ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, January 26, 2012

ಪದ್ಮಶ್ರೀ ಪಡೆದ ಯಕ್ಷನಟಸಾರ್ವಭೌಮನಿಗೆ ಅಕ್ಷರಾಭಿನಂದನೆಗಳು !

ಭಸ್ಮಾಸುರ ವೇಷದ ಚಿತ್ರ ಋಣ : ಪ್ರಕಾಶ್ ಹೆಗಡೆ

ಪದ್ಮಶ್ರೀ ಪಡೆದ ಯಕ್ಷನಟಸಾರ್ವಭೌಮನಿಗೆ ಅಕ್ಷರಾಭಿನಂದನೆಗಳು !

ಹಳ್ಳಿ ಕೊಂಪೆಯ ಮುಗ್ಧ ಬಾಲಕನೊಬ್ಬನಿಗೆ ನರ್ತಿಸುವುದೇ ಬೇಕಾದದ್ದಾಗಿತ್ತು. ಹೇಳಿಕೇಳಿ ಶಾಲೆಗಳೂ ಜಾಸ್ತಿ ಇಲ್ಲದ ಕುಗ್ರಾಮಗಳ ಬೀಡಾದ ಉತ್ತರಕನ್ನಡದ, ಹೊನ್ನಾವರದ, ಹೊಸಾಕುಳಿಯಲ್ಲಿ ಚಿಟ್ಟಾಣಿ ಎಂಬುದೊಂದು ಚಿಕ್ಕ ಮಜರೆ! ಭಾಸ್ಕೇರಿ ಹೊಳೆಯ ಬದುವಿನಲ್ಲಿನ ಚಿಕ್ಕ ಕೇರಿ ಚಿಟ್ಟಾಣಿ ಒಬ್ಬನೇ ವ್ಯಕ್ತಿಯಿಂದಾಗಿ ಆ ಹೆಸರನ್ನೇ ಹಲವು ಜನ ಮೆಲುಕುವಂತೇ ಆದದ್ದು ಚಿಟ್ಟಾಣಿ ವಾಸಿಗರ ಸೌಭಾಗ್ಯ! ಅಂಗಳದ ತುದಿಯ ಬಚ್ಚಲ ಮೂಲೆಯಲ್ಲಿದ್ದ ಮಶಿನಿಂಗಳ[ಇದ್ದಿಲು]ವನ್ನು ತೇಯ್ದು ಕಪ್ಪು ಬಣ್ಣವನ್ನೂ ಕೆಮ್ಮಣ್ಣು,ಅರಿಶಿನ-ಕುಂಕುಮಗಳಿಂದ ಉಳಿದ ಬಣ್ಣಗಳನ್ನೂ ಮಾಡಿ ಆಡುತ್ತಿದ್ದ ಅಂದಿನ ಆ ದಿನಗಳಲ್ಲಿ ಹಿರಿಯರ ಕಣ್ಣುತಪ್ಪಿಸಿ ಹೊರಟಿದ್ದು ಗುಡ್ಡಧರೆಗಳ ಸಮತಟ್ಟಿನ ಪ್ರದೇಶಗಳಿಗೆ! ಶಾಲೆ ಕಲಿ ಎಂದು ತೀರಾ ಒತ್ತಾಯಿಸುವವರಿಲ್ಲ, ಖರ್ಚಿಗೆ ಜಾಸ್ತಿ ಹಣವೂ ಇಲ್ಲದ ಬಡಸ್ತಿಕೆಯಲ್ಲಿ ಮಗ ದೊಡ್ಡವನಾಗಿ ಇರುವ ಏನೋ ಅಲ್ಪ ಅಡಕೆ-ಪಡಕೆ ತೋಟ-ಗದ್ದೆಗಳಲ್ಲಿ ಕಾಟಾಕಸರಿ ಕೆಲಸಮಾಡಿಕೊಂಡು ಬದುಕನ್ನು ನಡೆಸಲಿ ಎಂಬುದು ಹಿರಿಯರ ಅಪೇಕ್ಷೆಯಾಗಿತ್ತು. ಆದರೆ ಮಗನ ಮನಸ್ಸಿನ ಭಾವನೆಗಳು ಕುಣಿಯತೊಡಗಿದ್ದು ಅವರಿಗೆ ಅರ್ಥವಾಗಿರಲೇ ಇಲ್ಲ!

ಚಿಟ್ಟಾಣಿ ಎಂಬೀ ಮಜರೆ ನಮ್ಮೂರಿಗೆ ಕೂಗಳತೆಯ ದೂರದ ಜಾಗ! ಬಾಲ್ಯದಿಂದಲೂ ನಾನು ಈ ಚಿಟ್ಟಾಣಿಯನ್ನೂ ಮತ್ತು ನಮ್ಮ ಕಲಾವಿದ ಚಿಟ್ಟಾಣಿಯನ್ನೂ ಕೇಳಿಬಲ್ಲೆ. ಶಾಲೆ ಓದದ ಬಾಲಕನಿಗೆ ಮಾತಿನ ಗಮ್ಮತ್ತು ಮೈಗೂಡಿರಲಿಲ್ಲ! ಸಾಹಿತ್ಯಕ ಶಬ್ದಭಂಡಾರವಿರಲಿಲ್ಲ. ಅವರದೇನಿದ್ದರೂ ಬರೇ ನರ್ತನ, ಹಾವ-ಭಾವ. ಮೋಹಿನಿಗೆ ಕಣ್ಣು ಹೊಡೆಯುವ ಭಸ್ಮಾಸುರನನ್ನು ನೋಡಿ ಅದೆಷ್ಟು ಜನ ಅದನ್ನೇ ಅಭ್ಯಾಸಮಾಡಿಯೂ ವಿಫಲರಾದರೋ ಗೊತ್ತಿಲ್ಲ! ಕಾಲು ಹಿಂದಕ್ಕೆ ಅಡ್ಡಡ್ಡ ಬೀಸುವ ಚಿಟ್ಟಾಣಿ ಕುಣಿತವೆಂದೇ ಕರೆಸಿಕೊಂಡ ಆ ಮಟ್ಟು ಯಕ್ಷರಂಗದಲ್ಲೇ ಬೇರೇ ಯಾರಿಗೂ ಸಾಧ್ಯವಾಗಲಿಲ್ಲ. ಬಾಲಕ ಯುವಕನಾಗುವ ಹೊತ್ತಿಗೆ ಆಗಿನ್ನೂ ಯಕ್ಷಕಲೆಗೆ ಅಷ್ಟೊಂದು ಪ್ರೋತ್ಸಾಹವಿರಲಿಲ್ಲ. ಕೆಲಸಕ್ಕೆ ಬಾರದವರು ಯಕ್ಷಗಾನ ಕುಣೀತಾರೆ ಎಂಬರ್ಥವೂ ಇತ್ತು ಎಂದಿಟ್ಟುಕೊಳ್ಳೋಣ! ಹುಡುಗಿ ಕೊಟ್ಟು ಮದುವೆಮಾಡುವುದಂತೂ ಯಾವ ಮಾವಂದಿರಿಗೂ ತೆಗೆದು ಹಾಕಿದ ವಿಷಯ! ಇಂತಹ ಕಾಲಘಟ್ಟದಲ್ಲಿ ಹಲವು ವೈರುಧ್ಯಗಳ ನಡುವೆ ತಾನು ಯಕ್ಷಗಾನಕ್ಕೇ ಮೀಸಲು ಎಂದು ಅದನ್ನೇ ಆತುಕೊಂಡ ಕಲಾವಿದ ರಾಮಚಂದ್ರ ಹೆಗಡೆಯವರು.

ವಾಸ್ತವಿಕವಾಗಿ ಮೂಡಲಪಾಯ ನಿಜವಾದ ಯಕ್ಷಗಾನವಲ್ಲ. ಯಕ್ಷಗಾನವೆಂಬುದು ಜಾನಪದವೂ ಅಲ್ಲ. ಯಕ್ಷಗಾನಕ್ಕೆ ದಕ್ಷಿಣೋತ್ತರಕನ್ನಡ [ಅಂದಿನ ಅವಿಭಜಿತ]ಜಿಲ್ಲೆಗಳ ಅನೇಕ ಕವಿಗಳ ರಸಭಾವಗಳು ಹೊಮ್ಮಿದ ಚಂದದ ಕೃತಿಗಳ ಆಧಾರವಿದೆ. ಯಕ್ಷಗಾನವೊಂದು ಸಮಗ್ರ ಕಲೆ ಎಂಬುದನ್ನು ಯಕ್ಷಗಾನದ ಕುರಿತಿರುವ ಹಿಂದಿನ ನನ್ನ ಬರಹಗಳಲ್ಲಿ ಎಷ್ಟೋ ಸಲ ಹೇಳಿದ್ದೇನೆ. ಮಹಾವಿಷ್ಣುವಿನ ದಶಾವತಾರದ ಪೌರಾಣಿಕ ಪ್ರಸಂಗಗಳನ್ನೇ ಇಲ್ಲೂ ಪ್ರಸಂಗಗಳೆಂದೇ ಬರೆದಿದ್ದಾರೆ! ತೆಂಕು, ಬಡಗು, ಬಡಾಬಡಗುಗಳೆಂಬ ಮೂರು ತಿಟ್ಟುಗಳಲ್ಲಿ ಯಕ್ಷಗಾನ ಪ್ರತಿಪಾದಿತವಾಗಿ ಇನ್ನೂ ಊರ್ಜಿತವಾಗಿದೆ. ತೆಂಕಿನ ವೇಷಗಳಲ್ಲಿ ನೃತ್ಯ ಮತ್ತು ಹಾವ-ಭಾವಕ್ಕೆ ಹೆಚ್ಚಿನ ಆದ್ಯತೆ ನೀಡದೇ ಆಕರ್ಷಕ ಬಣ್ಣಗಾರಿಕೆ ಮತ್ತು ಕಥಕ್ಕಳಿಯನ್ನು ಹೋಲುವ ವೇಷಭೂಷಣಗಳನ್ನು ಅಳವಡಿಸಿದ್ದರೆ ಬಡಗು ಮತ್ತು ಬಡಾಬಡಗುಗಳಲ್ಲಿ ಯಕ್ಷಗಾನಕ್ಕೆ ಪೊಗಡೆ, ಕಿರೀಟ ಇತ್ಯಾದಿಗಳೂ ಸೇರಿದಂತೇ ಅದರದ್ದೇ ಆದ ಸ್ವಂತಿಕೆಯ ವೇಷಭೂಷಣಗಳು ಅಳವಡಿಸಲ್ಪಟ್ಟಿವೆ. ಸಮಗ್ರ ಕಲೆಯ ದಿವ್ಯಾನುಭೂತಿಯನ್ನು ಬಡಾಬಡಗು ತಿಟ್ಟಿನಲ್ಲಿ ಮಾತ್ರ ಪರಿಪೂರ್ಣವಾಗಿ ಅನುಭವಿಸಲು ಸಾಧ್ಯ. ಕೇವಲ ಚಂಡೆ, ಮದ್ದಳೆ, ಹಾರ್ಮೋನಿಯಂ ಮತ್ತು ತಾಳಗಳಿಂದ ಹೊರಹೊಮ್ಮುವ ಕರ್ಣಾನಂದಕರ ಸಂಗೀತಕ್ಕೆ ಮರುಳಾಗದ ಜನವಿಲ್ಲ! ಯಾಕೆಂದರೆ ಯಕ್ಷಗಾನದಲ್ಲಿರುವ ಪ್ರತೀ ಹಾಡುಗಳೂ ಅಂದಿನ ಕವಿಗಳು ಹೊಸೆದವಾಗಿದ್ದು ಎಲ್ಲವೂ ಪ್ರಾಸಬದ್ಧವಾಗಿಯೂ ಛಂದೋಬದ್ಧವಾಗಿಯೂ, ವ್ಯಾಕರಣ ಶುದ್ಧವಾಗಿಯೂ ಇವೆ. ನನಗೆ ಸಾಹಿತ್ಯದ ಗೀಳು ಹಿಡಿಸಿದ್ದೇ ನಮ್ಮ ಈ ಯಕ್ಷಗಾನ ಕಲೆ. ಪುರಾತನ ಭಾರತದ ಮೂಲ ಸಂಸ್ಕೃತಿಯ ಮೌಲ್ಯಗಳನ್ನೂ ಆದರ್ಶಗಳನ್ನೂ ಎತ್ತಿ ಹಿಡಿಯುವ ಯಕ್ಷಗಾನ ಪುಸ್ತಕಗಳನ್ನೂ/ಮಹದ್ಗ್ರಂಥಗಳನ್ನೂ ಓದಲಾಗದ ಜನತೆಗೆ ಪೌರಾಣಿಕ ಕಥಾಹಂದರಗಳ ಮೂಲಕ ಅವುಗಳನ್ನು ತಲ್ಪಿಸುವಲ್ಲಿ ಯಶಸ್ವಿಯಾಗಿದೆ; ಚಿಕ್ಕ ಹುಡುಗನಾಗಿದ್ದ ಆ ಕಾಲದಲ್ಲಿ ಅದರ ಫಲಾನುಭವಿಗಳಲ್ಲಿ ನಾನೂ ಒಬ್ಬ!

ಚಿಟ್ಟಾಣಿಯವರ ಮೇಲೆ ನಾನು ಬರೆಯುತ್ತಿರುವುದು ಇದೇ ಮೊದಲಲ್ಲ; ಇದಕ್ಕೂ ಮೊದಲಿನ ಕಥೆಯನ್ನು ಇಲ್ಲಿ ನೀವು ಓದಬಹುದಾಗಿದೆ : ನಿನ್ನಯ ಬಲು ಹೇಳು ಮಾರುತಿಯನ್ನು ನಿರೀಕ್ಷಿಪೆನು.....ಚಿಕ್ಕ ವಯಸ್ಸಿನಲ್ಲಿ ನಾವೆಲ್ಲಾ ಕೇಳಿದ್ದು ಯಕ್ಷಗಾನದಲ್ಲಿ ಮೂಡ್ಕಣಿ ನಾರಾಯಣ ಹೆಗಡೆ, ಮೂರೂರು ದೇವರು ಹೆಗಡೆ, ಕಾಸರಕೋಡ ಸದಾನಂದ ಹೆಗಡೆ, ಕರ್ಕಿ ಪರಮ ಹಾಸ್ಯಗಾರರು, ಇವೇ ಮೊದಲಾದ ಹಳೆಯ ತಲೆಮಾರಿನ ಹೆಸರುಗಳು. ಆಗೆಲ್ಲಾ ಯಕ್ಷಗಾನವೆಂದರೆ ಬಯಲಾಟವೆಂದೇ ಕರೆಯುತ್ತಿದ್ದರು! ಬೇಸಿಗೆಯಲ್ಲಿ ಊರ ಪಕ್ಕದ ಗದ್ದೆ ಬಯಲುಗಳಲ್ಲಿ ಆಡುವ ಆಟ ಬಯಲಾಟ ಎನಿಸಿಕೊಂಡಿತ್ತು. ನಂತರ ಕೆರೆಮನೆ ಶಿವರಾಮ ಹೆಗಡೆಯವರು ಅದಕ್ಕೆ ಮೇಳದ ರೂಪಕೊಟ್ಟು ತಂಬು[ಟೆಂಟ್] ವ್ಯವಸ್ಥೆ, ರಂಜಸಜ್ಜಿಕೆಯ ವ್ಯವಸ್ಥೆ ಪರಿಕಲ್ಪಿಸಿಕೊಂಡು ವಾಣಿಜ್ಯದ/ವೃತ್ತಿಯ ಮೇಳವಾಗಿ ಮುನ್ನಡೆಸಿದರು. ಕಾಸರಕೋಡ ಸದಾನಂದ ಹೆಗಡೆಯವರ ಕೊನೆಯ ಪಾತ್ರ[ ೯೦ಕ್ಕೂ ಹೆಚ್ಚು ವಯಸ್ಸಿನ ಮುದುಕರಾಗಿದ್ದರಿಂದ ಕೇವಲ ವೇಷಹಾಕಿ ಮಾತಿನಾಡಿದ ಪಾತ್ರ], ಕೆರೆಮನೆ ಶಿವರಾಮ ಹೆಗಡೆಯವರ ಪಾತ್ರ, ಇತ್ತೀಚಿನವರೆಗೂ ಬದುಕಿದ್ದ ಕೆರೆಮನೆ ಶಂಭು ಹೆಗಡೆ-ಮಹಾಬಲ ಹೆಗಡೆಯವರುಗಳ ಪಾತ್ರವನ್ನು ನೋಡಿದ ಅನುಭವವಿದೆ. ಅದೇ ರೀತಿ ಚಿಟ್ಟಾಣಿಯವರ ಹಲವು ಪಾತ್ರಗಳನ್ನೂ ನಾನು ನೋಡಿದ್ದೇನೆ. ಒಬ್ಬೊಬ್ಬರಲ್ಲೂ ಭಿನ್ನ ಭಿನ್ನ ತಿಟ್ಟು ಸಾಮರ್ಥ್ಯಗಳನ್ನು ಕಂಡಿದ್ದೇನೆ. ನರ್ತನದಲ್ಲಿ ಚಿಟ್ಟಾಣಿಯವರಷ್ಟು ವೈಶಿಷ್ಟ್ಯ ಒಗ್ಗೂಡಿಸಿ ಮೆರೆದ ಕಲಾವಿದ ನನಗೆ ಬೇರೇ ಸಿಗಲಿಲ್ಲ!

ಒಂದಕೊಟ್ಟರೆ ಶಿವ ಇನ್ನೊಂದ ಕೊಡ ಎನ್ನುವಂತೇ ಅಭಿನಯ ಚಾತುರ್ಯವನ್ನು ಸಂಪೂರ್ಣವಾಗಿ ಅನುಗ್ರಹಿಸಿದ್ದ ಭಗವಂತ ಚಿಟ್ಟಾಣಿಗೆ ಮಾತುಗಾರಿಕೆಯ ಪ್ರಾವೀಣ್ಯತೆಯನ್ನು ಕೊಡಲಿಲ್ಲ. ಏನಿದ್ದರೂ ಕುಣಿತದಲ್ಲಿ-ಹಾವಭಾವ ಭಂಗಿಗಳಲ್ಲೇ ರಥ ಮುಂದಕ್ಕೆ ಹೊಡೆದುಕೊಂಡು ಹೋಗಬೇಕಾಗಿತ್ತು. ಆ ಅನಿವಾರ್ಯತೆ ಅವರನ್ನು ಚಿಂತನೆಗೆ ಹಚ್ಚಿ ಜನರನ್ನು ಕೇವಲ ತನ್ನ ಮುಖವರ್ಣಿಕೆ, ಮುಖದ ನರನಾಡಿಗಳಲ್ಲೂ ಕಣ್ಣುಗಳಲ್ಲೂ ಭಾವಸ್ಪಂದನ, ವಿಶಿಷ್ಟ ಭಂಗಿಗಳ ಕುಣಿತ ಇವುಗಳಿಂದಲೇ ತನ್ನತ್ತ ಸೆಳೆದುಕೊಂಡು ರಂಜಿಸುವ ಗತ್ತುಗಾರಿಕೆಯನ್ನು ಅವರು ಬೆಳೆಸಿಕೊಂಡರು. ಅಂದಿನ ಸಮಾಜದ ಅನೇಕರು ಅಕ್ಷರ ಓದಲು ಬಾರದ ಜನರಾಗಿದ್ದರೂ ಅಸಂಸ್ಕೃತರೇನಲ್ಲವಲ್ಲಾ ! ಮನುಷ್ಯನಿಗೆ ಮೂಲಭೂತವಾಗಿ ಬೇಕಾಗುವುದೇ ಆಂಗಿಕಾಭಿನಯ. ಇದನ್ನೇ ಬಾಡೀ ಲ್ಯಾಂಗ್ವೇಜ್ ಎನ್ನುತ್ತಾರಲ್ಲಾ, ಅಂತಹ ಬಾಡೀ ಲ್ಯಾಂಗ್ವೇಜ್ ಮೂಲಕವೇ ಚಿಟ್ಟಾಣಿ ಚಪ್ಪಾಳೆ ಗಿಟ್ಟಿಸಿದರು; ಒಪ್ಪುವಂತೇ ಮಂದಿಗೆ ಪಾತ್ರವನ್ನು ತೋರಿಸಿದರು. ದುರುಳರ ಪಾತ್ರಗಳಲ್ಲಿ ಅವರ ಪರಕಾಯಪ್ರವೇಶವೇ ಆಗಿಬಿಟ್ಟಿರುತ್ತಿತ್ತೋ ಎನ್ನುವಂತೇ ಅಂತಹ ಪಾತ್ರಗಳು ರಂಗಸ್ಥಳಕ್ಕೆ ಪ್ರವೇಶಿಸುವಾಗಲೇ ಅತಿವಿಶಿಷ್ಟ ಗತ್ತನ್ನು ಮೆರೆದ ತಾಕತ್ತು ಅವರದ್ದು. ನಾನಿನ್ನೂ ಹರೆಯಕ್ಕೆ ಬರುವ ಮೊದಲು ಕೊಳಗದ್ದೆ ತೇರಿನಲ್ಲೋ ಕವಲಕ್ಕಿಯಲ್ಲೋ ನಡೆಸಿದ [ಅಂದು ಅವರು ಅಮೃತೇಶ್ವರೀ ಯಕ್ಷಗಾನ ಮಂಡಳಿಯಲ್ಲಿದ್ದರು]ಆಟಗಳಲ್ಲಿ ಜನ ಟೆಂಟು ಹರಿಯುತ್ತಿದ್ದರು--ಇದರರ್ಥ ಏನೆಂದರೆ ಪ್ರೇಕ್ಷಕರು ಎಲ್ಲೆಲ್ಲಿಂದಲೋ ಕಿತ್ತೆದ್ದು ಬಂದು ಟಿಕೆಟ್ ಸಿಗದಾಗ ವಾಪಸ್ಸು ಹೋಗುವ ಪರಿಪಾಟ ಇರಲಿಲ್ಲ, ಬದಲಾಗಿ ಮೇಲೆಬಿದ್ದು ಹೇಗಾದರೂ ಮಾಡಿ ಒಳಗೆ ಪ್ರವೇಶ ಪಡೆದು ನಿಂತೇ ನೋಡಿದ ದಾಖಲೆಗಳು ಇವೆ.



ಉತ್ತರಕನ್ನಡದ ಹೊನ್ನಾವರದ ಗುಂಡಬಾಳೆ ವರ್ಷದಲ್ಲೀಗ ೬ ತಿಂಗಳು ಸತತ ಒಂದೇ ಕಡೆ ಯಕ್ಷಗಾನ ನಡೆಯುವ ಸ್ಥಳವಾಗಿದೆ. ಮೊದಲು ೩-೪ ತಿಂಗಳು ಮಾತ್ರ ನಡೆಯುತ್ತಿತ್ತು. ಅಲ್ಲಿನ ಮುಖ್ಯಪ್ರಾಣನಿಗೆ ಯಕ್ಷಗಾನವೆಂದರೆ ಎಲ್ಲಿಲ್ಲದ ಪ್ರೀತಿ! ಆತ ಜನರಿಂದ ಕೇಳುವ ಅತಿದೊಡ್ಡ ಹರಕೆಯೇ ಅದು! ಆತನ ಎದುರಿಗೆ ಯಕ್ಷಗಾನ ನಡೆಸಿ ಕಲಾವಿದರಿಗೆ ಸಂಭಾವನೆ ಕೊಡುವುದು ಒಂದು ಸೇವೆ. ಆ ಸೇವೆಯಿಂದ ಭಕ್ತ-ಭಾವುಕ ಜನರ ಇಷ್ಟಾರ್ಥ ಸಿದ್ಧಿ ! ಅದು ಇಂದಿಗೂ ನಡೆದಿದೆ. ಚಿಟ್ಟಾಣಿ ಮತ್ತು ಅವರ ಸಮಕಾಲೀನ ಬಹುತೇಕ ಕಲಾವಿದರು ಅಲ್ಲಿಯೇ ಅನೇಕ ದಿನಗಳಕಾಲ ಪಾತ್ರಪೋಷಿಸಿದ್ದಾರೆ. ಈಗಲೂ ವರ್ಷಕೊಮ್ಮೆಯಾದರೂ ಒಂದು ಪಾತ್ರವನ್ನು ಮಾಡಿ ಮುಖ್ಯಪ್ರಾಣನಿಗೆ ನಮಿಸಿ ಬರುವುದು ಅವರ ವಾಡಿಕೆ. ನಾವು ಚಿಕ್ಕವರಿದ್ದಾಗ ಅಲ್ಲಿಗೆ ವಾಹನ ಸೌಕರ್ಯ ಇರಲಿಲ್ಲ. ಅಡವಿಯ ಹಾದಿ. ಕಾಲುನಡಿಗೆಯಲ್ಲೇ ತೆರಳಬೇಕು. ನಮ್ಮೂರಿಂದ ಗುಂಡಬಾಳೆ ೬. ಕಿ. ಮೀ ದೂರ. ಚಿಟ್ಟಾಣಿ ಅಲ್ಲಿಗೆ ಬರುವುದು ಅನಿರೀಕ್ಷಿತವಾಗಿರುತ್ತಿತ್ತು. ಆದರೂ ಯಾವ ಜಾಹೀರಾತು ಕೂಡ ಇರದೇ ಚಿಟ್ಟಾಣಿ ಬರುತ್ತಾರೆ ಎಂಬ ಮೂಗ್ಗಾಳಿಯಿಂದಲೇ ಸುತ್ತಲ ಹತ್ತಾರು ಹಳ್ಳಿಗಳ ಜನ ಸಾವಿರ ಸಾವಿರ ಸಂಖ್ಯೆಯಲ್ಲಿ ಜಮಾಯಿಸಿ ಬಿಡುತ್ತಿದ್ದರು! ಒಂದೊಂದು ಪದ್ಯಕ್ಕೂ ಚಪ್ಪಾಳೆ ಚಪ್ಪಾಳೆ ಚಪ್ಪಾಳೆ! ಕಣ್ಣಿನ ಚರ್ಯೆಯನ್ನು ಗಮನಿಸಲಾಗಿ ಇಂತಿಂಥಾ ಕಡೆಗೇ ಕೂತುಕೊಳ್ಳ ಬಯಸುವ ಜನರೂ ಪ್ರೇಕ್ಷಕ ಗಣದಲ್ಲಿರುತ್ತಿದ್ದರು!

ಯಕ್ಷಗಾನದ ಮುಮ್ಮೇಳದ ಕಲಾವಿದನಿಗೆ ಹಿಮ್ಮೇಳದ ಉತ್ತಮ ಕಲಾವಿದರ ಸಾಥ್ ಬಹಳ ಮುಖ್ಯ. ಅಲ್ಲಿ ಕೆಲಸಕ್ಕೆ ಬಾರದ ವೃತ್ತಿಪರರಲ್ಲದ, ನಿಪುಣರಲ್ಲದ ಜನರಿದ್ದರೆ ಎಂತಹ ಕಲಾವಿದನನ್ನೂ ಅದು ಕಂಗೆಡಿಸುತ್ತದೆ. ಅಂತಹ ಸನ್ನಿವೇಶಗಳಲ್ಲೂ ತಾವೇ ತೂಗಿಸಿಕೊಂಡು ಹೋಗುವ ಚಾಕಚಕ್ಯತೆ ಚಿಟ್ಟಾಣಿಗೆ ಇತ್ತೆಂದರೆ ಜನ ಅವರನ್ನು ಎಷ್ಟು ಬಯಸಿದ್ದರು ಎಂಬುದನ್ನು ತಾವು ಅರಿತುಕೊಳ್ಳಬಹುದು. ಗುಂಡ್ಮಿ ಕಾಳಿಂಗ ನಾವುಡರು ಬಂದಮೇಲೆ ಭಾಗವತಿಕೆಯಲ್ಲಿ ಹೊಸ ಆಯಾಮಗಳನ್ನು ಅವರು ಹುಟ್ಟುಹಾಕಿದರು! ದುರ್ಗಪ್ಪ ಗುಡಿಗಾರರು ಮದ್ದಳೆಯನ್ನು ಮಾತನಾಡಿಸುತ್ತಿದ್ದರು ! ಇಂತಹ ಹಿಮ್ಮೇಳದ ಜೊತೆ " ನೀಲ ಗಗನದಲಿ ಮೋಡಗಳಾ ಕಂಡಾಗಲೆ ....ನವಿಲು ಕುಣಿಯುತಿದೆ .." ಎಂಬ ಶೃಂಗಾರ ರಸಪೂರಿತ ಸನ್ನಿವೇಶಕ್ಕೆ ಚಿಟ್ಟಾಣಿ ನವಿಲನ್ನೂ ನಾಚಿಸುವ ರೀತಿ ನರ್ತಿಸುತ್ತಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಇಂದು ಆ ಕಾಳಿಂಗನಾವುಡರಾಗಲೀ ದುರ್ಗಪ್ಪ ಗುಡಿಗಾರರಾಗಲೀ ಬದುಕಿಲ್ಲ. ಆದರೂ ಹೊಸ ಪೀಳಿಗೆಯ ಹಿಮ್ಮೇಳದ ಜೊತೆಗೆ ಹೆಜ್ಜೆಹಾಕುತ್ತಿರುವ ಚಿಟ್ಟಾಣಿಯವರಿಗೆ ಅದಾಗಲೇ ೭೭ ತುಂಬಿದೆ ಎಂದರೆ ನಂಬಲೂ ಆಗುತ್ತಿಲ್ಲ! ದೇಶ-ವಿದೇಶಗಳಲ್ಲಿ ಅವರಾಗಲೇ ಕುಣಿದು, ನರ್ತಿಸಿ, ಯಕ್ಷಗಾನ ಪ್ರದರ್ಶಿಸಿ ಹೆಸರುವಾಸಿಯಾಗಿದ್ದಾರೆ ಎಂಬುದು ಮಾತ್ರ ಗೊತ್ತು.

೬೦ ವಯಸ್ಸಿನ ನಂತರ " ನಮ್ದೆಲ್ಲಾ ಇನ್ನೆಂಥದಪ್ಪಾ ಊರು ಹೋಗು ಹೇಳ್ತು ಕಾಡು ಬಾ ಹೇಳ್ತು " ಎನ್ನುತ್ತಾ ಮೊಳಕಾಲುಗಳಿಗೆ ಎಣ್ಣೆ ಉಜ್ಜಿಕೊಳ್ಳುತ್ತಾ ಇರುವ ಅನೇಕರಿಗೆ ಚಿಟ್ಟಾಣಿ ಸೊಂಟ ಕುಲುಕಿಸಿ ಚಟ್ಟನೆ ಜಿಗಿಯುತ್ತಾ ಕುಣಿಯುವ ದೃಶ್ಯಕಂಡಾಗ ಏನಿದು ವಿಚಿತ್ರ ಎನ್ನಿಸಬಹುದು. ಚಿಟ್ಟಾಣಿಯ ಶರೀರದ ಎಂಜಿನ್ನಿಗೆ ಯಾವ ಕೀಲೆಣ್ಣೆಯನ್ನು ಪರಮಾತ್ಮ ಕೊಟ್ಟಿರಬಹುದು? ಸದಾ ಬೀಡಿ ಸೇದುವ ಚಿಟ್ಟಾಣಿಗೆ ಕವಳದ ಹಿಡಿಸುವುದಿಲ್ಲ. ಮೋಟು ಬೀಡಿಯನ್ನೂ ಕೈಗೆ ಇನ್ನೇನು ಬೆಂಕಿತಾಗುತ್ತದೆ ಎನ್ನುವವರೆಗೂ ದಮ್ಮು ಎಳೆದು ಆಮೇಲೆ ಬಿಸಾಕಿದರೇ ಅವರಿಗೆ ಸಮಾಧಾನ! ಚೌಕಿಯಲ್ಲಿ ವೇಷಕಟ್ಟಿಕೊಂಡು ಹಚ್ಚಿದ ಬೀಡಿಕಚ್ಚಿಕೊಂಡು ಅದರ ಹೊಗೆ ಒಳಗೂ ಹೊರಗೂ ಆಡುತ್ತಿರುವಾಗಲೇ ಅಲ್ಲೇ ಮುಂದಿನ ತನ್ನ ವೇಷದ ಪರಿಪೂರ್ಣ ಪರಿಕಲ್ಪನೆಯನ್ನು ಮನದಲ್ಲಿ ರೂಪಿಸಿಕೊಳ್ಳುವ ಚಿಟ್ಟಾಣಿಗೆ ಬೀಡಿ ಇಲ್ಲದಿದ್ದರೆ ಆಗುವುದೇ ಇಲ್ಲ! ಬೀಡೀ ಸೇದುವುದರಲ್ಲೂ ದಾಖಲೆಯನ್ನೇ ನಿರ್ಮಿಸಿರಬಹುದು-ಲೆಕ್ಕ ಇಟ್ಟವರಾರು ?

ಯಕ್ಷಗಾನ ಕಲೆಯನ್ನು ಆಸ್ವಾದಿಸುತ್ತಿದ್ದ ಜನ ಬೆಳಗಿನ ಜಾವ ೬ ಗಂಟೆಗೆ ಸುಮ್ಮನೆ ಪುಸಕ್ಕನೆ ಜಾಗ ಖಾಲಿ ಮಾಡುತ್ತಿದ್ದರು. ಯಕ್ಷಗಾನದಿಂದ ಸಿಗುವ ಸಂಭಾವನೆ ಬದುಕಿನ ಯಾವ ಮೂಲೆಗೆ ತಾಗುತ್ತಿರಲಿಲ್ಲ. ಅಂತಹ ದಿನಗಳಲ್ಲಿ ಅಂಗಡಿಗಳಲ್ಲಿ ಸಾಲಮಾಡಿ ಬದುಕಿದ ಬಡತನ ಇದೇ ನಮ್ಮ ಚಿಟ್ಟಾಣಿಯವರದ್ದು! ಚಿಟ್ಟಾಣಿಯ ಕಲೆಯ ಮೌಲ್ಯವರಿಯದ ಅಂಗಡಿಕಾರರಿಂದ " ಇನ್ನುಮೇಲೆ ಸಾಲ ಕೊಡುವುದಿಲ್ಲಾ" ಎನಿಸಿಕೊಂಡಿರಲೂ ಬಹುದು ಯಾಕೆಂದರೆ ಪಡೆದ ಸಾಲ ಮರಳಿಸಲು ಅವರು ಪಡಬೇಕಾಗಿದ್ದ ಪಾಡು ಹೇಳತೀರ. ಆದರೂ ನಿಧಾನವಾಗಿ ಪರಿಸ್ಥಿತಿಯಲ್ಲಿ ಬದಲಾವಣೆ ಬಂತು! ಅಲ್ಲಿಲ್ಲಿ ಸನ್ಮಾನಿಸಿ ಕೊಟ್ಟ ಹಣದಲ್ಲೇ ಚಿಕ್ಕದೊಂದು ಜಮೀನನ್ನು ಖರೀದಿಸಿದರು. ಹೊನ್ನಾವರದ ಅಳ್ಳಂಕಿಯ ಹತ್ತಿರದ ಗುಡೇಕೇರಿಯಲ್ಲಿ ಈಗಿನ ವಾಸ. ಮೂರು ಗಂಡುಮಕ್ಕಳು ಸುಬ್ರಹ್ಮಣ್ಯ, ನಾರಾಯಣ ಮತ್ತು ನರಸಿಂಹ. ಸುಬ್ರಹ್ಮಣ್ಯ ಮತ್ತು ನರಸಿಂಹ ಯಕ್ಷಗಾನ ಪಾತ್ರ ಮಾಡುತ್ತಾರೆ, ನಾರಾಯಣ ಮನೆಕಡೆ ಜಮೀನು-ಭೂಮಿ ನೋಡಿಕೊಳ್ಳುತ್ತಾನೆ. ಅವರ ಮಗಳನ್ನು ನಮ್ಮೂರಿಗೇ ಕೊಟ್ಟಿದ್ದಾರೆ. ನಮ್ಮೂರು ಹಡಿನಬಾಳದ ಶೇಡಿಕುಳಿ ಅವರ ಮಗಳಮನೆ. ಹೀಗಾಗಿ ನಮ್ಮೂರಿಗೆ ಅವರ ಸಂಬಂಧವೂ ಇದೆ ಅಂತಿಟ್ಕೊಳಿ. ಹಾಗಂತ ನಾನು ಊರು ಬಿಟ್ಟು ಬೆಂಗಳೂರು ಸೇರಿ ಎಷ್ಟೋ ವರ್ಷಗಳಾದರೂ ಆಗೀಗ ಅವರಿಗೆ ಕಲಾಕ್ಷೇತ್ರದಲ್ಲೋ ಏಡಿಏ ರಂಗಮಂದಿರದಲ್ಲೋ ಸಿಗುತ್ತಿದ್ದೇನೆ. ಈಗ ಪರವಾಗಿಲ್ಲ, ಉಪಜೀವನಕ್ಕೊಂದು ಆರ್ಥಿಕ ಆಧಾರವಾಗಿ ಜಮೀನಿದೆ; ಜೀವನ ಸುಲಲಿತವಾಗಿ ಸಾಗಿದೆ.

ಇಂತಹ ನಮ್ಮ ಚಿಟ್ಟಾಣಿಗೆ ಜನರಾಗಲೇ ನಟಸಾರ್ವಭೌಮ, ರಸಿಕರರಾಜ ಎಂದೆಲ್ಲಾ ನಾಮಕರಣ ಮಾಡಿದ್ದಾರೆ. ಅದನ್ನು ಸರಕಾರ ಕೊಡಬೇಕಾಗಿಲ್ಲ ಬಿಡಿ. ಊಟಕ್ಕುಂಟು ಆಟಕ್ಕಿಲ್ಲ ಎಂಬುದು ಇಲ್ಲಿನ ಗಾದೆ, ಅದು ಒಂದುಕಾಲಕ್ಕೆ ಯಕ್ಷಗಾನ ಕಲಾವಿದರಿಗೆ ವಿರುದ್ಧವಾಗಿ ಅಪ್ಲೈ ಆಗಿತ್ತು. ’ಆಟ’ಕ್ಕುಂಟು ಊಟಕ್ಕಿಲ್ಲ ಎಂದು! ಇಡೀ ರಾತ್ರಿ ಅಷ್ಟೆಲ್ಲಾ ನೋಡಿ ಚಪ್ಪಾಳೆಮೇಲೆ ಚಪ್ಪಾಳೆ ತಟ್ಟಿ ರಂಜನೆಗೊಳಗಾದ ಅದೇ ಜನ ಬೆಳಗಾದಮೇಲೆ ಚಿಟ್ಟಾಣಿ ಯಾರೋ ನಾವು ಯಾರೋ ಎನ್ನುವ ಹಾಗೇ ಹೊರಟುಬಿಡುತ್ತಿದ್ದರು. ಎಲ್ಲೋ ಅಲ್ಲಿಲ್ಲಿ ಯಾರೋ ಆತಿಥ್ಯ ನೀಡಿದರೆ ಅವರಲ್ಲಿ ಕಲಾವಿದರಾದವರು ತಮ್ಮ ಕಷ್ಟ-ಸುಖ ಹೇಳಿಕೊಳ್ಳಲಾದೀತೇ ? ಬೆಂಗಳೂರಿನಲ್ಲಿ ಕಡ್ತೋಕೆಯ ವಿ.ಆರ್ ಹೆಗಡೆಯವರು ’ಯಕ್ಷಗಾನ ಯೋಗಕ್ಷೇಮ ಅಭಿಯಾನ’ವನ್ನು ಆರಂಭಿಸಿದಮೇಲೆ ಒಮ್ಮೆ ಸನ್ಮಾನಿಸಿ ಲಕ್ಷಕ್ಕೂ ಅಧಿಕ ಮೊತ್ತವನ್ನು ಸಂಗ್ರಹಿಸಿ ನೀಡುವ ಮೂಲಕ ನೆರವಾಗಿದ್ದರು. ಹೀಗೇ ದಕ್ಷಿಣೋತ್ತರ ಕನ್ನಡದ ತಿಳುವಳಿಕೆ ಉಳ್ಳ ಕೆಲವು ಜನ ಆಗಾಗ ಸನ್ಮಾನ ಮಾಡುತ್ತಾ ಚಿಕ್ಕಚಿಕ್ಕ ಮೊತ್ತವನ್ನು ಕೊಡುತ್ತಾ ಕಲಾವಿದನ ಬದುಕು ಇಂದಿನ ಸುಂದರ ಹಂತವನ್ನು ತಲ್ಪುವಲ್ಲಿ ಅನುಕೂಲವಾಯ್ತು. ಈಗ ಮಕ್ಕಳು ಬೆಳೆದಿದ್ದಾರೆ. ಮೊಮ್ಮಗ ಕೂಡ ಯಕ್ಷಗಾನ ಕುಣಿಯಬಲ್ಲ ಎಂದು ಕೇಳಿದ್ದೇನೆ-ನೋಡಿಲ್ಲ. ಮಗ ಸುಬ್ರಹ್ಮಣ್ಯ ಕುಣಿತ ಮತ್ತು ಮಾತು ಎರಡನ್ನೂ ತಕ್ಕಮಟ್ಟಿಗೆ ಮೇಳೈಸಿಕೊಂಡಿದ್ದಾರೆ. ನರಸಿಂಹನಿಗೆ ಅಪ್ಪನ ಕುಣಿತದ ಕೆಲವು ತಿಟ್ಟುಗಳು ಕರಗತವಾದರೂ ಮಾತಿನಲ್ಲಿ ತಾಕತ್ತಿಲ್ಲ!

ನಮಗೆಲ್ಲಾ ಟಿವಿ ಮಾಧ್ಯಮದಲ್ಲಿ ಬರುವ ಮಿಸ್ಟರ್ ಬೀನ್ ಪಾತ್ರಧಾರಿ ರೋವನ್ ಅಟ್ಕಿನ್ ಸನ್ ಬಹಳ ಇಷ್ಟ. ಅದು ದೇಶದ, ಭಾಷೆಯ ಹಂಗಿಲ್ಲದ ಮಾನವ ಸಹಜ ಭಾವನೆ! ಹಾಗೆಯೇ ಕೇವಲ ತನ್ನ ಆಕರ್ಷಕ ಕುಣಿತಗಳಿಂದ ಮೈನುಗ್ಗಾಗಿಸಿಕೊಂಡು ಇಂದಿಗೂ ಜನರನ್ನು ರಂಜಿಸುವ ಅಪೇಕ್ಷೆ ಹೊತ್ತಿರುವ ಚಿಟ್ಟಾಣಿಗೆ ಪದ್ಮಶ್ರೀ ಕಮ್ಮಿಯೇ; ಪದ್ಮಭೂಷಣ ಕೊಡಬೇಕಿತ್ತು. ಇರಲಿ ಯಕ್ಷಗಾನ ಕಲಾವಿದರಲ್ಲಿ ಪದ್ಮ ಪ್ರಶಸ್ತಿ ಪಡೆಯುವಲ್ಲಿ ಮೊದಲಿಗರಾಗಿ ಯಕ್ಷಗಾನ ರಂಗಕ್ಕೂ ಆ ಕೀರ್ತಿಯ ಗರಿಯನ್ನು ತಂದ ಸಾಧನೆ ಕಮ್ಮಿಯದೇನಲ್ಲ ಅದು ಅವರ ಮಾತಿನಲ್ಲಿ "ಬಯಸದೇ ಬಂದ ಭಾಗ್ಯ!" ಪ್ರಶಸ್ತಿಗಾಗಿ ಚಿಟ್ಟಾಣಿ ಎಂದೂ ಕುಣಿಯಲಿಲ್ಲ; ರಾಜಕೀಯ ಮಾಡಲಿಲ್ಲ. ಪ್ರೇಕ್ಷಕರ ಕಣ್ಣನೋಟದಲ್ಲಿ ಕಾಣುವ ಸಂತೃಪ್ತ ಭಾವವೇ ಅವರಿಗೆ ದಕ್ಕಿದ ಅತ್ಯಪೂರ್ವ ಪ್ರಶಸ್ತಿ ಎಂಬುದು ಅವರ ಅನಿಸಿಕೆ. ಸಭಾಂಗಣದಲ್ಲಿ ಯಾವುದೋ ಕಾರಣದಿಂದ ಜನರು ಕಮ್ಮಿ ಇದ್ದರೂ ತನ್ನ ಪಾತ್ರಪೋಷಣೆಯಲ್ಲಿ ಕುಣಿತದಲ್ಲಿ ’ಕಳ್ಳಬಿದ್ದ’ ಜನವಲ್ಲ ಅವರು! ಇದ್ದ ಜನರನ್ನು ಎಷ್ಟೇ ಸಂಖ್ಯೆಯಲ್ಲಿದ್ದರೂ ಅಭಿನಯದಲ್ಲಿ ಗುಲಗುಂಜಿ ತೂಕವನ್ನೂ ಕಮ್ಮಿ ಮಾಡದೇ ಆಡಿ ರಂಜಿಸಿದ ದಿನವೂ ಇದೆ. ದೈಹಿಕ ಅನಾರೋಗ್ಯದಿಂದ ಆಟಕ್ಕೆ ಬರಲಾಗುತ್ತಿಲ್ಲ ಎಂಬ ಸುದ್ದಿ ಬಂದಾಗ ಸೇರಿದ ಜನ ಬಹಳ ಸಿಟ್ಟಾಗುತ್ತಿದ್ದರು; ರೇಗುತ್ತಿದ್ದರು, ವ್ಯವಸ್ಥಾಪಕರಲ್ಲಿ ಜಗಳವಾಡುತ್ತಿದ್ದರು. ಇದನ್ನರಿತ ವ್ಯವಸ್ಥಾಪಕರು ’ಅನಿರೀಕ್ಷಿತವಾಗಿ ತಲೆದೋರಬಹುದಾದ ಬದಲಾವಣೆಗಳಿಗೆ ಪ್ರೇಕ್ಷಕರ ತುಂಬುಹೃದಯದ ಸಹಕಾರವನ್ನು ಬಯಸುತ್ತೇವೆ" ಎಂದು ಹ್ಯಾಂಡ್ ಬಿಲ್ಲಿನಲ್ಲಿ ಪ್ರಕಟಿಸುತ್ತಿದ್ದ ದಿನಮಾನವನ್ನು ಕಂಡಿದ್ದೇನೆ. ಜಗಳ ಮತ್ಯಾಕೂ ಅಲ್ಲ; ಇವತ್ತು ಭಸ್ಮಾಸುರನನ್ನು/ದುಷ್ಟಬುದ್ಧಿಯನ್ನು/ಕೀಚಕನನ್ನು /ಕೌರವನನ್ನು/ಶೃಂಗಾರ ರಾವಣನನ್ನು ನೋಡಲೇಬೇಕು ಎಂದು ಸಂಕಲ್ಪಿಸಿಕೊಂಡು ಬರುತ್ತಿದ್ದ ಪ್ರೇಕ್ಷಕರಿಗೆ ರಸಭಂಗವಾಗುವ ಸನ್ನಿವೇಶ ಎದುರಾದಾಗಿನ ವರ್ತನೆ ಅದಾಗಿರುತ್ತಿತ್ತು. ಅಮೃತೇಶ್ವರೀ, ಬಚ್ಚಗಾರು, ಪಂಚಲಿಂಗೇಶ್ವರ ಮೊದಲಾದ ಮೇಳಗಳಲ್ಲಿ ಕೆಲಸ ನಿರ್ವಹಿಸಿ ದಶಕದ ಹಿಂದೆ ’ವೀರಾಂಜನೇಯ ಯಕ್ಷಗಾನ ಮಂಡಳಿ’ ಎಂಬುದನ್ನು ಕಟ್ಟಿಕೊಂಡು ಯಕ್ಷಾಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಇನ್ನೂ ಶತಮಾನ ಕಾಲ ನಮ್ಮೊಂದಿಗೆ ಇರಲಿ, ಅವರ ಶಕೆ ಅಡಗದಿರಲಿ, ಅವರ ಆ ಜೋಶ್ ಇಂದಿನ ಕಲಾವಿದರಿಗೆ ಮಾದರಿಯಾಗಲಿ ಎಂದು ಹಾರೈಸುತ್ತಾ ಅಭಿಮಾನಪೂರ್ವಕ ಅಭಿನಂದನೆಗಳನ್ನೂ, ವಂದನೆಗಳನ್ನೂ ಸಲ್ಲಿಸುತ್ತಿದ್ದೇನೆ, ಚಿಟ್ಟಾಣಿಯವರೇ ತಮಗೊಮ್ಮೆ ಸಾಷ್ಟಾಂಗ ನಮಸ್ಕಾರ.