಪರೋಕ್ಷವಾಗಿ ಸನಾತನಿಗಳು ಆ ಪರಬ್ರಹ್ಮನ ಮೂಲಕ್ಕೇ ಪೂಜೆಸಲ್ಲಿಸುತ್ತಾರೆ ಎಂಬುದನ್ನು ಗಮನಿಸಬೇಕು. ಕಾಶಿಯಲ್ಲಿ ಸನಾತನ ಪರಂಪರೆಗೆ ಸೇರಿದ ಹತ್ತೂ ಪ್ರಮುಖ ಪಂಥಗಳವರೂ ಉಪಪಂಥಗಳವರೂ ಇದ್ದಾರೆ, ಇರುತ್ತಾರೆ, ಬರುತ್ತಾರೆ. ಆಯಾಯ ಪಂಥಕ್ಕೆ ಸಂಬಂಧಿಸಿದಂತೇ ಅವರವರು ತಮ್ಮತಮ್ಮ ಆರಾಧ್ಯ ದೈವವೇ ಪ್ರಧಾನದೈವ ಎನ್ನ ತೊಡಗುತ್ತಾರೆ; ಇದು ಕೇವಲ ಈಗಿನದಲ್ಲ, ಅನಾದಿಯಿಂದಲೂ ನಡೆದೇ ಬಂದಿದೆ. ಆದರೆ ಪ್ರಾಜ್ಞರು ಎಲ್ಲಾ ದೇವರುಗಳನ್ನೂ ಪೂಜಿಸಿದ್ದಾರೆ. ದಾಖಲೆಗಳ ಪ್ರಕಾರ [ಜಾನಪದಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಬರುವುದಿಲ್ಲ]ಕಾಶಿಯಲ್ಲಿ ಜ್ಯೋತಿರ್ಲಿಂಗವಿದ್ದು ಅದರ ಪ್ರಭಾವಳಿಯ ಬೆಳಕಿನಿಂದಲೇ ತುಂಬಿದ ನಗರಿ ಅದಾದುದರಿಂದ ಅದಕ್ಕೆ ’ಕಾಶಿ’ ಎಂಬ ಹೆಸರು ಬಂದಿದೆ-ಹೀಗಾಗಿ ವಿಶ್ವನಾಥ ಲಿಂಗವೇ ಕಾಶಿಯೆಂಬ ಬೆಳಕಿನ ನಗರಕ್ಕೆ ಬೆಳಕಿನ ಮೂಲ ಆಕರವಾದ್ದರಿಂದ ವಿಶ್ವನಾಥನೇ ಪ್ರಧಾನದೈವ ಎಂಬುದು ಬಹುಸಂಖ್ಯಾಕ ಸನಾತನಿಗಳು, ಅದಕ್ಕೂ ಮಿಗಿಲಾಗಿ ಋಷಿಸಂದೋಹ ಒಪ್ಪಿದ ವಿಷಯವಾಗಿರುತ್ತದೆ.  

ಇನ್ನು ’ಮತ್ತೆ ಏಕಲವ್ಯ’ದ ಸುತ್ತ ಹತ್ತಾರು ಸರ್ತಿ ಗಿರಕಿ ಹೊಡೆದಿದ್ದೇನೆ. ’ಮತ್ತೆ ಏಕಲವ್ಯ’ ಎಂಬ ನಾಟಕವನ್ನು ಎಡಪಂಥೀಯ ಜನಗಳು ಸೇರಿ ದೆಹಲಿಯಲ್ಲಿ ನಡೆಸಿ ಬಹುಮಾನ ಪಡೆದರಂತೆ! ಏನಪ್ಪಾ ಇಲ್ಲಿನ ಕಥೆ ಎಂದರೆ: ಶೂದ್ರನೆಂಬ ಕಾರಣಕ್ಕೆ ಬಿಲ್ವಿದ್ಯೆಯಿಂದ ದೂರವಿರಿಸಲ್ಪಟ್ಟ ಏಕಲವ್ಯ, ಸ್ವತಃ ತಾನ್ರ್ಏ ತಾನಾಗಿ ಕಲಿತಕೊಂಡಮೇಲೆ, ಆತನ ಬಲಗೈ ಹೆಬ್ಬೆರಳನ್ನು ಬ್ರಾಹ್ಮಣನಾದ ದ್ರೋಣಾಚಾರ್ಯ ಗುರುದಕ್ಷಿಣೆಯಾಗಿ ಪಡೆದನಲ್ಲಾ,  ಅದನ್ನು ಬರೆದ ಗಣೇಶ ಕನಸುಕಂಡು ಹೆದರಿಬೀಳುತ್ತಾನಂತೆ! ಮತ್ತೆ ಮತ್ತೆ ಏಕಲವ್ಯನಿಗೆ ಆದ ’ಅನ್ಯಾಯ’ವನ್ನು  ಕಂಡು ಹೆದರಿ ಬೀಳುವ ಗಣೇಶ ವ್ಯಾಸರಲ್ಲಿ ಕಥೆಯನ್ನು ತಿದ್ದುವಂತೇ ಕೇಳುತ್ತಾನಂತೆ! ---ಇದು ಬರಹಗಾರರೊಬ್ಬರು ಬರೆದ ಅವರ ವಾರದ ಕಸದಗೂಡೆಗಳಲ್ಲಿನ ಒಂದು ಕಥೆ! ನಾನು ಅನೇಕಾವರ್ತಿ ಹೇಳುತ್ತಲೇ ಬಂದಿದ್ದೇನೆ: ರಾಮಾಯಣ ಮತ್ತು ಮಹಾಭಾರತವನ್ನು ಆಮೂಲಾಗ್ರ ಅರಿಯಲಾಗದ ಮಂದಿ ಕಥೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಅರ್ಥೈಸಿಕೊಳ್ಳುತ್ತಾರೆ ಎಂದು, ಇದು ಅದಕ್ಕೊಂದು ಜ್ವಲಂತ ಉದಾಹರಣೆಯಾಗಿದೆ. ನಾವೂ ಚಿಕ್ಕಂದಿನಲ್ಲಿ, ಶಾಲೆಯ ಪಠ್ಯಗಳಲ್ಲಿ ಏಕಲವ್ಯನ ಕಥೆಯನ್ನು ಓದಿ ಮರುಗಿದ್ದೆವು, ಕೈಬೆರಳು ಕತ್ತರಿಸಿಕೊಟ್ಟ ಕಥೆ ಕೇಳಿದ ನಮಗೆ ದಿನಗಟ್ಟಲೆ ಜ್ವರಬಂದ ರೀತಿ ಆಗಿತ್ತು!ಏಕಲವ್ಯನ ಪೂರ್ವಾಪರಗಳನ್ನು ತುಸು ತಿಳಿಯದೇ ಹೋದರೆ ಆ ಕಥೆಯಲ್ಲಿ ವಿರೋಧಾಭಾಸ ಕಾಡುವುದು ಖಚಿತ; ಹಾಗಾದಾಗ ಮಾತ್ರ ’ಮತ್ತೆ ಏಕಲವ್ಯ’ನನ್ನು ಸೃಷ್ಟಿಸುವ ಜನ ಮೆರೆಯುತ್ತಾರೆ!!  

ವೇಣುವೆಂಬೊಬ್ಬ ಅತಿಕ್ರೂರಿಯಾದ ದೈತ್ಯರಾಜನಿದ್ದ. ಆತ ತನ್ನನ್ನು ಹೊರತು ಬೇರೇ ಯಾವ ದೇವರನ್ನೂ ಪೂಜಿಸಬಾರದು ಎಂದು ಆಜ್ಞೆವಿಧಿಸಿ, ದೇವರನ್ನು ಪೂಜಿಸುವ ಜನರನ್ನೆಲ್ಲಾ ದಂಡಿಸುತ್ತಿದ್ದ ಮತ್ತು ಕೊಲೆಗೈಯ್ಯುತ್ತಿದ್ದ. ವೇದವಿದರನೇಕರು ಸೇರಿ ಅವನನ್ನು ದಂಡಿಸುವ ಮಾಸ್ಟರ್ ಪ್ಲಾನ್ ಮಾಡಿಕೊಂಡು, ಅನಿವಾರ್ಯವಾಗಿ ಅವನನ್ನು ತಮ್ಮ ಮಂತ್ರಶಕ್ತಿಯಿಂದಲೇ ನಿಸ್ತೇಜಗೊಳಿಸಿ ಗತಪ್ರಾಣನನ್ನಾಗಿ ಮಾಡಿದರು. ಆತನ ಶರೀರದ ಕೆಳಭಾಗವನ್ನು ಅರೆದು ಕಾಡಿನಲ್ಲಿ ಬಿಸುಟರು-ಅದರಿಂದ ಜನಿಸಿದ ಜನ ಕುಬ್ಜರೂ ಕಪ್ಪನೆಯ ಬಣ್ಣಹೊಂದಿದವರೂ ಆಗಿ ’ನಿಷಾದ’ರು ಎನಿಸಿದರು. ಅಂತಹ ನಿಷಾದ ಜನಾಂಗದಲ್ಲಿ ಜನಿಸಿದ ಹಿರಣ್ಯಧನು ಎಂಬಾತ ನಿಷಾದರಿಗೆ ರಾಜನಾಗಿದ್ದ; ಮಾತ್ರವಲ್ಲ, ಹಿರಣ್ಯಧನು ಮಗಧದ ರಾಜ ಜರಾಸಂಧ[ಮಾಗಧ]ನಿಗೆ ಸೇವೆಗೈಯ್ಯುತ್ತಿದ್ದ. ಜರೆ ಎಂಬ ರಕ್ಕಸಿಯಿಂದ ಶರೀರದ ಹೋಳುಗರೆಡು ಜೋಡಿ[/ಸಂಧಿ]ಸಲ್ಪಟ್ಟು ಜನ್ಮವೆತ್ತಿದ ಜರಾಸಂಧ, ಅದೇಕಾಲದಲ್ಲಿ ಹಸ್ತಿನಾಪುರದ ಅರಸರ ವಿರೋಧಿಯಾಗಿದ್ದ. ಜರಾಸಂಧನ ಸೇವೆಗೈಯ್ಯುತ್ತಿದ್ದ ಹಿರಣ್ಯಧನುವಿನ ಮಗನೇ ಏಕಲವ್ಯ! ಹಸ್ತಿನಾಪುರದ ಅರಸುಮನೆತನ ದ್ರೋಣರನ್ನು ವಿದ್ಯಾಗುರುವಾಗಿ ನೇಮಿಸಿಕೊಂಡು ಕಲಿಕೆ ಆರಂಭಗೊಂಡಾಗ, ಕಾಡಿನ ಮಜಲಿನಲ್ಲಿ ಓಡಾಡುತ್ತಾ ಬಂದ ಏಕಲವ್ಯ ಅದನ್ನು ಕಂಡ. ತನಗೂ ಶಸ್ತ್ರವಿದ್ಯೆಗಳನ್ನು ಹೇಳಿಕೊಡಿರೆಂದು ದ್ರೋಣರಲ್ಲಿ ಏಕಲವ್ಯ ಬಿನ್ನವಿಸಿದ. ಮೂಲವನ್ನರಿತ ದ್ರೋಣರು ನಿರಾಕರಿಸಿದಮೇಲೆ, ಏಕಲವ್ಯ ದ್ರೋಣರ ಮೃತ್ತಿಕಾ ಮೂರ್ತಿಯನ್ನು ಮಾಡಿಟ್ಟುಕೊಂಡು, ತನಗೆ ಪಿತ್ರಾರ್ಜಿತವಾಗಿ ಬಳುವಳಿಯಾಗಿ ಬಂದ ಮಾಯಾವೀ ವಿದ್ಯೆಯಿಂದ ದ್ರೋಣರ ಆತ್ಮವನ್ನು ಆ ವಿಗ್ರಹದಲ್ಲಿ ಆವಾಹಿಸಿಕೊಂಡು, ಅದರಿಂದ ಪ್ರೇರಿತನಾಗಿ ಬಿಲ್ವಿದ್ಯೆಯನ್ನು ಕಲಿತ. ಕಲಿತವಿದ್ಯೆಯಲ್ಲಿ ಅರ್ಜುನನನ್ನೂ ಮೀರಿಸಿ ಬೆಳೆದ ಆತ ಎಲ್ಲೆಡೆಗೂ ದ್ರೋಣರೇ ತನ್ನ ಗುರುವೆಂದು ಹೇಳಿಕೊಂಡು ತಿರುಗಿದ.  

ಗುರು ದ್ರೋಣರು ಹಸ್ತಿನಾಪುರದ ಹುಡುಗರನ್ನು ಕರೆದುಕೊಂಡು ಒಮ್ಮೆ ಏಕಲವ್ಯನ ವಿದ್ಯಾಭ್ಯಾಸ ನಡೆಯುತ್ತಿದ್ದೆಡೆಗೆ ತೆರಳಿದರು; ಬಾಲಕನ ಸಾಹಸವನ್ನು ಕಂಡು ಬೆರಗಾದರೂ, ತನ್ನ ಮೂರ್ತಿಯನ್ನು ಮಾಡಿಟ್ಟುಕೊಂಡು ತನ್ನಿಚ್ಛೆಯ ವಿರುದ್ಧವಾಗಿ ತನ್ನಾತ್ಮವನ್ನು ಅಲ್ಲಿಗಾವಾಹಿಸಿ, ತನ್ಮೂಲಕ ವಿದ್ಯೆಗಳನ್ನು ಅಭ್ಯಸಿಸಿದ ಏಕಲವ್ಯನನ್ನು ಕಂಡು ಸ್ವಲ್ಪ ಬೇಸರವೂ ಆಯ್ತು. ಅಷ್ಟರಲ್ಲೇ ಹಸ್ತಿನಾಪುರದ ಅರಸುಮಕ್ಕಳಲ್ಲೇ ಬಿಲ್ವಿದ್ಯೆಯಲ್ಲಿ ಎಲ್ಲರಿಗಿಂತಲೂ ಚತುರನೆಂದು ಖ್ಯಾತನಾಗಿದ್ದ ಅರ್ಜುನನಿಗೆ, ಶಬ್ದವೇದಿ ವಿದ್ಯೆಯಿಂದ ಬಾಣಪ್ರಯೋಗಿಸಿ ಬೊಗಳಿದ ನಾಯಿಯ ಬಾಯಿಮುಚ್ಚಿಸಿದ ಏಕಲವ್ಯನ ಚಾತುರ್ಯವನ್ನು ಕಂಡು ದಿಗ್ಭ್ರಮೆಯಾಯ್ತು. ಅರ್ಜುನ ತನ್ನ ಗುರುದ್ರೋಣರಲ್ಲಿ ಏನಾದರೂ ಮಾಡಿ ಬಿಲ್ವಿದ್ಯೆಯಲ್ಲಿ ತನ್ನನ್ನು ಮೀರಿಸುವವರು ಇರಬಾರದು-ಆ ರೀತಿ ನೋಡಿಕೊಳ್ಳಿ ಎಂದು ಪ್ರಾರ್ಥಿಸಿದ. ಕುರುಕ್ಷೇತ್ರದ ಮುಂದಿನ ನಡೆಗಳನ್ನು ಮೊದಲೇ ಅರಿತಿದ್ದ ಕಾರಸ್ಥಾನೀ ಶ್ರೀಕೃಷ್ಣ, ಆ ಸಮಯದಲ್ಲಿ ಗುರುದ್ರೋಣರ ದೇಹದಲ್ಲಿ ತನ್ನಾತ್ಮವನ್ನು ನಿಲ್ಲಿಸಿ "ಗುರುದಕ್ಷಿಣೆಯಾಗಿ ಬಲಗೈ ಹೆಬ್ಬೆರಳು ಕೊಡು" ಎಂದ! ಅನುಮತಿಯಿಲ್ಲದೇ ದ್ರೋಣರ ವಿಗ್ರಹವನ್ನು ಸ್ಥಾಪಿಸಿ ಕಲಿತ ತಪ್ಪಿನ ಅರಿವು ಏಕಲವ್ಯನಿಗೆ ಆಗಿತ್ತಾದರೂ, ಅದು ಅಂತಹ ಗಣನೀಯ ತಪ್ಪೆಂದು ಆತ ಭಾವಿಸಿರಲಿಲ್ಲ. ದ್ರೋಣರ ಇಚ್ಛೆಯಂತೇ ತನ್ನ ಬಲಗೈ ಹೆಬ್ಬೆರಳನ್ನು ಕತ್ತರಿಸಿ ನೀಡಿದ.  ಇಲ್ಲಿ ಇದಕ್ಕೆ ಶ್ರೀಕೃಷ್ಣ ಕಾರಣನೇ ಹೊರತು ದ್ರೋಣರು ನಿಮಿತ್ತಮಾತ್ರ!! ಪರಶುರಾಮನಲ್ಲಿಗೆ ತನ್ನ ಮೂಲವನ್ನು ತಿಳಿಸದೇ ವಿದ್ಯೆಕಲಿಯಲು ಬಂದ ಕರ್ಣ ಶಾಪಗ್ರಸ್ತನಾಗಿದ್ದನಲ್ಲಾ ಅದೂ ಹಾಗೆಯೇ. ಕರ್ಣ ಮತ್ತು ಏಕಲವ್ಯ ಮುಂದೆ ಪಾಂಡವರ ವಿರೋಧಿಗಳಾದ ಕೌರವರ ಪಕ್ಷಕ್ಕೆ ಸೇರಿಕೊಳ್ಳುವವರು ಎಂಬುದು ದ್ರೋಣರಿಗೂ, ಪರಶುರಾಮರಿಗೂ, ಶ್ರೀಕೃಷ್ಣರಿಗೂ ಮೊದಲೇ ಗೊತ್ತಿತ್ತು. ಭಗವದಿಚ್ಛೆಯಂತೇ ಏಕಲವ್ಯ ಮತ್ತು ಕರ್ಣ ಈ ಇಬ್ಬರೂ ಅಪ್ರತಿಮ ಸಾಧನೆಯನ್ನು ಮಾಡಿದರಾದರೂ ಕಲಿತ ವಿದ್ಯೆ ಪ್ರಯೋಜನಕ್ಕೆ ಬಾರದಂತೇ ಮಾಡಿದ್ದು ಕೃಷ್ಣ ಕಾರಸ್ಥಾನ! ದುಷ್ಟರನ್ನೂ ದುಷ್ಟಗುಣ ಪೋಷಕರನ್ನೂ ಶಿಕ್ಷಿಸುವ ಧರ್ಮವನ್ನು ಪಾಲಿಸಿದ ಶ್ರೀಕೃಷ್ಣ, ಏಕಲವ್ಯನೆಂಬ ಪರಿಣತ ಬದುಕಿದ್ದರೆ ಪಾಂಡವರಿಗೆ ಕಷ್ಟವೆಂಬುದನ್ನರಿತಿದ್ದ. ಒಂದೇ ತಾಯಿಯ ಮಕ್ಕಳೇ ಆದರೂ, ದುಷ್ಟಪಕ್ಷದಲ್ಲಿ ನಿಂತ ಕರ್ಣನಲ್ಲಿಗೆ ಕುಂತಿಯನ್ನು ಕಳುಹಿಸಿ ತೊಟ್ಟಬಾಣವನ್ನು ಮರಳಿ ತೊಡದಂತೇ ಪ್ರತಿಜ್ಞೆಮಾಡಿಸಿಬಿಟ್ಟ! ಕರ್ಣಕಥೆಯನ್ನು ಕೇಳುವಾಗ ಕಣ್ಣೀರು ಒಸರುತ್ತದಾದರೂ, ವೇದವ್ಯಾಸರು, ’ಭಾರತಕಥೆಯ ದುಷ್ಟ ಚತುಷ್ಟಯರ ಸಾಲಿನಲ್ಲಿ ಕರ್ಣನೂ ಒಬ್ಬ’ ಎನ್ನುವುದಕ್ಕೆ ಕಾರಣವಿರಲೇಬೇಕಲ್ಲವೇ?  

ಈ ಹಿನ್ನೆಲೆಯನ್ನರಿಯದ ಜನ ’ಮತ್ತೆ ಏಕಲವ್ಯ’ನನ್ನೋ ’ಮತ್ತೆ ಕರ್ಣ’ನನ್ನೋ ಹುಟ್ಟಿಸುತ್ತಲೇ ಇರುತ್ತಾರೆ. ರಾಮನ ಎದಿರಲ್ಲೇ ರಾವಣ ಎಂದು ಹೆಸರಿಟ್ಟುಕೊಂಡು ಮೆರೆಯುತ್ತಾರೆ! ರಾವಣನ್ನು ದೇವರೆಂದು ಪೂಜಿಸುವ ಜನರೂ ಈ ಲೋಕದಲ್ಲಿದ್ದಾರೆ. ಆದರೆ ಮನುಷ್ಯ ಮಾಡುವುದೆಲ್ಲಾ ಧರ್ಮವಲ್ಲ, ನೀತಿಯಲ್ಲ. ಯಾವುದು ಮನುಷ್ಯ ಜೀವನದಲ್ಲಿ ಸಾಧಿಸಬೇಕಾದ ಅತ್ಯುತ್ತಮ ನೀತಿಯೋ ಅದೇ ಮನುಷ್ಯನ ಜೀವನಧರ್ಮವಾಗುತ್ತದೆ. ಪಾತಕಿಗಳು ಮನೆಯಲ್ಲೇ ಇದ್ದರೂ ಶಿಕ್ಷಿಸದಿರುವುದು ಪಾಕಿಸ್ತಾನಿಗಳ ಮತ್ತು ನಮ್ಮ ದೇಶಸ್ಥ ಮುಸ್ಲಿಮರ ಕರ್ಮ!  ಪಾತಕಿಗಳು, ದುಷ್ಟರು ಯಾರೇ ಆಗಿದ್ದರೂ ಅವರನ್ನು ಅವರ ಕೃತ್ಯವನ್ನವಲಂಬಿಸಿ ದಂಡಿಸುವಂತೇ ಸನಾತನತೆ ನಮಗೆ ಬೋಧಿಸುತ್ತದೆ. ತನ್ನ ಮಗ ನೀತಿ ತಪ್ಪಿ ನಡೆದನೆಂದಾದಾಗ ಸೆರೆವಾಸಕ್ಕೆ ಕಳುಹಿಸಿದ ಶಿವಾಜಿ ಇದೇ ನಮ್ಮ ಭಾರತದ ದೊರೆಯಾಗಿದ್ದ. ಹಸಿದ ಗಿಡುಗದ ಆಹಾರವನ್ನು ತಪ್ಪಿಸಿದ ತಪ್ಪಿಗೆ ತನ್ನನ್ನೇ ದಂಡಿಸಿಕೊಂಡು ತೊಡೆಯ ಮಾಂಸವನ್ನೇರ್ ಕಿತ್ತುಕೊಟ್ಟ ಶಿಬಿ ಇದೇ ನಮ್ಮ ಭಾರತದವ. ಇಂಥಾ ನನ್ನ ಭಾರತದಲ್ಲಿ ಅಸಂಖ್ಯ ಜನ ನೀತಿಗಾಗಿ ಬದುಕು ಸವೆಸಿದ್ದಾರೆ. ವೇದಗಳ ಕಾಲದಲ್ಲಿ ವರ್ಣವ್ಯವಸ್ಥೆ ಆಯ್ಕೆಯ ಪ್ರಶ್ನೆಯಾಗಿತ್ತು; ಅಂದು ಇವತ್ತಿನಂತೇ ಸಾವಿರಾರು ಜಾತಿಗಳಿರಲಿಲ್ಲ!||ಚಾತುರ್ವಣ್ಯಂ ಮಯಾಸೃಷ್ಟಂ ಗುಣಕರ್ಮ ವಿಭಾಶಃ|| ಎಂದ ಭಗವಂತ ನಾಲ್ಕುವರ್ಣಗಳನ್ನು ಮೂಲದಲ್ಲಿ ಅವರವರ ಗುಣ-ಕರ್ಮಗಳನ್ನವಲಂಬಿಸಿ ತಾನೇ ಸೃಷ್ಟಿಸಿದ್ದೇನೆ ಎಂದಿದ್ದಾನೆ. ನಂತರವೂ ಯಾರು ಏನೇ ಹೇಳಿದರೂ, ಯಾವುದೇ ರೀತಿಯಲ್ಲಿ ಆಡಿಕೊಂಡರೂ ಬೇರೇ ವರ್ಣಗಳಿಗೆ ಬೋಧಿಸಿದವರು ಬ್ರಾಹ್ಮಣರೇ ಎಂಬುದನ್ನು ಎಲ್ಲಿ ನಿಂತು ಎದೆ ತಟ್ಟಿ ಹೇಳಲೂ ನಾನು ಹೆದರುವುದಿಲ್ಲ!

ಲಕ್ಷೋಪಲಕ್ಷ ಬ್ರಾಹ್ಮಣರು, ತಮ್ಮ ಉಪಾಧ್ಯಾಯ ವೃತ್ತಿಯಿಂದ, ಉಪಜೀವಿತ ನಡೆಸುತ್ತಾ ಹಲವು ’ಏಕಲವ್ಯ’ರುಗಳಿಗೆ ಕಾಲಕಾಲಕ್ಕೆ ಬೋಧಿಸುತ್ತಲೇ ಬಂದರು[ಅದಲ್ಲದಿದ್ದರೆ ಯಾವ ವಿದ್ಯೆಯೂ ಇನ್ನಾರಿಗೂ ಪ್ರಾಪ್ರವಾಗುತ್ತಿರಲಿಲ್ಲ ಎಂಬುದನ್ನು ಗಮನಿಸಬೇಕು!]. ಕಾಲದಗತಿಯಲ್ಲಿ ಕಲಿತ ’ಏಕಲವ್ಯ’ರುಗಳ ಮುಂದಿನ ಪೀಳಿಗೆಗಳಲ್ಲಿ ಎಡಪಂಥೀಯ ಅಡ್ನಾಡಿಗಳು ಹುಟ್ಟಿಬಿಟ್ಟರು!! ಇತಿಹಾಸದ ಗರ್ಭದಲ್ಲಿ, ಕೆಲವು ಕಡೆ ಸಂಕುಚಿತ ಮನೋವೃತ್ತಿಯ ಬ್ರಾಹ್ಮಣರು ಇದ್ದರೂ, ಬಹಳಕಡೆ ಉದಾರಿಗಳು ಹೇರಳವಾಗಿದ್ದರು. ಇವತ್ತು ಈ ನನ್ನ ದೇಶದ ಅದೆಷ್ಟೋ ದೇಶವಾಸಿಗಳಲ್ಲಿ, ವರ್ಣಭೇದವನ್ನು ಮರೆತು ಕಲಿತು ಮುಂದೆಬಂದವರಿದ್ದರೆ ಅವರನ್ನು ಕಂಡಾಗ ನನಗೆ ಈ ನೆಲದ ಉಚ್ಚ ಸಂಸ್ಕೃತಿಯ ನೆನಪಾಗುತ್ತದೆ.  ಯಾವುದೋ ಪೂಜೆಯೋ ಪುನಸ್ಕಾರವೋ ನಾಮಕರಣವೋ ಮದುವೆಯೋ--ಬಂದ ಬ್ರಾಹ್ಮಣರನ್ನು ಕಂಡು ಭಕ್ತಿಯಿಂದ ಆದರಿಸುವ ದೇಶವಾಸಿಗಳನ್ನು ಕಂಡಾಗ ಹೃದಯತುಂಬಿಬರುತ್ತದೆ. ಉನ್ನತ ಹುದ್ದೆಗಳಲ್ಲಿ ಆಸೀನರಾದ ಅನೇಕ ಜನ ತಮ್ಮ ಪೂರ್ವಜರಿಗೆ ಬ್ರಾಹ್ಮಣ ಉಪಾಧ್ಯಾಯರುಗಳು ಬೋಧಿಸಿದ ಪಾಠಗಳ ಬಗ್ಗೆ ಹೇಳಿಕೊಂಡು, ಇಂದಿನ ತಮ್ಮ ಈ ಹಂತಕ್ಕೆ ಅವರೇ ಕಾರಣ ಎಂದು ವಿನಮ್ರವಾಗಿ ನುಡಿದಾಗ, ಕ್ಷುಲ್ಲಕರಾಗಿರುವ ಎಡಪಂಥೀಯರು ಮರೆತುಹೋಗುತ್ತಾರೆ. ಕ್ಷತ್ರಿಯನಾದ ಕೌಶಿಕ ತನ್ನ ತಪಸ್ಸಿನಿಂದ-ಕರ್ಮದಿಂದ ಬ್ರಹ್ಮರ್ಷಿಯಾದ-ಬ್ರಾಹ್ಮಣನಾದ. ಕ್ಷತ್ರಿಯರಾದ ಮಹರ್ಷಿ ಮಹೇಶ್ ಯೋಗಿಗಳು ಈ ಕಾಲದಲ್ಲಿ ಜನಿಸಿ ಬ್ರಾಹ್ಮಣ್ಯವನ್ನು ಆಚರಿಸಿದರು! ||ಸಂಸ್ಕಾರಾತ್ ದ್ವಿಜ ಉಚ್ಯತೇ|| ನಮ್ಮ ದೇಶವಾಸಿಗಳು ಸನಾತನವಾದ ಉತ್ತಮ ಸಂಸ್ಕಾರಗಳನ್ನು ಹೊಂದಬೇಕು, ಉತ್ತಮ ಸಂಸ್ಕಾರದಿಂದ ಅವರು ಬ್ರಾಹ್ಮಣರೆನಿಸಬೇಕು ಎಂಬುದು ನನ್ನಂಥವರ ಆಶಯವಾಗಿದೆ, ಅದರ ಬದಲು ವಿನಾಕಾರಣ ’ಮತ್ತೆ ಏಕಲವ್ಯ’, ’ಮತ್ತೆ ಕರ್ಣ’ ಎನ್ನುತ್ತಾ ಕೂತರೆ ತತ್ಪರಿಣಾಮದ ನಷ್ಟ ಎಡಪಂಥೀಯರಿಗೇ ವಿನಃ ಮಿಕ್ಕವರಿಗಲ್ಲ.

ಹಿಂದೂ ಸನಾತನ ಜೀವನಧರ್ಮಕ್ಕೆ ವಾರೀಸುದಾರರು ಇವರೇ ಎಂದು ಯಾರನ್ನು ಬೊಟ್ಟುಮಾಡಿ ಹೇಳುತ್ತೀರಿ? ಅದನ್ನು ಬ್ರಾಹ್ಮಣರು ಮಾಡಿದರೇ? ಕ್ಷತ್ರಿಯರು ಸ್ಥಾಪಿಸಿದರೇ? ವೈಶ್ಯರದೇ ? ಅಥವಾ ಶೂದ್ರರದೇ? ಭಾರತೀಯ ಮೂಲದ ಈ ಜೀವನಧರ್ಮ ಅದು ಎಲ್ಲರದ್ದೂ ಆಗಿದೆ. ಕೇವಲ ’ಬ್ರಾಹ್ಮಣರೇ ಎಲ್ಲದಕ್ಕೂ ಕಾರಣ’ ಎಂದು ದೋಷಾರೋಪಣೆ ಮಾಡುತ್ತಾ ಕೆಲವೊಮ್ಮೆ ’ಒಂದು ಜನಾಂಗ’ವೆಂದು [ಬ್ರಾಹ್ಮಣ ಪದಕ್ಕೆ ಬದಲಾಗಿ] ಪರೋಕ್ಷ ದೂಷಿಸುತ್ತಾ ಬರೆಯುವ ’ಮೇಧಾವಿ’ಗಳೇ ಯಾವುದು ಆ ಒಂದು ಜನಾಂಗ? ವೈಜ್ಞಾನಿಕವಾಗಿ ಕ್ರಿಮಿನಾಶಕವೆಂದು ರುಜುವಾತಾದ ಗೋಮಯ ಬಳಸಲು ತಿಳಿಸಿದರೆ, ಅರಿಯದೇ ಹಳೆಯ ಸಗಣಿಯನ್ನು ಬಳಸಿಕೊಂಡು ಧರ್ಮವನ್ನು ಹೀಗಳೆಯುವ ’ತತ್ವಜ್ಞಾನಿ’ಗಳು ಧರ್ಮದ ಸಂಹಿತೆಗಳನ್ನು ಸಂಪೂರ್ಣವಾಗಿ ಅಭ್ಯಸಿಸುವುದು ಒಳಿತು. ಕೊಡ-ಕೊಳ್ಳುವ ವ್ಯಾವಹಾರಿಕ ಸಂಪರ್ಕ-ಸಂಬಂಧಗಳಿಂದ, ಅಸಂಬದ್ಧ ವಿಷಯಗಳಮೇಲೂ ಮಾಡುವ ವ್ಯರ್ಥ ಪ್ರಲಾಪಗಳನ್ನೇ ’ಥೀಸಿಸ್’ ಎಂದು ಪರಿಗಣಿಸುವ  ವಿಶ್ವವಿದ್ಯಾಲಯಗಳು ಅನೇಕರಿಗೆ ಡಾಕ್ಟರೇಟ್ ನೀಡುತ್ತಿವೆ; ಕೆಲವರಿಗೆ ಯಾವ ಆಧಾರವೂ ಇಲ್ಲದೆಯೂ ಅದನ್ನು ಬಿಕರಿಮಾಡುತ್ತಿವೆ! ತೀರಾ ಇತ್ತೀಚೆಗೆ ನನಗೆ ಗೊತ್ತಿರುವ ವಿಶ್ವವಿದ್ಯಾನಿಲಯವೊಂದರಲ್ಲಿ ಗೌಡಾ ಕೊಡುವ ಪ್ರಕ್ರಿಯೆ ನಡೆಯಿತು-ಅಲ್ಲಿ ಯಾವ ಮಹತ್ಸಾಧನೆಯನ್ನೂ ಮಾಡದ ಮಹಿಳಾ ಸಂಪಾದಕಿಯೋರ್ವರಿಗೆ ಗೌಡಾ ನೀಡಲಾಯ್ತು, ಅವರೊಬ್ಬರಿಗೇ ನೀಡಿದರೆ ಅಪವಾದ ಬರಬಹುದೆಂಬ ಕಾರಣಕ್ಕೆ ಇನ್ನಿಬ್ಬರು ಮಹಿಳೆಯರನ್ನೂ ಯಾದಿಗೆ ಸೇರಿಸಲಾಯ್ತು!  ಗೌಡಾ ಕೊಡುವುದು ಹಲವೆಡೆ ಕುಲಪತಿಗಳ ಏಕಸ್ವಾಮ್ಯದ ಹಕ್ಕಾಗಿರುವುದರಿಂದ ವೈಯ್ಯಕ್ತಿಕ ಸಂಬಂಧಗಳ ಸಂಕೋಲೆ, ಹಣದ ಆಮಿಷ ಈ ಎಲ್ಲವೂ ಕೆಲಸಮಾಡುತ್ತಿವೆ! ಇದು ಅಧುನಿಕ ಅವಿದ್ಯಾನಿಲಯಗಳ ಕಾರ್ಯವೈಖರಿ; ಇಂಥಾ ಅಧುನಿಕ ಅವಿದ್ಯಾನಿಲಯಗಳಲ್ಲಿ ’ಮತ್ತೆ ಏಕಲವ್ಯ’ರು ತಯಾರಾಗುವುದು ಖಚಿತ. ಗೌಡಾಕ್ಕೆ ನಿಜವಾಗಿಯೂ  ಅರ್ಹರಾಗಿದ್ದ ಮಠಾಧೀಶರೊಬ್ಬರಿಗೆ ಅದನ್ನು ಕೊಡಮಾಡಿದಾಗ, ಮೌಲ್ಯರಹಿತ ಗೌಡಾ ಪದವಿ ರೇಜಿಗೆ ಹುಟ್ಟಿಸಿದ್ದರಿಂದ ಅವರು ನಯವಾಗಿ ನಿರಾಕರಿಸಿದ್ದಾರೆ-ಆ ನಿರ್ಧಾರವನ್ನು ಕೈಗೊಂಡ ಅವರಿಗೆ ಅನಂತ ಕೋಟಿ ಪ್ರಣಾಮಗಳು. ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಬಂದ ಕೆಲವು ಲೇಖನಗಳಿಗೆ ಉತ್ತರಿಸುವ ಪ್ರಯತ್ನವಾಗಿ ಈ ಸುದೀರ್ಘ ಲೇಖನ, ನಿಮ್ಮ ತಾಳ್ಮೆಯನ್ನು ಒರೆಗೆಹಚ್ಚುವ ಮನಸ್ಸಲ್ಲ; ವಿಷಯವನ್ನು ಇತ್ಯರ್ಥಗೊಳಿಸುವ ಇರಾದೆ, ನಿಮಗೆಲ್ಲರಿಗೂ ಧನ್ಯವಾದಗಳು.