ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, February 1, 2010

ಬ್ರಿಟಿಷ್ ಸರಕಾರದಿಂದ ತಸ್ತೀಕನ್ನು ಪಡೆದ ಭೂಪ ಈ ಗಣಪ !








ಬ್ರಿಟಿಷ್ ಸರಕಾರದಿಂದ ತಸ್ತೀಕನ್ನು ಪಡೆದ ಭೂಪ ಈ ಗಣಪ !


ಇಡಗುಂಜಿ ಶ್ರೀ ಮಹಾಗಣಪತಿಯ ಬಗೆಗೆ ಹೇಳಹೊರಟಿದ್ದೇನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ, ಶ್ರೀಮತ್ ಶರಾವತೀ ನದೀ ತಟದಲ್ಲಿ , ಹೊನ್ನಾವರದಿಂದ ಸುಮಾರು ೧೪ ಕಿಲೋಮೀಟರ್ ದೂರದಲ್ಲಿ, ಆಗ್ನೇಯ ದಿಕ್ಕಿನಲ್ಲಿ ನೆಲೆನಿಂತ ಒಂದು ಜಾಗ ಶ್ರೀಕ್ಷೆತ್ರ ಇಡಗುಂಜಿ. ಇಲ್ಲಿಯ ಗಣಪತಿ ದೇವರು ತನ್ನ ಪ್ರಖರ ಪ್ರಭಾವದಿಂದ ಜಗತ್ಪ್ರಸಿದ್ಧನಾಗಿದ್ದಾನೆ.

ಹಿನ್ನೆಲೆ
: ಸುಮಾರು ೧೫೦೦ ವರ್ಷಗಳ ಇತಿಹಾಸ ಹೊಂದಿರುವ[ಇದಕ್ಕೂ ಪೂರ್ವದ ದಾಖಲೆಗಳು ಸಿಗುತ್ತಿಲ್ಲ, ಇದು ಇನ್ನೂ ಪುರಾತನವೆಂಬುದು ನಿಸ್ಸಂಶಯ]ಇಡಗುಂಜಿ ದೇವಸ್ಥಾನ ಅನೇಕ ಅರಸುಮಕ್ಕಳಿಗೆ ಶ್ರದ್ಧೆಯ ಆರಾಧನಾ ಕೇದ್ರವಾಗಿತ್ತು ಎಂದು ಇತಿಹಾಸದಲ್ಲಿ ಕಂಡು ಬರುತ್ತದೆ. ಹುಬ್ಬಾಸಿ ಎಂಬ ರಕ್ಕಸನ ಉಪಟಳ ಜಾಸ್ತಿಯಾಗಿ ಕರಾವಳಿಯಲ್ಲಿ ಜನರೆಲ್ಲ ನೊಂದಿರುವ ಕಾಲದಲ್ಲಿ ರಾಜಮನೆತನದವರು ಅವನನ್ನು ನಿಗ್ರಹಿಸಿದರೆಂದೂ,  ಸರಿಯಾದ ಪೂಜೆ ಪುನಸ್ಕಾರಕ್ಕಾಗಿ ಬನವಾಸಿಯ ಕದಂಬರು ಉತ್ತರದ ಅಹಿಕ್ಷೇತ್ರದಿಂದ ಆಚಾರವಂತ ಬ್ರಾಹ್ಮಣರನ್ನು ಕರೆತಂದು ಆಶ್ರಯವಿತ್ತು, ಮುಂದೆ ತಮ್ಮ ರಾಜ್ಯಭಾರ ಚೆನ್ನಾಗಿ ನಡೆಯಲೆಂದು ಪ್ರಾರ್ಥಿಸಿದರೆಂದು ತಿಳಿದುಬರುತ್ತದೆ. ಕೆಳದಿಯ ರಾಜ ಶಿವಪ್ಪನಾಯಕನಿಂದ ಕಟ್ಟಡದ ಜೀರ್ಣೋದ್ಧಾರ ನಡೆಸಲ್ಪಟ್ಟ ದಾಖಲೆಗಳಿವೆ.

ಕ್ಷೇತ್ರ ಪುರಾಣ
: ದ್ವಾಪರ ಯುಗದಲ್ಲಿ ವಾಲಖಿಲ್ಯ ಎಂಬ ಮಹರ್ಷಿ ಅನೇಕವರ್ಷಗಳಕಾಲ ಈ ಶರಾವತೀ ತೀರದಲ್ಲಿರುವ ಕುಂಜಾವನದಲ್ಲಿ [ಗುಂಜಾರಣ್ಯದಲ್ಲಿ] ಅಘೋರ ತಪಸ್ಸನ್ನು ಆಚರಿಸುತ್ತ ಅದಕ್ಕೆ ತಕ್ಕುದಾದ ಫಲಶ್ರುತಿ ಕಾಣದೇ ಇರುವಾಗ ದೇವರ್ಷಿ ನಾರದರು ಅಲ್ಲಿಗೆ ಬರುತ್ತಾರೆ. ಬಂದ ನಾರದರಿಗೆ ತನ್ನ ಸಂಕಷ್ಟವನ್ನು ನಿವೇದಿಸಿದ ವಾಲಿಖಿಲ್ಯರಿಗೆ ಈ ಸ್ಥಳದ ಹಾಗೂ ಮನುಕುಲದ ಹಿತ ದೃಷ್ಟಿಯಿಂದ ಇಲ್ಲಿ ಪೂರ್ಣಕಳೆಯ ಗಣೇಶನನ್ನು ಸ್ಥಾಪಿಸಿ ಪೂಜಿಸಲು ಸಲಹೆನೀಡುತ್ತಾರೆ. ಪೂರ್ಣಕಳೆಯ ಗಣೇಶ ಆಗಬೇಕೆಂದರೆ ಸ್ವತಃ ಗಣೇಶ ಭೂಮಿಗೆ ಬರಬೇಕು, ಇದಕ್ಕೆ ಉಪಾಯವೇನೆಂದು ಕೇಳಲಾಗಿ ನಾರದರು ತಾನು ಗಣೇಶನನ್ನು ಕರೆತರುವುದಾಗಿ ಕೈಲಾಸಕ್ಕೆ ತೆರಳುತ್ತಾರೆ. ಕೈಲಾಸಕ್ಕೆ ನಾರದರು ತೆರಳಿದ ವೇಳೆ ಅಪ್ಪ-ಅಮ್ಮನ ಮಧ್ಯೆ ಸಿಹಿತಿಂಡಿಗಾಗಿ ಹಠಹಿಡಿದ ಬಾಲಗಣಪ ಕಾಣಸಿಗುತ್ತಾನೆ.[ಗಣಪತಿ ಮೂಲರೂಪದಿಂದ ಪರಬ್ರಹ್ಮಸ್ವರೂಪವಾಗಿದ್ದರೂ ಬಹು ಪ್ರಚಲಿತವಿರುವ ಗಣಪತಿಯ ಅವತಾರಗಳಲ್ಲಿ ಪಾರ್ವತೀಸುತ ಕೂಡ ಒಂದು ಅವತಾರ!] ಹೀಗೆ ಕಂಡ ಗಣಪನನ್ನು ಮೂಲರೂಪದಿಂದ ಪ್ರಾರ್ಥಿಸಲು ತನಗೆ ದಿನಂಪ್ರತಿ ಎಡಬಿಡದೆ ಸಿಹಿತಿಂಡಿ-ಮೋದಕ-ಪಂಚಕಜ್ಜಾಯ ಇವನ್ನೆಲ್ಲ ಕೊಡುವ ಹಾಗಿದ್ದರೆ ಭೂಮಿಗೆ ನಾರದರ ಜೊತೆ ಬರುವುದಾಗಿ ಭರವಸೆ ಕೊಡುತ್ತಾನೆ. ಅದನ್ನೇ ನಿರೀಕ್ಷಿಸುತ್ತಿದ್ದ ನಾರದರು "ತಥಾಸ್ತು" ಎಂದುಬಿಡುತ್ತಾರೆ,ಗಣಪನನ್ನು ಭೂಮಿಗೆ ಕರೆತರುತ್ತಾರೆ. ಭುವಿಗೆ ಬಂದ ವಿಘ್ನೇಶ್ವರ ವಾಲಖಿಲ್ಯರ ವಿಘ್ನಗಳನ್ನೆಲ್ಲ ತೊಡೆದು ಹಾಕಿ ಹೊರಡಲು ಕಾತುರನಾಗಿದ್ದ ವೇಳೆ, ಮುನಿಯ ಸತತಕೋರಿಕೆಯ ಮೇರೆಗೆ ದೇವಾನುದೇವತೆಗಳೆಲ್ಲ ಸೇರಿ ಗಣಪತಿಯನ್ನು ಅಲ್ಲೇ ಶಾಶ್ವತವಾಗಿ ಅಂಶರೂಪದಿಂದ ಉಳಿಯುವಂತೆ ಪ್ರಾರ್ಥಿಸುತ್ತಾರೆ. ಅನೇಕಸಲ ಒಲ್ಲೆ ಎಂದ ಗಣೇಶ ಅಂತೂ ಸಮ್ಮತಿಸುತ್ತಾನೆ. ದೇವಶಿಲ್ಪಿ ವಿಶ್ವಕರ್ಮ ಅತೀ ಅಪರೂಪದ ವಿಗ್ರಹವೊಂದನ್ನು ಕಡೆದುಕೊಡುತ್ತಾನೆ, ಸ್ವತಃ ನಾರದರು ಅಭೂತಪೂರ್ವವಾದ ಒಂದು ಮುಹೂರ್ತ ಹುಡುಕಿ ಆ ಗಣಪನ ವಿಗ್ರಹವನ್ನು ಪ್ರತಿಷ್ಠಾಪಿಸಿ ಪ್ರಥಮ ಪೂಜೆ ನಡೆಸುತ್ತಾರೆ. ಗಂಧರ್ವ-ಯಕ್ಷ, ಕಿನ್ನರ-ಕಿಂಪುರುಷರು ನಾ ನಾ ವಾದ್ಯಗಳೊಂದಿಗೆ ಗಾಯನ,ನರ್ತನಾದಿಗಳಿಂದ ಗಣೇಶನನ್ನು ಸಂಪ್ರೀತಗೊಳಿಸುತ್ತಾರೆ. ದೇವಗಣ ಜಯಜಯಕಾರವನ್ನು ಮೊಳಗಿಸುತ್ತದೆ. ಹೀಗೆ ಬ್ರಹ್ಮ-ವಿಷ್ಣು-ಮಹೇಶ್ವರಾದಿ ಸಕಲರೂ ಅಷ್ಟದಿಕ್ಪಾಲಕರೂ,ಅಷ್ಟಮಾತೃಕೆಗಳೂ ಬಂದು ಆ ಸಮಾರಂಭವನ್ನು ಬಹಳ ವಿಜೃಂಬಣೆಯಿಂದ ಆಚರಿಸುತ್ತಾರೆ. ಆನಂದತುಂದಿಲನಾದ ಗಜಾನನ ಪ್ರಸನ್ನನಾಗಿ, ಭುವಿಯ ಭಕ್ತರನ್ನೆಲ್ಲ ಅವರ ಇಷ್ಟಾರ್ಥನೆರವೇರಿಸುತ್ತ ಬಹಳ ಪ್ರಸಿದ್ಧನಾಗುತ್ತಾನೆ. ಇಂದಿಗೂ ಬೆಳಗಿನಜಾವ ಬ್ರಾಹ್ಮಿ ಮುಹೂರ್ತದಲ್ಲಿ ನಾರದರು ಮೊದಲ ಪೂಜೆಯನ್ನು ನಡೆಸುತ್ತಾರೆಂಬ ಪ್ರತೀತಿ ಜನಜನಿತವಾಗಿದೆ.


ಇತಿಹಾಸದಲ್ಲಿ : ಗಣೇಶ ಮಾತೋಬಾರ ಶ್ರೀ ಸಿದ್ಧಿವಿನಾಯಕನಾದ ಬಗೆ
ಇಂತಹ ಗಣಪತಿಗೆ ದಿನಾಲೂ ಕೊಪ್ಪರಿಗೆಯಲ್ಲಿ ಬೆಲ್ಲದಿಂದ ತಯಾರಿಸಿದ ’ಪಂಚಕಜ್ಜಾಯ’ವೆಂಬ ತಿನಿಸನ್ನು ನಿವೇದಿಸಲಾಗುತ್ತದೆ. ದಿನವೂ ಹತ್ತಾರು ಕ್ವಿಂಟಾಲ್ ’ಪಂಚಕಜ್ಜಾಯ’ ಮಾಡಿ ನಿವೇದಿಸುತ್ತಾರೆ. ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷ್ ಮಾಮಲೇದಾರನೊಬ್ಬ ಇಡಗುಂಜಿಗೆ ಬೇಟಿ ಕೊಡುತ್ತಾನೆ. ಅಲ್ಲಿನ ನೈವೆದ್ಯಕ್ಕೆ ಅಷ್ಟೆಲ್ಲ ಪದಾರ್ಥಗಳನ್ನು ಬಳಸುವುದನ್ನು ಕಂಡು " ವ್ಹಾಟ್ ಏ ವೇಸ್ಟ್ " ಅನ್ನುತ್ತಾನೆ. ಆಗ ಅಲ್ಲಿನ ಅರ್ಚಕರು ಗಣಪತಿಗೆ ಅಷ್ಟು ದಿನಾಲೂ ಬೇಕೆಂದೂ ಅದನ್ನು ಗಣೇಶ ತಿನ್ನುತ್ತಾನೆಂತಲೂ ತಿಳಿಸುತ್ತಾರೆ. ಬ್ರಿಟಿಷ್ ಮಾಮಲೇದಾರನಿಗೆ ಗಣಪತಿಯನ್ನು ಟೆಸ್ಟ್ ಮಾಡುವ ಹುಚ್ಚು ಹುಟ್ಟುತ್ತದೆ, ಅವನು ಅರ್ಚಕರಿಗೆ ಗಣಪತಿ ಕೊಪ್ಪರಿಗೆಯಷ್ಟು ಪಂಚಕಜ್ಜಾಯವನ್ನು ತಿನ್ನುವುದನ್ನು ತೋರಿಸೆಂದೂ ಒಂದೊಮ್ಮೆ ಅದು ಸುಳ್ಳಾದರೆ ಅರ್ಚಕರನ್ನು ಕಾರಾಗ್ರಹಕ್ಕೆ ಕಳುಹಿಸುವುದಾಗಿಯೂ ತಾಕೀತು ಮಾಡುತ್ತಾನೆ. ತಯಾರಿ ನಡೆಯುತ್ತದೆ. ಬ್ರಿಟಿಷ್ ಮಾಮಲೇದಾರ ಬೆಳ್ಳಿಯ ಹಗ್ಗವೊಂದನ್ನು ಮಾಡಿಸಿ ತರುತ್ತಾನೆ. ಅದನ್ನು ಗಣಪತಿಯ ಹೊಟ್ಟೆಗೆ ಕಟ್ಟಿ ಕುಣಿಕೆಯಿಂದ ಬಿಗಿಯಲಾಗುತ್ತದೆ. ಮಹಾಪೂಜೆ ಆದ ಮೇಲೆ ಎಲ್ಲರ ಎದುರು ಕೊಪ್ಪರಿಗೆಯನ್ನು ಗರ್ಭಗುಡಿಯ ಒಳಭಾಗದಲ್ಲಿ ದೇವರ ಎದುರು ಇಟ್ಟು ಬಾಗಿಲನ್ನು ಹಾಕಲಾಗುತ್ತದೆ. [ಒಂದೇ ಬಾಗಿಲು ಬಿಟ್ಟು ಬೇರೆ ಯಾವ ಬಾಗಿಲೂ ಇರುವುದಿಲ್ಲ ಎಂಬುದು ನೆನಪಿರಲಿ] ಅರ್ಚಕರಿಗೆ ಅಯೋಮಯ. ಹೊರಗಡೆ ಎಲ್ಲರ ಜೊತೆ ಕುಳಿತುಕೊಂಡು ಮನಸ್ಸಿನಲ್ಲಿ ಸದಾ ಪೂಜಿಸುವ ಗಣೇಶನನ್ನು ವಿಧ ವಿಧವಾಗಿ ಪ್ರಾರ್ಥಿಸುತ್ತಾರೆ. ಯತಾವತ್ ಕೊಟ್ಟ ಸಮಯ ಮೀರುತ್ತದೆ, ಬಾಗಿಲು ತೆರೆಯುತ್ತಾರೆ! ಏನಾಶ್ಚರ್ಯ ! ಕೊಪ್ಪರಿಗೆ ತುಂಬಾ ಇದ್ದ ಇದ್ದ ಪಂಚಕಜ್ಜಾಯ ಖಾಲಿ ಖಾಲಿ. ಕಟ್ಟಿದ ಬೆಳ್ಳಿಯ ಹಗ್ಗ ಎತ್ತಲು ಬರದಷ್ಟು ತುಂಡು ತುಂಡಾಗಿ ಬಿದ್ದಿರುತ್ತದೆ ! ಇದನ್ನು ಬ್ರಿಟಿಷ್ ಮಾಮಲೇದಾರ ಸಾಕ್ಷೀಕರಿಸಿದ್ದಾನೆ ಅಲ್ಲದೆ ತಪ್ಪಿನ ಅರಿವಾಗಿ ಕ್ಷಮಿಸೆಂದು ಪೂಜೆ ಸಲ್ಲಿಸಿ ಅಂದಿನಿಂದ ಬ್ರಿಟಿಷ್ ಸರಕಾರದ ವತಿಯಿಂದ ಪ್ರತಿದಿನ ೪ರೂಪಾಯಿ ’ತಸ್ತೀಕ್’ ಅನ್ನು ಪಂಚಕಜ್ಜಾಯಕ್ಕೆ ಅಂತ ಘೋಷಣೆ ಮಾಡಿ ಕೊಡಮಾಡುತ್ತಾರೆ. ಇದು ಕಾರವಾರದ ಅಂದಿನ ಬ್ರಿಟಿಷ್ ದಾಖಲೆಗಳಲ್ಲಿ ಉಲ್ಲೇಖಗೊಂಡಿದೆ. ಅರ್ಚಕರ ಮಾತು ಉಳಿಸಿದ ಗಣೇಶ ಮಹತಿ ಭಾರವನ್ನು ಹೊತ್ತು, ತನ್ನ ಮಾತೃತ್ವವನ್ನು ಮೆರೆದು ಮಾತೋಬಾರ ಸಿದ್ಧಿವಿನಾಯಕನೆಂದು ಪೂಜೆಗೊಳ್ಳುತ್ತಾನೆ.ಅತ್ಯಂತ ಜಾಗೃತ ಕ್ಷೇತ್ರವಾದ ಇಡಗುಂಜಿ ಇಂದಿಗೂ ಬರುವ ಎಲ್ಲಾ ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತ ಗಣಪತಿ ವಿಶ್ವವ್ಯಾಪಿಯಾಗಿದ್ದಾನೆ. ಪ್ರತಿದಿನ ಸಾವಿರಾರು ಭಕ್ತರಿಗೆ ದರುಶನ ನೀಡುವ ಬೆನಕ ವಿಶೇಷ ಹಬ್ಬ ಹರಿದಿನಗಳಲ್ಲಿ, ಸಂಕಷ್ಟ ಚತುರ್ಥಿಗಳಲ್ಲಿ ಲಕ್ಷಾಂತರ ಜನರಿಗೆ ಆಶೀರ್ವದಿಸುತ್ತಾನೆ! ಮಾಹಾ ಚೌತಿ ಮತ್ತು ರಥ ಸಪ್ತಮಿ ಅತೀ ವಿಶೇಷ ಪರ್ವಕಾಲಗಳಾಗಿದ್ದು ಆ ದಿನಗಳಲ್ಲಿ ದಿನವೊಂದಕ್ಕೆ ೫-೬ ಲಕ್ಷ ಜನರಿಗೆ ತನ್ನ ಬಗೆಬಗೆಯ ರೂಪವನ್ನು ತೋರ್ಪಡಿಸುತ್ತಾನೆ ಇಲ್ಲಿನ ಇನ್ನೊಂದು ವಿಶೇಷವೆಂದರೆ ವಿಗ್ರಹದ ಮೇಲೆ ಹೂವನ್ನೋ , ಬಟ್ಟೆಯನ್ನೋ ಅಥವಾ ಆಭರಣವನ್ನೋ ಯಾವುದನ್ನೂ ಹೇಗೇ ಇಟ್ಟರೂ ವಿಗ್ರಹ ಬೇರೆಬೇರೆ ರೀತಿಯಲ್ಲಿ ಅಂದವಾಗಿ ಕಾಣುತ್ತದೆ.ಮೂಲ ವಿಗ್ರಹ ದೇವ ಶಿಲ್ಪಿಯದಾದ್ದರಿಂದ ಅಲಂಕರಿಸದೆ ಹಾಗೆ ಬಿಟ್ಟರೆ ಅದರ ಮೂಲರೂಪದಲ್ಲೇ ಈ ಬಾಲರೂಪಿ ದ್ವಿಭುಜ ಗಣಪ ಕಂಗೊಳಿಸುತ್ತಾನೆ. ಸತ್ಯಗಣಪತಿ ವೃತ ಮತ್ತು ಗಣಹೋಮ ಇತ್ಯಾದಿ ಹರಕೆ ಸೇವೆಗಳು ದಿನವೂ ನಡೆಯುತ್ತವೆ . ಯಕ್ಷಗಾನ ಪ್ರಿಯನಾದ ಈತನ ಕಾರಣಿಕ ದೃಷ್ಟಿಯಿಂದ 'ಕೆರೆಮನೆ ಮೇಳ' ಜಗತ್ತನ್ನು ಸುತ್ತಿದ ಮೊದಲ ಯಕ್ಷಗಾನ ಮೇಳವಾಗಿಯೂ,ಸಮಗ್ರ ಕಲೆಯನ್ನು ಸಮರ್ಪಕವಾಗಿ ಪ್ರದರ್ಶಿಸುತ್ತಿದ್ದಾರೆ. ಯಕ್ಷಗಾನಕ್ಕೆ ರಾಷ್ಟ್ರಪ್ರಶಸ್ತಿಗಳಿಸಿ ಗೌರವ ತಂದಿತ್ತ ದಿ|ಶ್ರೀ ಶಿವರಾಮ ಹೆಗಡೆ ಹಾಗೂ ಎಲ್ಲಾ ಕೆರೆಮನೆ ಬಳಗದವರು ಗಣಪನ ಕರುಣೆಗೆ ಪಾತ್ರರಾಗಿ ಅವನನ್ನೇ ಆರಾಧ್ಯದೈವವಾಗಿ ಆ ಹೆಸರಿನಿಂದಲೇ ಮೇಳವನ್ನು ನಡೆಸಿಬಂದಿದ್ದಾರೆ. ರಾಜಕಾರಣಿಗಳು,ಮಂತ್ರಿ-ಮಹೋದಯರು-ಸಿನಿಮಾ ತಾರೆಯರು ಇತ್ಯಾದಿ ಎಲ್ಲರೂ ಬಂದು ತಮ್ಮ ಸೇವೆಯನ್ನು ಸಲ್ಲಿಸುತ್ತಾರೆ.ಒಟ್ಟಿನಲ್ಲಿ ಈ ಕ್ಷೇತ್ರ ಕಾರಣಿಕ ಪುಣ್ಯಕ್ಷೇತ್ರವೆಂಬ ಹೆಗ್ಗಳಿಕೆಯನ್ನು ಹೊಂದಿದೆ. ತನ್ನ ಭಕ್ತರನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುವ ಈ ದೇವರು ಮಾತನಾಡದೇ ಇದ್ದರೂ 'ಮಾತನಾಡುವ ದೇವರು' ಎಂದೇ ಖ್ಯಾತನಾಮನಾಗಿದ್ದಾನೆ!

ಇಷ್ಟು ಕೇಳಿದ ಮೇಲೆ ನನ್ನ ಕವಿ ಹೃದಯದ ಒಂದು ಹಾಡನೊಂದಿಗೆ ಆತನನ್ನು ಪೂಜಿಸೋಣವೇ ?
ನೆನೆವುದೆನ್ನಮನ............

ನೆನೆವುದೆನ್ನಮನ
ನೆನೆವುದೆನ್ನಮನ
ನೆನೆವುದೆನ್ನಮನ ಶ್ರೀ ಗಜಾನನ
ಕನವರಿಸುವೆ ಸದಾ ನಿನ್ನ ಸನ್ನಿಧಿಯ
ಬೆನಕ ಬಾರಯ್ಯ ಇದೊ ನೂರೆಂಟು ನಮನ

ಬಾಲ ಭಾಸ್ಕರ ನೀನೆ ಕೋಟಿ ಸೂರ್ಯನು ನೀನೆ
ಕಾಲ ಗರ್ಭದಲಿ ಹುದುಗಿ ಕುಳಿತವ ನೀನೆ
ಭಾಲಚಂದ್ರನು ನೀನೆ ಧೂಮ್ರಕೇತುವು ನೀನೆ
ಲೀಲಾ ನಾಟಕ ವಿಕಟ ವಿಘ್ನಹರನು ನೀನೆ

ದೇಶ ಕೋಶಗಳ ಮೀರಿದ ಮಹಿಮಾ
ದಾಶರಥಿಗೆ ಜಯ ಕರುಣಿಸಿದ ಗರಿಮಾ
ಕ್ಲೇಶನಾಶ ವಿಪ್ಲವಹರ ಲಘಿಮಾ
ವೇಷದಿ ಲಿಂಗ ಧರೆಗಿಳಿಸಿಹ ಗಣಿಮಾ

ಮೋದಕ ಪ್ರಿಯ ಬಾರೊ ಮುಗ್ಧರೂಪನೆ ಬಾರೊ
ಸಾಧಕರಿಗೆ ಸಕಲ ಸಿದ್ಧಿಗಳನು ತಾರೊ
ಬಾಧಕಗಳ ನೀಗೆ ಭವಭಯಹರ ಬಾರೊ
ನಾದ ಬ್ರಹ್ಮನೆ ಬಾರೊ ರತ್ನಗರ್ಭನೆ ಬಾರೊ

ರಾಶಿವಿದ್ಯೆಗಳ ಅಧಿಪತಿ ಗಣಪತಿ
ಭಾಷೆ ಸಾಲದು ನಿನಗೆ ನಮಿಸಲು ದಿನಪತಿ
ರೋಷದಿ ಚಂದ್ರನ ಶಪಿಸಿದ ಶ್ರೀಪತಿ
ಪಾಶಾಂಕುಶಧರನೆ ಮಂಗಲದಾರತೀ