ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, November 14, 2010

ದಯವೇ ಧರ್ಮದ ಮೂಲವಯ್ಯಾ ೪೦ ಮಾರ್ಕ್ಸು ಹಾಕಿ ಪಾಸುಮಾಡಿರಯ್ಯಾ!!


ದಯವೇ ಧರ್ಮದ ಮೂಲವಯ್ಯಾ ೪೦ ಮಾರ್ಕ್ಸು ಹಾಕಿ ಪಾಸುಮಾಡಿರಯ್ಯಾ!!

ಎಷ್ಟೋ ಸಮಯ ಮಕ್ಕಳನ್ನು ನಾವು ಮರೆತೇಹೋಗುತ್ತೇವೆ. ದೈನಂದಿನ ನಮ್ಮ ವ್ಯಾವಹಾರಿಕ ಜಂಜಡಗಳಲ್ಲಿ ಮಕ್ಕಳನ್ನು ಬೈದೋ ಬಡಿದೋ ದೂರ ಅಟ್ಟುವುದೇ ನಮ್ಮ ಕ್ರಿಯೆಯಾಗಿ ಎಷ್ಟೋ ಮನೆಗಳಲ್ಲಿ ಇಂದಿಗೂ ಅಪ್ಪನೆಂದರೆ ಹೆದರಿ ಮುದುರಿಕೊಳ್ಳುವ ಮಕ್ಕಳೂ ಇದ್ದಾರೆ! ಅಪ್ಪ ಯಾಕೆ ಒಮ್ಮೊಮ್ಮೆ ಹೀಗಾಗಿ ಬಿಡುತ್ತಾನೆ ಎಂದು ಆ ಮುಗ್ಧ ಮನಸ್ಸು ಅರ್ಥೈಸಲಾಗದೇ ಸೋಲುತ್ತದೆ. ಮನೆಯಲ್ಲಿ ಅಪ್ಪ-ಅಮ್ಮ ಕೊಡುವ ಪರಿಸರ, ಸಂಸ್ಕಾರದಲ್ಲಿ ಮಕ್ಕಳು ಬೆಳೆಯುತ್ತಾರೆ. ಈ ಕುರಿತು ಗಿಳಿಮರಿಗಳೆರಡರ ಕಥೆ ನಿಮಗೆಲ್ಲಾ ಗೊತ್ತೇ ಇದೆ. ಒಂದು ನೈಜ ಘಟನೆಯನ್ನು ತಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.

ಒಂದು ಪ್ಲಾಸ್ಟಿಕ್ ಪೀಠೋಪಕರಣಗಳನ್ನು ಮಾರುವ ಅಂಗಡಿಯ ಪಕ್ಕ ನನ್ನ ವಾಹನವನ್ನು ನಿಲ್ಲಿಸುತ್ತಿದ್ದೆ. ಅಲ್ಲಿ ಪಾರ್ಕಿಂಗ್ ಜಾಗದ ಹಿಂದೆ ಸಂದಿಯಲ್ಲಿ ಚಿಕ್ಕ ಹುಡುಗರಿಬ್ಬರು ನಿಂತಿದ್ದರು. ಸುಮಾರು ೬-೭ ವಯಸ್ಸಿನವರು. ಒಬ್ಬನ ತುಟಿಯೊಡೆದು ರಕ್ತ ಹೊರಚಿಮ್ಮುತ್ತಿತ್ತು. ತುಸು ಹೊತ್ತು ನೋಡಿ ಹತ್ತಿರ ಕರೆದೆ. " ಯಾಕಪ್ಪಾ ಏನಾಯಿತು ? " ಎಂದೆ. ಆತ ಅಳುವುದನ್ನು ಇನ್ನೂ ಜೋರಾಗಿಸಿದ. ಬಹುಶಃ ಒಡೆದ ದವಡೆಯ ಅಥವಾ ತುಟಿಯ ನೋವಿನಿಂದ ಆತ ಚೀರುತ್ತಿದ್ದನಿರಬೇಕು. ಗಮನಿಸಿ ನೋಡಿದಾಗ ತಿಳಿದದ್ದು : ಆತ ಯಾವುದೋ ಸ್ಲಮ್ ಹುಡುಗ, ಜೊತೆಗಾರನೂ ಸ್ಲಮ್ ಹುಡುಗನೇ. ಆಗ ಅಪರಾಹ್ನ ೪ ಗಂಟೆಯ ಸಮಯ. ಊಟಮಾಡಿದ್ದರೋ ಹಸಿದಿದ್ದರೋ ಆ ಹುಡುಗರು ತಿಳಿಯದು. ಅವರನ್ನು ಕೇಳುವವರಾರು? ದುಡಿಯುವ ಜನಸಾಮಾನ್ಯನೇ ತೊಂದರೆಯಿಂದ ಹೆಳವನಾದರೆ ಯಾರೂ ಕೇಳದ ಕಾಲವಿದು ಅಂದಮೇಲೆ ಅಂತಹ ಹುಡುಗರನ್ನೆಲ್ಲಾ ಯಾರು ಕೇಳುತ್ತಾರೆ ಅಲ್ಲವೇ ? ನಾನು ತಡೆಯದಾದೆ. ಮನಸ್ಸಿಗೆ ಬಹಳ ಬೇಸರವಾಯಿತು. ಆತ ಅಂತೂ ಉತ್ತರಿಸಿದ " ಆ ಅಂಗಡಿಯಪ್ಪ ಹೊಡೆದನಣ್ಣಾ. " ಎನ್ನುತ್ತಾ ಕೆನ್ನೆ ಮುಟ್ಟಿಕೊಂಡ. ಕೆನ್ನೆ ಊದತೊಡಗಿತ್ತು. ನಾನು ಮತ್ತೆ ಕೇಳಿದೆ " ನೀನೇನು ಮಾಡಿದೆ ಅಂತ ಹೊಡೆದರು ? " ಆತ ನಿರುತ್ತರನಾಗಿದ್ದ. ನಾನು ಅಂಗಡಿಯಾತನಲ್ಲಿ ಕೇಳಿದೆ " ಸ್ವಾಮೀ ಅಷ್ಟು ಜೋರಾಗಿ ಹೊಡೆದಿರಲ್ಲ ಯಾಕೆ ಅಂತ ಕೇಳಬಹುದೇ ? " ಅಂಗಡಿಯಾತ ಹೇಳಿದ " ಕಳನನ್ಮಕ್ಳು ಚೇರ್ ಕದೀತಾ ಇದ್ರು ಅದಕ್ಕೇ ಕೊಟ್ಟೆ ಎರಡು. " ಉತ್ತರಬಂತು. ಅರ್ಥವೂ ಆಯಿತು.

ಸ್ಲಮ್ ಹುಡುಗರಿಗೆ ಅವರ ಮಾತಾ-ಪಿತೃಗಳು ಇನ್ನೇನು ಹೇಳಿಕೊಡಲು ಸಾಧ್ಯ! ಊಟಕ್ಕೇ ಗತಿಯಿರದಿರುವಾಗ ವಿದ್ಯೆಗೆ ದಾರಿ ಇದೆಯೇ ? ಅನ್ನ-ವಸತಿಗೆ ಅನುಕೂಲವಿಲ್ಲದಾಗ ಮಿಕ್ಕಿದ ಸಂಸ್ಕಾರಗಳಿಗೆ ಪುರಸ್ಕಾರವಿರುತ್ತದೆಯೇ ? ಬಡತನದ ಬವಣೆಯ ಸಂಸಾರದಲ್ಲಿ ಹುಟ್ಟಿಬೆಳೆಯುವ ಇಂಥಾ ಮಕ್ಕಳ ಗೋಳು ಹೇಳತೀರದು. ಅಪ್ಪ-ಅಮ್ಮ ಹೇಳಿದ್ದನ್ನು ಅವರು ಪಾಲಿಸಬೇಕು. ಇಲ್ಲದಿದ್ದರೆ ಹೊಟ್ಟೆಗೆ ಸಿಗುವ ಚಿಲ್ಲರೆ ಹಿಟ್ಟೂ ಇಲ್ಲ! ಪಾಲಕರು ಹೇಳಿದ್ದನ್ನು ಆದಷ್ಟೂ ಪಾಲಿಸುವ ಅಂತಹ ಹುಡುಗರು ಹಲವೊಮ್ಮೆ ಬೆಳೆಯುತ್ತಾ ಸಹಜವಾಗಿ ಇಲ್ಲದ ಚಟಗಳಿಗೆ ಬಲಿಯಾಗುತ್ತಾರೆ. ಕೆಲಸದಲ್ಲಿ ಆಸಕ್ತಿಯಿಲ್ಲದೇ ಮಾದಕ ವ್ಯಸನಿಗಳಾಗಿ ಎಲ್ಲೋ ಬಿದ್ದಿರುವುದೂ ಇರಬಹುದು. " ಹೇಯ್ ಏಳ್ರೋ ಮೇಲೆ ಹೋಗ್ರೋ ಏನಾದ್ರೂ ಒಂದಷ್ಟ್ ಪಟಾಯ್ಸ್ಕೊಂಡ್ ಬನ್ನಿ, ಇಲ್ಲಾಂದ್ರೆ ಒದ್ದೋಡ್ಸ್ಬುಡ್ತೀನಿ " ಇಂತಹ ಬೆದರಿಕೆಯ ದನಿಗೆ ಒಂದುಕಡೆ ಬೆದರಿ ಇನ್ನೊಂದು ಕಡೆ ತಿನ್ನುವ ತುತ್ತಿಗೆ ಅನಿವಾರ್ಯವಾಗಿ ಸ್ಲಮ್ ಮಕ್ಕಳು ದಾರಿ ತಪ್ಪುತ್ತಾರೆ. ನೇರಮಾರ್ಗದ ದುಡಿಮೆಯ ಬದಲು ಅಡ್ಡಡ್ಡ ಮಾರ್ಗವನ್ನು ಹಿಡಿಯುತ್ತಾರೆ. ಅವರಲ್ಲೇ ಬಹಳ ಮಂದಿ ಅವರಿವರ ಬಂಟರಾಗಿ ರೌಡೀ ಗ್ಯಾಂಗ್ ಗಳಲ್ಲಿ ಸೇರಿಕೊಂಡರೆ ಕೆಲವರು ಮಾತ್ರ ಚಿಲ್ಲರೆ ವ್ಯಪಾರವೋ ಸಾಪಾರವೋ ಮಾಡಿ ಜೀವಿಸುತ್ತಾರೆ. ಎಲ್ಲೋ ಬೆರಳೆಣಿಕೆಯಷ್ಟು ಜನ ಕೂಲಿ, ಚಿಕ್ಕಪುಟ್ಟ ನೌಕರಿ ಇತ್ಯಾದಿ ಕೆಲಸಗಳನ್ನು ಮಾಡುತ್ತಾರೆ.

ಹೀಗಿರುವ ಸ್ಲಮ್ ಒಂದರಿಂದ ಬಂದಿದ್ದ ಅವರಿಬ್ಬರು ಹಸಿದ ಹೊಟ್ಟೆಯಲ್ಲೇ ಇದ್ದರೇನೋ. ಅಲ್ಲಿರುವ ಪ್ಲಾಸ್ಟಿಕ್ ಅಂಗಡಿಯಾತ ಕೂಡ ತೀರಾ ಅನುಕೂಲದವರೇನಲ್ಲ. ತಮ್ಮ ಬದುಕಿಗಾಗಿ ಇರುವುದರಲ್ಲೇ ಅಷ್ಟೋ ಇಷ್ಟೋ ಹಣಕೂಡಿಸಿಕೊಂಡು ಅಂಗಡಿ ತೆರೆದಿದ್ದವರು. ಮೇಲಾಗಿ ವ್ಯಾಪಾರದಲ್ಲಿ ವಿಪರೀತ ಪೈಪೋಟಿ ಬೇರೆ. ತನ್ನ ಅನ್ನಕ್ಕೇ ಕೈಹಾಕಿದವರು ಹುಡುಗರೇ ಆಗಿದ್ದರೂ ತಾಳಲಾರದೇ ಹುಡುಗನಿಗೆ ಎರಡು ಬಾರಿಸಿದ್ದಾರೆ. ಹೊಡೆದ ತೀವ್ರತೆಗೆ ದವಡೆಯೇ ಒಡೆದು ತುಟಿಯತನಕವೂ ಗಾಯವಾಗಿ ರಕ್ತಬಂದಿದೆ. ಇಲ್ಲಿ ಹುಡುಗರ ತಪ್ಪೋ ಅಥವಾ ಅಂಗಡಿಯವರ ತಪ್ಪೋ ನೀವೇ ಹೇಳಿ. ಒಬ್ಬ ಏನೂ ಇಲ್ಲದವ, ಇನ್ನೊಬ್ಬ ತನ್ನ ಹೊಟ್ಟೆಗೆ ವ್ಯಾಪಾರೀ ವೃತ್ತಿಯಲ್ಲಿ ತೊಡಗಿಕೊಂಡವ. ನಾನು ಅಂಗಡಿಯವರ ಕೂಡ ಮಾತನಾಡಿದೆ. " ಸ್ವಾಮೀ ಏನೋ ಹುಡುಗರು ಸ್ವಲ್ಪ ಗದರಿಸಿ ಬಿಡಬಹುದಿತ್ತು, ಇನ್ನು ಮಾಡಿದರೆ .....ಅಂತ ಹೇಳಬಹುದಿತ್ತಲ್ಲ " ಎಂದೆ. " ನಿಮಗೇನ್ ಗೊತ್ರೀ ನಮ್ ಕಷ್ಟಸುಖ ದಿನಾ ಬರ್ತಾರೆ...ನಿಂತಿರ್ತಾರೆ.....ಸ್ವಲ್ಪ ನೋಡ್ಲಿಲ್ಲಾ ಅಂದ್ರೆ ಹೊಡ್ಕೊಂಡೋಗ್ಬುಡ್ತಾರೆ...ಪಾಪಿ ನನ್ಮಕ್ಳು. "

ನಾನು ಹೆಚ್ಚಿಗೆ ಹೇಳುವ ಸ್ಥಿತಿಯಲ್ಲಿರಲಿಲ್ಲ. ಆ ಹುಡುಗ ಅಲ್ಲೇ ಅಳುತ್ತಿದ್ದ. ಆತನನ್ನು ಕರೆದು ಕೈಗೊಂದು ಹತ್ತು ರೂಪಾಯಿ ಕೊಟ್ಟು [ಇದು ಕೊಟ್ಟೆ ಎಂದು ತೋರಿಸಲು ಬರೆದದ್ದಲ್ಲ, ನಡೆದದ್ದನ್ನ ಇದ್ದಹಾಗೇ ಹೇಳುತ್ತಿದ್ದೇನೆ] " ಅಲ್ಲಯ್ಯಾ ನೀನ್ಯಾಕೋ ಕದಿಯಕ್ಕೆ ಹೋಗಿದ್ದೆ? ಕಳ್ತನ ಮಾಡೋದು ತಪ್ಪು ಅಂತ ಗೊತ್ತಿಲ್ವಾ ? " ಅಂದೆ. ಆತ ನನ್ನ ಕಣ್ಣುಗಳನ್ನು ನೋಡಿ ತನ್ನ ಅಸಹಾಯಕತೆಯನ್ನು ಕಣ್ಣುಗಳಿಂದಲೇ ತಿಳಿಸುತ್ತಿದ್ದ. ಮಕ್ಕಳ ಇಂತಹ ಗೋಳಿಗೆ ಕಾರಣ ನಮ್ಮಲ್ಲಿನ ಬಡತನವಲ್ಲವೇ ? ಹುಟ್ಟಾ ಯಾವ ಮಗುವೂ ಕಳ್ಳ ಸುಳ್ಳ ಆಗಿರುವುದಿಲ್ಲ. ಮಗುವಿಗೆ ತಾನ್ಯಾರು, ಎಲ್ಲಿದ್ದೇನೆ, ಏನುತಿನ್ನುತ್ತೇನೆ ಇವೆಲ್ಲಾ ಪರಿವೆಯೇ ಇರುವುದಿಲ್ಲ. ಅಲ್ಪಸ್ವಲ್ಪ ತಿಳುವಳಿಕೆ ಬರುವುದು ೩ ವರ್ಷಗಳ ನಂತರವಷ್ಟೇ. ಹೀಗಾಗಿ ೩ ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದೇವರೆಂದೇ ತಿಳಿದರೆ ತಪ್ಪಿಲ್ಲ. ಅಂತಹ ಮುಗ್ಧ ಮನಸ್ಸು ಅವರದಾಗಿರುತ್ತದೆ. ಬೆಳೆಯುತ್ತಾ ಬೆಳೆಯುತ್ತಾ ಅವ್ರು ಹುಟ್ಟಿದ ಸುತ್ತಲ ಪರಿಸರಕ್ಕೆ ಒಗ್ಗಿಕೊಳ್ಳತೊಡಗುತ್ತಾರೆ. ಅಲ್ಲಿನ ಭಾಷೆ, ಸಂಸ್ಕಾರ-ಸಂಸ್ಕೃತಿ, ಆಹಾರ-ವಿಹಾರ, ಆಚಾರ-ನಡವಳಿಕೆ ಎಲ್ಲವನ್ನೂ ಮಗು ಸೂಕ್ಷ್ಮವಾಗಿ ಅರಿಯತೊಡಗುತ್ತದೆ, ಅನುಕರಿಸತೊಡಗುತ್ತದೆ. ಯಾವುದು ತಪ್ಪು ಯಾವುದು ಒಪ್ಪು ಎನ್ನುವುದನ್ನು ಮರೆತು ತಪ್ಪನ್ನೇ ಸರಿಯೆಂಬ ಭಾವನೆಯಿಂದ ತನ್ನ ಹಿರಿಯರು ಹೇಳಿದ್ದನ್ನು ಮಾಡತೊಡಗುತ್ತದೆ.

ಎಳವೆಯಲ್ಲೇ ಇಂತಹ ಮಕ್ಕಳು ಬೀದಿಗೆ ಬಂದು ಬೇಡುವುದು-ಕಾಡುವುದು ಮುಂತಾದ ಹಲವು ಮಾರ್ಗಗಳನ್ನು ಹಿಡಿಯುತ್ತಾರೆ. ಒಮ್ಮೊಮ್ಮೆ ಯಾವುದೂ ಸಾಲದಾಗ ಪಾಲಕರು ಹೇಳಿಕೊಡುವ ಕಳ್ಳತನವೇ ಮೊದಲಾದ ಬೇಡದ ಕೆಲಸಕ್ಕೆ ಕೈಹಾಕುತ್ತಾರೆ. ಸಮಾಜ ತಮ್ಮನ್ನು ವಿರೋಧಿಸುತ್ತದೆ ಎಂದು ಅನಿಸಿದಾಗ ಸಮಾಜದ ಜನರನ್ನು ನಿಗ್ರಹಿಸಲು ಮಚ್ಚು-ಲಾಂಗುಗಳನ್ನು ಕೈಗೆತ್ತಿಕೊಂಡು ಹೆದರಿಸುವ ಕಾಯಕ ಆರಂಭವಾಗುತ್ತದೆ. ಎಳೆಯ ಮಗುವೊಂದು ಪರಿಸ್ಥಿತಿಯಿಂದ ಬೆಳೆದ ರೌಡಿಯಾಗುತ್ತದೆ! ಇದರ ಮೂಲ ಬಡತನ ಮತ್ತು ಪರಿಸರ. ಇಂತಹ ಮಕ್ಕಳಿಗೆ ಆರಂಭದಲ್ಲೇ ಒಳ್ಳೆಯ ವಿದ್ಯೆ-ಸಂಸ್ಕಾರ ಸಿಕ್ಕಿದ್ದರೆ ಅವರು ಹೀಗಾಗುತ್ತಿರಲಿಲ್ಲ. ಆದರೆ ಹುಟ್ಟಿಸಿದಾತನಿಗೆ ಅವರ ಉದರಂಭರಣೆಯೇ ಕಷ್ಟವಾಗಿರುವಾಗ ಇನ್ನು ವಿದ್ಯೆಯೆಲ್ಲಿಂದ ಬಂತು ? ಪಾಪದ ಕೂಸುಗಳು ಪಾಪಕೂಪದ ಕೃತ್ಯಕ್ಕೆ ಇಳಿದುಬಿಡುತ್ತವೆ. ವಂಚನೆ, ಮೋಸ, ದಗಾಕೋರರಾಗಿಯೂ, ಕಳ್ಳರು-ದರೋಡೆಕೋರರಾಗಿಯೂ ಕೆಲದಿನ ಸಂಪಾದಿಸಿದ ಹಣದಿಂದ ಆಮೇಲೆ ರೋಲ್ ಕಾಲ ಮಾಡಲು ಶುರುಮಾಡಿ ರೌಡಿಗಳಾಗುತ್ತಾರೆ.

ಈಗ ಸಮಾಜದ ಇನ್ನೋಂದು ಮುಖವನ್ನು ನೋಡೋಣ. ಉಳ್ಳವರ ಮಕ್ಕಳಿಗೆ ಹೊಟ್ಟೆ-ಬಟ್ಟೆಗೆ ಹೇರಳವಾಗಿ, ಹೆಚ್ಚಾಗಿ, ತಿಂದಿದ್ದು ಕರಗದೇ ಹಲವು ಹವ್ಯಾಸ ಬೆಳೆಯುತ್ತದೆ. ಇಲ್ಲಿಯ ಸಂಸ್ಕಾರ ವಿಭಿನ್ನವಾಗಿದ್ದು ಇಲ್ಲಿ ಅಪ್ಪ-ಅಮ್ಮ ಯಾಂತ್ರಿಕವಾಗಿ ಮಕ್ಕಳನ್ನು ಬೆಳೆಸುತ್ತಾರೆ. ಆತ್ಮೀಯತೆ ತೀರಾ ಕಮ್ಮಿ ಇರುವ ವಾತಾವರಣದಲ್ಲಿ ಮಕ್ಕಳು ಅಪ್ಪ-ಅಮ್ಮನ ನಿಜವಾದ ಪ್ರೀತಿ ಸಿಗದೇ ಉಂಡಾಡಿಗಳಾಗಿ ಖರ್ಚಿಗೊಂದಷ್ಟು ಪಾಕೆಟ್ ಮನಿ ಪಡೆದು ವಿದ್ಯಾರ್ಥಿದೆಸೆಯಲ್ಲಿಯೇ ಬೇಡದ ಚಟಗಳನ್ನು ಅಂಟಿಸಿಕೊಳ್ಳಲು ತೊಡಗುತ್ತಾರೆ. ಅಪ್ಪ-ಅಮ್ಮನ ಮಧ್ಯೆ ಇರುವ ’ಅಹಂ’ ಎಂಬ ಕಂದಕದಿಂದ ಮಕ್ಕಳು ಎಲ್ಲಿದ್ದಾರೆ, ಏನುಮಾಡುತ್ತಿದ್ದಾರೆ ಎಂಬುದನ್ನು ಲಕ್ಷ್ಯಿಸುವ ದೇಖರೇಖಿಯ ಕೆಲಸ ಅಪ್ಪ-ಅಮ್ಮಂದಿರಿಗೆ ಸಾಧ್ಯವಾಗುವುದಿಲ್ಲ.

ಇದಕ್ಕೆ ಉದಾಹರಣೆ: ಕಳೆದ ಕೆಲವು ತಿಂಗಳ ಹಿಂದೆ ಅತಿ ಚಿಕ್ಕ ಹುಡುಗರಿಬ್ಬರು ಮನೆಯಿಂದ ತಪ್ಪಿಸಿಕೊಂಡಿದ್ದರು. ಆಮೇಲೆ ನೋಡಿದರೆ ಮಧ್ಯಮವರ್ಗದವರಿಗೆ ಜನ್ಮದಲ್ಲೇ ಸಾಧ್ಯವಾಗದ ರೆಸಾರ್ಟ್ ಖರ್ಚಿನ ವಾಸದಲ್ಲಿ ಅವರು ಇದ್ದರು. ಅಲ್ಲಿಗೆ ಹೋಗಿ ಏನೇನನ್ನೋ ಬಯಸಿ ಕೇಳಿಪಡೆದು ಮಜಾಮಾಡತೊಡಗಿದ್ದರು. ಇಷ್ಟು ಸಣ್ಣಮಕ್ಕಳು ಮಾಡಿದ ಕೆಲಸದ ಇತಿಹಾಸ ಕೇಳಿ ನಾವೆಲ್ಲಾ ನಿಜಕ್ಕೂ ದಂಗಾಗಿ ಹೋಗಿದ್ದೆವು. ಇವತ್ತಿನ ದಿನ ವಾರ್ತಾವಾಹಿನಿಗಳು ನಿರಂತರ ಕಾರ್ಯನಿರತವಾಗಿರುವುದರಿಂದ ಅವರ ಪತ್ತೆ ಸುಲಭಸಾಧ್ಯವಾಯಿತು. ಇಲ್ಲಾಂದರೆ ಮಕ್ಕಳನ್ನು ಯಾರೋ ಕಿಡ್ನಾಪ್ ಮಾಡಿದ್ದಾರೆ ಎಂದೇ ಭಾವಿಸಬೇಕಾಗುತ್ತಿತ್ತು. ಇದು ಇಂದು ನಿನ್ನೆಯದಲ್ಲ,ಹಿಂದಿನಿಂದಲೂ ನಡೆದು ಬಂದಿದ್ದು. ಉಳ್ಳವರಿಗೆ ಮಕ್ಕಳೂ ಒಂದು ಉಪಕರಣವಿದ್ದ ಹಾಗೇ! ಹೆಂಡತಿ-ಮಕ್ಕಳು ಇರಬೇಕೋ ಇರಬೇಕು ಅಷ್ಟೇ. ಬಾಕಿ ಚಟಗಳನ್ನೆಲ್ಲಾ ಅವರು ದುಡ್ಡಿಕೊಟ್ಟು ತೆವಲು ತೀರಿಸಿಕೊಳ್ಳುತ್ತಾರೆ. ಐಷಾರಾಮೀ ಬಂಗಲೆಯಲ್ಲಿ ಹಾಯಾಗಿ ಹತ್ತಾರು ಕೋಣೆಗಳು, ದೊಡ್ಡ ದೊಡ ಹಜಾರಗಳು, ಕೈಗೆ ಕಾಲಿಗೆ ಆಳುಗಳು, ಅಡಿಗೆಯವರು.....ಹೀಗೇ ಎಲ್ಲದಕ್ಕೂ ಪ್ರತ್ಯೇಕ ವ್ಯವಸ್ಥೆ...ಎಲ್ಲವೂ ದುಡ್ಡಿನಲ್ಲೇ. ಕೋಣೆ ಕೋಣೆಗೆ ಫೋನು, ಟಿವಿ. ಅಪ್ಪನಿಗೊಂದು ಕೋಣೆ, ಅಮ್ಮನಿಗೆ ಇನ್ನೊಂದು ಕೋಣೆ. ಮಕ್ಕಳಿಗೆ ಒಬ್ಬೊಬರಿಗೆ ಒಂದೊಂದು ಕೋಣೆ. ಮಕ್ಕಳಿಗೆ ಹೋಮ್ ವರ್ಕ್ ಮಾಡಿಸಲು ಟ್ಯೂಶನ್ ಟೀಚರ್, ಅವರನ್ನು ಮಲಗಿಸಲು ಆಯಾಗಳು. ಇನ್ನೇನು ಬೇಕು. ಅಲ್ಲಿ ಕೊರತೆಯಿರುವುದು ಅಪ್ಪ-ಅಮ್ಮನ ಪ್ರೀತಿ ಮಾತ್ರ. ಎಲ್ಲವೂ ಯಾಂತ್ರಿಕ!

ಇಂತಹ ಸ್ಥಿತಿಯಲ್ಲಿ ಬೆಳೆದ ಹುಡುಗರು ಹಿಂದೊಮ್ಮೆ ಪರೀಕ್ಷೆಗೆ ಕುಳಿತಾಗ ತಾವು ಹೇಗೂ ಉತ್ತೀರ್ಣರಾಗುವುದಿಲ್ಲವೆಂದು ತಿಳಿದಾಗ ನೂರು ನೂರು ರೂಪಾಯಿಗಳ ನೋಟುಗಳನ್ನು ಉತ್ತರಪತ್ರಿಕೆಗೆ ಗುಂಡುಪಿನ್ನು ಚುಚ್ಚಿ ಸಿಕ್ಕಿಸಿ ಅದರ ಕೆಳಗೆ ಬರೆದ ವಚನ

’ದಯವೇ ಧರ್ಮದ ಮೂಲವಯ್ಯಾ ೪೦ ಮಾರ್ಕ್ಸು ಹಾಕಿ ಪಾಸುಮಾಡಿರಯ್ಯಾ’ !

ಇಂತಹ ಮಹಾಮೇಧಾವಿಗಳೇ ಮುಂದೆ ಬೆಳೆದು ರಾಜಕಾರಣಿಗಳಾಗುತ್ತಾರೆ! ನಮ್ಮನ್ನೆಲ್ಲಾ ಆಳುತ್ತಾರೆ. ಅವರಿಗೆ ಗೊತ್ತು ದುಡ್ಡು ಕೊಟ್ಟರೆ ಎಲ್ಲವೂ ಸಾಧ್ಯ. ದುಡ್ಡಿದ್ದರೆ ಏನನ್ನೂ ಖರೀದಿಸಬಹುದು ಎಂಬುದು ಅವರ ಅನುಭವ ಜನ್ಯ ಅನಿಸಿಕೆಯಾಗಿರುತ್ತದೆ. ಶಾಸಕ ಸ್ಥಾನಕ್ಕೆ ಟಿಕೀಟು ಖರೀದಿಯಾಗುತ್ತದೆ. ಆಮೇಲೆ ಚುನಾವಣೆಗೆ ಒಂದಷ್ಟು ಕೋಟಿ ಇನ್ವೆಷ್ಟಮೆಂಟ್ ಆಗುತ್ತದೆ! ಆಮೇಲೆ ಗೆದ್ದಮೇಲೆ ಮಂತ್ರಿಗಿರಿಗೆ ಮತ್ತಷ್ಟು ಕೋಟಿ ಖರ್ಚಾಗುತ್ತದೆ! ತದನಂತರ ಅವುಗಳನ್ನೆಲ್ಲಾ ಸರಿದೂಗಿಸಿ ಮುಂದಿನ ಚುನಾವಣೆಗೆ ಮತ್ತು ಐಷಾರಾಮೀ ಜೀವನಕ್ಕೆ ಬೇಕಾಗಿ ಮಿಗಿಸಲು ಲಾಬಿ ಶುರು ಹಚ್ಚಿಕೊಳ್ಳುತ್ತಾರೆ!

ಯಾವ ಮಗು ಎಳವೆಯಲ್ಲಿ ಏನನ್ನು ಬಯಸಬಾರದಿತ್ತೋ , ಯಾವ ಕಾಮಚೇಷ್ಟೆಗಳನ್ನು ಅನುಭವಿಸಬಾರದಿತ್ತೋ, ಏನನ್ನು ಕುಡಿಯಬಾರದಿತ್ತೋ ಅಷ್ಟನ್ನೂ ಮಾಡಿಮುಗಿಸಿರುತ್ತದೆ. ಮೂಲದಲ್ಲೇ ಮಹತ್ವಾಕಾಂಕ್ಷೆಯ ಆಸೆಗಳನ್ನು ಖರೀದಿಸುವ ಸಂಸ್ಕೃತಿಗೆ ಒಗ್ಗಿದ ಮಗುವಿಗೆ ಯಾವುದು ಬೇಕು ಯಾವುದು ಬೇಡ ಎಂಬುದರ ಪರಿವೆ ಹೇಗೆ ತಾನೇ ಬಂದೀತು? ಅಪ್ಪ - ಅಮ್ಮ ಪಾರ್ಟಿಗಳಲ್ಲಿ ಪೆಗ್ಗು ಹಾಕುವುದು ಕಂಡಾಗ ತಾನೇಕೆ ಮಾಡಬಾರದು ಎಂದು ಮಗುವಿನ ಮನಸ್ಸು ಅತ್ತಕಡೆ ಎಳೆಯುತ್ತದೆ. ಮಾಜಿ ಮುಖ್ಯಮಂತ್ರಿಯೊಬ್ಬರ ಮಗ ಕಾಲೇಜಿಗಿನ್ನೂ ಕಾಲಿಡದವ ಎಮ್.ಜಿ. ರಸ್ತೆಯ ರೆಸ್ಟಾರೆಂಟ್ ಒಂದರಲ್ಲಿ ಕಂಠಪೂರ್ತಿ ಕುಡಿದು ದಾಂಧಲೆ ಮಾಡಿದ್ದು ನಮಗೆ ಗೊತ್ತಿರುವ ಹಳೇ ಕಥೆ. ಕಾಲಗರ್ಭದಲ್ಲಿ ಇಂತಹ ಅದೆಷ್ಟು ಕಥೆಗಳಿವೆಯೋ !

ಮಹಾತ್ಮಾ ಗಾಂಧೀಜಿ ಚಿಕ್ಕವರಿರುವಾಗ ಬೀಡಿಯೊಂದನ್ನು ಸೇದಿದ್ದರಂತೆ. ಅದು ಸರಿಯಲ್ಲವೆಂದು ಯಾವಾಗ ತಿಳಿಯಿತೋ ಮರುಕ್ಷಣದಿಂದ ತನ್ನಲ್ಲೇ ಕೊರಗಿ ಮತ್ತೆ ತಾನು ಬೀಡಿಸೇದದಂತೇ ಮನಸ್ಸನ್ನು ಹಿಡಿತದಲ್ಲಿಟ್ಟರಂತೆ. ಮನೆಯಲ್ಲಿ ನಾವೇನು ಮಾಡುತ್ತೇವೆ, ಶಾಲೆಯಲ್ಲಿ ಶಿಕ್ಷಕರು ಏನುಮಾಡುತ್ತಾರೆ ಇವೆಲ್ಲಾ ಚಿಕ್ಕಮಕ್ಕಳ ಎಳೆಮನಸ್ಸಿನ ಮೇಲೆ ಬಹಳ ಪರಿಣಾಮ ಬೀರುತ್ತವೆ. ಈ ಎರಡು ಪ್ರದೇಶಗಳಲ್ಲಿ ಸಿಗುವ ವ್ಯಕ್ತಿಗಳೇ ಅಂದಿಗೆ ಮಕ್ಕಳ ರೋಲ್ ಮಾಡೆಲ್ ಆಗಿರುತ್ತಾರೆ! ನಮ್ಮಲ್ಲಿ ಯಾರೇ ಆಗಲಿ ಶ್ರೀಮಂತರಿದ್ದರೆ ಅವರಲ್ಲಿ ಒಂದು ಸವಿನಯ ವಿಜ್ಞಾಪನೆ ನನ್ನದು. ನಿಮ್ಮ ಮಕ್ಕಳನ್ನು ಯಾರದೋ ಉಸ್ತುವಾರಿಯಲ್ಲಿ ಬೆಳೆಸುವ ಬದಲು ನೀವೇ ಬೆಳೆಸಿ. ನಿಮ್ಮ ಅಂಹಕಾರ, ಶ್ರೀಮಂತಿಕೆಯನ್ನೆಲ್ಲಾ ಪಕ್ಕದಲ್ಲಿರಿಸಿ ವ್ಯವಹರಿಸಿ. ಮಹಾಲಕ್ಷ್ಮಿ ಚಂಚಲೆಯಂತೆ! ಅವಳು ನಿಂತಲ್ಲಿ ನಿಲ್ಲುವುದಿಲ್ಲವಂತೆ. ಒಂದೊಮ್ಮೆ ಯಾವುದೋ ತೊಂದರೆಯಿಂದ ಅವಾಂತರವಾಗಿ ಗಳಿಸಿದ ಶ್ರೀಮಂತಿಕೆ ನಶಿಸಿಹೋಗಿ ಬಡತನ ಬಂದುಬಿಟ್ಟರೆ ಆಗ ಹೇಗೆ ಬದುಕಬೇಕು ?

ನಾವೆಲ್ಲಾ ಎಳೆಯವರಿರುವಾಗ ನಮ್ಮ ತಾಯಿ, ತಂದೆ, ಅಜ್ಜ, ಅಜ್ಜಿ, ಚಿಕ್ಕಪ್ಪಂದಿರು ಎಲ್ಲರೂ ಇರುವ ಕೂಡು ಕುಟುಂಬ ನಮ್ಮದಾಗಿತ್ತು. ೨ ವರ್ಷದವರಿದ್ದಾಗಲೇ ದಿನಾಲೂ ಬಾಯಿಪಾಠ ಹೇಳಿಸುತ್ತಿದ್ದರಂತೆ ನಮ್ಮ ಅಜ್ಜಿ. ೬ ವರ್ಷವಾದಾಗ ನಮ್ಮ ನಮ್ಮ ಬಟ್ಟೆಯನ್ನು ನಾವ್ನಾವೇ ತೊಳೆದುಕೊಳ್ಳಬೇಕು, ಶುಭ್ರ ಬಟ್ಟೆಗಳನ್ನು ಧರಿಸಬೇಕು, ಹಲ್ಲುಗಳನ್ನು ಬೆಳಿಗ್ಗೆ ಎದ್ದಾಗ ಮತ್ತು ರಾತ್ರಿ ಮಲಗುವ ಮುನ್ನ ಹೀಗೇ ಎರೆಡಾವರ್ತಿ ಉಜ್ಜಿ ಸ್ವಚ್ಛಗೊಳಿಸಬೇಕು ಎಂದು ಹೇಳಿಕೊಟ್ಟವರು ತಾಯಿ, ಸಾಹಸದ ಗಾಥೆಗಳನ್ನು ಮನದಟ್ಟಾಗಿಸಿ ವ್ಯಕ್ತಿ ಯಾವಾಗಲೂ ಕಾರ್ಯತತ್ಪರನಾಗಿರಬೇಕೆಂದೂ ಸಾಮಾನ್ಯವಾಗಿ ಬೇಕಾಗುವ ಎಲ್ಲಾ ಕೆಲಸಗಳನ್ನೂ ಅರಿತಿರಬೇಕೆಂದೂ ಹೇಳಿ-ತಿಳಿಸಿ-ಕಲಿಸಿದವರು ಅಜ್ಜ, ಮಕ್ಕಳಿಗೆ ಬೇಕಾಗುವ ಪುಸ್ತಕ, ಪಟ್ಟಿ, ಪೆನ್ಸಿಲ್, ಬಿಸ್ಕಿಟ್ ಇವನ್ನೆಲ್ಲಾ ತಂದವರು ಚಿಕ್ಕಪ್ಪಂದಿರು, ಬದುಕಿಗೆ ಬೇಕಾಗುವ ಹಲವು ಕೆಲಸಗಳನ್ನು ಪ್ರಯೋಗಿಕವಾಗಿ ಪ್ರಾತ್ಯಕ್ಷಿಕೆ ಮಾಡಿತೋರಿಸಿದವರು, ಕಿವಿ ಹಿಡಿದು ಬುದ್ಧಿಹೇಳಿದವರು ತಂದೆ. ನಮ್ಮಂತಹ ಶುಂಠರನ್ನು, ಮೂಢರನ್ನು ತಿದ್ದಲು ಅವರು ರಾಮಾಯಣ ಮಹಾಭಾರತಗಳ ಕಥೆಗಳನ್ನು ಬಳಸಿದರು.

ಪ್ರತೀನಿತ್ಯ ದೈವಧ್ಯಾನ, ಪೂಜೆ-ಪುನಸ್ಕಾರ, ಅತಿಥಿಸತ್ಕಾರ, ಶಾಲೆ, ಪಾಠ-ಪ್ರವಚನ, ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳು, ಕೊಟ್ಟಿಗೆಯ ಕೆಲಸಗಳು-ಸಗಣಿ ಎತ್ತುವುದು, ಎಮ್ಮೆ-ದನಗಳನ್ನು ಮೀಯಿಸುವುದು, ಕೊಟ್ಟಿಗೆ ತೊಳೆಯುವುದು, ಗೊಬ್ಬರ ಬರಗುವುದು, ಹಾಲು ಹಿಂಡುವುದು, ಜಾನುವಾರುಗಳಿಗೆ ಮೇವು-ಅಕ್ಕಚ್ಚು [ಕಲಗಚ್ಚು]ಕೊಡುವುದು, ತೋಟದಲ್ಲಿ ಗಿಡ-ಮರಗಳಿಗೆ ನೀರು-ಗೊಬ್ಬರ ಪೂರೈಕೆ ಇವೇ ಮೊದಲಾದ ಹತ್ತಾರು ಕಾರ್ಯಗಳಲ್ಲಿ ನಾವು ತೊಡಕಿಕೊಳ್ಳುತ್ತ ಓದುವಂತೇ ಪ್ರೇರೇಪಿಸಿದ್ದರಿಂದ ಇಂದು ಮಾನವರಾಗಿದ್ದೇವೆ ಅಂದುಕೊಂಡಿದ್ದೇನೆ! ನಮ್ಮ ಹಿರಿಯರು ಪ್ರತಿನಿತ್ಯ ಹೇಳುತ್ತಿದ್ದುದು :

|| ಅನಾಯಾಸೇನ ಮರಣಂ ವಿನಾದೈನ್ಯೇನ ಜೀವನಂ ||

ಅಂದಿಗೆ ನಮಗೆ ವೇದಮಂತ್ರಗಳ, ಶ್ಲೋಕಗಳ, ಸ್ತುತಿ-ಕವಚಗಳ ಅರ್ಥವಾಗುತ್ತಿರಲಿಲ್ಲ. ಇಂದು ನಮಗೆ ಇದನ್ನೆಲ್ಲಾ ಹೇಳಿಕೊಟ್ಟರಲ್ಲಾ ಪುಣ್ಯಾತ್ಮರು ಎಂದು ಮನಸ್ಸು ಕೃತಜ್ಞವಾಗುತ್ತದೆ. ಜೀವನದಲ್ಲಿ ಯಾರಲ್ಲಿಯೂ ಬೇಡಬಾರದಂತಹ ಸ್ಥಿತಿಯಲ್ಲಿ ನಾವು ಜೀವಿಸಿ ನಂತರ ನಿರಾಯಾಸವಾಗಿ ಮರಣವಾದರೆ ಅದೇ ಸುಖವೆಂದು ಈ ಮೇಲಿನ ಶ್ಲೋಕ ಹೇಳುತ್ತದೆಯಷ್ಟೇ ? " ಮಕ್ಕಳೇ ಯಾರನ್ನೂ ದ್ವೇಷಿಸಬೇಡಿ. ಎಲ್ಲರಲ್ಲಿಯೂ ಪ್ರೀತಿಯಿರಲಿ. ಜಗತ್ತಿನ ಪ್ರತಿಯೊಂದು ಜೀವಿಯಲ್ಲೂ ಪರಮಾತ್ಮನಿದ್ದಾನೆ. ಆದಷ್ಟೂ ಬಡವರಿಗೆ, ಆರ್ತರಿಗೆ, ಮುಪ್ಪಿನ ವಯಸ್ಸಿನವರಿಗೆ, ಅಂಗವಿಕಲರಿಗೆ ಸಹಾಯಮಾಡಿ. ಯಾರಿಗೂ ನಮ್ಮಿಂದ ಅನ್ಯಾಯ-ಅಪಚಾರವಾಗದಂತೇ ನೋಡಿಕೊಳ್ಳಿ. ಒಂದೊಮ್ಮೆ ಯಾರಾದರೂ ನಮ್ಮಿಂದ ನೊಂದುಕೊಂಡರೆ ಅಂಥವರಲ್ಲಿ ಕ್ಷಮೆಯಾಚಿಸಿ. ಸಾಧು-ಸಂತರ ಸೇವೆಮಾಡಿ. ಗೋವುಗಳನ್ನು ಚೆನ್ನಾಗಿ ಆರೈಕೆಮಾಡಿ, ನಮ್ಮ ಸುತ್ತಲಿರುವ ಪ್ರತಿಯೊಂದೂ ವಸ್ತುವಿನಲ್ಲೂ ಪರಮಾತ್ಮ ಸಾನ್ನಿಧ್ಯ ಇದೆಯೆಂದು ಭಾವಿಸಿ ನಡೆದುಕೊಳ್ಳಿ." --ಹೀಗೇ ಹಲವು ಅಂಶಗಳನ್ನು ಆಗಾಗ ಹೇಳುತ್ತಿದ್ದರಲ್ಲದೇ ಅದರಂತೇ ನಡೆದುಕೊಂಡರು; ನಮಗದು ಆದರ್ಶ.

" ದರಿದ್ರ ಏಳಗೊಡ ಭಾಗ್ಯ ಕೂರಗೊಡ. ಜಾಸ್ತಿ ಮಲಗಿದರೆ ದರಿದ್ರರಾಗ್ತೇವೆ ಕೆಲಸಮಾಡಿ ಭಾಗ್ಯ ಹುಡುಕಿಕೊಂಡು ಬರುತ್ತದೆ " ಎನ್ನುತ್ತಿದ್ದ ಅಜ್ಜಿ ನಮ್ಮೆಲ್ಲರನ್ನೂ ಹೊತ್ತಾರೆ ಎಬ್ಬಿಸಿ ದೇವರಿಗೆ ಹೂ ಕೊಯ್ಯಲು ಕಳುಹಿಸುತ್ತಿದ್ದುದು ನೆನಪಿಗೆ ಬರುತ್ತಿದೆ. ಕೆಲವೊಮ್ಮೆ ಚಳಿಗಾಲದಲ್ಲಿ ಇಂಪಾಗಿ ಹಾಡುವ ಹಕ್ಕಿಗಳ ಕಲರವದ ನಡುವೆ ಅಜ್ಜಿ ಹಾಡುತ್ತಿದ್ದ ಹಾಡು :

ಏಳು ಮುದ್ದಿನ ಗಿಣಿಯೆ ಏಳು ಸದ್ಗುಣಮಣಿಯೆ
ಏಳಯ್ಯ ಕಂದಯ್ಯ ಬೆಳಗಾಯಿತು

ಕ್ರೂರಮೃಗಗಳು ತಾವು ಗವಿಯ ಸೇರುತಲಿಹವು
ಪಾರಿಜಾತದ ಪುಷ್ಪ ಅರಳುತಿಹುದು .....

ಹಾಡು ಸುಮಾರು ಉದ್ದವಿದೆ, ಒಳ್ಳೆಯ ಸಾಹಿತ್ಯವಿದೆ. ಬರೆದ ಅಜ್ಞಾತ ಕವಿಯ ಬಗ್ಗೆ ಗೊತ್ತಿಲ್ಲ. ಈ ಹಾಡಿನ ಅರ್ಥವನ್ನು ಅಜ್ಜಿಯೇ ವಿವರಿಸುತ್ತಿದ್ದರು. ಇಂದಿಗೆ ಅಜ್ಜಿ ಕೇವಲ ನೆನಪುಮಾತ್ರ. ಅವರು ನಮ್ಮೆಲ್ಲಾ ಮಕ್ಕಳ ಹೃದಯದಲ್ಲಿ ನೆಲೆನಿಂತರು! ಇವತ್ತಿನ ದಿನದಲ್ಲಿ ಅವಿಭಕ್ತ ಕುಟುಂಬಗಳು ಎಲ್ಲೋ ಸಾವಿರಕ್ಕೆ ಒಂದು ಕಾಣಸಿಕ್ಕರೆ ನಮ್ಮ ಪುಣ್ಯ. ಇದ್ದರೂ ಮೊದಲಿನ ನಿಸ್ಪೃಹ ಜೀವನದ ವೈಖರಿ ಇವತ್ತಿನ ಜನರಲ್ಲಿಲ್ಲ. ಅಂದು ಹಿರಿಯರಿದ್ದರು ಸನ್ಮಾರ್ಗ ಬೋಧಿಸುತ್ತಿದ್ದರು; ಇಂದು ಹಿರಿಯರು ಜೊತೆಗಿರುವುದಿಲ್ಲ ಸನ್ಮಾರ್ಗ ಯಾವುದು ದುರ್ಮಾರ್ಗ ಯಾವುದು ತಿಳಿಯುವುದೇ ಇಲ್ಲ. ವಿದ್ಯೆ ಕಲಿಸುವ ಶಿಕ್ಷಣ ಕೇಂದ್ರಗಳು ಬದುಕುವ ನಿಜವಾದ ಕಲೆಯನ್ನು ಕಲಿಸುವ ಬದಲು ಬೇರೇನನ್ನೋ ಹೇಳುತ್ತವೆ. ಇಲೆಕ್ಟ್ರಿಕಲ್ ಎಂಜಿನೀಯರಿಂಗ್ ಓದಿಕೊಂಡಾತ ಕೆಟ್ಟುನಿಂತ ತನ್ನ ಮೋಟಾರ್ ರಿಪೇರಿಗೆ ಯಾವುದೋ ಇನ್ನೊಬ್ಬ ವ್ಯಕ್ತಿಯನ್ನು ಅವಲಂಬಿಸುತ್ತಾನೆ, ಸಿವಿಲ್ ಓದಿದವನಿಗೆ ಮನೆ ಕಟ್ಟಿಸಲು ಮತ್ತೊಬ್ಬ ಕಂತ್ರಾಟುದಾರ ಹೇಳಿಕೊಡಬೇಕಾಗುತ್ತದೆ, ಪ್ರಶಿಕ್ಷಣ ಓದಿದ ಪಂಡಿತನಿಗೆ ಪಾಠಮಾಡುವ ಪ್ರಾತ್ಯಕ್ಷಿಕೆಗೆ ಮತ್ತೆ ತರಬೇತಿ ಬೇಕು! --ಇವೆಲ್ಲಾ ಪಠ್ಯಕ್ರಮದ ನ್ಯೂನತೆಗಳು.

ಹೃದಯ ತಜ್ಞ ಡಾ| ಬಿ.ಎಮ್. ಹೆಗ್ಡೆಯವರು ಹೇಳುತ್ತಾರೆ-- ಅಲೋಪಥಿಯಲ್ಲಿ ಕೆಲವು ಮಾಪನಗಳನ್ನು ವಿದೇಶೀ ಹವಾಮಾನಕ್ಕನುಗುಣವಾಗಿ ಹೇಳುತ್ತಿದ್ದರಂತೆ. ಭಾರತದ ಹವಾಮಾನಕ್ಕೂ ಅಲ್ಲಿಗೂ ವ್ಯತ್ಯಾಸವಿರುವುದಿಲ್ಲವೇ ? ಇಲ್ಲಿ ಹೊಸದಾಗಿ ಕಲಿಯುವ ವೈದ್ಯರು ಆ ಪಠ್ಯಗಳನ್ನು ಅಭ್ಯಸಿಸಿ ಮಾಪನ ಉಪಯೋಗಿಸುವಾಗ ರೋಗಿಯ ತಪಾಸಣೆಯಾಧಾರಿತ ಅಂಕಿ ಅಂಶಗಳನ್ನು ಸರಿಯಾಗಿ ನಮೂದಿಸದೇ ಅಲ್ಲಿನ ಅಳತೆಗಳನ್ನೇ ಅವಲಂಬಿಸಿ ಬರೆಯುತ್ತಿದ್ದರಂತೆ. ಇದು ಅಷ್ಟಾಗಿ ಯಾವ ವೈದ್ಯರ ಲಕ್ಷ್ಯಕ್ಕೂ ಬರುತ್ತಿರಲಿಲ್ಲವಂತೆ. ಹೆಗ್ಡೆಯವರು ಅದನ್ನು ಪರಿಶೀಲಿಸಿ ಆ ನ್ಯೂನತೆಯನ್ನು ಹೊರಹಾಕಿದ್ದಾರೆ. --ಇದು ನಮ್ಮ ಪಠ್ಯಕ್ರಮಕ್ಕೂ ಮತ್ತು ಪ್ರಾಕ್ಟಿಕಲ್ ಗೂ ಇರುವ ವ್ಯತ್ಯಾಸ.

ಬಡತನ ನಮ್ಮಲ್ಲಿ ಇದ್ದೇ ಇದೆ. ಗದ್ದೆಯಲ್ಲಿ ಕೆಸರಿರುವಂತೇ, ಹುದ್ದೆಗೊಂದು ಜವಾಬ್ದಾರಿಯಿರುವಂತೇ ಇದು ಸದ್ಯಕ್ಕಂತೂ ಅನಿವಾರ್ಯ ಸಹಜ. ಇದನ್ನು ಒಪ್ಪಿಕೊಳ್ಳೋಣ. ಆದರೆ ಕೆಸರಿನಲ್ಲಿಯೇ ಕಮಲವೂ ಅರಳುವಂತೆ, ಆ ಅರಳಿದ ಕಮಲ ಕೆಸರನಲ್ಲಿಯೇ ಇದ್ದರೂ ಅದನ್ನು ಅಂಟಿಸಿಕೊಳ್ಳದಂತೇ ಇರುವಂತೇ ಬಡತನವಿದೆಯೆಂಬ ಭಾವವನ್ನು ತೊರೆದು ನಾವೆಲ್ಲಾ ಶ್ರೀಮಂತರೇ ಎಂಬ ಭಾವದಿಂದ ಬದುಕಬಲ್ಲೆವಷ್ಟೇ ? ನಮಗೆ ಢಾಂಬಿಕತೆ ಬೇಡ, ಇದ್ದುದನ್ನೇ ನಮ್ಮ ಶ್ರೀಮಂತಿಕೆಯೆಂದು ತಿಳಿಯಲು ಅಡ್ಡಿಯಿಲ್ಲವಲ್ಲ? ನಿಜವಾಗಿಯೂ ಹೇಳಲೇ ನಾವ್ಯಾರೂ ಬಡವರಲ್ಲ. ನಮ್ಮನ್ನು ಬಡವರನ್ನಾಗಿಸಿದವರು ಖರೀದಿಸುವ ಮನೋಭಾವದ ರಾಜಕಾರಣಿಗಳು. ಅವರು ಖೊಳ್ಳೆ ಹೊಡೆದು ಸ್ವಿಸ್ ಬ್ಯಾಂಕಿನಲ್ಲಿಟ್ಟ ಹಣ ದೇಶಕ್ಕೆ ಮರಳಿ ಬಂದಿದ್ದರೆ-ಅದನ್ನು ಬಡವರು ಪಡೆದಿದ್ದರೆ ದೇಶದಲ್ಲಿ ಬಡತನವೆಂಬುದು ಇರುತ್ತಿರಲಿಲ್ಲ. ಆಗಲಿ, ಆಗುವುದೆಲ್ಲಾ ಒಳ್ಳೆಯದಕ್ಕೇ! ಕಾಲ ಮತ್ತೆ ಬದಲಾಗುತ್ತಿರುತ್ತದೆ. ಆದರೊಂದು ಮಾತು ಮಕ್ಕಳಿಗೆ ಒಳ್ಳೆಯತನ ಮೈಗೂಡಿಸಿಕೊಳ್ಳಲು ಅನುವುಮಾಡಿಕೊಡಿ. ಸನ್ಮಾರ್ಗವನ್ನು ಕಥೆಯಲ್ಲಲ್ಲ ಕೃತಿಯಿಂದ ಬೋಧಿಸಿ ! ಮಕ್ಕಳು ಬಸವಣ್ಣನವರ ಆ ವಚನವನ್ನು ಬದಲಿಸದೇ ಮೂಲ ವಚನವನ್ನು ಹಾಗೇ ಬಳಸುವಂತೇ ಆಗಲಿ. ಮಕ್ಕಳು ಎಲ್ಲೇ ಇರಲಿ, ಅವರು ಮುಗ್ಧರೇ, ಅವರನ್ನು ತಿದ್ದುವುದು-ತೀಡುವುದು ನಮ್ಮ ಕರ್ತವ್ಯ. ಈ ದಿಸೆಯಲ್ಲಿ ತಿದ್ದುವ ನೆಪದಲ್ಲಿ ಮಕ್ಕಳನ್ನು ಗೋಳುಹುಯ್ದುಕೊಳ್ಳುವ ಕೆಲಸ ಮಾಡಬೇಡಿ. ತಿದ್ದುವ ಕ್ರಮ ನಮ್ಮ ಕಾರ್ಯರೂಪದಿಂದ ತೋರ್ಪಡುವ ಸಂಸ್ಕಾರದಿಂದ ಅವರಿಗೆ ತಂತಾನೇ ಬರಲಿ. ಮಕ್ಕಳಲ್ಲಿ ದಯೆಯಿರಲಿ, ಅನುಕಂಪವಿರಲಿ, ಪ್ರೀತಿಯಿರಲಿ, ಸಹಾನುಭೂತಿಯಿರಲಿ. ಮಂಗಳವನ್ನೂ ಶುಭವನ್ನೂ ಕೋರುವ ಹಾಡಿನ ಪಲ್ಲವಿಯೊಂದಿಗೆ ಈ ಲೇಖನಕ್ಕೆ ಮಂಗಳ ಕೋರೋಣ:

ಮಂಗಳದಾ ಈ ಸುದಿನ ಮಧುರವಾಗಲೀ ....
ನಿಮ್ಮೊಲವೇ ಈ ಮನೆಯ ನಂದಾದೀಪವಾಗಲಿ ......