ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, April 28, 2012

ಐದು ಕಾಲಿನ ಮಂಚ ಕುಂಟ ಮಲಗಿದ್ದ !

 
ಅಖಂಡ ಭಾರತದ ಚಿತ್ರ ಕೃಪೆ: ಅಂತರ್ಜಾಲ.
ಐದು ಕಾಲಿನ ಮಂಚ ಕುಂಟ ಮಲಗಿದ್ದ !

ಮೂರು ಎನ್ನುವುದಕ್ಕಿಂತ ಎರಡು ಮತ್ತೊಂದು ಎನ್ನುವುದೇ ಸರಿ ಯಾಕೆಂದರೆ ಇಲ್ಲಿರುವ ವಿಷಯಗಳೇ ಹಾಗಿವೆ. ಜಾಸ್ತಿ ಕಾಲಹರಣ ಮಾಡುವುದಕ್ಕಿಂತ ನೇರವಾಗಿ ನಿಮ್ಮನ್ನು ಅಡಿಗೆಮನೆಗೇ ಕರೆದೊಯ್ದರೆ ಅಲ್ಲಿರುವ ಸಾಮಗ್ರಿ, ಅಡಿಗೆ ತಯಾರಾಗುತ್ತಿರುವ ಕ್ರಮ, ಅಡಿಗೆ ಮಾಡುತ್ತಿರುವವರ ಪ್ರವರ, ಅಡಿಗೆ ಮನೆಯ ಗಬ್ಬು ಎಲ್ಲವೂ ಕಾಣುವುದರಿಂದ ನನ್ನ ಕೆಲಸ ತುಸು ಕಮ್ಮಿಯಾಗುತ್ತದೆ.

ಅಡಿಗೆಮನೆ ಎಂದ ತಕ್ಷಣ ನೆನಪಾಯ್ತು: "ಮೊನ್ನೆ ಒಂದು ವಾರಪತ್ರಿಕೆಯ ಸಂಪಾದಕ ಬರೆದಿದ್ದಾನೆ-ನಾವು ದನಾನಾರು ತಿಂತೀವಿ ಕುರೀನಾರು ತಿಂತೀವಿ ಅದು ನಮ್ಮ ಜನ್ಮಸಿದ್ಧ ಹಕ್ಕು-ನಮ್ಮ ಆಹಾರ, ಹಕ್ಕನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇರುವುದಿಲ್ಲ. ನನ್ನ ಅಮ್ಮ ೮೦ ಕೋಳಿ ಸಾಕಿದ್ದಳು- ಅವುಗಳಿಗೆ ಹೊತ್ತಿನಲ್ಲಿ ಆಹಾರ ಹಾಕಿ ಬಹಳ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಳು. ಕತ್ತರಿಸುವಾಗಲೂ ಅವುಗಳಿಗೆ ನೋವಾಗದಂತೇ ಕತ್ತರಿಸುತ್ತಿದ್ದಳು!" --ಈ ಮಹಾಶಯನ ಶಬ್ದಗಳು ಅವನಿಗೇ ಅರ್ಥವಾಗುವುದಿಲ್ಲವೇನೋ !! ಯಾವ ಜೀವಿಗೆ ತನ್ನ ಶರೀರದ ಭಾಗವನ್ನು ಕತ್ತರಿಸುವಾಗ ನೋವಾಗದೇ ಇದ್ದೀತು ? ಎಂಥಾ ಸಂಭಾವಿತ ಮಾತು ಆ ಸಂಪಾದಕನದು. ಇವತ್ತಿನ ಕಾಲಮಾನವೇ ಹಾಗೆ. ಒಂದುಕಾಲದಲ್ಲಿ ತಲ್ವಾರ್ ಹಿಡಿದವರೆಲ್ಲಾ ಇಂದು ಪತ್ರಿಕಾಕರ್ತರಾಗಿದ್ದಾರೆ; ಬಾಯಿಗೆ ಬಂದಿದ್ದನ್ನು ಹೇಳುತ್ತಾರೆ. ವಿಷಯಗಳೇನೂ ಸಿಗದಾಗ ಅಲ್ಪಸಂಖ್ಯಾತರು, ಗೋಹತ್ಯಾ ನಿಷೇಧ, ಅಯೋಧ್ಯೆಯ ರಾಮಮಂದಿರ, ಹಿಂದೂ ಧರ್ಮ, ಸಂಘಪರಿವಾರ-ಇವುಗಳಲ್ಲಿ ಯಾವುದಾದರೊಂದನ್ನು ಆಯ್ದುಕೊಂಡು ಬರಿದೇ ಕುಯ್ಯುತ್ತಾರೆ, ದೇಶದಲ್ಲೇ ಹುಟ್ಟಿದ್ದರೂ ದೇಶದ್ರೋಹಿಗಳಂತೇ ಬದುಕುತ್ತಾರೆ. 

ಮಾಂಸಾಹಾರವನ್ನು ಕೆಲವು ದಿನಗಳಲ್ಲಿ ನಿಷೇಧಿಸಬೇಕು ಎಂದು ಸರಕಾರ ಹೊರಡಿಸಿದ ಕಾಯ್ದೆಗೆ ಅವರ ಅಡ್ಡಿ. " ನಾವೆಲ್ಲಾ ಮೊದಲು ೬ ತಿಂಗಳಿಗೋ ಮೂರು ತಿಂಗಳಿಗೋ ಮಾಂಸ ತಿಂತಾ ಇದ್ವಿ, ಈಗ ದಿನಾ ತಿಂತೀವಿ" ಎನ್ನುವ ಆತನ ಯಾರೋ ಮಿತ್ರ ಬ್ರಾಹ್ಮಣನಂತೆ ಆತ ಅಲ್ಲೆಲ್ಲಿಗೋ ಹೋಗಿಬರುವಾಗ " ಸಾವಿರಾರು ವರ್ಷಗಳಿಂದ ನಮ್ಮನ್ನೆಲ್ಲಾ ನೀವು ಇದರಿಂದ ವಂಚಿಸಿಬಿಟ್ಟಿದ್ದೀರಿ ಈಗಾದರೂ ತಿನ್ನಲು ಬಿಡಿ" ಎಂದು ಮಾಂಸ ತಿನ್ನಲು ಹೋದನಂತೆ, ಹೋಗಲಿ ಬಿಡಯ್ಯಾ ಆತ ನಿನ್ನ ಭಕ್ತ, ನಿನ್ನ ಸಂಗದಿಂದ ಹಾಗೆ ಹೋಗಿದ್ದಾನೆ, ಆದರೆ ಎಲ್ಲರೂ ಹೋದರೆ? ಇವತ್ತು ಮಾಂಸಾಹಾರ ಜಾತಿಯಿಂದ ಗುರ್ತಿಸಲ್ಪಡುವುದಿಲ್ಲ ಎಂಬ ಕಿಂಚಿತ್ ಬುದ್ಧಿಯೂ ನಿನಗೆ ಬೇಡವೇ ?  ಅಪರೂಪಕ್ಕೆ ತಿನ್ನುತ್ತಿದ್ದ ನೀನು ದಿನಾ ತಿನ್ನಲು ಆರಂಭಿಸಿರುವುದು ನೀನು ಯಾವ ಮಟ್ಟಕ್ಕೆ ಸಾಗುತ್ತಿರುವೆ ಎಂಬುದರ ಬಗ್ಗೆ ತಿಳಿಸುತ್ತದೆಯಲ್ಲವೇ?  ದಿನಬೆಳಗಾದರೆ ನಿನಗೂ ನಿನ್ನ ಮನೆ,ಮಕ್ಕಳು-ಮರಿಗಳಿಗೂ  ಹಾಲನ್ನು ನೀಡುವ ಗೋವನ್ನು ತಿನ್ನುವುದು ಸರಿಯೆಂದು ವಾದಿಸುವುವಾಗ ಜೀವಗಳಿಗೆ ಆಗುವ ನೋವಿಗೆ ನಿನ್ನಲ್ಲಿ ಬೆಲೆಯಿಲ್ಲ ಎಂಬುದು ಗೊತ್ತಾಗುತ್ತದೆ. ರಕ್ತಪಾತವನ್ನೇ ಕಂಡು ಅದನ್ನೇ ಉಂಡ ಮನಸ್ಸಿಗೆ ಅದು ಹೇಯ ಎನಿಸುವುದೇ ಇಲ್ಲ! ಆದರೂ ಸಮಾಜದಲ್ಲಿ ಮದಿರೆಗೂ ಮಧುರಾಮೃತಕ್ಕೂ ವ್ಯತ್ಯಾಸ ಇದೆ ಎಂಬುದನ್ನು ನೀನು ಅರಿಯಬೇಕಲ್ಲವೇ ? 

ಒಮ್ಮೆ ಬೆಂಗಳೂರಿನ ಶಿವಾಜಿನಗರದಲ್ಲಿ ನಾನು ಯಾವುದೋ ಕೆಲಸದ ನಿಮಿತ್ತ ಓಡಾಡುತ್ತಿದ್ದೆ. ಗಬ್ಬು ಗಲೀಜು ಮಾಂಸಾಹಾರದ ಹೋಟೆಲ್ ಗಳ ಹಿಂಭಾಗದಲ್ಲಿ ಅನಿವಾರ್ಯವಾಗಿ ತೆರಳುವ ಪ್ರಸಂಗ ಬಂತು. ಅಲ್ಲಿ ನೋಡಿದರೆ ದೇವನಿ ತಳಿಯ ಬಿಳಿಯ, ಅತ್ಯಂತ ಸುಂದರ ಹೋರಿಗರುವನ್ನು ಕಟ್ಟಿಹಾಕಿದ್ದರು. ಬಿಸಿಲು ಹೇಗಿತ್ತೆಂದರೆ ಯಾರೂ ಅಂತಹ ಬಿಸಿಲಲ್ಲಿ ನಿಲ್ಲಲಾರರು. ಯಾರೋ ಒಬ್ಬಾತ ಹುಡುಗ ಅದಕ್ಕೆ ಅದೇನನ್ನೋ ತಿನ್ನಲು ಕೊಟ್ಟ. ಅದು ತಿನ್ನುತ್ತಾ ಇತ್ತು. ಜಾಸ್ತಿ ಓಡಾಡಲೂ ಹಗ್ಗ ಉದ್ದವಿರಲಿಲ್ಲ. ಬಹುಶಃ ಮಾರನೇದಿನ ಅದು ಅನೇಕ ಹೊಟ್ಟೆ ಸೇರಿರುತ್ತದೆ!  ಆ ಕ್ಷಣದಲ್ಲಿ ಆ ಕರುವಿಗೆ ತನಗೆ ಘಟಿಸಬಹುದಾದ ನೋವಿನ ಪರಿವೆಯಿತ್ತೇ? ಇದ್ದರೂ ಕ್ರೂರ ನರರಾಕ್ಷಸರ ಕೈಲಿ ಸಿಕ್ಕಮೇಲೆ ಅದು ತಾನೇ ಏನುಮಾಡಲಾದೀತು. ಹಾಗೆ ನೋಡಿದರೆ ಮೊಲ, ಕುರಿ, ಕೋಳಿಗಳೆಲ್ಲವೂ ನೋವನ್ನು ಅನುಭವಿಸದೇ ಸತ್ತುಹೋಗುತ್ತವೇನು? ಮಾಂಸಾಹಾರ ಭಕ್ಷಿಸುವುದರಿಂದ ಇಂದ್ರಿಯಗಳಮೇಲಿನ ಹತೋಟಿ ಕಮ್ಮಿಯಾಗುತ್ತದೆ. ಪಂಚೇಂದ್ರಿಯಗಳು ತಮ್ಮಿಷ್ಟದಂತೇ ವರ್ತಿಸಲು ತೊಡಗುತ್ತವೆ. ಅದಕ್ಕೇ ಅದನ್ನು ಆದಷ್ಟೂ ಕಮ್ಮಿ ಬಳಸಬೇಕು ಎಂಬುದು ನಮ್ಮ ಸಲಹೆಯಾದರೆ ಎಗರಾಡುವ ಆ ಸಂಪಾದಕನನ್ನು ನೋಡಿ, ವಿದ್ಯಾಭೂಷಣರು ಹಾಡಿದ ’ಐದು ಕಾಲಿನ ಮಂಚ ಕುಂಟ ಮಲಗಿದ್ದ’ ಹಾಡು ನೆನಪಾಯ್ತು, ನೀವೂ ಸ್ವಲ್ಪ ಕೇಳಿಸಿಕೊಳ್ಳಿ, ಅರ್ಥಮಾತ್ರ ನನ್ನಲ್ಲಿ ಕೇಳಬೇಡಿ-ಅದು ನೇವೇ ಚಿಂತಿಸಿ ಗಳಿಸಬೇಕಾದದ್ದು ಎಂಬ ಕರಾರಿನ ಮೇಲೇ ನಿಮಗೆ ಹಾಡು ಕೇಳಿಸುತ್ತಿದ್ದೇನೆ! ಅಂದಹಾಗೇ ಇಂದಿನ ಕೆಲವು ಘಟನೆಗಳು ಈ ಹಾಡಿನ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತವೆ ಎಂಬುದಷ್ಟನ್ನು ಹೇಳಬಲ್ಲೆ!! 
 ೧. ಪಾಕಿಗಳು ಸುಧಾರಿಸುವುದಿಲ್ಲ

ಉಗ್ರ ಕಸಬ್ ವರ್ಷಗಟ್ಟಲೆ ರಾಜೋಪಚಾರ ಪಡೆದು ನಮ್ಮ ಶಿರಸಿ ಮಾರಿಕೋಣ ಕೊಬ್ಬಿದಹಾಗೇ ಕೊಬ್ಬಿದ್ದಾನೆ! ಆತನಿಗೆ ಸರ್ವೋಚ್ಚನ್ಯಾಯಾಲಯ ಜೀವದಾನ ನೀಡಲೂ ಮುಂದಾಗಬಹುದು, ಯಾಕೆಂದರೆ ಭಾರತೀಯರಾದ ನಾವು ಯಾರು ಏನೇ ಮಾಡಿದರೂ ಸಹಿಸಿಕೊಳ್ಳುವವರೇ ಹೊರತು ಅವರಿಗೆ ಬುದ್ಧಿಕಲಿಸುವ ಬುದ್ಧಿ ನಮ್ಮಲ್ಲಿಲ್ಲ. ನಾನು ಬುದ್ಧಿಬಲ್ಲಾದಲಾಗಾಯ್ತು ನೋಡುತ್ತಲೇ ಇದ್ದೇನೆ: ಪಾಕಿಗಳು ಬದಲಾಗಿಲ್ಲ, ಬದಲಾಗಿ ಇಡೀ ಜಗತ್ತಿನಲ್ಲಿ ಉಗ್ರಗಾಮಿಗಳು ಹುಟ್ಟುವುದು ಮತ್ತು ಆಶ್ರಯ ಪಡೆಯುವುದು ಪಾಕಿಸ್ತಾನದಲ್ಲಿ ಎಂದು ಹೇಳಲೇಬೇಕಾಗಿದೆ. ಆರ್ಥಿಕವಾಗಿ ಸ್ವಾವಲಂಬನೆ ಇದ್ದಿದ್ದರೆ ಇಡೀ ಜಗತ್ತನ್ನೇ ನಡುಗಿಸುವ ರಕ್ಕಸರೇ ತುಂಬಿರುವ ಪಾತಕಿಗಳಸ್ಥಾನಕ್ಕೆ ಭಾರತದಲ್ಲಿರುವ ದೇಶದ್ರೋಹಿಗಳ ಅಪರಿಮಿತ ಸಹಕಾರ ಇದೆ. ಇಲ್ಲಿ ದೊಡ್ಡ ಹೂಸು ಬಿಟ್ಟರೂ ಅದು ಪಾಕಿಸ್ತಾನಕ್ಕೆ ಕೇಳಿಸುತ್ತದೆ! ಪಾಕಿಸ್ತಾನ ಕ್ರಿಕೆಟ್ ನಲ್ಲಿ ಗೆದ್ದರೆ ಇಲ್ಲಿರುವ ಪಾತಕಿಗಳು ಪಟಾಕಿ ಹಾರಿಸುತ್ತಾರೆ! ಕಳುಹಿಸಿದವರು ದೂರವಾಣಿ ಕರೆಯ ವಿವರಣೆ ಸಮೇತ ಸಿಕ್ಕಿಬಿದ್ದು, ನೇರವಾಗಿ ತಾವೇ ಹೊಣೆ ಎಂದಮೇಲೂ, ತಾನು ನಿರಪರಾಧಿ ಎಂಬ ಕಸಬ್ ನ ಮಾತಿಗೆ ಏನೆನ್ನಬೇಕು? ಹಾಗೆ ಯಾರಮೇಲೋ ದಾಳಿಮಾಡುವಾಗ ತಾನು ಏನು ಮಾಡುತ್ತೇನೆ ಎಂಬ ಪರಿವೆ ಆತನಿಗಿರಲಿಲ್ಲವೇ? ಮಾಡಬಾರದ ಕೆಲಸ ಮಾಡಿದವರಿಗೆ ತಕ್ಕ ಪ್ರಮಾಣದ ಶಿಕ್ಷೆ ವಿಧಿಸುವುದು ರಾಜಧರ್ಮವಾಗುತ್ತದೆ; ಪ್ರಸಕ್ತ ಕಸಬ್ ಗೆ ಜೀವಾವಧಿ ಶಿಕ್ಷೆ ವಿಧಿಸಿ ಸಾಮಾನ್ಯ ಕಾರಾಗ್ರಹದಲ್ಲಿಟ್ಟು ದುಡಿಸಬೇಕು ಮತ್ತು ನಂತರ ಆತನನ್ನು ಗಲ್ಲಿಗೇರಿಸಬೇಕು-ಇದನ್ನು ನೋಡಿದ ಪಾಕಿ ಯುವಕರು ಮತ್ತೆ ಇಂತಹ ಕೆಲಸಕ್ಕೆ ಮುಂದಾಗಬಾರದಂತಿರಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ. ಮೂರೂ ಹೊತ್ತು ಮಾಂಸಾಹಾರವನ್ನೇ ತಿಂದು ಮನುಷ್ಯತ್ವಕ್ಕೆ ಬೆಲೆಯನ್ನೇ ಕಳೆದ ಜನ ಪಾಕಿಗಳು.


೨. ಹೊಲಗೇಡಾದ ವಿಶ್ವವಿದ್ಯಾಲಯಗಳು

ಸುಮಾರು ಘಟನೆಗಳಾದವು, ಆಗುತ್ತಲೇ ಇವೆ. ವಿಶ್ವವಿದ್ಯಾಲಯಗಳಲ್ಲಿ ಕೆಲಸಮಾಡುವ ಮೇಲ್ದರ್ಜೆಯ ಶಿಕ್ಷಕರಲ್ಲಿ, ಮಹಾಮಹೋಪನ್ಯಾಸಕರಲ್ಲಿ, ಅಧ್ಯಾಪಕರಲ್ಲಿ ಅನೇಕರು ಕಚ್ಚೆಹರುಕರಾಗಿದ್ದಾರೆ. ಹಿಂದೆಲ್ಲಾ ವಿಶ್ವವಿದ್ಯಾಲಯಗಳ ಆ ಸ್ಥಾನಕ್ಕೆ ಗೌರವವೂ ಇತ್ತು; ಅದನ್ನು ಅಲ್ಲಿರುವ ಜನ ಜತನಗೊಳಿಸಿದ್ದರು-ತಮ್ಮ ಕಾಮನೆಗಳನ್ನು ಹಿಡಿತದಲ್ಲಿಟ್ಟಿದ್ದರು. ವಿದ್ಯೆಗೆ ವಿನಯವೇ ಭೂಷಣ ಎಂಬ ಮಾತಿನಂತೇ ನಯ-ವಿನಯ ರೀತಿ-ನೀತಿಗಳಿದ್ದವು. ಇವತ್ತು ಲಾಬಿಮಾಡಿ ಸ್ಥಾನಗಳಿಸುವವರೇ ಜಾಸ್ತಿ ಇರುವುದರಿಂದ ಕೆಲಸವಿಲ್ಲದೇ ಖಾಲೀ ಕುಳಿತು ತಿಂಗಳಿನ ತಾರೀಕಿಗೆ ಸರಿಯಾಗಿ ಸಂಬಳ ಪಡೆಯುವ ಜನ ಸಂಶೋಧನಾ ವಿದ್ಯಾರ್ಥಿನಿಯರು ಸಿಕ್ಕರೆ ಸ್ವಲ್ಪ ಮಜಾ ಪಡೆಯುವ ಹುನ್ನಾರದಲ್ಲಿರುತ್ತಾರೆ! ಕೈಗೊಳ್ಳುವುದು ಸಂಶೋಧನೆ ಎಂದಮೇಲೆ ಮಾರ್ಗದರ್ಶಕರು ಮತ್ತು ಸಂಶೋಧಕರ ಪರಸ್ಪರ ಭೇಟಿ, ಸಂದರ್ಶನ ಇವೆಲ್ಲಾ ಇರುವುದೇನೋ ಸರಿ, ಭೇಟಿಯಲ್ಲೇ ತಮಗೆ ಇಂಥದ್ದನ್ನು ಕೊಟ್ಟರೆ ನಿನಗೆ ಸಹಕಾರ ನೀಡುವುದಾಗಿಯೂ ಇಲ್ಲದಿದ್ದರೆ ಅದು ಹೇಗೆ ಪೂರ್ಣಗೊಳಿಸುತ್ತೀಯೋ ನೋಡುತ್ತೇವೆ ಎಂಬ ಕಲಿಪುರುಷರ ಬುದ್ಧಿಜೀವಿ ವೇಷದ ಹಿಂದೆ ಅರ್ಜುನಸನ್ಯಾಸಿಯಂತಹ ಹಸಿದ ಹುಲಿಯೊಂದು ಕಾದುಕುಳಿತಿರುತ್ತದೆ. ಅನೇಕರು ಇಂತಹ ತೃಷೆಗಳಿಗೆ ಬಲಿಯಾಗಿಯೂ ಸುಮ್ಮನಿದ್ದಾರೆ, ಕೆಲವರು ಮಾತ್ರ ಕಚ್ಚೆಹರುಕರನ್ನು ಬೀದಿಗೆ ಎಳೆದಿದ್ದಾರೆ! ಇನ್ನೂ ಯಾವ ಯಾವ ವಿಶ್ವವಿದ್ಯಾಲಯಗಳಲ್ಲಿ ಅದೆಷ್ಟು ಜನ ಇಂತಹ ಕಚ್ಚೆಹರುಕ ಕಿರಾತಕರು ಇದ್ದಾರೋ; ಸಂಗತಿ ಇನ್ನೂ ಹೊರಬರಬೇಕಾಗಿದೆ.  

೩. ಭಾರತದ ಆರ್ಥಿಕಸ್ಥಿತಿ ನಿಜಕ್ಕೂ ಆತಂಕಕಾರಿಯೇ ? 

ಭಾರತದಲ್ಲಿ ಹೇರಳವಾದ ಸಂಪತ್ತಿದೆ; ಅದು ಎಲ್ಲರಿಗೂ ಗೊತ್ತು! ಬಡವ-ಶ್ರೀಮಂತರ ಅಂತರ ಮಾತ್ರ ಕಮ್ಮಿಯಾಗುವುದಿಲ್ಲ ಯಾಕೆಂದರೆ ಹಣ ವಿದೇಶೀ ಖಜಾನೆಗಳಲ್ಲಿ ಕೊಳೆಯುತ್ತಿದೆ. ಅಮೇರಿಕಾದಂತಹ ದೇಶಗಳು "ನೀವು ಆರ್ಥಿಕವಾಗಿ ದುರ್ಬಲರು" ಎಂದಮಾತ್ರಕ್ಕೆ ನಾವು ಹೆದರಬೇಕಾಗಿಲ್ಲ. ಆದರೆ ಒಂದು ಮಾತು ಸತ್ಯ: ಪಾಕಿಗಳು ಹೇರಳವಾಗಿ ಖೋಟಾನೋಟುಗಳನ್ನು ಭಾರತದಲ್ಲಿ ಚಲಾವಣೆಗೆ ಬಿಟ್ಟಿದ್ದಾರೆ. ಹಣದುಬ್ಬರ ಜಾಸ್ತಿಯಾಗಿ ನಿಗದಿತ ಮಟ್ಟಮೀರಿ ಹತೋಟಿ ಬರದಾಗ ದೇಶದ ಅರ್ಥವ್ಯವಸ್ಥೆ ಕುಸಿದುಹೋಗುತ್ತದೆ. ಅದನ್ನು ಸಾಧಿಸಲೆಂದೇ ಪಾಕಿಗಳು ಆ ಮಾರ್ಗದಲ್ಲೂ ದೊಡ್ಡಯೋಜನೆ ಹಾಕಿಕೊಂಡು ದೇಶದ ನಾಲ್ಕೂ ದಿಕ್ಕುಗಳಲ್ಲಿ ಪ್ರಸಾರವಾಗುವಂತೇ ಖೋಟಾನೋಟುಗಳನ್ನು ಚೆಲ್ಲಿದ್ದಾರೆ. ಕ್ಷಣಿಕ ಆಮಿಷಕ್ಕೆ ಬಲಿಯಾದ ದೇಶದ್ರೋಹಿಗಳು ಪಾಕಿಗಳ ಪ್ರತಿನಿಧಿಗಳಾಗಿ ನಡೆಸುತ್ತಿರುವ ಈ ಕೆಲಸ, ಸರಕಾರವೇ ನಡೆಸುವ ಯಾವ ಘನಕಾರ್ಯಗಳಿಗಿಂತಲೂ ಉತ್ತಮವಾಗಿ ನಡೆಯುತ್ತಿದೆ ಎಂದರೆ ಯಾರೂ ಆಶ್ಚರ್ಯಪಡಬೇಕಿಲ್ಲ! ಮನುಷ್ಯನೇ ತಯಾರಿಸಿದ ವಸ್ತುಗಳ ಪ್ರತಿರೂಪಗಳನ್ನು ಮತ್ತೊಂದು ಮಾನವ ಗುಂಪು ತಯಾರಿಸಲು ಸಾಧ್ಯವಿಲ್ಲವೇ?  ಹಣದುಬ್ಬರ ನಿಯಂತ್ರಿಸಬೇಕೇ? ದೇಶದ್ರೋಹಿಗಳ ಗಣತಿ ನಡೆಯಬೇಕು, ಇಲ್ಲಿ ಮಾರುವೇಷಗಳಲ್ಲಿ ಹುದುಗಿರುವ ಪಾಕಿಗಳ ಮತ್ತು ಅವರ ಗೂಢಚರ್ಯೆಯ ಕೆಲಸಗಳ ಬಣ್ಣ ಬಯಲಾಗಬೇಕು, ಉಗ್ರಗಾಮಿಗಳ ತಂಡವೂ ಸೇರಿದಂತೇ ಮತಾಂಧ ಪಾಕಿಗಳ ಸಂಪೂರ್ಣ ವಿನಾಶವಾಗಬೇಕು, ಬ್ರಷ್ಟ ಮತ್ತು ವೋಟ್ ಬ್ಯಾಂಕಿಂಗ್ ರಾಜಕಾರಣಿಗಳ ದಮನವಾಗಬೇಕು--ಇವಿಷ್ಟು ಸಾಧ್ಯವಾದರೆ ಭಾರತದ ಭವಿಷ್ಯ ಉಜ್ವಲವಾಗುತ್ತದೆ. ನಮ್ಮಲ್ಲಿರುವ ದ್ರೋಹಿಗಳಿಗೆ ಮನೋ ನಿಗ್ರಹವಿಲ್ಲ; ಅರ್ಧರಾತ್ರಿಯಲ್ಲೇ ಐಶ್ವರ್ಯಗಳನ್ನು ಪಡೆಯುವಾಸೆಗೆ ಬಲಿಯಾಗಿ ಪಾಕಿಗಳು ತೋರುವ ಹುಲ್ಲನ್ನು ನೋಡುತ್ತಾ ಮುನ್ನಡೆಯುವ ಪಶುವಾಗಿದ್ದಾರೆ. ಅಣ್ಣಾ ಹಜಾರೆಯಂತಹ ದೇಶಭಕ್ತರ ದಂಡು ಹಳ್ಳಿಹಳ್ಳಿ, ಮಜರೆ ಮಜರೆಗಳಲ್ಲಿ ಕೆಲಸಮಾಡಬೇಕಾದ ಕಾಲ ಇದಾಗಿದೆ; ಪ್ರತಿಯೊಬ್ಬ ಭಾರತೀಯ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಕಾಲ ಇದಾಗಿದೆ!

೪. ಶಾಸಕರು, ಮಂತ್ರಿಗಳು ವಿಧಾನಸಭೆಯಲ್ಲೇ ಬ್ಲೂ ಫಿಲಂ ನೋಡಿದರು!

ನೋಡುತ್ತಾರೆ ಸ್ವಾಮೀ, ನೋಡುವುದಲ್ಲ ಹೀಗೇ ಬಿಟ್ಟರೆ ಅಲ್ಲೇ ನೀಲಿ ಚಿತ್ರಗಳನ್ನು ತಯಾರಿಸಲೂ ಅವರುಗಳು ಮುಂದಾಗಬಹುದು; ಯಾಕೆಂದರೆ ನಮ್ಮ ಸಂವಿಧಾನದಲ್ಲಿರುವ ಲೋಪ ಇದಾಗಿದೆ: ಚುನಾವಣೆಗೆ ನಿಲ್ಲುವವನು ಪಾತಕಿಯಾಗಿಲೀ, ಹುಚ್ಚನಾಗಲೀ ಆಗಿರಬಾರದು ಎಂದಿದೆ. ಆದರೆ ಇವತ್ತಿನ ದಿನ ಚುನಾವಣೆಗಳಿಗೆ ಸ್ಪರ್ಧಿಸುವವರಲ್ಲಿ ಪಾತಕಿಗಳೇ ಹೆಚ್ಚಿಗೆ ಇದ್ದಾರೆ. ಮಾಜಿ ರೌಡಿಗಳೇ ಹಾಲಿ ರಾಜಕಾರಣಿಗಳು ಎಂಬಂತಹ ವಿಪರ್ಯಾಸ ನಮ್ಮದು! ಎಲ್ಲವನ್ನೂ ಬಿಟ್ಟ ಅಂತಹ ಜನರಿಗೆ ಗಂಟುಕದ್ದುಕೊಂಡು ಇಂದ್ರಿಯಸುಖಗಳನ್ನು ಪಡೆದುಕೊಂಡು ಆಗಾಗ ಪರಸ್ಪರ ಅಪಹಾಸ್ಯಕರ ಮಾತುಗಳನ್ನಾಡುತ್ತಾ ರಾಜಕಾರಣಕ್ಕೆ ಇದ್ದ ಘನತೆಯನ್ನು ಕಳೆದುಬಿಟ್ಟಿದ್ದಾರೆ. ಪ್ರಜಾರಾಜಕೀಯ ಎಂಬುದು ಪ್ರಜೆಗಳಿಗೆ ಒಳಿತುಮಾಡುವ ಬದಲು ಪ್ರಜೆಗಳಿಂದ ಬಹಿರಂಗವಾಗಿ ಪಡೆದ ಕರಗಳನ್ನು ತಿಂದುಹಾಕುವ ಉದ್ಯಮವಾಗಿ ಬೆಳೆದಿರುವುದಕ್ಕೆ ಮೂಲ ಕಾರಣ ನಮ್ಮ ಸಂವಿಧಾನದಲ್ಲಿರುವ ಕೆಲವು ದೋಷಗಳಾಗಿವೆ; ಅವುಗಳ ಬದಲಾವಣೆಗೆ ಯಾರೂ ಮನಸ್ಸುಮಾಡಿಲ್ಲ, ಅವು ಪರಿಷ್ಕೃತವಾಗಬೇಕು.

೫. ಗೋಹತ್ಯೆ, ಸಂಘಪರಿವಾರ, ವೈದಿಕಶಾಹಿ ಮತ್ತು ಇತರೆ ಶಬ್ದಗಳು.

ಮಾತೆತ್ತಿದರೆ ಗೋಹತ್ಯೆ ಯಾಕೆ ಮಾಡಬಾರದು ಎಂಬ ಪ್ರಶ್ನೆ. ೨೮-೦೪-೨೦೧೨ರ ಹೊಸದಿಂಗಂತ ದಿನಪತ್ರಿಕೆಯಲ್ಲಿ ಲೇಖಕ ಮುಜಫರ್ ಹುಸೇನ್ ಬರೆದಿದ್ದಾರೆ: ಗೋವನ್ನು ಯಾಕೆ ಹತ್ಯೆಮಾಡಬಾರದು ಮತ್ತು ಯಾಕೆ ಪೂಜಿಸಬೇಕು ಎಂಬುದರ ಕುರಿತಾಗಿ.[ಅದನ್ನು ಅಂತರ್ಜಾಲದಲ್ಲೋ ಅಥವಾ ಇನ್ನೆಲ್ಲೋ ಲಭ್ಯವಿರುವಲ್ಲಿ ಹುಡುಕಿಕೊಂಡು ಓದಿಕೊಳ್ಳಬಹುದಾಗಿದೆ]ಪ್ರಾಚೀನ ಭಾರತದಲ್ಲಿ ಇದ್ದಿದ್ದು ಬರೇ ಸನಾತನ ಧರ್ಮ! ನಂತರ ಹಲವಾರು ಮತಗಳು ಹುಟ್ಟಿದವು. ಆದರೂ ನಿಜವಾದ ಭಾರತೀಯನೊಬ್ಬನಲ್ಲಿ ಆ ಸನಾತನ ಲಕ್ಷಣಗಳು ಹೇಗೆ ಗೋಚರಿಸುತ್ತವೆ ಎಂಬುದಕ್ಕೆ ಮುಜಫರ್ ಹುಸೇನ್, ಡ್ಯಾನಿ ಪಿರೇರಾ ಇಂತಹ ಲೇಖಕರುಗಳು ಉದಾಹರಣೆಗಳಾಗುತ್ತಾರೆ.

ಭಾರತದಲ್ಲಿ ಸಂಘಪರಿವಾರ ಇಲ್ಲದಿದ್ದರೆ ಇಷ್ಟುದಿನದಲ್ಲಿ ಸಂಪೂರ್ಣ ಭಾರತ ಪಾಕಿಸ್ತಾನವೇ ಆಗಿಬಿಡುತ್ತಿತ್ತು. ಭಾರತ ಸ್ವಲ್ಪವಾದರೂ ಭಾರತೀಯತೆಯನ್ನು ಉಳಿಸಿಕೊಂಡಿದ್ದರೆ ಅದು ಸಂಘಪರಿವಾರದ ಅಹರ್ನಿಶಿ ಪರಿಶ್ರಮದಿಂದ ಮಾತ್ರ! ಭಾರೀತೀಯರು ಎನಿಸಿದ ಎಲ್ಲರೂ ಸಂಘಪರಿವಾರದ ಸದಸ್ಯರೇ ಸರಿ. ಅವರು ಯಾವ ಮತಕ್ಕೇ ಸಂಬಂಧಿಸಿರಲಿ ದೇಶಸೇವೆಯಲ್ಲಿ ಮಾತ್ರ ಎಲ್ಲರೂ ಒಗ್ಗಟ್ಟಾಗಿರಬೇಕು.

ವೈದಿಕಶಾಹಿ ಎಂಬ ಪದ ಮೇಲೆ ಹೇಳಿದ ಸಂಪಾದಕನ ರೀತಿಯ ಯವುದೋ ತಲೆಹಿಡುಕ ಹುಟ್ಟುಹಾಕಿದ್ದು! ವೈದಿಕರು ಪ್ರಜೆಗಳಿಗೆ ತೊಂದರೆಮಾಡಲಿಲ್ಲ. ಅದೊಂದು ಅತೀ ತಪ್ಪು ಕಲ್ಪನೆ. ವೈದಿಕರ ಬಗ್ಗೆ ವೈದಿಕರ ಮಡಿಯ ಬಗ್ಗೆ ಕೆಂಡಕಾರುವ ನಾವೆಷ್ಟು ಸಂಭಾವಿತರು ಸ್ವಾಮೀ? ವೈದಿಕರೇ ಮುಂದಾಗಿ ನಿಂತು ಈ ರಾಜ್ಯ/ದೇಶದಲ್ಲಿ ಅದೆಷ್ಟೋ ರಾಜ ಸಂಸ್ಥಾನಗಳಿಗೆ ಧರ್ಮಬೋಧನೆ ಮಾಡಿದರು. ವೈದಿಕಧರ್ಮದಿಂದಲೇ ಕದಂಬರು, ಹಕ್ಕ-ಬುಕ್ಕರು ರಾಜ್ಯವಾಳಿದರು. ಮೌರ್ಯವಂಶದಂತಹ ಉತ್ತಮ ಆಡಳಿತ ನೀಡಿದ ರಾಜ್ಯ ಸ್ಥಾಪಿತವಾಗಿದ್ದು ಚಾಣಕ್ಯನೆಂಬ ಒಬ್ಬ ವೈದಿಕನಿಂದ ! ವೈದಿಕರು ಯಾರನ್ನೂ ತುಳಿಯಲಿಲ್ಲ, ಯಾವುದೋ ಕಾಲಘಟ್ಟದಲ್ಲಿ ಶ್ರೀಂತರಿಂದ ಬಡವರು ನೋವನ್ನು ಅನುಭವಿಸಿರಬಹುದು, ಆದರೆ ವೈದಿಕರು ಮೊದಲಿನಿಂದಲೂ ಬಡವರೇ ಹೊರತು ಶ್ರೀಮಂತರಲ್ಲ! ಪೂಜೆ-ಪುನಸ್ಕಾರಗಳಿಗೆ ಸಂಬಂಧಿಸಿದ ತಮ್ಮ ಅಚರಣೆಗಳಿಂದ ಬೇರೇ ಪಂಕ್ತಿಯಲ್ಲಿ ಊಟಮಾಡಿರಬಹುದೇ ಹೊರತು ವೈದಿಕರು ಇನ್ಯಾವ ತಪ್ಪನ್ನೂ ಎಸಗಲಿಲ್ಲ.

ಇದನ್ನೆಲ್ಲಾ ಓದುತ್ತಿರುವಾಗ ನಿಮಗೆ ’ಐದುಕಾಲಿನ ಮಂಚ ಕುಂಟ ಮಲಗಿದ್ದ’ ಹಾಡಿನ ಧ್ವನ್ಯಾರ್ಥ ಹೊಳೆದಿರಲೂ ಬಹುದು, ಅರ್ಥವಾಗದಿದ್ದ ಪಕ್ಷದಲ್ಲಿ ಮತ್ತೆ ಮತ್ತೆ ಕೇಳಿಸಿಕೊಳ್ಳಿ, ಅರ್ಥಮಾಡಿಕೊಳ್ಳುವ ಪ್ರಯತ್ನ ನಿಮ್ಮಿಂದ ನಡೆಯಲಿ ಎಂಬ ಸಲಹೆಯೊಂದಿಗೆ ನಮ್ಮಲ್ಲೇ ಇರುವ ಐಬುಗಳ ಬಗ್ಗೆ ತಿಳಿಸಿದ್ದೇನೆ.