ಇವತ್ತಿನ ಗಡಿಬಿಡಿಯ ವಾತಾವರಣ ಯಾರಿಗೂ ಇಷ್ಟವಾಗುವಂತಹುದಲ್ಲ. ಇಲ್ಲಿ ಯಾರಿಗೂ ತೃಪ್ತಿ ಇಲ್ಲ, ಬೆಳಗಾದರೆ ಸಾಕು ಒತ್ತಡ, ಒತ್ತಡ. ಸ್ನಾನ,ಪೂಜೆ, ತಿಂಡಿ, ಮಕ್ಕಳ ಸ್ಕೂಲು, ಅವರ ತಯಾರಿ,ಆಫೀಸಿನ ಕೆಲಸ-ಅಲ್ಲೂ-ಹೊಸಕೆಲಸಗಳು, ಮನೆಯಲ್ಲಿ ಹೆಂಡತಿ ಬೇಸರದಲ್ಲಿದ್ದರೆ ಅದನ್ನು ನಮ್ಮ ಬಾಸ್ ಗೆ ಹೇಳಿದರೆ ಅವರ ಹೊಸ ಕೆಂಪುಕಣ್ಣಿನ ಭಂಗಿ, ಪಕ್ಕದವರನ್ನು ಜೊತೆಮಾಡಿಕೊಂಡು ಎಲ್ಲಾದರೂ ಅಪರೂಪಕ್ಕಾದರೂ ಸ್ವಲ್ಪ ಊರಾಚೆ ಹೋಗಿಬರೋಣವೆಂದರೆ ನಾಳೆಯ ಕೆಲಸಕ್ಕೆ ಹೋಗಲು ತಡವಾಗಬಹುದೆಂಬ ಆತಂಕ, ದುಗುಡ-ದುಮ್ಮಾನ. ನಿಜವಾಗಿಯೂ ಈ ಮಾನಸಿಕ ಒತ್ತಡವೇ ದೈಹಿಕ ಆನಾರೋಗ್ಯಕ್ಕೆ ಕಾರಣ ಎಂಬುದು ನಮಗೇ ತಿಳಿದಿಲ್ಲ, ಇದನ್ನು ಬಗೆಹರಿಸುವ ಯಾವುದೇ ಪ್ರಯತ್ನ ನಾವು ಮಾಡಿಲ್ಲ, ಯೋಗ-ಧ್ಯಾನ-ಸಂಗೀತ-ಸಾಹಿತ್ಯ-ಕಲೆ ಇವುಗಳಿಗೆಲ್ಲ ನಮಗೇ ಸಮಯವೇ ಉಳಿದಿಲ್ಲ, ದಿನಕಳೆದ ಹಾಗೆ ನಾವು ಪ್ರೊಮೋಶನ್ ಗಾಗಿ ಕಾಯುತ್ತೇವೆ, ಬರೇ ಅಲ್ಲಿ ಮಾತ್ರ ಪ್ರೊಮೋಶನ್ , ಮನೆಯಲ್ಲಿ ಡಿಮೋಶನ್ ಆಗುತ್ತಿರುತ್ತದೆ. ನಮ್ಮವರು,ಹಿತೈಷಿಗಳು ಸಲಹೆ ಕೊಡುತ್ತಾರೆ, ಆದರೆ ಅವರೂ ನಮ್ಮ ಥರಾನೇ ಬ್ಯುಸೀ ಆಗಿಬಿಡುತ್ತಾರೆ! ಇದನ್ನೆಲ್ಲಾ ತೊಡೆದುಹಾಕದಿದ್ದರೆ ಹೈ ಬ್ಲಡ್ ಪ್ರೆಶರ್ [high bp] ತನ್ಮೂಲಕ ಹೃದ್ರೋಗ, ಸಕ್ಕರೆ ಕಾಯಿಲೆ ಇವೆಲ್ಲ ಒಕ್ಕರಿಸುತ್ತವೆ! ಹಾಗಾಗಿ ವಾರದಲ್ಲಿ ಒಂದಾವರ್ತಿಯಾದರೂ 'ನಮಗೇ' ಅಂತ ಸ್ವಂತ ಸಮಯ ಮೀಸಲಿರಲಿ ಎಂಬುದು ಈ ಹಾಡಿನ ಧ್ವನಿತ ಸಂದೇಶ.
ಸಮಯವಿಲ್ಲ ನನಗೆ ಅರೆಘಳಿಗೆ
ಸಮಯವಿಲ್ಲ ನನಗೆ ಅರೆಘಳಿಗೆ
ಸಮಯವಿಲ್ಲ ನನಗೆ
ಬೆಡರು ಬೆಳಗಿನಲಿ ಸ್ನಾನ-ಪೂಜೆಗಳು
ಒಡನೆಯೇ ಗಬಗಬ ತಿಂಡಿಯ ಹಂತ
ಗಡಬಡಿಸುತ ಮಗನನು ಬಿಡೆ ಶಾಲೆಗೆ
ಬಿಡದೆ ಓಡುವುದು ಕಛೇರಿ ಕಡೆಗೇ
ಒಡನಾಡಿಗಳನು ಮಾತನಾಡಿಸಲು
ಜಡಜೀವಕೆ ತುಸು ಬೇಗುದಿ ಕಳೆಯಲು
ಅಡಿಗಡಿಗೊದಗುವ ಕಷ್ಟದ ದಿನಗಳು
ಬಿಡುಗಡೆಯಿಲ್ಲದ ಯಂತ್ರದ ಥರದಲಿ
ನಿಡುಸುಯ್ದಿರೆ ಮನೆಯಲಿ ಅರ್ಧಾಂಗಿ
ಗಡುಸಾಯಿತು ಯಜಮಾನರ ಭಂಗಿ
ನಡುನಡುವಲೇ ಬರೋ ಹೊಸ ಕೆಲಸಂಗಳು
ಎಡಬಿಡದೇ ಪೂರೈಸಲಿ ಹೇಗೇ ?
ಬಾಡಿಗೆ ಗಾಡಿಯ ಎರವಲು ಪಡೆದು
ಜೋಡಿಗೆ ಪಕ್ಕದ ಜನರನು ಕರೆದು
ನಾಡಸಿರಿಯ ನೋಡಲು ಯತ್ನಿಸಿದರೆ
ಗೂಡುಸೇರುವಾತಂಕವು ಮನಕೆ !
ನಾದೋಪಾಸನೆ ನಾಗರಹಬ್ಬ
ವೇದವೆಲ್ಲ ನನಗ್ಯಾತಕೋ ಅಪ್ಪಾ ?
ಓದಲೂ ಆಗದ ಈ ದಿನಗಳಲಿ
ವೇದನೆಯಾಯಿತು ಮನದಲಿ ತಪ್ಪಾ ?
supper ಭಟ್ರೇ, ಗಡಿಬಿಡಿಯ ಜೇವನದ ಒಂದು ಮುಖವನ್ನೇ ತೆರೆದಿಟ್ಟಿದ್ದೀರಾ. ಪ್ರಾಸಬದ್ಧವಾದ ಸುಂದರ ಕವನ, ಪುರಂದರ ದಾಸರ ಪದಗಳು ನೆನಪಿಗೆ ಬಂದವು. good one, keep it up!
ReplyDeleteನೈಜ ಚಿತ್ರಣ. ಒತ್ತಡಗಳ ಮಧ್ಯೆ ಬದುಕಬೇಕಾದುದು ಇಂದಿನ ಅನಿವಾರ್ಯತೆ ಕೂಡ.ಆದರೆ ಸಾಹಿತ್ಯ ಅಭಿರುಚಿ ಇದ್ದವನಿಗೆ ಒತ್ತಡ ಇನ್ನೂ ಹೆಚ್ಚು.ಆದರೂ ಸಂತೋಷ ಕೊಡುವ ಕೆಲಸ ಮಾಡುವಾಗ ಒತ್ತಡವೆನಿಸುವುದಿಲ್ಲ, ಅಲ್ಲವೇ?
ReplyDeleteನನ್ನಿಂದ ನಾಲ್ಕುಜನ ಓದಿ ಸಂತಸ ಪಡುತ್ತಾರೆ ಎಂದಾದರೆ ಅದು ನಾನವರ ಮನಸ್ಸಿಗೆ ನೀಡುವ ಅನ್ನ, ಅನ್ನದಾನದಷ್ಟೇ ಇದಕ್ಕೂ ಪುಣ್ಯವಿರಬಹುದೋ ಗೊತ್ತಿಲ್ಲ ! ಆದರೆ ಆ ಕೆಲಸ ಮಾತ್ರ ನಡೆಸಿದ್ದೇನೆ. ಇಂದು ಬರೆದ ಅ ಹಾಡು ನನ್ನ ಅತೀ ಅನುಭವದ ಸನ್ನಿವೇಶಗಳಿಂದ ಬರೆದಿದ್ದು, ಪ್ರಾಯಶಃ ಕವಿಯೋರ್ವನ ಕವನ ಹುಟ್ಟುವಾಗ ಅದನ್ನು ಅನುಭವಿಸಿ ಹಡೆದರೆ ಹಡೆದ ಮಗು ' ಕಾವ್ಯ' ಚೆನ್ನಾಗಿರಬಹುದು ಎಂದೆನಿಸುತ್ತಿದೆ, ಸಹಜವಾಗಿ ನಮ್ಮೆಲ್ಲರ ಮೇಲೆ ದಾಸರು,ಶರಣರು, ತೀರ್ಥಂಕರರು,ಗುರು -ಹರಿ-ಹರಾದಿ ಸಕಲ ದೈವದ ಪ್ರಲೋಭನೆ ಇದ್ದೇ ಇದೆ, ಅದು ನಮ್ಮ ಕೃತಿಗಳಲ್ಲಿ ಕೂಡ ಹರಿವು ಪಡೆದರೆ ಆಶ್ಚರ್ಯವಲ್ಲ! ಓದಿ ಪ್ರತಿಕ್ರಿಯಿಸಿದ
ReplyDeleteಪ್ರವೀಣ್ ಮತ್ತು ಶ್ರೀಧರ್ ಹಾಗೂ ನೇಪಥ್ಯದಿಂದ ಬಜ್ ನಲ್ಲಿ ಹೀಗೇ ಹಲವೆಡೆಯಿಂದ ಓದಿದ -ಓದಲಿರುವ ಎಲ್ಲಾ ಸನ್ಮಿತ್ರ ಓದುಗರಿಗೂ ಕೃತಜ್ಞನಾಗಿದ್ದೇನೆ.
This comment has been removed by the author.
ReplyDeleteನಮ್ಮ ಅಧುನಿಕ ಜೀವಶೈಲಿಯಲ್ಲಿ ನಮ್ಮನ್ನು ಹೆಚ್ಚಾಗಿ ವಿವರಿಸುವ ಶಬ್ದಗಳು "ಟೆಮೀಲ್ಲ" ಮತ್ತು "ಬ್ಯುಸಿ". ಆದರೂ ಜನ ತಿನ್ನುವದು ಬಿಟ್ಟಿಲ್ಲ, ನಿದ್ದೆ ಬಿಟ್ಟಿಲ್ಲ, ಸ೦ಸಾರ, ನಮ್ಮ ಬಗ್ಗೆ ಹೇಳಿಕೊಳ್ಳುವದು ಇನ್ನೂ ಇತ್ಯಾದಿ ಬಿಟ್ಟಿಲ್ಲ - ಬಿಟ್ಟದ್ದು ಸಾಮಾಜಿಕ ಜೀವನದ ಸ೦ಪರ್ಕ, ಆಧ್ಯಾತ್ಮಿಕ ಚಿ೦ತನೆ, ಧಾರ್ಮಿಕ ಪ್ರವೃತ್ತಿ, ಬೇರೆಯವರಿಗೆ ಕಿವಿಗೊಡುವದು ಇತ್ಯಾದಿ ಇತ್ಯಾದಿ. ಅ೦ದ ಹಾಗೆ ಟೀವಿ, ಗಣಕಯ೦ತ್ರ, ಮತ್ತು ಇತರೇ ಮನರ೦ಜನೆಗೆ ಟೇಮಿಲ್ಲದವರಿಗೆ ಟೇಮು ಹೇಗೋ ಹೊ೦ದುತ್ತೆ ಅದೇಗೇ ಅನ್ನೋದೆ ನನ್ನ ಸಮಸ್ಯೆ.
ReplyDeleteಚೆ೦ದದ ಲೇಖನ ಭಟ್ಟರೇ.