ಆತ್ಮೀಯ ಬಂಧು, ನಮಸ್ಕಾರ, ವಿ.ಆರ್.ಭಟ್ ತಮಗೆ ಹೃತ್ಪೂರ್ವಕ ಸ್ವಾಗತವನ್ನು ಕೋರುತ್ತಿದ್ದೇನೆ

Wednesday, July 28, 2010

ಹೊಲಸು ಹೊರುವರು ನಾವು !!



ಹೊಲಸು ಹೊರುವರು ನಾವು !!

[ಇಂದಿನ ರಾಜಕೀಯದ ಜನರ ಕುರಿತು, ಅವರನ್ನು ಆಯ್ದು ಕಳಿಸಿದ ನಮ್ಮ ಮಂಕು ಬುದ್ಧಿಯ ಕುರಿತು ಈ ವಿಪ್ಲವದ ಕವನ]

ಹೊಲಸು ತುಂಬಿದ ಬುಟ್ಟಿ
ಹೊತ್ತು ನಾವೀವತ್ತು
ಕಳೆಗುಂದಿ ಕುಳಿತಿಹೆವು ಮಂಗನಂತೆ !
ಕಳಿಸುವಾಗಿರಲಿಲ್ಲ
’ತಲೆ’ ನಮಗೆ ತಲೆಯಲ್ಲಿ
ಬಿಳಿಹಂದಿ ಆನೆಗಳು ಬೆಳೆದವಂತೆ!

ಹಳೆಯ ಪೈಜಾಮಿನಲಿ
ಹಲವತ್ತುಕೊಳುತಾಗ
ಬಂದಿದ್ದ ಹಲವರನು ನಾನು ಕಂಡೆ
ಕಳೆಕಳೆಯ ಹೊಸ ವೇಷ
ಹೊಸ ಭಾಷೆ ಹೊಸ ಬದುಕು
'ಬಂದಿದ್ದು ಏಕೆಂಬ' ಮಾತನುಂಡೆ!

ಇಪ್ಪತ್ತು ಅಂಶಗಳ
ಜನಸೇವೆ ತಮದೆನುತ
ಒಪ್ಪತ್ತು ಊಟಕ್ಕೂ ಸೈ ಎಂದರಾಗ
ಒಪ್ಪುತ್ತ ಭೂರಮೆಯ
ಭಾರ ಕಳೆಯುವೆವೆಂದು
ತಪ್ಪುದಾರಿಗೆ ಎಳೆದು ಬದಲಿಸುತ ರಾಗ !

ಜನತೆ ಸುಖಿಸುವುದಕ್ಕೆ
ಘನಥರದ ಕಾರ್ಯಗಳ
ಮನವಿಟ್ಟು ಮಾಡುವುದು ಅವರಿತ್ತ ವಚನ
ಘನತೆಗಪ್ಪುದು ಕುಂದು
ಗಣಿಧಣಿಗಳಿಲ್ಲದಿರೆ
ಗಹನವಾಗಿದೆ ಗಾತ್ರ ಆಗಿಲ್ಲ ಪಚನ !

ಮನುಕುಲದ ಮುನ್ನಡೆಗೆ
ತನುಮನದ ಸಹಕಾರ
ಕನವರಿಸಿ ನಡೆಸುವೆವು ಕಾಲ್ನಡಿಗೆಯೆನುತ
ಅನುಕೂಲಕೊಂದು ಥರ
ಜನಜಾತ್ರೆ ಹೊಮ್ಮಿಸುತ
ತನುಕುಣಿಸಿ ಕೈ ತೋರಿ ಹಲವಾರು ಕುಣಿತ !

ಸೌಧದಲಿ ಸಭೆಗಳಲಿ
ವಾದ ಮಂಡಿಸುವಾಗ
ಬಾಧಿಸುವುದವುಗಳಿಗೆ ಅಸಹ್ಯ ರೋಗ !
ಕೌದಿ ಹೊದ್ದುದ ಮರೆತು
ಬೈದಾಡಿ ಕಬ್ಬರಿದು
ಕಾದಾಟನಡೆಸಿ ಸಭ್ಯತೆಮರೆವರಾಗ

ನಮ್ಮನಾಳುವ ಜನಕೆ
ಬಿಡಲೊಮ್ಮೆ ಬಾಣವನು
ಇರುತಿಲ್ಲ ನಮ್ಮಕಡೆ ಸಿದ್ಧ ಬತ್ತಳಿಕೆ
ತಿಮ್ಮ ಯಂಕರ ಕರೆದು
ಭುಜ ತಟ್ಟಿ ಹೊಗಳುವರು
ಬರುತಿಲ್ಲ ನಮಗೆಲ್ಲ ಬುದ್ಧಿ ಯಾತಕ್ಕೆ ?

9 comments:

  1. ಕವನ ಚೆನ್ನಾಗಿದೆ ಸರ್, ನಮಗೆ ಬುದ್ಧಿ ಬರೋಲ್ಲ... ಹೊಲಸು ರಾಜಕೀಯ ತೊಲಗುವುದಿಲ್ಲ

    ReplyDelete
  2. ಮಾಧ್ಯಮದಲ್ಲಿ ಇವತ್ತು ಅವರೆಲ್ಲರ ನೃತ್ಯ ನೋಡಿ ಬರೆದಿದ್ದು, ಪ್ರಜಾಪ್ರತಿನಿಧಿಗಳು ಹೇಗಿರಬೇಕೋ ಹಾಗಿರುವುದು ಬಿಟ್ಟು ಅವರೆಲ್ಲ ಆಡುವ ಡೊಂಬರಾಟ ಬಹಳ ಬೇಸರ ತರಿಸುತ್ತದೆ, ಸುಗುಣ ಮೇಡಂ ತಮಗೆ ಧನ್ಯವಾದಗಳು

    ReplyDelete
  3. kelavaru vote haki tappu madtare kelavaru vote hakade tapu madtare ...ottinalli e rajakeya ondu dodda tappu ...channagidae nimma kavana

    ReplyDelete
  4. ಶ್ರೀಕಾಂತ ತಮಗೆ ಧನ್ಯವಾದಗಳು, ಇನ್ನು ಮುಂದೆಲ್ಲಾ ಹೀಗೇ, ಚುನಾವಣೆ-ಸಮ್ಮಿಶ್ರ ಸರಕಾರ-ಮರುಚುನಾವಣೆ-ಮತ್ತೆ ಚುನಾವಣೆ-ಸಮ್ಮಿಶ್ರ ಸರಕಾರ >>>
    ಅಮೇರಿಕಾದ ರೀತಿ ಆಳುವ ಮತ್ತು ವಿರೋಧ ಪಕ್ಷವೆಂಬ ಎರಡೇ ಪಕ್ಷಗಳಿದ್ದರೆ ಪ್ರಜೆಗಳಿಗೆ ಅನುಕೂಲವಾಗುತ್ತಿತ್ತು, ಆದರೆ ಇಲ್ಲಿ ನಮ್ಮ ಅನಾದಿ ಕಾಲದ ಸಂವಿಧಾನದಲ್ಲೇ ಲೋಪಗಳಿವೆ, ಕೆಲವು ಪಕ್ಷನೋಡಿ-- ಅಪ್ಪ ರಾಷ್ಟ್ರಾಧ್ಯಕ್ಷ ಮಗ ರಾಜ್ಯಾಧ್ಯಕ್ಷ, ಹೊರಗೆ ಪಕ್ಷ-ಒಳಗೆ ಮನೆಯವರದ್ದೇ ಪಕ್ಷ!

    --

    ReplyDelete
  5. ಮಾನ್ಯರೇ;ಕಗ್ಗದ ಈ ಸಾಲುಗಳು ನೆನಪಿಗೆ ಬಂದವು;
    ಸರಕಾರ ಹರಿಗೋಲು,ತೆರೆಸುಳಿಗಳುಅತ್ತಿತ್ತ
    ಸುರೆ ಕುಡಿದವರು ಕೆಲರು ಹುಟ್ಟು ಹಾಕುವರು!
    ಬಿರುಗಾಳಿಬೀಸುವುದು,ಜನವೆದ್ದು ಕುಣಿಯುವುದು!
    ಉರುಳದಿಹುದು ಅಚ್ಚರಿಯೋ!ಮಂಕು ತಿಮ್ಮ!!

    ReplyDelete
  6. ನಾವು ನಿಜವಾಗಿಯೂ ಮಲವನ್ನು ತಲೆಯ ಮೇಲೆ ಹೊತ್ತಿದ್ದೇವೆ. ಈ ಹೊಲಸು ಬುಟ್ಟಿಯನ್ನು ಇಳಿಸುವದು ಹೇಗೆಂದು ತಿಳಿಯದೆ ಪರದಾಡುತ್ತಿದ್ದೇವೆ. ವಾಸ್ತವ ಕವನವನ್ನು ರಚಿಸಿದ್ದೀರಿ.

    ReplyDelete
  7. ಕವನ ತುಂಬಾ ಚೆನ್ನಾಗಿ ಸಧ್ಯದ ರಾಜಕೀಯದ ವಾಸ್ತವ ಚಿತ್ರಣ ನೀಡುತ್ತಿದೆ.

    ReplyDelete
  8. ಭಟ್ ಸರ್,
    ಕವನ ಹರಿತವಾಗಿದೆ..... ಹೊಲಸು ರಾಜಕೀಯ..... ರಾಜಕೀಯ ಲಾಭ ಪಡೆಯಲು ಯಾವ ಹಂತಕ್ಕೆ ಹೋಗಲೂ ರೆಡಿ ಇದ್ದಾರೆ ಈ ಘಡವರು..... ಎಲ್ಲಾ ಪಕ್ಷದವರೂ ಒಂದೇ....

    ReplyDelete
  9. ತಮ್ಮೆಲ್ಲರ ಅನಿಸಿಕೆಯೇ ನನ್ನ ಅನಿಸಿಕೆ, ಪ್ರತಿಕ್ರಿಯಿಸಿದ ಸರ್ವಶ್ರೀ ಡಾ| ಕೃಷ್ಣಮೂರ್ತಿ, ಸುಧೀಂಧ್ರ ದೇಶಪಾಂಡೆ, ಸೀತಾರಾಮ್ ಮತ್ತು ದಿನಕರ್ ತಮ್ಮೆಲ್ಲರಿಗೂ ಅನಂತ ನಮನಗಳು, ಅಭಿವಂದನೆಗಳು. ಇದಲ್ಲದೇ ಗೂಗಲ್ ಬಜ್ ಓದುಗರಿಗೆ ಮತ್ತು ನೇಪಥ್ಯದ ಓದುಗರಿಗೆ, ಇನ್ನೂ ಓದಲಿರುವವರಿಗೆ ಎಲ್ಲರಿಗೂ ಧನ್ಯವಾದಗಳು

    ReplyDelete