"ಒಂಬಲತಿ ಬರುತ್ತಾಳೆ ಕವಳಾ ಕೊಡು ಎನ್ನುತ್ತಾಳೆ !"
[ಪ್ರೇತಾತ್ಮಗಳ ಇರುವಿಕೆಯನ್ನು ವಿಜ್ಞಾನ ಒಪ್ಪುತ್ತದೆ ಆದರೆ ಅವುಗಳ ರೂಪವನ್ನಾಗಲೀ ಆಕೃತಿಯನ್ನಾಗಲೀ ಹೀಗೇ ಅಂತ ಯಾರೂ ಬಣ್ಣಿಸಲಾರರು, ಇದೊಂದು ಮೂರನೆಯ ಆಯಾಮವನ್ನು ಮಕ್ಕಳು ಅನುಭವಿಸುವ ಲೇಖನ]
ಓದುಗಾಯಾಂ ಪ್ರತಿಬೋಧಿತಾಂ ಲೇಖಕಾಂ ವಿ.ಆರ್.ಭಟ್ಟೇನ ಸ್ವಯಂ
ಸ್ವಾನಂದಂ ಮಿಶ್ರಿತಾಂ ಹಲವೆಡೆ ಲಘುಹಾಸ್ಯದಿಂ ಪೂರಿತಾಂ |
ಭಯಕೃದ್ಭಯನಾಶಿನೀಂ ಲೇಖನಂ ಏಕಾಧ್ಯಾಯದಿ ವಿರಚಿತಾಂ
ಅನುಕಂಪ ಜನಕಂ ಇಹದೊಳು ನಿಶಾಸಮಯ ದ್ವೇಷಿಣಂ||
[ತಮಾಷೆಗೆ ಬರೆದ ಈ ಮೇಲಿನ ಶ್ಲೋಕಕ್ಕೆ ವ್ಯಾಕರಣ-ಛಂದಸ್ಸು,ಭಾಷಾಲಂಕಾರಗಳನ್ನು ಪರಿಗಣಿಸಬೇಡಿ]
ಸ್ವಾನಂದಂ ಮಿಶ್ರಿತಾಂ ಹಲವೆಡೆ ಲಘುಹಾಸ್ಯದಿಂ ಪೂರಿತಾಂ |
ಭಯಕೃದ್ಭಯನಾಶಿನೀಂ ಲೇಖನಂ ಏಕಾಧ್ಯಾಯದಿ ವಿರಚಿತಾಂ
ಅನುಕಂಪ ಜನಕಂ ಇಹದೊಳು ನಿಶಾಸಮಯ ದ್ವೇಷಿಣಂ||
[ತಮಾಷೆಗೆ ಬರೆದ ಈ ಮೇಲಿನ ಶ್ಲೋಕಕ್ಕೆ ವ್ಯಾಕರಣ-ಛಂದಸ್ಸು,ಭಾಷಾಲಂಕಾರಗಳನ್ನು ಪರಿಗಣಿಸಬೇಡಿ]
ಮಕ್ಕಳ ಜಗತ್ತೇ ಬೇರೆ. ಆವರ ಆಟ-ಪಾಟಗಳ ವೈಖರಿ ಎಂಥವರಿಗೂ ಮುದನೀಡುವಂಥದ್ದು. ಯಾರಮೇಲೇ ಕೋಪವೋ ತಾಪವೋ ಪರಿತಾಪವೋ ಇದ್ದರೂ ಮಕ್ಕಳನ್ನು ನೋಡಿದಾಗ ಅದೆಲ್ಲಾ ಮರೆತುಹೋಗುತ್ತದೆ! ಅದಕ್ಕೇ ಇರಬೇಕು ಮಕ್ಕಳ ಆ ಜೀವನದ ಮಜಲುಗಳನ್ನು, ಬಾಲ್ಯವನ್ನು ಜೀವಮಾನಪೂರ್ತಿ ಇರಗೊಡುವುದಿಲ್ಲ ಸೃಷ್ಟಿ. ಒಂದೊಮ್ಮೆ ಎಲ್ಲರೂ ಮಕ್ಕಳ ಥರಾ ಇದ್ದಿದ್ದರೆ ಕಡಿದುಹೋದ ಸಂಬಂಧಗಳು ಮತ್ತೆ ಬೆಸೆಯುತ್ತಿದ್ದವೇನೋ. ಮಣ್ಣು ಮರಳು ನೀರು ಬಣ್ಣ ಪೆನ್ಸಿಲ್ ಕಾಗದ ಕಡ್ಡಿ ಏನೇ ಸಿಕ್ಕರೂ ಸಿಕ್ಕಿದವಸ್ತುವಿಗೆ ತಕ್ಕಹಾಗೇ ಆಟ ಆರಂಭವಾಗುತ್ತದೆ. ಮಕ್ಕಳು ಇಲ್ಲದಿದ್ದರೆ ಗಿಜಿಗುಡುವ ಈ ಜಗವೆಲ್ಲಾ ಹಕ್ಕಿಗಳಿಲ್ಲದ ಜಾಗದಂತೇ ಆಗುತ್ತಿತ್ತೇನೋ.
ನಾವೆಲ್ಲಾ ಚಿಕ್ಕವರಿರುವಾಗ ಸಾಯಂಕಾಲವಾದರೆ ಸಾಕು ನಮಗೆ ಕತ್ತಲೆ ಇರುವೆಡೆ ಹೋಗಲು ಹೆದರಿಕೆ, ಒಂಥರಾ ಪುಕು ಪುಕು ನಡುಕ, ಬರೀ ಪುಕ್ಕಲುತನ. ಕೆಲವೊಮ್ಮೆ ಒಬ್ಬರೇ ಇರಬೇಕಾದ ಜಾಗದಲ್ಲಿ ಕುಂತಲ್ಲೇ ಚಳಿಮಳೆಗಾಲವನ್ನೂ ಲೆಕ್ಕಿಸದೇ ಇಳಿಯುವ ಬೆವರು! ಮಕ್ಕಳಿಗೆ ದೊಡ್ಡವರಿಗಿಂತಾ ಹೆದರಿಕೆ ತುಂಬಾ ಜಾಸ್ತಿ ಇರುತ್ತದೆ ಎಂಬುದನ್ನು ವಿಜ್ಞಾನವೂ ಒಪ್ಪಿಕೊಂಡಿದೆ. ನಮ್ಮಲ್ಲಿ ನಾವೆಲ್ಲಾ ಚಿಕ್ಕವರಿರುವಾಗ ಶಾಲೆಗೆ ಹೋಗಿ ಬರುವಾಗೆಲ್ಲಾ ಯಾವುದಾದರೊಂದು ಕಥೆಗಳು ಸುದ್ದಿಗಳು ನಮ್ಮೊಳಗೆ ಹರಿದಾಡುತ್ತಲೇ ಇರುತ್ತಿದ್ದವು. ಕಾಗೆ ಎಂಜಲು ಮಾಡಿದ ಹುಳಿಸೇಬೀಜ, ಮಾವಿನಮಿಡಿ, ಇತ್ಯೇತ್ಯಾದಿಗಳಿಂದ ಹಿಡಿದು ಹಬ್ಬದ ಸಾಲಿನ ತಿಂಡಿಗಳಾದ ಚಕ್ಕುಲಿ, ಉಂಡೆ ಮುಂತಾದುವುಗಳನ್ನು ಹಂಚಿಕೊಂಡು ಅದೂ ಇದೂ ಮಾತನಾಡುತ್ತಾ ಹಳ್ಳಿಯ ಕಾಲು ಹಾದಿಗಳಲ್ಲಿ ಅಡ್ಡಾ ದಿಡ್ಡೀ ಓಲಾಡುತ್ತಾ ಸಾಗುವ ನಮ್ಮ ವೈಖರಿಯೇ ಬಹಳ ಆಮೋದಕರವಾಗಿರುತ್ತಿತ್ತು. ಅಲ್ಲಿ ಒಬ್ಬೊಬ್ಬರು ಒಂದೊಂಥರಾ ಕಥೆಗಳನ್ನು ಹೊತ್ತುಬರುತ್ತಿದ್ದರು! ಕಥೆಗಳಲ್ಲಿನ ಪಾತ್ರಗಳು ಕೆಲವೊಮ್ಮೆ ಕಣ್ಣೆದುರೇ ಬರುತ್ತಿವೆಯೇನೋ ಎಂಬಂತೇ ಬಣ್ಣಿಸುವ ಕಲಾವಿದರು ನಮ್ಮಲ್ಲಿದ್ದರು.
ಇಂತಹ ಕಥೆಗಳಲ್ಲಿ ದೆವ್ವ-ಭೂತ-ಪಿಶಾಚಿಗಳ ಕಥೆಯೇನೂ ಕಮ್ಮಿ ಇರುತ್ತಿರಲಿಲ್ಲ. ಊರಲ್ಲಿ ಮುದುಕರು ಯಾರಾದ್ರೂ ತೀರಿಕೊಂಡರೆ ವಾರಗಟ್ಟಲೆ ಅಂಥದ್ದೇ ಸುದ್ದಿ. ಸತ್ತವರು ಏನಾಗುತ್ತಾರೆ. ಭೂತ-ಪ್ರೇತವಾದವರು ಏನುಮಾಡುತ್ತಾರೆ-ಇವೆಲ್ಲಾ ಹಾದಿಯುದ್ದಕ್ಕೂ ಹಲವು ದಿನ ಗ್ರಾಸವಾದ ವಿಷಯಗಳು. ಅದರಲ್ಲಂತೂ ನಾವು ಚಿಕ್ಕವರಿರುವಾಗ ಬಂದ " ನಾ ನಿನ್ನ ಬಿಡಲಾರೆ’ ಸಿನಿಮಾವನ್ನು ನಮ್ಮ ಸದಾಶಿವ ನೋಡಿಬಿಟ್ಟಿದ್ದ! ಆತ ಹೇಳಿದ ಕಥೆ ಕೇಳಿ ತಿಂಗಳುಗಟ್ಟಲೇ ನಮಗೆ ಹೇಳಿಕೊಳ್ಳಲಾಗದ "ಧೈರ್ಯ ಭಯಂಕರ ಧೈರ್ಯ" ! ಧೈರ್ಯ ಎನ್ನುವಾಗ ನಡುಗುತ್ತಿದ್ದೆವು ಎನ್ನಲು ಅಧೈರ್ಯ ! ನಮ್ಮಲ್ಲಿಯೇ ಕೆಲವರನ್ನು ಆಯ್ಕೆಮಾಡಿ ’ಎದಗ’ರೆಂದು ಹೆಸರಿಸಿದ್ದೆವು. ಎದಗ ಎಂದರೆ ಎದೆ ಗಟ್ಟಿ ಇರುವವನು-ಯಾವುದಕ್ಕೂ ಹೆದರುವ ಆಸಾಮಿಯಲ್ಲ ಅಂತ. ಈಗ ಹೇಳುತ್ತೇನೆ ಕೇಳಿ ಅವರೆಲ್ಲಾ ಹೆಸರಿಗೆ ಮಾತ್ರ ಎದಗರಾಗಿದ್ದರು. ಇಂತಹ ಎದಗರ ಜೊತೆಗೆ ನಾವು ಸಾದಾ ಸೀದಾ ಹುಡುಗರು ಹೋಗುವಾಗ ನಮಗೆ ಭಯವಿರಬೇಕೇಕೆ? ಹಾಗಂತ ಕೊಚ್ಚಿಕೊಳ್ಳುವುದು ನಮ್ಮ ಎದಗರು ಎನಿಸಿಕೊಂಡವರದಾಗಿತ್ತು.
ನಮಗೆ ಆಗ ಬೆಳಿಗ್ಗೆ ಮತ್ತು ಸಾಯಂಕಾಲ ಶಾಲೆ ಇರುತ್ತಿದ್ದು ಮಧ್ಯೆ ಊಟಕ್ಕೆ ೧೧ ರಿಂದ ೨ ಗಂಟೆ ಬಿಡುವಿರುತ್ತಿತ್ತು. ಸಾಯಂಕಾಲ ೫:೩೦ಕ್ಕೆ ಶಾಲೆಬಿಟ್ಟಾಗ ಊರದಾರಿಯಲ್ಲಿ ಅವರವರ ಮನೆಗಳು ಬಂದಾಗ ಅವರವರು ಗುಂಪಿಗೆ ವಿದಾಯ ಹೇಳಿ ಗುಂಪು ನಿಧಾನವಾಗಿ ಕರಗುತ್ತಾ ಹೋಗುತ್ತಿತ್ತು. ದೂರ ದೂರ ಒಂಟಿ ಮನೆಯಿರುವವರು ಪಾಪ ಅವರ ಫಜೀತಿ ಹೇಳತೀರ! ಮನೆಯಲ್ಲಿ ಇಂದಿನಂತೇ ಮಕ್ಕಳನ್ನು ಕರೆದೊಯ್ಯಲು ಯಾರೂ ಬರುತ್ತಿರಲಿಲ್ಲ. ನಮಷ್ಟಕ್ಕೆ ನಾವೇ ಸ್ವತಂತ್ರರು. ಯಾವ ಬೀದಿನಾಯಿಗೂ ಕಲ್ಲೆಸೆಯ ಬಹುದಿತ್ತು;ಅಟ್ಟಿಸಿಕೊಂಡು ಬಂದರೆ ಮರವೇರಿ ತಪ್ಪಿಸಿಕೊಳ್ಳಬಹುದಿತ್ತು, ಅದಿಲ್ಲಾ ಎಲ್ಲೋ ಅಪ್ಪೀತಪ್ಪೀ ಕಚ್ಚಿದರೆ ಏನೂಮಾಡಲಾಗದ ಸ್ಥಿತಿ ಇರುತ್ತಿತ್ತು. ಆದರೂ ಅಲ್ಲಲ್ಲಿ ಯಾರ್ದೋ ಮಾವಿನ ಮರಗಳಿಗೆ ಕಾಯಿಬಿಟ್ಟಾಗ ಕಲ್ಲೆಸೆಯುವುದು,ಜಂಬೇ ಹಣ್ಣು [ಗುಲಾಬಿ ಬಣ್ಣದ ಜಂಬುನೇರಳೆ ಹಣ್ಣು] ಕೊಯ್ಯುವುದು ಇದೆಲ್ಲಾ ಸರ್ವೇಸಾಮಾನ್ಯ ಕಿತಾಪತಿ. ನಮ್ಮ ಮಧ್ಯೆಯೂ ಕೆಲವೊಮ್ಮೆ ಪಕ್ಷಪಂಗಡಗಳು ಹುಟ್ಟಿಕೊಳ್ಳುತ್ತಿದ್ದವು. ಆಗಾಗ ವಿಭಜನೆ, ಮತ್ತೆ ವಿಲೀನ, ಮತ್ತೆ ವಿಭಜನೆ ಮತ್ತೆ ವಿಲೀನ--ಇದೂ ಕೂಡ ಸತತ ಅನುಷ್ಠಾನದಲ್ಲಿರುವ ಕಾರ್ಯವಾಗಿತ್ತು.
ದೆವ್ವಕ್ಕೆ ಕಾಲು ತಿರುವುಮುರುವಾಗಿರುತ್ತದಂತೆ, ದೆವ್ವ ಬಿಳಿಯ ಬಣ್ಣದಲ್ಲಿ ಇರುವುದಂತೆ, ರಾತ್ರಿ ಹೊತ್ತಲ್ಲಿ ಗುಡ್ಡಗಳಲ್ಲಿ ಕೊಳ್ಳಿ ದೀಪಗಳನ್ನು ಹಿಡಿದು ಓಡಾಡುತ್ತವಂತೆ. ಅಕಸ್ಮಾತ್ ಯಾರಾದರೂ ಸಿಕ್ಕಿದರೆ ಅವರಿಗೆ ಗ್ರಹಚಾರ ಕಟ್ಟಿಟ್ಟದ್ದಂತೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗಳ ರಾತ್ರಿಗಳಲ್ಲಿ ಒಡ್ಡೋಲಗವೆತ್ತಿಕೊಂಡು ನಾನಾ ವಾದ್ಯಗಳನ್ನು ಬಾರಿಸಿಕೊಳ್ಳುತ್ತಾ ಅವು ಸಾಗುತ್ತವಂತೆ. ಶಿವನ ದೇವಸ್ಥಾನವಿರುವಲ್ಲಿಯವರೆಗೂ ಅವು ಹಾಗೇ ನಡೆದು ಹೋಗಿಬಂದು ಮಾಡುತ್ತಲೇ ಇರುತ್ತವಂತೆ. ಕಣ್ಣು ಅತ್ಯಂತ ಕೆಂಪಗಿರುತ್ತದಂತೆ. ಕೈಬೆರಳುಗಳು ಚೂಪಾಗಿದ್ದು ಹೊಟ್ಟೆ ಬಗೆದು ರಕ್ತಹೀರಲು ಅದು ಅವುಗಳಿಗೆ ಸಹಕಾರಿಯಂತೆ. ಅವುಗಳಲ್ಲಿ ಕೆಲವು ದೆವ್ವಗಳು ಮನುಷ್ಯರಿಗೆ ಉಪಕಾರಿಗಳಾದರೆ ಇನ್ನೂ ಕೆಲವು ದೆವ್ವಗಳು ಅಪಕಾರಿಗಳಾಗಿದ್ದು ಅತ್ಯಂತ ಕ್ರೂರ ಸ್ವಭಾವದವಂತೆ.---ಹೀಗೇ ಇಲ್ಲಸಲ್ಲದ ವರ್ಣನೆಗಳುಳ್ಳ ಕಥೆಗಳನ್ನು ಹೇಳಿದರೆ ಅದೇ ಒಂದು ಕಾದಂಬರಿಯಾದೀತು! ಮಾಧ್ಯಮವಾಹಿನಿಗಳೂ ಯಾವುದೇ ಭಯಾನಕ ಧಾರಾವಾಹಿಗಳೂ ಇಲ್ಲದ ಆ ಕಾಲದಲ್ಲಿಯೇ ಆ ರೀತಿಯ ನಡುಕ ಹುಟ್ಟಿಸುತ್ತಿದ್ದ ವಿಷಯಗಳು ಇವತ್ತಿನ ಪುಟಾಣಿಗಳಿಗೆ ಹೇಗನಿಸಬಹುದು ಎಂಬುದು ತರ್ಕಿಸಬೇಕಾದ ವಿಷಯ.
ದೆವ್ವಗಳು ಕಾಣಿಸಿಕೊಳ್ಳುವ ಜಾಗಗಳೂ ಕೆಲವು ಗುರುತಿಸಲ್ಪಟ್ಟಿದ್ದವು. ಜನನಿಬಿಡ ಸ್ಥಳಗಳಲ್ಲಿ, ಊರುಕೇರಿಗಳ ಮನೆಗಳ ಮಧ್ಯದಲ್ಲಿ ದೆವ್ವಗಳು ಕಾಣಿಸುತ್ತಿರಲಿಲ್ಲ. ಯಾರೂ ಜಾಸ್ತಿ ತಿರುಗಾಡದ ಜಾಗಗಳಲ್ಲೇ ಅವುಗಳ ಅಬರ್ತಳ ಜೋರು! ಒಬ್ಬರೇ ಯಾರಾದರೂ ಅಂತಹ ಜಾಗಗಳ ಮುಖಾಂತರ ಹಾದುಹೋಗುವಾಗ ಅವರಿಗೆ ಕೆನ್ನೆಗೆ ಬಾರಿಸುವುದು, ಕಲ್ಲೆಸೆಯುವುದು, ವಿಕೃತಸ್ವರದಲ್ಲಿ ಕೂಗುವುದು, ಅಕರಾಳವಿಕರಾಳ ರೂಪದಲ್ಲಿ ಕಂಡು ಪ್ರಜ್ಞೆತಪ್ಪಿಸುವುದು, ದೆವ್ವಕಂಡು ಹೆದರಿದ ಕೆಲವರು ಜ್ವರದಿಂದ ವಾರಗಟ್ಟಲೇ ಮೇಲೇಳದಿದ್ದುದು-ಕೆಲವರು ಹೆದರಿ ಅಸುನೀಗಿದ್ದು ಇಂಥದ್ದಕ್ಕೆಲ್ಲಾ ದೆವ್ವಗಳು ಕಾರಣ ಅಂತ ನಾವು ಕೇಳಿದ್ದಷ್ಟೇ, ಆದರೆ ದೆವ್ವಗಳನ್ನು ನೋಡಿರಲಿಲ್ಲ. ನಮ್ಮೂರಲ್ಲಿ ’ಗೋಳ್‍ಮಕ್ಕಳ ಹೊಂಡ’ , ಬೆಳ್ಳರೆ, ಶಿಂಗಾರಬೇಣ, ಬೋಳಗುಡ್ಡೆ ಹೀಗೇ ಇವೆಲ್ಲಾ ದೆವ್ವಗಳ ರಂಗಸ್ಥಳಗಳು ಈ ಜಾಗಗಳಾಗಿದ್ದವು. ಆ ಜಾಗಗಳ ಮನೆ ಹಾಳುಬೀಳಲಿ ಬೇರೇ ಖಾಲೀ ಜಾಗಗಳಲ್ಲಿ ಒಂದರ್ಧ ಕಿಲೋಮೀಟರು ಒಬ್ಬರೇ ನಡೆಯಬೇಕೆಂದರೆ ಅಲ್ಲೂ ದೆವ್ವಗಳು ಕಾಣಿಸುತ್ತವೇನೋ ಎಂಬ ಭಯವಿತ್ತಲ್ಲ ಅದನ್ನೀಗ ನೆನೆದರೆ ನಗು ಬರುತ್ತದೆ. ’ಗೋಳ್‍ಮಕ್ಕಳ ಹೊಂಡ’ ಎಂಬ ಹೆಸರು ಕೇಳಿದರೇ ಒಂಥರಾ ನಮ್ಮ ನರನಾಡಿಗಳನ್ನೆಲ್ಲಾ ದೆವ್ವಗಳು ಹಿಡಿದು ಎಳೆದಹಾಗೇ ಆಗುತ್ತಿತ್ತು !
ರಾತ್ರಿಹೊತ್ತಿನಲ್ಲಿ ವಿದ್ಯುದ್ದೀಪಗಳು ಹಠಾತ್ತನೇ ಹೋಗಿಬಿಟ್ಟರೆ ನಮ್ಮ ಕಥೆ ಅದೊಂದು ಹೇಳಲಾಗದ ವ್ಯಥೆ! ಯಾರೇ ದೊಡ್ಡವರು ಹತ್ತಿರವಿದ್ದರೂ ಅವರನ್ನು ಕಂಡರೇ ದೆವ್ವ ಆ ರೂಪದಲ್ಲಿ ಬಂದುಬಿಟ್ಟಿತೇನೋ ಎಂಬ ಭಯದಲ್ಲಿ ನಮ್ಮ ಪ್ರಸಾದವೆಲ್ಲಾ ಒಣಗಿಹೋಗುತ್ತಿತ್ತು. ಕತ್ತಲೆಯಲ್ಲಿ ಬೆಕ್ಕು ಕೂಗಿದರೆ, ಪಕ್ಕದ ಗುಡ್ಡದಲ್ಲಿ ನರಿ ಕೂಗಿದರೆ ನಮಗೆಕೋ ಅನುಮಾನ ! ವಿದ್ಯುತ್ತು ಮರಳಿಬಂದಮೇಲೇ, ಸೌದೆಯ ಒಲೆಯಲ್ಲಿ ಆರುತ್ತಿರುವ ಕಿಡಿಯೊಂದು ಮತ್ತೆ ಹೊಗೆಯಾಡಿ ಹೊತ್ತಿಕೊಂಡಂತೇ ಕುಟುಕುಜೀವ ನಮ್ಮ ಶರೀರದಲ್ಲಿ ಮತ್ತೆ ಉಸಿರಾಡಿ ನಮ್ಮ ದೇಹದಲ್ಲಿ ಚೈತನ್ಯ ಮರಳಿಬರುತ್ತಿತ್ತು. ಯಾರೋ ಪುಣ್ಯಾತ್ಮ ವಿಶ್ವೇಶ್ವರಯ್ಯನಂತೆ ಆ ದೀಪವನ್ನು ತಯಾರಿಸಲು ಆರಂಭಿಸಿದ್ದು, ಅವನಿಗೆ ನಮ್ಮ ಕೋಟಿ ಕೋಟಿ ಪ್ರಣಾಮಗಳು. ಬಡಪಾಯಿ ಮಕ್ಕಳನ್ನು ಕಂಡು ಆ ವ್ಯಕ್ತಿಗೆ ವಿದ್ಯುತ್ ತಯಾರಿಸುವ ಬುದ್ಧಿಯನ್ನು ದೇವರೇ ನೀಡಿರಬೇಕು ! ಅಂತಹ ದೀಪವೊಂದು ಇರದಿರುತ್ತಿದ್ದರೆ ದೆವ್ವಗಳು ಖಂಡಿತಾ ನಮ್ಮನ್ನು ಬದುಕಬಿಡುತ್ತಿರಲಿಲ್ಲ ! ಆದರೂ ನಮಗೆ ರಾತ್ರಿ ಹೊತ್ತಿನಲ್ಲಿ ಉಚ್ಚೆಗೆ ಅವಸರವಾದರೆ ಸ್ವಲ್ಪ ಕಷ್ಟವಾಗುತ್ತಿತ್ತು. ಯಾಕೆಂದರೆ ಅಪ್ಪಟ ಸಂಪ್ರದಾಯವಾದಿಗಳಾದ ನಮ್ಮಲ್ಲೆಲ್ಲಾ ಆ ಕಾಲಕ್ಕೆ ಕಕ್ಕಸು-ಬಚ್ಚಲುಮನೆ ಮನೆಯೊಳಗೇ ಇರುತ್ತಿರಲಿಲ್ಲ. ಹೊರಗೆ ಅನತಿ ದೂರದಲ್ಲಿ ಇರುವ ಅವುಗಳಿಗೆ ವಿದ್ಯುದ್ದೀಪದ ವ್ಯವಸ್ಥೆ ಇರುತ್ತಿರಲಿಲ್ಲ.ದೊಡ್ಡವರನ್ನು ಎಬ್ಬಿಸಿ ವಿನಂತಿಸಿ ಕರೆದೊಯ್ದರೂ ಮೂತ್ರಬಿಡುವಾಗ ನಮ್ಮ ಕೈಕಾಲು ಥರಥರಥರ ನಡುಗುತ್ತಿತ್ತು. ಅಸಲಿಗೆ ನಾವೆಲ್ಲಾ ಚಿಕ್ಕವರಿರುವಾಗ ಕಕ್ಕಸು ಮನೆಯೇ ಇರಲಿಲ್ಲ. ಎಲ್ಲರೂ ಸುತ್ತಲ ಗುಡ್ಡಗಳಿಗೆ ಚೊಂಬಿನಲ್ಲಿ ನೀರು ತೆಗೆದುಕೊಂಡು ಹೋಗಿ ಮಲವಿಸರ್ಜನೆ ಮಾಡಿಬರಬೇಕಾಗಿತ್ತು. ಅಲ್ಲೆಲ್ಲೋ ಕುರುಚಲು ಪೊದೆಗಳ ನಡುವೆ ಹಾವಿಗೆ,ಚೇಳಿಗೆ ಹೆದರುತ್ತಾ ಅಂತೂ ಹೊರಹಾಕಲೇ ಬೇಕಾಗಿದ್ದನ್ನು ಹೊರಹಾಕಿ ವಾಪಸ್ಸಾಗುತ್ತಿದ್ದೆವು. ಮಳೆಗಾಲದಲ್ಲಿ ಸೋನೆಮಳೆ ಸುರಿಯುವಾಗ ಕಕ್ಕಸಿಗೆ ಅವಸರವಾದರೆ ಕೊಡೆಯನ್ನು ಹಿಡಿದೇ ಕುಕ್ಕರುಗಾಲಿನಲ್ಲಿ ಕುಳಿತು ವಿಸರ್ಜನಾ ಕ್ರಿಯೆ ನಡೆಯುತ್ತಿತ್ತು. ಅಲ್ಲೂ ದೆವ್ವಗಳು ಬಂದರೆ ಎಂಬಾಭಯ ನಮ್ಮನ್ನು ಬಿಟ್ಟಿರುತ್ತಿರಲಿಲ್ಲ!
ಒಂಬಲತಿ ಎಂಬುದು ಹೆಣ್ಣು ದೆವ್ವ. ಸಾಮಾನ್ಯ ಹೆಂಗಸಿನ ರೂಪವೇ ಇರುತ್ತದಂತೆ. ಆದರೆ ಆಕೆಯ ಅಂಗೈ ತೂತಂತೆ. ಅವಳು ಬಂದರೆ ತನ್ನ ಕೈಮುಂದೆ ಮಾಡಿ ಕವಳ [ಎಲೆಯಡಿಕೆ] ಕೊಡು ಎನ್ನುತ್ತಾಳಂತೆ. ಕವಳ ಕೊಟ್ಟಾಗ ಕೈಯ್ಯ ತೂತಿನ ಮೂಲಕ ಅದು ಕೆಳಗೆ ಬೀಳುತ್ತದಲ್ಲಾ ಆಗ ಅದನ್ನು ಎತ್ತಿಕೊಡು ಎನ್ನುತ್ತಾಳಂತೆ. ಅದನ್ನು ಎತ್ತಲು ನಾವು ಬಗ್ಗಿದಾಗ ಕುತ್ತಿಗೆಮುರಿಯುತ್ತಾಳಂತೆ. ಆದರೆ ಚರ್ಮದ ಚಪ್ಪಲಿಗೂ ಅವಳಿಗೂ ಬದ್ಧ ದ್ವೇಷವಂತೆ. ಚರ್ಮದ ಚಪ್ಪಲಿ ಕಂಡರೆ ಸಾಕು ಬೆಂಕಿಯನ್ನು ಕಂಡ ಕಾಡುಪ್ರಾಣಿಯಂತೇ ದೂರ ಓಡುತ್ತಾಳಂತೆ. ಆಕೆ ಕೂಡಾ ಬರುವುದು ಒಬ್ಬರೇ ಓಡಾಡುವಾಗ! ಹಾಗೆಲ್ಲಾ ಜನಸಂದಣಿಯ ನಡುವೆ ಆಕೆ ಕಾಣಿಸಿಕೊಳ್ಳುವುದಿಲ್ಲ. ಇಂತಹ ಜನಜನಿತ ಊಹಾಪೋಹಗಳೂ ಕಲ್ಪನೆಗಳೂ ಸೇರಿ ಇದ್ದಬದ್ದ ನಮ್ಮ ಶಕ್ತಿಯನ್ನೆಲ್ಲಾ ಉಡುಗಿಹಾಕಿಬಿಡುತ್ತಿದ್ದವು. ನಾವೆಲ್ಲಾ ಹವಾಯಿ ಚಪ್ಪಲಿ ಹಾಕುತ್ತಿದ್ದುದರಿಂದ ಚರ್ಮದ ಚಪ್ಪಲಿ ಯಾವುದೆಂಬುದು ಅಷ್ಟಾಗಿ ತಿಳಿಯದು. ಆದರೂ ಸಾಲ್ಕೋಡ್ ಹೆಗಡೇರು ಹಾಕುತ್ತಾರಲ್ಲಾ ನಡೆಯುವಾಗ ನರ್ ಚರ್ ನರ್ ಚರ್ ನರ್ ಚರ್ ಎನ್ನುವ ಚಪ್ಪಲಿ ಆ ಚಪ್ಪಲಿಯೇ ಚರ್ಮದ ಚಪ್ಪಲಿ ಎಂದು ಯಾರೋ ಹೇಳಿದ್ದರು. ಹೀಗಾಗಿ ಆಪತ್ಕಾಲಕ್ಕಾಗಿ ದರೋಡೆಕೋರರನ್ನು ನಿಭಾಯಿಸಲು ಏ.ಕೆ.೪೭ ಇಟ್ಟುಕೊಂಡಂತೇ ನನಗೂ ಅಂತಹ ನರ್ ಚರ್ ಎನ್ನುವ ಚರ್ಮದ ಚಪ್ಪಲಿಯೊಂದನ್ನು ಇಟ್ಟುಕೊಳ್ಳುವ ಆಸೆಯಾಗಿತ್ತು ! ಅದನ್ನು ಧರಿಸಿ ನಡೆಯುವಾಗ ಹೇಗೂ ಒಂಬಲತಿ ಬರುವುದಿಲ್ಲ;ಒಂಬಲತಿ ಹಾಗಿರಲಿ ದೆವ್ವಗಳೇ ಬರುವುದಿಲ್ಲ ಎಂದಮೇಲೆ ಅದು ಬ್ರಿಟಿಷರು ಭಾರತಕ್ಕೆ ಕೊಟ್ಟ ಸ್ವಾತಂತ್ರ್ಯಕ್ಕಿಂತಾ ದೊಡ್ಡ ಸ್ವಾತಂತ್ರ್ಯದ ಥರಾ ನನಗೆ ಭಾಸವಾಗುತ್ತಿತ್ತು! ಒಪಕ್ಷ ಒಂಬಲತಿ ಬಂದುಬಿಟ್ಟರೆ ಮೆಟ್ಟಿರುವ ಚರ್ಮದ ಚಪ್ಪಲಿಯನ್ನು ಅವಳೆಡೆಗೆ ಬೀಸಿ ಎಸೆದುಬಿಟ್ಟರೆ ಪಾಕಿಗಳು ಭಾರತಕ್ಕೆ ಬಾಂಬು ಎಸೆದಂತೇ ಆಗಿಬಿಡುವುದಲ್ಲವೇ? ಓಹೊಹೊ ನಗೆಯಾಡಬೇಡಿ ಸ್ವಾಮೀ ನಮ್ಮ ಪಾಡು ಯಾರಿಗೆಬೇಕು ಹೇಳಿ ! ದೊಡ್ಡವರನ್ನು ಕೇಳಿದರೆ ಬೈತಾರೆ, ಚಿಕ್ಕವರಲ್ಲಿ ಯಾರೂ ದೆವ್ವಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ನುರಿತವರಲ್ಲ. ಒಂದು ಗುಟ್ಟು ಹೇಳಲೋ ? ನಮ್ಮಲ್ಲಿ ಅನೇಕ ದೊಡ್ಡವರಿಗೂ ದೆವ್ವದ ಭಯ ಇತ್ತು. ಅವರಲ್ಲೂ ಕೆಲವರು ರಾತ್ರಿ ಮೂತ್ರವಿಸರ್ಜನೆಗೆ ಅವಸರವಾದರೂ ನೋವನುಭವಿಸುತ್ತಾ ತಡೆದುಕೊಂಡು ಬೆಳಿಗ್ಗೇನೇ ಹೋಗುವುದು ನಮಗೆ ಗೊತ್ತಿರದ ವಿಷಯವೇನಲ್ಲ ಬಿಡಿ !
ಇನ್ನು ನೆಂಟರಮನೆಗಳಿಗೆ ಹೋದರೆ ಅಲ್ಲಿಯ ದೆವ್ವ-ಭೂತ-ಪಿಶಾಚಿಗಳ ನೆಟ್‍ವರ್ಕೇ ಬೇರೆ ! ಇದೆಲ್ಲಾ ಒಂಥರಾ ಮೊಬೈಲ್ ನೆಟ್‍ವರ್ಕ್ ಇದ್ದಹಾಗೇ. ಕೆಲವು ರೋಮಿಂಗ್ ನಲ್ಲಿರುತ್ತವೆ. ಕೆಲವು ರೋಮಿಂಗ್ ಸೌಲಭ್ಯ ಇಲ್ಲದವು. ರೋಮಿಂಗ್ ಸೌಲಭ್ಯ ಇದ್ದವು ಅಲ್ಲೂ ಬರುತ್ತಿದ್ದವು! ಅಮ್ಮನ ಜೊತೆಗೆ ಅಮ್ಮನ ತವರುಮನೆಗೆ ಹೋದಾಗ ಅಥವಾ ಇನ್ನೆಲ್ಲಿಗೋ ಹೋದಾಗ ನಮಗೆ ಈ ವಿಷಯದಲ್ಲಿ ಯಮಯಾತನೆ! ಅಲ್ಲಿ ಇನ್ನೂ ಕಷ್ಟ. ರಾತ್ರಿ ಎಲ್ಲಾಕಡೆಯೂ ನಮ್ಮನೆಯ ರೀತಿಯಲ್ಲೇ ದೀಪ ಇರಲು ಸಾಧ್ಯವೇ ? ಅಲ್ಲಿರುವ ದೀಪವನ್ನೇ ಅವಲಂಬಿಸಿ ನಾವು ನಮ್ಮ ವಿಸರ್ಜನಾ ವ್ಯವಹಾರವನ್ನು ತಹಬಂದಿಗೆ ತಂದುಕೊಳ್ಳುವುದು ಬಾರೀ ಸಾಹಸದ ಕೆಲಸವೇ ಆಗುತ್ತಿತ್ತು. ಹಗಲು ಹೊತ್ತಿನಲ್ಲಿ ಅಲ್ಲಿನ ಹುಡುಗರ ಜೊತೆ ಆಡಿ ಹೊತ್ತುಕಳೆಯುವ ನಮಗೆ ಹಾಗೂ ಹೀಗೂಮಾಡಿ ರಾತ್ರಿಯನ್ನು ಕಳೆಯಬೇಕಾಗಿ ಬರುತ್ತಿತ್ತು. ಕನಸಿನಲ್ಲಿ ದೆವ್ವಗಳನ್ನು ಕಂಡರಂತೂ ಹಾಸಿಗೆಯೆಲ್ಲಾ ಒದ್ದೆಯಾಗುವ ಪ್ರಸಂಗ! ಯಾರಲ್ಲಿ ಹೇಳುವುದು ? ಹೇಳಲಾರೆವು ಹೇಳದೇ ಇರಲಾರೆವು.
ದೆವ್ವಗಳ ಕಾಟ ಕೆಲವು ಊರುಗಳಲ್ಲಿ ತುಂಬಾ ಜಾಸ್ತಿ ಇತ್ತೆಂದು ಕೇಳುತ್ತಿದ್ದೆವು. ಊರಿನಲ್ಲಿ ವರ್ಷಕ್ಕೊಮ್ಮೆ ಹಸಿರುಪೂಜೆ/ ಗಡಿ ಪೂಜೆ/ ಊರಹಬ್ಬ / ಆರಿದ್ರಾಮಳೆ ಹಬ್ಬ ಎಂಬೆಲ್ಲಾ ಹೆಸರಲ್ಲಿ ಕರೆಸಿಕೊಳ್ಳುವ ಬೇಸಿಗೆ-ಮಳೆ ಗಡಿಕಾಲದ ಪೂಜೆಯೊಂದು ನಡೆಯುತ್ತಿತ್ತು. ಆಗ ಅಲ್ಲಿ ಸಾವಿರಾರು ಬಾಳೆಹಣ್ಣುಗಳನ್ನೂ, ಹತ್ತಾರು ಎಳೆನೀರುಗಳನ್ನೂ, ನೂರಾರು ತೆಂಗಿನಕಾಯಿಗಳನ್ನೂ, ಅನ್ನ, ಹಲಸಿನ ಹಣ್ಣಿನ ಕಡುಬು ಮೊದಲಾದವನ್ನೂ ಊರ ಜಟಗ, ಮಾಸ್ತಿ[ಮಹಾಸತಿ], ಚೌಡಿ, ನಾಗರು, ಕೀಳು ಇವುಗಳಿಗೆಲ್ಲಾ ನಿವೇದಿಸುತ್ತಿದ್ದರು. ಕೀಳಿಗೆ ಹಾಕುವ ಅನ್ನದ ಬಲಿಯನ್ನು ನೋಡಿದಾಗ ಅವುಗಳಿಗೆ ಕುಡಿಯಲು ಎಳೆನೀರು ಕಡಿದು ಅಲ್ಲಲ್ಲಿ ಇಡುವಾಗ 'ಕೀಳು' ಎಂದರೇನೆಂದು ಯಾರನ್ನಾದರೂ ಕೇಳಿದರೆ ಅವರು ಸರಿಯಾಗಿ ಉತ್ತರಿಸುತ್ತಲೇ ಇರುತ್ತಿರಲಿಲ್ಲ. ಕೀಳು ಎಂದರೆ ದೆವ್ವ-ಭೂತಗಳಿಗೆ ಇರುವ ಪರ್ಯಾಯ ಪದ ಎನ್ನುವುದು ನಮಗೆ ತಿಳಿದಿರಲಿಲ್ಲ. ಊರು ಬೆಳೆಯುತ್ತಾ ಬಂದಹಾಗೇ ದೆವ್ವಗಳ ಸಂಖ್ಯಾಬಲ ಕಮ್ಮಿಯಾಯಿತೋ ಅಥವಾ ಜನರಿಗೆ ಆ ಭಾವನೆ ಕಮ್ಮಿಯಾಯಿತೋ ಸೃಷ್ಟಿಕರ್ತನೇ ಬಲ್ಲ. ಈಗೀಗ ದೆವ್ವಗಳ ಸುದ್ದಿ ಅಷ್ಟಾಗಿ ಕೇಳುವುದಿಲ್ಲವಪ್ಪ ! ಹಳ್ಳಿಗಳಲ್ಲಿ ಪ್ರತೀ ಮನೆಯ ತೋಟದಲ್ಲೋ ಗದ್ದೆಯಲ್ಲೋ ಮನೆಯ ಹಿತ್ತಿಲಲ್ಲೋ ಬೀಡುಬಿಟ್ಟು ಸ್ಥಾನ ಪಡೆಯುವ ನಾಗ ಚೌಡಿಗಳಿಗೆ ಪಟ್ಟಣ ಮತು ಶಹರಗಳಲ್ಲಿ ಅಷ್ಟೆಲ್ಲಾ ಆಸಕ್ತಿ ಇರುವುದಿಲ್ಲವೇ ? ಇಂಚಿಂಚು ಜಾಗಕ್ಕೂ ಕೊರತೆಯಿರುವ ಈ ಕಾಂಕ್ರೀಟ್‍ಕಾಡು ಅವಕ್ಕೆ ಬೇಸರವೇನೋ ಅನಿಸುತ್ತದೆ. ನೀವೇ ನೋಡಿ ನಗರಗಳಲ್ಲಿ ಎಲ್ಲೋ ಅಲ್ಲಲ್ಲಿ ದೇವಸ್ಥಾನಗಳ ಸಮೀಪ ಬಿಟ್ಟರೆ ಇನ್ನೆಲ್ಲಾದರೂ ನಾಗ ಚೌಡಿ ಮುಂತಾದ ದೇವತೆಗಳ ಜಾಗವನ್ನು ಕಾಣುವಿರೇ?
ದೆವ್ವ ಕಲ್ಲೆಸೆಯುವುದು ಒಂದು ಚಮತ್ಕಾರ! ಒಮ್ಮೆ ನಮ್ಮಲ್ಲಿನ ಗಾಜಣ್ಣನ ಕಣ್ಣಿಗೆ ದೆವ್ವ ಕಲ್ಲೆಸೆದಿತ್ತು. ಆತನಿಗೆ ಕಣ್ಣೊಳಗೆ ಸಣ್ಣ ಕಲ್ಲು ತುಣುಕು ಓಡಾಡಿದಂತೇ ಭಾಸವಾಗಿ ನೋವಾಗುತ್ತಿತ್ತಂತೆ. ಕಣ್ಣು ಕೆಂಪಾಗಿ ಊದಿಕೊಂಡಿದ್ದುದ್ದನ್ನು ನೋಡಿದ್ದಕ್ಕೆ ನಾನೇ ಸಾಕ್ಷಿ! ಆದರೆ ಅದು ದೆವ್ವದ ಕಲ್ಲೆಸೆತವೇ ಅಥವಾ ಗಾಳಿಯಲ್ಲಿನ ಧೂಳು ಗಾಳಿಬೀಸುವ ರಭಸಕ್ಕೆ ಕಣ್ಣಿಗೆ ಹಾರಿರುವುದೇ ಎಂಬುದು ಅರ್ಥವಾಗದೇ ಉಳಿದ ವೈಜ್ಞಾನಿಕ ವಿಚಾರ. ದೆವ್ವಗಳನ್ನು ’ಗಾಳಿ’ ಎಂದೂ ಕರೆಯಲಾಗುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆಗಳಂದು ಚಿಕ್ಕಮಕ್ಕಳನ್ನು ಕೆಟ್ಟಜಾಗಗಳೆಂದು ಗುರುತಿಸಲ್ಪಟ್ಟ ’ಗೋಳ್‍ಮಕ್ಕಳ ಹೊಂಡ’ ದಂತಹ ಜಾಗಗಳ ಹತ್ತಿರವೂ ಕರೆದೊಯ್ಯಬಾರದಂತೆ! ಅಕಸ್ಮಾತ್ ಕರೆದೊಯ್ದರೆ ಅವರಿಗೆ ಮರಳಿ ಬಂದಮೇಲೆ ಕೆಂಪು ಹಾನ ಎತ್ತುವುದು [ಓಕುಳಿನೀರು], ಕಲ್ಲುಪ್ಪು ಮಂತ್ರಿಸಿ ಬೆಂಕಿಗೆ ಎಸೆಯುವುದು ಇದೆಲ್ಲಾ ನಡೆಯುತ್ತಿತ್ತು. ಹಾಗೂ ಮಕ್ಕಳು ರಾತ್ರಿ ಚೀರುತ್ತಲೇ ಇದ್ದರೆ ಮಾರನೇ ದಿನ ಸತ್ಯಹೆಗಡೇರು, ಕೊಡ್ಲಮನೆ ಭಟ್ರು ಇವರಲ್ಲಿ ಯಾರಾದ್ರೂ ವಿಭೂತಿ ಮಂತ್ರಿಸಿಕೊಡುತ್ತಿದ್ದರು. ಅದನ್ನು ತಂದು ಹಾಕಿದಾಗ ಮಗುವಿನ ಕೂಗು ಮಾಯ ! ಇದು ಕಾಕತಾಳೀಯವೋ ಅಥವಾ ನಮಗರಿವಿರದ ಇನ್ಯಾವುದೋ ಕ್ರಿಯೆಯೋ ಅರ್ಥವಾಗದಲ್ಲ.
ಕೆಲವು ಜನಾಂಗಗಳಲ್ಲಿ ದೆವ್ವ ಕಡಿಯುವ ಪರಿಪಾಠವಿತ್ತು. ಯಾರಿಗಾದರೂ ದೆವ್ವದ ಕಾಟ ಶುರುವಾಗಿದೆಯೆಂದು ತಿಳಿದರೆ ’ನೋಟ ನೋಡುವವ’ರನ್ನು ಕರೆಯುತ್ತಿದ್ದರು. ನೋಟನೋಡುವುದು ಎಂದರೆ ಅದೊಂದು ಚಿಕಿತ್ಸೆ. ಅದರ ಕ್ರಮ ಹೇಗೆಂದರೆ ಮನೆಯ ಜಗುಲಿಯ ಮೂಲೆಯೊಂದರಲ್ಲಿ ಮಣೆಯಮೇಲೆ ಹಂದಿದಾಡೆಯಲ್ಲಿ ನೋಟನೋಡುವ ಅನಕ್ಷರಸ್ಥ ವ್ಯಕ್ತಿ ಅದೇನನ್ನೋ ಗೀಚುತ್ತಾ ಕಂಡ ಕಂಡ ಹಾಗೇ ಏನನ್ನೋ ಬಡಬಡಾಯಿಸುತ್ತಾ ಮಧ್ಯೆಮಧ್ಯೆ ಸುತ್ತಿದ ಬಾಳೆ ಎಲೆಯನ್ನು ಕತ್ತರಿಸುತ್ತಾ ಕೂರುತ್ತಿದ್ದ. ತಲೆಯನ್ನು ಜೋರಾಗಿ ಅಲ್ಲಾಡಿಸುವ ಆತ ಸ್ವಲ್ಪಮಟ್ಟಿಗೆ ಕೂದಲನ್ನೂ ಅಲ್ಲಾಡಿಸುತ್ತಾ ಬಾಯಲ್ಲಿ
"ಓಹೋಹೋಸ್ಸುಹಾ.....ಉಸುವಸುವಾ......ಉಸುವಸುವಾ.....ಊಂ.ಹೂಂ....ಸ್ಸುವಾ....ಮಾರಮ್ಮ ನಿನುಗೇ ಮೂರ್ಕೋಳಿ ನಿನುಗೇ ಆರ್ಕೋಳಿ ನಿನುಗೇ ಅಹ ಅಹ ಹಾಂ ಹಾಂ ಹಾಂ ಷಟ್ "
ಎಂದೆಲ್ಲಾ ಹಲುಬುತ್ತ ವಿಶಿಷ್ಟವಾದ ಧ್ವನಿಯನ್ನು ಹೊರಡಿಸುತ್ತಿದ್ದ. ಗಂಟೆಗಟ್ಟಲೇ ಒದರಾಡುವ ಆತ ಕೊನೆಯ ಘಟ್ಟದಲ್ಲಿ ಮುಂದೆ ಇಟ್ಟ ತೆಂಗಿನಕಾಯಿಯನ್ನು ಎತ್ತಿ ಒಂದೇ ಏಟಿಗೆ ಅದನ್ನು ನೆಲಕ್ಕಪ್ಪಳಿಸಿ ಒಡೆದಾಗ ದೆವ್ವ ಕಡಿದು ಮುಗಿಯಿತೂ ಅಂತರ್ಥ! ನೋಟನೋಡಿಸುತ್ತಾರೆಂಬ ಗಾಳಿಸುದ್ದಿ ನಮಗೆ ಮೊದಲೇ ಬೇರೆ ಮಕ್ಕಳ ಮುಖಾಂತರ ಸಿಕ್ಕಿರುತ್ತಿದ್ದು, ದೂರದವರೆಗೆ ಕೇಳಿಸುವ ಆತನ ಅಬರಾಟದ ಸದ್ದಿಗೆ ಆತ ಕುಳಿತ ಅಂತಹ ಮನೆಗೆ ನಾವು ನೋಡಲು ಹೋಗುತ್ತಿದ್ದೆವಾದರೂ ಕೊನೇಕ್ಷಣದಲ್ಲಿ ಕಣ್ಣೆಲ್ಲಾ ಕೆಂಪಗೆಮಾಡಿಕೊಂಡು ಆತ ತೆಂಗಿನಕಾಯಿ ಬಡಿದು ಒಡೆಯುವ ಸಮಯದಲ್ಲಿ ದೂರದಲ್ಲಿ ಅಡಗಿ ನೋಡುತ್ತಿದ್ದೆವು! ಸೊಸೆ ಇರುವ ಮನೆಯಲ್ಲಿ ಕೆಲವೊಮ್ಮೆ ಅತ್ತೆಗೂ ಸೊಸೆಗೂ ಆಗಿಬರದಾಗ ಸೊಸೆಯ ಮೈಮೇಲೆ ’ದೆವ್ವ’ ಬರುತ್ತಿತ್ತು ! ನೋಟನೋಡಿದಾಗ ಬಿಟ್ಟುಹೋಗುವ ಆ ದೆವ್ವ ಕೆಲವು ತಿಂಗಳುಗಳ ನಂತರ ಮತ್ತೆ ಒಕ್ಕರಿಸುತ್ತಿತ್ತು. ಕೆಲವು ಗೂರಲು ಉಬ್ಬಸದ ರೋಗಿಗಳಿಗೆ ರೋಗ ಉಲ್ಬಣಿಸಿ ಶ್ವಾಸೋಚ್ವಾಸವೇ ಕಷ್ಟವಾದಾಗ ಅದು ’ಗಾಳಿ ಮೆಟ್ಟಿದ್ದು’ ಎನ್ನುವ ಜನರಿದ್ದು ನೋಟನೋಡಿದರೆ ಕಮ್ಮಿಯಾಗುತ್ತಿತ್ತಂತೆ. ಅದಕ್ಕೆ ಯಾವ ವೈಜ್ಞಾನಿಕ ಕಾರಣವಿತ್ತು ಅದೂ ಅರ್ಥವಾಗಲಿಲ್ಲ. ಕೊಳ್ಳಿದೆವ್ವ ಎಂಬುದನ್ನು ನೀವೆಲ್ಲಾ ಕೇಳಿಯೇ ಇರುತ್ತೀರಿ ಬಿಡಿ. ಯಾಕೆಂದರೆ ನಿಮ್ಮೆಲ್ಲರ ಜೀವನದಲ್ಲೂ ಅಲ್ಲಿಲ್ಲಿ ಆ ಸುದ್ದಿ ಬಂದಿರುತ್ತದೆ. ಕೊನೇಪಕ್ಷ ಮಾಧ್ಯಮದಲ್ಲಾದರೂ ನೋಡಿರುತ್ತೀರಿ. ಕೊಳ್ಳಿದೆವ್ವಗಳು ಕಗ್ಗತ್ತಲ ರಾತ್ರಿಯಲ್ಲಿ ತಮ್ಮ ಕೈಬೆರಳುಗಳನ್ನೇ ಬೆಂಕಿಯಕೊಳ್ಳಿಯಂತೇ ಉರಿಸಿಕೊಂಡು ಓಡಾಡುವ ಇನ್ನಿಲ್ಲದ ವೈಷಿಷ್ಟ್ಯದವು.
ದೆವ್ವಗಳ ಬಗ್ಗೆ ಸ್ವಾರಸ್ಯಕರ ಘಟನೆಗಳೂ ಇವೆ. ಒಂದಿನ ನಮ್ಮ ಗುರುಮಾಸ್ತರು ದೆವ್ವದಕಥೆಯೊಂದನ್ನು ತರಗತಿಯಲ್ಲಿ ಬಿತ್ತರಿಸಿದ್ದರು. ಅದೇನೆಂದು ಕೇಳಿ-- ಬಡ ಬ್ರಾಹ್ಮಣನೊಬ್ಬನಿಗೆ ದೆವ್ವಾ ಎಂದರೆ ಭಯಂಕರ ಹೆದರಿಕೆಯಿತ್ತಂತೆ. ಆತ ಕಾಡದಾರಿಯಲ್ಲಿ ಒಮ್ಮೆ ನಡೆದುಹೋಗುವಾಗ ಹೆಗಲಮೇಲಿದ್ದ ಅಂಗವಸ್ತ್ರ [ಟವೆಲ್ ಥರದ ಶಾಲು] ಹಾದಿಯ ಪಕ್ಕದ ಮುಳ್ಳಿನ ಗಿಡದ ಕೊಂಬೆಗೆ ಸಿಕ್ಕಾಕಿಕೊಂಡು, ಆತ ಮುಂದೆ ಹೋಗಲು ಪ್ರತ್ನಿಸಿದಾಗಲೆಲ್ಲಾ ಹಿಂದೆ ಯಾರೋ ಎಳೆದ ಅನುಭವ! ತಿರುಗಿ ನೋಡಿಬಿಟ್ಟರೆ ದೆವ್ವ ಏಕ್ ದಂ ಝಾಡಿಸಿ ಮುಖಕ್ಕೇ ಹೊಡೆದರೆ ಎಂಬ ಅತೀವ ಆತಂಕ. ಹೃದಯಬಡಿತ ೭೨ ಹೋಗಿ ೧೨೨ ! ವೇದ ಓದುವಾಗ ಗುರುಗಳು ಹೇಳಿದ್ದರಂತೆ " ನೋಡಪ್ಪಾ ವೃಕ್ಷಗಳಲ್ಲಿ ಅದರಲ್ಲೂ ಅಶ್ವತ್ಥವೃಕ್ಷದಲ್ಲಿ ಭಗವಂತನ ಸಾನ್ನಿಧ್ಯವಿರುತ್ತದೆ. ಬುಡದಲ್ಲಿ ಬ್ರಹ್ಮನೂ ಮಧ್ಯದಲ್ಲಿ ವಿಷ್ಣುವೂ ತುದಿಯಲ್ಲಿ ಶಿವನೂ ಇರುತ್ತಾರೆ. ಅದಕ್ಕೇ ಅಶ್ವತ್ಥವೃಕ್ಷವನ್ನು ವೃಕ್ಷರಾಜ ಎನ್ನುತ್ತಾರೆ. ಅಕಸ್ಮಾತ್ ಕಾಡುಮೇಡುಗಳಲ್ಲಿ ಅಲೆಯುವಾಗ ನಮಗೆ ಹೆದರಿಕೆಯಾದರೆ
ಮೂಲತೋ ಬ್ರಹ್ಮರೂಪಾಯಾ ಮಧ್ಯತೋ ವಿಷ್ಣುರೂಪಿಣೇ |
ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ ||
ಅಗ್ರತಃ ಶಿವರೂಪಾಯ ವೃಕ್ಷರಾಜಾಯತೇ ನಮಃ ||
ಎಂದು ಪ್ರಾರ್ಥಿಸಿದರೆ ದೇವರು ನಮ್ಮನ್ನು ರಕ್ಷಿಸುತ್ತಾನೆ. " ಎಂಬುದಾಗಿ. ಗಡಿಬಿಡಿಯಲ್ಲಿ ಆತ ಆ ಶ್ಲೋಕವನ್ನು ನೆನಪಿಸಿಕಳ್ಳುತ್ತಿದ್ದರೂ ದೇಹಪೂರ್ತಿ ಬೆವತುಹೋಗಿ ಕಂಪಿಸುತ್ತಾ
ಮೂಲತೋ ಮಧ್ಯರೂಪಾಯ ಮಧ್ಯತೋ ಮೂಲರೂಪಿಣೇ |
ಅಗ್ರತೋ ...........ಎಂದೆಲ್ಲಾ ತೊದಲುತ್ತಾ ಹೇಗೂ ಸಾಯುವುದೇ ಗ್ಯಾರಂಟಿ ಎಂದುಕೊಂಡು ಮನೆಯವರನ್ನೆಲ್ಲಾ ನೆನಪಿಸಿಕೊಂಡು ದುಃಖಿಸುತ್ತ ಒಮ್ಮೆ ಮನಸ್ಸು ಗಟ್ಟಿಮಾಡಿ ಓರೆಗಣ್ಣಿನಲ್ಲಿ ನಿಧಾನಕ್ಕೆ ಕತ್ತು ತಿರುವಿ ನೋಡಿದನಂತೆ.....ನೋಡುತ್ತಾನೆ ಪಂಚೆ ಮುಳ್ಳಿನ ಪೊದೆಗೆ ಸಿಕ್ಕಿಕೊಂಡಿತ್ತು! ’ಬದುಕಿದೆಯಾ ಬಡಜೀವವೇ?’ ಎಂದುಕೊಳ್ಳುತ್ತಾ ಮನಗೆ ಬಂದು ಗಂಟೆಗಟ್ಟಲೇ ವಿಶ್ರಮಿಸಿದನಂತೆ!
ದೆವ್ವಗಳಲ್ಲಿ ಮರಾಠಿ ದೆವ್ವ, ಕನ್ನಡ-ತಮಿಳು-ತೆಲುಗು ಈ ರೀತಿ ಭಾಷಾವಾರು ದೆವ್ವಗಳಿದ್ದವೋ ಇಲ್ಲವೋ ಗೊತ್ತಿಲ್ಲ. ಆದರೂ ದೇಶಾದ್ಯಂತ ದೆವ್ವಗಳು ಇದ್ದವು ಎಂಬುದು ಮಾತ್ರ ಖಾತ್ರಿ. ದೆವ್ವಗಳು ಈಗ ಅಲ್ಪಸಂಖ್ಯಾತರ ಸಾಲಿಗೆ ಸೇರಿವೆಯೇನೋ ಅನಿಸುತ್ತಿದೆ! ಅಲ್ಪಸಂಖ್ಯಾತರಿಗೆ ಕೊಡಬೇಕಾದ ಆದ್ಯತೆಗಳನ್ನು ತಮಗೂ ಕೊಡಿ ಎಂದು ಹೇಳಲು ಅವು ಮುಂದೆಬಂದರೆ ನೋಡಲಾದರೂ ಸಿಗುತ್ತಿದ್ದವೇನೋ! ಸಾಕು ಆಯ್ತಾ ? ಹುಷಾರು ನೀವಿದನ್ನು ಓದಿ ಮುಗಿಸಿದ ದಿನ ಎಲ್ಲಾದರೂ ಕೊಳ್ಳಿದೆವ್ವ ಸಿಕ್ಕಿದರೆ ಹೇಳಲು ಮರೀಬೇಡಿ. ದೆವ್ವಗಳ ಭಯದಲ್ಲಿ ಅನುಕೂಲವಾಗಲಿ ಎಂದು ಕವಿ ದಿ| ಬಿ.ಎಂ.ಶ್ರೀಕಂಠೈಯ್ಯನವರು ನಮಗೆ ಕರುಣಿಸಿದ ಹಾಡಿನೊಂದಿಗೆ[ಹಾಡನ್ನು ಕತ್ತಲೆಯಲ್ಲಿ ಬೆಳಕೇ ಕೈ ಹಿಡಿದು ಮಕ್ಕಳನ್ನು ಕಾಪಾಡು ಎಂಬ ಈ ಅರ್ಥದಲ್ಲಿ ಬಳಸಿಕೊಂಡು] ದೆವ್ವಗಳ ಪುರಾಣವನ್ನು ಸದ್ಯಕ್ಕೆ ಮಡಚಿಟ್ಟು ಅದಕ್ಕೆ ಮಂಗಲಾರತಿ ಮಾಡೋಣ:
ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆಮ್ಮನು .......