ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, May 1, 2012

ಹುಳಿಮಾವಿನಲ್ಲಿ ಎಲ್ಲರಿಗೂ ಸಮಾರಾಧನೆ

ಬಿಬಿಎಂಪಿ ಗೋಡೆ ಚಿತ್ರದ ಛಾಯಾಪ್ರತಿಯ ಕೃಪೆ: ಅಂತರ್ಜಾಲ
ಹುಳಿಮಾವಿನಲ್ಲಿ ಎಲ್ಲರಿಗೂ ಸಮಾರಾಧನೆ

ಮಾವು ಈ ಸಲದ ಬೇಸಿಗೆಯಲ್ಲಿ ಸಿಹಿಸುದ್ದಿಯನ್ನಂತೂ ತರಲಿಲ್ಲ ಎಂಬುದು ಎಲ್ಲರಿಗೂ ಗೊತ್ತು; ಬೇಸಿಗೆಯ ಉತ್ತಮ ರಸಭರಿತ ಅತಿವಿಶಿಷ್ಟ ಫಲ ಅದಾಗಿರುವುದರಿಂದ ಮರೆತರೂ ಮರೆಯದ ಅದರ ಸ್ವಾದ ಅಂತಹ ಆಕರ್ಷಣೆಯನ್ನು ಇಟ್ಟುಕೊಂಡೇ ಇರುತ್ತದೆ. ಯಾರೋ ಇಲ್ಲಿಯಾತ ಅನಿವಾಸಿಯಾಗಿ ಹೊರದೇಶಕ್ಕೆ ತೆರಳಿದ್ದು, ಮಾವಿನ ಹಂಗಾಮು ಮುಗಿದಮೇಲೆ ಬಂದಾಗ ಪಶ್ಚಾತ್ತಾಪಗೊಳ್ಳುವುದೂ ಇರುತ್ತದೆ! ಸದ್ಯ ನಾನು ಹೇಳುತ್ತಿರುವುದು ಅದರ ಬಗ್ಗಲ್ಲ. ಹೆಸರುಗಳ ಪರಿಕ್ರಮಗಳ ಬಗ್ಗೆ. ಹುಳಿಮಾವು ಎಂಬುದೊಂದು ಗ್ರಾಮ ಬೆಂಗಳೂರಿನ ಆನೇಕಲ್ ತಾಲೂಕಿನಲ್ಲಿ ಬರುತ್ತದೆಯಷ್ಟೇ ? ಹುಳಿಮಾವು ಎಂಬುದು ಊರ ಹೆಸರೂ ಹೌದು ಎಂದು ಬಹಳ ಜನರಿಗೆ ಗೊತ್ತಿರಲಿಕ್ಕಿಲ್ಲ. ಪತ್ರಿಕೆಯಲ್ಲಿ ವರದಿ ಮಾಡುವಾಗ ಹೀಗೊಂದು ತಲೆಬರಹ ಬರೆದರೆ ದೂರದಲ್ಲಿರುವ ಅಥವಾ ಬೆಂಗಳೂರಿನ ಸುತ್ತಲ ಗ್ರಾಮಗಳ ಹೆಸರುಗಳನ್ನು ಅರಿಯದಿರುವ ಓದುಗರಿಗೆ [ಓದುವಾಗ ಪೂರ್ತಿ ವರದಿಯನ್ನು ಓದದೇ ಇದ್ದರೆ] ಇದೇನಪ್ಪಾ ಹುಳಿಮಾವಿನಲ್ಲೇ ಅಡುಗೆಮಾಡಿ ಬಡಿಸಿದರೇ ಎಂದೆನಿಸಬಹುದು. 

ಪೈಲ್ವಾನ್ ಸಣ್ಣಪ್ಪ ಎಂಬವರನ್ನು ನೀವು ನೋಡದಿರಬಹುದು. ಅಥವಾ ನಿಮಗೆ ಗೊತ್ತಿರದಿರಲೂ ಬಹುದು. ಸಾಮಾನ್ಯವಾಗಿ ಪೈಲ್ವಾನ ಎಂದಕೂಡಲೇ ಬೃಹದಾಕಾರದ ಶರೀರದ ಗಿರಿಜಾ ಮೀಸೆಯ ಧಡೂತಿ ವ್ಯಕ್ತಿಯ ಚಿತ್ರ ಮನದಲ್ಲಿ ಮೂಡುತ್ತದೆ. ಆದರೆ ಹೆಸರು ಮಾತ್ರ ಸಣ್ಣಪ್ಪ! ಹಾಗಾದರೆ ಪೈಲ್ವಾನ್ ಸಣ್ಣ ಶರೀರಿಯೇ ? ನಮ್ಮಲ್ಲಿ ತಮಾಷೆಗೆ ತೀರಾ ತುಂಬಾಲೆ [ಕಡ್ಡಿಯ ರೀತಿ ತೆಳ್ಳಗಿರುವ]ಯಾಗಿರುವವರಿಗೆ ಕಡ್ಡಿ ಪೈಲ್ವಾನ ಎನ್ನುವ ಪದ ಬಳಕೆ ರೂಢಿಯಲ್ಲಿದೆ. ಪೈಲ್ವಾನ್ ಸಣ್ಣಪ್ಪನ ಸಂದರ್ಶನ ಮಾಡುತ್ತಿರುವಂತೇ ’ಮುಖ್ಯಮಂತ್ರಿಗಳ ಅಪರಕಾರ್ಯ ದರ್ಶಿಗಳು’ ಎಂದು ಬೋರ್ಡು ಹಾಕಿದ್ದು ನೆನಪಿಗೆ ಬಂದೇಬಿಟ್ಟಿತು! ಹಿಂದೂಗಳಲ್ಲಿ, ಬದುಕಿರುವವರ ಕಾರ್ಯವಾದರೆ ಪೂರ್ವಕಾರ್ಯ ಅಥವಾ ಮಂಗಳಕಾರ್ಯ ಎಂದೂ, ವ್ಯಕ್ತಿ ಗತಿಸಿದ ನಂತರ ಆ ವ್ಯಕ್ತಿಯ ಕುರಿತ ಶ್ರಾದ್ಧಕಾರ್ಯವಾದರೆ ಅಪರಕಾರ್ಯ ಎಂದೂ ಕರೆಯುವುದು ವಾಡಿಕೆ. ಆದರೆ ನಮ್ಮ ಮಂತ್ರಾಲಯಗಳಲ್ಲಿ ಪ್ರತಿಯೊಬ್ಬ ಮಂತ್ರಿಗೂ  ಸಹಾಯಕರಾಗುವ ’ಅಪರಕಾರ್ಯದರ್ಶಿಗಳ’ ಹುದ್ದೆ ಇರುತ್ತದೆ. ಯಾರೋ ವೈದಿಕ ದಿನಪತ್ರಿಕೆ ಓದಿದರೆ, ರಾಜಕೀಯದ ಪ್ರಸಕ್ತ ವಿದ್ಯಮಾನಗಳ ಅರಿವು ಆತನಿಗೆ ಇರದಿದ್ದರೆ, ಆಗ ಆತ ಓಹೋ ಅಲ್ಲೂ ಯಾರೋ ಅಪರಕಾರ್ಯ ಮಾಡಿಸುವವರಿದ್ದಾರೆ ಎಂದುಕೊಳ್ಳಬಹುದು! ಇಲ್ಲಿ ’ಅಪರ’ ಎನ್ನುವ ಪದದ ಬದಲಿಗೆ ಬೇರೇ ಹೊಸಪದದ ಬಳಕೆ ಮಾಡುವುದು ಸಮಂಜಸವೆನಿಸುತ್ತದೆ.

ಮಂತ್ರಾಲಯ ಎಂದತಕ್ಷಣ ನೆನಪಾಗುವುದು ರಾಘವೇಂದ್ರ ಸ್ವಾಮಿಗಳ ಚಿತ್ರ. ಮಂತ್ರಗಳಿಂದ ತುಂಬಿದ ಆಲಯ ಮಂತ್ರಾಲಯ ಎನಿಸಿದ್ದು ಎಲ್ಲರಿಗೂ ಗೊತ್ತು. ಮಂತ್ರಿಗಳು ಕುಳಿತು ಸೂಟ್ ಕೇಸ್ ಲೆಕ್ಕಹಾಕುವ ಜಾಗಕ್ಕೂ ’ಮಂತ್ರಾಲಯ’ ಎಂಬ ಪದವನ್ನು ಇತ್ತೀಚೆಗೆ ಬಳಸುತ್ತಾರೆ. ಅದು ಸಚಿವಾಲಯವೇ ಹೊರತು ಮಂತ್ರಾಲಯ ಎಂಬ ಶಬ್ದ ಅಲ್ಲಿ ಸಮರ್ಪಕವೆನಿಸುವುದಿಲ್ಲ. ಆಲಯ ಎಂಬ ಪದಕ್ಕೂ ಒಂದು ಮಾನ್ಯತೆಯಿದೆಯಷ್ಟೇ? ಎಲ್ಲದಕ್ಕೂ ಆಲಯ ಎಂದು ಬಳಸಿದರೆ ಆ ಅನುಭವ ಹೇಗಿರಬಹುದು? ಹೃದಯಾಲಯ, ನೇತ್ರಾಲಯ ಇವೆಲ್ಲ ಏನೋ ಸರಿ ಆದರೆ ’ಮೂತ್ರಾಲಯ’ ಎಂದು ಒಂದುಕಡೆ ಬರೆದಿದ್ದು ಕಂಡಿತು-ಅದೂ ಆಲಯವೇ? ಕಳೆದೆರಡು ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ಹಲವುಕಡೆ ರಸ್ತೆಬದಿಯ ಗೋಡೆಗಳಿಗೆ ಚಿತ್ತಾರಗಳನ್ನು ಬಿಡಿಸುವ ಕೆಲಸ ನಡೆದಿದೆ. ಹಲವಾರು ಕಡೆ ನನಗೆ ಕಾಣಿಸಿದ್ದು:  ಒಂದು ದೊಡ್ಡ ಆನೆ ಚಿತ್ರ ಅಥವಾ ಹುಲಿ ಮರದಮೇಲೆ ಮಲಗಿ ನಿದ್ರಿಸುವ ಚಿತ್ರ ಅವುಗಳಮೇಲೆ ಬಿಬಿಎಂಪಿ ಆಯುಕ್ತರು ಎಂದು ಬರೆದಿರುತ್ತದೆ. ಇದೇ ರೀತಿಯಲ್ಲಿ, ಮದ್ಯಪಾನ ನಿರ್ಮೂಲನಾ ಮಂಡಳಿಯ ಒಂದು ಕಟೌಟ್ ಕಂಡಿತ್ತು: ಮೇಲ್ಗಡೆ ’ಕರ್ನಾಟಕ ಸರ್ಕಾರ’ ಎಂದೂ ಅಲ್ಲೇ ಕೆಳಗೆ ’ಕುಡಿತದಿಂದ ಸರ್ವನಾಶ’ ಎಂದೂ ಬರೆದಿತ್ತು! ಪಾಪ ಓದಿದ ಜನ ಯಾವ ರೀತಿ ಅರ್ಥಮಾಡಿಕೊಳ್ಳಬೇಕು ?

ಕೆಲವೊಮ್ಮೆ ಸಭೆ-ಸಮಾರಂಭಗಳು, ಸಮ್ಮೇಳನಗಳು ನಡೆಯುತ್ತಿರುತ್ತವೆ. ಇಂಥಾ ಪೀಠಾಧ್ಯಕ್ಷರ [ಪೀಠಾಧ್ಯಕ್ಷರು ಎಂಬ ಪದಬಳಕೆಯೇ ಸರಿಯಲ್ಲ! ಅಲ್ಲಿ ಅಧ್ಯಕ್ಷರಿದ್ದಮೇಲೆ ಪೀಠಕ್ಕೆ ಅತಿಥಿಗಳೂ ಇರಬೇಕಾಯ್ತು !]೭೭ನೇ ಪೀಠಾರೋಹಣ ಮಹೋತ್ಸವ !! ವರ್ಷಕ್ಕೊಮ್ಮೆ ಹೊಸ ಹೊಸ ಪೀಠಾರೋಹಣ ಮಾಡುತ್ತಲೇ ಇದ್ದಾರ್ಯೇ? ಹಾಗಾದರೆ ಇಲ್ಲಿನ ಪದಬಳಕೆ ಸರಿಯಿದೆಯೇ?  ಅಲ್ಲೆಲ್ಲೋ ವಿದ್ಯಾರ್ಥಿಗಳ ಸಾಹಿತ್ಯ ಸಮ್ಮೇಳನ ನಡೆಯುತ್ತಿತ್ತಂತೆ ಅದಕ್ಕೇ ಅದನ್ನು ಹೀಗೆ ಬರೆದಿದ್ದರು: ’೯ನೇ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಕನ್ನಡ ಸಾಹಿತ್ಯ ಸಮ್ಮೇಳನ.’ ಎಷ್ಟು ಮಜವಾಗುತ್ತದೆ ನೋಡಿ. ಆಂಗ್ಲದಲ್ಲಿ ಒಂದು ಉದಾಹರಣೆ ಇದೆ-- ಕೋರ್ಟ್ ಹಾಲ್ ನಲ್ಲಿ ನ್ಯಾಯಾಧೀಶರು ತೀರ್ಪು ಘೋಷಿಸಿದರು " ಲೀವ್ ಹಿಮ್ ನಾಟ್ ಹ್ಯಾಂಗ್ ಹಿಮ್." ಸರಿಯಾಗಿ ಅರಿಯದ ಗುಮಾಸ್ತೆ ಅಲ್ಪವಿರಾಮ ಎಲ್ಲಿಹಾಕಬೇಕೆಂದು ಕೇಳಲೂ ಇಲ್ಲ, ಹಾಕಿಬಿಟ್ಟ, ನೋಡಿ- ಲೀವ್ ಹಿಮ್, ನಾಟ್ ಹ್ಯಾಂಗ್ ಹಿಮ್. ಖೂಳನೊಬ್ಬನಿಗೆ ದೇಹಾಂತ್ಯ ಶಿಕ್ಷೆ ವಿಧಿಸಲಾಗಿದ್ದು ಗುಮಾಸ್ತೆ ಬೆರಳಚ್ಚು ಮಾಡುವಾಗ ವ್ಯತ್ಯಾಸವಾಗಿತ್ತು! ಅದೇ ವಾಕ್ಯವನ್ನು ನ್ಯಾಯಾಧೀಶರು ಇನ್ನೊಮ್ಮೆ ಇನ್ನೊಬ್ಬ ಅಪರಾಧಿಗೆ ತೀರ್ಪಾಗಿ ಇತ್ತರು. ಈಗ ಗುಮಾಸ್ತೆ ತಡಮಾಡಲಿಲ್ಲ ಅಚ್ಚಿಸಿಯೇ ಬಿಟ್ಟ-ಲೀವ್ ಹಿಮ್ ನಾಟ್, ಹ್ಯಾಂಗ್  ಹಿಮ್! ಪಾಪದ ಅಪರಾಧಿಯನ್ನು ಆತ ನಿರಪರಾಧಿ ಎಂದು ಸಾಬೀತಾದುದರಿಂದ ಗುನ್ನೆಯಿಂದ ಖುಲಾಸೆಗೊಳಿಸಲಾಗಿತ್ತು; ಆದರೆ ಗುಮಾಸ್ತೆಯ ಎಡವಟ್ಟು ಈ ರೀತಿ ಇತ್ತು. ಮೇಲೆ ಹೇಳಿದ ವಿಶ್ವವಿದ್ಯಾಲಯ ಒಂಬತ್ತನೆಯದೋ ಅಥವಾ , ಒಂಬತ್ತನೇ ಸಾಹಿತ್ಯವೋ, ಅಲ್ಲಿನ ಒಂಬತ್ತನೇ ವಿದ್ಯಾರ್ಥಿಯೋ ಅಥವಾ ೯ನೇ ಸಮ್ಮೇಳನವೋ ? ’೯ನೇ’ ಎನ್ನುವ ಪದವನ್ನು ಎಲ್ಲಿ ಬಳಸಬೇಕು ಎಂಬುದು ಪ್ರಮುಖವಾಗಿರುತ್ತದೆ.  

ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಕಾಣುತ್ತಿರುವ ಕಾಗುಣಿತ ಮತ್ತು ವ್ಯಾಕರಣ ದೋಷಗಳು ಎಷ್ಟರಮಟ್ಟಿಗೆ ಇವೆ ಎಂದರೆ ’ತಪ್ಪಾಯ್ತು ತಿದ್ಕೋತೀವಿ’ ಎಂಬ ಕನ್ನಡ ಶಾಲೆಯನ್ನು ತೆರೆದು ಅಲ್ಲಿ ಹೊಸದಾಗಿ ವರದಿಗಾರರಿಗೆ ಕಲಿಸಬೇಕಾಗಿದೆ ಅನಿಸುತ್ತಿದೆ. ಒಬ್ಬರ ಕೂಡ ನಾನು ಮಾತನಾಡಿದಾಗ ಅವರು ಹೇಳಿದರು" ಈಗೇನಿದ್ರೂ ಸ್ಪೀಡ್ ಜಮಾನ, ಯಾವುದೂ ನಮ್ ಕೈಲಿರೋದಿಲ್ಲ, ಎಲ್ಲಾ ವರದಿಗಾರರೇ ನೇರವಾಗಿ ಟಂಕಿಸಿ ತಯಾರಿಸಿಬಿಡುತ್ತಾರೆ ಹೀಗಾಗಿ ತಪ್ಪುಗಳು ಸಹಜವಾಗಿ ಇದ್ದೇ ಇರುತ್ತವೆ" ನಾನು ಏನೂ ಉತ್ತರಿಸಲಿಲ್ಲ. ಹಿಂದಕ್ಕೆ ಮೊಳೆಗಳನ್ನು ಜೋಡಿಸಿ ಮುದ್ರಿಸುವ ಕ್ರಮ ಇತ್ತು[ಅಕ್ಷರಗಳು,ಸಂಕೇತಗಳು ಉಳ್ಳ ಮೊಳೆಗಳನ್ನು ದೂರದ ಮಾರುಕಟ್ಟೆಗಳಿಂದ ತೂಕದ ಲೆಕ್ಕದಲ್ಲಿ ಕೊಂಡು ತರಬೇಕಿತ್ತು]ದೋಷವಿದ್ದರೆ ಇಡೀ ಲೇಖನದ ಫ್ರೇಮ್[ಕಟ್ಟು] ತೆಗೆದು ಅಲ್ಲಿ ತಪ್ಪಾಗಿ ಜೋಡಿಸಲ್ಪಟ್ಟ ಮೊಳೆ ತೆಗೆದು ಸರಿಪಡಿಸಬೇಕಿತ್ತು, ಪರ್ಯಾಯ ವ್ಯವಸ್ಥೆ ಇರಲಿಲ್ಲ, ಆದರೂ ತಪ್ಪುಗಳು ಕಮ್ಮಿ ಇರುತ್ತಿದ್ದವು! ಇವತ್ತು ಗಣಕಯಂತ್ರದ ವ್ಯವಸ್ಥೆ ಇದೆ, ತಪ್ಪನ್ನು ಸರಿಪಡಿಸುವುದು ಅರೆನಿಮಿಷದ ಕೆಲಸ-ಆದರೂ ಮಾಡುವುದಿಲ್ಲ! ತಪ್ಪನ್ನು ತಪ್ಪೆಂದು ಗ್ರಹಿಸುವ/ಹುಡುಕುವ ಭಾಷಾ ಪ್ರೌಢಿಮೆಯುಳ್ಳ ವ್ಯಕ್ತಿಗಳನ್ನು ನೇಮಿಸಿಕೊಳ್ಳಲು ಯಾರಿಗೂ ಆಸಕ್ತಿಯಿಲ್ಲ. ದಿನಪತ್ರಿಕೆಗಳ ಓದುಗರ ಸಂಖ್ಯೆ ಬೆಳೆಸಬೇಕು, ಹೆಚ್ಚು ಜಾಹೀರಾತು ಗಳಿಸಬೇಕು ಎಂಬ ಭರದಲ್ಲಿ ಕಂಗ್ಲೀಷ್ ಲೇಖನಗಳೇ ಜಾಸ್ತಿ!ಬರಹಗಾರರಲ್ಲೂ ಕೂಡ ತಾವು ಬರೆದಿದ್ದೇ ಸರಿಯೆಂಬ ಅನಿಸಿಕೆಯ ಮೊಂಡುವಾದ. ಇದು ಹೊಸದೊಂದು ಕನ್ನಡವನ್ನೇ ಹುಟ್ಟುಹಾಕಿದೆ-ಅದೇ ’ಪತ್ರಿಗನ್ನಡ’ !!   

ಸಂತೆಯೊಳಗೊಂದು ಮನೆಯಮಾಡಿ
ಶಬ್ದಕ್ಕೆ ಅಂಜಿದೊಡೆಂತಯ್ಯಾ

--ಎಂಬ ವಚನದ ಅರ್ಥವನ್ನು ಈ ರೀತಿ ನಾವು ಪತ್ರಿಗನ್ನಡದ ಸಲುವಾಗಿ ಬಳಸಿಕೊಳ್ಳಬಹುದೇನೋ!

ವಿಧ್ಯೆ, ಉಧ್ಯೋಗ, ಶಬ್ಧ, ಅದಿಕಾರಿ, ಬಾಶೆ ಹೀಗೇ ಅನೇಕ ಪದಗಳ ’ರೂಪವೈವಿಧ್ಯ’ವನ್ನು ನೂರೆಂಟು ನೋಟಗಳಿಂದ ಪತ್ರಿಗನ್ನಡದಲ್ಲಿ ಕಾಣಬಹುದು! ಅಲ್ಲಿ ಒಮ್ಮೆ ಬರೆದಾಗ ಅದು ’ಉಧ್ಯೋಗ’ವಾದರೆ ಇನ್ನೊಮ್ಮೆ ಬರೆದಾಗ ’ಹುಧ್ಯೋಗ’ವಾಗಲೂ ಬಹುದು. ಇನ್ನು ಸಂಧಿ-ಸಮಾಸ ಇವೆಲ್ಲಾ ಬಿಡಿ ಸಮೋಸಾ ತಿಂದಷ್ಟೇ ಸಲೀಸು ನಮ್ಮ ವರದಿಗಾರರಿಗೆ! ’ಅವಳೇ ಅತನ ಬೇಕುಬೇಡಗಳಿಗೆ ಸ್ಪಂದಿಸುತ್ತಾ ಶೂ-ಸಾಕ್ಸ್ ನಿಂದಿಡಿದು, ಶರ್ಟ್ ಪ್ಯಾಂಟ್ ಗಳ ಇಸ್ತ್ರಿಸೇರಿದಂತೇ ಎಲ್ಲಾ ಕಾರ್ಯವನ್ನೂ ಚಾಚೂ ತಪ್ಪದೇ ನಿರ್ವಹಿಸುತ್ತಾಳೆ ’ ---ಎಂದು ಲೇಖನದ ಪ್ರಮುಖ ಉಲ್ಲೇಖವನ್ನು ತೋರಿಸಿದ ಪತ್ರಿಕೆಯೊಂದರ ಈ ಬರಹಕ್ಕೆ ಹಿಡಿದ ಗ್ರಹಣವನ್ನು ಬಿಡಿಸುವವರಾರು? ’ಹ’ ಕಾರದ ಸಂಧಿಯಾಗುವ ಜಾಗದಲ್ಲಿ ಅದನ್ನೇ ಹಾರಿಸಿಬಿಟ್ಟರೆ ಪದದ ಅರ್ಥವ್ಯತ್ಯಾಸವಾಗುವುದಿಲ್ಲವೇ? ಶಿವನೇ ಬಲ್ಲ. ಏಕವಚನ ಮತ್ತು ಬಹುವಚನಗಳ ಅರಿವು ಯಾರಿಗೂ ಇದ್ದಂತಿಲ್ಲ: ಆವುಗಳು ಮಾಡುತ್ತದೆ, ಭಾಷೆಗಳು ಇರುತ್ತದೆ--ಇದೆಲ್ಲಾ ಯಾವ ವ್ಯಾಕರಣ ಪದ್ಧತಿ ಸ್ವಾಮೀ ? ಓದುಕಲಿತ ವರದಿಗಾರರಿಗಿಂತಾ  " ನೀರ್ಗೊಳೆಲ್ಲಾ ಓಯ್ತಾ ಅವೆ" ಎಂಬೋ ಹಳ್ಳಿ ಹೈದನೇ ವಾಸಿ ಎನಿಸುತ್ತದೆ! ವರದಿಗಾರರಿಗೆ ಭಾಷೆಗೆ ಅನ್ಯಾಯ/ಅಪಚಾರ ಎಸಗಬಾರದೆಂಬ ನೈತಿಕ ಜವಾಬ್ದಾರಿ ಬೇಡವೇ? ಅಥವಾ ಹೇಗೇ ಬರೆದರೂ ಅದು ನಮ್ಮ ಕನ್ನಡ ಎಂದು ಓದುಗರು ಒಪ್ಪಿಕೊಳ್ಳಬೇಕೇ ? ವರದಿಗಾರರ ಮಾತಿನಲ್ಲೇ ಬರೆಯುವುದಾದರೆ ’ಪತ್ರಿಕೆಗಳಿಂದ ಒಸದಾಗಿ ಜನಿಸಿದ ಪತ್ರಿಗನ್ನಡ ನಮ್ಮ ಕನ್ನಡದ ಎಮ್ಮೆ!’

ನೀವು ಕೇಳಬಹುದು ’೭೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ ಎಂಬುದು ಸರಿಯೇ? ಸರಿಯಲ್ಲ. ’ಅಖಿಲಭಾರತ ಕನ್ನಡ ಸಾಹಿತ್ಯದ ೭೮ನೇ ಸಮ್ಮೇಳನ’ ಎನ್ನುವುದು ಸರಿ ಎಂದು ನನ್ನ ವಾದ. ಪದಗಳನ್ನು ಜೋಡಿಸಿದಾಗ ಅನರ್ಥವಾಗಬಾರದೆಂಬುದೇ ಇದರ ಉದ್ದೇಶ. ಹಾಗಾದರೆ ಮೇಲಿನ ಶೀರ್ಷಿಕೆಯನ್ನು ಹೇಗೆ ಬರೆಯಬಹುದಿತ್ತು ? ’ಹುಳಿಮಾವು ಗ್ರಾಮದಲ್ಲಿ ಎಲ್ಲರಿಗೂ ಸಮಾರಾಧನೆ’ ಎಂದು ಬರೆಯಬಹುದಿತ್ತು. ಇದು ಕೇವಲ ಸಾಂಕೇತಿಕ, ಊರುಗಳ ಹೆಸರುಗಳಲ್ಲಿ ವೈವಿಧ್ಯತೆ ಅಡಗಿದೆ, ಅವು ಅಲ್ಲಿನ ಪ್ರಾದೇಶಿಕ, ಪ್ರಾಕೃತಿಕ, ದೈವಿಕ, ಸಾಂಪ್ರದಾಯಿಕ ಅಂಶಗಳನ್ನಾಧರಿಸಿ ಯಾರಿಂದಲೋ ಇಡಲ್ಪಟ್ಟವು. ಬಿಳೇಕ ಹಳ್ಳಿ ಎಂದು ಒಂದು ಪ್ರದೇಶದ ಹೆಸರನ್ನು ತಪ್ಪಾಗಿ ನಮೂದಿಸುತ್ತಾರೆ-ಅದು ಬಿಳೇಕಳ್ಳಿ, ಬಿಳಿಯ ಬಣ್ಣದ ಕಳ್ಳಿ ಗಿಡಗಳು ಜಾಸ್ತಿ ಇದ್ದಿದ್ದರಿಂದ ಬಿಳೇಕಳ್ಳಿ ಎಂದೆನಿಸಲ್ಪಟ್ಟಿತ್ತು, ಹಳ್ಳಿಯೂ ಆಗಿತ್ತಾದ್ದರಿಂದ ಅನೇಕ ಜನ ಬಿಳೇಕ ಹಳ್ಳಿ ಎಂದೇ ತಿಳಿದರು. ಈಗ ಆಂಗ್ಲದಲ್ಲಿ ಅದು ಬಿಳೇಕ ಹಳ್ಳಿ ಎಂದೇ ಬರೆಯಲ್ಪಡುತ್ತಿದೆ! ಹಲಸೂರು ಎಂಬುದು ಇದೇರೀತಿ ತಪ್ಪಿನಿಂದ ಅಲ್ಸೂರ್ ಎಂದು ಕರೆಯಲ್ಪಡುತ್ತಿತ್ತು-ಈಗ ಜನ ಎಚ್ಚೆತ್ತುಕೊಂಡು ಹಲಸೂರು ಎಂದೇ ಸಂಬೋಧಿಸುತ್ತಾರೆ.  

ಭಾಷಾ ರಕ್ಷಣೆಗೆ ನಿಂತಿರುವ ಸಂಘಟನೆಗಳೇ ಭಾಷೆಯ ಪೂರ್ಣ ಮಾಹಿತಿಯನ್ನೂ ವ್ಯಾಪ್ತಿಯನ್ನೂ ಸರಿಯಾಗಿ ಅರಿತುಕೊಳ್ಳಬೇಕಾಗಿದೆ. ಎಷ್ಟೋ ಸಂಘಟನೆಗಳಲ್ಲಿ, ಅವರು ಬರೆಸುವ ನಾಮಫಲಕಗಳಲ್ಲೇ ವೈರುಧ್ಯವಿರುತ್ತದೆ; ಕನ್ನಡವೇ ಇದು ಎಂಬಷ್ಟು ಆಭಾಸವಾಗುತ್ತದೆ. ಪ್ರಾಯಶಃ  ಹಿಂದೀ ಭಾಷೆಯ ಪ್ರಭಾವದಿಂದ ಬೆಂಗಳೂರು-ಮೈಸೂರು ಭಾಗಗಳಲ್ಲಿ ’ಜ್ಞ’ ಕಾರದ ಉಚ್ಚಾರ ಸರಿಯಾಗಿ ಆಗುತ್ತಿಲ್ಲ. ’ಜ್ಞ’ ಇರುವಲ್ಲೆಲ್ಲಾ ’ಘ್ನ’ ಅಥವಾ ’ಗ್ಯ’ ಎಂದು ಬಳಸುತ್ತಾರೆ. ಉದಾಹರಣೆಗೆ- "ಮೈಮೇಲೆ ಗ್ಯಾನವೇ ಇರಲಿಲ್ಲ", "ಗ್ಯಾನ ಭಾರತಿ" ಹೀಗೆಲ್ಲಾ. ಇನ್ನು ಸಭೆ-ಸಮಾರಂಭಗಳಲ್ಲಿ "ನಾವು ತುಂಬಾ ತುಂಬಾ ಕೃತಘ್ನರಾಗಿದ್ದೇವೆ" ಎನ್ನುತ್ತಾರೆ-ನಗಬೇಕೋ ಅಳಬೇಕೋ ತಿಳಿಯುವುದಿಲ್ಲ. ಕನ್ನಡದಲ್ಲಿ ಕೃತಜ್ಞ=ಉಪಕಾರ ಸ್ಮರಿಸುವ ಎಂದೂ ಕೃತಘ್ನ=ಉಪಕಾರ ಸ್ಮರಣೆ ರಹಿತ ಎಂದೂ ಅವು ವಿರುದ್ಧಾರ್ಥಕ ಪದಗಳಾಗಿವೆ. ಇದನ್ನೆಲ್ಲಾ ತಿಳಿಸಿ ಹೇಳಿದರೆ ಎಗರಾಡುತ್ತಾರೆ, ಕೋಪ ಕೈಗೇ ಬರುವ ಸನ್ನಿವೇಶವಿರುತ್ತದೆ. ಹೀಗಿದೆ ಸಂಗ್ತಿ ಎಂದು ಹೇಳುವ ಹಾಗೇ ಇಲ್ಲ. ಹಾಗಾದರೆ ಹೇಳಿಕೊಡುವವರಾರು? ಗೊತ್ತಿಲ್ಲ. 

ಯಾವುದೇ ಸಮಾರಂಭ ಮತ್ತು ಸಮಾರೋಪಗಳ ಮಾಹಿತಿ ದೊರೆತಾಗ ನನಗೆ ಬಹಳ ಖೇದವಾಗುತ್ತದೆ ಯಾಕೆಂದರೆ ಆಮಂತ್ರಣದಲ್ಲಿ ’ಸಮರೋಪ ಸಮಾರಂಭ’ ಎಂದು ನಮೂದಿಸುತ್ತಾರೆ. ಇವೂ ಕೂಡ ಪರಸ್ಪರ ವಿರುದ್ಧಾರ್ಥಕ ಶಬ್ದಗಳಾಗಿವೆ. ’ಸಮಾರೋಪ ಸಮಾರಂಭ’ ಎನ್ನುವ ಬದಲು ’ಸಮಾರೋಪ ಸಭೆ’ ಎನ್ನುವುದು ಸರಿಯಾದ ಕ್ರಮವಾಗಿದೆ; ಸಮಾರಂಭವಾಗಿದ್ದು ಸಮಾರೋಪಗೊಳ್ಳುತ್ತದೆ. ಸಮಾರಂಭ ಎಂಬ ಪದವನ್ನೇ ಆಂಗ್ಲದ ’ಫಂಕ್ಷನ್’ ಎನ್ನುವ ಪದದ ಜಾಗದಲ್ಲಿ ಬಳಸುವುದು ವಿಹಿತವಲ್ಲ. ಸಮಾರಂಭ ಎನ್ನುವ ಪದಕ್ಕೆ ಉತ್ಸವ, ಹಬ್ಬ, ಒಸಗೆ ಹೀಗೇ ಹಲವು ಅರ್ಥಗಳಿದ್ದರೂ, ಆರಂಭಗೊಂಡಿದ್ದ ಉತ್ಸವ ಅಂತ್ಯಕಾಣುವಾಗ ಅಲ್ಲಿ ಸಮಾರಂಭ ಎಂದು ಮತ್ತೆ ಹೇಳಿದರೆ ಆಭಾಸವಾಗುತ್ತದೆ.

ಎಷ್ಟೋ ಮಂದಿ ಕನ್ನಡದ ಪದಗಳಲ್ಲಿ ಸಂಸ್ಕೃತ ಪದಗಳ ಛಾಯೆಯನ್ನು ಕಂಡು ತಿದ್ದುಪಡಿ ಮಾಡಲು ಮುಂದಾಗುತ್ತಾರೆ. ಉದಾಹರಣೆಗೆ : ಹೃತ್ಪೂರ್ವಕ = ಹೃದಯ ಪೂರ್ವಕ. ಈ ’ಪೂರ್ವಕ’ ಎನ್ನುವುದರಲ್ಲೂ ಸಂಸ್ಕೃತದ ಛಾಯೆ ಉಳಿದುಕೊಂಡುಬಿಟ್ಟಿತಲ್ಲಾ? ಅದಕ್ಕೇನು ಮಾಡ್ತೀರಿ? ಸಂಸ್ಕೃತ ಭಾಷೆ ಕನ್ನಡಕ್ಕೆ ತನ್ನಿಂದ ಬಹಳ ಪದಗಳನ್ನು ಕೊಟ್ಟಿದೆ. [ಕನ್ನಡದ] ಅಮ್ಮನ [ಸ್ಥಾನದಲ್ಲಿರುವ ಸಂಸ್ಕೃತದ] ಛಾಯೆ ಮಗಳಲ್ಲಿ ಕಾಣದಿರಲು ಸಾಧ್ಯವೇ? ಸಂಸ್ಕೃತವನ್ನು ಒದ್ದೋಡಿಸಬೇಕು ಎಂಬ ಹುಳುಕು ಹುನ್ನಾರದ ಕೆಲವರು ಮೃತಭಾಷೆ, ಸತ್ತಭಾಷೆ ಎಂದೆಲ್ಲಾ ಸಂಸ್ಕೃತವನ್ನು ಜರಿಯುತ್ತಾರೆ. ಸಂಸ್ಕೃತವನ್ನು ಕಲಿತು,ಅರಿತು  ಒಮ್ಮೆ ಅಲ್ಲಿನ ಮಹಾಕಾವ್ಯಗಳನ್ನು ಓದಿಕೊಂಡರೆ, ಆ ಭಾಷೆಯ ಘನತೆ-ಗಾಂಭೀರ್ಯತೆಯನ್ನು ತಿಳಿದುಕೊಂಡರೆ ನಮ್ಮ ಅಸಲು ಬಂಡವಲ ಗೊತ್ತಾಗುತ್ತದೆ. ವಿನಾಕಾರಣ ಇನ್ನೊಂದು ಸಮೃದ್ಧ ಭಾಷೆಯನ್ನು ಸತ್ತಭಾಷೆ ಎನ್ನುವುದಕ್ಕಿಂತಾ ಅದು ನಮ್ಮ ಸಾಮರ್ಥ್ಯಕ್ಕೆ ಒಗ್ಗದ ಭಾಷೆ ಎಂದು ಒಪ್ಪಿಕೊಳ್ಳುವುದು ಸರ್ವ ಸಮ್ಮತವೆನಿಸುತ್ತದೆ. ಕನ್ನಡದಲ್ಲಿನ ಸಂಸ್ಕೃತ ಪದಗಳಿಗೆ ಪರ್ಯಾಯ ಪದಗಳು ಇರದಿದ್ದ ಪಕ್ಷದಲ್ಲಿ ಅವುಗಳನ್ನು ತಿದ್ದುವ ’ಹೃದಯವಂತಿಕೆ’ ಅನಗತ್ಯವೆನಿಸುತ್ತದೆ; ಅವುಗಳನ್ನೇ ಯಥಾಸ್ಥಿತಿಯಲ್ಲಿ ಇರಿಸಿಕೊಂಡರೆ ಭಾಷೆಯ ಸೊಗಸುಗಾರಿಕೆಯಲ್ಲಿ ಕುಸಿತ ಕಾಣಿಸಲಾರದು. ಇಲ್ಲಿಗೆ ’ಹುಳಿಮಾವಿನಲ್ಲಿ ನಡೆಸಿದ ಸಮಾರಾಧನೆ ’ ಮುಗಿಯುತ್ತದೆ; ಕೇಳಿಸಿಕೊಂಡ ನಿಮಗೆ ಕೃತಘ್ನ ಅಲ್ಲಲ್ಲ ಕೃತಜ್ಞನಾಗಿದ್ದೇನೆ !