ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, May 24, 2013

ಸರಕಾರೀ ಶಾಲೆಗಳಲ್ಲಿ ಮಕ್ಕಳಿಲ್ಲ ಯಾಕೆಂದರೆ...



 ಸರಕಾರೀ ಶಾಲೆಗಳಲ್ಲಿ ಮಕ್ಕಳಿಲ್ಲ ಯಾಕೆಂದರೆ...
                                                                                        
ಸರಕಾರೀ ಶಾಲೆಗಳ ಶಿಕ್ಷಕರು ಬದಲಾದ ಜಗತ್ತಿಗೆ ಬೇಕಾದ ಗುಣಮಟ್ಟದ ವಿದ್ಯೆಯನ್ನು ನೀಡುವಲ್ಲಿ ಹಿಂದುಳಿದಿದ್ದಾರೆ. ಹುಡುಕಿದರೆ ಇದಕ್ಕೆ ಸಿಗುವ ಕಾರಣಗಳು ಹಲವಾರು. ಆದರೆ ಸ್ಥೂಲವಾಗಿ ನೋಡಿದರೆ, ಶಿಕ್ಷಕರ ನೇಮಕಾತಿಯಲ್ಲಿ ಆಗುವ ನ್ಯೂನತೆಗಳು ಮತ್ತು ಶಿಕ್ಷಕರಲ್ಲಿ ಕುಸಿಯುತ್ತಿರುವ ಕಲಿಸಬೇಕೆಂಬ ಆಸಕ್ತಿ ಪ್ರಮುಖ ಅಂಶವಾಗಿ ಗೋಚರಿಸುತ್ತವೆ. ಕುಲಕಸುಬಾಗಿದ್ದ ಅಧ್ಯಾಪನ ಶತಮಾನದ ಹಿಂದೆಯೇ ತನ್ನತನವನ್ನು ಕಳೆದುಕೊಂಡಿತು. ಅಧ್ಯಾಪಕನಾಗುವವ ಹೇಗಿರಬೇಕೆಂದು ತಿಳಿಯಲ್ಪಟ್ಟಿತ್ತೋ ಅಂತಹ ಅರ್ಹತೆಗಳು ಇಲ್ಲದವರೂ ಕೂಡ ಅಧ್ಯಾಪಕ ಹುದ್ದೆಯನ್ನು ಅಲಂಕರಿಸತೊಡಗಿದರು. ಉದಾಹರಣೆಗೆ ಆಂಗ್ಲ ಭಾಷೆ ಕಲಿಸುವ ಶಿಕ್ಷಕರೇ ಕನ್ನಡದ ಗೈಡು ನೋಡಿಕೊಂಡು ಕಲಿಸುವ ಪರಿಪಾಠ ಬೆಳೆಯಿತು. ಶಿಕ್ಷಕರ ವೃತ್ತಿ ಶಿಕ್ಷಣ-ಪದವಿಗಳನ್ನಷ್ಟೇ ಮಾನದಂಡವನ್ನಾಗಿಟ್ಟುಕೊಂಡ ಆಯ್ಕೆಯಲ್ಲಿ, ಅಲ್ಲಿರುವ ಮೀಸಲಾತಿ-ಒಳಮೀಸಲಾತಿ ವ್ಯವಹಾರಗಳಲ್ಲಿ, ಅಧಿಕಾರಿಗಳ ಲಂಚಗುಳಿತನದ ಆಶ್ರಯದಲ್ಲಿ ಯಾಕೂ ಬೇಡದವರೂ ಶಿಕ್ಷಕರಾಗಹತ್ತಿದರು; ಎಲ್ಲಿಯೂ ಸಲ್ಲದವರು ಅಲ್ಲಿ ಸಂದರು!    

22ನೇ ಶತಮಾನದ ಹೊಸ್ತಿಲಲ್ಲಿರುವ ಜನರಿಗೆ, ಕನ್ನಡಿಗರಿಗೆ, ಕನ್ನಡದ ಅಭಿಮಾನವೆಷ್ಟೇ ಇದ್ದರೂ, ತಮ್ಮ ಮಕ್ಕಳು ಆಂಗ್ಲಮಾಧ್ಯಮದಲ್ಲೇ ಓದಬೇಕು, ಎಲ್ಲರಂತೇ ಚೆನ್ನಾಗಿ ಇಂಗ್ಲೀಷು ಕಲಿತು ಪಟಪಟಾಯಿಸಬೇಕು, ಎಂಜಿನೀಯರಿಂಗ್-ಮೆಡಿಕಲ್ ಓದುವುದಕ್ಕೆ ಆಂಗ್ಲಮಾಧ್ಯಮ ಸಹಕಾರಿಯಾಗುತ್ತದೆ ಎಂಬೆಲ್ಲಾ ಅನಿಸಿಕೆಗಳು ಕನ್ನಡ ಮಾಧ್ಯಮದ ಸರಕಾರೀ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವಲ್ಲಿ ತಡೆಯೊಡ್ಡಿದವು. ’’ಅಕ್ಕಿಮೇಲೂ ಆಸೆ ನೆಂಟರಮೇಲೂ ಪ್ರೀತಿ’’ ಎಂಬ ಗಾದೆಯಂತೇ ಕನ್ನಡವನ್ನು ಬಿಟ್ಟಿರಲಾರೆವು ಎಂದುಕೊಂಡರೂ ಪಾಪ್ ಕಾರ್ನ್ ರೀತಿಯಲ್ಲಿ ಬಡಿದೆದ್ದು ಹಾರುತ್ತಿರುವ ಆಂಗ್ಲಮಾಧ್ಯಮದ ಶಾಲೆಗಳು ಮತ್ತು ಬ್ರಿಟಿಷರು ಜಗತ್ತಿಗೇ ರೂಢಿಸಿದ ಇಂಗ್ಲೀಷ್ ಭಾಷೆ ಕನ್ನಡಿಗರನ್ನು ಕಟ್ಟಿಹಾಕಿದವು. ಪರಿಣಾಮವಾಗಿ ಒಂದೊಂದೇ ಕುರಿ, ಮಂದೆಯಿಂದ ತಪ್ಪಿಸಿಕೊಂಡಂತೇ, ನಿಧಾನಗತಿಯಲ್ಲಿ ಪಾಲಕರು ಆಂಗ್ಲಮಾಧ್ಯಮ ಶಾಲೆಗಳತ್ತ ಮುಖಮಾಡಿದರು. ಮನದೊಳಗೆ ನಡೆದ ಜಿದ್ದಾಜಿದ್ದಿಯಲ್ಲಿ, ಡೊನೇಶನ್ ಎಷ್ಟಾದರೂ ಪರವಾಗಿಲ್ಲ ಶಾಲೆ ಚೆನ್ನಗಿರಬೇಕೆಂದೂ ತಮ್ಮ ಮಕ್ಕಳು ಮಾತ್ರ ಆಂಗ್ಲಮಾಧ್ಯಮದಲ್ಲೇ ಓದಿ ಬೆಳಗಬೇಕೆಂದೂ ಮೂಡಿದ ಒಳತೋಟಿ ಹೊರಗೆ ಕನ್ನಡಧ್ವಜ ಹಾರಿಸುತ್ತಲೇ ಮಕ್ಕಳನ್ನು ಆಂಗ್ಲಮಾಧ್ಯಮದ ಶಾಲೆಗಳಿಗೆ ಕಳಿಸುವಲ್ಲಿ ಜಯಗಳಿಸಿಬಿಟ್ಟಿತು!   

ಮುಂಗಾರುಮಳೆಗೆ  ಚಿಗುರೆದ್ದ ಅಣಬೆಗಳಂತೇ ಆಂಗ್ಲಮಾಧ್ಯಮದ ಖಾಸಗೀ ವಿದ್ಯಾಸಂಸ್ಥೆಗಳು ತಲೆ ಎತ್ತಿದವು, ಈಗಲೂ ಎತ್ತುತ್ತಲೇ ಇವೆ. ಗಲ್ಲಿಗಲ್ಲಿಗೊಂದು ಶಾಲೆಯನ್ನು ನೋಡುವಾಗ ಸ್ವರಚಿತ ಭೋಗಷಟ್ಪದಿಯ ಪದ್ಯವೊಂದು ನೆನಪಾಗುತ್ತದೆ:

ವಿದ್ಯೆಕಲಿಸುತೇವೆ ಎಂದು
ಗದ್ಯಪದ್ಯಕಿಂತ ಮೊದಲು
ಅಧ್ಯಯನಕೆ ರಾಶಿ ಕಂತೆ ತಿಂದುಕೊಂಡರು |
ವಾದ್ಯ ನಾಟ್ಯ ಗೀತ ಚಿತ್ರ
ಖಾದ್ಯ ಆಟ ನೋಟ ಎಂದು
ಸಾಧ್ಯವಾದ ಎಲ್ಲ ರೀತಿ ಮೆಂದುಕೊಂಡರು ||

ವಿದ್ಯೆ ಕಲಿಸುವ ಕಾರ್ಖಾನೆಗಳಂತೇ ತಮ್ಮನ್ನು ಬಿಂಬಿಸಿಕೊಂಡ ಖಾಸಗೀ ಸಂಸ್ಥೆಗಳಲ್ಲಿ ಸಿಂಹಪಾಲು ರಾಜಕಾರಣಿಗಳದು; ಅದರಲ್ಲಿ ದೊಡ್ಡ ರಾಜಕಾರಣಿಗಳಿಂದ ಹಿಡಿದು ಮರಿರಾಜಕಾರಣಿ, ಪುಡಿರಾಜಕಾರಣಿ ಎಲ್ಲಾ ಸೇರಿದ್ದಾವೆ. ಹಣಗಳಿಸುವ ಸುಲಭದ ದಂಧೆಗಳಲ್ಲಿ ವಿದ್ಯಾಸಂಸ್ಥೆ ನಡೆಸುವುದೂ ಒಂದು ಎಂದು ಕಂಡುಕೊಂಡ ರಾಜಕೀಯದ ಹಲವು ಜನ ಮತ್ತು ಇನ್ನಿತರ ಕೆಲವುಜನ ಶಾಲೆಗಳನ್ನು ತೆರೆದರು. ಸರಕಾರೀ ಶಾಲೆಗಳಲ್ಲಿ ಇಲ್ಲದ ಕೆಲವು ಸೌಲಭ್ಯಗಳನ್ನು ತೋರಿಸಿದರೆ ಮಕ್ಕಳನ್ನು ಪಾಲಕರು ತಮ್ಮಲ್ಲಿಗೆ ದಾಖಲಿಸುತ್ತಾರೆ ಎಂಬುದು ಖಂಡಿತಾ ಗೊತ್ತಿತ್ತು. ಜೊತೆಗೆ ಆಳರಸರಲ್ಲೇ ಹಲವರು ವಿದ್ಯಾಸಂಸ್ಥೆಗಳನ್ನು ನಡೆಸುತ್ತಿರುವುದರಿಂದ, ಸರಕಾರೀ ಶಾಲೆಗಳಲ್ಲಿ ಕಲಿಕಾಮಾಧ್ಯಮದಲ್ಲಾಗಲೀ, ಕಲಿಕೆಯ ಉಪಕರಣಗಳಲ್ಲಾಗಲೀ ನಾವೀನ್ಯತೆಯನ್ನು ಜೋಡಿಸಬಾರದೆಂಬ ವೈಯ್ಯಕ್ತಿಕ ಕಳಕಳಿಯನ್ನೂ ಅವರು ಹೊಂದಿದ್ದಾರೆ! ಇದೂ ಅಲ್ಲದೇ ಕಲಿಸುವ ವ್ಯಕ್ತಿಗಳ ವೈಯಕ್ತಿಕ ಗುಣಮಟ್ಟ, ಅವರ ಬೋಧನಾ ಕೌಶಲ ಯಾವುದನ್ನೂ ಗಣಿಸುವ ಇರಾದೆ ಸರಕಾರಕ್ಕಿಲ್ಲ; ಪಠ್ಯಪುಸ್ತಕದ ಹೆಸರನ್ನು ನೆಟ್ಟಗೆ ಓದಲು ಬಾರದವರೂ ಸರಕಾರೀ ಶಾಲೆಗಳಲ್ಲಿ ಶಿಕ್ಷಕರಾಗಿದ್ದನ್ನು ಕಂಡಿದ್ದೇನೆ!

ಬಿಸಿ ಊಟ, ಮತ್ತಿನ್ನೇನೋ ಆಟ ಎಲ್ಲಾ ಡೊಂಬರಾಟಗಳೂ ನಡೆದವು. ಖಾಸಗೀ ಶಾಲೆಗಳಲ್ಲಿ ಎಲ್ಲೂ ಬಿಸಿಯೂಟದ ವ್ಯವಸ್ಥೆ ಕಾಣುವುದಿಲ್ಲ; ಬೇಕೆಂದರೆ ಮಕ್ಕಳು ಮನೆಯಿಂದ ಹೊತ್ತೊಯ್ಯಬೇಕು, ಇಲ್ಲಾ ಲಭ್ಯವಿರುವ ಕ್ಯಾಂಟೀನುಗಳಲ್ಲಿ [ಇದ್ದರೆ] ಹಣಕೊಟ್ಟು ತಿಂಡಿ ತಿನ್ನಬೇಕು. ಇಸ್ಕಾನ್ ನಂತಹ ಸಂಸ್ಥೆಗಳು ಅನೇಕ ನಗರಗಳಲ್ಲಿ, ಸರಕಾರೀ ಶಾಲಾಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸಿವೆ. ಆದರೂ ಪರಿಸ್ಥಿತಿ ಎಲ್ಲಿಗೆ ತಲ್ಪಿದೆಯೆಂದರೆ, ಏನೂ ಗತಿಯಿಲ್ಲದವರು ಮಾತ್ರ ಸರಕಾರೀ ಶಾಲೆಗಳಿಗೆ ತಮ್ಮ ಮಕ್ಕಳನ್ನು ನೋಂದಾಯಿಸುತ್ತಾರೆ ಎಂಬಲ್ಲಿಗೆ ಸರಕಾರೀ ಶಾಲೆಗಳ ಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ದುಡಿಮೆಯ ಅನುಕೂಲವಿದೆಯೆಂದಾದರೆ ಅಂಥವರು ಮಕ್ಕಳನ್ನು ಸೇರಿಸುವುದು ಖಾಸಗೀ ಶಾಲೆಗಳಿಗೇ-ಅದೂ ಆಂಗ್ಲಮಾಧ್ಯಮದ ಶಾಲೆಗಳಿಗೆ ಮಾತ್ರ. ಬೆಂಗಳೂರು ನಗರದಲ್ಲಿ ಖಾಸಗೀ ಶಾಲೆಗಳಲ್ಲಿಯೂ ಕೆಲವೆಡೆ ಕನ್ನಡ ಮಾಧ್ಯಮದ ವಿಭಾಗವಿದೆ. ವಿಪರ್ಯಾಸವೆಂದರೆ ಶಾಲೆ ಖಾಸಗಿಯಾಗಿದ್ದರೆ ಸಾಲದು ಮಾಧ್ಯಮವೂ ಕನ್ನಡವಾಗಿರಕೂಡದು ಎಂಬುದನ್ನು ಜನ ಬಯಸುತ್ತಾರೆ ಎಂದು  ಅಲ್ಲಿಗೆ ಭೇಟಿಯಿತ್ತಾಗ ಗಮನಕ್ಕೆ ಬಂತು. ಖಾಸಗೀ ಸಂಸ್ಥೆಗಳ ಕನ್ನಡ ವಿಭಾಗಗಳು ಡೊನೇಶನ್ ಮುಕ್ತವಾಗಿದ್ದರೂ ಸಹ ಪಾಲಕರು ಮಕ್ಕಳನ್ನು ಅಲ್ಲಿಗೆ ಸೇರಿವುದು ಕಡಿಮೆ!       

ಇನ್ನು ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೂ ಹೆಜ್ಜೆಯಿದೆ ಎಂದು ತೋರಿಸಲು ಮಠಮಾನ್ಯಗಳೂ ಶಾಲೆಗಳನ್ನು ತೆರೆದಿವೆ. ಅಂತಹ ಶಾಲೆಗಳು ಮಿಕ್ಕುಳಿದ ಖಾಸಗೀ ಶಾಲೆಗಳ ದರ್ಜೆಯಲ್ಲೇ ನಿಲ್ಲುತ್ತವೆ. ಖಾಸಗೀ ಶಾಲೆಗಳಲ್ಲಿ ಕಲಿಸುವ ಮಂದಿ ಮೀಸಲಾತಿಗಳಿಗೆ ಒಳಪಟ್ಟವರಾಗಿರುವುದಿಲ್ಲ. ಅದು ಅವರ ಮೆರಿಟ್ ಅವಲಂಬಿಸಿ ನಡೆಯುತ್ತದೆ. ಶಿಕ್ಷಕರಿಗೆ ವಿಶೇಷ ಪರಿಣತರಿಂದ ಆಗಾಗ ತರಬೇತಿ ಇರುತ್ತದೆ. ನವನವೀನ ಶೈಕ್ಷಣಿಕ ಉಪಕರಣಗಳನ್ನು ಖಾಸಗೀ ಸಂಸ್ಥಗಳು ಬಳಸಿಕೊಳ್ಳುತ್ತವೆ: ಉದಾಹರಣೆಗೆ ಸ್ಮಾರ್ಟ್ ಕ್ಲಾಸ್ ರೂಮ್ ನಲ್ಲಿ ಕಂಪ್ಯೂಟರ್ ಮತ್ತು ದೊಡ್ಡ ದೊಡ್ಡ ಪರದೆ-ಪ್ರಾಜೆಕ್ಟರ್ ಮೊದಲಾದ ಉಪಕರಣನ್ನು ಬಳಸಿ ವಿಷಯಗಳನ್ನು ಕಲಿಸಲಾಗುತ್ತದೆ. ಸಾಂದರ್ಭಿಕ ಚಿತ್ರಗಳ ಅವಲೋಕನದಿಂದ ಕಲಿಯುವ ಮಕ್ಕಳಿಗೆ ವಿಷಯ ಗಟ್ಟಿಯಾಗಿ ಮನದಟ್ಟಾಗುತ್ತದೆ ಎಂಬ ಪರಿಣಾಮಕಾರೀ ಅಂಶ ಬೆಳಕಿಗೆ ಬಂದುದರಿಂದ  ನಗರಗಳಲ್ಲಿ ಅಂತಹ ವ್ಯವಸ್ಥೆಯ ಪೂರೈಕೆಗೇ ಕೆಲವು ಕಂಪನಿಗಳು ಹುಟ್ಟಿಕೊಂಡಿವೆ. ಬುದ್ಧಿಮಟ್ಟದ ಬೆಳವಣಿಗೆಗೆ ಪಠ್ಯೇತರ ಓದು-ಕಲಿಕೆಗಳನ್ನು ಅಳವಡಿಸುವ ಸಂಸ್ಥೆಗಳು ಖಾಸಗೀ ಶಿಕ್ಷಣ ಸಂಸ್ಥೆಗಳ ಜೊತೆ ಸೇರಿ ಕೆಲಸಮಾಡುತ್ತವೆ. ಇದನ್ನೆಲ್ಲಾ ತಿಳಿದುಕೊಳ್ಳುವ ಪಾಲಕರು ತಮ್ಮ ಮಕ್ಕಳು ಇದರಿಂದ ವಂಚಿತರಾಗಲು ಇಷ್ಟಪಟ್ಟಾರೆಯೇ?   

ಹಾಂ, ಇನ್ನೊಂದು ಮಾತನ್ನು ಗಮನಿಸಬೇಕು, ಓದು ಒಕ್ಕಾಲು-ಬುದ್ಧಿ ಮುಕ್ಕಾಲು ಎಂಬ ಗಾದೆಯೂ ಸಹ ಇದೆ. ಮಕ್ಕಳಲ್ಲಿ ಕೆಲವರು ಏಕಪಾಠಿಗಳು, ಕೆಲವರಿಗೆ ಅದಕ್ಕಿಂತಾ ಜಾಸ್ತಿ ಅಂದರೆ ಒಂದೆರಡು ಸರ್ತಿ ವಿಷಯಗಳ ಅವಲೋಕನದ ಅಗತ್ಯ ಬೀಳುತ್ತದೆ. ಕೆಲವರಿಗೆ ಜಾಸ್ತಿ ಸಮಯದ  ಪುಸ್ತಕಗಳ ಪುನರಾವರ್ತಿತ ಓದು ಬೇಕು. ಇನ್ನೂ ಕೆಲವರಿಗೆ ಎಷ್ಟೇ ಓದಿದರೂ ಅದೊಂದು ಮಟ್ಟಕ್ಕೆ ಮಾತ್ರ, ಆಮೇಲ್ ಅವರ ಎಂಜಿನ್ ಸೀಝ್ ಆಗಿಬಿಡುತ್ತದೆ! ಏಕಪಾಠಿಗಳು ಅಥವಾ ಆ ದರ್ಜೆಯವರನ್ನು ಖಾಸಗೀ ಸಂಸ್ಥೆಗಳು ತಮ್ಮ ಗುಣಮಟ್ಟದ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಾರೆ. ಏಕಪಾಠಿಗಳು ಜಾಸ್ತಿ ಅಂಕಗಳನ್ನು ಪಡೆಯುವುದರಿಂದ , ವಿಶೇಷ ಪರಿಶ್ರಮ ಅನಗತ್ಯವಾಗಿ ಸಹಜವಾಗಿ ಅವರು ಯಾವುದೇ ಶಾಲೆಯಲ್ಲಿದ್ದರೂ ಶಾಲೆಗೆ ಒಳ್ಳೆಯ ಹೆಸರು ತರುತ್ತಾರೆ. ಹೀಗಾಗಿ ಇಂಥಾ ಮಕ್ಕಳು ನಗರಗಳಲ್ಲಿ ಖಾಸಗೀ ಸಂಸ್ಥೆಗಳಲ್ಲೇ ಕಲಿಯುತ್ತಾರೆ ಯಾಕೆಂದರೆ ಸಂಸ್ಥೆಗಳು ಅವರನ್ನೂ ಅವರ ಪಾಲಕರನ್ನೂ ಪ್ರೀತಿಯಿಂದ ಆಹ್ವಾನಿಸುತ್ತಾರೆ. ಪಾಲಕರಿಗೆ ತಮ್ಮ ಮಕ್ಕಳು ಎಂದೂ ಹಿಂದೆಬೀಳದಿರಲಿ ಎಂಬ ಅಪೇಕ್ಷೆ ಇರುವುದರಿಂದ ಪಾಲಕರ ಆಯ್ಕೆ ಕೂಡಾ ಖಾಸಗೀ ಸಂಸ್ಥೆಗಳೇ ಆಗಿರುತ್ತವೆ.

ಖಾಸಗೀ ಸಂಸ್ಥೆಗಳಲ್ಲಿ, ಬ್ಯಾನರುಗಳು, ಪೋಸ್ಟರ್ಸ್, ಕರಪತ್ರಗಳು, ಟಿವಿ ಜಾಹೀರಾತುಗಳು, ಪತ್ರಿಕಾ ಜಾಹೀರಾತುಗಳು, ಅಂತರ್ಜಾಲ ಮಾಧ್ಯಮಗಳಲ್ಲಿ ಜಾಹೀರಾತುಗಳು ಬಹಳ ಜೋರಾಗಿವೆ. ಶಿಕ್ಷಣವನ್ನು ಉದ್ಯಮೀಕರಣ ಮಾಡಬಾರದು ಎಂಬ ಮಾತು ಹಳತಾಯ್ತು, ಈಗ ಶೈಕ್ಷಣಿಕ ಸಂಸ್ಥೆಗಳು ಮತ್ತು ಆಸ್ಪತ್ರೆಗಳು ಎಲ್ಲವೂ ಪ್ರೈವೇಟ್ ಲಿಮಿಟೆಡ್ ಕಂಪನಿಗಳು ಅಥವಾ ಏಕವ್ಯಕ್ತಿ ಕೇಂದ್ರೀಕೃತ ಟ್ರಸ್ಟುಗಳಾಗಿವೆ!! ಪೈಪೋಟಿ ಹೇಗಿದೆಯೆಂದರೆ ಒಬ್ಬರಿಗಿಂತಾ ಒಬ್ಬರು ವಿಶಿಷ್ಟರು ಎಂದು ತೋರಿಸಿಕೊಳ್ಳಲು ವ್ರಥಾ ಹೆಣಗಾಡುತ್ತಿರುತ್ತಾರೆ. ಇಪ್ಪತ್ತು ರೂಪಾಯಿ ಸೌಲಭ್ಯ ಕೊಟ್ಟರೆ ೨೦೦೦ ಕೋಟಿ ಕೊಟ್ಟವರಂತೇ ಹೇಳಿಕೊಳ್ಳುತ್ತಾರೆ. ಖಾಸಗೀ ಶಾಲೆಗಳಲ್ಲಿ ಶಿಕ್ಷಕರಿಗೆ ಉತ್ತಮ ಸಂಬಳ ಕೊಡುತ್ತಾರೆ ಎಂದೆನಿಸಿದರೂ ಅವರ ಸಂಬಳ ಸರಕಾರೀ ಶಾಲೆಗಳಿಗಿಂತ ಜಾಸ್ತಿ ಇರುವುದಿಲ್ಲ, ಮತ್ತು ಶಿಕ್ಷಕರಿಗೆ ಕೆಲಸಮಾತ್ರ ಸರಕಾರೀ ಶಿಕ್ಷಕರಿಗೆ ಇರುವ ಮೂರುಪಟ್ಟು ಇರುತ್ತದೆ! ಕೆಲಸ ಹೆಚ್ಚಾಯ್ತೆಂದು ಮಾಡಲು ಒಪ್ಪದಿದ್ದರೆ ಕೆಲಸದಿಂದ ವಜಾಗೊಳಿಸುವುದು ಕ್ಷಣಾರ್ಧದ ಮಾತು! ಆ ಸನ್ನಿವೇಶ ದೇವರಿಗೇ ಪ್ರೀತಿ. ಆದರೂ ಸರಕಾರೀ ಶಾಲೆಗಳಲ್ಲಿ ಶಿಕ್ಷಕರಾಗಲು ಅವಕಾಶ ಸಿಗದ ಜನ ಖಾಸಗೀ ಶಾಲೆಗಳಲ್ಲಿ ದುಡಿಯುತ್ತಾರೆ. ಖಾಸಗೀ ಶಾಲೆಗಳಲ್ಲಿ ನೆನಪಾದಾಗಲೆಲ್ಲಾ ರಜಾ ಗುಜರಾಯಿಸುವಂತಿಲ್ಲ, ಮಕ್ಕಳಿಗೆ ಎಮ್ಮೆ ಉಚ್ಚೆ ಹೊಯ್ದ ರೀತಿಯಲ್ಲಿ ಪಾಠಮಾಡುವಂತಿಲ್ಲ, ಎಲ್ಲದಕ್ಕೂ ನಿಮಯ-ನಿಬಂಧನೆಗಳಿವೆ, ಯಜಮಾನರ ನಿಯಂತ್ರಣವಿರುತ್ತದೆ. ಆಡಳಿತ ನಡೆಸುವ ಮಂದಿ ಎರಡನ್ನು ಕೊಟ್ಟು ಇಪ್ಪತ್ತನ್ನು ಇಸಿದುಕೊಳ್ಳುವುದರಲ್ಲಿ ನಿಸ್ಸೀಮರಾಗಿರುತ್ತಾರೆ; ಬಿಟ್ಟಿ ಕೆಲಸ ಮಾಡಿಸಿಕೊಳ್ಳುವುದಕ್ಕೂ ಸಿದ್ಧಹಸ್ತರಾಗಿರುತ್ತಾರೆ.ಆದರೂ, ಕಲಿಸಲು ಸಿಗುವ ಪರಿಕರ-ಸೌಲಭ್ಯಗಳನ್ನು ನೋಡಿ ಶಿಕ್ಷಕ ಹುದ್ದೆಗೆ ಅಬ್ಯರ್ಥಿಗಳು ಹುಡುಕಿಕೊಂಡು ಬರುತ್ತಾರೆ.

ಸಿ.ಬಿ.ಎಸ್.ಸಿ, ಆಯ್.ಸಿ.ಎಸ್.ಸಿ, ಸ್ಟೇಟ್ ಸಿಲ್ಲೇಬಸ್ ಗಳನ್ನು ಖಾಸಗಿಯವರು ತೆರೆದಿಡುತ್ತಾರೆ. ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಗಳನ್ನು ಸ್ಥಾಪಿಸುವಲ್ಲಿ ಧನಿಕರು ತೊಡಗಿಕೊಂಡಿದ್ದಾರೆ. ಎಜ್ಯುಕೇಷನ್ ಹ್ಯಾಸ್ ಬಿಕಮ್ ಮಲ್ಟಿಕ್ರೋರ್ ಬ್ಯುಸಿನೆಸ್ ನೌ!! ಸಭಾಂಗಣ, ಗ್ರಂಥಾಲಯ, ಶೌಚಾಲಯ, ಆಟದಬಯಲು ಎಲ್ಲಾ ಸೌಲಭ್ಯಗಳನ್ನು ತಕ್ಕಮಟ್ಟಿಗೆ ಇಡುವ ಖಾಸಗೀ ಶಾಲೆಗಳಲ್ಲಿ, ಓಡಾಟಕ್ಕೆ ಬಸ್ಸುಗಳನ್ನು ಇಡುತ್ತಾರೆ. [ಎಲ್ಲದಕ್ಕೂ ಹಣ ವಸೂಲು ಪ್ರತ್ಯೇಕ ಬಿಡಿ, ಆದರೆ ಸೌಲಭ್ಯ ಇದೆಯಲ್ಲ!] ಈ ಎಲ್ಲಾ ಅಂಶಗಳ ಮುಂದೆ ಸರಕಾರೀ ಶಾಲೆಗಳನ್ನು ಪರಿಗಣಿಸಿದರೆ, ಶಾಲೆಗಳಿಗೆ ವಿದ್ಯುತ್ ಸಂಪರ್ಕವೇ ಇರುವುದು ಕಮ್ಮಿ, ಗಣಕಯಂತ್ರಗಳಿರುವುದಿಲ್ಲ-ಇದ್ದರೂ ಕೆಲಸಮಾಡಲು ಶಿಕ್ಷಕರಿಗೇ ತಿಳಿದಿಲ್ಲ, ಎಷ್ಟೋ ಶಾಲೆಗಳ ಗಣಕಯಂತ್ರಗಳು ಹಾಳಾಗಿ ವರ್ಷಗಳೇ ಉರುಳಿವೆ!-ಅವುಗಳ ರಿಪೇರಿ ಮಾಸ್ತರಮಂದಿಗೆ ಬೇಕಾಗಿಲ್ಲ. ಕಿತ್ತುಹೋದ ಗೋಡೆಗಳು, ಒಡೆದ ಸೋರುವ ಛಾವಣಿಗಳು, ಕರಿಹಲಗೆ ಇದ್ದರೆ ಸೀಮೆ ಸುಣ್ಣವಿಲ್ಲ, ಸೀಮೆ ಸುಣ್ಣವಿದ್ದರೆ ಕರಿಹಲಗೆಯಿಲ್ಲ[ಸಾರಿ ಈಗೆ ಗ್ರೀನ್ ಹಲಿಗೆಯಾಗಿದೆ], ಸ್ಮಾರ್ಟ್ ಕ್ಲಾಸ್ ರೂಮ್ ಹಾಗಿರಲಿ, ಇರುವ ಖೋಲಿಗಳಲ್ಲಿ ಡೆಸ್ಕು-ಬೆಂಚುಗಳೇ ಇರುವುದಿಲ್ಲ, ಕುಡಿಯುವ ನೀರಿನ ವ್ಯವಸ್ಥೆ ಅಪರೂಪ, ಸುತ್ತಲಿನ ವಠಾರಗಳೇ ಶೌಚಾಲಯಗಳು! ಗ್ರಂಥಾಲಯ ಇರುವುದೇ ಇಲ್ಲ. ಆಟದ ಪರಿಕರಗಳು ಇಲ್ಲ. ನೆಟ್ಟಗೆ ಇರುವುದೊಂದೇ: ಮಾಸ್ತರಿಗೆ ರಜಾ ಬೇಕಾದಾಗ ಮಕ್ಕಳಿಗೆ ಆಡಲು ಸಮಯ ಸಿಗುತ್ತದೆ! 

ಈ ಮಧ್ಯೆ, ಗೀತೆ ಪಠ್ಯದಲ್ಲಿರಬೇಕೆಂದು ಉದಾತ್ತ ಭಾವದಿಂದ ಒಂದು ಪಕ್ಷ ಹೇಳಿದರೆ, ವಿನಾಕಾರಣ ಗೀತೆಯನ್ನು ದೂಷಿಸುತ್ತಾ-ಪಠ್ಯದಲ್ಲಿ ಸೇರಿಸಬಾರದು ಎಂದು ಇನ್ನೆರಡು ಪಕ್ಷಗಳವರು ಬೊಗಳುತ್ತಿರುತ್ತಾರೆ. ಪಠ್ಯಗಳಲ್ಲಿ ಪ್ರಕಟಿಸಬೇಕಾದ ವಿಷಯಗಳೇ ಇತ್ಯರ್ಥಕ್ಕೆ ಬರದೇ ಪಠ್ಯಪುಸ್ತಕಗಳ ಮುದ್ರಣ-ಸರಬರಾಜು ವಿಳಂಬವಾಗಿ ಅರ್ಧವರ್ಷವೇ ಕಳೆದುಹೋಗುತ್ತದೆ. ರಾಜಕಾರಣಿಗಳ ಹಲವು ಮುಖಗಳ ಹಗಲುವೇಷಗಳು ಸರಕಾರೀ ಶಾಲೆಗಳ ಸಿಬ್ಬಂದಿಯ ಕೆಲಸದಮೇಲೂ ಮತ್ತು ಅಲ್ಲಿ ಕಲಿಯುವ ಮಕ್ಕಳ ಮೇಲೂ ದುಷ್ಪರಿಣಾಮ ಬೀರದೇ ಇರುತ್ತವೆಯೇ? ರಾಜಕೀಯ ಪ್ರೇರಿತ, ರಾಜಕೀಯ ಪೋಷಿತ, ಸೌಲಭ್ಯ ವಂಚಿತ ಸರಕಾರೀ ಶಾಲೆಗಳಲ್ಲಿ, [ಗುಂಡೇ ಹಾರದ, ಬ್ರಿಟಿಷರ ಕಾಲದ ನಾಡಕೋವಿ ಹಿಡಿದು ನಮ್ಮ ಪೋಲೀಸರು ಇಂದಿನ ಅಧುನಿಕ ಶಸ್ತ್ರಾಸ್ತ್ರ ಹೊಂದಿರುವ ಭಯೋತ್ಪಾದಕರನ್ನು ಬೆನ್ನಟ್ಟುವಂತೇ] ಸಿಗುವ ಪರಿಕರಗಳನ್ನೇ ಉಪಯೋಗಿಸಿಕೊಂಡು ಆದಷ್ಟೂ ಚೆನ್ನಾಗಿ ಕಲಿಸುವ ಕೆಲವು ಶಿಕ್ಷಕರೂ ಇದ್ದಾರೆ, ಇಲ್ಲವೆಂದಲ್ಲ. ಆದರೆ ಪರಿಸ್ಥಿತಿಯ ಪ್ರಭಾವದಿಂದ ತಮ್ಮಲ್ಲಿರುವ ನೈಪುಣ್ಯವನ್ನು ಅವರು ಪೂರ್ಣಪ್ರಮಾಣದಲ್ಲಿ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಇಷ್ಟೆಲ್ಲಾ ಸಮಸ್ಯೆಗಳ ಆಗರವಾದ ಸರಕಾರೀ ಶಾಲೆಗಳಿಗೆ ಯಾರನ್ನು ಕರೆಯುತ್ತೀರಿ? ಸರಕಾರೀ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಮ್ಮಿಯಾಗಿರುವುದು ಯಾಕೆಂದು ಈಗ ಗೊತ್ತಾಗಿರಬೇಕಲ್ಲ?    

No comments:

Post a Comment