[ಚಿತ್ರಗಳ ಋಣ : ಅಂತರ್ಜಾಲ ]
'ಮಾನವ ಜನ್ಮ
ದೊಡ್ಡದು-ಅದ
ಹಾಳುಮಾಡಲು ಬೇಡಿ ಹುಚ್ಚಪ್ಪಗಳಿರಾ'
[೨೩.೦೨.೨೦೧೦ರ 'ವಿಜಯ ಕರ್ನಾಟಕ' ದ ಲವಲvk ಯಲ್ಲಿ ಬರೆದ +ve ಥಿಂಕಿಂಗ್ ಗೆ ಪ್ರತಿಕ್ರಿಯೆ !]
ಖಂಡಿಸದೆ ಕರಣವನು ದಂಡಿಸದೆ ದೇಹವನು
ಉಂಡುಂಡು ಸ್ವರ್ಗವನು ಬಯಸಿದೊಡೆ ಅದನೇನು
ರಂಡೆಯಾಳುವಳೆ | ಸರ್ವಜ್ಞ
ಉಪವಾಸ-ವೃತ ಇವುಗಳನ್ನೆಲ್ಲ ಕೈಗೊಳ್ಳದೆ ರಾಜಕಾರಣಿಗಳ ಥರ ಎಲ್ಲವನ್ನೂ ನುಂಗಿ ಆಪೋಶನ ತೆಗೆದುಕೊಂಡು ಹೊಟ್ಟೆಬೆಳೆಸಿಕೊಂಡು " ನನಗೆ ಸ್ವರ್ಗ ಕೊಡಿ- ತ್ರೀ ಟೈರ್ ಎ.ಸಿ.ಫಸ್ಟ್ ಕ್ಲಾಸ್ " ಅನ್ನಲಿಕ್ಕೆ ಅದು ದುಡ್ಡುಕೊಟ್ಟು ಕೊಂಡು ಕೊಳ್ಳುವ ಯಾವುದೇ ರಂಡೆಯಾಳುವ ಆಸ್ಥಾನವಲ್ಲ ಅಂತಾನೆ ! ಅದರರ್ಥ ನಾವು ಪ್ರಯತ್ನಶಾಲಿಗಳಾಗಬೇಕು, ಇರುವುದರಲ್ಲಿ ಜಪ-ತಪಾದಿ ನಿತ್ಯಾನುಷ್ಥಾನ ಮಾಡಬೇಕು, ಅವಿರತ ಪ್ರಯತ್ನದಿಂದ ಪ್ರಾರ್ಥಿಸಿ, ಒಲಿಸಿ, ಓಲೈಸಿ ಪಡೆಯಬಹುದಾದ ಮಹತ್ತರದ ಸ್ಥಾನ! ಹೇಗೆ ಮುಖ್ಯಮಂತ್ರಿಯಾಗಲು, ಪ್ರಧಾನಮಂತ್ರಿಯಾಗಲು,ರಾಷ್ಟ್ರಪತಿಯಾಗಲು ನಿರಂತರ ರಾಜಕೀಯದ ಒಲವು, ಒತ್ತಾಸೆ, ಅರ್ಪಣೆ-ತಲ್ಲೀನತೆ, ತಕ್ಕ ಮಟ್ಟದ ವಿದ್ಯೆ , ಆಡ್ಯತೆ, ಅರ್ಹತೆ ಬೇಕೋ ಹಾಗೇ ಇಲ್ಲಿಕೂಡ ಅದಕ್ಕೆ ಅದಕ್ಕಿಂತ ಹಿರಿದಾದ 'ಇಂದ್ರಿಯ ನಿಗ್ರಹ'ವೆಂಬ ಯೋಗದ ಅನುಸಂಧಾನ ಬೇಕು.
ನಮಗೆ ಅರ್ಥವಾಗಿಲ್ಲ ಅಂದಮಾತ್ರಕ್ಕೆ ಮಹಾಕವಿಯ/ದಾರ್ಶನಿಕರ ಮಹಾಕಾವ್ಯಗಳು ಅರ್ಥಹೀನ ಎಂಬ ಇತ್ತೀಚಿನ ಪತ್ರಿಕಾ ಹೇಳಿಕೆಗಳೆಲ್ಲ ಬಹಳ ನೋವು ತರಿಸುತ್ತವೆ. ಸರಿಯಾದ ಮಾರ್ಗದರ್ಶನ ಮಾಡಬೇಕಾದ ಪತ್ರಿಕೆಗಳೇ ಹೀಗಾದವೇ? ಜಗದ ಜೀವರಾಶಿಯಲ್ಲಿ ಪಶು-ಪಕ್ಷಿಗಳಾದಿಯಾಗಿ ಎಲ್ಲವೂ ನೋವನ್ನು -ಯಾತನೆಯನ್ನು ಅನುಭವಿಸುತ್ತವೆ, ಜಗಳ ಕಾಯುತ್ತವೆ, ಕಣ್ಣೀರಿಡುತ್ತವೆ. ಇದನ್ನು national geographic, discovery, animal planet ಮುಂತಾದ ಹಲವಾರು ಮಾಧ್ಯಮ ವಾಹಿನಿಗಳಲ್ಲಿ ತಾವು ನೋಡಿರುತ್ತೀರಿ! ಅವುಗಳಿಗೆ ಬಾಗಿ ನಮಿಸಲು, ಕಣ್ಣೀರು ಒರೆಸಿಕೊಳ್ಳಲು ಕೈಯಿಲ್ಲ. ಮೇಲಾಗಿ ಅವು not so evolved ಅಂತ ನಾವು ಹೇಳಬಹುದು. ಅವು ತಪ್ಪು ಮಾಡುವುದಿಲ್ಲ-ಬೇರೆಯವರ ಹಕ್ಕನ್ನು ಕಸಿಯುವುದಿಲ್ಲ ಎನ್ನುವುದೆಲ್ಲ ಸರಿಯಲ್ಲ-ಅವುಗಳನ್ನೇ ನೋಡುತ್ತಿರಿ ತಿಳಿಯುತ್ತದೆ,ಬಹಳ ಹಿಂಸೆಯಿಂದ ಹೆದರಿಕೆಯಿಂದ ಜೀವಿಸುವ ಜೀವನ ಅವುಗಳ ಪಾಡು ! ಒಂದನ್ನೊಂದು ಕೊಂದು ತಿಂದು ತೇಗುತ್ತದೆ, ಅಲ್ಲಿ ಇನ್ನೊಂದೆಡೆ ತಾಯಿಯೋ, ಮಗುವೋ ಯಾವುದನ್ನೋ ಕಳೆದುಕೊಂಡ ಇನ್ನೊಂದು ಸಂಕುಲ ಮರುಗುತ್ತದೆ-ಹಂಬಲಿಸಿ ಗೋಳಿಡುತ್ತದೆ. ಮೂಕ ರೋದನ ಅವುಗಳದು. ಹೀಗಾಗಿ ಮನುಷ್ಯಮಾತ್ರ ತಪ್ಪುಮಾಡಿ ತಪ್ಪಿನ ಅರಿವಾದಾಗ, ತನ್ನ ಮನಸ್ಸಿನಲ್ಲಿ ಸ್ಥಿರತೆ ಇರದಾಗ ದೇವರೆಂಬ ಶಕ್ತಿಯನ್ನು ಜಾಸ್ತಿಯಾಗಿ ಅವಲಂಬಿಸುತ್ತಾನೆ ಎಂಬುದು ಮೂರ್ಖರ ಮಾತಾಗದೆ ಇನ್ನೇನೂ ಇಲ್ಲ! ಈ ಹಿಂದೆ ನಾನು ಹೇಳಿದ ಹಾಗೇ ದಾಸರೆಲ್ಲ ಸಾರಿದರು
ಮಾನವ ಜನ್ಮ ದೊಡ್ಡದು
ಅದ ಹಾಳು ಮಾಡಲು ಬೇಡಿ ಹುಚ್ಚಪ್ಪಗಳಿರಾ
.... ಎಂದೆಲ್ಲ ವಿವರಣೆ ಸಹಿತ, with proof ಅವರು ತೋರಿಸಿದ್ದಾರೆ, ಹಾಗಾದರೆ ಅವರೆಲ್ಲಾ ಹುಚ್ಚರೇ?
ಮನುಷ್ಯ ಪ್ರಾಮಾಣಿಕನಾಗಿರಬೇಕು, ಸತ್ ಚಿಂತನೆ, ಸತ್ಕಾರ್ಯ ಇವುಗಳನ್ನು ಮಾಡುತ್ತಾ || ಪರೋಪಕಾರಾರ್ಥಮಿದಂ ಶರೀರಂ || ಎಂಬ ರೀತಿಯಲ್ಲಿ,ಮಾರ್ಗದಲ್ಲಿ ನಡೆಯಬೇಕಾದ್ದು ನಮ್ಮ ಕರ್ತವ್ಯ. ವಿಚಾರಮಾಡಿ ! ಈ ದೇವರೆಂಬ ನಂಬಿಕೆಯೇ ಕೆಟ್ಟದ್ದರ ಯೋಚನೆಯನ್ನು ತಪ್ಪಿಸುತ್ತದೆ!! ಹಲವರು ಕೆಲವರನ್ನು ಪರಿಚಯಿಸುವಾಗ ಇಂಗ್ಲೀಷ್ ನಲ್ಲಿ God Fearing Man ಅಂತ ನನ್ನೆದುರು ಹೇಳಿದ್ದನ್ನು ಕೇಳಿದ್ದೇನೆ, ಯಾಕೆ ? ಅದರರ್ಥ the other man who is introduced by him is dependable,loyal,faithful ಎಂದಲ್ಲವೇ ಆತ ಹೇಳಿರುವುದು?
ಒಂದು ಸತ್ಯವನ್ನು ಒಪ್ಪಿಕೊಳ್ಳೋಣ, ಅದು ಯಾರೇ ಬರೆದಿದ್ದಿರಲಿ, 'ಭಗವದ್ಗೀತೆ' ಎಂಬ guide ಜೀವನಕ್ಕೆ ಯಶೋಗಾಥೆ ಬರೆಯಲು ಉಪಕಾರಿ, ಜಗತ್ತಿನಲ್ಲಿಯೇ ಇಂತಹ ಅದ್ಬುತ ಗ್ರಂಥ ಮತ್ತೊಂದಿಲ್ಲ ! ಪ್ರತಿಯೊಂದು ಹಂತದಲ್ಲಿ ಅದರಲ್ಲಿ ಶ್ರೀಕೃಷ್ಣ ಅರ್ಜುನನನ್ನು ನೆಪವಾಗಿಸಿ ಜೀವನಕ್ಕೆ ಬೇಕಾದ ತತ್ವವನ್ನೆಲ್ಲ ಬೋಧಿಸುತ್ತಾನೆ. ಇವತ್ತು ಚಾನೆಲ್ ಗಳಲ್ಲಿ ಅಡುಗೆ ಹೇಳಿಕೊಡುತ್ತಿದ್ದರೆ,ಕೆಟ್ಟಧಾರಾವಾಹಿಗಳು ಬಿತ್ತರಗೊಳ್ಳುತ್ತಿದ್ದರೆ ನಮ್ಮ ಹೆಂಗಳೆಯರು ಬಹುತೇಕರು ಅದಕ್ಕೆ ಅಂಟಿಕೊಂಡಿರುತ್ತಾರೆ, ಮನೆಯಲ್ಲಿರುವ ಸಣ್ಣ ಮಕ್ಕಳೂ ಅವರನ್ನೇ ಅನುಸರಿಸುತ್ತವೆ, ಅದೇ ದೇವರ ಧ್ಯಾನಕ್ಕೆ, ಒಳಿತಿನ ಚಿಂತನೆಗೆ ಅವರಿಗೆ ಸಮಯವೇ ಇಲ್ಲ, ಇದು ನಮ್ಮ ಗಂಡಸರಲ್ಲೂ ಕಮ್ಮಿಯೇನಿಲ್ಲ, ಮೊನ್ನೆ ಒಬ್ಬ ವ್ಯಕ್ತಿ ನನಗೆ ಹೇಳಿದರು ನನಗೆ ಓದಲಿಕ್ಕೆಲ್ಲ ಸಮಯವೇ ಇರುವುದಿಲ್ಲ! ಯಾವುದಕ್ಕೂ ಸಮಯ ಇರುವುದಿಲ್ಲ ಸ್ವಾಮೀ, ಸಮಯ ಮಾಡಿಕೊಳ್ಳಬೇಕು. ಒಬ್ಬ ವೈದ್ಯನಲ್ಲಿಗೆ ಹೋಗಲು, ಸಿನಿಮಾ ನೋಡಲು, ಹುಟ್ಟಿದಹಬ್ಬ-ಮದುವೆ-ಮುಂಜಿ ಇವುಗಳಿಗೆ ಹೋಗಲು, ಕಚೇರಿಯ ಪಾರ್ಟಿಗೆ ಹೋಗಲು, ಟಿವಿ ನೋಡಲು ಇದಕ್ಕೆಲ್ಲ ಸಮಯ ಮಾಡಿಕೊಳ್ಳುವ ನಿಮಗೆ ಓದುವ ಒಳ್ಳೆಯ ಹವ್ಯಾಸಕ್ಕೆ ಸಮಯವಾದರೂ ಹೇಗೆ ಬರಬೇಕು ಪಾಪ ! ಇನ್ನೊಮ್ಮೆ ಮುಂದಿನ ಜನ್ಮದಲ್ಲಾದರೂ ಬಿಡುವು ಮಾಡಿಕೊಂಡು ಓದಿ!
ನಮ್ಮಂತಹ ಸಮಯವಿಲ್ಲದ ಹುಚ್ಚರು ಅರ್ಥಮಾಡಿಕೊಳ್ಳಲಿ ಅಂತ ಅಂತಹ ಭಗವದ್ಗೀತೆಯ ಸಾರವನ್ನೆಲ್ಲ ಹೀರಿ ನಮ್ಮ ಡೀವೀಜಿ ಎಂಬ ಮಹಾನ್ ದಾರ್ಶನಿಕ ಮಂಕುತಿಮ್ಮನ ಕಗ್ಗ, ಮರುಳು ಮುನಿಯನ ಕಗ್ಗ, ಜೀವನ ಧರ್ಮಯೋಗ --ಈ ಹೊತ್ತಗೆಗಳನ್ನು ಬರೆದರೂ ಅವು ನಮಗೆ ಅರ್ಥವಾಗಬೇಕಲ್ಲ ಸ್ವಾಮೀ, ಇಲ್ಲೂ ಅದೇ ಕಥೆ, ಹಲವು ಸಿಕ್ಕುಗಳನ್ನು ಬಿಡಿಸಿದರೂ ಇನ್ನೂ ಕೆಲವು ನಮಗೆ ಸಿಕ್ಕಾಗೇ ಕಾಣುತ್ತವೆ! ಅಂದಮೇಲೆ ನಮ್ಮ ಯೋಗ್ಯತೆ ನಾವೇ ಅರ್ಥಮಾಡಿಕೊಳ್ಳಬೇಕಲ್ಲವೇ ? ಅದು ಬಿಟ್ಟು ಮಹಾನ್ ಕಾವ್ಯಗಳೆಲ್ಲ ಹಾಗೇ ಯಾರಿಗೂ ಅರ್ಥವಾಗುವುದಿಲ್ಲ ಎಂಬ ದುರ್ಬೋಧನೆ ಸರಿಯೇ ? ಅರ್ಥವಾಗದ , ಅರ್ಥಮಾಡಿಕೊಳ್ಳಲು ತಯಾರಿರದ ನಾವು , ರೆಡಿ ಮೇಡ್ ತಿಂಡಿಗಾಗಿ ಹಾತೊರೆಯುವ ನಾವು ಮೃಗಗಳಿಗಿಂತ ಭಿನ್ನ ಹೇಗೆ ? ನಮಗೆ ನಾವೇ
|| ಮನುಷ್ಯ ರೂಪೇಣ ಮೃಗಾಶ್ಚರಂತಿ || ಅಂದರೆ ತಪ್ಪೇನಿದೆ ?
ಮಾನ್ಯ ಪತ್ರಿಕೆಯವರೇ, ತಮ್ಮಲ್ಲಿಯ ವಿಜ್ಞಾನಿಗಳು ಚರ್ಮ-ಮಾಂಸಗಳಬಗ್ಗೆ , ಮೆದುಳಿನ ಬಗ್ಗೆ, ನಮ್ಮ ಸುತ್ತ ಆವರಿಸಿರುವ ಪ್ರಭಾವಳಿಯ ಬಗ್ಗೆ ಇನ್ನೂ Re-search [search ಅಲ್ಲ !] ಮಾಡುತ್ತಿದ್ದಾರೆ, ಅವುಗಳ ಬಗ್ಗೆ ನಮ್ಮ ವೇದ-ಪುರಾಣಗಳಲ್ಲಿ ಅವುಗಳನ್ನು ಬರೆದವರೇ ನಮೂದಿಸಿದ್ದಾರೆ, ನಮ್ಮ ಚರ್ಮದಲ್ಲಿ ೭ ಪದರಗಳಿವೆ, ನಮ್ಮ ಸುತ್ತ ಇಂತಿಷ್ಟು ವಲಯಗಳಿವೆ ಅಂತೆಲ್ಲ ಮೊದಲೇ ನಿಖರವಾಗಿ ಹೇಳಿದ್ದಾರೆ! [ನಮ್ಮ ನಾಸಾ ದವರೋ ಮತ್ತೆಲ್ಲಿಯ ಪೂಸಾದವರೋ ಕಂಡೆವು ಅಂತ ಹೇಳಿಕೆ ಕೊಟ್ಟರೇ ಸಾಕು,ನಾವು ಪುಳಕಿತರಾಗಿಬಿಡುತ್ತೇವೆ! ] ನಮ್ಮ ಪೂರ್ವಜರಿಗೆ ವಿಜ್ಞಾನ ಗೊತ್ತಿತ್ತೋ ಇಲ್ಲವೋ ಎಂಬುದು ನನಗೆ ಗೊತ್ತಿಲ್ಲ! ಆದರೆ ಆರ್ಯಭಟನಂತಹ ಮೇಧಾವಿಗಳು ಖಗೋಳವನ್ನು ಕರಾರುವಾಕ್ಕಾಗಿ ಹೇಳಿದ್ದರು! ಆತ ಹೇಳಿದ ರಾಹು-ಕೇತುಗಳು ನೆಪ್ಚೂನ್ ಮತ್ತು ಪ್ಲುಟೋ ಎಂಬ ಹೆಸರನಿಂದ ಶತಮಾನಗಳ ನಂತರ ವಿದೇಶೀ ವಿಜ್ಞಾನಿಗಳಿಂದ ಹೇಳಲ್ಪಟ್ಟವು! ಇಂತಹ ವಿಷಯಗಳಲ್ಲಿ ನಾವು ಬಾಲಗ್ರಹ ಪೀಡಿತರು, ಪೂರ್ವಾಗ್ರಹ ಪೀಡಿತರು, ಅಮೇರಿಕಾಕ್ಕೆ ಕಿವಿಯೊಡ್ಡುವ ಹಿತ್ತಾಳೆ ಕಿವಿಯವರು!
ಕೂಜಂತಂ ರಾಮ ರಾಮೇತಿ ಮಧುರಂ ಮಧುರಾಕ್ಷರಮ್|
ಆರುಹ್ಯ ಕವಿತಾಶಾಖಾಂ ವಂದೇ ವಾಲ್ಮೀಕಿ ಕೋಕಿಲಮ್ ||
ಬೇಡನೊಬ್ಬ ತನ್ನ ಜೀವನ ಪರಿವರ್ತನೆಯಿಂದ ಮುನಿಯಾಗಿ, ಕವಿ ವಾಲ್ಮೀಕಿಯಾಗಿ ರಾಮಾಯಣ ಮಹಾಕಾವ್ಯ -ಎಂಥ ಅದ್ಬುತ ಕಾದಂಬರಿಯನ್ನು ಬರೆದನಲ್ಲ, ಅಕ್ಷರ ಜ್ಞಾನವಿಲ್ಲದ ಅವನಲ್ಲಿ ಕುಳಿತು ಇಂತಹ ಮಹಾಕಾದಂಬರಿ ಬರೆಸಿದ ಶಕ್ತಿ ಯಾವುದು ?
ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಂ |
ಯತ್ಕೃಪಾ ತಮಹಂ ವಂದೇ ಪರಮಾನಂದ ಮಾಧವಂ ||
ಮೂಕನನ್ನು ಮಾತನಾಡಿಸುವ, ಹೇಳವನನ್ನು-ಕುಂಟನನ್ನು ಪರ್ವತವೇರಿಸುವ, ಜಲಪ್ರಳಯದಿಂದ ಭೂಭಾಗವನ್ನೇ ಅಲ್ಲೋಲ-ಕಲ್ಲೋಲ [ಮೊನ್ನೆ ಉತ್ತರ ಕರ್ನಾಟಕದಲ್ಲಿ ನಮ್ಮ ರಾಜಕಾರಣಿಗಳು-ವಿಜ್ಞಾನಿಗಳು ನಿಂತು ಮಳೆ ತಡೆಯಲಾಯಿತೇ?] ಮಾಡುವ-ಮಾಡದಿರುವ, ಸುನಾಮಿ ತರುವ-ತರದಿರುವ ಹಿರಿದಾದ ಒಂದು ಶಕ್ತಿ ಇದೆ ಅನ್ನುವುದನ್ನು ಇನ್ನಾದರೂ ನಂಬಿ. ಆ ಶಕ್ತಿಯನ್ನೇ ನಾವು ದೇವರೆಂದು ಕರೆದರೆ ತಪ್ಪೇ ?
ನಮ್ಮ ವಿಮಾನಗಳು ಬರುವುದಕ್ಕಿಂತ ಮುಂಚೆ ವಿಮಾನ ಎಂಬ ಕಲ್ಪನೆಯಿರದೆ ರಾಮಾಯಣದ ಕವಿ ವಾಲ್ಮೀಕಿ, ಪುಷ್ಪಕ ವಿಮಾನವೆಂದು ಬರೆದನೇ ? ಇಂದು ನಾವು ಅಂತಹ ಒಳ್ಳೆಯ ಶಬ್ಧಗಳನ್ನೆಲ್ಲ ಕೆಟ್ಟ ಸಿನಿಮಾಗಳಿಗೆ ಇತ್ತು ಜಗತ್ತನ್ನು ಉದ್ಧರಿಸುವ ಮಟ್ಟಕ್ಕೆ ಬೆಳೆದುಬಿಟ್ಟಿದ್ದೇವೆ ! ಎಷ್ಟೋ ಸಲ ಕಣ್ಣಿದ್ದೂ ಜಾಣ ಕುರುಡರೂ ಕಿವಿಯಿದ್ದೂ ಜಾಣ ಕಿವುಡರೂ ಬಾಯಿದ್ದೂ ಜಾಣ ಮೂಕರೂ ಆಗಿಬಿಡುತ್ತೇವೆ! ನಮಗೆ ಬೇಕಾದ್ದಕ್ಕೆಲ್ಲ ತೆರೆದುಕೊಳ್ಳುತ್ತೇವೆ- ಈ ತತ್ವವನ್ನು ನಮ್ಮ ಮಹಾಕಾವ್ಯಗಳಲ್ಲಿ ಹೇಳಿಲ್ಲ ! ಹಾಗಾಗಿ ಅವು ಅರ್ಥವಾಗದ, ಅನುಪಯುಕ್ತ ಪುಸ್ತಕದ ಬದನೆಕಾಯಿಗಳು ! ತೃಪ್ತಿಯೇ ತಮಗೆ ?
ಶಂಕರಾಚಾರ್ಯರೆಂಬ ಒಬ್ಬ ಸನ್ಯಾಸಿ ಮನುಷ್ಯಮಾತ್ರನಿಂದ ಸಾಧ್ಯವಾಗದ ಅಗಾಧ ಕೆಲಸಗಳನ್ನು ಕೇವಲ ತನ್ನ ೩೨ ವರ್ಷ ಆಯುಷ್ಯದೊಳಗೆ ಪೂರೈಸಿ ಮಹಾನ್ ಮಹಾನ್ ಉದ್ಗ್ರಂಥಗಳನ್ನೆಲ್ಲ ಕೊಟ್ಟರಲ್ಲ ಅವರೂ ಹುಚ್ಚರೇ ಹಾಗಾದರೆ ?
ಅಲ್ಲ, ನಾವು ಹುಚ್ಚರು, ನಮ್ಮೀ ಸುತ್ತಲ ಭ್ರಮಾ ಜಗತ್ತು ಹುಚ್ಚಿನದು ಹೀಗಾಗಿ ಕಾಮಾಲೆ ರೋಗದವರಿಗೆ ಲೋಕವೆಲ್ಲ ಹಳದಿ ಹೇಗೋ ಹಾಗೇ ನಿಜದ ಅರಿವಿರದೆ ಹುಚ್ಚರಾದ ನಮಗೆ ಮಹಾ ಕವಿಗಳು-ದಾರ್ಶನಿಕರು ಹುಚ್ಚರಾಗಿ ಕಾಣುತ್ತಾರೆ, ಸ್ವಾಮೀ ಪತ್ರಕರ್ತರೇ, ದಯವಿಟ್ಟು ಅದನ್ನು ತಿದ್ದಿ ಬರೆಯಿರಿ, ಇನ್ನಾದರೂ ನಮ್ಮ ಕಾಮಾಲೆ ರೋಗ ವಾಸಿಯಾಗಲಿ ಆಗದೇ ?
ಈ ಹಿನ್ನೆಲೆಯಲ್ಲಿ ನಮ್ಮೆಲ್ಲ ದಾಸರಿಗೆ-ಕವಿಜನಸಂದಣಿಗೆ ಬಲಬಂದು ಈ ಸ್ತುತಿಗೀತೆಯನ್ನು ಬರೆಯುತ್ತಿದ್ದೇನೆ, ಆಸ್ತಿಕರೇ, ಬದುಕಿನಲ್ಲಿ ಆಸ್ತೆಯಿರುವ ಮಾಹಾಜನಂಗಳೇ ನೀವು ಓದಿ ಅನುಭವಿಸಿ ಸುಖಿಸಿದರೆ ಅದಕ್ಕಿಂತ ಬೇರೆ Certificate ಬೇಕೇ?
ಈಶನೆನಲೇ ಗಣೇಶನೆನಲೇ
ಈಶನೆನಲೇ ಗಣೇಶನೆನಲೇ ಹರಿ ಕರೆವೆ ನಿನ್ನ ವಿಧದಿ
ಏಸುದಿನದಿ ನಾವ್ ಕಲಿತರು ಬರಡದು ಬರಿದೆ ಮೂರ್ಖತನದಿ !
ವ್ಯಸನಕಳೆಯೇ ಬರೆಯಲು ತೊಡಗುತ ನಾವ್ ಮಸಿಯ ಬಳಿದುಕವಿಗೆ
ಉಸಿರಿನರ್ಥ ಅರಿವಾಗದೆ ಉರಿದೆವು ದಿನದ ಗಳಿಗೆ ಗಳಿಗೆ
ಕುಶಲತನದಿ ತನ್ನ ಕಸುವಿನಲ್ಕಡೆಯುತ ಕೊಡಲು ಮಹಾಕಾವ್ಯ
ವಶವಪ್ಪುದೆ ಈ ಲೋಕದ ಜನತೆಗೆ ಬಯಸುವರದೇ 'ನವ್ಯ'!
ಅತಿಶಯ ಪರಮಾನಂದದ ಚಂದದ ನಿನ್ನ ಸನ್ನಿಧಿಯಲಿ
ಗತಿಯಿದಷ್ಟು ಸರಿ ಬರದು ನನಗೆ ಅಹವಾಲು ಪದತಲದಲಿ
ಇನಿತು ಮೂರ್ಖರು ನಾವ್ ಏನೂ ಅರಿಯೆವು ಮನಸುತುಂಬೀಜಗವು
ಘನತೆಯೆಂಬ ಗಾಢಾಂಧಕಾರದಲಿ ಎಲ್ಲವ ಮರೆತಿಹೆವು
ಗಣಿಸುನಮ್ಮ ಇತಿ ಮಿತಿಯನೆಲ್ಲ ಮತಿಹೀನರು ನಾವುಗಳು
ಕ್ಷಮಿಸುನಮ್ಮ ತಿದ್ದುತ ಅರೆಗಳಿಗೆಯೂ ಕುಶಲದಿ ಪ್ರಾರ್ಥಿಪೆವು
ಕಾಲೇ ವರ್ಷತು ಪರ್ಜನ್ಯಃ
ಪೃಥಿವೀಂ ಸಸ್ಯ ಸಸ್ಯಶಾಲಿನೀ|
ದೇಶೋಯಂ ಕ್ಷೋಭ ರಹಿತೋ
ಸಜ್ಜನಾಃ ಸಂತು ನಿರ್ಭಯಾಃ ||
ಸ್ವಸ್ತಿಃ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಣಮಹಿಂ ಮಹೀಷಃ|
ಗೋ ಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾ ಸಮಸ್ತಾ ಸುಖಿನೋ ಭವಂತು||
ಪೃಥಿವೀಂ ಸಸ್ಯ ಸಸ್ಯಶಾಲಿನೀ|
ದೇಶೋಯಂ ಕ್ಷೋಭ ರಹಿತೋ
ಸಜ್ಜನಾಃ ಸಂತು ನಿರ್ಭಯಾಃ ||
ಸ್ವಸ್ತಿಃ ಪ್ರಜಾಭ್ಯಃ ಪರಿಪಾಲಯಂತಾಂ ನ್ಯಾಯೇನ ಮಾರ್ಗೇಣಮಹಿಂ ಮಹೀಷಃ|
ಗೋ ಬ್ರಾಹ್ಮಣೇಭ್ಯಃ ಶುಭಮಸ್ತು ನಿತ್ಯಂ ಲೋಕಾ ಸಮಸ್ತಾ ಸುಖಿನೋ ಭವಂತು||
|| ಅಕ್ಷರದಾತಾ ಸುಖೀ ಭವ ||