ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, August 27, 2012

ತೀರ್ಥರಾಜ ಪುರದ ಗಮ್ಮತ್ತೇ ಅಂಥದ್ದು !


ಚಿತ್ರಗಳ ಋಣ: ಅಂತರ್ಜಾಲ
ತೀರ್ಥರಾಜ ಪುರದ ಗಮ್ಮತ್ತೇ ಅಂಥದ್ದು !

ಮಳೆಗಾಲದಲ್ಲಿ ಗಡದ್ದಾಗಿ ಊಟ ಹೊಡೆದು, ಹೊದೆದು ಮಲಗಿಬಿಟ್ಟರೆ ಸೂರ್ಯನೆಂಬ ಸೂರ್ಯ ಕಾಣದೇ ಇದ್ದರೂ ಪರವಾಗಿಲ್ಲ-ಆತ ಮುಳುಗುವ ಹೊತ್ತಿಗೇ ಒಮ್ಮೆ ಏಳುವುದು! ವಾತಾವರಣದಲ್ಲಿನ ಆರ್ದ್ರತೆಯಿಂದ ಒಂಥರಾ ಚಳಿ. ಎಲ್ಲರಲ್ಲೂ ಹಾಗೇ...ಹೇಳಿಕೊಳ್ಳಬೇಕೆನಿಸಿದರೂ ಮನಸ್ಸಿಗೆ ಮುದನೀಡುವ ಪ್ರಕೃತಿ ಸಹಜ ವಾತಾವರಣ ಅದು. ಬಸ್ಸಿನಲ್ಲಿ ಪ್ರಯಾಣಿಸುವಾಗ ಯಾರೋ ಮುಡಿದ ಅಂಬರ ಮಲ್ಲಿಗೆಯ ಸುವಾಸನೆ ಗಾಳಿಯಲ್ಲಿ ತೇಲಿಬರುತ್ತದೆ. ಕಿವಿವರೆಗೆ ಮುಚ್ಚಿಕೊಂಡ ಟೋಪಿವಾಲಾ ಖಾಸಗೀ ಬಸ್ ಏಜೆಂಟರು ತಂತಮ್ಮದೇ ಆದ ಶೈಲಿಯಲ್ಲಿ ಊರುಗಳ ಹೆಸರನ್ನು ಕೂಗಿಕೊಂಡು ಸಾಗುತ್ತಿರುತ್ತಾರೆ. ದೂರದ ಹಳ್ಳಿಗಳಿಂದ ಶಾಲೆ/ಕಾಲೇಜಿಗಾಗಿ ಮಕ್ಕಳು ಓಡಾಡುತ್ತಾ ಇರುತ್ತಾರೆ. ಕೃಷಿ ಕೆಲಸದವರು ಅದೂ ಇದೂ ಮಾತನಾಡಿಕೊಂಡು ಎಲೆಯಡಿಕೆ ಹಾಕಿಕೊಂಡು ಓಡಾಡುತ್ತಾರೆ. ಬುರ್ರನೆ ಹಾದುಹೋಗುವ ಬಸ್ಸು ಹಾದಿಯ ತಗ್ಗುಗಳಲ್ಲಿ ನಿಂತ ಕೆಸರಿನ ನೀರನ್ನು ಬರ್ರನೆ ಅಷ್ಟೆತ್ತರಕ್ಕೆ ಹಾರಿಸಿದ್ದು ಗೊತ್ತಾಗುವಷ್ಟರಲ್ಲಿ ಪಕ್ಕದಲ್ಲಿ ನಿಂತ ಯಜಮಾನರ ಪಂಚೆಮೇಲೆ ಬಣ್ಣದ ರಂಗೋಲಿ; ಬರಲಿ ಆ ಡ್ರೈವರನಿಗೆ ಮಾಡಿಸ್ತೇನೆ ಎಂದು ಹಲ್ಲು ಕಡಿದಿದ್ದಾರೆ !  ಹಣ್ಣು ತರಕಾರಿ ವಗೈರೆ ವ್ಯಾಪಾರ ಸ್ವಲ್ಪ ಕಮ್ಮಿಯೇ. ಹಿತ್ತಲಲ್ಲಿ ಬೆಳೆಯುವ ಕಾಯಿಪಲ್ಲೆಗಳೇ ಸಾಕು ಈಗ ಎಂಬ ಧೋರಣೆ. ಕೆಂಡಸಂಪಿಗೆಯ ಕಡು ಪರಿಮಳ ಕೆಲವೆಡೆಗೆ. ಜಾಜಿಯೂ ಅಲ್ಲಲ್ಲಿ ಇದ್ದೇನೆ ಎನ್ನುತ್ತಿದ್ದರೆ ಅದು ತೀರ್ಥರಾಜಪುರ ಅರ್ಥಾತ್ ತೀರ್ಥಹಳ್ಳಿ.

ಫಣಿಯಮ್ಮ ಸಿನಿಮಾ ನೋಡಿದಾಗಿನಿಂದ ಎಳ್ಳಮವಾಸ್ಯೆ ಜಾತ್ರೆ ನಡೆದ ಜಾಗದ ಬಗ್ಗೆ ಬಹಳ ಕುತೂಹಲವಿತ್ತು. ೧೮ನೇ ಶತಮಾನದಲ್ಲಿ ನಡೆದ ಆ ಘಟನೆಯನ್ನು ಕನ್ನಡದ ಸಾಹಿತ್ಯಾಸಕ್ತರು ಎಂ ಕೆ.ಇಂದಿರಾ ಅವರ ಇದೇ ಹೆಸರಿನ ಕಾದಂಬರಿಯಲ್ಲಿ ಓದಿಯೇ ಇರುತ್ತಾರೆ. ರಥಬೀದಿಯಲ್ಲಿ ಫಣಿಯಮ್ಮ ಬಾಲ್ಯದಲ್ಲಿ ಓಡಾಡಿದ್ದು, ಹಿಡಿದ ಜಡೆಯನ್ನು ಬಿಡಿಸಿಕೊಳ್ಳಲು ತುದಿಯನ್ನೇ ಕತ್ತರಿಸಿದ್ದು, ಬಾಲ್ಯದಲ್ಲೇ ಫಣಿಯಮ್ಮನ ವಿವಾಹ, ಇನ್ನೂ ಹರೆಯದ ಸುಖವನ್ನು ಉಣ್ಣುವ ಮೊದಲೇ ವಿಧವೆ, ತಲೆಬೋಳಿಸಿಕೊಂಡು ನಂತರ ತನ್ನಿಡೀ ಜೀವಿತದಲ್ಲಿ ಮತ್ತೆಂದೂ ಕೂದಲು ಬೆಳೆಸದೇ ಮಡಿಯಮ್ಮನಾಗಿ ಕಳೆದ ಬ್ರಾಹ್ಮಣ ಬಾಲವಿಧವೆಯ ಕಥೆ ಅನಾಯಾಸವಾಗಿ ಉಕ್ಕಿಹರಿವ ಕಣ್ಣೀರಿಗೆ ಆಸ್ಪದ ಕೊಡುವಂಥದ್ದು. ಫಣಿಯಮ್ಮ ಎಂಬ ಹೆಸರನ್ನು ಕೇಳಿದಾಗಲೆಲ್ಲಾ ಅಥವಾ ಕೆಂಪು/ಬಿಳಿ ಸೀರೆಯುಟ್ಟ ಮಡಿ ಅಜ್ಜಿಯರನ್ನು ಕಂಡಾಗಲೆಲ್ಲಾ ಅಂತಹ ಕಥೆಯ ನೆನಪಾಗುತ್ತಿತ್ತು. ಪಾಪದ ಜೀವಗಳು ಆ ಕಾಲಘಟ್ಟದಲ್ಲಿ ಅದೆಷ್ಟು ನೊಂದುಕೊಂಡವೋ ಶಿವನೇ ಬಲ್ಲ. ಏನೇ ಆಗಲಿ ಎಳ್ಳಮವಾಸ್ಯೆ ಜಾತ್ರೆ ನಡೆಯುವ ಜಾಗವನ್ನು ಒಮ್ಮೆಯಾದರೂ ನೋಡಬೇಕೆನಿಸಿತ್ತು; ಒಮ್ಮೆಯಲ್ಲ ಹಲವಾರು ಬಾರಿ ನೋಡಿದ್ದಾಯ್ತು.    

’ಗಂಗಾಸ್ನಾನ ತುಂಗಾಪಾನ’ ಎಂಬುದೊಂದು ಗಾದೆ. ಈಗೀಗ ತುಂಗೆಯೂ ಮಲಿನವಾಗಿದ್ದಾಳೆ; ಕಾಲಾಯ ತಸ್ಮೈ ನಮಃ ! ತುಂಗೆಯ ದಡದಲ್ಲಿ ಇರುವ ಹಳ್ಳಿ ತೀರ್ಥಹಳ್ಳಿ. ಯಾಕೆ ಈ ಹೆಸರು ಎಂಬುದಕ್ಕೊಂದು ಕಥೆ! ಅದು ಕಥೆಯೋ ಕಾಲಘಟ್ಟದಲ್ಲಿ ಘಟಿಸಿದ ಘಟನೆಯೋ ಅರಿವಿಗಿಲ್ಲ. ನಂಬಿದವರಿಗೆ ಅದೊಂದು ಪ್ರಾಗೈತಿಹಾಸಿಕ ಘಟನೆ. ಮಹಾವಿಷ್ಣು ಜಮದಗ್ನಿಯ ಮಗ ಪರಶುರಾಮನಾಗಿ ಆರನೆಯ ಅವತಾರವೆತ್ತಿದ್ದನಲ್ಲಾ ತಂದೆಯ ಆಜ್ಞೆಗೆ ಮಣಿದು ಹೆತ್ತಮ್ಮ ರೇಣುಕೆಯ ಶಿರವನ್ನೇ ತರಿದನಲ್ಲಾ...ಹಾಗೆ ಅಲ್ಲಿ ಬಳಸಿದ ರಕ್ತಸಿಕ್ತ ಪರಶುವನ್ನು, ತುಂಗಾನದಿಯ ನಡುವಿನಲ್ಲಿ ಇಲ್ಲೊಂದುಕಡೆ ತೊಳೆದು ದೋಷಕಳೆದುಕೊಂಡ ಎಂಬುದು ಐತಿಹ್ಯ. ಆ ರಾಮನ ಪರಶುವಿಗೆ ಹಲವು ಕ್ಷತ್ರಿಯರೂ ಬಲಿಯಾಗಿದ್ದರು. ಅಂತಹ ಕ್ರೌರ್ಯದ ಕೊಡಲಿಯನ್ನು ತುಂಗೆಯ ನಡುವಿನ ಕೊಂಡವೊಂದರಲ್ಲಿ ನೆನೆಸಿದ ಎಂದು ಇಲ್ಲಿನ ಸ್ಥಳ ಪುರಾಣ ಹೇಳುತ್ತದೆ. ಪರಶುರಾಮನಿಂದ ಬಳಸಲ್ಪಟ್ಟ ಕೊಂಡದ ನೀರು ತೀರ್ಥವೆಂದು ಹೆಸರಿಸಲ್ಪಟ್ಟಿತು. ತೀರ್ಥದ ಕೊಂಡವಿರುವ ನದಿಯ ಈ ಪ್ರದೇಶದ ದಡದಲ್ಲಿ ಜನವಸತಿಯುಳ್ಳ ಹಳ್ಳಿ ತೀರ್ಥಹಳ್ಳಿಯಾಯ್ತು.


ಪ್ರಥಮವಾಗಿ ನೋಡುವಾಗ ಮೈಯ್ಯೆಲ್ಲಾ ಒಂದು ರೀತಿ ರೋಮಾಂಚನ. ನದಿಯ ದಡದಿಂದ ನಿಧಾನವಾಗಿ ಹೆಜ್ಜೆಯಿಟ್ಟು ಪರಶುರಾಮ ಕೊಂಡದೆಡೆಗೆ ಹೆಜ್ಜೆ ಹಾಕುವವರೆಗೆ ಒಂದು ರೀತಿಯ ತಡೆಯಲಾರದ ತವಕ. ಸಾಕ್ಷಾತ್ ಪರಶುರಾಮನೇ ಬಂದಿದ್ದ, ಕೂತಿದ್ದ, ನಿಂತಿದ್ದ ಜಾಗದಲ್ಲಿ ಇಂದಿಗೂ ಹಾಗೇ ಇದೆಯಲ್ಲಾ ಎಂಬ ಅನಿಸಿಕೆ. ನದೀಪಾತ್ರದಲ್ಲಿರುವ ಬಂಡೆಗಲ್ಲುಗಳ ನಡುವೆ ನದಿಯ ಪ್ರವಾಹಕ್ಕೆ ತಾನಾಗೇ ರೂಪುಗೊಂಡ ಕೊಂಡ ಅದು. ಪಕ್ಕದಲ್ಲೇ ಇರುವ ಗೋಡೆಯಂತಹ ಬಂಡೆಯಮೇಲೆ ಋಷಿಯೊಬ್ಬ ನಿಂತಿರುವ ಚಿತ್ರ. ಆ ಬಂಡೆಯ ಶಿರೋಭಾಗದಲ್ಲೊಂದು ಕಲ್ಲಿನ ಮಂಟಪ. ಅಲ್ಲೊಂದು ಲಿಂಗ. ನದೀಪಾತ್ರದ ನಡುವೆ ಮಾನವ ನಿರ್ಮಿತವೇ ಎನ್ನುವಷ್ಟು ಆಕಾರಬದ್ಧವಾದ ಈ ಕೊಂಡದಲ್ಲಿ ಸತತವೂ ನೀರು. ಎಳ್ಳಮಾವಾಸ್ಯೆಯ ಜಾತ್ರೆಯ ಸಮಯದಲ್ಲಿ ರಾಮೇಶ್ವರ ದೇವರನ್ನು ಪಲ್ಲಕ್ಕಿಯಲ್ಲಿ ಇಲ್ಲಿಗೆ ಕರೆತಂದು ಪೂಜಿಸುತ್ತಾರಂತೆ. ಪರಶುರಾಮನಿಂದ  ಪೂಜಿಸಲ್ಪಟ್ಟ ದೇವರು ಇಲ್ಲಿನ ರಾಮೇಶ್ವರ! ಇವತ್ತಿಗೂ ಒಂದು ಮಾತಿದೆ: ಸಾವಿರ ಜನ ವೈದಿಕರು ಒಂದೇಕಡೆ ಊಟಕ್ಕೆ ಕುಳಿತರೆ ಆ ಪಂಕ್ತಿಯಲ್ಲಿ ಪರಶುರಾಮನೂ ಇರುತ್ತಾನೆ ಎಂಬುದು.

ಅಶ್ವತ್ಥಾಮ ಬಲಿರ್ವ್ಯಾಸೋ ಹನುಮಾಂಶ್ಚ ವಿಭೀಷಣಃ |
ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಂಜೀವಿನಃ ||  

ಏಳು ಜನ ಚಿರಂಜೀವಿಗಳಲ್ಲಿ ಪರಶುರಾಮನೂ ಒಬ್ಬ. ಪರಶುರಾಮ ಒಮ್ಮೆ ದಾನಮಾಡುತ್ತಿದ್ದ. ದಾನ ಮಾಡಿ ಮಾಡಿ ಅವತಾರ ಸಮಾಪ್ತಿಯ ಸಮಯ ಬಂದಿತ್ತು. ಕೊನೆಯಲ್ಲಿ ಕೈಯ್ಯಲ್ಲಿ ಇದ್ದಿದ್ದು ಪರಶು ಮಾತ್ರ. ಆ ಕಾಲದಲ್ಲಿ ಒಂದಷ್ಟು ಬ್ರಾಹ್ಮಣರು ಪರಶುರಾಮನ ಪರೀಕ್ಷೆಗಾಗಿ ಬಂದರಂತೆ. ಬಂದವರೇ ರಾಮನಲ್ಲಿ ದಾನಪಡೆಯಲು ಬಂದಿದ್ದೇವೆ ಎಂದರು. ರಾಮನಲ್ಲಿ ಕೊಡುವುದಕ್ಕೆ ಏನೂ ಇರಲಿಲ್ಲ! ಖಾಲೀ ಕೈಲಿ ಕಳಿಸುವ ಹಾಗಿಲ್ಲ. ಬ್ರಾಹ್ಮಣರು ತನ್ನೆಡೆಗೆ ಬಂದಿದ್ದು ಶಂಕಿತ ಬುದ್ಧಿಯಿಂದ ಪರೀಕ್ಷೆಗಾಗಿ ಎಂಬುದು ಅಪರೋಕ್ಷ ಜ್ಞಾನಿಯಾದ ಪರಶುರಾಮನಿಗೆ ಪರೋಕ್ಷವಾಗಿ ತಿಳಿದುಹೋಯ್ತು. ಕುಪಿತನಾದ ಪರಶುರಾಮ "ನಿಮ್ಮಲ್ಲಿ ಒಗ್ಗಟ್ಟೇ ಇರದೇ ಹೋಗಲಿ" ಎಂದು ಶಾಪ ಕೊಟ್ಟುಬಿಟ್ಟ! ಅಪರಾಧವನ್ನರಿತು ಕ್ಷಮಾಪಣೆ ಕೋರಿ ದೀನರಾಗಿ ನಿಂತ ಬ್ರಾಹ್ಮಣರನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು, ಸಹ್ಯಾದ್ರಿಯ ಮೇಲಿಂದಲೇ ಸಾಗರರಾಜ ವರುಣನೆಡೆ ಪರಶುವನ್ನು ಬೀಸಿ ಎಸೆದ. "ತೆಗೆದುಕೊಳ್ಳಿ ವರುಣ ನನ್ನಿಚ್ಛೆಯಮೇರೆಗೆ ಒಂದಷ್ಟು ಜಾಗವನ್ನು ಬಿಟ್ಟುಕೊಟ್ಟಿದ್ದಾನೆ. ಹೋಗಿ ನೀವೂ ನಿಮಗೆ ಸಂಬಂಧಪಟ್ಟವರೂ ಅಲ್ಲಿ ಜೀವಿಸಿ." ಎಂದುಬಿಟ್ಟ. ಇಂದಿನವರೆಗೂ ನಮ್ಮಲ್ಲಿಗೆ ಕನ್ನಡ ಕರಾವಳಿಯನ್ನು ಪರಶುರಾಮಕ್ಷೇತ್ರವೆಂದೇ ಕರೆಯುತ್ತಾರೆ. ಬ್ರಾಹ್ಮಣರು ನಿತ್ಯ ಸಂಕಲ್ಪದಲ್ಲಿ ’ರಾಮಕ್ಷೇತ್ರೇ’ ಎಂದು ಸಂಕಲ್ಪಿಸುತ್ತಾರೆ. ಜೀವಿತದಲ್ಲಿ ಕೋಪದಿಂದ ತಾನೆಸಗಿದ ಕೃತ್ಯಗಳಿಗೆ ತಡವಾಗಿ ತಾನೇ ನೊಂದುಕೊಂಡ ಪರಶುರಾಮ ಸತತ ತಪಸ್ಸನ್ನಾಚರಿಸುತ್ತಾ ಇವತ್ತಿಗೂ ಬದುಕಿದ್ದಾನೆ ಎಂಬುದು ಹಿಂದೂಗಳ ಪರಮಭಾವ. ಇಲ್ಲಿನವರೆಗೆ ಭೂಕಂಪ ರಹಿತ ಸುರಕ್ಷಿತ ಸ್ಥಳ ನಮ್ಮ ಕನ್ನಡ ಕರಾವಳಿ. ಹಿಂದಿನ ಸರ್ತಿ ಸುನಾಮಿ ಬಂದಾಗಲೂ ತಮಗೇನೂ ಆಗದೆಂದು ಕನ್ನಡ ಕರಾವಳಿಯ ಜನ ಹೇಳಿಕೊಳ್ಳುತ್ತಿದ್ದುದರ ಒಳಗುಟ್ಟು ಅದು ’ಪರಶುರಾಮ ಕ್ಷೇತ್ರ’ವೆಂಬ ಧೈರ್ಯವೇ ಆಗಿತ್ತು. 

ಅಂತಹ ಮುಂಗೋಪಿ ಪರಶುರಾಮ ಬ್ರಹ್ಮಕ್ಷತ್ರಿಯನೆನಿಸಿದ ಮಹಾನುಭಾವ. ಆತ ಓಡಾಡಿದ ಕುರುಹುಗಳಿರುವ ಜಾಗವನ್ನು  ನೋಡುವ ಕುತೂಹಲವನ್ನು ತಣಿಸಿಕೊಂಡ ಮೇಲೆ ಆಗಾಗ ನಾನು ಹೋಗಿಬರುತ್ತಿದ್ದ ಜಾಗ ಈ ತೀರ್ಥರಾಜಪುರ. ತೀರ್ಥಗಳಿಗೇ ರಾಜನೆಂಬ ಕಾರಣಕ್ಕೆ ಈ ತೀರ್ಥ ತೀರ್ಥರಾಜನೆನಿಸಿ ದಡದಲ್ಲಿನ  ಊರು ತೀರ್ಥರಾಜಪುರವೆಂದು ಪರಿಗಣಿತವಾಗಿದೆ. ಸಂಬಂಧಿಯೊಬ್ಬರು ಇಲ್ಲಿನ ರಥಬೀದಿಯಲ್ಲಿ ೫-೬ ವರ್ಷಗಳ ಕಾಲ ವಾಸವಿದ್ದರೂ ಒಮ್ಮೆಯೂ ಜಾತ್ರೆಗೆ ನನಗೆ ಹೋಗಲಾಗಲಿಲ್ಲ. ಅವರು ವಾಸವಿದ್ದ ಮನೆ ಬಹಳ ವಿಶಾಲವಾಗಿತ್ತು. ಮನೆಯ ಕೆಲವು ಭಾಗಗಳಲ್ಲಿ ನಾಗಸರ್ಪಗಳು ಆಗಾಗ ಬರುತ್ತಿದ್ದರೂ ಯಾರಿಗೂ ಕಚ್ಚಿದ ದಾಖಲೆಯಿಲ್ಲ! ತಂಪಾದ ಸಮಶೀತೋಷ್ಣ ಹವಾಮಾನ ಎಲ್ಲರನ್ನೂ ತೀರ್ಥಹಳ್ಳಿಗೆ ಸೆಳೆಯುತ್ತದೆ. ದಿ| ಕುವೆಂಪು ಅವರು ಇದೇ ತಾಲೂಕಿನ ಕುಪ್ಪಳಿಯಲ್ಲಿ ಜನಿಸಿದ್ದರು.


ತೀರ್ಥಹಳ್ಳಿಯವರು ಸಜ್ಜನರು; ಪರಶುರಾಮನ ಭಕ್ತರಾದರೂ ಆತನಂತೇ ಮುಂಗೋಪಿಗಳಲ್ಲ. ಇಲ್ಲಿನವರೆಗೆ ಎಲ್ಲೂ ಅಂತಹ ಧನದಾಹೀ ಪ್ರವೃತ್ತಿ ಕಂಡುಬರಲಿಲ್ಲ. ಮನೆಗಳೂ ಶತಮಾನಗಳಷ್ಟು ಹಳೆಯವು. ಜಾಗ ವಿಶಾಲ ವಿಶಾಲ. ಜನರ ಮನಸ್ಸೂ ಕೂಡ ಜಾಗದಂತೇ ವಿಶಾಲ. ಸುತ್ತಲಿನ ಹಳ್ಳಿಗಳಿಂದ ಖರೀದಿಗಾಗಿ ಬರುವ ರೈತಾಪಿ ಜನರಿಗೆ ಮಾರುಕಟ್ಟೆಯಲ್ಲಿ ನಿಂತು ಸಾಮಾನು ಒದಗಿಸುವವರು ಬಹುಸಂಖ್ಯಾಕರು ಮೂಲ ಕರಾವಳಿಯವರೇ! ಇದು ಪರಶುರಾಮನಿಗೂ ಕರಾವಳಿಗೂ ಇದ್ದ ಸಂಬಂಧದಿಂದ ಉಂಟಾದ ಪರಿಣಾಮವೇ? ಗೊತ್ತಿಲ್ಲ. ಬೇಸಿಗೆಯಲ್ಲಿ ತಂಗಾಳಿಯಲ್ಲಿ ತುಂಗಾತಟದಲ್ಲಿ ವಿಹರಿಸುತ್ತಾ ಪರಶುರಾಮ ಕೊಂಡಕ್ಕೆ ಭೇಟಿನೀಡುವುದೇ ಸಂತಸ. ಮಳೆಗಾಲದಲ್ಲಿ ನದಿ ನೀರಿನ ಸೆಳವಿನಿಂದ ಕೂಡಿರುವುದರಿಂದ ತೀರ್ಥಕ್ಕೆ ಹೋಗಲಾಗುವುದಿಲ್ಲ. ಆಗ ದಡದಿಂದಲೇ ಮಳೆನಿಂತಾಗ ದೂರದಿಂದ ಶಿಲೆಯ ಮಂಟಪವನ್ನು ಕಾಣುವುದರಲ್ಲೇ ತೃಪ್ತಿಪಡಬೇಕು. ಮನೆಗಳ ಹಾಗೆ ರಸ್ತೆಗಳು ವಿಶಾಲವಾಗಿಲ್ಲ. ಊರಕಡೆಯ ಹಳೆಯತಲೆಮಾರಿನ ರಸ್ತೆಗಳಂತೇ ತುಸು ಇಕ್ಕಟ್ಟಿಕ್ಕಟ್ಟೇ. ತೀರ್ಥಹಳ್ಳಿಯ ಇನ್ನೊಂದು ವಿಶೇಷವೆಂದರೆ ತುಂಗಾನದಿಗೆ ವಿಶ್ವೇಶ್ವರಯ್ಯನವರು ನಿರ್ಮಿಸಿದ್ದ ಕಮಾನುಳ್ಳ ಸೇತುವೆ! ಸೇತುವೆ ಇನ್ನೂ ಗಟ್ಟಿಮುಟ್ಟಾಗಿದ್ದು ವಾಹನಸಂಚಾರ ಈಗ ಇನ್ನೂ ಜಾಸ್ತಿಯಾಗಿದೆ! ಇಂದು ನಡೆಯುವ ಸರಕಾರೀ ಕೆಲಸಗಳಿಗೆ ಸವಾಲಾಗಿ ನಿಂತು ತನ್ನ ಗಟ್ಟಿತನವನ್ನು ಎತ್ತಿತೋರುತ್ತದೆ. ನದೀ ಪಾತ್ರದಲ್ಲಿರುವ ಕಲ್ಲುಗಳಲ್ಲಿ ನೀರಿನ ಸೆಳವಿನಿಂದಾದ ಪ್ರಕೃತಿ ನಿರ್ಮಿತ ಆಕೃತಿಗಳು ಗಮನಸೆಳೆಯುತ್ತವೆ. ಬೇಸಿಗೆಯ ದಿನಗಳಲ್ಲಿ ನೀವು ಹೋದರೆ ತೀರ್ಥಹಳ್ಳಿಯನ್ನು ಮರೆಯುವುದೇ ಇಲ್ಲ;  ಯಾಕೆಂದರೆ ಪರಶುರಾಮ, ತೀರ್ಥರಾಮೇಶ್ವರ, ಫಣಿಯಮ್ಮ, ಎಳ್ಳಮವಾಸ್ಯೆ ಜಾತ್ರೆ ನಿಮ್ಮ ಸುತ್ತ ಗಿರಕಿ ಹೊಡೆಯುತ್ತವಲ್ಲಾ! ಅಂದಹಾಗೆ ತೀರ್ಥಹಳ್ಳಿಯ ರಸ್ತೆ ನಿಮಗೆಲ್ಲಾ ಗೊತ್ತೇ ಇದೆಯಲ್ಲಾ ...ಅದಕ್ಕೇ ಅದರ ಬಗ್ಗೆ ಜಾಸ್ತಿ ಕೊರೆಯಲು ಮುಂದಾಗಲಿಲ್ಲ !!