ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, September 14, 2010

ಗಣೇಶ ಬಂದ!!


ಗಣೇಶ ಬಂದ!!

ಸಮಯ ಎಲ್ಲವನ್ನೂ ಕೂಡುತ್ತದೆ, ಕಳೆಯುತ್ತದೆ ಮತ್ತು ಭಾಗಿಸುತ್ತದೆ, ಒಂದರ್ಥದಲ್ಲಿ ಸಮಯವೇ ಎಲ್ಲಕ್ಕೂ ಕಾರಣ ಎಂದರೆ ತಪ್ಪಾಗಲಾರದು ಅಂತ ನನಗಂತೂ ಅನಿಸುತ್ತಿದೆಯಪ್ಪ. ಗಣೇಶನ ಹಬ್ಬಕ್ಕೆ ಊರಿಗೆ ಹೋಗಿದ್ದೆನಲ್ಲ, ಇದ್ದ ಮೂರೇ ದಿನದಲ್ಲಿ ಎರಡು ದಿನ ಹಬ್ಬದ ಆಚರಣೆ-ಪೂಜೆ-ಪುನಸ್ಕಾರ,ಅತಿಥಿಸತ್ಕಾರ, ಮನೆಜನರೊಟ್ಟಿಗೆ ಹರಟುವಿಕೆ ಇದ್ರಲ್ಲೇ ಕಳೆದುಹೋಯಿತು. ಇನ್ನುಳಿದ ಒಂದೇ ದಿನ ಹತ್ತೆಂಟು ಕಡೆ ಸುತ್ತಾಡಿದೆವು. ಬಾಲ್ಯದಲ್ಲಿ ನೋಡಿದ ಹಲವು ಸ್ಥಳಗಳ ಮತ್ತು ಜನರ ಸ್ಥಿತಿಗತಿಯಲ್ಲಿ ಬದಲಾವಣೆಯಾಗಿಬಿಟ್ಟಿದೆ ! ಕೆಲವು ಸ್ನೆಹಿತರು ಮುದುಕರಂತೇ ಕಂಡರೆ ಇನ್ನು ಕೆಲವರು ತಲೆಯಮೇಲೆ ಬಹಳ ಪ್ರತಿಷ್ಠೆಯ ಭಾರ ಹೊತ್ತಿದ್ದಾರೆ. ಕೆಲವರು ಮದುವೆಯಾಗಿದ್ದರೆ ಇನ್ನೂ ಕೆಲವರಿಗೆ ಮದುವೆ-ಮನಕಾಲ ಏನೂ ಇಲ್ಲ. ಮದುವೆ ಆದ ಕೆಲವರಿಗೆ ಮಕ್ಕಳ ಭಾಗ್ಯವಿಲ್ಲ! ಮದುವೆ ಆಗದ ಕೆಲವರಿಗೆ ಇನ್ನು ನೇರ ವಾನಪ್ರಸ್ಥಾಶ್ರಮವೇ ಗತಿ!

ಹಿರಿಯ ಸಾಹಿತಿ ಮಿತ್ರರಾದ ಶ್ರೀ ಜಯಂತ್ ಕಾಯ್ಕಿಣಿಯವರ ಮನೆಕಡೆ ಹೊಗಿದ್ದೆ ಅಂದರೆ ಗೋಕರ್ಣಕ್ಕೆ ಅಂತ! ಅಲ್ಲಿ ಅವರ ಕುಟುಂಬದ ಪೈಕಿ ಯಾರಿದ್ದಾರೋ ಗೊತ್ತಿಲ್ಲ, ಆರಾಧ್ಯ ಶ್ರೀ ಇಡಗುಂಜಿ ಮಹಾಗಣಪತಿಯ ದರ್ಶನ ಮಾಡಿದೆ. ಮೂರ್ನಾಲ್ಕು ಸನ್ಯಾಸಿಗಳನ್ನು ಭೇಟಿ ಮಾಡಿದೆ: ಅವರೆಲ್ಲಾ ಸದ್ಯ ಚಾತುರ್ಮಾಸ್ಯ ನಡೆಸುತ್ತಿದ್ದಾರಲ್ಲ, ಈ ಕಾಲಘಟ್ಟದಲ್ಲಿ ಅವರ ಸೇವೆ, ದರ್ಶನ ಬಹಳ ಪುಣ್ಯಪ್ರದವೆಂಬುದು ಹಲವರ ಅಂಬೋಣ. ನಾಸ್ತಿಕರಿಗೆ,ವಿತಂಡವಾದಿಗಳಿಗೆ ಬಹಳ ಬೇಸರದ ಸಂಗತಿ ಇದಾದರೂ ನಾವು ಸದ್ಯ ನಾಸ್ತಿಕರಲ್ಲ, ಹೀಗಾಗಿ ನಮ್ಮ ’ಒಳಗಿನ ಕರೆ’ ಮನ್ನಿಸಿ ಹಾಗೆ ನಡೆದಿದ್ದೆವು.

ಬೆಂಗಳೂರಿನಲ್ಲಿ ನಾವು ಬ್ಲಾಗಿಗರು ಸ್ನೇಹಿತರು ಭೇಟಿಯಾದದ್ದಕ್ಕಿಂತ ಹೆಚ್ಚಿನ ಸಂತೋಷದ ವಿಷಯವೆಂದರೆ ನಾನು ನನ್ನ ಬಾಲ್ಯ ಸ್ನೇಹಿತರನೇಕರನ್ನು ಅಪರೂಪಕ್ಕೊಮ್ಮೆ ಮುಖತಃ ಸಂವಹಿಸಲು ಸಾಧ್ಯವಾಯಿತು.ಸಿಕ್ಕ ಕೆಲವೇ ನಿಮಿಷಗಳ ಕಾಲ ನಾವು ನಮ್ಮ ಬಾಲ್ಯಲೋಕದಲ್ಲಿ ವಿಹರಿಸಿದೆವು. ಓದಿನಲ್ಲಿ ನಮ್ಮಲ್ಲಿದ್ದ ಕಾಂಪಿಟಿಶನ್, ಆಶುಭಾಷಣ ಸ್ಪರ್ಧೆ, ಪ್ರತೀವರ್ಷ ಮಾಸ್ತರು ನಡೆಸುವ ’ಕೊಡೆ ಮೇಲೋ ಕಂಬಳಿಮೇಲೋ’ ಚರ್ಚಾಕೂಟ, ಆಗಷ್ಟ್ ೧೫ ರ ಪ್ರಭಾತ್ ಪೇರಿ ಹಾಡುಗಳು, ಸ್ವಾತಂತ್ರ್ಯ ಸೇನಾನಿಗಳಾದ ಮಹತ್ಮಾಗಾಂಧಿ, ಲಾಲಾ ಲಜಪತರಾಯ್, ಲೋಕಮಾನ್ಯ ತಿಲಕ್, ಸರ್ದಾರ್ ಪಟೇಲ್, ಮಂಗಲಪಾಂಡೆ, ಝಾನ್ಸಿರಾಣಿ ಲಕ್ಷ್ಮೀಬಾಯಿ ಮುಂತಾದ ಹಲವರ ಕುರಿತು ಹಿರಿಯರಿಂದ ದುಂಬಾಲು ಬಿದ್ದು ಬರೆಸಿ ಬಾಯಿಪಾಠ ಮಾಡಿಕೊಂಡ ಭಾಷಣಗಳನ್ನು ಪ್ರಸ್ತುತಪಡಿಸಲು ಮುಂದಾಗುತ್ತಿದ್ದೆವು. ಕೆಲವೊಮ್ಮೆ ಕೆಲವನ್ನು ನಿಭಾಯಿಸುವ ಪೂರ್ವ ನಮ್ಮ ಹೆಸರನ್ನು ಕರೆಯುವ ಮೊದಲೇ ನಮಗೆ ಪುಕುಪುಕು ಶುರುವಾಗುತ್ತಿತ್ತು! ಭಾಷಣ ನಿಜವಾಗಿಯೂ ನಮಗೆ ಮರೆತುಹೋಗಿರದಿದ್ದರೂ ಸಭಾಕಂಪನದಿಂದ [ನರ್ವಸ್ನೆಸ್] ಕೈಕಾಲೆಲ್ಲಾ ಸಣ್ಣಗೆ ತರಗುಡಲು ಶುರುವಾಗಿ ಉಚ್ಚೆಬರುವಂತೇ ಭಾಸವಾಗಿ ಇನ್ನೇನೇನೋ ಆಗಿ ಬಹಳ ಚಡಪಡಿಸುತ್ತಿದ್ದೆವು. ಆಡಲಾರದ ಅನುಭವಿಸಲಾರದ ನಮ್ಮ ಅಂದಿನ ಸ್ಥಿತಿಯನ್ನು ಈಗ ನೆನೆಸಿಕೊಂಡರೆ ತುಂಬಾ ನಗು ಉಕ್ಕಿಬರುತ್ತದೆ. ಆಗಿನ ಆ ನಮ್ಮ ಅನಿವಾರ್ಯ ಸಹಜ ಶ್ರಮದಿಂದ ಈಗ ನಮಗೆ ಬಹಳ ವ್ಯಕ್ತಿಗಳ ಬಗ್ಗೆ ತಿಳುವಳಿಕೆ ಬರಲು ಸಾಧ್ಯವಾಯಿತು!

ಊರಕಡೆ ತೋಟತುಡಿಕೆಗಳಲ್ಲಿ ಕಾಲಹಾಕದೇ ಮತ್ತು ಕಾಲನ್ನೂ ಹಾಕದೇ ಬಹಳದಿನಗಳೇ ಸಂದಿದ್ದವು. ನಮದೇನಿದ್ದರೂ ಈಗ ಪ್ಯಾಕೇಜ್ ಟೂರ್ ಥರದ ವ್ಯವಸ್ಥೆ: ಕೆಲಸವಿರುವಾಗ ಮುಂಚಿನ ರಾತ್ರಿ ಬಸ್ಸನ್ನೋ ಕಾರನ್ನೋ ಏರುವುದು, ಮಾರನೇ ದಿನ ಬೆಳಿಗ್ಗೆ ಊರಲ್ಲಿದ್ದು ಸ್ನಾನ,ತಿಂಡಿ,ಕೆಲಸ,ಊಟ ಹೀಗೇ ಗಡಿಬಿಡಿಯಲ್ಲಿ ಎಲ್ಲವನ್ನೂ ಮುಗಿಸಿ ಇನ್ನೇನು ಯಾರಾದರೂ ನಾವು ಬಂದ ಸುದ್ದಿತಿಳಿದು ಪ್ರೀತಿಯಿಂದ ಮಾತನಾಡಿಸಲು ಬರುವಷ್ಟರಲ್ಲಿ ಈ ಆಸಾಮಿ ನಾಪತ್ತೆ>> ವಾಸಪ್ ಬೆಂಗಳೂರಿಗೆ ಹೊರಟಾಗಿರುತ್ತಿತ್ತು! ಹೀಗಾಗಿ ಊರಿಗೆ ಹೋದರೂ ನೀರಿಗೆ ಹೋಗದ ನಾರಿಯರೂ ಇದ್ದಾರೆ ಮತ್ತು ಪುರುಷರೂ ಇದ್ದಾರೆ ! ಸ್ವಾಭಾವಿಕವಾಗಿ ಹುಟ್ಟಿನ ಜಾಗದಲ್ಲಿ, ಆ ಊರಲ್ಲಿ, ಅಲ್ಲಿನ ನೆಲ-ಜಲ,ಜನವಸತಿ ಇವನ್ನೆಲ್ಲ ಬಹಳ ಹತ್ತಿರದಿಂದ ನೋಡಿ ಅದರ ನಡುವೆ ನಾವೂ ಒಬ್ಬೊಬ್ಬರಾಗಿ ಬೆಳೆದು ಬದುಕಿದ ನಮಗೆ ಅಲ್ಲಿಯೇ ನಮ್ಮ ಹೊಕ್ಕುಳ ಚೊಟ್ಟನ್ನು [ಹೊಕ್ಕುಳಬಳ್ಳಿಯನ್ನು] ಹೂತಿದ್ದರಿಂದ ಆ ಪರಿಸರದ ಸ್ನೇಹವನ್ನು ಮರೆಯಲು ಅಸಾಧ್ಯ. ಒಂದು ಹೆಚ್ಚೋ ಕಮ್ಮಿಯೋ ತುಂಬು ಗ್ರಾಮ್ಯ ಜೀವನದಲ್ಲಿ ಬೆಳೆದುಬಂದ ಕಂದಮ್ಮಗಳು ನಾವಾಗಿದ್ದರಿಂದ ಅಲ್ಲಿನ ಹಂಬಲ ನಮ್ಮನ್ನು ಬೆಂಬಿಡದೇ ಅಂಟಿಕೊಂಡೇ ಬಂದಿರುತ್ತದೆ. ತೋಟದಲ್ಲಿ ಒಂದೇ ಒಂದು ರೌಂಡ್ ಹಾಕಿಬಿಟ್ಟರೆ ಸ್ವರ್ಗಸಮಾನ ಸುಖ ನಮಗೆ ! ಅದ್ರಲ್ಲೂ ಬಾಲ್ಯಸಖರು ಸಿಕ್ಕರೆ ಕೇಳಬೇಕೇ !

ಕಾಗೆ-ಗುಬ್ಬಿ ಎಂಜಲುಗಳ ಕಾಲ ಮುಗಿದು ಹೋಗಿ, ಸ್ನೇಹಿತರುಗಳಲ್ಲಿ ಹಿರಿಯರ ತಲೆ ಬೋಳಾಗಿ ನವಿಲುಕೋಸಿನ ರೀತಿ ಮೂರ್ನಾಲ್ಕು ಕೂದಲಿನಿಂದ ಚಂದಕಂಡರೆ, ಕಿರಿಯ ಸ್ನೇಹಿತರ ಅಂದಿನ ಚೆಡ್ಡಿಯೆಲ್ಲಾ ಹಳತಾದ ಮೇಲೆ ಇಂದೀಗ ಬರ್ಮುಡಾಗಳು ಬಂದಿವೆ! ಇರುವ ಕೆರೆ-ತೊರೆಗಳು ಬತ್ತಿ, ತಿಳಿನೀರಿನ ಬಾವಿಗಳು ಕೊಳೆಕಲ್ಮಶಗಳಿಂದ ತುಂಬಿವೆ. ನನ್ನ ಸಹಪಾಠಿಗಳ ಬಾಯಿಗಳಲ್ಲಿ ಎಲ್ಲೋ ಅಪರೂಪಕ್ಕೆ ಹಿರಿಯರ ಕಣ್ತಪ್ಪಿಸಿ ಅರಳುತ್ತಿದ್ದ ತಂಬಾಕು ರಹಿತ ಎಲೆಯಡಿಕೆ ಇಂದು ಗುಟ್ಕಾದ ಮಟ್ಕಾಗಳಂತೆ ರಾರಾಜಿಸುತ್ತಿವೆ! ಕೆಲವ್ರು ದಪ್ಪಗೂ ಇನ್ನು ಕೆಲವ್ರು ತೆಳ್ಳಗೂ ಇನ್ನೂ ಹಲವರು ಉದ್ದದ್ದ ಅಡ್ಡಡ್ಡ ಹೇಗೇಗೋ ಅಂತೂ ಬೆಳೆದಿದ್ದಾರೆ. ಕೆಲವರು ವಕ್ರತುಂಡರಾದರೆ ಇನ್ನೂ ಕೆಲವರು ಪ್ಲಾಸ್ಟಿಕ್ ಹಲ್ಲುಧಾರಿಗಳು, ಕೆಲವರು ಹುಳಬಿದ್ದ ಹಲ್ಲನ್ನು ಹಾಗೇ ಇಟ್ಟುಕೊಂಡು ಹಳೆಯ ಸಂಪ್ರದಾಯವನ್ನು ಅನೂಚಾನವಾಗಿ ಮುನ್ನಡೆಸುವಂತೇ ಕಾಣಿಸುವ ಮಹಾನುಭಾವರು! ನಮ್ಮ ಓರಗೆಯ ಹುಡುಗಿಯರು ಮದುವೆಯಾಗಿ ಎಲ್ಲೆಲ್ಲಿಗೋ ಹೋಗಿ ಮೂವತ್ತು ವಯಸ್ಸಿನ ಒಳಗೇ ನಾಲ್ಕಾರು ಮಕ್ಕಳನ್ನು ಹಡೆದು ಸಂತಾನಲಕ್ಷ್ಮಿಯರಾದರೆ ಇನ್ನು ಕೆಲವರು ಪೇಟೆ-ಪಟ್ಟಣ ಸೇರಿ ’ನಾವು ಇಬ್ಬರು ನಮಗೊಬ್ಬರು’ ಎನ್ನುತ್ತಾ ಹಡೆದ ಒಂದನ್ನೇ ಸರಿಯಾಗಿ ಸಾಕಲು ಪೀಕಲಾಡುವ ಸ್ಥಿತಿಯಲ್ಲಿದ್ದಾರೆ. ಅವರಿವರ ಬಾಯಲ್ಲಿ ಒಬ್ಬೊಬ್ಬರದೂ ಕಥೆ ಕೇಳುವಾಗ ನಾನು ನಿಮಗೆ ಹಲವು ಕಥೆ ಬರೆದು ಒಪ್ಪಿಸಿಯೇನು ಎನ್ನುವ ಹೊಸ ಹುಮ್ಮಸ್ಸು ಬಂದು ಬಿಟ್ಟಿದೆ! ಓ ದೇವರೇ ಆ ಬಾಲ್ಯ ಮತ್ತೆ ಮರಳಿ ಬಾರದೇ ?

ಊರಿಗೆ ಹೋಗುವಾಗ ಬಸ್ಸಿನಲ್ಲಿ ಹೋದರೆ ಬಹಳ ಮಜಸಿಗುವುದು ಗ್ಯಾರಂಟಿ! ತಮಗೆಲ್ಲಾ ಇದು ತಿಳಿಯದೇ ಇರುವ ವಿಷಯವೇ ? ಒಮ್ಮೆ ನಾವು ಪ್ರಯಾಣಿಸುವಾಗ ಪುಟ್ಟ ಕಂದಮ್ಮ ಒಬ್ಬಳು ಹಿಂದಿನ ಸೀಟಿನಲ್ಲಿ ಹಾಡುತ್ತಿದ್ದಳು-
’ ಶ್ರೀಚಕ್ರಧಾರಿಗೇ ಶಿವಲಾಲಿ ಲಾಲಿ .....ಹಾಲ್ಗೆನ್ನೆ ಕೃಷ್ಣನಿಗೆ ’ ಅವಳ ಮುಗ್ಧ ಮನಸ್ಸಿಂದ ತಪ್ಪು ತಪ್ಪಾಗಿ ತೊದಲು ಭಾಷೆಯಲ್ಲಿ ಉಚ್ಚರಿಸಲ್ಪಟ್ಟ ಹಾಡನ್ನು ಕೇಳುವುದೇ ಒಂದು ಥ್ರಿಲ್ಲಿಂಗ್ ಇಫೆಕ್ಟ್ ಆಗಿತ್ತು. ಈಗ್ ಬಿಡಿ ಥ್ರಿಲ್ಲೇ ಥ್ರಿಲ್ಲು! ತೂಗುಯ್ಯಾಲೆಯಾಡುವ ಅಟ್ಟದಮೇಲೆ ಮೇಲೆ ಮಲಗಿಸಿಕೊಂಡು ಒಬ್ಬನೇ ಚಾಲಕನಿಂದ ಚಲಾಯಿಸಲ್ಪಟ್ಟು ಆತ ಓಡಿಸುವ ವೇಗದಲ್ಲಿ ಕಾಣದ ರಸ್ತೆಯ ಬಾವಿಗಳಲ್ಲಿ ಚಕ್ರಗಳು ಬಿದ್ದೂ ಎದ್ದೂ ಹೋರಾಡುತ್ತ ಅಂತೂ ಸೇರಬೇಕಾದ ಸ್ಥಳವನ್ನು ಸೇರಿನಿಂತಮೇಲೇ ’ಉಸ್ಸಪ್ಪಾ ದೇವರೇ ಅಂತೂ ತಂದು ಬಿಟ್ಯಲ್ಲಪ್ಪಾ ’ ಎಂದುಕೊಂಡು ಎದೆಭಾರ-ತಲೆನೋವು ಕಮ್ಮಿಮಾಡಿಕೊಳ್ಳುವ ಪ್ರಸಂಗ! ಹಿಂದೆ ಕೇವಲ ೩೬ ರೂಪಾಯಿಗೆ ಕೆಂಪುಡಬ್ಬದಲ್ಲಿ ಆರಾಮವಾಗಿ ಪ್ರಯಾಣಿಸಿದ್ದ ಹಿರಿಯ ಸ್ನೇಹಿತರೊಬ್ಬರು ಹೇಳಿದರು " ಅಲ್ಲಾ ಮಾರಾಯ ಇದು ದುಡ್ಡು ಕೊಟ್ಟು ಗ್ರಹಚಾರ ತಂದ್ಕೊಳು ಪರಿಸ್ಥಿತಿ ನೋಡು " ನೀವೇ ನೋಡಿ ನಮ್ಮ ಬಸ್ಸುಗಳಲ್ಲಿ ಎಷ್ಟು ಮಾರ್ಪಾಟುಗಳಾಗಿವೆ ಅಂತ. ನಮ್ಮ ಕಾಲಮಾಪನದಲ್ಲೂ ಅಷ್ಟೇ ಬದಲಾವಣೆಯಾಗಿದೆ! ನಮಗೆ ಇವತ್ತಿನ ಆಫೀಸು ಕೆಲಸಕ್ಕೂ ಹೋಗಬೇಕು, ರಾತ್ರಿ ಎಂಟುಗಂಟೆಗೆ ಅಫೀಸಿನಿಂದ ಮರಳಿ ದಸಬುಸನೆ ಒಂಚೂರು ತಿಂದು, ಕಾದು ಕುಳಿತ ಮನೆಯವರೊಟ್ಟಿಗೆ ಶಾಸ್ತ್ರಕ್ಕೊಂದು ಹೊಸ ಪ್ಯಾಂಟು-ಶರ್ಟು ಸಿಕ್ಕಾಕಿಕೊಂಡು ಓಡುತ್ತಾ ಏದುಸಿರುಬಿಡುತ್ತಾ ಬಸ್ ಬರುವ ಜಾಗ ತಲ್ಪಿ, ಬರುವ ಬಸ್ಸನ್ನು ಏರಿ ಕುಳಿತು ಮಾರನೇ ಬೆಳಿಗ್ಗೆ ಚೌತಿ ಹಬ್ಬಕ್ಕೋ ಗಂಗಜ್ಜಿಯ ಶ್ರಾದ್ಧಕ್ಕೋ ತಿರುಮಲೇಶನ ಮದುವೆಗೋ ಅಟೆಂಡ್ ಆಗಬೇಕು! --ಇದು ಕಥೆಯಲ್ಲ ಇಂದಿನ ಮಹಾಭಾರತ!

ಬಸ್ಸಿನಲ್ಲಿ ಹೊರಟಮೇಲಂತೂ ನಮಗೆ ನಮ್ಮದೇ ಲೋಕ. ಅಲ್ಲಿ ರಾತ್ರಿಯ ಕಾಡುಗಳ್ಳರು ನಾಟಾ ಕುಯ್ಯುವಂತೇ ಗೊರಕೆಹೊಡೆಯುವ ಜನವಿದ್ದಾರೆ, ಸಣ್ಣಗೆ ತಮ್ಮದೇ ಆದ ದನಿಯಲ್ಲಿ ಹಾಡುವವರಿದ್ದಾರೆ, ಲೋಕ ಹಾಳಾದರೆ ನಮಗೇನಂತೆ ನಾವು ಚೆನ್ನಾಗಿದ್ದರೆ ಎಲ್ಲವೂ ಚೆನ್ನ ಎಂದು ಹರಟುವ ಸಂಗೀತಾ-ಸಾಹಿತ್ಯಾ ಎಂಬ ಅಕ್ಕಂದಿರಿದ್ದಾರೆ! ತಮ್ಮ ’ಹಿಂದುಗಡೆ ಬಾಯಲ್ಲಿ’ ’ಗಮಕ’ ಹಾಡುವ ಕಲಾವಿದರಿದ್ದಾರೆ! ಲೋ ಜೀನ್ಸ್ ನಲ್ಲಿ ಊರಿಗೆ ಹೊರಟು ಫಿಲ್ಮ್ ಸ್ಟಾರ್ ಥರ ಮಿಂಚುವ ಚಂಚಲಾ ಇದ್ದಾಳೆ! ಗುಡಾಣ ಹೊಟ್ಟೆಯನ್ನು ಹೊತ್ತು ನಡೆದುಬಂದ ನಮ್ಮೂರ ಪಕ್ಕದ ಯಜಮಾನರಿದ್ದಾರೆ! ಲ್ಯಾಪ್ ಟಾಪಿಗೆ ತಮ್ಮನ್ನು ಅಂಟಿಸಿಕೊಂಡು ಟೈಪಿಸುತ್ತ ಕೂತ ಗಣಕ ತಂತ್ರಾಂಶ ಪಿಪಾಸುಗಳಿದ್ದಾರೆ! ಐಪಾಡಿಲ್ಲದೇ ಜಗತ್ತೇ ಅಸಹ್ಯವೆಂದು ಅದನ್ನೂ ಮತ್ತು ಮೊಬೈಲನ್ನೂ ಬಳಸಿ ಬೇಕು ಬೇಕಾದ ಸಾಂಗ್ ಹಾಕಿ ಕಿವಿಗೆ ಧ್ವನಿ ದಾರಸಿಕ್ಕಿಸಿ ಕಿವುಡರಂತೇ ಕಾಣುವವರಿದ್ದಾರೆ! ಸಣ್ಣ ಮಕ್ಕಳಿಗೆ " ಕನ್ನಡ ಬೇಡ ಬರೇ ಇಂಗ್ಲೀಷ್ನಲ್ಲೇ ಮಾತಾಡ್ಬೇಕು ಇಲ್ಲಾಂದ್ರೆ ಪೆದ್ದಾಗೋಗ್ತೆ " ಎನ್ನುವ ಮಮ್ಮಿ-ಡ್ಯಾಡ್ ಇದ್ದಾರೆ! ಓ ಪರಮ ಶಿವನೇ ಈ ಬಸ್ಸು ಬಹಳ ಅರ್ಥಗರ್ಭಿತ!

ಬಸ್ಸಿನಲ್ಲಿ ಹೊರಟ ಸ್ವಲ್ಪ ಹೊತ್ತಿನಲ್ಲಿ ನಮಗೆ ಅತಿಥಿ ಸತ್ಕಾರ ಸಿಗುತ್ತದೆ! ತಿಗಣೆಗಳು ಕಾಲಿಗೋ ಕೈಗೋ ಕಚ್ಚಲು ಪ್ರಾರಂಭ ಎಂದು ಅರ್ಥೈಸಿಕೊಳ್ಳಿ! ಇಂತಹ ಅತಿಥಿಗಳು ಮಗುವೊಂದನ್ನು ಕಚ್ಚಿದಾಗ ತುರಿಕೆಯಾಗಿ ಮಗು " ಅಪ್ಪಾ ತುರಿಸ್ತಾ ಇದ್ದು " ಎಂದರೆ " ಶ್ಶು ! ನೋ ಕನ್ನಡಾ, ಸೇ ಇಟ್ ಈಸ್ ಇಚ್ಚಿಂಗ್ " ಎಂದು ಹೇಳಿಕೊಡುವ ಆಂಗ್ಲಭಾಷಾ ಭಕ್ತರು ನಮ್ಮ ಮಧ್ಯೆ ಹೇರಳವಾಗಿ ಇದ್ದಾರೆ. ಅದು ನಾವೂ ನೀವೂ ಅಥವಾ ಅವರೂ ಕೂಡ ಆಗಿದ್ದರೆ ಆಶ್ಚರ್ಯವಿಲ್ಲ. ಕನ್ನಡವೇ ನಮ್ಮಮ್ಮ ಎನ್ನುವ ನಮ್ಮ ಪೈಕಿ ನಾವೆಷ್ಟು ಜನ ನಿಜವಾಗಿ ಕನ್ನಡಪ್ರಿಯರಾಗಿದ್ದೇವೆ ಎಂಬುದು ಹಲವಾರು ಸಲ ಕಂಡುಬರುತ್ತದೆ ಸ್ವಾಮೀ! ಅಂತೂ ಊರು ಬಂದೇ ಬಿಟ್ಟಿತು ಎನ್ನಿ, ಆಗ ಸ್ವಲ್ಪಕಾಲ ಇಳಿಯುವ ಗಡಿಬಿಡಿಯಲ್ಲಿ ಇಂಗ್ಲೀಷೆಲ್ಲಾ ಮಾಯವಾಗಿ " ಹೋಯ್ ಸ್ನೇಹಾ ಬ್ಯಾಗ ತಕಂಡ್ಯಾ ? " " ಅದು ನೋಡು ಅಲ್ಲೇ ಬಿಟ್ಟೋಯ್ದು " ಎಂದೆಲ್ಲಾ ಉದ್ಗಾರಗಳು ಹೊರಹೊಮ್ಮುತ್ತವೆ! ಊರಿಗೆ ಹೋಗಿ ಇಳಿದಾಗ ನಮಗೆ ಆ ಊರಿನ ಗಾಳಿ ತಟ್ಟುತ್ತದೆ. ಮರಳಿ ನಾವು ಬೆಂಗಳೂರೋ ಅಥವಾ ನಮ್ಮ ಇನ್ನವುದೋ ಶಹರವೋ ಅದನ್ನು ಸೇರುವಾಗ ಇನ್ನೇನು ಹತ್ತಿರಬರುತ್ತಿದ್ದಂತೆಯೇ ’ ಛೆ ! ಶುರುವಾಯಿತಲ್ಲಪ್ಪಾ ಗೋಳು ’ ಎಂದುಕೊಳ್ಳುತ್ತೇವೆ. ಇದು ನಮ್ಮ ಉದರಂಭರಣೆಗೆ ನಾವು ತೊಡಗಿಕೊಂಡ ಊರಿನ ಜಂಜಡ ತುಂಬಿದ ಗಾಳಿ!

ಇಷ್ಟೆಲ್ಲದರ ನಡುವೆಯೂ ವಕ್ರತುಂಡ ವಿಘ್ನೇಶ ಹಲವು ವೇಷಗಳಲ್ಲಿ ಪ್ರತೀ ವರ್ಷ ಬರುತ್ತಲೇ ಇದ್ದಾನೆ, ಹರ್ಷ ತರುತ್ತಲೇ ಇದ್ದಾನೆ. ಬರುವ ಬಹುರೂಪೀ ಗಣಪಣ್ಣನ ಬಗ್ಗೆ ನಿಮಗೆ ಹೇಳಲೇಬೇಕೆ ? ಸಾಯಿಗಣಪ, ಕಾರ್ಗಿಲ್ ಯೋಧ ಗಣಪ, ವೀರಪ್ಪನ್ ಹಂತಕ ಗಣಪ, ಗಾಂಧೀ ಗಣಪ, ಅಮಿತಾಭ್ ಗಣಪ....ಹೀಗೇ ಹೊಸ ಹೊಸ ರೂಪಗಳ ಸೃಷ್ಟಿ ನಡೆಯುತ್ತಲೇ ಇವೆ. ಹಾದಿಬೀದಿಗಳಲ್ಲಿ ಅವನನ್ನು ಕೂರಿಸಿ, ಒಂದಷ್ಟು ವಂತಿಗೆ ಎತ್ತಿ ಅದರಲ್ಲಿ ಚೂರುಪಾರು ಖರ್ಚುಮಾಡಿ, ಬೇಡದ ಸಿನಿಮಾಹಾಡುಗಳ ಆರ್ಕೆಷ್ಟ್ರಾ ನಡೆಸಿ, ಉಳಿದ ಹಣದಲ್ಲಿ ತಮಗೆ ಎಣ್ಣೆಸೇವೆಯನ್ನು ಪೂರೈಸಿಕೊಳ್ಳುವ ಬಹಳ ಯುವಕರಿದ್ದಾರೆ. ಅಂದಿನ ಆ ಕಾಲಕ್ಕೆ ಭಕ್ತಿರಸ ತುಂಬಿ ಭಾವೈಕ್ಯತೆ ಹೊಮ್ಮಲಿ ಎಂದು ಲೋಕಮಾನ್ಯ ತಿಲಕರು ಹಬ್ಬಿಸಿದ ಸಾರ್ವಜನಿಕ ಗಣೇಶೋತ್ಸವ ಇಂದು ಈ ಮಟ್ಟ ತಲ್ಪಿದ್ದನ್ನು ನೋಡಿದರೆ ಅವರು ಈಗ ಬದುಕಿದ್ದರೆ ಆತ್ಮಹತ್ಯೆಗೆ ಶರಣಾಗುತ್ತಿದ್ದರೇನೋ ಎನಿಸುವಷ್ಟು ಅಸಹ್ಯ ಹುಟ್ಟಿಸುತ್ತದೆ. ಇಲ್ಲೀಗ ಭಾವವೂ ಇಲ್ಲ;ಭಕ್ತಿಯೂ ಇಲ್ಲ, ’ಭಾವ’ ಮತ್ತು ’ಭಕ್ತಿ’ ಎಂಬಿಬ್ಬರು ಹರೆಯದ ಹುಡುಗಿಯರು ಕನಿಷ್ಠ ಉಡುಪು ಧರಿಸಿ ಬೆನಕನ ಎದುರಲ್ಲಿ ನರ್ತಿಸುತ್ತಿದ್ದಾರೆ! ಒಂದೋ ಗಣಪ ಸುಮ್ಮನೇ ಕೂತು ಸಹಿಸಿಕೊಳ್ಳಬೇಕು ಇಲ್ಲಾ ಆತ ಎದ್ದು ಬಂದು ಇಂತವರನ್ನು ವದೆಯಬೇಕು ! ಆಯ್ಕೆ ನಿನಗೇ ಬಿಟ್ಟುದ್ದು ಶ್ರೀ ಗಣರಾಜ್ , ತಾವು ತಮಗೆ ಬೇಕಾದ್ದನ್ನು ಆಯ್ದುಕೊಳ್ಳಿ!

ಎರಡು ಮೆಲುಕು ಹಾಕುವ ಕಹಿನೆನಪುಗಳೊಂದಿಗೆ ಈ ಕಥಾನಕವನ್ನು ಮುಕ್ತಾಯಗೊಳಿಸಬೇಕಾದುದು ಅನಿವಾರ್ಯ. ಇದು ನಮ್ಮ ಅನುಭವ ನಾಳೆ ನಿಮಗೆಲ್ಲಾ ಸಹಕಾರಿಯಾಗಲೂ ಬಹುದೆಂಬ ಅನುಭಾವ! ಮೊದಲನೆಯದು ಮೇಲೆ ಹೇಳಿದ ಸಾರ್ವಜನಿಕ ಗಣೇಶೋತ್ಸವ- ನಾವು ಊರಿಗೆ ಹೊರಟುನಿಂತ ಅವಸರದಲ್ಲಿ ಸುಮಾರು ೨೦ ಜನರಂತೇ ಮೂರು ಬೇರೆ ಬೇರೆ ಮೇಳಗಳು ವರ್ಗಿಣಿಗೆ ಬಂದಿದ್ದರು. " ಸಾರ್ ಗಣೇಶನ್ ಇಡ್ತೀವಿ ಕೊಡಿ " . ಹತ್ತು ಇಪ್ಪತ್ತು ರೂಪಾಯಿ ಕೊಟ್ಟರೆ ಸಾಲುವುದಿಲ್ಲ ಇಂತಿಷ್ಟೇ ಕೊಡಿ ಎಂಬ ತಾಕೀತು! "ನಾವೇನು ನಿಮ್ಮ ಹತ್ತಿರ ಗಣೇಶನ್ನ ಇಡಿ ಅಂತ ಹೇಳಿದ್ದೀವಾ ? " ಎಂದು ಗದರಿಕೊಳ್ಳುವ ಮನಸ್ಸದರೂ ಹೊರಡುವಾಗ ಕದಡುವ ಮನಸ್ಸು ಬೇಡವೆಂದು ಅವರನ್ನೆಲ್ಲಾ ಹೇಗೋ ಸಾಗಹಾಕಿದ್ದೇವೆ . ಹೇಳಿ ಈ ರೀತಿಯ ಮೋಜು ಮಜಾ ಜನರಿಗೆ ದೇಣಿಗೆ ನೀಡಬೇಕೆ ?

ಎರಡನೆಯದು ನಾವು ಹೋಗುತ್ತಿರುವ ಬಸ್ಸು ಶಿವಮೊಗ್ಗಾ ಜಿಲ್ಲೆಯ ಕುಂಸಿಯ ಹತ್ತಿರ ನಿಂತಿತು. ಮುಂದೆ ಅಪಘಾತವಾಗಿದೆ ಎಂಬ ಕಾರಣ. ಅಲ್ಲಿ ನೋಡಿದರೆ ’ಸೀ ಬರ್ಡ್’ ಕಂಪನಿಯ ಅಟ್ಟದ ಬಸ್ಸೊಂದು ಆಗತಾನೇ ಜರ್ಜರಿತವಾಗಿ ನಿಂತಿತ್ತು. ಯಾರದ್ದೂ ಸದ್ದು-ಸುದ್ದಿ ಇರಲಿಲ್ಲ! ಬೆಳಗಿನ ೫ ಘಂಟೆಯ ಸಮಯ. ಕತ್ತಲಲ್ಲಿ ಸರಿಯಾಗಿ ಕಾಣುತ್ತಲೂ ಇರಲಿಲ್ಲ. ಕಾಡಿನ ಮಧ್ಯದ ದಾರಿಯಲ್ಲಿ ಮೊಬೈಲ್ ಸಿಗ್ನಾಲ್ ಇರಲಿಲ್ಲ. ಡಿಕ್ಕಿ ಹೊಡೆದ ಬಸ್ಸು ರಸ್ತೆಗೆ ಅಡ್ಡಲಾಗಿ ನಿಂತಿತ್ತು. ಅದು ಹಾಗೆ ಡಿಕ್ಕಿ ಹೊಡೆದದ್ದು ಎದುರುಗಡೆ ನಿಂತಿರುವ ಕಬ್ಬಿಣ ತುಂಬಿದ ಲಾರಿಗೆ. ಲಾರಿಯಲ್ಲಿ ಏನೋ ತೊಂದರೆಯಾಗಿ ಅದರ ಚಾಲಕ ಮತ್ತು ಸಹಾಯಕ ರಿಪೇರಿಯಲ್ಲಿ ತೊಡಗಿರಬೇಕು ಎನಿಸುತ್ತದೆ, ಆದರೆ ಲಾರಿ ಮುಖ್ಯರಸ್ತೆಯಿಂದ ಕೆಳಗೆ ಬಲಗಡೆಗೆ ಸರಿಯಾಗಿ ನಿಲ್ಲಿಸಲ್ಪಟ್ಟಿತ್ತು. ಸೀ ಬರ್ಡ್ ಚಾಲಕ ತನ್ನ ಅತಿವೇಗದಲ್ಲಿ ಬಸ್ಸನ್ನು ಓಡಿಸುತ್ತಿದ್ದ. ಯಾವುದೋ ಕೆಟ್ಟಘಳಿಗೆ ಆತನ ಕಣ್ಣಿಗೆ ಜೋಂಪು ಹತ್ತಿದೆ, ನಿಮಿಷದಲ್ಲಿ ಆತ ಜೀವಕಳೆದುಕೊಂಡಿದ್ದಾನೆ. ಬಸ್ಸಿನ ಮುಂಭಾಗ ಪೂರ್ತಿ ನಜ್ಜುಗುಜ್ಜಾಗಿತ್ತು. ಲಾರಿಯ ಮುಂಭಾಗ ನುಜ್ಜಾಗಿ ಮಹಡಿಯಿರುವ ಕಟ್ಟಡದಂತೇ ಗೋಚರಿಸುತ್ತಿತ್ತು. ಇದನ್ನು ಅವಲೋಕಿಸುವಾಗ ನನಗನಿಸಿದ್ದು ಒಬ್ಬ ಚಾಲಕನ ಕೈಯ್ಯಲ್ಲಿ ೩೫-೩೬ ಜೀವಗಳು ಇರುತ್ತವೆ. ಜೊತೆಗೆ ಅವನ ಜೀವವೂ ಕೂಡ! ಉದರನಿಮಿತ್ತ ಆತ ಹೆಣಗಾಡುತ್ತ ಹಲವರನ್ನು ಹಬ್ಬಕ್ಕೋ ಹುಣ್ಣಿಮೆಗೋ ಕರೆದೊಯ್ಯುತ್ತಿರುತ್ತಾನೆ. ಒಬ್ಬನೇ ಚಾಲಕನಿಗೆ ಒತ್ತಡ ಬಹಳವಾದರೆ ದೇಹ ಆಯಾಸಗೊಂಡು ಸಹಜವಾಗಿ ನಿದ್ರೆ ಆವರಿಸುತ್ತದೆ. ದೂರದ ಪ್ರಯಾಣಕ್ಕೆ ಇಬ್ಬರು ಚಾಲಕರು ಇರುವುದು ಬಹಳ ವಿಹಿತ. ಇದನ್ನು ನಾವೆಲ್ಲಾ ಪರಿಶೀಲಿಸಬೇಕಾಗಿದೆ ಮಾತ್ರವಲ್ಲ ಈ ವಿಷಯದಲ್ಲಿ ನಾವು ಸಾರಿಗೆ ಮಂತ್ರಿಗಳಿಗೇ ಒಂದು ಅಹವಾಲನ್ನು ತಲ್ಪಿಸಬೇಕಾಗಿದೆ. ಈ ಥರದ ಅಪಘಾತಗಳು ಬಹಳ ನಡೆಯುತ್ತಲೇ ಇವೆ. ಆದರೆ ನಾವದನ್ನು ಮರೆತು ನಮ್ಮ ಕಾಲಬುಡಕ್ಕೆ ಬಂದಾಗ ಎಚ್ಚೆತ್ತುಕೊಳ್ಳುತ್ತೇವೆ. ಅಂದು ನಮಗೆ ಹಬ್ಬದ ಬದಲಿಗೆ ಮನಸ್ಸನ್ನು ಸಂತೈಸಿಕೊಳ್ಳುವುದೇ ಕಷ್ಟವಾಗಿತ್ತು. ಪಾಪದ ಚಾಲಕ ಪರಲೋಕಕ್ಕೆ ಹೋಗಿದ್ದ;ಆತನನ್ನು ಅವಲಂಬಿಸಿದ ಆತನ ಮನೆಮಂದಿಯ ಗತಿ ಏನಾಗಿರಬೇಡ!

ಗಣೇಶ ಬರಲಿ, ನಮ್ಮೆಲ್ಲರ ಗಾಢಾಂಧಕಾರದಲಿ ಜ್ಞಾನದ ದೀವಿಗೆ ಬೆಳಗಲಿ. ಓಡುವ ಸಮಯಕ್ಕೆ ತಕ್ಕಂತೇ ನಮ್ಮ ಮನಸ್ಸನ್ನೂ ಜಾಗೃತಗೊಳಿಸಲಿ; ಆತಂಕ-ಜಂಜಡ ರಹಿತ ಬದುಕನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸುತ್ತ ನಿಮಗೆಲ್ಲಾ ಪುನರಪಿ ಶುಭಕೋರುತ್ತಿದ್ದೇನೆ, ನಮಸ್ಕಾರ.