ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Friday, March 13, 2015

ಹುಲಿಯ ಚರ್ಮ ಧರಿಸಿದ ಮಾತ್ರಕ್ಕೆ................!!













ಹುಲಿಯ ಚರ್ಮ ಧರಿಸಿದ ಮಾತ್ರಕ್ಕೆ................!!

ಇದು ನಿಮಗೆಲ್ಲ ಗೊತ್ತೇ ಇರುವ ಪಂಚತಂತ್ರದ ಕಥೆ: ಇಂತಹ ಕಥೆಗಳನ್ನು ಅದೆಷ್ಟು ಸರ್ತಿ ಕೇಳಿದರೂ ರಂಜನೀಯ-ಸರಳ ನೀತಿ ಬೋಧಕವಾಗಿರುವುದರಿಂದ ಬೇಸರವೆನಿಸಲಾರದು. ಶುದ್ಧವಸ್ತ್ರನೆಂಬ ರಜಕ ನಿತ್ಯ ಬಟ್ಟೆಹೊರುವ ಕಾಯಕಕ್ಕೆ ಬಡಕಲು ಗಂಡು ಕತ್ತೆಯನ್ನು ಸಾಕಿಕೊಂಡಿದ್ದ. ಒಮ್ಮೆ ಹಾಗೆ ಹೋಗುತ್ತಿರುವಾಗ ಸತ್ತುಬಿದ್ದ ಹುಲಿಯೊಂದನ್ನು ಕಂಡವನೇ ವಿಶಿಷ್ಟ ಯೋಜನೆಯೊಂದನ್ನು ರೂಪಿಸಿದ. ಸತ್ತ ಹುಲಿಯ ಚರ್ಮವನ್ನು ಸುಲಿದು ಕತ್ತೆಯ ಶರೀರಕ್ಕೆ ಅದನ್ನು ಸುತ್ತಿ, ರಾತ್ರಿಯ ಹೊತ್ತು ಹತ್ತಿರದ ಹೊಲಗಳಿಗೆ ಮೇಯಲು ಬಿಟ್ಟ. ರೈತರು ಹುಲಿಯೆಂದು ಹೆದರಿ ಸುಮ್ಮನಿರುತ್ತಾರೆ, ತನ್ನ ಕತ್ತೆ ಚೆನ್ನಾಗಿ ಮೇಯ್ದು ದಷ್ಟ ಪುಷ್ಟವಾಗುತ್ತದೆ ಎಂಬುದು ಆವನ ಅನಿಸಿಕೆ. ರಜಕನ ಕತ್ತೆ ಭತ್ತ,ಕಬ್ಬು, ತೊಗರಿ,ಹುರುಳಿ, ಅವರೆ ಇವೇ ಮುಂತಾದ ಹೊಲಗಳಿಗೆ ನುಗ್ಗಿ ನಿರ್ಭಯವಾಗಿ ಬಯಸಿದ್ದನ್ನು ತಿನ್ನತೊಡಗಿತು. ಒಂದು ಬೆಳಗಿನ ಜಾವ ಇನ್ನಾವುದೋ ಹೆಣ್ಣು ಕತ್ತೆಯೊಂದು ಅಲ್ಲಿಗೆ ಮೇಯಲು ಬಂದು ಕೂಗತೊಡಗಿದ್ದನ್ನು ಕಂಡ ಮಡಿವಾಳನ ಕತ್ತೆ, ಹೆಣ್ಣು ಕತ್ತೆಯ ಹತ್ತಿರಕ್ಕೆ ತೆರಳಿ ಮೂಸುತ್ತ ತಾನೂ ಗಾರ್ದಭಗಾನ ಆರಂಭಿಸಿತು. ತಾವು ಕಂಡಿದ್ದು ಹುಲಿಯ ವೇಷದ ಕತ್ತೆಯನ್ನು ಎಂಬ ಅಸಲೀಯತ್ತು ಗೊತ್ತಾದಾಗ ಹೊಲಗಳ ರೈತರು ದೊಣ್ಣೆಗಳನ್ನು ತಂದು ಕತ್ತೆಗೆ ಸನ್ಮಾನ ಮಾಡಿದರು. ಅವಸರದಲ್ಲಿ ಸತ್ತೆನೋ ಇದ್ದೆನೋ ಎನ್ನುತ್ತಾ ಓಡುವಾಗ ಮಡಿವಾಳನ ಕತ್ತೆಯ ಹುಲಿಚರ್ಮ ಎಲ್ಲಿಯೋ ಬಿದ್ದು ಹೋಯಿತು. 

ಜನಜೀವನದಲ್ಲಿ ಅಪಾತ್ರರು ಪಾತ್ರರಾದಾಗ ಈ ಕಥೆ ಹೇಳಲ್ಪಡುತ್ತದೆ. ಅಪಾತ್ರರನ್ನು ಎಲ್ಲಿಡಬೇಕೋ ಅಲ್ಲಿಯೇ ಇಡುವುದನ್ನು ಬಿಟ್ಟು ಅವರನ್ನು ಘನತೆವೆತ್ತವರೆಂದೇ ಮೆರೆಯಿಸುವ ಕೆಲಸದಲ್ಲಿ ಕೆಲವರು ತೊಡಗಿಕೊಳ್ಳುತ್ತಾರೆ. ಅದೊಂದು ಥರದ ಬಿಸಿ ತುಪ್ಪದ ಕಥೆ. ತುಪ್ಪ ಬಿಸಿ ಇರುವಾಗ ನುಂಗಿದರೆ ಗಂಟಲು ಸುಡುತ್ತದೆ; ಉಗುಳಿದರೆ ತುಪ್ಪ ಯಾರಿಗೂ ಇಲ್ಲದೇ ಹಾಳಾಗಿ ಹೋಗುತ್ತದೆ. ಕೇವಲ ಬಿಸಿ ತುಪ್ಪವೊಂದೇ ಅಲ್ಲ; ಜಡ್ಡುತುಪ್ಪವೂ ಹಾಗೇ. [ನಮ್ಮಲ್ಲಿ ನಾರುವ ತುಪ್ಪವನ್ನು “ಜಡ್ಡುತುಪ್ಪ” ಎನ್ನುತ್ತೇವೆ; ಶಾರ್ಟ್ ಆಗಿ ‘ವಿಟೆಮಿನ್ ಝಡ್’ ಎಂದೂ ಕರೆಯುವುದುಂಟು] ಅಪರೂಪಕ್ಕೆ ಯಾರದೋ ಮನೆಗೆ ಹೋದಾಗ ಸತ್ಕಾರದಲ್ಲಿ [ಹೆತ್ತವರಿಗೆ ಹೆಗ್ಗಣ ಮುದ್ದು ಎಂಬಂತೆ ತಾವೇ ಇಷ್ಟಪಟ್ಟು ತಯಾರಿಸಿಟ್ಟುಕೊಂಡ] ತುಪ್ಪವನ್ನು ಬಡಿಸಿಬಿಡುತ್ತಾರೆ. ಅರಿವಿಲ್ಲದೇ ಬಾಯಿಗೆ ಸೇರುವ ಅಂತಹ ತುಪ್ಪ ಕೂಡ ಒಳಗೂ ಹೋಗುವುದಿಲ್ಲ-ಹೊರಗೂ ಹೋಗಲಾರದಲ್ಲ! ನುಂಗಿದರೆ ಅರೆಕ್ಷಣದಲ್ಲಿ ವಾಂತಿ ಉಚಿತ; ಉಗುಳಿದರೆ ಆ ಮನೆಯವರು ಹಿಂದುಗಡೆ ಆಡಿಕೊಳ್ಳುವುದೂ ಖಚಿತ!! 


ಅಪಾತ್ರರಿಗೆ ದಾನವನ್ನೂ ಕೊಡಬಾರದು ಎಂಬುದೊಂದು ಹೇಳಿಕೆಯಿದೆ. ದಾನ ತೆಗೆದುಕೊಳ್ಳುವವನಿಗೆ ದಾನದ ಮಹತ್ವ ತಿಳಿದಿರಬೇಕು ಎಂದರ್ಥ. ಕೊಡುವ ದಾನ ಕೂಡ ಉಪಯೋಗಕ್ಕೆ ಬರುವ ಧನ-ಕನಕ-ದವಸ-ಧಾನ್ಯಾದಿ ವಸ್ತು ವಿಶೇಷಗಳಿಂದಲೇ ಕೂಡಿರಬೇಕೇ ಹೊರತು, ಹಾಲು ಹಿಂಡದ ಗೊಡ್ಡು ಹಸುವಿನಂಥದ್ದನ್ನು ದಾನ ಮಾಡಬಾರದು ಎಂಬುದು ನಿಯಮ. ರಾಜಕಾರಣದಲ್ಲಿರುವವರು ಸಾಮಾನ್ಯವಾಗಿ ತಮಗೆ ಬೇಕಾದದ್ದನ್ನೆಲ್ಲ ಪಡೆದುಕೊಳ್ಳಲು ಹೇಗಾದರೂ ಪ್ರಯತ್ನಿಸಿ ಅನೇಕಸಲ ಯಶಸ್ಸನ್ನು ಪಡೆದುಕೊಳ್ಳುತ್ತಾರೆ ಎಂಬುದು ಹಲವರ ಅನಿಸಿಕೆ; ಯಾಕೆಂದರೆ ಈ ನೆಲದಲ್ಲಿ ಮಿಕ್ಕವರಿಗೆ ಅನ್ವಯಿಸುವ ಕಾನೂನು ರಾಜಕಾರಣಿಗಳಿಗೆ ಅನ್ವಯವಾಗುವುದಿಲ್ಲ; ಅಪಾರ ಧನಿಕರೆನಿಸಿದವರಿಗೂ ಹಾಗೇ! 

ಕೆಲವೊಮ್ಮೆ ಅರ್ಹರೂ ತಮಗೆ ಅರ್ಹವಾದ ಸ್ಥಾನವನ್ನು ಅಲಂಕರಿಸಲು ಒಪ್ಪದ ಸನ್ನಿವೇಶಗಳಿರುತ್ತವೆ. ಅಜಾತಶತ್ರುವೆನಿಸಿದ ವಾಜಪೇಯಿಯವರು ತಮ್ಮದೇ ಕೇಂದ್ರ ಸರ್ಕಾರ ಆಡಳಿತದಲ್ಲಿದ್ದಾಗ ಭಾರತರತ್ನ ಪ್ರಶಸ್ತಿಗೆ ತಮ್ಮ ಹೆಸರನ್ನು ತಾವೇ ಶಿಫಾರಸು ಮಾಡಿಕೊಳ್ಳಲು ಬರುತ್ತಿತ್ತು; ಹಾಗೆ ಮಾಡಲು ಅವರ ಸಹೋದ್ಯೋಗಿಗಳು ಸಲಹೆ ನೀಡಿದ್ದರೂ ವಾಜಪೇಯಿಯವರು ಹಾಗೆ ಮಾಡಲಿಲ್ಲ. ವಾಜಪೇಯಿಯಂತಹ ರಾಜಕಾರಣಿಗಳು ಶತಕೋಟಿಗೊಬ್ಬರು ಎನ್ನಬಹುದೇನೋ. ಈ ಸರ್ತಿ ಅವರಿಗೆ ‘ಭಾರತರತ್ನ’ ಪುರಸ್ಕಾರವನ್ನು ಘೋಷಿಸಲಾಯ್ತು ಎಂಬುದು ಹೆಮ್ಮೆ. ಇದರಿಂದ ‘ಭಾರತರತ್ನ’ ಪ್ರಶಸ್ತಿಯ ಮೌಲ್ಯ ಹೆಚ್ಚಿದೆ. 
 
ಯಾವುದೇ ರಂಗವನ್ನು ತೆಗೆದುಕೊಳ್ಳಿ, ‘ಊರಿದ್ದಲ್ಲಿ ಹೊಲಸು ಇದ್ದಿದ್ದೇ’ ಎಂಬಂತೆ ಎಲ್ಲೆಡೆಯೂ ಕೆಲವು ಅಸಮರ್ಪಕ ಸಂಗತಿಗಳನ್ನು ಕಾಣುತ್ತೇವೆ. ಈ ಹಿಂದೆ ಕರ್ನಾಟಕದಲ್ಲಿ “ಗೌಡಾ” ಪಡೆಯುವವರ ಹಾವಳಿ ಹೆಚ್ಚಿತ್ತು! ಗೊತ್ತಿಲ್ಲದ ಜಗತ್ತಿನ ಯಾವುದೋ ದೇಶದವರು ನಮಗೇ ಗೊತ್ತಿಲ್ಲದ ನಮ್ಮ ನಾಡಿನ ‘ಮಹಾನುಭಾವ’ರ ‘ಘನಂದಾರಿ’ ಕೆಲಸಗಳನ್ನು ಅಲ್ಲಿಂದಲೇ ಕಂಡು, ಗುರುತಿಸಿ, ‘ಗೌಡಾ’ ಕೊಟ್ಟು ಕಳುಹಿಸುತ್ತಿದ್ದರು; ದುಬಾರಿ ಮೊತ್ತಕ್ಕೆ ಖರೀಸಿದಿಸಿದ್ದರೂ ಖರೀದಿಸಿದ್ದು ಬಹಿರಂಗ ಗೊಳ್ಳದ್ದದಿಂದ, ಮುಗುಮ್ಮಾಗಿ ಕಪ್ಪು ಗೌನಿನಲ್ಲಿ ನಿಂತು ಮುಖದಲ್ಲಿ ಹೊಸ ಖದರ್ ತೋರಿಸಿರುವುದೆಲ್ಲ ಈಗ ಹಳೆಯ ಸಂಗತಿ ಬಿಡಿ. ಅದಷ್ಟೇ ಅಲ್ಲ; ರಾಜ್ಯದ ಕೆಲವು ವಿಶ್ವವಿದ್ಯಾನಿಲಯಗಳಲ್ಲೂ ಹೀಗೇನೇ ‘ಗೌಡಾ’ ಕೊಡುವ ವ್ಯವಸ್ಥೆ ಕೆಲಕೆಲವು ಕುಲಪತಿಗಳ ಸುಪರ್ದಿಯಲ್ಲಿ ನಡೆಯುತ್ತದೆ ಎಂಬ ಗುಸುಗುಸು ಟಿಸಿಲೊಡೆದು “ಢಂ” ಎನ್ನಿಸಲು ಯಾರಿಗೂ ಆಸಕ್ತಿಯಿರದೆ “ಠುಸ್” ಆಗಿಹೋಯ್ತಾದರೂ ಎಲ್ಲವನ್ನೂ ಕುಳಿತಲ್ಲೇ ಅಳೆಯುವ ಜನರ ಮನಸ್ಸಿಗೆ ಗೊತ್ತಿದೆ. 

“ಕೊಡುವುದೇನು? ಕೊಂಬುದೇನು? ಒಲವು-ಸ್ನೇಹ-ಪ್ರೇಮ
ಹೊರಗೆ ಬರಿದು ಒಳಗೆ ನಲಿದು ಇದ್ದವರಿಗೆ ನೇಮ” --ಬೇಂದ್ರೆಯವರ ಕವನದ ಈ ಸಾಲುಗಳಿಗೆ ಇಲ್ಲಿ ಬೇರೆ ಅರ್ಥವ್ಯಾಪ್ತಿಯನ್ನೇ ಕೊಡಬಹುದು!

ಪ್ರಶಸ್ತಿಗಳನ್ನು ಹೊಡೆದುಕೊಳ್ಳುವ ವಹಿವಾಟು ಆರಂಭವಾಗಿ ‘ಬೆಳ್ಳಿಹಬ್ಬ’ದ ವರ್ಷವೇ ಕಳೆದಿದೆ. ಪ್ರಶಸ್ತಿಗಳನ್ನು ಹೊಡೆದುಕೊಳ್ಳುವುದರ ವಿರುದ್ಧ ವಿದ್ವಾಂಸ ಚಿದಾನಂದ ಮೂರ್ತಿಯವರು ಕೆಲವು ಕಡೆ ಬುಸ್ ಎಂದಿದ್ದಾರೆ. ಕೆಲವು ಪ್ರಶಸ್ತಿಗಳು ಮತ್ತು ಅವುಗಳನ್ನು ಹೊಡೆದುಕೊಳ್ಳುವುದರ ಹಿಂದಿನ ಮಸಲತ್ತುಗಳ ಬಗೆಗೆ ಖಾರವಾದ ಹೇಳಿಕೆಗಳು ಅವರ ಕೆಲವು ಲೇಖನಗಳಲ್ಲಿ ಕಾಣಿಸುತ್ತವೆ. ‘ಜ್ಞಾನಪೀಠ ಪ್ರಶಸ್ತಿ’ಯೂ ಕೆಲವೊಮ್ಮೆ ಇದೇ ರೀತಿ ಯಾರ್ಯಾರಿಗೋ ನೀಡಲ್ಪಟ್ಟಿದೆ ಎಂಬುದು ಅನೇಕರ ಅನಿಸಿಕೆ. ಹಲವು ಭಾಷೆಗಳಲ್ಲಿ ವಿದ್ವತ್ತುಳ್ಳ ಕನ್ನಡದ ಪ್ರಕಾಂಡ ಪಂಡಿತರೋರ್ವರು, “ಕನ್ನಡಕ್ಕೆ ಸಂದ ಮೊದಲ ನಾಲ್ಕು ಜ್ಞಾನಪೀಠಗಳನ್ನು ಹೊರತುಪಡಿಸಿದರೆ ಉಳಿದದ್ದರ ಬಗೆಗೆ ನಾನೇನೂ ಹೇಳಲಾಗದು”ಎಂದಿದ್ದಾರೆ. ಅಂದರೆ ಸತ್ಯವನ್ನು ಬಚ್ಚಿಟ್ಟು ನಾವು ‘ಹೊಡೆದುಕೊಳ್ಳುವ ವಿಕೃತಿ’ಯ ‘ಬೆಳ್ಳಿಹಬ್ಬ’ವನ್ನು ಆಚರಿಸಿಬಿಟ್ಟಿದ್ದೇವೆ!

ಪೀಠ, ವಿದ್ಯೆ, ತಪಸ್ಸು, ತ್ಯಾಗ, ಅನುಭವ ಮತ್ತು ಅರ್ಹತೆಗಳ ಪ್ರಶ್ನೆ ಬಂದಾಗ ಈಗೀಗ ಹಲವು ಘಟನೆಗಳು ಧುತ್ತನೆ ಎದುರಿಗೆ ಬರುತ್ತವೆ. ಧಾರ್ಮಿಕ ಪೀಠಗಳಿಗೆ ಅಂಟಿಕೊಂಡು ಕೂತವರು ನಡೆಸುವ ನೆಳಲು-ಬೆಳಕಿನಾಟಕ್ಕೆ ಬಲಿಯಾದ ಮಂದಿ ದನಿಯೆತ್ತಿದರೆ ಅವರ ವಿರುದ್ಧ ತಾಲಿಬಾನ್ ರೀತಿಯ ದಾಳಿಗಳು ನಡೆಯುತ್ತವೆ. ಧರ್ಮದ ಹೆಸರಿನಲ್ಲಿ ನಡೆಯುವ ದುರಾಚಾರಕ್ಕಂತೂ ಲೆಕ್ಕವೇ ಇಲ್ಲ. ಇತ್ತೀಚೆಗೆ, ಆಳುವ ಸರಕಾರವನ್ನೇ ಬೆದರಿಸಿದ್ದ ಅನೇಕ ‘ಸಂತ’ರನ್ನು ನಾವು ಕಂಡಿದ್ದೇವೆ. ಇಂತಹ ‘ಸಂv’ರಿಗೆಲ್ಲ ಅವರವರದ್ದೇ ಆದ ತಾಲಿಬಾನ್ ಪಡೆಯಿರುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಂಡೇ ವ್ಯವಹರಿಸಬೇಕಾಗುತ್ತದೆ. ಅರ್ಹತೆಯಿಲ್ಲದಿದ್ದರೂ, ಭಕ್ಷೀಸು- ಫಲಾನುಭವಿ ಬಾಲಬಡುಕರನ್ನು ಕಟ್ಟಿಕೊಂಡು, ತಾವೇ ದೇವರೆಂದೋ, ಸ್ವಾಮಿಯೆಂದೋ, ಸಂತನೆಂದೋ ಭೋಂಗುಬಿಡುತ್ತಾ, ಮುಗ್ಧ ಜನgನ್ನು ಬಣ್ಣದ ಮಾತುಗಳಿಂದ ಮಂತ್ರಮುಗ್ಧರನ್ನಾಗಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ತಮ್ಮ ರಕ್ಷಣೆಗೆ “ಹಿಂದೂಗಳ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ” ಎಂಬ ಅಸ್ತ್ರವನ್ನು ಬಳಕೆಮಾಡಿಕೊಳ್ಳುತ್ತಾರೆ. ವಾಸ್ತವವಾಗಿ ನಿಜವಾದ ಹಿಂದೂಗಳಿಗೆ ಇಂತಹ ಸಂತರನ್ನು ತಮ್ಮಲ್ಲಿ ಇರಿಸಿಕೊಳ್ಳುವುದು ಹೇಗೆಂಬುದು ಮೇಲೆ ಹೇಳಿದ ಜಡ್ಡುತುಪ್ಪದ ಕಥೆಯಾಗಿದೆ; ಇವರನ್ನೆಲ್ಲ ಇರಿಸಿಕೊಳ್ಳುವುದೂ ಹಿಂದೂ ಧರ್ಮದ ನೀತಿಯೆಂದು ಯಾರೂ ತಿಳಿಯಬೇಕಾಗಿಲ್ಲ; ಶುದ್ಧ ಹಿಂದೂ ಧರ್ಮ ಇದನ್ನೆಲ್ಲ ಸಹಿಸುವುದೂ ಇಲ್ಲ. ಉತ್ತಮನಾಗಿದ್ದ-ದಾನಶೂರನೆನಿಸಿದ್ದ ಕರ್ಣ, ವೇದವ್ಯಾಸರಿಂದಲೇ “ದುಷ್ಟ ಚತುಷ್ಟಯ”ರಲ್ಲಿ ಒಬ್ಬನೆಂದು ವಿಂಗಡಿಸಲ್ಪಟ್ಟ ಧರ್ಮಸೂಕ್ಷ್ಮವನ್ನು ನಾವಿಲ್ಲಿ ಗಮನಿಸಬೇಕಾಗುತ್ತದೆ.  

ಕಲೆ, ಸಾಹಿತ್ಯ, ಸಂಗೀತ ಲೋಕಗಳಲ್ಲಿಯೂ ಸಹ ಇಂತಹ ಧರ್ಮಸೂಕ್ಷ್ಮವನ್ನು ಅರಿತು ನಡೆಯಬೇಕಾದ ಅಗತ್ಯವಿದೆ. ದೊಡ್ಡ ನಟನೊಬ್ಬನ ಮಕ್ಕಳು ಎಂಬ ಕಾರಣಕ್ಕೆ ಮಸಿಮಂಗನ ಮುಸುಡಿಯ ಅನರ್ಹರನ್ನೂ ದೊಡ್ಡ ನಟರೆಂಬಂತೆಯೇ ಸಂಭಾಳಿಸುತ್ತಿದ್ದೇವೆ. ದೊಡ್ಡ ರಾಜಕಾರಣಿಗಳ ಮಕ್ಕಳನ್ನೂ ಸಹ ಅದೇ ಒಂದು ಕಾರಣಕ್ಕೆ ನಾವು ಮುಖಸ್ತುತಿ ಮಾಡುತ್ತಿದ್ದೇವೆ. ಸಮಾಜದಲ್ಲಿ ಕೆಲವರಿಗೆ ಮುಂದೆ ಪ್ರಭಾವೀ ಅನರ್ಹರಿಂದ ತಮಗೆ ಯಾವುದೋ ಕೆಲಸ ಆಗಬೇಕೆಂದಿರುತ್ತದೆ; ಹೀಗಾಗಿ ನಿಜವಿಷಯದ ಅರಿವಿದ್ದೂ ಸಹ ಅನರ್ಹರನ್ನು ಅರ್ಹರೆಂದೇ ಹೊಗಳಿ ಜೈಕಾರ ಹಾಕುತ್ತಿರುತ್ತಾರೆ. ಇನ್ನೂ ಕೆಲವರಿಗೆ ಅನರ್ಹರಿಂದ ಯಾವುದೋ ಸಹಕಾರ ಸಿಕ್ಕಿರುತ್ತದೆ; ಆ ಹಂಗಿನಲ್ಲಿ ಇವರು ಅನರ್ಹರನ್ನು ಅರ್ಹರೆಂದೇ ಹೇಳುತ್ತಿರುತ್ತಾರೆ.  

ಭ್ರಷ್ಟ ಸಮಾಜದ ಇನ್ನೊಂದು ಮುಖವೆಂದರೆ ಸತ್ಯ ಹೇಳಿದರೆ ತಮಗೆಲ್ಲಿ ಕುತ್ತು ಬರುತ್ತದೋ ಎಂದು ಇನ್ನೊಬ್ಬರು ಹೇಳಿದ್ದಕ್ಕೆ  ಕಣ್ಮುಚ್ಚಿ  ಹೂಂ.....ಗುಟ್ಟುವ ಅಥವಾ ಅನುಮೋದಿಸುವ ಅನಿವಾರ್ಯತೆಯಲ್ಲಿ ಅನೇಕರು ತೊಳಲುತ್ತಿದ್ದಾರೆ.  ಇಂತಹ ಸಿನಿಕತನ ನಿರ್ನಾಮವಾಗದ ಹೊರತು ಶುದ್ಧ ಸಮಾಜದ ನಿರ್ಮಾಣ ಸಾಧ್ಯವಾಗುವುದಿಲ್ಲ. ಹಣಕ್ಕಾಗಿ ಅಥವಾ ಇನ್ನಾವುದೋ ಪ್ರಲೋಭನೆಯಿಂದಾಗಿ ಇರುವ ಸಂಗತಿ ಮುಚ್ಚಿಟ್ಟು-ಬಚ್ಚಿಟ್ಟು ಇನ್ನೊಂದನ್ನೇ ಕಟ್ಟಿ ಹೇಳಿದರೆ-ಬಿಂಬಿಸಿದರೆ ಕತ್ತೆ ಹುಲಿಯ ಚರ್ಮವನ್ನು ಸುತ್ತಿಕೊಂಡದ್ದು ನೆನಪಾಗುತ್ತದೆ. ಹೋಗಲಿ, ಕತ್ತೆಗಾದರೆ ಬುದ್ಧಿಯಿರಲಿಲ್ಲ-ಅದು ಒಡೆಯನ ಒತ್ತಾಯಕ್ಕೆ ತಕ್ಕಂತೆ ನಡೆಯುತ್ತ ಹೊಟ್ಟೆಯ ಹಸಿವಿಗೆ ಹೊಲವನ್ನು ಮೆಂದಿತ್ತು. ಬುದ್ಧಿವಂತ ಮನುಷ್ಯರಲ್ಲಿ ಒಳ್ಳೊಳ್ಳೆಯ ಸ್ಥಾನಗಳಲ್ಲಿ ಅರ್ಹತೆಯಿಲ್ಲದೇ ಕೂತವರು ಕತ್ತೆಯಂತೆ ವರ್ತಿಸಿದರೆ ಏನು ಹೇಳಬೇಕು? ಇದಕ್ಕೆಲ್ಲ ಪರಿಹಾರವೆಂದು?

ಪೌಲಸ್ತ್ಯಃ ಕಥಮನ್ಯದಾರಹರಣೇ ದೋಷಂ ನ ವಿಜ್ಞಾತವಾನ್
ಕಾಕುತ್ಸ್ಥೇನ ಹೇಮಕಾಂತಿಹರಿಣಸ್ಯಾಸಂಭವೋ ಲಕ್ಷಿತಃ
ಅಕ್ಷಾಣಾಂ ನ ಯುಷ್ಟರೇಣ ವಿಷಮೋ ದೃಷ್ಟೋ ವಿಪಾಕಃ ಕಥಂ
ಪ್ರತ್ಯಾಸನ್ನವಿಪತ್ತಿ ಮೂಡಮನಸಾಂ ಪ್ರಾಯೋ ಮತಿಃ ಕ್ಷೀಯತೆ|
                                      -ಪಂಚತಂತ್ರ
[ಅನ್ಯರ ಮಡದಿಯನ್ನು ಕದ್ದೊಯ್ಯುವುದು ತಪ್ಪೆಂದು ರಾವಣನಿಗೇಕೆ ಹೊಳೆಯಲಿಲ್ಲ? ಬಂಗಾರದ ಜಿಂಕೆ ಮಾಯಾಜಿಂಕೆಯೆಂದು ರಾಮನಿಗೇಕೆ ತಿಳಿಯಲಿಲ್ಲ? ಜೂಜು-ಪಗಡೆಯಾಟ ದುಃಖದ ಘಟನೆಗಳ ಸರಮಾಲೆಯನ್ನೇ ಹೆಣೆಯಬಹುದೆಂಬುದು ಧರ್ಮಾತ್ಮನಾದ ಯುಧಿಷ್ಠಿರನಿಗೇಕೆ ಗೊತ್ತಾಗಲಿಲ್ಲ? ದುಷ್ಟರನ್ನು/ದುಷ್ಟತನವನ್ನು ಹಿಡಿದುಕೊಳ್ಳುವುದು, ಮೆಚ್ಚಿಕೊಳ್ಳುವುದು, ಆರಾಧಿಸುವುದು,  ಬುದ್ಧಿಗೆ ಮಂಕು ಕವಿಯುವಂತೆ ಮಾಡುತ್ತದೆ; ರಾವಣನಿಗೂ, ರಾಮನಿಗೂ, ಯುಧಿಷ್ಠಿರನಿಗೂ ಆಗಿದ್ದು ಇದೇ.] 

ಕನ್ನಡಕ್ಕೆ ಹೊಸ ಹೊಸ ಪ್ರಶಸ್ತಿಗಳೂ, ಗೌ.ಡಾ.ಗಳೂ ಬಂದು ಧೂಳೆಬ್ಬಿಸುತ್ತಿರುವ ಈ ಹೊತ್ತಿನಲ್ಲಿ ಹಲವೆಡೆ ಅಪಸ್ವರಗಳು ಎದ್ದಿವೆ, ಏಳುತ್ತಿವೆ; ಹುಲಿಯ ಚರ್ಮದ ಹೊದಕೆಯಲ್ಲಿ ಸಾಹಿತ್ಯದ ಹೊಲದಲ್ಲಿ ಪ್ರಶಸ್ತಿಯ ಬೆಳೆಯನ್ನು ಮೆಂದಿದ್ದು  ಕತ್ತೆಯೆಂದು ತಿಳಿಯಲು ಬಹುಶಃ ಬಹಳ ಕಾಲ ಬೇಕಾಗಲಿಕ್ಕಿಲ್ಲ; ಕತ್ತೆಯನ್ನು ಹುಲಿಯೆಂದೇ ಸಂಭ್ರಮಿಸುವ ಮುಟ್ಠಾಳರೂ ಈ ಸಮಾಜದಲ್ಲಿ ಇಲ್ಲವೆಂದು ಅಂದುಕೊಳ್ಳಬೇಕಾಗಿಲ್ಲ!    
------o೦o------