ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Monday, April 26, 2010

ಮಲಗಿಹಳಹ ನೀರೆ

ಇಡೀ ಭಾರತವನ್ನೇ ಒಂದು ನಾರಿಯ ಥರ ನೋದುವ ಪ್ರಯತ್ನ ಇದು. ಭಾರತಮಾತೆಯ ಸೊಬಗನ್ನು ನೈಸರ್ಗಿಕವಾಗಿ ಮನುಷ್ಯ ರೂಪಕ್ಕೆ ಹೊಲಿಸುತ್ತ ನಡೆದರೆ ಆಗ ನಮಗೆ ಯಾರೋ ಮಲಗಿದ ರೀತಿ ಕಾಣುತ್ತದೆಯಲ್ಲವೇ ? ನಮ್ಮ ನೋಟವನ್ನೂ ಆ ರೀತಿಯಲ್ಲಿ ಇಟ್ಟುಕೊಂಡಾಗ ಸಮೃದ್ಧ ನಾರಿಯೋರ್ವಳು ಮಲಗಿದ ರೀತಿ ಕಾಣಸಿಗುತ್ತದೆ.



ಮಲಗಿಹಳಹ ನೀರೆ


ಮಲಗಿಹಳಹ ನೀರೆ ನೀರವದಿ
ಹೊಲಗಳ ಹೊದಿಕೆಯಡಿ ವಿಸ್ತಾರದಿ


ಬಣ್ಣದ ಸೀರೆ ಕುಬುಸವ ತೊಡುತಾ
ಬಿನ್ನಾಣಗಿತ್ತಿ ಮೆರುಗನು ಪಡೆದು
ನುಣ್ಣನೆ ಮೈಗೆ ಪುಣ್ಯ ನದಿಗಳಾ
ಸಣ್ಣಗೆರೆಗಳಾ ಚೌಕಳಿ ಹಿಡಿದು


ಬೆಣ್ಣೆ ಹಚ್ಚಿದ ಹಿಮದ ಜಡೆಗಳು
ಕಣ್ಮನ ತಣಿಸುವ ಶರಧಿಯ ಸೀರೆ
ತಣ್ಣನ ಪರ್ವತ ಸ್ತನಗಳ ತೋರಿ
ಉಣ್ಣಲಾಸೊಬಗನು ಹಂಚುತೆಲ್ಲರಿಗೆ


ಭೂಶಿರಗಳ ಥರ ಉದ್ದನೆ ಉಗುರು
ಭೇಷಾಗಿಹ ಕರಾವಳಿ ತೊಡೆಗಳು
ಆಶೆಯ ಚಪ್ಪಟೆ ಭೂಮಿಯ ಉದರ
ರಾಶಿ ರಾಶಿ ಮನು ಮಕ್ಕಳ ಹಡೆದು


ಹಲವು ತೆರನ ಆ ನಸುಮೈಗಂಪು
ಬೆಳವಲ ಮಡಿಲು ನಳಿದೋಳುಗಳು
ಒಲವ ಸೂಸಿ ಮಂದಸ್ಮಿತ ಸುಸ್ಮಿತ
ಬಲವು ಬ್ರಹ್ಮನದು ಕರಗಿ ಹರಿಯಲು

7 comments:

  1. ಸುಂದರ ಕಲ್ಪನೆ. ಕವನ ಚೆನ್ನಾಗಿದೆ. ಆದರೆ ಇದು ಈಗ ಕೇವಲ ಕಲ್ಪನೆಯಾಗಿಯೇ ಉಳಿಯುವಂತಿದೆ... ಭೂಶಿರದಲ್ಲಿ ಬೆಣ್ಣೆಯ ಬದಲು ಕೆಂಬಣ್ಣದ ನದಿಗಳೇ ಜಾಸ್ತಿಯಾಗುತ್ತಿದ್ದರೆ, ಭೂತಾಯಿಗೆ ನೆಮ್ಮದಿಯಿಂದ ಮಲಗಲು ಆಗುತ್ತಿಲ್ಲ.... ಎತ್ತನೋಡಿದರತ್ತ ಭಯೋತ್ಪಾದಕರ ಭೂಕಂಪವೇ ಮೂಡುತ್ತಿದೆ!

    ReplyDelete
  2. ಕವಿ ಕಾವ್ಯ ಕೇವಲ ಕಲ್ಪನೆಯೇ,ಆದರೆ ಇದು ಕಲ್ಪನೆಯಾಗಬಾರದಿತ್ತು,ವಿಧಿಯಾಟ ನಮ್ಮ ಕೈಲಿಲ್ಲವಲ್ಲ! ಜಗತ್ತು ಎತ್ತಲೋ ಸಾಗಿದೆ,ಅಲ್ಲಿ ನಾವೂ ಹಾಗೇ ಹೊರಟಿದ್ದೇವೆ,ಇರುವಷ್ಟು ಕಾಲ ಒಳ್ಳೆಯದನ್ನ ಬಯಸೋಣ,ಒಳ್ಳೆಯದಕ್ಕಾಗಿ ಪ್ರಾರ್ಥಿಸೋಣ,ಕೊನೆಗೊಮ್ಮೆ ಗೆಲುವು ಒಳ್ಳೆಯದಕ್ಕೆ ಮತ್ತು ಸತ್ಯಕ್ಕೆ ಎಂಬುದನ್ನು ಮನನ ಮಾಡೋಣ,ತೇಜಸ್ವಿನಿ ಹೆಗಡೆಯವರೇ ತಮಗೆ ಧನ್ಯವಾದಗಳು

    ReplyDelete
  3. ಭಾರತಮಾತೆಯ ಮಕ್ಕಳ ಸಹಜ ಪ್ರೀತಿಯ ಚಿಂತನೆ ಇದು. ಅದೆಂತಹ ಪುಣ್ಯಭೂಮಿಯಲ್ಲಿ ನಮ್ಮ ಜನ್ಮವಾಗಿದೆಯಲ್ಲವೇ? ಈ ತಾಯಿಯ ಗರ್ಭದಲ್ಲಿ ಅದೆಷ್ಟು ಜನ ಮಹಾನುಭಾವರ ಜನ್ಮವಾಗಿದೆಯೋ! ಅದೆಷ್ಟು ಜನ ಋಷಿಪುಂಗವರ ತಪಸ್ಸಿನಿಂದ ಈ ಭೂಮಿ ಪುನೀತವಾಗಿದೆಯೋ! ಇಂತಹ ಪವಿತ್ರ ಭೂಮಿಯಲ್ಲಿ ಜನಿಸಿರುವ ನಾವೇ ಧನ್ಯರು. ಭಾರತ ಮಾತೆಯ ಸ್ಮರಣೆ ಮಾಡಿಸಿದ ನಿಮಗೆ ಶರಣು.

    ReplyDelete
  4. ನಿಮ್ಮ ಕವನ ಕೆಟ್ಟ ಅಭಿರುಚಿಯಿಂದ ಕೂಡಿದೆ. ನೀರೆ ಶಬ್ದದ ಅರ್ಥವೇನು?
    ನಿಮಗೆ ತಾಯಿಯನ್ನು ವರ್ಣಿಸಲು "ಸ್ತನ" ಶಬ್ಧವೇ ಬೇಕಾ?
    ಇದನ್ನು ತಿಳಿದೂ ಮಹಿಳೆಯರು ಚೆನ್ನಾಗಿದೆ ಅನ್ನುವುದು ಇನ್ನೊಂದು ದುರಂತ!
    ಇನ್ನಾದರೂ ತಾಯಿಯ ಸ್ತನದ, ಸೌಂದರ್ಯದ ವರ್ಣನೆ ಬಿಡಿ.

    ReplyDelete
  5. ಪೂರ್ಣಿಮಾ ಅವರೇ,ಸ್ತ್ರೀಯನ್ನು,ಅಮ್ಮನನ್ನೂ ಆದಿಶಂಕರರೆಂಬ ಮಹಾಕವಿ ಸ್ತನಗಳನ್ನಿಟ್ಟೆ ವರ್ಣಿಸಿದರು, ಬಹುಶ ತಮಗೆ ಕಾಮಾಲೆ ರೋಗ ವಿರಬಹುದು,ಸ್ವಲ್ಪ ಔಷಧಿ ತೆಗೆದುಕೊಳ್ಳಿ, ಆಮೇಲೆ ಸರಿಹೋಗುತ್ತದೆ. ಸ್ತನ ಎಂದ ಮಾತ್ರಕ್ಕೆ ಅದು ಕೆಟ್ಟದಾಗುವುದಿಲ್ಲ,ಅದು ಹೆಣ್ಣಿನ ದೇಹದ ಅವಿಭಾಜ್ಯ ಅಂಗ,ನಾನು ಅಮ್ಮನ ಸ್ತನಗಳನ್ನು ವರ್ಣಿಸಿದೆ, ಅವಳಿಗೆ ಸ್ತನಗಳಲ್ಲಿ ಕ್ಯಾನ್ಸರ್ ಇದುವರೆಗೆ ಇಲ್ಲ,ಇನ್ನು ಮುಂದೆಯೂ ಬೇಡ ಅಂತ! ತಮಗೆ ಇಷ್ಟೆಲ್ಲಾ ಕಾಮಾಲೆ ಹರಡಿ ಕಣ್ಣು ಹಲದಿಯಾಗಿದೆ ಎಂದು ಗೊತ್ತಿರಲಿಲ್ಲ, ಸ್ವಲ್ಪ ಕಣ್ಣರಳಿಸಿ ನೋಡಿ ಹೊರಜಗತ್ತಿನಲ್ಲಿ ಅರೆಬೆತ್ತಲೆ ಇರುವ ಅದನ್ನೇ ಎಲ್ಲದಕ್ಕೂ ಪ್ರದರ್ಶಿಸುವ ನೀವು ಬಯಸುವ ಹೆಣ್ಣುಮಕ್ಕಳನ್ನು!ನೀವು ಪ್ರಾಚೀನಕಾಲದವರೋ,ಪಾತಾಳಗರಡಿಯವರೊ ತಿಳಿದಿಲ್ಲ. ಶುದ್ಧ ಸಾಹಿತ್ಯದ ಅಭಿರುಚಿ ಇರದಿರುವ ನಿಮಗೆ ನನ್ನ ಬ್ಲಾಗಿಗೆ ಬರಬೇಡಿ ಎಂದು ಹೇಳುತ್ತಿದ್ದೇನೆ,ನಿಮ್ಮಂತಹಓದುಗರು ಅನೇಕರನ್ನು ಹಾಳುಮಾಡಿ ಅಡ್ಡದಾರಿಯಲ್ಲಿ ಹಾಕುತ್ತಾರೆ! ಓದುಗ ಮಿತ್ರರೇ ಎಚ್ಚರ ಯಾರು ಈ ಪೂರ್ಣಿಮಾ ? ಅವಳಿಗೆ ನನ್ನ ಧಿಕ್ಕಾರ,

    ಎಲ್ಲಾ ಓದುಗ ಮಿತ್ರರಿಗೆ ನನ್ನ ವಂದನೆಗಳು

    ReplyDelete
  6. ಕಲ್ಪನೆಯ ಸೊಬಗು ಚೆನ್ನಾಗಿದೆ. "ಮಲಗಿದ" ಶಬ್ದ ಬೇಕಿತ್ತೆ? ಎಕೆ೦ದರೆ ಸದಾ "ಜಾಗೃತ" ನಮ್ಮ ಭಾರತಮಾತೆ ತನ್ನ ಮಕ್ಕಳ ಸಲುವಾಗಿ. ನಿ೦ತ ತಾಯಿಯ ಹಾಗೇ ನಮ್ಮ ಭಾರತ ಭೂ ಪ್ರದೇಶ ಎ೦ದು ನನ್ನ ಅಭಿಪ್ರಾಯ. ತಮ್ಮ ಚಿತ್ರವೂ ಅದನ್ನೆ ಹೇಳುತ್ತಿದೆ.
    ಇನ್ನೂ ನೀರೆ ಬದಲು ಮಾತೆ ಇದ್ದರೆ ಇನ್ನು ಸೊಬಗಿರುತ್ತಿತ್ತು ಅನ್ನೊದು ನನ್ನ ಅಭಿಪ್ರಾಯ.
    ತಮ್ಮ ಕಲ್ಪನೆ ಚೆನ್ನಾಗಿ ವ್ಯಕ್ತವಾಗಿದೆ.

    ReplyDelete
  7. ಸೀತಾರಾಮ್ ಸರ್ , ಇಲ್ಲಿ ಮಾತೆಯನ್ನು ನೀರೆಯಾಗಿ ಸಹಜವಾಗಿ ನೋಡಿದ್ದು ನನ್ನ ಅನಿಸಿಕೆ, ಭಾರತಮಾತೆಯ ಭೂಭಾಗ ಮಲಗಿದೆ ಅಂದಾಕ್ಷಣ ಮಾತೆಯ ಮನ ಜಾಗೃತವಾಗಿಲ್ಲವೆಂದಲ್ಲ, ಇಲ್ಲಿ ನಾನು

    ಸಮುದ್ರ ವಸನೇ ದೇವಿ ಪರ್ವತ ಸ್ತನ ಮಂಡಲೇ|
    ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ|| --- ಎಂಬ ಸಂಸ್ಕೃತ ಮಂತ್ರವನ್ನು ಆಧರಿಸಿದ್ದೇನೆ,ಧನ್ಯವಾದಗಳು

    ReplyDelete