ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, March 22, 2010

ಸಂಕಲ್ಪ ನಮದಲ್ಲ-ಪ್ರಯತ್ನ ನಮ್ಮದು


ಸಂಕಲ್ಪ ನಮದಲ್ಲ-ಪ್ರಯತ್ನ ನಮ್ಮದು

ಭುವಿಯ ಉದ್ದಗಲ ಸಹಸ್ರಾರು ವರ್ಷಗಳಿಂದ ಎಷ್ಟೋ ಅರಸರು-ಚಕ್ರವರ್ತಿಗಳು ಆಳಿ ಅಳಿದರು. ಎಂತೆಂತಹ ಪರಾಕರಮಿಗಳಿದ್ದರು ಅಲ್ಲವೇ ? ಒಬ್ಬರಿಗಿಂತ ಇನ್ನೊಬ್ಬರು ಮೀರಿಸುವ ರೀತಿ ಬದುಕಿದ್ದರು.ತಮ್ಮ ತಮ್ಮ ಉನ್ನತಿಗಾಗಿ ಹಲವು ವಿಧದ ಉಪಾಸನೆಗಳನ್ನು ಕೈಗೊಳ್ಳುತ್ತಿದ್ದರು. ಉಪಾಸನೆ ಎಂದ ತಕ್ಷಣ ಬರೇ ದೇವರ ಪೂಜೆ ಎಂಬ ಭಾವನೆ ಬೇಡ. ಉಪಾಸನೆ ಎಂದರೆ ಕೈಗೆತ್ತಿಕೊಂಡ ಆಯಾ ರಂಗಗಳಲ್ಲಿ ಅವರು ಸಾಧನೆ ಮಾಡಲು ಪ್ರಯತ್ನಿಸುತ್ತಿದ್ದರು, ಅಭ್ಯಾಸ ನಿರತರಾಗಿರುತ್ತಿದ್ದರು, ಏಕತಾನತೆ, ತಾದಾತ್ಮ್ಯತೆ ಇಟ್ಟುಕೊಂಡಿರುತ್ತಿದ್ದರು.ಆದರೂ ಅವರು ಎಣಿಸಿದ ರೀತಿಯಲ್ಲಿ ಎಲ್ಲವೂ ನಡೆಯುತ್ತಿರಲಿಲ್ಲ. ಇವತ್ತೂ ಅಷ್ಟೇ, ನಾವು ನಿಮಿತ್ತ ಮಾತ್ರಕ್ಕೆ ಹೀಗೇ ಆಗಬೇಕು , ಹೀಗೇ ಮಾಡಬೇಕು, ಹೇಗೆ ನಡೆಯಬೇಕು ಎಂದೆಲ್ಲಾ ಸಂಕಲ್ಪಿಸುತ್ತೇವೆ. It is only a resolution towards reaching different goals. ಆದರೆ ಸಂಕಲ್ಪ ವಿಧಿಯಿಂದ ಪೂರ್ವ ನಿರ್ಧರಿತವಾಗಿರುತ್ತದೆ. ಒಬ್ಬ ಹೇಗೆ ಎಲ್ಲಿ ಯಾವಾಗ ಹುಟ್ಟಬೇಕು, ಯಾವೆಲ್ಲಾ ಸೌಲಭ್ಯಗಳನ್ನು ಪಡೆಯಬೇಕು, ಯಾವ ಕೆಲಸ ಮಾಡಬೇಕು, ಯಾರ್ಯಾರ ಜೊತೆ ಸಂಪರ್ಕದಲ್ಲಿರಬೇಕು, ಉಪಜೀವನಕ್ಕಾಗಿ ಯಾವ ವೃತ್ತಿ ಆಯ್ದುಕೊಳ್ಳಬೇಕು, ಎಷ್ಟನ್ನು ಪಡೆಯಬೇಕು-ಎಷ್ಟನ್ನು ಕಳೆಯಬೇಕು ಇದೆಲ್ಲ ಪೂರ್ವನಿರ್ಧರಿತ.

ಇದಕ್ಕೊಂದು ಚಿಕ್ಕ ಉದಾಹರಣೆ-- ಒಮ್ಮೆ ನಾವು ಇಬ್ಬರು ದ್ವಿಚಕ್ರ ವಾಹನದಲ್ಲಿ ಹತ್ತಿರದ ಯವುದೋ ಪ್ರದೇಶಕ್ಕೆ ಹೊರಟಿದ್ದೆವು. ರಸ್ತೆಯಲ್ಲಿ ಮುಂದೆ ಸಾಗುತ್ತ ಒಂದುಕಡೆ ಕೆಲವು ಹುಡುಗರು ಕ್ರಿಕೆಟ್ ಆಡುತ್ತಿದ್ದರು. ಪಕ್ಕದಲಿ ಬೀಡಾಡಿ ನಾಯಿಯೊಂದು ಮಲಗಿತ್ತು. ನಾವು ಅದಬಗ್ಗೆ ಅಷ್ಟೊಂದು ಗಮನವಿತ್ತು ನಡೆಯಲಿಲ್ಲ.ನಮ್ಮ ಪಾಡಿಗೆ ನಾವು ಮುಂದೆ ಹೋಗುತ್ತಿದ್ದೆವು. ಹೋಗುತ್ತಾ ಅನಿರೀಕ್ಷಿತವಾಗಿ ಆ ನಾಯಿ ಅದು ಯಾವ ವೇಗದಲ್ಲಿ ಹಾರಿಬಂತೋ ತಿಳಿಯದು, ಬಂದು ಮೈಗೆ ಹಾರಿ ಹಿಂದಿದ್ದವರನ್ನು ಕಚ್ಚಿಬಿಟ್ಟಿತು. ನಾನು ಚೆನ್ನಾಗಿ ಝಾಡಿಸಿ ಒದ್ದಿರದಿದ್ದರೆ ಇನ್ನೂ ಆಳದ ಗಾಯ ಮಾಡಿಬಿಡುತ್ತಿತ್ತೇನೋ,ಸದ್ಯ ಇದ್ದಷ್ಟು ಶಕ್ತಿ ಹಾಕಿ ನಾನು ಒದ್ದೆ, ಓಡಿಹೋಯಿತು. ಎಷ್ಟೋ ದಿನ ಆ ರಸ್ತೆಯಲ್ಲಿ ಸಾಗಿದ್ದ ನಮಗೆ ಆ ನಾಯಿ ಹಲವಾರು ಬಾರಿ ಕಣ್ಣಿಗೆ ಬಿದ್ದಿತ್ತು, ಆದರೆ ಏನೂ ಮಾಡ ಬಡಪಾಯಿ ಎನಿಸಿಕೊಂಡ ಆ ನಾಯಿ ಅಂದು ಮಾತ್ರ ರೌಡಿಯಾಗಿತ್ತು, ತನ್ನ ಹಲ್ಲೆಂಬ ಮಚ್ಚಿನಿಂದ ನಮಗೆ ತಿವಿಯಲು ಬಂದಿತ್ತು. ನಂತರ ಆ ದಿನ ನಾವು ಎಲ್ಲಿಗೆ ಹೊರಟಿದ್ದೆವೋ ಆ ಕೆಲಸವನ್ನು ಅಷ್ಟಕ್ಕೇ ನಿಲ್ಲಿಸಬೇಕಾಯಿತು. ಹಣ ಖರ್ಚುಮಾಡಬೇಕಾದುದು ಒಂದುಕಡೆಗಾದರೆ ಚುಚ್ಚು ಮದ್ದು ತೆಗೆದುಕೊಳ್ಳುವ ಅನಾವಶ್ಯಕ ತೊಂದರೆ ಇನ್ನೊಂದುಕಡೆ,ಅಂತೂ ಹೀಗೊಂದು ಹೊಸ ಸಮಸ್ಯೆ ಗಂಟು ಬಿದ್ದು ಸಂಕಲ್ಪ ಅಂದಿಗೆ ವಿಕಲ್ಪವಾಯಿತು.

ಬೇಗನೇ ಹೋಗಿಬಿಡಬಹುದೆಂಬ ಧೋರಣೆಯಿಂದ ಹೊರಟ ಮಾರ್ಗಮಧ್ಯದಲ್ಲಿ ಹಲವಾರು ಅಡೆತಡೆಗಳು ಬರಬಹುದು, ಗಾಡಿಗೆ ಇನ್ಯಾರೋ ಗುದ್ದುವುದು, ಗಾಡಿ ಆಯ ತಪ್ಪುವುದು, ನಮಗೇ ಕಕ್ಕಸಕ್ಕೆ ಶೀಘ್ರವೇ ಹೋಗಬೇಕೆನಿಸುವುದು,ಬಿಸಿಲಲ್ಲಿ ತಲೆ ಸುತ್ತಿ ಬಂದಂತಾಗುವುದು, ಯಾಕೋ ತುಂಬಾ uneasyness ಎನಿಸುವುದು ಇವೆಲ್ಲಾ ಒಂದೊಂದು ಕಾರಣಗಳು. ಇನ್ನು ನಾವೆಲ್ಲಿಗೆ ಹೋಗಬೇಕಾಗಿತ್ತೋ ಅಲ್ಲಿ ಅವರು ಆ ಕಾರ್ಯಕ್ರಮ ಮುಂದೂಡುವುದು, ಅಥವಾ ಅನಿರೀಕ್ಷಿತವಾಗಿ ದೊಡ್ಡ ಮನುಷ್ಯರ್ಯಾರೋ ತೀರಿಕೊಂಡು ಆ ದಿನ ಎಲ್ಲಾಕಡೆ ಬಂದ್ ಆಚರಿಸಬೇಕಾಗಿ ಬರಬಹುದು, ಯವುದೋ ಒತ್ತಡದಿಂದ ಕಾರ್ಯಕ್ರಮ ಅರ್ಧಕ್ಕೇ ನಿಲ್ಲುವುದು. ಕಾರ್ಯಕ್ರಮಕ್ಕೆ ಜನ ಸಾಲದಾಗಿ ಬಂದು ಅದನ್ನು ರದ್ದುಪಡಿಸುವುದು....ಇತ್ಯಾದಿ ಹಲವಾರು ಕಾರಣಗಳಿಂದ ಆ ಕಾರ್ಯ ವಿಘ್ನಬಾಧಿತವಾಗಿಬಿಡಬಹುದು. ಇದಕ್ಕೆಲ್ಲಾ ನಾವು ಹೊಣೆಯೇ ? ಅಲ್ಲವಲ್ಲ, ಆದರೆ ಕೆಲಸಮಾತ್ರ ನೆರವೇರಿರುವುದಿಲ್ಲ.

ಹೀಗೇ ನಮಗಿಂತ ಹಿರಿದಾದ, ನಮ್ಮ ದೃಷ್ಟಿಗೆ, ನಮ್ಮ ದೂರದರ್ಶಿತ್ವಕ್ಕೆ ಗೋಚರವಿಲ್ಲದ ಯಾವುದೋ ಕಾಣದ ಅದ್ಬುತ ಶಕ್ತಿಯ ಕೈವಾಡವಿದೆಯೆಂದು ನನಗಂತೂ ಆಗಾಗ ಅನ್ನಿಸಿದೆ. ಅದರ ಸಂಕಲ್ಪವೇ ನಿಜದ ಸಂಕಲ್ಪ ಹೊರತು, ನಮದು ಆ ದಿಸೆಯಲ್ಲಿ ಪ್ರಯತ್ನವಷ್ಟೇ ! ಇದನ್ನೇ ನೆಚ್ಚಿ ನಮ್ಮ ತಿಮ್ಮಗುರು ಸ್ವಾನುಭವದಿಂದ ಬರೆದಿದ್ದೇ

ಬದುಕು ಜಟಕಾಬಂಡಿ ವಿಧಿಯದರ ಸಾಹೇಬ
ಕುದುರೆ ನೀನ್ ಅವನು ಹೇಳ್ದಂತೆ ಪಯಣಿಗರು
ಮದುವೆಗೋ ಮಸಣಕೋ ಹೋಗೆಂದಕಡೆಗೋಡು
ಪದಕುಸಿಯೇ ನೆಲವಿಹುದು | ಮಂಕುತಿಮ್ಮ

ಎಷ್ಟು ಅನುಭವ ಜನ್ಯ ಇದು.

ಹಾಗಂತ ಎಲ್ಲಾ ದೇವರು ಕೊಡುವುದು ಅಂತ ನಾವು ಕರ್ತವ್ಯ ವಿಮುಖರಾಗಿ ಆಲಸ್ಯದಿಂದ ಇರುವುದು ಸಲ್ಲ. ಕರ್ತವ್ಯ ಮಾಡುತ್ತಲೇ ಇರಬೇಕು-ಫಲ ನಿರೀಕ್ಷಣೆ ಇಲ್ಲದೇ ಕೆಲಸವನ್ನು ದೈವಾರ್ಪಣ ಭಾವದಿಂದ, ಶೃದ್ಧೆಯಿಂದ ಮಾಡಬೇಕು. ಕೆಲಸ ಮಾಡುವುದೇಕೆ- ಹೇಗೂ ನಮಗೆ ಗಜಕೇಸರಿ ಯೋಗ ಇದೆ ಅಂತ ಕುಳಿತರೆ ಗಜಕೇಸರಿ ಯೋಗ ಬಂದು ಹೋದರೂ ಅದರ ಗಂಧ-ಗಾಳಿಯೂ ತಾಗುವುದಿಲ್ಲ;ಸೋಕುವುದಿಲ್ಲ. ಡಬ್ಬದಲ್ಲಿರುವ ಅಕ್ಕಿ ಹಾಗೇ ಇರುತ್ತದೆ, ಅನ್ನ ಬೇಕೇ ? ಪ್ರಯತ್ನ ಮಾಡಿ, ಅನ್ನ ಮಾಡಬೇಕು.ವರ್ಷವಿಡೀ ಓದದೆ ನಾಡಿದ್ದು ಪರೀಕ್ಷೆಯಿದೆ, ಏನೂ ಓದಲಿಲ್ಲ ಏನಾದರಾಗಲಿ ದೇವರು ಮಾಡಿದಂತಾಗುತ್ತದೆ ಎಂದುಕೊಂಡು ಹೀಗೆ ಕರ್ತವ್ಯ ಮಾಡದೇ ಡೀವೀಜಿಯವರ ಕಾವ್ಯ ಹೇಳಿಕೊಂಡರೆ ಅದರ ಅರ್ಥ ಬೇರೆ ರೀತಿಯಾಗುತ್ತದೆ !

ಆದಿ ಶಂಕರರು ಹೇಳುತ್ತಾರೆ

|| ಕ್ಷಣಸಃ ಕ್ಷಣಸಶ್ಚೈವ
ವಿದ್ಯಾಮರ್ಥಂಚ ಸಾಧಯೇತ್ ||

ವಿದ್ಯೆಗೂ, ಹಣ ಗಳಿಕೆಗೂ ಒಳ್ಳೆಯ ಮಾರ್ಗದಲ್ಲಿ ಕ್ಷಣ ಕ್ಷಣದ ಪ್ರಯತ್ನವೂ ಅಗತ್ಯ ಅಂತ. ಅಂದರೆ, ಬದುಕಿರುವಷ್ಟು ಕಾಲ ನಮ್ಮ ಉಪಜೀವನಕ್ಕೆ ಬೇಕಾಗುವ ಎಲ್ಲಾ ಕೆಲಸಕಾರ್ಯಗಳಲ್ಲಿ ಸದಾ active ಆಗಿ ತೊಡಗಿಕೊಂಡಿರಬೇಕು ಎಂದು.ಅದನ್ನು ಬಿಟ್ಟು ಬರೇ ಮಂದಿರ-ಮಸೀದಿ ಗುಡಿ-ಗುಂಡಾರಗಳನ್ನು ಸುತ್ತಿ ಸುಮ್ಮನೇ ಪೂಜಿಸಿದರೆ ನಮ್ಮ ಕಾರ್ಯಸಾಧನೆ ಸಾಧ್ಯವಿಲ್ಲ, ಮನುಷ್ಯ ಪ್ರಯತ್ನ ಶೀಲನಾಗಿ ಕೆಲಸ ನಿರ್ವಹಿಸುತ್ತಾ ಸಂಕಲ್ಪ ಸಿದ್ಧಿಗಾಗಿ ಪ್ರಾರ್ಥಿಸಿದರೆ ಅದು ಸರಿಯಾದ ಮಾರ್ಗ!


ನಮ್ಮ ತಿಮ್ಮಗುರುವಿಗೂ ಅವರ ಜೀವನದಲ್ಲಿ ಹಲವು ಮಜಲುಗಳು ಬಂದವು. ಬದುಕಿನ ಬಂಡಿ ನಡೆಸಲು ಜಟಕಾ ಬಂಡಿಗೆ ಬಣ್ಣ ಹೊಡೆಯುವ ಕೆಲಸವನ್ನೂ ದಿ|| ಡೀವೀಜಿ ಮಾಡಿದ್ದರು ಎಂದರೆ ಇಂದಿಗೆ ನಮಗೇ ಆಶ್ಚರ್ಯವಾದರೂ ಸತ್ಯವೇ ಇದು. ಇದನ್ನು ಮಾಡುತ್ತಾ ಮಾಡುತ್ತಾ ಬರೆದ
ಸಾಲು

ಏನಾನುಮಂ ಮಾಡು ಕೈಗೆತೊರೆತುಜ್ಜುಗವ
ನಾನೇನು ಹುಲು ಕಡ್ಡಿಯೆಂಬ ನುಡಿ ಬೇಡ
ಹೀನಮಾವುದುಮಿಲ್ಲ ಜಗದಗುಡಿ ಯೂಳಿಗದಿ
ತಾಣನಿನಗಿಹುದಿಲ್ಲಿ | ಮಂಕುತಿಮ್ಮ

ಎಂತೆಂತಹ ಮಹಾನುಭಾವರು ಯಾವ್ಯಾವ ಕೆಲಸಗಳನ್ನು ಮಾಡಿದ್ದರು ನೋಡಿ ! ಅಂದಮೇಲೆ ಸಂಕಲ್ಪ ನಂದೇ/ನಮದೇ ಅಂತ ಬೀಗುತ್ತ/ಕೊಬ್ಬುತ್ತ ನಡೆದರೆ ಸಂಕಲ್ಪ ವಿಕಲ್ಪವಾಗಬಹುದಲ್ಲ ? ಮನುಷ್ಯರು ನಾವು ನಿಮಿತ್ತ ಮಾತ್ರರು. ಮಿಕ್ಕುಳಿದ ಎಲ್ಲಾ ಭಗವಂತನ ಕೃಪೆ ಮತ್ತು ಆತನ ನಿರ್ಧಾರ. ನಾವು ವೀಣೆಯಾದರೆ ವೈಣಿಕ ಆ ದಿವ್ಯ ಶಕ್ತಿ. ವೀಣೆ ಚೆನ್ನಾಗಿ ನುಡಿಸಲೂ ಬಹುದು, ಕೆಟ್ಟದಾಗಿ ನುಡಿಸಲೂ ಬಹುದು ಅಥವಾ ತಂತಿ ಕಿತ್ತು ಬಿಸಾಡಲೂ ಬಹುದು. ಇಂತಹದನ್ನು ನೆನಪಿಟ್ಟು ನಾವು

|| ದೈವಾಧೀನಂ ಜಗತ್ಸರ್ವಂ ಮಂತ್ರಾಧೀನಂತು ದೈವತಂ ||

ಎಂಬ ಉಲ್ಲೇಖದಂತೆ ಯಾವುದೇ ರೂಪದಲ್ಲಾದರೂ ಆ ಶಕ್ತಿಯನ್ನು ನೆನೆಯೋಣ, ನಮ್ಮದೇ ಎಲ್ಲಾ ಅಂತ ಮೆರೆಯದಿರೋಣ, ತನ್ಮೂಲಕ ಭಗವಂತ ನಮ್ಮ ಒಳ್ಳೆಯ 'ಸಂಕಲ್ಪ' ವೆಂಬ ಪ್ರಯತ್ನಕ್ಕೆ ಒಳ್ಳೆಯ ಫಲನೀಡಲಿ, ನಮ್ಮ ಕುದುರೆ ಗೆಲ್ಲಲಿ, ಜೀವನದಲ್ಲಿ ನಮಗೆ ನಾವೆಣಿಸಿದ ರೀತಿಯಲ್ಲೇ ಕೆಲಸಕಾರ್ಯಗಳು ನಡೆಯಲಿ ಎಂದು ಪ್ರಾರ್ಥಿಸೋಣವೇ ?

11 comments:

  1. baraha chennaagide bhttare.maguvina nagu matte aralide endukondiddene.

    ReplyDelete
  2. ಡಾ| ಕೃಷ್ಣಮೂರ್ತಿಯವರೇ, ತಾವು ವೈದ್ಯರಾಗಿದ್ದೂ ತಮ್ಮ ಸಾಹಿತ್ಯಾಸಕ್ತಿ ಗಮನಿಸಿದ್ದೇನೆ, ಬಂದು ನಮಗೆ ದೈರ್ಯ ಹೇಳಿದ್ದೀರಿ, ನನಗೆ ಜ್ವರಕ್ಕಿಂತ ಪಾದರಸದ ಪರಿಣಾಮದ ಚಿಂತೆ ಬಹಳವಾಗಿತ್ತು, ಇಲ್ಲವೆಂದರೆ ಅದರ ಬಗ್ಗೆ ಅಷ್ಟೊಂದು ತಲೆಕೆಡಿಸ್ಕೊಳ್ಳುವ ಪ್ರಮೇಯ ಇರುತ್ತಿರಲಿಲ್ಲ, ತಮ್ಮ ಸಹಾನುಭ್ಹೂತಿ ಮತ್ತು ಅನುಕಂಪಕ್ಕೆ ತುಂಬಾ ಆಭಾರಿ. ಇನ್ನೂ ಮಗುವಿನ ನಗು ಪೂರ್ತಿ ಅರಳಿಲ್ಲ, ಅದು ಏನೋ ದಾಖಲೆಯ ವೈರಾಣುಜ್ವರ-೧೦೨.೧೦೩ ಡಿಗ್ರೀ, ಆದರೂ ಈ ಮಧ್ಯೆಯೇ ಇದನ್ನು ಬರೆದಿದ್ದೇನೆ.

    ReplyDelete
  3. ತನ್ನ ಅಸ್ತಿತ್ವವನ್ನು ನಾವು ಗುರುತಿಸಲೆಂದೇ, ದೈವ ಒಮ್ಮೊಮ್ಮೆ ಕಠಿಣವಾಗಿ ವರ್ತಿಸುವದೇನೊ?
    ಮಗು ಶೀಘ್ರದಲ್ಲಿ ಸುಖರೂಪ ತಾಳಲಿ ಎಂದು ಹಾರೈಸುತ್ತೇನೆ.

    ReplyDelete
  4. " Ati Snehi Paapashanki !" ! (Kalidasa in Abhijnana Shakuntala )Bhat, Nothing to worry ...child will be alright soon ...our prayers & good wishes are with you ...

    ReplyDelete
  5. ಎಂತಹ ಸಂದರ್ಭದಲ್ಲೂ ಬಿಡಲೊಲ್ಲದ ನಿಮ್ಮ ಸಾಹಿತ್ಯಪ್ರೀತಿಗೆ ಮನದುಂಬಿ ಬರುತ್ತಿದೆ. ಖಂಡಿತ ಒಳ್ಳೆಯದಾಗುತ್ತದೆ. Dont worry... ಶುಭ ಹಾರೈಕೆಗಳು.

    ReplyDelete
  6. ಲೇಖನ ಸೊಗಸಾಗಿದೆ. "ಕಾಯಕವೇ ಕೈಲಾಸ"

    ReplyDelete
  7. ಭಟ್ರೇ, ನೀವು ಮಂತ್ರಿಸಿದ ಲಿಂಬೆ-ಮೆಣಸು ಇಟ್ಟಿರುವುದರಿಂದ ನಮ್ಮಂಥೋರಿಗೆ ನಿಮ್ಮ ಬ್ಲಾಗಿನ ಸುತ್ತಮುತ್ತ ಸುಳಿದಾಡಲಾಗುತ್ತಿಲ್ಲ...

    ಅದಿರಲಿ, ಆದಿಶಂಕರರ ಮಾತಿನಲ್ಲಿ ಒಂದು ಭಾಗ ಮಾತ್ರ ನಮಗೆ ಅ(ನ)ರ್ಥವಾಗಿದ್ದು ಹೀಗೆ: ವಿದ್ಯಾಮನರ್ಥಂ ಚ ಸಾಧಯೇತ್! :)

    ReplyDelete
  8. ಪ್ರಕ್ಷುಬ್ಧ ಸ್ಥಿತಿಯಲ್ಲೂ ಮನಸ್ಸನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟದ ಕೆಲಸ, ಯಾಕೆಂದರೆ ಮನಸ್ಸೊಂದು ಮರ್ಕಟ, ಅದರ ವೇಗಕ್ಕೆ ಮನೋವೇಗ ಅಂತಲೇ ಹೆಸರು, ಅಲ್ಲಿ ನಮ್ಮ ವಿಜ್ಞಾನದ ಯಾವ ಮೀಟರ್ ಗಳಾಗಲೀ, ತರಂಗಾತರಗಳ ಲೆಕ್ಕವಾಗಲೀ ಅಳತೆಯ ಸಾಧನವಲ್ಲ; ಇದಕ್ಕೆ ಅಳತೆಯ ಸಾಧನವೇ ಇಲ್ಲ ! ಇಂತಹ ಮನಸ್ಸನ್ನು ಒಮ್ಮೆ ಬಂಧಿಸಿದ ಖುಷಿ ನನ್ನದು.ಇವತ್ತೂಕೂಡ ಅನೇಕರ ದೂರವಾಣಿ ಕರೆಗಳು, ಹರಿಹರಪುರ ಶ್ರೀಧರ್ ರವರು ತಮ್ಮಮಗುವಿಗೇ ಏನೋ ತೊಂದರೆಯಾದ ರೀತಿ ತೊಳಲಾಟದಲ್ಲಿದ್ದು ಮಾತಾಡಿದ್ದಾರೆ,ಶಶಿ ಜೋಯಿಸರು ಬೆಳಿಗ್ಗೇನೆ ದೂರವಾಣಿ ಕರೆಮಾಡಿ ವಿಚಾರಿಸಿದರು, ಸುನಾಥರು ದೈವ ನಮ್ಮನ್ನು ಪರೀಕ್ಷೆಗೆ ಒಳಪಡಿಸಿರಬಹುದು ಎಂದಿದ್ದಾರೆ, ಜಗದೀಶರವರು ಮತ್ತು ಸುಬ್ರಹ್ಮಣ್ಯರು ತಲೆಬಿಸಿ ಬೇಡ-ಎಲ್ಲಾ ಸರಿಹೋಗುತ್ತದೆ ಎಂದಿದ್ದಾರೆ,ಸೀತಾರಾಮ್ ರಾಯರು ಎಲ್ಲರೂ ಹೇಳಿದ್ದನ್ನೇ ಹೇಳೋದು ಬೇಡ ಅಂತ ಮನಸ್ಸಲ್ಲೇ ಹಾರೈಸಿ ಲೇಖನದ ಬಗ್ಗೆ ಬರೆದಿದ್ದಾರೆ, ಅನ್ವೆಷಿಯವರೇ, ಲಿಂಬೆಹಣ್ಣು ಮೆಣಸಿನಕಾಯಿ ಬಂದ ನಿಮ್ಮಂಥವರಿಗೆ ತೊಂದರೆಯಾಗದಿರಲಿ, ರಾಜಕೀಯದ ಭೂತ-ಪಿಶಾಚಿಗಳು ನಿಮಗೆ ಎಡತಾಕದಿರಲಿ ಎಂಬ ಮುತುವರ್ಜಿಯಿಂದ ಕಟ್ಟಿದ್ದು, ನೀವು ಶಂಕರರ ಹೇಳಿಕೆಗೆ ಅರ್ಥಕಲ್ಪಿಸಿದ ಹಾಗೇ ಇದಕ್ಕೂ ಅರ್ಥ ಹಚ್ಚಿದಿರೇ? ಸ್ವಾಮೀ ನಿಮ್ಮಂಥವರು ಲಕ್ಷಣವಾಗಿ ಓದಿಕೊಂಡು, ಓಡಾಡಿಕೊಂಡು ಹಾಯಾಗಿರಲಿ ಎಂದು ಕಟ್ಟಿದ್ದೇನೆ, ಬೇಡವೆಂದರೆ,ಹೆದರಿಕೆಯಾದರೆ ಹೇಳಿ ಇಂದೇ ಬಿಚ್ಚಿ ಮರದಬುಡದಲ್ಲಿ ಹಾಕುತ್ತೇನೆ, ಆಗದೇ? ಗೌತಮ್ ಹೆಗಡೆಯವರು ಪುರುಸೊತ್ತುಮಾಡಿಕೊಂಡು ಇಂದು ಓದಿ ಅಭಿಪ್ರಾಯ ಹೇಳಿದ್ದಾರೆ--ಬಂದ ನಿಮಗೆಲ್ಲಾ ಅನಂತ ಧನ್ಯವಾದಗಳು, ಎಂದಿನಂತೆ ಮೌನವಾಗಿ ಸಂಚರಿಸುವ ನಮ್ಮ ನೇಪಥ್ಯದ ಅನೇಕ ಓದುಗರಿಗೆ ನಮನಗಳು. ನಿಮ್ಮೆಲ್ಲರ ಪ್ರೋತ್ಸಾಹ, ವಿಶ್ವಾಸಕ್ಕೆ ಸದಾ ಋಣಿ,ನಮಸ್ಕಾರ.

    ReplyDelete
  9. ತುಂಬಾ ಮನ ಕ್ಕೆ ತಟ್ಟುವ ಬರಹ
    ಮಗು ಹೇಗಿದೆ ಈಗ ?

    ReplyDelete
  10. ಧನ್ಯವಾದಗಳು ಗುರುಮೂರ್ತಿಯವರಿಗೆ, ಮಗು ಆರೋಗ್ಯದಲ್ಲಿ ಬದಲಾವಣೆ ಇನ್ನೂ ಕಂಡುಬರಲಿಲ್ಲ. ವೈದ್ಯೋಪಚಾರ ನಡೆದೇ ಇದೆ, ಇನ್ನು ರಕ್ತ ಮತ್ತು ಮೂತ್ರ ಪರೀಕ್ಷಿಸಿ ಮುನ್ನಡೆಯಬೇಕಾಗಬಹುದು. ದೈವೇಚ್ಛೆ, ಕಾಯುತ್ತಿದ್ದೇವೆ .

    ReplyDelete