ಇಳೆಯ ಸಡಗರ
ಇಳೆಯು ಸಡಗರದಲ್ಲಿ ಮಳೆಯಲ್ಲಿ ತಾ ಮಿಂದು
ಕಳೆಕಳೆಯ ಮುಖ ಹೊತ್ತು ನಗುವ ಚೆಲ್ಲಿಹಳು
ತೊಳೆದುಟ್ಟ ಸೀರೆ ಬಣ್ಣದ ಕುಬುಸ ಬಲುಚಂದ
ಹೊಳೆಯಿತದೋ ರೇಷಿಮೆಯ ತಲೆಗೂದಲು
ಬಳುಕು ಬಳ್ಳಿಯು ಹುಟ್ಟಿ ಬೆಳೆಬೆಳೆದು ವೇಗದಲಿ
ಸುಳಿವು ನೀಡದೆ ಹೂವು ಕಾಯಿ ಹಣ್ಣುಗಳು
ಘಳಿಗೆಗೊಂದಾವರ್ತಿ ಬಲುವಿಧದ ಹಕ್ಕಿಗಳು
ಮೊಳಗಿದವು ಇಲ್ಲಿ ಇಂಚರದಿ ಹಾಡುಗಳು
ಜುಳುಜುಳನೆ ಹರಿವ ತೊರೆಗಳು ಭರದಿ ಮೈದುಂಬಿ
ಕೊಳೆಯ ತೊಳೆಯುತಲತ್ತ ಮುಂದೆ ಸಾಗುವವು !
ಹೊಳೆಯು ರಭಸದಿ ನುಗ್ಗಿ ನದಿ ಸಾಗರವ ಸೇರಿ
ಕಳುವು ಮಾಡಿತು ಕವಿಯ ಆರ್ದ್ರ ಹೃದಯವನು !
ಬಳೆಗಳಂದದಿ ಬಾಗಿ ನಿಂದಿಹವು ಬಿದಿರುಗಳು
ಮೆಳೆತುಂಬ ಎಲೆಚಿಗುರಿ ಚಲುವಚಿತ್ತಾರ
ಮಳೆರಾಯ ಬಾನ ಮದುಮಗನ ಕರೆತರುವಾಗ
ಸೆಳೆವಳದೋ ಹಸಿರು ಪೀತಾಂಬರದಿ ಅವನ
ಹಳೆಯದೆಲ್ಲವು ಮರೆತು ಹೊಸತು ಜೀವದಿ ಬೆರೆತು
ಅಳತೆ ಮೀರಿದ ಆನಂದವನು ತಂದು
ಕಳಿತ ಫಲಗಳ ತಿಂದ ಸಿಹಿಯಮೃತ ಜಿಹ್ವೆಯಲಿ
ಮಿಳಿಯುತೀ ಮನಸು ನೋಂಪಿಯ ನೋಡಿ ನಿಂದು
ಭಟ್ಟರೆ...
ReplyDeleteಸೊಗಸಾದ ಕವನ..
ಇನ್ನಷ್ಟು ಬರಲಿ...
ಭಟ್ಟರೆ,
ReplyDeleteಇಪ್ಪತ್ತೂ ಸಾಲುಗಳಲ್ಲಿ ಒಂದೇ ಆದಿಪ್ರಾಸವನ್ನು ಬಳಸಿರುವದು ವಿಸ್ಮಯದ ಸಾಧನೆಯಾಗಿದೆ!
ಇಳೆಯು, ಬಳುಕು ಬಳ್ಳಿಯು, ಜುಳುಜುಳುನೆ ಹರಿದು, ಬಳೆಗಳ೦ದದಿ ಬಾಗಿ, ಹಳೆಯದೆಲ್ಲವ ಮರೆಸಿತು..! ಮೊದಲಕ್ಷರದ ಜೋಡಣೆಗಳ ಅಪಹರಿಸಿದರೆ, ಮತ್ತೊ೦ದು ಹನಿಗವನದ ಸೃಷ್ಟಿಯಾಯಿತು. ಉತ್ತಮ ಕವನದ ಪ್ರಸ್ತುತಿಗೆ ಅಭಿನ೦ದನೆಗಳು ಭಟ್ ಸರ್.
ReplyDeleteಅನ೦ತ್
ಸು೦ದರ ಪ್ರಾಸದ ಅ೦ದದ ಕವನ ನೀಡಿದ್ದಕ್ಕಾಗಿ ವ೦ದನೆಗಳು ಸರ್.
ReplyDeletebhattare
ReplyDeleteadbuta kavana
haadoke sogasaagide
ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಹಲವು ಕೃತಜ್ಞತೆಗಳು
ReplyDeleteತುಂಬಾ ಉತ್ತಮ ಪ್ರಾಸ ಹಾಗು ಸುತ್ತಮ ಕವನ.
ReplyDeleteThanks to Shri Sitaram
ReplyDelete