ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ
Showing posts with label ಪಯಣ. Show all posts
Showing posts with label ಪಯಣ. Show all posts

Monday, August 27, 2012

ತೀರ್ಥರಾಜ ಪುರದ ಗಮ್ಮತ್ತೇ ಅಂಥದ್ದು !


ಚಿತ್ರಗಳ ಋಣ: ಅಂತರ್ಜಾಲ
ತೀರ್ಥರಾಜ ಪುರದ ಗಮ್ಮತ್ತೇ ಅಂಥದ್ದು !

ಮಳೆಗಾಲದಲ್ಲಿ ಗಡದ್ದಾಗಿ ಊಟ ಹೊಡೆದು, ಹೊದೆದು ಮಲಗಿಬಿಟ್ಟರೆ ಸೂರ್ಯನೆಂಬ ಸೂರ್ಯ ಕಾಣದೇ ಇದ್ದರೂ ಪರವಾಗಿಲ್ಲ-ಆತ ಮುಳುಗುವ ಹೊತ್ತಿಗೇ ಒಮ್ಮೆ ಏಳುವುದು! ವಾತಾವರಣದಲ್ಲಿನ ಆರ್ದ್ರತೆಯಿಂದ ಒಂಥರಾ ಚಳಿ. ಎಲ್ಲರಲ್ಲೂ ಹಾಗೇ...ಹೇಳಿಕೊಳ್ಳಬೇಕೆನಿಸಿದರೂ ಮನಸ್ಸಿಗೆ ಮುದನೀಡುವ ಪ್ರಕೃತಿ ಸಹಜ ವಾತಾವರಣ ಅದು. ಬಸ್ಸಿನಲ್ಲಿ ಪ್ರಯಾಣಿಸುವಾಗ ಯಾರೋ ಮುಡಿದ ಅಂಬರ ಮಲ್ಲಿಗೆಯ ಸುವಾಸನೆ ಗಾಳಿಯಲ್ಲಿ ತೇಲಿಬರುತ್ತದೆ. ಕಿವಿವರೆಗೆ ಮುಚ್ಚಿಕೊಂಡ ಟೋಪಿವಾಲಾ ಖಾಸಗೀ ಬಸ್ ಏಜೆಂಟರು ತಂತಮ್ಮದೇ ಆದ ಶೈಲಿಯಲ್ಲಿ ಊರುಗಳ ಹೆಸರನ್ನು ಕೂಗಿಕೊಂಡು ಸಾಗುತ್ತಿರುತ್ತಾರೆ. ದೂರದ ಹಳ್ಳಿಗಳಿಂದ ಶಾಲೆ/ಕಾಲೇಜಿಗಾಗಿ ಮಕ್ಕಳು ಓಡಾಡುತ್ತಾ ಇರುತ್ತಾರೆ. ಕೃಷಿ ಕೆಲಸದವರು ಅದೂ ಇದೂ ಮಾತನಾಡಿಕೊಂಡು ಎಲೆಯಡಿಕೆ ಹಾಕಿಕೊಂಡು ಓಡಾಡುತ್ತಾರೆ. ಬುರ್ರನೆ ಹಾದುಹೋಗುವ ಬಸ್ಸು ಹಾದಿಯ ತಗ್ಗುಗಳಲ್ಲಿ ನಿಂತ ಕೆಸರಿನ ನೀರನ್ನು ಬರ್ರನೆ ಅಷ್ಟೆತ್ತರಕ್ಕೆ ಹಾರಿಸಿದ್ದು ಗೊತ್ತಾಗುವಷ್ಟರಲ್ಲಿ ಪಕ್ಕದಲ್ಲಿ ನಿಂತ ಯಜಮಾನರ ಪಂಚೆಮೇಲೆ ಬಣ್ಣದ ರಂಗೋಲಿ; ಬರಲಿ ಆ ಡ್ರೈವರನಿಗೆ ಮಾಡಿಸ್ತೇನೆ ಎಂದು ಹಲ್ಲು ಕಡಿದಿದ್ದಾರೆ !  ಹಣ್ಣು ತರಕಾರಿ ವಗೈರೆ ವ್ಯಾಪಾರ ಸ್ವಲ್ಪ ಕಮ್ಮಿಯೇ. ಹಿತ್ತಲಲ್ಲಿ ಬೆಳೆಯುವ ಕಾಯಿಪಲ್ಲೆಗಳೇ ಸಾಕು ಈಗ ಎಂಬ ಧೋರಣೆ. ಕೆಂಡಸಂಪಿಗೆಯ ಕಡು ಪರಿಮಳ ಕೆಲವೆಡೆಗೆ. ಜಾಜಿಯೂ ಅಲ್ಲಲ್ಲಿ ಇದ್ದೇನೆ ಎನ್ನುತ್ತಿದ್ದರೆ ಅದು ತೀರ್ಥರಾಜಪುರ ಅರ್ಥಾತ್ ತೀರ್ಥಹಳ್ಳಿ.

ಫಣಿಯಮ್ಮ ಸಿನಿಮಾ ನೋಡಿದಾಗಿನಿಂದ ಎಳ್ಳಮವಾಸ್ಯೆ ಜಾತ್ರೆ ನಡೆದ ಜಾಗದ ಬಗ್ಗೆ ಬಹಳ ಕುತೂಹಲವಿತ್ತು. ೧೮ನೇ ಶತಮಾನದಲ್ಲಿ ನಡೆದ ಆ ಘಟನೆಯನ್ನು ಕನ್ನಡದ ಸಾಹಿತ್ಯಾಸಕ್ತರು ಎಂ ಕೆ.ಇಂದಿರಾ ಅವರ ಇದೇ ಹೆಸರಿನ ಕಾದಂಬರಿಯಲ್ಲಿ ಓದಿಯೇ ಇರುತ್ತಾರೆ. ರಥಬೀದಿಯಲ್ಲಿ ಫಣಿಯಮ್ಮ ಬಾಲ್ಯದಲ್ಲಿ ಓಡಾಡಿದ್ದು, ಹಿಡಿದ ಜಡೆಯನ್ನು ಬಿಡಿಸಿಕೊಳ್ಳಲು ತುದಿಯನ್ನೇ ಕತ್ತರಿಸಿದ್ದು, ಬಾಲ್ಯದಲ್ಲೇ ಫಣಿಯಮ್ಮನ ವಿವಾಹ, ಇನ್ನೂ ಹರೆಯದ ಸುಖವನ್ನು ಉಣ್ಣುವ ಮೊದಲೇ ವಿಧವೆ, ತಲೆಬೋಳಿಸಿಕೊಂಡು ನಂತರ ತನ್ನಿಡೀ ಜೀವಿತದಲ್ಲಿ ಮತ್ತೆಂದೂ ಕೂದಲು ಬೆಳೆಸದೇ ಮಡಿಯಮ್ಮನಾಗಿ ಕಳೆದ ಬ್ರಾಹ್ಮಣ ಬಾಲವಿಧವೆಯ ಕಥೆ ಅನಾಯಾಸವಾಗಿ ಉಕ್ಕಿಹರಿವ ಕಣ್ಣೀರಿಗೆ ಆಸ್ಪದ ಕೊಡುವಂಥದ್ದು. ಫಣಿಯಮ್ಮ ಎಂಬ ಹೆಸರನ್ನು ಕೇಳಿದಾಗಲೆಲ್ಲಾ ಅಥವಾ ಕೆಂಪು/ಬಿಳಿ ಸೀರೆಯುಟ್ಟ ಮಡಿ ಅಜ್ಜಿಯರನ್ನು ಕಂಡಾಗಲೆಲ್ಲಾ ಅಂತಹ ಕಥೆಯ ನೆನಪಾಗುತ್ತಿತ್ತು. ಪಾಪದ ಜೀವಗಳು ಆ ಕಾಲಘಟ್ಟದಲ್ಲಿ ಅದೆಷ್ಟು ನೊಂದುಕೊಂಡವೋ ಶಿವನೇ ಬಲ್ಲ. ಏನೇ ಆಗಲಿ ಎಳ್ಳಮವಾಸ್ಯೆ ಜಾತ್ರೆ ನಡೆಯುವ ಜಾಗವನ್ನು ಒಮ್ಮೆಯಾದರೂ ನೋಡಬೇಕೆನಿಸಿತ್ತು; ಒಮ್ಮೆಯಲ್ಲ ಹಲವಾರು ಬಾರಿ ನೋಡಿದ್ದಾಯ್ತು.    

’ಗಂಗಾಸ್ನಾನ ತುಂಗಾಪಾನ’ ಎಂಬುದೊಂದು ಗಾದೆ. ಈಗೀಗ ತುಂಗೆಯೂ ಮಲಿನವಾಗಿದ್ದಾಳೆ; ಕಾಲಾಯ ತಸ್ಮೈ ನಮಃ ! ತುಂಗೆಯ ದಡದಲ್ಲಿ ಇರುವ ಹಳ್ಳಿ ತೀರ್ಥಹಳ್ಳಿ. ಯಾಕೆ ಈ ಹೆಸರು ಎಂಬುದಕ್ಕೊಂದು ಕಥೆ! ಅದು ಕಥೆಯೋ ಕಾಲಘಟ್ಟದಲ್ಲಿ ಘಟಿಸಿದ ಘಟನೆಯೋ ಅರಿವಿಗಿಲ್ಲ. ನಂಬಿದವರಿಗೆ ಅದೊಂದು ಪ್ರಾಗೈತಿಹಾಸಿಕ ಘಟನೆ. ಮಹಾವಿಷ್ಣು ಜಮದಗ್ನಿಯ ಮಗ ಪರಶುರಾಮನಾಗಿ ಆರನೆಯ ಅವತಾರವೆತ್ತಿದ್ದನಲ್ಲಾ ತಂದೆಯ ಆಜ್ಞೆಗೆ ಮಣಿದು ಹೆತ್ತಮ್ಮ ರೇಣುಕೆಯ ಶಿರವನ್ನೇ ತರಿದನಲ್ಲಾ...ಹಾಗೆ ಅಲ್ಲಿ ಬಳಸಿದ ರಕ್ತಸಿಕ್ತ ಪರಶುವನ್ನು, ತುಂಗಾನದಿಯ ನಡುವಿನಲ್ಲಿ ಇಲ್ಲೊಂದುಕಡೆ ತೊಳೆದು ದೋಷಕಳೆದುಕೊಂಡ ಎಂಬುದು ಐತಿಹ್ಯ. ಆ ರಾಮನ ಪರಶುವಿಗೆ ಹಲವು ಕ್ಷತ್ರಿಯರೂ ಬಲಿಯಾಗಿದ್ದರು. ಅಂತಹ ಕ್ರೌರ್ಯದ ಕೊಡಲಿಯನ್ನು ತುಂಗೆಯ ನಡುವಿನ ಕೊಂಡವೊಂದರಲ್ಲಿ ನೆನೆಸಿದ ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಪರಶುರಾಮನಿಂದ ಬಳಸಲ್ಪಟ್ಟ ಕೊಂಡದ ನೀರು ತೀರ್ಥವೆಂದು ಹೆಸರಿಸಲ್ಪಟ್ಟಿತು. ತೀರ್ಥದ ಕೊಂಡವಿರುವ ನದಿಯ ಈ ಪ್ರದೇಶದ ದಡದಲ್ಲಿ ಜನವಸತಿಯುಳ್ಳ ಹಳ್ಳಿ ತೀರ್ಥಹಳ್ಳಿಯಾಯ್ತು.


ಪ್ರಥಮವಾಗಿ ನೋಡುವಾಗ ಮೈಯ್ಯೆಲ್ಲಾ ಒಂದು ರೀತಿ ರೋಮಾಂಚನ. ನದಿಯ ದಡದಿಂದ ನಿಧಾನವಾಗಿ ಹೆಜ್ಜೆಯಿಟ್ಟು ಪರಶುರಾಮ ಕೊಂಡದೆಡೆಗೆ ಹೆಜ್ಜೆ ಹಾಕುವವರೆಗೆ ಒಂದು ರೀತಿಯ ತಡೆಯಲಾರದ ತವಕ. ಸಾಕ್ಷಾತ್ ಪರಶುರಾಮನೇ ಬಂದಿದ್ದ, ಕೂತಿದ್ದ, ನಿಂತಿದ್ದ ಜಾಗದಲ್ಲಿ ಇಂದಿಗೂ ಹಾಗೇ ಇದೆಯಲ್ಲಾ ಎಂಬ ಅನಿಸಿಕೆ. ನದೀಪಾತ್ರದಲ್ಲಿರುವ ಬಂಡೆಗಲ್ಲುಗಳ ನಡುವೆ ನದಿಯ ಪ್ರವಾಹಕ್ಕೆ ತಾನಾಗೇ ರೂಪುಗೊಂಡ ಕೊಂಡ ಅದು. ಪಕ್ಕದಲ್ಲೇ ಇರುವ ಗೋಡೆಯಂತಹ ಬಂಡೆಯಮೇಲೆ ಋಷಿಯೊಬ್ಬ ನಿಂತಿರುವ ಚಿತ್ರ. ಆ ಬಂಡೆಯ ಶಿರೋಭಾಗದಲ್ಲೊಂದು ಕಲ್ಲಿನ ಮಂಟಪ. ಅಲ್ಲೊಂದು ಲಿಂಗ. ನದೀಪಾತ್ರದ ನಡುವೆ ಮಾನವ ನಿರ್ಮಿತವೇ ಎನ್ನುವಷ್ಟು ಆಕಾರಬದ್ಧವಾದ ಈ ಕೊಂಡದಲ್ಲಿ ಸತತವೂ ನೀರು. ಎಳ್ಳಮಾವಾಸ್ಯೆಯ ಜಾತ್ರೆಯ ಸಮಯದಲ್ಲಿ ರಾಮೇಶ್ವರ ದೇವರನ್ನು ಪಲ್ಲಕ್ಕಿಯಲ್ಲಿ ಇಲ್ಲಿಗೆ ಕರೆತಂದು ಪೂಜಿಸುತ್ತಾರಂತೆ. ಪರಶುರಾಮನಿಂದ  ಪೂಜಿಸಲ್ಪಟ್ಟ ದೇವರು ಇಲ್ಲಿನ ರಾಮೇಶ್ವರ! ಇವತ್ತಿಗೂ ಒಂದು ಮಾತಿದೆ: ಸಾವಿರ ಜನ ವೈದಿಕರು ಒಂದೇಕಡೆ ಊಟಕ್ಕೆ ಕುಳಿತರೆ ಆ ಪಂಕ್ತಿಯಲ್ಲಿ ಪರಶುರಾಮನೂ ಇರುತ್ತಾನೆ ಎಂಬುದು.

ಅಶ್ವತ್ಥಾಮ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ |
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ ||  

ಏಳು ಜನ ಚಿರಂಜೀವಿಗಳಲ್ಲಿ ಪರಶುರಾಮನೂ ಒಬ್ಬ. ಪರಶುರಾಮ ಒಮ್ಮೆ ದಾನಮಾಡುತ್ತಿದ್ದ. ದಾನ ಮಾಡಿ ಮಾಡಿ ಅವತಾರ ಸಮಾಪ್ತಿಯ ಸಮಯ ಬಂದಿತ್ತು. ಕೊನೆಯಲ್ಲಿ ಕೈಯ್ಯಲ್ಲಿ ಇದ್ದಿದ್ದು ಪರಶು ಮಾತ್ರ. ಆ ಕಾಲದಲ್ಲಿ ಒಂದಷ್ಟು ಬ್ರಾಹ್ಮಣರು ಪರಶುರಾಮನ ಪರೀಕ್ಷೆಗಾಗಿ ಬಂದರಂತೆ. ಬಂದವರೇ ರಾಮನಲ್ಲಿ ದಾನಪಡೆಯಲು ಬಂದಿದ್ದೇವೆ ಎಂದರು. ರಾಮನಲ್ಲಿ ಕೊಡುವುದಕ್ಕೆ ಏನೂ ಇರಲಿಲ್ಲ! ಖಾಲೀ ಕೈಲಿ ಕಳಿಸುವ ಹಾಗಿಲ್ಲ. ಬ್ರಾಹ್ಮಣರು ತನ್ನೆಡೆಗೆ ಬಂದಿದ್ದು ಶಂಕಿತ ಬುದ್ಧಿಯಿಂದ ಪರೀಕ್ಷೆಗಾಗಿ ಎಂಬುದು ಅಪರೋಕ್ಷ ಜ್ಞಾನಿಯಾದ ಪರಶುರಾಮನಿಗೆ ಪರೋಕ್ಷವಾಗಿ ತಿಳಿದುಹೋಯ್ತು. ಕುಪಿತನಾದ ಪರಶುರಾಮ "ನಿಮ್ಮಲ್ಲಿ ಒಗ್ಗಟ್ಟೇ ಇರದೇ ಹೋಗಲಿ" ಎಂದು ಶಾಪ ಕೊಟ್ಟುಬಿಟ್ಟ! ಅಪರಾಧವನ್ನರಿತು ಕ್ಷಮಾಪಣೆ ಕೋರಿ ದೀನರಾಗಿ ನಿಂತ ಬ್ರಾಹ್ಮಣರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು, ಸಹ್ಯಾದ್ರಿಯ ಮೇಲಿಂದಲೇ ಸಾಗರರಾಜ ವರುಣನೆಡೆ ಪರಶುವನ್ನು ಬೀಸಿ ಎಸೆದ. "ತೆಗೆದುಕೊಳ್ಳಿ ವರುಣ ನನ್ನಿಚ್ಛೆಯಮೇರೆಗೆ ಒಂದಷ್ಟು ಜಾಗವನ್ನು ಬಿಟ್ಟುಕೊಟ್ಟಿದ್ದಾನೆ. ಹೋಗಿ ನೀವೂ ನಿಮಗೆ ಸಂಬಂಧಪಟ್ಟವರೂ ಅಲ್ಲಿ ಜೀವಿಸಿ." ಎಂದುಬಿಟ್ಟ. ಇಂದಿನವರೆಗೂ ನಮ್ಮಲ್ಲಿಗೆ ಕನ್ನಡ ಕರಾವಳಿಯನ್ನು ಪರಶುರಾಮಕ್ಷೇತ್ರವೆಂದೇ ಕರೆಯುತ್ತಾರೆ. ಬ್ರಾಹ್ಮಣರು ನಿತ್ಯ ಸಂಕಲ್ಪದಲ್ಲಿ ’ರಾಮಕ್ಷೇತ್ರೇ’ ಎಂದು ಸಂಕಲ್ಪಿಸುತ್ತಾರೆ. ಜೀವಿತದಲ್ಲಿ ಕೋಪದಿಂದ ತಾನೆಸಗಿದ ಕೃತ್ಯಗಳಿಗೆ ತಡವಾಗಿ ತಾನೇ ನೊಂದುಕೊಂಡ ಪರಶುರಾಮ ಸತತ ತಪಸ್ಸನ್ನಾಚರಿಸುತ್ತಾ ಇವತ್ತಿಗೂ ಬದುಕಿದ್ದಾನೆ ಎಂಬುದು ಹಿಂದೂಗಳ ಪರಮಭಾವ. ಇಲ್ಲಿನವರೆಗೆ ಭೂಕಂಪ ರಹಿತ ಸುರಕ್ಷಿತ ಸ್ಥಳ ನಮ್ಮ ಕನ್ನಡ ಕರಾವಳಿ. ಹಿಂದಿನ ಸರ್ತಿ ಸುನಾಮಿ ಬಂದಾಗಲೂ ತಮಗೇನೂ ಆಗದೆಂದು ಕನ್ನಡ ಕರಾವಳಿಯ ಜನ ಹೇಳಿಕೊಳ್ಳುತ್ತಿದ್ದುದರ ಒಳಗುಟ್ಟು ಅದು ’ಪರಶುರಾಮ ಕ್ಷೇತ್ರ’ವೆಂಬ ಧೈರ್ಯವೇ ಆಗಿತ್ತು. 

ಅಂತಹ ಮುಂಗೋಪಿ ಪರಶುರಾಮ ಬ್ರಹ್ಮಕ್ಷತ್ರಿಯನೆನಿಸಿದ ಮಹಾನುಭಾವ. ಆತ ಓಡಾಡಿದ ಕುರುಹುಗಳಿರುವ ಜಾಗವನ್ನು  ನೋಡುವ ಕುತೂಹಲವನ್ನು ತಣಿಸಿಕೊಂಡ ಮೇಲೆ ಆಗಾಗ ನಾನು ಹೋಗಿಬರುತ್ತಿದ್ದ ಜಾಗ ಈ ತೀರ್ಥರಾಜಪುರ. ತೀರ್ಥಗಳಿಗೇ ರಾಜನೆಂಬ ಕಾರಣಕ್ಕೆ ಈ ತೀರ್ಥ ತೀರ್ಥರಾಜನೆನಿಸಿ ದಡದಲ್ಲಿನ  ಊರು ತೀರ್ಥರಾಜಪುರವೆಂದು ಪರಿಗಣಿತವಾಗಿದೆ. ಸಂಬಂಧಿಯೊಬ್ಬರು ಇಲ್ಲಿನ ರಥಬೀದಿಯಲ್ಲಿ ೫-೬ ವರ್ಷಗಳ ಕಾಲ ವಾಸವಿದ್ದರೂ ಒಮ್ಮೆಯೂ ಜಾತ್ರೆಗೆ ನನಗೆ ಹೋಗಲಾಗಲಿಲ್ಲ. ಅವರು ವಾಸವಿದ್ದ ಮನೆ ಬಹಳ ವಿಶಾಲವಾಗಿತ್ತು. ಮನೆಯ ಕೆಲವು ಭಾಗಗಳಲ್ಲಿ ನಾಗಸರ್ಪಗಳು ಆಗಾಗ ಬರುತ್ತಿದ್ದರೂ ಯಾರಿಗೂ ಕಚ್ಚಿದ ದಾಖಲೆಯಿಲ್ಲ! ತಂಪಾದ ಸಮಶೀತೋಷ್ಣ ಹವಾಮಾನ ಎಲ್ಲರನ್ನೂ ತೀರ್ಥಹಳ್ಳಿಗೆ ಸೆಳೆಯುತ್ತದೆ. ದಿ| ಕುವೆಂಪು ಅವರು ಇದೇ ತಾಲೂಕಿನ ಕುಪ್ಪಳಿಯಲ್ಲಿ ಜನಿಸಿದ್ದರು.


ತೀರ್ಥಹಳ್ಳಿಯವರು ಸಜ್ಜನರು; ಪರಶುರಾಮನ ಭಕ್ತರಾದರೂ ಆತನಂತೇ ಮುಂಗೋಪಿಗಳಲ್ಲ. ಇಲ್ಲಿನವರೆಗೆ ಎಲ್ಲೂ ಅಂತಹ ಧನದಾಹೀ ಪ್ರವೃತ್ತಿ ಕಂಡುಬರಲಿಲ್ಲ. ಮನೆಗಳೂ ಶತಮಾನಗಳಷ್ಟು ಹಳೆಯವು. ಜಾಗ ವಿಶಾಲ ವಿಶಾಲ. ಜನರ ಮನಸ್ಸೂ ಕೂಡ ಜಾಗದಂತೇ ವಿಶಾಲ. ಸುತ್ತಲಿನ ಹಳ್ಳಿಗಳಿಂದ ಖರೀದಿಗಾಗಿ ಬರುವ ರೈತಾಪಿ ಜನರಿಗೆ ಮಾರುಕಟ್ಟೆಯಲ್ಲಿ ನಿಂತು ಸಾಮಾನು ಒದಗಿಸುವವರು ಬಹುಸಂಖ್ಯಾಕರು ಮೂಲ ಕರಾವಳಿಯವರೇ! ಇದು ಪರಶುರಾಮನಿಗೂ ಕರಾವಳಿಗೂ ಇದ್ದ ಸಂಬಂಧದಿಂದ ಉಂಟಾದ ಪರಿಣಾಮವೇ? ಗೊತ್ತಿಲ್ಲ. ಬೇಸಿಗೆಯಲ್ಲಿ ತಂಗಾಳಿಯಲ್ಲಿ ತುಂಗಾತಟದಲ್ಲಿ ವಿಹರಿಸುತ್ತಾ ಪರಶುರಾಮ ಕೊಂಡಕ್ಕೆ ಭೇಟಿನೀಡುವುದೇ ಸಂತಸ. ಮಳೆಗಾಲದಲ್ಲಿ ನದಿ ನೀರಿನ ಸೆಳವಿನಿಂದ ಕೂಡಿರುವುದರಿಂದ ತೀರ್ಥಕ್ಕೆ ಹೋಗಲಾಗುವುದಿಲ್ಲ. ಆಗ ದಡದಿಂದಲೇ ಮಳೆನಿಂತಾಗ ದೂರದಿಂದ ಶಿಲೆಯ ಮಂಟಪವನ್ನು ಕಾಣುವುದರಲ್ಲೇ ತೃಪ್ತಿಪಡಬೇಕು. ಮನೆಗಳ ಹಾಗೆ ರಸ್ತೆಗಳು ವಿಶಾಲವಾಗಿಲ್ಲ. ಊರಕಡೆಯ ಹಳೆಯತಲೆಮಾರಿನ ರಸ್ತೆಗಳಂತೇ ತುಸು ಇಕ್ಕಟ್ಟಿಕ್ಕಟ್ಟೇ. ತೀರ್ಥಹಳ್ಳಿಯ ಇನ್ನೊಂದು ವಿಶೇಷವೆಂದರೆ ತುಂಗಾನದಿಗೆ ವಿಶ್ವೇಶ್ವರಯ್ಯನವರು ನಿರ್ಮಿಸಿದ್ದ ಕಮಾನುಳ್ಳ ಸೇತುವೆ! ಸೇತುವೆ ಇನ್ನೂ ಗಟ್ಟಿಮುಟ್ಟಾಗಿದ್ದು ವಾಹನಸಂಚಾರ ಈಗ ಇನ್ನೂ ಜಾಸ್ತಿಯಾಗಿದೆ! ಇಂದು ನಡೆಯುವ ಸರಕಾರೀ ಕೆಲಸಗಳಿಗೆ ಸವಾಲಾಗಿ ನಿಂತು ತನ್ನ ಗಟ್ಟಿತನವನ್ನು ಎತ್ತಿತೋರುತ್ತದೆ. ನದೀ ಪಾತ್ರದಲ್ಲಿರುವ ಕಲ್ಲುಗಳಲ್ಲಿ ನೀರಿನ ಸೆಳವಿನಿಂದಾದ ಪ್ರಕೃತಿ ನಿರ್ಮಿತ ಆಕೃತಿಗಳು ಗಮನಸೆಳೆಯುತ್ತವೆ. ಬೇಸಿಗೆಯ ದಿನಗಳಲ್ಲಿ ನೀವು ಹೋದರೆ ತೀರ್ಥಹಳ್ಳಿಯನ್ನು ಮರೆಯುವುದೇ ಇಲ್ಲ;  ಯಾಕೆಂದರೆ ಪರಶುರಾಮ, ತೀರ್ಥರಾಮೇಶ್ವರ, ಫಣಿಯಮ್ಮ, ಎಳ್ಳಮವಾಸ್ಯೆ ಜಾತ್ರೆ ನಿಮ್ಮ ಸುತ್ತ ಗಿರಕಿ ಹೊಡೆಯುತ್ತವಲ್ಲಾ! ಅಂದಹಾಗೆ ತೀರ್ಥಹಳ್ಳಿಯ ರಸ್ತೆ ನಿಮಗೆಲ್ಲಾ ಗೊತ್ತೇ ಇದೆಯಲ್ಲಾ ...ಅದಕ್ಕೇ ಅದರ ಬಗ್ಗೆ ಜಾಸ್ತಿ ಕೊರೆಯಲು ಮುಂದಾಗಲಿಲ್ಲ !!      

Monday, May 21, 2012

ಮೇದಿನಿ ಎಂಬ ಪರ್ವತದ ಸುತ್ತ ಮತ್ತೊಂದು ಸುತ್ತು

ಮೇದಿನಿ ಎಂಬ ಪರ್ವತದ ಸುತ್ತ ಮತ್ತೊಂದು ಸುತ್ತು
ಚಿತ್ರಋಣ: ಅಂತರ್ಜಾಲ

ಮೇದಿನಿಪ ಬಾರೆನುತ ತನ್ನಯ
ಜೋಡುಕರಗಳ ಮುಗಿದನಾಕ್ಷಣ

....ಎಂದು ಕೆಲವು ಯಕ್ಷಗಾನ ಪ್ರಸಂಗಗಳಲ್ಲಿ ಹಾಡುಗಳು ಕಾಣಸಿಗುತ್ತವೆ. ಮೇದಿನಿಯಲ್ಲೂ ಒಬ್ಬ ಮೇದಿನಿಪನಿದ್ದ. ಈಗ ಅದು ಗತ ವೈಭವದ ಇತಿ-ಹಾಸ! ಮೇದಿನಿಯ ಮಾರ್ಗ, ಅಲ್ಲಿನ ಚಾರಣದ ಕುರಿತು ಅನೇಕರು ಫೇಸ್ ಬುಕ್ ನಲ್ಲೂ ಕೂಡ ವಿವರ ಕೇಳಿದ್ದೀರಿ. ತಕ್ಕಮಟ್ಟಿಗೆ ನಿಮಗೆ ಉತ್ತರಿಸುವ ಪ್ರಯತ್ನದಲ್ಲಿ ಲೇಖನವನ್ನೇ ವಿಸ್ತರಿಸದರೆ ಒಳ್ಳೆಯದು ಎನಿಸಿತು, ಹಾಗೆ ಮಾಡುತ್ತಿದ್ದೇನೆ:  

ಉತ್ತರಕನ್ನಡದ ಕುಮಟಾ ಮತ್ತು ಸಿದ್ಧಾಪುರ ತಾಲೂಕುಗಳ ಗಡಿಭಾಗದಲ್ಲಿ ಬರುತ್ತದೆ ಈ ಮೇದಿನಿ ಪರ್ವತ. ಕುಮಟಾದಿಂದ ಸಿದ್ಧಾಪುರಕ್ಕೆ ಹೋಗುವ ಮಾರ್ಗದಲ್ಲಿ ಬಡಾಳ ಎಂಬುದೊಂದು ಗ್ರಾಮ ಸಿಗುತ್ತದೆ. ಬಡಾಳವನ್ನು ದಾಟಿ ಹಾಗೇ ಮುಂದೆ ಸಾಗುವಾಗ ಮೂಡ್ನಳ್ಳಿ ಎಂಬುದೊಂದು ಚಿಕ್ಕ ಪ್ರದೇಶ ಕಾಣಿಸುತ್ತದೆ. ಸರಿಯಾಗಿ ಗ್ರಹಿಸದೇ ಇದ್ದರೆ ತಪ್ಪಿಹೋಗುವ ಸಂಭವವಿದೆ. ಮೂಡ್ನಳ್ಳಿಯಲ್ಲಿ ಬಲಕ್ಕೆ ತಿರುಗಿ ಮೂರು ಕಿ.ಮೀ ವರೆಗೆ ಜೀಪು/ಕಾರುಗಳನ್ನು [ನಾವೇ ತೆಗೆದುಕೊಂಡುಹೋದ] ಮುನ್ನಡೆಸಬಹುದು. ಅಲ್ಲಿಂದ ಮುಂದಕ್ಕೆ ಬೆಟ್ಟದ ಹಾದಿ. ಅಜಮಾಸು ೮ ಕಿ.ಮೀ. ಚಾರಣವೇ ಗತಿ. [ಸಿದ್ಧಾಪುರದಿಂದ ಕುಮಟಾಕ್ಕೆ ಬರುವಾಗ ಮೂಡ್ನಳ್ಳಿಯಲ್ಲಿ ಎಡಕ್ಕೆ ತಿರುಗಬೇಕು ಎಂಬುದನ್ನು ಗಮನಿಸಬೇಕು.] ಸುಂದರ ಕಾನನದ ಹಸಿರಿನ ನಡುವೆ ಸಾಗುವ ಕಾಲುಹಾದಿಯಲ್ಲಿ ಚಾರಣ ನಡೆಸುವುದೇ ತೃಪ್ತಿಕರ. ಯಾವುದೇ ಹೋಟೆಲ್ ಅಥವಾ ಪ್ರವಾಸೀ ಸೌಲಭ್ಯಗಳು ಲಭ್ಯವಿಲ್ಲ, ಎಲ್ಲವನ್ನೂ ಖುದ್ದಾಗಿ ವ್ಯವಸ್ಥೆ ಮಾಡಿಕೊಂಡೇ ಸಾಗಬೇಕು. ತಂಬು, ಗುಡಾರಗಳಿದ್ದರೆ ಬೆಟ್ಟದ ತಲೆಯಮೇರ್ಲೆ ಕಾಣುವ ಕಾನುದೀವರ ಮನೆಗಳ ಸಾಲಿನಲ್ಲಿ ವಸತಿಹೂಡಿಕೊಳ್ಳಬಹುದು. ಫೋಟೋಗ್ರಫಿಗೆ ಹೇಳಿಮಾಡಿಸಿದ ರಮ್ಯ ತಾಣ! ಪ್ಲಾಸ್ಟಿಕ್ ಬಾಟಲಿಗಳು, ಕ್ಯಾರೀ ಬ್ಯಾಗಗಳನ್ನು ಆದಷ್ಟೂ ಬಳಸದಿರುವುದು ಪ್ರಕೃತಿಗೂ, ನಮಗೂ ಕ್ಷೇಮ. ಅನಿವಾರ್ಯವಾಗಿ ಬಳಸಿದ ಪಕ್ಷದಲ್ಲಿ ಅವುಗಳನ್ನು ಮರಳಿ ತರಬೇಕೇ ಹೊರತು ಅಲ್ಲಿ ಎಸೆಯಬಾರದು.

ಮೇದಿನಿಯ ತಲೆಭಾಗದಲ್ಲಿ ಇರುವ ಹೊಲಮನೆಗಳಲ್ಲಿರುವ ಕಾನುದೀವರು ಅಪ್ಪಟ ಸಂಪ್ರದಾಯವಾದಿಗಳು. ಅಲ್ಲಿ ಇನ್ನೂ ಒನಕೆಯನ್ನು ಬಳಸಿ ಭತ್ತಕುಟ್ಟಿ ಅಕ್ಕಿ ತಯಾರಿಸಲಾಗುತ್ತದೆ! ನೈಸರ್ಗಿಕವಾಗಿ ಬೆಳೆದ ಭತ್ತವನ್ನು ಒನಕೆಯಿಂದ ಕುಟ್ಟಿ ತಯಾರಿಸಿದ ಸಣ್ಣಕ್ಕಿ ಪರಿಮಳಭರಿತ ಮತ್ತು ಆರೋಗ್ಯಕ್ಕೆ ಉತ್ತಮ. ಆದರೆ ಅಕ್ಕಿ ಎಲ್ಲರಿಗೂ ಲಭ್ಯವಾಗುವುದಿಲ್ಲ ಯಾಕೆಂದರೆ ಬೆಳೆಯುವ ಪ್ರಮಾಣ ಬಹಳ ಕಮ್ಮಿ. ಕಾನುದೀವರು ತಮ್ಮ ಸ್ವಂತದ ಉಪಯೋಗಕ್ಕೆ ಬೆಳೆದುಕೊಳ್ಳುವ ಬೆಳೆ ಅದಾಗಿದೆ. ಮೇದಿನಿಯಲ್ಲಿ ಅಲ್ಲಲ್ಲಿ ನೈಸರ್ಗಿಕವಾಗಿ ಬೆಳೆಯುವ ಕಾಡು ಹಣ್ಣುಗಳು ಕಾಣಸಿಗುತ್ತವೆ. ಕಾನುದೀವರಲ್ಲಿ ಯಾರನ್ನಾದರೂ ಪರಿಚಯಿಸಿಕೊಂಡು ಮಾಹಿತಿ ಪಡೆದರೆ ಅಲ್ಲಿನ ಚಾರಣಕ್ಕೆ ಹೊಸ ಆಯಾಮ ಸಿಗುತ್ತದೆ; ಗೊತ್ತಿಲ್ಲದ ಹಲವು ಸಂಗ್ತಿಗಳನ್ನು ತಿಳಿದುಕೊಳ್ಳಬಹುದು, ನಾಟಿವೈದ್ಯದ ಆಯುರ್ವೇದೀಯ ಔಷಧ ಮೂಲಿಕೆಗಳ ಬಗ್ಗೆ ತಿಳಿದುಕೊಳ್ಳಬಹುದು, ಗಿಡ-ಮರಗಳ ಬಗ್ಗೆ ಮಾಹಿತಿ ಸಂಗ್ರಹಿಸಬಹುದು, ಕಾಡುಪ್ರಾಣಿಗಳ ಬಗ್ಗೆ ತಿಳಿಯಬಹುದು.

ಗಮ್ಯಸ್ಥಾನಗಳು ಎಲ್ಲರಿಗೂ ಅರಿವಲ್ಲ, ಮೇದಿನಿಗೆ ಹೋಗಬೇಕೇನೋ ಸರಿ, ಅಲ್ಲಿಗೆ ಹೋದಾಗ ಅಲ್ಲಿನ ಜನ ಹೇಳುವುದು ’ಕಂಚಿನಬಾಗಿಲ’ ಕೋಟೆ. ಎಷ್ಟೋ ಶತಮಾನಗಳ ಹಿಂದೆ ಯಾವುದೋ ಅರಸ ರಾಜ್ಯಭಾರ ನಡೆಸಿದ ಪ್ರದೇಶ ಮೇದಿನಿ! ಇಂದಿಗೂ ಕೋಟೆ ಬುರುಜುಗಳು, ಕೋಟೆಯ ಹಲವು ಅವಶೇಷಗಳು, ತೊರೆಗಳು, ಚಿಕ್ಕಪುಟ್ಟ ಸರೋವರಗಳು ಇವೇ ಮೊದಲಾಗಿ ಹಲವನ್ನು ವೀಕ್ಷಿಸಬಹುದಾಗಿದೆ. ಒಂದೇ ದಿನದಲ್ಲಿ ಬೆಳಿಗ್ಗೆ ತೆರಳಿ ಸಂಜೆ ಹಿಂದಿರುಗುವುದಾದರೆ ಮೇದಿನಿಯನ್ನು ಇಡಿಯಾಗಿ ನೋಡಿದ ಅನುಭವ ನಮ್ಮದಾಗುವುದಿಲ್ಲ. ಕೊನೇಪಕ್ಷ ಒಂದು ರಾತ್ರಿಯನ್ನು ಅಲ್ಲಿ ಕಳೆದರೆ ಪ್ರಕೃತಿಯ ರಮಣೀಯತೆ ಮತ್ತು ರಾತ್ರಿಯ ಸಂತಸ ಎರಡೂ ಸಿಗುವುದರಿಂದ ಹಾಗೆ ಮಾಡುವುದು ಉತ್ತಮ. ಸಿದ್ಧ ಆಹಾರವನ್ನು ಕೊಂಡೊಯ್ದುಕೊಳ್ಳಬಹುದು, ಸಾಮಗ್ರಿಗಳಿದ್ದರೆ, ಗ್ರಾಮೀಣ ಅಡುಗೆಯ ಅನುಭವ ಇದ್ದವರು ಜೊತೆಗಿದ್ದರೆ ಒಲೆಹಾಕಿಕೊಂಡು ಅಡುಗೆ ಮಾಡಿಕೊಳ್ಳಬಹುದು. 

ಮೇದಿನಿಯ ಜನರಿಗೆ ಹಲವು ಔಷಧಿಗಳ ಪರಿಚಯವಿದೆ. ಕಾನನದ ನಡುವಿನ ಗದ್ದೆಮನೆಗಳಲ್ಲಿ ಯಾರಿಗಾದರೂ ಕಾಯಿಲೆಯಾದರೆ ಬಹುದೂರ ಸಾಗಬೇಕಾಗಿ ಬರುವುದರಿಂದ ಗಿಡಮೂಲಿಕೆಗಳಿಂದ ದೊರೆಯಬಹುದಾದ ಪರಿಹಾರವನ್ನು ಅಲ್ಲಿನ ಜನ ಸಹಜವಾಗಿ ಅರಿತಿದ್ದಾರೆ. ವಂಶಪಾರಂಪರ್ಯವಾಗಿ ಅದು ಹಾಗೇ ಮುಂದುವರಿದಿದೆ. ಇವತ್ತಿಗೂ ದೊಡ್ಡಮಟ್ಟದ ಕಾಯಿಲೆಯೇನಾದರೂ ಕಾಣಿಸಿಕೊಂಡರೆ, ರೋಗಿಯನ್ನು ಕಂಬಳಿಮೂಟೆಯಲ್ಲಿ ಹೊತ್ತುಕೊಂಡು ೧೧ ಕಿ.ಮೀ. ಕ್ರಮಿಸಿ ನಂತರ ಮೂಡ್ನಳ್ಳಿಯಲ್ಲಿ ಸಿಗಬಹುದಾದ ವಾಹನವನ್ನು ಹಿಡಿದು ಕುಮಟಾಕ್ಕೋ ಸಿದ್ಧಾಪುರಕ್ಕೋ ಹೋಗಬೇಕಾಗುತ್ತದೆ. ನಮ್ಮ ಹಳ್ಳಿಗಳಲ್ಲಿ ಅನೇಕ ಕುಗ್ರಾಮಗಳಲ್ಲಿ ರಸ್ತೆಸೌಕರ್ಯವಿರದ ಹಿಂದಿನ ಕಾಲದಲ್ಲಿ ಕಂಬಳಿಮೂಟೆಯಲ್ಲಿ ರೋಗಿಯನ್ನು ಹೊತ್ತೊಯ್ಯುವುದು ರೂಢಿಗತವಾಗಿತ್ತು. ಒನಕೆ ಭತ್ತ ಕುಟ್ಟುವುದರ ಜೊತೆಗೆ ಕಂಬಳಿಮೂಟೆಯನ್ನು ಮಾಡಲೂ ಉಪಯೋಗಕ್ಕೆ ಬರುತ್ತದೆ. ಕಂಬಳಿಯನ್ನು ಉದ್ದವಾಗಿ ಹಾಸಿ ಅದರಲ್ಲಿ ರೋಗಿಯನ್ನು ಅಂಗಾತ ಮಲಗಿಸಿ, ಕಂಬಳಿಯ ಮೇಲ್ಭಾಗ ಮತ್ತು ಕೆಳಭಾಗವನ್ನು ಗಂಟುಕಟ್ಟಿ ಎರಡೂ ಗಂಟುಗಳಮೂಲಕ ಒನಕೆಯನ್ನು ತೂರಿಸಿ ಆ ಒನಕೆಯನ್ನು ಹಿಂದೊಬ್ಬ ಮತ್ತು ಮುಂದೊಬ್ಬ ಸೇರಿ ಹೊರುವುದು ವಾಡಿಕೆಯಾಗಿತ್ತು. ಅದು ಈಗಲೂ ಅಲ್ಲಿ ಜಾರಿಯಲ್ಲಿದೆ ಎಂದು ಕೇಳಿದ್ದೇನೆ.

ಕಾನುದೀವರ ಕಾರ್ಯಕ್ರಮಗಳು ಬಲು ವಿಶಿಷ್ಟ ಮತ್ತು ಅತ್ಯಂತ ಗ್ರಾಮೀಣ ಸೊಗಡಿನವಾಗಿವೆ. ಹಲವು ಬುಡಕಟ್ಟು ಜನಾಂಗಗಳಲ್ಲಿರುವಂತೇ ಪ್ರತಿಯೊಂದೂ ಕಾರ್ಯವೂ ಅವರದ್ದೇ ಆದ ಜಾನಪದ ಶೈಲಿಯ ಹಾಡುಗಳ ಮಿಳಿತದೊಂದಿಗೆ ನಡೆಯುತ್ತದೆ. ನನ್ನ ಬಂಧು ಸ್ವತಃ ನೋಡಿರುವಂತೇ, ಅಲ್ಲಿನ ಒಬ್ಬರ ಮನೆಯಲ್ಲಿ ಏನೋ ವಿಶೇಷವಿತ್ತು. ಕಾಡಮಧ್ಯದ ಈ ಜನರಿಗೆ ದೂರದ ಸಿದ್ಧಾಪುರದೆಡೆ ಅಲ್ಲೆಲ್ಲೋ ನೆಂಟರೂ ಇದ್ದಾರಂತೆ! ಕಾರ್ಯಕ್ರಮಕ್ಕೆ ಮೂರ್ನಾಕು ದಿನ ಮುಂಚೆಯೇ ನೆಂಟರು ಒಬ್ಬೊಬ್ಬರಾಗಿ ಕಾಲ್ನಡಿಗೆಯಲ್ಲಿ ನಡೆದು ಬಂದು ಸೇರಿಕೊಳ್ಳುತ್ತಿದ್ದರಂತೆ. ಹಿಂದೆ ಗ್ರಾಮೀಣಭಾಗದಲ್ಲಿ ನಡೆಯುತ್ತಿದ್ದಂತೇ ಕಾರ್ಯಕ್ರಮ ಎಂದರೆ ವಾರಗಟ್ಟಲೆಯ ಸಡಗರ. ಅಲ್ಲಿ ಹಾಡು-ಹಸೆ ಅವರದ್ದೇ ಆದ ಕುಣಿತ, ಪೂಜೆ-ಪುನಸ್ಕಾರ, ಅಹಾರವೈವಿಧ್ಯ ಇವೆಲ್ಲಾ ಇದ್ದೇ ಇರುತ್ತವೆ. ಕಾರ್ಯಮುಗಿದ ನಂತರವೂ ಕೂಡ ಉಳಿದುಕೊಂಡ ನೆಂಟರು ಒಬ್ಬೊಬ್ಬರೋ ಇಬ್ಬಿಬ್ಬರೋ ಕಾಲ್ನಡಿಗೆಯಲ್ಲಿ ಸಾಗಿ ತಮ್ಮ ಊರಿಗೆ ಮರಳುತ್ತಾರಂತೆ. ಇಂತಹ ಕಾರ್ಯಗಳು ನಮಗೆ ಬೇಕೆಂದಾಗಲೆಲ್ಲಾ ಏರ್ಪಡುವುದಿಲ್ಲ, ಅವು ಅಲ್ಲಿನ ಅವರ ಜೀವನದ ಭಾಗಗಳಲ್ಲವೇ? ಆದರೆ ಮೇದಿನಿಗೆ ಹೋದಾಗ ಪ್ರೀತಿಯಿಂದ ಅವರನ್ನು ಮಾತನಾಡಿಸಿ, ವಿನಂತಿಸಿದರೆ ಅವರಲ್ಲಿನ ಹಾಡುಗಳಲ್ಲಿ ಒಂದಷ್ಟನ್ನು ಕೇಳಬಹುದಾಗಿದೆ, ಅವರುಗಳಿಗೆ ಬಿಡುವಿದ್ದರೆ ಕುಣಿತವನ್ನೂ ಕುಣಿಸಿ ಕಾಣಬಹುದಾಗಿದೆ. 

ಹಲವು ಮಜಲುಗಳಲ್ಲಿ ತನ್ನನ್ನು ತೆರೆದುಕೊಳ್ಳುವ ಮೇದಿನಿ ಚಾರಣಪ್ರಿಯರಿಗೆ ಹೇಳಿಮಾಡಿಸಿದ ಹಲವು ಸ್ಥಳಗಳಲ್ಲಿ ಒಂದು. ಅಲ್ಲಿಗೆ ಹೋದಾಗ ನಮ್ಮೆಲ್ಲಾ ಲೌಕಿಕ ಜಂಜಡಗಳು, ಆಮಿಷದ ಮೊಬೈಲ್ ಕರೆಗಳು, ಬೇಗುದಿಗಳು, ಕಚೇರಿಗೆ ಓಡುವ ಧಾವಂತದ ಬದುಕಿನ ನಿತ್ಯಸತ್ಯಗಳು ತುಸುಕಾಲ ಇಲ್ಲವಾಗುತ್ತವೆ; ಸ್ನಾನಮಾಡಿದ ಮೈ ಶುಚಿಗೊಂಡು ಆಹ್ಲಾದಕರ ಅನುಭವವಾಗುವಂತೇ ನಿಸರ್ಗಸ್ನಾನವನ್ನು ಅನುಭವಿಸಿದ ಮನಸ್ಸು ಪುಳಕಿತಗೊಳ್ಳುತ್ತದೆ. ಬಹಳದಿನಗಳಿಂದ ಬಳಸದೇ ಬಿಟ್ಟಿದ್ದ ಮೊಬೈಲ್ ಬ್ಯಾಟರಿ ಚಾರ್ಜ್ ಆಗುತ್ತದೆ! ಗಿಳಿ-ಗೊರವಂಕ, ನವಿಲು, ಕೆಂಬೂತ ಮುಂತಾದ ಹಲವು ಹಕ್ಕಿಗಳ ಕೂಗು ಕಿವಿನಿಮಿರಿಸುತ್ತದೆ. ಸರ್ರನೆ ಸರಿದುಹೋಗುವ ಯಾವುದೋ ಸರೀಸೃಪವನ್ನು ಹುಡುಕುವ ಮನವುಂಟಾಗುತ್ತದೆ. ಸಾಧ್ಯವಾದರೆ ಒಮ್ಮೆ ಹೋಗಿಬನ್ನಿ, ನಿಸರ್ಗ ಸಹಜಸ್ಥಿತಿಯನ್ನು ಕಲುಷಿತಗೊಳ್ಳದಂತೇ ನೋಡಿಕೊಂಡು ಒಂದಷ್ಟು ಸಮಯ ಹಾಯಾಗಿ ಕುಳಿತು, ನಡೆದಾಡಿ, ಕುಣಿದು-ಕುಪ್ಪಳಿಸಿ ವಿಹರಿಸಿ ಬನ್ನಿ, ಆಗದೇ?

------

ಓದುಗರಲ್ಲಿ ಒಂದು ವಿಜ್ಞಾಪನೆ: ಉದ್ದಿಮೆ ಮೀಡಿಯಾ ನೆಟವರ್ಕ್ ನಮ್ಮ ಹೊಸ ಉದ್ಯಮ. ಪ್ರೊಫೆಶನಲ್ಸ್, ಕಲಾವಿದರು, ವಿವಿಧ ಉದ್ದಿಮೆದಾರರು, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸು ಮನಸ್ಸಿದ್ದು ಬಹುಸಂಖ್ಯಾಕ ಜನರಿಗೆ ತಮ್ಮ ಬಗ್ಗೆ ಮಾಹಿತಿ ನೀಡಬಯಸುವ ಜನರಿಗೆ ಉದ್ದಿಮೆ ಮಾರ್ಗ ಕಲ್ಪಿಸುತ್ತದೆ. ಲ್ಲೋ ಪೇಜಸ್, ಪ್ರಿಂಟ್ ಆಡ್ಸ್, ಮಲ್ಟಿಮೀಡಿಯಾ ಆಡ್ಸ್, ಆನ್ ಲೈನ್ ಆಡ್ಸ್, ಪಬ್ಲಿಕ್ ರಿಲೇಶನ್ಸ್ ಮತ್ತು ಮಾನವ ಸಂಪನ್ಮೂಲ ಕುರಿತಾದ ಸಲಹೆಗಳನ್ನು-ಸೇವೆಗಳನ್ನು ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದಾಗಿದೆ. ಮುಂಬರುವ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಲ್ಲೋಪೇಜಸ್ ಪ್ರಕಟಗೊಳ್ಳುತ್ತದೆ-ಜಾಹೀರಾತು ಬುಕಿಂಗ್ ಆರಂಭಗೊಂಡಿದೆ. ’ಉದ್ದಿಮೆ’ ಬಳಗದ ಲೇಖನಗಳನ್ನು ಸದ್ಯ   http://uddime.blogspot.in            ನಲ್ಲಿ ಓದಬಹುದಾಗಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲು   uddime@gmail.com    ಮಿಂಚಂಚೆ ಕಳಿಸಿ ಸಂಪರ್ಕಿಸಲು ಕೋರುತ್ತೇನೆ, ಧನ್ಯವಾದಗಳು.

Wednesday, May 16, 2012

ಮೇದಿನಿ ಎಂಬ ಪರ್ವತದ ಸುತ್ತ


ಚಿತ್ರಋಣ: ಅಂತರ್ಜಾಲ
ಮೇದಿನಿ ಎಂಬ ಪರ್ವತದ ಸುತ್ತ

ಕಾಡುಗಳೆಂದರೆ ನನಗೆ ಜೀವ. ಕಾಡುಗಳಲ್ಲಿನ ನಡೆ, ವಿಹಾರ, ಅಲ್ಲಿನ ಜೀವಿಗಳ ಜೀವನದ ರೀತಿಯ ಅವಲೋಕನ, ಹಸಿರು ಸಸ್ಯಶಾಮಲೆಯ ಸಮೃದ್ಧ ನೋಟ ಇವೆಲ್ಲಾ ನನಗಿಷ್ಟ; ನನಗೊಂದೇ ಏಕೆ ಮಾನವರಿಗೇ ಇಷ್ಟ! ಅದು ಮಾನವ ಸಹಜ ಬಯಕೆ. ಎಂತಹ ಸಮಸ್ಯೆಗಳಲ್ಲೂ ಮನೆಯಲ್ಲಿನ ಚಿಕ್ಕ ಮಕ್ಕಳು ಇಷ್ಟವಾಗುವ ಹಾಗೇ ಎಂಥಾ ಕಷ್ಟದ ಸನ್ನಿವೇಶವಿದ್ದರೂ ಒಂದು ಸುತ್ತು ಹಸಿರಿನ ನಡುವೆ ತೆರಳಿ ಮರಳಿದರೆ ಪ್ರಕೃತಿಮಾತೆಯ ಹಸ್ತ ನಮಗೆ ಸಾಂತ್ವನ ನೀಡುತ್ತದೆ; ಕಾಡುಗಳ್ಳರಿಗೆ ಹಾಗೆ ಅನಿಸದೇ ಇರಬಹುದು, ಆದರೆ ಆ ಸಂಖ್ಯೆ ಕಮ್ಮಿ ಅಲ್ಲವೇ?

ಸ್ನೇಹಿತರೊಬ್ಬರು ಬಿಸಿಲೆ ಘಾಟಿಯ ಬಗ್ಗೆ ಬರೆದಿದ್ದರು, ಇನ್ನೊಬ್ಬರು ಮೇಘಾನೆಯ ಬಗ್ಗೆ ಬರೆದಿದ್ದರು, ಆಗೆಲ್ಲಾ ನನಗೆ ನೆನಪಿಗೆ ಬಂದಿದ್ದು ಈ ’ಮೇದಿನಿ’. ಸ್ಥೂಲವಾಗಿ ಇಡೀ ಈ ಇಳೆಯನ್ನೇ ಮೇದಿನಿ ಎನ್ನುತ್ತಾರೆ. ಆದರೆ ನಾನು ಹೇಳಹೊರಟಿದ್ದು ಮೇದಿನಿಯೊಳಗಣ ಇನ್ನೊಂದು ಮೇದಿನಿಯ ಬಗ್ಗೆ. ಈ ಮೇದಿನಿ ಉತ್ತರಕನ್ನಡದ ಕುಮಟಾ ಮತ್ತು ಸಿದ್ಧಾಪುರ ತಾಲೂಕುಗಳ ನಡುವಣ ಅಡವಿಯಲ್ಲಿನ ಅತ್ಯಂತ ಎತ್ತರದ ಒಂದು ಪರ್ವತ. ಕರ್ನಾಟಕದ ಕಾಶ್ಮೀರ ಎಂದರೆ ಕೊಡಗು ಎಂಬುದನ್ನು ಬಹುತೇಕರು ಒಪ್ಪುವುದಾದರೂ ಹಸಿರು ಕಾನನವನ್ನು ದಟ್ಟವಾಗಿ ಹೊಂದಿದ್ದ ಉತ್ತರಕನ್ನಡಕೂಡ ಈ ವಿಷಯದಲ್ಲಿ ಕಮ್ಮಿಯೇನಿಲ್ಲ. ಉತ್ತರಕನ್ನಡದ ಹಲವು ರಮಣೀಯ ಪರ್ವತಗಳ ರಾಶಿಯಲ್ಲೇ ರಮ್ಯವೂ ರೋಚಕವೂ ಆಗಿರುವುದು ಈ ಮೇದಿನಿ. ನಾನು ಕಣ್ಣಾರೆ ಕಂಡಿಲ್ಲ; ಹತ್ತಿರದ ಬಂಧುವೊಬ್ಬರು ಅರಣ್ಯ ಇಲಾಖೆಯ ಪ್ರಮುಖ ಹುದ್ದೆಯಲ್ಲಿದ್ದು ಎಲ್ಲೆಡೆಗೂ ಹೋಗಿಬಂದಿದ್ದಾರೆ. ಕರ್ನಾಟಕದಲ್ಲಿ ಅವರು ನೋಡದ ಅರಣ್ಯಗಳಿಲ್ಲ. ತಾನು ನೋಡಿದ ಅರಣ್ಯಗಳ ಪೈಕಿ ಅವರು ಬಹಳವಾಗಿ ಮೆಚ್ಚಿದ್ದು ಮೇದಿನಿ.

ಸ್ವಭಾವತಃ ಅವರು ನಿಸರ್ಗ ಪ್ರಿಯರು. ಸರಕಾರದ/ಸಮಾಜದ ಉಪ್ಪನ್ನ ಉಂಡ ಕೈಲಿ ಎಂದೂ ಪೈಸೆ ಲಂಚವನ್ನೂ ಸ್ವೀಕರಿಸದ ನಿಸ್ಪೃಹರು. ಲಂಚ ಪಡೆದೂ ಗೊತ್ತಿಲ್ಲ; ತೆತ್ತೂ ಗೊತ್ತಿಲ್ಲ. ಎತ್ತಂಗಡಿ ಬಹಳ ಸಲ ಆಗಿದೆ; ಹೋದಲ್ಲೆಲ್ಲಾ ಕಾಡುಗಳರನ್ನು ಹಿಡಿದು ಧೂರ್ತ ರಾಜಕಾರಣಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪ್ರಾಮಾಣಿಕರಿಗೆ ಇಲಾಖೆಗಳಲ್ಲಿ ಸೇವೆಸಲ್ಲಿಸುತ್ತಾ ಕಾಲಹಾಕುವುದು ಬಹಳ ಕಷ್ಟ ಎನ್ನುವುದು ಅವರ ಅನುಭವಜನ್ಯ ಮಾತು. ಅಡವಿಗಾಗಿ ಹಂಬಲಿಸಿ ಅದಕ್ಕಾಗಿಯೇ ಹುಟ್ಟಿದರೇನೋ ಎಂಬಂತಿರುವ ಅವರಿಗೆ ವನ್ಯಜೀವಿಗಳೆಲ್ಲಾ ಮಕ್ಕಳಂತೇ ಭಾಸ! ಆನೆಗಳನ್ನು ಬಹಳವಾಗಿ ಮೆಚ್ಚುವ ಅವರು ಯಾವುದೇ ಜೀವಿಯನ್ನೂ ಕಡೆಗಣಿಸುವುದಿಲ್ಲ. ಎಲ್ಲಾ ಸಸ್ಯ ಪ್ರಭೇದಗಳನ್ನು ಶಾಸ್ತ್ರೋಕ್ತವಾಗಿ ಹೆಸರಿಸಿ ಗುರುತಿಸುವ ಅಗಾಧ ಸಸ್ಯಶಾಸ್ತ್ರೀಯ ಪಾಂಡಿತ್ಯ ಅವರಿಗಿದೆ; ಪ್ರತೀ ಸಸ್ಯದ ಪೂರ್ವಾಪರಗಳನ್ನೂ ವಿವರಿಸಬಲ್ಲರು. ಕುಡುಕರು, ಜೂಜುಕೋರರು, ಕಾಮುಕರು, ಲಂಚಬಡುಕರೇ ತುಂಬಿರುವ ಇಲಾಖೆಯಲ್ಲಿ ಇಂತಹ ಜನ ಅಪರೂಪ; ಇದು ಆತ್ಮರತಿಯಲ್ಲ-ಇರುವ ಹಕೀಕತ್ತು. ಹೆಸರನ್ನು ಹೇಳಲು ಅನುಮತಿಸದ ಈ ವ್ಯಕ್ತಿಯಿಂದ ದೊರೆತ ಅಪರಿಮಿತ ಮಾಹಿತಿ ನನ್ನಲ್ಲಿ ಕಾಡುತ್ತಿರುವ ಕಾಡಿನ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಆಗಾಗ ಅವರೊಡನೆ ಹೋದರೆ ಕಾಡನ್ನಾದರೂ ನೋಡಬಹುದಿತ್ತೇ ಎನಿಸುತ್ತದೆ; ಕಾಲ ಕೂಡಿ ಬರುತ್ತಿಲ್ಲ.

ಕಡಿದಾದ ಮಾರ್ಗದಲ್ಲಿ ಮೇಲಕ್ಕೆ ಮೇಲಕ್ಕೆ ಏರುತ್ತಾ ಹೋದರೆ ಕೊಟ್ಟಕೊನೆಗೆ ಸಪಾಟಾದ ಶಿರೋಭಾಗವನ್ನು ಹೊಂದಿರುವ ಮೇದಿನಿ ಕಾಣಿಸುವುದಂತೆ. ಇಡೀ ಪರ್ವತದ ತುಂಬಾ ಔಷಧೀಯ ಗುಣವುಳ್ಳ ಶತಶತಮಾನಗಳಷ್ಟು ಹಳೆಯ ಮರಗಳು ಇದ್ದಾವಂತೆ. ತೀರಾ ಅಪರೂಪವೆನಿಸುವ ಔಷಧೀಯ ಮೂಲಿಕೆಗಳೂ ಅಲ್ಲಿ ಕಾಣಸಿಗುತ್ತವಂತೆ. ಮೇದಿನಿಯ ಎತ್ತರದ ಶಿರೋಭಾಗದಲ್ಲಿ ’ಕಾನು ದೀವರು’ ಎಂಬ ಜನಾಂಗ ವಾಸಮಾಡುತ್ತದಂತೆ. ಅಲ್ಲಿ ಕೃಷಿಮಾಡಿಕೊಂಡು ತಮ್ಮಪಾಡಿಗೆ ತಾವು ಸರಳಜೀವನವನ್ನು ನಡೆಸುತ್ತಾರಂತೆ ಕಾನು ದೀವರು. ಅಲ್ಲಿ ಅವರು ನೈಸರ್ಗಿಕ ಗೊಬ್ಬರ ಬಳಸಿ ಭಾರತೀಯ ಮೂಲದ ಹಳೆಯತಳಿಯಾದ ಮೇದಿನಿ ಸಣ್ಣಕ್ಕಿಯನ್ನು ಬೆಳೆಯುತ್ತಾರಂತೆ. ನಮ್ಮಲ್ಲಿ ಈಗ ನಾವು ಬಾಸುಮತಿ ಎಂಬ ಅಕ್ಕಿಯನ್ನು ಕಾಣುತ್ತೇವಲ್ಲ ಆ ರೀತಿಯಲ್ಲೇ ಚಿಕ್ಕ ಮತ್ತು ಪರಿಮಳ ಭರಿತ ಅಕ್ಕಿ ಮೇದಿನಿ ಸಣ್ಣಕ್ಕಿ. ಅನ್ನ ಮಾಡಿದರೆ ಅರ್ಧ ಊರಿಗೇ ಪರಿಮಳ ಹರಡುವ ಮೇದಿನಿ ಸಣ್ಣಕ್ಕಿಯ ಬಗ್ಗೆ ಬಹಳವಾಗಿ ವಿವರಿಸಿದರು. ಇಂದು ಇಂತಹ ಬೀಜ ಸಂಕುಲಗಳು ನಶಿಸುತ್ತಿವೆ; ಕಾಣುವುದೇ ಅಪರೂಪ ಎಂಬುದು ಅವರ ಅಂಬೋಣವಾಗಿದೆ. 

ಸಾಮಾನ್ಯವಾಗಿ ಕಾಡಿನಲ್ಲಿ ವಾಸಿಸುವ ಮಂದಿಗೆ ಊರ ಜನರ ಸಖ್ಯ ಕಮ್ಮಿ. ನಾಗರಿಕ ಪದ್ಧತಿಯಂತೇ ಔಪಚಾರಿಕವಾಗಿ ನಡೆದುಕೊಳ್ಳುವ ರೀತಿರಿವಾಜೂ ಕಮ್ಮಿ. ಕಾಡಿನ ಮಧ್ಯೆ ನೈಸರ್ಗಿಕ ಸರಳ ಸುಂದರ ನಡೆ-ನುಡಿ ಅವರದ್ದು. ಅಂಥಾದ್ದರಲ್ಲೂ ಕಾನು ದೀವರು ತುಂಬ ಸಹೃದಯಿಗಳಂತೆ. ಅರಣ್ಯ ಇಲಾಖೆಯವರಮೇಲೆ ಅವರಿಗೆ ಕೋಪವಾಗಲೀ ಅಗೌರವವಾಗಲೀ ಇಲ್ಲವಂತೆ. ಇಲಾಖೆಯೂ ಕೂಡ ಅವರ ಸಹಜಗತಿಯ ಜೀವನಕ್ಕೆ ಇದುವರೆಗೆ ತೊಂದರೆ ನೀಡಿಲ್ಲ. ಒಂದಷ್ಟು ದನಗಳನ್ನು ಸಾಕಿಕೊಂಡು, ಹಾಲು-ಹೈನ ತಯಾರಿಸಿಕೊಂಡು, ಭತ್ತ ಬೆಳೆದು ಅಕ್ಕಿ-ಅವಲಕ್ಕಿ ಮಾಡಿಕೊಂಡು, ಜೇನುತುಪ್ಪ ಮಿಸರೆತುಪ್ಪ ಇಳಿಸಿಕೊಂಡು, ಕಾಡಿನ ಕೆಲವು ಉತ್ಫನ್ನಗಳನ್ನು ತಮ್ಮ ಸ್ವಂತ ಖರ್ಚಿಗೆ ಬಳಸಿಕೊಂಡು ಬದುಕುತ್ತಿರುವ ಜನ ಅವರು. ಹಲವು ಆದಿವಾಸಿಗಳಂತೇ ಏಂದೋ ಎಲ್ಲಿಂದಲೋ ಅಲ್ಲಿಗೆ ಬಂದುಳಿದ ಕಾನುದೀವರು ಇಂದಿಗೂ ಅಲ್ಲಿದ್ದಾರೆ. ಬೇಟೆಯಾಡುವುದು ತೀರಾ ಕಮ್ಮಿ. ಇತ್ತೀಚೆಗೆ ಅರಣ್ಯ ಇಲಾಖೆ ಸಾಕಷ್ಟು ನಿರ್ಬಂಧ ಹೇರಿರುವುದರಿಂದ ಬೇಟೆಯನ್ನು ಬಿಟ್ಟೇಬಿಟ್ಟಿದ್ದಾರೆ ಎನ್ನಬಹುದು. ಪಟ್ಟಣಗಳ ಕಡೆಗೆ ಅವರು ಬರುವುದು ತೀರಾ ಅಪರೂಪ. ಏಲ್ಲೋ ೫-೬ ತಿಂಗಳಿಗೆ ಒಮ್ಮೆ ಬಂದರೆ ಬಂದರು; ಇಲ್ಲಾಂದ್ರೆ ಇಲ್ಲ. ಪಟ್ಟಣಗಳಿಗೆ ಬರುವುದು ಬಟ್ಟೆಬರೆ, ತಮಗೆ ಸಿಗದ ಬಳಕೆಗೆ ಬೇಕಾದ ಅಗತ್ಯ ವಸ್ತುಗಳು ಇಂಥವುಗಳನ್ನು ಕೊಳ್ಳಲಿಕ್ಕಾಗಿ ಮಾತ್ರ. ತೀರಾ ಜಾಸ್ತಿ ಹಣದ ಬಳಕೆ ಇಲ್ಲ; ಅದು ಅವರಿಗೆ ಅನಿವಾರ್ಯವೂ ಅಲ್ಲ. ಇಂದಿಗೂ ಬಾರ್ಟರ್ ಸಿಸ್ಟಮ್ ರೀತಿಯಲ್ಲೇರ್ ಕೆಲವು ಕಾಡು ಉತ್ಫನ್ನಗಳನ್ನು ಕೊಟ್ಟು ಅದರ ಬದಲಿಗೆ ತಮಗೆ ಬೇಕಾದ ವಸ್ತುಗಳನ್ನು ಖರೀದಿಸುವ ಇರಾದೆ.

ಊರಿದ್ದಲ್ಲಿ ಹೊಲಗೇಡು ಇರುವಂತೇ ಅಲ್ಲಲ್ಲಿ ಗಂಟು[ನಿಧಿ]ಕಳ್ಳರು ಹೊಂಡಗಳನ್ನು ತೋಡಿದ್ದನ್ನು ಕಾಣಬಹುದಂತೆ! ಮೇದಿನಿಯ ಮೈತುಂಬಾ ಅಲ್ಲಲ್ಲಿ ನಿಧಿ ನಿಕ್ಷೇಪಗಳಿವೆ ಎಂಬ ಊಹೆಯನ್ನೇ ಅವಲಂಬಿಸಿ ಮಾಂತ್ರಿಕರೊಂದಿಗೆ ಅಲ್ಲಿಗೆ ಬಂದು ಗಂಟು ಹುಡುಕುವ ಜನವೂ ಇದ್ದಾರಂತೆ. ಆದರೆ ಯಾರಿಗೂ ಏನೂ ಸಿಕ್ಕಿದ್ದಂತೂ ದಾಖಲಾಗಿಲ್ಲ ಎಂಬುದು ಅಲ್ಲಿನ ವಾಸಿಗಳ ಹೇಳಿಕೆ. ಹೋಗಲಿ ಬಿಡಿ ಬಳ್ಳಾರಿಯಂತಹ ಪ್ರದೇಶಗಳಲ್ಲಿ ಹಾಡಹಗಲೇ ಅದಿರು ನಿಧಿಗಳನ್ನು ತೆಗೆದು ಭುವಿಯ ಬಸಿರನ್ನೇ ಬಗೆದುಂಡು ತೇಗಿದ ರಕ್ಕಸ ರಾಜಕಾರಣಿಗಳ ನಡುವೆ ಈ ಸಣ್ಣಪುಟ್ಟ ಗಂಟುಕಳ್ಳರೆಲ್ಲಾ ಏನು ಮಹಾ ಅಲ್ಲವೇ?     

ಅಯಿಗಿರಿನಂದಿನಿ ನಂದಿತಮೇದಿನಿ
ವಿಶ್ವವಿನೋದಿನಿ ನಂದಿನುತೇ |
ಗಿರಿವರವಿಂಧ್ಯ-ಶಿರೋಧಿನಿವಾಸಿನಿ
ವಿಷ್ಣುವಿಲಾಸಿನಿ ಜಿಷ್ಣುನುತೇ|
ಭಗವತಿ ಹೇ ಶಿಥಿಕಂಠಕುಟುಂಬಿನಿ
ಭೂರಿಕುಟುಂಬಿನಿ ಭೂರಿಕೃತೇ |
ಜಯಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ  ||

ಪ್ರಾಯಶಃ ಮೇದಿನಿಯಂತಹ ಸುಂದರ ಕಾನನಗಳಲ್ಲಿ ವಿಹರಿಸುತ್ತಾ ಮುನ್ನಡೆಯುವಾಗಲೇ ಆದಿಶಂಕರರು ’ಮಹಿಷಾಸುರಮರ್ದಿನೀ ಸ್ತೋತ್ರ’ವನ್ನು ರಚಿಸಿದರು ಅನಿಸುತ್ತದೆ. ದೇವಿಯನ್ನು ಭೂರಿ ಕುಟುಂಬಿನಿ ಎಂದು ಕರೆದಿದ್ದಾರೆ ನೋಡಿ, ಇಡೀ ವಿಶ್ವವೇ ಅವಳ ಕುಟುಂಬವಾದಾಗ ಭೂರಿ ಕುಟುಂಬವಲ್ಲದೇ ಇನ್ನೇನು ?

ಕರಮುರಲೀರವ ವೀಜಿತಕೂಜಿತ
ಲಜ್ಜಿತಕೋಕಿಲ ಮಂಜುಮತೇ |
ಮಿಲಿತಪುಲಿಂದ ಮನೋಹರಗುಂಜಿತ
ರಂಜಿತಶೈಲ ನಿಕುಂಜಗತೇ |
ನಿಜಗುಣಭೂತ ಮಹಾಶಬರೀಗಣ
ಸದ್ಗುಣಸಂಭೃತ ಕೇಲಿತಲೇ |
ಜಯಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ  ||

ಮುಂಗಾರುಮಳೆಯನ್ನು ಹೊತ್ತು ತರುವ ಭಾರವಾದ ಮೋಡಗಳು ಮೇದಿನಿಯಂತಹ ಪರ್ವತಗಳಲ್ಲಿನ ಮರಗಳಿಂದ ಆಕರ್ಷಿತವಾಗಿ, ತಂಪನ್ನು ಉಂಡು ಅಲ್ಲೇ ಮಳೆಗರೆಯುತ್ತವೆ! ಮಳೆಬರುವ ಪ್ರತೀ ಹಂತದಲ್ಲೂ ಮೋಡಗಟ್ಟಿದ ವಾತಾವರಣದಲ್ಲಿ ಅಂದದ ನವಿಲುಗಳು ನರ್ತಿಸುತ್ತವೆ. ದೂರದಲ್ಲಿ ಕೇಳಿಬರುವ ಯಾವುದೋ ಸದ್ದನ್ನು ಆಲಿಸಿ  ಕಿವಿನಿಮಿರಿಸಿ ನಿಂತ ಹರಿಣಗಳು ಚಂಗು ಚಂಗೆಂದು ಜಿಗಿದೋಡುತ್ತವೆ. ಗಾಳಿಗೆ ತೊನೆಯುವ ಗಾತ್ರದ ಸ್ನೇಹಲತೆಗಳು ತಮ್ಮ ನಳಿದೋಳುಗಳಿಂದ ಮರವರಮಹಾಶಯರನ್ನು ಬಿಗಿದಪ್ಪುತ್ತವೆ; ಲಲ್ಲೆಗರೆಯುತ್ತವೆ. ತರಗೆಲೆಗಳು ನೆನೆದು, ಕೊಳೆತು, ಹಲವು ಹೊಸ ಜೀವಸಂಕುಲಗಳು ಹುಟ್ಟತೊಡಗುತ್ತವೆ. ಜಿಂಕೆ-ಕಡವೆ-ಸಾರಂಗ, ಸಾಂಬಾರ್, ಕೃಷ್ಣಮೃಗ, ಹಂದಿ, ಹುಲಿ, ಮೊಲ, ಆನೆ, ಕರಡಿ, ಮುಂಗುಸಿ, ಹಾವು, ಚೇಳು, ಕಪ್ಪೆ, ಉಡ, ಸಿಳ್ಳೆಕ್ಯಾತ, ಮಂಗ, ಅಳಿಲು, ಕೇಶಳಿಲು, ಮಂಗಟ್ಟೆ-ಮೈನಾ-ಬುಲ್ ಬುಲ್-ಮಿಂಚುಳ್ಳಿ, ಕೊಕ್ಕರೆ....ಜೀವ ವೈವಿಧ್ಯಗಳನ್ನು ಹೆಸರಿಸ ಹೊರಟರೆ ಬಹಳ ಉದ್ದದ ಪಟ್ಟಿಯಾಗುತ್ತದೆ. ಯಾವುದು ಬೇಕು ಯಾವುದು ಬೇಡ ಎನ್ನುವ ಹಾಗೇ ಅನಿಸುವುದಿಲ್ಲ, ಎಲ್ಲವೂ ಒಂದಕ್ಕಿಂತ ಒಂದು ಭಿನ್ನ, ಒಂದಕ್ಕಿಂತ ಇನ್ನೊಂದು ಚೆನ್ನ ! ಎಲ್ಲೆಲ್ಲೋ ಹುಟ್ಟಿ ಹರಿಯುವ ತೊರೆಗಳು ಹಾಲು ಬಣ್ಣದ ಜಲಪಾತಗಳನ್ನು ಸೃಜಿಸಿರುತ್ತವೆ. ಬುಳುಬುಳು ಸದ್ದಿನೊಡನೆ ಹರಿಯುವ ಸ್ಫಟಿಕಸದೃಶ ನೀರು ಮನಸ್ಸಿನ ಕಲ್ಮಶವನ್ನೇ ತೊಳೆಯುವಂತಿರುತ್ತದೆ.       

ಕಮಲದಲಾಮಲ ಕೋಲಮಕಾಂತಿ-
ಕಲಾಕಲಿತಾಮಲ ಭಾಲಲತೇ |
ಸಕಲವಿಲಸ ಕಲಾನಿಲಯಕ್ರಮ
ಕೇಲಿಚಲತ್ಕಲ ಹಂಸಕುಲೇ |
ಅಲಿಕುಲಸಂಕುಲ ಕುವಲಯಮಂಡಲ
ಮೌಲಿಮಿಲದ್ ಬಕುಲಾಲಿಕುಲೇ |
ಜಯಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೇ  ||

ಹರವಾದ ಸರೋವರದಲ್ಲಿ ಅಲ್ಲಲ್ಲಿ ಕಮಲಗಳು ಮೂಡಿರಲು, ಬಿಳಿಯ ಹಂಸಗಳು ಕೊಳದ ತುಂಬಾ ಸಂಚರಿಸುತ್ತಿರಲು ಅಡವಿಯ ನಡುವೆ ಅಂತಹ ಸೌಂದರ್ಯ ಕಾಣಸಿಕ್ಕರೆ ಸ್ವರ್ಗವನ್ನೇ ಕಂಡಷ್ಟು ಸಂತಸವಾಗುತ್ತದಲ್ಲವೇ? ಇಂತಹ ಅನೇಕ ಮೇದಿನಿಗಳು ಒಂದುಕಾಲಕ್ಕೆ ಭಾರತದಾದ್ಯಂತ ಇದ್ದವು. ಅಲ್ಲಿ ಋಷಿಮುನಿಗಳು ತಪೋನಿರತರಾಗಿರುತ್ತಿದ್ದರು. ನಮ್ಮ ರಾಮಾಯಣ-ಮಹಾಭಾರತಗಳಲ್ಲೇ ನೋಡಸಿಗುವ ಅನೇಕ ವನಗಳು ಇವತ್ತು ಇಲ್ಲವಾಗಿವೆ. ದಂಡಕಾರಣ್ಯ, ಋಷ್ಯಮೂಕ, ವಿಂಧ್ಯಾರಣ್ಯ, ಪಂಚವಟಿ ಇಂತಹ ಹಲವು ಕಾನನಗಳು ಕಾಲದಗತಿಯಲ್ಲಿ ನಾಶವಾಗಿವೆ; ಅಲ್ಲೆಲ್ಲಾ ನಗರಗಳೂ, ಪಟ್ಟಣಗಳೂ ತಲೆಯೆತ್ತಿ ನಿಂತಿವೆ. ಕೇವಲ ಮಿಕ್ಕಿದ ಎಲ್ಲಾ ವ್ಯವಸ್ಥೆಗಳಿದ್ದು ಕಾಡು ಇಲ್ಲದಿದ್ದರೆ ಮನುಷ್ಯ ಸುಖಿಯೇ? ಕಾಡಿಲ್ಲದ ಜಗತ್ತನ್ನು ನೆನೆಸಿಕೊಳ್ಳಲೂ ಹೆದರಿಕೆಯಾಗುತ್ತದೆ. ಕಾಡೇ ಎಲ್ಲಾ ಸಂಪತ್ತಿಗೂ ಮೂಲಸಂಪತ್ತು! ಕಾಡಿದ್ದರೇ ಮಳೆಬೆಳೆಗಳು ಕಾಲಕಾಲಕ್ಕೆ ಆಗಲು ಸಾಧ್ಯ.

ಹಿಂದಕ್ಕೆ ಚಪ್ಪನ್ನೈವತ್ತಾರು ದೇಶಗಳಾಗಿ ವಿಂಗಡಿಸಲ್ಪಟ್ಟಿದ ಅಖಂಡ ಭಾರತ ಹಲವು ಮೇದಿನಿಪರನ್ನು ಕಂಡಿತ್ತು, ಆ ಮೇದಿನಿಪರಲ್ಲಿ ಅದೆಷ್ಟೋ ಜನ  ಇಳೆಯೆಂಬ ಮೇದಿನಿಯನ್ನು ಪೊರೆಯುವಲ್ಲಿ ರಾಜನೀತಿಗಳನ್ನು ಸಮರ್ಪಕವಾಗಿ ಅನುಸರಿಸುತ್ತಿದ್ದರು. ಐವತ್ತಾರು ದೇಶಗಳಲ್ಲಿ ಒಳಗೊಳಗೆ ರಾಜಕೀಯ ದ್ವೇಷಾಸೂಯೆಗಳಿದ್ದರೂ ಭಾರತದ ಅಖಂಡತೆಗೆ ಧಕ್ಕೆಯಾಗದ ಅಘೋಷಿತ ಸುತ್ತುವರಿ ಸರಹದ್ದೊಂದು ನಿರ್ಮಾಣವಾಗಿತ್ತು; ಅದಕ್ಕೆ ಎಲ್ಲರೂ ಬದ್ಧರಾಗಿದ್ದರು! ಮೇದಿನಿಪರುಗಳು ಅಳಿದಮೇಲೆ ರಾಜತಾಂತ್ರಿಕ ವ್ಯವಸ್ಥೆ ಪ್ರಜಾತಾಂತ್ರಿಕ ವ್ಯವಸ್ಥೆಯಾಗಿ, ಪ್ರಜಾರಾಜ್ಯದಲ್ಲಿ ’ಕೊಟ್ಟವ ಕೋಡಂಗಿ ಇಸ್ಗೊಂಡವ ಈರಭದ್ರ’ಅನ್ನೋ ರೀತಿಯಲ್ಲಿ ಮೇದಿನಿಯ ಹಕ್ಕುಬಾಧ್ಯತೆಗಳನ್ನು ಲಕ್ಷ್ಯಿಸುವವರು ಕಮ್ಮಿ ಇದ್ದಾರೆ; ಅಹರ್ನಿಶಿ ಹಣದ ಕನಸನ್ನೇ ಕಾಣುವ  ಅವರುಗಳಿಗೆ ’ಮೇದಿನಿ’, ’ಕಾಡು’ ಹೀಗೆಲ್ಲಾ ಪದಪ್ರಯೋಗವಾದರೆ ಕಿವಿಯಲ್ಲೇ ಕಾಗೆ ಕೂತು ಕಾ ಕಾ ಕಾ ಕಾ ಎಂದು ಕರ್ಕಶವಾಗಿ ಕೂಗಿದಂತೇ ಭಾಸವಾಗುತ್ತಿರಬೇಕು. ಖುರ್ಚಿ ಉಳಿಸಿಕೊಳ್ಳುವುದರಲ್ಲೇ ನಿರತರಾಗುವ ಪ್ರಜಾರಾಜರುಗಳು ಹಿಂದಿನ ಮೇದಿನಿಪರಿಗೆ ಯಾವ ಲೆಕ್ಕದಲ್ಲೂ ಸರಿಗಟ್ಟುವುದಿಲ್ಲ. ಕಾಣದ ದೈವದ ಕಾರುಣ್ಯವೋ ಎಂಬಂತೇ ಅಪರೂಪಕ್ಕೆ ಅಲ್ಲಲ್ಲಿ ಮೇದಿನಿಯಂತಹ ಬೆಟ್ಟಗಳು ಇನ್ನೂ ಅತಿ ಕಮ್ಮಿ ಸಂಖ್ಯೆಯಲ್ಲಿ ಉಳಿದಿವೆ. ಅರಾಜಕತೆಯ ಪ್ರಜಾತಂತ್ರದಲ್ಲಿ ಅವುಗಳನ್ನು ರಕ್ಷಣೆಮಾಡಿಕೊಳ್ಳುವುದು ಪ್ರಜೆಗಳದ್ದೇ ಜವಾಬ್ದಾರಿಯಾಗಿದೆ.


Wednesday, November 2, 2011

ಮುತ್ತತ್ತಿರಾಯನ ಸುತ್ತುತ್ತಲೊಂದು ದಿನ

ಮುತ್ತತ್ತಿರಾಯ
ಮುತ್ತತ್ತಿರಾಯನ ಸುತ್ತುತ್ತಲೊಂದು ದಿನ

ದೀಪಾವಳಿಯಂದು ಊಟಕ್ಕೆ ನಮ್ಮನೆಗೆ ಬಂದಿದ್ದ ದೋಸ್ತರ ಕುಟುಂಬವೊಂದಕ್ಕೆ ನಮ್ಮೊಡನೆ ಎಲ್ಲಿಗಾದರೂ ಹೋಗಬೇಕೆಂಬ ಇಚ್ಛೆಯಾಗಿಬಿಟ್ಟಿತ್ತು. ನಗರವಾಸಿಗಳ ಸಹಜ ಕೆಲಸದೊತ್ತಡಗಳ ಬಿಗಿಬಂಧನಗಳಿಂದ ಬಿಡಿಸಿಕೊಂಡು ಪ್ರಕೃತಿಯ ಮಡಿಲಲ್ಲಿ ಹಾಯಾಗಿ ಸಮಯ ಕಳೆಯುವ ಮನಸ್ಸು ನಮಗೂ ಇತ್ತು. ಎಲ್ಲಿಗಾದರೂ ಹೋಗೋಣವೆಂಬ ಆಲೋಚನೆಗೆ ಹತ್ತಿರದ ಒಂದುದಿನದ ಔಟಿಂಗ್ ಪ್ರದೇಶಗಳನ್ನು ಪಟ್ಟಿಮಾಡಿದೆವು. ಕೊನೆಗೆ ಹೊರಟಿದ್ದು ಮುತ್ತತ್ತಿ ಎಂಬ ಕಾಡಿನ ಪ್ರದೇಶ.

ಹೊರಡುವ ಪೂರ್ವ ತಯಾರಿಯೇನೂ ಇರಲಿಲ್ಲ. ಮೊನ್ನೆ ಶನಿವಾರ ರಾತ್ರಿ ನಿರ್ಧರಿಸಿ ಮಾರನೇ ಬೆಳಿಗ್ಗೆ ೯:೩೦ಕ್ಕೆ ಹೊರಟುಬಿಟ್ಟೆವು. ರಾತ್ರಿ ನಿರ್ಧಾರವಾದಮೇಲೆ ಒಂದಷ್ಟು ತಿಂಡಿ-ತೀರ್ಥಗಳನ್ನು ತಯಾರಿಸಿ ಕಟ್ಟಿಕೊಂಡೆವು. ನಿಜವಾಗಿ ಹೇಳುವುದಾದ್ರೆ ರಸ್ತೆ, ದಿಕ್ಕು ಏನೂ ಗೊತ್ತಿಲ್ಲ, ಆದರೂ ಹೋಗಲೇಬೆಕೇಂಬ ಬಯಕೆ ! ಬಾಯಿ ಇದ್ದರೆ ತಾಯಿ ಇದ್ದಹಾಗೇ ಎಂಬುದು ಹಳೇ ಗಾದೆ. ಗೂಗಲ್ ನಕ್ಷೆಯಲ್ಲಿ ದಿಕ್ಕು ನೋಡಿಕೊಂಡು ಹೊರಟು ಮುಂದೆ ಅಲ್ಲಲ್ಲಿ ಕೇಳುತ್ತಾ ಸಾಗಿದೆವು. ಹೊರಟಿದ್ದು ಕಾರಿನಲ್ಲಾದ್ದರಿಂದ ತಡವಾಗಿದ್ದರೂ ತಡವೆನಿಸಲಿಲ್ಲ. ಬಿಡದಿ, ರಾಮನಗರ ಮಾರ್ಗವಾಗಿ ಚನ್ನಪಟ್ಟಣಕ್ಕೆ ತೆರಳುವ ಮಧ್ಯೆ ದಿ| ನಾಗೇಗೌಡರ ’ಜಾನಪದ ಲೋಕ’ಕ್ಕೆ ಭೇಟಿ ಇತ್ತೆವು. ಜಾನಪದ ಲೋಕದಲ್ಲಿ ಜನಪದರು ಬಳಸಿ ಬಿಟ್ಟ ಹಳೆಯ ವಸ್ತುಗಳನ್ನು ನೋಡಬಹುದು. ನಾವೆಲ್ಲಾ ಹಳ್ಳಿಯ ಮೂಲದಿಂದಲೇ ಬಂದವರಾದ್ದರಿಂದ ಅಂತಹ ಹಲವು ವಸ್ತುಗಳನ್ನು ಈ ಮೊದಲೇ ನೋಡಿದ್ದಿದೆ-ಹಾಗಾಗಿ ಸಂಗ್ರಹಾಲಯದಲ್ಲಿ ನಮಗೆ ತೃಪ್ತಿಯಾಗುವಷ್ಟು ವಸ್ತುಗಳು ಕಾಣಲಿಲ್ಲವಾದರೂ ಪರವಾಗಿಲ್ಲ ಎನ್ನಬಹುದು. ಜಾನಪದ ಲೋಕದಲ್ಲಿ ಕೆಲವು ಮರದ ಮೂರ್ತಿಗಳು, ದೊಡ್ಡ ನಗಾರಿಗಳು ಮತ್ತು ವಿವಿಧ ಪ್ರದೇಶಗಳಲ್ಲಿ ಬಳಕೆಯಲ್ಲಿದ್ದ ಕಂಚು, ಹಿತ್ತಾಳೆ, ತಾಮ್ರ ಮೊದಲಾದ ಲೋಹಗಳಿಂದ ಮಾಡಿದ ದಿನಬಳಕೆಯ ಉಪಕರಣಗಳೂ ಸೇರಿದಂತೇ ಬೆತ್ತ ಹಾಗೂ ಇನ್ನಿತರ ಅಡವೀ ಸಾಮಗ್ರಿಗಳಿಂದ ನೇಯ್ದ ಬುಟ್ಟಿಗಳು ಮುಂತಾದವನ್ನು ನೋಡಲು ಖುಷಿಯಾಗುತ್ತದೆ. ರಾಜರ ಕಾಲದ ಭರ್ಚಿ, ಈಟಿ, ಕತ್ತಿ-ಗುರಾಣಿ, ಖಡ್ಗಗಳನ್ನು ಇಟ್ಟಿರುವುದರಿಂದ ಇಂದಿನ ಪೀಳಿಗೆಯ ಮಕ್ಕಳಿಗೆ ನೋಡಲು, ತಿಳಿದುಕೊಳ್ಳಲು ಅನುಕೂಲಕರವಾಗಿದೆ.

'ಜಾನಪದ ಲೋಕ' ಒಂದೆರಡು ಚಿತ್ರಗಳು :




’ಜಾನಪದ ಲೋಕ’ದಲ್ಲಿ ಭಾನುವಾರದಂದು ವೃತ್ತಿನಿರತ ಕಂಬಾರರು, ಕುಂಬಾರರು, ಬೊಂಬೆತಯಾರಕರು, ಡೊಳ್ಳು ಕುಣಿತದವರು ಹೀಗೇ ಹಲವುಜನರು ನೋಡಸಿಗುತ್ತಾರಲ್ಲದೇ, ಆಯಾ ಕಸುಬುಗಳನ್ನು ನೇರವಾಗಿ ವೀಕ್ಷಿಸಲು ಅನುಕೂಲ ಕಲ್ಪಿಸಿದ್ದಾರೆ. ಬೆಂಗಳೂರಿನ ಹಲಸೂರಿನ ಸೋಮೇಶ್ವರ ದೇವಸ್ಥಾನದಲ್ಲಿ ೧೯೦೨ರಲ್ಲಿ ನಿರ್ಮಿಸಿ ಬಳಸಿದ್ದ ಮರದ ದೊಡ್ಡ ರಥವೊಂದನ್ನು ಅದು ಈಗ ಭಾಗಶಃ ಜೀರ್ಣವಾಗಿರುವುದರಿಂದ ಪಳೆಯುಳಿಕೆಯಾಗಿ ಇಟ್ಟಿದ್ದಾರೆ. ಕೆಲವು ಶಿಲಾವಿಗ್ರಹಗಳನ್ನು ಒಂದು ಚಿಕ್ಕ ಗುಡಿಯ ಸುತ್ತ ಜೋಡಿಸಿದ್ದಾರೆ. ಸಮುಚ್ಛಯದ ಒಳಗಡೆ ಒಂದು ಕೃತ್ರಿಮ ಸರೋವರವೂ ಇದ್ದು ಅಲ್ಲಿ ಬೋಟಿಂಗ್ ವ್ಯವಸ್ಥೆ ಮಾಡಿದ್ದಾರೆ. ಒಟ್ಟಾರೆ ಹೇಳುವುದಾದರೆ ಮಕ್ಕಳೊಂದಿಗೆ ಒಮ್ಮೆ ನೋಡಬೇಕಾದ ಜಾಗ.

ಆ ಲೋಕದಿಂದ ಹೊರಬರುವಷ್ಟರಲ್ಲಿ ೧೨ ಹೊಡೆದುಬಿಟ್ಟಿತ್ತು! ಒಂದಷ್ಟು ನೀರು ಕುಡಿದು ಮುಂದೆ ದಾರಿ ಕೇಳುತ್ತಾ ಚನ್ನಪಟ್ಟಣ ತಲ್ಪಿದೆವು. ಚನ್ನಪಟ್ಟಣದಿಂದ ಎಡಕ್ಕೆ ೫೮ ಕಿ.ಮೀ ದೂರದಲ್ಲಿ ಮುತ್ತತ್ತಿ ಇರುವುದೆಂದು ತಿಳಿಯಿತು. ಹಲಗೂರು-ಸಾತನೂರು ಕಡೆಗೆ ಹೋಗುವ ಮಾರ್ಗ ಹಿಡಿದು ಮುಂದಕ್ಕೆ ಸಾಗಿದೆವು. ಹಸಿವು ಯಾವ ದೊಣ್ಣೆನಾಯ್ಕನನ್ನೂ ಬಾಧಿಸದೇ ಇರದಲ್ಲ... ಹಾದಿಗುಂಟ ಬಾಯಿಗೆ ಒಂದಷ್ಟು ಹಚ್ಚಿದ ಅವಲಕ್ಕಿ[ಪುಟಾಣಿ, ಇಂಗು, ಮಸಾಲೆ ಮುಂತಾದವುಗಳನ್ನು ಸೇರಿಸಿ ಹುರಿದ ’ನೈಲಾನ್’ ಅವಲಕ್ಕಿ], ಬಿಸ್ಕತ್ತು, ಕಜ್ಜಾಯ, ಕೋಡುಬಳೆಗಳು ಇಳಿದವು !

ಮುಂದೆ ದಾರಿ ಒಂದೆಡೆ ಎರಡು ಭಾಗವಾಗಿ ಒಂದು ಹಲಗೂರಿಗೂ ಇನ್ನೊಂದು ಸಾತನೂರಿಗೂ ಹೋಗುತ್ತದೆ. ಹಲಗೂರಿನ ದಿಕ್ಕಿನಲ್ಲಿ ಹೊರಟನಮಗೆ ಹಲಗೂರಿನಲ್ಲಿ ಮಳವಳ್ಳಿ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದುದು ಕಾಣಿಸಿತು. ಜಾತ್ರೆಯಂತೇ ಜನ ಸೇರಿದ್ದರು; ಧ್ವನಿವರ್ಧಕಗಳಲ್ಲಿ ಭಾಷಣಗಳು ಮೊಳಗುತ್ತಿದ್ದವು ! ಮುಂದೆ ಸಾಗುತ್ತಾ ಭೀಮೇಶ್ವರಿ ಮಾರ್ಗವಾಗಿ ಎಡಕ್ಕೆ ಚಲಿಸುತ್ತಾ ಮುತ್ತತ್ತಿ ತಲ್ಪಿದಾಗ ಮಧ್ಯಾಹ್ನ ೨:೩೦ ಆಗೇ ಹೋಯ್ತು. ಹೊಟ್ಟೆ ಹಿಟ್ಟಿಗಾಗಿ ಹುಡುಕುತ್ತಿತ್ತು! ಆದರೂ ನೇರವಾಗಿ ಮುತ್ತತ್ತಿರಾಯನ ದೇವಸ್ಥಾನದೊಳಗೆ ನಡೆದು ದರ್ಶನಮಾಡಿದೆವು. ತ್ರೇತಾಯುಗದಲ್ಲಿ ಈ ಜಾಗಕ್ಕೆ ತಿರುಗಾಡುತ್ತಾ ಬಂದ ಸೀತಾ-ರಾಮರ ಜೊತೆ ಆಂಜನೇಯನೂ ಇದ್ದನಂತೆ. ಕಾವೇರಿಯಲ್ಲಿ ಸೀತಾಮಾತೆ ಸ್ನಾನಮಾಡುವಾಗ ಆಕೆಯ ಮೂಗುತಿಯಲ್ಲಿನ ಮುತ್ತು ನದಿಯಲ್ಲಿ ಬಿದ್ದುಬಿಟ್ಟಿತಂತೆ. " ಅಯ್ಯೋ ಮುತ್ತು ಬಿದ್ದುಹೋಯ್ತಲ್ಲಾ " ಎಂದು ಆಕೆ ಪರಿತಪಿಸುತ್ತಿರುವಾಗ ವಿಷಯ ತಿಳಿದ ಹನುಮ ಸೀತೆಯ ಸ್ನಾನಾನಂತರ ನದಿಗೆ ಧುಮುಕಿ ಬಿದ್ದುಹೋದ ಮುತ್ತನ್ನು ಎತ್ತಿತಂದನಂತೆ. ಅದಕ್ಕೇ ಈ ಜಾಗ ಮುತ್ತೆತ್ತಿ. ಬಳಸುತ್ತಾ ಮುತ್ತತ್ತಿಯಾಗಿಬಿಟ್ಟಿದೆ. ಇದು ಅಲ್ಲಿನ ಸ್ಥಳಪುರಾಣ.

ಪ್ರಸಾದ ಸ್ವೀಕರಿಸಿ ಅಲ್ಲೇ ಸುತ್ತಾ ಅಡ್ಡಾಡುತ್ತಾ ವಾಹನವನ್ನು ಸ್ವಲ್ಪ ಮುಂದಕ್ಕೆ ಚಲಿಸಿದೆವು. ಮಾತೆ ಕಾವೇರಿ ತನ್ನ ಹರಿವಿನುದ್ದಕ್ಕೂ ಹಲವು ಕ್ಷೇತ್ರಗಳನ್ನೂ ರಮಣೀಯ ತಾಣಗಳನ್ನೂ ಸೃಷ್ಟಿಸಿದ್ದಾಳೆ. ಒಂದೊಂದೂ ಜಾಗ ನೋಡುಗರ ಕಣ್ಮನಸೆಳೆಯುತ್ತದೆ ಮತ್ತು ಮನಸ್ಸಿಗೆ ಮುದನೀಡುತ್ತದೆ. ಬೇಸತ್ತ ಮನಸ್ಸಿಗೆ ಸಂತಸ ತರುವಲ್ಲಿ ಈ ಜಾಗಗಳು ಸಹಕಾರಿಯಾಗುತ್ತವೆ. ಮುತ್ತತ್ತಿ ಕೂಡ ಒಂದು ನಿಸರ್ಗ ರಮಣೀಯ ಸ್ಥಾನ ಎಂಬುದರಲ್ಲಿ ಸಂದೇಹವಿಲ್ಲ. ಸಾಗಡೆ, ನಂದಿ ಮತ್ತು ಹುಣಿಸೇ ಮರಗಳು ಹೇರಳವಾಗಿ ಇರುವ ಕಾಡಿನ ಮಧ್ಯೆ ಕಾವೇರಿ ಪ್ರಶಾಂತವಾಗಿಯೂ ವಿಸ್ತಾರವಾಗಿಯೂ ಹರಿದು ಮುಂದೆಸಾಗುತ್ತಾಳೆ. ನದಿಯ ಮಧ್ಯೆ ಹಲವು ಚಿಕ್ಕ ಚಿಕ್ಕ ನಡುಗಡ್ಡೆಗಳಿವೆ. ಹಳೆಯ ಮರಮಟ್ಟುಗಳು ನೀರಲ್ಲಿ ಬೇರಿಳಿಸಿ ಮುಗಿಲೆತ್ತರಕ್ಕೆ ಬೆಳೆದು ನಿಂತಿವೆ. ಹಲವು ಹೆಜ್ಜೆಗಳಲ್ಲಿ ಹಲವು ಕೋನಗಳಲ್ಲಿ ನದಿಯ ಹರಿವನ್ನು ಅವಲೋಕಿಸಿ ಹಸಿರಿನ ಮಧ್ಯೆ ಆ ನೋಟಗಳನ್ನು ಕ್ಯಾಮೆರಾಗಳಲ್ಲಿ ಸೆರೆಹಿಡಿಯಬಹುದಾಗಿದೆ. ಮುತ್ತತ್ತಿಗೆ ಹತ್ತಿರದ ಭೀಮೇಶ್ವರಿಯಲ್ಲಿ ಫಿಶಿಂಗ್ ಕ್ಯಾಂಪ್ ಇದೆ. ಅಲ್ಲಲ್ಲಿ ಹರಿಗೋಲುಗಳು ಇದ್ದು ಅವುಗಳನ್ನೇರಿ ತುಸುದೂರ ನದಿಯಲ್ಲಿ ವಿಹರಿಸಬಹುದಾಗಿದೆ.

ಮುತ್ತತಿರಾಯನ ದೇವಸ್ಥಾನ



ಮುತ್ತತ್ತಿಯಲ್ಲಿ ಕಾವೇರೀ ತೀರದ ಒಂದು ರಮಣೀಯ ದೃಶ್ಯ

.......ಇನ್ನೊಂದು

....ಮತ್ತೊಂದು


ಮುತ್ತತ್ತಿಯ
ಹಾದಿಯಲ್ಲಿ

ಬೇಸರ ತರಿಸುವ ಸಂಗತಿಯೆಂದರೆ ಈ ಇಡೀ ಪ್ರದೇಶದಲ್ಲಿ ಅಂಗಡಿಗಳವರು ವ್ಯಾಪಾರ ನಡೆಸುವುದು ಮಾಂಸಾಹಾರ ಮತ್ತು ಮದ್ಯವನ್ನು! ಕಟ್ಟಿಗೆ, ಪಾತ್ರೆ, ಅಡಿಗೆ ಸಾಮಾನು, ಕುರಿ-ಕೋಳಿ ಮಾಂಸ ಇವೆಲ್ಲವನ್ನೂ ಮಾರುವುದರ ಜೊತೆಗೆ ಕೆಲವರು ಬೇಕಾದ ಗಿರಾಕಿಗಳಿಗೆ ಅಡಿಗೆ ಮಾಡಿಬಡಿಸುವ ಕಂತ್ರಾಟು ಕೂಡಾ ತೆಗೆದುಕೊಳ್ಳುತ್ತಾರಂತೆ. ನದೀ ಮುಖಜ ಭೂಮಿಯಲ್ಲಿ ದೊಡ್ಡಮರಗಳ ಬುಡದಲ್ಲಿ ಕಲ್ಲುಗಳ ಒಲೆ ಹೂಡಿ ಮಾಂಸಾಹಾರ ತಯಾರಿಸುವುದು ಎಲ್ಲೆಲ್ಲೂ ಕಾಣುತ್ತದೆ. ಅಂತೆಯೇ ನಗರವಾಸಿ ಹುಡುಗರು, ಶೋ ಮ್ಯಾನ್‍ಗಳು ’ಬಾಟಲೀಪುತ್ರ’ರಾಗಿ ನದಿಯ ದಡವನ್ನು ಎಲ್ಲೆಲ್ಲೂ ಗಲೀಜು ಮಾಡಿದ್ದಾರೆ. ಎಲ್ಲಿ ನೋಡಿದರೂ ಬಳಸಿ ಬಿಸಾಡಿದ ಪ್ಲಾಸ್ಟಿಕ್ ಕ್ಯಾರೀ ಬ್ಯಾಗುಗಳು, ಹೆಂಡದ ಖಾಲೀ ಬಾಟಲುಗಳು ತುಂಬಿದ್ದು ಸ್ವಚ್ಛತೆಗೆ ಯಾವುದೇ ಆದ್ಯತೆ ಇರುವುದಿಲ್ಲ. ಹೊರರಾಜ್ಯಗಳಿಂದ ಬರುವ ಯುವಪೀಳಿಗೆಗೆ ಮೋಜುಮಜಾ ಮಸ್ತಿಯ ತಾಣವಾಗಿ ಲಭ್ಯವಾಗುವ ಈ ಪ್ರದೇಶದಲ್ಲಿ ಅನೈತಿಕ ಚಟುವಟಿಕೆಗಳೂ, ಪಾಪದ ಹೆಣ್ಣುಮಕ್ಕಳ ಕೊಲೆಗಳೂ ನಡೆದಿವೆ-ನಡೆಯುತ್ತವೆ ಎಂಬುದನ್ನು ಕೇಳಿದಾಗ ಮುತ್ತತ್ತಿರಾಯ ಯಾಕೆ ಸುಮ್ಮನೆ ಕುಳಿತ ಎಂಬುದು ಅರ್ಥವಾಗದಾಗಿದೆ. ಸರಕಾರದ ಅರಣ್ಯ ಇಲಾಖೆಯ ಸಿಬ್ಬಂದಿ ಯಾರೂ ಕಾಣಿಸಲಿಲ್ಲ, ಪೋಲೀಸರು ಮಾಮೂಲಿ ಪಡೆಯುವುದು ಮತ್ತು ಅಲ್ಲಿರುವ ಜನರೊಟ್ಟಿಗೇ ಬೆರೆತು ಮಜಾ ತೆಗೆದುಕೊಳ್ಳುವುದು ಢಾಳಾಗಿ ಕಾಣುತ್ತದೆ. ಗ್ರಾಮಪಂಚಾಯತಿಯ ಹೆಸರಲ್ಲಿ ವಾಹನಶುಲ್ಕ ೩೦-೪೦ ರೂಪಾಯಿ ವಸೂಲಿ ಮಾಡುತ್ತಿದ್ದಾರೆ. ಹೀಗೆ ವಸೂಲು ಮಾಡಿದ ಹಣ ಪಂಚಾಯ್ತಿಗೆ ಸೇರುವುದೆಷ್ಟು ಮತ್ತು ಪಡೆದವರ ಜೇಬಿಗೆ ಸೇರುವುದೆಷ್ಟು ಕಂಡವರಿಲ್ಲ! ಹಣಪಡೆದರೂ ಅಲ್ಲಿ ಸ್ವಚ್ಛತೆಯ ಬಗ್ಗೆ ಚೂರೂ ಗಮನ ಹರಿಸದ ಪಂಚಾಯ್ತಿಯ ಬಗ್ಗೆ ಅನುಮಾನ ಹುಟ್ಟಿಕೊಳ್ಳುತ್ತದೆ.


ಬೆಂಗಳೂರಿಗರು ಎರಡು ಮಾರ್ಗಗಳಲ್ಲಿ ಮುತ್ತತ್ತಿಗೆ ತಲ್ಪಬಹುದು. ಕನಕಪುರರಸ್ತೆಯಲ್ಲಿ ಕನಕಪುರ ಮಾರ್ಗವಾಗಿ ಸಾತನೂರಿಗೆ ತೆರಳಿ ಅಲ್ಲಿಂದ ಮುಂದೆ ಮುತ್ತತ್ತಿಗೆ ತೆರಳಬಹುದು. ಅಥವಾ ಮೈಸೂರು ರಸ್ತೆಯಲ್ಲಿ ಸಾಗಿ ಚನ್ನಪಟ್ಟಣದಲ್ಲಿ ಎಡಕ್ಕೆ ತಿರುಗಿ ಹಲಗೂರು ತಲ್ಪಿ ಅಲ್ಲಿಂದ ಭೀಮೇಶ್ವರಿ ಮಾರ್ಗವಾಗಿ ಮುತ್ತತ್ತಿಗೆ ಸೇರಿಕೊಳ್ಳಬಹುದು. ಬೆಂಗಳೂರಿನಿಂದ ಸುಮಾರು ೧೨೦ ಕೀ.ಮೀ ದೂರವಿದೆ.

ಮಧ್ಯಾಹ್ನ ೩ ಗಂಟೆಗೆ ಮುತ್ತತ್ತಿಯ ಸರಹದ್ದಿನಲ್ಲೇ ಮುಂದೆ ತೆರಳಿ ಕಾಡಿನ ದಾರಿಯಲ್ಲಿ ಕುಳಿತು ಒಯ್ದಿದ್ದ ಬುತ್ತಿ ಬಿಚ್ಚಿ ಚಪಾತಿ-ಸಾಗು, ಸಸ್ಯಾಹಾರದ ಪುಲಾವ್, ಮೊಸರನ್ನ ಇತ್ಯಾದಿಗಳನ್ನು ಭುಂಜಿಸಿದೆವು. ನಾನು ಎಲೆಯಡಕೆ [ಕವಳ] ಒಯ್ದಿದ್ದೆ. ಊಟಮುಗಿಸಿ ಅಡಕೆ, ವೀಳ್ಯದೆಲೆ, ಸುಣ್ಣ, ಪಚ್ಚಕರ್ಪೂರ, ಕೊಬ್ಬರಿ ತುಣುಕು, ಖರ್ಜೂರ, ಲವಂಗ ಮಿಶ್ರಿತ ತಾಂಬೂಲವನ್ನು ಬಾಯ್ತುಂಬಾ ತುಂಬಿಕೊಂಡು ಲೋಕಾಭಿರಾಮವಾಗಿ ಹರಟಿದೆವು. ಸ್ವಲ್ಪ ಸಮಯದ ನಂತರ ನದೀತಟದಲ್ಲಿ ತಿರುಗುತ್ತಾ ಅಲ್ಲಲ್ಲಿ ನೀರಿಗೆ ಇಳಿದು ವಿಹರಿಸಿದೆವು. ಸಂಜೆ ೫ ಗಂಟೆಗೆ ಮರಳಿ ಹೊರಟು ದಾರಿಯುದ್ದಕ್ಕೂ ಅಲ್ಲಲ್ಲಿ ಕಿಲಾರಿ ತಳಿಯ ಹಸುಕರುಗಳ ಹಿಂಡನ್ನು ಕಂಡು ಸಂತೋಷಪಟ್ಟೆವು.

ಭೀಮೇಶ್ವರಿ ದಾಟಿ ಹಲಗೂರಿಗೆ ಬರುವಷ್ಟರಲ್ಲಿ ನಮಗೊಂದು ಅಚ್ಚರಿಕಾದಿತ್ತು! ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ಡುಂಡಿರಾಜರ ಮಾತು ಸಾಗುತ್ತಿತ್ತು. " ಅವಳೊಮ್ಮೆ ಸಿಕ್ಕಳು .....ನಮಗೀಗ ಇಬ್ಬರು ಮಕ್ಕಳು..." ಮುಂತಾಗಿ ಹೇಳುತ್ತಿರುವುದನ್ನು ದೂರದಿಂದ ಈಕ್ಷಿಸಿದೆವು. ಸ್ವಲ್ಪ ಹೊತ್ತು ಅಲ್ಲಿದ್ದು ನಂತರ ಚನ್ನಪಟ್ಟಣಕ್ಕೆ ಬಂದು ಅಲ್ಲಿಂದ ರಾಮನಗರ ಹಾಗೇ ಮುಂದೆ ಬಿಡದಿ ಮಾರ್ಗವಾಗಿ ಕೆಂಗೇರಿ ತಲ್ಪಿದೆವು. ನಾವು ಬರುತ್ತಿರುವುದು ’ಎಸ್ಸೆಮ್ ಕೃಷ್ಣರ ಅಳಿಯನ ಮನೆ’ಗೆ ಅದು ಹೇಗೆ ತಿಳಿಯಿತೋ ಗೊತ್ತೇ ಆಗ್ಲಿಲ್ಲ. [ಕಾಫೀ ಕುಡೀರಿ ಅಂತ ಕರೆದೇಬಿಟ್ಟರು. ಎರಡು ಲೆಮನ್ ಟೀ, ಮೂರು ಕೋಲ್ಡ್ ಕಾಫಿ ಮತ್ತು ಮಕ್ಕಳಿಗೆ ಎರಡು ಕೇಕ್ ಪೀಸ್ ಇದಿಷ್ಟಕ್ಕೆ ಅವರ ಅತಿಥ್ಯದ ಆರತಿ ತಟ್ಟೆಯಲ್ಲಿ ದೊಡ್ಡ ಬಿಲ್ಲಿತ್ತು; ಸದ್ಯ ಬಾಣಮಾತ್ರ ಇರಲಿಲ್ಲ!] ಹೀಗೇ ಕಳೆದ ಭಾನುವಾರವನ್ನು ನಿರಾಳವಾಗಿ ನಿರುಮ್ಮಳವಾಗಿ ಯಾವುದೇ ’ಕಾಲು’ ’ಮೇಲು’ಗಳ ಗೋಜಲುಗಳಿಲ್ಲದೇ ಕಳೆದೆವು.

Thursday, February 11, 2010

ಶಿವರಾತ್ರಿ ಪ್ರ-'ಯಾಣ'


ಶಿವರಾತ್ರಿ ಪ್ರ-'ಯಾಣ'

ಶಿವನ ಒಂದು ರೂಪವಾದ ಭೈರವೇಶ್ವರನ ತಾಣ-'ಯಾಣ' ತುಂಬಾ ಮನಮೋಹಕ ಪ್ರದೇಶ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ದಿಂದ ಸುಮಾರು ೩೬ ಕಿಲೋ ಮೀಟರ್ ದೂರದಲ್ಲಿದೆ. ಕುಮಟಾದಿಂದ ಶಿರಸಿಗೆ ಹೋಗುವ ಮಾರ್ಗದಲ್ಲಿ ಕತಗಾಲ್ ಹತ್ತಿರದ ಆನೆಗುಂದಿ ಎಂಬಲ್ಲಿ ಇಳಿದುಕೊಂಡರೆ ಅಲ್ಲಿಂದ ಎಡಕ್ಕೆ ಸುಮಾರು ೧೬ ಕೀ.ಮೀ. ಹೋಗಬೇಕು. ಎರಡನೇ ಮಾರ್ಗ-ಶಿರಸಿಯಿಂದ ಮತ್ತಿಘಟ್ಟಕ್ಕೆ ಹೋಗುವ ದಾರಿಯಲ್ಲಿ ವಡ್ಡಿ ಕ್ರಾಸ್ ಎಂಬಲ್ಲಿ ಇಳಿದುಕೊಂಡರೆ ಸುಮಾರು ಕೀ.ಮೀ. ನಡೆಯಬೇಕು. ಸ್ವಂತದ ವಾಹನ ಇದ್ದರೆ ತುಂಬಾ ಅನುಕೂಲ, ನಡೆಯುವ ಪ್ರಮೇಯ ಇರುವುದಿಲ್ಲ, ಇದ್ದರೂ ಹೆಚ್ಚೆಂದರೆ ಕೀ.ಮೀ. ಅಷ್ಟೇ. ಉಳಿದುಕೊಳ್ಳಲು ಹತ್ತಿರದ ಪಟ್ಟಣಗಳೆಂದರೆ ಶಿರಸಿ ಅಥವಾ ಕುಮಟಾ ಮಾತ್ರ. ಎರಡೂ ಅಜಮಾಸ್ ೫೦ ಕೀ.ಮೀ. ದೂರ ಇವೆ. ಯಾಣದಲ್ಲಿ ಸದ್ಯಕ್ಕೆ ತಿಂಡಿ-ಊಟದ ವ್ಯವಸ್ಥೆ ಇರುವುದಿಲ್ಲ, ಪೂರ್ವ ತಯಾರಿ ಇಟ್ಟುಕೊಂಡೇ ಹೋದರೆ ಸೂಕ್ತ, ಇಲ್ಲವೆಂದರೆ ದಾರಿಯಲ್ಲಿ ಸಿಗುವ ಚಿಕ್ಕಪುಟ್ಟ ಅಂಗಡಿಗಳಿಂದ ಏನಾದರೂ ಕುರುಕಲು,ಬಿಸ್ಕತ್ ಪಡೆಯಬಹುದು ಅಷ್ಟೇ. ನೀರಿನ ತೊಂದರೆ ಇರುವುದಿಲ್ಲ, ನೈಸರ್ಗಿಕವಾಗಿ ಹರಿದು ಬರುವ ಮಿನರಲ್ ವಾಟರ್ ಲಭ್ಯ! ಇದೊಂದು ವಿಶಿಷ್ಟ ನೈಸರ್ಗಿಕ ಪ್ರವಾಸೀ ಸ್ಥಳ. ಕಾಡಿನ ಮಧ್ಯೆ ಯಾವ ಗೌಜು-ಗದ್ದಲವಿಲ್ಲದ ಪ್ರದೇಶ, ಹಸಿರು ಕಾನನ, ಎಂದಿಗೂ ಬತ್ತದ ನೀರಿನ ತೊರೆ ಇತ್ಯಾದಿ ಕಣ್ಣಿಗೆ 'ಹಬ್ಬ'ಕಟ್ಟುವ ಶಿವನ ವಾಸಸ್ಥಳ.

ಸ್ಥಳ ಪುರಾಣದಲ್ಲಿ ಭಸ್ಮಾಸುರ-ಮೋಹಿನಿ

ಕಲ್ಲಿನಿಂದ ಕೂಡಿದ ಭಸ್ಮವನ್ನು ಶಿವ ಕೋಪದಿಂದ ಬೀಸಾಡಿದಾಗ ದೈತ್ಯಶಕ್ತಿಯೊಂದರ ಉಗಮವಾಗುತ್ತದೆ. ಅವನೇ 'ಭಸ್ಮಾಸುರ' . ಹೀಗೆ ಹೆಸರು ಬರಲು ಕಾರಣ ಶಿವನಿಂದ ಅಸುರ ಪಡೆದ ವರ. ಹುಟ್ಟಿದ ತಕ್ಷಣ ಶಿವನನ್ನು ಒಲಿಸಿ-ಓಲೈಸಿ ತನ್ನ ಬಲಗೈಯನ್ನು ಯಾರ ತಲೆಯಮೇಲೆ ಇಡುತ್ತೇನೋ ಇಡಿಸಿಕೊಂಡವರು ಭಾಸ್ಮವಾಗಿಹೊಗಬೇಕು ಎಂಬ ವರವನ್ನು ಪಡೆದ. ಪಕ್ಕದಲ್ಲಿ ಅತಿ ಲಾವಣ್ಯವತಿಯಾದ ಶಿವೆಯನ್ನ ಕಂಡ. ಅವಳನ್ನೇ ಮೋಹಿಸಹೊರಟ. ಶಿವನ ಕೆಂಗಣ್ಣಿಗೆ ಗುರಿಯಾದ. ಶಿವನನ್ನೇ ಬೆದರಿಸಿ ಶಿವನ ಶಿರದ ಮೇಲೆ ಕೈ ಇಡುವುದಾಗಿ ಆರ್ಭಟಿಸಿದ. ಕಂಗಾಲಾದ ಶಿವ ಓಟಕ್ಕಿತ್ತ. ಅಟ್ಟಿಸಿಕೊಂಡು ಬಂದ ಭಸ್ಮಾಸುರ. ಈರ್ವರೂ ಓಡುತ್ತಾ ಓಡುತ್ತಾ ಯಾಣಕ್ಕೆ ಬಂದರು.

ಇಷ್ಟರಲ್ಲಿ ದೇವಗಣ ಸಭೆಸೇರಿದರು. ಏನಾದರೂ ಮಾಡಿ ಸಮಸ್ಯೆಯನ್ನು ಬಗೆಹರಿಸಬೇಕು! ಆಗ ಮಹಾವಿಷ್ಣು ಒಂದು ನಾಟಕವನ್ನು ರೂಪಿಸಿದ. ತನ್ನ ಶಕ್ತಿಯಿಂದ ಅತಿ ರೂಪವತಿಯಾದ 'ಮೋಹಿನಿ'ಯನ್ನು ಸೃಷ್ಟಿಸಿದ. ಮೋಹಿನಿ ಧರೆಗೆ ಬಂದಳು. ಭಸ್ಮಾಸುರ ಹತ್ತಿರದಲ್ಲಿ ಸುಳಿದಾಡಿದಳು. ಮೋಹಿನಿಯನ್ನು ಕಂಡ ಭಸ್ಮಾಸುರ ಅವಳಿಗೆ ಮನಸೋತ, ಅವಳು ಹೇಳಿದ್ದನ್ನೆಲ್ಲ ಮಾಡುವುದಾಗಿಯೂ ಹೇಗಾದರೂ ಅವಳು ತನ್ನವಳಾಗಬೇಕೆಂದು ಪರಿ ಪರಿಯಿಂದ ಅವಳಿಗೆ ದುಂಬಾಲುಬಿದ್ದ. ಮೋಹಿನಿ ತಾನು ಹೇಳಿದ ರೀತಿ ನೃತ್ಯವನ್ನು ಮಾಡಿದರೆ ಅವನನ್ನು ವರಿಸುವುದಾಗಿ ಹೇಳಿದಳು. ಇಬ್ಬರೂ ನೃತ್ಯಮಾಡಲು ಪ್ರಾರಂಭಿಸಿದರು. ನಿಧಾನವಾಗಿ ಮೋಹಿನಿ ತನ್ನ ಬಲಗೈಯನ್ನು ತನ್ನ ತಲೆಯಮೇಲೆ ಇಟ್ಟುಕೊಂಡಳು; ಅನುಸರಿಸುತ್ತಿರುವ ಭಸ್ಮಾಸುರ ಕೂಡ ಅದೇ ರೀತಿ ಮಾಡಿದ. ಕ್ಷಣದಲ್ಲಿ ಆತ ಅಲ್ಲೇ ಭಸ್ಮವಾದ!


ಶಿಲಾಮಯ, ನಿಸರ್ಗ್ ನಿರ್ಮಿತ, ಆಧಾರ ರಹಿತ ನಿಲುವು. ಒಂದನ್ನು ಭೈರವೇಶ್ವರ ಶಿಖರ ವೆಂದೂ ಇನ್ನೊಂದನ್ನು ಮೋಹಿನಿ ಶಿಖರವೆಂತಲೂ ಜನ ಗುರುತಿಸಿದ್ದಾರೆ. ಭೈರವೇಶ್ವರ ಶಿಖರ
ಅಗಲವಾಗಿದೆ, ಮೋಹಿನಿ ಅಮ್ಮನವರ ಶಿಖರ ಸ್ವಲ್ಪ ಮೊನಚಾಗಿದೆ. ನೋಡಲು ಮೋಹಿನಿ ಶಿಖರ ಎತ್ತರವಾಗಿ ಕಂಡರೂ ಭೈರವೇಶ್ವರ ಶಿಖರಕ್ಕಿಂತ ಮೋಹಿನಿ ಶಿಖರ ದೊಡ್ದದಾಗಿಲ್ಲ ಎಂಬುದು ಹೇಳಿಕೆ. ಮೋಹಿನಿ ಶಿಖರ ಬೆಳೆಯುತ್ತದೆಂದೂ ಆದರೂ ಭೈರವೇಶ್ವರ ಶಿಖರಕ್ಕಿಂತ ಎತ್ತರ ಬೆಳೆದಾಗ ತನ್ನಿಂದ ತಾನೇ ಶಿಖರದ ತುದಿ ಉದುರಿ ಬೀಳುತ್ತದೆಂದೂ ಅಲ್ಲಿನ ಜನ ಹೇಳುತ್ತಾರೆ. ಭೈರವೇಶ್ವರ ಶಿಖರದ ಒಳಗೆ ಗುಹೆಗಳಿವೆ, ನೋಡಲು ನಯನ ಮನೋಹರವಾಗಿವೆ, ಭೀತಿ ಹುಟ್ಟಿಸುವಷ್ಟು ದೊಡ್ಡದಾದಗುಹೆಗಳವು! ಇಂತಹ ಒಂದು ಮುಖ್ಯ ಗುಹೆಯಲ್ಲಿ ಭೈರವೇಶ್ವರ ದೇವರು ನೆಲೆಸಿದ್ದಾನೆ. ಹಿಂದೆ ನಡೆದ ಪುರಾಣೋಕ್ತ ಐತಿಹ್ಯದನೆನಪಿಗೆ ಈ ದೇವಸ್ಥಾನದಲ್ಲಿ ಶಿವ-ಮೋಹಿನಿ ಅಮ್ಮನವರಿಗೆ ಪೂಜೆ ಪ್ರತಿದಿನ ಸಲ್ಲುತ್ತದೆ.

ಇಲ್ಲಿ ಹತ್ತಿರದಲ್ಲಿಯೇ, ಕುಮಟಾದಿಂದ ಬರುವ ಮಾರ್ಗದಲ್ಲಿಯೇ ಒಂದು ಗುಡ್ಡವಿದ್ದು ಅದನ್ನು ಭಸ್ಮಾಸುರ ಬೂದಿಯಾದ ಸ್ಥಳವೆನ್ನುತ್ತಾರೆ, ಆಶ್ಚರ್ಯವೆಂದರೆ ಸುತ್ತಲ ಎಲ್ಲಾ ಗುಡ್ಡಗಳ ಮಣ್ಣು ಕೆಂಪು, ಇದು ಮಾತ್ರ ಕಪ್ಪು ಮಣ್ಣಿನಿಂದ ಕೂಡಿದೆ! ಇದು ವಿಜ್ಞಾನಿಗಳಿಗೂ ಸೋಜಿಗ ಉಂಟುಮಾಡಿದ ವಿಷಯವಾಗಿದೆ. ಯಾಣದ ದೇವರ ಗುಹೆಯಲ್ಲಿ ಕತ್ತಲು, ಇದನ್ನು ನೀಗಲು ಬಹಳ ಹಿಂದೆಯೇ ಸೌರ ವಿದ್ಯುತ್ ನಿಂದ ಉರಿಯುವ ದೀಪಗಳನ್ನು ಕೆಲ ವಿಜ್ಞಾನಿಗಳು ಬಂದು ಅಳವಡಿಸಿದ್ದಾರೆ. ಶಿಖರದಲ್ಲಿ ಅಲ್ಲಲ್ಲಿ ಜೇನು ಗೂಡುಗಳಿವೆ, ದೇವಸ್ಥಾನದಲ್ಲಿ ಸ್ವಚ್ಛತೆಯ ಕೊರತೆಯಾದಲ್ಲಿ, ಮೈಲಿಗೆಯಾದಲ್ಲಿ ಹೆಜ್ಜೇನುಗಳು
ಕಡಿಯುತ್ತವೆ
ಎಂಬ ಪ್ರತೀತಿ ಇದೆ. ಭೈರವೇಶ್ವರ ಗುಹಾಂತರ ದೇವಸ್ಥಾನದಲ್ಲಿ ನೀರು ಜೇನಹನಿಯ ರೀತಿ ದೇವರಮೇಲೆ ಸದಾ ತೊಟ್ಟಿಕ್ಕುತ್ತಿರುತ್ತದೆ. ಹಾಗೆ ತೊಟ್ಟಿಕ್ಕಿದ ನೀರು ಗುಹೆಯ ನೆಲದಲ್ಲಿ ಹರಿದು ಹೊರಗೆ ಹೋಗುತ್ತದೆ.

ಜಾತ್ರೆ
ಪ್ರತೀವರ್ಷ ಮಹಾಶಿವರಾತ್ರಿಯಂದು ಈ ದೇವಳದಲ್ಲಿ ಜಾತ್ರೆ ನಡೆಯುತ್ತದೆ. ಜಾತ್ರೆಯಲ್ಲಿ ಇಡೀದಿನ ನಾ ನಾ ಥರದ ಉತ್ಸವಗಳು, ಅಖಂಡ ಭಜನೆಗಳು, ಪಲ್ಲಕ್ಕಿ ಉತ್ಸವವೇ ಮೊದಲಾದ ಹಲವು ಸೇವೆಗಳು ನಡೆದು, ಶಿವರಾತ್ರಿಯ ಜಾಗರಣೆಯೊಂದಿಗೆ ಜಾತ್ರೆ ಕೊನೆಗೊಳ್ಳುವುದು. ಈ ಸಂದರ್ಭ ಸುತ್ತ-ಮುತ್ತಲ ಎಲ್ಲಾ ಪ್ರದೇಶಗಳಿಂದ ಸುಮಾರು ಹತ್ತಾರು ಸಾವಿರಜನ ಬಂದು ಹೋಗುತ್ತಾರೆ.

----
ಶಿವರಾತ್ರಿ

ಬೇಡನೊಬ್ಬ ಒಂದು ಸಂಜೆ ಆಹಾರ ಹುಡುಕುತ್ತ ಹೊರಟು ಒಂದು ಮೃಗವನ್ನು ಕಂಡು ಬೇಟೆಯಾಡಲು ಬೆನ್ನಟ್ಟಿ ಹೋಗುತ್ತಾನೆ. ಬಹಳ ಹಸಿದ ಕುಟುಂಬ,ಮನೆಯಲ್ಲಿ ಬೇರೆ ಏನೂ ತಿನ್ನಲು ಇರುವುದಿಲ್ಲ. ಹೀಗಾಗಿ ಬೇಟೆ ಸಿಗಲೇಬೇಕೆಂಬ ಹಠದಿಂದ ಮುಂದೆ ಮುಂದೆ ಹೋಗುತ್ತಾ ಕಾಡಲ್ಲಿ ಕತ್ತಲಾವರಿಸುತ್ತದೆ. ಕತ್ತಲಿನಲ್ಲಿ ಒಂದಷ್ಟು ದೂರ ನಡೆದ ಬೇಡ, ಬೇಸರಗೊಂಡು ತನ್ನ ಕುಟುಂಬವನ್ನು ನೆನೆಯುತ್ತ ಕ್ರೂರ ಮೃಗಗಳಿಂದ ತಪ್ಪಿಸಿಕೊಳ್ಳಲು ಆ ರಾತ್ರಿ ಕಾಡಲ್ಲೇ ಇರುವ ಯವುದೋ ಮರವೊಂದನ್ನೇರಿ ಕುಳಿತುಕೊಳ್ಳುತ್ತಾನೆ. ಏನೇ ಮಾಡಿದರೂ ಇಡೀ ರಾತ್ರಿ ಅವನಿಗೆ ನಿದ್ದೆ ಬರುವುದಿಲ್ಲ. ಹೀಗಾಗಿ ಮರದ ಟೊಂಗೆಯಲ್ಲಿ ಕೈಗೆಸಿಗುವ ಎಲ್ಲಾ ಎಲೆಗಳನ್ನು ಒಂದೊಂದಾಗಿ ಕಿತ್ತು ಕೆಳಗೆ ಹಾಕುತ್ತ ಬೇಸರ ಕಳೆಯುತ್ತಾನೆ. ಅವನ ಅರಿವಿಗೆ ಗೋಚರವಾಗದ ಒಂದು ಘಟನೆ ನಡೆಯುತ್ತದೆ, ಅದೆಂದರೆ ಆ ಮರದ ಕೆಳಗೆ ಒಂದು ಶಿವಲಿಂಗವಿದ್ದು, ಆ ಮರ ಬಿಲ್ವ ಪತ್ರೆಯದ್ದಾಗಿರುತ್ತದೆ! ರಾತ್ರಿಯಿಡೀ ಆತ ಹಾಕಿದ ಬಿಲ್ವದ ಎಲೆಯಿಂದ ಗೊತ್ತಿಲ್ಲದೇ ನಡೆದ ಆ ಪೂಜೆಯಿಂದ ಶಿವ ಪ್ರಸನ್ನನಾಗಿ ಅವನಿಗೆ ಪ್ರತ್ಯಕ್ಷ ದರುಶನವಿತ್ತು ಅವನ ಕಷ್ಟಗಳನ್ನು ಕಳೆಯುತ್ತಾನೆ. ಮುಂದೆ ಪ್ರತೀವರ್ಷ ಮಾಘಮಾಸದ ಕೃಷ್ಣಪಕ್ಷದ ಚತುರ್ದಶಿಯಂದು ಆ ರಾತ್ರಿ ’ಮಹಾಶಿವರಾತ್ರಿ’ ಎಂದು ಪರಿಗಣಿಸಲ್ಪಡುತ್ತದೆ; ಹಬ್ಬವಾಗಿ ದೇಶಾದ್ಯಂತ ಆಚರಿಸಲ್ಪಡುತ್ತದೆ.


ಶಿವನೊಬ್ಬ ಭಕ್ತರ ಭಕ್ತಾಗ್ರೇಸರ-ಬೋಳೆಶಂಕರ-ಬೋಲೆನಾಥ್
ನಿಜವಾಗಿಯೂ ಹೌದು. ನೀವು ಶಿವನ ಯಾವುದೇ ಕಥಾಮಾಲಿಕೆಯನ್ನು ತೆಗೆದುಕೊಳ್ಳಿ ಹಿಂದೆ-ಮುಂದೆ ನೋಡದೆ "ಭಕ್ತಾ , ನಿನ್ನ ಭಕ್ತಿಗೆ ಮೆಚ್ಚಿದ್ದೇನೆ, ಏನು ಬೇಕೋ ಕೇಳು", ಆಕ್ಷಣ ನಮ್ಮ ಶಿವ ತನ್ನನ್ನೇ ಮರೆತಿರುತ್ತಾನೆ! ಏನೋ ಕೇಳಿದರೂ "ತಥಾಸ್ತು"ಎಂದುಬಿಡುತ್ತಾನೆ! ಹೀಗೇ ಮಾಡಿ ರಾವಣನಿಗೆ ಆತ್ಮಲಿಂಗ ಕೊಟ್ಟ. ಹೀಗೇ ಮಾಡಿ ಭಕ್ತ ಮಾರ್ಕಾಂಡೇಯನಿಗೆ ಜೀವದಾನ ಕೊಟ್ಟ. ಜಪಿಸಿದರೆ ಹುಚ್ಚೆದ್ದು ಕುಣಿವ ವ್ಯಕ್ತಿತ್ವ ನಮ್ಮ ಈಶನದ್ದು. ಅಷ್ಟೇ ಕೋಪವೂ ಬರುತ್ತದೆ. ಅಷ್ಟೇ ಸ್ವಾಭಿಮನಿಯೂ ಹೌದು. ಶಿವನ ಕೋಪದಿಂದ ದಕ್ಷಯಜ್ಞವೇ ಒಂದು ದೊಡ್ಡ ಪ್ರಮಾದದ ಘಟನೆಯಾಯಿತು. ತನ್ನ ಭಕ್ತರನೇಕರಿಗೆ ವಿಶೇಷ ವರದಾನ ಮಾಡಿದ ಶಿವ " ದೇಹಿ " ಎಂದು ಬರುವವರಿಗೆ " ಅಸ್ತು " ಎಂದು ಕೊಟ್ಟುಬಿಡುವ ಕರುಣಾಮೂರ್ತಿ! ಬೇಡರ ಕಣ್ಣಪ್ಪನನ್ನು ನೋಡಿ, ಹಿರಣ್ಯಕಶಿಪುವನ್ನು ನೋಡಿ, ರಾವಣನನ್ನು ನೋಡಿ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ಶಂಭುವಿನಿಂದ ವರಪದೆದವರೇ.


' ಶಿವ 'ನೆಂದರೆ ಶುಭ ಎಂದರ್ಥ
ಶಿವನನ್ನು ಮೆಚ್ಚಿಸಲು ಹಲವಾರು ಪೂಜೆ-ಉಪಾಸನೆಗಳಿದ್ದರೂ ಗಜಚರ್ಮಧರ, ರುಂಡಮಾಲಧರ, ಭಸ್ಮವಿಲೇಪಿತ ಹೀಗೆಲ್ಲ ಕರೆಸಿಕೊಳ್ಳುವ ನಮ್ಮ ಸ್ವಯಂಭೂವಿಗೆ ನಮಕ-ಚಮಕಸಹಿತ
ರುದ್ರಾಭಿಷೇಕ, ಶ್ರೀರುದ್ರ ಇವುಗಳಿಂದಲೂ ಮೃತ್ಯುಂಜಯ,ಅಘೋರಾಸ್ತ್ರ ಮುಂತಾದ ಜಪಗಳಿಂದಲೂ ಶಿವ ಭಕ್ತರಿಗೆ ಸುಲಭಸಾಧ್ಯನಾಗುತ್ತಾನೆ. ರುದ್ರಪಾರಾಯಣಮಾಡುವುದರಿಂದ ಏಕಾಗ್ರತೆಯಿಂದ ಅದರ ಘೋಷವನ್ನು ಕೇಳುವುದರಿಂದ ನಮ್ಮ ರಕ್ತದೊತ್ತಡ ಸುಸ್ಥಿತಿಯಲ್ಲಿರುತ್ತದೆ[truly,scientifically proven sequence]. ಶ್ರೀರುದ್ರದ ಒಂದೊಂದು ಶ್ಲೋಕವೂ ಆಯುರ್ವೇದೀಯ ಔಷಧಿಗಳನ್ನು ಸೂಚಿಸುತ್ತದೆ. ರುದ್ರಪಾರಾಯಣದಿಂದ ಅನೇಕ ಹಂತದ ಮಾನಸಿಕ ವ್ಯಾಧಿಗಳು ನಿವಾರಣೆಯಾಗುತ್ತವೆ! ಅಭಿಷೇಕ ಇರುವಲ್ಲಿ ರುದ್ರವಿಲ್ಲದಿದ್ದರೆ ಅದು ಗೌಣ ! ಅಭಿಷೇಕದ ಕಲ್ಪನೆಯೇ ರುದ್ರದಿಂದ ಜನಿಸಿತೇನೋ ಎಂಬಷ್ಟು ಅದು ಅಭಿಷೇಕದ ಅವಿಭಾಜ್ಯ ಅಂಗ.

ಹರಿ-ಹರರಲ್ಲಿ ಭೇದವೆಣಿಸಬಾರದು
ಮೂಲ ಪರಬ್ರಹ್ಮನ ವಿವಿಧ ರೂಪಗಳಲ್ಲಿ ಎರಡು ರೂಪಗಳು. ಇವುಗಳಲ್ಲಿ ಭೇದ ಮಾಡಬಾರದು. ಹರಿ-ಹರ ಈರ್ವರೂ ಒಂದೇ. ನಮ್ಮ ಕೆಲವು ಹುಚ್ಚು ಆಚರಣೆಗಳಿಂದ ದೇವರನ್ನೇ divide & rule ಪಾಲಿಸಿಗೆ ಹಚ್ಚಿಬಿಟ್ಟಿದ್ದೇವೆ ನಾವು. ಇದನ್ನು ಗಮನಿಸಿಯೇ ಹಿರಿಯ ಕವಿ ಪು.ತಿ. ಅವರು 'ಹರಿಯ ಹೃದಯದಿ ಹರನ ಕಂಡೆನು ಹರನ ಹೃದಯದಿ ಹರಿಯನು.......' ಎಂಬ ಹಾಡನ್ನು ಬರೆದರು. ಶಿವ-ಕೇಶವ,ಶಂಕರ-ನಾರಾಯಣ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುವ ದೈವಶಕ್ತಿಯ ಮೂಲ ಒಂದೇ. ಆರಾಧನೆಗೆ ಮೂರ್ತರೂಪ ಮಾತ್ರ ಬೇರೆ.




ಶಿವ
ಅರ್ಧನಾರೀಶ್ವರ. ಶಿವ ಬಂದರೆ ಅಲ್ಲಿ ಶಿವೆಯೂ ಬಂದಳು ಎಂದೇ ತಿಳಿದಿರಬೇಕು. ಜಗದ ಹಿತಕ್ಕಾಗಿ ಸದಾ ಓಡಾಡುವ ಇವರನ್ನು " ಜಗತಃ ಪಿತರೌ ಒಂದೇ ಪಾರ್ವತೀ ಪರಮೇಶ್ವರೌ " ಎನ್ನುತ್ತಾರೆ, ಜಗತ್ತಿನ ತಂದೆ-ತಾಯಿ ಎಂದು ಗುರುತಿಸಲ್ಪಡುವ ಶಿವ-ಶಿವೆಯರನ್ನು ಸ್ಮರಿಸುತ್ತ ಶಿವನಲ್ಲಿ ಹೀಗೆ ಪ್ರಾರ್ಥಿಸೋಣ-






ಕರಚರಣ
ಕೃತಂ ವಾಕ್-ಕಾಯಜಂ ಕರ್ಮಜಂ ವಾ
ಶೃವನಯನಜಂ ವಾ ಮಾನಸಂ ವಾಪರಾಧಂ|
ವಿಹಿತಮವಿಹಿತಂ ವಾ ಸರ್ವಮೇತತ್ ಕ್ಷಮಸ್ವ
ಜಯಜಯ ಕರುಣಾ
ಬ್ಧೇ ಶ್ರೀ ಮಹಾದೇವ ಶಂಭೋ ||

[ ಹೇ ಪರಶಿವನೇ, ನಮ್ಮ ದೇಹ,ವಚನ,ಮನಸ್ಸು.ಇವುಗಳ ಕರ್ಮಗಳಿಂದಲೂ, ಕೇಳುವುದು-ನೋಡುವುದು ಮೊದಲಾದ ಪಂಚೇಂದ್ರಿಯಗಳಿಂದ ಎಸಗುವ ಕರ್ಮಗಳಿಂದಲೂ ದೋಷಪೂರಿತರಾಗುವ ನಮಗೆ ಯಾವುದು ಹಿತ-ಯಾವುದು ಅಹಿತ, ಯಾವುದು ಒಳ್ಳೆಯದು-ಯಾವುದು ಕೆಟ್ಟದ್ದು ಇದರಬಗೆಗೆ ಗೊತ್ತಿರದೇ, ನಮ್ಮ ಅಜ್ಞಾನದಿಂದ ಎಸಗುವ ಸಮಸ್ತದೋಷಗಳನ್ನು ದೂರಮಾಡಿ ನಮ್ಮನ್ನೆಲ್ಲ ಕ್ಷಮಿಸಿ ರಕ್ಷಿಸು, ಅಸತ್ಯದಿಂದ ಸತ್ಯದೆಡೆಗೆ,ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಜ್ಞಾನಮಾರ್ಗದೆಡೆಗೆ ಕರೆದೊಯ್ಯು ಎನ್ನುವುದು ಇದರಲ್ಲಿ ಅಡಗಿದ ತಾತ್ಪರ್ಯ ]

|| ಹರನಮಃ ಪಾರ್ವತೀಪತಯೇ ಹರ ಹರ ಮಹಾದೇವ ||