[ ಅನೇಕ ಹಿರಿಯ ಮಿತ್ರರು ಪ್ರತ್ಯಾಹಾರದ ಬಗ್ಗೆ ಬರೆಯಲು ಕೇಳಿದ್ದಾರೆ, ಅದರ ಸ್ಥೂಲರೂಪವನ್ನು ಜಗದಮಿತ್ರ ನಿಮಗೆ ಇಲ್ಲಿ ಕೊಟ್ಟಿದ್ದಾನೆ. ಸ್ನೇಹಿತರೇ ಶ್ರೀಕೃಷ್ಣನ ಜನ್ಮ ದಿನದ ಸಮಯದ ಸುತ್ತ ಬರೆದ ಕೃತಿಗಳನ್ನು ಓದಿ, ಹಲವಾರು ಪನವಾರ ಸ್ವೀಕರಿಸಿದಿರಿ, ಈಗ ಪರಮಾತ್ಮ ಶ್ರೀಕೃಷ್ಣ ಜಗದ್ಗುರುವಾಗಿ ಬೋಧಿಸಿದ ಗೀತೆಯಲ್ಲಿ ಆತನೇ ಹೇಳಿದ ಪ್ರತ್ಯಾಹಾರದ ಬಗ್ಗೆ ಸ್ವಲ್ಪ ಅರಿಯೋಣ ಅಲ್ಲವೇ ? ಪ್ರತ್ಯಾಹಾರ ಎಂಬುದರ ಬಗ್ಗೆ ವಿಸ್ತೃತವಾಗಿ ಓದಲಿದ್ದೀರಿ ಮುಂದಿನ ಲೇಖನದಲ್ಲಿ,ಸದ್ಯಕ್ಕೆ ಈ ಕಾವ್ಯರೂಪ ನೋಡೋಣ ]
ಹತ್ತುಸಾವಿರ ಕೋಟಿ ನಿನ್ನೆದುರು ಬಿದ್ದರೂ
ಎತ್ತಿಡಲು ಬೇಡ ನಿನ್ನದು ಅಲ್ಲದಿರಲು
ಮುತ್ತು ಮಾಣಿಕವು ಮತ್ತೆರಡು ನಿನ್ ಕಣ್ಸೆಳೆಯೆ
ಕುತ್ತು ಅದ ನೀ ಬಯಸೆ | ಜಗದಮಿತ್ರ
ಉತ್ತಿ ಬೀಜವ ಬಿತ್ತು ಪರಮಾತ್ಮನಂ ನೆನೆದು
ಬಿತ್ತ ಬೀಜಕೆ ಫಲವ ನೀ ಗುಣಿಸಬೇಡ
ಅತ್ತು ಕರೆದರೂ ಬಹದು ಲಭ್ಯ ನಿನಗಿಲ್ಲದಿರೆ
ಮತ್ತೆ ಬೇಸರವೇಕೆ ? ಜಗದಮಿತ್ರ
ನುಚ್ಚಿನುಂಡೆಯ ರಾಶಿ ಪಂಚಭಕ್ಷ್ಯಗಳಿಹವು
ಮೆಚ್ಚಿ ನಿನ್ನಿರವರಿತು ತಿನ್ನಲ್ಪವದರ
ಹುಚ್ಚೆದ್ದು ಕುಣಿದು ತನಗೇ ಎಂಬ ಮನವನ್ನು
ಬೆಚ್ಚಿಬೀಳಿಸು ಬೈದು | ಜಗದಮಿತ್ರ
ಯಾರನ್ನೂ ನೆಚ್ಚಿರದೆ ಸ್ವಾವಲಂಬನೆ ನಡೆಸು
ದಾರಿ ಹೋಕನು ನೀನು ನೆನೆಪು ನಿನಗಿರಲಿ
ಊರು ದೊಡ್ಡದೇ ಇರಲಿ ಕೇರಿ ಸಣ್ಣದೇ ಇರಲಿ
ಏರು ಮೇಲ್ಪಂಕ್ತಿಯಲಿ | ಜಗದಮಿತ್ರ
ನೀನೇನೂ ತಂದಿಲ್ಲ ಭುವಿಗೆ ಬರುವಾದಿನದಿ
ಏನೇನೋ ಕೊಂಡೊಯ್ಯಲಾರೆ ಹೊರಡುವೊಲು
ತಾನು ತನ್ನವರೆಂಬ ವ್ಯಾಮೋಹಕಿರಲಿ ಮಿತಿ
ದೀನ ನೀ ತಿಳಿದುನಡೆ | ಜಗದಮಿತ್ರ
ಇದ್ದಿಹುದ ಅನುಭವಿಸು ಇರುವನಕ ಪಡೆದುದನು
ಎದ್ದುಹೋದುದ ಬಯಸಿ ಕರುಬುವುದು ತರವೇ ?
ಉದ್ದುದ್ದ ಪೋಣಿಸುತ ಅತಿಯಾದ ಬಯಕೆಗಳ
ಒದ್ದು ಓಡಿಸು ಹೊರಗೆ | ಜಗದಮಿತ್ರ
ನೀನು ನೀನೇ ಹೊರತು ಅವನಲ್ಲ ವೆಂಬುದನು
ಸಾನುರಾಗದಿ ಮನಕೆ ನೀ ಒತ್ತಿ ಹೇಳು
ಮಾನವನು ನೀನಾಗು ಓದಿ ಜ್ಞಾನವಪಡೆದು
ಹಾನಿ ತಟ್ಟದು ನಿನಗೆ | ಜಗದಮಿತ್ರ
ಅದು ಸಿಗದು ಇದು ಸಿಗದು ಎಂಬ ಹಳವಳಿಕೆಯಲಿ
ಕುದಿಕುದಿದು ಕಂಡಲ್ಲಿ ಅಂಡಲೆಯಬೇಡ
ಒದಗುವುದು ನಿನಗೆಲ್ಲ ಭಾಗ್ಯ ಬರೆದಿರಲಲ್ಲಿ
ಹದಗೊಳಿಸು ನಿನ್ನಮನ | ಜಗದಮಿತ್ರ