ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, May 29, 2013

ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...ಮಿಸುಕಾಡುತಿರುವೆ ನಾನು

ಚಿತ್ರ ಋಣ: ಯುನಿಸೆಫ್ , ದ್ವಾರಾ : ಅಂತರ್ಜಾಲ 
ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು...ಮಿಸುಕಾಡುತಿರುವೆ ನಾನು

ಪತ್ರಕರ್ತ ಖುಷ್ವಂತ್ ಸಿಂಗ್ ಹೇಳುತ್ತಾರೆ: ಇವತ್ತಿನ ಪತ್ರಿಕೆಗಳಲ್ಲಿ ಓದುವುದಕ್ಕಿಂತಾ ಓದದೇ ಇರಬೇಕಾದ ಕಾಲಕಸದಂತಹ ಕೆಲಸಕ್ಕೆ ಬಾರದ ಹೂರಣಗಳೇ ಹೆಚ್ಚು ಎಂದು. ದೇಶವಿದೇಶಗಳಿಂದ ಮಿಂಚಂಚೆಯ ಮೂಲಕ ಲೇಖನಗಳು, ಸುದ್ದಿಗಳು ಸಂಪಾದಕರನ್ನು ತಲ್ಪಿದಾಗ, ಅವುಗಳನ್ನೆಲ್ಲಾ ಅಳೆದು-ಸುರಿದು-ತೂಗಿ ನೋಡುವ ಕೆಲಸ ಕೇವಲ ಪ್ರಧಾನ ಸಂಪಾದಕನಿಂದ ಸಾಧ್ಯವಿಲ್ಲ, ಹಲವು ಕೈಗಳು ಸೇರಿ ಇಂದು ಪತ್ರಿಕೆಗಳನ್ನು ನಡೆಸುತ್ತವೆ. ಪತ್ರಿಕೆಗಳಲ್ಲಿ ಬರುವ ವಿಷಯಗಳು ಪತ್ರಿಕೆಯ ಮಾಲೀಕರ ನಿಯಂತ್ರಣಕ್ಕೂ ಒಳಪಟ್ಟಿರುತ್ತವೆ ಎನ್ನುತ್ತಾರವರು. ಪತ್ರಕರ್ತ ಮತ್ತು ಸಾಹಿತಿಯಲ್ಲಿ ತಾನಂತೂ ವ್ಯತ್ಯಾಸವನ್ನು ಕಾಣುತ್ತಿರಲೇ ಇಲ್ಲ, ಪತ್ರಕರ್ತ ತನ್ನ ಸಾಮಾಜಿಕ ಹೊಣೆಯನ್ನರಿತು ಲೇಖನಗಳನ್ನು ಸಿದ್ಧಪಡಿಸುವಾಗ ಆತನೊಬ್ಬ ಬರಹದ ಕಲಾವಿದನಾಗಿರುತ್ತಾನೆ ಎಂಬುದು ಅವರ ಅಂಬೋಣ. ಮೊದಲ ನಾಲ್ಕು ಸಾಲುಗಳಲ್ಲಿ ಓದುಗರನ್ನು ಆಕರ್ಷಿಸಲು ವಿಫಲನಾದರೆ ಲೇಖಕನ ಇಡೀ ಬರಹವೇ ಬಿದ್ದುಹೋಗುತ್ತದೆ ಎಂಬುದು ಅವರ ಅಭಿಪ್ರಾಯ; ಅವರ ಈ ಅಭಿಪ್ರಾಯಕ್ಕೆ ನನ್ನ ಕೀರಲು ದನಿಯನ್ನೂ ಸೇರಿಸಿ ನಿಮ್ಮ ಮುಂದಿಡುತ್ತಿರುವುದೇ ಈ ಲೇಖನ.  

ಭಟ್ಟರ ಚಾ ದುಖಾನಿನಲ್ಲಿ ದೊನ್ನೆ ಬಿರ್ಯಾನಿಯನ್ನು ನಿರೀಕ್ಷಿಸಿ ಬರುವವರು ಯಾರೂ ಇರಲಾರರು ಎಂಬುದು ನನ್ನ ವೈಯ್ಯಕ್ತಿಕ ಅನಿಸಿಕೆ; ಅದನ್ನು ನಿರೀಕ್ಷಿಸುವುದು ತರವಲ್ಲ ಕೂಡ.  ಹಾಗಂತ ಹುಳಿ ಇಡ್ಲಿ-ಹಳಸಿದ ಸಾಂಬಾರು ಇಟ್ಟುಕೊಂಡು, ನೆಗೆದೆದ್ದು ಮುತ್ತುತ್ತ ಕೂರುವ ನೊಣಗಳನ್ನು ಹಾರಿಸುತ್ತಿದ್ದರೆ ಜನ ಬರುತ್ತಾರ್ಯೇ?ಇಲ್ಲ. ಬಿಸಿಬಿಸಿಯಾಗಿ ಸರ್ವ್ ಮಾಡಬಲ್ಲ ನೀರುದೋಸೆ, ಗೋಳಿಬಜೆ[ಮಂಗಳೂರು ಬಜ್ಜಿ], ಪಕೋಡ, ಮಿರ್ಚಿ, ಉದ್ದಿನವಡೆ ಇತ್ಯಾದಿಗಳನ್ನಿಟ್ಟು ನಿರೀಕ್ಷಿಸಿದರೆ ನಿಮ್ಮಂತಹ ಹಲವು ಗಿರಾಕಿಗಳು ಬರಹದ ತಿಂಡಿಗಳನ್ನು ತಿನ್ನಲು ಬಂದೇಬರುತ್ತಾರೆ ಎಂಬುದು ನನಗೆ ಎಂದೋ ಖಚಿತವಾಗಿಬಿಟ್ಟಿದೆ. ಮೈಸೂರು ಮಲ್ಲಿಗೆಯ ನರಸಿಂಹಸ್ವಾಮಿಗಳು ಜೀವನದುದ್ದಕ್ಕೂ ಬಡತನವನ್ನೇ ಅನುಭವಿಸಿದವರು; ಆದರೆ ಅವರ ಕಾವ್ಯಶ್ರೀಮಂತಿಕೆಗೆ ಯಾವುದೇ ಕೊರತೆಯಾಗಲಿಲ್ಲ. ಮಾತ್ರವಲ್ಲಾ, ಕವಿ-ಸಾಹಿತಿ-ಬರಹಗಾರ ತನ್ನೊಳಗಿನ ನೋವನ್ನು ಮರೆತು ಸಂತಸವನ್ನು ಹಂಚಿಕೊಳ್ಳುತ್ತಾ ಪರರ/ಓದುಗರ/ಗ್ರಾಹಕರ ಸಂತಸಕ್ಕೆ ಕಾರಣವಾಗಬೇಕು ಎನ್ನುತ್ತಿದ್ದರಂತೆ.

ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ | ಬಂಗಾರವಿಲ್ಲದ ಬೆರಳು...

ಹಾಡನ್ನು ಗಾಯಕ ಅಶ್ವತ್ಥರ ದನಿಯಲ್ಲಿ ಅನೇಕಾವರ್ತಿ ಕೇಳಿದ ನನಗೆ ಆ ಹಾಡನ್ನು ಕೇಳುವಾಗಲೆಲ್ಲಾ ನರಸಿಂಹಸ್ವಾಮಿ ಆವರಿಸಿಕೊಂಡ ಅನುಭವ ಆಗುತ್ತದೆ. ನರಸಿಂಹಸ್ವಾಮಿಯವರ ಈ ದನಿಗೂ ನನ್ನ ದನಿಯ ಬೆಸುಗೆಯಾಗಿದೆ! ಅಷ್ಟುದೂರದಿಂದ ನೀವೆಲ್ಲಾ ಭಟ್ಟರ ಅಂಗಡಿಗೆ ಬರುವುದು ಯಾವುದೋ ಒಂದು ಉತ್ತಮ ತಿಂಡಿ ಸಿಗುತ್ತದೆ ಎಂಬ ಭರವಸೆಯ ಗಂಟನ್ನು ಹೊತ್ತು. ಹೀಗಿರುವಾಗ ಕೇವಲ ರಾಜಕೀಯ, ಕೇವಲ ಸಾಮಾಜಿಕ ಸುದ್ದಿಗಳನ್ನಷ್ಟೇ ಬಿತ್ತರಿಸುತ್ತಿದ್ದರೆ  ಭಟ್ಟರ ರೇಡಿಯೋ ಎತ್ತಿ ಬಿಸಾಕಿ ಬಣ್ಣದ ಸುದ್ದಿಗಳನ್ನು ತೋರಿಸುವ ಟಿವಿಗಳ ಮುಂದೆ ನೀವು ಹೋದೀರಿ! ಶಿವಸೇನೆಯ ವಿರುದ್ಧ ಲೇಖನ ಬರೆದರೂ ಶಿವಸೇನೆಯವರು ಕಚೇರಿಗೆ ಮುತ್ತಿಗೆ ಹಾಕಿ ಕಲ್ಲುಹೊಡೆಯದಂತೇ ನಿಭಾಯಿಸುವ ಅಕ್ಷರಕಲೆ ಬರಹಗಾರನ ತಾಕತ್ತು ಎಂದ ಖುಷ್ವಂತ ಸಿಂಗರ ಮಾತಿನಲ್ಲಿ ಹುರುಳಿಲ್ಲದೇ ಇಲ್ಲ. ಯಾವುದೇ ಉದ್ವೇಗವಿದ್ದರೂ ಅದನ್ನು ಉಪಾಯವಾಗಿ ಪರ್ಯಾಯ ಪದಗಳಲ್ಲಿ ಬಗೆಗೊಳಿಸುವುದು ಬರಹಗಾರನ ಚಾತುರ್ಯವೇ ಸರಿ. ಯಕ್ಷಗಾನ ನೋಡಿ ಬಲ್ಲವರಿಗೆ ವೇಷಗಳ ’ಪ್ರವೇಶ’ಕ್ಕೆ ಇರುವ ಮಹತ್ವ ಗೊತ್ತು. ಕೇವಲ ಪ್ರವೇಶದಿಂದಲೇ ಪ್ರಮುಖ ಕಲಾವಿದರ ಆ ದಿನದ ಮನೋಭೂಮಿಕೆಯನ್ನು ಅಳೆಯುತ್ತಿದ್ದವರು ನಾವು; ತಮ್ಮ ಖಾಸಗೀ ಬದುಕಿನ ನೋವು-ಕಾವುಗಳನ್ನು ಕಿಂಚಿತ್ತೂ ತೋರ್ಗೊಡದೇ ಕಲೆಗಾಗಿ ಬದುಕಿದವರು ಅನೇಕ ಮಹನೀಯರು. ಅವರಲ್ಲಿನ ಅಂತರಾಳವೂ ಕೂಡ ಅದನ್ನೇ ಹೇಳುತ್ತಿತ್ತು: ಪಾಪ, ಅಷ್ಟುದೂರದಿಂದ ನಮ್ಮ ಪಾತ್ರವನ್ನು ನೋಡಲಾಗಿ ಬಂದಿದ್ದಾರೆ-ನಮ್ಮೊಳಗಿನ ನೋವನ್ನು ಮರೆತು ನಲಿವನ್ನು ಉಣಬಡಿಸೋಣ. ಯಕ್ಷಕಲಾವಿದರ ಈ ಅಂತರಾಳಕ್ಕೂ ನನ್ನ ಅಂತರ್ಯದ ತಂತಿ ಮೀಟಿದೆ.    

ಕಥೆಗಳನ್ನು ಜಾಸ್ತಿ ಓದದಿದ್ದವ ಕಥೆಯೊಂದನ್ನು ಓದಿಬಿಟ್ಟೆ. ಕೃಶಕಾಯದ-ಕೈಲಾಗದ ಗಂಡನ ವಿಪರೀತ ಕುಡಿತಕ್ಕೆ ಬೇಸತ್ತ ಮಹಿಳೆಯ ಆರ್ಥಿಕ ಅಸಹಾಯದ ದಿನವೊಂದರಲ್ಲಿ, ಸಿರಿವಂತ ಕುಟ್ಟಿ ಆಕೆಯನ್ನು ಬಳಸಿಕೊಂಡಿದ್ದನ್ನು ಪರೋಕ್ಷವಾಗಿ ಅರಿತ ಆಕೆಯ ಗಂಡ, ಆಕೆಯನ್ನು ರಾತ್ರಿಯಿಡೀ ಹೊಡೆಯುತ್ತಾನೆ, ಗಾಯಗೊಳಿಸುತ್ತಾನೆ. ಚಿಕ್ಕ ಮಗ ಅದನ್ನು ನೋಡಿಯೂ ತಪ್ಪಿಸಲಾಗದೇ ಕಾರಣವನ್ನೂ ತಿಳಿಯಲಾಗದೇ ಒದ್ದಾಡುತ್ತಾನೆ. ಮಾರನೇ ಬೆಳಿಗ್ಗೆ ಬಿಸಿಲೇರುವ ಹೊತ್ತಿಗೆ ಅಪ್ಪನೆಲ್ಲೋ ಹೊರಟುಹೋದದ್ದನ್ನು ಹುಡುಗ ಕಾಣುತ್ತಾನೆ. ಮನೆಯೊಳಗೆ ರಕ್ತದ ಕಮಟುವಾಸನೆ ಹರಡಿರುತ್ತದೆ. ಕೆಲಸಮಯದಲ್ಲೇ ಕೆಂಪುಸೀರೆಯನ್ನುಟ್ಟ ಅಮ್ಮ, ತುಸುಹೊತ್ತಿನಲ್ಲೇ ಅಲ್ಲಿಗೆ ಬಂದ ಕುಟ್ಟಿಯೊಡನೆ ಎಲ್ಲಿಗೋ ಹೊರಟುನಿಲ್ಲುತ್ತಾಳೆ. ಸೀರೆಯಲ್ಲಿ ಅಂದು ಬಹಳ ಚಂದವಾಗಿ ಕಾಣಿಸುವ ಅಮ್ಮನನ್ನು "ಎಲ್ಲಿಗೆ ಹೊರಟೆ" ಎಂದರೆ ಅಮ್ಮನಿಂದ ಮಾತಿಲ್ಲ, ಕೈಗೆ ಹತ್ತರ ನೋಟನ್ನು ತುರುಕಿ, ಕೊನೆಯಬಾರಿ ಎಂಬಂತೇ ಮುದ್ದಿಸಿ, ಕುಟ್ಟಿಯೊಡನೆ ಹೆಜ್ಜೆಹಾಕಿದ ಅಮ್ಮನನ್ನು ಮತ್ತೆ ತಡೆದು ಕೇಳಿದಾಗ, ಅಮ್ಮನನ್ನು ಪಕ್ಕಕ್ಕೆ ಸರಿಸಿ, ಹಿಂಗಾಲಲ್ಲಿ ಕುಟ್ಟಿ ಎದೆಗೆ ಒದೆದಾಗ, ಚೇತರಿಸಿಕೊಳ್ಳುವ ಮೊದಲೇ ಎದುರಿನ ಜಾಗದಲ್ಲಿ ಯಾರೂ ಇರದಿರುವುದು ಮಗುವಿಗೆ ಕಾಣುತ್ತದೆ."ಅಬ್ಬೇ...ಅಬ್ಬೇ" ಎಂದು ಬೊಬ್ಬಿರಿದ ದನಿ ಕೇವಲ ಅರಣ್ಯರೋದನವಾಗಿ ಅಬ್ಬೆಯ ಪ್ರೀತಿಯಿಂದ ವಂಚಿತನಾಗಿ ಬೆಳೆಯುವ ಆ ಮಗು ಕೆಲಕಾಲದಲ್ಲೇ ಅಪ್ಪನನ್ನೂ ಕಳೆದುಕೊಂಡು ಒಂಟಿಯಾಗಿ ಹೇಗೆ ಬೆಳೆದ ಎಂಬ ಕಥೆಯ ಹಿಂಚುಮುಂಚಿನ ಎಲ್ಲಾ ಘಟನೆಗಳಿಗಿಂತಾ ಹಡೆದಮ್ಮನೆದುರೇ ಕುಟ್ಟಿ ಮಗುವನ್ನು ಒದೆದಿದ್ದು-ಹಡೆದಮ್ಮ ಹೃದಯ ಕಲ್ಲುಮಾಡಿಕೊಂಡು ಮಾತನಾಡದೇ ಬಿಟ್ಟುಹೋಗಿದ್ದು-ಅಬ್ಬೇ ಅಬ್ಬೇ ಎಂದು ಏನೂ ಅರಿಯದ ಆ ಚಿಕ್ಕ  ಮಗು ಅತ್ತಿದ್ದು ---ಈ ಸನ್ನಿವೇಶಗಳು ಹೃದಯವನ್ನು ಹಿಂಡಿ ಮನಸ್ಸಿಗೆ ಅರಿವಳಿಕೆ ನೀಡಿಬಿಟ್ಟವು. ||ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ|| [ಒಬ್ಬ ಕೆಟ್ಟ ಮಗು ಜನಿಸಬಹುದು ಆದರೆ ಒಬ್ಬ ಕೆಟ್ಟ ತಾಯಿ ಇರಲಾರಳು] ಎಂಬ ಆದಿಶಂಕರರ ಮಾತನ್ನು ಗಮನಿಸಿದೆ. ಬದುಕಿನ ಯಾವ ಅನಿವಾರ್ಯತೆಯಲ್ಲಿ ಆ ಮಾತಿಗೆ ಅಪವಾದವೆನಿಸುವ ಕೆಲವು ತಾಯಂದಿರೂ ಇರುತ್ತಾರೆ ಎಂಬುದು ಅರ್ಥವಾಗದೇ ಹೋಯ್ತು. 

ಮುಂಜಿಮನೆಯೊಂದರಲ್ಲಿ ಊಟಮಾಡಿ ಕೈತೊಳೆದು ಬಾಯೊರೆಸಿಕೊಳ್ಳುತ್ತಾ ಎದುರು ಸಿಕ್ಕ ಪರಿಚಿತರ, ನೆಂಟರ ಕುಶಲೋಪರಿ ವಿಚಾರಿಸಿಕೊಳ್ಳುತ್ತಿದ್ದೆ. ಆಪ್ತವೆನಿಸುವ ಮುಖವೊಂದನ್ನು ಕಂಡು ಮಾತನಾಡಿಸಿದಾಗ, ತನ್ನ ಹೃದಯದ ಭಾವಗಳಿಗೆ ಮಾತುಗಳ ರೂಪಕೊಟ್ಟ ವೃದ್ಧ ಮಹಿಳೆಯ ಕಣ್ಣಾಲಿಗಳಲ್ಲಿ ಮಡುಗಟ್ಟಿದ ನೋವು ಮೈಕೊಡವಿ ಎದ್ದುನಿಂತಿತ್ತು. ಜೀವನದ ಸಂಜೆಯ ಭಾಗದಲ್ಲಿ ಪಾರ್ಶ್ವವಾಯುವಿನಿಂದ ಪೀಡಿತರಾಗಿ ಕಳೆದೆಂಟು ವರ್ಷಗಳಿಂದ ಮಲಗಿಯೇ ಇರುವ ಪತಿಯ ಬಗೆಗೆ ಆಕೆ ಹೇಳಿಕೊಂಡರು. ಅಶಕ್ತವಾದ ಶರೀರದಲ್ಲಿ ಮಲಗಿದಲ್ಲೇ ಸೊಂಟದ ಕೀಲುಗಳು ಸ್ವಲ್ಪ ಜಾರಿ, ಕಟ್ ಆಗಿ  ಸರಿಪಡಿಸಲಾಗದ ಸ್ಥಿತಿಯಲ್ಲಿ, ನೋವನ್ನು ಅನುಭವಿಸುತ್ತಾ ದಿನಗಳನ್ನು ನೂಕುತ್ತಿರುವ ಗಂಡನ ಆರೈಕೆಯೇ ಆಕೆಯ ದಿನಚರ್ಯೆಯ ಬಹುಮುಖ್ಯ ಭಾಗವಂತೆ. ಮಧ್ಯಾಹ್ನದ ಒಂದೆರಡು ಗಂಟೆಗಳ ಕಾಲ ಮಾತ್ರ ಹತ್ತಿರದಲ್ಲೇ ಎಲ್ಲಾದರೂ ನೆಂಟರಿಷ್ಟರ ಬಳಗದಲ್ಲಿ ಮದುವೆ-ಮುಂಜಿ ಕಾರ್ಯಕ್ರಮಗಳಿದ್ದರೆ, ಮನೆಯಲ್ಲಿರುವ ಸೊಸೆಯಂದಿರಿಗೆ ಹೇಳಿ ಹೊರಬಂದು ಹೋಗುವುದೇ ಪ್ರಯಾಸದ ಕೆಲಸ; ಅದು ಕೇವಲ ತನ್ನನ್ನು ಆಮಂತ್ರಿಸಿದ ನೆಂಟರ ಓಲೈಕೆಗಾಗಿ ಮಾತ್ರ ಎಂದ ಆಕೆಯ ಕಣ್ಣಲ್ಲಿ ಬದುಕಿನ ಅರ್ಥದ ಜಾಡನ್ನು ಕಂಡೆ!

"ಇದೇ ನನ್ನ ಪಾಲಿಗೆ ಬಂದ ಪಂಚಾಮೃತವೆಂದು ನಿರ್ಧರಿಸಿಬಿಟ್ಟಿದ್ದೇನೆ; ದೇವರು ಇಟ್ಟಹಾಗೇ ಇದ್ದು ಅದೇ ನನ್ನ ಸುಖ-ಸಂತೋಷವೆಂದು ಸ್ವೀಕರಿಸಿಬಿಟ್ಟಿದ್ದೇನೆ. ನಾನು ಮಾಡುತ್ತಿರುವ ಕರ್ತವ್ಯದಲ್ಲಿ ನನಗೆ ಸಮಾಧಾನವಿದೆ, ಆದರೆ ಯಜಮಾನರು ಬಳಲುವುದನ್ನು ನೋಡಿ ಬೇಸರವಾಗುತ್ತದೆ" ಎನ್ನುತ್ತಾ ತನ್ನ ಒಳಗನ್ನು ನನ್ನಲ್ಲಿ ಹರಹಿಕೊಂಡ ಆ ತಾಯಿಗೆ ನನ್ನ ಮಾತುಗಳಿಂದ ಸಾಂತ್ವನ ಹೇಳಲು ಸಾಧ್ಯವೇ? ಅಷ್ಟಕ್ಕೂ ನನ್ನ ಕಿರಿಯ ವಯಸ್ಸಿಗೂ ಅವಳ ಹಿರಿಯ ವಯಸ್ಸು-ವರ್ಚಸ್ಸಿಗೂ ಅಜ-ಗಜಾಂತರ ಕಾಣುತ್ತಿತ್ತು. ಸಾರಸ್ವತಲೋಕದ ಜನರನ್ನು ಅಪಾರವಾಗಿ ಗೌರವಿಸುವ ಆಕೆಗೆ, ಪತಿಯ ಪಕ್ಕದ ಬಿಡುವಿನ ವೇಳೆಗಳಲ್ಲಿ ಪುಸ್ತಕಗಳೇ ಜೀವಾಳವಂತೆ. ಉತ್ತಮ ಬರಹಗಾರರ ಪುಸ್ತಕಗಳಲ್ಲಿ ಹುದುಗಿದ ಕಥೆ-ಕವನ-ಕಾದಂಬರಿ-ಪ್ರಬಂಧ-ಹಾಸ್ಯ ಇವೆಲ್ಲವುಗಳಲ್ಲಿ ಬರುವ ಪಾತ್ರಗಳು ಬಿಂಬಿಸುವ ನವರಸಗಳು ಅವಳ ಹೃದ್ಗತವನ್ನು ಪ್ರತಿನಿಧಿಸಿ, ಅವಳೊಡನೆ ಮಾತನಾಡುತ್ತವಂತೆ. ಬರಹಾರನೊಬ್ಬನ ಬರಹಗಳು ಅಷ್ಟರಮಟ್ಟಿಗೆ ಜೀವಂತಿಕೆ ಇಟ್ಟುಕೊಂಡರೆ ಆ ಬರಹಗಾರನಿಗೆ ಇನ್ಯಾವ ಪ್ರಶಸ್ತಿಯ ಅಗತ್ಯ ಬೀಳುತ್ತದೆ?   

ಮಲ್ಲೇಶ್ವರದಲ್ಲಿ ನಾನುಕಂಡ ವೃದ್ಧ ದಂಪತಿಯ ಬಗೆಗೆ ತಿಳಿಸಿ, ಮಕ್ಕಳು ಓದಿ, ವಿದೇಶವಾಸಿಗಳಾಗಿ, ಮುಪ್ಪಿನ-ಅನಾರೋಗ್ಯದ ಸಮಯದಲ್ಲಿ ನೋಡಿಕೊಳ್ಳಲು ಯಾರೂ ಇಲ್ಲದ ಆ ದಂಪತಿಯ ಬವಣೆಯ ಬಗ್ಗೆ ಆ ತಾಯಿಗೆ ತಿಳಿಸಿದೆ. ಕೇಳಿದ ಆ ಕ್ಷಣದಲ್ಲಿ "ಹೌದಪ್ಪಾ ಮಕ್ಕಳ ಬಾಲ್ಯ, ಅವರು ಅಂಬೆಹರೆದ ದಿನಗಳು, ತೊದಲುಮಾತುಗಳನ್ನಾಡುತ್ತಿದ್ದ ದಿನಗಳು ಇವನ್ನೆಲ್ಲಾ ಯಾವ ತಾಯಿಯೂ ಮರೆಯಲಾರಳು." ಎಂದ ಆಕೆಗೆ  ತನ್ನಂತಹ ಅನೇಕ ಜನ ಜೀವನದಲ್ಲಿ ವಿವಿಧ ತೆರನಾಗಿ ಅಸಹಾಯರಾಗಿರುವ ಸಂಗತಿಗಳು  ನೆನಪಿಗೆ ಬಂದಿರಬೇಕು. ಅವಿಭಕ್ತ ಕುಟುಂಬ-ಸಂಸ್ಕೃತಿ ಕಾಲುಶತಮಾನದ ಹಿಂದಿನ ಇತಿಹಾಸದ ಭಾಗವಾಗಿ ಹೋದ ಈ ದಿನಗಳಲ್ಲಿ, ಮಕ್ಕಳು ಬೆಳೆದು ಉನ್ನತ ವ್ಯಾಸಂಗಗಳನ್ನು ಮುಗಿಸಿಕೊಂಡು ತಮ್ಮ ಪಾಡಿಗೆ ತಾವು ತಮ್ಮ ಜೀವನವನ್ನು ಕಟ್ಟಿಕೊಂಡು ದೂರವೇ ಇರಬೇಕಾಗುತ್ತದೆ. ಅವಕಾಶವಿದ್ದರೂ, ಅಧುನಿಕ ಜೀವನ ಶೈಲಿಗಾಗಿಯೋ, ಹೆಂಡತಿಯ ಮಾತು ಕೇಳಿಕೊಂಡೋ ಅದೆಷ್ಟೋ ಜನ ತಂದೆ-ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಇನ್ನೂ ಕೆಲವು ’ಬುದ್ಧಿಜೀವಿ ಮಕ್ಕಳು’ ಪಾಲಕರ ಅನಾರೋಗ್ಯದಲ್ಲಿ, ಅವರಿಗೆ ಸಮಯಕ್ಕೆ ಸರಿಯಾಗಿ ಉಪಚಾರ ನಡೆಯಲಿ ಎಂಬ ಕಾರಣಕ್ಕಾಗಿ ವೃದ್ಧಾಶ್ರಮಗಳಲ್ಲಿ ಬಿಟ್ಟುದಾಗಿ ಹೇಳುತ್ತಾರೆ.  ಹಣದಿಂದ ಸೇವೆಯನ್ನು ಖರೀದಿಸಿ ಕೊಡಬಹುದು ಆದರೆ ಪ್ರೀತಿಯನ್ನಲ್ಲ ಎಂಬುದು ಈ ಮೇಲಿನ ತರಗತಿಯ ಮಕ್ಕಳಿಗೆ ತಿಳಿದಿದೆಯೇ? ಗೊತ್ತಿಲ್ಲ. ಪ್ರೀತಿಸಿ, ಮುದ್ದಿಸಿ ವಿದ್ಯೆ-ಬುದ್ಧಿ ಕಲಿಸಿ ಬೆಳೆಸಿದ ನನ್ನಮ್ಮನಿಂದ ದೂರದಲ್ಲಿ ವಾಸವಾಗಿರುವ  ನಾನು ಈ ಮಾತನ್ನು ಹೇಳಲು ಹಕ್ಕುದಾರನೇ? ಖಂಡಿತಕ್ಕೂ ಅಲ್ಲ. ಮರೆಯಲಾಗದ, ಮರೆಯಬಾರದ ಆಮ್ಮನ ಋಣಕ್ಕೆ ಬೆಲೆಕಟ್ಟಲು ಬರುವುದೇ? ಆ ಪ್ರೀತಿ ಜೀವನದಲ್ಲಿ ಇನ್ಯಾರಿಂದಲಾದರೂ ದೊರೆವುದೇ? ದೇವರಾಣೆಗೂ ಇಲ್ಲ. ಅಂತಹ ಮಾತಾಮಹಿಗೊಂದು ಸಾಷ್ಟಾಂಗ ನಮಸ್ಕಾರ.

೧೯೬೯ ರಲ್ಲಿ ವಿದೇಶದಲ್ಲಿದ್ದಾಗಲೇ ’ಇಲ್ಲಸ್ಟ್ರೇಟೆಡ್ ವೀಕ್ಲಿ’ಗೆ ಸಂಪಾದಕರಾಗಿ ಅಧಿಕಾರ ವಹಿಸಿಕೊಂಡವರು ಖುಷ್ವಂತ್ ಸಿಂಗರು; ಅದು ನಾನು ಕೇಳಿದ ಕಥೆ. ಹುಟ್ಟಿ-ಬೆಳೆದು-ಬುದ್ಧಿ ಬಲಿತು, ತಡವಾಗಿ ಕೆಲವೆಡೆ ಹಳೆಯ ಪುಸ್ತಕಗಳನ್ನೆಲ್ಲಾ ಹುಡುಕಿ, ಸಿಕ್ಕ ಇಲ್ಲಸ್ಟ್ರೇಟೆಡ್ ವೀಕ್ಲಿಯ ಆ ಕಾಲದ ಕೆಲವು ಸಂಚಿಕೆಗಳಲ್ಲಿ ಅವರ ಬರಹಗಳನ್ನು ಓದಿದ್ದೇನೆ. ಸಂಪಾದಕರಾಗಿ, ಬರಗಾರರಾಗಿ, ಪತ್ರಕರ್ತರಾಗಿ ಅವರು ಬರೆದ ಪ್ರತಿಯೊಂದೂ ಲೇಖನ, ಸಂಪಾದಕೀಯ ಎಲ್ಲವೂ ವಿಶಿಷ್ಟವಾಗಿವೆ. ಇಂದಿನ ಬರಹಗಾರರಿಗೆ ಓದಿನ ಕೊರತೆಯಿದೆ ಎನ್ನುವ ಅವರ ಹೇಳಿಕೆಯಲ್ಲಿ ಪತ್ರಿಕಾಮಾಧ್ಯಮ ಪರಸ್ಪರ ಪೈಪೋಟಿಯಲ್ಲಿ, ಬೇಡದ ವಿಷಯಗಳನ್ನು ಬಣ್ಣಗಳ ಮೆರುಗುಹಚ್ಚಿ ಬಡಿಸುತ್ತಿದೆ ಎಂಬ ವಿಷಾದವಿದೆ. ಪತ್ರಿಕಾರಂಗದ ಹೊಸಶಕೆಗಾರನೆನ್ನಿಸಿದ ಖುಷ್ವಂತ್ ಸಿಂಗ್ ಅವರ ಬರಹಗಳ ಹಿಂದೆ ಸತತ ಓಡಾಟದ ಪರಿಶ್ರಮವಿದೆ, ನಿರಂತರ ಓದಿನ ಜಾಗತಿಕ ಮಾಹಿತಿ ಭಂಡಾರವಿದೆ. ಓದುಗರ ಹೃದಯದ ಭಾವಗಳಿಗೆ ಅವರು ಬರಹಗಳ ರೂಪಕೊಟ್ಟಿದ್ದಾರೆ; ಆ ಬರಹಗಳಲ್ಲಿ ಜನ ತಮ್ಮ ಪ್ರತಿಬಿಂಬಗಳನ್ನು ಕಂಡು, ಅವುಗಳನ್ನು ಇಷ್ಟಪಟ್ಟಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳು, ಅದರಲ್ಲೂ ಪತ್ರಕರ್ತರು ತಮ್ಮ ವೃತ್ತಿಬದುಕು-ಪ್ರವೃತ್ತಿಬದುಕು ಮತ್ತು ಖಾಸಗೀ ಬದುಕಿನಲ್ಲಿ ಶುದ್ಧ ಚಾರಿತ್ರ್ಯ ಉಳ್ಳವರಾಗಿರಬೇಕು-ಆಡಿದ್ದನ್ನೇ ತಾವೂ ಮಾಡಿತೋರಿಸುವವರಾಗಿರಬೇಕು ಎಂಬುದು ಖುಷ್ವಂತ್ ಸಿಂಗರ ಬಯಕೆ. ಆದರೆ ಎಷ್ಟು ಪತ್ರಕರ್ತರು ಇಂದು ಹಾಗಿದ್ದಾರೆ? ಪ್ರಶ್ನೆ ಹಾಗೇ ಉಳಿಯುತ್ತದೆ! 

ಬಹುಕಾಲದಿಂದ ನನಗೊಂದು ಚಾಳಿಯಿದೆ: ಅದೆಂದರೆ ಮನೆಯಲ್ಲಿ, ಕಚೇರಿಯಲ್ಲಿ, ಕಣ್ಣೆದುರಲ್ಲಿ ಚಲನೆಯುಳ್ಳ, ಚಾಲನೆಯುಳ್ಳ ವಸ್ತುಗಳನ್ನು ನೋಡಬಯಸುವುದು; ಆ ದೃಷ್ಟಿಯಿಂದ ಹಳೆಯ ಗಡಿಯಾರಗಳಲ್ಲಿದ್ದಂತಹ ಓಲಾಡುವ ಪೆಂಡೂಲಂ ನನಗೆ ವಿಶಿಷ್ಟವೆನಿಸುತ್ತದೆ. ಇಂದಿನ ಇಲೆಕ್ಟ್ರಾನಿಕ್ ಕ್ಲಾಕ್ ಗಳಲ್ಲಿರುವ ಸೇಕಂದು ಮುಳ್ಳಿನ ಹಾರುವ ತಿರುಗಾಟ ಇಷ್ಟವಾಗುತ್ತದೆ. ಸದಾ ಉರಿಯುತ್ತಿರುವ ಎಣ್ಣೆ-ಬತ್ತಿಯ ದೀಪ ಇಷ್ಟವಾಗುತ್ತದೆ. ದಿನದ ಯಾವುದೇ ಘಳಿಗೆಯಲ್ಲೂ ಸೂರ್ಯನ ಬೆಳಕು ಇಷ್ಟವಾಗುತ್ತದೆ. ನಿಶೆಯಲ್ಲಿ ಚಂದ್ರಮನ ಬೆಳದಿಂಗಳು ಇಷ್ಟವಾಗುತ್ತದೆ. ಮಂದಮಾರುತಕ್ಕೆ ಮೈಕುಲುಕುವ ಗಿಡಮರಗಳು ಇಷ್ಟವಾಗುತ್ತವೆ. ಸದಾ ಲವಲವಿಕೆಯಿಂದ ಹಾರುವ-ಕೂಗುವ ಹಕ್ಕಿಪಕ್ಷಿಗಳು ಇಷ್ಟವಾಗುತ್ತವೆ. ಆಲಸ್ಯದ ನಾಯಿ, ಮಲಗೇ ಇರುವ ಬೆಕ್ಕು, ದಟ್ಟಗೆ ಕವಿದು ಗಂಟೆಗಟ್ಟಲೆ ಹಾಗೇ ನಿಂತಿರುವ ಮೋಡಗಳು, ಬೊಂಬೆಯಂತೇ ಅಲ್ಲಾಡದೇ ನಿಂತ ಗಿಡಮರಗಳು ಇಂಥವೆಲ್ಲಾ ನನಗೆ ಇಷ್ಟವಲ್ಲ; ನಿಂತುಹೋದ ಗಡಿಯಾರ, ಆರಿಹೋದ ಎಣ್ಣೆಬತ್ತಿಯ ದೀಪ ಮೊದಲಾದ ಕೆಲವನ್ನು ನಾನು ನೋಡಲು ಬಯಸುವುದಿಲ್ಲ. ವ್ಯಕ್ತಿ ಆಕ್ಟಿವ್ ಆಗಿರಬೇಕೆಂದರೆ ತನ್ನ ಸುತ್ತಲಿನ ಜಾಗದಲ್ಲಿ ಅಂತಹ ಆಕ್ಟಿವ್ ನೆಸ್ ಅನುಭವಿಸಬೇಕು. ಸುತ್ತಲಿನ ವಸ್ತು, ವಿಷಯಗಳಲ್ಲಿ ಜೀವಂತಿಕೆಯನ್ನು ಕಾಣಬೇಕು. ಬಿದ್ದುಕೊಂಡಿರುವ ಕಲ್ಲಿನಲ್ಲೂ ಮೂರ್ತಿಯರಳಬಲ್ಲ ಆಲೋಚನೆ ವ್ಯಕ್ತಿಯಲ್ಲಿ ಮೂಡಬೇಕು. ಅಂತಹ ಚಲನಶೀಲತೆಯನ್ನು ವ್ಯಕ್ತಿ ತನ್ನೊಳಗೆ ಆಹ್ವಾನಿಸಿ ತನ್ನ ಜೀವಂತಿಕೆಯನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ವ್ಯಕ್ತಿಗೆ ಬದುಕಿನ ಬಹುಮುಖಗಳ, ಮಜಲುಗಳ ಅನುಭವ ಪ್ರಾಪ್ತವಾಗುತ್ತಾ ಹೋಗುತ್ತದೆ. ನೀರವದ ನಕಾರಾತ್ಮಕತೆಯಲ್ಲೂ ಸಕಾರಾತ್ಮಕವಾಗಿ ಚಿಂತಿಸುವ ಮನಸ್ಸು ಸಿದ್ಧಗೊಳ್ಳುತ್ತದೆ.  

ಪತ್ರಕರ್ತನೊಬ್ಬ ಅಧ್ಯಯನಶೀಲನಾದರೆ ಸಮಾಜಕ್ಕೂ, ಸರಕಾರಕ್ಕೂ, ಅಷ್ಟೇ ಏಕೆ ವಿದ್ಯೆಕಲಿಸುವ ಉಪಾಧ್ಯಾಯರುಗಳಿಗೂ ಆತ ಅಧ್ಯಾಪಕನಾಗಬಹುದು! ತನ್ನ ಓದಿನಾಳದಿಂದ ಹಲವು ಅನುಭವದ ಮುತ್ತು-ರತ್ನ-ವಜ್ರ-ವೈಢೂರ್ಯಗಳನ್ನು  ಬೊಗಸೆಗಟ್ಟಲೆ ಹೆಕ್ಕಿ ಹೆಕ್ಕಿ ಸಮಾಜಕ್ಕೆ ಬಡಿಸಬಹುದು. ಸಮಾಜದ ಸಕಲ ಕ್ಷೇತ್ರಗಳ, ಸಕಲ ವರ್ಗಗಳ ಜನರಿಗೆ ’ಇದಮಿತ್ಥಂ’[ಇದು ಹೀಗೇ ಸರಿ] ಎಂಬುದನ್ನು ಮನದಟ್ಟುಮಾಡಿಸಬಹುದು. ಅಧ್ಯಯನದ ಕೊರತೆಯಿರುವ ಜನಗಳೂ ಲೇಖಕರಾಗಿರುವ ಇಂದಿನ ದಿನಗಳಲ್ಲಿ ಯಾವ ಮೌಲ್ಯದ ಬರಹಗಳನ್ನು ನಿರೀಕ್ಷಿಸಲು ಸಾಧ್ಯ?  ಬರಹವೆಂದರೆ ನಾಲ್ಕಾರು ಪದಗಳ ಸರ್ಕಸ್ಸಲ್ಲ, ಬರವಹೆಂದರೆ ಕೇವಲ ಒಮ್ಮುಖವಾಗಿ ಹೊಮ್ಮುವ ಭಾವಗಳ ಮಿಡಿತವಲ್ಲ, ಬರವೆಂದರೆ ಕೇವಲ ಯಾವುದೋ ಒಂದು ಜನಾಂಗದ ಖಾಸಗೀ ಧೋರಣೆಗಳ ಅಭಿವ್ಯಕ್ತಿಯಲ್ಲ, ಬರಹವೆಂದರೆ ಸಿನಿಮಾ-ಚಿತ್ರಗಳ-ಗಾಸಿಪ್ ಗಳ ಕಲಸುಮೇಲೋಗರವಲ್ಲ, ಬರಹವೆಂದರೆ ಬರಹಗಾರನ ಸ್ವಂತದ ಅಭಿಪ್ರಾಯ ಕೂಡ ಅಲ್ಲ. ಹಾಗಾದರೆ ಬರಹವೆಂದರೆ ಏನು ಎಂದರೆ ಬರಹವೆನ್ನುವುದು ಬರಹಗಾರನ ವಿಶ್ವತೋಮುಖತ್ವದ ಅಭಿವ್ಯಕ್ತಿ; ಬರೆಯುವ ಬರಹಗಳು ಸರ್ವಸಮ್ಮತವಾಗಬೇಕು, ಬರೆಯುವ ಬರಹಗಳು ಸಮಾಜಕ್ಕೆ ತಿಳುವಳಿಕೆ ನೀಡುವಂತಿರಬೇಕು, ಬರೆಯುವ ಬರಹಗಳು  ರಂಜನೆಯ ಜೊತೆಜೊತೆಗೆ ಉದಾತ್ತ ಜೀವನಮೌಲ್ಯಗಳನ್ನು ಎತ್ತಿ ಹಿಡಿಯಬೇಕು. ಹೀಗಾದಾಗ ಮಾತ್ರ ಬರಹಗಾರನ ಬರಹಗಳಲ್ಲಿ ಜೀವಂತಿಕೆ ಮೇಳೈಸಿರುತ್ತದೆ. ಅಂಥವರ ಬರಹಗಳ ಮಾನಸ ಸರೋವರಗಳಲ್ಲಿ ಖುಷ್ವಂತ್ ಸಿಂಗ್ ರಂತಹ ಉತ್ತಮ ಬರಹಗಾರರೆಲ್ಲರೂ ಈಜು ಹೊಡೆಯುತ್ತಿರುತ್ತಾರೆ! ಬರಹವೆಂಬುದು ಸಾರಸ್ವತ ಪೀಠದಿಂದ ಹೊಮ್ಮುವ ಅಭಿಪ್ರಾಯವಾದರೆ ಅಂತಹ ಘನತರದ ಪೀಠದಲ್ಲಿ ಕುಳಿತು ಬರೆಯಲು ತಾನು ಸಮರ್ಥನೇ ಎಂಬುದನ್ನು ಬರಹಗಾರ ತನ್ನಲ್ಲೇ ಸದಾ ಕೇಳಿಕೊಳ್ಳುತ್ತಿರಬೇಕು; ಅನರ್ಹನೆಂದು ಅಂತರಾತ್ಮ ಘೋಷಿಸಿದ ಕ್ಷಣದಿಂದ ಆ ಪೀಠವನ್ನು ತ್ಯಜಿಸಿ ಬರೆಯುವುದನ್ನು ನಿಲ್ಲಿಸಿಬಿಡಬೇಕು.   

Monday, May 27, 2013

ಹೊಲೆಯನಾರೂರ ಹೊರಗಿರುವವನೆ ಹೊಲೆಯ ?


ಹೊಲೆಯನಾರೂರ ಹೊರಗಿರುವವನೆ ಹೊಲೆಯ ?

ಬಸವಣ್ಣನವರ ವಚನಗಳಲ್ಲಿ ಇಂಥಾದ್ದನ್ನು ನಾವು ಕೇಳಿದ್ದೇವೆ. ’ಹೊಲೆಯ’ ಎಂಬ ಪದ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ನಾವು ಪರಾಂಬರಿಸಿದರೆ ಆ ಪದದ ಬಳಕೆಯ ಅನಿವಾರ್ಯತೆ ಇಂದಿಗೂ ಇದೆ ಎಂಬುದು ಸ್ವಷ್ಟವಾಗುತ್ತದೆ. ನಾಯಿಯ ಬಾಲ ಜನ್ಮತಃ ಸಹಜವಾಗಿ ಡೊಂಕೇ ಇರುತ್ತದೆ; ಅದನ್ನು ದಿನ, ವಾರ, ತಿಂಗಳು, ವರ್ಷಗಟ್ಟಲೆ ನೆಟ್ಟಗಿರುವ ಪೈಪಿನಲ್ಲಿ ಹಾಕಿಟ್ಟು ಆಮೇಲೆ ತೆಗೆದು ನೋಡಿದರೂ ಅದು ಬದಲಾಗುವುದಿಲ್ಲ. ಬಸವಣ್ಣನವರೇನೋ ತಮ್ಮ ಉದಾತ್ತತೆಯಿಂದ ಹೊಲೆಯರೆಂಬವರನ್ನೂ ಬದಲಿಸಲು ಹೊರಟರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಹಾಗಾದರೆ ಯಾರು ಹೊಲೆಯ ಎಂದರೆ ಹಾಲು ಕುಡಿದ ಬಗ್ಗೆ ಕನಿಷ್ಠ ಕೃತಜ್ಞತೆ ಇಟ್ಟುಕೊಳ್ಳದೇ ಹಾಲೂಡಿದ ಹಸುವನ್ನೇ ಕತ್ತರಿಸಿ ಹೊಟ್ಟೆಗೆ ಇಳಿಸುವವ ಹೊಲೆಯ. ಕಾಂಗೈ ಬರುವಾಗಲೇ ಅದರ ಕೆಟ್ಟ ಗಾಳಿ ಬೀಸತೊಡಗುತ್ತದೆ. ಸ್ವಾತಂತ್ರ್ಯ ಪೂರ್ವದಲ್ಲಿ, ರಾಜರ ಆಳ್ವಿಕೆಯಲ್ಲಿ ಸುಭಿಕ್ಷದಿಂದಿದ್ದ ದೇಶವನ್ನು ಹಡಾಲೆಬ್ಬಿಸಿದವರೇ ಇಂದಿರಾ ಕಾಂಗ್ರೆಸ್ಸಿಗರು. ಮಹಾತ್ಮಾ ಗಾಂಧಿಯವರು ಮಡಿದಾನಂತರ ಕಾಂಗ್ರೆಸ್ಸು ತನ್ನ ವರ್ಚಸ್ಸನ್ನು ಕಳೆದುಕೊಂಡೇ ಬಿಟ್ಟಿತು. ನೆಹರೂ ಕುಟುಂಬದ ಅನುವಂಶೀಯ ಮೊಕ್ತೇಸರಿಕೆಯಲ್ಲಿ ನಡೆದುಬಂದ ಆ ಪಕ್ಷ ದೇಶಕ್ಕೆ ಎಸಗದ ಹಾನಿಯಿಲ್ಲ! ಪ್ರಮುಖವಾಗಿ ಅಧಿಕಾರ ಲಾಲಸೆಯಿಂದ ದೇಶದ ಸನಾತನ ಸಂಸ್ಕೃತಿಯನ್ನು ಬಲಿಗೊಟ್ಟಿರುವುದು ಕಾಣುತ್ತದೆ.   

ಅನೇಕ ಜನ ’ಬುದ್ಧಿಜೀವಿಗಳು’ ಬಂದು ಟಿವಿ ಚಾನೆಲ್ ಗಳಲ್ಲಿ ಅನಾವಶ್ಯಕವಾಗಿ ಗಂಟೆಗಟ್ಟಲೆ ಕಾಲಹರಣಮಾಡುತ್ತಾರೆ. ಎಲ್ಲರೂ ಡಾಕ್ಟರುಗಳೇ!! ಡಾಕ್ಟರೇಟ್ ಪಡೆದುಕೊಳ್ಳುವ ಬಗೆಯನ್ನು ಹಿಂದೊಂದು ಲೇಖನದಲ್ಲಿ ವಿವರಿಸಿದ್ದೆ, ಮತ್ತೆ ಅದನ್ನು ಈಗ ಪ್ರಸ್ತಾಪಿಸುವುದಿಲ್ಲ. ಅಂಥಾ ಡಾಕ್ಟರೇಟ್ ಪಡೆದವರಿಗೂ ಸನಾತನ ಸಂಸ್ಕೃತಿಗೂ ಯಾವುದೇ ಸಂಬಂಧವಿರುವುದಿಲ್ಲ; ಅವರೆಲ್ಲಾ ಸುಸಂಸ್ಕೃರೂ ಆಗಿರಬೇಕೆಂದಿಲ್ಲ. ಕಾಲದ ವೈಪರೀತ್ಯದಿಂದ ಮಾಂಸಾಹಾರವನ್ನು ತಿನ್ನದ ವರ್ಗವನ್ನು ಹೀಗಳೆಯುವ ಮಂದಿ ಹೇರಳವಾಗಿದ್ದಾರೆ. ಮಾಂಸಹಾರ ಯಾಕೆ ವರ್ಜ್ಯ ಎಂಬ ಕಾರಣಕ್ಕೆ ಮಹತ್ವ ಕೊಡದೇ ಕೇವಲ ವಾದಕ್ಕಾಗಿ ವಾದವನ್ನು ಮಂಡಿಸುತ್ತಾ, ತಮ್ಮದೇ ಸತ್ಯವೆಂದು ಜಯಭೇರಿ ಬಾರಿಸುತ್ತಾರೆ; ಸಂಖ್ಯಾಬಲದಲ್ಲಿ ಸಣ್ಣವರಾದ ಶಾಕಾಹಾರಿಗಳು ಸುಮ್ಮನಾಗುತ್ತಾರೆ. ಅಧುನಿಕ ಯುಗದಲ್ಲಿ ಮಾಹಿತಿತಂತ್ರಜ್ಞಾನದ ಬೆಳವಣಿಗೆಯಿಂದ ಮಾಹಿತೆಗೇನೂ ಕೊರತೆಯಿಲ್ಲ. ಆದರೆ ಪೂರ್ವಾಗ್ರಹ ಪೀಡಿತರಾಗದೇ ಮಾಹಿತಿಯನ್ನು ಸ್ವೀಕರಿಸುವ ಸ್ವಭಾವಜನಕೊರತೆಯುಂಟು. ಅಧುನಿಕ ವಿದ್ಯೆಯನ್ನು ಓದಿಕೊಂಡ ಮಾತ್ರಕ್ಕೆ ವ್ಯಕ್ತಿ ಸುಸಂಸ್ಕೃತನಾಗುವುದಿಲ್ಲ, ತಾನೇನು ಮಾಡಬೇಕು ಎಂಬುದನ್ನು ಅರಿತುಕೊಂಡು ತನ್ನಲ್ಲಿರುವ ಲೋಪಗಳನ್ನು ಬದಲಾಯಿಸಿಕೊಂಡರೆ ಮಾತ್ರ ವ್ಯಕ್ತಿ ಸುಸಂಸ್ಕೃತನೆನಿಸುತ್ತಾನೆ.

ಹುಟ್ಟಿದ ಎಲ್ಲಾ ಪ್ರಾಣಿಗಳೂ ಬದುಕುತ್ತವೆ, ಬದುಕಿಗಾಗಿ ಹೋರಾಡುತ್ತವೆ, ತಿನ್ನುತ್ತವೆ-ವಿಶ್ರಾಂತಿ ಪಡೆಯುತ್ತವೆ-ಸಂತತಿ ವೃದ್ಧಿಸುತ್ತವೆ ಹೀಗೇ ಬದುಕಿ ಒಂದು ದಿನ ಸಾಯುತ್ತವೆ. ಇದರ ಪುನರಾವರ್ತನೆ ಸೃಷ್ಟಿಯ ನಿಯಮ. ಆದರೆ ಜೀವಿಗಳಲ್ಲಿ ಅತಿ ಹೆಚ್ಚು ವಿಕಸಿತ ಬುದ್ಧಿಮಟ್ಟದ ಮೆದುಳನ್ನು ಹೊಂದಿದ ಜೀವಿಯೆಂದರೆ ಮನುಷ್ಯ. ಹುಟ್ಟಿನಿಂದ ಮಾನವನೆನ್ನಿಸಿಕೊಳ್ಳುವುದಕ್ಕೂ ಸಂಸ್ಕಾರದಿಂದ ಮಾನವನೆನಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. ||ಮನುಷ್ಯ ರೂಪೇಣ ಮೃಗಾಶ್ಚರಂತಿ|| ಎಂಬ ಹಾಗೇ ಕೆಲವರು ಮನುಷ್ಯ ರೂಪದಲ್ಲೇ ಇದ್ದರೂ ಮೃಗಗಳಂತೇ ವರ್ತಿಸುತ್ತಾರೆ. ಹುಟ್ಟಿನಿಂದ ಎಲ್ಲರೂ ಸಂಸ್ಕಾರವಂತರಾಗಿರುವುದಿಲ್ಲ. ಸಂಸ್ಕಾರ ಪಡೆಯುವಲ್ಲಿ ವ್ಯಕ್ತಿಯೊಬ್ಬ ಹುಟ್ಟಿ ಬೆಳೆದ ಪರಿಸರವೂ ವ್ಯಕ್ತಿಯ ಮೇಲೆ ಹಲವು ಪರಿಣಾಮ ಬೀರುತ್ತದೆ.

ಬಾಲ್ಯದಲ್ಲಿ ಮಗುವಿಗೆ ತಂದೆ-ತಾಯಿ ಮತ್ತು ಪರಿಸರ ಕೊಡುವ ಸಂಸ್ಕಾರ ಬಹಳ ಮುಖ್ಯ. ಮಗುವಿನ ಮನಸ್ಸು  ಹಸಿಮಣ್ಣಿನ ಗೋಡೆಯಿದ್ದಂತೇ. ಹಸಿಮಣ್ಣಿನ ಗೋಡೆಗೆ ದೂರದಿಂದ ಚಿಕ್ಕ ಕಲ್ಲುಗಳನ್ನು ಎಸೆದರೆ ಹೇಗೆ ಅಂಟಿಕೊಳ್ಳುವುದೋ ಹಾಗೇ ಚಿಕ್ಕ ಮಗುವಿಗೆ ಗ್ರಾಹಕ ಶಕ್ತಿ ಜಾಸ್ತಿಯಿರುತ್ತದೆ. ತಾನು ಗ್ರಹಿಸಿದ್ದನ್ನು ನೆನಪಿನಲ್ಲಿಟ್ಟು ಅನುಕರಿಸುವ ಮನಸ್ಸೂ ಕೂಡ ಇರುತ್ತದೆ. ಕೂಡುಕುಟುಂಬದ ಪದ್ಧತಿಯನ್ನು ಕಳೆದುಕೊಂಡಿದ್ದೇವೆ. ಇಡೀ ಸಮಾಜ ಆಧುನಿಕೀಕರಣಕ್ಕೆ ಮೊರೆಹೋಗಿ ಎಲ್ಲಾ ಅಪ್ಪ-ಅಮ್ಮ-ಮಗು ಇಷ್ಟೇ. ಎಲ್ಲೋ ಅಪ್ಪಿ-ತಪ್ಪಿ ಇಬ್ಬರು ಮಕ್ಕಳಿದ್ದರೆ ಆಶ್ಚರ್ಯ. ಮಕ್ಕಳು ಜಾಸ್ತಿ ಬೇಕು ಎಂದು ಹೇಳುತ್ತಿಲ್ಲ, ಆದರೆ ಹಿಂದಿನ ದಿನಗಳಲ್ಲಿ ಹುಟ್ಟಿದ ಮಗುವಿಗೆ ಸುತ್ತಮುತ್ತ ಹತ್ತಾರು ಜನ ಎತ್ತಿ ಆಡಿಸುವವರಿರುತ್ತಿದ್ದರು. ಮನೆಯಲ್ಲಿ ಹಿರಿಯರು, ಅನುಭವಿಕರು ಇರುತ್ತಿದ್ದು ಮಕ್ಕಳಿಗೆ ರಾಮಾಯಣ-ಮಹಾಭಾರತಗಳಿಂದ ಹಾಗೂ ಇತರ ಅನೇಕ ನೀತಿಕಥೆಗಳಾದ ಪಂಚತಂತ್ರ ಮೊದಲಾದವುಗಳಿಂದಲೂ ಇದಲ್ಲದೇ ಜನಪದರು ಹೊಸೆದ ಗ್ರಾಮೀಣ ಕಥೆಗಳಿಂದಲೂ ಮಕ್ಕಳನ್ನು ರಂಜಿಸುತ್ತಾ, ಅವರಿಗೆ ಆ ಮೂಲಕ ತಿಳುವಳಿಕೆಯ ಮಾರ್ಗವನ್ನು ತೋರಿಸುತ್ತಿದ್ದರು, ಒಳ್ಳೆಯತನವನ್ನು ಬೋಧಿಸುತ್ತಿದ್ದರು. ಇಂದು ಇವೆಲ್ಲಾ ನೆನೆಸಲೂ ಸಾಧ್ಯವಿಲ್ಲದಷ್ಟು ನಾವೆಲ್ಲಾ ಬಿಡುವಿಲ್ಲದ ಕೆಲಸಗಳಲ್ಲಿ ನಿರತರು! ಹೀಗಾಗಿ ಮಕ್ಕಳು ಎಂದಿದ್ದರೂ ಮಕ್ಕಳೇ ಆಗಿರುವುದರಿಂದ ಅವರಿಗೆ ಸರಿಯಾಗಿ ತಿಳಿಹೇಳುವವರಾರು ಎಂಬುದು ಪ್ರಶ್ನೆಯಾಗಿದೆ.

ಸುಮಾರು ೪೦ ವರ್ಷಗಳ ಹಿಂದೆಯೇ ’ಕಾವ್ಯಾನಂದ’ ಎಂಬ ಕಾವ್ಯನಾಮದಿಂದ ಜನಾನುರಾಗಿಯಾಗಿದ್ದ ಸಿದ್ದಯ್ಯ ಪುರಾಣಿಕರು ತಮ್ಮ ಕಾವ್ಯದಲ್ಲಿ ಹೇಳುತ್ತಾರೆ:

ಏನಾದರೂ ಆಗು ನೀ ಬಯಸಿದಂತಾಗು
ಏನಾದರೂ ಆಗು ನಿನ್ನಿಚ್ಛೆಯಂತಾಗು
ಏನಾದರೂ ಸರಿಯೇ ಮೊದಲು ಮಾನವನಾಗು 

ಇವತ್ತಿನ ದಿನಮಾನದಲ್ಲಿ ನಾವು ನಮ್ಮ ಸುತ್ತಲ ಪರಿಸರದಲ್ಲಿ ನೋಡಿದಾಗ, ನಡೆಯುತ್ತಿರುವ ಕೊಲೆ-ಸುಲಿಗೆ-ದರೋಡೆಗಳು, ಅನ್ಯಾಯ-ಅತ್ಯಾಚಾರ-ಅನಾಚಾರ-ಮೋಸ ಇತ್ಯಾದಿ ಹೇಸಿಗೆಯ ಕೃತ್ಯಗಳು ಇವೆಲ್ಲಾ ಕಣ್ಣಿಗೆ ಬಿದ್ದಾಗ, ಸುದ್ದಿ ತಿಳಿದು ಮನಸ್ಸು ನೋವನ್ನು ಅನುಭವಿಸುತ್ತದೆ. ಎಷ್ಟೋ ಪ್ರಾಣಿಗಳು ಅವುಗಳಿಗೆ ಬುದ್ಧಿ ಕಮ್ಮಿ ಇದ್ದರೂ ಸಂಕೇತಗಳಿಂದಲೇ ತಮ್ಮ ತಮ್ಮ ತೊಂದರೆಗಳನ್ನು ಪರಸ್ಪರರಲ್ಲಿ ಹಂಚಿಕೊಂಡು ಅರ್ಥಮಾಡಿಕೊಂಡು ಬದುಕುತ್ತವೆ. ಇರುವೆಗೆ ಸಾಲಾಗಿ ಹೋಗಲು ಯಾರು ಹೇಳಿಕೊಟ್ಟರು, ಮೀನಿಗೆ ಈಜಲು ಯಾರು ಕಲಿಸಿದರು, ಹಕ್ಕಿಗೆ ಹಾರಲು ಯಾರು ತರಬೇತಿಕೊಟ್ಟರು....ಇವೆಲ್ಲಾ ನಿಸರ್ಗದ ನಿಯಮಗಳು. ದಯಾಮಯಿಯಾದ ಜಗನ್ನಿಯಾಮಕ ಮನುಷ್ಯನಿಗೆ ವಿಕಸಿತ ಮನಸ್ಸನ್ನು ಕೊಟ್ಟು ಅದರ ಕೀಲಿಯನ್ನೂ ನಮಗೇ ಕೊಟ್ಟ. ಆದರೆ ಆ ಕೀಲಿಯನ್ನು ನಾವೀಗ ದುರುಪಯೋಗಮಾಡಿಕೊಳ್ಳುತ್ತಿದ್ದೇವೆ. ಕವಿ ಮುಂದುವರಿದು ಹೇಳುತ್ತಾರೆ :

ಓದಿ ಬ್ರಾಹ್ಮಣನಾಗು ಕಾದಿ ಕ್ಷತ್ರಿಯನಾಗು
ಶೂದ್ರ ವೈಶ್ಯನೇ ಆಗು ದುಡಿದು ಗಳಿಸಿ

ನಾವು ಇಚ್ಛಿಸಿದಂತೇ ನಮ್ಮ ವೃತ್ತಿ. ನಮ್ಮ ವೃತ್ತಿಯಿಂದಲೇ ನಮ್ಮ ಜಾತಿ. || ಚಾತುರ್ವಣ್ಯಂ    ಮಯಾಸೃಷ್ಟಂ  ಗುಣಕರ್ಮ ವಿಭಾಗಶಃ || ಎಂದು ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ. ನಾವು ಯಾವ ಯಾವ ಕೆಲಸವನ್ನು ಮಾಡುತ್ತೇವೋ ಅದರಿಂದಲೇ ನಾವು ಆಯಾ ಜಾತಿಗೆ ಸೇರಿದವರೇ ವಿನಃ ಜಾತಿ ಜನ್ಮಜಾತವಲ್ಲ ಎಂದನಲ್ಲವೇ ?  ಚೆನ್ನಾಗಿ ಓದು, ಒಳ್ಳೆಯ ಪುಸ್ತಕಗಳನ್ನು ಓದಿ ಜ್ಞಾನ ಸಂಪಾದಿಸ; ಉತ್ತಮ ಸಂಸ್ಕಾರ ಪಡೆ --ಈ ಮೂಲಕ ನೀನು ಬ್ರಾಹ್ಮಣನಾಗುತ್ತೀಯ. ದೇಶದ ರಕ್ಷಣೆಗಾಗಿ ಯೋಧನಾಗಿ ಮೆರೆ ನೀನಾಗ ಕ್ಷತ್ರಿಯನಾಗುತ್ತೀಯ. ವ್ಯಾಪಾರಮಾಡಿದಾಗ ವೈಶ್ಯನೂ ಹೊಲದಲ್ಲಿ ದುಡಿದಾಗ ಶೂದ್ರನೂ ಆಗುತ್ತೀಯ. ಅಂದರೆ ಈ ನಾಲ್ಕೂ ಅಂಶಗಳು ಒಬ್ಬ ವ್ಯಕ್ತಿಯಲ್ಲೇ ಇರಲು ಸಾಧ್ಯವಷ್ಟೇ ? ಸಮಯಕ್ಕೆ ತಕ್ಕಂತೆ ಒಬ್ಬನೇ ವ್ಯಕ್ತಿ ಈ ನಾಲ್ಕೂ ವರ್ಣಗಳಲ್ಲಿ ಕಾಣಿಸಿಕೊಳ್ಳುತ್ತಾನೆ.  ಕವಿ ಮತ್ತೆ ಸಾರುತ್ತಾರೆ:

ಹಿಂದೂ ಮುಸ್ಲಿಮನಾಗು ಬೌದ್ಧ ಕ್ರೈಸ್ತನೇ ಆಗು
ಚಾರುವಾಕನೆ ಆಗು ಭೋಗ ಬಯಸಿ

ನೀನೊಬ್ಬ ಹಿಂದೂವೋ ಮುಸ್ಲಿಮನೋ ಬೌಧ್ಧನೋ ಕ್ರೈಸ್ತನೋ ಆಗು ಅಥವಾ ಭೋಗ ಬಯಸುವ ಚಾರ್ವಾಕನೇ ಆಗು ಆದರೆ ಅದೆಲ್ಲಕ್ಕೂ ಮೊದಲು ನೀನು ಮಾನವನಾಗು --ಎಷ್ಟು ಚೆನ್ನಾಗಿದೆ ನೋಡಿ !

ರಾಜಕಾರಣಿಯಾಗು ರಾಷ್ಟ್ರಭಕ್ತನೇ ಆಗು
ಕಲೆಗಾರ ವಿಜ್ಞಾನಿ ವ್ಯಾಪಾರಿಯಾಗು

ರಾಜಕಾರಣಿಯಾದರೂ ಆಗಬಹುದು, ದೇಶಭಕ್ತನಾಗಿ ಹಲವಾರು ರೀತಿಯಲ್ಲಿ ಸೇವೆಸಲ್ಲಿಸಬಹುದು,  ಶಿಲ್ಪಿ-ಕಲೆಗಾರ-ವಿಜ್ಞಾನಿ-ವೈದ್ಯ ಇತ್ಯಾದಿ ಯಾವುದೇ ಉದ್ಯೋಗಲ್ಲೂ ತೊಡಗಬಹುದು...ಆದರೆ ಇದೆಲ್ಲಕ್ಕೂ ಮೊದಲು ಮಾನವರಾಗುವುದನ್ನು ಕಲಿಯಬೇಕು ಎಂಬುದು ಕಾವ್ಯದ ಸಾರ, ಸಂದೇಶ.

ಒಬ್ಬ ದರ್ಜಿ, ಒಬ್ಬ ಮೋಚಿ ಮತ್ತು ಒಬ್ಬ ನಾಪಿಕ ಈ ಮೂರು ಜನರಿದ್ದರೆ ಯಾವ ವ್ಯಕ್ತಿಯೂ ಹೊರಗಿನಿಂದ ಸಿಂಗಾರಗೊಂಡು ಚೆನ್ನಾಗಿ ಕಾಣಬಹುದು. ಆದರೆ ಅದೇ ಆತನ ನಡವಳಿಕೆಗೆ ಇವರಾರೂ ಏನೂ ಮಾಡಲಾರರು. ಹರುಕು ಬಟ್ಟೆಯನ್ನೇ ತೊಟ್ಟಿದ್ದರೂ ಉತ್ತಮ ಗುಣನಡತೆ ಹೊಂದಿದ್ದರೆ ಆತ ಮಾನ್ಯನೇ ಸರಿ. ಏನೋ ಪರಿಸ್ಥಿತಿಯಲ್ಲಿ ಕಾರಣಾಂತರಗಳಿಂದ ಧನಿಕನಾಗದವನು ಹೃದಯಶ್ರೀಮಂತಿಕೆಯಲ್ಲಿ ಕೊರತೆ ಹೊಂದಿದವನಾಗಿರಲೇ ಬೇಕೆಂದೇನಿಲ್ಲ.

ಇವತ್ತಿನ ಮಾಧ್ಯಮ ವಾಹಿನಿಗಳಲ್ಲಿ ಪ್ರಸಾರವಾಗುವ ಕೆಲವು ಬೇಡದ ಪ್ರಸಂಗಗಳನ್ನು, ಮನಕಲಕುವ ದೃಶ್ಯಗಳನ್ನೂ ಮಕ್ಕಳು ನೋಡುತ್ತಿರುತ್ತಾರೆ. ನಾವು ಒಳ್ಳೆಯ ಸಂಸ್ಕಾರವನ್ನು ಪಡೆದಮೇಲೆ ಮಕ್ಕಳನ್ನೂ ಒಳ್ಳೆಯ ಮಾರ್ಗದಲ್ಲಿ ನಡೆಯುವಂತೇ ತಿದ್ದಬೇಕಲ್ಲವೇ?  ಮೊನ್ನೆ ದೀಪಾವಳಿಯ ಸಡಗರದಲ್ಲಿ ದೇಶವೇ ನಲಿಯುತ್ತಿದ್ದರೆ ಒಂದು ಹಳ್ಳಿಯ ಒಬ್ಬರ ಮನೆಯಲ್ಲಿ ಹುಡುಗನೋರ್ವ ಅಡುಗೆ ಮನೆಗೆ ಬಂದ. ಅಮ್ಮ ಮಾಡುತ್ತಿದ್ದ ಹೋಳಿಗೆ ಪಡೆದು ತಿಂದ. ಅಮ್ಮ ಕೆಲಸದಲ್ಲಿ ನಿರತರಾಗಿರುವಾಗ ಈ ಹುಡುಗ ಮಹಡಿಯೇರಿ ಹೋಗಿ ಅಲ್ಲಿ ಮೊದಲೇ ತಾನು ತಂದಿಟ್ಟಿದ್ದ ನೇಣನ್ನು ಹಾಕಿಕೊಂಡು ನೇತಾಡಿದ !  ಏನಾಗುತ್ತದೆ ಎಂಬುದನ್ನು ಅನುಭವಿಸಿ ನೋಡಲು ಆತ ಹಾಗೆ ಮಾಡಿದ್ದು. ಹುಡುಕುತ್ತಾ ಅಮ್ಮ ಮತ್ತು ಮಿಕ್ಕುಳಿದವರು ಬರುವಷ್ಟರಲ್ಲಿ ಆತ ಶಿವನಪಾದ ಸೇರಿದ್ದ. ಇದು ಇಂದಿನ ಧಾರಾವಾಹಿ ಹಾಗೂ ಚಲನಚಿತ್ರಗಳ ಒಂದು ಮುಖದ ಪರಿಣಾಮ.

ದಿನಾಲೂ ಅನೇಕ ಮನೆಗಳಲ್ಲಿ ಮಲಗುವ ಮುನ್ನ ರಾತ್ರಿ ಮಾಧ್ಯಮವಾಹಿನಿಗಳಲ್ಲಿ ಕೊಲೆಸುಲಿಗೆಯ ದೃಶ್ಯಗಳ ವಿವರಣೆಗಳನ್ನು ನೋಡುತ್ತಾರೆ. ಇದರಿಂದ ಮನಸ್ಸಿಗೆ ಋಣಾತ್ಮಕ ಭಾವಗಳು ಆವರಿಸಿಕೊಂಡು ಒಳಗೊಳಗೇ ಮನಸ್ಸು ಚಡಪಡಿಸುತ್ತದೆ. ಪೂರ್ವಜರು ಹಿಂದಕ್ಕೆ ರಾಮಾಯಣದಂತಹ ಕಥೆಯ ರಾಮನಿರ್ಯಾಣ, ಮಹಾಭಾರತದ ಕರ್ಣಾವಸಾನ ಇಂಥದ್ದನ್ನೆಲ್ಲಾ ಕೂಡ ರಾತ್ರಿ ಮಲಗುವ ಮುನ್ನ ಓದುವುದೋ, ಕೇಳುವುದೋ, ಗಮಕವಾಚಿಸುವುದೋ ಮಾಡುತ್ತಿರಲಿಲ್ಲ. ರಾತ್ರಿ ಮಲಗುವ ಮುನ್ನ ಮನಸ್ಸಿಗೆ ಧನಾತ್ಮಕ ಸಂದೇಶಗಳನ್ನು ಕೊಡಬೇಕು. ಬೇಳಿಗ್ಗೆ ಎದ್ದಾಗಲೂ ಅಷ್ಟೇ. ಇದೆಲ್ಲವನ್ನೂ ಕಡ್ಡಾಯವಾಗಿ ಅನುಸರಿಸಲಿ ಎಂಬ ದೃಷ್ಟಿಯಿಂದ ಕೆಲವು ಸಂಪ್ರದಾಯಗಳನ್ನೂ ಕಟ್ಟುಪಾಡುಗಳನ್ನೂ ಆ ಕಾಲದ ಜನ ಜಾರಿಯಲ್ಲಿಟ್ಟುಕೊಂಡಿದ್ದರು. ಆದರೆ ಇಂದು ಅಂತಹ ಯಾವುದೇ ಸಂಪ್ರದಾಯವನ್ನು ನಾವು ಪಾಲಿಸುತ್ತಿಲ್ಲ. ಎಲ್ಲದಕ್ಕೂ ನಮ್ಮ ಕುತ್ಸಿತ ಬುದ್ಧಿ ಕಡ್ಡಿಹಾಕಿ ವೈಜ್ಞಾನಿಕವಾಗಿ ನೋಡತೊಡಗುತ್ತದೆ. ವಿಜ್ಞಾನ ಶಾಸ್ತ್ರ ಕೂಡ ಮಾನವನೇ ಮಾಡಿರುವುದರಿಂದ ಅದಕ್ಕೆ ಗೋಚರವಾಗದ ಎಷ್ಟೋ ಕ್ರಿಯೆ-ಪ್ರಕ್ರಿಯೆಗಳಿವೆ ! ಮನಸನ್ನು ಶುದ್ಧೀಕರಿಸಲು ವಿಜ್ಞಾನದಲ್ಲಿ ಯಾವುದೇ ಯಂತ್ರಗಳಿಲ್ಲ. ಬದಲಾಗಿ ಧ್ಯಾನವೇ ನಾವು ಮನಸ್ಸಿಗೆ ಮಾಡಿಸಬಹುದಾದ ಸ್ನಾನವಾಗಿರುತ್ತದೆ. 

ಇದನ್ನೆಲ್ಲಾ ಅರಿತೇ ಪ್ರಾಜ್ಞರು ಹೇಳಿದ್ದು : ’ ಸಜ್ಜನರ ಸಂಗವದು ಹೆಜ್ಜೇನು ಸವಿದಂತೇ ’ ಎಂದು. ಉತ್ತಮ ಸಂಸ್ಕಾರವನ್ನು ಪಡೆಯಬೇಕಾದರೆ ಉತ್ತಮರನ್ನು ಹುಡುಕಿಕೊಳ್ಳಬೇಕು. ಅಂಥವರ ಸಮಯವನ್ನು ನಿರೀಕ್ಷಿಸಿ ಅವರಿಂದ ಹಲವನ್ನು ಕಲಿಯಬೇಕು, ಅಂಥವರು ತಿಳಿಸುವ ಉತ್ತಮ ಪುಸ್ತಕಗಳನ್ನು ಓದಬೇಕು, ಸತ್ಯ, ಅಹಿಂಸೆ, ಪ್ರಾಮಾಣಿಕತೆಗಳೇ ಮೊದಲಾದ ಅಂಶಗಳನ್ನು ಸಕ್ರಿಯವಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಹೋಗಬೇಕು. ನಾವು, ನಮ್ಮ ನಾಲಿಗೆ, ನಮ್ಮ ನಡತೆ ಒಳ್ಳೆಯದಾದಾಗ ನಾಡೆಲ್ಲಾ ಒಳ್ಳೆಯದಾಗುತ್ತಾ ಹೋಗುತ್ತದೆ. ಇದಕ್ಕೆಂತಲೇ ಮಹಾತ್ಮರಾದ ಸ್ವಾಮೀ ವಿವೇಕಾನಂದರು ಹೇಳಿದರು : ’ ನೀನು ನಿನ್ನನ್ನು ತಿದ್ದಿಕೋ ಜಗತ್ತಿನಲ್ಲಿ ಒಬ್ಬ ಮೂರ್ಖನ ಸಂಖ್ಯೆ ಕಡಿಮೆಯಾದೀತು’  ನಾವು ನಮ್ಮ ನ್ಯೂನತೆಗಳನ್ನು, ದೌರ್ಬಲ್ಯಗಳನ್ನು ಅರಿಯೋಣ, ಸನ್ಮಾರ್ಗದಲ್ಲಿ ನಡೆಯೋಣ, ಮಾನವರಾಗೋಣ.

ಗೋವುಗಳನ್ನು ಹಿಂಸಿಸಬೇಡಿ, ಮಾಂಸಕ್ಕಾಗಿ ಕತ್ತರಿಸಬೇಡಿ ಎಂದು ಎಷ್ಟೇ ಹೇಳಿದರೂ ಅದು ನಿತ್ಯವೂ ನಡೆದೇ ಇದೆ. ಕಾಂಗ್ರೆಸ್ಸಿನ ಪಟ್ಟಭದ್ರ ಹಿತಾಸಕ್ತಿಯಿಂದ ಭಾರತೀಯ ಮೂಲನಿವಾಸಿಗಳು ತಮ್ಮತನವನ್ನೂ ತಮ್ಮ ಸಂಸ್ಕೃತಿಯನ್ನೂ ಕಳೆದುಕೊಳ್ಳುತ್ತಿದ್ದಾರೆ. ಅಲ್ಪಸಂಖ್ಯಾತರ ಓಲೈಕೆ ಅದರಲ್ಲೂ ಮಹಮ್ಮದೀಯರ ಓಲೈಕೆಗಾಗಿ ಕಾಂಗೈ ತಾನು ಹೋದೆಡೆಯಲ್ಲೆಲ್ಲಾ ಅವರ ಹಿತಾಸಕ್ತಿಯನ್ನು ಎತ್ತಿಹಿಡಿಯುತ್ತದೆ! ಕಳೆದ ೯ ವರ್ಷಗಳಿಂದ ಕೇಂದ್ರಾಡಳಿತವನ್ನು ನಡೆಸುತ್ತಿರುವ ಯುಪಿಏ ಗುಂಪಿನ ನಾಯಕತ್ವ ವಹಿಸಿರುವ ಕಾಂಗೈ, ಮಾಡಬಾರದ ಅನಾಚಾರಗಳನ್ನು ಮಾಡಿದ್ದಕ್ಕೆ ಹೊಸ ಪುರಾವೆಗಳು ಬೇಕೆ? ಭ್ರಷ್ಟಾಚಾರದಲ್ಲಿ ನಿತ್ಯವೂ ಹೊಸದೊಂದು ದಾಖಲೆ ನಿರ್ಮಿಸುತ್ತಾ ನಿನ್ನೆ ನಿರ್ಮಿಸಿದ್ದ ತನ್ನ ದಾಖಲೆಯನ್ನು ತಾನೇ ಮುರಿಯುತ್ತಾ ಹೊರಟ ಕಾಂಗೈ, ಹಿಂದೂಗಳನ್ನು ಅವ್ಯಾಹತವಾಗಿ ಮತಾಂತರಿಸಿದ್ದ ಮಹಾಪಾತಕಿ ಟಿಪ್ಪುವಿನ ಹೆಸರಿನಲ್ಲಿ ವಿಶ್ವವಿದ್ಯಾಲಯವನ್ನು ಸ್ಥಾಪಿಹೊರಟಿದೆ! ಬನವಾಸಿಯ ಮಯೂರವರ್ಮ ಕನ್ನಡದ ಪ್ರಥಮ ದೊರೆ, ಆತನ ಹೆಸರಿಡಬಹುದಲ್ಲವೇ? ರನ್ನಮ್, ಪೊನ್ನ, ಜನ್ನ, ಕುಮಾರವ್ಯಾಸಾದಿ ಕವಿಗಳ ಹೆಸರಲ್ಲಿ ಒಂದನ್ನು ಇಡಬಹುದಲ್ಲವೇ? ಅಷ್ಟಕ್ಕೂ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಿವಿಯ ಅಗತ್ಯ ಇದೆಯೇ? ಹಾಗೆ ಅವಕಾಶ ಕೊಟ್ಟರೆ ಅದೊಂದು ಭಯೋತ್ಪಾದಕರ ಆಶ್ರಯತಾಣವಾಗಲೂಬಹುದಲ್ಲವೇ? ಅಥವಾ ವಿಶೇಷ ಮದರಸಾ ಆಗಿ ಕೆಲಸಮಾಡಬಹುದಲ್ಲವೇ? 

ಗೋವು ಭಾರತೀಯರಿಗೆ ಪೂಜನೀಯ ಎಂಬುದು ಗೊತ್ತಿದ್ದೂ, ಭಾರತದಲ್ಲಿ ಬದುಕಿರುವ ಮುಸ್ಲಿಂ ಸಂಘಟನೆಗಳು ಗೋವುಗಳನ್ನು ಕಡಿಯುವುದನ್ನು ನಿಲ್ಲಿಸಲು ಮುಂದಾಗರಲ್ಲಾ! ಅವರಿಗೆ ತಿಳಿಹೇಳಿ ಪ್ರಯೋಜನವಿದೆಯೇ? ಸಾಧ್ಯವಾದಲ್ಲೆಲ್ಲಾ ಪಾಕಿಸ್ತಾನದ ಬಾವುಟವನ್ನು ಕದ್ದುಮುಚ್ಚಿ ಹಾರಿಸುತ್ತಿರುವ, ಕ್ರಿಕೆಟ್ಟಿನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆದ್ದಾಗ ಪಟಾಕಿ ಸಿಡಿಸಿ ಆನಂದಿಸುವ ಮನೋವೈಕಲ್ಯತೆ ಹೊಂದಿರುವ ಮುಸ್ಲಿಮರನ್ನು ಭಾರತೀಯರೆಂದು ನಾವು ಒಪ್ಪಿಕೊಳ್ಳಬೇಕೆ? ಭಾಯಿ-ಭಾಯಿ ಎಂದು ಅಪ್ಪಿಕೊಳ್ಳಬೇಕೆ? ಭಾರತೀಯರ ಹಿತಾಸಕ್ತಿಗಳಿಗೆ, ಭಾವನೆಗಳಿಗೆ ಕಿಂಚಿತ್ತೂ ಬೆಲೆನೀಡದ ಜನರನ್ನು, ಭಯೋತ್ಪಾದಕರಿಗೆ ಆಶ್ರಯನೀಡಿ ರಕ್ಷಿಸಿ ಅದಕ್ಕೆ ಕುಮ್ಮಕ್ಕು ನೀಡುವ ಜನರನ್ನು ಬಗಲಲ್ಲಿ ಇರಿಸಿಕೊಂಡು ಪ್ರೀತಿಯಿಂದ ಕಾಣಬೇಕೆ? ಹೆಜ್ಜೆಹೆಜ್ಜೆಯಲ್ಲೂ ತಮ್ಮ ಮತವನ್ನೇ ದೇಶವ್ಯಾಪಿ ಕಡ್ಡಾಯಗೊಳಿಸಲು ಸಿದ್ಧರಾಗಿ, ಸನ್ನದ್ಧರಾಗಿ ನಿಂತಿರುವ ಮಂದಿಯನ್ನು ಪರಧರ್ಮ ಸಹಿಷ್ಣುಗಳೆಂದು ನಂಬಿಕೊಂಡು ಅವರ ಬಲವಂತದ ಮತಾಂತರಕ್ಕೆ ತಲೆಬಾಗಬೇಕೆ? ಹಿಂದೆಂದೋ ಅಲ್ಪಸಂಖ್ಯಾರಾಗಿದ್ದರು ಎಂದ ಮಾತ್ರಕ್ಕೆ ದೇಶದ  ಜನಸಂಖ್ಯೆಯ ಕಾಲುಭಾಗಕ್ಕಿಂತ ಅಧಿಕಸಂಖ್ಯೆಯಲ್ಲಿ ಬೆಳೆದ ಅವರ "ನಮಗೆ ಅನ್ಯಾಯವಾಗುತ್ತಿದೆ, ಯಾರೂ ಬೆಂಬಲಿಸುವುದಿಲ್ಲ" ಎಂಬ ಮೊಸಳೆಗಣ್ಣೀರಿಗೆ ನಾವು ಕರಗಿಹೋಗಬೇಕೆ?

ಕಥೆಯೊಂದು ಹೀಗಿದೆ: ಇಬ್ಬರು ಮಿತ್ರರು ಒಟ್ಟಿಗೇ ಸತ್ತರಂತೆ. ಪೂರ್ವಜನ್ಮದ ಸುಕೃತದ ಫಲವಾಗಿ ಒಬ್ಬಾತ ಸ್ವರ್ಗವಾಸಿಯಾದ, ತನ್ನ ಕುಕೃತದ ಫಲವಾಗಿ ಇನ್ನೊಬ್ಬಾತ ನರಕವಾಸಿಯಾದ. ಇನ್ನೂ ಘನಘೋರ ಶಿಕ್ಷೆಯನ್ನು ಅನುಭವಿಸುವುದಕ್ಕಾಗಿ ನರಕವಾಸಿಯಾಗಿದ್ದಾತ ಬಚ್ಚಲಕೊಚ್ಚೆಹೊಂಡದ ಹುಳವಾಗಿ ಜನಿಸಿದ. ಸ್ವರ್ಗವಾಸಿಗೆ ತನ್ನ ಪರಮ ಸ್ನೇಹಿತನ ನೆನಪಾಯ್ತಂತೆ. ಆತ ದೈವಕೃಪೆಯಿಂದ ಒಮ್ಮೆ ಭೂಮಿಗೆ ಬಂದ, ಹುಡುಕಾಡುತ್ತಾ ಬಚ್ಚಲಕೊಚ್ಚೆಯಲ್ಲಿ  ಹುಳವಾಗಿ ಬದುಕುತ್ತಾ ಬಿದ್ದಿರುವ ಸ್ನೇಹಿತನನ್ನು ದೂರದಿಂದ ಕೂಗಿ ಕರೆದನಂತೆ. ಒಂದನೇ ಕರೆ ಹುಳಕ್ಕೆ ಕೇಳಲಿಲ್ಲ, ಎರಡನೇ ಕರೆಯಲ್ಲಿ ಹುಳ ಮೇಲಕ್ಕೆ ಬಂದು ಒದ್ದಾಡಿತು, ಮೂರನೇ ಕರೆಯನ್ನು ಕೇಳಿಯೂ ತನಗಿದೇ ಸುಖವೆಂದು ತೀರ್ಮಾನಿಸಿದ ಆ ಹುಳ ಮತ್ತದೇ ಕೊಚ್ಚೆಗುಂಡಿಯಲ್ಲಿ ಮುಳುಗಿಹೋಯ್ತು! ಔನ್ನತ್ಯಕ್ಕೆ ಕರೆಯಲು ಬಂದ ಸ್ನೇಹಿತ ಮರುಗುತ್ತ ಮರಳಿದ; ಹುಳಸತ್ತು ಇನ್ನಷ್ಟು ಜನ್ಮಗಳನ್ನು ಉತ್ತರಿಸಿ, ಮತ್ತೆ ಮನುಷ್ಯನಾಗಿ ಬರುವುದು ಇನ್ನೆಂದೋ, ಮನುಷ್ಯನಾದಾಗಲೂ ಹೊಲೆಯನಾಗದೇ, ಪುಣ್ಯಪುರುಷನಾಗಿ ಬಾಳುವುದು ಮತ್ತೆಂದೋ, ಒಂದೂ ತನ್ನ ಊಹೆಗೂ ನಿಲುಕದ ಭವಿಷ್ಯವೆಂದು ಸ್ನೇಹಿತನಿಗಾಗಿ ಕಂಬನಿಗರೆದ.
ನಿಮ್ಮಲ್ಲಿ ಯಾರೇ ವಿಜ್ಞಾನಿಗಳು, ತಾರ್ಕಿಕರು ಇರಬಹುದು, ದನದ ಮಾಂಸವನ್ನು ತಿನ್ನುವ ಜನರ ಮೆದುಳಿನ ವ್ಯವಹಾರದ ಸ್ಥಿತಿಗತಿಗೂ ಮತ್ತು ಶುದ್ಧ ಶಾಕಾಹಾರಿಗಳಾದವರ ಮೆದುಳಿನ ವ್ಯವಹಾರದ ಸ್ಥಿತಿಗತಿಗೂ ವೈಜ್ಞಾನಿಕವಾಗಿ ತುಲನೆಮಾಡಿ ಏನನ್ನೂ ಮರೆಮಾಚದೇ ಸಂಶೋಧನೆ ನಡೆಸಿನೋಡಿ, ಅಲ್ಲಿ ವ್ಯತ್ಯಾಸ ಕಾಣುವುದಿಲ್ಲವೆಂದರೆ ನಾನಿನ್ನೆಂದೂ ನನ್ನ ಬರವಣಿಗೆಯನ್ನು ಮುಂದುವರಿಸುವುದಿಲ್ಲ!! ವ್ಯತ್ಯಾಸವನ್ನು ನೀವು ಕಂಡಿರಾದರೆ ಮತ್ತೆ ಸನಾತನೆಯ ಮೌಲ್ಯವನ್ನು ಸುಖಾಸುಮ್ಮನೆ ಪ್ರಶ್ನಿಸುವ ಹಕ್ಕು ನಿಮಗಿರುವುದಿಲ್ಲ. ಎಲ್ಲಾ ಜೀವಿಗಳಂತೇ ಮನುಷ್ಯ ಹುಟ್ಟುವುದು-ಬದುಕುವುದು-ಸಾಯುವುದು ಇಷ್ಟೇ ಅಲ್ಲ, ಆದರಾಚೆ ಇರುವ ಇನ್ನೊಂದು ಲೋಕವನ್ನು ತೆರೆದಿಟ್ಟ ಮಹಾನ್ ಮನೀಷಿಗಳು ನಮಗೆ ಆದರ್ಶರಾಗಿದ್ದಾರೆ. ಅವರ ಕಳಕಳಿಯ ಸಂದೇಶವೆಂದರೆ ಮಾಂಸಾಹಾರವನ್ನು ಭುಂಜಿಸಬೇಡಿ ಎಂಬುದು. ಸಾಧ್ಯವಿಲ್ಲವೇ?ಹೋಗಲಿಬಿಡಿ. ಅಮ್ಮನ ಹಾಲನ್ನು ಶೈಶವಾವಸ್ಥೆಯಲ್ಲಿ ಎರಡುವರ್ಷವಷ್ಟೇ ಕುಡಿಯುತ್ತೇವೆ, ಎರಡನೇ ಅಮ್ಮನಾಗಿ ಗೋವು ಕೊಡುವ ಹಾಲನ್ನು ಜೀವನಪೂರ್ತಿ ಕುಡಿಯುತ್ತಿರುತ್ತೇವೆ ! ಕೊನೇಪಕ್ಷ, ಅಮ್ಮನಂತೇ ಹಾಲನ್ನು ಉಣಿಸುವ ಗೋವುಗಳನ್ನು ಕತ್ತರಿಸದೇ ಇದ್ದರೆ ನಾವು ಮನುಷ್ಯರೆಂದುಕೊಳ್ಳಬಹುದು. ಗೋವುಗಳನ್ನು ನಾವು ಕೊಂದರೆ ತಿಂದರೆ ಮತ್ತು ನಮ್ಮೀ ಭಾರತದಲ್ಲಿ ಅದನ್ನು ತಿನ್ನುವವರನ್ನು ಉಳಿಯಗೊಟ್ಟರೆ ನಾವು ಮನುಷ್ಯರೆಂಬುದನ್ನು ನಮ್ಮ ಪೂರ್ವಜರು ಒಪ್ಪಿಕೊಳ್ಳುವುದಿಲ್ಲ, ಅವರ ಆತ್ಮಗಳು ಒಪ್ಪಿಕೊಳ್ಳುವುದಿಲ್ಲ, ಇಂದಿಗೂ ಚಿರಂಜೀವಿಗಳಾಗಿರುವ ಅನೇಕ ಋಷಿಮುನಿಗಳು ಒಪ್ಪಿಕೊಳ್ಳುವುದಿಲ್ಲ. ಅದರರ್ಥ ದನಗಳನ್ನು ತಿನ್ನುವ ಜನ ಹೊಲೆಯರಾಗಿರುತ್ತಾರೆ. ಬಚ್ಚಲಕೊಚ್ಚೆಗುಂಡಿಯ ಹುಳಗಳಾಗಿ ಅವರು ಮರುಹುಟ್ಟು ಪಡೆದು, ಮತ್ತೆ ಮುಂದೆಂದೋ ದೈವಕಾರುಣ್ಯ ಒಲಿದರೆ ಹಸುಗಳಾಗಿ, ಈಗ ಹಸುಗಳಿಗೆ ನೀಡುತ್ತಿರುವ ಹಿಂಸೆಯನ್ನು ಆಗ ತಾವು ಅನುಭವಿಸುತ್ತಾರೆ ಎಂಬುದು ನಿಶ್ಚಿತ. ಹೊಲೆಯರು ಊರ ಹೊರಗಿಲ್ಲ, ಅಧುನಿಕ ಯುಗದಲ್ಲಿ ಹೊಲೆಯರು ನಮ್ಮನಡುವೆಯೇ ಇದ್ದಾರೆ, ಅದು ವ್ಯಕ್ತಿಯ ಸಂಸ್ಕಾರ-ಸಂಸ್ಕೃತಿಗೆ ಸಂಬಂಧಿಸಿದ ವಿಷಯ. ಭಾರತದಲ್ಲಿದ್ದೂ, ಇಲ್ಲಿನ ಸ್ಕಲ ಸೌಲಭ್ಯಗಳನ್ನೂ ಅನುಭವಿಸಿಯೂ, ಯಾರು ಭಾರತೀಯ ಸನಾತನ ಸಂಸ್ಕೃತಿಯನ್ನು ಮೆಚ್ಚುವುದಿಲ್ಲವೋ ಅವರೇ ಹೊಲೆಯರು.    


ಭಾರತೀಯ ಸನಾತನ ಸಂಸ್ಕೃತಿಗೆ ಒತ್ತುಕೊಡುವ ಬಿಜೆಪಿ ಸರಕಾರ, ಗೋಹತ್ಯಾ ನಿಷೇಧ ಕಾನೂನನ್ನು ಜಾರಿಗೆ ತರುವಲ್ಲಿ ಬಹಳ ಶ್ರಮವಹಿಸಿತ್ತು. ಮತಗಳ ಪೆಟ್ಟಿಗೆಯ ಮೇಲೆ ಕಣ್ಣಿಟ್ಟ ಕಾಂಗೈ ಮತ್ತು ಇನ್ನಿತರ ಪಕ್ಷಗಳು ಅದನ್ನು ಜಾರಿಗೆ ತರದಂತೇ ಬಹಳ ಶ್ರಮಿಸಿದ್ದವು. ಗೋವು ಪೂಜನೀಯವೆಂದು ಲಿಖಿತವಾದ ಈ ನಾಡಿನಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ಬರದಂತೇ ನೋಡಿಕೊಂಡವರನ್ನು ಏನೆನ್ನಬೇಕು? ಈಗ ಮತ್ತೆ ಸರಕಾರ ಬದಲಾಗಿದೆ, ಗೋಹತ್ಯಾ ನಿಷೇಧವನ್ನು ತೆರವುಗೊಳಿಸುತ್ತೇವೆ ಎಂಬ ಹೇಳಿಕೆ ಬಂದಾಗಲೇ ಗೋವುಗಳ ಕಳ್ಳಸಾಗಾಣಿಕೆಗಳು ವಿಪರೀತ ಹೆಚ್ಚಿವೆ. ಯಾರೂ ಕಾಯ್ವವರಿಲ್ಲ, ಗೋಳು ಕೇಳ್ವವರಿಲ್ಲ. ಈ ನಾಡಿನ ಹುಲಿಗಾದರೂ ಒಂದಷ್ಟು ನೀತಿಯಿತ್ತು, ಆದರೆ ಇಂದಿನ ಹೊಲೆಯರಿಗೆ ನೀತಿ ಎಂಬ ಪದವೇ ಗೊತ್ತಿಲ್ಲ.

ತಬ್ಬಲಿಯು ನೀನಾದೆ ಮಗನೇ ಹೆಬ್ಬೊಲೆಯರ ಬಾಯನ್ನು ಸೇರುವೆ
ಇಬ್ಬರಾ ಋಣ ತೀರಿತೆಂದು ತಬ್ಬಿಕೊಂಡಿತು ಕಂದನ

ಗೋವಿನಹಾಡಿನಲ್ಲಿ ಸಾಯುವ ಕೊನೇ ಘಳಿಗೆಯಲ್ಲಿ, ಹುಲಿಗಾದರೂ ಯತ್ಕಿಂಚಿತ್ ಚಣಕಾಲ ಗೋವಿನ ಕೊನೆಯಾಸೆಯನ್ನು ಆಲೈಸುವ ಸಂಸ್ಕಾರವಿತ್ತು! ಇಲ್ಲಿ ಸಾಯುವ ಗೋವಿಗೆ ಕೊನೇಕ್ಷಣ ಯಾವಾಗ ಎಂಬುದೂ ತಿಳಿದಿಲ್ಲ; ತಿನ್ನುವ ಹೊಲೆಯರಿಗೆ ಅವೆಲ್ಲಾ ಬೇಕಾಗಲೇ ಇಲ್ಲ!! ದನದ ಮಾಂಸತಿಂದ ಪರಿಣಾಮವಾಗಿ ಜಗತ್ತಿನಲ್ಲೇ ಕ್ರೌರ್ಯ, ಮತಾಂಧತೆ ಹೆಚ್ಚುತ್ತಿದೆ, ದನದ ಮಾಂಸ ಭುಂಜಿಸಿದ ಫಲವಾಗಿ ಜನ ಮಾನಸಿಕವಾಗಿ ಅಧೋಗತಿಗೆ ಧಾವಿಸುತ್ತಿದ್ದಾರೆ. ಮಾನಸಿಕವಾಗಿ ಅದಾಗಲೇ ಬಚ್ಚಲಕೊಚ್ಚೆಯಲ್ಲಿ ಬಿದ್ದಿರುವ ಮನಸ್ಸು ಅದಕ್ಕೇ ಅಂಟಿಕೊಂಡಿದೆ; ಮತ್ತಿನ್ನೇನೂ ಬೇಡವಾಗಿದೆ. ಬಸವಣ್ಣನಂತಹ ಧಾರ್ಮಿಕ ನಾಯಕರೂ ಹೊಲೆಯರನ್ನು ಪರಿವರ್ತಿಸ ಹೊರಟರು, ಆದರೆ ಅವರು ಪರಿವರ್ತಿತವಾಗಿದ್ದು ಬೇರೇ ಮತಕ್ಕೆ ಎಂಬುದು ಇತಿಹಾಸ!! ಸನಾತನ ಮತದಲ್ಲಿ ಅವರಿಗೆ ಆದ್ಯತೆ ಇರಲಿಲ್ಲವೆಂಬ ಕಾರಣಕ್ಕೆ ಅವರು ಮತಾಂತರ ಗೊಂಡು ಮ್ಲೇಚ್ಛರಾದರು. ಹುಟ್ಟುಗುಣ ಘಟ್ಟಹತ್ತಿದರೂ ಹೋಗದು ಎಂಬಂತೇ ಬಚ್ಚಲಕೊಚ್ಚೆ ಹುಳಗಳ ಬಾಣಂತನವನ್ನು ಅನ್ಯಮತವೊಂದು ಮಾಡಿಸಿತು; ಮಾಡಿಸುತ್ತಲೇ ಇದೆ.

ಹೊಲೆಯರಾರೂರ ಹೊರಗಿರುವವನೆ ಹೊಲೆಯ?
ಚಾಡಿಮಾತನು ಹೇಳಿ  ಮತಾಂತರ ಮಾಡುವವ ಹೊಲೆಯ
ಬೇಡಿದ್ದನ್ನು ನೀಡುತ್ತೇವೆಂದು ಭರವಸೆ ಹುಟ್ಟಿಸಿ
ಮತಾಂತರಗೊಳಿಸುವವ ಹೊಲೆಯ
ಕಾಡಿ-ದೂಡಿ-ಬಡಿದು-ಸಾಗಿಸಿ-ಕೊಂದು ಹಸುಗಳನ್ನು
ಹರಿದು ತಿಂಬವನೇ ಹೊಲೆಯ
ನೋಡ ನೋಡುತ್ತಾ ಬಚ್ಚಲಕೊಚ್ಚೆಯ ಹುಳವಾಗಬಲ್ಲವನೆ ಹೊಲೆಯ

ಝಾಡಿಸಿ ಒದ್ದು ಅಂಥವರನ್ನು ದೇಶದಿಂದಾಚೆ ಓಡಿಸಲಾರೆಯಾ ಸನಾತನೀ ಗೆಳೆಯಾ?
ನಿನ್ನ ಮನೆ-ಮಡದಿ-ಮಕ್ಕಳು ಎಂದೆಂದೂ ಸುಖವಾಗಿರಲಿ, ರೋಗನಿರೋಧಕವಾದ ನನ್ನ ಹಾಲನ್ನೇ ಉಂಡು ನೆಮ್ಮದಿಯಿಂದ ಜೀವಿಸಲಿ....ನಿನಗಿದೋ ನಿತ್ಯ ಹಾಲುಕೊಡುತ್ತಿರುವ ಭಾರತೀಯ ಪುಣ್ಯಕೋಟಿಯ ಜನ್ಮಾಂತರಗಳ ರಕ್ತಕಣ್ಣೀರಿನ ನಮಸ್ಕಾರ. 

Friday, May 24, 2013

ಸರಕಾರೀ ಶಾಲೆಗಳಲ್ಲಿ ಮಕ್ಕಳಿಲ್ಲ ಯಾಕೆಂದರೆ...



 ಸರಕಾರೀ ಶಾಲೆಗಳಲ್ಲಿ ಮಕ್ಕಳಿಲ್ಲ ಯಾಕೆಂದರೆ...
                                                                                        
ಸರಕಾರೀ ಶಾಲೆಗಳ ಶಿಕ್ಷಕರು ಬದಲಾದ ಜಗತ್ತಿಗೆ ಬೇಕಾದ ಗುಣಮಟ್ಟದ ವಿದ್ಯೆಯನ್ನು ನೀಡುವಲ್ಲಿ ಹಿಂದುಳಿದಿದ್ದಾರೆ. ಹುಡುಕಿದರೆ ಇದಕ್ಕೆ ಸಿಗುವ ಕಾರಣಗಳು ಹಲವಾರು. ಆದರೆ ಸ್ಥೂಲವಾಗಿ ನೋಡಿದರೆ, ಶಿಕ್ಷಕರ ನೇಮಕಾತಿಯಲ್ಲಿ ಆಗುವ ನ್ಯೂನತೆಗಳು ಮತ್ತು ಶಿಕ್ಷಕರಲ್ಲಿ ಕುಸಿಯುತ್ತಿರುವ ಕಲಿಸಬೇಕೆಂಬ ಆಸಕ್ತಿ ಪ್ರಮುಖ ಅಂಶವಾಗಿ ಗೋಚರಿಸುತ್ತವೆ. ಕುಲಕಸುಬಾಗಿದ್ದ ಅಧ್ಯಾಪನ ಶತಮಾನದ ಹಿಂದೆಯೇ ತನ್ನತನವನ್ನು ಕಳೆದುಕೊಂಡಿತು. ಅಧ್ಯಾಪಕನಾಗುವವ ಹೇಗಿರಬೇಕೆಂದು ತಿಳಿಯಲ್ಪಟ್ಟಿತ್ತೋ ಅಂತಹ ಅರ್ಹತೆಗಳು ಇಲ್ಲದವರೂ ಕೂಡ ಅಧ್ಯಾಪಕ ಹುದ್ದೆಯನ್ನು ಅಲಂಕರಿಸತೊಡಗಿದರು. ಉದಾಹರಣೆಗೆ ಆಂಗ್ಲ ಭಾಷೆ ಕಲಿಸುವ ಶಿಕ್ಷಕರೇ ಕನ್ನಡದ ಗೈಡು ನೋಡಿಕೊಂಡು ಕಲಿಸುವ ಪರಿಪಾಠ ಬೆಳೆಯಿತು. ಶಿಕ್ಷಕರ ವೃತ್ತಿ ಶಿಕ್ಷಣ-ಪದವಿಗಳನ್ನಷ್ಟೇ ಮಾನದಂಡವನ್ನಾಗಿಟ್ಟುಕೊಂಡ ಆಯ್ಕೆಯಲ್ಲಿ, ಅಲ್ಲಿರುವ ಮೀಸಲಾತಿ-ಒಳಮೀಸಲಾತಿ ವ್ಯವಹಾರಗಳಲ್ಲಿ, ಅಧಿಕಾರಿಗಳ ಲಂಚಗುಳಿತನದ ಆಶ್ರಯದಲ್ಲಿ ಯಾಕೂ ಬೇಡದವರೂ ಶಿಕ್ಷಕರಾಗಹತ್ತಿದರು; ಎಲ್ಲಿಯೂ ಸಲ್ಲದವರು ಅಲ್ಲಿ ಸಂದರು!    

22ನೇ ಶತಮಾನದ ಹೊಸ್ತಿಲಲ್ಲಿರುವ ಜನರಿಗೆ, ಕನ್ನಡಿಗರಿಗೆ, ಕನ್ನಡದ ಅಭಿಮಾನವೆಷ್ಟೇ ಇದ್ದರೂ, ತಮ್ಮ ಮಕ್ಕಳು ಆಂಗ್ಲಮಾಧ್ಯಮದಲ್ಲೇ ಓದಬೇಕು, ಎಲ್ಲರಂತೇ ಚೆನ್ನಾಗಿ ಇಂಗ್ಲೀಷು ಕಲಿತು ಪಟಪಟಾಯಿಸಬೇಕು, ಎಂಜಿನೀಯರಿಂಗ್-ಮೆಡಿಕಲ್ ಓದುವುದಕ್ಕೆ ಆಂಗ್ಲಮಾಧ್ಯಮ ಸಹಕಾರಿಯಾಗುತ್ತದೆ ಎಂಬೆಲ್ಲಾ ಅನಿಸಿಕೆಗಳು ಕನ್ನಡ ಮಾಧ್ಯಮದ ಸರಕಾರೀ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಲ್ಲಿ ತಡೆಯೊಡ್ಡಿದವು. ’’ಅಕ್ಕಿಮೇಲೂ ಆಸೆ ನೆಂಟರಮೇಲೂ ಪ್ರೀತಿ’’ ಎಂಬ ಗಾದೆಯಂತೇ ಕನ್ನಡವನ್ನು ಬಿಟ್ಟಿರಲಾರೆವು ಎಂದುಕೊಂಡರೂ ಪಾಪ್ ಕಾರ್ನ್ ರೀತಿಯಲ್ಲಿ ಬಡಿದೆದ್ದು ಹಾರುತ್ತಿರುವ ಆಂಗ್ಲಮಾಧ್ಯಮದ ಶಾಲೆಗಳು ಮತ್ತು ಬ್ರಿಟಿಷರು ಜಗತ್ತಿಗೇ ರೂಢಿಸಿದ ಇಂಗ್ಲೀಷ್ ಭಾಷೆ ಕನ್ನಡಿಗರನ್ನು ಕಟ್ಟಿಹಾಕಿದವು. ಪರಿಣಾಮವಾಗಿ ಒಂದೊಂದೇ ಕುರಿ, ಮಂದೆಯಿಂದ ತಪ್ಪಿಸಿಕೊಂಡಂತೇ, ನಿಧಾನಗತಿಯಲ್ಲಿ ಪಾಲಕರು ಆಂಗ್ಲಮಾಧ್ಯಮ ಶಾಲೆಗಳತ್ತ ಮುಖಮಾಡಿದರು. ಮನದೊಳಗೆ ನಡೆದ ಜಿದ್ದಾಜಿದ್ದಿಯಲ್ಲಿ, ಡೊನೇಶನ್ ಎಷ್ಟಾದರೂ ಪರವಾಗಿಲ್ಲ ಶಾಲೆ ಚೆನ್ನಗಿರಬೇಕೆಂದೂ ತಮ್ಮ ಮಕ್ಕಳು ಮಾತ್ರ ಆಂಗ್ಲಮಾಧ್ಯಮದಲ್ಲೇ ಓದಿ ಬೆಳಗಬೇಕೆಂದೂ ಮೂಡಿದ ಒಳತೋಟಿ ಹೊರಗೆ ಕನ್ನಡಧ್ವಜ ಹಾರಿಸುತ್ತಲೇ ಮಕ್ಕಳನ್ನು ಆಂಗ್ಲಮಾಧ್ಯಮದ ಶಾಲೆಗಳಿಗೆ ಕಳಿಸುವಲ್ಲಿ ಜಯಗಳಿಸಿಬಿಟ್ಟಿತು!   

ಮುಂಗಾರುಮಳೆಗೆ  ಚಿಗುರೆದ್ದ ಅಣಬೆಗಳಂತೇ ಆಂಗ್ಲಮಾಧ್ಯಮದ ಖಾಸಗೀ ವಿದ್ಯಾಸಂಸ್ಥೆಗಳು ತಲೆ ಎತ್ತಿದವು, ಈಗಲೂ ಎತ್ತುತ್ತಲೇ ಇವೆ. ಗಲ್ಲಿಗಲ್ಲಿಗೊಂದು ಶಾಲೆಯನ್ನು ನೋಡುವಾಗ ಸ್ವರಚಿತ ಭೋಗಷಟ್ಪದಿಯ ಪದ್ಯವೊಂದು ನೆನಪಾಗುತ್ತದೆ:

ವಿದ್ಯೆಕಲಿಸುತೇವೆ ಎಂದು
ಗದ್ಯಪದ್ಯಕಿಂತ ಮೊದಲು
ಅಧ್ಯಯನಕೆ ರಾಶಿ ಕಂತೆ ತಿಂದುಕೊಂಡರು |
ವಾದ್ಯ ನಾಟ್ಯ ಗೀತ ಚಿತ್ರ
ಖಾದ್ಯ ಆಟ ನೋಟ ಎಂದು
ಸಾಧ್ಯವಾದ ಎಲ್ಲ ರೀತಿ ಮೆಂದುಕೊಂಡರು ||

ವಿದ್ಯೆ ಕಲಿಸುವ ಕಾರ್ಖಾನೆಗಳಂತೇ ತಮ್ಮನ್ನು ಬಿಂಬಿಸಿಕೊಂಡ ಖಾಸಗೀ ಸಂಸ್ಥೆಗಳಲ್ಲಿ ಸಿಂಹಪಾಲು ರಾಜಕಾರಣಿಗಳದು; ಅದರಲ್ಲಿ ದೊಡ್ಡ ರಾಜಕಾರಣಿಗಳಿಂದ ಹಿಡಿದು ಮರಿರಾಜಕಾರಣಿ, ಪುಡಿರಾಜಕಾರಣಿ ಎಲ್ಲಾ ಸೇರಿದ್ದಾವೆ. ಹಣಗಳಿಸುವ ಸುಲಭದ ದಂಧೆಗಳಲ್ಲಿ ವಿದ್ಯಾಸಂಸ್ಥೆ ನಡೆಸುವುದೂ ಒಂದು ಎಂದು ಕಂಡುಕೊಂಡ ರಾಜಕೀಯದ ಹಲವು ಜನ ಮತ್ತು ಇನ್ನಿತರ ಕೆಲವುಜನ ಶಾಲೆಗಳನ್ನು ತೆರೆದರು. ಸರಕಾರೀ ಶಾಲೆಗಳಲ್ಲಿ ಇಲ್ಲದ ಕೆಲವು ಸೌಲಭ್ಯಗಳನ್ನು ತೋರಿಸಿದರೆ ಮಕ್ಕಳನ್ನು ಪಾಲಕರು ತಮ್ಮಲ್ಲಿಗೆ ದಾಖಲಿಸುತ್ತಾರೆ ಎಂಬುದು ಖಂಡಿತಾ ಗೊತ್ತಿತ್ತು. ಜೊತೆಗೆ ಆಳರಸರಲ್ಲೇ ಹಲವರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವುದರಿಂದ, ಸರಕಾರೀ ಶಾಲೆಗಳಲ್ಲಿ ಕಲಿಕಾಮಾಧ್ಯಮದಲ್ಲಾಗಲೀ, ಕಲಿಕೆಯ ಉಪಕರಣಗಳಲ್ಲಾಗಲೀ ನಾವೀನ್ಯತೆಯನ್ನು ಜೋಡಿಸಬಾರದೆಂಬ ವೈಯ್ಯಕ್ತಿಕ ಕಳಕಳಿಯನ್ನೂ ಅವರು ಹೊಂದಿದ್ದಾರೆ! ಇದೂ ಅಲ್ಲದೇ ಕಲಿಸುವ ವ್ಯಕ್ತಿಗಳ ವೈಯಕ್ತಿಕ ಗುಣಮಟ್ಟ, ಅವರ ಬೋಧನಾ ಕೌಶಲ ಯಾವುದನ್ನೂ ಗಣಿಸುವ ಇರಾದೆ ಸರಕಾರಕ್ಕಿಲ್ಲ; ಪಠ್ಯಪುಸ್ತಕದ ಹೆಸರನ್ನು ನೆಟ್ಟಗೆ ಓದಲು ಬಾರದವರೂ ಸರಕಾರೀ ಶಾಲೆಗಳಲ್ಲಿ ಶಿಕ್ಷಕರಾಗಿದ್ದನ್ನು ಕಂಡಿದ್ದೇನೆ!

ಬಿಸಿ ಊಟ, ಮತ್ತಿನ್ನೇನೋ ಆಟ ಎಲ್ಲಾ ಡೊಂಬರಾಟಗಳೂ ನಡೆದವು. ಖಾಸಗೀ ಶಾಲೆಗಳಲ್ಲಿ ಎಲ್ಲೂ ಬಿಸಿಯೂಟದ ವ್ಯವಸ್ಥೆ ಕಾಣುವುದಿಲ್ಲ; ಬೇಕೆಂದರೆ ಮಕ್ಕಳು ಮನೆಯಿಂದ ಹೊತ್ತೊಯ್ಯಬೇಕು, ಇಲ್ಲಾ ಲಭ್ಯವಿರುವ ಕ್ಯಾಂಟೀನುಗಳಲ್ಲಿ [ಇದ್ದರೆ] ಹಣಕೊಟ್ಟು ತಿಂಡಿ ತಿನ್ನಬೇಕು. ಇಸ್ಕಾನ್ ನಂತಹ ಸಂಸ್ಥೆಗಳು ಅನೇಕ ನಗರಗಳಲ್ಲಿ, ಸರಕಾರೀ ಶಾಲಾಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಿವೆ. ಆದರೂ ಪರಿಸ್ಥಿತಿ ಎಲ್ಲಿಗೆ ತಲ್ಪಿದೆಯೆಂದರೆ, ಏನೂ ಗತಿಯಿಲ್ಲದವರು ಮಾತ್ರ ಸರಕಾರೀ ಶಾಲೆಗಳಿಗೆ ತಮ್ಮ ಮಕ್ಕಳನ್ನು ನೋಂದಾಯಿಸುತ್ತಾರೆ ಎಂಬಲ್ಲಿಗೆ ಸರಕಾರೀ ಶಾಲೆಗಳ ಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ದುಡಿಮೆಯ ಅನುಕೂಲವಿದೆಯೆಂದಾದರೆ ಅಂಥವರು ಮಕ್ಕಳನ್ನು ಸೇರಿಸುವುದು ಖಾಸಗೀ ಶಾಲೆಗಳಿಗೇ-ಅದೂ ಆಂಗ್ಲಮಾಧ್ಯಮದ ಶಾಲೆಗಳಿಗೆ ಮಾತ್ರ. ಬೆಂಗಳೂರು ನಗರದಲ್ಲಿ ಖಾಸಗೀ ಶಾಲೆಗಳಲ್ಲಿಯೂ ಕೆಲವೆಡೆ ಕನ್ನಡ ಮಾಧ್ಯಮದ ವಿಭಾಗವಿದೆ. ವಿಪರ್ಯಾಸವೆಂದರೆ ಶಾಲೆ ಖಾಸಗಿಯಾಗಿದ್ದರೆ ಸಾಲದು ಮಾಧ್ಯಮವೂ ಕನ್ನಡವಾಗಿರಕೂಡದು ಎಂಬುದನ್ನು ಜನ ಬಯಸುತ್ತಾರೆ ಎಂದು  ಅಲ್ಲಿಗೆ ಭೇಟಿಯಿತ್ತಾಗ ಗಮನಕ್ಕೆ ಬಂತು. ಖಾಸಗೀ ಸಂಸ್ಥೆಗಳ ಕನ್ನಡ ವಿಭಾಗಗಳು ಡೊನೇಶನ್ ಮುಕ್ತವಾಗಿದ್ದರೂ ಸಹ ಪಾಲಕರು ಮಕ್ಕಳನ್ನು ಅಲ್ಲಿಗೆ ಸೇರಿವುದು ಕಡಿಮೆ!       

ಇನ್ನು ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೂ ಹೆಜ್ಜೆಯಿದೆ ಎಂದು ತೋರಿಸಲು ಮಠಮಾನ್ಯಗಳೂ ಶಾಲೆಗಳನ್ನು ತೆರೆದಿವೆ. ಅಂತಹ ಶಾಲೆಗಳು ಮಿಕ್ಕುಳಿದ ಖಾಸಗೀ ಶಾಲೆಗಳ ದರ್ಜೆಯಲ್ಲೇ ನಿಲ್ಲುತ್ತವೆ. ಖಾಸಗೀ ಶಾಲೆಗಳಲ್ಲಿ ಕಲಿಸುವ ಮಂದಿ ಮೀಸಲಾತಿಗಳಿಗೆ ಒಳಪಟ್ಟವರಾಗಿರುವುದಿಲ್ಲ. ಅದು ಅವರ ಮೆರಿಟ್ ಅವಲಂಬಿಸಿ ನಡೆಯುತ್ತದೆ. ಶಿಕ್ಷಕರಿಗೆ ವಿಶೇಷ ಪರಿಣತರಿಂದ ಆಗಾಗ ತರಬೇತಿ ಇರುತ್ತದೆ. ನವನವೀನ ಶೈಕ್ಷಣಿಕ ಉಪಕರಣಗಳನ್ನು ಖಾಸಗೀ ಸಂಸ್ಥಗಳು ಬಳಸಿಕೊಳ್ಳುತ್ತವೆ: ಉದಾಹರಣೆಗೆ ಸ್ಮಾರ್ಟ್ ಕ್ಲಾಸ್ ರೂಮ್ ನಲ್ಲಿ ಕಂಪ್ಯೂಟರ್ ಮತ್ತು ದೊಡ್ಡ ದೊಡ್ಡ ಪರದೆ-ಪ್ರಾಜೆಕ್ಟರ್ ಮೊದಲಾದ ಉಪಕರಣನ್ನು ಬಳಸಿ ವಿಷಯಗಳನ್ನು ಕಲಿಸಲಾಗುತ್ತದೆ. ಸಾಂದರ್ಭಿಕ ಚಿತ್ರಗಳ ಅವಲೋಕನದಿಂದ ಕಲಿಯುವ ಮಕ್ಕಳಿಗೆ ವಿಷಯ ಗಟ್ಟಿಯಾಗಿ ಮನದಟ್ಟಾಗುತ್ತದೆ ಎಂಬ ಪರಿಣಾಮಕಾರೀ ಅಂಶ ಬೆಳಕಿಗೆ ಬಂದುದರಿಂದ  ನಗರಗಳಲ್ಲಿ ಅಂತಹ ವ್ಯವಸ್ಥೆಯ ಪೂರೈಕೆಗೇ ಕೆಲವು ಕಂಪನಿಗಳು ಹುಟ್ಟಿಕೊಂಡಿವೆ. ಬುದ್ಧಿಮಟ್ಟದ ಬೆಳವಣಿಗೆಗೆ ಪಠ್ಯೇತರ ಓದು-ಕಲಿಕೆಗಳನ್ನು ಅಳವಡಿಸುವ ಸಂಸ್ಥೆಗಳು ಖಾಸಗೀ ಶಿಕ್ಷಣ ಸಂಸ್ಥೆಗಳ ಜೊತೆ ಸೇರಿ ಕೆಲಸಮಾಡುತ್ತವೆ. ಇದನ್ನೆಲ್ಲಾ ತಿಳಿದುಕೊಳ್ಳುವ ಪಾಲಕರು ತಮ್ಮ ಮಕ್ಕಳು ಇದರಿಂದ ವಂಚಿತರಾಗಲು ಇಷ್ಟಪಟ್ಟಾರೆಯೇ?   

ಹಾಂ, ಇನ್ನೊಂದು ಮಾತನ್ನು ಗಮನಿಸಬೇಕು, ಓದು ಒಕ್ಕಾಲು-ಬುದ್ಧಿ ಮುಕ್ಕಾಲು ಎಂಬ ಗಾದೆಯೂ ಸಹ ಇದೆ. ಮಕ್ಕಳಲ್ಲಿ ಕೆಲವರು ಏಕಪಾಠಿಗಳು, ಕೆಲವರಿಗೆ ಅದಕ್ಕಿಂತಾ ಜಾಸ್ತಿ ಅಂದರೆ ಒಂದೆರಡು ಸರ್ತಿ ವಿಷಯಗಳ ಅವಲೋಕನದ ಅಗತ್ಯ ಬೀಳುತ್ತದೆ. ಕೆಲವರಿಗೆ ಜಾಸ್ತಿ ಸಮಯದ  ಪುಸ್ತಕಗಳ ಪುನರಾವರ್ತಿತ ಓದು ಬೇಕು. ಇನ್ನೂ ಕೆಲವರಿಗೆ ಎಷ್ಟೇ ಓದಿದರೂ ಅದೊಂದು ಮಟ್ಟಕ್ಕೆ ಮಾತ್ರ, ಆಮೇಲ್ ಅವರ ಎಂಜಿನ್ ಸೀಝ್ ಆಗಿಬಿಡುತ್ತದೆ! ಏಕಪಾಠಿಗಳು ಅಥವಾ ಆ ದರ್ಜೆಯವರನ್ನು ಖಾಸಗೀ ಸಂಸ್ಥೆಗಳು ತಮ್ಮ ಗುಣಮಟ್ಟದ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಏಕಪಾಠಿಗಳು ಜಾಸ್ತಿ ಅಂಕಗಳನ್ನು ಪಡೆಯುವುದರಿಂದ , ವಿಶೇಷ ಪರಿಶ್ರಮ ಅನಗತ್ಯವಾಗಿ ಸಹಜವಾಗಿ ಅವರು ಯಾವುದೇ ಶಾಲೆಯಲ್ಲಿದ್ದರೂ ಶಾಲೆಗೆ ಒಳ್ಳೆಯ ಹೆಸರು ತರುತ್ತಾರೆ. ಹೀಗಾಗಿ ಇಂಥಾ ಮಕ್ಕಳು ನಗರಗಳಲ್ಲಿ ಖಾಸಗೀ ಸಂಸ್ಥೆಗಳಲ್ಲೇ ಕಲಿಯುತ್ತಾರೆ ಯಾಕೆಂದರೆ ಸಂಸ್ಥೆಗಳು ಅವರನ್ನೂ ಅವರ ಪಾಲಕರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಾರೆ. ಪಾಲಕರಿಗೆ ತಮ್ಮ ಮಕ್ಕಳು ಎಂದೂ ಹಿಂದೆಬೀಳದಿರಲಿ ಎಂಬ ಅಪೇಕ್ಷೆ ಇರುವುದರಿಂದ ಪಾಲಕರ ಆಯ್ಕೆ ಕೂಡಾ ಖಾಸಗೀ ಸಂಸ್ಥೆಗಳೇ ಆಗಿರುತ್ತವೆ.

ಖಾಸಗೀ ಸಂಸ್ಥೆಗಳಲ್ಲಿ, ಬ್ಯಾನರುಗಳು, ಪೋಸ್ಟರ್ಸ್, ಕರಪತ್ರಗಳು, ಟಿವಿ ಜಾಹೀರಾತುಗಳು, ಪತ್ರಿಕಾ ಜಾಹೀರಾತುಗಳು, ಅಂತರ್ಜಾಲ ಮಾಧ್ಯಮಗಳಲ್ಲಿ ಜಾಹೀರಾತುಗಳು ಬಹಳ ಜೋರಾಗಿವೆ. ಶಿಕ್ಷಣವನ್ನು ಉದ್ಯಮೀಕರಣ ಮಾಡಬಾರದು ಎಂಬ ಮಾತು ಹಳತಾಯ್ತು, ಈಗ ಶೈಕ್ಷಣಿಕ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಎಲ್ಲವೂ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಅಥವಾ ಏಕವ್ಯಕ್ತಿ ಕೇಂದ್ರೀಕೃತ ಟ್ರಸ್ಟುಗಳಾಗಿವೆ!! ಪೈಪೋಟಿ ಹೇಗಿದೆಯೆಂದರೆ ಒಬ್ಬರಿಗಿಂತಾ ಒಬ್ಬರು ವಿಶಿಷ್ಟರು ಎಂದು ತೋರಿಸಿಕೊಳ್ಳಲು ವ್ರಥಾ ಹೆಣಗಾಡುತ್ತಿರುತ್ತಾರೆ. ಇಪ್ಪತ್ತು ರೂಪಾಯಿ ಸೌಲಭ್ಯ ಕೊಟ್ಟರೆ ೨೦೦೦ ಕೋಟಿ ಕೊಟ್ಟವರಂತೇ ಹೇಳಿಕೊಳ್ಳುತ್ತಾರೆ. ಖಾಸಗೀ ಶಾಲೆಗಳಲ್ಲಿ ಶಿಕ್ಷಕರಿಗೆ ಉತ್ತಮ ಸಂಬಳ ಕೊಡುತ್ತಾರೆ ಎಂದೆನಿಸಿದರೂ ಅವರ ಸಂಬಳ ಸರಕಾರೀ ಶಾಲೆಗಳಿಗಿಂತ ಜಾಸ್ತಿ ಇರುವುದಿಲ್ಲ, ಮತ್ತು ಶಿಕ್ಷಕರಿಗೆ ಕೆಲಸಮಾತ್ರ ಸರಕಾರೀ ಶಿಕ್ಷಕರಿಗೆ ಇರುವ ಮೂರುಪಟ್ಟು ಇರುತ್ತದೆ! ಕೆಲಸ ಹೆಚ್ಚಾಯ್ತೆಂದು ಮಾಡಲು ಒಪ್ಪದಿದ್ದರೆ ಕೆಲಸದಿಂದ ವಜಾಗೊಳಿಸುವುದು ಕ್ಷಣಾರ್ಧದ ಮಾತು! ಆ ಸನ್ನಿವೇಶ ದೇವರಿಗೇ ಪ್ರೀತಿ. ಆದರೂ ಸರಕಾರೀ ಶಾಲೆಗಳಲ್ಲಿ ಶಿಕ್ಷಕರಾಗಲು ಅವಕಾಶ ಸಿಗದ ಜನ ಖಾಸಗೀ ಶಾಲೆಗಳಲ್ಲಿ ದುಡಿಯುತ್ತಾರೆ. ಖಾಸಗೀ ಶಾಲೆಗಳಲ್ಲಿ ನೆನಪಾದಾಗಲೆಲ್ಲಾ ರಜಾ ಗುಜರಾಯಿಸುವಂತಿಲ್ಲ, ಮಕ್ಕಳಿಗೆ ಎಮ್ಮೆ ಉಚ್ಚೆ ಹೊಯ್ದ ರೀತಿಯಲ್ಲಿ ಪಾಠಮಾಡುವಂತಿಲ್ಲ, ಎಲ್ಲದಕ್ಕೂ ನಿಮಯ-ನಿಬಂಧನೆಗಳಿವೆ, ಯಜಮಾನರ ನಿಯಂತ್ರಣವಿರುತ್ತದೆ. ಆಡಳಿತ ನಡೆಸುವ ಮಂದಿ ಎರಡನ್ನು ಕೊಟ್ಟು ಇಪ್ಪತ್ತನ್ನು ಇಸಿದುಕೊಳ್ಳುವುದರಲ್ಲಿ ನಿಸ್ಸೀಮರಾಗಿರುತ್ತಾರೆ; ಬಿಟ್ಟಿ ಕೆಲಸ ಮಾಡಿಸಿಕೊಳ್ಳುವುದಕ್ಕೂ ಸಿದ್ಧಹಸ್ತರಾಗಿರುತ್ತಾರೆ.ಆದರೂ, ಕಲಿಸಲು ಸಿಗುವ ಪರಿಕರ-ಸೌಲಭ್ಯಗಳನ್ನು ನೋಡಿ ಶಿಕ್ಷಕ ಹುದ್ದೆಗೆ ಅಬ್ಯರ್ಥಿಗಳು ಹುಡುಕಿಕೊಂಡು ಬರುತ್ತಾರೆ.

ಸಿ.ಬಿ.ಎಸ್.ಸಿ, ಆಯ್.ಸಿ.ಎಸ್.ಸಿ, ಸ್ಟೇಟ್ ಸಿಲ್ಲೇಬಸ್ ಗಳನ್ನು ಖಾಸಗಿಯವರು ತೆರೆದಿಡುತ್ತಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಗಳನ್ನು ಸ್ಥಾಪಿಸುವಲ್ಲಿ ಧನಿಕರು ತೊಡಗಿಕೊಂಡಿದ್ದಾರೆ. ಎಜ್ಯುಕೇಷನ್ ಹ್ಯಾಸ್ ಬಿಕಮ್ ಮಲ್ಟಿಕ್ರೋರ್ ಬ್ಯುಸಿನೆಸ್ ನೌ!! ಸಭಾಂಗಣ, ಗ್ರಂಥಾಲಯ, ಶೌಚಾಲಯ, ಆಟದಬಯಲು ಎಲ್ಲಾ ಸೌಲಭ್ಯಗಳನ್ನು ತಕ್ಕಮಟ್ಟಿಗೆ ಇಡುವ ಖಾಸಗೀ ಶಾಲೆಗಳಲ್ಲಿ, ಓಡಾಟಕ್ಕೆ ಬಸ್ಸುಗಳನ್ನು ಇಡುತ್ತಾರೆ. [ಎಲ್ಲದಕ್ಕೂ ಹಣ ವಸೂಲು ಪ್ರತ್ಯೇಕ ಬಿಡಿ, ಆದರೆ ಸೌಲಭ್ಯ ಇದೆಯಲ್ಲ!] ಈ ಎಲ್ಲಾ ಅಂಶಗಳ ಮುಂದೆ ಸರಕಾರೀ ಶಾಲೆಗಳನ್ನು ಪರಿಗಣಿಸಿದರೆ, ಶಾಲೆಗಳಿಗೆ ವಿದ್ಯುತ್ ಸಂಪರ್ಕವೇ ಇರುವುದು ಕಮ್ಮಿ, ಗಣಕಯಂತ್ರಗಳಿರುವುದಿಲ್ಲ-ಇದ್ದರೂ ಕೆಲಸಮಾಡಲು ಶಿಕ್ಷಕರಿಗೇ ತಿಳಿದಿಲ್ಲ, ಎಷ್ಟೋ ಶಾಲೆಗಳ ಗಣಕಯಂತ್ರಗಳು ಹಾಳಾಗಿ ವರ್ಷಗಳೇ ಉರುಳಿವೆ!-ಅವುಗಳ ರಿಪೇರಿ ಮಾಸ್ತರಮಂದಿಗೆ ಬೇಕಾಗಿಲ್ಲ. ಕಿತ್ತುಹೋದ ಗೋಡೆಗಳು, ಒಡೆದ ಸೋರುವ ಛಾವಣಿಗಳು, ಕರಿಹಲಗೆ ಇದ್ದರೆ ಸೀಮೆ ಸುಣ್ಣವಿಲ್ಲ, ಸೀಮೆ ಸುಣ್ಣವಿದ್ದರೆ ಕರಿಹಲಗೆಯಿಲ್ಲ[ಸಾರಿ ಈಗೆ ಗ್ರೀನ್ ಹಲಿಗೆಯಾಗಿದೆ], ಸ್ಮಾರ್ಟ್ ಕ್ಲಾಸ್ ರೂಮ್ ಹಾಗಿರಲಿ, ಇರುವ ಖೋಲಿಗಳಲ್ಲಿ ಡೆಸ್ಕು-ಬೆಂಚುಗಳೇ ಇರುವುದಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಅಪರೂಪ, ಸುತ್ತಲಿನ ವಠಾರಗಳೇ ಶೌಚಾಲಯಗಳು! ಗ್ರಂಥಾಲಯ ಇರುವುದೇ ಇಲ್ಲ. ಆಟದ ಪರಿಕರಗಳು ಇಲ್ಲ. ನೆಟ್ಟಗೆ ಇರುವುದೊಂದೇ: ಮಾಸ್ತರಿಗೆ ರಜಾ ಬೇಕಾದಾಗ ಮಕ್ಕಳಿಗೆ ಆಡಲು ಸಮಯ ಸಿಗುತ್ತದೆ! 

ಈ ಮಧ್ಯೆ, ಗೀತೆ ಪಠ್ಯದಲ್ಲಿರಬೇಕೆಂದು ಉದಾತ್ತ ಭಾವದಿಂದ ಒಂದು ಪಕ್ಷ ಹೇಳಿದರೆ, ವಿನಾಕಾರಣ ಗೀತೆಯನ್ನು ದೂಷಿಸುತ್ತಾ-ಪಠ್ಯದಲ್ಲಿ ಸೇರಿಸಬಾರದು ಎಂದು ಇನ್ನೆರಡು ಪಕ್ಷಗಳವರು ಬೊಗಳುತ್ತಿರುತ್ತಾರೆ. ಪಠ್ಯಗಳಲ್ಲಿ ಪ್ರಕಟಿಸಬೇಕಾದ ವಿಷಯಗಳೇ ಇತ್ಯರ್ಥಕ್ಕೆ ಬರದೇ ಪಠ್ಯಪುಸ್ತಕಗಳ ಮುದ್ರಣ-ಸರಬರಾಜು ವಿಳಂಬವಾಗಿ ಅರ್ಧವರ್ಷವೇ ಕಳೆದುಹೋಗುತ್ತದೆ. ರಾಜಕಾರಣಿಗಳ ಹಲವು ಮುಖಗಳ ಹಗಲುವೇಷಗಳು ಸರಕಾರೀ ಶಾಲೆಗಳ ಸಿಬ್ಬಂದಿಯ ಕೆಲಸದಮೇಲೂ ಮತ್ತು ಅಲ್ಲಿ ಕಲಿಯುವ ಮಕ್ಕಳ ಮೇಲೂ ದುಷ್ಪರಿಣಾಮ ಬೀರದೇ ಇರುತ್ತವೆಯೇ? ರಾಜಕೀಯ ಪ್ರೇರಿತ, ರಾಜಕೀಯ ಪೋಷಿತ, ಸೌಲಭ್ಯ ವಂಚಿತ ಸರಕಾರೀ ಶಾಲೆಗಳಲ್ಲಿ, [ಗುಂಡೇ ಹಾರದ, ಬ್ರಿಟಿಷರ ಕಾಲದ ನಾಡಕೋವಿ ಹಿಡಿದು ನಮ್ಮ ಪೋಲೀಸರು ಇಂದಿನ ಅಧುನಿಕ ಶಸ್ತ್ರಾಸ್ತ್ರ ಹೊಂದಿರುವ ಭಯೋತ್ಪಾದಕರನ್ನು ಬೆನ್ನಟ್ಟುವಂತೇ] ಸಿಗುವ ಪರಿಕರಗಳನ್ನೇ ಉಪಯೋಗಿಸಿಕೊಂಡು ಆದಷ್ಟೂ ಚೆನ್ನಾಗಿ ಕಲಿಸುವ ಕೆಲವು ಶಿಕ್ಷಕರೂ ಇದ್ದಾರೆ, ಇಲ್ಲವೆಂದಲ್ಲ. ಆದರೆ ಪರಿಸ್ಥಿತಿಯ ಪ್ರಭಾವದಿಂದ ತಮ್ಮಲ್ಲಿರುವ ನೈಪುಣ್ಯವನ್ನು ಅವರು ಪೂರ್ಣಪ್ರಮಾಣದಲ್ಲಿ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆಗಳ ಆಗರವಾದ ಸರಕಾರೀ ಶಾಲೆಗಳಿಗೆ ಯಾರನ್ನು ಕರೆಯುತ್ತೀರಿ? ಸರಕಾರೀ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಮ್ಮಿಯಾಗಿರುವುದು ಯಾಕೆಂದು ಈಗ ಗೊತ್ತಾಗಿರಬೇಕಲ್ಲ?    

Wednesday, May 22, 2013

ಕೇಳೆ ಸಖೀ ಕಮಲಮುಖೀ

ಚಿತ್ರ ಋಣ : ಅಂತರ್ಜಾಲ 
ಕೇಳೆ ಸಖೀ ಕಮಲಮುಖೀ
                                                                                 -(C) ವಿ.ಆರ್.ಭಟ್, ಹಡಿನಬಾಳ

[ಕವಿಕಲ್ಪನೆಯ ಭಾವಸ್ಫುರಣೆಯಲ್ಲಿ ಆದಿ-ಅಂತ್ಯ ಪ್ರಾಸಗಳ ಜುಗಲ್-ಬಂಧಿಯನ್ನು ಕಾವ್ಯರೂಪಕ್ಕಿಳಿಸುವಲ್ಲಿ, ಕಸುವನ್ನು ಒರೆಗೆ ಹಿಡಿದು ಬರೆದ ಇನ್ನೊಂದು ಕವನ ಇದು. ಛಂದಸ್ಸು-ವ್ಯಾಕರಣ-ಅಂಗಶುದ್ಧಿಯನ್ನು ಅನುಸರಿಸುತ್ತಾ, ಸಾಂಪ್ರದಾಯಿಕ-ಪ್ರಾಗೈತಿಹಾಸಿಕ ವಿಷಯವನ್ನೇ ಅದೆಷ್ಟು ಸಲ ವಿಭಿನ್ನ ಪದಪುಂಜಗಳಿಂದ ಬರೆಯಬಹುದು ಎಂಬ ದಿಸೆಯಲ್ಲಿ ಪ್ರಯತ್ನಿಸಿದ, ಪ್ರಯತ್ನಿಸುತ್ತಲೇ ಇರುವ ಹಲವು ಹೆಜ್ಜೆಗಳಲ್ಲಿ ಇದೊಂದು ಹೆಜ್ಜೆ; ಈ ಹೆಜ್ಜೆ ಓದುಗರ ಮನದಲ್ಲಿ ಗೆಜ್ಜೆತಟ್ಟಿದ ಸಪ್ಪಳವನ್ನು ಮೂಡಿಸಿದರೆ ಪ್ರಯತ್ನ ಸಾಫಲ್ಯ ಎಂಬ ಭಾವ ಕವಿಮನೆಯ-ಮನದ ಮೂಸೆಯಲ್ಲಿರುವಂಥದ್ದು.

ಗೋಕುಲದಲ್ಲಿ, ಗೊಲ್ಲನ ಅಗಲಿಕೆ ಗೋಪಿಕೆಯರಲ್ಲಿ ಯಾವ ಭಾವ ಕೆರಳಿಸಿತ್ತು ಎಂಬುದು ವಸ್ತುವಿಷಯ. ಕಮಲಮುಖಿಯೆನಿಪ ಸಖಿಯಲ್ಲಿ ಪ್ರತಿಯೊಬ್ಬ ಗೋಪಿಕೆಯದೂ ಇದೇ ಹೇಳಿಕೆ, ಇದೇ ಮಂಡನೆ: ಗೋಪಾಲ ತನ್ನವನು, ಗೋವಿಂದ ತನ್ನವನು ಎಂಬ ಹಪಹಪಿಕೆ. ಸಂಗದೊರೆತಾನಂತರ, ಅಕ್ಷರಶಃ, ಗೋಪಾಲನಿಲ್ಲದ ದಿನಗಳನ್ನು ಗೋಪಿಕೆಯರು ಬಯಸಲೇರ್ ಇಲ್ಲ! ಚಣಕಾಲ ಮಾಧವನಿಲ್ಲ ಎಂದರೆ ಆತ ಎಲ್ಲಿ ಹೋದ? ಯಾವಾಗ ಬರಬಹುದು?-ಎಂಬ ಚಿಂತೆ, ಆಲೋಚನೆ ಅವರನ್ನು ಕಾಡುತ್ತಿತ್ತು, ’ಗೋವಿಂದಕಲೆ’ಯನ್ನು ಸೃಜಿಸಿ ಚಾಣಾಕ್ಷನಾದ ಆ ಗೋವಳನ ಫ್ಲರ್ಟಿಂಗ್ ಅಷ್ಟರಮಟ್ಟಿಗೆ ವರ್ಕೌಟ್ ಆಗಿತ್ತು ಎಂದರ್ಥ !!

ಮಿತ್ರರೊಬ್ಬರು ನೆನಪಿಸಿದಂತೇ ಯಾರೇ ಬೇಕಾದರೂ ಅನೇಕ ಮದುವೆಗಳನ್ನು [ಕದ್ದು-ಮುಚ್ಚಾದರೂ]ಮಾಡಿಕೊಳ್ಳಬಹುದು, ಆದರೆ ಕೃಷ್ಣನಂತೇ ಕಿರುಬೆರಳಲ್ಲಿ ಗೋವರ್ಧನವನ್ನೆತ್ತಿ ನಿಲ್ಲಲು ಸಾಧ್ಯವಿಲ್ಲವಲ್ಲ. ತನ್ನ ಅನೇಕ ಚಾತುರ್ಯಗಳಿಂದ ಜಗದ ಮನವಗೆದ್ದ ಗುರು ಶ್ರೀಕೃಷ್ಣ, ವ್ಯಾಸ-ಗಣೇಶರ ಮೂಲಕ ಗೀತೆಯನ್ನು ಬೋಧಿಸಿ ಜಗದ್ಗುರುವಾಗಿದ್ದಾನೆ. ಏಕದಿಂದ ಅನೇಕ-ಅನೇಕದಿಂದ ಏಕ ಎಂಬ ತಥ್ಯವನ್ನು, ಸತ್ಯವನ್ನು ಆಡಿತೋರಿಸಿದ, ಮಾಡಿತೋರಿಸಿದ ಗೊಲ್ಲನ ಪ್ರೇಮ ಸಿಗುವುದಾದರೆ ಗೋಪಿಕೆಯರೇ ಏಕೆ ಜಗದ ಜನರೆಲ್ಲಾ ಹಾತೊರೆಯುತ್ತಿರಲಿಲ್ಲವೇ? ಗೋಪಿಕೆಯೋರ್ವಳ ಅಂತರಂಗ ತನ್ನ ಸಖಿಯಲ್ಲಿ ಬಹಿರಂಗಗೊಂಡ ಬಗೆಯನ್ನು ಕವನ ತಮಗೆ ತಿಳಿಸುತ್ತದೆ, ನಮಸ್ಕಾರ]


ಕೇಳೆ ಸಖೀ ಕಮಲಮುಖೀ ಅಂತರಂಗವ |
ಬಾಳಕಾವ್ಯಕೆನಗೆ ಅವನೆ ಕವಿಯು ಪುಂಗವ ||ಪ||

ಗಾಳಿಯಲ್ಲಿ ಕೊಳಲಗಾನ ದೂರದಿಂದ ತೇಲಿಬಿಟ್ಟು 
ಹಾಳೆ ಹಾಳೆಯಲ್ಲು ಪದವ ಗೀಚಿದಂಥವ |
ಗೀಳು ಹಿಡಿಸಿ ಸರಿದುಹೋದ ಗಾವುದಗಳ ದೂರಕಷ್ಟು
ಗೋಳುಹುಯ್ದುಕೊಳುವನೆಲ್ಲಿ? ನಾಚಿದಂಥವ ||೧||

ಪಾಳಿಯೇನೊ ಎಂಬರೀತಿ ಕೊಳದಬುಡದಿ ಮರದೊಳಿದ್ದು
ದಾಳಿಯಿಟ್ಟು ಬಟ್ಟೆಗಳನು ಕದ್ದುಕೊಂಡವ |
ನೀಳಗೂದಲನ್ನು ಎಳೆದು ನೋವುನೋಡಿ ಮಜವಮೆದ್ದು
ಗೂಳಿ ಗುಟುರಿದಂತೆ ನಟಿಸಿ ಮುದ್ದನುಂಡವ ||೨||

ಕಾಳಸರ್ಪನನ್ನು ತುಳಿದು ಯಮುನೆ ಮಡುವಿನೊಳಗೆ ಬಿದ್ದು
ಕೇಳಿಯಾಡಿ ಕಾಳಗದೊಳು ಒದ್ದುನಿಂತವ |
ತಾಳಲಾರದಂಥ ಮಳೆಗೆ ಗೋವರ್ಧನವೆತ್ತಿ ಖುದ್ದು
ಬೀಳು ಹರಿಸಿ-ಇಂದ್ರಮೊಗದಿ ಗೆದ್ದುನಿಂತವ ||೩||   

ತಾಳೆಲಾರೆನಮ್ಮ ವಿರಹ ಬಾಳೆ-ಬೇಕು ಗೊಲ್ಲ ಸನಿಹ 
ಧೂಳು ಕವಿದ ರತುನದಂತದಾಯ್ತು ಜೀವನ |
ನಾಳೆನಾವದೆಲ್ಲೊ ಹುಡುಕಿ ಮಾಧವನನು ಸೇರೆ ಪುನಃ
ತಾಳೆಹಿಡಿದು ಜಾಡುನೋಡು ಜನುಮ ಪಾವನ ||೪||

------೦------

Tuesday, May 21, 2013

ಹೆಚ್ಚುತ್ತಿರುವ ಮೈಗಳ್ಳತನ ; ಕರಾಳ ಭವಿಷ್ಯದ ಅನಾವರಣ

ಚಿತ್ರಋಣ : ಅಂತರ್ಜಾಲ 
ಹೆಚ್ಚುತ್ತಿರುವ ಮೈಗಳ್ಳತನ ; ಕರಾಳ ಭವಿಷ್ಯದ ಅನಾವರಣ

ಬೆಂಗಳೂರಿನ ಔಷಧ ಅಂಗಡಿಯೊಂದರ ಮುಂದೆ ’ಕಂಪ್ಯೂಟರ್ ಗೊತ್ತಿರುವ ಕೌಂಟರ್ ಸೇಲ್ಸ್ ಬಾಯ್ಸ್ ಬೇಕಾಗಿದ್ದಾರೆ, ಸಂಬಳ 8,000/- ದಿಂದ 10,000/-’ ಎಂದು ಬರೆದಿತ್ತು. ಅಂಗಡಿಯಾತನಲ್ಲಿ ನಾನು ಕೇಳಿದೆ "ಹೇಗೆ ಅಷ್ಟೆಲ್ಲಾ ಸಂಬಳ ಕೊಡುತ್ತೀರಿ ನೀವು?" ಎಂದು. ಅದಕ್ಕಾತ ಉತ್ತರಿಸಿದ:"ನೋಡಿ ಸರ್, ಬಿಗ್ ಬಜಾರು, ಮಾಲು ಎಲ್ಲಾಕಡೆಗಳಲ್ಲೂ ಎಸ್.ಎಸ್.ಎಲ್.ಸಿಯಲ್ಲಿ ಫೇಲ್ ಆಗಿರುವ ಹುಡುಗರು ಕೆಲಸಕ್ಕೆ ಸೇರಿಕೊಂಡರೂ ಕನಿಷ್ಠ ಹತ್ತು ಸಾವಿರ ಕೊಡ್ತಾರೆ. ಹಾಗಿರುವಾಗ ನಮ್ಮಲ್ಲಿಗೆ ಕಮ್ಮಿ ಸಂಬಳಕ್ಕೆ ಹುಡುಗರು ಬರುತ್ತಾರೆಯೇ? ಹುಡುಗರು ಬೇಕೆಂದರೆ ಒಳ್ಳೇ ಸಂಬಳ ಕೊಡಲೇಬೇಕು. ನಾವೇ ಮಾಡಿಕೊಳ್ಳುವ ಹಾಗಿದ್ದರೆ ಹುಡುಗರ ಅಗತ್ಯ ಬೀಳೋದಿಲ್ಲ, ಕೆಲಸ ಜಾಸ್ತಿ ಇದೆ ಎಂದಾದರೆ ಆಗ ಹುಡುಗರನ್ನು ಹಾಕ್ಕೊಳ್ಳಬೇಕಾಗುತ್ತೆ." ಔಷಧದ ಅಂಗಡಿಯಲ್ಲಿ ಆ ಬೋರ್ಡು ವರ್ಷದಿಂದ ಹಾಗೇ ಇದೆ. "ಯಾಕೆ ಯಾರೂ ಬರಲಿಲ್ಲವೇ?" ಎಂದರೆ, "ಬರ್ತಾ ಇರ್ತಾರೆ ಹೋಗ್ತಾ ಇರ್ತಾರೆ, ಅದಕ್ಕೇ ಬೋರ್ಡನ್ನು ಹಾಗೇ ಇಟ್ಟಿದ್ದೇವೆ." ಎಂಬುತ್ತರ ದೊರೆಯಿತು.  

ಬೆಂಗಳೂರು ಮಹಾನಗರದ ಕೈಗಾರಿಕಾ ಪ್ರದೇಶಗಳಲ್ಲಿ ಪೀಣ್ಯ, ಜಿಗಣಿ ಇಂಥಲ್ಲೆಲ್ಲಾ, ಬಹುತೇಕ ವಸಾಹತುಗಳ ಮುಂದೆ ’ಕೆಲಸಗಾರರು ಬೇಕಾಗಿದ್ದಾರೆ’ ಎಂಬ ಫಲಕ ಕಳೆದೆರಡು ವರ್ಷದಿಂದ ಸದಾ ನೇತಾಡುತ್ತಲೇ ಇದೆ; ಆದರೆ ಅವರು ಕರೆಯಿತ್ತ ಕೆಲಸಕ್ಕೆ ತಕ್ಕುದಾದ ಕೆಲಸಿಗರ ಲಭ್ಯತೆ ಮಾತ್ರ ಕಾಣುತ್ತಿಲ್ಲ. ಜಾಗತೀಕರಣಕ್ಕೂ ಕೆಲಸಿಗರ ಕೊರತೆಗೂ ಸಂಬಂಧ ಇದೆ ಎಂಬುದನ್ನು ತೆಗೆದುಹಾಕುವಂತಿಲ್ಲ. ಹಳ್ಳಿಗಳಲ್ಲಿ ಕೃಷಿ ಕೆಲಸಕ್ಕಂತೂ ಜನವೇ ಇಲ್ಲ! ಇಂಚಿಂಚು ಕೆಲಸಕ್ಕೂ ತರಾವರಿ ಯಂತ್ರಗಳನ್ನು ಅವಲಂಬಿಸಬೇಕಾಗಿ ಬಂದಿದೆ, ಆದರೆ ಎಲ್ಲಾ ನಮೂನೆಯ ಯಂತ್ರಗಳನ್ನು ಕೊಳ್ಳಲು ಚಿಕ್ಕ ಹಿಡುವಳಿದಾರರಿಗೆ ಸಾಧ್ಯವಾಗುತ್ತಿಲ್ಲ, ಯಂತ್ರಗಳನ್ನು ಆ ಯಾ ಕೃಷಿ ಸ್ಥಳಗಳಿಗೆ ತೆಗೆದುಕೊಂಡು ಹೋಗಲು ಆಗದ ಪ್ರಾದೇಶಿಕ ತೊಂದರೆ ಅವರಲ್ಲೇ ಕೆಲವರು ಎದುರಿಸುತ್ತಿರುವ ಇನ್ನೊಂದು ಸಮಸ್ಯೆ.

ಹೆಂಗಸರ ಕೆಲಸಗಳನ್ನು ಸುಲಭವಾಗಿಸಲು ಬಂದ ಮಿಕ್ಸರ್, ಗ್ರ್ಐಂಡರ್ ಮೊದಲಾದ ಯಂತ್ರಗಳ ಬಳಕೆಯಿಂದಾಗಿ ಹೆಂಗಳೆಯರು ಹೆಚ್ಚುಸಮಯ ಟಿವಿ ಮುಂದೆ ಕುಳಿತು, ಪ್ರಯೋಜನಕ್ಕೆ ಬಾರದ ಧಾರಾವಾಹಿಗಳು, ಅಪರಾಧ ಪ್ರಕರಣಗಳನ್ನು ನೋಡುತ್ತಾ ಕಾಲಹರಣ ಮಾಡುತ್ತಿರುವುದರಿಂದ, ಶರೀರದಲ್ಲಿ ಅನಾವಶ್ಯಕ ಬೊಜ್ಜು ಬೆಳೆದು ಅದನ್ನು ಕರಗಿಸಲು ಹಣವ್ಯಯಿಸಿ ಜಿಮ್ ಮತ್ತು ಏರೋಬಿಕ್ಸ್ ಗಳಿಗೆ ಹೋಗುವುದು ನಗರಗಳಲ್ಲಿ ಕಂಡುಬಂದರೆ, ಗ್ರಾಮೀಣ ಜನತೆಯೂ ಈ ವಿಷಯದಲ್ಲಿ ಹಿಂದೆ ಬಿದ್ದಿಲ್ಲ ಎಂಬುದು ಸ್ವಲ್ಪ ಓಡಾಡಿ ನೋಡಿದಾಗ ಅನುಭವಕ್ಕೆ ಬರುತ್ತದೆ. ತಿಳಿಗೊಳಕ್ಕೆ ಕಲ್ಲುಗಳನ್ನೆಸೆದು ಶಬ್ದಗಳ ಗುಲ್ಲೆಬ್ಬಿಸಿದಂತೇ ಬೇಡದ ಧಾರಾವಾಹಿಗಳ ಕೆಟ್ಟ ಸಂದೇಶಗಳು ಮತ್ತು ಅಪರಾಧ ಪ್ರಕರಣಗಳ ಪುನಾರಚಿತ ದೃಶ್ಯಾವಳಿಗಳಿಂದ ಅವರ ಮನಸ್ಸೂ ಮಲಿನಗೊಳ್ಳುತ್ತಿದೆ, ಮನೆಮನೆಗಳಲ್ಲಿ ಕಿಂಚಿತ್ ಕ್ಷುಲ್ಲಕ ಕಾರಣಕ್ಕೂ ಜಗಳ-ವೈಮನಸ್ಸು ಆರಂಭವಾಗಿದೆ; ವಿನಾಕಾರಣ ವಿಚ್ಛೇದನಗಳೂ ಹೆಚ್ಚುತ್ತಿವೆ.          

’ಅಸಂಘಟಿತ ಕಾರ್ಮಿಕ ವಲಯ’ ಎಂಬ ಬುದ್ಧಿ ಜೀವಿಗಳ ಹೇಳಿಕೆ ಕೆಲವೊಮ್ಮೆ ವಿಪರ್ಯಾಸಕ್ಕೂ ಕಾರಣವಾಗುತ್ತದೆ. ಇಂದಿನ ಈ ದಿನಮಾನದಲ್ಲಿ ಯಾರೆಂದರೆ ಯಾರಿಗೂ ನಿರ್ವಹಿಸಬೇಕಾದ ಕೆಲಸಗಳ ಜವಾಬ್ದಾರಿಯೇ ಇಲ್ಲವಾಗಿದೆ. ಮಲ್ಲೇಶ್ವರದ ಹೋಟೆಲ್ ಮಾಲೀಕರೊಬ್ಬರು ಉಂಡುಟ್ಟು ಸುಖವಾಗಿದ್ದರು; ಆದರೆ ಈಗೀಗ ಅವರಿಗೆ ರಾತ್ರಿ ನಿದ್ದೆ ಬರುತ್ತಿಲ್ಲವಂತೆ! ಕಾರಣವಿಷ್ಟೇ: ಬೆಳಗಾದರೆ ಯಾವ ಅಡುಗೆಯವ ಮತ್ತು ಯಾವ ಕೆಲಸದ ಹುಡುಗ ಓಡಿಹೋದ ಎಂಬುದನ್ನು ನೋಡುತ್ತಲೇ ಇರಬೇಕಂತೆ. ಬರುವ ಗಿರಾಕಿಗಳಲ್ಲಿ ತಮ್ಮೊಳಗಿನ ತುಮುಲಗಳನ್ನು ಹೇಳಿಕೊಳ್ಳುವ ಹಾಗಿಲ್ಲ, ಗಿರಾಕಿಗಳಿಗೆ ಒದಗಿಸಬೇಕಾದ ತಿಂಡಿ-ತೀರ್ಥ ಪದಾರ್ಥಗಳಲ್ಲಿ ಜಾಸ್ತಿ ವ್ಯತ್ಯಯ ಮಾಡುವಂತಿಲ್ಲ. ಕೆಲಸದವರೇ ಇಲ್ಲದಿದ್ದರೆ ಯಜಮಾನರು ಎಷ್ಟೂ ಅಂತ ಒಬ್ಬರೇ ನಿಭಾಯಿಸಲು ಸಾಧ್ಯ? ಈ ಕಥೆ ಕೇವಲ ಮಲ್ಲೇಶ್ವರದ ಹೋಟೆಲ್ಲಿಗೆ ಸಂಬಂಧಿಸಿದ್ದಲ್ಲ, ಎಲ್ಲೇ ಹೋಗಿ, ಬಹುತೇಕ ಎಲ್ಲಾ ಹೋಟೆಲ್ ಮಾಲೀಕರು ಅನುಭವಿಸುತ್ತಿರುವುದೂ ಇದನ್ನೇ.

ತಾವು ಕಷ್ಟಪಟ್ಟಿದ್ದು ಸಾಕು, ತಮ್ಮ ಮಕ್ಕಳಿಗೆ ತಮ್ಮ ಪಾಡು ಬರುವುದು ಬೇಡ ಎಂದುಕೊಳ್ಳುತ್ತಿದ್ದ ಎಲ್ಲಾ ರಂಗಗಳ, ಎಲ್ಲಾ ವಲಯಗಳ ಕೆಲಸಿಗ ಪಾಲಕರು ಮಕ್ಕಳಿಗೆ ವಿದ್ಯೆಯನ್ನೇನೋ ಕೊಡಿಸಿದರು, ಆದರೆ ಉತ್ತಮ ಸಂಸ್ಕಾರವನ್ನು ಕೊಡಲು ಸಾಧ್ಯವಾಗಲಿಲ್ಲ. ಬೆಳೆದ ಮಕ್ಕಳು ಉನ್ನತ ಔದ್ಯೋಗಿಕ ರಂಗದಲ್ಲಿ ತೊಡಗಿಕೊಂಡರೂ ಸಂಬಳಕೊಡುವ ಕಂಪನಿಗೆಂದೂ ನಿಷ್ಠರಾಗಿ ನಡೆದುಕೊಳ್ಳಲು ಮುಂದಾಗುತ್ತಿಲ್ಲ. ಕೆಲಸ ಕೊಡುವ ಮಾಲೀಕರ ವೃತ್ತಿ-ಉತ್ಪನ್ನ ಸಂಬಂಧಿತ ಸಮಸ್ಯೆಗಳಿಗೆ ಸ್ಪಂದಿಸುವ ಮಾನವೀಯತೆ ಕೆಲಸಗಾರರಲ್ಲಿ ಕಂಡುಬರುತ್ತಿಲ್ಲ. ದುಡಿಮೆ ಕೇವಲ ಸಂಬಳಕ್ಕಾಗಿದೆಯೇ ಹೊರತು ದುಡಿಮೆಯೊಂದು ಪವಿತ್ರ ಕೆಲಸ ಎಂಬ ಭಾವನೆ ಎಂದೋ ಹೊರಟುಹೋಗಿದೆ. ವರ್ಷಗಳಕಾಲ ಉತ್ತಮ ಸಂಬಳವನ್ನೇ ಪಡೆದರೂ, ಇನ್ನೊಂದು ಜಾಗದಲ್ಲಿ ನೂರೋ ಇನ್ನೂರೋ ರೂಪಾಯಿ ಜಾಸ್ತಿ ದೊರೆಯುವುದಾದರೆ ಅಲ್ಲಿಗೇ ಹಾರುವ ಸ್ವಭಾವ ಇಂದಿನ ಯುವ ಕೆಲಸಿಗರದು. ಇಂತಿರುವ ದಿನಗಳಲ್ಲಿ ಕೆಲಸದಲ್ಲಿ ಗುಣಮಟ್ಟವನ್ನು ಬಯಸುವುದು ಅಥವಾ ಕಾಣುವುದು ಸಾಧ್ಯವೇ?

ಅಸಂಘಟಿತ ವಲಯದ ಮಕ್ಕಳೆಲ್ಲಾ ತಮ್ಮ ಹಿತಾರ್ಥವಾಗಿ-ತಮ್ಮ ಸುಖಾರ್ಥವಾಗಿ, ತಮ್ಮ ನೇರಕ್ಕೇ ನಡೆಯುತ್ತಿರುವಾಗ, ಅವರನ್ನು ಹೇಗಾದರೂ ಉಳಿಸಿಕೊಳ್ಳುವ ಪ್ರಯತ್ನ ನಡೆಸುತ್ತಿರುವವರು ಕಂಪನಿಗಳ/ಕೃಷಿಭೂಮಿಗಳ/ಉದ್ಯಮಗಳ ಮಾಲೀಕರು. ಕಾರ್ಮಿಕರು/ಕೆಲಸಿಗರು ಇಲ್ಲದೇ ವ್ಯವಹಾರ ನಡೆಯುವುದಿಲ್ಲ; ಕೆಲಸಿಗರು ಇರಬೇಕೆಂದರೆ ಅವರು ಮಾಡುವ ಕೆಲಸವನ್ನು ಅದು ಹೇಗೇ ಇದ್ದರೂ ಉಸಿರೆತ್ತದೇ ಒಪ್ಪಿಕೊಳ್ಳಬೇಕಾದ ಪ್ರಸಂಗವೂ ತಪ್ಪುತ್ತಿಲ್ಲ. ತಮ್ಮ ತೊಡಗಿಕೊಳ್ಳುವಿಕೆಯನ್ನು ಬಯಸುವ, ಬಳಸುವ ಯಜಮಾನರ ಅನಿವಾರ್ಯತೆಯನ್ನು ಮನಗಂಡ ಯುವ ಕೆಲಸಿಗರು, ಅದರ ದುರುಪಯೋಗ ಪಡಿಸಿಕೊಳ್ಳುತ್ತಿರುವುದಂತೂ ಗ್ಯಾರಂಟಿ. ಇವತ್ತು ಇಲ್ಲಿ, ವಾರದಲ್ಲೋ ತಿಂಗಳಲ್ಲೋ ಇನ್ನೊಂದೆಡೆಗೆ, ಆ ನಂತರ ಮತ್ತೆಲ್ಲೋ ಹೀಗೇ ಕೆಲಸವನ್ನು ಬದಲಿಸುತ್ತಲೇ ಇರುವುದರಿಂದ ಮಾಲೀಕ-ಕೆಲಸಿಗರ ಪ್ರೀತಿಯ ಸಂಕೋಲೆ ಇಂದು ಬದುಕಿ ಉಳಿದಿಲ್ಲ. ಕಾಯ್ದೆ ಬದ್ಧವಾಗಿ ತಮಗೆ ಸಿಗಬೇಕಾದುದನ್ನು ಹಠಮಾಡಿಯಾದರೂ ಪಡೆಯುವ ಕೆಲಸಿಗರು ಯಜಮಾನರ ಮನಸ್ಸನ್ನು ಗೆಲ್ಲಲಂತೂ ಸಾಧ್ಯವಾಗುತ್ತಿಲ್ಲ.

ಇನ್ನೊಂದು ಅನಾಹುತಕಾರೀ ಬೆಳವಣಿಗೆಯೆಂದರೆ, ಕೆಲವು ರಂಗಗಳಲ್ಲಿ ಕೆಲಸಗಳ ಗುಣಮಟ್ಟ ಪಾತಾಳಕ್ಕೆ ಇಳಿಯುತ್ತಿದೆ. ’ಊರಿಗೊಬ್ಳೇ ಪದ್ಮಾವತಿ’ ಎಂಬ ರೀತಿಯಲ್ಲಿ ತಮ್ಮನ್ನು ತೋರಿಸಿಕೊಳ್ಳುತ್ತಿರುವ ಕೆಲಸಿಗರಲ್ಲಿ, ಮಾಡುವ ಕೆಲಸಗಳ ಬಗ್ಗೆ ನೈಪುಣ್ಯ ಇಲ್ಲವಾಗುತ್ತಿದೆ. ’ಯಾರೂ ಸಿಗುತ್ತಿಲ್ಲ’ ಎಂಬ ಅಂಜಿಕೆಯಿಂದ, ಸಿಕ್ಕವರ ಮನಸ್ಸಿಗೆ ವಿರೋಧ ಉಂಟುಮಾಡಿದರೆ ಅವರೂ ಓಡಿಹೋದಾರೆಂಬ ಅಳುಕಿನಿಂದ, ಕೆಲಸಿಗರ ಕಳಪೆ ಕೆಲಸಗಳನ್ನೂ ಮಾಲೀಕರು ಒಪ್ಪಿಕೊಳ್ಳುವ ಸ್ಥಿತಿ ಬಂದೊದಗಿದೆ. ನಾವೆಲ್ಲಾ ಚಿಕ್ಕವರಿದ್ದಾಗ ಆಗಷ್ಟೇ ಪ್ಲಾಸ್ಟಿಕ್ ಉಪಕರಣಗಳು ಮಾರುಕಟ್ಟೆಗೆ ಕಾಲಿಟ್ಟಿದ್ದರೂ ಮರದ ಬಾಚಣಿಗೆಗಳು ಸಿಗುತ್ತಿದ್ದವು; ಬಾಚಣಿಗೆಗಳಿಗೆ ಸಿಗುವ ಪ್ರತಿಫಲ ಎಷ್ಟು ಎಂಬುದನ್ನೇ ಯೋಚಿಸುತ್ತಾ ಅವುಗಳನ್ನು ಬೇಕಾಬಿಟ್ಟಿ ಎಂಬರ್ಥದಲ್ಲಿ ತಯಾರಿಸದೇ ಬಹಳ ನಾಜೂಕಾಗಿ ಸಿದ್ಧಪಡಿಸುತ್ತಿದ್ದುದು ಗಮನಕ್ಕೆ ಬರುತ್ತದೆ. ಗಡಿಗೆಮಾಡುವ ಕುಂಬಾರನಿಗೆ ಗಡಿಗೆ-ದಂಧೆ ತನ್ನ ಒಡಲನ್ನು ತುಂಬುತ್ತದೆ ಎಂಬುದು ಸ್ಪಷ್ಟವಿತ್ತಷ್ಟೆ; ಹೆಚ್ಚಿನದನ್ನು ಆತ ಅಪೇಕ್ಷಿಸಲಿಲ್ಲ.

ಜಾಗತೀಕರಣದಿಂದ ಮರದ ಬಾಚಣಿಗೆ, ಮಣ್ಣಿನಗಡಿಗೆ ಮಾಡುವ ಕುಲಕಸುಬುದಾರರಿಗೆ ಹೊಡೆತ ಬಿದ್ದಿದೆ ಎಂಬುದು ಒಪ್ಪಲೇಬೇಕಾದ ವಿಷಯ. ಆದರೆ ಜಾಗತೀಕರಣವೇ ಎಲ್ಲಾ ರಂಗಗಳನ್ನೂ ಹಾಳುಗೆಡವಿತು ಎಂಬುದನ್ನು ಒಪ್ಪಲು ಬರುವುದಿಲ್ಲ. ಹಾಗಂತ ಜಾಗತೀಕರಣ ಭಾರತದ ಕೆಲಸಗಾರರಮೇಲೆ ಪರಿಣಾಮ ಬೀರುತ್ತಾ, ಬಹುರಾಷ್ಟ್ರೀಯ ಕಂಪನಿಗಳು, ವಸಾಹತುಗಳು ಕೆಲಸಗಾರರನ್ನು ತಮ್ಮೆಡೆ ಸೆಳೆದವು. ಅವರು ಕೊಡುವ ಕೆಲಸ ಶಾಶ್ವತವಲ್ಲ ಎಂಬುದನ್ನು ಗಣನೆಗೆ ತೆಗೆದುಕೊಳ್ಳಲಾರದ ಜನ ಅವರಲ್ಲಿನ ಕೆಲಸಕ್ಕೆ ಮನಸೋತರು. ನಮ್ಮಲ್ಲಿನ ಕೆಲಸಗಾರರಿಂದ ತಮ್ಮ ಕೆಲಸಗಳನ್ನು ಪೂರೈಸಿಕೊಂಡು, ನಮ್ಮಲ್ಲಿನ ಮಾರುಕಟ್ಟೆಯಲ್ಲಿ ಸಿಂಹಪಾಲನ್ನು ತಾವೇ ಮೆದ್ದುಕೊಂಡ ವಿದೇಶಿಗರು, ದೇಶೀಯ ಕುಲಕಸುಬುಗಳಿಗೆ, ವ್ಯವಸಾಯೋತ್ಪನ್ನಗಳಿಗೆ, ಕೈಗಾರಿಕೋತ್ಪನ್ನಗಳಿಗೆ ಹಲವು ವಿಧದಲ್ಲಿ ಪರೋಕ್ಷವಾಗಿಯೂ ಮತ್ತು ಕೆಲವು ವಿಧದಲ್ಲಿ ನೇರವಾಗಿಯೂ ದುಷ್ಪರಿಣಾಮ ಬೀರಿದ್ದಾರೆ ಎಂಬುದು ಕನ್ನಡಿಯ ಪ್ರತಿಬಿಂಬದಷ್ಟೇ ಢಾಳಾಗಿ ಕಾಣುತ್ತಿರುವುದು ಖಚಿತ. 

ಮೇಲಾಗಿ ವಿದೇಶೀ ಕಂಪನಿಗಳತ್ತ ಬೆರಳು ತೋರಿಸುತ್ತಾ, ಸ್ವದೇಶೀ ಕಂಪನಿಗಳ/ಉದ್ಯಮಿಗಳ/ಕೃಷಿಭೂಮಾಲೀಕರ ಗಮನವನ್ನು ಅತ್ತಕಡೆ ಸೆಳೆದು, ನೈಪುಣ್ಯ ಇರುವ ಮಂದಿ ಹೆಚ್ಚಿನ ಸಂಬಳ ಕೇಳುವುದರ ಜೊತೆಗೆ,’ಕೆಲಸಗಾರರು ಬೇಕೆಂಬ ಬೇಡಿಕೆ ಹೆಚ್ಚಿದೆ’ ಎಂಬ ಊಹಾಪೋಹದಿಂದ    ಎಲ್ಲೆಡೆಗೂ ಅಲ್ಪಸ್ವಲ್ಪ ಕೆಲಸ ಗೊತ್ತಿದ್ದವರೂ ತಮ್ಮ ವೈಯ್ಯಕ್ತಿಕ ಬೇಡಿಕೆಗಳನ್ನು ಹೆಚ್ಚಿಸಿಕೊಂಡರು. ಅದರ ಪರಿಣಾಮವಾಗಿ ಕೆಲಸದ ಗಂಧಗಾಳಿಯೇ ಇಲ್ಲದ ಇನ್ನುಳಿದ ಜನ ಕೂಡ ಹೂವಿನ ಜೊತೆಗೆ ನಾರು ಕೂಡ ಸಾಗಿಹೋದಂತೇ ಕೆಲಸಗಳಿಗೆ ಸೇರಿಕೊಂಡರು. ಮಾಡುವ ಕೆಲಸಗಳಲ್ಲಿ ಸಾಮೂಹಿಕ ಕೆಲಸಗಳು ಕೆಲವಾದರೆ ಏಕವ್ಯಕ್ತಿ ಕೇಂದ್ರೀಕೃತ ಕೆಲಸಗಳು ಹಲವು. ಏಕವ್ಯಕ್ತಿ ಕೇಂದ್ರಿತ ಕೆಲಸಗಳಿಗೆ ಕೆಲಸಗಾರರು ಸಿಗುವುದು ದುರ್ಲಭವಾಯ್ತು. ರಸ್ತೆ-ಸೇತುವೆಗಳ ನಿರ್ಮಾಣ, ಅರಣ್ಯ ಇಲಾಖೆಯ ಕೆಲಸಗಳು ಮೊದಲಾದ ಸಾಮೂಹಿಕ ಕೆಲಸಗಳಲ್ಲಿ ಕೆಲಸ ಕಡಿಮೆ ಮತ್ತು ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸವನ್ನೇ ಮಾಡದಿದ್ದರೂ ಮಾಡಿದಂತೇ ತೋರಿಸಿದರೆ ಸಂಬಳ ಸಿಗುವುದರಿಂದ, ಅಸಂಘಟಿತ ವಲಯದ ಹಲವುಮಂದಿ ಯುವಕರು ಅವುಗಳನ್ನು ಆತುಕೊಂಡರು.

ದಿನಗಳೆದಂತೇ ಯುವಜನಾಂಗಕ್ಕೆ ಮಾಡುವ ಕೆಲಸಕ್ಕಿಂತಾ ಆಡುವ ಕೆಲಸಗಳತ್ತ ದೃಷ್ಟಿ ಹರಿಯಿತು. ಆಡುತ್ತಾ ಆಡುತ್ತಾ 8 ಗಂಟೆ ಕಾರ್ಯ ನಿರ್ವಹಿಸಿದಂತೇ ತೋರಿಸಿದರೆ ಸಾಕಾಗುವ ಕೆಲಸಗಳತ್ತ ಮನಸ್ಸು ಹರಿಯಿತು. ಹೀಗಾಗಿ ಕೃಷಿ ಅಥವಾ ಕೈಗಾರಿಕಾ ವಲಯಗಳಲ್ಲಿ ಮೈಮುರಿದು ದುಡಿಯುವ ಜವಾಬ್ದಾರಿ ಹುದ್ದೆಗಳಿಗಿಂತಾ ಆಡುತ್ತಾ ಮಾಡುವ ಕೆಲಸಗಳಿಗೆ ಯುವಕರು ಆದ್ಯತೆ ನೀಡಿದರು. ಅದರಲ್ಲೂ ಯುವಕರು ಮತ್ತು ಯುವತಿಯರು ಒಟ್ಟಾಗಿ ಆಡುತ್ತಾ ಮಾಡುವ ಕೆಲಸಗಳನ್ನು ಯುವಕರು ತಮ್ಮ ಗುರಿಯಾಗಿಸಿಕೊಂಡರು; ಎಂಜಾಯ್ ಮಾಡಿದರು. ಪರಿಣಾಮವಾಗಿ ವೃತ್ತಿಪರ ಕೆಲಸಗಳಲ್ಲಿನ ನೈಪುಣ್ಯ ಕಳೆಗುಂದುತ್ತಾ ನಡೆದು ಕೆಲಸಗಳು ಒಟ್ಟಾರೆ ಹೇಗೋ ನಡೆಯುತ್ತಿವೆ; ಕೆಲಸ ಕೊಡುವವರು ಗೊಣಗುತ್ತಲೇ ಕೆಲಸವನ್ನು ಮಾಡಿಸಿಕೊಳ್ಳುತ್ತಿದ್ದಾರೆ.  ಇದೇ ಕಾರಣದಿಂದ ಇಂದು ಶೆಟ್ಟರ ಅಂಗಡಿಯಲ್ಲಿ ಸಾಮಾನು ಕೊಡಲೂ ಹುಡುಗರಿಲ್ಲ, ಭಟ್ಟರ ಗದ್ದೆಯಲ್ಲಿ ನಾಟಿಮಾಡಲೂ ಜನರಿಲ್ಲ!

ಕೆಲವುಕಡೆ ಜನಜೀವನದಲ್ಲಿ, ಹಾಸಿಗೆಗಿಂತಾ ಉದ್ದ ಕಾಲುಚಾಚಿದ ಪರಿಣಾಮವಾಗಿಯೋ, ಪ್ರಕೃತಿ ವೈಪರೀತ್ಯದಿಂದ ಬೆಳೆಯಾಗದುದರಿಂದಲೋ ಅಥವಾ ರಫ್ತು ವ್ಯವಹಾರ ಕಂಗೆಟ್ಟುಹೋಗಿರುವುದರಿಂದಲೋ, ತಮ್ಮ ಹಿರಿಯರು ಮಾಡಿಕೊಂಡ ಸಾಲವನ್ನು ಕಂಡ ಯುವಜನಾಂಗಕ್ಕೆ, ಕಷ್ಟದ ಕೆಲಸಗಳು ಮತ್ತು ಫಲಾಫಲದ ಸಾಧ್ಯಾಸಾಧ್ಯತೆಗಳು ಸಿಂಹಸ್ವಪ್ನವಾಗಿ ಕಾಡಿದ್ದರಿಂದ, ಹಿರಿಯರು ಮಾಡುತ್ತಿದ್ದ ಕೆಲಸಗಳಲ್ಲಿ ಕಷ್ಟವೇ ಹೆಚ್ಚೆನಿಸಿ, ದೀರ್ಘಕಾಲೀನ ಉತ್ತಮ ಪ್ರತಿಫಲದ ಇತಿಹಾಸವನ್ನು ಅವರು ಮರೆತು, ಕ್ಷಣಿಕ ಪ್ರತಿಫಲವನ್ನೇ ಬಯಸುತ್ತಾ ಸಾಂಪ್ರದಾಯಿಕ ಕುಲಕಸುಬು ಮತ್ತು ಕೃಷಿ, ಕೈಗಾರಿಕೆಗಳನ್ನು ಅವಗಣಿಸಿದರು. ಜಾಗತಿಕ ಮಾರುಕಟ್ಟೆಯಲ್ಲಿ ಈಜಾಡುತ್ತಾ ಬಂದ ವಿದೇಶೀ ಕಂಪನಿಗಳ ಪೈಪೋಟಿ ಅತಿಯಾಗಿ, ದೇಶೀಯ ಕೃಷಿ-ವ್ಯವಸಾಯ-ಕೈಗಾರಿಕೆಗಳು ಅವುಗಳಿಗೆ ಸಡ್ಡುಹೊಡೆದು ನಿಲ್ಲುವುದು ಕಷ್ಟವಾಗುತ್ತಿದೆ. ಹಳ್ಳಿಗಳಲ್ಲಿ ಕೃಷಿ ಭೂಮಿಗಳಲ್ಲಿ ಕೆಲಸಕ್ಕೆ ಜನರಿಲ್ಲ, ಕೈಗಾರಿಕೆಗಳಲ್ಲಿ ಕಾರ್ಮಿಕರಿಲ್ಲದ ಕೊರತೆ ನೀಗುತ್ತಿಲ್ಲ, ದೇಶೀಯ ಉದ್ಯಮಗಳಲ್ಲೂ ಕೆಲಸಗಾರರ ಅಭಾವ ಬಹಳವಾಗಿದೆ.        

ಸಾಲದ್ದಕ್ಕೆ, ಅದಾಗಲೇ ಇದ್ದ ಯಮಯಾತನೆಯ ಹುಲಿಹುಣ್ಣುಗಳಮೇಲೆ ಬರೆ ಎಳೆದಂತೇ, ಸರಕಾರ ಕೊಡಮಾಡುವ ಒಂದು ರೂಪಾಯಿಗೆ ಕೆಜಿ ಅಕ್ಕಿಯಂತಹ ಸೌಲಭ್ಯಗಳಿಂದ ಹಳ್ಳಿಗಳಲ್ಲಿ ಯುವಜನತೆಯಲ್ಲಿ ಮೈಗಳ್ಳತನ ವಿಪರೀತ ಹೆಚ್ಚಿ, ವಿದೇಶೀ ಉತ್ಪನ್ನಗಳನ್ನೇ ದೇಶವಾಸಿಗಳು ಅವಲಂಬಿಸಬೇಕಾದ ಅನಿವಾರ್ಯತೆ ಬಂದರೂ ಅಚ್ಚರಿಯೆನಿಸುವುದಿಲ್ಲ, ವಿಶೇಷವೂ ಎನಿಸುವುದಿಲ್ಲ. ಮುಂಬರುವ ಲೋಕಸಭೆಯ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು, ’ಬಡಜನರ, ದೀನದಲಿತರ ಕಣ್ಣೀರೊರೆಸುವ ಯೋಜನೆ’ ಎಂಬ ಸ್ಲೋಗನ್ ಅಡಿಯಲ್ಲಿ ಪಕ್ಷವೊಂದು ಮಾಡುತ್ತಿರುವ ಇಂಥಾ ’ಘನಂದಾರಿ’ ಕೆಲಸಗಳಿಂದ ಯುವಜನತೆ ಕೆಲಸ ಮಾಡುವುದನ್ನೇ ಮರೆಯುತ್ತಾರೆ; ಪರಮ ಆಳಸಿಗಳಾಗುತ್ತಾರೆ. ಕುಂತಲ್ಲೇ 30 ಕೆಜಿ ಅಕ್ಕಿ ತಿಂಗಳಿಗೆ ದೊರೆಯುವಾಗ ಕೆಲಸವಾದರೂ ಏಕೆ ಬೇಕು? ಅಲ್ಲವೇ? ಅದರಲ್ಲಂತೂ ಹಡಾಲೆದ್ದುಹೋದ ರೇಷನ್ ಕಾರ್ಡ್ ವ್ಯವಸ್ಥೆಯಲ್ಲಿ, ಅನೇಕ ಹಳ್ಳಿಗಳಲ್ಲಿ/ಪಟ್ಟಣಗಳಲ್ಲಿ ಮನೆಗಳ ಪ್ರತಿಯೊಬ್ಬ ಸದಸ್ಯನೂ ಪ್ರತ್ಯೇಕ ಪ್ರತ್ಯೇಕ ಬೇನಾಮಿ ಬಿ.ಪಿಎಲ್. ಕಾರ್ಡನ್ನು ಹೊಂದಿರುವುದು ಕಂಡುಬರುತ್ತಿದೆ.

’ಕುಳಿತು ಉಂಡರೆ ಕುಡಿಕೆ ಹೊನ್ನು ಸಾಲದು’ ಎಂಬ ಗಾದೆಯನ್ನು ನಮ್ಮ ಪೂರ್ವಜ-ಪ್ರಾಜ್ಞರು ಮಾಡಿಟ್ಟು ಹೋದರು, ಅದರಂತೇ ರೂಪಾಯಿಗೆ ಕೆಜಿ ಅಕ್ಕಿ ಕೊಡುವ ಅಥವಾ ಪಡೆಯುವ ಕಾರ್ಯ ಎಲ್ಲಿಯವರೆಗೆ ಶಾಶ್ವತವಾಗಿದ್ದೀತು? ಅಂತಹ ಯೋಜನೆಗಳನ್ನು ಜಾರಿಯಲ್ಲಿಡಲು ವಿದೇಶೀಯ ಮೂಲಗಳಿಂದ ಸರಕಾರ ಪಡೆಯುವ ಸಾಲದಿಂದ ಭಾರತ ಎಂದಿಗೆ ಮುಕ್ತವಾದೀತು? ಅಥವಾ ಸಾಲದ ಶೂಲ ದೇಶದ ಬೆನ್ನೆಲುಬಿಗೇ ನಾಟಿ ದೇಶ ಮರಳಿ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಸ್ಥಿತಿ ಬಂದೀತೇ? ಗೊತ್ತಿಲ್ಲ. ಆಳಸಿಗಳಾಗಿ ಬದಲಾಗುವ ಜನರನ್ನು ಮತ್ತೆ ಕೆಲಸಗಳತ್ತ ಗಮನ ಹರಿಸುವಂತೇ ಮಾಡುವುದು ಸರಕಾರಕ್ಕೆ ಸಾಧ್ಯವೇ? ಉತ್ತರವಿಲ್ಲ. ನಮ್ಮ ದುಡಿಮೆಯನ್ನು ನಾವು ಮಾಡಿಕೊಳ್ಳಬೇಕು, ನಮ್ಮ ಅನ್ನವನ್ನು ನಾವೇ ಸಂಪಾದಿಸಿಕೊಳ್ಳಬೇಕು ಎಂಬ ಭಾರತೀಯ ಮೂಲ ಸಂಸ್ಕೃತಿಯ ಸಂದೇಶವನ್ನೇ ಕಡೆಗಣಿಸಿ, ದೇಶೋದ್ಧಾರದ ನೆಪವೊಡ್ಡಿ, ಕೆಲಸಿಗರಲ್ಲಿ ಮೈಗಳ್ಳತನ ಹೆಚ್ಚಿಸುತ್ತಿರುವ ಆಳರಸರಿಗೆ, ಭವಿಷ್ಯದ ದಿನಗಳ ದೂರಾಲೋಚನೆ ಇಲ್ಲವೆಂಬುದಂತೂ ಸ್ಪಷ್ಟ; ಇದೇ ಗತಿಯ-ಇದೇ ಸ್ಥಿತಿಯ-ಇದೇ ರೀತಿಯ ಯೋಜನೆಗಳು ಮುಂದರಿದರೆ, ದೇಶ ಮುಂದೊಮ್ಮೆ ಅನುಭವಿಸಲಿಕ್ಕಿದೆ: ತುಂಬಲಾರದ ನಷ್ಟ !       

Monday, May 13, 2013

ಕಪ್ಪೆ ಶಂಕರ ಮತ್ತೆ ಶಂಕರ ಮತ್ತು ನನ್ನ ಬಾಲ್ಯ

ಚಿತ್ರಗಳ ಕೃಪೆ : ಶೃಂಗೇರಿ ಡಾಟ್ ನೆಟ್ 
ಕಪ್ಪೆ ಶಂಕರ ಮತ್ತೆ ಶಂಕರ ಮತ್ತು ನನ್ನ ಬಾಲ್ಯ

ಮನೆಯ ಪಕ್ಕದಲ್ಲಿ ಬೆಕ್ಕು ಮರಿಹಾಕಿತ್ತು. ಅದರಲ್ಲೇನು ವಿಶೇಷವೆಂದು ನೀವು ಕೇಳುವ ಮುನ್ನ ಉತ್ತರ ರೆಡಿಯಾಗಿದೆ, ಬೆಕ್ಕು, ನಾಯಿ ಅಥವಾ ಯಾವುದೇ ಪ್ರಾಣಿ/ಜೀವಿ ಮರಿಹಾಕುವುದು ಸಹಜವಷ್ಟೆ. ಆದರೆ ಇದು ಮರಿಹಾಕುವ ವಿಷಯಕ್ಕಿಂತ ಮರಿಗಳನ್ನು ಜೋಪಾನಮಾಡಿ ಬೆಳೆಸುವ, ಲಾಲನೆಪಾಲನೆ ಮಾಡುತ್ತ ಪೋಷಿಸುವ ಅಮ್ಮನ ಮುದ್ದಿನ ಬಗೆಗಿನ ಮಾತು. ಬೆಕ್ಕು ಮರಿಹಾಕುವಾಗಲೇ ಹುಟ್ಟಿದ ಮರಿಗಳಿಗೆ ಯಾವುದೇ ಬಾಧೆ ತಟ್ಟದಂತೇ ಸೂಕ್ತ ಜಾಗವನ್ನು ಆಯ್ದುಕೊಳ್ಳುತ್ತದೆ, ಬಹುಶಃ ಎಲ್ಲಾ ಪ್ರಾಣಿಗಳೂ ಕೂಡ ಆದಷ್ಟು ಹಾಗೇ ಮಾಡುತ್ತವೆ. ಮರಿಗಳು ಹೊರಬಂದಾಗ ಕಣ್ಣನ್ನೂ ತೆರೆಯದೇ ಕೂಗಲಾರಂಭಿಸುತ್ತವೆ; ಕಿರುಚುವುದು ಅವುಗಳ ಬೇಡಿಕೆಯನ್ನು ಮಂಡಿಸಲಿಕ್ಕೆ. ಹೊಟ್ಟೆ ಹಸಿಯುತ್ತದೆ ಆದರೆ ಏನು ಮಾಡಬೇಕೆಂಬುದು ತಿಳಿಯುವುದಿಲ್ಲ ಎಂದಾದಾಗ ಮರಿಗಳು ಲಬೋ ಲಬೋ ಎಂದು ಕಿರುಚುವುದು ವಾಡಿಕೆ. ಕೆಲವೊಮ್ಮೆ ಬೇರೇ ತೊಂದರೆಗಳಲ್ಲೂ ಹಾಗೆ ಕೂಗಿಕೊಳ್ಳಬಹುದು. ಹೆತ್ತ ಮರಿಗಳನ್ನು ಕಣ್ಣೆವೆ ಮುಚ್ಚದೇ ಕಾಪಾಡುವುದು ಅಮ್ಮನ ಜವಾಬ್ದಾರಿ. ಅದು ಅನೂಹ್ಯ ಅನನ್ಯ ಕರುಳ ಮಿಡಿತ, ಹೃದಯದ ತುಡಿತ. ಮರಿಗಳಿಲ್ಲದೇ ಅಮ್ಮ ಇಲ್ಲ, ಅಮ್ಮನಿಲ್ಲದೇ ಮರಿಗಳಿಲ್ಲ ಎಂಬಂಥಾ ಸ್ಥಿತಿ. ಹಾರುವ ಗಿಡುಗ-ಹದ್ದುಗಳ ಕಣ್ಣಿಗೆ ಬೀಳದಂತೇ, ಬಿಸಿಲು-ಮಳೆ ಮೈಗೆ ಸೋಕದಂತೇ ಎಳೆಯ ಕಂದಮ್ಮಗಳನ್ನು ಹಚ್ಚಗೆ ಬೆಚ್ಚಗೆ ಸುರಕ್ಷಿತವಾಗಿರುವಂತೇ ಪಾಲಿಸುವುದು ಅಮ್ಮನಿಗಿರುವ ದೈವೀದತ್ತ ಕಲೆ.  

ಮೊನ್ನೆ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆಬಂದಾಗ ನನ್ನ ಬಾಲ್ಯದ ನೆನಪಾಯ್ತು. ಮಳೆಗಾಲದ ಆರಂಭದಲ್ಲಿ ಕರಾವಳಿಯಲ್ಲಿ ಗುಡುಗಿನ ಅಬ್ಬರ ಸದಾ ಇರುತ್ತದೆ. ಕಿವಿಗಡಚಿಕ್ಕುವ ’ಗುಡುಗುಮ್ಮನ’ ಸದ್ದಿಗೆ ಎಳೆಯ ಮಕ್ಕಳಾದ ನಾವೆಲ್ಲಾ ಬಹಳ ಹೆದರಿಕೊಳ್ಳುತ್ತಿದ್ದುದುಂಟು. ಕೋಲ್ಮಿಂಚು ನೋಡಲು ಹಿರಿಯರು ಹೊರಗೆ ಕರೆದರೂ ಕೂಡ, ಗುಡುಗುಮ್ಮ ಬರುವ ಸಂಭವನೀಯತೆಗೆ ನಮ್ಮ ಬಯಕೆ ಬತ್ತಿಹೋಗುತ್ತಿತ್ತು. ರಾತ್ರಿಯಲ್ಲಿ ನಾನು ಮಲಗುತ್ತಿದ್ದುದು ಅಜ್ಜ-ಅಜ್ಜಿಯರ ಮಧ್ಯೆಯಲ್ಲಿ. ಅದೊಂದು ಸಂತೃಪ್ತ ಅವಿಭಕ್ತ ಕುಟುಂಬ ಜೀವನ. ಪ್ರಾಯಶಃ ಇಂದಿನ ದಿನಮಾನದಲ್ಲಿ ಎಲ್ಲೂ ಕಂಡುಬರುವುದು ಅಪರೂಪ. ರಾತ್ರಿ ಏರೇರ್ರಿ ಅಬ್ಬರಿಸುವ ಗುಡುಗುಮ್ಮನ ಸದ್ದಿಗೆ ಎಚ್ಚರಗೊಳ್ಳುತ್ತಿದ್ದರೆ, ಅಜ್ಜ-ಅಜ್ಜಿ ಯಾರಾದರೊಬ್ಬರು ತಮ್ಮ ಹೊದಿಕೆಯಲ್ಲಿ ನನ್ನನ್ನು ಸೇರಿಸಿಕೊಂಡು ಸಂಭಾಳಿಸುತ್ತಿದ್ದರು; ಅವರ ಬೆಚ್ಚನೆಯ ಹೊದಿಕೆಯಲ್ಲಿ ರಕ್ಷಣೆ ಸಿಕ್ಕ ನಿರಾಶ್ರಿತರಂತೇ ಹಾಯಾಗಿ ನಿದ್ದೆಗೆ ಜಾರುತ್ತಿದ್ದೆ. ಆ ದಿನಗಳಲ್ಲಿ ಮುಂದೊಂದು ದಿನ ಹೊರ ಜಗತ್ತಿನ ಅರಿವು ನಮಗಾಗಬಹುದೆಂಬ ಯಾವೊಂದು ಅನಿಸಿಕೆಯೂ ಇರಲಿಲ್ಲ. ನಮಗೆ ನಮ್ಮದೇ ಆದ ಜಗತ್ತು, ನಮ್ಮದೇ ಜಾಯಮಾನ, ಆಟ-ಪಾಠ-ಕಲಿಕೆ, ಅದರಾಚೆಗೆ ನಾವೆಂದೂ ತಲೆಹಾಕಿದವರೇ ಅಲ್ಲ!

ಗುಡುಗಿನ ಅಬ್ಬರವಾಗಲೀ ಸಮುದ್ರದ ಭೋರ್ಗರೆತವಾಗಲೀ ಹೆಚ್ಚಲ್ಲ ಆದರೆ ಜೀವನ ಎಂಬ ಸಾಗರದ ಅಲೆಗಳ ಮೊರೆತ ಮಾತ್ರ ಬಹುದೊಡ್ಡದು ಎಂದು ತಿಳಿಯಲು ಆರಂಭಿಸಿದ್ದು ಕಾಲೇಜಿಗೆ ಹತ್ತಿದಮೇಲೆ. ಓದು ಮುಗಿಸಿ ದುಡಿಮೆಗೆ ಇಳಿಯುವಾಗ ಹಾಗೂ ಆ ನಂತರದ ಜೀವನವನ್ನು ಅವಲೋಕಿಸಿದರೆ ’ಸ್ಟೂಡೆಂಟ್ ಲೈಫ್ ಈಸ್ ಗೋಲ್ಡನ್ ಲೈಫ್’ ಎಂದು ಅನುಭವಿಕರು ಯಾಕೆ ಹೇಳಿದರು ಎಂಬುದು ತಿಳಿಯಿತು. ಅಲ್ಲಿಯವರೆಗೂ ಅಂಥಾ ಯಾವುದೇ ತೊಂದರೆಗಳು ಬಾಧಿಸದಂತೇ ನೋಡಿಕೊಂಡವರು ನಮ್ಮ ಹಿರಿಯರು. ಎಳವೆಯಲ್ಲೇ ನಮ್ಮನ್ನು ದುಡಿಮೆಗೆ ಹಚ್ಚದೇ, ತಮ್ಮ ಕಷ್ಟಾರ್ಜಿತದಲ್ಲೇ ನಮಗೆ ಸಿಗಬಹುದಾದ ವಿದ್ಯೆಯನ್ನು ಕೊಡಿಸಿ, ಜೀವನದ ಮೌಲ್ಯಗಳನ್ನೂ ಬದುಕುವ ಕ್ರಮವನ್ನೂ ಕಲಿಸಿಕೊಟ್ಟು ಒಂದು ಹಂತಕ್ಕೆ ತಂದರು. ಆ ನಂತರದಲ್ಲಿ ಎಲ್ಲರಂತೇ ನಮ್ಮ ಜೀವನದ ಜವಾಬ್ದಾರಿಯನ್ನು ನಾವು ಹೊತ್ತುಕೊಳ್ಳಬೇಕಾಯ್ತು. ಅವರ ಕೃಪಾಶ್ರಯದಲ್ಲಿ ಬೆಳೆದ ನನಗೆ, ಆರ್ಥಿಕ ಜಂಜಡಗಳಾಗಲೀ ಇನ್ನಾವುದೇ ತಾಪತ್ರಯಗಳಾಗಲೀ ಇಲ್ಲದಿದ್ದ ಬಾಲ್ಯವನ್ನು ನೆನೆದಾಗ ಮತ್ತೆ ಬಾಲಕನಾಗಿಯೇ ಇರುವ ಆಲೋಚನೆ ಎದ್ದುಬಿಡುತ್ತದೆ, ಅದು ಸಾಧ್ಯವೇ?  

ಕಳೆದ ಹದಿನೈದು ವರ್ಷಗಳಿಂದ ಪ್ರತೀ ಮಳೆಗಾಲದಲ್ಲೂ ಗುಡುಗು ಅಬ್ಬರಿಸಿದಾಗ ಪಾಲಕರು/ಪೋಷಕರು  ಜೊತೆಯಲ್ಲಿರಲಿಲ್ಲ, ಆದರೂ ಗುಡುಗಿಗೆ ಮನಸ್ಸು ಹೆದರಲಿಲ್ಲ. ಗುಡುಗು ಎಂದರೇನು, ಮಿಂಚು ಎಂದರೇನು, ಅವುಗಳ ಉತ್ಪತ್ತಿ ಹೇಗೆ? ಯಾಕೆ? ಇವುಗಳನ್ನೆಲ್ಲಾ ಓದುತ್ತಾ ದೊಡ್ಡವರಾಗುತ್ತಿದ್ದರೂ, ಊರಿನ ಮನೆಯಲ್ಲಿರುವವರೆಗೂ ಹಿರಿಯರ ಆರೈಕೆಯ, ರಕ್ಷಣೆಯ ನಿರೀಕ್ಷೆಯಿರುತ್ತಿತ್ತು. ಪಾಪ, ನಮ್ಮ ಹಿರಿಯರ ಬಗ್ಗೆ ಅವರ ಹಿರಿಯರು ಅಷ್ಟೊಂದು ಕಾಳಜಿ ವಹಿಸಿದರೋ ಇಲ್ಲವೋ ಆದರೂ ನಮಗಂತೂ ಅದು ಚ್ಯುತಿಯಾಗಲಿಲ್ಲ. ಹೊರಪ್ರಪಂಚಕ್ಕೆ ಒಂದೊಂದೇ ಕಾಲಿಡುತ್ತಾ ಸಮಾಜವನ್ನು ನಾವು ಅರ್ಥಮಾಡಿಕೊಳ್ಳತೊಡಗಿದಾಗ, ಜಗತ್ತು ನಾವಂದುಕೊಂಡಷ್ಟು ಸುಂದರವಲ್ಲ ಎಂಬ ಕಟು ಸತ್ಯ ಅನುಭವವೇದ್ಯವಾಯ್ತು. ಸಮಾಜದಲ್ಲಿನ ಹಲವು ಕಲ್ಮಶಗಳಲ್ಲಿ ಸಿಕ್ಕು ತೊಳಲಾಡುವಂತಾದ ಮುಗ್ಧ ಮನಸ್ಸು, ಒಂದು ಹದಕ್ಕೆ ನೆಲೆನಿಲ್ಲುವಾಗ ಕೆಲವು ಸಮಯ ತೆಗೆದುಕೊಂಡಿತು.

ಚಿಕ್ಕವನಾಗಿದ್ದಾಗ, ಮನುಷ್ಯ ಎಂಬುದು ಜೀವವರ್ಗದಲ್ಲೊಂದು ಪ್ರಭೇದ, ಹಲವು ಪ್ರಾಣಿಗಳಲ್ಲಿ ಮನುಷ್ಯನೆಂಬುದು ಬುದ್ಧಿಯುಳ್ಳ ಪ್ರಾಣಿ ಎಂಬುದನ್ನೆಲ್ಲಾ ಜೀವಶಾಸ್ತ್ರದಲ್ಲಿ ಓದಿಕೊಂಡ ಬಳಿಕ ಆಹಾರ ಪ್ರಕ್ರಿಯೆಯಲ್ಲಿ ಆಹಾರ ಸರಪಳಿಯ ಬಗೆಗೆ ತಿಳಿದುಕೊಳ್ಳಬೇಕಾದ ಪ್ರಮೇಯ ಬಂತು. ಕೀಟ-ಕಪ್ಪೆ-ಹಾವು-ಹದ್ದು ಈ ರೀತಿಯಲ್ಲಿ ಅವುಗಳ ವಿವರಗಳನ್ನು ತಿಳಿದಾಗ ಯಾಕೋ ಖುಷಿಯೆನಿಸಲಿಲ್ಲ. ಆದರೆ ಆ ಪ್ರಾಣಿಗಳಿಗೆ ತೀರಾ ವಿಕಸಿತ ಮೆದುಳು ಇಲ್ಲವೆಂಬುದನ್ನು ಜೀವಶಾಸ್ತ್ರ ಹೇಳುತ್ತಿತ್ತು. ಕೀಟದ ಮೆದುಳಿಗಿಂತ ಕಪ್ಪೆಯ ಮೆದುಳು ವಿಕಸಿತ, ಕಪ್ಪೆಯ ಬುದ್ಧಿಮಟ್ಟಕ್ಕಿಂತ ಹಾವಿನದು ವಿಕಸಿತ, ಹಾವಿಗಿಂತ ಹದ್ದಿನದು ವಿಕಸಿತ ....ಹೀಗೇ ಮೆದುಳು ಎಂಬ ಕ್ರಿಯಾಶೀಲ ಅಂಗಕ್ಕೆ ತಾಕತ್ತನ್ನು ಒದಗಿಸುವ ಶಕ್ತಿಯ ಬಗೆಗೆ ಮಾತ್ರ ನಾವು ಅರಿಯಲೇ ಇಲ್ಲ! ಒಂದು ಇನ್ನೊಂದನ್ನು ಕೊಂದು-ತಿಂದು ಬದುಕುತ್ತದೆ ಎಂದಾದಾಗ ಅವುಗಳ ಜೀವನ ಅದೆಷ್ಟು ಅನಿರೀಕ್ಷಿತ ತಿರುವುಗಳಿಂದ ಕೂಡಿದೆ ಅನ್ನಿಸಿತು. ಅಪ್ಪ-ಅಮ್ಮನ ಅರಿವು ಕ್ರಿಮಿ-ಕೀಟಗಳಾದಿಯಾಗಿ ಎಲ್ಲಾ ಜೀವಿಗಳಿಗೂ ಇರುತ್ತದೋ ಇಲ್ಲವೋ ಆದರೆ ಕೆಲವು ಪ್ರಾಣಿಗಳಿಗಂತೂ ಆ ಅನುಭವ ಇರುತ್ತದೆ ಎಂಬುದನ್ನು ಬೆಕ್ಕು-ನಾಯಿಗಳ ಸಂಸಾರದಿಂದ ಕಂಡುಕೊಳ್ಳಬಹುದು. 

ಆಹಾರಕ್ಕಾಗಿ ಪ್ರಾಣಿಗಳು ಇತರೆ ಪ್ರಾಣಿಗಳನ್ನು ಕೊಲ್ಲುವುದು ಅನಿವಾರ್ಯವೆಂದಾಯ್ತು, ಆದರೆ ಅತಿವಿಕಸಿತ ಮೆದುಳನ್ನು ಪಡೆದ ಮಾನವ ತನ್ನ ಆಹಾರಕ್ಕಾಗಿ ಇತರ ಪ್ರಾಣಿಗಳನ್ನು ಕೊಲ್ಲುವುದು ಮನಸ್ಸಿಗೆ ಬಹಳ ಬಾಧಿಸಿಬಿಟ್ಟಿತು. ಪಂಚೇಂದ್ರಿಯಗಳಲ್ಲಿ ಒಂದಾದ ಜಿಹ್ವೆಯ ಚಾಪಲ್ಯಕ್ಕಾಗಿ, ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಪರ್ಯಾಯ ಅನುಕೂಲ ಮತ್ತು ಅವಕಾಶಗಳಿದ್ದರೂ ಜೀವಿಗಳನ್ನು ಸಾಕುವುದು, ಸಾಕಿ ಕೊನೆಗೊಮ್ಮೆ ಏಕಾಏಕಿ ಕತ್ತರಿಸಿ ಭುಂಜಿಸುವುದು ಬಹಳ ನೋವನ್ನು ತರುವ ಸಂಗತಿ. ನಗರವಾಸಿಯಾದಮೇಲೆ, ಓಡಾಡುವ ರಸ್ತೆಯ ಇಕ್ಕೆಲಗಳಲ್ಲಿ ಅಲ್ಲಲ್ಲಿ ಕೋಳಿಗಳನ್ನು ಇಟ್ಟು ಮಾರುವಾಗ ಕತ್ತರಿಸುವ ಸಮಯದಲ್ಲಿ ಅವು ಜೀವಭಯದಿಂದ ಕೂಗಿಕೊಳ್ಳುವ ಆರ್ತನಾದವನ್ನು ಕೇಳಿದರೆ ಅವುಗಳಿಗೂ ಬದುಕುವ ಅಧಿಕಾರವಿಲ್ಲವೇ ಅನ್ನಿಸುತ್ತದೆ. ಬುದ್ಧಿವಂತ ಮಾನವ ಕಾಡುಪ್ರಾಣಿಗಳಲ್ಲಿ ಹಲವನ್ನು ತನ್ನ ತೆವಲಿಗೆ ಕತ್ತರಿಸಿ ತಿನ್ನುತ್ತಿದ್ದ, ಅವು ಸಿಗದಂತಾದ ನಂತರದ ದಿನಗಳಲ್ಲಿ,  ಕೋಳಿ, ಕುರಿ, ಮೊಲ, ದನ ಇತ್ಯಾದಿಗಳನ್ನು ಹಿಂಸಿಸುವುದನ್ನು [ವಿಪರ್ಯಾಸವೆಂದರೆ ಅಂತಹ ಜನಗಳೇ ಪ್ರಾಣಿದಯಾ ಸಂಘಗಳನ್ನು ನಡೆಸುತ್ತಾರೆ, ಕಾಗೆ-ನಾಯಿ-ಗಿಡುಗಗಳನ್ನು ಅಪಾಯದಿಂದ ರಕ್ಷಿಸಲು ಮುಂದಾಗಿ "ಜೀವಿಯ ಜೀವರಕ್ಷಣೆ ಮಾಡಿದೆವು" ಎಂದು ಟಿವಿಯಲ್ಲಿ ಪೋಸುಕೊಡುತ್ತಾರೆ!] ನೆನೆದರೆ ಅವುಗಳ ಕುಟುಂಬ ಜೀವನ, ಅವುಗಳ ಮಕ್ಕಳು-ಮರಿಗಳು, ಆ ಮರಿಗಳ ಮುಂದಿನ ಸ್ಥಿತಿ ಇವುಗಳನ್ನೆಲ್ಲಾ ನೆನೆದು ಬಹಳ ಸುಸ್ತಾಯ್ತು. ಒಮ್ಮೆಯಂತೂ ದೇವರಲ್ಲಿ ಇಡೀ ದಿನ ಪ್ರಾರ್ಥಿಸಿದ್ದಿದೆ:"ಓ ದೇವರೇ ಈ ಪ್ರಪಂಚವನ್ನು ಹಿಂಸೆಯಿಂದ ಮುಕ್ತಗೊಳಿಸು" ಎಂದು.

ಇರುವೆಯಿಂದ ಹಿಡಿದು ಆನೆಯ ವರೆಗಿನ ಎಂಬತ್ತು ಕೋಟಿ ಜೀವರಾಶಿಗಳಲ್ಲಿ, ಪಾಪ ಮಾಡಿದವರು ವಿಕಸಿತ ಮೆದುಳಿಲ್ಲದ ತೀರಾ ಕೆಳಗಿನ ಜೀವ ಪ್ರಭೇದಗಳಲ್ಲಿ ಜನಿಸುತ್ತಾರಂತೆ! ಕುರಿ-ಕೋಳಿ-ದನ-ಮೊಲ ಇವುಗಳೆಲ್ಲವನ್ನೂ ವಧಿಸುವುದನ್ನು ಕಂಡಾಗ, ಅವುಗಳಿಗೆ ಚಿತ್ರಹಿಂಸೆ ನೀಡುವುದನ್ನು ಕಂಡಾಗ, ಅಂತಹ ಜನ್ಮ ನಮಗೆ ಬಾರದಂತೇ ನಾವು ಪಾಪಮುಕ್ತವಾಗಬೇಕು ಅನ್ನಿಸಿತು. ಆದರೆ ಪರಿಪೂರ್ಣ ಪಾಪಮುಕ್ತರಾಗಲು ಸಾಧ್ಯವಾಗುತ್ತದೆ ಎಂದು ಅನ್ನಿಸಲೇರ್ ಇಲ್ಲ. ಯಾಕೆಂದರೆ ಯಾವುದೇ ಜೀವಿಯನ್ನು ನೇರವಾಗಿ ನಾವು ವಧಿಸಿ ತಿನ್ನಲು ಹೋಗದಿದ್ದರೂ, ಕಚ್ಚುವ ಸೊಳ್ಳೆಗಳನ್ನು ಚಚ್ಚಿಹಾಕುತ್ತೇವೆ, ಕಾಡುವ ಇರುವೆ-ಜಿರಲೆ-ತಿಗಣೆ-ಹೇನು ಇವೇ ಮೊದಲಾದ ಜೀವಿಗಳಿಗೆ ಅಂತ್ಯಕಾಣಿಸುತ್ತೇವೆ. ಅರಿತೋ ಅರಿಯದೆಯೋ ನಡೆದಾಡುವಾಗ ಅಥವಾ ವಾಹನ ಚಲಿಸುವಾಗ ಇರುವೆಗಳಂತಹ ಅತಿ ಚಿಕ್ಕ ಜೀವಿಗಳು ಅದೆಷ್ಟೋ ನಮ್ಮಿಂದ ಹತವಾಗುತ್ತವೆ. ಅಂದಮೇಲೆ ನಾವೂ ಒಂದು ದಿನ ಇರುವೆಯೋ ಜಿರಲೆಯೂ ಆಗಿ ಹುಟ್ಟಿ ಹಿಂಸೆ ಅನುಭವಿಸುವುದಿಲ್ಲ ಎಂಬುದನ್ನು ಹೇಳುವುದು ಹೇಗೆ? 

ಅತಿಮಧುರವಾದ ಜೇನನ್ನು ಸವಿಯುವಾಗ ಆ ಹುಳಗಳ ಸಂಗ್ರಹವನ್ನು ಬಲಾತ್ಕರಿಸಿ ತೆಗೆಯುತ್ತೇವೆ; ಹಾಗೆ ಜೇನು ತೆಗೆಯುವಾಗ ಅವುಗಳ ಅನೇಕ ಮೊಟ್ಟೆ-ಮರಿಗಳು ಹತವಾಗುತ್ತವೆ, ಜೊತೆಗೆ ಕೆಲವು ಜೇನುಹುಳಗಳೂ ಸಹ. ಸಮಾರಂಭಗಳಲ್ಲಿ ಚಂದವಾಗಿ ಕಾಣಿಸಿಕೊಳ್ಳಲು ಪಳಪಳ ಹೊಳೆಯುವ ರೇಷ್ಮೆ ಬಟ್ಟೆಯನ್ನು ತೊಟ್ಟುಕೊಳ್ಳುತ್ತೇವೆ, ಪ್ರತೀ ರೇಷ್ಮೆದಾರದ ಹಿಂದೆ ರೇಷ್ಮೆಹುಳವೊಂದರ ಹಿಂಸಾತ್ಮಕ ಬಲಿ ನಡೆದಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಚರ್ಮದ ಬೆಲ್ಟು, ಬ್ಯಾಗು, ಶೂ ಬಳಸುತ್ತೇವೆ-ಅವುಗಳ ತಯಾರಿಕೆಗೂ ಹಿಂದೆ ನಡೆಯುವ ಕೃತ್ಯಗಳಾಗಲೀ, ಒಂದಾನೊಂದು ದಿನದಲ್ಲಿ ಅವು ಜೀವಿಗಳ ತೊಗಲುಗಳಾಗಿದ್ದವು ಎಂಬುದಾಗಲೀ ನೆನಪಿಗೆ ಬರುವುದಿಲ್ಲ. ಈ ಎಲ್ಲಾ ಕೃತ್ಯಗಳ ಹಿಂದೆ ಅದೆಷ್ಟು ಹಿಂಸೆಯಿದೆ, ಅದೆಷ್ಟು ನೋವಿದೆ ಎಂದರೆ ಆ ನೋವನ್ನು ಹೇಳಿಕೊಳ್ಳಲು, ಸಂಘಕಟ್ಟಿ ಹರತಾಳ ನಡೆಸಲು ಆ ಜೀವಿಗಳಿಗೆ ಮಾತು ಬಾರದು, ಆ ನರಕಯಾತನೆಯಿಂದ ತಪ್ಪಿಸಿಕೊಳ್ಳಲು ಅವಕಾಶವೇ ಇರದು. ಹಲವು ಮಾನವ ಜೀವಗಳ ಹರಣಕ್ಕೆ ಕಾರಣನಾದ ಪರಮನೀಚ ಖೈದಿಯೊಬ್ಬನನ್ನು ಗಲ್ಲಿಗೇರಿಸುವುದಾದರೆ, ನಮ್ಮಲ್ಲಿನ ಹಲವು ಜನ ಆತನ ಬೆಂಬಲಕ್ಕೆ ನಿಲ್ಲುತ್ತಾರೆ, ಗಲ್ಲು ನಡೆಯದಂತೇ ತಡೆಯಲು ಮುಂದಾಗುತ್ತಾರೆ. ಏನೊಂದೂ ತಪ್ಪುಮಾಡದ ಜೀವಿಗಳ ಹರಣವಾಗುವಾಗ ಯಾರೂ ತಪ್ಪಿಸರಲ್ಲಾ ಎಂಬ ಕಟುವಾಸ್ತವಿಕತೆ ಈ ಜಗದ ಕರಾಳ ಮುಖದ ದರ್ಶನವನ್ನು ಸಮಗ್ರವಾಗಿ ಮಾಡಿಸಿಬಿಟ್ಟಿತು.  

ಬಾಲ ಸಂನ್ಯಾಸಿಯೊಬ್ಬ ಹೀಗೆ ಪ್ರಾರ್ಥಿಸಿದ :

ಕರಚರಣಕೃತಂ ವಾಕ್-ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಪರಾಧಂ |
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯ ಜಯ ಕರುಣಾಬ್ಧೇ ಶ್ರೀಮಹಾದೇವ ಶಂಭೋ ||

[ಕರ-ಚರಣಗಳಿಂದ, ವಚನ-ಶರೀರ-ಕರ್ಮದಿಂದ, ಕೇಳುವುದರಿಂದ ನೋಡುವುದರಿಂದ, ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುವುದರಿಂದ, ವಿಹಿತವೋ ಅವಿಹಿತವೋ ನಡೆದ ಸರ್ವಾಪರಾಧಗಳನ್ನೂ ಕ್ಷಮಿಸು ಜಯ ಜಯ ಶ್ರೀಮಹಾದೇವನೇ] 

ಮೂರನೇ ವಯಸ್ಸಿಗೂ ಮುನ್ನ ಅಪ್ಪನನ್ನು ಕಳೆದುಕೊಂಡಿದ್ದ ಅತಿಸುಂದರ ಬಾಲಕನಿಗೆ ಅಮ್ಮನೊಬ್ಬಳೇ ಆಸರೆಯಾಗಿದ್ದಳು. ಅಮ್ಮನಿಗೆ ಮಗನೇ ಎಲ್ಲಾ, ಮಗನನ್ನು ಬಿಟ್ಟು ಜಗವೇ ಇರಲಿಲ್ಲ. ಎಳೆಯಬಾಲಕ ಅಮ್ಮನನ್ನೇ ಆರೈಕೆಮಾಡುವಷ್ಟು ಪ್ರಬುದ್ಧನಿದ್ದ! ದೇಶಸೇವೆಗಾಗಿ ಸಂಕಲ್ಪಿಸಿದ ಬಾಲಕ ಅಮ್ಮನಿಗೆ ಮಾತ್ರ ತನ್ನನ್ನು ಮೀಸಲಾಗಿಡಲಿಲ್ಲ, ’ಸ್ವದೇಶೋ ಭುವನತ್ರಯಂ’ ಎಂದುಕೊಂಡುಬಿಟ್ಟ, ಲೋಕದ ಎಲ್ಲರನ್ನೂ ತನ್ನವರಂತೇ ಕಂಡು, ತಪಸ್ಸಿಗೆ-ಸಾಧನೆಗೆ ಹೊರಟುನಿಂತ ಮಗನನ್ನು ತನ್ನ ಸ್ವಾರ್ಥಕ್ಕಾಗಿ ತಡೆದು ನಿಲ್ಲಿಸದಾದಳು ಆ ತಾಯಿ ಆರ್ಯಾಂಬೆ. ಬಾಲ ಬೈರಾಗಿ ೯ನೇ ವಯಸ್ಸಿಗೇ ಸಂನ್ಯಾಸಿಯಾದ. ಅದರಲ್ಲಿ ಯಾವ ಸ್ವಾರ್ಥವೂ ಇರಲಿಲ್ಲ. ಸರ್ವಸಂಗ ಪರಿತ್ಯಾಗಿಯಾದ ಸಂನ್ಯಾಸಿ ಉತ್ತಮ ಸಮಾಜದ ಪುನರ್ನಿರ್ಮಾಣಕ್ಕಾಗಿ ಸನಾತನ ವೈದಿಕ ಧರ್ಮವನ್ನು ಪುನರ್ಪ್ರತಿಷ್ಠಾಪಿಸಿದ; ದೇಶಾದ್ಯಂತ ಸಂಚರಿಸಿ ಜನರಿಗೆ ತನ್ನ ಸಂಗವನ್ನು ನೀಡಿದ, ದರ್ಶನ-ಸಂದರ್ಶನವನ್ನು ನೀಡಿದ. ಅಷ್ಟು ಎಳೆಯವಯಸ್ಸಿನಲ್ಲಿ ದಂಡಕಾರಣ್ಯಗಳನ್ನೂ ಗೊಂಡಾರಣ್ಯಗಳನ್ನೂ ಕಾಲ್ನಡಿಗೆಯಲ್ಲೇ ಉಪಕ್ರಮಿಸಿದ ಆ ಬಾಲನ ರಕ್ಷಣೆಗೆ ಮಾನವರಾರೂ ಇರಲಿಲ್ಲ!

ಸುಡುವ ಬಿಸಿಲು ಜಡಿಯ ಮಳೆಯು
ಬಿಡದೆ ಕೊರೆವ ಚಳಿಯ ನಡುವೆ
ನಡೆಯುತಿದ್ದ ಬಾಲನಲ್ಲಿ ಅಡವಿಯಿದ್ದೆಡೆ |
ಪೊಡವಿಯಾಗೆ ನೀಚ ಸತ್ರ
ಗೊಡವೆ ಜಗದ ಧರ್ಮಸೂತ್ರ 
ಕೊಡವಿ ಬಂಧಗಳನು ತೊರೆದು ಗುರುಗಳಿದ್ದೆಡೆ ||   [ಸ್ವ-ರಚಿತ]



ಸುರಿವ ಮಳೆ, ಸುಡುವ ಬಿಸಿಲು, ಬಿಡದೆ ಕೊರೆವ ಚಳಿಯ ನಡುವೆ ಕಾಷಾಯವಸ್ತ್ರವನ್ನುಟ್ಟು, ದಂಡ-ಕಮಂಡಲ ತೊಟ್ಟು, ಮೂರಾವರ್ತಿ ಈ ಅಖಂಡ ಭಾರತವನ್ನು ಸಂಚರಿಸಿದ. ಸಂನ್ಯಾಸ ದೀಕ್ಷೆಯಾಗುತ್ತಲೇ ಆತ್ಮಸಾಕ್ಷಾತ್ಕಾರ ಪಡೆದ. ನಂತರ, ಮೊಟ್ಟಮೊದಲ ಆಮ್ನಾಯ ಧರ್ಮಪೀಠಕ್ಕಾಗಿ ನೆಲೆಯನ್ನು ಹುಡುಕಿದ. ನಡೆಯುತ್ತಾ ನಡೆಯುತ್ತಾ ಶೃಂಗೇರಿಗೆ ಬಂದ ಬಾಲ ಸಂನ್ಯಾಸಿಗೆ,  ಪ್ರಸವವೇದನೆಯ ಕಪ್ಪೆ ಮತ್ತು ಅದಕ್ಕೆ ನೆರವಾಗಿ ಹೆಡೆಯೆತ್ತಿ ನಿಂತ ಹಾವಿನ ದ್ವೇಷರಹಿತ-ಅಹಿಂಸಾ ಮನೋಧರ್ಮ, ಚಿಕಿತ್ಸಕವಾಗಿ ಪ್ರಥಮವಾಗಿ ಗೋಚರಿಸಿ ಚಕಿತಗೊಳಿಸಿತು!! ಅದು ಮಹರ್ಷಿಗಳಾದ ವಿಭಾಂಡಕ ಮತ್ತು ಋಷ್ಯಶೃಂಗರ ದಿವ್ಯ ನೆಲೆವೀಡು ಎಂಬುದು ಜ್ಞಾನಚಕ್ಷುವಿಗೆ ಗೋಚರವಾಯ್ತು; ಈ ಕಾರಣದಿಂದ ಶೃಂಗೇರಿಯಲ್ಲಿ ದಕ್ಷಿಣಾಮ್ನಾಯ ಶ್ರೀ ಶಾರದಾಪೀಠವನ್ನು ಸ್ಥಾಪಿಸಿದ--ಆ ಬಾಲ ಸಂನ್ಯಾಸಿ ಶ್ರೀಆದಿಶಂಕರ.

ನನ್ನ ಬಾಲ್ಯಕ್ಕೂ ನನ್ನಂತಹ ಹಲವರ ಬಾಲ್ಯಕ್ಕೂ ಶಂಕರ ಭಗವತ್ಪಾದರ ಬಾಲ್ಯಕ್ಕೂ ಇರುವ ವ್ಯತ್ಯಾಸವನ್ನು ಗಮನಿಸಿ. ನಮ್ಮಂತಹ ಜನಸಾಮಾನ್ಯರು ಮನುಷ್ಯರಾಗಿ ಜನಿಸುವುದಕ್ಕೇ ಪುಣ್ಯ ಬೇಕಂತೆ. ಅತೀವ ಪುಣ್ಯಸಂಪಾದನೆ ಮಾಡಿದವರು ಮಹಾತ್ಮರಾಗುತ್ತಾರೆ, ಅತೀವ ಸಾಧನೆ ಮಾಡಿದ ಮಹಾತ್ಮರು ಸಂನ್ಯಾಸಿಗಳಾಗುತ್ತಾರೆ, ಅತೀವ ಸಾಧನೆ ಮಾಡಿದ ಸಂನ್ಯಾಸಿಗಳು ಮೂಲದಲ್ಲಿ ಲೀನವಾಗುತ್ತಾರೆ! ಸಂನ್ಯಾಸಿಗಳ ಪಾದಗಳಡಿಯಲ್ಲಿ ಸಿಲುಕಿದರೆ ಕೆಲವು ಜೀವಗಳಿಗೆ ಮೇಲ್ಮಟ್ಟದ ಪುನರ್ಜನ್ಮ ಸಿಗಬಹುದು. ಜೀವನ್ಮುಕ್ತರ ಪಾದಗಳು ಸೋಕಿದರೆ ಜೀವನ್ಮುಕ್ತಿ ಪಡೆಯಬಹುದಾದ ಉನ್ನತ ಜನ್ಮ-ಜೀವನ ಜೀವಿಗಳಿಗೆ ಲಭಿಸಬಹುದು. ನಾವು ಓದಿದ ಜೀವಶಾಸ್ತ್ರ-ಪ್ರಭೇದ-ಆಹಾರ ಸರಪಳಿ-ರೀತಿ-ನೀತಿ-ರಿವಾಜುಗಳನ್ನೆಲ್ಲಾ ನಿಯಂತ್ರಿಸುವ ನಿಗಮಗೋಚರ ಶಕ್ತಿಯೊಂದು ಇದ್ದೇ ಇದೆ. ಆ ಶಕ್ತಿಯ ಬಗೆಗಿನ ಮಾಹಿತಿ ನಮ್ಮ ಸಾಮಾಜಿಕ ಜೀವವಿಜ್ಞಾನ ಯಾ ಭೌತವಿಜ್ಞಾನದ ಹೊತ್ತಗೆಗಳಲ್ಲಿ ಲಭ್ಯವಿಲ್ಲ; ಭವಿಷ್ಯದಲ್ಲೂ ಲಭ್ಯವಾಗುವುದಿಲ್ಲ. ಹಿಂಸಾತ್ಮಕವಾದ ಪ್ರಪಂಚದ ಚರಾಚರ ವಸ್ತುಗಳ, ಜೀವಿಗಳ ಮೂಲ ಇರುವುದು ಒಂದೇ ಕಡೆಯಲ್ಲಿ. ಆ ಮೂಲದಲ್ಲಿ ನನ್ನಂಥವರ ಪ್ರಾರ್ಥನೆ ಇಷ್ಟೇ: "ಓ ದೇವರೇ ಮತ್ತೊಮ್ಮೆ ಶಂಕರ ಅವತರಿಸಲಿ."

ವ್ಯಾಮೋಹಮಯವಾದ ಈ ಜಗತ್ತಿನಲ್ಲಿ, ಇರುವೆಯ ಸಂಸಾರ ಇರುವೆಗೆ ಗೊತ್ತು, ಆನೆಯ ಸಂಸಾರ ಆನೆಗೆ ಗೊತ್ತು, ಬೆಕ್ಕಿನ ಸಂಸಾರ ಬೆಕ್ಕಿಗೆ ಗೊತ್ತು, ನನ್ನ ಸಂಸಾರ ನನಗೆ ಗೊತ್ತು, ಆದರೆ ಜರಾಮರಣ ಚಕ್ರದಿಂದ ಬಿಡುಗಡೆ ಪಡೆದ ಶಂಕರರಂತಹ ದಿವ್ಯ ಚೇತನಕ್ಕೆ ’ಜಗತ್ತೇ ಸಂಸಾರ’ವಾಗಿ ಗೊತ್ತು! ಜಗತ್ತನ್ನೇ ಪಾಲಿಸಹೊರಟ, ಪೋಷಿಸಹೊರಟ ಮಾತೃ ಹೃದಯೀ ಶಂಕರರಿಗೆ ತಾನೊಬ್ಬ ಬಾಲಕ,  ಗುಡುಗು-ಸಿಡಿಲು ಬಾಧಿಸಬಹುದೆಂಬ ಭಯವಿರಲಿಲ್ಲ, ಯಾವುದೇ ಕ್ರೂರಮೃಗಗಳು ದಾಳಿಯಿಟ್ಟು ಕೊಂದು ತಿಂದಾವೆಂಬ ಅಂಜಿಕೆಯಿರಲಿಲ್ಲ, ಕಳ್ಳಕಾಕರು ಹಿಡಿದು ಥಳಿಸಿಯಾರೆಂಬ ಹೆದರಿಕೆಯೂ ಇರಲಿಲ್ಲ. ಯಾಕೆಂದರೆ ಅವೆಲ್ಲವುಗಳ ಆಂತರ್ಯದಲ್ಲಿ ಅವನೇ ಅವಿತಿದ್ದ; ಲೋಕಶಂಕರನಾಗಿದ್ದ. "ಲೋಕಹಿತಂ ಮಮ ಕರಣೀಯಂ" ಎನ್ನುತ್ತಾ ಕಲ್ಲುಮುಳ್ಳುಗಳ ದುರ್ಗಮದ ಹಾದಿಯಲ್ಲಿ, ಸುಕೋಮಲವಾದ ತನ್ನ ಪಾದಗಳನ್ನು ಲೆಕ್ಕಿಸದೇ, ನಮಗಾಗಿ ನಡೆದಾಡಿದ್ದ ಅಂತಹ ಬಾಲ ಸಂನ್ಯಾಸಿ ಶಂಕರನಿಗೆ ಅಗಣಿತ ಕೋಟಿ ಸಾಷ್ಟಾಂಗ ನಮಸ್ಕಾರಗಳು. 


 ಶ್ರುತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಂ |
      ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್ ||     

Friday, May 10, 2013

ನೋ ಕಿಂಗ್ ಮೇಕರ್ ಓನ್ಲೀ ’ಕ್ವೀನ್’ ಮೇಕರ್ !!

 ಚಿತ್ರ ಋಣ:ಅಂತರ್ಜಾಲ 
ನೋ ಕಿಂಗ್ ಮೇಕರ್ ಓನ್ಲೀ , ’ಕ್ವೀನ್’ ಮೇಕರ್ !!

ಹದಿನೈದು ವರ್ಷಗಳ ಹಿಂದಿನ ಜಾಯಮಾನದ ಜಗತ್ತು ಇಂದಿನದಲ್ಲ; ತಂತ್ರಜ್ಞಾನದಲ್ಲಿ ಮನೋವೇಗ ಹುಟ್ಟಿ, ನಿನ್ನೆಯದೇ ಬಹಳ ಹಳತಾಗಿಬಿಡುವಷ್ಟು ತ್ವರಿತಗತಿಯ ಕಾಲಮಾನವಿದು. ಅಪ್ಪ-ಅಮ್ಮ ಮಕ್ಕಳಿಗೆ ಹೇಳಿಕೊಡುವ ಕಾಲ ಹಿಂದಿನದಾಗಿದ್ದರೆ, ಬಾಲ್ಯವನ್ನು ಕಳೆದು ಮಿಕ್ಕ ಜೀವನದಲ್ಲಿ ಅಪ್ಪ-ಅಮ್ಮ ಮಕ್ಕಳಿಂದಲೇ ಅರಿಯಬೇಕಾದ ಹಲವು ವಿಷಯಗಳು ಕಾಣಿಸುತ್ತಿವೆ. ಅದೊಂದು ಕಾಲಕ್ಕೆ ಚುನಾವಣೆಯ ನೀತಿ ಸಂಹಿತೆಗಳ ಮಹತ್ವ ಪ್ರಜೆಗಳಿಗೆ ಗೊತ್ತೇ ಇರಲಿಲ್ಲ; ಚುನಾವಣೆಯ ದಿನದ ಬೆಳಗಿನವರೆಗೂ ಅಭ್ಯರ್ಥಿಗಳ ಅಬ್ಬರದ ಪ್ರಚಾರ ನಡೆಯುತ್ತಿತ್ತು. ಹಳ್ಳಿಹಳ್ಳಿಗಳ ಮೂಲೆಯಲ್ಲೂ ಚುನಾವಣೆಗಳ ಮುದ್ರಿತ ವಾಲ್ ಪೋಸ್ಟರುಗಳು, ಪೇಂಟ್ ಮಾಡಿ ಹಾಳುಗರೆದ ಗೋಡೆಗಳು. [ಈಚೆಗೆ ಬಂದಿದ್ದು ಪ್ಲಾಸ್ಟಿಕ್ ಪತಾಕೆಗಳು, ಪ್ಲೆಕ್ಸ್ ಕಟೌಟು-ಬ್ಯಾನರುಗಳು.]  ಚುನಾವಣೆ ಮುಗಿದಾನಂತರ ವಾರಗಳ ಕಾಲ ಮತಪೆಟ್ಟಿಗೆಗಳ ಸಾಗಾಣಿಕೆ. ಅಲ್ಲಿ ಮುದ್ರಿತ ಮತಪತ್ರಗಳನ್ನು ತೆಗೆದು ಎಣಿಸುವಿಕೆ, ಅವುಗಳನ್ನು ಆಕಾಶವಾಣಿಯ ಮುಖಾಂತರ ಅರ್ಧರ್ಧ ಗಂಟೆಗೊಮ್ಮೆ ಬಿತ್ತರಿಸುವ ಕ್ರಮ..ಇವೆಲ್ಲಾ ಇದ್ದವಷ್ಟೇ? ಈಗ ವಿದ್ಯುನ್ಮಾನದ ಮತಯಂತ್ರ! ’ಪೀಂಕ್’ ಅನ್ನಿಸಿಬಿಟ್ಟರೆ ಮುಗಿಯಿತು; ಲೆಕ್ಕಾಚಾರವೂ ಬಹಳ ಸುಲಭ. ಅರ್ಧದಿನದಲ್ಲಿ ಎಲ್ಲಾ ಸ್ಪರ್ಧಿಗಳ ಹಣೆಬರಹ ಪ್ರಕವಾಗಿಬಿಡುತ್ತದೆ.

ಹೇಗೆ ತಂತ್ರಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆದವೋ, ಹೇಗೆ ಕಟ್ಟಡ ನಿರ್ಮಾಣದಲ್ಲಿ ಹೊಸ ಹೊಸ ವಿಧಾನ-ವೈಖರಿ-ಮಾರ್ಪಾಡು-ವಿನ್ಯಾಸಗಳು ಕಂಡವೋ, ಹೇಗೆ ನವನವೀನ ಮಾದರಿಯ ಮೂಲವಸ್ತುವಿನ ಬಟ್ಟೆಗಳು ಸಿದ್ಧಗೊಂಡವೋ ಹಾಗೆಯೇ ಮನುಷ್ಯ ಜನಾಂಗದ ಈ ತಲೆಮಾರುಗಳಲ್ಲಿನ ಬುದ್ಧಿಮಟ್ಟದ ಅಂತರ ಬಹಳವಾಗಿದೆ. ಯಾವ ಅಪ್ಪನೂ ತನ್ನ ಮಗ ತನ್ನಂತೆಯೇ ಆಗಲಿ ಎಂದು ಬಯಸುವುದಿಲ್ಲ, ಮಕ್ಕಳು ತಮಗಿಂತಾ ಹೆಚ್ಚಿನ ಮಟ್ಟವನ್ನು ಸಾಧಿಸಲಿ ಎಂಬುದೇ ಎಲ್ಲಾ ಪಾಲಕರ ಸಹಜ ಅನಿಸಿಕೆ. ಅಂದೆಂದೋ ಅಂದಕಾಲತ್ತಿಲ್ ಹೆಂಡಕುಡಿಸಿದರೆ-ಹಣ ಕೊಟ್ಟರೆ ಮತಹಾಕುತ್ತಿದ್ದ ಆ ಅಪ್ಪ-ಅಮ್ಮಗಳು ಇಂದಿಲ್ಲವೇ ಇಲ್ಲ. ನಾನಾ ಪಕ್ಷಗಳ ಹುರಿಯಾಳುಗಳು ಚುನಾವಣಾ ಸಮಯದಲ್ಲಿ ತಮಗೆ ಕೊಡುವುದು ಅವರ ರಾಜಕೀಯ ಜೀವನದಲ್ಲಿ ಅವರಿಗೆ  ಹುರಿಗಡಲೆ ಇದ್ದಂತೆಯೇ ಎಂಬುದನ್ನು ಜನ ಅರಿತಿದ್ದಾರೆ. ಗೆದ್ದಮೇಲೆ ಹಸಿರುತೋಟವನ್ನು ಹೊಕ್ಕು ಮೇಯಬಲ್ಲ ಬಸವ, ಆ ಖಯಾಲಿಯಲ್ಲಿ ಒಂದಷ್ಟು ಖರ್ಚುಮಾಡಿದ್ದನ್ನು ಆಮೇಲೆ ಮತ್ತೆ ಪರೋಕ್ಷ ಪ್ರಜೆಗಳಿಂದಲೇ ವಸೂಲುಮಾಡುತ್ತದೆ ಎಂಬುದನ್ನು ಅರ್ಥೈಸಿಕೊಳ್ಳದಷ್ಟು ದಡ್ಡರಲ್ಲ ಇವತ್ತಿನ ನಮ್ಮ ಸಮಾಜದ ಜನ. 

ಒಂದು ಮಾತನ್ನು ಕೇಳಿ: ಪ್ರಬುದ್ಧರಾದವರಿಗೆ ಜಾತಿ-ಮತವೆಲ್ಲ ಬರುವುದು ಒಂದು ಹಂತದವರೆಗೆ ಮಾತ್ರ.
ಸಾಮಾಜಿಕ ಜೀವನದಲ್ಲಿ ಅವುಗಳನ್ನೇ ಹಿಡಿದುಕೊಂಡು ಮೆರೆಯಲು ಹೊರಟರೆ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ರಾಜಕೀಯದಲ್ಲಿರುವವರಿಗೆ ಸಮಷ್ಟಿಪ್ರಜ್ಞೆ ಬೇಕು. ತಾನು ತನ್ನ ಜಾತಿ ಬಲದಿಂದಲೇ ಗೆಲ್ಲುತ್ತೇನೆ ಎಂದುಕೊಳ್ಳುವುದು ದುರಹಂಕಾರವಾಗುತ್ತದೆ; ಹಾಗಾದರೆ ಜಾತಿಯನ್ನು ಬಿಟ್ಟು ಬೇರೇ ಜಾತಿಗಳವರು ನಿಮಗೆ ಬೇಡವೇ? ಅಥವಾ ಜಾತಿಯನ್ನೇ ನೆಚ್ಚಿಕೊಂಡರೆ, ಗೆದ್ದಮೇಲೂ ನೀವು ನಿಮ್ಮ ಜಾತಿಯವರಿಗಾಗಿ ಮಾತ್ರ ಬೇಕಾದ ಕೆಲಸಗಳನ್ನು ಮಾಡಿಕೊಡುವುದಿಲ್ಲ ಎಂಬುದು ಯಾವ ಗ್ಯಾರಂಟ್ರ್ಇ? ರಾಮಕೃಷ್ಣ ಹೆಗಡೆಯವರು ಪ್ರತಿನಿಧಿಸಿದ್ದು ಸಮಾಜದ ಅತಿಚಿಕ್ಕದೆನಿಸಿದ ಬ್ರಾಹ್ಮಣ ಸಮುದಾಯ; ಆದರೆ ಅವರು ಜಾತಿ ಬಲದಿಂದ ಗೆದ್ದಿರಲಿಲ್ಲ ಅಥವಾ ಬ್ರಾಹ್ಮಣರಿಗಾಗಿ ಯಾವುದೇ ಕೆಲಸ-ಕಾರ್ಯಗಳನ್ನು ಪ್ರತ್ಯೇಕವಾಗಿ ಮಾಡಿಕೊಡಲಿಲ್ಲ; ಜಾತೀವಾದ ತೆಗೆದುಕೊಂಡು ಹೋದರೆ ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಿರಲಿಲ್ಲ ಎಂದು ಅನುಭವಿಕರು ಹೇಳಿದ್ದಾರೆ. ಹಾಗಂತ ಬಂಗಾರಪ್ಪನವರೇ ಬ್ರಾಹ್ಮಣರಿಗೆ ಕೆಲಮಟ್ಟಿಗೆ ಉಪಕಾರ ಮಾಡಿದ್ದರು! ಅದೂ ಕೂಡ ಓಲೈಕೆಯಲ್ಲ, ಮಾಡಬೇಕು ಅನ್ನಿಸಿ ಮಾಡಿದ್ದು ಎಂದು ಕೆಲವರು ಹೇಳುತ್ತಾರೆ.  

ಸದ್ಯ ಶಾಸಕರಾಗಲಿರುವ ವೈ.ಎಸ್.ವಿ ದತ್ತಾರವರು ಹೇಳಿದಹಾಗೇ ಜನ ಜಾತಿ, ಮತ, ಹೆಂಡ-ಹಣ, ತೋಳ್ಬಲ ಇವನ್ನೆಲ್ಲಾ ನೋಡುವುದು ಕೆಲವು ಸೀಮಿತ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದೆ; ಅಲ್ಲಿ ಮಾತ್ರ ಬುದ್ಧಿ ಇನ್ನೂ ಅನಾದಿಕಾಲದಲ್ಲೇ ಇದೆ. ತಿಪ್ಪರಲಾಗ ಹಾಕಿದರೂ ದತ್ತಾ ಅವರು ಜಾತಿ ಬಲದಿಂದ ಆಯ್ಕೆಯಾಗಲು ಸಾಧ್ಯವಾಗುತ್ತಿರಲಿಲ್ಲ, ಹಾಗಾದರೆ ಅವರಿಗೆ ಯಾರು ಮತಗಳನ್ನು ಕೊಟ್ಟರು? ಶ್ರೀಸಾಮಾನ್ಯನ ಜೊತೆಗೆ ರೈಲಿನಲ್ಲಿ, ಬಸ್ಸಿನಲ್ಲಿ ಓಡಾಡುವ ದತ್ತರ ಜೊತೆ ಹತ್ತುವರ್ಷಗಳ ಹಿಂದೊಮ್ಮೆ ಕಡೂರಿನಿಂದ ರೈಲಿನಲ್ಲಿ ಪ್ರಯಾಣಿಸಿದ್ದೆ. ನನಗವರ ಪರಿಚಯ ಇರಲಿಲ್ಲ, ಅವರಿಗೆ ನನ್ನ ಪರಿಚಯ ಇರುವುದಂತೂ ದೂರದ ಮಾತು. ಒಂದಷ್ಟು ಜನ ಅವರೊಡನೆ ಪ್ರೀತಿಯಿಂದ, ಸಲುಗೆಯಿಂದ ಮಾತನಾಡುತ್ತಿದ್ದರು. ಅವರ ಜೊತೆ ಹೆಂಡತಿ-ಮಕ್ಕಳು-ಒಬ್ಬ ಅಜ್ಜಿ [ಅವರ ತಾಯಿಯೇ ಇರಬೇಕು] ಇವರೆಲ್ಲಾ ಇದ್ದರು. ಕಾರಿನಲ್ಲಿ ಬೆಂಗಳೂರಿಗೆ ಹಾಯಾಗಿ ಬರುವುದನ್ನು ಬಿಟ್ಟು ಎಲ್ಲರಂತೇ ರೈಲನ್ನೇರಿದ ಅವರು ರಾಜಕೀಯದ ವ್ಯಕ್ತಿ ಎಂಬುದು ಟಿವಿಯಲ್ಲಿ ಕಂಡಾಗಲೇ ಗೊತ್ತಾಗಿದ್ದು. ಊರಿನಲ್ಲಿ ಊರಿನ ಮಗನಾಗಿ ಬೆರೆಯುವ ವ್ಯಕ್ತಿಯನ್ನು ಜನ ಒಪ್ಪದೇ ಹೋದಾರೇ? ಆ ಜನಪ್ರಿಯತೆಯ ಫಲ ಅವರಿಗೀಗ ದಕ್ಕಿದೆ; ಉಳಿಸಿಕೊಳ್ಳುವ ಜವಾಬ್ದಾರಿ ಇದೆ-ಉಳಿಸಿಕೊಳ್ಳಬಹುದೆಂಬ ನಿರೀಕ್ಷಣೆ ಕೂಡ ಇದೆ.

[ಪಕ್ಷಗಳ ಯಜಮಾನರ ಜಾತಿಗಳನ್ನು ಲೆಕ್ಕಕ್ಕೆ ತೆಗೆದುಕೊಂಡು] ಜಾತೀ ಪ್ರಾಬಲ್ಯವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಲಿಂಗಾಯತರು ಜಾಸ್ತಿ ಇರುವೆಡೆಗಳಲ್ಲೆಲ್ಲಾ ಕೆ.ಜೆ.ಪಿಯೇ ಬರಬೇಕಾಗಿತ್ತು, ಒಕ್ಕಲಿಗರು ಜಾಸ್ತಿ ಇರುವ ಕಡೆಗಳಲ್ಲೆಲ್ಲಾ ಜೆ.ಡಿ.ಎಸ್ಸೇ ಬರಬೇಕಾಗಿತ್ತು. ಇನ್ನು ಮಿಕ್ಕುಳಿದ ಪಕ್ಷಗಳಲ್ಲಿ ಅಲ್ಲಲ್ಲಿಯ ಸ್ಥಾನಿಕ ಅಭ್ಯರ್ಥಿಗಳ ಜಾತಿಗಳನ್ನಾಧರಿಸಿ ಆಯ್ಕೆ ನಡೆಯಬೇಕಾಗಿತ್ತು. ಆದರೆ ಹಾಗಾಗಲಿಲ್ಲ ಎಂದಾಗ ಪ್ರಜೆಗಳ ನಿರೀಕ್ಷೆ ಇನ್ನೇನೋ ಇದೆ ಎಂಬುದು ವ್ಯಕ್ತ; ಅಂದರೆ ಪ್ರಜೆಗಳು ಜಾತೀವಾದಿಗಳಾಗಿ ಮತ ಹಾಕುವುದಿಲ್ಲ, ಅವರಿಗೆ ಉತ್ತಮ ಸರಕಾರ ಮತ್ತು ಉತ್ತಮ ಆಡಳಿತದ ಅಪೇಕ್ಷೆ ಇದೆ ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಕಾಂಗ್ರೆಸ್ಸು ಉತ್ತಮ ಆಡಳಿತ ನೀಡುವ ಪಕ್ಷ ಎಂದು ಅವರು ಮತಹಾಕಿದರೇ? ದೇವರಾಣೆಗೂ ಇಲ್ಲ! ನೀರೇ ಇಲ್ಲದ ಪ್ರದೇಶದಲ್ಲಿ ರಾಡಿ ನೀರನ್ನೂ ಜನ ಸಹಿಸಿ ಸ್ವೀಕರಿಸುತ್ತಾರೆ ಹೇಗೋ ಅಧಿಕಾರದಲ್ಲಿದ್ದ ಭ್ರಷ್ಟರಿಂದ ಬೇಸತ್ತ ಜನತೆ ಅನಿವಾರ್ಯವಾಗಿ ಒಪ್ಪಿಕೊಂಡ ಪಕ್ಷ ಕಾಂಗ್ರೆಸ್ಸೇ ಹೊರತು ಕಾಂಗ್ರೆಸ್ಸೆಂಬುದು ಆಯ್ಕೆಯ ಪಕ್ಷವಲ್ಲ!! 

ಸ್ವಾತಂತ್ರ್ಯಾನಂತರ ಐದು ದಶಕಗಳಕಾಲ ಚೆನ್ನಾಗಿ ಮೆದ್ದ ಆ ಜನ ಅಧಿಕಾರದಲ್ಲಿದ್ದಾಗ, ಆರ್.ಟಿ.ಐ ಎಂದರೇನೆಂದೇ ಪ್ರಜೆಗಳಿಗೆ ಗೊತ್ತಿರಲಿಲ್ಲ. ಕಳೆದ ಸರ್ತಿ ಬಿಜೆಪಿ ಅಧಿಕಾರಕ್ಕೆ ಬಂದ ಸಮಯದಲ್ಲೇ ಅದು ಅಂಗೀಕೃತವಾಗಿದ್ದು, ಹಗ್ಗಕಡಿಯುವ ಹನುಮಂತಣ್ಣಗಳಿಗೆ ತೊಂದರೆಯಾಯ್ತು! ಮಗ್ಗುಲಲ್ಲಿ ನಿಂತು ಬಸಿದುಕೊಳ್ಳುವ ಕುಮಾರಣ್ಣನಂಥವರಿಗೆ ಆಟವಾಡುವುದಕ್ಕೆ ಆಸ್ಕರವಾಯ್ತು. ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಗೆದ್ದ ಬಿಜೆಪಿಯನ್ನು ಅಧಿಕಾರ ಲಾಲಸೆಯಿಂದ ಪೀಡಿಸಿದ ಕುಮಾರಸ್ವಾಮಿಯ ಸರ್ಕಸ್ ಕಂಪನಿಯನ್ನು ಜನತೆ ಮರೆಯುವುದಿಲ್ಲ. ಯಾರೋ ಒಂದಷ್ಟು ಜನ ಈ ಸರ್ತಿ ಮುಖಬಿಡೆಯಕ್ಕೆ ಬಸಿರಾಗಿ ಮತಚಲಾಯಿಸಿದ್ದರೂ, ಕುರುಡು ಅಭಿಮಾನದಿಂದ ಜೆಡಿಎಸ್ ಅಭ್ಯರ್ಥಿಗಳನ್ನು ಆಯ್ಕೆಮಾಡಿದ್ದರೂ ಜನತೆಗೆ ’ಕುಮಾರ ಲೀಲೆಗಳು’ ಅರ್ಥವಾಗಿಬಿಟ್ಟಿವೆ! ಹಾವೂ ಸಾಯಬಾರದು ಕೋಲೂ ಮುರಿಯಬಾರದು ಎಂಬ ತಂತ್ರವನ್ನು ಜನ ಜಾಣ್ಮೆಯಿಂದ ಬಳಸಿಕೊಂಡಿದ್ದಾರೆ.

ಜೆಡಿಎಸ್ ಅಧಿಕಾರದಲ್ಲಿದ್ದಾಗ ಭೂಕಬಳಿಕೆ ಆಗಲಿಲ್ಲವೇ? ಅನಧಿಕೃತ ಗಣಿಗಾರಿಕೆ ನಡೆದಿಲ್ಲವೇ? ಇನ್ನೂ ಅಸಂಖ್ಯ ಲಾಬಿಗಳು ನಡೆದಿವೆ. ಆದರೆ ಅವು ಕಡತಗಳಲ್ಲಿದ್ದು ಈಗ ಅಲ್ಲಲ್ಲೇ ಹೆಗ್ಗಣಬಿಲಗಳಲ್ಲಿ ಏನೂ ಸಿಗದಂತೇ ಅಪ್ಡೆಟ್ ಆಗಿಬಿಟ್ಟಿವೆ ಯಾಕೆಂದರೆ ಯಾವುದೂ ಆನ್ ಲೈನ್ ನಲ್ಲಿ ಸಿಗುತ್ತಿರಲಿಲ್ಲ!! ಆನ್ ಲೈನ್ ಮಾಹಿತಿಗಳನ್ನು ಕಲೆಹಾಕಲು ದೊಡ್ಡದೊಂದು ಟೀಮ್ ಬಿಟ್ಟು ಅದನ್ನು ಸಮರ್ಪಕವಾಗಿ ದುರುಪಯೋಗ ಮಾಡಿಕೊಂಡು ಸರ್ಕಸ್ಸು ಆರಂಭಿಸಿದ್ದು ಕುಮಾರಸ್ವಾಮಿ!! ನಂತರ ನಡೆದ ಕುದುರೆವ್ಯಾಪಾರ, ’ಆಪರೇಶನ್ ಕಮಲ’ ಎಲ್ಲಕ್ಕೂ ಮೂಲಕಾರಣ ಕುಮಾರಣ್ಣ ಎಂಬುದನ್ನು ಜನ ಅಷ್ಟುಬೇಗ ಹೇಗೆ ಮರೆತಾರು? ಕಂಡರಾಗದಿದ್ದ ಬಿಜೆಪಿ ಜನರೊಟ್ಟಿಗೆ ಸಮ್ಮಿಶ್ರ ಸರಕಾರ ಆರಂಭಿಸಲು ಮೊದಲಿಟ್ಟ ಕುಮಾರಣ್ಣನ ಸರ್ಕಸ್ ಕಂಪನಿಯ ನಾಟಕಗಳಿಗೆ, ಹಿನ್ನೆಲೆಯಲ್ಲಿ ಟವೆಲ್ ಮುಚ್ಚಿಕೊಂಡು ಭಾಗವತಿಕೆ ಮಾಡಿದ್ದ ಅನುಭವಿಯೊಬ್ಬರು ತನಗೆ ಏನೂ ಗೊತ್ತಿಲ್ಲವೆಂಬಂತೇ ನಾಟಕವಾಡಿದ್ದೂ ಕೂಡ ಜನರಿಗೆ ತಿಳಿದೇ ಇದೆ. ಅಧಿಕಾರದಲ್ಲಿದ್ದಾಗ ಕಣ್ಣೊರೆಸುವ ತಂತ್ರ ಹೆಣೆದು ಕೆಲವೆಡೆ ’ಗ್ರಾಮವಾಸ್ತವ್ಯ’ ಆರಂಭಿಸಿದ್ದ ಕುಮಾರ, ಬಡವರ ಆ ಮನೆಗಳಿಗೆ ಹೋಗುವಾಗ, ತಿಂಗಳುಗಳಕಾಲ ಮೊದಲೇ ಅನುಯಾಯಿಗಳು ಸಕಲ ಸೌಲತ್ತುಗಳನ್ನೂ ಕಲ್ಪಿಸುತ್ತಿದ್ದು, ವಾಸ್ತವ್ಯದ ಮರುದಿನ ಜಾತ್ರೆಮುಗಿದ ಜಾಗದಂತೇ ಅಲ್ಲಿ ಹಾಕಲಾಗುತ್ತಿದ್ದ ಫ್ಯಾನು, ಕಾಟು ವಗೈರೆ ಎಲ್ಲವನ್ನೂ ಹೊತ್ತೊಯ್ಯುತ್ತಿದ್ದರು! ತಮ್ಮ ಪಾಡಿಗೆ ತಾವಿದ್ದ ಬಡಜನರಿಗೆ ಇದೊಂದು ಹೊಸ ಉಪದ್ವ್ಯಾಪ ಕಾಡುತ್ತಿತ್ತೇ ಹೊರತು ಉಪಕಾರವೇನೂ ಆಗಲಿಲ್ಲ.

ಆರಾರು ತಿಂಗಳಿಗೆ ಅದರ ವಿರುದ್ಧ ಇದರ ವಿರುದ್ಧ ಅಂತ ಪಾದಯಾತ್ರೆ ಹೊರಡುತ್ತಿದ್ದ ಕಾಂಗ್ರೆಸ್ಸಿಗರದು ಇನ್ನೊಂದು ತೆರನಾದ ಡೊಂಬರಾಟ. ಹಾದಿಯುದ್ದಕ್ಕೂ ಡ್ರೈ ಫ್ರೂಟ್ಸ್ ಕೋಸಂಬರಿ ಮೆಲ್ಲುತ್ತಾ ಮಜವಾಗಿ ಕಾಲಹರಣಮಾಡಿದ ಅವರಿಗೆ ಅದೊಂದು ಸುಲಭದ ಅಸ್ತ್ರವಾಗಿ ಮಾರ್ಪಟ್ಟಿತ್ತು. ರಾಜ್ಯದಲ್ಲಿ ಹಿಂದೆ ಕಾಂಗ್ರೆಸ್ಸೇ ಅಧಿಕಾರದಲ್ಲಿರುವಾಗ ಮಾಡಿದ ತಪ್ಪುಗಳಿಗೆ, ಈಗಲೂ ಕೇಂದ್ರದಲ್ಲಿ ಅವರು ನಡೆಸುತ್ತಿರುವ ಲಾಬಿಗಳಿಗೆ ಅವರಲ್ಲಿ ಉತ್ತರವಿಲ್ಲ. ಗುಡ್ಡದಮೇಲಿನ ದನವನ್ನು ಗೋದಾನಮಾಡುವ ಹಾಗೇ ಎದುರಿಗೆ ಕಾಣುವ ಆಡಳಿತಾರೂಢ ಪಕ್ಷಗಳ ತಪ್ಪುಗಳನ್ನು ಮಾತ್ರ, ತಾವೇನೋ ಮಹಾಸಂಭಾವಿತರು ಎನ್ನುವ ಹಾಗೇ ಜನತೆಗೆ ಅವರು ಓರಿಸುತ್ತಲೇ ಇದ್ದರು. ಐದು ದಶಕಗಳಲ್ಲಿ ಕಾಂಗ್ರೆಸ್ಸು ಸಾಧಿಸಿದ್ದೇನು ಎಂದರೆ ರಾಜಕೀಯ ಕ್ರಿಯಾಶಕ್ತಿಗೆ ಅದು ಏನೇನೂ ಅಲ್ಲ. ಯಾವ ರಾಜ್ಯ, ಯಾವ ದೇಶ ಈ ದಿನಗಳಲ್ಲಿ ಜಗತ್ತಿನಲ್ಲಿಯೇ ಅತ್ಯಂತ ಮುಂದುವರಿದ ಸ್ವಾವಲಂಬೀ ದೇಶ ಎನಿಸಬಹುದಿತ್ತೋ ಅದನ್ನು ಅಸಾಧ್ಯವೆಂದು ಸಾಧಿಸಿದ್ದೇ ಕಾಂಗ್ರೆಸ್ಸಿಗರ ಮಹಾಸಾಧನೆ!!!  ಇನ್ನುಳಿದಂತೇ ಮಿತ್ರ ಪ್ರಭಾಕರ ನಾಯಕ್ ಅವರು ಒದಗಿಸಿದ ಕಾಂಗ್ರೆಸ್ಸಿನ ಸಾಧನೆಗಳು ಇಂತಿವೆ:
 
2013 - VVIP Chopper Scam
2012 - Coal Mining scandal - INR 1,070,000 crore
2012 - Karnataka Wakf Board Land scam – INR 200,000 crore
2012 - Andhra Pradesh land scandal – INR 100,000 crore
2012 - Service Tax and Central Excise Duty scam - INR 19,159 crore
2012 - Gujarat PSU financial irregularities - INR 17,000 crore
2012 - Maharashtra stamp duty scandal – INR 640 crore
2012 - Ministry of External Affairs gift scandal
2012 - Himachal Pradesh pulse scandal
2012 - Flying Club fraud - INR 190 crore
2012 - Jammu and Kashmir PHE scandal
2012 - Jammu and Kashmir recruitment scandal
2012 - Jammu and Kashmir examgate
2012 - Jammu and Kashmir Cricket Association scandal - Approximately INR 50 crore
2012 - Andhra Pradesh liquor scandal
2011 - UP NRHM scandal - INR 10,000 crore
2011 - ISRO's S-band scam
2011 - KG Basin Oil scam
2011 - Goa mining scam
2011 - Bellary mining scam
2011 - Bruhat Bengaluru Mahanagara Palike scam - INR 3,207 crore
2011 - Himachal Pradesh HIMUDA housing scam
2011 - Pune housing scam
2011 - Pune land scam
2011 - Orissa pulse scam - INR 700 crore
2011 - Kerala investment scam - INR 1,000 crore
2011 - Maharashtra education scam – INR 1,000 crore
2011 - Mumbai Sales Tax fraud - INR 1,000 crore
2011 - Uttar Pradesh TET scam
2011 - Uttar Pradesh MGNREGA scam
2011 - Orissa MGNREGA scam
2011 - Indian Air Force land scam
2011 - Tatra scam - INR 750 crore
2011 - Bihar Solar lamp scam - INR 40 crore
2011 - BL Kashyap - EPFO scam - INR 169 crore
2011 - Stamp Paper scam - INR 2.34 crore
2010 - 2G spectrum scam and Radia tapes controversy
2010 - Adarsh Housing Society scam
2010 - Commonwealth Games scam
2010 - Uttar Pradesh food grain scam
2010 - LIC housing loan scam
2010 - Belekeri port scam
2010 - Andhra Pradesh Emmar scam – INR 2,500 crore
2010 - Madhya Pradesh MGNREGA scam – INR 9 crore
2010 - Jharkhand MGNREGA scam
2010 - Indian Premier League scandal
2010 - Karnataka housing board scam
2009 - Madhu Koda mining scam
2009 - Goa's Special Economic Zone (SEZ) scam
2009 - Rice export scam - INR 2,500 crore
2009 - Orissa mining scam - INR 7,000 crore
2009 - Sukhna land scam - Darjeeling
2009 - Vasundhara Raje land scam
2009 - Austral Coke scam - INR 1,000 crore
2008 - Cash for Vote Scandal
2008 - Hasan Ali black money controversy
2008 - The Satyam scam
2008 - State Bank of Saurashtra scam – INR 95 crore
2008 - Army ration pilferage scam - INR 5,000 crore
2008 - Jharkhand medical equipment scam - INR 130 crore
2006 - Kerala ice cream parlour sex scandal
2006 - Scorpene Deal scam
2006 - Navy War Room Spy Scandal
2006 - Punjab city centre project scam – INR 1,500 crore
2005 - IPO scam
2005 - Oil for food scam
2005 - Bihar flood relief scam - INR 17 crore
2004 - Gegong Apang PDS scam
2003 - Taj corridor scandal
2003 - HUDCO scam
2002 - Stamp paper scam - INR 20,000 crore
2002 - Provident Fund (PF) scam
2002 - Kargil coffin scam[120]
2001 - Ketan Parekh securities scam
2001 - Barak Missile scandal
2001 - Calcutta Stock Exchange scam
2000 - India-South Africa match fixing scam
2000 - UTI scandal - INR 32 crore
1997 - Cobbler scandal
1996 - Hawala scandal
1996 - Bihar land scam - INR 400 crore
1996 - SNC lavalin power project scandal - INR 374 crore
1996 - Bihar fodder scandal - INR 950 crore
1996 - Sukh Ram telecom equipment scam
1996 - C R Bhansali scandal - INR 1100 crore
1996 - Fertiliser import scandal - INR 133 crore
1995 - Purulia arms drop case
1995 - Meghalya forest scam - INR 300 crore
1995 - Preferential allotment scandal – INR 5,000 crore
1995 - Yugoslav Dinar scandal - INR 400 crore
1994 - Sugar import scandal
1992 - Harshad Mehta securities scandal-INR 5,000 crore
1992 - Palmolein Oil Import Scandal, Kerala
1992 - Indian Bank scam - INR 1,300 crore
1990 - Airbus scam
1989 - St Kitts forgery
1987 - Bofors Scam
1981 - Cement Scandal including A R Antulay - INR 30 crore
1976 - Kuo oil scam - INR2.2 crore
1974 - Maruti scam
1971 - Nagarwala scam - INR 60 lakh
1965 - Kaling tubes scam
1964 - Pratap Singh Kairon scandal
1962 - National Defense Fund (during Chinese War)
1960 - Teja loan scam - INR 22 crore
1958 - The Mundhra scam - INR 1.2 crore
1956 - BHU funds misuse - INR 50 lakh
1951 - Cycle import scandal
1948 - Jeep scam - INR 80 lakh
1947 - INA Treasure Scam (transported from
Japan to India, and got looted)


ಅಟಲ್ ಬಿಹಾರಿ ವಾಜಪೇಯಿಯಂತಹ ಮುತ್ಸದ್ಧಿ, ೨೪ ಪಕ್ಷಗಳನ್ನು ಸೇರಿಸಿ ಹೊಲಿದ ಕೌದಿಯನ್ನೇ ಹೊದ್ದುಕೊಂಡು ದೇಶಕ್ಕೆ ದಕ್ಷಿಣೋತ್ತರ, ಪೂರ್ವಪಶ್ಚಿಮ ಭಾಗಗಳನ್ನು ನೇರವಾಗಿ ಸಂಧಿಸುವ ಸುಲಭದ ಮಾರ್ಗಗಳನ್ನು ನಿರ್ಮಿಸಿದ್ದರಿಂದ ಇಂದು ಇಡೀ ದೇಶವೇ ಅದನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತಿದೆ, ಬಳಸಿಕೊಳ್ಳುತ್ತಿದೆ. ಹಾಗಾದರೆ ವಾಜಪೇಯಿ ಅಧಿಕಾರಕ್ಕೆ ಬರುವವರೆಗೆ ಕಾಂಗ್ರೆಸ್ಸಿಗರಿಗೆ ಅದನ್ನು ಸಾಧ್ಯಮಾಡಲಾಗುತ್ತಿರಲಿಲ್ಲವೇ? ಇದ್ದ ನಾಲ್ಕೂವರೆ ವರ್ಷಗಳ ಅಧಿಕಾರಾವಧಿಯಲ್ಲಿ ಹಿಂದೆ ದಶಕಗಳಕಾಲ ಕಾಂಗ್ರೆಸ್ಸಿಗರು ಸಾಧಿಸಲಾರದ ವಿಶೇಷಗಳನ್ನು ಹಲವುಪಕ್ಷಗಳ ನಾಯಕನಾಗಿ ವಾಜಪೇಯಿ ಸಾಧಿಸಿ ತೋರಿಸಿದರಲ್ಲಾ..ಬಹುಮತ ಪಡೆದು ಏಕಪಕ್ಷವಾಗಿ ಹಲವು ಸರ್ತಿ ಗೆದ್ದ ಕಾಂಗ್ರೆಸ್ಸಿಗೇಕೆ ಅದು ಸಾಧ್ಯವಾಗಿರಲಿಲ್ಲ?  ಕೇಂದ್ರದಲ್ಲೂ ರಾಜ್ಯದಲ್ಲೂ ಕಾಂಗ್ರೆಸ್ಸು ಸಾಧಿಸಿದ್ದು ಅಷ್ಟಕ್ಕಷ್ಟೆ. ಕಳೆದೈದು ವರ್ಷಗಳಲ್ಲಿ, ನಾವೇನೇ ಅಂದರೂ ಕರ್ನಾಟಕದಲ್ಲಿ ಬಹಳ ಬದಲಾವಣೆಗಳೂ ಅಭಿವೃದ್ಧಿ ಕಾರ್ಯಗಳೂ ನಡೆದಿವೆ ಎಂಬುದನ್ನು, ಒಂದು ರೌಂಡು ಹೋಗಿ ಬಂದಮೇಲೆ ನಾವೆಲ್ಲಾ ಒಪ್ಪಲೇಬೇಕಾಗುತ್ತದೆ. 

ಒಂದುಕಡೆ ಹರಿದುಹೋಗುತ್ತಿದ್ದ ಪಕ್ಷವನ್ನು ಪುನಃ ಹೊಲಿಗೆ ಹಾಕಿ ಸರಿಪಡಿಸಿಕೊಳ್ಳುತ್ತಾ, ಪಕ್ಷದೊಳಗೆ ಮುಖ್ಯಮಂತ್ರಿ ಸ್ಥಾನ ಸಿಗಲಿಲ್ಲವೆಂದೋ ಮಂತ್ರಿಸ್ಥಾನ ದೊರಕಲಿಲ್ಲವೆಂದೋ ಉದ್ಭವಿಸುತ್ತಿದ್ದ ಬಣಗಳನ್ನು ನಿಭಾಯಿಸಿಕೊಳ್ಳುತ್ತಾ, ಕುಮಾರಸ್ವಾಮಿ ಹರಾಜಿಗೆ ಕರೆದ ಕುದುರೆಗಳನ್ನು ಮತ್ತೆ ಮರಳಿ ಲಾಯಕ್ಕೆ ಕರೆದು ತಂದುಕೊಳ್ಳುತ್ತಾ, ಆರ್ಥಿಕ ಮುಗ್ಗಟ್ಟು ಎದುರಾದಾಗ ಹಲವು ಯೋಜನೆಗಳನ್ನು ಮುಂದಿಟ್ಟು ವಿದೇಶೀ ಬಂಡವಾಳಗಳನ್ನು ಪಡೆಯುತ್ತಾ ಸರಕಾರ ನಿಭಾಯಿಸಿದ್ದಕ್ಕೆ ಯಡ್ಯೂರಪ್ಪನವರಿಗೆ ಒಂದು ಸೆಲ್ಯೂಟು; ಇದೇ ಕೆಲಸವನ್ನು ಕುಮಾರಸ್ವಾಮಿಯೇ ಆಗಿದ್ದರೂ ಮಾಡಲಾಗುತ್ತಿತ್ತು ಎಂಬುದನ್ನು ನಾನು ಸುತರಾಂ ಒಪ್ಪಿಕೊಳ್ಳುವುದಿಲ್ಲ! ಆ ವಿಷಯದಲ್ಲಿ ಯಡ್ಯೂರಪ್ಪ ಒಬ್ಬ ದಕ್ಷ ನಾಯಕ ಎಂಬುದರಲ್ಲಿ ಅನುಮಾನವಿಲ್ಲ. ಮೇಲಾಗಿ ಈ ಹಿಂದೆ ಯಾವ ಮುಖ್ಯಮಂತ್ರಿಯೂ ಕಂಡರಿಯದಂತಹ ತಿರುವು-ತೊಂದರೆ-ಪೇಚಾಟಗಳನ್ನು ಅನುಭವಿಸಿಯೂ ಜಯಿಸಿದ್ದು ಯಡ್ಯೂರಪ್ಪ ಮಾತ್ರ! ಆದರೆ ಅವರ ಮಗ್ಗುಲ ಹುಣ್ಣುಗಳೇ ಅವರಿಗೆ ಮುಳುವಾದವು ಎಂಬುದು ವಿಷಾದನೀಯ. ತಮ್ಮೊಳಗಿನ ಒಳಜಗಳಗಳಿಂದ ಮುಖ್ಯಮಂತ್ರಿಯನ್ನು ಜೈಲಿಗೆ ಕಳಿಸಿದ್ದರ ಜೊತೆಗೇ, ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದಮೇಲೂ ಮತ್ತೆ ಮರಳಿ ಮುಖ್ಯಮಂತ್ರಿ ಪಟ್ಟವೋ ಪಕ್ಷದ ಅಧ್ಯಕ್ಷಗಿರಿಯೋ ಸಿಕ್ಕದಂತೇ ನೋಡಿಕೊಂಡವರು ಇಂದು ಮರದಕೆಳಗೆ ಬಿದ್ದ ಮಂಗನಂತಾಗಿದ್ದಾರೆ. ಯಡ್ಯೂರಪ್ಪ ಇರದಿದ್ದರೆ ಬಿಜೆಪಿಗೆ ಏನಾಗುತ್ತದೆ ಎಂಬುದೂ ಮತ್ತು ಬಿಜೆಪಿಯನ್ನು ತೊರೆದರೆ ಯಡ್ಯೂರಪ್ಪ ಏನೆಂಬುದೂ ಪರಸ್ಪರ ಆಯಾ ಪಕ್ಷಗಳಿಗೆ ಗೊತ್ತಾಗಿದೆ. ಪಕ್ಷ ಒಡೆಯುವ ಮುನ್ನ ಯಡ್ಯೂರಪ್ಪ ತೀರಾ ’ಶೋಭಾ’ಯಮಾನವಾಗದಿದ್ದರೆ ಪರಿಸ್ಥಿತಿ ಸ್ವಲ್ಪ ಬದಲಿರುತ್ತಿತ್ತೋ ಏನೋ. 

ಏನೇ ಇರಲಿ, ಇಷ್ಟೆಲ್ಲಾ ಪುರಾಣ ಕೊರೆದದ್ದು ಕಾಂಗ್ರೆಸ್ಸು ಎಂಬುದು ನೆಚ್ಚಿನ ಆಯ್ಕೆಯಲ್ಲಾ ಅನಿವಾರ್ಯದ ಆದೇಶ ಎಂಬುದಕ್ಕಾಗಿ. "ಜನ ನಮ್ಮನ್ನು ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್ಸು ಅಂದರೆ ಉತ್ತಮ ಆಡಳಿತ ಎಂಬುದು ಜನರಿಗೆ ಗೊತ್ತು" ಎಂದು ಮೀಸೆ ನೀವಿಕೊಳ್ಳುವ ಕಾಂಗ್ರೆಸ್ಸಿಗರು, ’ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಎಂಬುದನ್ನು ಪ್ರತಿಬಿಂಬಿಸುವ ಜನ. "ಹಿಂದೆ ದಶಕಗಳ ಕಾಲ ನೀವು ನಮ್ಮನ್ನು ಆಳಿದ್ದೀರಿ, ಆಗ ನಿಮ್ಮ ತಪ್ಪುಗಳೂ ಹೇರಳವಾಗಿದ್ದವು. ಅದಕ್ಕೇ ಅಧಿಕಾರದಿಂದ ನಿಮ್ಮನ್ನು ಕೆಳಗಿಳಿಸಿದ್ದೆವು. ನಿಮ್ಮ ಬದಲಿಗೆ ಬಂದವರು ನಿಮ್ಮನ್ನೇ ಅನುಸರಿಸುತ್ತಾ ಹೊರಟರು. ಹೀಗಾಗಿ ಅವರಿಗೂ ಸ್ವಲ್ಪ ನಮ್ಮ ಬಿಸಿ ತಟ್ಟಬೇಕು ಎಂಬ ಸಲುವಾಗಿಯೂ, ನಮಗೆ ಇನ್ನಾವ ಆಯ್ಕೆಯೂ ಇಲ್ಲದ ಕಾರಣಕ್ಕಾಗಿಯೂ ಕಾಂಗ್ರೆಸ್ಸಿಗರಾದ ನಿಮಗೆ ಇನ್ನೊಮ್ಮೆ ಅಧಿಕಾರ ನೀಡುತ್ತಿದ್ದೇವೆಯೇ ಹೊರತು ಇದು ನಮ್ಮ ನೆಚ್ಚಿನ ಆಯ್ಕೆಯಲ್ಲ" ಎಂಬುದು ಜನತೆಯ ಸಂದೇಶವಾಗಿದೆ.

ಚುನಾವಣೆಯಲ್ಲಿ ಮಲಗಿದವರು, ಮಗ್ಗುಲತಿರುವಿಕೊಂಡು, ಚಾದರ ಝಾಡಿಸಿಕೊಂಡು ಅದರಲ್ಲಿರುವ ತಿಗಣೆ, ಜಿರಲೆಗಳನ್ನು ಓಡಿಸಿಕೊಳ್ಳುತ್ತಾ, ತಮ್ಮ ಅಧಿಕೃತ ಧರ್ಮಪತ್ನಿಯನ್ನೂ ಮತ್ತು ಅನಧಿಕೃತ ಅಧರ್ಮಪತ್ನಿಯರುಗಳನ್ನೂ ತತ್ಸಂಬಂಧೀ ಪುತ್ರ-ಪೌತ್ರಾದಿಗಳನ್ನೂ ಸಂಭಾಳಿಸುತ್ತಾ, ಕಳೆದೈದು ವರ್ಷಗಳಲ್ಲಿ ತಾವು ಮಾಡಿದ್ದ ತಪ್ಪುಗಳನ್ನು ಈ ಮುಂದಿನ ಐದು ವರ್ಷಗಳಲ್ಲಿ ಲೆಕ್ಕಾಹಾಕಿಕೊಳ್ಳಬೇಕಾದ  ಕಾಲ ಇದಾಗಿದೆ. ನೆನಪಿರಲಿ ಕನ್ನಡದ ಜನ ನಿಮಗೆಲ್ಲಾ ಬುದ್ಧಿ ಕಲಿಸುವಷ್ಟು, ಬುದ್ಧಿವಂತರಾಗಿದ್ದಾರೆ ಹಾಂ..!