ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, March 23, 2010

ಸ್ವಸ್ಥ ಚಿತ್ತಕೆ ದಾರಿ

ಆಪಾದಮಪಹರ್ತಾರಂ ದಾತಾರಂ ಸರ್ವ ಸಂಪದಾಮ್ |
ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋ ನಮಾಮ್ಯಹಮ್ ||


ಆದರ್ಶಗಳಿಗೆ ಇನ್ನೊಂದು ಹೆಸರು ಕೋಸಲ ದೇಶದ ಸಾಮ್ರಾಟ, ಅಯೋಧ್ಯಾಧೀಶ ಪ್ರಭು ಶ್ರೀರಾಮಚಂದ್ರ , ಆತನ ಜನ್ಮದಿನವಾದ ಶ್ರೀರಾಮನವಮಿಯ ಇಂದು ತಮಗೆಲ್ಲ ಶುಭಹಾರೈಕೆಗಳು.

--------

|| ಮನ ಏವ ಮನುಷ್ಯಾಣಾಂ ||


ಇದು ಸಂಸ್ಕೃತದ ವ್ಯಾಖ್ಯೆ. ಮನುಷ್ಯನ ಮನಸ್ಸು ಎಲ್ಲವನ್ನೂ ನಿರ್ವಹಿಸಬಲ್ಲ ಅಗಾಧ ಶಕ್ತಿ ಹೊಂದಿದೆ. ಮನಸ್ಸಿನಲ್ಲಿ ಉದ್ಭವವಾಗುವ ಭಾವ ತರಂಗಗಳೇ ಎಲ್ಲದನ್ನೂ ನಿರ್ದೇಶಿಸುತ್ತವೆ,ನಿರ್ವಹಿಸುತ್ತವೆ. ನಾವು ಕೈ ಎತ್ತಬೇಕೇ? ಕಾಲು ಕುಣಿಸಬೇಕೆ ? ನೋಡಬೇಕೇ ? ಕೇಳಬೇಕೇ ? ಹಾಡಬೇಕೇ? ತಿನ್ನಬೇಕೇ? ಮಲ-ಮೂತ್ರ ವಿಸರ್ಜಿಸಬೇಕೆ? ಮಲಗಬೇಕೇ? ಹರಟೆ ಹೊಡೆಯಬೇಕೆ ? ಸಿರಿವಂತರೆಂದು ಮೆರೆಯಬೇಕೇ? ಬಡವರೆಂದು ಕರುಬಬೇಕೇ? ಅವಹೇಳನ ಅನುಭವಿಸಬೇಕೇ? ವಿಮಾನ ಓಡಿಸಬೇಕೆ ? ಯುದ್ಧಮಾಡಬೇಕೇ? ಮನಸು ಸಂದೇಶ ಕೊಡಬೇಕು. ಒಳ್ಳೆಯ ಕೆಟ್ಟ ಎಲ್ಲಾ ಸಂದೇಶಗಳನ್ನೂ ಮನಸ್ಸೇ ಕೊಡುವುದು.

ಇನ್ನೊಬ್ಬರ ಆಸ್ತಿಗೆ ಹೊಂಚುಹಾಕುವುದು, ಯಾವುದೊ ಹುಡುಗಿಯನ್ನು ಪ್ರೀತಿಸಿ ಪಡೆದು ಕೈ ಕೊಡುವುದು, ದರೋಡೆ-ಸುಲಿಗೆಗಳನ್ನು ಮಾಡುವುದು, ಪರರ ಬ್ಯಾಂಕ್ ಖಾತೆಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಅವರ ಹಣ ಲಪಟಾಯಿಸುವುದು, ಟೀಚರ್ ಮೇಡಮ್ಮ ನ್ನು ಹೇಗಾದರೂ ಮಾಡಿ ಮುಖಭಂಗ ಮಾಡುವುದು, ಪೆಟ್ರೋಲ್ ಹಾಕುವಾಗ ಕೆಲವು ಪಾಯಿಂಟಗಳನ್ನು ಎಗರಿಸುವುದು, ನಕಲಿ ಛಾಪಾಕಾಗದ, ನೋಟು ಮುದ್ರಿಸಿ ಹಂಚಿ ದೇಶದ್ರೋಹ ಮಾಡುವುದು, ಭಾರತದಲ್ಲಿದ್ದೇ ಪಾಕಿಸ್ತಾನದಲ್ಲಿರುವ ಮನೋಸ್ಥಿತಿ ಅನುಭವಿಸಿ ಅವರಿಗೆ ಸಹಾಯಮಾಡುವುದು, ಪರೀಕ್ಷೆಯಲ್ಲಿ ನಕಲು [ಕಾಪೀ ]ಮಾಡುವುದು, ಸೆಕ್ರೆಟರಿಯಾಗಿ ಕೆಲಸ ಮಾಡುವ ಹುಡುಗಿಗೆ ಕೇಳಿ ತನ್ನ ಇಚ್ಛೆ ಪೂರೈಸದಿದ್ದರೆ ಅವಳನ್ನು ಕೆಲಸದಿಂದ ವಜಾಮಾದುವುದು, ಬೇಡದ ಬಾಸಿನ ವಿರುದ್ಧ ಸುಮ್ಸುಮ್ನೇ ದೂರು ಕೊಡುವುದು ಇವೆಲ್ಲಾ ಸಾಂದರ್ಬಿಕ ಮನಸ್ಸಿನ ಕೆಟ್ಟ ಆಲೋಚನಾ ಸ್ವರೂಪಗಳು.

ಪರೋಪಕಾರ, ಬೂಟಾಟಿಕೆಯಿಲ್ಲದ ಸಮಾಜಸೇವೆ, ಯಾರನ್ನೂ ಸುಮ್ಮನೇ ದೂರದಿರುವುದು, ವೃತ್ತಿಪರರಾಗಿ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುವುದು, ದೇಶ ಸೇವೆಯಲ್ಲಿ ವೈಯಕ್ತಿಕ ಜೀವನವನ್ನೇ ತೊರೆಯುವುದು, ಬಡವರಿಗೆ-ಆರ್ತರಿಗೆ ಕೈಲಾದ ಸಹಾಯ ಮಾಡುವುದು, ವಿನಾಕಾರಣ ಕೋಪಗೊಳ್ಳದಿರುವುದು, ಹೆಂಡತಿಯ ಆದಾಯದಲ್ಲಿ ಜೀವಿಸದಿರುವುದು, ಹೆಂಡತಿಯನ್ನು ಸಂಶಯಿಸದಿರುವುದು, ಹೆಂಡತಿಯ ತೌರಿನಿಂದ ವರದಕ್ಷಿಣೆ ಕೇಳದಿರುವುದು, ವೃದ್ಧ ತಂದೆ-ತಾಯಿಗಳನ್ನು ಸೇವೆ-ಸುಶ್ರೂಷೆಮಾಡುವುದು, ಯಾರು ಕೇಡನ್ನೇ ಬಗೆದರೂ ಅವರಿಗೆ ಒಳಿತನ್ನೇ ಬಯಸುವುದು, ದೇವರು ಕೊಟ್ಟ ಆರ್ಥಿಕತೆಯಲ್ಲಿ ಅದು ಪಾಲಿಗೆ ಬಂದ ಪಂಚಾಮೃತವೆಂದು ಭಾವಿಸಿ ತೃಪ್ತಿಯಿಂದಿರುವುದು, ಸರಳ ಜೀವನ ನಡೆಸುವುದು ಇವೆಲ್ಲ ಸಮಾಜ-ಮನೆ ಮಠ,ದೇಶ ಕಟ್ಟುವ ಒಳ್ಳೆಯ ಭಾವನಾ ತರಂಗಗಳು.

'ಹುಚ್ಚು ಮನಸ್ಸಿನ ಹತ್ತು ಮುಖಗಳು ' ಹೇಗಿರುತ್ತವೆ ಎಂದು ನಮ್ಮ ಹಿರಿಯ ಸಾಹಿತಿ ಕಡಲತೀರದ ಭಾರ್ಗವ ದಿ| ಶ್ರೀ ಶಿವರಾಮ ಕಾರಂತರು ಹೇಳಿದ್ದಾರಷ್ಟೇ ? ಇಂತಹ ಹಲವು ರೂಪದ ಮನಸ್ಸಿಗೆ ಒಂದೇ ರೀತಿಯಲ್ಲಿ ಹೋಗಲಿಕ್ಕೆ ರುಜುಮಾರ್ಗವೊಂದಿದೆ. ಅದು ಎಲ್ಲರಿಗೆ ಸಹಜವಾಗಿ ಧಕ್ಕುವ ಸುಲಭದ ದಾರಿಯಲ್ಲ! ಅದನ್ನು ಅನುಷ್ಠಾನದಲ್ಲಿ ತರಲು ಪ್ರಯತ್ನಿಸಬೇಕು, ನಿರಂತರ ಪ್ರಯತ್ನದಿಂದ ಅದು ಒಂದು ಹಂತದಲ್ಲಿ ಸಿದ್ಧಿಸುತ್ತದೆ, ಅದನ್ನೇ SELF CONTAINED OR SELF CONTENTMENT ಅಂತ ಕರೆಯುತ್ತಾರೆ.

ಮನಸ್ಸು ಹೇಗಿರುತ್ತದೆ ಎಂಬುದಕ್ಕೆ ಒಂದು ಉದಾಹರಣೆ--.
ಒಮ್ಮೆ ಒಬ್ಬನಿಗೆ ನಿದ್ದೆ ಮಾಡುವಾಗ ಕಿವಿಯಲ್ಲಿ ಸಣ್ಣ ಜಿರಲೆಮರಿಯೊಂದು ಒಳಗಡೆ ಹೋದ ಹಾಗನ್ನಿಸಿತು. ಅದು ನಿಜವಾಗಿರಲಿಲ್ಲ. ಅನ್ನಿಸಿಕೆ ಅಷ್ಟೇ! ಕಿವಿಗೆ ಕಡ್ಡಿ ಮತ್ತಿತರ ಏನೇನೋ ಹಾಕಿ ತೆಗೆಯುವ ಪ್ರಯತ್ನ ನಡೆದೇ ನಡೆಯಿತು. ಆದರೆ ಪ್ರಯೋಜನವೇನೂ ಇರಲಿಲ್ಲ. ಕೊನೆಗೆ ಯಾವುದೊ ಕಿವಿ ತಜ್ಞ ವೈದ್ಯರಿದ್ದ ಕಡೆ ಹೋಗಿ ತೋರಿಸಿದ್ದೂ ಆಯಿತು, ಆ ವೈದ್ಯರೇ ನಿಷ್ಪ್ರಯೋಜಕರೆಂಬ ಬಿರುದನ್ನೂ ಅವರ ಹಿಂದೆ ಅವರಿಗೆ ಕೊಟ್ಟಿದ್ದಾಯಿತು. ಮನಸ್ಸು ಗಲಿಬಿಲಿ, ಏನೋ ಗುಳುಗುಳು ಆದ ರೀತಿ- ಕಿವಿಯ ತುಂಬಾ ಒಳಭಾಗದಲ್ಲಿ. ಕೊನೆಗೊಮ್ಮೆ ಮನೆಯವರು ತಾಳಲಾರದೆ ಯಾರದೋ ಸಲಹೆಯ ಮೇರೆಗೆ ಮನಸ್ಶಾಸ್ತ್ರಜ್ಞರ ಹತ್ತಿರ ಕರೆದುಕೊಂಡು ಹೋದಾಗ, ಅವರು ಕಥೆಯನ್ನೆಲ್ಲ ಕೇಳಿ ಮರುದಿನ ಬರಲು ತಿಳಿಸಿದರು. ಮರುದಿನ ಆತನನ್ನು ತನ್ನ ಲ್ಯಾಬಿನ ಒಳಗೆ ಮಲಗಿಸಿ ಸಮ್ಮೋಹಕ ವಿದ್ಯೆ ಬಳಸಿದರು. ಎಬ್ಬಿಸಿದ ಮೇಲೆ 'ನೋಡು ಹೊರಗೆ ತೆಗೆದಿದ್ದೇನೆನ್ನುತ್ತ' ಮೊದಲೇ ಹಿಡಿದು ಬನ್ನಿನ ಮೇಲೆ ಬಿಟ್ಟುಕೊಂಡಿದ್ದ ಒಂದು ಜೀವದಿಂದಿರುವ ಜಿರಲೆಮರಿ ತೋರಿಸಿದರು. ಅದರ ನಂತರ ಆತ ಫುಲ್ ಖುಷ್ ! ಅಲ್ಲಿಂದ ಮುಂದೆ ಕಿವಿಯಲ್ಲಿ ಏನೂ ತೊಂದರೆ ಬರಲೇ ಇಲ್ಲ. Doctor the Great !

ಮನಸ್ಸಿಗೆ ಸಂಸ್ಕಾರ ಕೊಡಬಹುದು. ಅದನ್ನು ತಿದ್ದಬಹುದು.ಅದನ್ನು ಕೆಟ್ಟ ಅಥವಾ ಒಳ್ಳೆಯ ದಾರಿಯಲ್ಲಿ ಕೊಂಡೊಯ್ಯುವುದು ನಮಗೆ ಸಾಧ್ಯ, ಹೇಗೆ ಕಲಿತವರು ವಾಹನ ಚಾಲನೆ ಮಾಡುತ್ತಾರೋ ಹಾಗೇ ಈ ಮನಸ್ಸಿಗೆ ನಮ್ಮೊಳಗೇ ಒಬ್ಬ ಚಾಲಕ ಬೇಕು, ಆತ ಇದ್ದಾನೆ, ಆದರೆ ತರಬೇತಿ ಬೇಕು. ಅದನ್ನೇ ಮನಗಂಡು ತಿಮ್ಮಗುರು ಡೀವೀಜಿಯವರ ಶೈಲಿಯಲ್ಲಿ ಜಗದ ಮಿತ್ರ ಸಾರಿದ್ದಾನೆ ---




[ಚಿತ್ರ ಋಣ : ಅಂತರ್ಜಾಲ]

ಸ್ವಸ್ಥ ಚಿತ್ತಕೆ ದಾರಿ

ವಿಶ್ವ ಪರಿಧಿಯೊಳೆನ್ನ ಸ್ವಸ್ಥ ಚಿತ್ತದೊಳಿಟ್ಟು
ನಶ್ವರದ ಬದುಕಿನಲಿ ಅರಿತು ನಡೆಯಲಿಕೆ
ಪೇಶ್ವೆ ಚಾಲುಕ್ಯಾದಿ ಹಲವರಾಳುತ ಮಡಿದರ್
ಶಾಶ್ವತವ ನೀ ತೋರು | ಜಗದಮಿತ್ರ

ಮುನಿಸು ನಮ್ಮಯ ವೈರಿ ಹರುಷ ಪರರಿಗೆ ಮಾರಿ
ಅನಿಸಲಿದು ಮನದಲ್ಲಿ ಅಚ್ಚೊತ್ತಿ ಸ್ಥಿರದಿ
ಘನತರದ ಕಾರ್ಯಗಳ ಮಾಡು ಇದನಂ ಮೀರಿ
ಮನಸು ಮರ್ಕಟ ನೋಡ | ಜಗದಮಿತ್ರ

ಮನಸು ಕನಸನು ಕಂಡು ತನ್ನಲ್ಲೇ ಬೀಗುತ್ತ
ತಿನಿಸು ಕಂಡಾ ಕತ್ತೆ ರೂಪ ತಾ ನಹುದು
ನೆನೆಸಿ ಜೀವನದಾಳ ಅಗಲಗಳ ವಿಸ್ತಾರ
ನನಸ ನಿಜದಲಿ ಹುಡುಕು | ಜಗದಮಿತ್ರ

ನೋವು ನಲಿವುಗಳೆಲ್ಲ ಕ್ಷಣದ ಭಾವದ ಹಂತ
ಕಾವು -ಖುಷಿಗಳ ತರುವ ಮನದ ಅಲೆಗಳವು
ಹಾವು ಎಂದೇ ಹೆದರಿ ಕತ್ತಲೆಯ ಹಗ್ಗಕ್ಕೆ
ನಾವು ಮಣಿಯುವುದೇಕೆ? ಜಗದಮಿತ್ರ

ವಿಷಮ ವೃತ್ತವೆ ಇರಲಿ ವಿಷದ ಘಳಿಗೆಯೆ ಬರಲಿ
ನಿಶೆಯ ಕಾರ್ಗತ್ತಲದು ಮುತ್ತಿ ಈ ಮನಕೆ
ಪಶುವಿನಂ ಮುಂದೆ ಹುಲ್ಲನದು ತೋರಿ ಕರೆದಾಗ
ನೆಶೆಯೇರಿ ನಲುಗದಿರು | ಜಗದಮಿತ್ರ

ಸಿರಿತನವು ಬಡತನವು ಮನದ ಅನಿಸಿಕೆಯಹುದು
ಅರಿಯದೀಮನದ ಮೂಸೆಯ ಮಜಲುಗಳನಂ
ಹಿರಿದು ಹಿಗ್ಗಲು ಬೇಡ ಬರಿದೆ ಕುಗ್ಗಲು ಬೇಡ
ಇರಿದು ಕಲಿಸಾ ಮನಕೆ | ಜಗದಮಿತ್ರ

ಉಣಬೇಕು ಉಡಬೇಕು ಎಂಬ ಈ ಇಂಗಿತವು
ಕಣಕಣದಿ ತುಂಬಿಹುದು ಜೀವ ಪರಿಧಿಯಲಿ
ಗುಣಿಸಿ ನಿನ್ನಿರುವಿಕೆಗೆ ತಕ್ಕಷ್ಟು ಬಳಸುತ್ತ
ಮಣಿಸು ಮನಸನು ಹದಕೆ | ಜಗದಮಿತ್ರ

14 comments:

  1. ಜಗದಮಿತ್ರನ ಕಗ್ಗಗಳು ಬದುಕುವ ಕಲೆಯನ್ನು ತೋರಿಸಿಕೊಡುತ್ತಿವೆ.

    ReplyDelete
  2. ಜಗದ ಮಿತ್ರನ ಸಂದೇಶವು ಅಂತರಾತ್ಮನನ್ನು ತಟ್ಟುವಂತಿದೆ.

    ReplyDelete
  3. [ಗುಣಿಸಿ ನಿನ್ನಿರುವಿಕೆಗೆ ತಕ್ಕಷ್ಟು ಬಳಸುತ್ತ
    ಮಣಿಸು ಮನಸನು ಹದಕೆ | ಜಗದಮಿತ್ರ]
    ಚಿನ್ನದಂತಾ ಮಾತು. ಇಷ್ಟು ಸಾಕು ತಿಳಿದುಕೊಳ್ಳುವವರಿಗೆ.

    ReplyDelete
  4. ಜಗದ ಮಿತ್ರನ ಕಗ್ಗಗಳು ಮಂಕುತಿಮ್ಮನ ಕಗ್ಗಗಳನ್ನು
    ನೆನಪಿಸುತ್ತಿವೆ
    ತುಂಬಾ ಸುಂದರ ಕಗ್ಗಗಳು

    ReplyDelete
  5. नानृषिः कुरुते काव्यम्- ಋಷಿಯಲ್ಲದವನು ಕಾವ್ಯವನ್ನು ರಚಿಸಲಾರ. ಆರ್ಷೇಯಪರಂಪಾರೆಯವರಾದ ತಮ್ಮಿಂದ ಇನ್ನು ಶ್ರೇಷ್ಠಕವನಗಳು ಪ್ರಕಾಶವಾಗಲಿ.

    ReplyDelete
  6. ಚಿತ್ತವನು ಸ್ವಾಸ್ಥ್ಯವಿಟ್ಟು, ಭ್ರಾ೦ತುಗಳಿ೦ದ ದೂರಸರಿವಲ್ಲಿ ಮತ್ತು ಅಹಮಿಕೆಯ ಬೂಟಾಟಿಕೆ ತೊರೆವಲ್ಲಿ, ತಮ್ಮ ಲೇಖನ ಜಗದ ಮಿತ್ರನ ಕಗ್ಗ ಓದುಗರ ದಾರಿದೀವಿಗೆಯಾಗಿದೆ. ಧನ್ಯವಾದಗಳು.
    ಹೇಗಿದ್ದಾನೆ ತಮ್ಮ ಮಗ ಈಗ?

    ReplyDelete
  7. ಬದುಕಿನ ಮಜಲುಗಳನ್ನು ಹಲವು ದೃಷ್ಟಿಕೋನದಿಂದ ನಿಂತು ಹಾಗೊಮ್ಮೆ ನೋಡಿದ್ದೇನೆ, ವಯಸ್ಸು ಕಡಿಮೆ ಇದ್ದರೂ ಮನಸ್ಸು ಮೇಲ್ಮಟ್ಟದ ಮೆಟ್ಟಿಲು ಹತ್ತುವ ಪ್ರಯತ್ನ ನಡೆಸುವುದರಿಂದ ಸುಖ-ದುಃಖಗಳ ಹತ್ತು ಹಲವು ಮುಖಗಳನ್ನು ನೋಡುತ್ತಿದ್ದೇನೆ, ನಿಂದನೆಗಳನ್ನೂ ಹೊಗಳಿಕೆಗಳನ್ನೂ ಸಮನಾಗಿ ಸ್ವೀಕರಿಸಿ- ನನ್ನ ಆರಾಧ್ಯ ದೇವರಿಗೆ ಅರ್ಪಿಸಿದ್ದೇನೆ, ಹಲವರು ಹೇಳಿದ್ದಿದೆ " ನೀವು ಆಧ್ಯಾತ್ಮದ ಕುರಿತು ಹೇಳುತ್ತಲೇ ಇರುತ್ತೀರಿ " ಅಂತ, ಅಂಥವರಿಗೊಂದು ಮಾತು - ಆಧ್ಯಾತ್ಮವನ್ನು ನಮ್ಮ ದೈನಂದಿನ ಅನುಸಂಧಾನವಾಗಿಟ್ಟುಕೊಂಡರೆ ನಮ್ಮೆಲ್ಲ ದುಗುಡಗಳು ತನ್ನಿಂದ ತಾನೇ ಬಹುಶಃ ಬಂದ ದಾರಿಗೆ ಸುಂಕವಿಲ್ಲ ಎಂದುಕೊಳ್ಳುತ್ತ ನಾಪತ್ತೆಯಾಗುತ್ತವೆ! ಇದು ನನ್ನ ಅನುಭವಜನ್ಯ, ಎಲ್ಲರಿಗೂ ವಿಚಾರ ವೇದ್ಯ! ಕವಿಮನದ ಭಾವನೆಗಳು ನಿಸರ್ಗದ/ಸೃಷ್ಟಿಯ ಸೊಬಗಿನಲ್ಲಿ ಮೀಯುತ್ತ ಮೀಯುತ್ತ ಕೆಲವೊಮ್ಮೆ ಆಧ್ಯಾತ್ಮದ ನದಿಯಲ್ಲೂ ಆಗಾಗ ಮುಳುಗೆದ್ದರೆ ಅದು ಚಿನ್ನಕ್ಕೆ ಪುಟಕೊಟ್ಟಂತೆ, ಲೇಪ ಹಚ್ಚಿದಂತೆ ಎಂಬುದು ನನ್ನ ಅನಿಸಿಕೆ. ಎಲ್ಲಾ ಹಿರಿಯ ಕವಿ-ಸಾಹಿತಿಗಳು ಋಷಿ ಸದೃಶರೇ ಆಗಿದ್ದರು, ಆಧ್ಯಾತ್ಮವನ್ನು ಅನುಸರಿಸಿದ್ದರು! ಆಧ್ಯಾತ್ಮವೆಂಬುದು ಕೇವಲ ಒಂದು ಧರ್ಮದ ಸ್ವತ್ತಲ್ಲ ಬದಲಾಗಿ ಅದೊಂದು ತತ್ವ, ಅದೊಂದು ಜ್ಞಾನ ಮಾರ್ಗ! ಇಂತಹ ಆಧ್ಯಾತ್ಮದ ಬಗೆಗೆ ನೇರ ಸೇವೆಯಲ್ಲಿ ಶ್ರೀಯುತ ಸುಧಾಕರ ಚತುರ್ವೇದಿಗಳು ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಅವರ ಆಶ್ರಯದಲ್ಲಿ ನೆರಳಿಗಾಗಿ ಹಸಿರುಟ್ಟ ಮರವನ್ನು ಕಂಡಂತೆ ನಾವು ಅನೇಕರು ಸೇರಿಕೊಂಡಿದ್ದೇವೆ. ನಮ್ಮೆಲ್ಲಾ ಮಿತ್ರರನ್ನು, ಓದುಗರನ್ನು ಈ ಸತ್ಪರಂಪರೆಯಲ್ಲಿ ಭಾಗವಹಿಸಲು ಆಹ್ವಾನಿಸುತ್ತಾ ವೇದಸುಧೆ [ http://vedasudhe.blogspot.com ] ಬಳಗದಿಂದ ವೇದದ ಕುರಿತು ಎಲ್ಲರಿಗಾಗಿ ವೇದ ಎಂಬ ತತ್ವದಡಿಯಲ್ಲಿ ಎಲ್ಲಾ ಮಾಹಿತಿಯೊದಗಿಸುವ ಸಂಪೂರ್ಣ ವೇದಕ್ಕಾಗಿ ಮೀಸಲಿಟ್ಟ ಅಂತರ್ಜಾಲ ತಾಣ http:// www.vedasforall.org ಇದಕ್ಕೆ ಭೇಟಿ ಇತ್ತು ವಿಶ್ವದಲ್ಲೇ ಮಾನವ ಜೀವನಕ್ಕೆ ಬೇಕಾಗುವ universal laws ಅನ್ನು ತಿಳಿದುಕೊಳ್ಳಿರೆಂದು ವಿನಂತಿಸುತ್ತೇನೆ.

    ವಿವಿಧ ರೀತಿಯ ಬರಹಗಳನ್ನು ಮನೋರಂಜನೆಯ ಜೊತೆಜೊತೆಗೆ ಜ್ಞಾನದಾಹವನ್ನು ತೀರಿಸುವ ಬರಹಗಳನ್ನು ಕೊಡಲು ಸದಾ ಪ್ರಯತ್ನಿಸುತ್ತೇನೆ. ಪ್ರಸಕ್ತ ಇಂದಿನ ನನ್ನ ಕಥನ-ಕವನಕ್ಕೆ ಪ್ರತಿಕ್ರಿಯಿಸುತ್ತ ತಾವೆಲ್ಲಾ ಬರೆದಿರುವುದು ಭುವಿಯ ನಮ್ಮ ಬರುವಿಕೆಗೆ, ಇಂದಿನ ಇರುವಿಕೆಗೆ, ಜ್ಞಾನದ ಹರಿವನ್ನು ಹರಹಿದ ಮಹಾಮಹಿಮ ಋಷಿಗಣ-ಕವಿಗಣ ಸಂಕುಲಗಳಿಗೆ ಅರ್ಪಿಸುತ್ತಿದ್ದೇನೆ. ನನ್ನದೇನೂ ಚಿಕ್ಕ ಅಳಿಲು ಸೇವೆ ಸಾಧ್ಯವಾದರೆ ಮಾಡೋಣ ಅಂತ ಹೊರಟಿದ್ದೇನೆ, ದೇವರು ಹಾಲಲ್ಲೋ ನೀರಲ್ಲೋ ಅವನಿಚ್ಛೆ ಇದ್ದಲ್ಲಿ ಇಡಲಿ ಎಂಬ ಭಾವನೆಯಿಂದ ನಿಮ್ಮೆಲ್ಲರೊಂದಿಗೆ ಮುನ್ನುಗ್ಗುತ್ತಾ ಕಾವ್ಯರಥವನ್ನು ಮುಂದೆ ಸಾಗಿಸುತ್ತಿದ್ದೇನೆ, ತಮ್ಮೆಲ್ಲರ ಸಹಭಾಗಿತ್ವವಿರಲಿ, ನಮಸ್ಕಾರಗಳು.

    ಇಂದು ಬಂದು ನಿಂದು ಕಾವ್ಯದ ತಿರುಳು ತಿಂದು ಅದರ ರಸಾನುಭೂತಿ ಅಂದ ವೆಂದು ಆನಂದದಿಂದ ಅಂದ ಓದುಗ ಸ್ನೇಹಿತರಾದ ಸರ್ವಶ್ರೀ ಸುಬ್ರಹ್ಮಣ್ಯ, ಸುಧೀಂದ್ರ ದೇಶಪಾಂಡೆ, ಹರಿಹರಪುರ ಶ್ರೀಧರ, ಡಾ| ಗುರುಮೂರ್ತಿ, ಸಂಸ್ಕೃತ ವಿದ್ವಾನ್ ಸೂರ್ಯನಾರಾಯಣ ಜೋಯಿಸ್, ಸೀತಾರಾಮ್ ಎಲ್ಲರಿಗೂ ತುಂಬಾ ಆಭಾರಿಯಾಗಿದ್ದೇನೆ, ಎಂದಿನಂತೆ ನೇಪಥ್ಯದ ಓದುಗರು ತುಂಬಾ,ಅವರ ಭಾವನೆಗಳನ್ನು ಅದುಮಿಟ್ಟು ಹಾಗೇ ಓದಿಕೊಂಡು ಸಾಗುವುದು ಅವರ ಸ್ವಭಾವ, ಅಂತಹ ಜನಮಾನಸಕ್ಕೂ ಸದಾ ನಮನಗಳು,ಧನ್ಯವಾದಗಳು.

    ಕಾವ್ಯದ ಜೊತೆಗೆ ನನ್ನ ಉಭಯಕುಶಲೋಪರಿಯಲ್ಲಿ ಮಗುವಿನ ಆರೋಗ್ಯದ ಬಗ್ಗೆ ಕೇಳಿದ ಸೀತಾರಾಮ ರಾಯರೇ, ಈಗ ನಮ್ಮ ಅದೃಷ್ಟಕ್ಕೆ ಲ್ಯಾಬ್ ರಿಪೋರ್ಟ್ ನಲ್ಲಿ ಬೇರೆ ತೊಂದರೆಯಿಲ್ಲ ಬರೇ ವೈರಾಣು ಜ್ವರವೆಂತ ಹೇಳಿದೆ, ಹೀಗಾಗಿ ದೇವರೇ ನಮ್ಮನು ಕಂಡು ದುಃಖಿಸಿ ಹರಸಿದನೇನೋ ಎಂದುಕೊಂಡಿದ್ದೇನೆ,ನಿಧಾನಕ್ಕೆ ವಾಸಿಯಾಗುವ ದಾರಿಯಲ್ಲಿದೆ. ತಮ್ಮ ಮರೆಯದ ಈ ನೆನೆಪಿಗೆ ಶರಣು, ನನ್ನ ವೈಯಕ್ತಿಕದ ಕುರಿತು ಎಷ್ಟೆಂದರೂ ನಾನು ಬರೆಯಬಾರದಿತ್ತು ಅನ್ನಿಸಿದೆ, ಒಂದರ್ಥ ನಿಮಗೆಲ್ಲ ಕಳವಳತಂದಿಟ್ಟ ಅಪರಾಧೀ ಭಾವ ನನ್ನದು,ಇದಕ್ಕೆ ಕ್ಷಮೆಯಿರಲಿ.

    ReplyDelete
  8. ಪ್ರಿಯ ವಿ.ಆರ್.ಬಿ. ಯವರೆ,

    ನಿಮಗೆ ಅಪರಾಧಿ ಮನೋಭಾವವೇ ?? ಆಶ್ಚರ್ಯವಾಯಿತು. ಇಂತಹ ಪರಿಸ್ಥಿತಿಯಲ್ಲೂ ನಿಮ್ಮ ಸಾಹಿತ್ಯಾಸಕ್ತಿ ಕುಂದದೇ ಹೋದುದಕ್ಕೆ ನಿಮ್ಮ ಬಗೆಗೆ ಹೆಮ್ಮೆ ಎನಿಸುತ್ತಿದೆ. ನಿಮ್ಮ-ನಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮವಾದ ಮಾಧ್ಯಮ ಈ ಬ್ಲಾಗ್..ಅಲ್ಲವೇ ? ನಿಮ್ಮ ಮಗುವಿನ ಬಗೆಗೆ ನೀವು ಹೇಳಿದ್ದು ಮನದುಂಬಿ ಬಂತು..ಮಕ್ಕಳು ..ದೈವ ಸಮಾನರಲ್ಲವೇ..ಇದರಲ್ಲಿ ನಿಮ್ಮ ವೈಯಕ್ತಿಕವೇನೂ ಇಲ್ಲ.....ಪರಮೇಶ್ವರ ಮಗುವಿಗೆ ಒಳ್ಳೆಯದನ್ನೇ ಮಾಡುತ್ತಾನೆ..ನಿಮ್ಮ ಮನಸೂ ಅಷ್ಟೇ ನಿಷ್ಕಲ್ಮಶವಾಗಿದೆ..ಹಾಗಾಗಿ. ಧೈರ್ಯವಾಗಿರಿ..All the best

    ReplyDelete
  9. ಸೋತಿದ್ದೇನೆ ನಿಮ್ಮೆಲ್ಲರ ಸ್ನೇಹಕ್ಕೆ ಸುಬ್ರಹ್ಮಣ್ಯರೆ, ನಿಮಗೆಲ್ಲ ಕೃತಜ್ಞ ನೆಂದು ಹೇಳುವೆನೇ ಹೊರತು ಶಬ್ಧಗಳಲ್ಲಿ ಹೇಳಲಾರೆ.

    ReplyDelete
  10. ಜಗತ್ತಿನ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಗಳನ್ನು ಕೊಡುತ್ತಿರುತ್ತೀರಾ. ಯಾವ ವಿಭಾಗದಲ್ಲಿ ನಿವಿಲ್ಲ?
    ನಿಮ್ಮನ್ನು ಜ್ಞಾನದ ಭಂಡಾರ ಅಂದರೆ ತಪ್ಪಾಗಲಾರದೇನೋ?
    ನಾನು ೬ ದಿನಗಳಿಂದ ಕಚೇರಿ ಕೆಲಸಕ್ಕಾಗಿ ದೆಹಲಿ ಬಿಟ್ಟು ರಾಜಸ್ಥಾನಕ್ಕೆ ಹೋಗಿದ್ದೆ. ನಮ್ಮ ಅಲ್ಲಿನ ಕಚೇರಿಯ ಯಾವ ಗಣಕ ಯಂತ್ರವೂ ಕೂಡ ನನ್ನ, ನಿಮ್ಮ, ಇನ್ನೂ ನಾಲ್ಕಾರು ಮಿತ್ರರ ಬ್ಲಾಗ್ ಜಪ್ಪಯ್ಯ ಅಂದರೂ ತೆರೆಯುತ್ತಿರಲಿಲ್ಲ! ಹಾಗಾಗಿ ನಿಮ್ಮ ಮನೆ ಕಡೆ ಬರಲು ಆಗ್ಲಿಲ್ಲ! ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ. ದೆಹಲಿಯ ಕಚೇರಿಗೆ ಬಂದ ಮರುಕ್ಷಣವೇ ಮಾಡಿದ ಮೊದಲ ಕೆಲಸ ಅಂದ್ರೆ ಬ್ಲಾಗ್ ತೆರೆದಿದ್ದು! ನಿಮ್ಮ ಲೇಖನ, ಜಗದ ಮಿತ್ರನ ಕಗ್ಗವನ್ನು ಓದಿದ ಮೇಲೆಯೇ ನನಗೆ ನೆಮ್ಮದಿ ಸಿಕ್ಕಿದ್ದು!

    ನಿಮಗೆ ಇನಷ್ಟು ಬರೆಯುವ ಶಕ್ತಿಯನ್ನು ಕರುನಿಸೆಂದು ನಾನು ಆ ಕಾರ್ತಿಕೇಯನಲ್ಲಿ ಸದಾ ಬೇಡಿಕೊಳ್ಳುತ್ತೇನೆ.

    ReplyDelete
  11. ಪ್ರವೀಣ್, ಖಂಡಿತ ಹಾಗೆ ಹೇಳಬೇಡಿ, ನಾನು ಬರೇ ನಿಮಿತ್ತ ಮಾತ್ರ , ಇಲ್ಲಿನ ಕಥೆ-ಕವನ-ವ್ಯಾಖ್ಯಾನ ಯಾವುದೇ ಇರಲಿ ಅದು ನನ್ನನ್ನು ಮುಂದಿಟ್ಟು ವ್ಯಾಸರು ಗಣೇಶನ ಹತ್ತಿರ ಭಾರತ ಬರೆಸಿದಂತೆ ನನ್ನಿಂದ ಬರೆಸಿದ್ದು ನಾನು ನಂಬಿರುವ ಆ ಅದ್ಭುತ ಶಕ್ತಿ. ಕೆಲಸದ ಒತ್ತಡಗಳಲ್ಲಿ ದಿನಂಪ್ರತಿ ಓದಲು ಇರಲಿ ವಿಶ್ರಾಂತಿಗೆ ಮತ್ತು ಊಟಕ್ಕೆ ಸಮಯ ಸಿಗುವುದು ದುರ್ಲಭ ಎಂಬುದು ವೃತ್ತಿ ನಿರತನಾದ ನನಗೆ ಗೊತ್ತೇ ಇದೆ, ಹೀಗಾಗಿ ನಿಮ್ಮ ಮೇಲೆ ವಿನಾಕಾರಣ ಬೇಸರಗೊಳ್ಳಲೇ? ಓದಿ ಖುಷಿಪಡುವಿರಲ್ಲ ಅದು ಬಹಳ ಸಂತೋಷ,ಧನ್ಯವಾದಗಳು

    ReplyDelete
  12. ಬರಹ ಸಾರ್ಥಕವಾಯ್ತು ವಿಷ್ಣುಭಟ್ಟರೆ,ನಿಮ್ಮ ಬರಹಗಳನ್ನು ಓದಿ ಭಾವನೆಗಳನ್ನು ಹಂಚಿಕೊಂಡಿರುವ ಸಹೃದಯರ ಒಂದು ತಂಡವನ್ನು ನೋಡಿ ಸಂತಸಾಯ್ತು."ವೇದಸುಧೆ" ಮತ್ತು "ಎಲ್ಲರಿಗಾಗಿವೇದ" ತಾಣದಬಗ್ಗೆ ಬರೆದಿದ್ದೀರಿ.ಶರ್ಮರು ಕೆಲವಾದರೂ ವೇದಮಂತ್ರಗಳನ್ನು ಈ ತಾಣದಲ್ಲಿ ಕಲಿಸುವ ಪ್ರಕ್ರಿಯೆ ಆರಂಭವಾಗಬೇಕು, ವೇದ ಮಂತ್ರಗಳ ಜೊತೆಜೊತೆಗೆ ಅದರ ಅರ್ಥ ತಿಳಿಸುವ ಕೆಲಸವೂ ಶೀಘ್ರ ಆರಂಭವಾಗಬೇಕು, ಈ ಬಗ್ಗೆ ಶರ್ಮರೊಡನೆ ಮಾತನಾಡುವೆ.
    ಧನ್ಯವಾದಗಳು.

    ReplyDelete
  13. ತುಂಬಾ ಚೆನ್ನಾಗಿ ವಿವರಿಸಿದ್ದೀರ ವಿಷ್ಣು ಸರ್

    ReplyDelete