ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, July 5, 2012

ಚಂದಿರನೇತಕೆ ಓಡುವನಮ್ಮಾ ಮೋಡಕೆ ಹೆದರಿಹನೇ ?

ಚಿತ್ರಋಣ: ಅಂತರ್ಜಾಲ

ಚಂದಿರನೇತಕೆ ಓಡುವನಮ್ಮಾ ಮೋಡಕೆ ಹೆದರಿಹನೇ ?
ಕೊನೆಗೂ ಸಿಕ್ಕಿದೆಯಾ ದೇವಕಣ ಎಂದರೆ ಕ್ಷಣದಲ್ಲೇ ಅದು ಎಲ್ಲಿಂದ ಬಂತು ಎಂಬ ಪ್ರಶ್ನೆ ಧುತ್ತನೆ ಎರಗುತ್ತದೆ !
ಪ್ರಪಂಚದ ಸೃಷ್ಟಿಗೆ ಕಾರಣವಾದ ದೇವಕಣ ಯಾನೇ ಹಿಗ್ಗ್ ಬೋಸನ್ ಎಂಬ ಪರಮಾಣುವಿಗಿಂತಾ ಎಷ್ಟೋಪಟ್ಟು ಚಿಕ್ಕದಾದ ಕಣವನ್ನು ಕಂಡುಹಿಡಿದೆವು ಎಂಬುದು ಭಾರತೀಯ ಮೂಲದವರಾದ ಜಿನೇವಾದ ವಿಜ್ಞಾನಿಗಳ ಅಂಬೋಣವಾಗಿದೆ. ಅವರು ಹೇಳಿಕೆಯಿತ್ತ ಮರುಕ್ಷಣ ನನಗೆ ಅನ್ನಿಸಿದ್ದು ದೇವಕಣದ ಉತ್ಫತ್ತಿ ಹೇಗಾಯ್ತು? ಎಂಬುದು! ಸರಿ ಸರಿ ಒಪ್ಪೋಣ, ವೈಜ್ಞಾನಿಕವಾಗಿ ಶತಶತಮಾನಗಳಲ್ಲೂ ಕಂಡಿರದ ಮೈಲಿಗಲ್ಲನ್ನು ಇಂದಿನ ವಿಜ್ಞಾನಿಗಳು ತಲ್ಪಿದ್ದಾರೆ, ಈ ಸಾಧನೆಯ ಹಿಂದಿನ ಪರಿಶ್ರಮ ಕಮ್ಮಿಯದೇನಲ್ಲ ಮತ್ತು ಸಾಧನೆಯೂ ಸಣ್ಣಮಟ್ಟದ್ದೇನಲ್ಲ. ಆದರೆ ಈ ಭೂಮಿ, ಆಕಾಶ, ವಾಯು, ನೀರು. ಅಗ್ನಿ ಈ ಎಲ್ಲಾ ಕಣ್ಣಿಗೆ ಕಾಣುವ ಸಮಸ್ತ ಬ್ರಹ್ಮಾಂಡವನ್ನು ಸೃಜಿಸಿ ಮೆರೆದಿದ್ದು ದೇವಕಣ ಎಂದು ವಿಜ್ಞಾನಿಗಳು ಈಗ ಹೇಳುತ್ತಿದ್ದಾರೆ-ಇದನ್ನು ನಮ್ಮ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮೊದಲೇ ಹೇಳಿದ್ದಾನೆ! :

ಮಮ ಯೋನಿರ್ಮಹದ್ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಹಮ್|
ಸಂಭವಃ ಸರ್ವಭೂತಾನಾಂ ತತೋ ಭವತಿ ಭಾರತ ||

ಹೇ ಅರ್ಜುನಾ ! ನನ್ನ ಮಹತ್ ಬ್ರಹ್ಮರೂಪೀ ಮೂಲಪ್ರಕೃತಿಯು ಸಮಸ್ತ ಪ್ರಾಣಿಗಳ ಯೋನಿಯಾಗಿದೆ ಅರ್ಥಾತ್ ಗರ್ಭಾದಾನದ ಸ್ಥಾನವಾಗಿದೆ. ನಾನು ಆ ಯೋನಿಯಲ್ಲಿ ಚೇತನ-ಸಮುದಾಯರೂಪೀ ಗರ್ಭವನ್ನು ಸ್ಥಾಪಿಸುತ್ತೇನೆ. ಆ ಜಡ ಚೇತನದ ಸಂಯೋಗದಿಂದ ಎಲ್ಲಾ ಜೀವಿಗಳ ಉತ್ಫತ್ತಿಯಾಗುತ್ತದೆ.

ಸರ್ವಯೋನಿಷು ಕೌಂತೇಯ ಮೂರ್ತಯಃ ಸಂಭವಂತಿ ಯಾಃ |
ತಾಸಾಂ ಬ್ರಹ್ಮ ಮಹದ್ಯೋನಿರಹಂ ಬೀಜಪ್ರದಃ ಪಿತಾ ||

ಅರ್ಜುನಾ, ನಾನಾ ಪ್ರಕಾರದ ಎಲ್ಲಾ ಯೋನಿಗಳಲ್ಲಿ ಎಷ್ಟು ಮೂರ್ತಿಗಳು ಅರ್ಥಾತ್ ಶರೀರಧಾರೀ ಪ್ರಾಣಿಗಳು ಹುಟ್ಟುತ್ತವೆಯೋ, ಪ್ರಕೃತಿ ಅವೆಲ್ಲದರ ಗರ್ಭವನ್ನು ಧರಿಸುವ ತಾಯಿಯಾಗಿದ್ದಾಳೆ, ನಾನು ಬೀಜವನ್ನು ಸ್ಥಾಪಿಸುವ ತಂದೆಯಾಗಿದ್ದೇನೆ.

ಗೀತೆಯ ಗುಣತ್ರಯ ವಿಭಾಗಯೋಗವೆಂಬ ೧೪ನೇ ಅಧ್ಯಾಯದಲ್ಲಿ ಜಗದ ಹುಟ್ಟು, ವಿನಾಶದ ಬಗೆಗೆ, ಸತ್ವ-ರಜ-ತಮ ಎಂಬ ಮೂರು ಗುಣಗಳ ಬಗೆಗೆ ಅರ್ಜುನನನ್ನು ನೆಪವಾಗಿಟ್ಟು ಜಗಕ್ಕೆ ಬೋಧಿಸಿದ್ದಾನೆ ಭಗವಂತ. ತನ್ನ ಇರವನ್ನು ತಾನು ಪ್ರತ್ಯಕ್ಷ ತೋರ್ಪಡಿಸದೇ ಪರೋಕ್ಷವಾಗಿ ಈ ಜಗದಲ್ಲಿ ಘಟಿಸುವ ಘಟನೆಗಳಿಗೆ ಬೀಜರೂಪದಲ್ಲಿ ನಾನೇ ಇದ್ದೇನೆ ಎನ್ನುತ್ತಾನೆ! 

ಮುಂದುವರಿದು ಪುರುಷೋತ್ತಮಯೋಗವೆಂಬ ೧೫ನೇ ಅಧ್ಯಾಯದಲ್ಲಿ ........

ಊರ್ಧ್ವಮೂಲಮಧಃಶಾಖಮಶ್ವತ್ಥಂ ಪ್ರಾಹುರವ್ಯಯಮ್ |
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ||

ಆದಿಪುರುಷ ಪರಮೇಶ್ವರನು ಯಾವುದರ ಬೇರು ಆಗಿದ್ದಾನೋ, ಬ್ರಹ್ಮದೇವರು ಯಾವುದರ ಮುಖ್ಯ ಕಾಂಡವಾಗಿದ್ದಾರೋ, ಆ ಜಗದ್ರೂಪೀ ಅಶ್ವತ್ಥವೃಕ್ಷವನ್ನು ಅವಿನಾಶೀ ಎಂದು ಪ್ರಾಜ್ಞರು ಹೇಳುತ್ತಾರೆ; ವೇದಗಳು ಯಾವುದರ ಎಲೆಗಳೆಂದು ಹೇಳಲ್ಪಟ್ಟಿಯೋ ಅಂತಹ ತಲೆಕೆಳಗಾದ ಅಶ್ವತ್ಥವೃಕ್ಷದ ರೂಪವೇ ಈ ಜಗತ್ತು!  ವೇದಗಳ ಅರ್ಥವನ್ನು ಯಾರು ಸಮರ್ಪಕವಾಗಿ ಗ್ರಹಿಸಬಲ್ಲರೋ ಅವರು ತತ್ವದಿಂದ ಮಾತ್ರ ಈ ವೃಕ್ಷದ ಮಹತ್ತನ್ನು ಅರಿಯಬಲ್ಲರು.

ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನ ಚಾದಿರ್ನ ಚ ಸಂಪ್ರತಿಷ್ಠಾ |
ಅಶ್ವತ್ಥಮೇನಂ ಸುವಿರೂಢಮೂಲಮಸಂಗಶಸ್ತ್ರೇಣ ದೃಢೇನ ಛಿತ್ತ್ವಾ ||

ಲೌಕಿಕದಲ್ಲಿ ಸಹಜವಾಗಿ ಈ ವೃಕ್ಷದ ಆದಿಯಾಗಲೀ, ಅಂತ್ಯವಾಗಲೀ ಯಾರಿಗೂ ಕಾಣಿಸದಿರುವುದರಿಂದಲೂ ಮತ್ತು ಎಲೆಗಳೋಪಾದಿಯಲ್ಲಿರುವ ತತ್ತ್ವಗಳೂ ಕೂಡ ಸಹಜಗತಿಯಲ್ಲಿ ಗೋಚರಿಸದಿರುವುದರಿಂದಲೂ ವೃಕ್ಷದ ಬಗೆಗೆ ಜನರಲ್ಲಿ ತಿಳುವಳಿಕೆ ಮೂಡುವುದಿಲ್ಲ! ಈ ಲೋಕದಲ್ಲಿ ಅಹಂಕಾರ, ಮಮತೆ ಮತ್ತು ವಾಸನಾಬಲವನ್ನು ವೃದ್ಧಿಸುವ ಗುಣವುಳ್ಳ ಈ ಜೀವಸಂಕುಲದ ವೃಕ್ಷದಿಂದ ಹೊರಗೆ ನಡೆಯುವುದೇ ವಿಶಿಷ್ಟ ಸಾಧನೆಯಾಗಿದೆ ಮತ್ತು ಪರಮ ವಿರಾಗಿಗಳಿಗೆ ಮಾತ್ರ ಇದು ಸಾಧ್ಯವಾಗುತ್ತದೆ. 

ಗೀತೆಯ ಈ ಶ್ಲೋಕಗಳನ್ನು ಅವಲೋಕಿಸಿದಾಗ, ವಿವೇಚಿಸಿದಾಗ ಕೃಷ್ಣಹೇಳಿದ್ದು ಔಚಿತ್ಯಪೂರ್ಣವಾಗಿದೆ ಎನಿಸುವುದಿಲ್ಲವೇ? ದಿ| ಶಿವರಾಮ ಕಾರಂತರು ತಮ್ಮ ’ಈ ಜಗತ್ತು’ ಎಂಬ ಖಗೋಳ ಅಧ್ಯಯನದ ಬೃಹದ್ಗ್ರಂಥದಲ್ಲಿ ಉಲ್ಕೆಗಳ ಬಗ್ಗೆ, ಬ್ಲಾಕ್ಹೋಲ್ಗಳ ಬಗ್ಗೆ ಬಹಳವಾಗಿ ಉಲ್ಲೇಖಿಸಿದ್ದಾರೆ. ಈ ಪ್ರಪಂಚದ ಅದೆಷ್ಟೋ ಪ್ರಯೋಗಶಾಲಿಗಳು ಬ್ಲಾಕ್ಹೋಲ್ಗಳನ್ನು ತಿಳಿದುಕೊಳ್ಳಲು ಮುಂದಾಗಿ ಅದರ ಹತ್ತಿರಕ್ಕೆ ಹೋಗಿ, ಮರಳದೇ ಅದೆಲ್ಲಿಗೋ ತೆರಳಿದ್ದಾರೆ-ಅವರ ಯಾವುದೇ ಸುಳಿವೂ ಯಾರಿಗೂ ಲಭ್ಯವಾಗಿಲ್ಲ. ಆಕಾಶಗಂಗೆಯ ಬಗ್ಗೆಯೂ ಕೇಳಿದ್ದೇವೆ, ಆಗಾಗ ಭುವಿಗೆ ಧಾವಿಸಿ ಮರೆಯಾಗುವ ಕೌತುಕಮಯ ಹಾರುವ ತಟ್ಟೆ[ಫ್ಲೈಯಿಂಗ್ ಸಾಸರ್ಸ್]ಗಳ ಬಗ್ಗೆ ಕೇಳಿದ್ದೇವೆ. ಪ್ರತಿನಿತ್ಯ ಇಂತಹ ಹಲವು ನಿಗೂಢ ರಹಸ್ಯಗಳನ್ನು ನಮ್ಮ ಮುಂದೆ ಸವಾಲಾಗಿ ಹೊಮ್ಮಿಸುವ ಜಗನ್ನಿಯಾಮಕ ಶಕ್ತಿಯ ಮೂಲವನ್ನು ಕಾಣುವಲ್ಲಿ ಇದೀಗ ಹೆಜ್ಜೆ ಇರಿಸಿದ್ದೇವೆ ಎನ್ನುತ್ತಿದ್ದೇವೆ!    

ಕಾರಂತರ ’ಈ ಜಗತ್ತ’ನ್ನು ಓದುತ್ತಾ ಇದ್ದ ನನಗೆ ಬಾಲ್ಯದಲ್ಲಿ ಅವರೇ ಕನ್ನಡಕ್ಕೆ ಅನುವಾದಿಸಿ ಅಂಕಲ್ ಪೈ ಪ್ರಕಟಿಸಿದ ’ಅಮರ ಚಿತ್ರಕಥೆ’ಗಳ ಮಾಲಿಕೆಯ ಕೆಲವು ಪೌರಾಣಿಕ ಕಥಾಭಾಗಗಳು ಅಚ್ಚರಿಯನ್ನು ಮೂಡಿಸಿದ್ದರ ಜೊತೆಗೆ ಹಲವು ಸಂದೇಹಗಳೂ ಹುಟ್ಟಿಕೊಂಡಿದ್ದವು. ಕಾರಂತರು ಸ್ವತಃ ನಾಸ್ತಿಕರೆನಿಸಿದರೂ ಆಂತರ್ಯದಲ್ಲಿ ಅವರು ಜಗನ್ನಿಯಾಮಕ ಶಕ್ತಿಯನ್ನು ಅಲ್ಲಗಳೆಯದ ಅಪ್ರತಿಮ ಮೇಧಾವಿಯಾಗಿದ್ದರು. ನಮ್ಮರಿವಿಗೆ ನಿಲುಕದ ಅದೆಷ್ಟೋ ವಿಷಯಗಳಿವೆ ಎಂಬುದು ಅವರಿಗೆ ಸ್ಪಷ್ಟವಿತ್ತು. ಪುರಾಣದಲ್ಲಿ ಹಿರಣ್ಯಕಶಿಪು ಮತ್ತು ಹಿರಣ್ಯಾಕ್ಷರೆಂಬ ರಕ್ಕಸ ಸಹೋದರರ ಬಗ್ಗೆ ಕೇಳಿದ್ದೇವೆ. ಹಿರಣ್ಯಾಕ್ಷ  ಈ ಭೂಮಿಯನ್ನು ಹಾಸಿಗೆಯಂತೇ ಸುತ್ತಿ ಎತ್ತಿಕೊಂಡು ಹೋಗಿಬಿಟ್ಟಿದ್ದ ಎಂಬ ವರ್ಣನೆ ಬರುತ್ತದೆ. ವರಾಹಾವತಾರೀ ಮಹಾವಿಷ್ಣು ಹಿರಣ್ಯಾಕ್ಷನನ್ನು ವಧಿಸಿ ತನ್ನ ಕೋರೆದಾಡೆಗಳಿಂದ ಭೂಮಿಯನ್ನು ಪಾತಾಳದಿಂದ ಮೇಲೆತ್ತಿತಂದು ಸಮುದ್ರದಡದಲ್ಲಿ ಪ್ರತಿಷ್ಠಾಪಿಸಿದ ಎಂದೂ ಒಂದು ಹೇಳಿಕೆ ಸಿಗುತ್ತದೆ. ನನ್ನ ಪ್ರಶ್ನೆ ಇದಾಗಿತ್ತು : ವೈಜ್ಞಾನಿಕವಾಗಿ ನಾವು ನೋಡಿದ ಭೂಮಿಯ ಮೇಲ್ಮೈಯ್ಯಲ್ಲೇ ಸಮುದ್ರಗಳಿವೆಯೇ ಹೊರತು ಸಮುದ್ರದೊಳಗೆ ಭೂಮಿ ಇರುವುದಲ್ಲ. ಮೂರುಪಾಲು ನೀರು ಒಂದುಪಾಲು ನೆಲ ಎಂದು ವರ್ಗೀಕರಿಸಿದ ನಮ್ಮ ನಿಲುವಿಗೆ ಪರದೆ ಎಳೆಯುವುದು ಪರ್ವತಗಳ ಹಿಮ ಕರಗಿದಾಗ, ಅಂಟಾರ್ಕ್ಟಿಕ್ನಲ್ಲಿನ ಹಿಮಗಡ್ಡೆಗಳು ಕರಗಿದಾಗ !  ಜಗತ್ತಿನಲ್ಲಿರುವ ಹಿಮವೆಲ್ಲಾ ಕರಗಿದರೆ ಈ ಭೂಮಿ ಜಲಪ್ರಳಯವನ್ನು ಎದುರಿಸಬೇಕಾಗುವುದು ಅನಿವಾರ್ಯವಷ್ಟೇ ? ಅಂದಮೇಲೆ ನೀರು ಮೂರುಪಾಲಲ್ಲ ನಾಲ್ಕುಪಾಲೇ, ಆದರೆ ನಾಲ್ಕನೇ ಪಾಲು ಹಿಮಗಡ್ಡೆಗಳ ರೂಪದಲ್ಲಿ ಘನೀಕೃತವಾಗಿ ಜಗದ ಜೀವಸಂಕುಲಕ್ಕೆ ಬದುಕಲು ಅವಕಾಶ ಕಲ್ಪಿಸಿದೆ. ಪಾತಾಳವನ್ನು ನಾವಾಗಲೀ ನಮ್ಮ ವಿಜ್ಞಾನವಾಗಲೀ ಸದ್ಯಕ್ಕೆ ಕಂಡಿಲ್ಲ. ಅಭ್ಯಾಸಬಲದಿಂದ ಪಾತಾಳವೆಂದರೆ ಕೈಯ್ಯನ್ನು ಕೆಳಮುಖವಾಗಿಯೂ ಸ್ವರ್ಗ ಅಥವಾ ದೇವಲೋಕವೆಂದರೆ ಕೈಯ್ಯನ್ನು ಮೇಲ್ಮುಖವಾಗಿಯೂ ಹಿಡಿದು ತೋರಿಸುತ್ತೇವೆ-ನೋಡಿದ ಮಹನೀಯರು ನಮ್ಮೊಂದಿಗಿಲ್ಲ!

ಜೀವವೈವಿಧ್ಯಗಳನ್ನು ಅವಲೋಕಿಸುತ್ತಾ ನಡೆದರೆ ಯಾವುದು ಮೊದಲು ಯಾವುದು ನಂತರ ಎಂಬ ತಲೆಬುಡ ಸಿಗದ ವಾದ ಹುಟ್ಟಿಕೊಳ್ಳುತ್ತದೆ: ಬೀಜಮೊದಲೋ ವೃಕ್ಷಮೊದಲೋ? ಕೋಳಿಮೊದಲೋ ಮೊಟ್ಟೆಮೊದಲೋ? ಇಂತಹ ಪ್ರಶ್ನೆಗಳಿಗೆ ಉತ್ತರವೆಂಬುದು ನನಗಂತೂ ಇನ್ನೂ ಸಿಕ್ಕಿಲ್ಲ! ಆದರೆ ಜಗದಲ್ಲಿ ಕೋಟಿ ಕೋಟಿ ವೈವಿಧ್ಯಗಳನ್ನೂ ವೈರುಧ್ಯಗಳನ್ನೂ ಸೃಜಿಸಿದ ಶಕ್ತಿ ಆಯಾಯ ವೈವಿಧ್ಯತೆಗೆ ತಕ್ಕಂತೆ, ಆಕಾರ, ಬಣ್ಣ, ರೂಪ, ಆಹಾರ-ವಿಹಾರಗಳನ್ನೂ ರೂಪಿಸಿತು ಎಂಬುದನ್ನು ಅಲ್ಲಗಳೆಯಲಾಗದಲ್ಲಾ? ಪ್ರಪಂಚದ ಏಳು ಬಿಲಿಯನ್ ಜನಸಂಖ್ಯೆಯಲ್ಲಿ ಒಬ್ಬರ ಹಾಗೇ ಇನ್ನೊಬ್ಬರು ತದ್ರೂಪೀ ವ್ಯಕ್ತಿಗಳಿರುವುದು ಸಾಧ್ಯವಿಲ್ಲ. ಇದನ್ನೇ ಆಧಾರವಾಗಿ ಇಟ್ಟುಕೊಂಡು ಛಾಯಾಚಿತ್ರ ಅಥವಾ ಹೆಬ್ಬೆರಳ ಗುರುತು ಪಡೆದು ಜನರನ್ನು ದಾಖಲಾತಿಗಳಲ್ಲಿ ಗುರುತಿಸುವ ದಾರಿಯನ್ನು ಬ್ಯಾಂಕ್ನವರು ನಡೆಸುತ್ತಿದ್ದಾರೆ. ಹೊರನೋಟಕ್ಕೆ ಚಹರೆಗಳಲ್ಲಿ ಹೋಲಿಕೆ ಕಾಣಿಸಿದರೂ ಸೂಕ್ಷ್ಮಗತಿಯ ವ್ಯತ್ಯಾಸಗಳು ಇದ್ದೇ ಇರುತ್ತವೆ! ಈ ಲೋಕದಲ್ಲಿ ಒಬ್ಬರ ಹಾಗೇ ಇನ್ನೊಬ್ಬರು ಇದ್ದರೆ ಕಳ್ಳತನ ಮಾಡಿದವನ ಬದಲಾಗಿ ಮತ್ತಿನ್ಯಾರೋ ಶಿಕ್ಷೆಗೆ ಒಳಪಡಬೇಕಾಗುತ್ತಿತ್ತು ಅಥವಾ ಯಾರದೋ ಆಸ್ತಿಯನ್ನು ಇನ್ಯಾರೋ ಲಪಟಾಯಿಸುತ್ತಿದ್ದರು ಅಲ್ಲವೇ? ಮಾನವ ತಯಾರಿಸಿದ ಬೀಗದ ತಟ್ಟೆಗಳಲ್ಲಿ [ಉದಾಹರಣೆಗೆ ಗಾಡ್ರೆಜ್]೯ ಲೀವರ್ ಮತ್ತು ೧೧ ಲೀವರ್ ಎಂಬುದನ್ನೆಲ್ಲಾ ಕಾಣುತ್ತೇವೆ. ಒಳಗಡೆ ಅಡಕವಾಗಿರುವ ಹಲವು ತಿರುವುಗಳುಳ್ಳ ಅಗುಳಿಗಳ ಜೋಡಣೆಗಳಲ್ಲಿ ವೈವಿಧ್ಯವನ್ನು ರೂಪಿಸುವುದರಿಂದ ಒಂದೇ ಕೀಲಿ ಕೈ ಎಲ್ಲಾ ಬೀಗಗಳನ್ನೂ ತೆಗೆಯಲು ಉಪಯೋಗಿಸಲ್ಪಡುವುದಿಲ್ಲ. ಆದರೂ ಲಕ್ಷ ಸಂಖ್ಯೆಯ ಬೀಗದ ತಟ್ಟೆ ಹಾಗೂ ಕೀಲೀಕೈಗಳನ್ನು ಒತ್ತಟ್ಟಿಗೆ ಇಟ್ಟುಕೊಂಡಾಗ ಹಲವು ಸಾಮ್ಯದ ಬೀಗದ ತಟ್ಟೆಗಳು ನಮಗೆ ಗೋಚರಿಸುತ್ತವೆ!! ಬಿಲಿಯನ್ ಸಂಖ್ಯೆಯ ಬೀಗಗಳು ಒಂದಕ್ಕೊಂದು ಸಾಮ್ಯವಿರದಂತೇ ನಿರ್ಮಿಸಲು ಸಾಧ್ಯವೇ ? ದೂರದ ಮಾತು!  ಇದೇ ಮಾನವ ನಿರ್ಮಿತಕ್ಕೂ ದೇವನಿರ್ಮಿತಕ್ಕೂ ಇರುವ ವ್ಯತ್ಯಾಸ !  

ಇನ್ನು ದೇವಕಣದ ವೇಗದ ಗತಿಯನ್ನು ನಟರಾಜನ ನರ್ತನಕ್ಕೆ ಹೋಲಿಸಿದ್ದಾರೆ ಎಂದು ಕೇಳಿದ್ದೇನೆ. ನಟರಾಜ ನರ್ತಿಸುತ್ತಾನೆ ಎಂದು ಕೇಳಿದ್ದೇವೆಯೇ ಹೊರತು ನೋಡಿದ್ದಂತೂ ಇಲ್ಲ. ಅಮೂರ್ತರೂಪವನ್ನು ಮೂರ್ತಿಯಾಗಿಸಿ ಕುಣಿಸಿ ನಟರಾಜ ಎಂದು ಪೂರ್ವಜರು ಕರೆದಿದ್ದಾರೆ. ಹಲವು ರೂಪಗಳಲ್ಲಿ, ಆಕಾರಗಳಲ್ಲಿ, ದಿರಿಸು-ಧಾರಣೆಗಳಲ್ಲಿ ಅಮೂರ್ತರೂಪವನ್ನು ಮೂರ್ತರೂಪಗೊಳಿಸಿ ಗಣೇಶ, ಶಿವ, ವಿಷ್ಣು, ಅರಹಂತ, ಅಲ್ಲಾ, ಕ್ರಿಸ್ತ ಎಂಬಿತ್ಯಾದಿ ಹೆಸರುಗಳ ಮೂಲಕ ಆತನನ್ನು ಸಂಬೋಧಿಸಿದ್ದೇವೆ. ನಮ್ಮ ಉದರನಿಮಿತ್ತವಾಗಿ ಇತರ ಹಲವು ಜೀವಪ್ರಭೇದಗಳನ್ನು ಬಲಿಗೊಟ್ಟು ’ದೇವರ ಅಪ್ಪಣೆ’ ಎಂದು ಸ್ವಾಹಾಕಾರ ಮಾಡುತ್ತೇವೆ. ಆದರೆ ದೇವರು ಇತರ ಜೀವಿಗಳನ್ನು ಆಹಾರವಾಗಿ ತನಗೆ ಬಲಿನೀಡಿ ಎಂದು ಎಂದೂ ಹೇಳಲಿಲ್ಲ! ನಮಗೆ ಜನ್ಮ ಕೊಟ್ಟ ಅದೇ ಶಕ್ತಿಯೇ ಸಕಲ ಜೀವಜಗತ್ತಿಗೂ ಜನ್ಮನೀಡಿತು. ತನ್ನಿಂದಲೇ ಸೃಜಿಸಲ್ಪಟ್ಟ ಜೀವಿಯನ್ನೇ ತಾನು ಆಹಾರವಾಗಿ ಭುಂಜಿಸುವಷ್ಟು ಅಗ್ಗದ ಶಕ್ತಿ ಅದಲ್ಲ! ಅಸಲಿಗೆ ಆಶಕ್ತಿಯ ಹೊಟ್ಟೆ ಎಲ್ಲಿದೆ? ಕಾಲೆಲ್ಲಿದೆ? ತಲೆ ಯಾವುದು? -ಇದ್ಯಾವುದೂ ನಮಗೆ ತಿಳಿದಿಲ್ಲ. ಕಾಣುವ ಆಕಾಶದ ಬುಡವಾಗಲೀ ತಲೆಯಾಗಲೀ ಅಯ ಅಳತೆಯಾಗಲೀ ನಮಗೆ ಇನ್ನೂ ಸಿಕ್ಕಿಲ್ಲ.

ಚಿಕ್ಕವರಿರುವಾಗ ನಮ್ಮಲ್ಲಿ ಒಗಟುಗಳ ಮಹಾಪೂರವೇ ಹರಿಯುತ್ತಿತ್ತು. ’ಅಜ್ಜಿ ಕೊಟ್ಟ ಹಪ್ಪಳ ತಿನ್ನಲಾಗುವುದಿಲ್ಲ, ಅಜ್ಜ ಕೊಟ್ಟ ನಾಣ್ಯಗಳನ್ನು ಎಣಿಸಲಾಗುವುದಿಲ್ಲ’ --ಎಂಬುದೂ ಕೂಡ ಒಂದು. ಇಲ್ಲಿ ಚಂದ್ರನನ್ನು ಅಜ್ಜಿಯ ಹಪ್ಪಳಕ್ಕೂ ತಾರೆಗಳನ್ನು ಅಜ್ಜನ ನಾಣ್ಯಗಳಿಗೂ ಹೋಲಿಸಲಾಗಿದೆ. ಹೌದು, ಚಂದಿರನನ್ನು ಮುರಿಯಲು ನಮ್ಮಿಂದ ಸಾಧ್ಯವೇ? ತಾರೆಗಳು ಇಂತಿಷ್ಟೇ ಎಂದು ನಿಖರವಾಗಿ ಹೇಳಲು ಸಾಧ್ಯವೇ? ನಮ್ಮ ಬಾಲ್ಯದಲ್ಲಿ ನಮಗೆ ಹಿರಿಯರು ಹೇಳಿಕೊಟ್ಟಿದ್ದ ಒಂದು ಹಾಡು :

ಚಂದಿರನೇತಕೆ ಓಡುವನಮ್ಮಾ
ಮೋಡಕೆ ಹೆದರಿಹನೇ ?
ಬೆಳ್ಳಿಯ ಮೋಡದ ಅಲೆಗಳ ಕಂಡು
ಚಂದಿರ ಬೆದರಿಹನೇ ?  

ನಾವು ಬಸ್ಸಿನಲ್ಲಿ ಕಿಟಕಿಯ ಪಕ್ಕದ ಆಸನದಲ್ಲಿ ಅಮ್ಮನ ಕಾಲಮೇಲೆ ಕುಳಿತು ಪಯಣಿಸುವಾಗ ರಸ್ತೆಯಲ್ಲಿ ಮರಗಳೂ ಓಡುತ್ತಿದ್ದುದು ನಮ್ಮ ಗಮನಕ್ಕೆ ಬರುತ್ತಿತ್ತು. ಮೇಲಿನ ಹಾಡು ಹೇಳಿಕೊಳ್ಳುತ್ತಾ ಬೆಳದಿಂಗಳ ದಿನಗಳ ಆಕಾಶವನ್ನು ದಿಟ್ಟಿಸಿದಾಗ ಅಲ್ಲಲ್ಲಿ ಒಮ್ಮೊಮ್ಮೆ ಮೋಡಗಳು ಸರಿದುಹೋಗುತ್ತಿದ್ದವು. ಸಾಗುವ ಮೋಡಗಳ ಮಧ್ಯೆ ಆಗೊಮ್ಮೆ ಈಗೊಮ್ಮೆ ಮೋಡಗಳ ಹಿಂದೆ ಮರೆಯಾಗುತ್ತಾ ಮತ್ತೆ ಮತ್ತೆ ಕಾಣಿಸುತ್ತಾ ಇರುವಾಗ ಚಂದಿರ ಹೆದರಿ ಓಡುತ್ತಿರುವಂತೇ, ಇನ್ನೆಲ್ಲೋ ಅವಿತಿಟ್ಟುಕೊಳ್ಳುವಂತೇ ಭಾಸವಾಗುತ್ತಿದ್ದುದು ಸುಳ್ಳಲ್ಲ. ಓಡದ  ತಂಗದಿರನನ್ನೇ ಓಡುವನೆಂದು ತಿಳಿದ ನಮ್ಮ ಬಾಲ್ಯಕಾಲ ನಿಜಕ್ಕೂ ಬಂಗಾರದ ಕಾಲ, ಬಂಗಾರ ಬೆಳೆದ ಕಾಲ. ಬದುಕಿನ ಯಾವೊಂದೂ ಚಿಂತೆಗಳು, ಸಮಸ್ಯೆಗಳು ನಮ್ಮನ್ನು ಬಾಧಿಸದ ಆ ಕಾಲ ಎಷ್ಟು ಸುಂದರ ಎಂದು ಯೋಚಿಸುತ್ತಿರುವಂತೆಯೇ ಈ ಜಗದ ಜೀವನದ ಹಲವು ಮಜಲುಗಳಲ್ಲಿ ದೇವ ರೂಪಿಸಿದ ರಸಮಯ ಸನ್ನಿವೇಶಗಳೂ ಭಾವಬಾಂಧವ್ಯಗಳೂ ನೆನಪಿಗೆ ಬಂದು ಜಗದ್ರೂಪಿ ವೃಕ್ಷದ ಅಗಾಧ ವಿನ್ಯಾಸ ಗುಂಗು ಹಿಡಿಸುತ್ತದೆ; ವಿಜ್ಞಾನಿಗಳು ಈಗ ಕಂಡ ದೇವಕಣವಾದರೂ ಎಲ್ಲಿಂದ ಸೃಷ್ಟಿಯಾಯ್ತು ಎಂಬ ಪ್ರಶ್ನೆ ಉಳಿದುಹೋಗುತ್ತದೆ!