ಇಳೆಯ ಸಡಗರ
ಇಳೆಯು ಸಡಗರದಲ್ಲಿ ಮಳೆಯಲ್ಲಿ ತಾ ಮಿಂದು
ಕಳೆಕಳೆಯ ಮುಖ ಹೊತ್ತು ನಗುವ ಚೆಲ್ಲಿಹಳು
ತೊಳೆದುಟ್ಟ ಸೀರೆ ಬಣ್ಣದ ಕುಬುಸ ಬಲುಚಂದ
ಹೊಳೆಯಿತದೋ ರೇಷಿಮೆಯ ತಲೆಗೂದಲು
ಬಳುಕು ಬಳ್ಳಿಯು ಹುಟ್ಟಿ ಬೆಳೆಬೆಳೆದು ವೇಗದಲಿ
ಸುಳಿವು ನೀಡದೆ ಹೂವು ಕಾಯಿ ಹಣ್ಣುಗಳು
ಘಳಿಗೆಗೊಂದಾವರ್ತಿ ಬಲುವಿಧದ ಹಕ್ಕಿಗಳು
ಮೊಳಗಿದವು ಇಲ್ಲಿ ಇಂಚರದಿ ಹಾಡುಗಳು
ಜುಳುಜುಳನೆ ಹರಿವ ತೊರೆಗಳು ಭರದಿ ಮೈದುಂಬಿ
ಕೊಳೆಯ ತೊಳೆಯುತಲತ್ತ ಮುಂದೆ ಸಾಗುವವು !
ಹೊಳೆಯು ರಭಸದಿ ನುಗ್ಗಿ ನದಿ ಸಾಗರವ ಸೇರಿ
ಕಳುವು ಮಾಡಿತು ಕವಿಯ ಆರ್ದ್ರ ಹೃದಯವನು !
ಬಳೆಗಳಂದದಿ ಬಾಗಿ ನಿಂದಿಹವು ಬಿದಿರುಗಳು
ಮೆಳೆತುಂಬ ಎಲೆಚಿಗುರಿ ಚಲುವಚಿತ್ತಾರ
ಮಳೆರಾಯ ಬಾನ ಮದುಮಗನ ಕರೆತರುವಾಗ
ಸೆಳೆವಳದೋ ಹಸಿರು ಪೀತಾಂಬರದಿ ಅವನ
ಹಳೆಯದೆಲ್ಲವು ಮರೆತು ಹೊಸತು ಜೀವದಿ ಬೆರೆತು
ಅಳತೆ ಮೀರಿದ ಆನಂದವನು ತಂದು
ಕಳಿತ ಫಲಗಳ ತಿಂದ ಸಿಹಿಯಮೃತ ಜಿಹ್ವೆಯಲಿ
ಮಿಳಿಯುತೀ ಮನಸು ನೋಂಪಿಯ ನೋಡಿ ನಿಂದು