ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, June 22, 2011

ಗಜಕೇಸರೀ ಯೋಗ !

ಗಜಕೇಸರೀ ಯೋಗ !

[ಸ್ನೇಹಿತರೇ ನಮಸ್ಕಾರ, ಹಾಸ್ಯ ಸಪ್ತಾಹದಲ್ಲಿ ಇಂದಿನ ಹಾಸ್ಯ ಹೂರಣ ತಯಾರಾಗಿದೆ. ಏಕವ್ಯಕ್ತಿ ಸೈನ್ಯದಂತೇ ರಭಸದಲ್ಲಿ ಮುನ್ನುಗ್ಗುತ್ತಿರುವ ನನ್ನ ಬರಹಗಳಿಗೆ ನಿಮ್ಮ ಸಂತಸದ ಓದೂ ಕಾರಣ. ಸಪ್ತಾಹದ ಪರಿಷೇಚನೆ ಎಲ್ಲರಿಗೂ ತಲುಪಲಿ ಎಂಬ ಇಷ್ಟದಿಂದ ಬಝ್‍ನಲ್ಲಿ ಸುದ್ದಿಮಾಡಿದೆ. ಇವತ್ತು ಮೂರನೇ ದಿನ : ’ಗಜಕೇಸರೀ ಯೋಗ’! ಬನ್ನಿ ಓದುವಿರಂತೆ : ]

ಉಗುರು ಕಡಿಯುತ್ತಾ ಕುಳಿತಿದ್ದ ಶ್ರೀಧರ ತಲೆಯೆತ್ತಿ ಮಾತನಾಡುತ್ತಿರಲಿಲ್ಲ. ಊರಿಗೆ ಹೊರಟು ನಿಂತಿದ್ದ. ಬೆಂಗಳೂರಿಗೆ ಬಂದು ಆಗಷ್ಟೇ ತಿಂಗಳೂ ನೆಟ್ಟಗೆ ಕಳೆದಿರಲಿಲ್ಲ. ಆದರೂ ಯಾಕೆ ಹೀಗೆ ? ಎಂಬ ಪ್ರಶ್ನೆಗೆ ಆತ ಹೇಳಿದ್ದು ಮನೆಯ ಅನಿವಾರ್ಯತೆ. ಆದರೂ ನನಗ್ಯಾಕೋ ಡೌಟಿತ್ತು. ಅಷ್ಟೆಲ್ಲಾ ಶ್ರೀಮಂತಿಕೆಯಿರದ ಕುಟುಂಬದ ತುಂಬಾ ಮಕ್ಕಳು. ಅವರ ನಡುವೆ ಯಾರಿಗಾದರೂ ನೌಕರಿ ಸಿಕ್ಕಿದ್ರೆ ಸಾಕಪ್ಪಾ ಎನಿಸುವ ಮನೆಯ ಯಜಮಾನನ ಪರಿಸ್ಥಿತಿ. ಹೀಗಿದ್ದೂ ಶ್ರೀಧರ ಯಾಕೆ ವಾಪಸ್ಸು ಊರಿಗೆ ಹೋಗುವ ಮಾತನಾಡಿದ?

ನೆಂಟರೊಬ್ಬರ ಒತ್ತಾಯಕ್ಕೆ ಕಟ್ಟುಬಿದ್ದು ಆತನನ್ನು ನನ್ನ ಮನೆಯಲ್ಲಿ ಉಳಿಸಿಕೊಂಡಿದ್ದೆ. ಆತನಿಗೊಂದು ಕೆಲಸವನ್ನೂ ಕೊಡಿಸಿದ್ದೆ. ಹಾಗಂತ ಏನೋ ಅಂತಹ ಮಹತ್ಕಾರ್ಯ ಮಾಡಿದವ ನಾನಲ್ಲ. ಆದರೂ ಬಡ ಹುಡುಗನೊಬ್ಬನಿಗೆ ಸಹಾಯವಾದರೆ ಸಾಕು ಎಂದು ಮನಸ್ಸು ಹೇಳಿತ್ತು, ಮಾಡಿದ್ದೆ. ಆತನಿಗೋ ಸುಟ್ಟುಕೊಂಡು ತಿನ್ನಲೂ ಎರಡೇ ಎರಡು ಶಬ್ದ ಇಂಗ್ಲೀಷು ಬರುತ್ತಿರಲಿಲ್ಲ. ಕಚೇರಿಯಲ್ಲಿ ಯಾರಾದರೂ ಇಂಗ್ಲೀಷಿನಲ್ಲಿ ಏನಾದರೂ ಕೇಳಿ-ಹೇಳಿ ಮಾಡಿದರೆ ಬ್ರಹ್ಮಾಸ್ತ್ರ ಪ್ರಯೋಗದ ತಡೆಯಲಾರದ ವೇದನೆ ಆತನಿಗೆ! ಆಡಲಾರ-ಅನುಭವಿಸಲಾರ. ಹೇಳಿದರೆ ಏನು ತಿಳಿಯುತ್ತಾರೋ ಎಂಬ ಅಳುಕು; ಹೇಳದಿದ್ದರೆ ಅರ್ಥವಾಗದೇ ಏನೇನೋ ಆಗಿಬಿಡುವ ಹೆದರಿಕೆ. ಬೇಡಪ್ಪಾ ಬೇಡ.

ನಂಗೂ ಇದರ ಗಾಳಿ ಹೊಡೆಯದೇ ಇರಲಿಲ್ಲ. ದಿನಾಲೂ ಮನೆಗೆ ಬರುವಾಗ ಸಂಭ್ರಮಿಸುವ ಶ್ರೀಧರ ಬೆಳಗಾದೊಡನೆಯೇ ಡಲ್ ಹೊಡೆಯುತ್ತಿದ್ದ. ಕಚೇರಿಯ ಬಗ್ಗೆ ಚಕಾರವೆತ್ತುತ್ತಿರಲಿಲ್ಲ. ದಿನಪತ್ರಿಕೆಗಳಲ್ಲಿ ಕನ್ನಡ ಪತ್ರಿಕೆಯನ್ನು ಮಾತ್ರ ಓದುತ್ತಿದ್ದನೇ ಹೊರತು ಇಂಗ್ಲೀಷು ಊಹೂಂ ಮಾರು ದೂರ ಇಟ್ಟುಬಿಡುತ್ತಿದ್ದ! ಇದನ್ನೆಲ್ಲಾ ತಿಳಿದೇ ಆತನಿಗೆ ದಿನಾಲೂ ಹತ್ತಾರು ಸರ್ತಿ ಇಂಗ್ಲೀಷ್ ದಿನಪತ್ರಿಕೆ ಓದಲು ಹೇಳಿದ್ದೆ. ಕಾರಣ ಇಷ್ಟೇ- ಸ್ವಲ್ಪವಾದರೂ ಆತನ ಸ್ಥಿತಿ ಬದಲಾಗಲಿ. ಆತನಿಗೆ ಇಂಗ್ಲೀಷಿನಲ್ಲಿ ಆಸಕ್ತಿ ಬರಲಿ ಎಂಬುದು. ಆದರೂ ಇಂಗ್ಲೀಷ್ ಪತ್ರಿಕೆ ಕಂಡೊಡನೆಯೇ ಅದ್ಯಾಕೋ ತೆನ್ನಾಲಿ ರಾಮನ ಬೆಕ್ಕು ಹಾಲು ಕಂಡ ರೀತಿ ಮಾಡುತ್ತಿದ್ದ! ಸ್ವತಃ ನಾನೇ ಅನೇಕ ಪದಗಳನ್ನೂ ವ್ಯಾಕರಣವನ್ನೂ ಕಲಿಸಲು ತೊಡಗಿದೆ.

ಸತ್ಯವನ್ನು ಹೇಳುತ್ತೇನೆ ಕೇಳಿ : ಆಯಾ ಜಾಗಗಳಲ್ಲಿ ಅಲ್ಲಲ್ಲಿಗೆ ಏನು ಬೇಕೋ ಅದನ್ನು ನಾವು ಅಳವಡಿಸಿಕೊಳ್ಳಬೇಕಾಗುತ್ತದೆ. [ವೈಯ್ಯಕ್ತಿಕ ಆಹಾರ, ಆಚರಣೆ ಈ ಮಾತಿನ ವ್ಯಾಪ್ತಿಗೆ ಬರುವುದಿಲ್ಲ]ಅದರಲ್ಲಂತೂ ಭಾಷೆಗಳನ್ನು ಜಾಸ್ತಿ ತಿಳಕೊಂಡಷ್ಟೂ ಉತ್ತಮ. ತಿಳಕೊಂಡಾಕ್ಷಣ ನಾವು ಅದೇ ಭಾಷೆಯನ್ನೇ ಎಲ್ಲಕಡೆಗೂ ಬಳಸಬೇಕೆಂಬ ನಿರ್ಬಂಧವೇನೂ ಇಲ್ಲ. ಕನ್ನಡ ಮೂಲದ ಕೆಲವು ಪಾಲಕರು ಆಂಗ್ಲ ಭಾಷೆಯನ್ನು ಮನೆಯಲ್ಲೂ ಬಳಸುತ್ತಾ ತಮ್ಮ ಮಕ್ಕಳ ಜೊತೆ ಮಾತನಾಡುತ್ತಿರುವಾಗ ಹಲವು ಶಬ್ದಗಳು ನೆನಪಿಗೆ ಬಾರದೇ ಒದ್ದಾಡುವುದೂ ಅಲ್ಲಿ ಕನ್ನಡ ಶಬ್ದಗಳನ್ನೇ ಉಪಯೋಗಿಸಿ ಮುಗಿಸುವುದೂ ನೋಡಿದ್ದೇನೆ. ಮಕ್ಕಳು ಮನೆಯಲ್ಲಾದರೂ ಕನ್ನಡ ಮಾತಾಡಲಿ ಬಿಡಿ, ಅಲ್ಲೂ ಡ್ಯಾಡಿ ಮಮ್ಮಿ ಯಾಕೆ ಬೇಕು? ಕೆಲವರಿಗಂತೂ ಮನೆಯಲ್ಲಿ ಅಪ್ಪಿತಪ್ಪಿ ಕನ್ನಡ ಅಡಿಬಿಟ್ಟರೆ ವಿಶ್ವಾಮಿತ್ರ ಶಾಪ ಕೊಡುವ ರೀತಿ ಆಡುತ್ತಾರೆ. ಮನೆಯ ಖೋಲಿಯಲ್ಲಿ ಮಕ್ಕಳನ್ನು ನೂಕಿ ತಾವೇ ಹೊಸ ತ್ರಿಶಂಕು ಸ್ವರ್ಗ ಸೃಷ್ಟಿಸಿದ ಸಮಾಧಾನಕ್ಕೆ ಬರುತ್ತಾರೆ!

ಹೆಂಗಸೊಬ್ಬಳಿಗೆ ತನ್ನ ಮಗಳು ಹೊರಗಡೆ ಹೋಗಿದ್ದಾಳೆ ಎನುವುದನ್ನು ಇಂಗ್ಲೀಷಿನಲ್ಲಿ ಹೇಳಬೇಕೆಂಬ ಚಡಪಡಿಕೆಯಿತ್ತು. ಆದರೆ ಆ ಹೆಂಗಸು ಕನ್ನಡ ಮೇಜರ್ ಬಿ.ಏ ಓದಿದ್ದು ಇಂಗ್ಲೀಷ್ ಬರುತ್ತಿರಲಿಲ್ಲ. ಭಂಡ ಧೈರ್ಯಕ್ಕೇನೂ ಕಮ್ಮಿ ಇರಲಿಲ್ಲ. ಎದುರಿಗೆ ಕುಳಿತಿರುವ ಹಿಂದೀ ಮಹಿಳೆಯ ಹತ್ತಿರ ಹೇಳಿದಳು " ಹೀ ಗೋ ಸಮ್ ವೇರ್" [ತನ್ನ ಮಗಳು ಎಲ್ಲೋ ಹೋಗಿದ್ದಾಳೆ ಎಂಬುದಕ್ಕೆ]. ಎದುರಿಗಿದ್ದವಳು ನಕ್ಕಳು ಜೊತೆಗೆ ಇವಳೂ ಕೂಡ, ಯಾರ್ಯಾರಿಗೆ ಏನೇನು ಅರ್ಥವಾಯಿತೋ ಶಿವನೇ ಬಲ್ಲ!ನೋಡುತ್ತಿದ್ದ ನಂಗೆ ನಗಲೂ ಆರದ ಅಳಲೂ ಆರದ ಪೇಚಾಟ, ಆದರೂ ಅವರೊಟ್ಟಿಗೆ ನಾನೂ ತಡೆಯಲಾರದೇ ಹಲ್ಲುಕಿರಿದೆ. ಇನ್ನೊಬ್ಬಾತ ಆಗಿನ್ನೂ ಕಲಿತಿದ್ದ ಇಂಗ್ಲೀಷನ್ನು ಉಪಯೋಗಿಸುವ ಗಡಿಬಿಡಿಯಲ್ಲಿದ್ದ. ಮನೆಗೆ ಬಂದ ಸ್ನೇಹಿತ " ನಿನ್ನ ತಂದೆ ಎಲ್ಲೋ " ಎಂದು ಕೇಳಿದ. ಸ್ನೇಹಿತನಿಗೆ ತನ್ನ ವಿದ್ಯೆಯನ್ನು ತೋರಿಸಬೇಕಲ್ಲಾ " ಮೈ ಫಾದರ್ ಈಸ್ ನೋ ಮೋರ್ " ಎಂದುಬಿಟ್ಟ. ಅಲ್ಲಿ ನೋ ಮೋರ್ ಹೀಯರ್ ಎಂದಾದರೂ ಹೇಳಿದ್ದರೆ ಪರವಾಗಿರ್ಲಿಲ್ಲ. ಸ್ನೇಹಿತ ಕಕ್ಕಾವಿಕ್ಕಿಯಾದ. " ಓ ವೆರಿ ಸಾರಿ ಕಣೋ ನಂಗೆ ಗೊತ್ತಿರ್ಲಿಲ್ಲ...ಅಂತೆಲ್ಲಾ ಹೇಳಿಬಿಟ್ಟ". ಆದರೂ ಈ ಬುದ್ಧುವಿಗೆ ಅರ್ಥವಾಗಲೇ ಇಲ್ಲ. ವಾರಕಳೆದು ಮಾರುಕಟ್ಟೆಯಲ್ಲಿ ಆತನ ತಂದೆ ಸ್ನೇಹಿತನಿಗೆ ಸಿಕ್ಕಿದಾಗ ದೆವ್ವವೋ ಅಥವಾ ನಿಜವಾಗಿಯೂ ಅವರೇ ಬದುಕಿದ್ದಾರೋ ಎಂಬ ಸಂದೇಹದಲ್ಲಿ ದಂಗಾಗಿ ಬೆವತುಹೋದ!

ಇನ್ನೂ ಒಂದು ಮಾತು ಇಂಗ್ಲೀಷು ಅಂತ ಒಂದೇ ಅಲ್ಲ, ಯಾವುದೇ ಭಾಷೆಯಾದರೂ ಅಲ್ಪವಿರಾಮ, ಪೂರ್ಣವಿರಾಮ ಇತ್ಯಾದಿ ಚಿಹ್ನೆಗಳನ್ನು ಸರಿಯಾದ ಜಾಗಗಳಲ್ಲಿ ಬಳಸಬೇಕು. ಕೆಲವರು ಬರೆಯುವಾಗ ಈ ಚಿಹ್ನೆಗಳನ್ನೆಲ್ಲಾ ಉಪಯೋಗಿಸಿಯೇ ಗೊತ್ತಿಲ್ಲ. ಅವರ ಲೆಕ್ಕದಲ್ಲಿ ಚಿಹ್ನೆಗಳೆಲ್ಲಾ ಮುದ್ರಿಸಿದಾಗ ತಂತಾನೇ ಬರುವಂಥವು ಎಂದಿರಬೇಕೋ ಏನೋ. ಚಿಹ್ನೆಗಳ ಬಳಕೆಯಲ್ಲಿ ವ್ಯತ್ಯಾಸವಾದರೆ ಪ್ರಮಾದ ಸಂಭವಿಸಿದರೂ ಹೆಚ್ಚಲ್ಲ! ಒಮ್ಮೆ ನ್ಯಾಯಾಲಯದಲ್ಲಿ ನ್ಯಾಯಾಧೀಶ ತೀರ್ಮಾನವಿತ್ತಿದ್ದನ್ನು ಅಲ್ಲಿನ ನೌಕರ ಬರೆದುಕೊಂಡ. ನ್ಯಾಯಾಧೀಶ ಹೇಳಿದ್ದು: leave him, not hang him ಆದರೆ ಆತ ಬರೆಯುವಾಗ leave him not, hang him ! ನಿರಪರಾಧಿಗೆ ಗಲ್ಲು ಶಿಕ್ಷೆ ! ಇದನ್ನೇ ತಿರುವು ಮುರುವು ಮಾಡಿನೋಡಿ, ಆಗ ಅಪರಾಧಿಗೆ ಶಿಕ್ಷೆಯಿಂದ ಮುಕ್ತಿ! ಹೀಗೇ ಚಿಹ್ನೆಗಳನ್ನು ಹೇಗೆ ಬಳಸಬೇಕೆಂಬ ಅರಿವು ಬರೆಯುವಾತನಿಗೆ ಗೊತ್ತಿರ್ಬೇಕು.

ಮರಳಿ ಶ್ರೀಧರನನ್ನು ತಿಳಿಯೋಣ. ಈತನಿಗೆ ಯಾವುದೇ ವ್ಯಾವಹಾರಿಕ ಜ್ಞಾನವಿರಲಿಲ್ಲ. ಸಾಮಾನ್ಯ ಜ್ಞಾನದಲ್ಲಿ ಸೊನ್ನೆ! ಕಾಮನ್ ಸೆನ್ಸ್ ಎನ್ನುವುದರ ಉದ್ಧರಣೆ ಕೆಲವೊಮ್ಮೆ ಹೀಗೆ--ದಿ ಸೆನ್ಸ್ ವಿಚ್ ಈಸ್ ನಾಟ್ ಸೋ ಕಾಮನ್! ಇವನಿಂದ ಕಛೇರಿಯಲ್ಲಿ ಕೆಲಸ ತೆಗೆಯುವುದೂ ಕಷ್ಟವಿತ್ತು. ಪರಿಚಯದವರಾದ ಕಂಪನಿಯ ಯಜಮಾನರಿಗೆ ಕೆಲಸಕ್ಕೆ ಸೇರಿಸಿದ ನನ್ನ ಈ ಕೆಲಸ ಬಿಸಿ ತುಪ್ಪವಾಗಿತ್ತು! ಅವರು ತಿಂಗಳದ ಕೊನೆಗೆ ಸಂಬಳವನ್ನೂ ಗೌರವದಿಂದಲೇ ಕೊಟ್ಟಿದ್ದರು. ಆದರೂ ಯಾಕೀತ ಹೊರಟು ನಿಂತ ?

ಬಂದಾಗಿನಿಂದ ಆತನ ತಲೆಯಲ್ಲಿ ಬೇರೇನೂ ಹೊಳೆಯಲೇ ಇಲ್ಲ. ತಾನು ಕೆಲಸಕ್ಕೆ ಸೇರಿಕೊಂಡ ಕಚೇರಿಯೇ ಚಿಕ್ಕದೆಂದು ಭಾವಿಸಿದ್ದ. ಆತನಿಗೆ ಊರ ಜೋಯಿಸರು ಹೇಳಿಬಿಟ್ಟಿದ್ದರು " ತಮ್ಮಾ ನಿಂಗೆ ಗಜಕೇಸರೀ ಯೋಗವಿದೆ." ಕನ್ನಡ ಮೇಜರ್ ಬಿ.ಏ ಓದುವಾಗಲೇ ಮೂರು ಸಾರಿ ಡುಮುಕಿಹಾಕಿದ್ದ ಆತನಿಗೆ ಬರೇ ಯೋಗದಮೇಲೇ ಕಣ್ಣು! ನಂಗಂತೂ ಒಂದು ಅರ್ಥವಾಗಲಿಲ್ಲ-ಗಜಕೇಸರೀ ಯೋಗವಿದೆ ಎಂತ ಸುಮ್ಮನೇ ಸ್ಟವ್ ಮುಂದೆ ಅಕ್ಕಿ ಪಕ್ಕಕ್ಕಿಟ್ಟು ಕುಳಿತರೆ ಅದು ಅನ್ನವಾಗಿ ಬಂದು ಬೀಳುವುದೇ? ಹೌದೋ ಏನೋ ಯಾರಿಗೆ ಗೊತ್ತು ? ಆದರೆ ಗಜಕೇಸರೀ ಯೋಗ ನಿಜವಾಗಿಯೂ ಬಂದಿರುವುದು ಸದ್ಯ ಜ್ಯೋತಿಷಿಗಳಿಗೆ. ಅದರಲ್ಲೂ ಮಾಧ್ಯಮಗಳಲ್ಲಿ ಬಂದು ಕುಳಿತು ಹುಚ್ಚುಹುಚ್ಚಾಗಿ ಹಲಬುವ ಜ್ಯೋತಿಷಿಗಳಿಗೆ ಭಯಂಕರ ಬುಲಾವು!

ಆದರೂ ನಾನು ಶ್ರೀಧರ ಹೋಗುವುದನ್ನು ತಡೆದೆ. ಆತನಿಗೆ ಹೇಳಿದೆ " ಯಾಕಪ್ಪಾ ಶ್ರೀಧರ ಇಲ್ಲೇ ಇದ್ದು ಇಲ್ಲಿನ ವೈವಾಟುಗಳನ್ನೂ ಕಲಿತು ಭಾಷೆಯನ್ನೂ ಕಲಿತು ನೀನು ನಿನ್ನ ಕಾಲಮೇಲೆ ನಿಂತುಕೊಳ್ಳುವ ಇಚ್ಛೆಯಿಲ್ಲವಾ ? " ಶ್ರೀಧರ ಉತ್ತರಿಸಲೇ ಇಲ್ಲ. ನನ್ನೆಡೆಗೆ ಕಳಿಸಿದ್ದ ಆ ನನ್ನ ನೆಂಟರಿಂದ ನಂಗೆ ಬೆಳ್ಳಂಬೆಳಿಗ್ಗೆ ಫೋನು! " ಆತನಿಗೆ ಅಲ್ಲಿರಲು ಇಷ್ಟವಿಲ್ಲ, ಊರಲ್ಲಿ ಅದೇನೋ ವ್ಯಾಪಾರ ಮಾಡ್ತಾನಂತೆ, ಆತನಿಗೆ ಗಜಕೇಸರೀ ಯೋಗ ಬೇರೇ ಇದೆ. ಏನಾದ್ರೂ ಸಾಧಿಸಬಹುದು ದಯಮಾಡಿ ಅವನನ್ನು ಕಳಿಸಿಕೊಡು "

" ತಥಾಸ್ತು " ಎಂದುಬಿಟ್ಟೆ. ಶ್ರೀಧರ ಹೊರಟೇಬಿಟ್ಟ.

ಕಾಲೇಜು ದಿನಗಳಲ್ಲಿ ಆತ ಕನ್ಯೆ[ಇರಬಹುದೇ?]ಯೋರ್ವಳನ್ನು ಲವ್ ಮಾಡಿದ್ದ. ಶ್ರೀಧರ ಬೆಂಗಳೂರನ್ನು ತೊರೆದು ಬರುತ್ತಿರುವಂತೆಯೇ ದೋಸ್ತರ ಮೂಲಕ ಆತನಿಗೆ ಮೊದಲು ತಲುಪಿದ ಸುದ್ದಿ "ಆ ಹುಡುಗಿಗೆ ಮದುವೆ ಅರೇಂಜ್ ಆಗಿದೆ"! ಶ್ರೀಧರ ಹಲವಾರು ರೀತಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದರೂ ಆಕೆ ಮತ್ತೆಲ್ಲೂ ಹೊರಬರದ ಗೃಹಬಂಧನದಲ್ಲಿದ್ದಳು. ಹಿರಿಯರು " ಹುಡುಗನ ಆಸ್ತಿ ನೋಡು ನೀನು ಸುಖವಾಗಿರಬಹುದು " ಎಂದಿದ್ದಕ್ಕೆ ಅಸ್ತು ಎಂದುಬಿಟ್ಟಿದ್ದಳು. ಕೆಲವೇ ದಿನಗಳಲ್ಲಿ ಮದುವೆ ನಡೆದೇ ಹೋಯಿತು. ಶ್ರೀಧರ ಆರೆಂಟು ತಿಂಗ್ಳು ಕರೆಂಟ್ ಹೊಡೆದ ಕಾಗೆಯ ಥರಾ ಇದ್ದ. ಗಜಕೇಸರೀ ಯೋಗ ! ಆಮೇಲೆ ಸ್ವಲ್ಪ ಮನಸ್ಸು ಸಮಾಧಾನಿಸಿ ಕೊಂಡ.

ಶ್ರೀಧರನಲ್ಲಿ ಯಾವ ಶಿಸ್ತೂ ಇರಲಿಲ್ಲ. ಸಾಮಾನುಗಳನ್ನೆಲ್ಲಾ ಹರಡಿಕೊಂಡು ಬಿಡುತ್ತಿದ್ದ. ಬಟ್ಟೆಯ ಬಗ್ಗೆ ಯಾವುದೇ ಆಸ್ಥೆಯಿರಲಿಲ್ಲ. ಹೇಗಾಯಿತ್ಹಾಗೆ ಇದ್ದು ಬಿಡೋದು ಅವನ ವಾಡಿಕೆ. ಸಮಯಕ್ಕೆ ಕೆಲಸವನ್ನು ಮಾಡಿಮುಗಿಸುವ ಜವಾಬ್ದಾರಿಯೂ ಇರಲಿಲ್ಲ. ವ್ಯಾಪಾರವನ್ನೇನೋ ಶುರು ಮಾಡಿದ. ಹೇಗೆ ಮಾಡಬೇಕೆಂಬ ಅನುಭವವಾಗಲೀ ಮಾಡುವ ಚಾಕಚಕ್ಯತೆಯಾಗಲೀ ಇರಲಿಲ್ಲ. ತಿಳಿದವರು ಹೇಳಿದರೆ ಕೇಳುವ ಸ್ವಭಾವವೂ ಅವನದ್ದಲ್ಲ. ವ್ಯಾಪಾರದಲ್ಲಿ ಒಂದಷ್ಟು ಕಳಕೊಂಡ. ಮನೆಯಲ್ಲಿ ಮೊದಲೇ ಹೇಳಿದೆನಲ್ಲ ... ಆ ಸ್ಥಿತಿ. ನಂಗೆ ಮತ್ತೆ ಫೋನು " ಶ್ರೀಧರನಿಗೆ ಅಲ್ಲೇ ಇನ್ನೊಮ್ಮೆ ಹೇಳಿ ಅದೇ ಕೆಲಸ ಕೊಡಿಸಬಹುದಾ ? " ನಾನು ತಡಮಾಡಲಿಲ್ಲ. " ಆತ ಅಲ್ಲೇ ಎಲ್ಲಾದರೂ ಹುಡುಕಲಿ ಸದ್ಯ ಇಲ್ಲಿ ಆ ಜಾಗ ಖಾಲೀ ಇಲ್ಲ. ಮೇಲಾಗಿ ಆತನಿಗೆ ಗಜಕೇಸರೀ ಯೋಗವಿರುವುದರಿಂದ ಮತ್ತೆ ಯೋಗವಶಾತ್ ಊರಿಗೆ ಹೋಗಬೇಕಾಗಬಹುದು. " ನೆಂಟ ವಿಷಾದದ ದನಿಯಲ್ಲಿ ನಕ್ಕ ಜೊತೆಗೆ ನಾನೂ...

ಟಾಟಾ ದವರು ತಮ್ಮ ಇಂಡಿಕಾ ಕಾರಿನ ಬಗ್ಗೆ ಹೇಳುತ್ತಾ ’ ಮೋರ್ ಕಾರ್ ಪರ್ ಕಾರ್’ ಎನ್ನುತ್ತಿದ್ದರು! ಅದರ ಅರ್ಥ ನಿಮಗಾಗಿರಬೇಕಲ್ಲ ? ಹಾಗೆಯೇ ಹಳೆಯ ಮನೆಯಲ್ಲಿ ಹಲವಾರು ಮನೆಗಳು ಬಾಗಿಲು ತೆರೆದವು! ಇದ್ದ ಎಕರೆ ಆಸ್ತಿ ವಿಭಾಗವಾಗಿ ಹತ್ತತ್ತು ಗುಂಟೆ ಪಾಲಿಗೆ ಬಂದಿತ್ತು. ಈಗಲೂ ಆತ ಊರಲ್ಲೇ ಇದ್ದಾನೆ. ಕಷ್ಟದಲ್ಲೇ ಶ್ರೀಧರ ಮದುವೆಯಾಗಿದ್ದಾನೆ. ಆಗಲೇಬೇಕಲ್ಲ ? ಮೂರು ಜನ ಮಕ್ಕಳು ಅಪ್ಪನನ್ನು ಪ್ರೀತಿಯಿಂದ ಮುತ್ತುಕೊಳ್ಳುತ್ತವೆ. ಆರತಿಗೊಂದು ಕೀರುತಿಗೊಂದು ಇನ್ಯಾವುದಕ್ಕೋ ಇನ್ನೊಂದು. ಗಂಡು ಹುಟ್ಟಿಲ್ಲ ಅಂತ ಇನ್ನೂ ಒಂದು ’ಪ್ರಯತ್ನ’ ನಡೆದಿದೆ! ಸದ್ಯದಲ್ಲೇ ಅದೂ ಪ್ರಕಟಗೊಳ್ಳಬಹುದು. ಇದ್ದ ಮಕ್ಕಳಿಗೇ ಗತಿಯಿಲ್ಲದಿದ್ದರೂ ಇನ್ನೊಂದು ಕೊಡುವ ಸದಾಶಿವ ಸುಮ್ಮನೇ ಕೂರುತ್ತಾನೆಯೇ ? ದೇಶಕ್ಕೇ ಅಪಾರ ಕೊಡುಗೆ! ಗಜಕೇಸರೀ ಯೋಗದ ಮಹಿಮೆ!