ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Saturday, April 24, 2010

ದೀಪ, ಆರತಿ ,ಮತ್ತು ತೀರ್ಥ ದ ಸುತ್ತ


ದೀಪ, ಆರತಿ ,ಮತ್ತು ತೀರ್ಥ ದ ಸುತ್ತ

ದೀಪ

ಎಣ್ಣೆಯ ದೀಪಕ್ಕೆ ವಿಶೇಷ ಕಳೆ ಇದೆ,ತುಪ್ಪದ ದೀಪಕ್ಕೆ ಅತಿ ವಿಶಿಷ್ಟ ಲಕ್ಷಣವಿದೆ, ಈ ದೀಪಗಳ ಸುತ್ತ ಪರ್ಭೆಯಿದೆ,ಪ್ರಕಾಶವಿದೆ,ಶಾಖವಿದೆ, ಒಂಥರಾ ಆಹ್ಲಾದಕರ ಸುವಾಸನೆಯಿದೆ. ಬೆಳಗುವ ದೀಪ ನೋಡಿದಾಗ ಮನಸ್ಸು ತುಂಬಾ ಲವಲವಿಕೆ ತುಂಬಿಕೊಳ್ಳುತ್ತದೆ, ನೀಲಾಂಜನವನ್ನು ನೋಡಿದಾಗ ನಮ್ಮಲ್ಲಿ ವಿಶಿಷ್ಟ ಅನುಭೂತಿ ಉಂಟಾಗುತ್ತದೆ. ದೀಪ ಎಲ್ಲಿದೆಯೋ ಅಲ್ಲಿ ಅಂಧಕಾರ ಕರಗುತ್ತದೆ, ಕ್ರಿಮಿ ಕೀಟಗಳು ಆವಾಸವಾಗಿರುವ ಕತ್ತಲ ಜಾಗ ಬೆಳಕಿನಿಂದ ಪ್ರಜ್ವಲಿಸಿದಾಗ ಅವುಗಳು ದೂರ ಸರಿದುಹೋಗಿ ನಮ್ಮ ಆವಾಸಕ್ಕೆ ಅನುಕೂಲವಾಗುತ್ತದೆ. ತುಪ್ಪದ ದೀಪದ ಪರಿಮಳ ಮನದ ಕ್ಲೇಶವನ್ನು ಕಳೆಯುತ್ತದೆ, ಸರಿಯಾಗಿ ದಿಟ್ಟಿಸಿ ನೋಡಿ - ತುಪ್ಪದ ದೀಪದ ಬಣ್ಣವೇ ದೀಪಗಳಲ್ಲಿ ವಿಶಿಷ್ಟ! ಬೆಳ್ಳಿಯ ಹಣತೆಯಲ್ಲಿ ತುಪ್ಪವನ್ನು ಹಾಕಿ, ಶುದ್ಧ ಹತ್ತಿಯ ಬತ್ತಿಯಿಂದ ದೀಪ ಬೆಳಗಿದರೆ ಅದರ ಸಲ್ಲಕ್ಷಣ ನಮಗೆ ತರುವ ಸಂತಸ ಬಹಳ. ದೀಪವನ್ನು ಮಣ್ಣ ಹಣತೆಯಲ್ಲೂ ಬೆಳಗಬಹುದು. ಜ್ಞಾನಕ್ಕೂ ದೀಪಕ್ಕೂ ಇರುವ ಸಾಮಾನ್ಯತೆ ಎಂದರೆ ದೀಪ ಕತ್ತಲೆಯನ್ನು ಓಡಿಸುತ್ತದೆ ಹೇಗೋ ಹಾಗೆ ಓದು-ಜ್ಞಾನಾರ್ಜನೆ ನಮ್ಮ ಮನದ ಕತ್ತಲೆಯನ್ನು ಓಡಿಸುತ್ತದೆ. ಅದಕ್ಕೇ

ದೀಪ ಮೂಲೇ ತತೋ ಬ್ರಹ್ಮಾ ದೀಪ ಮಧ್ಯೆ ತತೋ ಹರಿಃ |
ದೀಪಾಗ್ರೇ ಶಂಕರಃ ಪ್ರೋಕ್ತ ದೀಪರಾಜಾಯತೇ ನಮಃ ||

ಈ ಶ್ಲೋಕದಲ್ಲಿ ದೀಪವನ್ನೇ ದೈವವೆಂದು ತಿಳಿದು ಅದರ ಮೂಲ ಭಾಗವನ್ನು ಬ್ರಹ್ಮ, ಮಧ್ಯೆ ವಿಷ್ಣು, ತುದಿಯಲ್ಲಿ ಶಿವ ಎಂದು ಹೆಸರಿಸಿ ನಮಿಸುವುದು ಬಹಳ ಆಪ್ತ ಕೆಲಸ ಅಲ್ಲವೇ, ಅದಲ್ಲದೆ ಸಾಯಂಕಾಲ ದೀಪ ಬೆಳಗುವಾಗ

ಶಿವಂಕರೋತಿ ಕಲ್ಯಾಣಂ ಆರೋಗ್ಯ ಧನಸಂಪದಂ |
ಮಮ ಶತ್ರು ಹಿತಾರ್ಥಾಯ ಸಂಧ್ಯಾಜೋತಿರ್ನಮೊಸ್ತುತೇ ||

ಆಹಾ ಎಷ್ಟು ಹಿತವಾಗಿ ಹೇಳಿದ್ದಾರೆ ನೋಡಿ! ನನ್ನ ಶತ್ರುವಿಗೂ ಈ ದೀಪ ಹಿತಕರವಾಗಲಿ, ಅಂದರೆ ಯಾರಿಗೂ ಸಂಕಷ್ಟ ಬಾರದಿರಲಿ ಎಂಬ ಅರ್ಥವಲ್ಲವೇ?
ಮೇಲಾಗಿ ಇದನ್ನೆಲ್ಲಾ ನೋಡಿ ನಮ್ಮ ಎಲ್ಲಾ ಕಾರ್ಯಕ್ರಮಗಳಲ್ಲಿ ದೀಪವನ್ನು ಬೆಳಗುವುದರ ಮೂಲಕ ಪ್ರಾರಂಭಿಸುತ್ತೇವೆ ಅಲ್ಲವೇ ? ದೀಪದಲ್ಲಿ ತಾತ್ಕಾಲಿಕ ದೀಪ ಮತ್ತು ನಂದಾದೀಪ ಎಂಬ ಎರಡು ಬಗೆ, ತಾತ್ಕಾಲಿಕ ದೀಪ ಆ ಕ್ಷಣದಲ್ಲಿ ಹಚ್ಚಿಕೊಳ್ಳುವುದಾದರೆ ನಂದಾದೀಪ ಆರದೇ ಉರಿಯುವ ದೀಪ. ಹಳೆಯ ಮನೆಗಳಲ್ಲಿ, ದೇವಸ್ಥಾನಗಳಲ್ಲಿ ಮಾತ್ರ ನೋಡ ಸಿಗುವ ಈ ದೀಪ ಆರುವುದಕ್ಕೆ ಅವಕಾಶವಿಲ್ಲದಂತೆ ಅದನ್ನು ನೋಡಿಕೊಳ್ಳುತ್ತಾರೆ.
|| ತಮಸೋಮಾ ಜ್ಯೋತಿರ್ಗಮಯ || ಅಂತ ಹೇಳಿ ಬೆಳಗುವ ಈ ದೀಪ ಎಲ್ಲರ ಮನೆಮನ ಬೆಳಗುವುದಲ್ಲವೇ ?

ಆರತಿ

ದೀಪದ ಸಂಕ್ಷಿಪ್ತ ರೂಪ ಆರತಿ. ದೀಪ ಬಹಳ ಹೊತ್ತು ಉರಿದರೆ ಆರತಿ ಕೆಲಸಮಯ ಉರಿಯುವ ದೀಪ. ಆರತಿಯಲ್ಲಿ ಹಲವು ಥರದ, ಆಕಾರದ, ದೊಡ್ಡ,ಸಣ್ಣ ಆರತಿಗಳಿವೆ. ನಾಗಾರತಿ, ಕುಂಭಾರತಿ, ಕೂರ್ಮಾರತಿ,ಗರುಡಾರತಿ, ರಥಾರತಿ, ಏಕಾರತಿ, ಪಂಚಾರತಿ, ದ್ವಿದಳ ನಾಗಾರತಿ,ತ್ರಿದಳ ನಾಗಾರತಿ, ಉರುಟು ಕರ್ಪೂರದಾರತಿ ಇವೆಲ್ಲ ಆರತಿಯ ವಿವಿಧ್ಯಗಳು. ಆಕಾರ, ಗಾತ್ರ ಮತ್ತು ಎತ್ತರಗಳಲ್ಲಿ ವೈವಿಧ್ಯತೆ ಮೆರೆಯುವ ಆರತಿಗಳದ್ದು ದೇವರಿಗೆ ತಮ್ಮನ್ನು ಅರ್ಪಿಸಿಕೊಂಡ ಹೆಮ್ಮೆ ! ಅದು ಒಪ್ಪಲೇಬೇಕಾದ ನಿಜವಷ್ಟೇ ? ಈ ಆರತಿಗಳಿಂದ ಮನಸ್ಸು ಬಹಳ ಪ್ರಪುಲ್ಲ ಗೊಳ್ಳುತ್ತದೆ. ಆರತಿ ಬೆಳಗಿದಾಗ ಸಿಗುವ ಪ್ರತಿಸಲದ ಆನಂದ ಅದೊಂದು ಅವಿಸ್ಮರಣೀಯ ಕ್ಷಣವಾಗಿ ಅನುರಣಿಸುತ್ತಿರುತ್ತದೆ. ಭಾವುಕರಾದ ನಾವನೇಕರು ಆ ಆರತಿಗಳ ಅಂದದಲ್ಲಿ ಕಳೆದುಹೋಗುತ್ತೇವೆ;ನಮ್ಮನ್ನೇ ನಾವು ಮರೆಯುತ್ತೇವೆ. ಹೀಗಾಗಿ ಇಂತಹ ಮಂಗಲಾರತಿಗಳಿಗೆ ಹುಚ್ಚು ಮಂಗಳಾರತಿ ಎಂದು ಕರೆಯುವ ವಾಡಿಕೆ ಕೂಡ ಕೆಲವುಕಡೆ ಕಂಡುಬರುತ್ತದೆ! ನಮ್ಮ ಮನಸ್ಸಿನ ಭಾವನೆಗಳನ್ನು ದೇವರಿಗೆ ಅರ್ಪಿಸುತ್ತ, ಆ ಕ್ಷಣದಲ್ಲಿ ಏನೋ ಒಂದು ವೈಭವವನ್ನು ಅನುಭವಿಸುವ ಕಲ್ಪನೆಯಿಂದ ಸಾಕಾರಗೊಂಡ ಈ ಆರತಿಗಳು ಒಂದೊಂದೂ ಒಂದೊಂದು ವೈಶಿಷ್ಟ್ಯವನ್ನು ತೋರುತ್ತವೆ. ಆರತಿ ನೋಡಿ ಸಂತಸಪಡಬೇಕೆಂಬ ನಮ್ಮ ಹುಚ್ಚು ತಣಿವವರೆಗೂ ನಾವು ಆರತಿ ಬೆಳಗುವುದರಿಂದ ಈ ಆರತಿಗಳು ಹಾಗೆ ಕರೆಸಿಕೊಂಡಿವೆ ಎಂದರೆ ತಪ್ಪಾಗಲಾರದೇನೋ! ಒಟ್ಟಿನಲ್ಲಿ ಆರತಿಗಳು ನಮ್ಮ ಮನಸ್ಸಿಗೆ ಆನಂದವನ್ನು, ತನ್ಮಯತೆಯನ್ನು ತಂದುಕೊಡುವ ಸಾಧನಗಳು. ಮೇಲಾಗಿ ಈ ಆರತಿಗಳಿಂದ ಹೊರಡುವ ಧೂಮಗಳು ನಮ್ಮ ಭಾವನೆಗೆ ರೆಕ್ಕೆ ಪುಕ್ಕ ಕೊಟ್ಟು ಬಲಿಯಲು ಸಹಕಾರಿಯಾಗುತ್ತವೆ. ಕೊನೆಯಲ್ಲಿ ಬೆಳಗುವ ಕರ್ಪೂರದ ಆರತಿಯಿಂದ ಹೊರಡುವ ಧೂಮ ಕ್ರಿಮಿನಾಶಕವಾಗಿದೆ. ಕರ್ಪೂರದಾರತಿ ಯನ್ನು ಕೊನೆಯಲ್ಲಿ ಬೆಳಗುವ ಐತಿಹ್ಯವೇನೆಂದರೆ ಹೇಗೆ ಕರ್ಪೂರ ತನ್ನನ್ನೇ ತಾನು ಕರಗಿಸಿ ಬೆಳಕು ಕೊಟ್ಟು ನಿಶ್ಯೇಷವಾಗುವುದೋ ಹಾಗೆ ನಮ್ಮನ್ನೂ ನಿನ್ನಲ್ಲಿ ಕರಗಿಸಿಕೊಂಡು ಕೀರ್ತಿಶೇಷರನ್ನಾಗಿ ಮಾಡೆಂದು ದೇವರಲ್ಲಿ ಪ್ರಾರ್ಥಿಸುವುದೇ ಈ ಆರತಿಯ ವಿಶೇಷ. ಆರತಿಗಳನ್ನು ಬೆಳಗಲು ಯಾವುದರ ನಂತರ ಯಾವುದು ಮತ್ತು ಎಷ್ಟು ಆವರ್ತಿ ಅವುಗಳನ್ನು ಎತ್ತಬೇಕು ಎನ್ನುವುದರ ಬಗ್ಗೆ ನಿಯಮಗಳಿವೆ, ಆದರೆ ನಮ್ಮ ಹುಚ್ಚಿನಲ್ಲಿ ಬೆಳಗುವ ಆರತಿಗಳನ್ನು ಬತ್ತಿ ಆರುವವರೆಗೂ ಎತ್ತುತ್ತಲೇ ಇರುತ್ತೇವೆ !

ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿನಾ ಯೋಜಿತಂ ಮಯಾ
ದೀಪಂ ಗ್ರಹಾಣ ದೇವೇಶ ತ್ರಿಲೋಕ್ಯ ತಿಮಿರಾಪಹ |
ಭಕ್ತ್ಯಾ ದೀಪಂ ಪ್ರಯಚ್ಚಾಮಿ ದೇವಾಯ ಪರಮಾತ್ಮನೇ
ತ್ರಾಹಿಮಾಮ್ ನರಕಾದ್ಘೋರಾತ್ ದಿವ್ಯಃ ಜ್ಯೋತಿ ನಮೋಸ್ತುತೆ ||

ಹೀಗೆಲ್ಲ ಹಲವಾರು ಮಂತ್ರಗಳಿಂದ, ಸ್ತುತಿಗಳಿಂದ ದೇವರನ್ನು ಪ್ರಾರ್ಥಿಸುತ್ತ ಎತ್ತುವ ಆರತಿ ವೈಜ್ಞಾನಿಕವಾಗಿ, ಮನೋವೈಜ್ಞಾನಿಕವಾಗಿ ಶುಭಫಲಕಾರಿ ಎನ್ನುವುದು ಸ್ತುತ್ಯಾರ್ಹ ವಿಷಯ, ನಮ್ಮ ಪೂರ್ವಜರು ದಡ್ಡರಲ್ಲವಷ್ಟೇ ? !!!

ತೀರ್ಥ

ತೀರ್ಥ ಎಂಬುದು ದೇವರ ಅಭಿಷೇಕದ ನೀರು, ಪಂಚಾಮೃತ, ಎಳೆನೀರು, ಕಾಯಿನೀರು, ಕಷಾಯ ಹೀಗೇ ಯಾವರೂಪದಲ್ಲಾದರೂ ಇರಬಹುದು, ಆದರೆ ಮೂಲ ದ್ರವರೂಪ ಅಷ್ಟೇ. ಸಾಲಿಗ್ರಾಮ ಎಂಬುದನ್ನು ನಾವು ನೋಡಿರುತ್ತೇವೆ, ಇಂದಿನ ಹೊಸ ಪೀಳಿಗೆಗೆ ಪಂಚಾಯತನ ವಿಗ್ರಹಗಳ ಪರಿಚಯವಿಲ್ಲವಾಗಿ ಹೇಳಬೇಕಾಗಿಬರುತ್ತದೆ. ಸಾಲಿಗ್ರಾಮದ ಮೇಲೆ ಪಚ್ಚಕರ್ಪೂರ ಸಹಿತ ಅಷ್ಟಗಂಧ ಲೇಪಿಸಿ, ಅದನ್ನು ಶಂಖದಲ್ಲಿ ತುಂಬಿಸಿಕೊಂಡ ಶುದ್ಧ ನೀರಿನಿಂದ ತುಳಸಿ ಇಟ್ಟು ಪುರುಷ ಸೂಕ್ತದಿಂದ ಅಭಿಷೇಚಿಸಿದಾಗ ದೊರೆಯುವ ಆ ಮಿಶ್ರಿತ ನೀರೆ ನಮಗೆ ಮನೆಗಳಲ್ಲಿ ಸಿಗಬಹುದಾದ ತೀರ್ಥ. ಇದಕ್ಕೆ ರೋಗನಿವಾರಕ ಶಕ್ತಿ ಇದೆ. IT ENHANCES IMMUNITY IN OUR BODY. ಇನ್ನುಳಿದಂತೆ ಎಲ್ಲಾ ತೀರ್ಥಗಳೂ ಪರಿಣಾಮಕಾರಿಗಳೇ. ವಿಶೇಷವಾದ ಕಷಾಯ ತೀರ್ಥಗಳನ್ನು ಬ್ರಹ್ಮೋತ್ಸವ ಅಥವಾ ವಿವಿಧ ಉತ್ಸವದ ಸಮಯದಲ್ಲಿ ಉತ್ಸವ ಮುಗಿಸುವ ವೇಳೆ ದೇವರಿಗೆ ಅವಬೃತ ಕಾರ್ಯ ನಡೆಸುವಾಗ ನಿವೇದಿಸಲಾಗುವ ವಿವಿಧ ಗಿಡಮೂಲಿಕೆಗಳು ಮತ್ತು ಯಾಲಕ್ಕಿ,ಲವಂಗ,ಪಿಪ್ಪಲಿ ಇತ್ಯಾದಿ ಹಲವಾರು ದ್ರವ್ಯಗಳಿಂದ ಕುದಿಸಿ ತಯಾರಿಸಿದ ಕಷಾಯ--ಒಮ್ಮೆ ಅವಕಾಶವಾದರೆ ಕುಡಿದು ನೋಡಿ, ಜನ್ಮದಲ್ಲಿ ಅದರ ರುಚಿ ಮರೆಯಲಾರಿರಿ, ಅದ್ಬುತ ಮತ್ತು ಅದರ ಪರಿಣಾಮ ಕೂಡ ಅಷ್ಟೇ ಅದ್ಬುತ. ತೀರ್ಥಗಳು ಸಹಜವಾಗಿ ಖನಿಜಯುಕ್ತವಾಗಿರುತ್ತವೆ.

ಹೀಗೇ ನಮ್ಮ ಸುತ್ತ ದಿನನಿತ್ಯ ನಾವು ಬಳಸುವ ಈ ಮೂರು ಅಂಶಗಳು ವೈಜ್ಞಾನಿಕ ಮತ್ತು ಅರ್ಥಪೂರ್ಣ, ನಮ್ಮ ಪೂರ್ವಜರ ಪ್ರತೀ ನಡೆಯೂ ಹಾಗೇ ಅಲ್ಲವೇ ?

--------
ಇನ್ನು ಮತ್ತೆ ಮುಂದಿನ ಕೃತಿ ಸ್ವಲ್ಪ ತಡವಾಗಿ, ಈ ಕೃತಿ ಕೂಡ ಸೈಬರ್ ನಲ್ಲಿ ಕುಳಿತು ಪ್ರಕಟಿಸಿದ್ದು, ನೆಟ್ ತೊಂದರೆ ಇರುವುದರಿಂದ ದಯವಿಟ್ಟು ಸಹಕರಿಸಿ.

8 comments:

  1. ಇವತ್ತು ಅಚ್ಚರಿಯಜೊತೆಗೆ ಘಾಬರಿಯೂ ಆಯ್ತು.ಬೆಳಗಿನಿಂದ ೩-೪ ಭಾರಿ ಬ್ಲಾಗ್ ತೆರೆಯಲು ಯತ್ನಿಸಿದರೆ-ಈ ಬ್ಲಾಗ್ ತೆಗೆದುಹಾಕಲಾಗಿದೆ ಎಂಬ ನೋಟೀಸ್ ನೋಡಿ ಬೇಸರವಾಗಿತ್ತು.ಅಂತೂ ಬಂದು ದೀಪ ಹಚ್ಚಿದ್ದೀರಲ್ಲಾ! ಸಂತೋಷವಾಯ್ತು.

    ReplyDelete
  2. ಭಟ್ಟರೇ ;ನಮಗೆಲ್ಲಾ ಶಾಕ್ ಕೊಟ್ಟಿರಲ್ಲಾ ಸಾರ್.ನಿಮ್ಮ ಬ್ಲಾಗನ್ನು ತೆಗೆಯಲಾಗಿದೆ ಎನ್ನುವ ನೋಟಿಸ್ ನೋಡಿ ನಿನ್ನೆಯೆಲ್ಲಾ ತಲೆ ಬಿಸಿಮಾಡಿಕೊಂಡಿದ್ದೆ ನ್ನಿಮ್ಮ ಬ್ಲಾಗೇ ನಮಗೆ ಜ್ಞಾನದ ದೀಪ ,ಧೂಪ ,ಆರತಿ ಎಂದರೆ ಅತಿಶಯವೇನಲ್ಲ .ಯಾವುದಕ್ಕೂ ನನ್ನ ಈ ಕೆಳಗಿನ ಮೈಲ್ ಗೆ
    ನಿಮ್ಮ ಮೊಬೈಲ್ ನಂಬರ್ ಕಳಿಸಿರಿ. dtkmurthy@gmail.com.

    ReplyDelete
  3. ಭಟ್ರೆ, ನಮ್ಮ ಅನೇಕ ಆಚರಣೆಗಳಲ್ಲಿ ವೈಜ್ಞಾನಿಕ ತತ್ವಗಳಿದ್ದವು. ಅವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಕುರುಡು ಆಚರಣೆಗಳನ್ನಾಗಿ ಪರಿವರ್ತಿಸಿಬಿಟ್ಟಿದ್ದಾರೆ ನಮ್ಮ ಜನರು. ಲೇಖನ ಚೆನ್ನಾಗಿದೆ

    ReplyDelete
  4. ಈ ಬ್ಲಾ^ಗ್ ತೆಗೆಯಲಾಗಿದೆ ಎನ್ನುವ ನೋಟೀಸ್ ನೋಡಿ ನನಗೂ ಅಚ್ಚರಿಯಾಗಿತ್ತು. ಈಗ ಸಮಾಧಾನವಾಗಿದೆ.

    ReplyDelete
  5. ಕೆಲವೊಮ್ಮೆ ಗೂಗಲ್ ಸರ್ಚ್ ಎಂಜಿನ್ ತೊಂದರೆಯಿಂದ,ಇನ್ನು ಕೆಲವೊಮ್ಮೆ ಹ್ಯಾಕರ್ ಗಳ ತೊಂದರೆಯಿಂದ ಬ್ಲಾಗ್ ಗೆ ಬಾಧೆ ಇದ್ದಿದ್ದೇ, ಇದನ್ನು ತಮ್ಮೆಲ್ಲರ ಗಮನಕ್ಕೆ ತರಬಯಸುತ್ತೇನೆ,ಮೊನ್ನೆ ನನಗೂ ಕೂಡ ಅಲಭ್ಯವಾದ ನನ್ನ ಬ್ಲಾಗ್ ಬಗ್ಗೆ ನನಗೆ ಚಿಂತೆ ಇತ್ತು,ಆದರೆ ನಮಗೂಮೀರಿದ ಶಕ್ತಿಯನ್ನು ಅವಲಂಬಿಸಿದ ನಾನು ಅದನ್ನು ಮರೆತಿದ್ದೆ,ದೇವರು ಇಟ್ಟ ಹಾಗೇ ಇರುತ್ತೇನೆ ಎಂದು ಭಾವಿಸಿದ್ದೆ.ಕೆಲವು ಸಮಯದ ನಂತರ ಸರಿಹೋಯಿತು! ಆಶ್ಚರ್ಯ ~!

    ನನಗೆ ಇನ್ನೂ ಕೂಡ ನೆಟ್ ಲಭ್ಯ ಇಲ್ಲ, ಕೆಲವುದಿನಗಳ ಕಾಲ ಬ್ರೌಸಿಂಗ್ ಸೆಂಟರ್ ನೇ ಅವಲಂಬಿಸಿ ಮಿತ ಬರವಣಿಗೆ ಮಾಡುತ್ತೇನೆ,ತಮ್ಮೆಲ್ಲರ ಪ್ರೀತಿ ಸಹಕಾರವಿರಲಿ, ಪ್ರತಿಕ್ರಿಯಿಸಿದ ಎಲ್ಲಾ ಓದುಗ ಮಿತ್ರರಿಗೂ ಅನವರತ ಧನ್ಯವಾದಗಳು.

    ReplyDelete
  6. ತುಂಬಾ ಮಾಹಿತಿ ಪೂರ್ಣ ಲೇಖನ ಸರ್. ನಿಮ್ಮ ಈ ಲೇಖನದಿಂದ ತುಂಬಾ ವಿಷಯ ತಿಳಿದುಕೊಂಡೆ. ತುಂಬಾ ಧನ್ಯವಾದಗಳು .

    ReplyDelete