ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Sunday, February 21, 2010

' ಓ ನನ್ನ ಚೇತನಾ ಆಗು ನೀ ಅನಿಕೇತನ '

[ಚಿತ್ರ ಕೃಪೆ :ಅಂತರ್ಜಾಲ ]
' ನನ್ನ ಚೇತನಾ ಆಗು ನೀ ಅನಿಕೇತನ'

ನಾವು ಏನಾದರೊಂದು ಕೆಲಸ ಕೈಗೆತ್ತಿಕೊಳ್ಳುವಾಗ ನಮ್ಮೊಳಗಿನ ' ಆ ವ್ಯಕ್ತಿ ' ಮಾತನಾಡುತ್ತಾನೆ ! ಪರೀಕ್ಷೆ ಬರೆಯಲು ಹೋಗುವಾಗ, ವಾಹನ ಚಾಲನೆಯಲ್ಲಿ ತೊಡಗಿದಾಗ, ಸಂಗೀತ/ನೃತ್ಯಾದಿಗಳನ್ನು ನಡೆಸುವಾಗ,ಬೇರೆಯವರ ಮಾವಿನ ಮರಕ್ಕೆ ಕಲ್ಲು ಹೊಡೆಯುವಾಗ, ಬೇರೆಯವರ ಆಸ್ತಿ ಲಪಟಾಯಿಸುವಾಗ, ಓದುವಾಗ, ಓಡುವಾಗ, ಮಲಗುವಾಗ, ತಿನ್ನುವಾಗ, ತೂಕಡಿಸುವಾಗ, ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಕಾಯುವಾಗ, ಅಪ್ಪ ಅಮ್ಮನ ಕಣ್ಣು ತಪ್ಪಿಸಿ ಪಾರ್ಕ್ ನಲ್ಲಿ ಲವ್ ಮಾಡುವಾಗ, ಗೆದ್ದಾಗ ಮತ್ತು ಸೋತಾಗ ಹೀಗೇ ಏನನ್ನೇ ಮಾಡುತ್ತಿರಿ ನಮ್ಮೊಳಗಿನ ' ಆ ವ್ಯಕ್ತಿ ' ಸುಮ್ಮನಿರುವುದಿಲ್ಲ ! ನಮಗೆ ಪುಗಸಟ್ಟೆ ಸಲಹೆ ಕೊಡುತ್ತಲೇ ಇರುವುದು ಆ ವ್ಯಕ್ತಿಯ ಕೆಲಸ ! ಯಾವ ಪ್ರತಿಫಲವನ್ನೂ ಬೇಡದೆ, ನಾವು ಬುಧ್ಧಿ ತಿಳಿದಾಗಿನಿಂದ ನಮಗೆ ಪರಿಷ್ಕರಿತ ಬುಧ್ಧಿ ಕೊಡುವುದು 'ಆ ವ್ಯಕ್ತಿಯ' ಕೆಲಸ ! ಒಂದೇ ಒಂದು ದಿನ ರಜಾ ಬೇಡಿಲ್ಲ, ಒಂದು ದಿನವೂ ಮಜಾ ಅನುಭವಿಸಿಲ್ಲ ! ಒಂದೇ ಒಂದು ದಿನವೂ ಹರತಾಳ ಮಾಡಿಲ್ಲ ! ತಾನಾಯಿತು ತನ್ನ ಕೆಲಸವಾಯಿತು ! ' ಹೀಗೆ ಮಾಡಬೇಡ ಇದು ಒಳಿತಲ್ಲ ಹೀಗೆ ಮಾಡು ' , ' ಅಲ್ಲಿಗೇ ಹೋಗು ನಿನಗೆ ಜಯ ದೊರೆಯುತ್ತದೆ ' , 'ಇದು ಸರಿ' , 'ಇದು ತಪ್ಪು'. 'ಇದು ಒಂಚೂರೂ ಸರಿಯಿಲ್ಲ ' ಹೇಳುತ್ತಲೇ ಇರುವ ಆ ವ್ಯಕ್ತಿಯ ಮಾತನ್ನು ನಾವು ಅನೇಕ ಸಲ ಕಡೆಗಣಿಸುತ್ತೇವೆ , ಕೊನೆಗೊಮ್ಮೆ ಆವ್ಯಕ್ತಿ ಹೇಳಿದ್ದೇ ನಡೆದಾಗ ಮರುಗುತ್ತೇವೆ. ನಿಮಗೇ ಗೊತ್ತಿಲ್ಲವೇ ಹೀಗಾಗುತ್ತಿರುವುದು ? ಇಂದೇ ಪರೀಕ್ಷೆ ಮಾಡಿ ! 'ಆ ವ್ಯಕ್ತಿ ಯೊಂದು 'ತಂತ್ರಾಂಶ' [software!]. ಈ ತಂತ್ರಾಂಶದ ಮ್ಯಾನುಫ್ಯಾಕ್ಚರರ್ ಒಬ್ಬ ಮಿತಿಮೀರಿದ ಅಥವಾ ಮಿತಿಯೇ ಇಲ್ಲದ ವಿಜ್ಞಾನಿ ! ಉತ್ತಮ ಗಣಕಯಂತ್ರ ಪ್ರೋಗ್ರಾಮರ್ ! ಹೆಸರು ಡಾ| ದೇವರು !

ನಮ್ಮೊಳಗಿನ ಆ ಅದ್ಬುತ ವ್ಯಕ್ತಿಯೇ ಹೆಣ್ಣೂ ಅಲ್ಲದ ಗಂಡೂ ಅಲ್ಲದ, ಹುಟ್ಟು-ಸಾವುಗಳೂ ಇಲ್ಲದ, ಬೆಂಕಿಯಲ್ಲಿ ಸುಡದ, ನೀರಲಿ ಕರಗದ,ಇಂಥದ್ದೇ ಎಂಬ ಆಕಾರವಿರದ, ಯಾರ ಕಣ್ಣಿಗೂ ಕಾಣದ ಆದರೆ ಅದ್ಬುತ ಶಕ್ತಿಯನ್ನು ಪಡೆದಿರುವ ದಿವ್ಯ ಚೇತನ ' ಆತ್ಮ ' ! ನಮ್ಮೊಳಗೇ ಅಡಗಿ ಕುಳಿತು ಕ್ರಿಯಾತ್ಮಕವಾಗಿ ನಮ್ಮಿಂದ ಕೆಲಸ ಮಾಡಿಸುವ, ನಮಗೇ ಮಾರ್ಗದರ್ಶಿಸುವ ನಮಗೇ ಗೊತ್ತಿರದ ನಮ್ಮ ಅತೀ ಹತ್ತಿರದ ಸ್ನೇಹಮಯಿ ಈ ಆತ್ಮ . ಜ್ಞಾನಿಗಳು-ಮುಮುಕ್ಷುಗಳು,ಕವಿ-ಕೋವಿದರು ಸ್ವಾನುಭವಕ್ಕೆ ತೆಗೆದುಕೊಂಡ ಈ ದಿವ್ಯ ಚೇತನವನ್ನು ಉದ್ದೇಶಿಸಿ ಕವಿ ದಿ| ಶ್ರೀ ಕುವೆಂಪು ಅವರು ಹೇಳಿದ್ದು ' ಓ ನನ್ನ ಚೇತನಾ ಆಗು ನೀ ಅನಿಕೇತನ' ,'ಎಲ್ಲಿಯೂ ನಿಲ್ಲದಿರು ಮನೆಯನೊಂದ ಕಟ್ಟದಿರು' ಎಂತಹ ಅದ್ಬುತ ಕೋರಿಕೆ ಕವಿಯದ್ದು ನೋಡಿ ! ಒಂದೇ ಕಡೆ ಟೆಂಟ್ ಹಾಕುವುದು ಬೇಡ, ಇದೇ-ಇಂಥದ್ದೇ ಅಂತ ಅದಕ್ಕಾಗಿ ಅಂಟಿಕೊಳ್ಳಬೇಡ ಎನ್ನುತ್ತಾರೆ. ಇದನ್ನೇ ರವಿ ಕಾಣದ ಜಾಗ ಕವಿ ಕಂಡ ಅಂತ ನಮ್ಮ ಹಿರಿಯರು ಹೇಳಿದರೇ ?


ಏನೀ ವಿಚಿತ್ರ ನೋಡಿ, ಪ್ರತಿ ವಿಷಯದಲ್ಲಿ ನೋಡಿ-ನಾವು ನಮ್ಮೊಳಗಿನ ಈ ಮಾರ್ದನಿಗೆ [echo] ವಿರುಧ್ಧವಾಗಿ ನಡೆದಾಗ ನಾವು ಮಾಡುವ ಕೆಲಸ ಯಶಸ್ವಿಯಾಗುವುದಿಲ್ಲ ! ನಾವು ಧೈರ್ಯವಹಿಸಲು ನಮ್ಮೊಡನಿದ್ದು ನಮ್ಮನ್ನು ಪ್ರಾಕ್ಟಿಕಲ್ ಆಗಿ ರೆಡಿ ಮಾಡುವುದು ಈ ನಮ್ಮ ಸುಪ್ತಮನಸ್ಸು ಅಂದರೆ 'ಆತ್ಮ' . ಈ ಆತ್ಮದಲ್ಲೋ ಹಲವಾರು ವೈವಿಧ್ಯಮಯ ಆತ್ಮಗಳಿರುತ್ತವೆ ಎಂಬುದನ್ನು ನೀವು ನಂಬಲೇ ಬೇಕು. ಇದನ್ನು ನಮ್ಮ ಮಟ್ಟಕ್ಕೆ ತಿಳಿಯುವಾಗ ಒಂಡು ಉದಾಹರಣೆ ತಗೆದುಕೊಂದರೆ ಅನುಕೂಲವೆನಿಸುತ್ತದೆ. ಶೇಂಗಾ ಅಥವಾ ಕಡಲೆಬೀಜ -ಇದನ್ನು ನಾವು ಅನೇಕ ರೂಪದಲ್ಲಿ ಸಂಸ್ಕರಿಸಿ ಆಹಾರದಲ್ಲಿ ಉಪಯೋಗಿಸುತ್ತೇವೆ. ಹಸಿ ಶೇಂಗಾ, ಒಣಗಿದ ಶೇಂಗಾ, ಸಿಪ್ಪೆ ಸಹಿತ ಹುರಿದ ಶೇಂಗಾ, ಸಿಪ್ಪೆ ರಹಿತ ಹುರಿದ ಶೇಂಗಾ, ಕರಿದ ಶೇಂಗಾ, ಬೇಯಿಸಿದ ಶೇಂಗಾ, ಖಾರ ಮೆತ್ತಿ ಹುರಿದ ಶೇಂಗಾ-ಅದರಲ್ಲೋ ಹಸಿಮೆಣಸಿನ ಖಾರಮೆತ್ತಿದ್ದು ಮತ್ತು ಕೆಂಪುಮೆಣಸಿನ ಖಾರಮೆತ್ತಿದ್ದು ! ಎಷ್ಟು ವೈವಿಧ್ಯ ಅಲ್ಲವೇ ? ಶೇಂಗಾ ಹಾಗೇ ಇದ್ದರೆ ಏನೂ ವಿಶೇಷ ಅನಿಸುವುದಿಲ್ಲ, ಆದರೆ ಪರಿಷ್ಕರಿಸಿದ ಶೇಂಗಾ ಎಲ್ಲರಿಗೂ ಇಷ್ಟ ಅಲ್ಲವೇ ? ಬೆಳೆದ ಶೇಂಗಾ ಸಿಪ್ಪೆ ಸಹಿತ ಚೆನ್ನಾಗಿ ಬಿಸಿಲಲ್ಲಿ ಒಂದು ಹದಕ್ಕೆ ಒಣಗಿದ್ದರೆ ಅದರಿಂದ ಮರು ಉತ್ಪತ್ತಿ ಸಾಧ್ಯ, ಈ ಸಿಪ್ಪೆಸಹಿತ ಶೇಂಗಾ 'ಬೀಜ' ವಾಗುತ್ತದೆ, ಅದೇ ಅತೀ ಪರಿಷ್ಕರಿಸಿದ ಶೇಂಗಾ ಮರು ಹುಟ್ಟಿಗೆ ಬೀಜವಾಗುವುದಿಲ್ಲ ! ಅದರಿಂದ ಶೇಂಗಾ ಗಿಡ ಹುಟ್ಟುವುದಿಲ್ಲ. ಹೀಗೆ ನಮ್ಮ ಆತ್ಮ ವೆಂಬ ಸುಪ್ತ ಚೇತನ ಅನೇಕ ಹಂತವನ್ನು ಪಡೆಯುತ್ತದೆ,ನಾವೇ ಮನುಷ್ಯರು ಜೀವನದಲ್ಲಿ ನಾಲ್ಕೈದು ಮಜಲುಗಳನ್ನು ಪಡೆಯುತ್ತೇವೆ, ಶೈಶವ, ಬಾಲ್ಯ, ಯೌವನ, ವಾರ್ಧಕ್ಯ, ಮುಪ್ಪು ಹೀಗೆ, ಅಥವಾ ನಾಲ್ಕು ಆಶ್ರಮಗಳನ್ನು ಹೇಳಿಕೊಂಡಿದ್ದೇವೆ : ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಮತ್ತು ಸನ್ಯಾಸ ಎಂದು. ಈ ಹಂತಗಳಲ್ಲಿ ಆ ಯಾ ಕೆಲಸಕ್ಕೆ ಮನಸ್ಸು ಒಗ್ಗುತ್ತದೆ. ಇದನ್ನೇ ಶ್ರೀ ಆದಿಶಂಕರರು

ಬಾಲಸ್ತಾವತ್ ಕ್ರೀಡಾಸಕ್ತಃ
ತರುಣಸ್ತಾವತ್ ತರುಣೀರಕ್ತಃ
ವೃಧ್ಧಸ್ತಾವತ್ ಚಿಂತಾಮಗ್ನಃ
ಪರೇಬ್ರಹ್ಮಣಿ ಕೋ ಪಿ ನ ಸಕ್ತಃ || ಭಜಗೋವಿಂದಂ ಭಜಗೋವಿಂದಂ ಗೋವಿಂದಂ ಭಜ ಮೂಢಮತೇ

ಬಾಲ್ಯದಲ್ಲಿದ್ದಾಗ ಕಂಡಿದ್ದೆಲ್ಲಾ ಆಡಬೇಕು, ಕುಣಿಯಬೇಕು, ಮೇಲಕ್ಕೆ ಹತ್ತಿ ಹಾರಬೇಕು, ಈಜಬೇಕು, ಕ್ರಿಕೆಟ್-ವಾಲೀಬಾಲ್-ಬ್ಯಾಡ್ಮಿಂಟನ್ ಹೀಗೇ ಏನೇನೋ ಆಟದ ಚಿಂತೆಯಲ್ಲೂ, ತರುಣಾವಸ್ಥೆಗೆ ಬಂದಾಗ ಸಹಜವಾಗಿ ವಿರುಧ್ಧಲಿಂಗೀ ತರುಣ-ತರುಣಿಯರಲ್ಲಿ ಆಸಕ್ತಿಯಿಂದಲೂ, ಮುಪ್ಪಿನಲ್ಲಿ ಕಳೆದುಹೋದ ದಿನಗಳ ಮೆಲುಕು-ಚಿಂತೆಯಲ್ಲೂ ನಾವು ಕಳೆಯುತ್ತೇವೆಯೇ ವಿನಃ ' ಪರಮಾತ್ಮ ' ಎಂಬುದರಲ್ಲಿ ನಮಗೆ ಆಸಕ್ತಿ ಇಲ್ಲ ! ಹೊರಗಿನಿಂದ ಪೂಜೆ ಪುನಸ್ಕಾರ, ಜಪ-ತಪ, ಪ್ರಾರ್ಥನೆ-ನಮಾಜು ಏನೇ ನಡೆದರೂ ನಮ್ಮ ಮನಸ್ಸು ಒಂದೇ ಕಡೆ ನಿಲ್ಲುವುದಿಲ್ಲ-ಏಕಾಗ್ರತೆ ಬರುವುದಿಲ್ಲ. ಹೇ ಮೂಢ ಬುದ್ಧಿಯೇ ನೀನು ಸದಾ ಗೋವಿಂದನನ್ನು ಅಥವಾ ಆ ಹಿರಿಯಶಕ್ತಿ , ಅಗೋಚರ ಶಕ್ತಿ , ಪರಬ್ರಹ್ಮನನ್ನು ನೆನೆ ಎಂದು ಶಂಕರರು ಹೇಳಿದರು, ಇದು ಸರ್ವಕಾಲ,ದೇಶ,ಧರ್ಮ ಒಪ್ಪುವ ಮಾತಲ್ಲವೇ ?

ಲೋಕದ ಜನರಲ್ಲಿ ಮೂರು ಬಗೆ --
೧. ಸ್ವಾರ್ಥಕಾಗಿ ಅದು ಕೊಡು -ಇದುಕೊಡು ಎಂದು ಪ್ರಾರ್ಥಿಸುವವರು,
೨. ನಿಸ್ವಾರ್ಥಗಳಾಗಿ ಸಮಾಜದ ಒಳಿತಿಗಾಗಿ ಪ್ರಾರ್ಥಿಸುವವರು
೩. ಜ್ಞಾನಕ್ಕಾಗಿ, ಮುಕ್ತಿಗಾಗಿ ಪ್ರಾರ್ಥಿಸುವವರು

ಇವರಲ್ಲಿ ಅನುಕ್ರಮವಾಗಿ ಆತ್ಮದ ಸ್ಥಿತಿ ಮೇಲೆರಿಕೆ ! ಕೇವಲ ಏಕಾಗ್ರತೆಯಿಂದ ಪರಬ್ರಹ್ಮವಸ್ತುವಿನಲ್ಲಿ ಧ್ಯಾನಾಸಕ್ತರಾದವರು ಅದರಲ್ಲೂ ಅನೇಕ ಜನ್ಮಗಳಲ್ಲಿ ಅದನ್ನು ನಮ್ಮ ಅಯ್ಯಪ್ಪಸ್ವಾಮಿಯ ಹದಿನೆಂಟು ಮೆಟ್ಟಿಲಿನಂತೆ ಏರುತ್ತ ಏರುತ್ತ ಹೋಗಿ ಕೊನೆಗೊಮ್ಮೆ ' ಕೇವಲಾತ್ಮ' ವಾಗಿ ಪರಮಾತ್ಮನಲ್ಲಿ ವಿಲೀನಗೊಳ್ಳುವ ಈ ' ಆತ್ಮ ' ನಮ್ಮಂತಹ ಜನಸಾಮಾನ್ಯರಿಗೆ ಅರ್ಥವಾಗದ ಚೇತನ ! ಆದರೂ ಅನುಭವಿಸಿದ ಅನಿಕೇತನ !ಎಲ್ಲಿ ನಮ್ಮೊಳಗಿನ ' VOTE OF CONFIDENCE ' ಇರುತ್ತದೋ ಅಲ್ಲಿ ನಮಗೆ ಜಯವಿರುತ್ತದೆ; ಅದಿಲ್ಲದಿದ್ದರೆ ನಾವು ಕಳೆದುಕೊಳ್ಳುತ್ತೇವೆ; ಅನುತ್ತೀರ್ಣರಾಗುತ್ತೇವೆ ! ಈ ಜಯಶಾಲಿ ಹಂತಕ್ಕೆ ತಲುಪಲು ಮನುಷ್ಯ ನಿತ್ಯವೂ ಸ್ವಲ್ಪಕಾಲ ಆತ್ಮಧ್ಯಾನ ನಿರತನಾಗಿರಬೇಕು. ಮನೆಯಲ್ಲಿ ಹಿರಿಯರು ಹೇಳಿದ್ದನ್ನು ಹೇಗೆ ಕೆಲವು ಮಟ್ಟಿಗಾದರೂ ಪಾಲಿಸುತ್ತೇವೋ ಹಾಗೇ ಇಲ್ಲಿ ಧ್ಯಾನದಲ್ಲಿ ನಮ್ಮ ಆತ್ಮದ ಅವಿಭಾಜ್ಯ ಅಂಗವಾದ ಮನಸ್ಸು,ಚಿತ್ತ ಏನು ಹೇಳುತ್ತದೆ ಎಂಬುದನ್ನು ಆಲೈಸಬೇಕು, ಅದಕ್ಕೆ ಪುರಸ್ಕಾರಕೊಟ್ಟು ಒಲೈಸಬೇಕು. ನೀವು ಧ್ಯಾನಕ್ಕೆ ಕುಳಿತಾಗ ನಿಮ್ಮಲ್ಲಿ ಉದ್ಭವಗಂಗೆ ಹರಿಯ ತೊಡಗುತ್ತಾಳೆ-ಆದರೆ ಆ ಜ್ಞಾನ ಗಂಗೆ ಯಾವಾಗ ಹುಟ್ಟುತ್ತಾಳೆ ಎನ್ನುವುದು ನಿಮ್ಮ level of dhyaana ದ ಮೇಲೆ ಅವಲಂಬಿಸಿದೆ! ಇವತ್ತಿಗೂ ನೀವು ಕಾವೇರಿಯ ಉಗಮಸ್ಥಾನದಲ್ಲಿ ವರ್ಷಕ್ಕೊಮ್ಮೆ ತೀರ್ಥ ಉದ್ಭವವಾಗುವುದನ್ನು ಕೇಳಿದ್ದೀರಿ-ಕಂಡಿದ್ದೀರಿ-ಇದು ಅಧುನಿಕ ವಿಜ್ಞಾನಕ್ಕೆ ಅರ್ಥವಾಗದ ರಹಸ್ಯ ! ಹಾಗೇ ನಿಮ್ಮ ಮನದಲ್ಲೂ ಜ್ಞಾನಗಂಗೆಯ ಉದ್ಭವ ವಾಗುತ್ತದೆ-ಅದಕ್ಕೆ ತಕ್ಕ ಪರಿಶ್ರಮ,ನಿರೀಕ್ಷೆ ,ಸಾಧನೆ ಇರಬೇಕು. ಇದರಲ್ಲಿ ಧರ್ಮದ ಹಂಗಿಲ್ಲ! ನೀವು ಯಾರೇ ಆಗಿರಿ, ನಿಮ್ಮ ನಿಮ್ಮ ಧರ್ಮಾನುಸಾರ ಧ್ಯಾನಮಾಡಬಹುದಲ್ಲ !

ಈ ನಮ್ಮ ಒಳಗಿನ ವ್ಯಕ್ತಿ ದಿನಾಲೂ ಬೇಡುವ ಒಂದೇ ಸವಲತ್ತು ಎಂದರೆ ' ಸ್ನಾನ ' ! ಆಶ್ಚರ್ಯವಾಯಿತೇ ? ಕೇಳಿ--ನಾವು ನಮ್ಮ ಶರೀರದ ಸ್ವಾಸ್ಥ್ಯಕ್ಕಾಗಿ-ಸ್ವಚ್ಛತೆಗಾಗಿ ಹೇಗೆ ಸ್ನಾನಮಾಡಿ ಪರಿಮಳಗಂಧಗಳನ್ನು ತೊಡೆದುಕೊಳ್ಳುತ್ತೇವೆಯೋ ಹಾಗೆಯೇ ನಮ್ಮೊಳಗಿನ ಆ ವ್ಯಕ್ತಿಗೆ ಧ್ಯಾನ ಎಂಬ ಸ್ನಾನ ಬೇಕು ! ಧ್ಯಾನವಾದಮೇಲೆ ಪರೋಪಕಾರ, ಸತ್ ಚಿಂತನೆ ಎಂಬ ದಿವ್ಯ ಪರಿಮಳಗಂಧಗಳನ್ನು ತೊಡೆದುಕೊಳ್ಳುತ್ತಿರಬೇಕು. ಇದರಿಂದ ಮಾತ್ರ ನಾವು ನಮ್ಮತನವನ್ನು ಅರಿಯಬಹುದೇ ಹೊರತು ಮಿಕ್ಕಿದ್ದೆಲ್ಲಾ ಬರೀ ಬೂಟಾಟಿಕೆ !


ಹೀಗೇ ನಾವೆಲ್ಲಾ ನಮ್ಮ ಬ್ಯುಸಿ ಶೆಡ್ಯೂಲ್ ನಲ್ಲಿ ಮರೆತಿರುವ ಧ್ಯಾನವೆಂಬ ಸಂಸ್ಕಾರವನ್ನು ಇಂದಿನಿಂದಲಾದರೂ ಆಚರಿಸೋಣವೇ ?

ಸರ್ವೇ ಭವಂತು ಸುಖಿನಃ
ಸರ್ವೇ ಸಂತು ನಿರಾಮಯಾಃ |
ಸರ್ವೇ ಭದ್ರಾಣಿ ಪಶ್ಯಂತು
ಮಾ ಕಶ್ಚಿತ್ ದುಃಖವಾಗ್ಭವೇತ್ ||

|| ಸರ್ವೇ ಜನಾಃ ಸುಖಿನೋ ಭವಂತು | ಸಮಸ್ತ ಸನ್ ಮಂಗಲಾನಿ ಭವಂತು ||