ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, February 2, 2010

ಅಂತರಂಗದ ಬಯಕೆ

ಕನ್ನಡದ ಮಲ್ಲಿಗೆ ಕವಿ,ಪ್ರೇಮಕವಿ ದಿ|| ಶ್ರೀ ಕೆ.ಎಸ್. ನರಸಿಂಹಸ್ವಾಮಿಯವರ ನೆನಪಿನಲ್ಲಿ, ಅವರ ಜಾಡು ಹಿಡಿದು ಬರೆದ ನನ್ನ ಕವನ. ಇಲ್ಲಿ ಮನೆಯಲ್ಲಿ ಈ ಅಂತರಂಗ ಗಂಡ-ಹೆಂಡಿರ ನಡುವಿನದು. ಹೆಂಡತಿಯ ಅನಾರೋಗ್ಯದಿಂದ ಬಸವಳಿದ ಗಂಡ ಮದುವೆಯಾದ ಹೊಸದರಲ್ಲಿನ ತನ್ನಕೆಲವು ನೆನಪುಗಳನ್ನು ಕೆದಕುತ್ತಾನೆ. ಆ ಪ್ರೀತಿಯಲ್ಲಿ ಹರಿಯುವ ನೀರಿನ ಸೆಳವು ಇದೆ, ಹೊಳೆವ ಮಿಂಚಿನ ಚಳುಕು ಇದೆ. ಆ ಪ್ರೀತಿ ಒಂದು ಅಮೃತತ್ವದ ಸಂಕೇತ. ಊರಲ್ಲಿ ಜಾತ್ರೆ- ಹರಿದಿನ ಏನೇ ಇದ್ದರೂ, ತನ್ನ ಮನದನ್ನೆ ಅನಾರೋಗ್ಯದಿಂದಿದ್ದು ಮಲಗಿದಲ್ಲಿಂದ ಏಳಲಾಗದ ಸ್ಥಿತಿಯಲ್ಲಿದ್ದರೂ ಗಂಡನನ್ನು ಜಾತ್ರೆಗೆ ಹೋಗಿಬರುವಂತೆ ಕೇಳಿಕೊಂಡಾಗ ಆತ ಹೋಗಲಾರ! ತನ್ನ ಪ್ರೀತಿಯ ಮಡದಿ ವರುಷಗಳ ಕಾಲ ಹೀಗೆ ಮಲಗಿರುವಾಗ ಸರಿಯಾದ ಯಾವ ಗಂಡನಿಗೆ ಹಬ್ಬ-ಜಾತ್ರೆಯ ಆಚರಣೆಗೆ ಹೋಗಲು ಮನಸು ಬಂದೀತು ? 'ನಿನ್ನ ಬಿಟ್ಟು ಇರಲು ತನ್ನಿಂದ ಸಾಧ್ಯವೇ ಇಲ್ಲ ' ಎಂಬ Dedication. ಅಲ್ಲಿನ ನೋವಲ್ಲೂ-ನೋವಿನ ನಲಿವಲ್ಲೂ ಅನ್ಯೋನ್ಯ ದಾಂಪತ್ಯದ ಕ್ಷಣದ ಹಂದರವನ್ನು ತಮಗೆ ತೋರಿಸಲು ಕೊಂಚ ಪ್ರಯತ್ನಿಸಿದ್ದೇನೆ.ಅಂತರಂಗದ ಬಯಕೆ

ಹೇಳಿಬಿಡಲೇ ನಿನಗೆ ಅಂತರಂಗದ ಬಯಕೆ ?
ತಾಳದಿರು ಬಿಗುಮಾನ ಮತ್ತೆ ಮೌನ
ನಾಳಿನಾ ದಿನಗಳಲಿ ನಾನೂರು ಕನಸಿನಲಿ
ಬಾಳ ದೀವಿಗೆಯಾಗಿ ನಡೆಸು ಯಾನ

ಮೂರು ದಿನದಾ ಬದುಕು ದಾರಿ ಸುಲಭವಿದಲ್ಲ
ಭಾರ ತಪ್ಪಿಸಲೆಳಸಿ ಸಾರಿ ಬಂದೆ
ವಾರದಾ ದಿನಗಳಲಿ ತಿಂದೆ ನೋವನು ಬಳಲಿ
ಯಾರ ಸಂಘವು ನನಗೆ ಇಷ್ಟವಿಲ್ಲ

ಮೊನ್ನೆ ಕಾನೂರಿನಲಿ ಸಣ್ಣ ದೇವರ ಜಾತ್ರೆ
ಮುನ್ನವೇ ತಾವ್ ನಡೆದು ಹೋದರೆಲ್ಲ!
ಕನ್ನ ಹಾಕಿದ ಹುಡುಗಿ ನೀನಿಲ್ಲಿ ಮಲಗಿರಲು
ಅನ್ನ-ನೀರನು ಕೊಡಲು ಅನ್ಯರುಂಟೇ ?

ಯಾರ ಪಾಪದ ದೃಷ್ಟಿ ಹಾರಿ ತಾಗಿತು ನಿನಗೆ ?
ಊರು ಸುತ್ತುವ ಗಳಿಗೆ ಹಾದಿಯಲ್ಲಿ
ಘೋರದುರಿತವನರಿತು ವೈದ್ಯರೆಡೆಯಲಿ ಹೋದೆ
ಬೇರುನಾರಿನ ಪಥ್ಯ ಕೊಟ್ಟರಿಲ್ಲಿ

ಅರಸುತಿಹ ಮೊಗ್ಗೊಂದು ಕೈಗೆ ಸಿಕ್ಕಿರುವಾಗ
ಅರಸನಂದದಿ ಸುಖವ ಕಂಡೆ ನಾನು
ಬಿರುಸಾದ ಈ ಗಾಳಿ ನುಸುಳಿರಲು ಮಧ್ಯದಲಿ
ಹರುಷವೆನಗುಂಟೆಲ್ಲಿ ಹಳೆಯನೆನಪು

ಹಾಡು-ಹಸೆಯಿಲ್ಲದಲೆ ಬಾಡಿಹೋಗಿದೆ ಬದುಕು
ಗಾಢ ಗಡುತರ ದಿನವು ಕ್ಷಣವು ಕ್ಷಣವು
ಆಡಿಕೊಂಬರು ನೂರು ಆತು ಬರುವರು ಯಾರು?
ಗಾಡಿಕಾರನೆ ಬಂದು ಸಲಹ ಬೇಕು !

ನಿನ್ನ ಬಿಟ್ಟರೆಘಳಿಗೆ ಬದುಕು ಸಾಧ್ಯವೆ ನನಗೆ?
ನನ್ನ ಮನವನು ಬಲ್ಲ ನೀನು ತಿಳಿಸು
ಚಿನ್ನಕಿಂತಲು ಭಾರ ನಿನ್ನ ಪ್ರೀತಿಯ ಹರವು
ಇನ್ನು ಹೇಳಲು ಅದಕೆ ಸಾಟಿಯುಂಟೇ ?