ಹರೆಯದ ಲಾಸ್ಯ !
ಹೇಳಿಕೊಳ್ಳಲಾಗದಂಥ ಮೃದುಮಧುರದ ಭಾವಗಳವು
ಚಿಗುರನೊಡೆದು ಮನದ ಮರದಿ ಕಳೆಯು ಕಟ್ಟಿದೆ
ಆಳ ಬೇರು ಬೀಳಲಿಳಿದು ಬೀಳದಂಥ ಹಾವಗಳವು
ಚಿಗರೆಮರಿಯ ಚೆಂಗಾಟವು ಬಂದುಬಿಟ್ಟಿದೆ !
ಎದುರಿಗಿರಲದಾವ ಭಯವೋ ಹುದುಗಿ ಎದೆಯ ಸತ್ವಗಳನು
ಬದಿಗೆ ಸರಿಸಿ ಬೇರೆ ಮಾತನಾಡುತಿರುವಲಿ
ಒದಗಿಬರದ ಒಡಲಕರೆಯು ಹೆದರಿ ಗೆದರಿ ತತ್ವಗಳನು
ಅದುರುತಿರುವ ತುಟಿಗಳಿನಿತು ಒಣಗುತಿರುವಲಿ
ತಡೆಯಲಾರದಂಥ ಚಳಿಯು ಬಡಿದು ಗಾಳಿ ಬೀಸುತಿರಲು
ಗುಡುಗುತಿಹುದು ಪಡೆವ ಬಯಕೆ ಬಿಡದೆ ನನ್ನಲಿ
ಬೆಡಗಿ ನಿನ್ನ ನೋಡಿ ಸೋತ ತುಡುಗು ಬುದ್ಧಿ ಕಾಸುತಿರಲು
ಒಡತಿ ಹೇಗೆ ಮಂಡಿಸುವುದು ಒಸಗೆ ನಿನ್ನಲಿ ?
ಹುಲ್ಲೆಯಂಥ ಮುದ್ದು ಹುಡುಗಿ ಒಲ್ಲೆನೆಂಬ ಮಾತು ಸಲ್ಲ
ಮೊಲ್ಲೆಮೊಗದ ನಗುವ ಕಂಡು ಮಾಗಿ ಮಂಜಲಿ
ಗೆಲ್ವೆನೆಂಬ ಧೈರ್ಯವಿಲ್ಲ ಮೀನ ಹೆಜ್ಜೆ ಕಾಣಿಸೊಲ್ಲ
ಎಲ್ಲೆಯೊಳಗೇ ಸೆಳೆವ ಆಸೆ ಇರುವ ನಂಜಲಿ !!