ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, November 2, 2010

ವಾರಾನ್ನದ ಹುಡುಗರೂ ಮತ್ತು ಪ್ರಶಸ್ತಿಯ ಸರದಾರರೂ !ವಾರಾನ್ನದ ಹುಡುಗರೂ ಮತ್ತು ಪ್ರಶಸ್ತಿಯ ಸರದಾರರೂ !

ಅನಿವಾರ್ಯವಾಗಿ ನಿಮ್ಮೊಡನೆ ಹಂಚಿಕೊಳ್ಳಬೇಕಾದ ಮನದ ಇಂಗಿತಗಳು ಕೆಲವು. ಸಮಾಜದ ಹತ್ತಾರು ಮುಖ-ಮಜಲುಗಳನ್ನು ಅವಲೋಕಿಸಿದಾಗ ಸಿಗುವ ಅನನ್ಯ ಅನುಭವ ಬರೇ ’ ಕುಳಿತೋದದೆಯುಂ ಕಾವ್ಯಪರಿಣತಮತಿಗಳ್’ ಎಂಬ ಮಾತಿಗೆ ಅಡ್ಡ ಬರುತ್ತವೇನೋ. ಕೆಲವನ್ನು ನಾವು ಅಗೆದು ತೆಗೆದು ಜಾಳಿಗೆಯಲ್ಲಿ ಜಾಲಾಡಿಸಿದಾಗ ಮಾತ್ರ ನಮಗೆ ಅವರ ಪರಿಣತಿಯಾಗಲೀ ಅಥವಾ ಇತಿಹಾಸದ ಕತ್ತಲೆಯ ಗರ್ಭದಲ್ಲಿ ನಡೆದುಹೋದ ನೈಜ ಕಥೆಗಳ ಹಂದರವಾಗಲೀ ನೋಡಸಿಗುತ್ತದೆ! ಅಂತಹ ಕೆಲವು ಘಟನೆಗಳನ್ನು ಅನಾವರಣ ಗೊಳಿಸುವ ಅನಿಸಿಕೆ ಅದಮ್ಯವಾಗಿ ಮನವನ್ನೆಲ್ಲಾ ಅಮರಿಕೊಂಡಾಗ ಹೀಗೆ ಬರೆಯುತ್ತಿದ್ದೇನೆ.

೩೦-೪೦ ವರ್ಷಗಳ ಹಿಂದಿನ ಕರ್ನಾಟಕ ಇಷ್ಟು ಸಿರಿವಂತರನ್ನು ಹೊಂದಿರಲಿಲ್ಲ, ಆ ವಿಷಯದಲ್ಲಿ ಈಗಲೇ ವಾಸಿ ಎನ್ನಬಹುದು. ಇವತ್ತು ಧನದ ಶ್ರೀಮಂತಿಕೆಯಿದೆ ಆದರೆ ಹೃದಯ ಸಿರಿವಂತಿಕೆಯ ಕೊರತೆ ಹಲವೆಡೆ ಕಾಣುತ್ತದೆ. ಅಂದು ಕರ್ನಾಟಕದ ಹಳ್ಳಿ ಹಳ್ಳಿಗಳು ರಸ್ತೆಗಳಿರದೇ, ಪ್ರಾಥಮಿಕ ಆರೋಗ್ಯ ಸೌಲಭ್ಯಗಳಿರದೇ ಇದ್ದವು. ಹಾಗಂತ ಹಳ್ಳಿಯ ಜನ ಭಾರತೀಯ ಆಯುರ್ವೇದವನ್ನು ಪಾರಂಪರ್ಯವಾಗಿ ನಡೆಸಿಬಂದ ಕೆಲವು ವೈದ್ಯರನ್ನು ಹೊಂದಿದ್ದರಿಂದ ಕಷ್ಟವೋ ಸುಖವೋ ಜೀವನ ನಡೆದುಹೋಯಿತು. ಯಾವುದೇ ಜಾತಿ ಮತಗಳನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ. ಸಹಜವಾಗಿ ಮನುಷ್ಯರು ಎಂದಿಟ್ಟುಕೊಳ್ಳೋಣ. ಆ ಮನುಷ್ಯರಲ್ಲಿ ಬಡತನ ಸದಾ ಕಾಡುವ ಸಮಸ್ಯೆಯಾಗಿತ್ತು. ಉಟ್ಟರೆ ಉಣಲಿಲ್ಲ, ಉಂಡರೆ ಉಡಲಿಲ್ಲ-ಹೀಗೇ ಬಹುತೇಕ ಹಳ್ಳಿಗಳು ಬಡವರನ್ನು ಹೊಂದೇ ಇದ್ದವು. ಆದರೂ ಇದ್ದುದರಲ್ಲೇ ತೃಪ್ತಿಪಡುವ, ಮನುಷ್ಯರ ಗುಣ-ನಡತೆ ಹಾಗೂ ಮಾನವೀಯ ಮೌಲ್ಯಗಳಿಗೆ ಬೆಲೆಕೊಡುವ ಸಮಾಜ ಅಂದಿಗಿತ್ತು. ದುಡ್ಡಿಲ್ಲದೇ ಇದ್ದರೂ ಕೆಲಸ ಪೂರೈಸಿಕೊಳ್ಳಬಹುದಾದ ಪರಸ್ಪರರ ಬಳಗವಿತ್ತು. ಅವರಿಗೆ ಇವರು ಇವರಿಗೆ ಅವರು ಎಂದು ಕೆಲಸಗಳಲ್ಲೂ ತಮ್ಮಿಂದ ತಾವೇ ತಮಗಾಗಿ ನಡೆಸಿಬಂದ, ಅಘೋಷಿತ ಕಾರ್ಯಕಾರೀ ಸಮಿತಿಯೊಂದು ಪ್ರತೀ ಹಳ್ಳಿಯಲ್ಲಿ ಕೆಲಸಮಾಡುತ್ತಿತ್ತು. ವಕೀಲರು-ನ್ಯಾಯಾಲಯ-ಆರಕ್ಷಕ ಠಾಣೆಗಳ ಅವಶ್ಯಕತೆಯಿಲ್ಲದೇ ಗ್ರಾಮದ ಕೆಲವು ಜನ ಹಿರಿಯರು ಸೇರಿ ಗೋತ್ತಾದ ಒಂದು ಕಟ್ಟೆಯೋ ಜಾಗವೋ ಅಲ್ಲಿ ಸೇರಿ ತಮ್ಮ ತೊಡಕುಗಳನ್ನು ಬಗೆಹರಿಸಿಕೊಳ್ಳುತ್ತಿದ್ದರು. ದೇವರು-ದಿಂಡರು ಎಂಬ ಭಕ್ತಿ ಭಾವವೂ ಮತ್ತು ಹಾದಿ ತಪ್ಪಿದರೆ ಯಾರೂ ಕ್ಷಮಿಸಲಾರರು ಎಂಬ ಭಯವೂ ಇದ್ದುದರಿಂದ ಯಾರೇ ಆಗಲಿ ಯಾವುದೇ ಅಪಚಾರದ ಕೆಲಸಕ್ಕೆ ಕೈಹಾಕಲು ಹೆದರುತ್ತಿದ್ದರು.

ರಾಜಕೀಯದ ಕಲಿ ಕಾಲಿಟ್ಟಮೇಲೆ ಹಳ್ಳಿಗಳ ಸ್ಥಿತಿ ಬದಲಾಗಿಹೋಯಿತು. ಎಷ್ಟಪ್ಪಾ ಅಂದರೆ ಅಕ್ಕ ಪಕ್ಕದ ದಾಯಾದರು ಮುಖ ಮುಖ ನೋಡದಷ್ಟು ಬದ್ಧವೈರಿಗಳಾಗಿ ಮಾರ್ಪಟ್ಟರು. ಯಾರಿಗೂ ಕಷ್ಟದ ಕೆಲಸವಾಗಲೀ ಶ್ರಮಜೀವನವಾಗಲೀ ಬೇಕಾಗಿಲ್ಲ. ಕೃಷಿ ಪದಾರ್ಥಗಳಷ್ಟೇ ಬೇಕೇ ವಿನಃ ಅವುಗಳನ್ನು ಬೆಳೆಯುವ ಗೋಜಿಗೆ ಹೋಗದವರೇ ಜಾಸ್ತಿ. ಎಲ್ಲರೂ ಅಂಡೆಚಡ್ಡಿ[ಪ್ಯಾಂಟು] ಹಾಕಲು ತೊಡಗಿದರು. ಪ್ರತಿಯೊಬ್ಬರ ಕೈಗೂ ಗಡಿಯಾರ ಬಂತು. ಕೆಲಸವಿಲ್ಲದೆಯೂ ಪೇಟೆ ಸುತ್ತುವ ಬೂಟಾಟಿಕೆಯ ವ್ಯವಹಾರಸ್ಥರು ತಯಾರಾದರು. ಹಾಸಿಗೆಗೂ ಮೀರಿ ಕಾಲು ಚಾಚುವ, ಸಾಲಮಾಡಿಯೂ ಗಡಿಗೆ ತುಪ್ಪ ಸೇವಿಸುವ ಜನರ ಸಂಖ್ಯೆ ಬೆಳೆಯತೊಡಗಿತು. ಪ್ರತೀ ಸಣ್ಣ ತೊಡಕಿಗೂ ನ್ಯಾಯಾಲಯಗಳ ಮೊರೆಹೋಗುವ ಕಾಲ ಆರಂಭವಾಯಿತು. ಪರಸ್ಪರರಲ್ಲಿ ವಿಶ್ವಾಸ ಕಮ್ಮಿಯಾಯಿತು. ಬ್ರಿಟಿಷರ ಒಡೆದು ಆಳುವ ನೀತಿಯನ್ನು ನಮ್ಮ ದೃತಿಗೆಟ್ಟ ರಾಜಕಾರಣಿಗಳು ಮನೆಮನೆಗಳಲ್ಲೂ ಉಪಯೋಗಿಸಿ ಮನೆಗಳನ್ನೇ ಒಡೆದರು. ಗ್ರಾಮ್ಯ ಬದುಕಿನ ಸಹಜ ಸ್ಥಿತಿ ತನ್ನತನವನ್ನು ಕಳೆದುಕೊಂಡು ಪಟ್ಟಣದ ಕಡತಂದ ಅತಿನಾಗರಿಕ ಹುಚ್ಚು ಸಂಪ್ರದಾಯ, ಸಂವೇದನೆಗಳು ಅನುಕರಿಸಲ್ಪಟ್ಟವು. ಕಂಡಿದ್ದನ್ನೆಲ್ಲಾ ಕೊಳ್ಳುವ ಮತ್ತು ಪಕ್ಕದವರ ’ತೂಕ’ಕ್ಕಿಂತ ತಮ್ಮ ’ತೂಕ’ವನ್ನು ಹೆಚ್ಚಿಸಿ ಕೊಳ್ಳುವ ಪಟ್ಟಿಯಲ್ಲಿ ಹೇರಳವಾಗಿ ಬೆಳವಣಿಗೆ ಕಂಡುಬಂತು. ಸಮಾಜದಲ್ಲಿ ಯಾರೂ ಯಾರನ್ನೂ ಯಾವಕೆಲಸಕ್ಕೂ ನಂಬಿನಿಲ್ಲುವ ವಾತಾವರಣವೇ ಕಳೆದುಹೋಯಿತು. ಅದರ ಪರಿಣಾಮ ಕುರುಡು ಕಾಂಚಾಣ ಬೃಹದಾಕಾರ ತಳೆದು ಕುಣಿಯಹತ್ತಿತ್ತು. ಎಲ್ಲೆಲ್ಲೂ ದುಡ್ಡು ದುಡ್ಡು ದುಡ್ಡು. ಹಣವಿದ್ದರೆ ಮಾತ್ರ ಬೆಲೆ, ಇಲ್ಲದಿದ್ದರೆ ಆ ವ್ಯಕ್ತಿಗಿಲ್ಲ ಭುವಿಯಲ್ಲಿ ನೆಲೆ ಎಂಬಂತಹ ದಿನಗಳು ಬಂದವು. ಇದನ್ನೆಲ್ಲಾ ಪ್ರಸಕ್ತ ನಮ್ಮನ್ನಾಳುವ ರಾಜಕೀಯದವರಲ್ಲೂ, ನಮ್ಮಲ್ಲೂ ನಾವೇ ಕಾಣುತ್ತಿದ್ದೇವೆ. ಪರೋಕ್ಷ ನಾವೆಲ್ಲಾ ಕೆಲಸಕ್ಕೆ ಬಾರದ ಕತ್ತೆಗಳಾಗಿ ನಮ್ಮಿಂದಾರಿಸಲ್ಪಟ್ಟ ಕೆಲವರು ಹಲವಷ್ಟು ಹಡೆಯುವ ಕುದುರೆಗಳಾಗಿ ಪರಿಸ್ಥಿತಿ ಹಿಗ್ಗಾಮುಗ್ಗಾ ತೂಗುವುದನ್ನು ಕಂಡೂ ಅಯ್ಯೋ ಅನ್ನಿಸಿ ಸುಮ್ಮನಿರಬೇಕಾಗಿದೆ ಅಲ್ಲವೇ ?

ಈ ಎರಡು ಕಾಲಘಟ್ಟಗಳ ಜತೆಜತೆಗೆ ಅಂದಿನ ಹಾಗೂ ಇಂದಿನ ಕೆಲವು ಮಾನವೀಯ ಮೌಲ್ಯಾಧಾರಿತ ಘಟನೆಗಳನ್ನು ಈಗ ನೋಡೋಣ. ಮೊದಲನೆಯದು ವಾರಾನ್ನ. ಬಡ ವಿದ್ಯಾರ್ಥಿಗಳು ತಮ್ಮ ಮುಂದಿನ ಕಲಿಕೆಗಾಗಿ ತಮ್ಮ ತಂದೆ-ತಾಯಿಗಳಿಂದ ಬೀಳ್ಕೊಂಡು, ಪಟ್ಟಣಗಳಿಗೆ ಬಂದು ಅಲ್ಲಿ ಕಠಿಣ ಪರಿಶ್ರಮದಿಂದ ಓದನ್ನು ಮುಂದುವರಿಸಲು ನಿರ್ಧರಿಸಿ, ಸ್ಥಿತಿವಂತರ ಅಥವಾ ಸ್ವಲ್ಪ ಸ್ಥಿತಿವಂತರ ಮನೆಗಳಿಗೆ ಭೇಟಿ ನೀಡಿ ಅನ್ನ-ವಸತಿಗೆ ಕೋರಿಕೊಂಡು ವಾರದ ಏಳುದಿನಗಳಲ್ಲಿ ಒಂದೊಂದು ಮನೆಯನ್ನು ಗೊತ್ತುಪಡಿಸಿಕೊಂಡು ಮುನ್ನಡೆಯುವುದು ವಾರಾನ್ನದ ವ್ಯವಸ್ಥೆ. ಅವತ್ತಿನ ಕಾಲಕ್ಕೆ ಕೆಲವು ಮನೆತನಗಳಲ್ಲಿ ದಾನ-ಧರ್ಮ ಮತ್ತು ಅತಿಥಿ ಸತ್ಕಾರಕ್ಕೆ ಆದ್ಯತೆಗಳಿದ್ದವು. ಕೆಲವು ಮಧ್ಯಮವರ್ಗದ ಕುಟುಂಬಗಳೂ ದೊಡ್ಡಮನಸ್ಸಿನಿಂದ ಕುಗ್ರಾಮ-ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗಾಗಿ ವಾರಕ್ಕೊಂದು ದಿನ ಆಶ್ರಯನೀಡುತ್ತಿದ್ದರು. ಇನ್ನೂ ಕೆಲವರು ತಮ್ಮ ಮನೆಗಳಲ್ಲಿ ಅದೂ ಇದೂ ಕೆಲಸಮಾಡಿಸಿಕೊಂಡು ಒಂದುದಿನ ಅನ್ನ ಹಾಕುತ್ತಿದ್ದರು.

ಈ ವಾರಾನ್ನಕ್ಕೆ ಹೋಗುವ ಹುಡುಗರಿಗೆ ಬಹಳ ಇರುಸುಮುರುಸು. ಅನ್ನಹಾಕುವವರ ಋಣವನ್ನು ಭರಿಸುವುದು ಹೇಗೆ ಎಂಬ ಯೋಚನೆ ಕೆಲವರಲ್ಲಿರುತ್ತಿತ್ತು. ಕೆಲವು ಮನೆಗಳಲ್ಲಿ ಬಂದ ವಾರದ ಹುಡುಗರನ್ನು ಚೆನ್ನಾಗಿ ಕಂಡರೆ ಇನ್ನು ಕೆಲವು ಮನೆಗಳಲ್ಲಿ ಒಟ್ಟಾರೆ ಹಾಕಬೇಕಲ್ಲಪ್ಪಾ ಎಂಬ ಭಾವವಿರುತ್ತಿತ್ತು. ಕೆಲವೊಮ್ಮೆ ಸರದಿಯ ವಾರದ ಮನೆಯವರು ಅನಾರೋಗ್ಯದಿಂದಲೋ ಅಥವಾ ಬೇರೇ ಕಾರ್ಯಗಳಿಂದಲೋ " ನಾಳೆ ಬರಬೇಡ, ಮುಂದಿನವಾರ ಬಾ " ಎಂದುಬಿಟ್ಟರೆ ಆಗ ಆ ವಿದ್ಯಾರ್ಥಿಗೆ ಉಪವಾಸವೇ ಗತಿಯಾಗಿಬಿಡುತ್ತಿತ್ತು. ಅಪರೂಪಕ್ಕೊಮ್ಮೆ ತಮ್ಮ ಸಹಪಾಠಿಗಳ ತಂದೆ-ತಾಯಿಗಳು ಎಲ್ಲಾದರೂ ಒಪ್ಪಿ ಅನ್ನಹಾಕುವುದಾದರೆ ಹಾಗೆ ಉಪವಾಸವುಳಿಯಬೇಕಾಗಿ ಬರುವ ದಿನ ಅಂತಹ ಮನೆಗಳಿಗೆ ಹೋಗುತ್ತಿದ್ದರು. ತಾವೇ ಹೋಗಿ " ಊಟಕ್ಕೆ ಬರಲೇ " ಎಂದು ಕೇಳುವಾಗ ಅವರ ಮನೋಭಾವ-ನಿರ್ವಾಹವಿಲ್ಲದೇ ಕೇಳಿಕೊಳ್ಳುವ ಪರಿ ನೀವೇ ಊಹಿಸಿ. ಕೆಲವು ಮನೆಗಳಲ್ಲಿ ನಡುವಯಸ್ಸಿನ ಹುಡುಗರು ವಾರದ ಹುಡುಗರನ್ನು ಗೋಳುಹುಯ್ದುಕೊಳ್ಳುತ್ತಿದ್ದರು. ಇನ್ನು ಕೆಲವು ಮನೆಗಳಲ್ಲಿ ಮನೆಯೊಡೆಯ ಒಪ್ಪಿಕೊಂಡಿದ್ದರೂ ಹೆಂಗಸರು ಕರುಬುತ್ತಲೇ ಅನ್ನಹಾಕುತಿದ್ದರು. ಹಲವು ಮನೆಗಳಲ್ಲಿ ವಾರದ ವಿದ್ಯಾರ್ಥಿಗಳು ಹೂವಿನ ಗಿಡಗಳಿಗೆ ನೀರುಹಾಕುವುದು, ಬಾವಿಯಿಂದ ನೀರು ಸೇದಿ ಸಂಗ್ರಹಿಸುವುದು, ಬಟ್ಟೆ ಒಗೆಯುವುದು, ಸಾಮಾನು ತಂದುಕೊಡುವುದೇ ಮುಂತಾದ ಹಲವು ಕೆಲಸಗಳನ್ನು ಮಾಡಬೇಕಾದ ಪ್ರಮೇಯವಿತ್ತು. ಕೆಲವರು ಮಾತ್ರ ಇಂತಹ ವಿದ್ಯಾರ್ಥಿಗಳನ್ನು ದೇವರಂತೇ ಕಾಣುವ ಮನೋಧರ್ಮದವರಾಗಿದ್ದರು. ಅಂತೂ ಅಂದಿಗೆ ಕೊನೇಪಕ್ಷ ಅನ್ನಹಾಕುವ ಧಾರಾಳತನವಿತ್ತಲ್ಲ ಎಂಬುದೇ ಸಮಾಧಾನ.

ಹಾಗೆ ನೋಡಿದರೆ ಅಂದಿಗೆ ಅಡಿಗೆ ಪರಿಕರಗಳು, ಅನುಕೂಲತೆಗಳು ಕಮ್ಮಿ ಇದ್ದವು. ಇದ್ದಲು ಒಲೆ ಅಥವಾ ಸೀಮೆ ಎಣ್ಣೆ ಅಗ್ಗಿಷ್ಟಿಕೆಯನ್ನು ಬಳಸಿ ಆಹಾರ ಬೇಯಿಸಬೇಕಾಗಿತ್ತು. ಕೆಲವು ಕಡೆ ಕಟ್ಟಿಗೆಯ ಒಲೆಯೂ ಇದ್ದ ಕಾಲವದು. ಅಂದಿನ ಗೃಹಿಣಿಯರಿಗೆ ಶಾರೀರಿಕ ಅನಾನುಕೂಲವಿದ್ದರೆ ಇವತ್ತಿನ ರೀತಿ ಹಲವು ವೈದ್ಯಕೀಯ ಸವಲತ್ತುಗಳು ಇರಲಿಲ್ಲ. ಹಾಗಂತ ಅತಿರೇಕದ ಧಾವಂತವೂ ಇರದ ಜೀವನ ಅವರದಾಗಿತ್ತು. ತಮ್ಮ ಮಕ್ಕಳ ಜತೆಗೆ ಬಂದ ವಾರದ ವಿದ್ಯಾರ್ಥಿಯನ್ನೂ ಆತ್ಮೀಯವಾಗಿ ಕಂಡು ಉಣಬಡಿಸುವ ಕೆಲವರಿದ್ದರು.

ಒಮ್ಮೆ ಒಬ್ಬರು ಹೇಳಿದ್ದು-- ತಾವು ವಾರಾನ್ನ ಮಾಡುತ್ತಿರುವಾಗ ಒಂದು ದಿನ ಉಪವಾಸವಿರಬೇಕಾದ ಪ್ರಮೇಯ ಬಂದಿತ್ತು. ಯಾವ ಮನೆಯೂ ಗೊತ್ತಾಗಿರಲಿಲ್ಲ. ಸಹಪಾಠಿಯೊಬ್ಬನ ಸ್ನೇಹದಲ್ಲಿ ಆತನಲ್ಲಿ ನಿವೇದಿಸಿ " ಏ ನಿಮ್ಮಮ್ಮಂಗೆ ಹೇಳಿ ಊಟ ಹಾಕಲು ಕೇಳಿನೋಡುತ್ತೀಯೇನೋ " ಎಂದಿದ್ದಕ್ಕೆ ಆ ಹುಡುಗ ಒಪ್ಪಿ ತನ್ನ ಮನೆಯಲ್ಲಿ ಹೇಳಿಬಿಟ್ಟಿದ್ದಾನೆ. ಅವರು " ಆಗಲಿ ಆತ ಬರಲಿ " ಎಂದು ಹೇಳಿಕಳಿಸಿದ್ದಾರೆ. ಈತ ಹೋಗಿದ್ದಾಯ್ತು, ಹೋದಾಗ ಕಂಡಿದ್ದು ಅದು ಸಣ್ಣದೊಂದು ಮನೆ. ಅತಿ ದೊಡ್ಡ ಸಂಸಾರ. ಏಳೆಂಟು ಮಕ್ಕಳು-ಗಂಡ-ಹೆಂಡತಿ. ಅವರಿಗೇ ಬಡತನ. ಅಂಥದ್ದರಲ್ಲೂ ಆ ಮಹಾತಾಯಿ ತನ್ನಮಕ್ಕಳ ರೀತಿಯಲ್ಲೇ ಒಬ್ಬ ಉಂಡರೆ ದೇವರು ಉಂಡಂತೇ ಎಂಬ ಭಾವದಿಂದ ಬರಹೇಳಿದ್ದಳು! ಆಮೇಲೆ ಪ್ರತೀವಾರದ ಒಂದು ದಿನ ಅವರ ಮನೆಗೆ ಊಟಕ್ಕೆ ಹೋದಾಗ ಈತನಿಗೆ ಬಿಸಿಬಿಸಿ ಅನ್ನ ಬಡಿಸುತ್ತಿದ್ದರು. ಅಕ್ಕ ಪಕ್ಕದಲ್ಲಿ ಕುಳಿತುಕೊಳ್ಳುವ ತನ್ನ ಮಕ್ಕಳಿಗೆ ತಂಗಳನ್ನು ಬಡಿಸುತ್ತಿದ್ದಳು ಆ ಮಹಾತಾಯಿ. ಇದನು ಗ್ರಹಿಸಿದ ಈತ " ಯಾಕಮ್ಮಾ ನನಗೆ ಮಾತ್ರ ಬಿಸಿಬಿಸಿ ಅನ್ನ, ನಿಮ್ಮ ಮಕ್ಕಳಿಗೆಲ್ಲಾ ತಂಗಳನ್ನ ಹಾಕುತ್ತೀರಿ ? " ಎಂದಾಗ ಅವರೆಂದರು " ಅಯ್ಯಾ, ಅವರಿಗೆ ಅನಾರೋಗ್ಯವಾದರೆ ನೋಡಿಕೊಳ್ಳಲು ತಂದೆ-ತಾಯಿ ನಾವಿಲ್ಲೇ ಇದ್ದೇವೆ, ನಿನಗೆ ಅಪ್ಪಿ-ತಪ್ಪಿ ಅನಾರೋಗ್ಯವಾದರೆ ಯಾರುನೋಡಿಕೊಳ್ಳುವವರಿದ್ದಾರಪ್ಪ ? ಅದಕ್ಕೇ ಹಾಗೆ ಮಾಡುತ್ತಿದ್ದೇನಪ್ಪಾ, ಏನೂ ತೊಂದರೆಯಿಲ್ಲ ಬಿಡು. " ಆ ಮಾತನ್ನು ಕೇಳಿ ಈತನಿಗೆ ಅವರೂ ತನ್ನ ತಾಯಿಯಸಮಾನ ಎಂದೆನಿಸಿತು. ಸಹಜತಾನೇ ?

ಇನ್ನೊಂದು ದಿನ ಇದೇ ವಿದ್ಯಾರ್ಥಿಗೆ ಊಟವಿರಲಿಲ್ಲ. ಅನಿರೀಕ್ಷಿತವಾಗಿ ವಾರದಲ್ಲೊಂದು ದಿನ ಅನ್ನಹಾಕುವವರು ಎಲ್ಲಿಗೋ ಪ್ರಯಾಣ ಹೋಗಿದ್ದರಿಂದ ಅಂದಿಗೆ ಉಪವಾಸವೇ ಗತಿಯಾಗಿತ್ತು. ತಾಳದ ಹೊಟ್ಟೆಯ ತಾಳಕ್ಕೆ ತಕ್ಕಂತೇ ಒಂದಷ್ಟು ನೀರುಕುಡಿದು ಅನ್ನದ ಜಾಡನ್ನು ಹಿಡಿದು ಹೊರಟಿದ್ದನೀತ. ದಕ್ಷಿಣ ಕನ್ನಡದ ಪುಣ್ಯಾತ್ಮರೊಬ್ಬರ ಹೋಟೆಲ್ ಒಂದು ಕಾಣಿಸಿತು. ಹೇಳಿ-ಕೇಳಿ ದಕ್ಷಿಣ ಕನ್ನಡವೆಂದರೆ ಉತ್ಕೃಷ್ಟ ಆಹಾರ ತಯಾರಿಕೆಗೆ ಹೊಸ ವ್ಯಾಖ್ಯಾನ ಬರೆದ ಜಾಗತಾನೇ? ಅಲ್ಲಿನವರ ಹೋಟೆಲ್ ಕೂಡಾ ಹಾಗೇ ಇರುತ್ತವೆ. ಈ ಹುಡುಗ ಆ ಹೋಟೆಲ್ ಮುಂಭಾಗ ಒಂಡೆರಡು ಸಲ ಆಚೆ ಈಚೆ ಓಡಾಡಿದ. ಗಲ್ಲಾದಲ್ಲಿ ಕುಳಿತು ಹಣಸ್ವೀಕರಿಸುತ್ತಿದ್ದ ಮಹಾಬಲೇಶ್ವರ ಭಟ್ಟರಿಗೆ ಈತ ಕಂಡ. ಅವರಿಗೆ ಈತನ ಪರಿಚಯವಿತ್ತು. ಈತ ವಾರಾನ್ನಮಾಡಿ ವಿದ್ಯಾರ್ಜನೆ ಮಾಡುವ ಹುಡುಗ ಎಂದು ಹಿಂದೆ ಯಾರೋ ಹೇಳಿದ್ದರು. ಹಾಗೆ ಕಂಡ ಅವನನ್ನು ಅವರು ಒಳಗೆ ಕರೆದರು. " ಏನಪ್ಪಾ ಊಟವಾಯ್ತಾ ? " ಈತ ನಿರುತ್ತರನಾಗಿದ್ದ. ಅನ್ನ-ತಿಂಡಿ ತಯಾರಿರುವ ಹಾಗೂ ಅದನ್ನೇ ಉದ್ಯಮವಾಗಿಸಿಕೊಂಡಿರುವ ಜಾಗಕ್ಕೇ ಬಂದು ಬಿಟ್ಟಿಯಲ್ಲಿ ಅನ್ನಹಾಕಿ ಎಂದಹಾಗೆ ಆಗುತ್ತದೇನೋ ಎಂಬ ಭಾವನೆ ಈತನಿಗೆ. ಮಾತನಾಡದ್ದಕ್ಕೆ ಸಲುಗೆಯಿಂದ ಭಟ್ಟರು ಒಂದು ಬಿಟ್ಟರು ! ಹಸಿದ ಹೊಟ್ಟೆಯಲ್ಲೂ ಏನೋ ಚಳುಕು, ನೋವು. ಆಗ ಬಾಯಿಂದ ಬಂದಿದ್ದು " ಇಲ್ಲಾ ಸ್ವಾಮೀ, ಇವತ್ತು ವಾರದ ಸರದಿ ಮನೆಯವರು ಎಲ್ಲಿಗೋ ಹೋಗಿದ್ದಾರೆ. ಹೀಗಾಗಿ ಊಟವಿಲ್ಲ. " ಭಟ್ಟರು ಕುಳಿತಲ್ಲಿಂದಲೇ ಕೂಗಿ ಹುಡುಗನೊಬ್ಬನನ್ನು ಕರೆದರು. " ಹೇಯ್ ಬರ್ರೋ ಇಲ್ಲಿ, ಇವನನ್ನು ಕರೆದುಕೊಂಡು ಹೋಗಿ ಊಟಹಾಕಿ. "

ಊಟಮುಗಿಸಿದ ಸಂತೃಪ್ತ ಹೊಟ್ಟೆಯಲ್ಲಿ ಭಟ್ಟರನ್ನು ಮನದಲ್ಲೇ ಅಭಿನಂದಿಸುತ್ತಾ ಗಲ್ಲಾದ ಹತ್ತಿರ ಬಂದ ಈತನನ್ನು ಮತ್ತೆ ಹಿಡಿದುಕೊಂಡರು ಭಟ್ಟರು. " ಹೇಯ್ ನಿಲ್ಲಯ್ಯಾ, ಆಣೆ ಎಂದರೇನು ಗೊತ್ತೇನಯ್ಯಾ ನಿಂಗೆ? ನಿನ್ನ ಬಲಗೈಕೊಡು, ನನ್ನ ತಲೆಯಮೇಲೆ ಇಡು ಹೇಳು ಇವತ್ತಿನಿಂದ ಊಟವಿರದ ದಿನ ನಮ್ಮಲ್ಲಿಗೆ ಬಂದು ಊಟಮಾಡದೇ ಹೋದರೆ ಮಹಾಬಲೇಶ್ವರ ಭಟ್ಟರಮೇಲಾಣೆ. " ಒಂಥರಾ ಹೆದರಿಕೆಯಿಂದ ಹುಡುಗ ಹೇಳಿಕೊಟ್ಟಂತೇ ಮಾಡಿದ. ಆಮೇಲೆ ಹೇಳಿದರು " ನೋಡಯ್ಯಾ ಅಕಸ್ಮಾತ್ ನೀನು ಉಪವಾಸವಿದ್ದು ಆಣೆಮಾಡಿದ್ದನ್ನು ಮರೆತರೆ ಮಹಾಬಲೇಶ್ವರ ಭಟ್ಟರು ಸತ್ತುಹೋಗುತ್ತಾರೆ ತಿಳಿಯಿತೇ ? " ಹುಡುಗ ದಂಗಾಗಿ ಹೋಗಿದ್ದ. ಈ ಹುಡುಗ ಇನ್ನೂ ಜೀವಂತವಿದ್ದು ಹೆಸರ್ವಾಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ನೆಲೆನಿಂತ ಈತನೇ ಭಾರತೀಯ ವಿದ್ಯಾಭವನದ ನಿರ್ದೇಶಕರಾಗಿರುವ ಶೀ ಮತ್ತೂರು ಕೃಷ್ಣಮೂರ್ತಿ. ಇಂತಹ ಸಾಮಾಜಿಕ ಕಳಕಳಿಯುಳ್ಳ, ಒಳ್ಳೆಯತನವನ್ನು ಪ್ರೋತ್ಸಾಹಿಸುವ ಹಲವು ಧಾರ್ಮಿಕ ಮನೋಭಾವದ ಜನ ಅಂದಿದ್ದರು. ಇದು ಒಂದು ಉದಾಹರಣೆಯಾದರೆ ಇಂತಹುದೇ ಅಸಂಖ್ಯ ಸಂಗತಿಗಳು ನೋಡಸಿಗುತ್ತವೆ. ವಾರಾನ್ನ ಕಲಿಸಿದ ವಿನಯ ವಿಧೇಯತೆ ಬಹಳ ಎಂದು ಪ್ರತೀ ವ್ಯಕ್ತಿಯ ಜೀವನವನ್ನು ತಿಳಿದಾಗಲೂ ನಮ್ಮರಿವಿಗೆ ಬರುತ್ತದೆ. ಜೀವನದಲ್ಲಿ ವಾರಾನ್ನದ ಹುಡುಗರು ಸಾಧಿಸಿದಷ್ಟು ಬೇರೆ ಹುಡುಗರು ಸಾಧಿಸಲಿಲ್ಲ ಎನ್ನುವದು ಕಂಡುಬರುತ್ತದೆ. ಕಲಿತು, ಬೆಳೆದು, ತಮ್ಮಕಾಲಮೇಲೆ ತಾವು ನಿಂತು, ದೇಶದ ಅತ್ಯುತ್ತಮ ಹುದ್ದೆಗಳನ್ನು ಅಲಂಕರಿಸಿದ ಅನೇಕ ಹುಡುಗರು ವಾರಾನ್ನದವರೆಂದರೆ ಆಶ್ಚರ್ಯವಾಗುತ್ತದಲ್ಲವೇ ?

ಇನ್ನೊಂದು ವಿಧದ ಬಗ್ಗೆ ಮಾತಾಡೋಣ. ಅದು ರಾಜಕೀಯದ ರುಶುವತ್ತು. ಇಂದು ಎಲ್ಲವೂ ಲಂಚಪ್ರಪಂಚ ! ಲಂಚಾವತಾರ ! ಲಂಚವಿಲ್ಲದೇ ಯಾವುದೂ ನಡೆಯುವುದಿಲ್ಲ ಎಂಬಷ್ಟು ಹಾಸುಹೊಕ್ಕಾಗಿದೆ ಲಂಚದ ಇರವು. ಬ್ರಷ್ಟಾಚಾರ ನಿರ್ಮೂಲನೆಯ ಕಾರ್ಯಕ್ರಮ ಉದ್ಘಾಟನೆಗೆ ಬಂದ ರಾಜಕಾರಣಿಗೆ ಮರಳುವಾಗ ಅಲ್ಲೇ ಸಿಕ್ಕು ಯಾವುದೋ ಕೆಲಸಮಾಡಿಸಿಕೊಳ್ಳಲು ಲಂಚ. ನೌಕರಿ ಗಿಟ್ಟಿಸಲು, ಸಿಕ್ಕಿದ ನೌಕರಿಯಲ್ಲಿ ಮುಂಬಡ್ತಿಪಡೆಯಲು, ಬೇಕಾದ ಜಾಗಕ್ಕೆ ವರ್ಗಾಯಿಸಿಕೊಳ್ಳಲು, ಡೊನೇಶನ್ ಹಣಗಳಿಸಲು ಕಳಪೆ ವಿದ್ಯಾಸಂಸ್ಥೆಗಳನ್ನು ಆರಂಭಿಸಿದ್ದಕೆ ಪರವಾನಿಗೆ ಪಡೆಯಲು ಈಗ ಇದೆಲ್ಲವೂ ಮುಗಿದು ಪ್ರಶಸ್ತಿ-ಪುರಸ್ಕಾರಗಳಿಗೆ ಲಾಬಿ ನಡೆಯುತ್ತಿದೆ! ಅದಕ್ಕೂ ಲಂಚ. ಅರ್ಹತೆಗೆ ಮೀರಿದ ಗೌರವವನ್ನು ಕೊಂಡುಕೊಳ್ಳುವ ಪರಿಪಾಠ! ಎಂಥಾ ವಿಪರ್ಯಾಸ ನೋಡಿ.

ನಮ್ಮ ಊರಲ್ಲೆಲ್ಲಾ ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಊಟಮಾಡುವಾಗ ಮದುವೆಮನೆಯವರು ಬಂದು ಊಟದ ಜಾಗಕ್ಕೆ ಕರೆಯಬೇಕಿತ್ತು. ಬದಲಾದ ರೀತಿಯಲ್ಲಿ ಇಂದು ನಾವು ತಟ್ಟೆಹಿಡಿದು ಬೇಡಿ ತಿನ್ನುವ ’ಬಫೆ’ ಯನ್ನು ಸ್ವೀಕರಿಸಿದ್ದೇವೆ. ಜಾಗ ಜಾಸ್ತಿ ಇಲ್ಲದ ಜಾಗದಲ್ಲಿ ಅದು ಅನುಕೂಲವೇ ಆದರೂ ನಮ್ಮ ಆಯುರ್ವೇದ ಸಾರುವುದು ನಿಂತು ಏನನ್ನೂ ತಿಂದು-ಕುಡಿದು ಮಾಡಬೇಡಿ ಎಂಬುದಾಗಿ. ಆದರೆ ಅದನ್ನೆಲ್ಲಾ ಕೇಳುವವರಾರು? ನಿನ್ನೆ ನನಗೆ ಒಬ್ಬರು ಸಿಕ್ಕರು ಮತ್ತು ಹೇಳಿದರು " ಏನಿಲ್ಲಾ ಸರ್ ಎಲ್ಲರಿಗೂ ಹೇಳ್ಬುಟ್ಟಿದ್ದೀನಿ, ಆಫೀಸಲ್ಲಿ ಎಲ್ಲರೂ ಅವರವರ ಸಂಬಳದಲ್ಲಿ ೫೦೦ ರೂಪಾಯಿ ಕೊಡಿ ಅಂತ. ಕನ್ನಡದ ಯಾವುದಾದರೂ ಚಿತ್ರವನ್ನು ಇಟ್ಟು ಒಂದು ಮಾಲೆ ಹಾಕಿ, ಒಂದೊಂದು ಸ್ವೀಟ್ ಕೊಟ್ಟು, ಒಂದುದ್ದ ಸರ ಪಟಾಕಿ ಹಚ್ಬುಡ್ತೀವಿ, ಅಲ್ಲಿಗೆ ಯಾರೂ ಮಾತಾಡೋ ಹಾಗೇ ಇಲ್ಲ ಏನಂತೀರಾ ? " . ನಾನು ಹೌದು ಅನ್ನಲೋ ಅಲ್ಲ ಅನ್ನಲೋ ತಿಳಿಯದಾದೆ. ಯಾಕೆಂದರೆ ಆಚರಣೆಗಳೆಲ್ಲಾ ಡಾಂಭಿಕವಾದಾಗ ಅದರಲ್ಲಿ ಮಹತ್ತರ ಸಾಧನೆಯೇನಿದೆ? ಈಗ ಎಲ್ಲವೂ ಅಷ್ಟೆ ಒಂದು ಸಿನಿಮಾ ಅಂದರೆ : ಕೆಲವು ಮರಸುತ್ತುವ ಹಾಡುಗಳು, ಒಂದೆರಡು ಫೈಟು, ಒಂದು ಕ್ಲೈಮ್ಯಾಕ್ಸು -ಎಂದು ಯಾರೋ ಹೇಳಿದ್ದು ನೆನಪಿಗೆ ಬಂತು. ಎಲ್ಲವೂ ಹೀಗೇ ಆಗಿಬಿಟ್ಟಿವೆ. ಅದರಂತೇ ನಮ್ಮ ಪ್ರಶಸ್ತಿ, ದಾಖಲೆಗಳು, ಡಾಕ್ಟರೇಟ್ ಮುಂತಾದವುಗಳೆಲ್ಲಾ ಸೇರಿಕೊಂಡು ಅಣಕಿಸಿದಂತೇ ಆಗುತ್ತದೆ.

ಬದುಕಿನಲ್ಲಿ ಏನಾದರೂ ಅನುಸರಿಸುವುದಿದ್ದರೆ ಅದನ್ನು ಕಾರಂತ, ಬೇಂದ್ರೆ ಮತ್ತು ಡೀವಿಜಿಯವರಿಂದ ಕಲಿಯಬೇಕಾಗಿತ್ತು. ಇಂದಿಗೆ ಅವರು ಅಮರರು ಹೀಗಾಗಿ ಅವರ ಕೃತಿಗಳಲ್ಲಿ ಅವರ ಜೀವನಚರಿತ್ರೆಗಳಲ್ಲಿ ಆದಷ್ಟೂ ನೋಡಿ ತಿಳಿದುಕೊಳ್ಳುವುದು ಬಹಳ ಇದೆಯೆನಿಸುತ್ತದೆ. ಮೀಸಾ ಕಾಯಿದೆಯನ್ನು ಜಾರಿಗೆತಂದ ಸಮಯದಲ್ಲಿ ಕೇಂದ್ರ ಸರಕಾರ ಕೊಟ್ಟ ಪುರಸ್ಕಾರವನ್ನು ನೇರವಾಗಿ ಶ್ರೀಮತಿ ಇಂದಿರಾಗಂಧಿಯವರಿಗೆ ಬಿಸಾಕಿದ ಹೆಗ್ಗಳಿಕೆ ಕಾರಂತರದು! ಬ್ರಿಟಿಷರು ತಪ್ಪಾಗಿ ತಿಳಿದು ಶಿಕ್ಷಿಸಿದಾಗಲೂ ಸಹಿಸಿ ಸಾಹಿತ್ಯ ಮುಂದುವರಿಸಿದ ಮತ್ತು ಯಾವುದೇ ಪ್ರಶಸ್ತಿಗಾಗಿ ಹಲ್ಲುಗಿಂಜುವ ಕೆಲಸಮಾಡದವರು ಬೇಂದ್ರೆ. ಅಭಿಮಾನಿಗಳು ಸನ್ಮಾನಿಸಿ ಕೊಟ್ಟ ಒಂದುಲಕ್ಷರೂಪಾಯಿಯ [೩೫ ವರ್ಷಗಳ ಹಿಂದೆ] ಹಣವನ್ನು ಸಾರ್ವಜನಿಕ ಸೇವೆಗೆ ಮುಡಿಪಾಗಿಸಿದವರು ಡೀವೀಜಿ. ಮಾಸಾಶನ ಕೊಡುವುದಕ್ಕೆ ಆಸ್ತಿವಿವರದ ಅರ್ಜಿ ಕೇಳಿ ಡಾ| ಕೆರೆಮನೆ ಮಹಾಬಲ ಹೆಗಡೆಯವರಿಗೆ ಸರಕಾರದ ಪತ್ರಬಂದಾಗ ಅವರು ಹೇಳಿದ್ದಿಷ್ಟು: " ಕಲಾವಿದನೊಬ್ಬನಿಗೆ ಮಾಸಾಶನವನ್ನು ಆತನ ಕಲಾಸೇವೆ ನೋಡಿ ಕೊಡುವುದಾದರೆ ಅದು ಸರಿ, ಆಸ್ತಿಯವಿವರ ಕೇಳಿ ಅರ್ಜಿ ಪಡೆದು ಕೊಡುವುದಾದರೆ ಅದಕ್ಕೆ ನನ್ನ ಧಿಕ್ಕಾರವಿದೆ". ಹುಟ್ಟಾ ಕಡುಬಡತನದಿಂದ ಬಂದ ಹೆಗಡೆ ರಂಜಿಸಿದ ಜನರ ಸಂಖ್ಯೆ ಅಪಾರ. ಅವರ ಕಲಾಸೇವೆ ಅಮೋಘ. ಆದರೆ ಕುರುಡು ಸರಕಾರಕ್ಕೆ ಅಂದು ಕಣ್ಣಿರಲಿಲ್ಲವಲ್ಲ! ಇಂತಹ ಘನತೆವೆತ್ತ ಜನರನ್ನು ನಾನು ಬೇರೆಲ್ಲೂ ಕಾಣಲಿಲ್ಲ. ಇವರನ್ನೆಲ್ಲಾ ಪಡೆದುದು ನಮ್ಮ ಭಾಗ್ಯ.

ಆದರೆ ಈಗ ಎಲ್ಲವೂ ತಂತ್ರ-ಪ್ರತಿತಂತ್ರ-ಕುತಂತ್ರ ರಾಜಕಾರಣಿಗಳ ತಹಬಂದಿಯಲ್ಲಿ ಲಂಚದ ಮೂಲಕವೇ ನಡೆಯುವ ಕೆಲಸಗಳು ಹಲವು. ಪ್ರಶಸ್ತಿಗಾಗಿ ಅರ್ಜಿ ಸ್ವೀಕರಿಸುವುದು ಎಂಥಾ ನಾಚಿಕೆಗೇಡು! ಹಾಗೆ ಅರ್ಜಿ ಕೊಡುವ ಜನರಿಗಾದರೂ ಮಾನ ಮರ್ಯಾದೆ ಬೇಡವೇ ? ತನಗೆ ರಾಜ್ಯೋತ್ಸವ ಪ್ರಶಸ್ತಿಕೊಡಿ ತನಗೂ ಕೊಡಿ ಎಂದು ೩೫೦೦ ಜನ ಅರ್ಜಿಹಾಕಿದ್ದರಂತೆ. ಅದರಲ್ಲಿ ಕೆಲವನ್ನು ಆರಿಸಲಾಯಿತಂತೆ. ಸರಕಾರ ಆಯ್ಕೆಗಾಗಿ ಲಾಬಿಮಾಡದ, ಲಂಚಹೊಡೆಯದ, ಯಾರದೇ ಸಂಪರ್ಕಕ್ಕೆ ಸಿಗದ ಒಂದು ಸಮಿತಿಯನ್ನು ನೇಮಕಮಾಡಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತಲ್ಲವೇ ? ಆ ಸಮಿತಿ ಸಂಬಂಧಪಟ್ಟ ಕ್ಷೇತ್ರಗಳಲ್ಲಿ ಮಾಹಿತಿಯನ್ನು ಗೌಪ್ಯವಾಗಿ ಕಲೆಹಾಕಿ ಆಮೇಲೆ ಕ್ರೋಢೀಕರಿಸಿದ ದಾಖಲೆಗಳನ್ನೆಲ್ಲಾ ತೆಗೆದು ಪರಿಶೀಲಿಸಿ ಪರಿಷ್ಕರಿಸಿ ಪ್ರಶಸ್ತಿಗೆ ಅರ್ಹರಾದವರ ಯಾದಿಯನ್ನು ನಂತರ ಬಿಡುಗಡೆಗೊಳಿಸಿದ್ದರೆ ಬಹುಶಃ ಇಂತಹ ಹಾಸ್ಯಾಸ್ಪದ ಸನ್ನಿವೇಶದ ಸೃಷ್ಟಿಯ ಪುನರಾವರ್ತನೆಯಾಗುತ್ತಿರಲಿಲ್ಲ. ಸರಕಾರ ಹಾಗೆ ಮಾಡುವುದಿಲ್ಲ. ಯಾಕೆ ಗೊತ್ತೇ ? ಇಲ್ಲೂ ಲಂಚಾವತಾರ!

ಇನ್ನು ಕಾಣದ ಲೋಕದಿಂದ ರಂಭೆ, ಮೇನಕೆ, ಊರ್ವಶಿ, ತಿಲೋತ್ತಮೆ ಇವರೆಲ್ಲಾ ಧರೆಗೆ ಬಂದಂತೇ ಯಾವುದೋ ಕಣ್ಣಿಗೇ ಕಾಣದ ದೂರದೇಶದಲ್ಲಿರುವ ವಿಶ್ವವಿದ್ಯಾಲಯವೊಂದೆರಡು ನಮ್ಮ ರಜಕಾರಣಿಗಳಿಗೆ ನಮ್ಮ ಸಿನಿಮಾತಾರೆಯರಿಗೆ ರಾತ್ರೋರಾತ್ರಿ ಗೌರವ ಡಾಕ್ಟರೇಟ್ ಕೊಟ್ಟುಬಿಡುತ್ತಾರೆ! ಅವರ ದೇಶದಲ್ಲಿ ಅಲ್ಲಿನ ಪ್ರಜೆಗಳು ಪ್ರಾಯಶಃ ಈ ವ್ಯಕ್ತಿಗಳ ಹೇಸರನ್ನೇ ಕೇಳಿರುವುದಿಲ್ಲ! ಇನ್ನು ಜಾಗತಿಕ ಮಟ್ಟದಲ್ಲಿ ಇವರು ಮಾಡಿರುವ ಘನಂದಾರಿ ಕೆಲಸಗಳು ಯಾವುದೂ ಕಾಣಿಸುವುದಿಲ್ಲ. ಒಟ್ಟಾರೆ ಈ ಡಾಕ್ಟರೇಟ್ ಕೊಡಿಸುವಿಕೆಯಲ್ಲಿ ಯಾವುದೋ ಮಧ್ಯವರ್ತಿಗಳು ವೈಯಕ್ತಿಕ ಹೊರಗುತ್ತಿಗೆ ಪಡೆಯುತ್ತಾರೆ ಎಂಬುದರಲ್ಲಿ ಎರಡುಮಾತಿಲ್ಲ ! ಹೀಗೆ ಕೊಡಲ್ಪಡುವ ಡಾಕ್ಟರೇಟ್ ಸದ್ಯ ಯಾರ್ಯಾರಿಗೆ ಬಂತೆಂದು ತಮಗೆಲ್ಲಾ ಹೊಸದಾಗಿ ಹೇಳಬೇಕೆ ? ಇವರಿಗಿಂತ ರಸ್ತೆಬದಿಯಲ್ಲಿ ಅಂಗಡಿ ತೆರೆದು ವೈದ್ಯಕೀಯ ಶಿಕ್ಷಣ ಪಡೆಯದಿದ್ದರೂ ತಾನು 'ಡಾಕ್ಟರ್' ಎಂದು ನಾಮಫಲಕ ಹಾಕಿಕೊಳ್ಳುವ ಡಾಕ್ಟರ್ ಗಳೇ ವಾಸಿ. ಯಾಕೆಗೊತ್ತೇ ? ಅವರು ಕೆಲವೇ ಜನರನ್ನು ಹಾಳುಮಾಡುತ್ತಾರೆ, ಆದರೆ ಈ ಗೌರವ ಡಾಕ್ಟರ್ ಗಳು ಸಮಾಜದ ಸಂಸ್ಕೃತಿಯನ್ನೇ ಬದಲುಮಾಡುತ್ತಾರೆ. ’ನಂದೋರಾಯನ ದರ್ಬಾರ ನಾಯಿ-ನರಿ ಪಾಲು’ ಎಂಬೊಂದು ಗಾದೆ ನೆನಪಿಗೆ ಬರುತ್ತಿದೆ. ಪ್ರಶಸ್ತಿಗೆ-ಫಲಕಕ್ಕೆ ಮುಗಿಬೀಳುತ್ತಿರುವ ಅನರ್ಹರು ಅದನ್ನು ಕೊಂಡುಕೊಳ್ಳಲು ಮುಂದಾಗುತ್ತಿರುವುದು ನವಸಮಾಜದ ಕೆಟ್ಟ ಸಂಸ್ಕೃತಿಯ ದ್ಯೋತಕವಾಗಿದೆ. ಮಾನ ಸನ್ಮಾನಗಳು, ಬಿರುದು-ಬಾವಲಿಗಳು ಸಹಜವಾಗಿ ಗೌರವಯುತವಾಗಿ ಸಮಾಜಗುರುತಿಸಲ್ಪಟ್ಟು ಹರಿದುಬರಬೇಕೇ ವಿನಃ ’ ಇವರು ಇಂಥಾ ಪ್ರಶಸ್ತಿ ವಿಜೇತರು, ಇವರು ಅಂಥಾ ಪ್ರಶಸ್ತಿ ವಿಜೇತರು ಎಂದು ಘೋಷಿಸಿಕೊಳ್ಳುವುದರ ಮೂಲಕ ಪ್ರಚಾರ ಗಿಟ್ಟಿಸುವ, ಮುಂದೆ ಹಣಗಳಿಸಲು ಇದು ಸಹಕಾರಿಯಾಗಲೆಂದು ಉದ್ದೇಶಿಸುವ ಹಲವು ಅನರ್ಹ ಜನರಿಗೆ ಏನನ್ನಬೇಕೋ ತಿಳಿಯದಾಗಿದೆ. ಇದರಿಂದ ನಿಜವಾಗಿ ಅರ್ಹತೆಯುಳ್ಳ ಎಷ್ಟೋ ಜನ ಮೂಲೆಗುಂಪಾಗುತ್ತಾರೆ. ಎಲೆಮರೆಯ ಕಾಯಿಯಂತೇ ಬದುಕಿ ತಮ್ಮ ಜೀವನ ಕಳೆಯುತ್ತಾರೆ. ರಾಜ್ಯೋತ್ಸವ ಪ್ರಶಸ್ತಿ ೧೬೫ ಜನರಿಗೆ ಕೊಟ್ಟರಲ್ಲ, ಅದರಲ್ಲಿ ಬರೇ ೬೫-೭೦ ಜನರಿಗೆ ಕೊಟ್ಟರೂ ಅದೂ ಕೂಡ ಹೆಚ್ಚೇ ಆಗುತ್ತಿತ್ತು. ಮಿಕ್ಕುಳಿದ ಯಾರೂ ಅದಕ್ಕೆ ಅರ್ಹರಲ್ಲದಿರುವುದು ನಮಗೆ ತಿಳಿದುಬರುವ ಅಪ್ಪಟ ಸತ್ಯ! ಇಲ್ಲೂ ಕುದುರೆ ಲದ್ದಿ ಖರೀದಿ ನಡೆದಿದೆ ಎಂಬ ಸುದ್ದಿ ?

ಒಂದುಕಡೆ ಬಡತನದಿಂದ ಕಷ್ಟಪಟ್ಟು ಮೇಲೆಬಂದ ಅರ್ಹತೆಯುಳ್ಳ ಜನ, ಇನ್ನೊಂದು ಕಡೆ ಹಣದಿಂದ ಅರ್ಹತೆಯಿಲ್ಲದ್ದನ್ನೂ ಖರೀದಿಮಾಡುವ ಜನ-ಈ ಎರಡು ಸಮುದಾಯಗಳ ನಡುವೆ ಯಾರು ಹಿತವರು ನಿಮಗೆ -ನಮಗೆ? ನಾಳಿನ ನಮ್ಮ ರಾಜ್ಯ-ದೇಶದಲ್ಲಿ ನಾಡು-ನುಡಿ-ಸಂಸ್ಕೃತಿ ಉಳಿಯಬೇಕೆಂದರೆ ನಿಜವಾಗಿ ಅರ್ಹತೆಯುಳ್ಳವರಿಗೆ ಮಾನ-ಸನ್ಮಾನ ನಡೆಯಲಿ, ಅದು ಬಿಟ್ಟು ಯಾರು ಎಷ್ಟನ್ನು ಕೊಡುತ್ತಾರೆ, ಯಾರಮೂಲಕ ಲಾಬಿ ಮಾಡಿದ್ದಾರೆ ಎಂಬುದನ್ನು ಅವಲಂಬಿಸಿ ಅಂತಹ ಪ್ರಶಸ್ತಿಗಳು ಅಪಾತ್ರರ ಪಾಲಾಗಿ ಮುಂದೆ ನಮ್ಮ ಸಮಾಜಕ್ಕೆ ಭ್ರಮನಿರಸನವಾಗುವ ಸ್ಥಿತಿ ಬಾರದಿರಲಿ ಎಂದು ಹಾರೈಸುತ್ತ ಮತ್ತೊಮ್ಮೆ ನಿಮಗೆಲ್ಲರಿಗೂ ರಾಜ್ಯೋತ್ಸವದ ಶುಭಾಶಯಗಳನ್ನು ಕೋರುತ್ತಿದ್ದೇನೆ, ನಮಸ್ಕಾರ.