ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, March 28, 2012

ನಿದಿಧ್ಯಾಸನ ಮಾಡಿ ಜಯಶೀಲರಾಗಿ !

ಚಿತ್ರಋಣ: ಅಂತರ್ಜಾಲ

ನಿದಿಧ್ಯಾಸನ ಮಾಡಿ ಜಯಶೀಲರಾಗಿ !


ತಾಪತ್ರಯ-ವಿನಿರ್ಮುಕ್ತೋ ದೇಹತ್ರಯ-ವಿಲಕ್ಷಣಃ |
ಅವಸ್ಥಾತ್ರಯ-ಸಾಕ್ಷ್ಯಸ್ಮಿ ಅಹಮೇವಾಹಮವ್ಯಯಃ ||

ಈ ವಿದ್ಯೆಯನ್ನು ಅನೌಪಚಾರಿಕವಾಗಿ ಹೇಳಿಕೊಟ್ಟ ಗುರುವೃಂದಕ್ಕೆ ಮೊದಲು ಶಿರಬಾಗಿ ಕರಮುಗಿದು ಪ್ರಾರ್ಥಿಸಿ ನಿಮ್ಮಲ್ಲಿ ಈ ವಿಷಯ ಪ್ರಸ್ತಾವಿಸುತ್ತಿದ್ದೇನೆ. ಹೊಸದೊಂದು ವಿಷಯ ನನ್ನ ಗಮನ ಸೆಳೆದಿತ್ತು. ನಿದಿಧ್ಯಾಸನ ಕ್ರಿಯೆ ! ಹಾಗೆಂದರೇನು ? ಎಲ್ಲಿ ಹೇಗೆ ಅದನ್ನು ಆಚರಿಸುವುದು ? ಯಾರು ಮತ್ತು ಯಾವಾಗ ಮಾಡಬಹುದು ? ಅದರ ಪರಿಣಾಮಗಳೇನು ? ಈ ರೀತಿ ಒಂದರಮೇಲೊಂದು ಪ್ರಶ್ನೆಗಳು ಬರುತ್ತಲೇ ಇದ್ದವು; ಉತ್ತರ ಅಷ್ಟು ಸಲೀಸಾಗಿ ಸಿಗಲಿಲ್ಲ. ಹುಡುಕಿದೆ ಹುಡುಕಿದೆ ಹಲವು ಯೋಗಿಗಳಲ್ಲಿ ಹೋದರೂ ಅದೊಂದು ಸ್ವಾನುಭವ ಕ್ರಿಯೆಯಾಗಿರುವುದರಿಂದ ಅದನ್ನು ವಿವರಿಸುವುದು ಸ್ವಲ್ಪ ಕಷ್ಟ.

ಭಾರತೀಯ ಮೂಲದ ಯಾವುದೇ ತತ್ವಗಳನ್ನು ತೆಗೆದುಕೊಳ್ಳಿ ಅವು ಆದರ್ಶಪ್ರಾಯ. ಅವು ಮತಗಳ ಬಗ್ಗೆ ಹೇಳುವುದಿಲ್ಲ; ಆದರೆ ಧರ್ಮದ ಬಗ್ಗೆ ತಿಳಿಸುತ್ತವೆ, ಮಾನವ ಧರ್ಮದ ಬಗ್ಗೆ ವಿವರಿಸುತ್ತವೆ. ಅಲ್ಲಿಲ್ಲಿ ಆರ್ಟ್ ಆಫ್ ಲಿವಿಂಗ್ ಅಥವಾ ಇನ್ನೂ ಹಲವಾರು ಯೋಗ ಕೇಂದ್ರಗಳಿಂದ ಕೆಲವರು ಇದನ್ನು ತಿಳಿದುಕೊಂಡಿರಬಹುದು. ಅಷ್ಟಾಂಗ ಯೋಗದ ಬಗ್ಗೆಯೂ ಅಲ್ಪಸ್ವಲ್ಪ ಗೊತ್ತಾಗಿರಬಹುದು. ಆದರೆ ಅಷ್ಟಾಂಗಯೋಗದ ಉಪಯೋಗವನ್ನು ಅರಿತವರು ಭಾಗಶಃ ಯೋಗವನ್ನಾದರೂ ಕಲಿಯುತ್ತಾರೆ. ಯೋಗವೆಂಬುದು ಕೇವಲ ಯೋಗಾಸನವಲ್ಲ, ಅದು ಕೇವಲ ಭೌತಿಕ ಅಥವಾ ಶಾರೀರಿಕ ವ್ಯಾಯಾಮ ಕ್ರಿಯೆಯಲ್ಲ. ಅದು ದೇಹ ಮತ್ತು ಮನಸ್ಸುಗಳನ್ನು ಬಳಸಿ ಆತ್ಮಾನುಸಂಧಾನ ಮಾಡುವ ಕ್ರಿಯೆ! ಈ ಬ್ಲಾಗಿನ ಆರಂಭದಲ್ಲಿ ನಾನು ಬರೆದ ಹಾಡೊಂದು ನೆನಪಾಗುತ್ತಿದೆ. ಅದನ್ನು ಕೆಲವರು ಓದಿದರು; ಕೆಲವರು ತುಂಬಾ ಚೆನ್ನಾಗಿದೆಯೆಂದರು, ಇನ್ನೂ ಕೆಲವರು ತೀರಾ ವಿರಕ್ತ ಗೀತೆ ಎಂದರು. ಅದರ ಆಳವಾದ ಗಹನವಾದ ಅರ್ಥವನ್ನು ಯಾರೂ ಅರಿಯದಾದರು.

ಹಲವು ಸರ್ತಿ ನಾನು ಹೇಳಿದ್ದಿದೆ, ಶರೀರದ ಸ್ವಚ್ಛತೆಗಾಗಿ ಹೇಗೆ ಸ್ನಾನ ಮಾಡುತ್ತೇವೆಯೋ ಹಾಗೆಯೇ ಮನಸ್ಸಿನ ಸ್ವಚ್ಛತೆಗಾಗಿ ಧ್ಯಾನ ಮಾಡಿ ಎಂದು. ಮನಸ್ಸು-ಆತ್ಮ ಬೇರೇ ಬೇರೇ. ಆತ್ಮ ಶುದ್ಧವಾಗಿರುತ್ತದೆ; ಕಲ್ಮಶರಹಿತವಾಗುತ್ತದೆ. ಯಾವಾಗ ಆತ್ಮ ಶರೀರದೊಳಗೆ ಸೇರಿ ಮನಸ್ಸಿನ ಹತೋಟಿಯಲ್ಲಿ ಸಿಕ್ಕಿಬೀಳುತ್ತದೋ ಆಗ ಅದು ಗೌಣವಾಗಿ ಸುಪ್ತವಾಗಿ ಶರೀರದೊಳಗೆ ಹುದುಗಿರುತ್ತದೆಯೇ ವಿನಃ ತನ್ನಶಕ್ತಿಯನ್ನು ಅದು ಮರೆತಿರುತ್ತದೆ ! ಈ ಶರೀರದೊಳಗೆ ಆತ್ಮ ಎಂಬುದು ಮೊಬೈಲ್ ಹ್ಯಾಂಡ್ ಸೆಟ್ ನಲ್ಲಿ ಸಿಮ್ಮು ಇರುವಂತೇ. ನಮ್ಮಲ್ಲಿಯೂ ಡ್ಯೂಯಲ್ ಸಿಮ್ಮು! ಒಂದು ಒಳಗಿನ ನಾನು ಒನ್ನೊಂದು ಹೊರಗಿನ ನಾನು. ಆದರೆ ಇಲ್ಲಿ at a time both are functioning! ಆಗಾಗ ನನ್ನಜೊತೆಗಿರುವ ನಾನು ಒಳಗಿನ ನನ್ನನ್ನು ಬಿಟ್ಟು ಪರಸ್ಪರ ಕೆಲಸಮಾಡುತ್ತೇನೋ ಆ ಕೆಲಸ ಯಶಸ್ವಿಯಾಗುವುದಿಲ್ಲ ಅಥವಾ ಕೇಡಿನ ಕೆಲಸವಾಗಿರುತ್ತದೆ!

ಹೀಗಿರುತ್ತ ನಮ್ಮ ಲೌಕಿಕ ಜೀವನದಲ್ಲಿ ಹಿಂದಿನ ಜನ್ಮಾಂತರಗಳ ಕರ್ಮಾವಶೇಷಗಳು ನಮ್ಮನ್ನು ಬಾಧಿಸುತ್ತವೆ. ಅದಕ್ಕೆಲ್ಲಾ ನಾವು ಬಾಧ್ಯಸ್ಥರೇ. ಬುದ್ಧ ಜಾತಕ ಕಥೆಗಳನ್ನು ಕೇಳಿದ್ದೀರಿ, ಕರ್ಣ-ಭೀಷ್ಮರಂತಹ ಹಲವು ಮಹನೀಯರು ಯಾಕೆ ಹಾಗೆ ನೋವನುಭವಿಸಿದರು ಎಂಬುದನ್ನು ನೋಡಿದ್ದೀರಿ. ಭೀಷ್ಮನ ಬಗ್ಗೆ ಹಿಂದೊಮ್ಮೆ ಬರೆದಿದ್ದೆ, ಆಗಾಗ ಈ ಕಡೆ ನೀವು ಬಂದಿದ್ದರೆ ಅವುಗಳನ್ನೆಲ್ಲಾ ಓದಿರುತ್ತೀರಿ. ಉತ್ತಮವಾದ ಕೆಲಸಗಳನ್ನು ಮಾಡಿದವರು ಉತ್ತಮ ಫಲಗಳನ್ನೂ ಮಧ್ಯಮರು ಮಿಶ್ರ ಫಲಗಳನ್ನೂ ಅಧಮರು ಕೆಟ್ಟ ಫಲಗಳನ್ನೂ ಪಡೆಯುತ್ತಾರೆ. ನಿತ್ಯವೂ ನಾವು ಮಡುವ ಕೆಲಸವನ್ನೆಲ್ಲಾ ಒಮ್ಮೆ ಕೂತು ಅವಲೋಕಿಸುತ್ತಾ ಅಂತರಾತ್ಮನ ಜೊತೆಗೆ ನಿಕಟವರ್ತಿಯಾಗಿ ನಿಜದ ವರದಿಯನ್ನು ಆತನಿಗೆ ಒಪ್ಪಿಸಿ ಅವನಿಂದ ರಶೀದಿ ಪಡೆಯುವುದೇ ನಿದಿಧ್ಯಾಸನ ಕ್ರಿಯೆ.

ಮನವ ಶೋಧಿಸಬೇಕು ನಿತ್ಯ
ನಾವು ಅನುದಿನ ಮಾಡುವ ಪಾಪ-ಪುಣ್ಯದ ವೆಚ್ಚ

ಎಂದು ಪುರಂದರ ದಾಸರು ಹೇಳಿದ್ದು ಬರಿದೇ ಅಲ್ಲ. ನವಕೋಟಿ ನಾರಾಯಣನೆನಿಸಿದ್ದ ಶೀನಿವಾಸ ನಾಯಕನನ್ನು ತನ್ನ ಆಟಕ್ಕೆ ಬಳಸಿಕೊಂಡ ಶ್ರೀಮನ್ನಾರಾಯಣ ಅವರ ಲೋಭತ್ವವನ್ನು ತೊರೆಯಿಸಿ ತನ್ನ ದಾಸನನ್ನಾಗಿ ಸ್ವೀಕರಿಸಿದ. ಬಳ್ಳಗಳಲ್ಲಿ ಅಳೆದು ಮಾರುತ್ತಿದ್ದ ಶ್ರೀಮಂತ ವ್ಯಾಪಾರಿಯೊಬ್ಬ ಹೀಗೆ ಪುರಂದರರಾಗುತ್ತಾರೆಂದು ಯಾರೂ ಎಣಿಸಿರಲಿಲ್ಲ. ಮಾನವ ಮನಸ್ಸಿಗೆ ಆಸೆ ಎಂಬುದು ತೀರುವುದಿಲ್ಲ. ಇಷ್ಟಿದ್ದರೆ ಅಷ್ಟಿರಲಿ ಎಂಬ ಆಸೆ, ಅಷ್ಟಿದ್ದರೆ ಮತ್ತಷ್ಟಿರಲಿ ಎಂಬ ಬಯಕೆ, ಮತ್ತಷ್ಟಿದ್ದರೆ ಮಗುದಷ್ಟಿರಲಿ ಎಂಬ ಅಪೇಕ್ಷೆ ಹೀಗೇ ಆಸೆಯ ಹಕ್ಕಿ ಹಾರುತ್ತಾ ಹಾರುತ್ತಾ ಎಲ್ಲೂ ಕೂರದೇ ಹಾರುತ್ತದೆ! ಇಂತಹ ಆಸೆಗಳಿಗೆ ಕಡಿವಾಣ ಹಾಕದೇ ಇದ್ದಲ್ಲಿ ಜೀವನದಲ್ಲಿ ಸಮಸ್ಯೆಗಳು ಜಾಸ್ತಿಯಾಗುತ್ತಲೇ ಹೋಗುತ್ತವೆ.

ಯೋಗದ ಕೊನೆಯಘಟ್ಟಕ್ಕಿಂತ ಹಿಂದಿನ ಎರಡನೇ ಘಟ್ಟವಾದ ಧ್ಯಾನದಲ್ಲಿ ಶ್ರವಣ ಮತ್ತು ಮನನ ಕ್ರಿಯೆಗಳು ನಡೆಯುತ್ತವೆ. ಶ್ರವಣ ಎಂದರೆ ಉತ್ತಮವಾದುದನ್ನು ಕೇಳುವುದು ಮತ್ತು ಮನನ ಎಂದರೆ ಕೇಳಿದ್ದನ್ನೇ ಮತ್ತೆ ಮತ್ತೆ ಮನಸ್ಸಿನಲ್ಲಿ ನೆನಪಿಗೆ ತಂದುಕೊಳ್ಳುವುದು. ಇವೆರಡೂ ಮುಗಿದ ನಂತರದ ಹಂತ ನಿದಿಧ್ಯಾಸನ. ನಿದಿಧ್ಯಾಸನದಲ್ಲಿ ಎರಡು ಹಂತಗಳು. ಮೊದಲನೆಯದು ಮಿಥ್ಯೆಯನ್ನು ವಿಸರ್ಜಿಸುವುದು : ನಾನೆಂದರೆ ಈ ಶರೀರವಲ್ಲ, ನಾನು ಎತ್ತರವಿಲ್ಲ, ನಾನು ಚಿಕ್ಕವನಲ್ಲ, ನಾನು ದೊಡ್ಡವನೂ ಅಲ್ಲ, ನಾನು ಸುಂದರನಲ್ಲ, ನಾನು ಕುರೂಪಿಯೂ ಅಲ್ಲ, ನಾನು ಸೂಕ್ಷ್ಮನಲ್ಲ, ನಾನು ಸ್ಥೂಲವೂ ಅಲ್ಲ, ನಾನು ಬುದ್ಧಿಯಲ್ಲ, ನಾನು ಮನಸ್ಸಲ್ಲ, ನಾನು ಚಿತ್ತವಲ್ಲ, ನಾನು ಅಹಂಕಾರವಲ್ಲ ಹೀಗೆಲ್ಲಾ. ಎರಡನೆಯದು ಬ್ರಹ್ಮತ್ವವನ್ನು ಒಪ್ಪಿಕೊಳ್ಳುವುದು: ನಾನು ಆತ್ಮ, ನಾನು ಶುದ್ಧ, ನಾನು ಬುದ್ಧ[ಬೌದ್ಧಿಕವಾಗಿ ಬೆಳೆದವನು], ನಾನು ಮುಕ್ತ ಮತ್ತು ನಾನು ಕ್ರಿಯೆಯಲ್ಲದ, ಯಾವುದೇ ಸಂಗವಿಲ್ಲದ, ಜನನ-ಮರಣಗಳೂ ಬಾಧಿಸದ ಬ್ರಹ್ಮ ರೂಪ.

ಈ ಹಂತಕ್ಕೆ ತಲುಪುವುದು ಸುಲಭದ ಮಾತಲ್ಲ. ಎಷ್ಟೋ ಜನರಿಗೆ ಇದೆಲ್ಲಾ ಅರ್ಥವಾಗುವುದು ದೂರದ ಮಾತು. ಬಾವಿಯೊಳಗಿದ್ದ ಕಪ್ಪೆ ತನ್ನ ಬಾವಿಯೇ ಜಗತ್ತು ಎಂದುಕೊಂಡ ಹಾಗೇ ನಿಜದ ಜಗತ್ತನ್ನು ಅರಿಯದೇ ಮಿಥ್ಯೆಯ ಜಗತ್ತಿನಲ್ಲಿ ಲೌಕಿಕ ಜಗದಲ್ಲಿ ಪ್ರತಿಯೊಂದು ಕ್ಷಣವೂ ತೊಡಗಿಕೊಂಡ ನಿಜವಾದ ನಾನು ನನ್ನನ್ನೇ ಮರೆತಿರುತ್ತೇನೆ. ಒಂದೊಮ್ಮೆ ನಿದಿಧ್ಯಾಸನ ಕ್ರಿಯೆಯಲ್ಲಿ ತೊಡಗಿಕೊಂಡರೆ ಈ ಜಗದ ವ್ಯಾವಹಾರಿಕ ಒಳತಿರುಳಿನ ಅರ್ಥ ನಮಗಾಗುತ್ತದೆ; ನಾವು ಬಂಧಮುಕ್ತರಾಗುತ್ತೇವೆ. ನಿದಿಧ್ಯಾಸನ ಕ್ರಿಯೆ ಯೋಗನಿದ್ರೆಯನ್ನು ನೀಡುತ್ತದೆ. ಆತ್ಮನೊಡನೆ ನಾನು ಅಂದರೆ ನನ್ನೊಡನೆ ನಾನು ಮತ್ತು ನಾನು ಮತ್ತು ನಾನು ಮತ್ತು ನಾನು ಮತ್ತು ನಿಜವಾದ ನಾನು. ಆ ನಿಜವಾದ ನಾನು ಎಚ್ಚೆತ್ತಾಗ, ಜಾಗ್ರತವಾದಾಗ ಈ ಮಿಥ್ಯೆಯ ನಾನುವನ್ನು ನಿಯಂತ್ರಿಸುತ್ತದೆ! ಒಳಗಿನ ನಾನು ಮತ್ತು ದೇವರು ಇವೆರಡರಲ್ಲಿ ಭೇದ ಎಣಿಸದೇ ಇದ್ದರೆ ಒಳಗಿನ ನಾನು ಹೇಳುವುದನ್ನು ಹೊರಗಿನ ನಾನು ಕಾರ್ಯಗತಗೊಳಿಸಬೇಕಾಗುತ್ತದೆ. ದೇವರಲ್ಲಿ ನಾವು ಸತ್ಯವನ್ನು ಬಚ್ಚಿಡಲಾರೆವು, ದೇವನಿಗೆ ಮೋಸಮಾಡಲಾರೆವು, ದೇವನಿಗೆ ಅನ್ಯಾಯಮಾಡಲಾರೆವು, ದೇವನನ್ನು ದೂಷಿಸಲಾರೆವು, ದೇವನನ್ನು ಶಿಕ್ಷಿಸಲಾರೆವು, ದೇವನಿಗೆ ಬೇಡದ್ದನ್ನು ನಿವೇದಿಸಲಾರೆವು, ದೇವ ಕೆಟ್ಟ ಚಟಗಳಿಗೆ ಅಧೀನನಾಗಲಾರ...ಹೀಗೇ ನನ್ನೊಳಗೇ ದೇವ ಇದ್ದಾನೆಂದಮೇಲೆ ಆತನಿಗೆ ಸರಿಯಾಗಿ ಹೊರಗಿನ ನಾನು ನಡೆದುಕೊಳ್ಳಬೇಕಾಯ್ತು!

ಆಗ ಶ್ರೀಶಂಕರರ ’ಅಹಂ ಬ್ರಹ್ಮಾಸ್ಮಿ’ಯನ್ನು ನಾವು ಅನುಷ್ಠಾನದಲ್ಲಿ ಕಾಣುತ್ತೇವೆ! ದೇವರೇ ನಾನಾದಾಗ ನನ್ನ ಸುತ್ತ ಇರುವ ಪ್ರತಿಯೊಂದೂ ಜೀವಿಯಲ್ಲಿ, ವಸ್ತುವಿನಲ್ಲಿ, ಅಣುರೇಣು ತೃಣಕಾಷ್ಠಗಳಲ್ಲಿ ಎಲ್ಲೆಲ್ಲೂ ನನ್ನದೇ ಇನ್ನೊಂದು ಅಂಶವನ್ನು ಕಾಣತೊಡಗುತ್ತೇನೆ. ಯಾರಿಗೂ ಅನ್ಯಾಯ ಮಾಡಲಾರೆ, ಯಾರಿಗೂ ಕೆಟ್ಟದ್ದನ್ನು ಬಯಸಲಾರೆ, ಯಾರಿಗೂ ಮೋಸಮಾಡಲಾರೆ, ಯಾರಿಗೂ ನೋವನ್ನು ಉಂಟುಮಾಡಲಾರೆ, ಎಲ್ಲರೂ ನನ್ನವರೇ ನನ್ನ ಭಾಗವೇ ಎಂಬ ಏಕದರಲ್ಲಿ ಅನೇಕ ಮತ್ತು ಅನೇಕದರಲ್ಲಿ ಏಕ ತತ್ವವನ್ನು ಕಾಣುತ್ತಾ ವಸುಧೆಯಲ್ಲಿರುವ ಎಲ್ಲಾ ಜೀವಿಗಳೂ ನನ್ನದೇ ಕುಟುಂಬ ಎಂಬ ಭಾವಕ್ಕೆ ತಲುಪುತ್ತೇವೆ. || ವಸುಧೈವ ಕುಟುಂಬಕಮ್ || ಎಂಬ ಭಾವ ಜಾಗೃತವಾದಾಗ ನಾವು ತಪ್ಪನ್ನೆಂದೂ ಮಾಡುವ ಗೋಜಿಗೆ ಹೋಗುವುದಿಲ್ಲ.

ಹೀಗೇ ಪುನರಪಿ ಪ್ರತಿನಿತ್ಯ ನಾವು ನಮ್ಮೊಳಗೆ ಅಂದರೆ ಹೊರಗಿನ ನಾನು ಒಳಗಿನ ನಾನುವನ್ನು ಸಂಪರ್ಕಿಸಿ, ಸಂದರ್ಶಿಸಿ ಕೆಲಹೊತ್ತು ತದೇಕ ಚಿತ್ತದಿಂದ ಒಳಗಿನ ನಾನುವಿನೊಡನೆ ಆಟವಾಡುವ ಪ್ರಕ್ರಿಯೆಯೇ ನಿದಿಧ್ಯಾಸನ. ನಿದಿಧ್ಯಾಸನ ಕ್ರಿಯೆಯಲ್ಲಿ ತಲ್ಲೀರಾದಾಗ ಇಹದ ಜಂಜಡಗಳನ್ನೆಲ್ಲಾ ಮರೆಯಲು ಸಾಧ್ಯವಾಗುತ್ತದೆ. ಆಗ ಯಾವ ಮೊಬೈಲೂ ರಿಂಗಣಿಸುವುದು ನಮಗೆ ಕೇಳುವುದಿಲ್ಲ, ಯಾವುದೇ ವಾಹನ ಓಡಾಡಿದ ಗೌಜಿ ಕೇಳುವುದಿಲ್ಲ, ಯಾವುದೇ ಟಿವಿ ಧಾರಾವಹಿಯ ಭರಾಟೆಯಿಲ್ಲ, ಯಾರೂ ಮಡೆಸ್ನಾನ ಮಾಡುತ್ತಿಲ್ಲ, ಯಾರೂ ಧರಣಿಕೂರುತ್ತಿಲ್ಲ, ಎಲ್ಲೂ ಜಗಳಗಳಾಗುತ್ತಿಲ್ಲ, ಎಲ್ಲೂ ರಾಜಕೀಯದ ಒತ್ತಡವಿಲ್ಲ, ಯಾವುದೇ ಉದ್ವಿಗ್ನ ಪರಿಸ್ಥಿತಿಯೂ ಇಲ್ಲ, ಯಾರೂ ಏನನ್ನೂ ಕದ್ದೊಯ್ಯುವುದಿಲ್ಲ, ಯಾರೂ ಏನ್ನನ್ನೋ ಕೇಳಬಂದು ಕರೆಗಂಟೆ ಬಾರಿಸುವುದಿಲ್ಲ! ಸಮಯವೆಲ್ಲಾ ನನಗೇ ಮೀಸಲು ಮತ್ತೆ ನಮಗೇ ಮೀಸಲು ಮತ್ತು ನನಗೇ ಮೀಸಲು.

ಈ ನಿದಿಧ್ಯಾಸನವೆಂಬ ಮಾನಸಿಕ ಸ್ನಾನ ಮುಗಿದಾಗ ಸಿಗುವ ಅಲೌಕಿಕ ಆನಂದ ಬೇರಾವ ಆನಂದಕ್ಕಿಂತಾ ಹೆಚ್ಚಿನದಿರುತ್ತದೆ. ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ಪರಿಹಾರವನ್ನು ನಮಗೆ ನಾವೇ ಕಂಡುಕೊಳ್ಳಬಲ್ಲೆವು. ಪರಿಹಾರ ಎಂದರೆ ಮರೆಯಾಗುವುದಲ್ಲ, ಓಡಿಹೋಗುವುದಲ್ಲ, ಅಡಗಿಕೂರುವುದಲ್ಲ, ಆತ್ಮಹತ್ಯೆಮಾಡಿಕೊಳುವುದಲ್ಲ, ಯಾರಲ್ಲೋ ಬೇಡುವುದಲ್ಲ, ಯಾರನ್ನೋ ಕಾಡುವುದಲ್ಲ. ಅದು ಒಳಗಿನ ನನ್ನಿಂದ ಹೊರಗಿನ ನನಗಾಗಿ ನನ್ನೊಳಗೇ ಉದ್ಭವವಾಗುವ ಸ್ವಯಂಭೂ ಪರಿಹಾರ! ಆ ಪರಿಹಾರ ಸಿಕ್ಕರೆ ನಾವು ಯಾರನ್ನೂ ಎದುರಿಸಬಹುದು, ಚೆನ್ನಾಗಿ ಓದಿ ಪರೀಕ್ಷೆಯಲ್ಲಿ ತೇರ್ಗಡೆಹೊಂದಬಹುದು, ಉತ್ತಮ ಆರೋಗ್ಯವನ್ನು ಮರಳಿ ಗಳಿಸಬಹುದು, ಸಾಲಗಾರರನ್ನು ದಾರಿಯಲ್ಲೇ ನಿಲ್ಲಿಸಿ ಅವಧಿಯಲ್ಲಿ ಸಾಲ ಮರಳಿಸಬಹುದು, ಏರಲಾರದ ಬೆಟ್ಟವನ್ನು ಯಾವುದೋ ಮಾರ್ಗಬಳಸಿ ಏರಬಹುದು!

ಯಾಕಾಗಿ ನಿದಿಧ್ಯಾಸನ ಕ್ರಿಯೆ ಬೇಕು ?

ಧಾವಂತದ ಜೀವನ ಶೈಲಿಯಲ್ಲಿ ನಮಗೆ ನಮ್ಮೊಟ್ಟಿಗೆ ಕಳೆಯಲು ಮಾತ್ರ ಸಮಯವಿಲ್ಲ! ನಿಂತೇ ತಿಂಡಿ, ನಿಂತೇ ಊಟ ಎಲ್ಲವೂ ಫಾಸ್ಟ್ ಫಾಸ್ಟ್ ಫಾಸ್ಟ್. ಯಾವುದಕ್ಕೂ ಒಂದು ಶಿಷ್ಟಾಚಾರ ಎಂಬುದೇ ಇಲ್ಲ. ಕಂಡಲ್ಲಿ ನುಗ್ಗುವುದು ಬೇಕಾದ್ದು ಬೇಡದ್ದು ಎಲ್ಲವನ್ನೂ ಒಟ್ಟಾರೆ ಖರೀದಿಸುವುದು. ಬೇಕು ಬೇಕಾದ ಹಾಗೇ ಕ್ರೆಡಿಟ್ ಕಾರ್ಡ್ ಬಳಸುವುದು. ಪಕ್ಕದಮೆನೆಗಿಂತಾ ಕಮ್ಮಿ ಇಲ್ಲಾ ಎಂದು ತೋರಿಸಲು ಅವರ ಸ್ಯಾಂಟ್ರೋ ಕಾರಿಗಿಂತಲೂ ಉನ್ನತ ದರ್ಜೆಯ ಮಹಿಂದ್ರಾ ಸ್ಕಾರ್ಪಿಯೋ ಖರೀದಿಸುವುದು.... ಹೀಗೆಲ್ಲಾ. ಈ ಜಗತ್ತಿನಲ್ಲಿ ನಾನೂ ಏನೂ ಕಮ್ಮಿ ಇಲ್ಲಾ ಎಂಬ ಅಹಂ ನಮ್ಮನ್ನು ಬೇರೆ ಬೇರೇ ಕೆಲಸಗಳಿಗೆ ಹಚ್ಚುತ್ತದೆ.

ನಮ್ಮ ಅಹಮಿಕೆ ಎಷ್ಟು ವಿಸ್ತೃತವಾದುದು ಎಂದರೆ ದೇವಸ್ಥಾನಗಳಿಗೆ ಒಂದೊಮ್ಮೆ ಟ್ಯೂಬ್ ಲೈಟ್ ಅಥವಾ ಗೋಡೆಗಡಿಯಾರ ಕೊಟ್ಟರೆ ಅದರ ಮೈತುಂಬಾ ನಮ್ಮ ಹೆಸರು ಬರೆದು, ಅಲ್ಲಿ ಬಂದವರಿಗೆ/ನೋಡಿದವರಿಗೆ " ಓ ಇಂಥವರು ದಾನಶೂರರಪ್ಪಾ" ಎನಿಸಬೇಕು ಎಂಬುದು ನಮ್ಮ ಮನದ ಬಯಕೆ! ಬಡರೋಗಿಗೋ ಬಡವಿದ್ಯಾರ್ಥಿಗೋ ೧೦ ರೂಪಾಯಿಗಳನ್ನು ಕೊಟ್ಟರೂ ದಾನಿಗಳ ಯಾದಿಯಲ್ಲಿ ಹೆಸರು ಬರಬೇಕೆಂಬ ಆಸೆ! ಹಲವರ ದೇಣಿಗೆಯಿಂದ ನಡೆಸುವ ಕಾರ್ಯಕ್ರಮದಲ್ಲಿ ನಮ್ಮ ಹೆಸರು ಪ್ರಧಾನವಾಗಿ ಘೋಷಿಸಲ್ಪಡಬೇಕೆಂಬ ಆಸೆ! ನಾಕು ಜನರಿಗೆ ಖಾಲೀ ಕಾಫಿ ಟೀ ಕೊಟ್ಟರೂ ’ಅತಿಥಿಸತ್ಕಾರ ದುರಂಧರ’ ಎಂಬ ಬಿರುದು ಪಡೆವಾಸೆ! ಮನೆಯ ಪಕ್ಕದಲ್ಲಿ ಕಾಣುವ ಹಸಿದ ನಾಯಿಗೆ/ಕಾಗೆಗೆ ತುತ್ತು ಕೂಳನ್ನೂ ಹಾಕದೇ ಯಾವುದೋ ಮೃಗಾಲಯದಲ್ಲಿ ೧೦೦೦ ರೂಪಾಯಿ ನೀಡಿ "ಇಂಥದ್ದನ್ನು ಶ್ರೀಯುತರು ದತ್ತುಪಡೆದರು" ಎಂದು ಹೆಸರು ಬರೆಸುವಾಸೆ! ಎಲ್ಲೋ ಹೊಡೆದ ದುಡ್ಡಿನಲ್ಲಿ ಯಾವುದೋ ಕೆಲವು ಬಡ ವಿದ್ಯಾರ್ಥಿಗಳಿಗೆ ಒಂದೆರಡು ಪಟ್ಟಿಪುಸ್ತಕಗಳನ್ನು ನೀಡಿ ಮುಂದಿನ ಚುನಾವಣೆಯಲ್ಲಿ ಕಾರ್ಪೋರೇಟರ್ ಜಾಗಕ್ಕೆ ಸ್ಪರ್ಧಿಸುವಾಸೆ! ಈ ಎಲ್ಲಾ ಆಸೆಗಳ ಹಿಂದೆ ಕೆಲಸಮಾಡುವುದು ಒಂದೇ : ಅದು ’ಅಹಂ’ಕಾರ!

ನಟ ದಿ|ವಿಷ್ಣುವರ್ಧನ್ ಅವರು ಯಾರ್ಯಾರಿಗೋ ಕೈಲಾದ ಎಷ್ಟೆಷ್ಟೋ ದಾನಮಾಡಿದರು, ಆದರೆ ಅವರು ದಾನ ಕೊಟ್ಟಿದ್ದು ಸ್ವತಃ ಅವರಿಗೇ ನೆನಪುಳಿಯಲಿಲ್ಲ; ಮನೆಗಂತೂ ತಿಳಿಯಲೇ ಇಲ್ಲ! ದಾನವಿದ್ದರೆ ಹೀಗಿರಬೇಕೇ ವಿನಃ ಹೆಸರಿಗಾಗಿ ಮಾಡುವ ದಾನ ದಾನವೇ ಅಲ್ಲ; ಅಥವಾ ದಾನಕ್ಕೆ ದಕ್ಕಬಹುದಾದ ಪುಣ್ಯ, ಮೆರೆಯುವ ಅಹಂಕಾರದಿಂದ ನಶಿಸಿಹೋಗುತ್ತದೆ. ಇನ್ನು ಕಾರ್ಪೋರೇಟ್ ಕಲ್ಚರ್ ಒಂದಿದೆ: ಅವರು ದಾನ ಮಾಡಿದ್ದೇವೆ ಎಂದು ಹೆಸರು ಹಾಕಿಸುವುದರ ಜೊತೆಗೆ ಪತ್ರಿಕೆಗಳಲ್ಲಿ ತಾವು ಮಾಡಿದ ದಾನದ ಕಥೆಗಳನ್ನು ರಂಜನೀಯವಾಗಿ ಬರೆಯುತ್ತಾರೆ! ’ನಾವು ಇಂತಿಷ್ಟು ವರ್ಷ ಇಂಥಾ ಕಡೆಗಳಲ್ಲಿ ಇಂತಿಂಥವರಿಗೆ ಇಂತಿಂಥದ್ದನ್ನು ಕೊಡುತ್ತಿದ್ದೆವು’!! ಭಲಿಭಲಿರೇ ! ನೀವು ನಿಮ್ಮ ಸಂಸ್ಥೆಗೆ ಜಾಗ, ನೀರು, ರಸ್ತೆ, ವಿದ್ಯುತ್ತು ಮೊದಲಾದವುಗಳನ್ನು ಇದೇ ನೆಲದಿಂದ ಅಥವಾ ಈ ಪ್ರದೇಶದಿಂದ ಪಡೆದಿದ್ದೀರಿ-ಅದರಿಂದ ನಿಮ್ಮ ಸಂಸ್ಥೆಯ ಉತ್ಫನ್ನ ಬಹುಪಾಲು ಹೆಚ್ಚಿದಾಗ ಅದರಲ್ಲಿ ಅತ್ಯಲ್ಪ ಹಣವನ್ನು ಈ ತರಹದ ಕೆಲಸಕ್ಕೆ ವಿನಿಯೋಗಿಸಿದರೆ ಅದಕ್ಕೆ ಸಮಯ ಸಿಕ್ಕಾಗ ಹೇಳಿಕೊಳ್ಳಬೇಕೇನು?

ಮರಳಿ ಮೂಲ ವಿಷಯಕ್ಕೆ ಬರೋಣ. ಕ್ರೆಡಿಟ್ ಕಾರ್ಡುಗಳನ್ನು ವಿಪರೀತ ಉಪಯೋಗಿಸಿ ಉಪಯೋಗಿಸಿ ಧಾರಾಳವಾಗಿ ಸಾಲಮಾಡಿಕೊಳ್ಳುವ ಜನ ಇದ್ದಾರೆ. ಸಾಲದಲ್ಲೇ ಜಾಗ, ಸಾಲದಲ್ಲೇ ಭವ್ಯ ಬಂಗಲೆ, ಸಾಲದಲ್ಲೇ ಕಾರು, ಸಾಲದಲ್ಲೇ ಇಟಾಲಿಯನ್ ಕಿಚನ್ ಕ್ಯಾಬಿನೆಟ್ಟು ಇನ್ನೇನೇನೋ ಎಲ್ಲಾ ಸಾಲದಲ್ಲೇ! ಒಂದೊಮ್ಮೆ ಮಾಡುತ್ತಿರುವ ಕೆಲಸ ಕಳೆದುಕೊಂಡುಬಿಟ್ಟರೆ ಏನಾಗಬಹುದೆಂಬ ಪರಿವೆಯೇ ಇರುವುದಿಲ್ಲ.ಗಂಡ-ಹೆಂಡತಿ ಇಬ್ಬರೂ ದುಡಿದರೂ ದುಡಿಮೆಯ ಬಹುತೇಕ ಭಾಗ ಸಾಲಗಳ ಮರುಪಾವತಿಗೆ, ಮಿಕ್ಕಿದ್ದು ಸ್ವಲ್ಪ ಯಾವುದೋ ಇನ್ಶೂರನ್ಸ್ ಮತ್ತಿನ್ನವುದೋ ಖಾಸಗೀ ಖರ್ಚು ಇದಕ್ಕೆ ಹೋಗಿ ತಿಂಗಳ ಕೊನೆಗೆ ಮತ್ತೆ ಕೈ ಖಾಲಿ ಖಾಲಿ! ಮತ್ತೆ ಕ್ರೆಡಿಟ್ ಕಾರ್ಡಿನಲ್ಲೇ ಕಾರಿಗೆ ಪೆಟ್ರೋಲ್ ಹಾಕಿಸುವ ಪ್ರಸಂಗ! ಮಹಾನಗರಗಳಲ್ಲಿ ಅತೀ ದೊಡ್ಡ ವ್ಯಕ್ತಿಯೂ ಬದುಕುತ್ತಿದ್ದಾನೆ, ಅತೀ ಚಿಕ್ಕ ಜವಾನನ ಕೆಲಸದವನೂ ಬದುಕುತ್ತಿದ್ದಾನೆ. ದೇಣಿಗೆ ಎಂದು ಬಾಗಿಲಿಗೆ ಹೋದರೆ ಇರುವ ಅಲ್ಪ ಹಣದಲ್ಲೇ ಚಿಕ್ಕಾಸನ್ನಾದರೂ ಜವಾನನಂಥವನು ನೀಡುತ್ತಾನೆಯೇ ಹೊರತು ಉನ್ನತ ಹುದ್ದೆಗಳಲ್ಲಿ ಇರುವ ಜನ ಅದಕ್ಕೆ ಮನಸ್ಸು ಮಾಡಲಾರರು!

ಯಾರೋ ಒಬ್ಬ ಪುಣ್ಯಾತ್ಮ ನನಗೆ ಮಿಂಚಂಚೆ ಕಳಿಸಿದ್ದಾರೆ ಏನೆಂದರೆ ಆತನಿಗೆ ಸಂಗೀತ-ಸಾಹಿತ್ಯ-ಕಲೆ ಎಂದರೆ ಅಷ್ಟಕ್ಕಷ್ಟೇಯಂತೆ!

ಸಂಗೀತ ಸಾಹಿತ್ಯ ಕಲಾ ವಿಹೀನಾಂ |
ಸಾಕ್ಷಾತ್ ಪಶೂನಾಂ ಪರಪುಚ್ಚ ವಿಹೀನಃ ||

ಈ ಬದುಕನ್ನು ನಿಭಾಯಿಸಿಲಿಕ್ಕೆ ಬರೇ ಹಣದ ಥೈಲಿ ಇದ್ದರಾಗುವುದಿಲ್ಲ. ನೋಡಿ ಎಂತೆಂಥಾ ಎಳೆಯ ವಯಸ್ಸಿನಲ್ಲಿ ಹೃದಯಸ್ತಂಭನವಾಗಿ ಸತ್ತುಹೋಗುತ್ತಾರೆ. ಇಂತಹ ಘಟನೆಗಳು ಜಾಸ್ತಿ ಆಗುತ್ತಿವೆ ಯಾಕೆ? ಯಾಕೆಂದರೆ ಧಾವಂತದ ಜೀವನದಲ್ಲಿ ಸಾಕಷ್ಟು ಗಳಿಸಲಿಲ್ಲವಲ್ಲಾ ಎಂಬ ಹತಾಶ ಮನೋಸ್ಥಿತಿ ಅವರನ್ನು ಸದಾ ಕಾಡುತ್ತಿರುತ್ತದೆ. ಅನುಗಾಲವೂ ಒತ್ತಡದಲ್ಲೇ ಬದುಕುವ ಅವರಿಗೆ ಸಂಗೀತ ಎಂದರೇನು, ಸಾಹಿತ್ಯ ಯಾಕೆ ಬೇಕು, ಕಲೆ ಹೇಗಿರುತ್ತದೆ ಎಂಬುದರ ಬಗ್ಗೆ ಗಮನವೂ ಇಲ್ಲ, ಆಸಕ್ತಿಯೂ ಇಲ್ಲ. ಹೃದಯದ ಒತ್ತಡ ಜಾಸ್ತಿಯಾಗಿ ನೋವು ಉಲ್ಬಣಿಸಿ, ವೈದ್ಯರಲ್ಲಿಗೆ ಹೋದಾಗ ಅವರು ಹೇಳುತ್ತಾರೆ-- ವಿಶ್ರಾಂತಿ ತೆಗೆದುಕೊಳ್ಳಿ, ಮಾನಸಿಕವಾಗಿ ನಿಮಗೆ ಹಿತವೆನಿಸುವ ಜಾಗದಲ್ಲಿ ನಿರುಮ್ಮಳವಾಗಿ ಒಂದಷ್ಟು ದಿನ ಇದ್ದುಬನ್ನಿ! ಸಂಗೀತ-ಸಾಹಿತ್ಯ-ಕಲೆ ಇವು ಮೂರು ನಮ್ಮ ಜೀವನದಲ್ಲಿ ಮನಸ್ಸಿನಮೇಲೂ ತನ್ಮೂಲಕ ಹೃದಯದಮೇಲೂ ಬೀಳುವ ಭಾರವನ್ನು ಒತ್ತಡವನ್ನು ಕಮ್ಮಿ ಮಾಡುತ್ತವೆ!

ಅದೇ ರೀತಿ ನಮ್ಮೊಳಗಿನ ಒತ್ತಡವನ್ನು ಕಮ್ಮಿ ಮಾಡಿಕೊಳ್ಳಲು ನಮಗೆ ಧ್ಯಾನ ಬೇಕು. ಶಾರೀರಿಕ ಆರೋಗ್ಯಕ್ಕಾಗಿ ಯೋಗ ಮಾಡಬೇಕು. ಮಾಡುವ ಧ್ಯಾನದಲ್ಲಿ ಮೂರನೇ ಹಂತವೇ ನಿದಿಧ್ಯಾಸನ ಕ್ರಿಯೆ! ಮೊದಲನೆಯದು ಶ್ರವಣ ಅಂದರೆ ಕೇಳುವುದು--ಯಾವುದನ್ನು? ಉತ್ತಮವಾದುದನ್ನು. ಎರಡನೆಯದು-ಮನನ ಅಂದರೆ ಕೇಳಿದ್ದನ್ನು ಬಹಳಹೊತ್ತು ಮನದಲ್ಲೇ ಪುನರಪಿ ಮೆಲುಕುಹಾಕುವುದು. ಮೂರನೆಯದು ನಿದಿಧ್ಯಾಸನ ಅಂದರೆ ನಮ್ಮೊಳಗಿನ ಆಳಕ್ಕೇ ನಾವು ಇಳಿಯುವುದು! ನಾವು ಹರನನ್ನು ಧ್ಯಾನಿಸಿದರೆ ಅಲ್ಲಿ ಹರಿಕಾಣದೇ ಇರಬಹುದು, ನಾವು ಹರಿಯನ್ನು ನೆನೆಪಿಸಿಕೊಂಡರೆ ಅಲ್ಲಿ ಗಣೇಶ ಸಿಗದೇ ಇರಬಹುದು, ಆದರೆ ಈ ಆಕಾರರೂಪೀ ಭಗವಂತನನ್ನು ಬಿಟ್ಟು ನಿರಾಕಾರ ರೂಪೀ ಭಗವಂತನಮೇಲೆ ಮನಸ್ಸುನೆಟ್ಟು ನಿರ್ವಿಷಯಧ್ಯಾನ ಮಾಡುವುದೇ ನಿದಿಧ್ಯಾಸನ ಕ್ರಿಯೆಯಾಗಿದೆ. ಅಲ್ಲಿ ಎಲ್ಲವೂ ನಿಶ್ಶಬ್ದ, ಶಾಂತ, ಪ್ರಶಾಂತ. ಅದು ಸದಾ ಶಾಂತ ಸರೋವರ. ಅಲ್ಲೊಬ್ಬ ಸೂರ್ಯ, ಅವನ ಪ್ರಕಾಶದಲ್ಲಿ ಆಸರೋವರದಲ್ಲಿ ಆತ್ಮವೆಂಬ ಹಂಸ ಈಜಾಡುತ್ತದೆ. ನಾನು ಯಾರು ಎಂಬುದಕ್ಕೆ ಅಲ್ಲಿ ಉತ್ತರ ಸಿಗುತ್ತದೆ! ಆ ನಾನು ನಿಜವಾದ ನಾನು, ಆ ನಾನುವಿಗೆ ಹೆಸರಿಲ್ಲ, ಬಣ್ಣವಿಲ್ಲ, ಶರೀರವಿಲ್ಲ, ರೂಪವಿಲ್ಲ, ಆಕಾರವಿಲ್ಲ! ಆ ನಾನುವನ್ನು ನೆನಪಿಸಿಕೊಳ್ಳಲು ಮುಂದಾದಲ್ಲಿ ಈ ’ನಾನು’ ಸಹಜವಾಗಿ ಕರಗತೊಡಗುತ್ತದೆ. ಈ ನಾನು ಸಂಪೂರ್ಣ ಕರಗಿ ಆ ನಾನು ಗೋಚರಿಸಿದಾಗ ನಾವು ಮೇರೆ ಮೀರಿದ ಆನಂದವನ್ನು ಪಡೆಯಲು ಸಾಧ್ಯ. ಅಲ್ಲಿ ಎಲ್ಲವೂ ಇದೆ. ಯಾವುದನ್ನೂ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಬೇಕಾಗುವುದಿಲ್ಲ.

ಆದರೆ ಇದು ಹೇಳಿದಷ್ಟು ಸುಲಭಕ್ಕೆ ಆಗುವ ಕೆಲಸವಲ್ಲ. ಅದಕ್ಕಾಗಿ ಮನಃಪರಿವರ್ತನೆಯಾಗಬೇಕಾಗುತ್ತದೆ. ಧ್ಯಾನಕ್ಕೆ ನಾವು ಒಗ್ಗಿಕೊಳ್ಳಬೇಕಾಗುತ್ತದೆ.

ಎರಡುಕೋಣೆಗಳ ನೀಂ ಮಾಡು ಮನದಾಲಯದಿ
ಹೊರ ಕೋಣೆಯಲಿ ಲೋಗರಾಟಗಳನಾಡು
ವಿರಮಿಸೊಬ್ಬನೆ ಮೌನದೊಳಮನೆಯ ಶಾಂತಿಯಲಿ
ವರಯೋಗ ಸೂತ್ರವಿದು-ಮಂಕುತಿಮ್ಮ

ತಿಮ್ಮಗುರುವಿನ ಪದ್ಯದ ಅರ್ಥದ ಆಳ ಎಲ್ಲಿದೆ ಎಂಬುದನ್ನು ತಾವು ಇಲ್ಲಿ ಸ್ವಲ್ಪ ತಿಳಿಯಬಹುದಾಗಿದೆ! ಮನಸ್ಸನ್ನು ಎರಡು ಕಂಪಾರ್ಟ್‍ಮೆಂಟ್ ರೀತಿ ಮಾಡಿಕೊಂಡು ಒಂದನ್ನು ಎಲ್ಲರೊಡನೆ ಪ್ರಾಪಂಚಿಕ ವ್ಯವಹಾರದಲ್ಲಿ ತೊಡಗಿಕೊಳ್ಳಲು ಬಳಸು ಎಂದಿದ್ದಾರೆ ಡೀವೀಜಿ. ಹೀಗೆ ನಾವು ಧ್ಯಾನ ಪ್ರಕ್ರಿಯೆಯನ್ನು ಅಳವಡಿಸಿಕೊಳ್ಳುವುದರಿಂದ ನಾಳೆ ಏನು ಎಂಬ ಭೀತಿ ನಮ್ಮಿಂದ ದೂರ ಸರಿಯುತ್ತದೆ. ನಮ್ಮ ಆತ್ಮಕ್ಕೆ ಪುನಶ್ಚೇತನವುಂಟಾಗಿ ನ್ಯಾಯಮಾರ್ಗದಲ್ಲಿ ಕಾರ್ಯತತ್ಪರವಾಗಲು ಅದು ಸಹಕಾರಿಯಾಗುತ್ತದೆ. ’ಬೇಕು’ ಎಂಬ ಅತಿರೇಕದ ಬಯಕೆಗಳಿಗೆ ಕಡಿವಾಣ ಬಿದ್ದಾಗ ಆಯ-ವ್ಯಯದ [ಬ್ಯಾಲೆನ್ಸ್ ಶೀಟ್]ಅಢಾವೆ ಪತ್ರಿಕೆ ಸರಿಯಾಗಿ ಅನುಸರಿಸಲ್ಪಡುತ್ತದೆ. ಎಂತಹುದೇ ಪ್ರಸಂಗ ಬಂದರೂ ಮನಸ್ಸು ಅದನ್ನು ನಿಭಾಯಿಸುವ ತಾಕತ್ತನ್ನು ಪಡೆದುಕೊಳ್ಳುತ್ತದೆ.

ಅಧಿಕ ಅಥವಾ ಕಮ್ಮಿ ರಕ್ತದೊತ್ತಡ, ಹೃದಯಸ್ತಂಭನ, ಮಧುಮೇಹ, ಅಲ್ಸರ್ ಮುಂತಾದ ಶಾರೀರಿಕ ಅಸೌಖ್ಯ ಸ್ಥಿತಿ ನಮ್ಮಿಂದ ದೂರವಿರಬೇಕೆಂದರೆ ನಾವು ಯೋಗ ಮತ್ತು ಧ್ಯಾನ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಬೇಕು. ಜನಸಾಮಾನ್ಯರೊಡನೆ ಬೆರೆಯಬೇಕು. ನೀರೊಳಗಿದ್ದರೂ ಕೆಸವೆಯ/ತಾವರೆಯ ಎಲೆ ಒದ್ದೆಯಾಗದಿರುವಂತೆಯೇ ಸಂಸಾರದ ಲೌಕಿಕ ನೀರೊಳಗಿದ್ದರೂ ಜಂಜಾಟದ ಒದ್ದೆಯಿಂದ ಮುಕ್ತರಾಗಬಹುದಾಗಿದೆ. ಯಾವಾಗ ಅ-ದ್ವೈತ ಎಂಬುದನ್ನು ಕಾಣಲು ನಮ್ಮಿಂದ ಆಗುತ್ತದೋ ಅಂದೇ ನಮಗೆ ನಿರಾಕಾರ ಪರಮಾತ್ಮನ ಅರಿವು ಗೋಚರವಾಗುತ್ತದೆ. ಆ ದಿಸೆಯಲ್ಲಿ ಹೆಜ್ಜೆಯಿಡುತ್ತಾ ಮುಂದಕ್ಕೆ ಮುಂದಕ್ಕೆ ಸಾಗೋಣ ಎಂಬುದು ನನ್ನ ಸಲಹೆಯಾಗಿದೆ.