ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, March 23, 2010

ಸ್ವಸ್ಥ ಚಿತ್ತಕೆ ದಾರಿ

ಆಪಾದಮಪಹರ್ತಾರಂ ದಾತಾರಂ ಸರ್ವ ಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||


ಆದರ್ಶಗಳಿಗೆ ಇನ್ನೊಂದು ಹೆಸರು ಕೋಸಲ ದೇಶದ ಸಾಮ್ರಾಟ, ಅಯೋಧ್ಯಾಧೀಶ ಪ್ರಭು ಶ್ರೀರಾಮಚಂದ್ರ , ಆತನ ಜನ್ಮದಿನವಾದ ಶ್ರೀರಾಮನವಮಿಯ ಇಂದು ತಮಗೆಲ್ಲ ಶುಭಹಾರೈಕೆಗಳು.

--------

|| ಮನ ಏವ ಮನುಷ್ಯಾಣಾಂ ||


ಇದು ಸಂಸ್ಕೃತದ ವ್ಯಾಖ್ಯೆ. ಮನುಷ್ಯನ ಮನಸ್ಸು ಎಲ್ಲವನ್ನೂ ನಿರ್ವಹಿಸಬಲ್ಲ ಅಗಾಧ ಶಕ್ತಿ ಹೊಂದಿದೆ. ಮನಸ್ಸಿನಲ್ಲಿ ಉದ್ಭವವಾಗುವ ಭಾವ ತರಂಗಗಳೇ ಎಲ್ಲದನ್ನೂ ನಿರ್ದೇಶಿಸುತ್ತವೆ,ನಿರ್ವಹಿಸುತ್ತವೆ. ನಾವು ಕೈ ಎತ್ತಬೇಕೇ? ಕಾಲು ಕುಣಿಸಬೇಕೆ ? ನೋಡಬೇಕೇ ? ಕೇಳಬೇಕೇ ? ಹಾಡಬೇಕೇ? ತಿನ್ನಬೇಕೇ? ಮಲ-ಮೂತ್ರ ವಿಸರ್ಜಿಸಬೇಕೆ? ಮಲಗಬೇಕೇ? ಹರಟೆ ಹೊಡೆಯಬೇಕೆ ? ಸಿರಿವಂತರೆಂದು ಮೆರೆಯಬೇಕೇ? ಬಡವರೆಂದು ಕರುಬಬೇಕೇ? ಅವಹೇಳನ ಅನುಭವಿಸಬೇಕೇ? ವಿಮಾನ ಓಡಿಸಬೇಕೆ ? ಯುದ್ಧಮಾಡಬೇಕೇ? ಮನಸು ಸಂದೇಶ ಕೊಡಬೇಕು. ಒಳ್ಳೆಯ ಕೆಟ್ಟ ಎಲ್ಲಾ ಸಂದೇಶಗಳನ್ನೂ ಮನಸ್ಸೇ ಕೊಡುವುದು.

ಇನ್ನೊಬ್ಬರ ಆಸ್ತಿಗೆ ಹೊಂಚುಹಾಕುವುದು, ಯಾವುದೊ ಹುಡುಗಿಯನ್ನು ಪ್ರೀತಿಸಿ ಪಡೆದು ಕೈ ಕೊಡುವುದು, ದರೋಡೆ-ಸುಲಿಗೆಗಳನ್ನು ಮಾಡುವುದು, ಪರರ ಬ್ಯಾಂಕ್ ಖಾತೆಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಅವರ ಹಣ ಲಪಟಾಯಿಸುವುದು, ಟೀಚರ್ ಮೇಡಮ್ಮ ನ್ನು ಹೇಗಾದರೂ ಮಾಡಿ ಮುಖಭಂಗ ಮಾಡುವುದು, ಪೆಟ್ರೋಲ್ ಹಾಕುವಾಗ ಕೆಲವು ಪಾಯಿಂಟಗಳನ್ನು ಎಗರಿಸುವುದು, ನಕಲಿ ಛಾಪಾಕಾಗದ, ನೋಟು ಮುದ್ರಿಸಿ ಹಂಚಿ ದೇಶದ್ರೋಹ ಮಾಡುವುದು, ಭಾರತದಲ್ಲಿದ್ದೇ ಪಾಕಿಸ್ತಾನದಲ್ಲಿರುವ ಮನೋಸ್ಥಿತಿ ಅನುಭವಿಸಿ ಅವರಿಗೆ ಸಹಾಯಮಾಡುವುದು, ಪರೀಕ್ಷೆಯಲ್ಲಿ ನಕಲು [ಕಾಪೀ ]ಮಾಡುವುದು, ಸೆಕ್ರೆಟರಿಯಾಗಿ ಕೆಲಸ ಮಾಡುವ ಹುಡುಗಿಗೆ ಕೇಳಿ ತನ್ನ ಇಚ್ಛೆ ಪೂರೈಸದಿದ್ದರೆ ಅವಳನ್ನು ಕೆಲಸದಿಂದ ವಜಾಮಾದುವುದು, ಬೇಡದ ಬಾಸಿನ ವಿರುದ್ಧ ಸುಮ್ಸುಮ್ನೇ ದೂರು ಕೊಡುವುದು ಇವೆಲ್ಲಾ ಸಾಂದರ್ಬಿಕ ಮನಸ್ಸಿನ ಕೆಟ್ಟ ಆಲೋಚನಾ ಸ್ವರೂಪಗಳು.

ಪರೋಪಕಾರ, ಬೂಟಾಟಿಕೆಯಿಲ್ಲದ ಸಮಾಜಸೇವೆ, ಯಾರನ್ನೂ ಸುಮ್ಮನೇ ದೂರದಿರುವುದು, ವೃತ್ತಿಪರರಾಗಿ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವುದು, ದೇಶ ಸೇವೆಯಲ್ಲಿ ವೈಯಕ್ತಿಕ ಜೀವನವನ್ನೇ ತೊರೆಯುವುದು, ಬಡವರಿಗೆ-ಆರ್ತರಿಗೆ ಕೈಲಾದ ಸಹಾಯ ಮಾಡುವುದು, ವಿನಾಕಾರಣ ಕೋಪಗೊಳ್ಳದಿರುವುದು, ಹೆಂಡತಿಯ ಆದಾಯದಲ್ಲಿ ಜೀವಿಸದಿರುವುದು, ಹೆಂಡತಿಯನ್ನು ಸಂಶಯಿಸದಿರುವುದು, ಹೆಂಡತಿಯ ತೌರಿನಿಂದ ವರದಕ್ಷಿಣೆ ಕೇಳದಿರುವುದು, ವೃದ್ಧ ತಂದೆ-ತಾಯಿಗಳನ್ನು ಸೇವೆ-ಸುಶ್ರೂಷೆಮಾಡುವುದು, ಯಾರು ಕೇಡನ್ನೇ ಬಗೆದರೂ ಅವರಿಗೆ ಒಳಿತನ್ನೇ ಬಯಸುವುದು, ದೇವರು ಕೊಟ್ಟ ಆರ್ಥಿಕತೆಯಲ್ಲಿ ಅದು ಪಾಲಿಗೆ ಬಂದ ಪಂಚಾಮೃತವೆಂದು ಭಾವಿಸಿ ತೃಪ್ತಿಯಿಂದಿರುವುದು, ಸರಳ ಜೀವನ ನಡೆಸುವುದು ಇವೆಲ್ಲ ಸಮಾಜ-ಮನೆ ಮಠ,ದೇಶ ಕಟ್ಟುವ ಒಳ್ಳೆಯ ಭಾವನಾ ತರಂಗಗಳು.

'ಹುಚ್ಚು ಮನಸ್ಸಿನ ಹತ್ತು ಮುಖಗಳು ' ಹೇಗಿರುತ್ತವೆ ಎಂದು ನಮ್ಮ ಹಿರಿಯ ಸಾಹಿತಿ ಕಡಲತೀರದ ಭಾರ್ಗವ ದಿ| ಶ್ರೀ ಶಿವರಾಮ ಕಾರಂತರು ಹೇಳಿದ್ದಾರಷ್ಟೇ ? ಇಂತಹ ಹಲವು ರೂಪದ ಮನಸ್ಸಿಗೆ ಒಂದೇ ರೀತಿಯಲ್ಲಿ ಹೋಗಲಿಕ್ಕೆ ರುಜುಮಾರ್ಗವೊಂದಿದೆ. ಅದು ಎಲ್ಲರಿಗೆ ಸಹಜವಾಗಿ ಧಕ್ಕುವ ಸುಲಭದ ದಾರಿಯಲ್ಲ! ಅದನ್ನು ಅನುಷ್ಠಾನದಲ್ಲಿ ತರಲು ಪ್ರಯತ್ನಿಸಬೇಕು, ನಿರಂತರ ಪ್ರಯತ್ನದಿಂದ ಅದು ಒಂದು ಹಂತದಲ್ಲಿ ಸಿದ್ಧಿಸುತ್ತದೆ, ಅದನ್ನೇ SELF CONTAINED OR SELF CONTENTMENT ಅಂತ ಕರೆಯುತ್ತಾರೆ.

ಮನಸ್ಸು ಹೇಗಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆ--.
ಒಮ್ಮೆ ಒಬ್ಬನಿಗೆ ನಿದ್ದೆ ಮಾಡುವಾಗ ಕಿವಿಯಲ್ಲಿ ಸಣ್ಣ ಜಿರಲೆಮರಿಯೊಂದು ಒಳಗಡೆ ಹೋದ ಹಾಗನ್ನಿಸಿತು. ಅದು ನಿಜವಾಗಿರಲಿಲ್ಲ. ಅನ್ನಿಸಿಕೆ ಅಷ್ಟೇ! ಕಿವಿಗೆ ಕಡ್ಡಿ ಮತ್ತಿತರ ಏನೇನೋ ಹಾಕಿ ತೆಗೆಯುವ ಪ್ರಯತ್ನ ನಡೆದೇ ನಡೆಯಿತು. ಆದರೆ ಪ್ರಯೋಜನವೇನೂ ಇರಲಿಲ್ಲ. ಕೊನೆಗೆ ಯಾವುದೊ ಕಿವಿ ತಜ್ಞ ವೈದ್ಯರಿದ್ದ ಕಡೆ ಹೋಗಿ ತೋರಿಸಿದ್ದೂ ಆಯಿತು, ಆ ವೈದ್ಯರೇ ನಿಷ್ಪ್ರಯೋಜಕರೆಂಬ ಬಿರುದನ್ನೂ ಅವರ ಹಿಂದೆ ಅವರಿಗೆ ಕೊಟ್ಟಿದ್ದಾಯಿತು. ಮನಸ್ಸು ಗಲಿಬಿಲಿ, ಏನೋ ಗುಳುಗುಳು ಆದ ರೀತಿ- ಕಿವಿಯ ತುಂಬಾ ಒಳಭಾಗದಲ್ಲಿ. ಕೊನೆಗೊಮ್ಮೆ ಮನೆಯವರು ತಾಳಲಾರದೆ ಯಾರದೋ ಸಲಹೆಯ ಮೇರೆಗೆ ಮನಸ್ಶಾಸ್ತ್ರಜ್ಞರ ಹತ್ತಿರ ಕರೆದುಕೊಂಡು ಹೋದಾಗ, ಅವರು ಕಥೆಯನ್ನೆಲ್ಲ ಕೇಳಿ ಮರುದಿನ ಬರಲು ತಿಳಿಸಿದರು. ಮರುದಿನ ಆತನನ್ನು ತನ್ನ ಲ್ಯಾಬಿನ ಒಳಗೆ ಮಲಗಿಸಿ ಸಮ್ಮೋಹಕ ವಿದ್ಯೆ ಬಳಸಿದರು. ಎಬ್ಬಿಸಿದ ಮೇಲೆ 'ನೋಡು ಹೊರಗೆ ತೆಗೆದಿದ್ದೇನೆನ್ನುತ್ತ' ಮೊದಲೇ ಹಿಡಿದು ಬನ್ನಿನ ಮೇಲೆ ಬಿಟ್ಟುಕೊಂಡಿದ್ದ ಒಂದು ಜೀವದಿಂದಿರುವ ಜಿರಲೆಮರಿ ತೋರಿಸಿದರು. ಅದರ ನಂತರ ಆತ ಫುಲ್ ಖುಷ್ ! ಅಲ್ಲಿಂದ ಮುಂದೆ ಕಿವಿಯಲ್ಲಿ ಏನೂ ತೊಂದರೆ ಬರಲೇ ಇಲ್ಲ. Doctor the Great !

ಮನಸ್ಸಿಗೆ ಸಂಸ್ಕಾರ ಕೊಡಬಹುದು. ಅದನ್ನು ತಿದ್ದಬಹುದು.ಅದನ್ನು ಕೆಟ್ಟ ಅಥವಾ ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯುವುದು ನಮಗೆ ಸಾಧ್ಯ, ಹೇಗೆ ಕಲಿತವರು ವಾಹನ ಚಾಲನೆ ಮಾಡುತ್ತಾರೋ ಹಾಗೇ ಈ ಮನಸ್ಸಿಗೆ ನಮ್ಮೊಳಗೇ ಒಬ್ಬ ಚಾಲಕ ಬೇಕು, ಆತ ಇದ್ದಾನೆ, ಆದರೆ ತರಬೇತಿ ಬೇಕು. ಅದನ್ನೇ ಮನಗಂಡು ತಿಮ್ಮಗುರು ಡೀವೀಜಿಯವರ ಶೈಲಿಯಲ್ಲಿ ಜಗದ ಮಿತ್ರ ಸಾರಿದ್ದಾನೆ ---
[ಚಿತ್ರ ಋಣ : ಅಂತರ್ಜಾಲ]

ಸ್ವಸ್ಥ ಚಿತ್ತಕೆ ದಾರಿ

ವಿಶ್ವ ಪರಿಧಿಯೊಳೆನ್ನ ಸ್ವಸ್ಥ ಚಿತ್ತದೊಳಿಟ್ಟು
ನಶ್ವರದ ಬದುಕಿನಲಿ ಅರಿತು ನಡೆಯಲಿಕೆ
ಪೇಶ್ವೆ ಚಾಲುಕ್ಯಾದಿ ಹಲವರಾಳುತ ಮಡಿದರ್
ಶಾಶ್ವತವ ನೀ ತೋರು | ಜಗದಮಿತ್ರ

ಮುನಿಸು ನಮ್ಮಯ ವೈರಿ ಹರುಷ ಪರರಿಗೆ ಮಾರಿ
ಅನಿಸಲಿದು ಮನದಲ್ಲಿ ಅಚ್ಚೊತ್ತಿ ಸ್ಥಿರದಿ
ಘನತರದ ಕಾರ್ಯಗಳ ಮಾಡು ಇದನಂ ಮೀರಿ
ಮನಸು ಮರ್ಕಟ ನೋಡ | ಜಗದಮಿತ್ರ

ಮನಸು ಕನಸನು ಕಂಡು ತನ್ನಲ್ಲೇ ಬೀಗುತ್ತ
ತಿನಿಸು ಕಂಡಾ ಕತ್ತೆ ರೂಪ ತಾ ನಹುದು
ನೆನೆಸಿ ಜೀವನದಾಳ ಅಗಲಗಳ ವಿಸ್ತಾರ
ನನಸ ನಿಜದಲಿ ಹುಡುಕು | ಜಗದಮಿತ್ರ

ನೋವು ನಲಿವುಗಳೆಲ್ಲ ಕ್ಷಣದ ಭಾವದ ಹಂತ
ಕಾವು -ಖುಷಿಗಳ ತರುವ ಮನದ ಅಲೆಗಳವು
ಹಾವು ಎಂದೇ ಹೆದರಿ ಕತ್ತಲೆಯ ಹಗ್ಗಕ್ಕೆ
ನಾವು ಮಣಿಯುವುದೇಕೆ? ಜಗದಮಿತ್ರ

ವಿಷಮ ವೃತ್ತವೆ ಇರಲಿ ವಿಷದ ಘಳಿಗೆಯೆ ಬರಲಿ
ನಿಶೆಯ ಕಾರ್ಗತ್ತಲದು ಮುತ್ತಿ ಈ ಮನಕೆ
ಪಶುವಿನಂ ಮುಂದೆ ಹುಲ್ಲನದು ತೋರಿ ಕರೆದಾಗ
ನೆಶೆಯೇರಿ ನಲುಗದಿರು | ಜಗದಮಿತ್ರ

ಸಿರಿತನವು ಬಡತನವು ಮನದ ಅನಿಸಿಕೆಯಹುದು
ಅರಿಯದೀಮನದ ಮೂಸೆಯ ಮಜಲುಗಳನಂ
ಹಿರಿದು ಹಿಗ್ಗಲು ಬೇಡ ಬರಿದೆ ಕುಗ್ಗಲು ಬೇಡ
ಇರಿದು ಕಲಿಸಾ ಮನಕೆ | ಜಗದಮಿತ್ರ

ಉಣಬೇಕು ಉಡಬೇಕು ಎಂಬ ಈ ಇಂಗಿತವು
ಕಣಕಣದಿ ತುಂಬಿಹುದು ಜೀವ ಪರಿಧಿಯಲಿ
ಗುಣಿಸಿ ನಿನ್ನಿರುವಿಕೆಗೆ ತಕ್ಕಷ್ಟು ಬಳಸುತ್ತ
ಮಣಿಸು ಮನಸನು ಹದಕೆ | ಜಗದಮಿತ್ರ