ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Tuesday, October 18, 2011

ತಬ್ಬಲಿಯು ನೀನಾದೆ ಮಗನೆ ಹೆದ್ದಾರಿಯಲಿ ಜವರಾಯನಿರುವನು........


ತಬ್ಬಲಿಯು ನೀನಾದೆ ಮಗನೆ ಹೆದ್ದಾರಿಯಲಿ ಜವರಾಯನಿರುವನು........

ಕಸವನ್ನು ತಿಂದು ಅಮೃತತುಲ್ಯ ರಸವನ್ನು ಕೊಡುವ ಏಕೈಕ ಪ್ರಾಣಿಯೆಂದರೆ ಆವು. ಆವು ಎಂದರೆ ಯಾವುದು ಎಂದು ತಬ್ಬಿಬ್ಬಾದಿರೇ ? ಗೋವು ಎಂದು ಅರ್ಥೈಸಿಕೊಳ್ಳಿ. ಗೋವಿನ ಬಗ್ಗೆ ಈ ಮೊದಲೇ ಕೆಲವು ಸಲ ಬರೆದಿದ್ದೇನೆ. ಇವತ್ತೂ ಮತ್ತೊಮ್ಮೆ ಹಾಗೇ ಬರೆಯಬೇಕು ಅನ್ನಿಸುತ್ತಿದೆ. ಕಾರಣವಿಷ್ಟೆ: ನಾನೊಬ್ಬ ಭಾವುಕ. ಹೊಕ್ಕಳ ತೊಟ್ಟನ್ನು ಅಲ್ಲೇ ಹೂತರೇನೋ ಎಂಬಂತೇ ಹುಟ್ಟಿದ ಹಳ್ಳಿಯನ್ನು ಸದಾ ಸ್ಮರಿಸುವ, ಅಲ್ಲಿನ ಬದುಕನ್ನು ನೆನೆಯುವ, ಅಲ್ಲಿರುವ ನನ್ನ ಅಪ್ಪ-ಅಮ್ಮರನ್ನು ಆಗಾಗ ದೂರವಾಣಿಯಲ್ಲಿ ಕರೆದು ಮಾತನಾಡುವ ಹೆಚ್ಚೇಕೆ ಮಹಾನಗರದಲ್ಲಿದ್ದೂ ಹುಟ್ಟಿದ ಹಳ್ಳಿಯ ಬದುಕನ್ನೇ ಮನಸಾ ತುಂಬಿಕೊಂಡವ ! ಹಾಗೆ ನಿನ್ನೆ ಒಮ್ಮೆ ಊರಿಗೆ ದೂರವಾಣಿಯಲ್ಲಿ ಮಾತನಾಡಿದಾಗ ಅಲ್ಲಿನ ಆಗುಹೋಗುಗಳ ಬಗ್ಗೆ ಸ್ವಲ್ಪ ವಿಚಾರಿಸಿದಾಗ ಮೊನ್ನೆಯ ರಾತ್ರಿ ಹತ್ತಿರದ ಹೈವೇಯಲ್ಲಿ ಸುಮಾರು ೪ ಕಿ.ಮೀ ಅಂತರದಲ್ಲಿ ಎರಡು ಮೂರು ಮಲೆನಾಡಗಿಡ್ಡ ತಳಿಯ ಹಸುಗಳನ್ನು ಯಾವನೋ ಖಾಸಗೀ ಬಸ್ ಚಾಲಕನೊಬ್ಬ ಗುದ್ದಿ ಸಾಯಿಸಿಹೋಗಿದ್ದಾನಂತೆ!

ನಾವೆಲ್ಲಾ ಚಿಕ್ಕವರಿರುವಾಗ ಊರಲ್ಲಿ ದೀಪಾವಳಿಯಲ್ಲಿ ಹೆಚ್ಚಿನ ಮಹತ್ವ ಕೊಡುತ್ತಿದ್ದುದು ಗೋವುಗಳಿಗೆ. ಅದು ಇವತ್ತಿಗೂ ಹಾಗೇ ಇದೆ. ಆದರೆ ’ಮಲೆನಾಡ ಗಿಡ್ಡ’ ಜಾತಿಗೆ ಸೇರಿದ ರಾಸುಗಳು ಇವತ್ತು ಸಂಖ್ಯೆಯಲ್ಲಿ ಅತೀ ಕಡಿಮೆಯಾಗಿವೆ. ಅಂದಿನ ಆ ದಿನಗಳಲ್ಲೇ ಅಲ್ಪಸ್ವಲ್ಪ ಗೋಮಾಳಗಳಿದ್ದವು. ಹೆಂಗಳೆಯರು ಬಲಿಪಾಡ್ಯದ ದಿನ ಪೂಜಿಸುವ ಗೋಮಾತೆಯಲ್ಲಿ ನಿವೇದಿಸುವ ಹಾಡಿನಲ್ಲಿ " ಹುಲ್ಲಿಗೂ ನೀರಿಗೂ ಚಿಂತೆಪಡಬೇಡ ಪಶುತಾಯೆ " ಎಂಬ ಸೊಲ್ಲನ್ನು ಹಾಡುವಾಗ ಹಸಿದಹೊಟ್ಟೆಯಲ್ಲಿ ಹುಲ್ಲಿಗಾಗಿ ನೀರಿಗಾಗಿ ಪರಿತಪಿಸಬಹುದಾದ ಗೋವಿನ ಚಿತ್ರದ ಕಲ್ಪನೆಯಾಗಿ ಕಣ್ಣಾಲಿಗಳು ತುಂಬಿ ಹರಿದಿದ್ದಿದೆ. ಸೃಷ್ಟಿಸಿದ ದೇವರೇ ಕೊಡಲು ಮನಸ್ಸುಮಾಡದಾಗ ಯಕ್ಕಶ್ಚಿತ ಒಡೆಯನೆನಿಸುವ ಸಾಕುವಾತ ಏನು ಮಹಾ ಕೊಡಲು ಸಾಧ್ಯ ಹೇಳಿ ?

ದೀಪಾವಳಿಯ ಆ ಚಳಿಗಾಲದ ಮುಂಜಾವಿನಲ್ಲಿ ಎಳೆಗರುಗಳು ಅಂಬೇ ಅಂಬೇ ಎನ್ನುತ್ತಾ ಚಿಗರೆಯ ಮರಿಗಳಂತೇ ಛಂಗನೆ ಜಿಗಿಯುತ್ತಾ ಅಮ್ಮಂದಿರ ಕಾಲ ಸಂದಿಯಲ್ಲಿ ನುಸುಳುವ ಅಲ್ಲಿಂದಲೇ ಮುಖ ಬಗ್ಗಿಸಿ ಹಣಿಕಿ ಇಣುಕಿ ನಮ್ಮನ್ನು ನೋಡುವ ದೃಶ್ಯ ಇಂದಿಗೂ ಮನದಲ್ಲಿ ಹಸಿರಾಗಿದೆ. ಒಣ ಕೆಮ್ಮಿಗೆ ದೇಸೀತಳಿಯ ಹಸುವಿನ ಉಷ್ಣಧಾರೆಯನ್ನು ಔಷಧವಾಗಿ ಕೊಡುತ್ತಿದ್ದರು. ಲೋಟವೊಂದರಲ್ಲಿ ಚೂರು ಹಸುವಿನ ತುಪ್ಪವನ್ನು ಹಾಕಿ ಕೊಟ್ಟಿಗೆಗೆ ಕೊಂಡೊಯ್ದರೆ ಅಲ್ಲಿ ಹಾಲನ್ನು ಕರೆಯುವಾಗ ಆಯಿ [ಅಂದರೆ ನಮ್ಮಮ್ಮ]ಹಸುವಿನ ಕೆಚ್ಚಲಿನಿಂದ ಮೊದಲು ಬಸಿಯುವ ಕೆಲವು ಧಾರೆಗಳು ಬಿಸಿಬಿಸಿಯಾಗಿರುತ್ತಿದ್ದವು. ಹಸುವಿನ ಮೈಬಿಸಿಯಲ್ಲಿ ಕೆಚ್ಚಲೊಳಗಿನ ಹಾಲೂ ಕೂಡ ಉಗುರುಬೆಚ್ಚಗೆ ಆಗಿರುತ್ತಿತ್ತು. ಹಾಗೆ ಕರೆದ ಧಾರೆಯನ್ನು ಉಷ್ಣಧಾರೆ ಎನ್ನಲಾಗುತ್ತಿತ್ತು. ಉಷ್ಣಧಾರೆ ಒಣಕೆಮ್ಮಿಗೆ ರಾಮಬಾಣ! ಇವತ್ತು ಅವೆಲ್ಲಾ ಪುಸ್ತಕದಲ್ಲೂ ದಾಖಲಾಗದ ಮರೆತುಹೋದ ವಿಷಯಗಳಾಗಿವೆ.

ನಮ್ಮನೆಯಲ್ಲಿ ಒಂದು ಸಂಪ್ರದಾಯವನ್ನು ಅಜ್ಜ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದರು ಏನೆಂದರೆ ಮಧ್ಯಾಹ್ನದ ಊಟಕ್ಕೂ ಮುಂಚೆ ಗೋವೊಂದಕ್ಕೆ ಸ್ವಲ್ಪ ಅನ್ನ-ಪದಾರ್ಥಗಳನ್ನು ತಪ್ಪಲೆಯಲ್ಲಿ ಉಣಬಡಿಸಿ ಆಮೇಲೆಯೇ ನಮ್ಮೆಲ್ಲರ ಊಟ ನಡೆಯುತ್ತಿತ್ತು. ಕೊಟ್ಟಿಗೆಯಲ್ಲಿ ಮುದುಕು ದನಗಳು ಇರುತ್ತಿದ್ದವು, ಅದಿಲ್ಲಾ ಕೊನೇಪಕ್ಷ ಅನ್ನ ತಿನ್ನಬಲ್ಲಷ್ಟು ಬೆಳೆದ ಎಳೆಯ ಕರುಗಳು ಇರುತ್ತಿದ್ದವು. ಒಟ್ಟಿನಲ್ಲಿ ಗೋಗ್ರಾಸ ಸಮರ್ಪಣೆ ಆಗಲೇಬೇಕಿತ್ತು. ಆಕ್ಷಣದಲ್ಲಿ ಮಿಕ್ಕುಳಿದ ದನಕರುಗಳಿಗೆ ಹುಲ್ಲನ್ನು ನೀಡಿ ಅವುಗಳ ಮೈದಡವುತ್ತಿದ್ದರು. ಅಜ್ಜ ಮನೆಯಲ್ಲಿಲ್ಲದ ವೇಳೆ ನಾವು ಯಾರಾದರೂ ಅದನ್ನು ನಡೆಸಬಹುದಿತ್ತು. ಅಜ್ಜನ ಗೋ ಪ್ರೇಮ ಎಷ್ಟಿತ್ತೆಂದರೆ ದೂರದಲ್ಲಿ ಅಜ್ಜ ಹೋಗುತ್ತಿದ್ದರೂ ಅವುಗಳಿಗಿರುವ ಮೂಗ್ಗಾಳಿ[ವಾಸನಾಬಲ]ಯಿಂದ ಅಜ್ಜನ ಜಾಡುಹಿಡಿದು ಅಂಬಾ ಎಂದು ಕೂಗುತ್ತಿದ್ದವು. ಬೆಳೆಯುತ್ತಿದ್ದಂತೇ ನನ್ನರಿವಿಗೆ ಬಂದ ಅಜ್ಜ ಬಳಸುತ್ತಿದ್ದ ಸಂಸ್ಕೃತದ ಶ್ಲೋಕ ಹೀಗಿತ್ತು :

ಗಾವೋಮೇ ಮಾತರಸ್ಸಂತು ಪಿತರಸ್ಸಂತು ಗೋವೃಷಃ |
ಗ್ರಾಸಮುಷ್ಠಿಂ ಮಯಾದತ್ತಂ ಗ್ರಹಾಣ ಪರಮೇಶ್ವರಿ ||

ಗೋವಿನಲ್ಲಿ ಮಾತೆಯನ್ನೂ ಹೋರಿಯಲ್ಲಿ ತಂದೆಯನ್ನೂ ಕಂಡೆನೆನ್ನುವ ಆ ಶ್ಲೋಕ ದೇವಿಯ ರೂಪವನ್ನೂ ಗೋವಿನಲ್ಲಿ ಕಂಡೆನೆನ್ನಲು ಮರೆಯುವುದಿಲ್ಲ.

ಊರಲ್ಲಿ ನಾನಿರುವಷ್ಟು ಕಾಲ ಸದಾ ದನಗಳ ಒಡನಾಟವಿತ್ತು. ಕ್ರಮೇಣ ನಾವೆಲ್ಲಾ ವಯಸ್ಸಿನಲ್ಲಿ ದೊಡ್ಡವರಾಗುತ್ತಾ ಸಾಗುತ್ತಿದ್ದಾಗ ಸರ್ಕಾರಗಳು ಬದಲಾಗುತ್ತಾ ರಾಜಕೀಯ ಪ್ರಪಂಚದಲ್ಲಿ ಸ್ವಾರ್ಥ, ಸ್ವೇಚ್ಛೆ ಇವೆಲ್ಲಾ ಜಾಸ್ತಿಯಾಗುತ್ತಾ ನಡೆದಾಗ ಗೋವುಗಳಿಗೆ ಸರಕಾರ ಬಿಟ್ಟಿದ್ದ ಗೋಮಾಳಗಳು ಕಡಿಮೆಯಾಗುತ್ತಾ ನಡೆದವು. ಹಿರಿಯ ಹಸುಗಳು ಕಾಲವಾದಮೇಲೆ ಕಿರಿಯವು, ಕರುಗಳು ಬೆಳೆಯುವ ಹೊತ್ತಿಗೆ ಗೋಮಾಳಗಳು ಅತ್ಯಂತ ಕ್ಷೀಣಿಸಿದವು. ರಾಜ್ಯಪದವನ್ನು ಕಳೆದಕೊಂಡ ರಾಜನಂತೇ ಗೋಮಾಳದಲ್ಲಿ ಮೇದು ಆಡಿ ಅನುಭವಿಸಿದ ದಿನಗಳನ್ನು ನೆನೆದು ಮತ್ತೆ ಸಿಗಲಾರದ ಆ ದಿನಗಳಿಗಾಗಿ ಹಂಬಲಿಸುತ್ತಾ ಆ ದನಗಳು ಮೂಕವಾಗಿ ಯಾವ ಭಾವನೆಗಳನ್ನು ತಳೆದವೋ ಅರಿವಿಗಿಲ್ಲ. ಈಗಂತೂ ಊರಲ್ಲಿ ಒಂದಿಬ್ಬರು ಮಹಾಶಯರು ಕಂಡಿದ್ದೆಲ್ಲಾ ತಮ್ಮದೇ ಎಂದು ಜಾಗವನ್ನೆಲ್ಲಾ ಕಬಳಿಸಿ ಹೋದಹೋದಲ್ಲಿ ಆಳದ ಅಗಳಗಳನ್ನೂ ಕಲ್ಲಿನ ಪಾಗಾರಗಳನ್ನೂ ನಿರ್ಮಿಸಿ ಹಳೆಯ ದಾರಿಗಳನ್ನೆಲ್ಲಾ ಮಾಯಿಸಿಬಿಟ್ಟಿದ್ದಾರೆ. ಒಮ್ಮೊಮ್ಮೆ ಹೀಗೂ ಅನಿಸುತ್ತದೆ--ನಾನು ಹುಟ್ಟಿದ್ದು ಇದೇ ಊರಿನಲ್ಲಿ ಹೌದೇ ?

ಮನುಷ್ಯನ ಸ್ವಾರ್ಥಲಾಲಸೆ ಜಾಸ್ತಿಯಾದಾಗ ಜನಸಂಖ್ಯೆಯಲ್ಲಿ ಹೆಚ್ಚಳವಾದಾಗ ಬೆಟ್ಟಗಳೂ, ಹುಲ್ಲುಗಾವಲುಗಳೂ ಕಡಿಮೆಯಾದವು. ಕಾಡುಪ್ರಾಣಿಗಳ ಜೀವನಕ್ಕೆ ಹೇಗೆ ಸಮಸ್ಯೆಯಾಯಿತೋ ಅದಕ್ಕಿಂತಲೂ ಹೆಚ್ಚು ಊರಲ್ಲಿದ್ದ ದನಕರುಗಳಿಗೆ ಈ ಜ್ವಾಲೆಯ ಉರಿ ತಾಗಿತು. ಕಾಲಕೀರ್ದಿಯಲ್ಲಿ ತೆರೆದ ಪುಟಗಳಲ್ಲಿ ಓದಸಿಕ್ಕ ಮಾಹಿತಿ ಹೀಗಿದೆ. ರೈತನೊಬ್ಬ ತನ್ನ ಹಸುಗಳ ರಕ್ಷಣೆಗಾಗಿ ತನ್ನ ಜೀವವನ್ನೇ ಬಲಿದಾನಗೈದ ಕಥೆಕೂಡ ಕಾಣಸಿಗುತ್ತದೆ. ಬ್ರಾಹ್ಮಣನೊಬ್ಬ ಅರಿಯದೇ ತೆಂಗಿನಕಾಯಿ ಮರದಿಂದ ಕೆಡವಿದಾಗ, ಕೆಳಗೆ ನಿಂತಿದ್ದ ಹಸುವಿನ ತಲೆಗೆ ಅದು ತಗುಲಿ ಗತಿಸಿದ್ದನ್ನು ಕಂಡು ಭಿಕ್ಷುಕನಾದ ಕಥೆಯನ್ನೂ, ಬೇಡಿದ ಆ ಭಿಕ್ಷೆಯನ್ನು ನಿತ್ಯವೂ ಹಸುವೊಂದಕ್ಕೆ ಭಕ್ಷ್ಯವಾಗಿ ಉಣ್ಣಿಸುವ ಕಾಯಕದಲ್ಲಿ ತೊಡಗಿದ ಇತ್ತೀಚಿನ ನಿಜಜೀವನದ ಕಥೆಯನ್ನೂ ನಿಮಗೆ ಈ ಮೊದಲೇ ಹೇಳಿದ್ದೇನೆ. ಆದರೆ ಕಾಲದ ಕೂಸಾದ ರೈತ ಕ್ರಮೇಣ ತಾನೂ ಬದಲಾಗಿಬಿಟ್ಟ. ದರಏರಿಕೆಯ ಬಿಸಿ ರೈತನ ಇಕ್ಕೆಲಗಳನ್ನು ಮುತ್ತಿಕ್ಕಿದಾಗ ನಿಧಾನವಾಗಿ ರೈತ ಸಾಕುವ ದನಗಳ ಜಾತಿಯನ್ನು ಬದಲಾಯಿಸಿದ. ಮಲೆನಾಡ ಗಿಡ್ಡ ತಳಿಯ ಹಸುಗಳಿಗೆ ಹೊಸತಳಿಯ ಹೋರಿಯ ವೀರ್ಯವನ್ನು ಗರ್ಭಕ್ಕೆ ಸುರುವಿ ನಿಧಾನವಾಗಿ ತಳಿಬದಲಾವಣೆ ಮಾಡಿದ. ದೇಸೀ ತಳಿಯ ದನಗಳು ಲೀಟರುಗಟ್ಟಲೆ ಹಾಲನ್ನು ಕೊಡುವುದಿಲ್ಲ ಎಂಬ ಕಾರಣಕ್ಕೆ ಇದು ನಡೆಯಿತು. ಹಲವು ಮನೆಗಳಲ್ಲಿ ಕತ್ತೆಯೂ ಅಲ್ಲದ ಕುದುರೆಯೂ ಅಲ್ಲದ ದನವೂ ಅಲ್ಲದ ಹೊಸದೊಂದು ಪ್ರಾಣಿಯ ಉದಯವಾಯಿತು. ನೋಡಲು ದೈತ್ಯಾಕಾರ, ಹುಟ್ಟಿದ ತಿಂಗಳೊಪ್ಪತ್ತಿನಲ್ಲೇ ಬೆಳೆಬೆಳೆದು ಗರ್ಭಧರಿಸಲು ತಯಾರಾಗುವ ’ಹಾಲುಕೊಡುವ ಯಂತ್ರಗಳು’ ಜನಿಸಿದವು. ಪಾಪದ ಆ ಯಂತ್ರಗಳಿಗೆ ಬುದ್ಧಿಯೂ ಅಷ್ಟಕ್ಕಷ್ಟೇ, ದೇಹದಾರ್ಢ್ಯತೆಯೂ ಅಷ್ಟಕ್ಕಷ್ಟೇ. ಹೊಸತಳಿಯೆಂಬ ಕಾರಣಕ್ಕೆ ಹೆಚ್ಚಿನ ವಾಗತಿಮಾಡಿದ ಒಡೆಯನಿಗೆ ದೇಸೀತಳಿಗೇ ಅದೇಮಟ್ಟದ ವಾಗತಿ[ಉಪಚಾರ]ಮಾಡಿದ್ದರೆ ಚೂರ್ಹೆಚ್ಚುಕಮ್ಮಿ ಅದೇ ಪ್ರಮಾಣದ ಹಾಲನ್ನು ಕೊಡಬಹುದು ಎಂಬ ಸಣ್ಣ ಯೋಚನೆಯೂ ಆ ಕಾಲಕ್ಕೆ ಬರಲಿಲ್ಲ.

ಬದಲಾದ ವಾತಾವರಣದಲ್ಲಿ ಅಳಿದುಳಿದ ಮಲೆನಾಡ ಗಿಡ್ಡ ತಳಿಯ ದನಗಳು ’ಬಡರಾಮನ’ ಗೋವುಗಳಾಗಿ ಅಲ್ಲಲ್ಲಿ ಅಲೆಯುತ್ತಾ ದಿನಕ್ಕೊಮ್ಮೆ ಸಗಣಿಹಾಕುವಷ್ಟೂ ಆಹಾರ ತಿನ್ನಲು ಸಿಗದೇ ಸೊರಗುತ್ತಾ ಕಾಲಹಾಕಿದವು. ಬಯಲುಸೀಮೆಯಲ್ಲಿ ಬಹುತೇಕ ದನಗಳು ಮಾಂಸಕ್ಕಾಗಿ ಮಾರಲ್ಪಟ್ಟವು! ಹಾಲನ್ನು ಕುಡಿದ ಯಜಮಾನ ವಿಷವಿಕ್ಕುವಾಗ ಅರ್ಥಾತ್ ತನ್ನ ಅಸಹಾಯಕತೆಯಲ್ಲಿ ತನ್ನನ್ನು ಕಸಾಯಿಖಾನೆಗೆ ಕಳಿಸುವಾಗ ಗೋವಮ್ಮ ಏನನ್ನೂ ಚಿಂತಿಸುವ ಸ್ಥಿತಿಯಲ್ಲಿರಲಿಲ್ಲ. ತನ್ನೆದುರೇ ತನ್ನ ಮರಿಗಳನ್ನೂ ಮಕ್ಕಳನ್ನೂ ಕೈಕಾಲು ಲಟಕು ಲಟಕೆಂದು ಮುರಿದು ಲಾರಿಗೆ ಬಿಸುಟು ಕರೆದೊಯ್ಯುವ ಕಟುಕರ ಮುಂದೆ ಕಣ್ಣಂಚಿನ ಕಡೆಹನಿಗಳನ್ನು ಉರುಳಿಸಿದ್ದು ಬಿಟ್ಟರೆ ಕಾಣದ ಭಗವಂತನ ಕೃಪೆಗಾಗಿ ಪ್ರಾರ್ಥಿಸುವ ಯಾವ ಬಾಯೂ ಆ ಪ್ರಾಣಿಗಿರಲಿಲ್ಲ.

ಇದನ್ನರಿತ ಕೆಲವು ಮಠಾಧೀಶರುಗಳು, ಜೈನಸನ್ಯಾಸಿಗಳು ದೇಸೀ ಗೋವಿನ ಹೀನಾಯ ಸ್ಥಿತಿಯನ್ನು ನೆನೆದು ಮರುಗಿದರು. ಹಲವು ರೀತಿಯಲ್ಲಿ ಹಲವು ಮಗ್ಗುಲಲ್ಲಿ ಮಾನವನ ಬದುಕಿಗೆ ಅಗತ್ಯ ಬೇಕಾಗಬಹುದಾದ ಅನರ್ಘ್ಯರತ್ನಗಳಂತಹ ದೇಸೀ ಗೋವುಗಳ ತಳಿಗಳನ್ನು ಕಾಪಿಡುವುದರ ಔಚಿತ್ಯವನ್ನು ಮನದಂದು ಅದಕ್ಕೊಂದು ಆಂದೋಲನವನ್ನೇ ಹುಟ್ಟುಹಾಕಿದರು. ಹಿಂದೂಗಳಿಗೆ ಗೋವು ಪೂಜನೀಯ ಎಂಬ ಭಾವವನ್ನು ಮುಂದಿಟ್ಟು ಕೊನೇಪಕ್ಷ ಪೂಜನೀಯ ಎಂಬ ಕಾರಣಕ್ಕಾದರೂ ಹಸುಗಳನ್ನು ಕಟುಕರಿಗೆ ಮಾರದಿರಲಿ ಎಂಬ ಮನದಿಂಗಿತವನ್ನು ವ್ಯಕ್ತಪಡಿಸಿದರು. ಆದರೂ ಹಲವೆಡೆ ಮಾಂಸಕ್ಕಾಗಿ ಹಸುಗಳ ಕಳ್ಳಸಾಗಣೆ ನಡೆದೇ ಇತ್ತು; ನಡೆದೇ ಇದೆ. ಕರ್ನಾಟಕದಲ್ಲಿ ಸಿಂಹವೆಂಬ ಕಾಡುಪ್ರಾಣಿ [ಮೃಗಾಲಯಗಳನ್ನು ಬಿಟ್ಟರೆ] ಚಿತ್ರದ ವಸ್ತುವಾಗಿದೆ ಹೇಗೋ ಮುಂದೆ ದೇಸೀ ತಳಿಯ ದನಗಳೂ ಹಾಗೇ ಚಿತ್ರಗಳಿಗೆ ವಸ್ತುವಾದರೆ ಆಶ್ಚರ್ಯವೇನೂ ಇಲ್ಲ! ಉರಿವ ಸೂರ್ಯನ ಉರಿಬಿಸಿಲಿನಲ್ಲಿ ಮೇಯುತ್ತಾ ತನ್ನ ಭುಜಭಾಗದ ಸೂರ್ಯನಾಡಿಯಲ್ಲಿ ಬಿಸಿಲಿನ ಔಷಧೀಯ ಗುಣಗಳನ್ನು ಶೇಖರಿಸಿ ತನ್ನ ಹಾಲಿನ ಗ್ರಂಥಿಗಳಮೂಲಕ ಅದನ್ನು ಮನುಷ್ಯರಿಗೆ ಒದಗಿಸುತ್ತಿದ್ದ ದೇಸೀತಳಿಯ ಹಸುಗಳಿಲ್ಲದ ಪರಿಣಾಮವೇ ಇಂದು ನಾವು ಶಾರೀರಿಕವಾಗಿ ಸಾಕಷ್ಟು ದುರ್ಬಲರಾಗಿದ್ದೇವೆ; ಮೂರು ಮೂರು ದಿನಕ್ಕೊಮ್ಮೆ ವೈರಲ್ ಫೀವರ್ ಹತ್ತಿಕೊಳ್ಳುತ್ತದೆ, ಅಮೃತಬಳ್ಳಿ ಕಷಾಯ, ಅಮೃತತುಲ್ಯ ದೇಸೀತಳಿಯ ಹಸುವಿನ ಹಾಲು ಎರಡೂ ನಮಗೆ ವರ್ಜ್ಯವಾಗಿವೆ.

ಯಾರೇನೇ ಅಂದರೂ ಕಾಡುಗಳ್ಳರ, ದನಗಳ್ಳರ ಅಂಧಾದರ್ಬಾರ್ ಈಗಲೂ ಚಾಲ್ತಿಯಲ್ಲೇ ಇದೆ. ಅಲ್ಲಲ್ಲಿ ಭಜರಂಗದಳದವರು ಗೋ ಕಳ್ಳಸಾಗಣೆಯನ್ನು ಹಿಡಿದಿದ್ದಾರೆ; ಹಿಡಿಯುತ್ತಾರೆ. ಅವರು ಹಿಡಿಯುವ ಹತ್ತರಷ್ಟು ಇನ್ನೂ ಕತ್ತಲಲ್ಲೇ ಮಾರಾಟವಾಗುತ್ತಿವೆ. ಸಂಶಯವೇ ಬಾರದ ರೀತಿಯಲ್ಲಿ ಸಾಗಿಸುವ ’ಸಾಚಾ ಜನ’ಗಳಿದ್ದಾರೆ!ಹಗಲು ಅಂಥವರು ಹೋಗದ ದೇವಸ್ಥಾನಗಳಿಲ್ಲ;ಭೇಟಿಯಾಗದ ಸ್ವಾಮಿಗಳಿಲ್ಲ. ಕತ್ತಲಾದೊಡನೆಯೇ ಅವರ ಕರಾಮತ್ತು ಆರಂಭವಾಗುತ್ತದೆ! ತಿನ್ನುವವರ ಖಾನದಾನಿಗಿಂತ ಮಾರುವವರ ಕರಾಮತ್ತೇ ಬಹಳ ನೋವನ್ನು ತರಿಸುತ್ತದೆ. ಈಗ ಮಾಂಸದ ದರ ಹೆಚ್ಚಳವಂತೆ. ಮತ್ತೊಮ್ಮೆ ಬಕ್ರೀದ್, ಕ್ರಿಸ್ಮಸ್ ಎಲ್ಲಾ ಹತ್ತಿರವಾಗುತ್ತಿವೆ. ಕುರಿಗಳಿಗೆ ಬದಲಾಗಿ ಚೀಪ್ ರೇಟ್‍ನಲ್ಲಿ ದನಗಳು ಸಿಕ್ಕರೆ ಕೊಳ್ಳಲು ಮುಗಿಬೀಳುವ ಮಂದಿ ಇದ್ದಾರೆ. ಸಿಕ್ಕಿದ ಅವಕಾಶವನ್ನು ಪಾಪ-ಪುಣ್ಯದ ಹಂಗುತೊರೆದು ಮಾರಾಟದ ಮೂಲಕ ಸಕತ್ತಾಗಿ ಎನ್‍ಕ್ಯಾಶ್ ಮಾಡಿಕೊಳ್ಳುವ ಕತರ್ನಾಕ್ ಜನ ಕಾಯುತ್ತಿದ್ದಾರೆ!

ಜನಜಾತ್ರೆಗೆ ಅನಿವಾರ್ಯವಲ್ಲದಿದ್ದರೂ ಇರಲಿ ಎಂದು ಎಲ್ಲೆಂದರಲ್ಲಿ ರಸ್ತೆಗಳ ನಿರ್ಮಾಣವಾಗಿದೆ. ರಾಜ್ಯ ಹೆದ್ದಾರಿ ರಾಷ್ಟ್ರೀಯ ಹೆದ್ದಾರಿಯಾಗಿದೆ; ಅಗಲಗೊಳಿಸಲ್ಪಟ್ಟಿದೆ. ತಾಲೂಕುಗಳಲ್ಲೂ ಹಳ್ಳಿಗಳಲ್ಲೂ ರಾಜ್ಯಹೆದ್ದಾರಿಗಳು ಹಾಗೂ ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗುತ್ತವೆ. ಅಳಿದುಳಿದ ಪಾಪದ ದೇಸೀತಳಿಯ ದನಗಳು ಇರಬಹುದಾದ ಚಿಕ್ಕಪುಟ್ಟ ಜಾಗಗಳಲ್ಲಿನ ಸೊಪ್ಪು-ಸದೆ ತಿನ್ನಲು ಓಡಾಡುತ್ತಿರುತ್ತವೆ. ಮನುಷ್ಯ ನಿರ್ಮಿಸಿದ ರಸ್ತೆ, ವಾಹನಗಳು ಅತೀವೇಗದಲ್ಲಿ ಬರುತ್ತವೆ, ಬಂದಾಗ ಬದಿಗೆ ಸರಿಯಬೇಕು-ಓಡಿಹೋಗಬೇಕು ಎಂಬ ಯಾವುದೇ ಅನಿಸಿಕೆ ಬಹುಶಃ ಅವುಗಳಿಗಿರುವುದಿಲ್ಲ. ಚಾಲಕರಲ್ಲಿ ಹಲವರಿಗೆ ವೇಗಮಿತಿಯೆಂದರೆ ಏನೆಂಬುದೇ ತಿಳಿದಿಲ್ಲವಾದರೆ ಇನ್ನೂ ಹಲವು ಚಾಲಕರು ಸದಾ ’ಎಣ್ಣೆ’ಯಮೇಲೇ ಗಾಡೀ ಓಡಿಸುತ್ತಾರೆ. ಮೊನ್ನೆ ನಮ್ಮೂರಕಡೆ ನಡೆದಿದ್ದೂ ಅದೇ. ಒಬ್ಬನೇ ಚಾಲಕ ಒಂದೇ ರಾತ್ರಿಯಲ್ಲಿ ನಾಕಾರು ಮೈಲಿ ಅಂತರದಲ್ಲಿ ೩-೪ ದನಗಳನ್ನು ಸಾಯಿಸಿ ಬಸ್ ಓಡಿಸಿಕೊಂಡು ಮುಂದೆಸಾಗಿದ್ದಾನೆ. ವಾಹನ ಜಪ್ಪಿದ ಹೊಡೆತಕ್ಕೆ ಅವುಗಳ ಮಗ್ಗುಲು ಮುರಿದು ಅವು ಎಷ್ಟು ವೇದನೆಪಟ್ಟವೋ ಬೆಳಗಾಗುವಷ್ಟರಲ್ಲಿ ಹೆಣಗಳಾಗಿದ್ದವು. ಯಾರದೋ ಮನೆಯ ಸತ್ತ ದನಗಳನ್ನು ಗ್ರಾಮಸ್ಥರು ಕಂಡು ಮರುಗಿದರು, ನಂತರ ಅವುಗಳ ವಾರಸುದಾರರ ಸಮಕ್ಷಮ ಶ್ರದ್ಧೆಯಿಂದ ಮಣ್ಣುಮಾಡಿದರು.

ನಾವೆಲ್ಲಾ ಪ್ರಾಥಮಿಕ ಓದುವುದಕ್ಕೂ ಹಿಂದೆಯೇ ಬರೆಯಲ್ಪಟ್ಟ ಗೋವಿನ ಗೀತೆಯೊಂದು ನೆನಪಿಗೆ ಬರುತ್ತಿದೆ. ಅದನ್ನು ನೀವು ಕೇಳಿಯೇ ಇದ್ದೀರಿ:

ತಬ್ಬಲಿಯು ನೀನಾದೆ ಮಗನೇ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದೂ
ತಬ್ಬಿಕೊಂಡಿತು ಕಂದನ.....


ಈಗ ಇಲ್ಲಿ ಕಂದನನ್ನು ತಬ್ಬಿಕೊಳ್ಳುವುದಕ್ಕೂ ಅವಕಾಶವಿಲ್ಲ! ಹೆಬ್ಬುಲಿಯ ಬದಲಿಗೆ ಹೆದ್ದಾರಿಗಳಿವೆ! ಹಾಡು ಬದಲಾಗುತ್ತದೆ :

ತಬ್ಬಲಿಯು ನೀನಾದೆ ಮಗನೇ
ಹೆದ್ದಾರಿಯಲಿ ಜವರಾಯನಿರುವನು
ಇಬ್ಬರಾ ಋಣ ತೀರಿತೆನಲೂ
ಬಿಡದೇ ತಬ್ಬಿಕೊಳುವನು.....

ಓದುಗ ಮಹಾಶಯರೇ, ನೀವು ಯಾರೇ ಆಗಿರಲಿ ನಿಮ್ಮಲ್ಲಿ ನನ್ನ ವಿನಂತಿ ಇಷ್ಟೇ: ದೇಸೀ ಹಾಗೂ ಸೀಮೆ ಎಲ್ಲಾಗೋವುಗಳೂ ಎಮ್ಮೆಗಳೂ ಬೇಕು. ಆದರೂ ದೇಸೀ ತಳಿಯ ಗೋವುಗಳನ್ನು ರಕ್ಷಿಸುವಲ್ಲಿ ನಿಮ್ಮಪಾತ್ರವನ್ನು ಊಹಿಸಿಕೊಳ್ಳಿ. ಎಲ್ಲೀವರೆಗೆ ನಾವು ಹಾಲನ್ನು ಕೊಡುವ ಗೋಮಾತೆಗೆ ಹಾಲಾಹಲವನ್ನು ನೀಡುವ ಮನಸ್ಸಿನವರಾಗಿರುತ್ತೇವೋ ಅಲ್ಲೀವರೆಗೂ ನಮ್ಮ ಉನ್ನತಿ ಸಾಧ್ಯವಿಲ್ಲ. ಉನ್ನತಿ ಎಂಬುದನ್ನು ಸಿರಿವಂತಿಕೆ ಎಂಬುದಕ್ಕೆ ಹೋಲಿಸಿಕೊಳ್ಳಬೇಡಿ. ಉನ್ನತಿ ಎಂಬುದಕ್ಕೆ ಉನ್ನತವಾದ ಅರ್ಥವಿದೆ ಎಂಬುದನ್ನು ಮರೆಯಬೇಡಿ. ದನ ತಿನ್ನುವವರಿಗೆ ತಿನ್ನಬಾರದಂತೇ ಜಗನ್ನಿಯಾಮಕ ಪ್ರೇರೇಪಿಸಲಿ. ದಿನವೂ ಹಿಡಿಯಕ್ಕಿಯನ್ನು ಗೋವಿಗೆ ನೀಡಿ, ನಗರವಾಸಿಗಳು ಒಂದು ಬಾಳೆಯ ಹಣ್ಣು ನೀಡಿ, ನಿಮ್ಮೆಲ್ಲರ ಜನ್ಮ ಪಾವನವಾಗಲಿ, ಹಾಲುಕೊಟ್ಟ ಎರಡನೇ ಅಮ್ಮನ ಕಣ್ಣಲ್ಲಿ ಆನಂದಭಾಷ್ಪ ಸುರಿಯಲಿ.