ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, March 5, 2011

ಭಾವದಪ್ಸರೆ !

ಚಿತ್ರಕೃಪೆ : ಅಂತರ್ಜಾಲ

ಭಾವದಪ್ಸರೆ !

ಬರೆಯಲು ಕುಳಿತಾ ಆ ಕ್ಷಣದಿ
ಭಾವಗಳಾ ಬುಗ್ಗೆಗಳ್ ತಕ್ಷಣದಿ
ತಾನೇ ಮೊದಲು ತಾ ಮೊದಲೆನ್ನುವ ಪೈಪೋಟಿಯೊಳು ಕ್ಷಣಕ್ಷಣದಿ

ಬೆತ್ತಲೆ ನಿಂತಾ ಭಾವಗಳು
ಮತ್ತಲ್ಲೇ ಕತ್ತನು ಆಡಿಸುತಾ
ಹುತ್ತದೊಳಿಹ ಹಾವಿನ ತಲೆಯಾಪರಿ ಹೊರಸುಳಿದವು ತುಸು ನಸುನಗುತಾ

ಮನದಾ ವೇದಿಕೆ ಏರಿದವು
ತಮ್ಮೊಳಗೇ ಹಿರಿಹಿರಿ ಹಿಗ್ಗಿದವು
ರೂಪದರ್ಶಿಗಳ ಬೆಕ್ಕಿನ ನಡತೆಯ ಅನುಕರಿಸುತ ಹಾರೋಡಿದವು !

ಒಂದಕ್ಕಿಂತಲೂ ಇನ್ನೊಂದು
ಅದು ಬರದೇ ಹೋದರೆ ಮತ್ತೊಂದು
ಬಣ್ಣಹಲವಿರುವ ದಿರಿಸನು ಧರಿಸುತ ಸಣ್ಣನೆ ನಡುವನು ಕುಣಿಸಿದವು

ಒಂದರ ಕೆನ್ನೆ ಬಲು ನುಣುಪು
ಇನ್ನೊಂದರ ಕೂದಲು ಬಲು ಸೊಂಪು
ಹಂದರದೊಳಗಿಹ ಮದುವಣಗಿತ್ತಿಯ ನಾಚಿಕೆ ಇರುವಳು ನರುಗೆಂಪು

ಯಾವುದು ಚೆಂದವು ನಿರ್ಧರಿಸೆ
ಮನಕಾಗದು ಮಂಕು ಆವರಿಸೆ
ತಾವೆಲ್ಲರು ತೂಗುತ ತೀರ್ಮಾನಿಸಿ ಆವಳು ಈ ಜಗದಪ್ಸರೆಯು !