ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Thursday, March 4, 2010

ಘಮಾ ಘಮಾ ಘಮಾಡಸ್ತಾವ ಮಲ್ಲೀಗೀ


ಘಮಾ ಘಮಾ ಘಮಾಡಸ್ತಾವ ಮಲ್ಲೀಗೀ

ನೀ ಹೊರಟಿದ್ದೀಗ ಎಲ್ಲಿಗಿ ?

ನೀ ಹೊರಟಿದ್ದೀಗ ಎಲ್ಲಿಗಿ ?
[ಒಂದು ಚಿತ್ರದ ಋಣ: ಅಂತರ್ಜಾಲ ]

ಇಷ್ಟು ಹೇಳುತ್ತಿದ್ದಂತೆ ನಿಮಗೆ ನಾನು ಏನು ಹೇಳಹೊರಟೆ ಎಂಬುದನ್ನು ಹೊಸದಾಗಿ ಹೇಳುವುದು ಬೇಡ ! ಹೌದೌದು ನಾನು ಬೇಂದ್ರೆ ಮಾಸ್ತರ್ ಬಗ್ಗ ಮಾತಾಡ್ಲಾಕ್ ಹತ್ತೇನಿ. ವರಕವಿ, ಕರ್ನಾಟಕ ಕುಲ ತಿಲಕ, ಪದ್ಮಶ್ರೀ,ಅಂಬಿಕಾತನಯದತ್ತ ದಿ| ಶ್ರೀ ದ.ರಾ.ಬೇಂದ್ರೆ [ ದತ್ತಾತ್ರೇಯ ರಾಮಚಂದ್ರ ಬೇಂದ್ರೆ]ಯವರು ಕರ್ನಾಟಕದ ಧಾರವಾಡದಲ್ಲಿ ಚಿತ್ಪಾವನ ಬ್ರಾಹ್ಮಣ ಕುಟುಂಬದಲ್ಲಿ ೩೧ ಜನವರಿ ೧೮೯೬ ರಂದು ಜನಿಸಿದರು. ಅಜ್ಜ ಮತ್ತು ತಂದೆ ಇಬ್ಬರೂ ಸಂಸ್ಕೃತದಲ್ಲಿ ಘನ ಪಾಂಡಿತ್ಯ ಉಳ್ಳವರಾಗಿದ್ದರು. ಅಜ್ಜ ಹತ್ತು ಪವಿತ್ರ ಗ್ರಂಥಗಳಲ್ಲಿ ಪ್ರಾವೀಣ್ಯತೆ ಪಡೆದು 'ದಾಸಗ್ರಂಥಿ' ಎಂದು ಕರೆಯಲ್ಪಡುತ್ತಿದ್ದರು. ಎಳವೆಯಲ್ಲೇ ೧೨ ವರ್ಷದಲ್ಲಿರುವಾಗಲೇ ತನ್ನ ತಂದೆಯನ್ನು ಕಳೆದುಕೊಂಡರು. ಬಡತನವನ್ನೇ ಹಾಸು-ಹೊದ್ದ ಬೇಂದ್ರೆಯವರ ಕುಟುಂಬದ ಬಂಡಿ ಎಳೆಯಲು ತಾಯಿ ಖಾನಾವಳಿ ಯನ್ನು [ಊಟ-ತಿಂಡಿ ಪೂರೈಸುವ ಮೆಸ್ ಥರದ ವ್ಯವಸ್ಥೆ] ಪ್ರಾರಂಭಿಸಿ ನಡೆಸಿದರು. ತಾಯಿಯ ಆ ಕಷ್ಟದ ಅನುಭವದ ಪರಿಣಾಮ ಮಗ ದತ್ತನ ಮೇಲೆ ಆಗದಿರಲಿಲ್ಲ. ಆ ನೆನಪಲ್ಲೇ ತಾಯಿ ಅಂಬಿಕೆಯ ಹೆಸರಲ್ಲೇ ದತ್ತನಿಗೆ ಅಂಬಿಕೆ ಸೇರಿತು 'ಅಂಬಿಕಾತನಯದತ್ತ' ಹುಟ್ಟಿದ ! ಚಿಕ್ಕಪ್ಪನ ಸಹಾಯದಿಂದ ಧಾರವಾಡದಲ್ಲೇ ಪ್ರಾಥಮಿಕ, ಮಾಧ್ಯಮಿಕ-ಪ್ರೌಢ ಶಾಲೆಗಳಲ್ಲಿ ಕಲಿತು ೧೯೧೩ ರಲ್ಲಿ ಮೆಟ್ರಿಕ್ಯುಲೇಶನ್ ಮುಗಿಸಿದ ಬೇಂದ್ರೆ ಹೆಚ್ಚಿನ ವ್ಯಾಸಂಗಕ್ಕೆ ಪುಣೆಯಲ್ಲಿರುವ ಫರ್ಗಸ್ಸನ್ ಕಾಲೇಜ್ ಗೆ ಸೇರಿದರು.ಬ್ಯಾಚುಲರ್ ಆಫ್ ಆರ್ಟ್ಸ್ ಡಿಗ್ರೀ ಪಡೆದ ಬಳಿಕ ಧಾರವಾಡಕ್ಕೆ ವಾಪಸ್ಸಾಗಿ ಅಲ್ಲಿ ವಿಕ್ಟೋರಿಯ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಪ್ರಾರಂಭಿಸಿದರು. ೧೯೧೯ರಲ್ಲಿ ಲಕ್ಷ್ಮಿಬಾಯಿ ಎಂಬವರೊಟ್ಟಿಗೆ ವಿವಾಹವಾಯಿತು. ನಂತರದಲ್ಲಿ ೧೯೩೫ರಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪದವಿ ಪಡೆದರು. ನಂತರ ಸೊಲ್ಲಾಪುರದಲ್ಲಿಯ ಡಿ.ಎ. ವಿ. ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ೧೯೪೪ ರಿಂದ ೧೯೫೬ ರ ತನಕ ಕೆಲಸಮಾಡಿದರು. ೧೯೫೬ ರಲ್ಲಿ ಆಲ್ ಇಂಡಿಯಾ ರೇಡಿಯೋದ ಧಾರವಾಡ ಸ್ಟೇಶನ್ ನಲ್ಲಿ ಸಲಹೆಗಾರರಾಗಿ ಕೆಲಸ ಮಾಡಿದರು.

[ಶ್ರೀ ಕೀರ್ತಿನಾಥ್ ಕುರ್ತಕೋಟಿ, ಶ್ರೀ ಜಿ.ಬಿ.ಜೋಶಿ ಮತ್ತು ಶ್ರೀ ದ.ರಾ.ಬೇಂದ್ರೆ ]

೧೯೨೨ರಲ್ಲಿ ಬೇಂದ್ರೆ ಸಮಾನ ಮನಸ್ಕ ಗೆಳೆಯರ ಗುಂಪೊಂದನ್ನು ಆರಂಭಿಸಿದರು. ಅದರಲ್ಲಿ ಸಂಸ್ಕೃತಿ-ಸಂಸ್ಕಾರಗಳ ಹರಿಕಾರರಾದ ಆನಂದಕಂದ[ಬೆಟಗೇರಿ ಕೃಷ್ಣ ಶರ್ಮ], ಶಂ.ಬಾ.ಜೋಶಿ, ಎನ್ಕೆ, ಸಿದ್ಧವನಹಳ್ಳಿ ಕೃಷ್ಣ ಶರ್ಮ, ಜಿ.ಬಿ.ಜೋಶಿ, ರಂ.ಶ್ರೀ.ಮುಗಳಿ ಮುಂತಾದ ಕೆಲವು ಆಪ್ತ ಸ್ನೇಹಿತರು ಸೇರಿದ್ದರು. ಕಾವ್ಯ -ಸಾಹಿತ್ಯ-ಸಂಸ್ಕೃತಿಗಳ ಕುರಿತು ಆಗಾಗ ಮಾತುಕತೆಗೆ ಸೇರುತ್ತಿದ್ದರು. ೧೯೨೬ ರಲ್ಲಿ ಬೇಂದ್ರೆಯವರು 'ನಾಡ ಹಬ್ಬ' ವೆಂಬ ಸಣ್ಣ ಸಮ್ಮೇಳನವನ್ನು ಪ್ರಾರಂಭಿಸಿದರು. ಇದು ನವರಾತ್ರಿ ಅಥವಾ ದಸರಾದಲ್ಲಿ ಬರುವ ಕಾರ್ಯಕ್ರಮವಾಗಿತ್ತು. ೧೯೩೨ರಲ್ಲಿ 'ನರಬಲಿ' ಎಂಬ ಸರಕಾರೀವೈರುಧ್ಯ ಬರಹವನ್ನು ಬರೆದದ್ದಕ್ಕೆ ಬೇಂದ್ರೆಯವರಿಗೆ ಮುಗದ ಎಂಬ ಹಳ್ಳಿಯಲ್ಲಿ ಮನೆಜೈಲುವಾಸವಾಯಿತು. ೧೯೪೩ ರಲ್ಲಿ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ೧೯೭೨ ರಲ್ಲಿ ಕರ್ನಾಟಕ ಸರಕಾರ ಬೇಂದ್ರೆಯವರ ಜೀವನದಬಗೆಗೆ ಒಂದು ಡಾಕ್ಯುಮೆಂಟರಿ ತಯಾರಿಸಿತು.

ಕನ್ನಡದ ಅಪ್ರತಿಮ ಕವಿ ಬೇಂದ್ರೆ ಬರೆಯಲು ಪಾರಭಿಸಿದ್ದು ತನ್ನ ಸರಳ-ಸುಲಲಿತ ಸ್ಥಳೀಯ ಭಾಷಾ ಶೈಲಿಯಲ್ಲಿ. ನಂತರ ಅವರ ಕೃತಿಗಳು ಜ್ಞಾನದ ಆಳಕ್ಕೆ ಇಳಿದವು. ಸ್ವತಹ ತನ್ನನ್ನೇ ಮೂರು ಮಜಲುಗಳುಳ್ಳ ಆತ್ಮ ಎಂಬುದಾಗಿ ವರ್ಣಿಸುತ್ತಿದ್ದ ಬೇಂದ್ರೆ, ಸಹಜವಾಗಿ ತಾನು,ಅಂಬಿಕಾತನಯದತ್ತ ತಾನು, ಪ್ರೊಫೆಸರ್ ಬೇಂದ್ರೆ ಎಂಬುದಾಗಿ ಈ ಮೂರು ಬೇರೆ ಬೇರೆ ವ್ಯಕ್ತಿತ್ವವನ್ನು ಹೇಳುತ್ತಿದ್ದರು, ಮತ್ತು ಅವು ಒಂದನ್ನೊಂದು ಬಿಟ್ಟಿರದ ಸಂಬಂಧದ ಬಗ್ಗೆ ಹೊಟ್ಟೆಗೂ-ಬೆನ್ನಿಗೂ ಇರುವ ಸಂಬಂಧ ಅಥವಾ ನದಿಯ ಎರಡು ದಡಗಳ ಸಂಬಂಧವನ್ನು ಹೋಲಿಸುತ್ತಿದ್ದರು.

ಕನ್ನಡ ಕಾವ್ಯಲೋಕದ ತಂದೆ ಎಂದು ಗುರುತಿಸಲ್ಪಡುವ ಬೇಂದ್ರೆಯವರ ಕೃತಿಗಳನ್ನು ವಚನ-ಕೀರ್ತನ ಸಾಹಿತ್ಯಕ್ಕೆ ಹೋಲಿಸುತ್ತಾರೆ. ಬೇಂದ್ರೆಯವರ ಕವನಗಳಲ್ಲಿ ಸ್ಥಳೀಯ ಆಡು ಭಾಷೆಯ ಸೊಗಡು, ಜಾನಪದ ಶಬ್ಧಗಳ ಮಿಳಿತ, ಜನಪದರ ನಂಬಿಕೆ, ಪುರಾಣ, ವೇದ-ವೇದಾಂತಗಳ ಸಾರಗಳನ್ನೆಲ್ಲ ಒಳಗೊಂಡಿವೆ. ಆಧ್ಯಾತ್ಮ, ದೇಶಪ್ರೇಮ,ದಂತಕಥೆಗಳು ಮೊದಲಾದವುಗಳ ಮಿಶ್ರ ಛಾಪು ಎದ್ದು ಕಾಣಸಿಗುತ್ತದೆ. ಅಸಾಧಾರಣ ಪ್ರತಿಭೆ ಬೇಂದ್ರೆ ಕವಿ-ಸಾಹಿತಿಗಳು, ಬುದ್ಧಿ ಜೀವಿಗಳು, ಮತ್ತು ಅಕ್ಷರ ಕಲಿತಿರದ ಹಳ್ಳಿಯ ಜನ ಎಲ್ಲರೊಟ್ಟಿಗೆ ಬೆರೆಯುತ್ತಿದ್ದರು. ಅವರ ಹಳ್ಳಿಯ ಜೀವನದ ರೀತಿಯ ವಾಗ್ಝರಿ ಜನರನ್ನು ಅವರಕಡೆ ಸೆಳೆಯುತ್ತಿತ್ತು. ಕೊನೇ ಕೊನೆಗೆ ಬೇಂದ್ರೆ ಸಂಖ್ಯೆಗಳಲ್ಲಿ ಬಹಳ ಆಸಕ್ತರಾಗಿದ್ದರು. 'ವಿಶ್ವಧಾರನಸೂತ್ರ' ಎಂಬ ಅವರ ಕೃತಿಯಲ್ಲಿ ಇದು ಸ್ಪಷ್ಟವಾಗುತ್ತದೆ. ಇದರಲ್ಲಿ ಅವರು ಕಾವ್ಯವನ್ನು ಸಂಖ್ಯೆಗಳ ರೂಪದಲ್ಲಿ ಅಳವಡಿಸುವುದನ್ನು ಕಾಣಬಹುದಾಗಿದೆ.

ಕವಿಸಮಯ ಅಂತ ಹೇಳುತ್ತೇವಲ್ಲ, ಕವಿಗೆ ಏನೋ ಒಂದು ಬಿಂದು ರೂಪ ತಲೆಯಲ್ಲಿ ಮೊಳಕೆಯೊಡೆದು ಅದು ಗರ್ಭದ ಕೂಸಾಗಿ ಹೊರಬರುವಾಗ ಹಲವಾರು ಕಾರಣ,ಸನ್ನಿವೇಶಗಳು ನಡುವೆ ಬಂದಿರುತ್ತವೆ, ಅತೀ ಶ್ರೀಮಂತ ವ್ಯಕ್ತಿ ಕವಿ ಎಂದೆನಿಸುವುದು ಅಪರೂಪ. ಬಹುತೇಕ ಕಾವ್ಯಗಳು-ಮಹಾಕಾವ್ಯಗಳೆಲ್ಲ ಜನಿಸಿದ್ದು ಕವಿಯ ನೋವಿನ ಘಳಿಗೆಯಲ್ಲೇ. ಹಾಗಾಗಿ ಕಾವ್ಯವನ್ನು ಓದುವಾಗ,ಹಾಡುವಾಗ,ಬಳಸುವಾಗ ಆ ಕರ್ತೃ ಕವಿಯನ್ನು ನೆನೆದರೆ ಅದರಿಂದ ಅವರಿಗೂ ತೃಪ್ತಿ ಮತ್ತು ಒಂದು ಸಾಧು ಜೀವಕ್ಕೆ ಸೇವೆ ಸಲ್ಲಿಸಿದ ಪುಣ್ಯಭಾಗಿಗಳು ನಾವಾಗುತ್ತೇವೆ!

'ಹೂ ಬಳ್ಳಿಯ [ಹುಬ್ಬಳ್ಳಿ]ಹೂ ಧಾರವಾಡದ ದಾರ ಅಂಬಿಕಾತನಯದತ್ತ ಸೂಜಿ' ಎಂದು ಎಷ್ಟೋ ಸಲ ಈ ಕವಿ ಹೇಳಿದ್ದಿದೆ. ಧಾರವಾಡದ ಜನತೆಗೆ ಅವ್ರು ಬೇಂದ್ರೆ ಮಾಸ್ತರ್ ಆಗಿದ್ರು ಬಿಟ್ರೆ ಅವರು ಅಂತಸ್ತಿನಲ್ಲಿ ಕಾಣುವ 'ದೊಡ್ಡಜನ' ಅಂತ ಅನಿಸಿಕೊಳ್ಳಲಿಲ್ಲ. ಅದಕ್ಕೇ ಅಲ್ಲಿನ ಜನತೆ ಅವರನ್ನು ತಮ್ಮ ಮನೆಜನರಂತೆ ಕಂಡರು, ಆಗಾಗ ಬೇಂದ್ರೆ ಕವಿ ಗೋಷ್ಠಿ ನಡೀತಾ ಇತ್ತು. ಬೆಳಿಗ್ಗೆ ಕಾಪಿ-ತಿಂಡಿ ಹೇಗೆ ಹಿತವೆನಿಸುತ್ತದೋ ಹಾಗೇ ಬೇಂದ್ರೆ ಮಾಸ್ತರ್ ಹಾಡು ಹಾಡಿಕೊಂಡು ನರ್ತಿಸಿದಾಗ ಕವಿಯ ಮುಖದಲ್ಲಿ ಮೂಡುವ ಸಂತಸದ ಹಲವು ಗೆರೆಗಳಲ್ಲಿ ಜನ ತಮ್ಮ ಜೀವನದ ಹಬ್ಬವನ್ನು ಆಚರಿಸುತ್ತಿದ್ದರು! ಕಿತ್ತು ತಿನ್ನುವ ಬಡತನದಲ್ಲೂ ಬೇಂದ್ರೆ ಎಂದೂ ಅತಿಥಿಗಳನ್ನು ಹಾಗೇ ಕಳಿಸಲಿಲ್ಲ! ಬೇಂದ್ರೆಯವರ ಮನೆಯಲ್ಲಿ ಅನೇಕದಿನ ಅಘೋಷಿತ ಉಪವಾಸವಿರುತ್ತಿತ್ತು-ಅಂದರೆ ಮನೆಯಲ್ಲಿ ದಿನಸಿಗಳು ಮುಗಿದುಹೋಗಿ ಮತ್ತೆ ಕೊಂಡು ತರಲಾರದ ಬಡತನವಿತ್ತು ! --ಇಂತಹ ಒಂದು ದಿನ ಹೆಂಡತಿಯ ದುಃಖದ ಮುಖನೋಡಿ ತನ್ನ ಸ್ಥಿತಪ್ರಜ್ಞ ಮನಸ್ಸಿನಿಂದ ಹೆಂಡತಿಗೆ ಕವಿ ಸಾರಿದರು--

ಕುಣಿಯೋಣು ಬಾರಾ ಕುಣಿಯೋಣು ಬಾ .....

ಪರಿಸ್ಥಿತಿಗೆ ನಮ್ಮನ್ನು ನಾವು ಮಾರಿಕೊಳ್ಳುವ ಮನೋಸ್ಥಿತಿ ಬೇಡ, ನಮ್ಮ ಅನಿವಾರ್ಯತೆಗಳನ್ನು-ಅಗತ್ಯಗಳನ್ನು ನಮ್ಮ ಮನದ ಹದ್ದುಬಸ್ತಿನಲ್ಲಿಟ್ಟು ಇದ್ದರೂ ಇರದಿದ್ದರೂ ಮನದಲ್ಲಿ ಒಂದೇ ಸ್ಥಿತಿಯಲ್ಲಿರೋಣ ಎಂಬ ಬಗ್ಗೆ ಮಾತಾಡುತ್ತ ಈ ಮೇಲಿನ ಹಾಡು ಹಾಡಿ ನರ್ತಿಸಿದರು ನಮ್ಮ ಬೇಂದ್ರೆ ! ಮತ್ತೆ ಎಲ್ಲರೂ ಕೇಳಿದ್ದೀರಿ --

ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವಾ ಹೊಯ್ದ
ನುಣ್ಣನೆ ಎರಕಾವ ಹೊಯ್ದ ....
ಬಾಗಿಲು ತೆರೆದು ಬೆಳಕೂ ಹರಿದೂ ಜಗವೆಲ್ಲಾ ತೊಯ್ದ
ದೇವನಾ ಜಗವೆಲ್ಲಾ ತೊಯ್ದ....

ಒಂದೊಂದು ಕಾವ್ಯವೂ ಅತಿ ವಿಶಿಷ್ಟ-ಅತಿ ವಿಶೇಷ, ಹೆಚ್ಚೇಕೆ ನಮ್ಮ ಬೇಂದ್ರೆ ಪುಟಗಳಲ್ಲಿ ತುಂಬಿಸಿ ಮುಗಿಸಲಾರದ ಘನ ವ್ಯಕ್ತಿತ್ವ ಹೊಂದಿದವರು.

ಮಕ್ಕಳು-ಮನೆ-ಕುಟುಂಬ
ಬಡತನಕ್ಕೆ ಹಸಿವೆ ಜಾಸ್ತಿ,ಮಕ್ಕಳು ಜಾಸ್ತಿ ಅಂತೆಲ್ಲ ಜನ ಅಂತಾರೆ, ಬಹುಶಃ ಬಡತನದಲ್ಲಿ ನೋವಿನ ಮರೆವಿಗೆ ಹಾಗೋ ಏನೋ ಅಂತ ನನಗನಿಸುತ್ತಿದೆ. ಅಂತೆಯೇ ನಮ್ಮ ಬೇಂದ್ರೆಯವರಿಗೆ ಬರ್ತಿ ೯ ಜನ ಮಕ್ಕಳು ಹುಟ್ಟಿದ್ದರು, ಆದರೆ ಬದುಕಿ ಉಳಿದದು ಬರೇ ಮೂರು. ಉಳಿದ ೬ ಹಲವಾರು ಶಾರೀರಿಕ ಅನಾರೋಗ್ಯದಿಂದ ಮರಣಿಸಿದವು. ಪ್ರತೀ ಸರ್ತಿ ಕೂಸೊಂದು ಸತ್ತಾಗ ಆ ಹಡೆದ ತಾಯಿ-ತಂದೆಗೆ ಏನನ್ನಿಸಿರಬೇಡ ! ಅಂತಹ ದುಃಖವನ್ನೂ ಕವಿ ಹಾಡಿನಲ್ಲಿ ಮರೆತರು--

ನೀ ಹೀಂಗ ನೋಡಬೇಡ ನನ್ನ
ನೀ ಹೀಂಗ ನೋಡಿದರೆ ನನ್ನ ತಿರುಗಿ
ನಾ ಹ್ಯಾಂಗ ನೋಡಲೇ ನಿನ್ನ .......

ಮಕ್ಕಳು ಪಾಂಡುರಂಗ, ವಾಮನ ಮತ್ತು ಸುಮಂಗಲಾ ಉಳಿದುಕೊಂಡರು. ಆದರೆ ಕಾವ್ಯ-ಸಾಹಿತ್ಯದಲ್ಲಿ ಅವರಿಂದ ಮತ್ತೊಬ್ಬ ಬೇಂದ್ರೆ ಹೊರಬರಲಿಲ್ಲ-ಅದು ಸಾಧ್ಯವೂ ಇಲ್ಲಬಿಡಿ, ಬೇಂದ್ರೆ ಒಬ್ಬರೇ-ಅವರಿಗೆ ಅವರೇ ಸಾಟಿ -ಕಾರಂತರ ಹಾಗೆ ! ಮೊದಲೇ ನಾನೊಮ್ಮೆ ಹೇಳಿದ ಹಾಗೆ ಅದು ದೈವದ 'ಬೇಂದ್ರೆ ಅವತಾರ', ಅದೇ ರೀತಿ ದೇವರ ಹಲವು ಒಂದೊಂದಂಶದ ಅವತಾರಗಳೇ ಹುಟ್ಟಿ ಕವಿ-ಸಾಹಿತಿಗಳಾಗಿ ಮೆರೆದವು ಈ ಭುವಿಯಲ್ಲಿ.

ಧಾರವಾಡದ ಸಾಧನಕೇರಿಯಲ್ಲಿ ವಾಸವಿದ್ದ ಬೇಂದ್ರೆ

ಬಾ ಬಾರೋ ಬಾರೋ ಬಾರೋ
ಬಾರೋ ಸಾಧನ ಕೇರಿಗೇ.....

ಎಂಬ ಹಾಡು ಬರೆದರು. ಕವನ ಸಂಕಲನಗಳಲ್ಲಿ 'ನಾದಲೀಲೆ' ಅತೀ ಜನಪ್ರಿಯ. ನಾಕುತಂತಿ ಶ್ರೇಷ್ಠವಾದ ಜ್ಞಾನಪೀಠ ಪ್ರಶಸ್ತಿಯನ್ನು ಕವಿಗೆ ತಂದುಕೊಟ್ಟಿತು. ವಿಪರ್ಯಾಸವೆಂದರೆ ಕನ್ನಡದ ನಮ್ಮ ಬೇಂದ್ರೆಯವರನ್ನುಕರ್ನಾಟಕಕ್ಕಿಂತ ಮೊದಲು ಗುರುತಿಸಿದ್ದು ಮಹಾರಾಷ್ಟ್ರ ಸರಕಾರ, ಅವರ ಕೇಳ್ಕರ್ ಪ್ರಶಸ್ತಿ ನೀಡುವ ಮೂಲಕ.

ಬೇಂದ್ರೆಯವರ ಕೆಲವು ಎರಡು ಜನಪ್ರಿಯ ಹಾಡುಗಳನ್ನು ಈ ಕೆಳಗಿನ ಕೊಂಡಿಯನ್ನು ಅಡ್ರೆಸ್ ಬಾರ್ ನಲ್ಲಿ ಟೈಪ್ ಮಾಡಿ, ಪ್ಲೇ ಮಾಡಿ ಆನಂದಿಸಿ --
Youtube links

೧. ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ
http://www.youtube.com/watch?v=ix5-81AyZyU

೨. ಮೂಡಲ ಮನೆಯಾ ಮುತ್ತಿನ ನೀರಿನ ಎರಕಾವಾ ಹೊಯ್ದ ....
http://www.youtube.com/watch?v=n-Dfzg9RuEA

ಇವುಗಳ ಹಾಡುಗಾರರು, ಸಂಗೀತ ಸಂಯೋಜಕರು ಮತ್ತು ಹೆಚ್ಚಿನದಾಗಿ ವರಕವಿ ಬೇಂದ್ರೆ ಎಲ್ಲರಿಗೂ ನಮ್ಮ ನಮನಗಳು

ಪ್ರಶಸ್ತಿ-ಫಲಕಗಳು
 • ಜ್ಞಾನಪೀಠ ಪ್ರಶಸ್ತಿ - 1974 (ನಾಕುತಂತಿ ಕವನ ಸಂಕಲನಕ್ಕೆ )
 • ಪದ್ಮಶ್ರೀ - 1968
 • ಸಾಹಿತ್ಯ ಅಕಾಡೆಮಿ ಪ್ರಶಸ್ತಿ - 1958
 • ಕೇಳ್ಕರ್ ಪ್ರಶಸ್ತಿ - 1965
 • ಸಾಹಿತ್ಯ ಅಕಾಡೆಮಿಯ ಗೌರವ ಸದಸ್ಯತ್ವ - ೧೯೬೮
 • ಉಡುಪಿಯ ಅದಮಾರು ಮಠ ಅನುಗ್ರಹಿಸಿದ 'ಕರ್ನಾಟಕ ಕುಲ ತಿಲಕ' ಪ್ರಶಸ್ತಿ

ಬೇಂದ್ರೆಯವರ ಕವನ ಸಂಕಲನಗಳು
 • ಕೃಷ್ಣಕುಮಾರಿ (1922)
 • ಗರಿ (1932)
 • ಮೂರ್ತಿ ಮತ್ತು ಕಾಮಕಸ್ತೂರಿ (1934)
 • ಸಖೀಗೀತ (1937)
 • ಉಯ್ಯಾಲೆ (1938)
 • ನಾದಲೀಲೆ (1940)
 • ಮೇಘದೂತ (1943))
 • ಹಾಡು ಪಾಡು (1946)
 • ಗಂಗಾವತರಣ (1951)
 • ಕೃಷ್ಣಕುಮಾರಿ ಮತ್ತು ಹಾಡು ಪಾಡು (1956)
 • ಸೂರ್ಯಪಾನ (1956)
 • ಹೃದಯಸಮುದ್ರ (1956)
 • ಮುಕ್ತಕಂಠ (1956)
 • ಚೈತ್ಯಾಲಯ (1957)
 • ಜೀವಲಹರಿ (1957)
 • ಅರಳು ಮರಳು (1957)
 • ನಮನ (1958)
 • ಸಂಚಯ (1959)
 • ಉತ್ತರಾಯಣ (1960)
 • ಮುಗಿಲಮಲ್ಲಿಗೆ (1961)
 • ಯಕ್ಷ ಯಕ್ಷಿ (1962)
 • ನಾಕು ತಂತಿ (1964)
 • ಮರ್ಯಾದೆ (1966)
 • ಶ್ರಿಮತ (1968)
 • ಬಾ ಹತ್ತರ (1969)
 • ಇದು ನಭೋವಾಣಿ (1970)
 • ವಿನಯ (1972)
 • ಮತ್ತೆ ಶ್ರಾವಣ ಬಂತು (1973)
 • ಒಲವೆ ನಮ್ಮ ಬದಕು (1977)
 • ಚತುರೋಕ್ತಿ (1978)
 • ಪರಾಕಿ (1982)
 • ಕಾವ್ಯವೈಖರಿ (1982)
 • ಬಾಲಬೋಧೆ (1983)
 • ತ ಲೆಕ್ಕನಿಕಿ ತ ದುತಿ (1983)
 • ಚೈತನ್ಯದ ಪೂಜೆ (1983)
 • ಪ್ರತಿಬಿಂಬಗಳು (1987)
 • ಶ್ರಾವಣ ಪ್ರತಿಭೆ (1987)
 • ಕುಣಿಯೋಣು ಬಾ (1990)


ನಾಟಕ-ರೂಪಕಗಳು
 • ತಿರುಕರ ಪಿಡುಗು (1930)
 • ಉದ್ಧಾರ (1930)
 • ನಗೆಯ ಹೋಗೆ (1931)
 • ಹುಚ್ಚಾಟಗಳು (1935)
 • ಹೊಸ ಸಂಸಾರ ಮತ್ತು ಇತರ ಏಕಾಂಕಗಳು (1950)
 • ಅಂಬಿಕಾತನಯದತ್ತ ನಾಟಕ ಸಂಪುಟ (1982)

ಪ್ರಬಂಧ
 • ನಿರಾಭರಣಸುಂದರಿ (1940)
ವಿಮರ್ಶೆ

 • ಸಾಹಿತ್ಯ ಮತ್ತು ವಿಮರ್ಶೆ (1937)
 • ಸಾಹಿತ್ಯಸಂಶೂಧನ್ (1940)
 • ವಿಚರಮಂಜರಿ (1945)
 • ಕವಿ ಲಕ್ಷ್ಮೀಶನ ಜೈಮಿನಿ ಭಾರತಕ್ಕೆ ಮುನ್ನುಡಿ (1954)
 • ಮಹಾರಾಷ್ಟ್ರ ಸಾಹಿತ್ಯ (1959)
 • ಕನ್ನಡ ಸಾಹಿತ್ಯದಲ್ಲಿ ನಾಲ್ಕು ನಾಯಕರತ್ನಗಳು (1968)
 • ಮಾತೆಲ್ಲ ಜ್ಯೋತು (1972)
 • ಸಾಹಿತ್ಯದ ವಿರಾಟ್ಸ್ವರೂಪ (1974)
 • ಕುಮಾರವ್ಯಾಸ (1979)
 • ಮತಧರ್ಮ ಮತ್ತು ಅಧುನಿಕ ಮಾನವ (1979)
ಸಂಪಾದಿತ ಕೃತಿಗಳು

 • ನನ್ನದು ಈ ಕನ್ನಡ ನಡು (1928)
 • ಹಕ್ಕಿ ಹಾರುತಿದೆ (1930)
 • ಚಂದ್ರಹಾಸ (1948)
 • ಹೊಸಗನ್ನಡ ಕಾವ್ಯಶ್ರೀ (1957)
 • ಕನಕದಾಸ ಚತುರ್ಷತಮಾನೋತ್ಸವ ಸಂಸ್ಮರಣ - ಸಂಪುಟ (1965)
ಬೇರೆ ಭಾಷೆಗಳಲ್ಲಿ ಬರೆದ ಮತ್ತು ತರ್ಜುಮೆ ಮಾಡಿದ ಕೃತಿಗಳು

 • A Theory of Immortality (1977)
 • ಸಂತ ಮಹಂತಂಚ ಪೂರ್ಣ ಶಂಭು ವಿಟ್ಠಲ್ (1963)
 • ಸಂವಾದ (1965)
 • ವಿಟ್ಟಲ ಸಂಪ್ರದಾಯ (1984)
 • ಹೊಸಗನ್ನಡ ಕಾವ್ಯಶ್ರೀ (1957)
 • ಶಾಂತಲ (1972)
 • ಉಪನಿಶದ್ರಹಸ್ಯ by R.D. Ranade (1923)
 • ಭಾರತೀಯ ನವಜನ್ಮ " The Indian Renaissance" by Sri Aurobindo (1936)
 • ಶ್ರೀ ಅರವಿಂದರ ಯೋಗ ಆಶ್ರಮ ಮತ್ತು ತತ್ವೋಪದೇಶ (1947)
 • ಕಬೀರ ವಚನಾವಳಿ (1968)
 • ಭಗ್ನಮೂರ್ತಿ-ಮರಾಟಿ ಕವಿ ಅನಿಲ್ ಅವರ ಕಾವ್ಯದ ಅನುವಾದ (1972)
 • ಗುರು ಗೋವಿಂದಸಿಂಗ್ -ಹರವನ್ಸ್ ಸಿಂಗ್ ಅವರ ಕೃತಿಯ ಅನುವಾದ
 • ನೂರೊಂದು ಕವನಗಳು - ಹುಮಾಯುನ್ ಕಬೀರ್ ಅವರಿಂದ ಸಂಪಾದಿತ ಕವಿ ರವೀಂದ್ರನಾಥ್ ಟಾಗೋರ್ ರವರ ಕೃತಿಗಳ ಅನುವಾದ.
ಕೊನೆಯ ದಿನಗಳಲ್ಲಿ ಬೇಂದ್ರೆ ಕ್ಯಾನ್ಸರ್ ನಿಂದ ಕೆಲವು ಕಾಲ ಬಳಲಿದರು, ಆಗ ಅವರನ್ನು ಮಗ ಡಾ|ವಾಮನ ಬೇಂದ್ರೆನೋಡಿಕೊಳ್ಳುತ್ತಿದ್ದರು. ಕರ್ನಾಟಕ ಸರಕಾರ ಕೊಟ್ಟ ಮಾಶಾಸನ ರೂ.೨೫೦ ರಲ್ಲೇ ಬೇಂದ್ರೆ ತನ್ನ ಕೊನೆಯ ದಿನಗಳನ್ನು ಕಳೆದರು, ಅಷ್ಟರಲ್ಲೇ ತೃಪ್ತರು. ಮುಪ್ಪಿನಲ್ಲಿ ಅವರು ಹೇಳಿದ ಅನೇಕ ಕವನ-ಸಾಹಿತ್ಯಗಳನ್ನು ಮಗ ಶ್ರೀ ವಾಮನ ಬೇಂದ್ರೆ ಬರೆದುಕೊಂಡುನಂತರ ಅವುಗಳನ್ನೆಲ್ಲ ಪುಸ್ತಕವಾಗಿಸಿದರು. ದಿನಾಂಕ ೨೧ ಅಕ್ಟೋಬರ್ ೧೯೮೧ರಂದು ಮುಂಬೈ [ಅಂದಿನ ಬಾಂಬೆ]ಯಲ್ಲಿ ತಮ್ಮ ಕಾವ್ಯಯಾತ್ರೆ ಮುಗಿಸಿದ ಶ್ರೀ ಬೇಂದ್ರೆ ನಮ್ಮೊಳಗೇ ಮತ್ತೆ ಮತ್ತೆ ಬಂದುಕೂರುವ ಆಪ್ತರು, ಅಜರಾಮರರು. ಅವರ ಇಚ್ಛೆಯಂತೆ ಅವರ ಅಂತ್ಯಕ್ರಿಯೆ ಕೂಡ ಅವರದೇ ಖರ್ಚಿನಲ್ಲಿನಡೆಯಿತು, ಅದರ ನಂತರ ಒಂದೇ ಒಂದು ರೂಪಾಯಿ ಕೂಡ ಬೇರೆಯವರಿಂದ ಖರ್ಚೂ ಆಗಬಾರದು ಮತ್ತು ತನ್ನ ಬ್ಯಾಂಕ್ಖಾತೆಯಲ್ಲೂ ಏನೂ ಉಳಿಯಬಾರದೆಂಬ ಅವರ ಇಚ್ಛೆಯನ್ನು ಮಗ ವಾಮನ ಬೇಂದ್ರೆ ಹಾಗೇ ಆಗುವಂತೆ ನೋಡಿಪೂರೈಸಿಕೊಟ್ಟರು.

ಮರೆಯಲಳವೇ ? ಗುನುಗುನಿಸುತ್ತಿಲ್ಲವೇ ನಮ್ಮ ಕಿವಿಯಲ್ಲೀಗ........

ಘಮಾ ಘಮಾ ಘಮಾಡಸ್ತಾವ ಮಲ್ಲೀಗೀ.........

ನೀ ಹೊರಟಿದ್ದೀಗ ಎಲ್ಲಿಗಿ ?........

ನೀ ಹೊರಟಿದ್ದೀಗ ಎಲ್ಲಿಗಿ ?.........