ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, June 10, 2010


ಅರ್ಥವಾಗದ ಬದುಕು

ಬೇಸರವು ಕೆಲವೊಮ್ಮೆ ಯಾಕೋ ಹಾಗೊಳಗೊಳಗೆ
ಆಸರೆಯ ಬಯಸಿಹುದು ಮನವೇನೋ ನೆನೆದು
ನೇಸರನ ಎತ್ತರಕೆ ಎತ್ತಿಡುತ ಏಣಿಯನು ಕಾಣದಿಹ ಗುರುತು ಹುಡುಕಿ!

ದರ್ಪವೋ ದುಗುಡವೋ ದುಮ್ಮಾನವೋ ಅರಿಯೆ
ಸರ್ಪ ಹೆಡೆ ಎತ್ತಿ ನಿಂತಂತೆ ಬುಸುಗುಡುತ
ಅರ್ಪಣಾ ಭಾವವನು ಪಡೆಯಲೊಮ್ಮೆಗೆ ತಿರುವು ನೆನಪಿರದ ಕುರುಹು ನೆನೆದು!

ಕಾಮಾದಿ ರಕ್ಕಸರು ಬೀಡುಬಿಟ್ಟಿಹ ಕಾಡು
ಆಮೋದದಲಿ ಒಮ್ಮೆ ಗಹಗಹಿಸಿ ನಗುತ
ವ್ಯೋಮಯಾನಕೆ ಹೊರಟ ಗಗನಯಾತ್ರಿಯ ಸಡ್ಡು ಗೊತ್ತಿರದ ವಿಷಯ ಹಿಡಿದು

ಬರೆದು ಬಿಡು ಸಾಕೆನುತ ನೆನಗುದಿಯ ಬೇಗೆಗಳ
ಉರಿಯುತಿಹ ಮನದಿಂದ ಹೊರ ಹರಿದು ಬಿಡಲು
ಹರಿದು ಬಿಸುಡುವ ಅಚ್ಚ ಹುಚ್ಚನಂದದಿ ಹಲವು ಗೋಜಲಿನ ಮಡಿಲೊಳಿಳಿದು!

ಬಡತನದ ಬವಣೆ ಸಿರಿತನದವರ ಹಮ್ಮಿನಲಿ
ಗಡಬಡಿಸಿ ನಿಂತು ಧಿಮಿಗುಡುತ ಮಧ್ಯದಲಿ
ಚಡಪಡಿಸಿದನಗ್ನಿ ತಾ ಹೆದರಿ ಮುದುರುತ್ತ ಮುಂದಿರುವ ಕೇಡು ನೆನೆದು!

ಹರಿಯೇನು ಹರನೇನು ಯಾರು ಬಂದರೂ ಕೇಳೆ
ನರನನ್ನ ತಪ್ಪ ತೋರಿಸು ಎನುತ ಅದುರಿ
ಥರಥರ ನಡುಗುತ್ತ ಭೀಷ್ಮ-ವಲಲರ ನೆನೆದು ಸತ್ಯವನು ಹುಡುಕಿ ದಣಿದು

ಮಾಧ್ಯಮದಿ ಆದರ್ಶ ಬೋಧೆಯನು ಹೇಳುವರು
ಆದ್ಯತೆಯ ಅರಿವನ್ನು ಮೆಟ್ಟಿ ಹೊರನಡೆದು
ಸಾಧ್ಯತೆಯ ತೂರಿ ತಣ್ಣೀರೆರಚಿ ಚಿವುಟುತ್ತ ಮೊಟಕುವರು ಬಹಳ ಮೆರೆದು!